Previous ಬಸವರಸನ ಪೂಜಾ ವೈಭವ ಬಸವರಸ ವಿವಾಹದ ಪ್ರಸ್ತಾಪ ಮತ್ತು ಕನಸು Next

ಬಸವರಸ ನವ ಧರ್ಮ ದ್ರಷ್ಟಾರ

✍ ಪೂಜ್ಯ ಶ್ರೀ ಮಹಾಜಗದ್ಗುರು ಡಾ|| ಮಾತೆ ಮಹಾದೇವಿ

*

ನವ ಧರ್ಮ ದ್ರಷ್ಟಾರ

ಬಸವರಸನು ವಿದ್ಯಾಭ್ಯಾಸ ಮಾಡುತ್ತ ಅರ್ಚಕನಾಗಿ ಉದ್ಯೋಗವನ್ನು ಮಾಡುತ್ತ ಸಾಧನಾಮಗ್ನನಾಗಿ ಇರುವಾಗಲೇ ೨೧ ವಯಸ್ಸಿನ ಪ್ರೌಢನಾಗುತ್ತಾನೆ. ಸ್ವಯಂ ಪ್ರತಿಭೆ, ಅಸಾಮಾನ್ಯ ಬುದ್ಧಿಶಕ್ತಿ, ಒಳ್ಳೆಯ ಪರಿಸರಗಳಿಂದ ಅವನ ವ್ಯಕ್ತಿತ್ವ ಬಹುಮುಖವಾಗಿ ಬೆಳೆದಿದೆ. ಅಪಾರ ಆಸಕ್ತಿಯಿಂದ ವೇದಶಾಸ್ತ್ರಪುರಾಣ ಆಗಮ ಷಡ್‌ದರ್ಶನಗಳನ್ನು ಆಳವಾಗಿ ಅಧ್ಯಯನ ಮಾಡಿದ್ದಾನೆ.

ಪ್ರಸ್ತುತ ಸಮಾಜದ ಪರಿಸ್ಥಿತಿ ಅವನನ್ನು ತುಂಬ ವ್ಯಾಕುಲಿತನನ್ನಾಗಿಮಾಡಿದೆ. ವೇದೋಪನಿಷತ್ತುಗಳ ಜ್ಞಾನಕಾಂಡ ಬಸವರಸನ ಮನಸ್ಸನ್ನು ಆಕರ್ಷಿಸಿದ್ದರೂ ಕರ್ಮ ಕಾಂಡವು ಸಾಕಷ್ಟು ನಿರಾಸೆಯನ್ನು ಉಂಟು ಮಾಡಿದೆ. “ವೇದ-ಉಪನಿಷತ್ತುಗಳನ್ನಾದರೂ ಈ ಜನ ಅರ್ಥ ಮಾಡಿಕೊಂಡಿದ್ದಾರೆಯೆ ? 'ಭರ್ಗೋ ದೇವಸ್ಯ ಧೀಮಹಿ ಏಕಂ ಸತ್ ವಿಪ್ರಾ ಬಹುಧಾ ವದಂತಿ.' 'ಪೂರ್ಣಮದಃ ಪೂರ್ಣ ಮಿದಮ್ ಪೂರ್ಣಾತ್ ಪೂರ್ಣಮುದಚ್ಯತೆ' 'ಈಶಾವಾಸ್ಯ ಮಿದಂ ಸರ್ವಂ-ಈ ಮುಂತಾದ ವಾಕ್ಯಗಳನ್ನೆಲ್ಲ ಪಠಿಸುತ್ತಾರಲ್ಲಾ ಏಕೆ ಇದನ್ನು ಆಚರಿಸುತ್ತಲಿಲ್ಲ? ಕರ್ಮಕಾಂಡ ಪ್ರಧಾನವಾದ ಆಚರಣೆಯಂತೂ ಹಿಂಸೆಯ ಪ್ರತಿರೂಪವಾಗಿದೆ.'' ಎಂದು ಬಸವರಸನು ಕಳವಳಗೊಂಡಿದ್ದನು.

ಬುದ್ಧ-ಮಹಾವೀರರ ಅಹಿಂಸಾತ್ಮಕ ಧರ್ಮಗಳು ಬಹುವಾಗಿ ಆಕರ್ಷಿಸಿದ್ದರೂ ಆ ಧರ್ಮಗಳ ನಿರೀಶ್ವರವಾದೀ ಸಿದ್ದಾಂತವೂ ಬಸವರಸನ ಮನಸ್ಸನ್ನು ತಣಿಸಲಾರದಾಗಿದ್ದಿತು. ಜಗತ್ತೆಲ್ಲವೂ ನಿಯಾಮಕನಾದ ಕರ್ತನಿಂದ ಅಖಂಡವಾಗಿ ನಡೆಯುವಾಗ ಕರ್ತನನ್ನು ಅಲ್ಲಗಳೆಯುವುದಾಗಲೀ ಅಥವಾ ಅವನ ಬಗ್ಗೆ ಮೌನವಹಿಸುವುದಾಗಲೀ ಬಸವರಸನಿಗೆ ಸೇರದ ವಿಷಯ. ನಿರೀಶ್ವರವಾದಿ ಧರ್ಮಗಳಲ್ಲಿ ದೇವ-ಭಕ್ತರ ನಡುವೆ ಮಧುರಾಭಕ್ತಿ ಸಾಧ್ಯವಾಗದ್ದು ಒಂದು ಕೊರತೆ ಎನಿಸಿತ್ತು, ಜೈನ ಧರ್ಮದ ಕಟ್ಟುನಿಟ್ಟು, ಆಚರಣೆಗಳು ಜನಸಾಮಾನ್ಯರಿಗೆ ಕಷ್ಟಸಾಧ್ಯವೆನಿಸುತ್ತಿತ್ತು. ಶೈವ ಸಿದ್ಧಾಂತ ಶಿವಭಕ್ತಿ ಮಾರ್ಗಗಳು ಮಧುರಾಭಕ್ತಿಯಿಂದ ಒಟ್ಟಾರೆ ಭಕ್ತಿಯ ಅಂಶದಿಂದ ಬಸವರಸನ ಮನ ಸೆಳೆದಿದ್ದವೇನೋ ನಿಜ ಆದರೆ ಕೆಲವೊಮ್ಮೆ ಆವೇಶದ ದಾರಿ ಹಿಡಿದು ಅದು ಅನುಕರಣೀಯವಲ್ಲವೆನಿಸುತ್ತಿತ್ತು. ವಿವೇಕ ಪ್ರಜ್ಞೆ-ವೈಚಾರಿಕತೆಗಳ ಸಾರಥ್ಯದಲ್ಲೇ ಭಕ್ತನ ರಥಯಾತ್ರೆ ನಡೆಯಬೇಕೆಂಬುದು ಬಸವರಸನ ಅಪೇಕ್ಷೆ. ಬೇಡರ ಕಣ್ಣಪ್ಪ ಕಣ್ಣುಕೊಟ್ಟುದು, ಸಿಂಧು ಬಲ್ಲಾಳ ವಧುವನ್ನು ಕೊಟ್ಟುದು, ಸಿರಿಯಾಳ ಮಗನ ಕೊಟ್ಟುದು ಸ್ವಲ್ಪ ಅಪಾಯಕಾರಿ ಭಕ್ತಿಯ ! ಈ ನಾಡಿನಲ್ಲಿ ನಾಥಪಂಥ, ಸಿದ್ಧಪಂಥ, ಪಾಶುಪತ ಮತ ಮುಂತಾದುವು ಹೇರಳವಾಗಿದ್ದರೂ ಅವು ಸಾಮಾಜಿಕ ಸಮಸ್ಯೆಗಳನ್ನು ಕುರಿತು ಚಿಂತೆಯನ್ನು ಮಾಡಹೋಗದೆ, ಕೇವಲ ಕೆಲವು ಮುಮುಕ್ಷುಗಳನ್ನು ತೃಪ್ತಿಪಡಿಸುತ್ತಿದ್ದವು. ಕಾಪಾಲಿಕ ಮಾರ್ಗಗಳ ಜೊತೆ ಮೂಢ ಭಕ್ತರ ಕ್ರೂರ ಉಪಾಸನೆಗಳು, ಕೋಳಿ ಕುರಿಕೋಣಗಳ ಬಲಿಯಿಂದ ಹಿಡಿದು ನರಬಲಿಯವರೆಗೆ ಸಾಗುತ್ತಿದ್ದವು. ಸಮಾಜದಲ್ಲಿ ಯಾವುದೇ ನಿಯಂತ್ರಣವಿಲ್ಲದ್ದು ಒಂದು ಪರಿಸ್ಥಿತಿಯಾದರೆ, ಧರ್ಮಾಚರಣೆಯಲ್ಲಿ ವೈಚಾರಿಕತೆ ಸತ್ತು ಹೋದುದು ಇನ್ನೊಂದು ಪರಿಸ್ಥಿತಿ. ಮೂಢ ನಂಬಿಕೆ, ಬಹುದೇವತೋಪಾಸನೆಯ ಜೊತೆಗೆ ಅಮಾನುಷ ಜಾತಿ ಪದ್ಧತಿಯ ಅಟ್ಟಹಾಸದ ನೃತ್ಯ. ಎಲ್ಲವನ್ನೂ ಚಿಂತಿಸಿ ಚಿಂತಿಸಿ ಬಸವರಸ ವ್ಯಾಕುಲಗೊಂಡಿದ್ದಾನೆ. ಜೊತೆಗೆ ಅವನ ಮನಸ್ಸಿನಲ್ಲಿ ಹೊಸದೊಂದು ಧರ್ಮದ ಕಲ್ಪನೆ ರೂಪುಗೊಳ್ಳುತ್ತಲಿದೆ. ತಲೆಯ ತುಂಬ ವಿಚಾರಗಳ ಸರಮಾಲೆ.

ಸಮಾಜ ಸುಧಾರಕರ ಲಕ್ಷಣವೇ ಈ ಚಿಂತನೆ. ಸಮಾಜ ಸೇವಕ ಬೇರೆ, ಸಮಾಜ ಸುಧಾರಕ ಬೇರೆ. ಸಮಾಜ ಸೇವಕನು ಹಲವಾರು ಲೋಪದೋಷ ಕುರಿತು ಚಿಂತನೆ ಮಾಡಲು ಹೋಗನು. ತನ್ನ ಕೈಲಾದಷ್ಟು ಸೇವೆಯನ್ನು ದೀನರಿಗೆ ದುಃಖಿತರಿಗೆ ಮಾಡುವನು. ಬಡ ವಿದ್ಯಾರ್ಥಿಗಳಿಗೆ ನೆರವು ನೀಡುತ್ತ ಕೈಲಾದಷ್ಟು ಜನಕ್ಕೆ ಉಪಕಾರ ಮಾಡುವುದು ಸಮಾಜ ಸೇವಕನ ನಿಲುವಾದರೆ, ಬಡತನಕ್ಕೆ ಕಾರಣವೇನು ? ಈ ಪಿಡುಗನ್ನು ನಿವಾರಿಸಲು ಸಾಧ್ಯವೇ ? ಎಂದು ಹೋರಾಡುವುದು ಸುಧಾರಕನ ಕೆಲಸ, ಸಮಾಜ ಸೇವಕ ವೈದ್ಯನಂತಾದರೆ, ಸುಧಾರಕನು ಸರ್ಜನನಂತೆ, ಚುಚ್ಚುಮದ್ದು ಗುಳಿಗೆಗಳಿಂದ ಇದು ಕರಗದು ಎಂದು ಶಸ್ತ್ರ ಚಿಕಿತ್ಸೆಗೆ ತೊಡಗುವಂತೆ ಸುಧಾರಕನ ಪ್ರಯತ್ನ.

ಒಬ್ಬ ಆದರ್ಶ ವೈದ್ಯನ ಲಕ್ಷಣವೇನು ? ಮೊದಲು ರೋಗವನ್ನು ಗುರುತಿಸುವುದು ; ಆಮೇಲೆ ರೋಗಮೂಲವನ್ನು ಹುಡುಕುವುದು. ರೋಗಕ್ಕೆ ಸೂಕ್ತ ಚಿಕಿತ್ಸೆ ಯಾವುದೆಂದು ಚಿಂತಿಸುವುದು. ರೋಗ ಗುಣಮುಖವಾಗಬೇಕೆಂಬ ಕಳಕಳಿ ಹೊಂದಿರುವುದು. ಅದೇ ರೀತಿ ಸಮಾಜ ಸುಧಾರಕ ಅಥವಾ ರಾಜಕೀಯ ಮುತ್ಸದ್ದಿ (Staterman) ಯೂ ಕೂಡ. ಸಮಾಜ ಪುರುಷನಿಗೆ ಬಂದಿರುವ ರೋಗಗಳು ಯಾವ ಎಂಬುದನ್ನು ಗುರುತಿಸಬೇಕು. ಅಂದರೆ ಸಮಾಜದಲ್ಲಿರುವ ಲೋಪ-ದೋಷಗಳನ್ನು ಅರಿಯಬೇಕು. ಈ ಲೋಪಗಳಿಗೆ ಕಾರಣವೇನು ಎಂದು ತಿಳಿಯುವುದೂ ಅಷ್ಟೇ ಮುಖ್ಯ. ರೋಗ ಲಕ್ಷಣ ನೋಡಿ ಮಾಡುವ ಚಿಕಿತ್ಸೆ (Symptomatic treatment) ಗಿಂತಲೂ ರೋಗ ಮೂಲವನ್ನು ಗುರುತಿಸಿ ಮಾಡುವ ಚಿಕಿತ್ಸೆ (Causative treatment) ತುಂಬ ಮುಖ್ಯ ಮತ್ತು ಪರಿಣಾಮಕಾರಿ. ಒಂದು ಉದಾಹರಣೆ ಕೊಡುವೆ. 'ತಲೆ ನೋವು ಬಂದಿದೆ' ಸರಿ ನೋವು ನಿವಾರಕ ಗುಳಿಗೆ ಕೊಡು' ಎನ್ನುವುದು ಲಾಕ್ಷಣಿಕ ಚಿಕಿತ್ಸೆ. ತಲೆನೋವು ಏತಕ್ಕೆ ಬಂದಿದೆ ? ವಿಪರೀತ ದಣಿವೆಯಿಂದಲೆ ? ಹಸಿವಿನಿಂದಲೆ ? ಮಾನಸಿಕ ಒತ್ತಡದಿಂದಲೆ ? ಉಷ್ಣತೆಯ ಪ್ರಕೋಪದಿಂದಲೆ ? ಅಥವಾ ಶೀತದಿಂದಲೆ.? ನರದೌರ್ಬಲ್ಯದಿಂದಲೆ ? ಕಾರಣ ಹುಡುಕಿ ಚಿಕಿತ್ಸೆ ಮಾಡಿದರೆ ರೋಗಿಯ ಮೈಯೊಳಗೆ ಅತಿಯಾಗಿ ಔಷದಿಯ ಸಂಗ್ರಹವಾಗುವುದು ತಪ್ಪುತ್ತದೆ. ಇಬ್ಬರು ವ್ಯಕ್ತಿಗಳಿದ್ದಾರೆ ಎಂದು ಕೊಳ್ಳೋಣ. ಒಬ್ಬನದು Xಜಾತಿ ಇನ್ನೊಬ್ಬನದು Y ಜಾತಿ . Y ಜಾತಿಯವನು ಅಸ್ಪೃಶ್ಯ ಎಂದುಕೊಳ್ಳೋಣ. ಆಗ X ಜಾತಿಯವನನ್ನು ಕುರಿತು, "ನೀನು ಶ್ರೇಷ್ಠಜಾತಿಯವನು, ಪುಣ್ಯಜೀವಿ ಆದ್ದರಿಂದ Y ಜಾತಿಯ ಅಸ್ಪೃಶ್ಯನೊಡನೆ ಒಡನಾಡಬೇಡ, ಮಾತಾಡಬೇಡ, ಮುಟ್ಟಿಸಿಕೊಳ್ಳಬೇಡ ಎನ್ನುವುದು ರೋಗ, “ಮಗು ನೀನು ಪುಣ್ಯಮಾಡಿ ಶ್ರೇಷ್ಠ ಜಾತಿಯಲ್ಲಿ ಹುಟ್ಟಿದ್ದೀಯೆ. ಆದರೇನಂತೆ, ಪಾಪಮಾಡಿY ಜಾತಿಯಲ್ಲಿ ಹುಟ್ಟಿರುವ ಅಸ್ಪೃಶ್ಯನು ಕೀಳಾದರೂ ಅವನನ್ನು ತಿರಸ್ಕರಿಸಬೇಡ ; ನೋಯಿಸಬೇಡ, ಸೌಜನ್ಯದಿಂದ ಕಾಣು'' ಎನ್ನುವುದು ಲಾಕ್ಷಣಿಕ ಚಿಕಿತ್ಸೆ . “ಮಗು, ಜಾತಿಯ ಕಲ್ಪನೆಯೇ ತಪ್ಪು. ದೇವರು ಇವನ್ನು ನಿರ್ಮಾಣ ಮಾಡಿಲ್ಲ. ಸ್ವಾರ್ಥಿ ಯಾದ ಮಾನವ ಒಡೆದು ಆಳುವ ನೀತಿಯನ್ನು ರೂಢಿಸಿಕೊಂಡು ಮಾನವ ಕುಲಕ್ಕೆ ದೇವಸೃಷ್ಟಿಗೆ ಅಪಚಾರ ಮಾಡಿದ್ದಾನೆ. ಯಾರೂ ಹುಟ್ಟಿನಿಂದಲೇ ಮೇಲಲ್ಲ ಹುಟ್ಟಿನಿಂದಲೇ ಕೀಳಲ್ಲ ; ಜಾತಿ ಭೇದ ಮಾಡಿದರೆ ದೇವರಿಗೆ ಅಪಚಾರ ಮಾಡಿದಂತೆ' ಎನ್ನುವರು ಕಾರಣಿಕ ಚಿಕಿತ್ಸೆ ಅಥವಾ ರೋಗ ಮೂಲ ಚಿಕಿತ್ಸೆ.

ಬಸವಣ್ಣನವರು ಅಸಾಮಾನ್ಯ ಸಮಾಜ ವೈದ್ಯ ವಿಜ್ಞಾನಿಯೆಂದೇ ಸಮಾಜ ಪುರುಷನ ದೇಹ ಸ್ವಾಸ್ಥ್ಯಕ್ಕೆ ಎರವಾಗಿದ್ದ ರೋಗಗಳನ್ನು, ಅವುಗಳ ಮೂಲ ಕಾರಣಗಳನ್ನು ಗುರುತಿಸಿದರು. ಅವರು ಸಮಾಜವನ್ನು ತಿದ್ದುವ ಕಳಕಳಿಯನ್ನು ಹೊಂದಿದ್ದರಷ್ಟೇ ಅಲ್ಲ ಸಾಮರ್ಥ್ಯವನ್ನೂ ಹೊಂದಿದ್ದರು. ಹೀಗೆ ಸಮಾಜ ಶಿಥಿಲತೆಯ ಅರಿವು, ಪುನರುತ್ಥಾನದ ಆಸೆ, ಸಮಾಜೋದ್ಧಾರದ ಕಳಕಳಿ ಮತ್ತು ಅಪೂರ್ವ ಕರ್ತೃತ್ವ ಶಕ್ತಿಯ ಸಂಗಮವಾದ ಬಸವಣ್ಣನವರು ತಮ್ಮ ಹೃನ್ಮನಗಳಲ್ಲಿ ಪ್ರಗತಿಪರ ಧರ್ಮದ ಕಲ್ಪನೆಯನ್ನು ತಳೆದಿದ್ದಾರೆ. ಇಲ್ಲಿಗೆ ವಿದ್ಯಾರ್ಜನೆಯ ಒಂದು ಘಟ್ಟ ತಲ್ಪಿದ್ದ ಅವರಿಗೆ ಮತ್ತು ಅವರ ಸಹಪಾಠಿಗಳಿಗೆ ಪದವಿಯನ್ನು ನೀಡುವ ಒಂದು ಘಟಿಕೋತ್ಸವ ಸಮಾರಂಭವು ಏರ್ಪಾಟಾಗಿದೆ.

ಮಕರ ಸಂಕ್ರಾಂತಿಯಂದು ತೀರ್ಥಸ್ನಾನಕ್ಕೆಂದು ಎಲ್ಲೆಲ್ಲಿಂದಲೋ ಬರುವ ಭಕ್ತ ಸಮೂಹ ಕಿಕ್ಕಿರಿದು ಸೇರುತ್ತಿದೆ. ಆ ವರ್ಷದ ಘಟಿಕೋತ್ಸವ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಮಂಗಳವೇಡೆಯಿಂದ ಬಲದೇವಮಂತ್ರಿಗಳು. ಮಹಾಮಂಡಲೇಶ್ವರ ಬಿಜ್ಜಳನ ಪ್ರಧಾನಾಮಾತ್ಯರು ತಮ್ಮ ಪರಿವಾರ ಸಮೇತರಾಗಿ ಮನೆ ದೇವರಾದ ಸಂಗಮೇಶ್ವರನ ದರ್ಶನ ಮತ್ತು ತೀರ್ಥಸ್ನಾನಕ್ಕೆಂದು ಬಂದಿದ್ದಾರೆ. ತೀರ್ಥಸ್ನಾನ, ವಿಶೇಷ ಪೂಜೆಯನಂತರ ಬಂದು ಗುರುದರ್ಶನ ಪಡೆದು, ಘಟಿಕೋತ್ಸವದಲ್ಲಿ ಮುಖ್ಯ ಅತಿಥಿಗಳಾಗಿದ್ದಾರೆ.

ಒಂದು ಗುರುಕುಲ ಅಥವಾ ಮಠದ ಸಂಪತ್ತು ಎಂದರೆ ಒಳ್ಳೆಯ ಸಾಧಕರು, ಮುಮುಕ್ಷುಗಳೇ ವಿನಾ ಬೆಳ್ಳಿ-ಬಂಗಾರ ಕಿರೀಟ-ಪಲ್ಲಕ್ಕಿಗಳಲ್ಲ. ಜ್ಞಾನಿಯಾದ ಗುರು ತನ್ನ ಸಾಧಕ ಸಂಪತ್ತನ್ನು ಪ್ರದರ್ಶಿಸಲು ಹೆಮ್ಮೆ ಪಡುವುದು ಸ್ವಾಭಾವಿಕ. ಗುರುಕುಲದ ಕುಲಪತಿಗಳಾದ ಜಾತವೇದ ಮುನಿಗಳು ವಟುಗಳು ಮಾತನಾಡಬೇಕೆಂದು ಆಜ್ಞಾಪಿಸುವರು. ಹಲವಾರು ನೀರೋಳಿಗಳ ಮಧ್ಯೆ ವಿಶೇಷವಾಗಿ ಎದ್ದು ತೋರುವಂತಹ ಹಂಸೆಯಂತಹ ಶೋಭೆಯ ಬಸವರಸ ತನ್ನ ಅನುಭವಗಳನ್ನು, ಧೈಯ ಧೋರಣೆಗಳನ್ನು ಕುರಿತು ಮಾತನಾಡುವನು.

ತಂಡೋಪತಂಡವಾಗಿ ಬರುವ ಜನರು ತೀರ್ಥದಲ್ಲಿ ಸ್ನಾನಮಾಡಿ ಪುನೀತರಾದೆವೆಂದು ಭಾವಿಸುವುದು ಬಸವರಸನಿಗೆ ಸೋಜಿಗವನ್ನು ಉಂಟು ಮಾಡುತ್ತಿತ್ತು. "ಈ ಜನ ತೀರ್ಥಕ್ಷೇತ್ರಗಳಿಗೆ ಏಕೆ ಬರುವರು ? ನೀರಿನಲ್ಲಿ ಮುಳುಗಿದ ಮಾತ್ರಕ್ಕೆ ಪಾಪವು ಪರಿಹಾರವಾಗುವುದೇ, ಪುಣ್ಯ ದೊರೆಯುವುದೆ ? ದೇವರ ಸಾಕ್ಷಾತ್ಕಾರವೇನಾದರೂ ಇಂಥ ಗದ್ದಲದಲ್ಲಿ ಆಗುವುದುಂಟೆ ? ದೇವರಿಗಾಗಿ ಬರುವರೆ, ಏನು ವ್ಯಾಪರಕ್ಕಾಗಿ ಬರುವರೆ ? ತೀರ್ಥಕ್ಷೇತ್ರಕ್ಕೆ ಬರುವ ಮುನ್ನ ಹೇಗಿದ್ದಾರೋ ಹೋಗುವಾಗಲೂ ಹಾಗೇ ಇರುವರು. ಅವರ ಸ್ವಭಾವ ಗುಣ ನಡತೆ ಯಾವುದರಲ್ಲಿಯೂ ವ್ಯತ್ಯಾಸವಾಗದು. ತಲೆಗೂದಲು ಕೊಟ್ಟೋ, ಹುಂಡಿಗೆ ಹಣವನ್ನು ಎಸೆದೋ ಪುನೀತರಾದೆವು ಎಂದು ಕೊಳ್ಳುವರು; ಆಂತರಗಿಕ ಬದಲಾವಣೆ ಎಳ್ಳಷ್ಟೂ ಆಗಿರದು. ನೀರದೇವರಲ್ಲಿ ಮುಳುಗಿಯಾದ ಮೇಲೆ ಮರವನ್ನು ಸುತ್ತಲು ಹೊರಡುವರು. ಆಮೇಲೆ ಸಂಗಮೇಶ್ವರನ ಬಳಿಗೂ ಹೋಗುವರು. ತಾತ್ವಿಕ ತಿಳುವಳಿಕೆ, ಶ್ರದ್ಧೆ ಶರಣಾಗತಿ ಏನೊಂದು ಇಲ್ಲ. ಇದೇ ಧರ್ಮವೇ, ಇದೇ ಸಾಧನೆಯೆ ?

ನೀರ ಕಂಡಲ್ಲಿ ಮುಳಗುವರಯ್ಯಾ
ಮರವ ಕಂಡಲ್ಲಿ ಸುತ್ತುವರಯ್ಯಾ
ಬತ್ತುವ ಜಲವ ಒಣಗುವ ಮರವ
ನೆಚ್ಚಿದವರು ನಿಮ್ಮನೆತ್ತ ಬಲ್ಲರಯ್ಯಾ, ಕೂಡಲಸಂಗಮದೇವಾ


ಜಾತ್ರೆಯ ಸಮಯದಲ್ಲಿ, ಮಕರ ಸಂಕ್ರಾಂತಿಯಂತಹ ವಿಶೇಷ ಸಂದರ್ಭಗಳಲ್ಲಿ ಪೂಜಾರಿಗಳು ಸ್ಪರ್ಧೆಯನ್ನು ನಡೆಸಿರುತ್ತಾರೆ. ಪೈಪೋಟಿಯ ಮೇಲೆ ಭಕ್ತರನ್ನು ಆಕರ್ಷಿಸಿ ಹೆಚ್ಚನ ಸಂಪಾದನೆಗಾಗಿ ಪ್ರಯತ್ನ ನಡೆಸಿರುತ್ತಾರೆ. ಉಳಿದ ಪೂಜಾರಿಗಳು ಸಿದ್ದರಾಗಿ ಬರುವುದರಲ್ಲೇ ತಾನು ಪೂಜೆಯನ್ನೂ ಮಾಡಿ ಬಸವರಸನು ಹೊರಬರುತ್ತಿದ್ದ. ಜನ ಸಂದಣಿ ಇದ್ದಾಗಲಂತೂ ಸಾಧ್ಯವಾದಷ್ಟು ದೂರಸಾಗಿ ಧ್ಯಾನ ಅಧ್ಯಯನ ಮಾಡುತ್ತ ನದಿಯ ದಂಡೆಯ ಮೇಲೆ ಕುಳಿತುಬಿಡುತ್ತಿದ್ದ.
ಪೂಜಾರಿಗಳು ಪೈಪೋಟಿಯ ಮೇಲೆ ಪೂಜೆಗೆ ಜನರನ್ನು ಆಹ್ವಾನಿಸುತ್ತಿದ್ದರು. ಒಮ್ಮೆ ಭಾದ್ರಪದ ಬಹುಳ ಷಷ್ಟಿ ಮಂಗಳವಾರ ರವಿಯ ಅಸ್ತ್ರದೊಳು ಚಂದ್ರರೋಹಿಣಿಯರ ಉದಯ. ಅದು ಕಪಿಲಷಷ್ಠಿ ಮುಹೂರ್ತವೆಂದು ಬಲು ಪುಣ್ಯಗಳಿಗೆಯೆಂದೂ ಭಕ್ತರನ್ನು ಪೂಜಾರಿಗಳು ಪ್ರೇರೇಪಿಸುತ್ತಿದ್ದರು. ಒಂದು ಸಹಸ್ರ ಕನ್ನೈದಿಲೆಗಳ ಪೂಜೆ, ತುಪ್ಪ ಎಳ್ಳುಗಳ ದೀಪಾರತಿ, ಗೋಕಲೋಕ್ತ ಪೂಜೆ ಎಂದು ಕಂದು ಬಣ್ಣದ ಹಸುವಿಗೆ ಬಂಗಾರದ ಕೋಡು ತೊಡಿಸಿ, ದಾನಕೊಡುವ ಕಾರ್ಯ ಮುಂತಾದ ವಿವಿಧ ಬಗೆಯ ಪೂಜೆಗಳನ್ನು ಕುರಿತು ವಿವರಿಸುತ್ತಿದ್ದರು. ಅಂಥ ಸಮಯದಲ್ಲಿ ಬಡಬಗ್ಗರು ಬಂದುದೇ ಆದರೆ ಲಕ್ಷ ವೇ ಇರುತ್ತಿರಲಿಲ್ಲ. ತಾವು ಬಡವರಾದುದಕ್ಕೆ ನಿಟ್ಟುಸಿರು ಕರೆಯುತ್ತ ದೀನರು ಅಲ್ಲಿ ಇಲ್ಲಿ ನಿಂತು ಪರಿತಪಿಸುತ್ತಿದ್ದರೆ ಅಂಥವರನ್ನು ಬಸವರಸ ಸಮಾಧಾನಪಡಿಸಿ ಗುಡಿಯೊಳಗೆ ಕರೆತರುತ್ತಿದ್ದ. ಅವರನ್ನೂ ಜೊತೆಗೆ ಕರೆದುಕೊಂಡು ಪೂಜೆ ಮಾಡಿಸುತ್ತಿದ್ದ.

ಅಷ್ಟವಿಧಾರ್ಚನೆ ಷೋಡಷೋಪಚಾರವ ಮಾಡುವುದು
ಮಾಡಿದ ಪೂಜೆಯ ನೋಡುವುದು
ಶಿವ ತತ್ತ್ವಗೀತವ ಹಾಡುವುದು
ಶಿವನ ಮುಂದೆ ನಲಿದಾಡುವುದು.
ಭಕ್ತಿ ಸಂಭಾಷಣೆಯ ಮಾಡುವುದು.
ನಮ್ಮ ಕೂಡಲಸಂಗಮದೇವನ ಬೇಡುವುದು.


ಎಂದು ಸಂತೋಷದಿಂದ ಹಾಡುತ್ತ ಅವರನ್ನು ನಲಿಸುತ್ತ ಪೂಜೆಯಲ್ಲಿ ಭಾಗಿಗಳನ್ನಾಗಿ ಮಾಡುತ್ತಿದ್ದ. ಅವರು ತಂದ ಸಾಮಗ್ರಿಗಳಲ್ಲೇ ಆನಂದದಿಂದ ಪೂಜೆ ಮಾಡಿಸಿ ಕಳಿಸುತ್ತಿದ್ದ. ಇದು ಉಳಿದ ಪೂಜಾರಿಗಳಿಗೆ ಬಲುಕೋಪವನ್ನುಂಟು ಮಾಡುತ್ತಿತ್ತು. ತಮ್ಮ ಸಂಪಾದನೆಗೆ ಅಡ್ಡವಾಗುವನಲ್ಲ ಎಂದು ಒಮ್ಮೆ ಹೊಡೆಯಲೂ ಹೋದುದುಂಟು. ಇದು ಕ್ರಮಬದ್ಧ ಪೂಜೆಯಲ್ಲ ಎಂದು ಜಗಳ ತೆಗೆದುದೂ ಉಂಟು. ಅಂಥ ಗಳಿಗೆಯೊಂದರಲ್ಲಿ ಅಶರೀರವಾಣಿಯೊಂದು ಕೇಳಿಸಿ, ಸಾಕ್ಷಾತ್ ಸಂಗಮೇಶ್ವರನೇ, 'ನನಗೆ ತುಂಬಾ ಪ್ರೀತಿ ಪಾತ್ರವಾದ ಪೂಜೆ ಬಸವನದೇ' ಎನ್ನುವನು ಎಂಬ ಉಲ್ಲೇಖ ಸಿಂಗಿರಾಜನ ಬಸವ ಪುರಾಣದಲ್ಲಿ ಬರುತ್ತದೆ. ಪೂಜಾರಿಗಳು ಸಿಟ್ಟಿಗೆದ್ದು ಬಸವರಸನನ್ನು ಹೊಡೆಯಲು ಹೋದಾಗ ಗದ್ದಲ ಕೇಳಿ ಗುರುಗಳು ಬಂದು, ಬಸವರಸನ ಪೂಜೆಯೇ ಶ್ರೇಷ್ಠ ಎಂದು ಅಂದಿರಲೂ ಸಾಕು. ಧರ್ಮವು ಸಂಪೂರ್ಣವಾಗಿ ವ್ಯಾವಹಾರಿಕ ಮಟ್ಟಕ್ಕೆ ಇಳಿದು, ಆಡಂಬರ ಅನವಶ್ಯಕ ವೆಚ್ಚಗಳ ಆಗರವಾದುದು, ಪಾರಮಾರ್ಥಿಕವಾಗಿ ಯಾವುದೇ ಸಾಧನೆಗೆ ನೆರವಾಗದ ಜಡಸ್ಥಿತಿಗೆ ಇಳಿದುದು ಬಸವಣ್ಣನ ಚಿಂತನೆಯನ್ನು ಕೆರಳಿಸಿತ್ತು.

ಇದರ ಜೊತೆಗೆ ಭಯ- ಭೀತಿಗಳನ್ನು ಹುಟ್ಟಿಸುವ ರೀತಿಯೂ ವಿಲಕ್ಷಣವಾಗಿದ್ದಿತು. ಒಮ್ಮೆ ಒಬ್ಬ ಮುಗ್ಧ ಹಳ್ಳಿಗನು ಬಂದ, ಅವನ ಚಕ್ಕಡಿಯ ಕೆಳಗೆ ಸಿಕ್ಕು ಒಂದು ಬೆಕ್ಕು ಸತ್ತು ಹೋಗಿದ್ದ ಕಾರಣ, ಏನಾದರೂ ಪರಿಹಾರವನ್ನು ಸೂಚಿಸಬೇಕೆಂದು ಜೋತಿಷಿಯೊಬ್ಬನನ್ನು ಕೇಳುತ್ತಿದ್ದ. ಆ ಜೋಯಿಸನು ಮುಗ್ಧ ಹಳ್ಳಿಗನನ್ನು ಹಲವಾರು ರೀತಿಯಲ್ಲಿ ಹೆದರಿಸುತ್ತಿದ್ದ.

'ಬೆಕ್ಕನ್ನು ಕೊಲ್ಲುವುದು ಮಹಾಪಾಪ. ಈ ಪಾಪವು ಜನ್ಮಜನ್ಮಾಂತರದವರೆಗೂ ನಿನ್ನನ್ನು ಕಾಡದಿರದು.'
“ಸ್ವಾಮಿ ಏನಾದರೂ ಪರಿಹಾರ ಹೇಳಿ...''
ಬಂಗಾರದ ಬೆಕ್ಕನ್ನು ಮಾಡಿಸಿ, ನವಧಾನ್ಯಗಳೊಡನೆ ದಾನ ಮಾಡಿದರೆ ಪಾಪ ಪರಿಹಾರವಾಗಬಲ್ಲುದು..'
“ಅಯ್ಯೋ ಶಿವನೇ ಎಲ್ಲಿಂದ ತರಲಿ ಬಂಗಾರನ ? ... ಅಷ್ಟು ದೊಡ್ಡದು ಕೈಲಾಗಲ್ಲ ಅಯ್ಯ...''
“ಕಡೆಗೆ ಬೆಳ್ಳಿ ಬೆಕ್ಕನ್ನಾದರೂ ಮಾಡಿಸಿಕೊಡಬೇಕು...'' ಗೋಗರೆದ ಹಳ್ಳಿಗ. ಅದೂ ಅಗಲ್ಲ ನನ್ನೊಡೆಯಾ...'
“ನಿನ್ನ ಹಣೇಬರಹಾ ಯಾರು ತಪ್ಪಿಸಲು ಸಾಧ್ಯ ?'' ಹಳ್ಳಿಗನು ಗೋಳೋ ಎಂದು

ದುಃಖಿಸತೊಡಗಿದಾಗ, ಕೊಂಚ ದೂರದಲ್ಲಿ ಕುಳಿತು ಧ್ಯಾನಾಧ್ಯಯನದಲ್ಲಿ ತೊಡಗಿದ್ದ ಬಸವರಸನ ಚಿತ್ತ ಇತ್ತ ಹರಿದು ಆ ಮುಗ್ಧನನ್ನು ಕುರಿತು ವ್ಯಾಕುಲಗೊಂಡ. ಅಂಥವರ ಮುಗ್ಧತೆಯ ದುರುಪಯೋಗ ಮಾಡಿಕೊಳ್ಳುವುದರ ಕುರಿತು ಮತ್ತು ಧರ್ಮ- ದೇವರುಗಳನ್ನು ಭಯಪಡಿಸುವ ವಸ್ತುಗಳನ್ನಾಗಿ ಮಾಡಿದುದರ ಬಗ್ಗೆ ಬಸವರಸ ಕಡುನೊಂದ, ಆ ಮುಗ್ಧನ ಬಳಿಗೆ ಹೋಗಿ ಮೃದುವಾಗಿ ಭುಜ ಹಿಡಿದು,

“ಅಣ್ಣಾ...” ಎಂದು ಬಸವರಸ ಅಂದಾಗ ಅವನು ಬೆಚ್ಚಿದ.
''ನೋಡು..” ದೇವರನ್ನು ಕುರಿತು ಭಯಪಡಬೇಕಾಗಿಲ್ಲ. ಅವನು ಕಾರುಣ್ಯನಿಧಿ.

ಎಲವೋ ಎಲವೋ ಪಾಪಕರ್ಮವ ಮಾಡಿದವನೇ,
ಎಲವೋ ಎಲವೋ ಬ್ರಹ್ಮಹತ್ಯವ ಮಾಡಿದವನೇ,
ಒಮ್ಮೆ ಶರಣೆನ್ನೆಲವೋ !
ಒಮ್ಮೆ ಶರಣೆಂದಡೆ ಪಾಪಕರ್ಮ ಓಡುವುವು.
ಸರ್ವ ಪ್ರಾಯಶ್ಚಿತ್ತಕ್ಕೆ ಹೊನ್ನ ಪರ್ವತಂಗಳೈದವು ;
ಒಬ್ಬಗೆ ಶರಣೆನ್ನು, ನಮ್ಮ ಕೂಡಲಸಂಗಮದೇವಂಗೆ !


ನಿನ್ನನ್ನು ನೋಡಿ ಈ ಮಾತು ಬರೆದಿರುವೆ ನೋಡು. ಜಗದಾದಿ ದೇವನಿಗೆ ಪಶ್ಚಾತ್ತಾಪದಿಂದ ಶರಣಾಗು ; ಅರಿತೋ ಅರಿಯದೆಯೋ ಮಾಡಿದ ಪಾಪ ತೀವ್ರವಾಗಿ ಪರಿಹಾರವಾಗುವುದು. ಉದ್ದೇಶ ಪೂರ್ವಕವಾಗಿ, ಹೊಟ್ಟೆಯ ಹಸಿವೆಗಾಗಿಯೋ, ಬೇಟೆಯಾಡಿಯೋ ನೀನೇನು ಕೊಂದಿಲ್ಲವಷ್ಟೆ. ನಡೆ ಹೃತ್ತೂರ್ವಕವಾದ ಭಕ್ತಿಯಿಂದ ಸಂಗಮನಾಥನನ್ನು ಪೂಜಿಸು...”

“ಅಯ್ಯಾ... ಅಷ್ಟು ಸುಲಭವಾಗಿ ಪರಿಹಾರವಾಗುವುದೆ.?''

ಖಂಡಿತವಾಗಿಯೂ, ದೇವನು ಪ್ರಾಯಶ್ಚಿತ್ತಕ್ಕೆ ಒಲಿಯನು ಪಶ್ಚಾತ್ತಾಪಕ್ಕೆ ಒಲಿಯುವನು...” ಹಳ್ಳಿಗನು ಬಸವರಸನ ಆತ್ಮವಿಶ್ವಾಸದ, ಭರವಸೆಯ ಮಾತುಗಳನ್ನು ಕೇಳಿ ಧೈರ್ಯತಾಳಿ ಎದ್ದು ಹೊರಟಾಗ, ತನಗೆ ಬರಬೇಕಾದ ಲಾಭವನ್ನು ತಪ್ಪಿಸಿದುದಕ್ಕೆ ಜೋಯಿಸನು ಅಸಹನೆಯಿಂದ ಕುದಿಯುತ್ತಿದ್ದ.

ಇಂಥವೆಲ್ಲ ನೂರಾರು ಪ್ರಸಂಗಗಳು ಬಸವರಸನ ವಿಮರ್ಶಾಶಕ್ತಿಯನ್ನು ಕಲಕಿದ್ದವು. ಧರ್ಮವು ಪ್ರಗತಿಪರ, ವೈಚಾರಿಕ ದೃಷ್ಟಿಕೋನ ಬೆಳೆಸಲು ಸಾಧ್ಯವಿಲ್ಲಲವೆ ? ಧರ್ಮವನ್ನು ಆಧಾರವಾಗಿಟ್ಟುಕೊಂಡೇ ವೈಚಾರಿಕ ಮೌಲ್ಯಗಳ ಮಂದಿರಕಟ್ಟಲು ಬರದೆ ? ಎಂದೆಲ್ಲ ಚಿಂತಿಸಿ ಪ್ರಗತಿಪರ ಧರ್ಮದ ರೂಪುರೇಷೆಯ ನೀಲನಕ್ಷೆಯನ್ನು ಇದೀಗ ಸಭೆಯ ಮುಂದೆ ಬಸವರಸನು ಇಡುತ್ತಿದ್ದಾನೆ.

ಪ್ರಗತಿಪರ ಧರ್ಮ

ಬಸವಣ್ಣನವರ ದೃಷ್ಟಿಯಲ್ಲಿ ಧರ್ಮವು ವೈಚಾರಿಕತೆಯ ಹಿನ್ನೆಲೆ ಪಡೆದುದು, ನೈತಿಕ ಮೌಲ್ಯಗಳಿಗೆ ಒತ್ತುಕೊಡುವಂಥಾದ್ದು ಇರಬೇಕು ; ಇರಲು ಸಾಧ್ಯವಿದೆ.

ತೊರೆಯ ಮೀವ ಅಣ್ಣಗಳಿರಾ, ತೊರೆಯ ಮೀವ ಸ್ವಾಮಿಗಳಿರಾ
ತೊರೆಯಿಂ ಭೋ ತೊರೆಯಿಂ ಭೋ
ಪರನಾರಿಯರ ಸಂಗವ ತೊರೆಯಿಂ ಭೋ
ಪರಧನದಾಮಿಷವ ತೊರೆಯಿಂ ಭೋ
ಇವ ತೊರೆಯದೆ ಹೋಗಿ ತೊರೆಯ ಮಿಂದಡೆ
ಬರುದೊರೆ ಹೋಹುದು ಕೂಡಲಸಂಗಮದೇವಾ.


ತೊರೆಯಲ್ಲಿ ಮಿಂದು ಪಾಪದ ರಾಶಿಯನ್ನು ತೊಳೆದುಕೊಂಡು ಪುನೀತರಾಗ- ಬೇಕೆಂಬುವವರನ್ನು ಕುರಿತು ಹೇಳುವ ಈ ಮಾತುಗಳು ಅರ್ಥಗರ್ಭಿತವಾಗಿವೆ. ಪರನಾರಿಯರ ಸಂಗದ ಆಕಾಂಕ್ಷೆ, ಪರಧನದ ಆಮಿಷ ಅಳಿಯದೆ ಯಾವ ನದಿಯಲ್ಲಿ ಮಿಂದರೂ ಅಷ್ಟೆ; ಏನೂ ಪ್ರಯೋಜನವಾಗದು. ಭೌತಿಕ ಜಲದಿಂದ ಮಿಂದಾಗ ದೇಹವು ಶುಚಿಯಾಗಬಲ್ಲುದೇ ವಿನಾ ಶುದ್ಧವಾಗಲಾರದು. ಮನಸ್ಸು ದುರ್ವಿಚಾರಗಳಿಂದ ಕಲುಷಿತವಾದಾಗ, ಕುವೃತ್ತಿಗಳಿಂದ ಶರೀರವು ಅಶುದ್ಧವಾಗಿರುವಾಗ ನೀರಿನಲ್ಲಿ ಮಿಂದು ಇವೆಲ್ಲದರಿಂದ ಬಿಡುಗಡೆ ಹೊಂದುವೆನೆಂಬುದು ಭ್ರಾಂತಿ . ಇದು ಹೇಗಾಗುವುದೆಂದರೆ ಸಾರಥಿಯ ಮೈ ಹೊಲಸಾದಾಗ ರಥವನ್ನು ತೊಳೆದಂತೆ ; ರಥವು ಕೊಳೆಯಾದಾಗ ಸಾರಥಿಗೆ ಸ್ನಾನ ಮಾಡಿಸಿದಂತೆ. ನೀರಿನಿಂದ ದೇಹಶುಚಿ ; ಪಶ್ಚಾತ್ತಾಪದಿಂದ ಮಾತ್ರ ಆತ್ಮಶುಚಿ ಸಾಧ್ಯ.

ಮೂಢತನದಿಂದ ಮಾಡಿದುದೆಲ್ಲ ವ್ಯರ್ಥ ಭಕ್ತಿಯಾಗುವುದೇ ವಿನಾ ಸಾರ್ಥಕದ ಭಕ್ತಿಯಲ್ಲ.

ಅಳೆಯುತ್ತ ಅಳೆಯುತ್ತ ಬಳಲುವರಲ್ಲದೆ ಕೊಳಗ ಬಳಲುವುದೆ ?
ನಡೆಯುತ್ತ ನಡೆಯುತ್ತ ಬಳಲುವರಲ್ಲದೆ ಬಟ್ಟೆ ಬಳಲುವುದೆ ?
ಶ್ರವವ ಮಾಡುತ್ತ ಮಾಡುತ್ತ ಬಳಲುವರಲ್ಲದೆ ಕೋಲು ಬಳಲುವುದೆ ?
ನಿಜವನರಿಯದ ಭಕ್ತ ಬಳಲುವನಲ್ಲದೆ ಲಿಂಗ ಬಳಲುವುದೆ ?


ಸರಿಯಾದ ಅರಿವನ್ನು ಪಡೆಯದೆ ಮಾಡುವ ಮೂಢನ ಭಕ್ತಿ ಪರಿಶ್ರಮವನ್ನು ಉಂಟು ಮಾಡುವುದೇ ವಿನಾ ಪರಿಣಾಮವನ್ನಲ್ಲ. ಊದಿನ ಕಡ್ಡಿ ನೀರಿನ ಸಂಪರ್ಕದಲ್ಲಿ ಕೊಳೆತಾಗ ದುರ್ವಾಸನೆ ಕೊಡುವುದು ; ಬೆಂಕಿಯ ಕಿಡಿಯ ಸಂಪರ್ಕದಿಂದ ಉರಿದಾಗ ಸುವಾಸನೆ ಕೊಡುವುದು. ಅದೇ ರೀತಿ ಧರ್ಮವೂ ಸಹ ಜ್ಞಾನದ ಸಂಪರ್ಕದಿಂದ ಸದ್ಗುಣಗಳ ಸುವಾಸನೆ ನೀಡಿದರೆ, ಮೂಢ ಭಕ್ತಿಯ ನೀರಿನ ಸಂಪರ್ಕದಿಂದ ಶಿಥಿಲಗೊಳ್ಳುವುದು.

ಅಕ್ಕಿ ಇಲ್ಲದ ತುಷಕ್ಕೆ ಅಶ್ವವಣಿಯ ಎರೆದರೆ
ಅದೆಂದಿಗೆ ಬೆಳೆದು ಫಲವಪ್ಪುದೋ


ಎನ್ನುತ್ತಾಳೆ ಅಕ್ಕಮಹಾದೇವಿ. ಒಂದು ಬತ್ತದ ಕಾಳಿನಲ್ಲಿ ಎರಡು ಮುಖ್ಯ ಭಾಗಗಳುಂಟು. ಒಂದು ಹೊರಗಿನ ಕವಚ (ತುಷ), ಇನ್ನೊಂದು ಅಕ್ಕಿಯ ಕಾಳು. ಅಕ್ಕಿಯ ಕಾಳು ಇಲ್ಲದ ಕವಚವನ್ನು ಬಿತ್ತಿದರೆ ಬೆಳೆ ಬಾರದೆಂತೋ, ಹಾಗೆ ವಿಚಾರವಿಲ್ಲದ ಆಚಾರವೂ ಅಷ್ಟೇ ಜೊಳ್ಳು, ಹಾಗೆಂದು ಬರೀ ವಿಚಾರವನ್ನು ಆಶ್ರಯಿಸೋಣವೇ ? ಆಚಾರವಿಲ್ಲದ ವಿಚಾರ ತುಷವಿಲ್ಲದ ಅಕ್ಕಿ ಅದೂ ಬಿತ್ತಲ್ಪಟ್ಟಾಗ ಬೆಳೆಯಲಾರದು.

ಕೃತಕ ಭಕ್ತಿಯ ಇನ್ನೊಂದು ರೂಪ ಯಾಂತ್ರಿಕತೆ ; ಯಾವುದೇ ಭಾವನೆ- ಸಂವೇದನೆ- ಗಳಿಲ್ಲದೆ ನಿತ್ಯ ಕ್ರಿಯೆಗಳನ್ನು ಮಾಡುವರು ಕೆಲವರು. ಅದು ಅಭ್ಯಾಸ ಬಲವಾಗಿರುವುದು; ಅವರ ಜೀವನದಲ್ಲಿಯೂ ಯಾವ ಆಂತರಿಕ ಪ್ರಗತಿ ಕಾಣಬರದು. ಗುಡಿಗಳಲ್ಲಿ ಪೂಜೆ ಮಾಡುವ ಕೆಲವು ಪೂಜಾರಿಗಳು, ಮನೆಯಲ್ಲಿಯೇ ಯಾಂತ್ರಿಕವಾಗಿ ಮಡಿ ಹುಡಿ ಮಾಡುವ ಕೆಲವು ಜನರು ಇದಕ್ಕೆ ಉದಾಹರಣೆ. ಈ ಯಾಂತ್ರಿಕ ಭಕ್ತಿಯನ್ನು ಬಸವಣ್ಣನವರು ಹೀಗೆ ವಿಡಂಬಿಸುವರು.

ತನು ಮುಟ್ಟಿ ದೂರವಾದರಯ್ಯ ಬೆಲೆವೆಣ್ಣಿನಂತೆ
ಸೂಳೆ ತನುಮುಟ್ಟಿ ಅಪ್ಪುವುಳಲ್ಲದೆ ಮನಮುಟ್ಟಿ ಅಪ್ಪಳು.
ಆಚಾರವನರಿಯದ ಅತಿ ಮರುಳುಗಳು
ನಿಮ್ಮ ಸುಖವನೆತ್ತ ಬಲ್ಲರೋ ಕೂಡಲಸಂಗಮದೇವಾ ?

ಚಿತ್ತವಿಲ್ಲದೆ ಗುಡಿಯ ಸುತ್ತಿದಡೆ ಫಲವೇನು ?
ಎತ್ತು ಗಾಣವನು ಹೊತ್ತು ತಾ ನಿತ್ಯದಿ
ಸುತ್ತಿ ಬಂದಂತೆ ಸರ್ವಜ್ಞ ||


ಇದೇ ರೀತಿ ಇನ್ನೊಂದು ಸಾಧನೆಯುಂಟು. ಅದು ಪರಿಶ್ರಮ, ಕಠಿಣಾಚರಣೆಗಳಿಂದ ಕೂಡಿದ್ದು. ಎಷ್ಟೇ ಚಳಿಯಿದ್ದರೂ ದಿಗಂಬರಿಯಾಗಿ ಇರುವುದು; ಕಾಡುಸೊಪ್ಪನ್ನು ತಿನ್ನುವುದು. ಜನ ಸಂಪರ್ಕದಿಂದ ದೂರದಲ್ಲಿ ಏಕಾಂತದಲ್ಲಿರುವುದು. ಕಠಿಣವಾದ ಆಸನಗಳಲ್ಲಿ ನಿಂತು ತಪಸ್ಸು ಮಾಡುವುದು. ಇದನ್ನೂ ಶರಣರು ಪ್ರೋತ್ಸಾಹಿಸರು.

ಕಾಡ ಪತ್ರಿಯನಾ ಕೀಡಿ ತಿಂದಿರವೆ ?
ಉಡು ಏಕಾಂತವಾಸಿಯೆ ?
ತೋಳ ದಿಗಂಬರಿಯೆ? ಎತ್ತು ಬ್ರಹ್ಮಚಾರಿಯೆ ?
ಬಾವುಲು ತಲೆಕೆಳಗಾರ್ದೊಡೆ ತಪಸಿಯೆ ?
ಸಕಲೇಶ್ವರದೇವಾ, ನಿಮ್ಮ ನಿಜವನರಿಯದ ಶರಣರು
ಹೊರಹಂಚು, ಒಳಬೊಳ್ಳೆ ; ಒಲ್ಲರು ಲಿಂಗೈಕ್ಯರು !


ಭಕ್ತಿಯ, ಸಾಧನೆಯ ಅಂತಿಮ ಗುರಿ ಏನು ? ಒಂದು ಗುಡಿ ಇದೆ ಎಂದುಕೊಳ್ಳೋಣ. ಅಲ್ಲಿ ವಿಗ್ರಹವಿದೆಯೆಂದು ನೀವು ದರ್ಶನಕ್ಕೆ ಹೋಗುತ್ತೀರಿ. ಆ ದೇವಾಲಯ ಸ್ವಚ್ಛವಾಗಿದ್ದರೆ, ಅಲ್ಲಿ ದೀಪವು ಉರಿಯುತ್ತಿದ್ದರೆ ನಿಮಗೆ ಹಿತವೆನಿಸುತ್ತದೆ. ಹಾಗಲ್ಲದೆ ಕತ್ತಲೆ, ಅದನ್ನಾಶ್ರಯಿಸಿಕೊಂಡು ಬಾವಲಿಗಳು, ಅವುಗಳ ಹೊಲಸು ತುಂಬಿದ್ದರೆ ನಿಮಗೆ ಹಿತವೆನಿಸುವುದೆ? ಅದೇ ರೀತಿ ದೇಹದ ದೇವಾಲಯ ಸತ್ತಿಗಳಿಂದ ಶುಚಿಯಾಗಿರಬೇಕು. ದುಶ್ಚಟ- ದುರ್ಗುಣ, ಅರಿಷಡ್ವರ್ಗಗಳೆಂಬ ತೊಗಲು ಬಾವಲಿಗಳಿಗೆ ಇಂಬು ಕೊಡಬಾರದು ; ಭಕ್ತಿಯ ತೈಲವನ್ನುಂಡು ಸದಾಚಾರದ ಬತ್ತಿಯು ನಿರಂತರವಾಗಿ ಜ್ಞಾನದ ಬೆಳಕಿನಿಂದ ಬೆಳಗಬೇಕು. ಹೃದಯ ಪೀಠದಲ್ಲಿ ದೇವನನ್ನು ಕುಳ್ಳಿರಿಸಿ ಸದ್ಗುಣಗಳಿಂದ ಆರಾಧಿಸಬೇಕು. ಆಗ ಗುಡಿಯು ಹೇಗೆ ಮಾನವರಿಗೆ ಉಪಯುಕ್ತವೆನಿಸುವುದೋ ಹಾಗೆ ದೇಹದೇವಾಲಯವೂ ಸುಯೋಗ್ಯವಾಗುವುದು.

ಪ್ರಗತಿಪರ ಧರ್ಮ ಮತ್ತು ಪೌರಾಣಿಕ ಧರ್ಮ

ಸಾಮಾನ್ಯವಾಗಿ ಧರ್ಮಗಳಲ್ಲಿ ಎರಡು ಬಗೆಯ ದೃಷ್ಟಿಕೋನದ ಧರ್ಮಗಳುಂಟು ಪ್ರಗತಿಪರ ಮತ್ತು ಪೌರಾಣಿಕ ಎಂಬುದಾಗಿ, ಪೌರಾಣಿಕ ಧರ್ಮವು ಪುರಾಣಗಳ ಆಧಾರದ ಮೇಲೆ ಪ್ರತಿಪಾದಿಸಲ್ಪಟ್ಟು, ಶಬ್ದ ಪ್ರಮಾಣವನ್ನೇ ಅವಲಂಬಿಸಿದರೆ ಪ್ರಗತಿಪರ ಧರ್ಮವು ತತ್ವಜ್ಞಾನದ ಆಧಾರದ ಮೇಲೆ ನಿಂತು, ಅನುಭವ ಪ್ರಮಾಣವನ್ನೇ ಆಧರಿಸುತ್ತದೆ. ಇದನ್ನು ಏಕೆ ನಂಬಬೇಕು ?'' ಎಂದು ಬುದ್ದಿಯು ಏನನ್ನಾದರೂ ಪ್ರಶ್ನಿಸಿದರೆ ಪ್ರಗತಿಪರ ಧರ್ಮವು ತರ್ಕದವರೆಗೆ ಹಚ್ಚಿ ಆ ನಂಬಿಕೆಯನ್ನು ಪರೀಕ್ಷಿಸುತ್ತದೆ. ನಿನ್ನ ವಿಮರ್ಶೆ ಅನುಮೋದಿಸಿದರೆ ಇದನ್ನು ನಂಬು ಎನ್ನುತ್ತದೆ. ಆದರೆ ಪೌರಾಣಿಕ ಧರ್ಮವು, ಪುರಾಣಗಳು ಈ ರೀತಿ ಹೇಳುತ್ತವೆ ಆದ್ದರಿಂದ ನಂಬು.'' ಎನ್ನುತ್ತದೆ.

ಹೀಗಾಗಿ ಮತೀಯ ದೃಷ್ಟಿಕೋನವನ್ನು ಪೌರಾಣಿಕ ಧರ್ಮ ಬೆಳೆಸಿದರೆ ಪ್ರಗತಿಪರ ಧರ್ಮವು ಮತೀಯ ದೃಷ್ಟಿಕೋನವನ್ನು ಬೆಳೆಸುತ್ತದೆ. ತಾನು ನಂಬಿದುದನ್ನೇ ಸತ್ಯವೆಂದು ವಾದಿಸುವ ಮತಾಂಧತೆಯನ್ನು ಪೌರಾಣಿಕ ಧರ್ಮ ಬೆಳೆಸಿದರೆ, ಸತ್ಯವನ್ನು ಎದೆಗಾರಿಕೆಯಿಂದ ನಂಬುವ ಬೌದ್ಧಿಕ ಪ್ರಾಮಾಣಿಕತೆಯನ್ನು ಪ್ರಗತಿಪರ ಧರ್ಮ ಕಲಿಸುತ್ತದೆ. ಒಂದು ಕೂಪ ಮಂಡೂಕ ವೃತ್ತಿಯನ್ನು ಬೆಳೆಸಿದರೆ ಇನ್ನೊಂದು ವಿಶಾಲ ದೃಷ್ಟಿಯನ್ನು ಬೆಳೆಸುತ್ತದೆ. ಒಂದು ಅರ್ಥವಿಲ್ಲದ ಪರಂಪರೆಗೇ ಸತ್ಯವೆಂದು ಜೋತು ಬಿದ್ದರೆ ಇನ್ನೊಂದು ಅರ್ಥಪೂರ್ಣ ಆಚಾರವನ್ನು ಮಾತ್ರ ಅಳವಡಿಸಿಕೊಂಡು, ಅರ್ಥವಿಲ್ಲದ್ದನ್ನು ನಿರಾಕರಿಸುತ್ತದೆ. ಪೌರಾಣಿಕ ಧರ್ಮವು ವಿಧಿವಾದವನ್ನು ಆಶ್ರಯಿಸಿದರೆ ಪ್ರಗತಿಪರ ಧರ್ಮವು ಪ್ರಯತ್ನವಾದಕ್ಕೆ ಮಾನ್ಯತೆ ನೀಡುತ್ತದೆ. ಪೌರಾಣಿಕ ಧರ್ಮವು ಕರ್ಮಪ್ರಧಾನವಾಗಿ, ವಿಧಿವಿಧಾನಗಳಿಗೇ (Ritualism) ಹೆಚ್ಚು ಒತ್ತುಕೊಟ್ಟರೆ, ಪ್ರಗತಿಪರ ಧರ್ಮವು ಜ್ಞಾನ ಪ್ರಧಾನವಾಗಿ ಆತ್ಮ ವಿಕಾಸದ ಕಡೆಗೆ ಹೆಚ್ಚು ಗಮನಕೊಡುತ್ತದೆ. ಬಸವಣ್ಣನವರು ಬೋಧಿಸಿದ್ದು, ಪ್ರತಿಪಾದಿಸಿದ್ದು ಈ ಪ್ರಗತಿಪರ ಧರ್ಮವನ್ನು ಎಂಬುದನ್ನು ನಾವು ಲಕ್ಷ್ಯದಲ್ಲಿಡಬೇಕು.

ಋಷಿ-ಮುನಿಗಳು, ನಿಜಾನುಭವಿಗಳು ಯಾವ ಉದ್ದೇಶ, ಮಾನವೀಯ ಪ್ರೇಮದಿಂದ ಧರ್ಮಗಳನ್ನು ಸ್ಥಾಪಿಸುವರೋ ಆ ಉದ್ದೇಶವು ಕಾಲಾನಂತರದಲ್ಲಿ ಅಳಿದುಹೋಗಿ, ಧರ್ಮಾಚರಣೆ ತನ್ನ ಸೊಗಡನ್ನು ಕಳೆದುಕೊಂಡು ಯಾಂತ್ರಿಕ ವಿಧಿವಿಧಾನಗಳ ಮಟ್ಟಕ್ಕೆ ಇಳಿಯುತ್ತದೆ. ಇದನ್ನರಿತ ಕಾರಣವೇ ಬಸವಣ್ಣನವರು ಧರ್ಮದ ವಿರೋಧಿಯಾಗದೆ, ಧರ್ಮದ ನಿಜ ಸ್ವರೂಪವನ್ನು ಅರಿತು ಬೋಧಿಸಿದರು. ಸಂಗೀತವು ನಾದಯೋಗಿಯಲ್ಲಿ ಹುಟ್ಟಿ ಗಾಯಕರಲ್ಲಿ ಬೆಳೆದು, ಹಾದಿಬೀದಿಯಲ್ಲಿ ಕಿರುಚುವ ಕೊರವರಲ್ಲಿ ಸಾಯುವುದು. (ನಮ್ಮ ಬಸವ ಮಂಟಪದ ಬಳಿ ಓರ್ವ ಕೌಲೆತ್ತನ್ನು ಕರೆದುಕೊಂಡು ಆಗಾಗ ಬಂದು ನಾದಸ್ವರ ಬಾರಿಸುವನು. ಅದು ಕೇಳಲು ಎಷ್ಟು ಭಯಂಕರವಾಗಿರುತ್ತದೆಂದರೆ ಭಿಕ್ಷು ಕೊಡದಿದ್ದರೆ ಇನ್ನಷ್ಟು ಹೊತ್ತು ನಿಲ್ಲುತ್ತಾನೆಂದು ಬೇಗನೆ ಭಿಕ್ಷೆ ಕೊಡಿಸಿ ಕಳಿಸಬೇಕಾಗುತ್ತದೆ) ನೃತ್ಯವಿದ್ಯೆಯು ನಾಟ್ಯಾಚಾರ ನಟರಾಜ, ಭರತಮುನಿ ಮುಂತಾದವರಲ್ಲಿ ಹುಟ್ಟಿ ಅನೇಕ ನರ್ತಕರಲ್ಲಿ ವೃದ್ಧಿಯಾಗಿ ಕ್ಯಾಬರೆ, ಡಿಸ್ಕೋ ಡ್ಯಾನ್ಸ್‌ನವರಲ್ಲಿ ಸಾವನ್ನಪ್ಪುವುದು. ಅದೇ ರೀತಿ ಧರ್ಮವು ಅನುಭಾವಿಗಳಲ್ಲಿ ಹುಟ್ಟಿ ಪಂಡಿತರು - ತತ್ತ್ವಜ್ಞಾನಿಗಳಲ್ಲಿ ಬೆಳೆದು ಕರ್ಮಠಾಚರಣೆಯ ಡಾಂಭಿಕ ರಲ್ಲಿ ಸಾವನ್ನಪ್ಪುವುದು. ಕರ್ಮಠ ಜನರು, ತಮ್ಮ ಆಚರಣೆಗಳಿಂದಾಗಿ ಧರ್ಮಕ್ಕೆ ಎಂಥಾ ಕುತ್ತನ್ನು ತರುತ್ತಿದ್ದಾರೆ ಎಂಬ ಅರಿವನ್ನು ಹೊಂದಿರರು. ಅನೇಕ ವಿಚಾರ ಶೀಲರು ಧರ್ಮ ದೇವರುಗಳಲ್ಲಿ ಶ್ರದ್ಧೆ ಕಳೆದುಕೊಳ್ಳಲಿಕ್ಕೆ ತಾವೇ ಕಾರಣರಾಗುತ್ತಿದ್ದಾರೆ ಹೇಗೆ ಎಂಬುದನ್ನು ಅರಿಯರು.

ಹೀಗಾಗಿಯೇ ಬಸವಣ್ಣನವರು ಪೂಜಾರಿ ಪ್ರಧಾನ ಧರ್ಮವನ್ನು ವಿರೋಧಿಸಿ ಗುರುಪ್ರಧಾನ ಪ್ರವಾದಿ ಧರ್ಮವನ್ನು ಪ್ರತಿಪಾದಿಸಿದರು. ಪೂಜಾರಿ ಧರ್ಮವ ದೇವಭಕ್ತರ ನಡುವೆ ಮಧ್ಯವರ್ತಿಯನ್ನು ತಂದು ನಿಲ್ಲಿಸುವುದು; ಪೂಜಾರಿಯೆಂಬ ದಲಾಲಿಯ ಮೂಲಕವೇ ಧರ್ಮದ ಸರಕನ್ನು ಖರೀದಿಸಲು-ಮಾರಲು ಹೇಳುವುದು. ಪ್ರವಾದಿ ಧರ್ಮವು ದೇವ- ಭಕ್ತರ ನಡುವೆ ನೇರ ಸಂಬಂಧಕ್ಕೆ ಒತ್ತುಕೊಡುವುದು.

ತನ್ನಾಶ್ರಯದ ರತಿ ಸುಖವನು
ತಾನುಂಬ ಊಟವನು
ಬೇರೆ ಮತ್ತೊಬ್ಬರ ಕೈಯಲ್ಲಿ ಮಾಡಿಸಬಹುದೆ ?
ತನ್ನ ಲಿಂಗಕ್ಕೆ ತಾ ಮಾಡುವ ನಿತ್ಯ ನೇಮವ
ತಾ ಮಾಡಬೇಕಲ್ಲದೆ ಬೇರೆ ಮತ್ತೊಬ್ಬರ ಕೈಯಲ್ಲಿ ಮಾಡಿಸಬಹುದೆ ?
ಕೆಮ್ಮನೆ ಉಪಚಾರಕ್ಕೆ ಮಾಡುವರಲ್ಲದೆ
ನಿಮ್ಮನ್ನೆತ್ತ ಬಲ್ಲರು ಕೂಡಲಸಂಗಮದೇವಾ ?


ದೇವ-ಭಕ್ತರ ಆತ್ಮೀಯ ಸಂಬಂಧವನ್ನು ಸತಿ-ಪತಿಯರ ಮಧುರ ಸಂಬಂಧಕ್ಕೆ ಹೋಲಿಸಿರುವುದರಲ್ಲಿ ಯಾರ ಮಧ್ಯಸ್ಥಿಕೆಯೂ ಇಲ್ಲದ, ಅತ್ಯಂತ ನೇರ ಆತ್ಮೀಯ ಸಂಬಂಧ ಕಲ್ಪಿಸಲಾಗಿದೆ. ಗಂಡ-ಹೆಂಡಿರ ಸರಸ ಸಲ್ಲಾಪದ ನಡುವೆ ಅತ್ತೆಯೋ ಮಾವನೋ ಮೈದುನರೋ ತಲೆ ತೂರಿಸಿದರೆ ಎಷ್ಟು ರಸ ಭಂಗವೋ ಪೂಜಾರಿಯ ಮಧ್ಯಸ್ಥಿಕೆಯೂ ಅಷ್ಟೇ ರಸ ಭಂಗಕ್ಕೆ ಕಾರಣ. ಬಸವ ಧರ್ಮದಲ್ಲಿ ಗುರುವಿಗೆ ಸ್ಥಾನವುಂಟು, ಪೂಜಾರಿಗೆ ಇಲ್ಲ, ದೀಕ್ಷೆಯ ಮೂಲಕ ಶರಣಸತಿ-ಲಿಂಗಪತಿಯರನ್ನು ಒಂದುಗೂಡಿಸಿದ ಗುರುವು ಪುನಃ ಉಭಯತರ ಮಧ್ಯೆ ತಲೆ ಹಾಕನು.

ಪೂಜಾರಿ ಮತ್ತು ಗುರುವಿನ ಮಧ್ಯೆ ಸಾಕಷ್ಟು ವ್ಯತ್ಯಾಸಗಳಿವೆ. ಗುರುವು ಜ್ಞಾನ ಕಾಂಡಕ್ಕೆ, ಅರಿವಿಗೆ ಪ್ರಮುಖ ಸ್ಥಾನಕೊಟ್ಟರೆ ಪೂಜಾರಿಯು ಕರ್ಮಕಾಂಡಕ್ಕೆ, ಅಚರಣೆಗೆ ಹೆಚ್ಚು ಮಹತ್ವ ನೀಡುವನು. ದೀಪವನ್ನು ಹಚ್ಚಿ ಕೈಗೆ ಕೊಟ್ಟು 'ಈ ಬೆಳಕಿನಲ್ಲಿ ಇನ್ನು ನೀನು ಮುನ್ನಡೆ' ಎಂದು ಗುರುವು ಹೇಳಿದರೆ, ಪೂಜಾರಿಯು 'ನಾನು ದೀಪವನ್ನು ಹಿಡಿಯುತ್ತೇನೆ. ನೀನು ಆ ಬೆಳಕಿನಲ್ಲಿ ಮುನ್ನಡೆ' ಎನ್ನುವನು. ತಾಯಿ ಮಗುವಿಗೆ ನಡಿಗೆ ಕಲಿಸಿ ನಂತರ ಮಗನು ಸ್ವಾವಲಂಬಿಯಾಗಿ ನಡೆಯುವಂತೆ ಮಾಡುವಳಷ್ಟೆ. ಆ ರೀತಿ ಗುರುವಿನ ಧೋರಣೆಯಾದರೆ, ಪೂಜಾರಿ ಧರ್ಮವೂ ಮನುಷ್ಯನನ್ನು ಕಡೆಯವರೆಗೂ ಪರಾವಲಂಬಿಯನ್ನಾಗಿಯೇ ಮಾಡುವುದು, ಗುರುವು ಆತ್ಮಾನಂದಕ್ಕಾಗಿ ಸ್ವಯಂ ಪ್ರೇರಣೆಯಿಂದ ಆಧ್ಯಾತ್ಮ ಪಥಕ್ಕೆ ಬಂದವನಾದರೆ ಪೂಜಾರಿಯು ವೃತ್ತಿ ಎಂದು ಪೂಜೆಯನ್ನು ಅವಲಂಬಿಸಿದವನು. ಗುರುವು ಸ್ವಾನಂದಕ್ಕಾಗಿ ಪೂಜೆ ಮಾಡಿದರೆ ಪೂಜಾರಿಯು ಸಂಬಳಕ್ಕಾಗಿ ಪೂಜೆ ಮಾಡುವನು.

ಈ ಕಾರಣಕ್ಕಾಗಿಯೇ ಪೂಜಾರಿಯ ಮಧ್ಯಸ್ತಿಕೆಯನ್ನು ಬಸವಣ್ಣನವರು ಇಷ್ಟಪಡದೆ ದೇವನನ್ನು ಭಕ್ತನು ಶ್ರದ್ಧೆ-ಭಕ್ತಿ, ಪ್ರೀತಿ-ಆತ್ಮೀಯತೆಯಿಂದ ಪೂಜಿಸುವುದನ್ನು ಇಷ್ಟಪಟ್ಟರು.

ಧರ್ಮ-ದೇವರ ಹೆಸರಿನಲ್ಲಿ ನಡೆಯುವ ಇನ್ನೊಂದು ಹುಚ್ಚಾಟವೆಂದರೆ ಮೈಮೇಲೆ ದೇವರು ಬಂದಿತೆಂದು ಕೆಲವರು ಇನ್ನೂ ಕೆಲವರನ್ನು ಶೋಷಿಸುವುದು ; ಕೈಚಳಕಗಳನ್ನು ಪ್ರದರ್ಶಿಸಿ ದೈವೀಶಕ್ತಿ ಎಂದು ಸ್ವಯಂ ಪ್ರಚಾರ ಮಾಡಿಕೊಳ್ಳುವುದು. ದೇವರು ಎಂದರೇನು ? ಅವನ ಒಲಿಮೆ ಹೇಗೆ ಪಡೆಯಲು ಸಾಧ್ಯ ಎಂಬ ತಿಳುವಳಿಕೆ ಇಲ್ಲದವರು ಮಾತ್ರ ಇವನ್ನೆಲ್ಲ ನಂಬಲು ಸಾಧ್ಯ. ಪ್ರಾಮಾಣಿಕ ಸಾಧಕರು ಅನೇಕರು ದೇವಕೃಪೆಗಾಗಿ ಎಷ್ಟೆಲ್ಲ ಹಂಬಲಿಸಿ, ಹಾತೊರೆದು ಉತ್ಕಟ ಸಾಧನೆ ಮಾಡುವರು. ತಮ್ಮ ಬದುಕನ್ನು ಕನ್ನಡಿಯೋಪಾದಿಯಲ್ಲಿ ಶುಭ್ರಗೊಳಿಸಿಕೊಳ್ಳಲು ಶ್ರಮಿಸುವರು. ಇಂಥವರಿಗೇ ಎಷ್ಟೋ ಕಾಲ ಕಾಯಿಸುವ 'ದೇವ ಕೃಪೆ ಬೀಡಿ-ಸಿಗರೇಟು, ಭಂಗಿ-ಸೆರೆ ಏನನ್ನೂ ಬಿಡಲಿಕ್ಕಾಗದ ಕೆಲವು ಅಪ್ರಬುದ್ಧರ ಮೇಲೆ ಅವತರಣವಾಗುವುದುಂಟೆ ? ಇವೆಲ್ಲ ಮೂಢರನ್ನು ಆಕರ್ಷಿಸುವ ತಂತ್ರಗಳು ಮಾತ್ರ.

ಅದೇ ರೀತಿ ಕೈಚಳಕ, ಕಣ್ಕಟ್ಟುಗಳು ಸಹ ಚಾಕಚಕ್ಯತೆಯಿಂದ ಸಾಮಾನ್ಯ ಜನರಿಗೆ ಅರಿವಾಗದಂತೆ ಬರಿ ಕೈಯಿಂದ ಹಲವಾರು ವಸ್ತುಗಳನ್ನು ತೆಗೆದುಕೊಡುವರು ಕೆಲವರು. ಇದು ಕೇವಲ ಅಭ್ಯಾಸದಿಂದ ಬರುವಂಥದೇ ವಿನಾ, ಅದಕ್ಕಾಗಿ ದೈವೀಶಕ್ತಿಯ ಹಸ್ತಕ್ಷೇಪ ಬೇಕಾಗಿಲ್ಲ. “ಮೂಢ ಭಕ್ತರನ್ನು, ಮೂಢ ಶ್ರೀಮಂತರನ್ನು ಆಕರ್ಷಿಸಿ, ದೈವೀಮಾರ್ಗಕ್ಕೆ ಹಚ್ಚುವ ಕಳಕಳಿ ಇದೆ ಈ ಕ್ರಿಯೆಯಲ್ಲಿ' ಎಂದು ಕೆಲವರು ಅಂಥ ಕ್ರಿಯೆಯನ್ನು ಸಮರ್ಥಿಸಬಹುದು. ವಿಳಂಬವಾದ ಪರಿವರ್ತನೆಯಾದರೂ ಚಿಂತೆಯಿಲ್ಲ. ಅವಸರದ ಮಾರ್ಗದಿಂದ ಅರ್ಕಷಿಸುವ ದುಸ್ಸಾಹಸ ಒಳ್ಳೆಯದಲ್ಲ. ಇಂತಹ ಅಲ್ಪಮಾರ್ಗಗಳು ವ್ಯಕ್ತಿಯನ್ನು ದಿಢೀರೆಂದು ಕೀರ್ತಿಶಾಲಿಯನ್ನಾಗಿ ಮಾಡಿದಂತೆಯೇ ಕೆಳಗೂ ಇಳಿಸಬಲ್ಲವು. ವಿಚಾರಶೀಲ ಜನರಲ್ಲಿ ಧರ್ಮ- ದೇವರ ಬಗ್ಗೆ ಜಿಗುಪ್ಪೆ ಹುಟ್ಟಿಸುವವು. ಆದ್ದರಿಂದ ಪ್ರಾಮಾಣಿಕ ಸಂತನು ತನ್ನ ನಡೆ-ನುಡಿಯಿಂದ ದೇವರು-ಧರ್ಮದ ಬಗ್ಗೆ ಒಲವು ಹುಟ್ಟಿಸುವಂತೆ ಮಾಡಬೇಕೇ ವಿನಾ ತಿರಸ್ಕಾರವನ್ನಲ್ಲ. ಧರ್ಮ-ದೇವರನ್ನು ಕುರಿತಾದ ಜ್ಞಾನವನ್ನು ತೊಳೆತೊಳೆಯಾಗಿ ಬಿಡಿಸುತ್ತ ಜನರಿಗೆ ಮನದಟ್ಟು ಮಾಡಬೇಕೇ ವಿನಾ ಅವನ್ನು ನಿಗೂಢವಾದ, ಜನರಿಗೆ ಎಟುಕಲಾರದ ವಸ್ತುಗಳನ್ನಾಗಿ ಮಾಡಬಾರದು.

ಈ ಬಗೆಯ ದೃಷ್ಟಿಕೋನ ತಳೆದ ಬಸವಣ್ಣನವರು ತಮ್ಮ ಅಂತರಂಗದಲ್ಲಿ ಮೂಡಿದ ವಿಚಾರಗಳನ್ನು ಕ್ರೋಢೀಕರಿಸಿ ಹೀಗೆ ಸಭೆಯ ಮುಂದೆ ಇಡುತ್ತಾರೆ. “ಒಂದೇ ನೆಲದಲ್ಲಿ ಬಾಳಿ, ಒಂದೇ ಗಾಳಿ ಸೇವಿಸಿ ಬದುಕುತ್ತಿದ್ದರೂ ಮನುಷ್ಯ ಸಮಾಜವು ಇಂದು ದೇವರು-ಧರ್ಮಗಳ ಹೆಸರಿನಲ್ಲಿ ಒಡೆದು ಹೋಳಾಗಿದೆ. ಒಂದು ಕಡೆ ಹುಟ್ಟಿನಿಂದಲೇ ಮೇಲು-ಕೀಳು ಎಂದು ನಿರ್ಧರಿಸುವ ಜಾತಿ, ಇನ್ನೊಂದು ಕಡೆ ಉದ್ಯೋಗದಲ್ಲೇ ಶ್ರೇಷ್ಠ-ಕನಿಷ್ಟ ಎಂಬ ತಾರತಮ್ಯ.

ನೂರೆಂಟು ದೇವರುಗಳನ್ನು ಕಲ್ಪಿಸಿಕೊಂಡಿರುವ ಅಜ್ಞಾನ ಒಂದು ಕಡೆ ; ಇನ್ನೊಂದು ಕಡೆ ಉಗ್ರದೇವತೆಗಳಿಗೆ ಕುರಿ ಕೋಣಗಳನ್ನು ಬಲಿಕೊಡುವ ಕ್ರೌರ್ಯ. ಹೀಗಾಗಿ, ಧರ್ಮವು ಭೀತಿ ಭ್ರಾಂತಿಗಳಿಂದ ತುಂಬಿದೆಯೇ ವಿನಾ ಪ್ರೀತಿ, ಭಕ್ತಿ, ಅತ್ಮಬಲದಿಂದಲ್ಲ.

ಕಲ್ಲಿನ ನಾಗರಕ್ಕೆ ಹಾಲು ಎರೀತಾರೆ. ದಿಟದ ನಾಗರ ಕಂಡರೆ ಕೊಲ್ಲು ಅಂತಾರೆ. ಹಸಿದ ಜೀವಿ ಬಂದರೆ 'ಮುಂದೆ ಹೋಗು' ಅನ್ನುತ್ತಾರೆ. ಉಣ್ಣದೆ ಇರುವ ವಿಗ್ರಹಕ್ಕೆ ನೈವೇದ್ಯ ಮಾಡ್ತಾರೆ. ತಮ್ಮಂತೆಯೇ ಇರುವ ಇನ್ನೊಬ್ಬನನ್ನು ಶೂದ್ರನೆಂದು, ಅಸ್ಪೃಶ್ಯನೆಂದೂ ಕರೆದು ನಾಯಿ ಬೆಕ್ಕುಗಳಿಗಿಂತಲೂ ಕೀಳಾಗಿ ಕಾಣುತ್ತಾರೆ. ಇದನ್ನೆಲ್ಲ ಕಂಡು ನನ್ನ ಮನಸ್ಸು ನೊಂದು ಬಿಟ್ಟಿದೆ. ಈ ವಿಷಮತೆಯನ್ನು ತೊಡೆದು 'ದೇವರು ಒಬ್ಬ ಮನುಷ್ಯರೆಲ್ಲ ಅವನ ಮಕ್ಕಳು. ಅವನು ಸಮದೃಷ್ಟಿಯ ದಯಾಮಯಿ' ಎಂದು ಸಾರಿ, ಧರ್ಮದ ಗುರಿ ವಿಶ್ವಕುಟುಂಬತ್ವ ಎಂಬುದನ್ನು ಸಾಧಿಸಿ ತೋರಿಸಬೇಕೆಂಬುದೇ ನನ್ನ ಕನಸು. ಅಧ್ಯಾತ್ಮವಾದದ ತಳಹದಿಯ ಮೇಲೆ ಕಟ್ಟ ಬಯಸುವ ಆ ಸಮತಾವಾದಿ ಕಲ್ಯಾಣ ರಾಜ್ಯದ ಕನಸು ನನಸಾಗಲು ಗುರುಗಳು
ಅಶೀರ್ವದಿಸಬೇಕೆಂದು ಬೇಡುತ್ತೇನೆ.”

ಬಸವಣ್ಣನ ವಿಚಾರಧಾರೆ ಗುರುಗಳಿಗೆ ಆಶ್ಚರ್ಯ- ಆನಂದವನ್ನು ಉಂಟುಮಾಡಿದವು. ಈವರೆಗಿನ ಅವನ ವರ್ತನೆ, ಆಚಾರ-ವಿಚಾರಗಳಲ್ಲಿ ಅವನ ಮನಸ್ಸಿನ ಓಘ ವ್ಯಕ್ಯವಾಗುತ್ತಿದ್ದರೂ ಸಮಗ್ರವಾಗಿ ವ್ಯಕ್ತಗೊಂಡುದು ಇಂದೆ ! ಅವನು ಸಾಮಾನ್ಯನಲ್ಲವೆಂದು ಎಂದೋ ಮನಗಂಡಿದ್ದರಾದರೂ ಇಂದು ಆ ಭಾವವು ದೃಢವಾಯಿತು. “ಭಲೆ ಭಲೆ ; ಕ್ರಾಂತಿಯ ಕಿರಣ ನೀನು ಬಸವರಸ !" ಎಂದು ಉದ್ಗರಿಸಿದರು.

ಗ್ರಂಥ ಋಣ:
೧) ಪೂಜ್ಯ ಮಾತಾಜಿ ಬರೆದ "ವಿಶ್ವಧರ್ಮ ಪ್ರವಚನ" ಪುಸ್ತಕ (ಪ್ರ: ೧೯೮೭) ದಿಂದ ಅಯ್ದ ಭಾಗ. ಪ್ರಕಟಣೆ: ವಿಶ್ವ ಕಲ್ಯಾಣ ಮಿಷನ್, ಬಸವ ಮಂಟಪ, ಕಾರ್ಡ್ ರೋಡ್, ಎರಡನೆಯ ಬ್ಲಾಕು, ರಾಜಾಜಿನಗರ, ಬೆಂಗಳೂರು - ೫೬೦ ೦೧೦.

ಪರಿವಿಡಿ (index)
Previous ಬಸವರಸನ ಪೂಜಾ ವೈಭವ ಬಸವರಸ ವಿವಾಹದ ಪ್ರಸ್ತಾಪ ಮತ್ತು ಕನಸು Next