Previous ಬಸವಣ್ಣನವರೇ ಗುರು ಬಸವಣ್ಣನವರ ಸ್ವರವಚನ ಸಾಹಿತ್ಯ Next

ಬಸವ ಸ್ತೋತ್ರ ತ್ರಿವಿಧಿ

*

ಸಿದ್ಧರಾಮೇಶ್ವರರು ರಚಿಸಿರುವ ಬಸವ ಸ್ತೋತ್ರ ತ್ರಿವಿಧಿ

ಬಸವೇಶನೆ ಬಸವರಾಜನೆ |
ಬಸವಣ್ಣನೆ, ಬಸವ ತಂದೆ, ಬಸವ ಕೃಪಾನಿಧಿ ||
ಬಸವ ಪರಮೇಶ್ವರೀಶ್ವರ |
ಬಸವ ಪ್ರಮಥಾದಿ ದೇವ ರಕ್ಷಿಸು ಬಸವ ||


ಬಸವನ ಯೋಗದಿಂ ಹಸನಾಯಿತೈ ಲೋಕ ಚಂದದಿ
ಬಸವ ಗತಿಯೆನಲು ಭವವು ಹಿಂಗುವುದು
ಬಸವಯ್ಯ ಬಸವಣ್ಣ ಶರಣಾರ್ಥಿ ಎಂದೆನುತ
ಬಸವ ಬದುಕಿದೆನಯ್ಯ ಯೋಗಿನಾಥ.

೧. ಪ್ರಥಮಂತು ಬಸವಣ್ಣ ದ್ವಿತೀಯಂತು ಲಿಂಗವು
ತೃತೀಯಂತು ತಮ್ಮ ಬ್ರಹ್ಮಾಂಡವೆಲ್ಲ
ಅಕಳಂಕ ಗುಣನಿಧಿ ಚಿದಾನಂದ ಬಸವಂಗೆ
ಬಕುತನಾದೆನು ಗುರುವೆ ಯೋಗಿನಾಥಾ

೨. ವಸುಧೆಯಿಲ್ಲದ ಮುನ್ನ ದೆಸೆಯೆಂಟ ನಿರ್ಮಿಸಿದೆ
ಶಶಿ ರವಿಗಳೆಂಬವರ ನಾಮವಿಲ್ಲ
ವಸವಲ್ಲದಾನತದ ದೆಸೆಗೆಟ್ಟ ಲಿಂಗವನು
ಹೆಸರಿಟ್ಟ ಗುರುಬಸವ ಯೋಗಿನಾಥಾ

೩. ವಸುಧೆ ಹುಟ್ಟದ ಮುನ್ನ ಬಸವಣ್ಣ ಹುಟ್ಟಿದನು
ಶಶಿಧರನು ಶಿವಮೂರ್ತಿ ವರದನಯ್ಯಾ
ಅಸಮಾಕ್ಷನವತಾರ ಮೂರುತಿಯ ತಾಳಿದ
ಬಸವಣ್ಣ ಬಸವಯ್ಯ ಯೋಗಿನಾಥಾ

೪. ತ್ರಿಭುವನ ತ್ರೈಲೋಕ ತ್ರೈಜಗವು ತ್ರೈತತ್ತ್ವ
ತ್ರೈರೂಪು ತ್ರೈಭಾವ ತ್ರೈಶಕ್ತಿಯ
ತ್ರೈಗೃಹವ ತೈಲಿಂಗ ಮಾಡಿ ನಿಂದನು ಎನ್ನ
ತ್ರೈಮೂರ್ತಿ ಬಸವನೈ ಯೋಗಿನಾಥಾ

೫. ಆದಿಯಾಧಾರದಲಿ ಆದಿಪಂಚಮ ಸೀಮೆ
ಗ್ರಾಮವೆಂಟನು ನೋಡಿ ಹತ್ತನೋಡಿ
ಸೀಮೆ ಸಾಯುಜ್ಯದಲ್ಲಿ ಸಂಗಮವು ಆದಡೆ
ನಾ ಬಸವ ಪುತ್ರನೈ ಯೋಗಿನಾಥಾ

೬. ಬಸವನೇ ಜಗದಾದಿ ತತ್ತ್ವಕ್ಕತೀತನು
ಬಸವನೇ ಪರಬ್ರಹ್ಮ ಸ್ವರೂಪನು
ಬಸವನನಾದಿ ಲಿಂಗ ಬಸವನನಾದಿ ಚರ
ಬಸವನಿಂದಧಿಕವುಂಟೆ ಯೋಗಿನಾಥಾ

೭. ಬಸವನೇ ಸತ್ಯಾಂಗ ಬಸವನೇ ನಿತ್ಯಾಂಗ
ಬಸವನೇ ಪರಮಚಿತ್ಸ್ವರೂಪನು
ಬಸವನನಾದಿ ಲಿಂಗ ಬಸವನನಾದಿ ಚರ
ಬಸವನಿಂದಧಿಕವುಂಟೆ ಯೋಗಿನಾಥಾ.

೮. ಬಸವನನಾದಿ ಗುರುಬಸವನನಾದಿ ಲಿಂಗ
ಬಸವನನಾದಿ ಚರ ಪರತತ್ತ್ವವು
ಬಸವನನಾದಿ ಗುರುಚರ ತ್ರಿವಿಧ ರೂಪಾದ
ಬಸವಣ್ಣ ಶರಣಾಗು ಯೋಗಿನಾಥಾ.

೯. ಆದಿಗುರು ಬಸವಣ್ಣನನಾದಿಗುರು ಬಸವಣ್ಣ
ಭೇದಕ್ಕಭೇದ್ಯನು ಬಸವಣ್ಣನು
ಇಂತಪ್ಪ ಬಸವನನಂತ ಶ್ರೀಪಾದಕ್ಕೆ
ಇಂತೊಂದಿಸಿ ಸುಖಿಯಪ್ಪೆ ಯೋಗಿನಾಥಾ

೧೦. ಆದಿಗುರು ಬಸವಣ್ಣನನಾದಿಗುರು ಬಸವಣ್ಣ
ಭೇದಕ್ಕಭೇದ್ಯನು ಬಸವಣ್ಣನು
ನಾದ ಬಿಂದು ಕಳಾತೀತ ಬಸವಯ್ಯನು ಎ-
ನ್ನಾರಾದ್ಯಗುರು ಬಸವ ಯೋಗಿನಾಥಾ.

೧೧. ಬಸವಣ್ಣ ಬಸವಣ್ಣ ಬಸವಯ್ಯ ಬಸವಪ್ಪ ಬಸವರಸ
ಬಸವಲಿಂಗನೇ ಎನ್ನ ಬಸವತಂದೆ
ಬಸವ ಚರಪರ ತತ್ವಾದಿ ಮೂಲಿಗ ಲಿಂಗ
ಬಸವಪ್ಪ ಶರಣೆಂಬೆ ಯೋಗಿನಾಥಾ


೧೨. ಲಿಂಗ ನೀನೆ ಎನ್ನ ಜಂಗಮ ನೀನೆ ಎನ್ನ
ಸಂಗ ಸಮಯೋಪಕರ ನೀನೆ ಅಯ್ಯಾ
ಅಂಗ ಚರ ಪರಮಗುರು ನೀನೆ ನೀನೆ ಬಸವ
ಲಿಂಗ ನೀ ಸಲಹಯ್ಯ ಯೋಗಿನಾಥಾ.

೧೩. ಕಾಯ ಗುಣದಪಹಾರಿ ಕಲ್ಮಷಮನ ಸಂಹಾರಿ
ದಾಯದೋರಿಯೆ ಭಕ್ತಿದಾಯಕ ನೀನು
ಕಾಯಗುಣಗಳ ಕಳದು ರಾಯ ಶಿವಪದವೀಯೋ
ದೇವ ಶ್ರೀಗುರುಬಸವ ಯೋಗಿನಾಥಾ.

೧೪. ಇಂದು ಶಿವಶರಣರ ಹೊಂದಿ ಹಾರೈಸಿದೆ
ತಂದೆ ನಿಮ್ಮಯ ಕರುಣಪ್ರಸಾದವ
ಇಂದು ನಿಮ್ಮಯ ಕರುಣದಿಂದಿತ್ತು ಸಲಹಯ್ಯ
ತಂದೆ ನೀ ಬಸವಯ್ಯ ಯೋಗಿನಾಥಾ

೧೫. ಎರಡೆಂಟನರಿಯದ ಮರುಳು ಮಾನವನಿಗೆ
ಕರಿಮಸ್ತಕದ ಮುತ್ತನಿತ್ತು ಕರಕೆ
ಪರಮ ಪ್ರಸಾದವನು ಪಾಲಿಸಿ ರಕ್ಷಿಸೈ
ಪರಮ ಶ್ರೀಗುರುಬಸವ ಯೋಗಿನಾಥಾ.

೧೬. ಕಾಯಯ್ಯ ಬಸವಯ್ಯ ಈಯಯ್ಯ ಬಸವಯ್ಯ
ಜೀವ ತಾಪತ್ರಯದ ಭವದುಃಖಿಯ
ಆಯಾಸವಿಲ್ಲದೆ ಸಲೆ ಸುಖವನಿತೆನ
ಕಾಯಯ್ಯ ಗುರುಬಸವ ಯೋಗಿನಾಥಾ.

೧೭. ತೊತ್ತಿನಾ ಮಗನೆ ನೀನಿತ್ತ ಬಾರೆಂದೆನ್ನ
ನೆತ್ತಿ ಸಲಹಿದ ಗುರುವೆ ಬಸವ ಪ್ರಭುವೆ.
ನಿತ್ಯಲಿಂಗಾರ್ಚಕರ ನೃತ್ಯನಾಗಿರಲೆಂದು
ಮತ್ತೆ ಸಲಹಿದೆ ಗುರುವೆ ಯೋಗಿನಾಥಾ.

೧೮. ಅರಿವಿನಾ ದೋಷಗಳ ತೊಡೆದು ಭಕ್ತಿಯನಿತ್ತು
ನೆರೆ ಘಟ್ಟಿಗೊಂಡಿರ್ದ ಮುಕ್ತಿ ಪದವ
ಕರಿಗೊಳಿಸಿ ಮನ್ಮನದಜ್ಞಾನವ ಛೇದಿಸಿದ
ಗುರುಬಸವ ಶರಣಯ್ಯ ಯೋಗಿನಾಥಾ.

೧೯. ಸತ್ಯವೆಂಬ ಸಮತೆಯ ನೆಲೆಗೊಂಡ ಶಿಶುವಿಂಗೆ
ಅಂಗತತ್ ಪೃಥ್ವಿಯನ್ನು ತೊಟ್ಟಲಿಟ್ಟು
ಮಿಥ್ಯವಳಿದರುವೆಯ ಹಾಸಿ ಮಲಗಿಸಿದನು
ಭಕ್ತ ಬಸವಣ್ಣನೈ ಯೋಗಿನಾಥಾ.

೨೦. ನಿತ್ಯರೂಪನು ಬಸವ ಸತ್ಯರೂಪನು ಬಸವ
ಭಕ್ತಿರೂಪನು ಬಸವ ಬಸವಲಿಂಗ
ವ್ಯರ್ಥವನ್ನೀತನುವ ನಿತ್ಯವೆಂದೆನಿಸಿದಾ
ಕರ್ತೃ ಶ್ರೀಗುರುಬಸವ ಯೋಗಿನಾಥಾ.

೨೧. ಜನನ ರಹಿತನು ಬಸವ ಮರಣ ರಹಿತನು ಬಸವ
ರುಜೆ ಕರ್ಮ ರಹಿತನು ಬಸವಲಿಂಗ
ಯಜನಾದಿ ಭವಗಳನು ಛೇದಿಸಿದನೆನ್ನಯ
ನಿಜಗುರು ಬಸವನೈ ಯೋಗಿನಾಥಾ.

೨೨. ಹಸುಳೆಯಾಗಿಯು ನಾನು ಕೆರೆ ಬಾವಿ ದೇವಾಲ್ಯ
ವಿರಚಿಸಿ ಭವಕೆ ಬಂದು ಫಲವನುಂಡು
ನರಕಕ್ಕೆ ಬೀಳುವನ ಕರುಣದಿಂದೆತ್ತಿ ನಿನ್ನ
ಹೊರೆಯೊಳಿರಿಸಿದ ಬಸವನ್ಯ ಯೋಗಿನಾಥಾ.

೨೩. ಶ್ರೀಗುರುವೆ ಬಸವಣ್ಣ ಅರೂಪು ನೀನಾಗಿ
ಕಾರುಣ್ಯದಿಂದ ಸಲಹಿದಿರಿ ಎನ್ನ
ಧಾರುಣಿಯ ಫಲಕಾನು ಓರಂತೆ ಬಾರದ
ಲಾ ಪರಿಯ ಮಾಡಿದಿರಿ ಯೋಗಿನಾಥಾ.

೨೪. ಹೊಳೆಯ ದಾಂಟಿಸಲೆಂದು ಹರಿಗೋಲ ಹಾಕಿದಡೆ
ಹೊಳೆಬತ್ತಿ ಹರಿಗೋಲು ಉಳಿಯಿತಲ್ಲಾ
ಹೊಳೆಯ ದಾಂಟಿಪರನ್ನು ಕಳೆದು ಕಂಗೊಳಿಸಿದನು
ಇಳೆಯೊಡೆಯ ಬಸವನೆ ಯೋಗಿನಾಥಾ.

೨೫. ಮನ್ನಣೆಯ ತನ್ನಗುಣ ಉನ್ನತದ ಅರಿವನು
ಚನ್ನಾಗಿ ಒರೆದೊರೆದು ನೋಡಿ ತಿಳಿದು
ಇನ್ನು ಸದ್ಭಕ್ತರಿಗೆ ಭವವಿಲ್ಲವೆಂಬುದನು
ಎನ್ನ ಬಸವಣ್ಣನಿಂದರಿದೆ ಯೋಗಿನಾಥಾ.

೨೬. ಆ ಬಸವನಾನಂದ ಆ ಬಸವನತ್ಯಂತ
ಆ ಬಸವನೇ ಎನ್ನ ಪರಮಬಂಧು

ಆ ಬಸವ ಕೃಪೆಯಿಂದ ಆದಿಯಕ್ಷರವರಿದು
ಭೇದಿಸಿದೆ ನಿಮ್ಮುವನು ಯೋಗಿನಾಥ.

೨೭. ಮುನ್ನಲಾದಿಯಲಾದ ಸನ್ನುತದ ಧ್ಯಾನವನ್ನು
ಚನ್ನಾಗಿ ತಿಳಿಸಿ ಅಕ್ಷರಾನಂದದ
ಸನ್ನುತದ ಧ್ಯಾನ ಮೌನಾದಿ ಸಮ್ಯಜ್ಞಾನ
ಎನ್ನನರಿಪಿದ ಬಸವ ಯೋಗಿನಾಥಾ.

೨೮. ಮನಕರಣ ಧ್ಯಾನಕ್ಕೆ ತನು ಧ್ಯಾನಮೂರ್ತಿಗೆ
ಉನುಮನಿಯ ಉಲುಹಿನ ಭಾವಕಯ್ಯಾ
ಅನುವಿನಾಯತಕೆಲ್ಲ ಬಸವ ಮೂಲಿಗನಾಗೆ
ಬಸವಣ್ಣ ಶರಣಯ್ಯ ಯೋಗಿನಾಥಾ.

೨೯. ಸಕಲಕ್ಕೆ ಗುರುಬಸವ ನಿಃಕಲಕೆ ಗುರುಬಸವ
ಸಕಲ ನಿಷ್ಕಲ ಕೂಡಿದಾನಂದದ
ಪದದಿ ನಿತ್ಯನೆನಿಸಿ 'ಪದವ ಮೀರಿದಾತ
ಸದಮಲ ಗುರುಬಸವ ಯೋಗಿನಾಥಾ.

೩೦. ಬಸವ ಕಾರಣ ಸತ್ಯ ಬಸವ ಕಾರಣ ನಿತ್ಯ
ಬಸವ ಕಾರಣ ನಿಮ್ಮ ಭಕ್ತಿಯಯ್ಯಾ
ಬಸವನೇ ತನುಮನಕೆ ಒಡೆಯನಾದಾ ಮೇಲೆ
ಬಸವಪ್ಪ ಶರಣೆಂಬೆ ಯೋಗಿನಾಥಾ


೩೧. ಲಿಂಗ ಜಂಗಮ ಬಸವ ಸಂಗ ತಾ ಬಸವಣ್ಣ
ಅಂಗಕಳೆ ಗುಣಭಾವ ಬಸವಣ್ಣನು
ಲಿಂಗ ಕಾರಣ ಬಸವನಾದ ಮೇಲು ಮತ್ತೆ
ಲಿಂಗ ನೀ ನಾನಾದೆ ಯೋಗಿನಾಥಾ.

೩೨. ಲಿಂಗ ರೂಪನು ಬಸವ ಜಂಗಮ ರೂಪನು ಬಸವ
ಸಂಗನ ಗುರುಮೂರ್ತಿ ಶ್ರೀಬಸವಲಿಂಗ
ಲಿಂಗಜಂಗಮವನ್ನು ಒಂದುಮಾಡಿಯೆ ತೋರ್ದ
ಸಂಗನ ಬಸವಣ್ಣನೈ ಯೋಗಿನಾಥಾ.

೩೩. ಲಿಂಗ ರೂಪನು ಬಸವ ಜಂಗಮ ರೂಪನು ಬಸವ
ಸಂಗ ನಿಜಗುರುಮೂರ್ತಿ ಬಸವಲಿಂಗ
ಅಂಗಲಿಂಗದ ಬೆಳಗನೊಂದು ಮಾಡಿಯೆ ತೋರ್ದ
ಸಂಗನಬಸವಣ್ಣನೆ ಯೋಗಿನಾಥಾ.

೩೪. ಇಂತು ಗುರುಶಿಷ್ಯ ಸಂಬಂಧವನು ರಚಿಸಿಗ
ನಿಶ್ಚಿಂತನಾದೆನೈ ಬಸವತಂದೆ
ಅಂತಕಾಂತಕನೆಂಬ ಅನೋನ್ಯಕಾನೀಗ
ಪಂಚಬ್ರಹ್ಮನುವಾದ ಯೋಗಿನಾಥಾ.

೩೫. ಇಂದೆನ್ನ ಮನದೊಡೆಯ ಬಂದ ತಾ ಕರಸ್ಥಲಕೆ
ಹಿಂದು ಮುಂದಿಲ್ಲದ ಪದವನಿತ್ತ
ಗಂಧ ವಾಸನೆ ಚೆಂದ ಒಂದಾದ ಬಸವನ
ಬಂಧುವಾದೆನು ಗುರುವೆ ಯೋಗಿನಾಥಾ.

೩೬. ಅಗಲದಾನಂತರದ ಮಿಗೆಮಿಗೆ ಬ್ರಹ್ಮವನು
ತೆಗೆತೆಗೆದು ತೋರಿದನು ಕರತಳದಲ್ಲಿ
ಅಗಣಿತ ಜಲದೊಳಗೆ ಅಳಿದುಳಿದಗಾಧನು
ಸುಗುಣಿ ಶ್ರೀಗುರುಬಸವನೆ ಯೋಗಿನಾಥಾ.

೩೭. ತತ್ವ ತುರ್ಯಾರ್ಥದಿಂದತ್ತತ್ತಲಾದುದನು
ಅತ್ಯಂತ ಕರತಲದೊಳಗೆ ನಿಲಿಸಿ
ಸತ್ಯಶರಣರ ನಿಜ ಪರಬ್ರಹ್ಮದಲಿ ನಿಂದ
ಭಕ್ತಬಸವಣ್ಣ, ಯೋಗಿನಾಥಾ.

೩೮. ಪಂಚಭೂತದಿ ಬಸವ ಮಂತ್ರಸ್ವರೂಪನು
ಚಿಂತಿಪರ ಮನದಲ್ಲಿ ಭರಿತ ಬಸವ
ಅಂತಿಂತು ಎನ್ನದನಂತ ಕರಣಂಗಳೊಳು
ತಿಂಥಿಣಿಯು ಬಸವನ್ನೇ ಯೋಗಿನಾಥಾ

೩೯. ಆ ಬಸವನತ್ಯಂತ ಆ ಬಸವನಾನಂದ
ಆ ಬಸವ ಸಕಲಕ್ಕೆ ಆದಿಸಿದ್ದ
ಆ ಬಸವ ಪಾದವನು ಮಸ್ತಕದಿ ಹೊತ್ತಿರಲು
ಆನು ನೀನಾದೆನೈ ಯೋಗಿನಾಥಾ.

೪೦. ಈ ದಿಟ ಬಸವನ ಕಂಡು ವಂದಿಸುವುದೈ
ಪದುಳದಲ್ಲಿ ಶಿವಮಾರ್ಗ ನಂಬಿಯಹುದು
ಸದಮಲ ಬಸವನ ಪಾದವೇ ಗತಿಯೆನಲು
ಒದಗುವುದು ಶಿವಭಕ್ತಿ ಯೋಗಿನಾಥಾ

೪೧. ಭಸಿತವನು ಭಾಳದಲಿ ಒಗೆದು ರುದ್ರಾಕ್ಷಿಯನು
ಅಸಮಾಕ್ಷ ಗತಿಯೆಂದು ಕಂಠದಲ್ಲಿ
ಬಸವನೇ ಗತಿಯೆಂದು ಶ್ರೀಭಸಿತವ ಧರಿಸಿ
ಹಸನಾದೆನೈ ಗುರುವೆ ಯೋಗಿನಾಥಾ

೪೨. ಬಸವಪ್ಪ ಶರಣಯ್ಯ ಬಸವೇಶ ಶರಣಯ್ಯ
ಬಸವರಸ ಬಸವದಂಡೇಶ ಶರಣು
ಬಸವಣ್ಣ ಬಸವಯ್ಯ ಬಸವ ಗತಿಮತಿಯೆನಗೆ
ಬಸವಗುರು ಶರಣಯ್ಯ ಯೋಗಿನಾಥಾ.

೪೩. ಬಸವ ಬಸವಾ ಬಸವ ಬಸವೇಶ ಬಸವರಸ
ಬಸವಯ್ಯ ನಿಮ್ಮಡಿಗೆ ಶರಣು ಶರಣು
ಬಸವ ಬಸವಲಿಂಗ ಬಸವಪ್ಪ ಬಸವೇಶ
ಬಸವಯ್ಯ ಶರಣೆಂಬೆ ಯೋಗಿನಾಥಾ.


೪೪. ಶರಣಾಗು ಬಸವಯ್ಯ ಶರಣಾಗು ಬಸವೇಶ
ಶರಣಾಗು ಬಸವದಂಡೇಶ ನೀನು
ಶರಣ ಸಂದೋಹಕ್ಕೆ ಕರುಣಾಕರನು ಬಸವ
ಶರಣಾಗು ಗುರುಬಸವ ಯೋಗಿನಾಥಾ.

೪೫. ಬಸವಪ್ಪ ಬಸವಯ್ಯ ಬಸವಣ್ಣ ಬಸವರಸ
ಬಸವದಂಡೇಶನೇ ಶರಣು ಶರಣು
ಬಸವಪ್ಪ ಎನ್ನಯ್ಯ ಗುರುಮೂರ್ತಿ ಬಸವಯ್ಯ
ಶರಣು ಶರಣಾರ್ಥಿಯ್ಯ ಯೋಗಿನಾಥಾ.

೪೬. ಶರಣು ಶರಣೋ ಬಸವ ಶರಣು ಬಸವಲಿಂಗಾ
ಶರಣಯ್ಯ ಬಸವಯ್ಯ ಬಸವಪ್ರಭುವೆ
ಶರಣು ಶರಣೆಂದೆಂಬ ಸ್ಮರಣೆ ಮಾತ್ರದಿ ನಾನು
ಹರಣವಳಿದೆನು ಗುರುವೆ ಯೋಗಿನಾಥಾ.

೪೭. ಬಸವ ಎಂದೊಮ್ಮೆ ಮನಒಸೆದು ನೆನೆದಡೆ
ಬಸವ ಅಸುವಿಂಗೆ ಅಸುವಾಗಿ ತೋರ್ಪನೈಸೇ
ಬಸವನಾಮವ ಬಿಡದೆ ರಸನೆಯೊಳಾವಾಗ
ಬಸವ ಬಸವಾ ಎಂಬೆ ಯೋಗಿನಾಥಾ

೪೮. ಬಸವ ಬಸವಾ ಬಸವ ಬಸವ ಎಂದೆನುತಿರ್ದೆ
ಬಸವಲಿಂಗವೆ ಭಕ್ತಿಮೂಲವಾಗಿ
ಬಸವಣ್ಣ ಬಸವಯ್ಯ ಬಸವ ಎಂದೆನಲೆನ್ನ ಭಕ್ತಿ
ಹಸನಾಯಿತೋ ಗುರುವೆ ಯೋಗಿನಾಥಾ.

೪೯. ಬಸವ ಭಕ್ತಿಯ ಬೀಜ ಬಸವ ಮುಕ್ತಿಯ ಬೀಜ
ಬಸವಪ್ಪ ನಿಮ್ಮಡಿಗೆ ಶರಣು ಶರಣು
ಬಸವ ಗುರುಪದಧ್ಯಾನ ಬಸವ ಶಿವಪದಧ್ಯಾನ
ಬಸವಧಾನ್ಯವೆ ಧ್ಯಾನ ಯೋಗಿನಾಥಾ.

೫೦. ಆ ಬಸವನಾನಂದ ಆ ಬಸವನತ್ಯಂತ
ಆ ಬಸವ ಸಕಲ ಸಕಲಾದಿ ಸಿದ್ಧ
ಆ ಬಸವನಾಪಾದ ಮಸ್ತಕವ ನೆನೆಯಲೈ
ಆನು ನೀನಾದೆನೈ ಯೋಗಿನಾಥಾ.

೫೧. ಸಕಲ ನಿಷ್ಕಲಕೆಲ್ಲ ಬಸವನಾಮಾಕ್ಷರದ
ದೆಸೆ ತಾನು ತ್ರೈಲಿಂಗ ಮೂಲವಾಗಿ
ಬಸವನಮಿಷಗಂದು ಗುರುವಾದ ಸಂಬಂಧ
ದೆಸೆ ಎನಗೆ ಆಯಿತೈ ಯೋಗಿನಾಥಾ.

೫೨. ಸೀಮೆಗ್ರಾಮಂಗಳನು ಮೀರಿಪ್ಪುದದು ಸೀಮೆ
ತೋರಿಪ್ಪುದದು ಭಕ್ತಿತಾತ್ಪರ್ಯವ
ಆರಾರರಿಂ ಮೇಲೆ ತೋರಿಪ್ಪುದೆ ಬಸವ
ನಾಮಾಕ್ಷರತ್ರಯವು ಯೋಗಿನಾಥಾ.

೫೩. ಬಸವಾಕ್ಷರತ್ರಯದಲ್ಲಿ ಮನವಿಟ್ಟು ನಾನೀಗ
ಬಸವಳಿದು ಆಕ್ಷಣದಿ ನಿತ್ಯನಾದೆ
ಬಸವ ನಿಜಯೋಗದಲಿ, ನಿತ್ಯಪದವನು ಕಂಡು
ಬಸವ ನೀ ನಾನಾದೆ ಯೋಗಿನಾಥಾ

೫೪. ತಾಹಿ ಜಗದಾರಾಧ್ಯ ತಾಹಿಪರಮೈಶ್ವರ್ಯ
ತ್ರಾಹಿ ಲಿಂಗಾಂಗ ಸಮರಸದ ಯೋಗಿ
ತ್ರಾಹಿಮಾಂ ಗುರುಬಸವ ಎಂದೆನಲು ಈ ಭಕ್ತಿ
ತಾನು ತಾನಾದುದೈ ಯೋಗಿನಾಥಾ.

೫೫. ತಪ್ಪದೇ ಒಪ್ಪಿಪ್ಪ ಅಕ್ಷರತ್ರಯದಲ್ಲಿ
ತತ್ವತುರ್ಯಕೆ ತಾನು ಮೂಲಿಗನಾದ
ಮತ್ತೆ ನೇಮಾಕ್ಷರವ ಹತ್ತೆಸಾರಿದ ಸೀಮೆ
ಭಕ್ತಿಕಾರಣ ಬಸವ ಯೋಗಿನಾಥಾ.

೫೬. ಆರು ವ್ರತವೂ ತನಗೆ ನಿಹಿತವಾಗಿಯೇ ತೋರಿ
ಮೀರಿಪ್ಪುದೈ ತತ್ವ ತನುಗುಣಗಳ
ಭಕ್ತಿಯೆಂಬಾ ತನುವು ತಥ್ಯವಾದಲ್ಲೀಗ
ಮತ್ತೆ ನಿಹಿತನು ಬಸವ ಯೋಗಿನಾಥಾ.

೫೭. ಆಧಾರ ಕಳೆಮೊಳೆಯ ಮೇದಿನಿಗೆ ನೆಲೆಗೊಳಿಸಿ
ಬೋಧಕ ಶಿಕ್ಷವನೊಂದು ಮಾಡಿ
ಆಧಾರದಿಂದತ್ತ ಮೇದಿನಿಯ ಕಂಡನು ಅ
ನಾದಿ ಬ್ರಹ್ಮನು ಬಸವ ಯೋಗಿನಾಥಾ.

೫೮. ಭಕ್ತಿಯನ್ನರಿವುದಕೆ ಯುಕ್ತಿಮೂಲಸ್ತಂಭ
ಯುಕ್ತಿ ಶಿವಭಕ್ತಿಯನರಿವುದಕ್ಕೆ
ಯುಕ್ತಿ ಭಕ್ತಿಗಳುಭಯ ತಾನು ತನ್ನಲಿ ಶಿವ
ಭಕ್ತಾತ್ಮಕ ಬಸವನ್ನೇ ಯೋಗಿನಾಥಾ.

೫೯. ಜಂಗಮವೆ ಲಿಂಗವೆಂದರಿಯದ ಪಾಪಿಯ
ಅಂಗಳನ ನಾ ಮೆಟ್ಟಲೊಲ್ಲೆ ಗುರುವೆ
ಸಂಗನಬಸವನ ಶ್ರೀಪಾದಕಮಲದೊಳು
ಶೃಂಗನಾಗಿರಿಸಯ್ಯ ಯೋಗಿನಾಥಾ

೬೦. ಮಂಗಳಮಯರೂಪ ಸಂಗನಬಸವಣ್ಣ
ಲಿಂಗ ನಿಜಸ್ವಿಯಭರಿತ ಬಸವಣ್ಣನು
ಜಂಗಮಪ್ರಾಣವೆ ಪ್ರಾಣವಾಗಿರುತಿರ್ಪ
ಸಂಗನ ಬಸವಣ್ಣನೈ ಯೋಗಿನಾಥಾ.

೬೧. ಮಂಗಳಮಯರೂಪ ಸಂಗನಬಸವಣ್ಣ
ಲಿಂಗನಿಜಭರಿತನು ಬಸವಣ್ಣನು
ಜಂಗಮಲಿಂಗವೆ ಪ್ರಾಣ ಬಸವಣ್ಣನು
ಸಂಗದವಿರಳ ಬಸವ ಯೋಗಿನಾಥಾ.

೬೨. ಮಂಗಳಮಯಬಸವ ಲಿಂಗೇಂದ್ರಿಯ ಬಸವಣ್ಣ
ಸಂಗ ಸಮರಸಭಾವಿ ಬಸವಲಿಂಗ
ಜಂಗಮ ಗುರುಪರವೆ ಪ್ರಾಣವಾಗಿರುತಿರ್ಪ
ಸಂಗನ ಬಸವಣ್ಣನೈ ಯೋಗಿನಾಥಾ.

೬೩. ಅಂಗಲಿಂಗೋದ್ಭವದಿ ಸಂಗಸಮರಸ ಬಸವ
ಮಂಗಳಾತ್ಮಕನು ಶ್ರೀ ಬಸವಲಿಂಗ
ಲಿಂಗಜಂಗಮಕ್ಕೆಲ್ಲ ಪ್ರಾಣವಾಗಿರತಿರ್ಪ
ಸಂಗನ ಬಸವಣ್ಣನೈ ಯೋಗಿನಾಥಾ.

೬೪. ಮಾತು ತಾ ಬಸವಣ್ಣ ನೀತಿ ತಾ ಬಸವಣ್ಣ
ಆತುಮದ ಶಿವರೂಪು ಬಸವಣ್ಣನು
ಓತು ಒಡಲು ಗುರುವಿನಾತುಮ ಬಸವಣ್ಣ
ನೀತಿವಂತನು ಬಸವ ಯೋಗಿನಾಥಾ.

೬೫. ಮುಟ್ಟಿ ಮೂರ್ತಿತ್ರಯದ ಮುಟ್ಟದಿಹ ಭೇದವನು
ದೃಷ್ಟವಾಗಿಯೆ ಕಂಡರಾರು ಹೇಳು
ಸೃಷ್ಟಿಗೀಶ್ವರ ರೂಪ ಬಸವಣ್ಣ ಕಂಡೀಗ
ಪಟ್ಟಕ್ಕರುಹನಾದ ಯೋಗಿನಾಥಾ.

೬೬. ಒಳಗೆ ಲಿಂಗದ ಕೂಟ ಹೊರಗೆ ಜಂಗಮ ಮಾಟ
ಒಳಹೊರಗೆ ಭಿನ್ನವಿಲ್ಲದೆ ನಿಂದನು
ಅಳಿವ ಮಾಯಾತನುವ ಕಳದು ನಿರ್ವಯಲಾದ
ನಿಳಯಪತಿ ಬಸವನ್ನೇ ಯೋಗಿನಾಥಾ.

೬೭. ಲಿಂಗರೂಪನು ಬಸವ ಜಂಗಮೈಕ್ಯನು ಬಸವ
ಸಂಗರೂಪನು ಬಸವ ನಿಃಕಲದಲೀ
ಅಂಗ ಮನ ಪ್ರಾಣ ಭಾವೈಕ್ಯ ಬಸವಣ್ಣನಾ
ಲೆಂಕಿಯಾದೆನು ಗುರುವೆ ಯೋಗಿನಾಥಾ.

೬೮. ಗುರುರೂಪ ಬಸವಣ್ಣ ಹರರೂಪ ಬಸವಣ್ಣ
ಪರಕೆ ಪರತತ್ವನಾ ಬಸವಲಿಂಗ
ವರ ವೀರಭದ್ರಾವತಾರ ಬಸವಣ್ಣನ
ಕರುಣದಾ ಕಂದಕ್ಕೆ ಯೋಗಿನಾಥಾ.

೬೯. ಗುರುವಿಂಗೆ ಗುರುಬಸವ ಚರಕೆ ಚರ ಬಸವಣ್ಣ
ಪರಕೆ ಪರತತ್ವ ತಾ ಬಸವಲಿಂಗ
ವರಗುರು ಲಿಂಗ ಜಂಗಮಕೆಲ್ಲ ಅಧಿಕನು
ಗುರುಬಸವ ಶರಣಯ್ಯ ಯೋಗಿನಾಥಾ.

೭೦. ಗುರುವೆ ಸಂಗನಬಸವ ಚರವೆ ಸಂಗನಬಸವ
ಪರಮ ಚಿದ್ಘನಲಿಂಗ ಬಸವಣ್ಣನು
ಪರಕೆ ಪರತತ್ತ್ವನ ಬಸವಣ್ಣನ ಪಾದಕ್ಕೆ
ಶರಣೆಂದು ಬದುಕಿದೆನು ಯೋಗಿನಾಥಾ.

೭೧. ನಿತ್ಯ ನಿರ್ಮಲ ಬಸವ ಸತ್ಯ ಶುದ್ದನು ಬಸವ
ನಿತ್ಯ ನಿಶ್ಚಿಂತನು ಬಸವಣ್ಣನು
ಅತ್ಯಧಿಕವೆಂದೆನಿಪ ಸಂಗನಬಸವಣ್ಣನ
ತತ್ವಪದದೊಳಗಿರಿಸು ಯೋಗಿನಾಥಾ.

೭೨. ಮುಕ್ತಿಮೂರುತಿಯವರು ಮೂರ್ತಿಮುಕ್ತಿಯವರು
ಯುಕ್ತರೈಸೆ ಲಿಂಗನಿಷ್ಠರೆಲ್ಲ
ಭಕ್ತ ಬಸವಣ್ಣನಲಿ ಮುಕ್ತಿಯಡಗಿದ ಮೇಲೆ
ಮುಕ್ತಿಯೋಗಿಗಳೇಕೆ ಯೋಗಿನಾಥಾ.


೭೩. ಕರ್ಮಯೋಗದವರ ಕಡಿದು ಖಂಡಿಸಿದನು
ನಿರ್ಮಳ ನಿರ್ವಂಚಕನು ಬಸವಲಿಂಗ
ನಿರ್ಮಳ ರೂಪನು ಬಸವಲಿಂಗಕ್ಕೆ ಅಂಜಿ
ಎನ್ನ ಕಾಡಿತು ಗುರುವೆ ಯೋಗಿನಾಥಾ.

೭೪. ಏಕಮೇವೋ ದೇವ ಭಕ್ತ ಶಿವ ಮಹೇಶಾ
ಏಕಪ್ರಸಾದಗುಣ ನಿತ್ಯಸತ್ಯ
ಬೇಕು ಬೇಡೆಂದೆಂಬ ಅಜ್ಞಾನ ಯೋಗಿಗಳ
ನೀಕರಿಸಿದ ಗುರುಬಸವ ಯೋಗಿನಾಥಾ.

೭೫. ಬಸವನೇ ಜಯಜಯತು ಬಸವೇಶ ಜಯಜಯತು
ಬಸವಗುರುಮೂರ್ತಿಯೇ ಜಯತು ಜಯತು
ವಸುಧೀಶ ಬಿಜ್ಜಳಗೆ ನಿಚ್ಚಪವಾಡವನು
ತೋರಿದಾ ಗುರುಬಸವ ಯೋಗಿನಾಥಾ.

೭೬. ಬಂಡಿಗಾಲಿಯ ಕಟ್ಟಿ ಮಂಡಲವನಾಳಿದನು
ಚಂಡಕೀರ್ತಿಯುದ್ಧಂಡಮಾರ್ತಾಂಡನು
ಗಂಡುಗಲಿ ಬಸವನಾ ಕಂಡು ಎನ್ನಯ ಭವವ
ತುಂಡಿಸಿದೆನೈ ಗುರುವೆ ಯೋಗಿನಾಥಾ.

೭೭. ಕಂತುಹರ ಬಸವ ಕಾಲಾಂತಕನೆ ಬಸವಯ್ಯ
ಚಿಂತಾಯಕನೆ ಬಸವ ಬಸವಗುರುವೆ
ಇಂತಾದ ಬಸವನನಂತ ಶ್ರೀಪಾದಕ್ಕೆ
ಮುಂತೆ ವಂದಿಸಿ ಸುಖಿಯಪ್ಪೆ ಯೋಗಿನಾಥಾ.


೭೮. ಭಿತ್ತಿಚಿತ್ರಗಳಳಿದ ಮೃತ್ಯುರಹಿತನು ಬಸವ
ತತ್ವಾರ್ಥರೂಪಕ್ಕೆ ಬಸವ ಬಸವಾ
ತತ್ವಮಸ್ಯರ್ಥದಿಂದತ್ತಾದ ಬಸವಂಗೆ
ಅರ್ತಿಯಿಂ ಶರಣೆಂಬೆ ಯೋಗಿನಾಥಾ.

೭೯. ಎಲ್ಲೆಲ್ಲಿ ಬಸವಣ್ಣ ಸಲ್ಲಲಿತ ಬಸವಣ್ಣ
ಸೊಲ್ಲಿಗಭೇದ್ಯನು ಬಸವಣ್ಣನು
ನಿಲ್ಲದೇ ಎನ್ನುವನ್ನು ಸಲಹಯ್ಯ ಬಸವಯ್ಯ
ಸಲ್ಲಲಿತ ಪದವೀಯೊ ಯೋಗಿನಾಥಾ.

೮೦. ಆದಿರೂಪನು ಬಸವನನಾದಿ ರೂಪನು ಬಸವ
ನಾದ ಕಳೆ ಬಿಂದುವಿಗತೀತ ಬಸವ
ವೇದ ಶಾಸ್ತ್ರಾಗಮಕತೀತ ಬಸವಣ್ಣನು
ಚೋದ್ಯರೂಪನು ಬಸವ ಯೋಗಿನಾಥಾ.

೮೧. ಆದಿಗಾದಿಯು ಬಸವನನಾದಿಗಾದಿಯು ಬಸವ
ನಾದ ಕಳೆ ಬಿಂದುವಿಗತೀತ ಬಸವ
ವೇದವೇದಾಂತಕತೀತರೂಪನು ಬಸವನ
ಭೇದ್ಯರೂಪನು ಬಸವ ಯೋಗಿನಾಥಾ.

೮೨. ಆದಿಯಾಧಾರವನು ಭೇದಿಸಿದ ಬಸವಣ್ಣ
ವೇದಕ್ಕತೀತನು ಪರಕೆ ಪರನು
ಆದಿ ಪರತತ್ವದೊಲು ಭೇದಿಸಿ ಬೆರಸಿಪ್ಪ-
ನಾದಿಗುರು ಬಸವಣ್ಣ ಯೋಗಿನಾಥಾ.

೮೩. ಬಸವನಾ ಧ್ಯಾನದಿಂ ಬಸವನಾ ಕರುಣದಿಂ
ಬಸವನಾ ಪರಮ ಪ್ರಸಾದದಿಂದ
ಬಸವನ ಕೃಪೆಯಿಂದ ಆದಿಯಕ್ಷರವರಿದು ಭೇ
ದಿಸಿದೆನೈ ನಿಮ್ಮವನು ಯೋಗಿನಾಥಾ.

೮೪. ಭಕ್ತಿರೂಪನು ಬಸವ ನಿತ್ಯರೂಪನು ಬಸವ
ಮತ್ತೆ ಪ್ರಸಾದಿಕನು ಬಸವಣ್ಣನು
ನಿತ್ಯಾಕ್ಷರದ ರೂಪ ಬಸವಣ್ಣನಿಂದ ನಿ-
ಮತ್ತ ಸಾರಿದೆ ಗುರುವೆ ಯೋಗಿನಾಥಾ.

೮೫. ಒಂದು ಗ್ರಾಮದ ಒಳಗೆ ಸಂದ ನೂರು ಹೋಲ
ಚೆಂದ ಚೆಂದದಾ ನೇಗಿಲ ಕೆತ್ತಿ
ಅಂದು ಉತ್ತುಬಿತ್ತಿ ಚಂದದಲಿ ಫಲವುಂಡ
ತಂದೆ ಬಸವಣ್ಣನೈ ಯೋಗಿನಾಥಾ.

೮೬. ಒಲೆಯೊಳಗಣ ಕೂಳು ತಲೆಯೊಳಗೆ ನಿಲಲಾಗಿ
ಒಲೆಕೂಳನೇಕವ ಮಾಡಿದನು
ತಲೆ ಕೂಳಸಂಭ್ರಮಕೆ ನಲಿನಲಿದು ನಿಂದನು .
ಚೆಲುವ ಗುರುಬಸವಣ್ಣ ಯೋಗಿನಾಥಾ.

೮೭. ಕಲುಗಿರಿಯ ಮಠದಲ್ಲಿ ಕಂಗೊಳಿಸಿ ಕಳಸವನ್ನು
ನೆಲೆಯ ಬ್ರಹ್ಮಾಂಡವನು ಅನುವಮಾಡಿ
ಸುಲಲಿತ ಪ್ರಸಾದರೂಪ ಎನ್ನಯ ಭಾವ
ತಲೆರೂಪು ಬಸವಣ್ಣ ಯೋಗಿನಾಥಾ.

೮೮. ನೀಲಕಂಧರದಲ್ಲಿ ಭಾಳಲೋಚನನಿಪ್ಪ
ಪ್ರಾಣಲಿಂಗಕ್ಕೆ ತಾ ಸಂಬಂಧವೈ
ಆರೂಢದತಿಶಯದ ಪ್ರಸಾದ ತತ್ವವನು
ತೋರಿದ ಗುರುಬಸವ ಯೋಗಿನಾಥಾ.

೮೯. ಪ್ರಸಾದವೈದಾರು ಪಾದೋದಕವೆರಡೈದು
ಆದಿಯಕ್ಷರದಲ್ಲಿ ದೀಕ್ಷೆತ್ರಯವ
ನಾದದಿಂದವೆ ತೂಗಿ ಬಿಂದು ಸಮನಿಸದೀಗ
ಆಧಾರಸ್ಥಾನಕ್ಕೆ ಅತ್ಯತಿಷ್ಠ
ಮೂಲ ಸ್ಥಾನದಲಿರ್ದ ಮುನ್ನೂರು ಕಮಲಕ್ಕೆ
ಆದಿಭ್ರಮರನು ಬಸವ ಯೋಗಿನಾಥಾ.

೯೦. ಎಸೆವ ಪಂಚಾಕ್ಷರಿಯ ಎಸಳೆಲ್ಲ ನಸುಗೆಂಪು
ಕುಸುಮ ಕರ್ಣಿಕೆಯೊಂದೆ ಹಳದಿವರ್ಣ
ನಸುಗೆಂಪು ಹೊಸಹಳದಿ ಎಸೆವ ಕರ್ಣಿಕೆಯಾಗಿ
ಬಸವ ನಾ ನೀನಾದೆ ಯೋಗಿನಾಥಾ.

೯೧. ಕಮಲ ಷಡ್ವಿಧದಲ್ಲಿ ಅಮಲ ಬ್ರಹ್ಮನ ನೋಟ
ಕ್ರಮವಳಿದು ಬಸವನ್ಯ ಬಸವನೈ ನಿತ್ಯ
ವಿಮಲಗುರು ಚರಪರವೆ ಪ್ರಾಣವಾಗಿರುತಿಪ್ಪ
ಪ್ರಣವ ರೂಪನು ಬಸವ ಯೋಗಿನಾಥಾ.

೯೨. ಕಳೆ ನಾದ ಬಿಂದುವಿನ ಹೊಳೆ ಹಳಿದ ಬಸವನು
ಪ್ರಳಯ ರಹಿತನು ಬಸವ ಬಸವ ನಿತ್ಯ
ವಳಯಕಮಳದೊಳು ಹೊಳೆವ ಬ್ರಹ್ಮದ ಸ್ನೇಹ
ಕಳೆಯದಾ ಬಸವಣ್ಣನ್ನೇ ಯೋಗಿನಾಥಾ.

೯೩. ಹನ್ನೆರಡು ಮನೆಯೊಳಗೆ ಹದಿನಾರನಿರಸಿದನು
ಉನ್ನತದ ಸರದಿಯನು ದಾಂಟಿನಿಂದ
ಇನ್ನು ನಿರ್ಮಳವಾದ ಕಳೆಮಳೆಯನೊಳಕೊಂಡ
ಚಿನ್ಮೂರ್ತಿ ಬಸವನೈ ಯೋಗಿನಾಥಾ.

೯೪. ಊರಾರ ಮಧ್ಯದಲ್ಲಿ ಕೇರಿಕೇರಿಯ ಕಂಡು
ಸಾರಿ ಬ್ರಹ್ಮದ ಒಡಲ ಹೊಕ್ಕುನಿಂದು
ಆರಯ್ದು ಆಕಾರವಡಗಿದ ಬ್ರಹ್ಮವ ಕಂಡು
ಸಾರಿದ ಗುರುಬಸವನೈ ಯೋಗಿನಾಥಾ.

೯೫. ಅಂಗದೊಳಗಾವಾಗ ಲಿಂಗ ನಿರವಯರೂಪು
ಮಂಗಳಮಯಮೂರ್ತಿ ಶ್ರೀಬಸವಲಿಂಗ
ಜಂಗಮ ಪ್ರಾಣವೆ ಪ್ರಾಣವಾಗಿರುತಿರ್ಪ
ಸಂಗನಬಸವಣ್ಣನೈ ಯೋಗಿನಾಥಾ.

೯೬. ಅಂಗದೊಳಾಯತಲಿಂಗ ನಿರವಯರೂಪು
ಮಂಗಳಾತ್ಮಕಮೂರ್ತಿ ಬಸವಲಿಂಗ
ಅಂಗಸಂಗದ ಭಾವ ಭ್ರಮೆಯಳಿದ ಶಿವಯೋಗಿ
ಲಿಂಗ ಬಸವಣ್ಣನೈ ಯೋಗಿನಾಥಾ.

೯೭. ಮಂಗಳಮಯ ತನುವೂ ಕಂಗೋಳಿಸೆ ನಿಜದಲ್ಲಿ
ಲಿಂಗ ನಿಜಪದಭರಿತನಾದ ಭಾವ
ಮಂಗಳದ ಮನೆಮಠವ ಹೊಂದಿ ಬಾಗಿಲ ತೆಗೆಸಿದ
ತಂದೆ ಬಸವಣ್ಣನೈ ಯೋಗಿನಾಥಾ.

೯೮. ಆಧಾರಮಂ ಬಲಿದು ಮೇಲೆ ಊರ್ಧ್ವಕೆ ನಡೆದು
ಮೇದಿನಿಯ ಕಳೆಮೊಳೆಯನೊಂದು ಮಾಡಿ
ಸಾಧಿಸಿ ಅಜರಂಧ್ರದ ಬಾಗಿಲ ತೆಗೆಸಿದ ಆ
ನಾದಿಮೂರುತಿ ಬಸವ ಯೋಗಿನಾಥಾ.

೯೯. ಸಾಗರ ಬ್ರಹ್ಮವನು ಸಾಧಿಸಿ ಬ್ರಹ್ಮದಲ್ಲಿ
ನೀಗಿ ನಿಃಪತಿಯಾದ ಮಳೆಯ ಮಠದಿ
ಆಗದಾ ಅರಸನನ್ನು ಕಳಿದು ಕಂಗೊಳಿಸಿದನು
ಯೋಗಿ ಗುರುಬಸವನೈ ಯೋಗಿನಾಥಾ.

೧೦೦. ಲೋಕ ಲೋಕವನೆಲ್ಲಲೋಕಿಸದೆ ನಿಂದಲ್ಲಿ
ಬೇಕು ಮಾಡಿದನೆನ್ನ ಬಸವಲಿಂಗ
ಮುಕುಟಮಂಡಲದಲ್ಲಿ ಮನೆಗಟ್ಟಿ ನಿಂದನು
ಅಕಳಂಕ ಬಸವನೈ ಯೋಗಿನಾಥಾ.

೧೦೧. ಅಂಗವಿಡಿದಾ ಲಿಂಗ ಲಿಂಗವಿಡಿದಾ ಅಂಗ
ಅಂಗಲಿಂಗದ ಭೇದವಿನಿತು ಕಾಲ
ಅಂಗಗುಣ ಮನ ಲಿಂಗತಲ್ಲೀಯವಾ ಬಸವ
ಲಿಂಗವೆಂದರಿದೆನೈ ಯೋಗಿನಾಥಾ.

೧೦೨. ಅಂಗಲಿಂಗದಿ ಭರಿತ ಲಿಂಗವಂಗದಿ ಭರಿತ
ಸಂಗನಾಮೂರ್ತಿ ಶ್ರೀಬಸವಲಿಂಗ
ಅಂಗದಿನಿಜತತ್ವಸಂಗ ಷಟ್‌ಸ್ಥಲಭರಿತ
ಸಂಗನಬಸವಣ್ಣನೈ ಯೋಗಿನಾಥಾ.

೧೦೩ ಅಂಗವೆಲ್ಲವು ಲಿಂಗ ಲಿಂಗವೆಲ್ಲವು ಅಂಗ
ಮಂಗಳಾತ್ಮಕ ಗುರುವೆ ಬಸವತಂದೆ
ಅಂಗ ಷಟ್‌ಸ್ಥಲದಲ್ಲಿ ಲಿಂಗ ಷಟ್‌ ಸ್ಥಲಭರಿತ
ಸಂಗನಬಸವಣ್ಣನೈ ಯೋಗಿನಾಥಾ.

೧೦೪. ನಡೆಯು ನೀನೇ ಬಸವ ನುಡಿಯು ನೀನೇ ಬಸವ
ನಡೆನುಡಿಗೆ ಕರ್ತನು ನೀನೆ ಬಸವಾ
ಎಡೆಬಿಡುವಿಲ್ಲದೆ ಸರ್ವಾಂಗದೊಳು ಭರಿತ
ಮೃಡಮೂರ್ತಿ ಬಸವನೆ ಯೋಗಿನಾಥಾ.

೧೦೫. ಬಿಂದುರೂಪನು ಬಸವ ನಾದರೂಪನು ಬಸವ
ನಂದರೂಪನು ಬಸವ ಬಸವಲಿಂಗ
ಸಂದುಬೇರಿಲ್ಲದೆ ಸರ್ವಾಂಗದೊಳು ಭರಿತ
ತಂದೆ ಬಸವಣ್ಣನೈ ಯೋಗಿನಾಥಾ.

೧೦೬. ಒಂದು ಭಾವಜ್ಞಾನ ಸಂದಿತ್ತು ಬಸವನಲಿ
ನಿಂದಿರ್ದು ನೋಡುವಡೆ ಇಂಬುಗೊಡದು
ಸಂದ ಮೂವತ್ತಾರು ಹೊಲನಿಂದು ನಿಮ್ಮೊಳಗೆ
ಲಿಂಗ ನಿಮ್ಮಯ ರೂಪು ಯೋಗಿನಾಥಾ.

೧೦೭. ಕಾಯ ಗುಣದವತಾರ ಜೀವ ಗುಣದಲಿ ನಿಂದು
ಕಾಯಭಾವಜ್ಞಾನ ಬಸವನಲ್ಲಿ
ಕಾಯ ತುರ್ಯದ ಮಾಟ ಜೀವತುರ್ಯಕೆ ಸಂದು
ಜೀವ ನಿಮ್ಮಲಿಯಡಕ ಯೋಗಿನಾಥಾ.

೧೦೮. ಆರೂಢದಲ್ಲಿ ಆರು ಐಕ್ಯವನ್ನು ಐದಿಹರು
ಬಸವಾಕ್ಷರತ್ರಯದಲ್ಲಿ ಭವಿಸಿದ
ವರ ಶಿಶುವು ಶಶಿಯನೆ ನುಂಗಿ ಶಶಿಯೊಳಗೆ ಬ್ರಹ್ಮಾಂಡ
ಪಸರಿಸಿರ್ಪುದ ಕಂಡೆ ಯೋಗಿನಾಥಾ.

೧೦೯. ಅಂಡಜದ ಪರಿಭವವು ಪಿಂಡಜದಲೊಪ್ಪುತಿರೆ
ಪಿಂಡ ಬ್ರಹ್ಮಾಂಡವನೇಕ ಮಾಡಿ
ಖಂಡೇಂದು ಶೇಖರಗೆ ನೆಲೆಯ ಮಾಡಿದನೆನ್ನ
ಗಂಡ ಬಸವಣ್ಣನೈ ಯೋಗಿನಾಥಾ,

೧೧೦. ನಲ್ಲನಾಲಿಂಗವನು ಸಲ್ಲಲಿತದಿಂ ಕಂಡ
ನಿರ್ಲೆಪ ನಿಜಯೋಗಿ ಬಸವಯ್ಯನು
ಅಲ್ಲಿಂದಲತ್ತತ್ತ ವಲ್ಲಭೆಯನೊಳಕೊಂಡ
ಸಲ್ಲಲಿತ ಬಸವನೆ ಯೋಗಿನಾಥಾ.

೧೧೧. ಆಸೆ ರಹಿತನು ಬಸವ ಪಾಶ ರಹಿತನು ಬಸವ
ದೋಷದುರ್ಗುಣರಹಿತ ಬಸವ ಗುರುವೆ
ಈಶಪಾದ ಧ್ಯಾನ ಮೀಸಲು ಮನಮಂತ್ರ
ದಾಸಕ್ತ ಬಸವನೆ ಯೋಗಿನಾಥಾ,

೧೧೨. ಮರಣ ರಹಿತನು ಬಸವ ಶರಣ ಶಾಶ್ವತ ಬಸವ
ಕರುಣಾಬ್ದಿ ಬಸವನೈ ಬಸವಲಿಂಗ
ಹರಣ ಮನ ಕರಣೇಂದ್ರಿಯ ವಿಷಯರಹಿತನು ಬಸವ
ಪರತತ್ವ ಗುರುಬಸವ ಯೋಗಿನಾಥಾ.

೧೧೩. ಜನನ ನಿಮ್ಮೊಳು ಬಸವ ಮರಣ ನಿಮ್ಮೊಳು ಬಸವ
ಹರಣ ನಿಮ್ಮೊಳು ಬಸವ ನಿಃಕಲರೂಪ
ಕರಣೇಂದ್ರಿಯ ಸುಖದ ಸಹಭೋಗಿ ಬಸವಣ್ಣ
ಕರುಣವಾರುಧಿ ಬಸವ ಯೋಗಿನಾಥಾ.

೧೧೪. ಲಿಂಗಾಂಗಿ ಲಿಂಗಸಂಗಾನಂದ ಭರಿತಾಂಗಿ
ಮಂಗಳಮಯ ರೂಪ ಮನ್ಮನದಲಿ
ಲಿಂಗಸಂಗದ ಭಾವ ಮನದಲ್ಲಿ ಲೀಯವು
ಲಿಂಗ ಬಸವಣ್ಣನೈ ಯೋಗಿನಾಥಾ.

೧೧೫. ಮನೆಯೊಳಗೆ ಮನೆ ಹುಟ್ಟಿ ತನುವ ನಿರವಯ ಮಾಡಿ
ಅನುವರಿದು ಪದಭರಿತವಾದ ಶರಣ
ವಿನಯದಿಂದಲಿ ನಿಜವನರಿದು ಘನಪದವಡೆದ
ಚಿನುಮಯಾತ್ಮಕ ಬಸವ ಯೋಗಿನಾಥಾ.

೧೧೬. ಲಿಂಗ ಗುರುಬಸವಣ್ಣ ಗುರುವಿನ ಗುರುಬಸವಣ್ಣ
ಲಿಂಗಾಂಗಸಮರಸ ಒಂದುಗೂಡಿ
ಅಂಗಲಿಂಗಗಳೆರಡನೊಂದು ಮಾಡಿದನಾಗಿ
ಜಂಗಮವು ತಾನಾದನೈ ಯೋಗಿನಾಥಾ.

೧೧೭. ಲಿಂಗವು ಬಸವಣ್ಣ ಜಂಗಮವು ಬಸವಣ್ಣ
ಅಂಗಲಿಂಗೈಕ್ಯನು ಬಸವಣ್ಣನು
ಕಂಗಳಲಿ ಶಿವತತ ನೆಲೆಗೊಂಡ ಬಸವಂಗೆ
ಹಿಂಗದೇ ಶರಣೆಂಬೆ ಯೋಗಿನಾಥಾ.

೧೧೮. ಅಂಗಲಿಂಗದಿ ಭರಿತ ಲಿಂಗವಂಗದ ಭರಿತ
ಸಂಗ ಚಿನ್ಮೂರ್ತಿ ಶ್ರೀಬಸವಲಿಂಗ
ಅಂಗಲಿಂಗದೈಕೈಭಾವ ಭಿನ್ನರಹಿತ
ಲಿಂಗಷಟ್‌ಸ್ಥಲಬ್ರಹ್ಮ ಯೋಗಿನಾಥಾ

೧೧೯. ಲಿಂಗಾಂಗ ಬಸವಣ್ಣ ಸಂಗಸಮರಸ ಬಸವ
ಲಿಂಗಕ್ಕೆ ಲಿಂಗತಾ ಬಸವಣ್ಣನು
ಅಂಗದೊಳು ನಿಜತತ್ವ ಸಂಗಸಮರಸ ಬಸವ
ಅನಂಗ ಚಿದಂಗನೈ ಯೋಗಿನಾಥಾ.

೧೨೦. ಲಿಂಗ ನಿಜೈಕ್ಯದ ಸಂಗಸಮರಸದಲ್ಲಿ
ಮಂಗಳಮಯ ಮೂಲ ತತ್ವಬೀಜ
ಅಂಗಸಂಗದ ಭಾವಭ್ರಮೆಯಳಿದ ಶಿವಯೋಗಿ
ಲಿಂಗ ಬಸವಣ್ಣನೈ ಯೋಗಿನಾಥಾ.

೧೨೧. ಕಾಮ ರಹಿತನು ಬಸವ ಕ್ರೋಧ ರಹಿತನು ಬಸವ
ಮೋಹ ಮದ ಮತ್ಸರ ರಹಿತ ಬಸವ
ನಾಮ ರೂಪ ಕ್ರೀಯಳಿದ ಮಹಾಬ್ರಹ್ಮಾದಿ
ತಾ ಮನಮುಕ್ತನೈ ಯೋಗಿನಾಥಾ.

೧೨೨. ಒಂದೂರ ಮಧ್ಯದಲ್ಲಿ ಸಂದವೈನೂರು ತೊಲೆ
ಅಂದದಾ ಮಠಗಳಿಗೆ ಬೀಡುಗಟ್ಟಿ
ನಿಂದು ಮನೆಯೊಳಗೆ ನಿರ್ವಯಲಾದ ಗುರುಬಸವ
ತಂದೆ ಶರಣಾಗೆನಗೆ ಯೋಗಿನಾಥಾ.

೧೨೩. ಮೂರಾರ ಭೇದವನು ಜಾರಿ ನಿಜದಲಿ ನಿಂದು
ಬೇರತೊಟ್ಟನೆ ಕಡಿದು ಖಂಡಿಸಿದನು
ನೀರ ನಿಃಪತಿಯಾದ ನಿರ್ವಯಲ ಪದದಲ್ಲಿ
ಆರೂಢ ಬಸವನೈ ಯೋಗಿನಾಥಾ.

೧೨೪. ಮೂರು ಬೆಟ್ಟವ ದಾಂಟಿ ಮುಕ್ತಿರಾಜ್ಯವ ಕೂಡಿ
ತೋರುವ ಶಿಖಿ ಕರ್ಪೂರ ಯೋಗದಂತೆ
ಬಯಲು ಬಯಲನೆ ಬೆರಸಿ ಬಯಲಾದ ಬಸವನ
ನಿರ್ವಯಲ ಪದವೆನಗೆ ಯೋಗಿನಾಥಾ.

೧೨೫. ಇಂತು ಬಸವಸ್ತವನ ಸಂತತಂ ನೆನೆದೀಗ
ನಿಶ್ಚಿಂತನಾದೆನೈ ಸುಖತರದಲಿ
ಸಚ್ಚಿದಾನಂದ ಗುರುಬಸವಣ್ಣನಾಣತಿಯ
ವಚ್ಚ ತಾ ನಿಮಗಾನು ಯೋಗಿನಾಥಾ

*
ಪರಿವಿಡಿ (index)
Previous ಬಸವಣ್ಣನವರೇ ಗುರು ಬಸವಣ್ಣನವರ ಸ್ವರವಚನ ಸಾಹಿತ್ಯ Next
cheap jordans|wholesale air max|wholesale jordans|wholesale jewelry|wholesale jerseys