ಬಸವರಸ ಸಂಗನ ಬಸವನಾದುದು | ಕೂಡಲ ಸಂಗಮದಿಂದ ಬಸವಣ್ಣನವರ ನಿರ್ಗಮನ |
ಇಷ್ಟಲಿಂಗದ ಆವಿಷ್ಕಾರ |
✍ ಪೂಜ್ಯ ಶ್ರೀ ಮಹಾಜಗದ್ಗುರು ಡಾ|| ಮಾತೆ ಮಹಾದೇವಿ
*ಈವರೆಗೆ ಪ್ರಸ್ತಾಪಿಸಿದ ವಿಷಯವು ಸಂಗಮನಾಥನು ಸಗುಣರೂಪದಲ್ಲಿ ಗೋಚರವಾಗಿ ಬಸವಣ್ಣನವರಿಗೆ ಮುಂದಿನ ಜೀವನದ ಬಗ್ಗೆ ಆದೇಶ ನೀಡಿದ್ದಕ್ಕೆ ಸಂಬಂಧ ಪಟ್ಟಿದ್ದರೆ ಈಗ ನಾನು ಪ್ರಸ್ತಾಪಿಸುವ ವಿಷಯ ಇಷ್ಟಲಿಂಗದ ರಚನೆಗೆ ಸಂಬಂಧಪಟ್ಟಿದ್ದು. ಇಷ್ಟಲಿಂಗವು ಬಸವಣ್ಣನವರ ಚಿಂತನೆಯ ಪ್ರತಿಫಲ ; ಸ್ವಯಂಸ್ಪುರಣದ ಕೊಡುಗೆ, 'ಲಿಂಗ ಎನ್ನುವ ಪದವು ಭಾಷೆ ಹುಟ್ಟಿದಾಗಿನಿಂದ ಇರುವ ಪದವಾದರೆ, ಸ್ಥಾವರ ಲಿಂಗ, ಶಿವಲಿಂಗಗಳ ಆರಾಧನೆ ಯೋಗಿ ಶಿವನ ಕಾಲದಿಂದ, ವೇದಪೂರ್ವದಿಂದಲೂ ಬಂದುದು. ಆದರೆ ಪರಾತ್ಪರ ಪರವಸ್ತುವಿನ ಪ್ರತೀಕವಾಗಿ ರೂಪುಗೊಂಡ ಗೋಳಾಕಾರದ ಇಷ್ಟಲಿಂಗವು ಬಸವಣ್ಣನವರ ಸಂಶೋಧನೆಯ ಪ್ರತಿಫಲವಾಗಿ ರೂಪುಗೊಂಡುದು. ಹರಿಹರನು ಪ್ರಸ್ತಾಪಿಸುವ ಅಂದಿನ ದಿನದಂದು ಬಸವಣ್ಣನವರು ಕಂಥೆಯನ್ನು ಮಾಡುತ್ತ ಕೂಡ್ರಲಿಲ್ಲ. ಈ ಹಿಂದೆಯೇ ಅನಂತ ದಿವಸಗಳ ಪ್ರತಿಫಲವಾಗಿ ರೂಪುಗೊಂಡು ಸಿದ್ಧವಾಗಿತ್ತು. ಅಂದು ಅದರೊಳಕ್ಕೆ ದೇವನ ಕರುಣೆಯನ್ನು ಬಸವಣ್ಣನವರು ಅವತೀರ್ಣಗೊಳಿಸಿಕೊಂಡರು.
ಗುಡಿಯೊಳಗಣ ಸ್ಥಾವರ ಲಿಂಗ (ಅಥವಾ ಮತ್ತಾವುದೇ ಮೂರ್ತಿಗಳು) ಭಕ್ತರ ಭಾವುಕತೆಯ ತೃಪ್ತಿಗೆ ಅನುಕೂಲವೇ ವಿನಾ ಯೋಗಸಾಧನೆಗಲ್ಲ. ಅವೆಲ್ಲವಕ್ಕೂ ತಾತ್ವಿಕ ಹಿನ್ನೆಲೆಯಿರಲಿಲ್ಲ. ಅವುಗಳು ಪುರೋಹಿತಶಾಹಿಯ ಮಧ್ಯಸ್ಥಿಕೆಯನ್ನು ಪ್ರೇರೇಪಿಸಿ ದೇವಭಕ್ತರ ಮಧ್ಯೆ ಅಂತರವನ್ನು ನಿರ್ಮಿಸುತ್ತಿದ್ದವು. ಆ ಉಪಾಸ್ಯ ವಸ್ತುಗಳು ಪೂಜಿಸುವ ಎಲ್ಲರ ಜಾತಿವರ್ಣವರ್ಗಗಳ ಭೇದವನ್ನು ಅಳುಕಿಸಿ ಸಮಾನತೆ ತರುತ್ತಿರಲಿಲ್ಲ. ಒಂದು- ಗೂಡಿಸುತ್ತಿರಲಿಲ್ಲ. ಹೀಗೆ ಸಾಮಾಜಿಕ ಸಮಾನತೆ ತರಬಲ್ಲ, ತಾತ್ವಿಕ ಹಿನ್ನೆಲೆಯುಳ್ಳ, ವ್ಯಕ್ತಿಯ ಯೌಗಿಕ ಸಾಧನೆಗೆ ಅನುವಾಗುವ, ಪೂಜಾರಿಗಳೆಂಬ ಅತ್ತೆಯರ ಕಾಟವಿಲ್ಲದೆ ದೇವಪತಿ-ಭಕ್ತಸತಿಯರ ನಡುವೆ ಸಾಮರಸ್ಯ ಏರ್ಪಡಿಸಬಲ್ಲ ಒಂದು ಕುರುಹು. ಸಾಕಾರದ ಆವಶ್ಯಕತೆ ಮನಗಂಡ ಬಸವಣ್ಣನವರಿಗೆ ಒಂದಾನೊಂದು ದಿನ ಅದ್ಭುತ ಕಲ್ಪನೆ ಸ್ಪುರಣಗೊಂಡಿತು. ಅದುವೇ ವಿಶ್ವದಾಕಾರದಲ್ಲಿ ದೇವನನ್ನು ಆರಾಧಿಸುವ, ಆ ಕುರುಹು ಹೊಳಪುಳ್ಳ ಹೊರಾವರಣದಿಂದ ತ್ರಾಟಕಯೋಗಕ್ಕೆ ಅನುಕೂಲವಾಗುವಂತಹುದು. ತಮ್ಮ ಕಲ್ಪನೆಗೆ ತಕ್ಕಂತೆ ಇಷ್ಟಲಿಂಗವನ್ನು ಸಿದ್ಧಪಡಿಸಿದಾಗ ಆರ್ಕಿಮಿಡೀಸನು ಯುರೇಖಾ, ಯುರೇಖಾ ಎಂದು ಸಂಭ್ರಾಂತನಾಗಿ ಕೂಗಿದಷ್ಟೇ ಆನಂದವಾಗಿರಬೇಕು. ಅದಕ್ಕೆ ಇನ್ನು ನಾನು ಬದುಕಿದೆನು......'' ಎಂದು ಬಸವಣ್ಣನು ಹರ್ಷದಿಂದ ಉದ್ಗಾರ ತೆಗೆಯುತ್ತಾರೆ . ಈ ಘಟನೆಯನ್ನು ಅತ್ಯಂತ ಜೀವಂತವಾಗಿ ಚಿತ್ರಿಸುವ ವಚನ :
ಜಗದಗಲ ಮುಗಿಲಗಲ ಮಿಗೆಯಗಲ ನಿಮ್ಮಗಲ
ಪಾತಾಳದಿಂದತ್ತತ್ತ ನಿಮ್ಮ ಶ್ರೀಚರಣ
ಬ್ರಹ್ಮಾಂಡದಿಂದತ್ತತ್ತ ನಿಮ್ಮ ಶ್ರೀಮಕುಟ
ಅಪ್ರಮಾಣ ಅಗಮ್ಯ ಅಗೋಚರ ಅಪ್ರತಿಮ ಲಿಂಗವೇ,
ಕೂಡಲಸಂಗಮದೇವಯ್ಯ ನೀವೆನ್ನ ಕರಸ್ಥಲಕ್ಕೆ ಬಂದು ಚುಳುಕಾದಿರಯ್ಯ,
ಇಲ್ಲಿ ನೀವು ನನ್ನ ಕರಸ್ಥಲಕ್ಕೆ ಚುಳುಕಾಗಿ ಬಂದಿರಿ. ಎಂಬ ನೇರ ಸಂಬಂಧದ ನಿರೂಪಣೆ ಬಹಳ ಗಮನಾರ್ಹ. ಇಷ್ಟಲಿಂಗವು ರಚನೆಯಾದ ದಿನ ಹೇಳಲ್ಪಟ್ಟ ವಚನವಿದು. ಹೀಗೆ ಸಿದ್ಧಪಡಿಸಿಟ್ಟುಕೊಂಡಿದ್ದ ಇಷ್ಟಲಿಂಗವನ್ನು ಚಿತ್ಕಳಾಭರಿತವಾಗಿ ಮಾಡಿಕೊಳ್ಳಬೇಕೆಂದು, ದೈವೀಕಾರುಣ್ಯವನ್ನು ತನ್ನಲ್ಲಿ ಅವತೀರ್ಣ ಮಾಡಿಕೊಳ್ಳಬೇಕೆಂದು, ಸಂಕಲ್ಪಿಸಿಯೇ ಬಸವಣ್ಣನವರು ಈಗ ಬಂದು ಕುಳಿತುಕೊಂಡಿರುವುದು.
ಈ ರೀತಿ ನಾನು ಬರೆದರೆ ಇದು ಕೇವಲ ಕಾಲ್ಪನಿಕವಲ್ಲ. ಇದಕ್ಕೆ ಹರಿಹರನ ವರ್ಣನೆಯಲ್ಲಿಯೇ ಸಾಕಷ್ಟು ಸುಳಿವು ... ಸಿಕ್ಕುತ್ತದೆ. ಯಾವುದೇ ವ್ಯಕ್ತಿಯಿಂದ ದೀಕ್ಷಾನುಗ್ರಹವಾಗದೆ ಬಸವಣ್ಣನವರಿಗೆ ನೇರವಾಗಿ ಪರಮಾತ್ಮನಿಂದಲೇ ಆಗಿದೆ ಎಂಬುದು ಸುಸ್ಪಷ್ಟವಾಗುತ್ತದೆ.
ಒಂದು ವೇಳೆ ವ್ಯಕ್ತಿ ಗುರುವಿನಿಂದ ಆಗಿದ್ದರೆ ಬಸವಣ್ಣನವರು ಅವನ ಹೆಸರನ್ನು ಪ್ರಸ್ತಾಪಿಸದೆ ಇರುತ್ತಿದ್ದರೆ ? ಯಾವುದೋ ಅಹಂಕಾರದಿಂದ, ಸ್ವಾರ್ಥದಿಂದ ಪ್ರಸ್ತಾಪಿಸಿರಲಿಕ್ಕಿಲ್ಲ ಎಂದುಕೊಳ್ಳೋಣವೆ ? ಹಾಗಾಗದು. ಏಕೆಂದರೆ ಅಹಂಕಾರ, ಸ್ವಾರ್ಥ ತುಂಬಿರುವವರಲ್ಲಿ ದೈವೀಕೃಪೆ ಧಾರೈಸಲು ಮತ್ತು ಅವರಿಂದ ಎಂದೂ ಹೃದಯ ಪರಿವರ್ತನೆಯ ಕಾರ್ಯವಾಗದು. ಹೇಳಲು ಸ್ಪಷ್ಟ ಆವಕಾಶಗಳಿದ್ದಲ್ಲಿ ಸಹ ಬಸವಣ್ಣನು ಹೇಳಿಲ್ಲವೆಂಬುದು ಗಮನಾರ್ಹ.
೧. ಶ್ರೀ ಗುರು ಕರುಣಿಸಿ ಹಸ್ತಮಸ್ತಕ ಸಂಯೋಗದಿಂದ
ಪ್ರಾಣಲಿಂಗವನ್ನು ಕರತಳಾಮಳಕವಾಗಿ ಕರಸ್ಥರಲಕ್ಕೆ ತಂದುಕೊಟ್ಟನಾಗಿ
ಒಳಗೆನ್ನದೆ ಹೊರಗೆನ್ನದೆ, ಆ ಲಿಂಗದಲ್ಲಿ
ನಚ್ಚಿ ಮಚ್ಚಿ ಹರುಷದೊಳಲಾಡಿದೆ.
ಆ ಲಿಂಗವ ಪಡೆದು ಆನಂದಿಸುವ, ಕೂಡಲಸಂಗಮದೇವಾ
೨. ವೇದವೇದಾಂತಗಳಿಗೆ ಅಸಾಧ್ಯವಾದ ಅನುಪಮ ಲಿಂಗವ
ತಂದುಕೊಟ್ಟನಯ್ಯಾ ಸದ್ಗುರು* ಎನ್ನ ಕರಸ್ಥಲಕ್ಕೆ
ನಾದಬಿಂದು ಕಳಗೆ ಅಭೇದ್ಯವಾದ ಅಚಲಿತ ಲಿಂಗವ
ತಂದುಕೊಟ್ಟನಯ್ಯಾ ಸದ್ಗುರು* – ಎನ್ನ ಕರಸ್ಥಲಕ್ಕೆ
ವಾಙ್ಞನಕ್ಕಗೋಚರವಾದ ಅಖಂಡಿತ ಲಿಂಗವ
ತಂದುಕೊಟ್ಟನಯ್ಯಾ ಸದ್ಗುರು* ಎನ್ನ ಕರಸ್ಥಲಕ್ಕೆ
ಇನ್ನು ನಾನು ಬದುಕಿದನು, ನಾ ಬಯಸುವ ಬಯಕೆ
ಕೈ ಸಾರಿತ್ತಿಂದು ಕೂಡಲಸಂಗಮದೇವಾ.
* ಚಿಹ್ನೆ ಹಾಕಿದಲ್ಲಿ ಗುರುವಿನ ಹೆಸರನ್ನು ಹಾಕಲು ಹೇರಳ ಅವಕಾಶವಿತ್ತಲ್ಲವೇ ?
ಇಲ್ಲಿ ಸದ್ಗುರು ಎಂದು ಹೇಳಿರುವುದು ಪರಮಾತ್ಮನನ್ನು ಕುರಿತು.
೧. ಧ್ಯಾನಕ್ಕೆ ನಿಮ್ಮ ಶ್ರೀಮೂರ್ತಿಯೇ ಮುಖ್ಯವಯ್ಯಾ
ಪೂಜೆಗೆ ನಿಮ್ಮ ಶ್ರೀಪಾದವೇ ಮುಖ್ಯವಯ್ಯಾ
ಮಂತ್ರಕ್ಕೆ ನಿಮ್ಮ ನಾಮಾಮೃತವೇ ಮುಖ್ಯವಯ್ಯಾ
ಮುಕ್ತಿಗೆ ನಿಮ್ಮ ಘನಕೃಪೆಯೇ ಮುಖ್ಯವಯ್ಯಾ
ನಿಮ್ಮಿಂದಧಿಕರನಾರನೂ ಕಾಣೆನಯ್ಯಾ
ಕೂಡಲಸಂಗಮದೇವಾ, ನೀವು ಜ್ಞಾನಗುರುವಾದ ಕಾರಣ
೨. ಚಿನ್ಮಯ ಚಿತ್ಪ್ರಕಾಶ ಚಿದಾನಂದ ಲಿಂಗವೆ
ಎನ್ನ ಹೃದಯಕಮಲದಲ್ಲಿ ಬೆಳಗಿ ತೋರುವ ಪರಂಜ್ಯೋತಿ
ಎನ್ನ ಕರಸ್ಥಲಕ್ಕನುವಾದ ಧರ್ಮಿ
ಎನ್ನ ಕಂಗಳಕೊನೆಯಲ್ಲಿ ಮೂರ್ತಿಗೊಂಡಿಪ್ಪೆಯಯ್ಯಾ
ಕೂಡಲಸಂಗಮದೇವಯ್ಯಾ,
೩. ಅಯ್ಯಾ, ಎನ್ನ ಹೃದಯದಲ್ಲಿ ವ್ಯಾಪ್ತವಾಗಿಹ ಪರಮ ಚಿದ್ಬೆಳಗ
ಹಸ್ತ ಮಸ್ತಕ ಸಂಯೋಗದಿಂದೊಂದುಗೂಡಿ
ಮಹಾ ಬೆಳಗ ಮಾಡಿದಿರಲ್ಲಾ!
ಅಯ್ಯಾ, ಎನ್ನ ಮಸ್ತಕದೊಳಗೊಂದುಗೂಡಿದ ಮಹಾ ಬೆಳಗ ತಂದು
ಭಾವ ದೊಳಗಿಂಬಿಟ್ಟಿರಲ್ಲಾ !
ಅಯ್ಯಾ, ಎನ್ನ ಭಾವದೊಳಗೆ ಕೂಡಿದ ಮಹಾ ಬೆಳಗ ತಂದು
ಮನಸಿನೊಳಗಿಂಬಿಟ್ಟಿರಲ್ಲಾ !
ಅಯ್ಯಾ, ಎನ್ನ ಮನಸಿನೊಳು ಕೂಡಿದ ಮಹಾ ಬೆಳಗ ತಂದು
ಕಂಗಳೊಳಗಿಂಬಿಟ್ಟಿರಲ್ಲಾ.!
ಅಯ್ಯಾ ಎನ ಕಂಗಳೊಳು ಕೂಡಿದ ಮಹಾ ಬೆಳಗ ತಂದು
ಕರಸ್ಥಲದೊಳಗಿಂಬಿಟ್ಟಿರಲ್ಲಾ!
ಅಯ್ಯಾ, ಎನ್ನ ಕರಸ್ಥಲದಲ್ಲಿ ಥಳಥಳಿಸಿ ಬೆಳಗಿ ಹೊಳೆಯುತ್ತಿಪ್ಪ
ಅಖಂಡ ತೇಜವನೆ ಇಷ್ಟಲಿಂಗವೆಂಬ ದೃಷ್ಟವ ತೋರಿ
ನಿಶ್ಚಯವ ಶ್ರೋತ್ರದಲ್ಲಿ ಸೃಜಿಸಿದಿರಲ್ಲಾ !
ಅಯ್ಯಾ, ಎನ್ನ ಶ್ರೋತ್ರದಲ್ಲಿ ಸೃಜಿಸಿದ ಸುಮಂತ್ರದೊಳಗೆ
ನೀವು ನಿಮ್ಮ ಮಹತ್ವವ ಹುದುಗಿದಿರಲ್ಲಾ !
ಅಯ್ಯಾ, ಎನ್ನ ಆರಾಧ್ಯ ಕೂಡಲಸಂಗಮದೇವಾ,
ಎನ್ನೊಳಗೆ ನಿಮ್ಮಿರವ ಈ ಪರಿಯಲ್ಲಿ ಕಾಣಿಸುತ್ತಿರ್ದಿರಲ್ಲಾ.
ಮುಂದೊಮ್ಮೆ ಯಾರಾದರೂ ಒಂದು ಸಂದೇಹವನ್ನು ಎತ್ತಿರಬಹುದು. “ಬಸವಣ್ಣ ನಿನಗೆ ಗುರುಕಾರುಣ್ಯವೇ ಆಗಿಲ್ಲ?'' ಎಂದು. ಅದಕ್ಕೆ ಹೀಗೆ ಉತ್ತರಿಸಿದ್ದಾರೆ :
೧. “ಗುರುಕಳೆಯಿಲ್ಲದೆ ವಾದಿಪೆನೆ ಸಿಂಹ ಶರಣನೊಂದಿಗೆ ?
ಗುರುಕಳೆ ಬಸವನೆಂಬ ಗಜದಲ್ಲಿ ಸೇರಿದ ಕಾರಣ
ಕೂಡಲಸಂಗಮದೇವಯ್ಯನೆಂಬ ಸಿಂಹದೊಂದಿಗೆ ವಾದದ ಭರವು ಕೇಳಾ.”
೨. ಎನ್ನ ಗತಿಮತಿ ನೀನೆ ಕಂಡಯ್ಯಾ
ಎನ್ನ ಗುರು ಪರಮಗುರು ನೀನೆ ಕಂಡಯ್ಯಾ,
ಎನ್ನ ಅಂತರಂಗದ ಜ್ಯೋತಿ ನೀನೆ ಕಂಡಯ್ಯಾ
ಕೂಡಲಸಂಗಮದೇವಾ,
ನೀನೆ ಎನಗೆ ಗುರು, ನಾನೆ ನಿಮ್ಮ ಶಿಷ್ಯನೆಂಬುದ
ನಿಮ್ಮ ಶರಣ ಸಿದ್ದರಾಮಯ್ಯ ದೇವರು ಬಲ್ಲರು.
ಈ ಎಲ್ಲ ವಚನಗಳಿಂದ ಸ್ಪಷ್ಟವಾಗಿ ತಿಳಿಯುವುದೆಂದರೆ ಬಸವಣ್ಣನಿಗೆ ವ್ಯಕ್ತಿಗುರುವಿಲ್ಲ; ಪರಮಾತ್ಮನೇ ಜ್ಞಾನಗುರು.
ಜಾತವೇದ ಮುನಿಗಳು (ಅಥವಾ ಈಶಾನ್ಯ ಗುರುಗಳು) ಸಾತ್ವಿಕವಾದ ವ್ಯಕ್ತಿಯಿದ್ದರೂ ತಾತ್ವಿಕ ದೃಷ್ಟಿಯಿಂದ ಸ್ವತಂತ್ರ ವಿಚಾರವಾದಿಯಾದ ಬಸವಣ್ಣನವರ ಮನಸ್ಸನ್ನು ಸಂಪೂರ್ಣವಾಗಿ ಒಲಿಸಿರಲಿಕ್ಕಿಲ್ಲ. ಹಲವಾರು ಸಮಸ್ಯೆಗಳನ್ನು ಕುರಿತು ಮುಕ್ತ ಮನಸ್ಸಿನಿಂದ ಚಿಂತಿಸುವಷ್ಟು ಧೈರ್ಯಶಾಲಿಗಳೂ ಅವರಾಗಿರಲಿಕ್ಕಿಲ್ಲ. ಹೀಗಾಗಿಯೇ ಅವರ ಬಗ್ಗೆ, ಯಾವುದೇ ಸಾಧಕನಿಗೆ ಯಾವುದೇ ಮಹಾತ್ಮರ ಬಗ್ಗೆ ಗೌರವ ಇರುವಂತೆ ಬಸವಣ್ಣನವರಿಗೆ ಇದ್ದರೂ. ಶಿಷ್ಯತ್ವವನ್ನು ಸ್ವೀಕರಿಸಲು ಸಾಧ್ಯವಿಲ್ಲವಾಗಿರಬಹುದು. ಆದರೆ ಜಾತವೇದ ಮುನಿಗಳ ಗುಣಗ್ರಾಹಕತ್ವ, ದೂರದರ್ಶಿತ್ವ ಮೆಚ್ಚಬೇಕಾದುದು. ಹೊಸಪಥ ನಿರ್ಮಾಪಕನಾಗಬಲ್ಲ ಧೀಮಂತ ಈ ವ್ಯಕ್ತಿ ಎಂದು ಅರಿತಿದ್ದರು ಅವರು. “ಈತಂ ಕಾರಣಿಕನಾಗಲೇವೇಳ್ಕುಂ'' ಎಂದು ಅವರು ಆತ್ಮವಿಶ್ವಾಸದಿಂದ ಗುರುತಿಸಿದ್ದರಲ್ಲೇ ಇದನ್ನು ನಾವು ಕಾಣುತ್ತೇವೆ. “ಬಸವಣ್ಣನವರಿಗೆ ದೇವರಿಂದಲೇ ನೇರವಾದ ಅನುಗ್ರಹವಾಯಿತು.' ಎಂದರೆ ಇದು ಸಾಧ್ಯವೇ ಎಂದು ಕೆಲವರು ಹುಬ್ಬೇರಿಸಬಹುದು. ಖಂಡಿತಾ ಸಾಧ್ಯ; ಪ್ರವಾದಿಗಳ ವಿಷಯದಲ್ಲಿಯಂತೂ ಇದು ಖಂಡಿತಾ ಸಾಧ್ಯ.
ಒಂದು ಕಡೆ ಅರವಿಂದಾಶ್ರಮದ ತಾಯಿಯವರು ಹೇಳುತ್ತಾರೆ ;
"Be faithful to your Guru whoever he is. he will lead you as far as you can go. But if you are lucky enough to have the Divine as your Guru then there will be no limit to your realisation."
"ಯಾರೇ ಆಗಿರಲಿ ನಿನ್ನ ಗುರುವಿಗೆ ನೀನು ನಿಷ್ಠೆಯಿಂದಿರು. ನೀವು ಹೋಗುವಷ್ಟರ ಮಟ್ಟಿಗೆ ನಿನ್ನನ್ನು ಗುರುವು ಮುನ್ನಡೆಸಬಲ್ಲ. ಒಂದು ವೇಳೆ ದೈವೀಶಕ್ತಿಯನ್ನೇ ನಿನ್ನ ಗುರುವನ್ನಾಗಿ ಪಡೆದುಕೊಳ್ಳುವ ಭಾಗ್ಯ ನಿನ್ನದಾದರೆ ನಿನ್ನ ಸಿದ್ದಿ ಅನಂತವಾಗಿ ಪರಿಣಮಿಸುತ್ತದೆ."
ಯಾವುದೇ ಧರ್ಮದ ಆದ್ಯರನ್ನು ತೆಗೆದುಕೊಂಡರೂ ಇದು ಸತ್ಯ ಸಂಗತಿ ಎನ್ನಿಸದಿರದು. ದೇವರಿಗೆ ಹೇಗೆ ತಾಯಿ-ತಂದೆ ಇಲ್ಲವೋ, ಅಥವಾ ಒಂದು ಕಾರಣವಿಲ್ಲವೋ ಹಾಗೆ ಧರ್ಮದ ಆದ್ಯರಾದ ಪ್ರವಾದಿಗಳಿಗೆ ವ್ಯಕ್ತಿಗತ ಗುರುವಿರುವುದಿಲ್ಲ. ಒಂದು ವೇಳೆ ಇದ್ದರೂ ಅವರು ಒಂದು ಮಾರ್ಗವನ್ನು ಕಂಡು ಹಿಡಿಯುವ ಪೂರ್ವದಲ್ಲಿದ್ದ ಆಚಾರ-ವಿಚಾರಗಳಿಗೆ ಗುರುವಾಗಿ ಇರಬಹುದು. ಬುದ್ದನು ತನ್ನ ಅಂತಿಮ ದಿವ್ಯಜ್ಞಾನವನ್ನು ಪಡೆಯುವ ಮುನ್ನ ಹಲವಾರು ಪಂಥಗಳ ಗುರುಗಳ ಆಶ್ರಯಪಡೆದಿರಬಹುದು ; ದೀಕ್ಷೆ ಹೊಂದಿರಬಹುದು ; ಸಾಧನೆ ಮಾಡಿರಬಹುದು. ಅವ್ಯಾವುದರಿಂದಲೂ ತೃಪ್ತಿ ಸಿಗದೆ ಹೊಸದೊಂದನ್ನು ಕಂಡು ಹಿಡಿದಿರುವಾಗ ಆ ನೂತನ ಆವಿಷ್ಕಾರಕ್ಕೆ ಅವನೇ ಆದ್ಯನಾದುದು ಸಹಜ.
ಅದೇ ರೀತಿ ಏಸುವಿನ ಬದುಕಿನಲ್ಲಿಯೂ ಸಹ. ಅವನು ಹುಟ್ಟಿದ ಯಹೂದ್ಯ ಧರ್ಮದ ಆಚರಣೆಯಂತೆ ಅವನು ಜಾನ್ ದಿ ಬ್ಯಾಪ್ಟಿಸ್ಟ್ನಿಂದ ದೀಕ್ಷಾಸ್ನಾನ ಮಾಡಿಸಿಕೊಂಡ.
ಮಾಥ್ಯ - ೩
ಆ ಸಮಯದಲ್ಲಿ ಜೀಸಸನು ಗೆಲಿಲೀದಿಂದ ಜೋರ್ಡಾನಿಗೆ ಹೋದ ಜಾನ್, ದಿ ಬಾಪ್ಟಿಸ್ಟನಿಂದ ದೀಕ್ಷಾಸ್ನಾನ ಮಾಡಿಸಿಕೊಳ್ಳಬೇಕೆನ್ನುವುದರಲ್ಲಿ ಅವನು ಹೇಳಿದ, “ನಿನ್ನಿಂದಲೇ ನಾನು ಪಡೆಯಬೇಕು : ಹಾಗಿರುವಾಗಿ ನೀನು ನನ್ನನ್ನು ಕೇಳುವುದೆ ?' ಆಗ ಏಸುವು ಹೇಳುವನು, “ಇರಲಿ, ದೇವರು ಇಷ್ಟಪಡುವಂತೆ ಮಾಡಬೇಕಾದುದನ್ನೆಲ್ಲ ಮಾಡೋಣ.'' ಜಾನ್ ಒಪ್ಪಿ ದೀಕ್ಷೆ ನೀಡುವನು, ದೀಕ್ಷಾಸ್ನಾನದ ನಂತರ ಏಸುವು ಮೇಲೆ ಬಂದನು. ಆಗ ಸ್ವರ್ಗವೇ ಅವನಿಗೆ ತೆರೆಯಿತು. ವಿಶೇಷ ದೈವೀ ಆತ್ಮವು ಪಾರಿವಾಳದಂತೆ ಇಳಿದು ಬರುವುದನ್ನು, ಅವನ ಮೇಲೆ ಅವತರಣವಾದುದನ್ನು ಕಂಡನು, ಆಗ ಸ್ವರ್ಗದಿಂದ ಒಂದು ವಾಣಿ ನುಡಿಯಿತು, 'ಇವನು ಪ್ರೀತಿಯ ನನ್ನ ಮಗ. ಇವನನ್ನು ಕುರಿತು ನಾನು ಸಂಪ್ರೀತನಾಗಿದ್ದೇನೆ. ಇಲ್ಲಿ ಜಾನನು ನಿಮಿತ್ತ ಮಾತ್ರನು. ಕೆಲವೊಮ್ಮೆ ಮತಾಚಾರದ ಸಂಪ್ರದಾಯದಂತೆ ಹುಟ್ಟು ಬ್ರಾಹ್ಮಣರಿಗೆ ಉಪನಯನ, ಲಿಂಗವಂತರಿಗೆ ಲಿಂಗಧಾರಣ ಮುಂತಾದವು ಆಗಿದ್ದರೂ, ಅವರಿಗೆ ಸಾಧಕ ಪ್ರವೃತ್ತಿ, ತಿಳುವಳಿಕೆ, ಅಧ್ಯಾತ್ಮದ ಹಂಬಲ ಹಿರಿದಾದಾಗ ಅವರು ಬೇರೆ ಗುರುಗಳಿಂದ ಲಿಂಗ ದೀಕ್ಷಾ ಸಂಸ್ಕಾರ ಅಥವಾ ಮಂತ್ರೋಪದೇಶ ಪಡೆಯಲು ಇಷ್ಟ ಪಡುವರು. ಆಗ ತಾತ್ವಿಕ ಒಮ್ಮತ. ಆಧ್ಯಾತ್ಮಿಕ ವ್ಯಕ್ತಿತ್ವ ಇರುವ ನಂತರದ ವ್ಯಕ್ತಿಯೇ ದೀಕ್ಷಿತನಿಗೆ ಗುವಾಗುವನೇ ವಿನಾ ಯಾಂತ್ರಿಕವಾಗಿ ಕ್ರಿಯೆಯೊಂದನ್ನು ನೆರವೇರಿಸಿದ ಪುರೋಹಿತ ಅಥವಾ ಅಯ್ಯನವರಲ್ಲ, ಅದನ್ನೇ ಏಸುವಿಗೆ ದೀಕ್ಷಾಸ್ನಾನ ಮಾಡಿಸಿದ ಜಾನನ ವಿಷಯದಲ್ಲಿ ಗಮನಿಸಬಹುದು.
ಆದರೆ ಬಸವಣ್ಣನವರ ವಿಷಯದಲ್ಲಿ ಹಾಗಿಲ್ಲ. ದೇವನು ನೇರವಾಗಿ ಅನುಗ್ರಹಿಸುವನು. ''ನಾನೇ ವೃಷಭನ ಮುಖಾಂತರದಿಂದ ಬರುತ್ತೇನೆ. ಆತನೇ ನಿನಗೆ ಸದ್ಗುರು.?” ಹೀಗೆ ಹೇಳುವನು. ತಾನು ರೂಪಿಸಿದ ಇಷ್ಟಲಿಂಗವನ್ನು ಅಂಗೈಯಲ್ಲಿರಿಸಿಕೊಂಡು ಬಸವಣ್ಣನು ಸ್ನೇಹಭಾವದಿಂದ ನೋಡುವಾಗ ಅಲ್ಲಿ ಚಿತ್ಕಳೆಯ ಅವತರಣವಾಗುತ್ತದೆ. ಆ ಬೆಳಕು ಅವನನ್ನು ಮೀಯಿಸುತ್ತದೆ.
ಹರಿಹರನು ಕಲ್ಲಿನ ನಂದಿಯು ಬಾಯ್ದೆರೆದು ಕೊಡುವಂತೆ ಮಾಡಿದ್ದಾನೆ. ಮೊದಲು ಇದ್ದಿರದ ಒಂದು ವಸ್ತು ಆನಂತರ ಬಂದಿದೆ. ಅಂದಾಗ ಅದನ್ನು ಹೇಗೆ ವರ್ಣಿಸುವುದು? ಅದಕ್ಕಾಗಿ ಶಿಲಾನಂದಿಯು ಬಾಯ್ದಿಡುವಂತೆ ಪವಾಡ ಮಾಡಿದ್ದಾನೆ. ಇಷ್ಟಾದರೂ ಒಂದು ಐತಿಹಾಸಿಕ ಸತ್ಯವು ಅನಿವಾರ್ಯವಾಗಿ ಮುಚ್ಚಲ್ಪಡಲಾರದೆ ಹೊರಬಂದಿದೆ. ಅದೆಂದರೆ, ಆ ಲಿಂಗವು ಹೃತ್ಕಮಳದೊಳು ಬೆಳೆದುದು.'' ಯಾರ ಹೃತ್ಕಮಳ ?' ಎಂಬುದನ್ನು ಸಂದಿಗ್ಧ ಸ್ಥಾನದಲ್ಲಿ ಹರಿಹರ ಇಟ್ಟಿದ್ದಾನೆ. "ಹೃಮಳದೊಳು ಬೆಳೆದ ಲಿಂಗಕ್ಕೆ ಕರಕಮಳಮನಾಂತು'' ಎಂಬ ನಿರೂಪಣೆಯನ್ನು ಬಸವಣ್ಣನ ಹೃದಯದ ಕಲ್ಪನೆಯೇ ಕೃತಿಗೊಂಡು ಇಷ್ಟಲಿಂಗವಾಗಿ ರೂಪುಗೊಂಡಾಗ ಅದಕ್ಕೆ ಕರಕಮಲವನ್ನು ನೀಡಿದ' ಎಂದು ಅರ್ಥೈಸಿದರೆ ಎಷ್ಟು ಸೂಕ್ತವಾಗಿದೆ ನೋಡಿ.
ಈಗಾಗಲೇ ಉದಾಹರಿಸಿರುವ ವಚನ ೧೨೧೮ ರಲ್ಲಿ ಹಸ್ತಮಸ್ತಕ ಸುಯೋಗ, ಮಂತ್ರೋಪದೇಶ ಸಹ ದೇವರಿಂದಲೇ ಆಯಿತೆಂಬುದಾಗಿ ತಿಳಿದುಬರುತ್ತದೆ. ಏನೇ ಅದರೂ ಬಸವಣ್ಣನವರ ಜೀವನದ ಅತ್ಯಂತ ಮಹತ್ವಪೂರ್ಣ ಘಟನೆಯನ್ನು ಚಿತ್ರಿಸಿ ಹರಿಹರನು ಮಾಡಿರುವ ಉಪಕಾರ ಸಾಮಾನ್ಯವಲ್ಲ.
ಈ ಕಾರಣದಿಂದಲೇ ಬಸವಣ್ಣನವರು ಪ್ರಥಮಾಚಾರಿಯೂ, ಪೂರ್ವಾಚಾರಿಯು ಆಗುವನು.
ಚಾಮರಸನೂ ಇದನ್ನು ಸ್ಪಷ್ಟವಾಗಿ ಹೇಳಿದ್ದಾನೆ.
ಕಾಯದೊಳು ಗುರುಲಿಂಗ ಜಂಗಮ
ದಾಯತವನರಿಯ ಸುಲಭೋ
ಪಾಯದಿಂದಿರಿಟ್ಟು ಬಾಹ್ಯ ಸ್ಥಲಕೆ ಕುರುಹಾಗಿ !
ದಾಯತೋರಿ ಸಮಸ್ತ ಭಕ್ತ ನಿ
ಕಾಯವನು ಪಾವನವ ಮಾಡಿದ
ರಾಯಪೂರ್ವಾಚಾರ್ಯ ಸಂಗನ ಬಸವ ಶರಣಾರ್ಥಿ ||
ಈ ಕಾರಣದಿಂದಲೇ
ಬಸವಣ್ಣನವರ ಹೆಸರು ''ಶ್ರೀ ಗುರುಬಸವ ಲಿಂಗಾಯನಮಃ ಎಂಬ ಮಂತ್ರವೂ ಆಯಿತು. ಸಂಗನ ಕರುಣೆಯ ಕಂದ (Son of God) ರಾಗಿ, ಈವರೆಗೆ ಬಸವರಸನಾಗಿದ್ದವನು ಈಗ ಸಂಗನ ಬಸವಣ್ಣನಾದರು.
ಬಸವಣ್ಣನವರು ಗುರುವಲ್ಲ, ಜಗದ್ಗುರುವಲ್ಲ. ಏಕೆಂದರೆ ಯಾವ ಪೀಠಕ್ಕೂ ಅಧಿಕಾರಿಯಾಗಲಿಲ್ಲ.'' ಎನ್ನುವ ಕೆಲವು ಬಾಲಿಶ ಬುದ್ದಿಯವರುಂಟು, ಇವರ ಚಿಂತನದ ಮಟ್ಟ ಎಷ್ಟು ಕೆಳಗಿದೆ ಎಂದರೆ ಅದಕ್ಕೆ ಉತ್ತರ ಕೊಡುವುದು ಹಾಸ್ಯಾಸ್ಪದ ಯತ್ನವಾಗುತ್ತದೆ. ಬಸವಣ್ಣನವರ ಮಂತ್ರದಲ್ಲೇ ಗುರುಬಸವಲಿಂಗ ಎಂಬ ವಿಶೇಷಣೆಯುಂಟು, ಗುರುತ್ವ, ಜಗದ್ಗುರುತ್ವ ಕೇವಲ ಪಟ್ಟಕಟ್ಟಿದ ಮಾತ್ರಕ್ಕೆ ಬರದು. ಸಿಂಹಕ್ಕೆ ವನರಾಜನೆಂಬ ಪಟ್ಟ ಯಾರೂ ಕಟ್ಟರು. ತನ್ನ ಸ್ವಂತ ಶಕ್ತಿಯಿಂದ ಅದು ವನರಾಜ, ನರಿಗೆ ಪಟ್ಟ ಕಟ್ಟಿದ ಮಾತ್ರಕ್ಕೆ ಸಿಂಹದ ಗುಣಗಳು, ಸಾಮರ್ಥ್ಯ ನರಿಗೆ ಬರದು. - ಗಾಂಧೀಜಿ - ಪ್ರಧಾನಿಯಾಗಲಿಲ್ಲ. ರಾಷ್ಟ್ರಾಧ್ಯಕ್ಷರಾಗಲಿಲ್ಲ; ಆದರೆ ಇಂದು ಭಾರತೀಯರ ಹೃದಯದಲ್ಲಿ ಅವರಿಗಿರುವ ಸ್ಥಾನ ಈ ಯಾರಿಗೂ ಇಲ್ಲ. ಜಗತ್ತಿನ ಎಲ್ಲ ಅಹಿಂಸಾತ್ಮಕ ಸ್ವಾತಂತ್ರ್ಯ ಚಳುವಳಿಕಾರರೂ ಗಾಂಧೀಜಿಯವರನ್ನು ಆದರ್ಶವಾಗಿ ಇರಿಸಿಕೊಂಡೇ ಪ್ರೇರಣೆ ಪಡೆಯುತ್ತಾರೆ.
ಸ್ಥಾವರಲಿಂಗವು ಶಿವನ ಪ್ರತೀಕವಾಗಿ ಪೂಜಿಸಲ್ಪಡುತ್ತಿದ್ದರೆ ಇಷ್ಟಲಿಂಗದಲ್ಲಿ ಬರುವ ಪಂಚಸೂತ್ರಲಿಂಗವು ದೇಹದ ಆಕಾರದಲ್ಲಿ ಜೀವಾತ್ಮನ ಪ್ರತೀಕವಾಗಿ, ಹೊರಗಿನ ಗೋಳಾಕಾರದ ಕಪ್ಪು ಕಂತೆಯು ವಿಶ್ವದ ಆಕಾರದಲ್ಲಿ ಪರಮಾತ್ಮನ ಪ್ರತೀಕವಾಗಿ ರೂಪುಗೊಂಡವು. ಹೀಗಾಗಿ ಇಷ್ಟಲಿಂಗವು ಶಿವನ ಕುರುಹಾಗದೆ ಜಗದಗಲ ಮುಗಿಲಗಲ ಇರುವ ಪರಮಾತ್ಮನ ಕುರುಹಾಯಿತು.
ಎಲ್ಲ ಪ್ರಮಥರು ಲಿಂಗವ ಧರಿಸುತ್ತಿರಲು
ನಾನೇನು ಒಲ್ಲೆನೆಂಬುವುದು ಕರ್ಮದ ಬಲೆಯೊ, ಮಾಯದ ಬಲೆಯೊ?
ಎಲೆ ಕಪಿಲಸಿದ್ಧ ಮಲ್ಲಿನಾಥಯ್ಯಾ, ನಾ ಧರಿಸಿಕೊಂಬುವೇ ಲಿಂಗವ
ನೀ ಕರಸಿಕೊಂಬುವನಾಗು ಮತ್ತೋರ್ವನ ನಿನ್ನ ಪೂಜೆಗೆ
ನಾ ನಿನ್ನವನಲ್ಲಲೆ ದೇವಾ.
ಗ್ರಂಥ ಋಣ:
೧) ಪೂಜ್ಯ ಮಾತಾಜಿ ಬರೆದ "ವಿಶ್ವಧರ್ಮ ಪ್ರವಚನ" ಪುಸ್ತಕ (ಪ್ರ: ೧೯೮೭) ದಿಂದ ಅಯ್ದ ಭಾಗ. ಪ್ರಕಟಣೆ: ವಿಶ್ವ ಕಲ್ಯಾಣ ಮಿಷನ್, ಬಸವ ಮಂಟಪ, ಕಾರ್ಡ್ ರೋಡ್, ಎರಡನೆಯ ಬ್ಲಾಕು, ರಾಜಾಜಿನಗರ, ಬೆಂಗಳೂರು - ೫೬೦ ೦೧೦.
ಬಸವರಸ ಸಂಗನ ಬಸವನಾದುದು | ಕೂಡಲ ಸಂಗಮದಿಂದ ಬಸವಣ್ಣನವರ ನಿರ್ಗಮನ |