Previous ಬಸವ ಸ್ತೋತ್ರ ತ್ರಿವಿಧಿ ಬಸವಣ್ಣನವರ ಪರಿಚಯ (೧೧೩೪-೧೧೯೬) Next

ಬಸವಣ್ಣನವರ ಸ್ವರವಚನ ಸಾಹಿತ್ಯ

ಬಸವಣ್ಣನವರ ಸ್ವರವಚನ ಸಾಹಿತ್ಯ

- ಡಾ. ಈಶ್ವರಯ್ಯ ಮಠ, ಸುರಪುರ.

ಬಸವಣ್ಣನವರು ನಿರೂಪಿಸಿದ ತಮ್ಮ ವಿಚಾರಗಳು, ನಡೆದು ತೋರಿದ ರೀತಿಗಳು ಸರ್ವಜನಪ್ರಿಯವಾಗಿವೆ. 'ಧಾರ್ಮಿಕ'ವೆಂಬ ದಾರಿಯ ಮೂಲಕ ಮಾನವ ಬದುಕಿನ ಸಕಲ ರಂಗಗಳನ್ನು ಪ್ರವೇಶಿದ ಅವರು; ವ್ಯಷ್ಟಿ ಸಮಷ್ಟಿಗಳೆರಡನ್ನೂ ಹಸನುಗೊಳಿಸಿದವರು. ಮುಖ್ಯವಾಗಿ ಮಾನವ ಜೀವಿಯನ್ನು ಒಂದು ಪರಿಪೂರ್ಣ ಘಟಕವೆಂದು ಪರಿಭಾವಿಸಿದವರು. ಎಂಥ ವ್ಯಕ್ತಿಯೂ ಕೂಡ ಯಾವುದೇ ತೆರನಾದ ಉತ್ತುಂಗಕ್ಕೇರಬಲ್ಲ ಸಾಮರ್ಥ್ಯವನ್ನು ಹೊಂದಿರುತ್ತಾರೆ ಎಂದು ಸಾರಿದವರು. ಮಾನವನೊಳಗೆ ಬದಲಾವಣೆ ಬಂದರೆ; ಸಮಾಜದಲ್ಲಿ ನೆಮ್ಮದಿ ನೆಲೆಯೂರುತ್ತದೆಯೆಂದು ಸಕಲರಿಗೂ ಮನವರಿಕೆ ಮಾಡಿಕೊಟ್ಟರು. ಇಹವನ್ನು ಅಪಾರವಾಗಿ ಪ್ರೀತಿಸುತ್ತ; ಅದಕ್ಕಾವರಿಸಿದ್ದ ವಿಕಾರಗಳ ಅತಿಯನ್ನು ತೊಳೆದುಹಾಕಿದರು. ಮಾನವ ಕುಲವನ್ನು ದೇವಕುಲವನ್ನಾಗಿಸಿದರು. ಮರ್ತ್ಯಲೋಕವನ್ನು ಕರ್ತಾರನ ಕಮ್ಮಟವನ್ನಾಗಿಸಿದರು. ನಮ್ಮ ಸಮಸ್ಯೆ ಸಂಕಷ್ಟಗಳಿಗೆ ಸಾಮೂಹಿಕ ಪ್ರಯತ್ನದಿಂದ ನಾವೇ ಪರಿಹಾರಗಳನ್ನು ಕಂಡುಕೊಳ್ಳಬೇಕೆಂದು ತಿಳಿಸಿಹೇಳಿದರು. ನಮ್ಮ ತಾಪತ್ರಯಗಳಿಗಾಗಿ ದೇವರ ಹಂಗೂ ಬೇಕಾಗಿಲ್ಲವೆಂಬ ನಿಲುವನ್ನು ಪ್ರಕಟಪಡಿಸಿದರು. ಈ ತಮ್ಮ ಅನುಭವಗಳನ್ನೆಲ್ಲ ವಚನ ಮತ್ತು ಸ್ವರವಚನಗಳ ಮೂಲಕ ಅಭಿವ್ಯಕ್ತಿಸಿದರು.

ಬಸವಣ್ಣನವರು ರಚಿಸಿದ ಹದಿನಾಲ್ಕು ನೂರಕ್ಕೂ ಹೆಚ್ಚು ವಚನಗಳು ನಮಗಿಂದು ಉಪಲಬ್ದವಿದ್ದರೆ; ಸ್ವರವಚನಗಳು ಕೇವಲ ಹತ್ತೊಂಬತ್ತು ಮಾತ್ರವೇ ದಕ್ಕಿವೆಯೆಂಬುದು ಒಂದು ದುರಂತ. ಇವರ ವಚನಗಳು ಆತ್ಮನಿವೇದನಾತ್ಮಕ ರೀತಿಯಲ್ಲಿವೆ. ವಚನಗಳು ಸಾಮಾಜಿಕ ವಿಷಯಗಳನ್ನು ವೆಗ್ಗಳವಾಗಿ ಒಳಗೊಂಡಿದ್ದರೆ; ಸ್ವರ ವಚನಗಳು ದಾರ್ಶನಿಕತೆಯನ್ನು ಜನಮನಕ್ಕೆ ತಲುಪಿಸುವ ಜವಾಬ್ದಾರಿಯನ್ನು ಸ್ವರ ವಚನಗಳು ಪೂರೈಸಿವೆ. ಬಸವಣ್ಣನವರು ತಮಗಾಗಿ; ತಮ್ಮ ಪರಿಸರ ಶುದ್ಧಿಗಾಗಿ; ಪ್ರಪಂಚ ಮತ್ತು ಪಾರಮಾರ್ಥಗಳೆರಡನ್ನೂ ಸಮರಸಗೊಳಿಸುವುದಕ್ಕಾಗಿ ಲೇಖನಿ ಹಿಡಿದರು. ಪರಮಾನಂದದ ಬದುಕಿಗಾಗಿ ಅವರು ಆಡಿ ಹಾಡಿ ದಣಿದರು. ಜನ ಸಾಮಾನ್ಯರ ದೈನಂದಿನ ರೀತಿನೀತಿಯನ್ನು ತಮ್ಮ ವಚನ ಮತ್ತು ಸ್ವರವಚನಗಳಿಂದ ನೇರ್ಪುಗೊಳಿಸಿದರು.

'ಸ್ವರವಚನ'ವು ಸ್ವರ ಮತ್ತು ವಚನವೆಂಬೆರಡು ಶಬ್ದಗಳಿಂದ ನಿಷ್ಪನ್ನವಾದ ಸಮಸ್ತಪದ. 'ಸ್ವರ' ವೆಂದರೆ: ಕಂಠದಿಂದ ಹೊರಡುವ ನಾದ, ಧ್ವನಿ, ಧಾಟಿ, ರಾಗ ಅಥವಾ ಕವಿತೆಯನ್ನು ಹಾಡುವ ಪದ್ಧತಿ ಎಂಬರ್ಥಗಳಿವೆ. 'ವಚನ' ವೆಂದರೆ: ನುಡಿ, ಮಾತು. ಪ್ರಮಾಣ, ಅರ್ಥ ಅಥವಾ ಅಭಿವ್ಯಕ್ತಿ ಎಂಬರ್ಥಗಳವೆ. ಕನ್ನಡ ಸಾರಸ್ವತ ಲೋಕದಲ್ಲಿ 'ವಚನ'ಕ್ಕೆ ಪ್ರಧಾನವಾಗಿ ಶುದ್ಧ ನಡೆ-ನುಡಿಗೆ ಬದ್ದವಾದ ಶಿವಶರಣರ 'ಅಭಿವ್ಯಕ್ತಿ ಎಂಬರ್ಥ ಹೆಚ್ಚು ಪ್ರತೀತಿಯಲ್ಲಿದೆ. ಈ ಹಿನ್ನೆಲೆಯಲ್ಲಿ ಹಾಡಲೆಂದೇ ರಚಿತವಾದ ಶಿವಶರಣರ ಕೃತಿಗಳನ್ನು ಸ್ವರವಚನಗಳೆಂದು ಕರೆದಿರುವುದು ಸ್ಪಷ್ಟವಾಗುತ್ತದೆ. ಇವು ಪಲ್ಲವಿ, ಚರಣ ಹಾಗೂ ಅಂಕಿತವನ್ನು ಒಳಗೊಂಡು ರಾಗ ಪ್ರಧಾನವಾಗಿರುತ್ತವೆ. ಸ್ವರ ವಚನವೊಂದು ಏಕಕಾಲಕ್ಕೆ ಶಾಸ್ತ್ರ ಸಂಹಿತೆಯೂ; ಸರಸ ಸಾಹಿತ್ಯವೂ; ಸುಮಧುರ ಸಂಗೀತವೂ ಆಗಿರುತ್ತದೆ. ಶರಣರು ತಮಗೆ ಕಾಡಿದ ಭಾವಗಳನ್ನು ತಟ್ಟಿದ ಅನುಭವವನ್ನು ಹೂವಾಗಿ ಅರಳಿಸುವ ಕಾರ್ಯದ ಭಾಗವಾಗಿಯೇ ಸ್ವರವಚನಗಳನ್ನು ರಚಿಸಿದ್ದಾರೆ. ಸಹಜ ಸ್ಫೂರ್ತಿಯಿಂದ ಬರೆದು ಹೃದ್ಭಾವ ತುಂಬಿ ಹಾಡಿದ್ದಾರೆ.

ಬಸವಾದಿಗಳ ಸ್ವರವಚನಗಳು ಕಾವ್ಯ-ಶಾಸ್ತಗಳ ಲಕ್ಷಣವನ್ನಾಗಲಿ; ಮಾರ್ಗಪಂಥದ ಕಟ್ಟುನಿಟ್ಟಾಗಲಿ ಅನುಸರಿಸದೆ; ಸೃಜನಗೊಂಡಿವೆ. ಅವರು ತಮಗೆ ಸರಿಕಂಡ ರೀತಿಯಲ್ಲಿ ತಮ್ಮಲೇ ತಾವು ಗುನುಗುನಿಸಿಕೊಂಡರು. ಜೊತೆಗಿದ್ದ ಇತರರು ಅವುಗಳನ್ನು ಕೇಳಿಸಿಕೊಂಡು ದನಿಗೂಡಿಸಿದರು. ಸಕಲರೂ ಸಮರಸಗೊಂಡು ಆತ್ಮ ನಿವೇದನಾತ್ಮಕವಾದ ಹಾಡನ್ನು ಸಾಮುದಾಯಿಕ ಆಸ್ತಿಯನ್ನಾಗಿಸಿದರು.

ಈ ಹಿನ್ನೆಲೆಯಲ್ಲಿ ಬಸವಣ್ಣನವರ ಸ್ವರವಚನಗಳನ್ನು ನೋಡಿದಾಗ; ಅವು ಸಾಹಿತ್ಯಕ ಶಾಸ್ತ್ರಗಳ ಕಟ್ಟುನಿಟ್ಟುಗಳ ಕಣ್ಣಪಟ್ಟಿಯಲ್ಲಿ ಕುಂಟುತ್ತ ತೆವಲದೆ; ಅನುಭವದುಂಬಿ ಹರಿದ ರಸಧಾರೆಯಾಗಿ ಕಂಗೊಳಿಸುತ್ತವೆ. ಹೊತ್ತು-ಹೊತ್ತಿಗೆ ಚಿತ್ತವೊಲಿದಂತೆ ಸಮಯ ಸಂದರ್ಭಕ್ಕೆ ಹೊಂದಿಕೆಯಾದಂತೆ ಬಸವಣ್ಣನವರು ಹಾಡುತ್ತ ಹೋದರು. ಹಾಡುಗಳು ಅರಳುತ್ತ ಹೋದವು. ನಾದಲೋಕದ ತೂರ್ಯಾವಸ್ಥೆಯಲ್ಲಿ: ತೃಪ್ತಿಯ ಶಿಖರವನ್ನು ತಲುಪುತ್ತಿದ್ದಂತೆಯೇ ಅವರು ಶಿವಯೋಗದ ನೆಲೆಗೇರುತ್ತಿದ್ದರು. ಜೊತೆಗಿದ್ದ ಕೂಡಲ ಸಂಗನ ಶರಣರು ತಲೆದೂಗಿ ಒಲಿದರೆ ಅದುವೇ ಅವರಿಗೆ ದಕ್ಕಿದ ಬಹುಮಾನವಾಯಿತು. ಜನಸಾಮಾನ್ಯರ ಜೀವನಮಟ್ಟವನ್ನು ಎತ್ತಿ ನಿಲ್ಲಿಸುವುದೇ ಬಸವಣ್ಣನವರ ಸ್ವರವಚನಗಳ ರಚನೆಯ ಗುರಿಯಾಗಿತ್ತು. ಸುಲಭದ ಬದುಕಿನ ವಿವರಣೆಗೆ ಮಾತು ಇಲ್ಲವೆ ವಚನ ಸಾಕಾಗುತ್ತದೆ. ಅಂತರಂಗದ ತುಡಿತಕ್ಕೆ; ಆತ್ಮಸಂಗಾತಕ್ಕೆ ಹಾಡು ಬೇಕೇ ಬೇಕಾಗುತ್ತದೆ. ಪ್ರಾರ್ಥನೆ, ಸ್ತುತಿ, ಆತ್ಮನಿವೇದನೆ, ಅನುಭಾವಿಕ ಅನುಸಂಧಾನಗಳ ಪೂರೈಕೆಗಾಗಿ ಸ್ವರವಚನಗಳು ರಾಗರಸ ಪಡೆದು ಮೈದಾಳಿ ನಿಂತಿವೆ.

ನಿರಂಹಕಾರಿಯೂ, ನಿರುಪದ್ರವ ಜೀವಿಯೂ ಆದ ಬಸವಣ್ಣನವರು ತಾನೇ ಏನೆಲ್ಲವೂ ಎಂಬಂಥ ಗರ್ವದ ಬೇರ‍್ಗಡಿದು ಬೂದಿ ಮಾಡಿದವರು. ನಾನು ನೀನು ಎಂಬ ಅಭಿಮಾನವನ್ನು ತೊರೆದ ಬಳಿಕ 'ನಾನೇ ನೀನಾಗಿರುತಿಹನು' 'ನೀನೇ ಮಾಟವು, ನೀನೇ ಕೂಟವು, ನಾನೆಂಬೆಡೆ ಏನೂ ಇಲ್ಲವೂ' ಎಂದು ಹಾಡಿದರು. 'ಎನಗಿಂತ ಕಿರಿಯರಿಲ್ಲ' 'ಜಗವೆಲ್ಲ ಜಂಗಮ', 'ನಾನೊಬ್ಬನೇ ಭಕ್ತ' ಎಂದು ವಚನದಲ್ಲಿ ಸಾರಿದಂತೆ 'ಅರಿಯೆನು ನಿಮಗಾನುಪಚಾರ'ವೆಂಬ ಸ್ವರವಚನದಲ್ಲಿ ಭಕ್ತ ಸಮೂಹವನ್ನು ಏನೆಲ್ಲವೂ ಎಂದು ಸಾರಿದರು.

ನೀವಲ್ಲದೆ ಮತ್ತೇನೂ ತೋರರು ನಿಮ್ಮ
ಧ್ಯಾನದಿಂದಿರುಳು ಹಗಲೆಂದರಿಯೆನು
ಮನಸಾ ವಚನ ಕಾಯದೊಳು ಸಂದಳಿದು ನಿಮ
ಗಾನೊಲಿದು ಎನ್ನ ನೊಚ್ಚುತಗೊಟ್ಟೆನು

ಎಂದು ಮತ್ತೊಂದೆಡೆ ಹಾಡುತ್ತಾರೆ. 'ನಮ್ಮ ಶರಣರ ಒಕ್ಕುದ ಕೊಂಡೆನ್ನ ತನುಮನ ಶುದ್ಧವಾದುದಯ್ಯ' ಎಂದು ಸಂಭ್ರಮ ಪಡುತ್ತಾರೆ.

ಹರಗಣಪಂಕ್ತಿಯ ಮುಂದೆ ನಾನು
ಕರವಮುಗಿದು ಪರವಶನಾಗಿ
ಎರಡರಿಯದೆ ಒಡೆಯರ ಪರಿಯಣ
ಹರುಷದಿಂ ಹಾರಿಕೊಣಂಡಿಪ್ಪೆನಯ್ಯಾ

ಎನ್ನುತ್ತಾರೆ. 'ಉಡುಗಿ ಒಕ್ಕ ಪ್ರಸಾದವ ಕೊಂಡು ಪರಮಸುಖಿಯಾದೆನು ಕೂಡಲ ಸಂಗಯ್ಯ' ಎಂದು ಹಾಡುತ್ತಾರೆ.

ತಾನಿಲ್ಲದೆ ಮಾಡುವ ಸಹಜನು
ತಾನಿಲ್ಲದೆ ನೀಡುವ ಸಹಜನು
ತಾನಿಲ್ಲದೆ ತಾಂ ಬೇರಿಲ್ಲದೆ ಬೆರಸಿಹ
ನಿಜಪರದೊಳಗೆ

ಎಂಬ ಸಾಲುಗಳಂತೂ ಬಸವಣ್ಣನವರ ನಿಜದ ನೆಲೆಯನ್ನು ಸಾರುವಂತಿವೆ. “ಸೂತಕ ವಿರಹಿತ' ಅಂಗವು ನಿಜವಾದ ಲಿಂಗವೆಂದೂ; 'ಮನಪಾತಕ ವಿರಹಿತ' ಜೀವಿಯು ಜಂಗಮವೆಂದೂ; ಸೂತಕ-ಪಾತಕವೆಂಬ ಉಭಯವನು ಅಳಿದಾನೆ ಸಹಜ ಸುಸಂಬಂಧಿಯೆಂದು ಸ್ವರ ವಚನದ ಮೂಲಕ ಹೇಳುತ್ತಾರೆ. 'ಜೀವ ಜೀವಾದಿಗಳಲ್ಲಿ ಅನ್ಯಭಿನ್ನ ಭಾವುಕನು ತಾನಲ್ಲವೆಂದೂ; “ಅಣುರೇಣು ಸ್ಥೂಲ ಸೂಕ್ಷ್ಮವೂ ನೀನೆ' ಎಂದು ಸಕಲರೂ ಸಮಸುಖವಾಗಿರಬೇಕೆಂದು ಬೋಧಿಸುತ್ತಾರೆ.

“ಸುತ್ತಿಬಳಸಿ ತೀರ್ಥಕ್ಷೇತ್ರ
ದತ್ತತೊಳಲಿ ಬಳಲಬೇಡ
ಭಕ್ತನಂಗಳವೆ ನಿತ್ಯ
ಮುಕ್ತಿಲೋಕ ವಾರಣಾಸಿ' ಮತ್ತು
ಗುರುಪಾದಾಂಗುಷ್ಟಾಷ್ಟ
ವರತೀರ್ಥಂಗಳಡಗಿರುತಿರ್ಪವು
ಅರಿದು ಗುರುವಿನಡಿಯಲ್ಲಿ ಪಾದೋದಕ
ಪರಮ ರಸವ ಧರಿಸಲು ಮುಕ್ತಿ”

ಎಂದು ತೀರ್ಥಕ್ಷೇತ್ರಗಳನ್ನು ಸುತ್ತ ಬಯಸುವವರಿಗೆ ತಿಳಿಯ ಹೇಳುತ್ತಾರೆ. ಮೌಢ್ಯ, ಕಂದಾಚಾರ ರಹಿತ ಸಮಾಜದ ನಿರ್ಮಾಣಕ್ಕಾಗಿ ಸ್ವರವಚನಗಳನ್ನು ರಚಿಸಿದ ಬಸವಣ್ಣನವರು ಪ್ರತಿಯೊಂದು ಜೀವವನ್ನೂ ಪರಶಿವನ ಅವತಾರವೆಂದು ಪ್ರತಿಪಾದಿಸಿದರು. ಗುರು-ಶಿಷ್ಯರಲ್ಲಿಯ ತಾರತಮ್ಯವನ್ನು ಮಾತ್ರವಲ್ಲ: ಯಾವುದೇ ಬಗೆಯ ಅಸಮಾನತೆಯನ್ನು ಅವರು ಪುರಸ್ಕರಿಸಲಿಲ್ಲ. ಯಾರು ಯಾರಿಗೂ ಕಡಿಮೆಯಲ್ಲ; ಮತ್ಯಾರೂ ಇತರರಿಗಿಂತ ಅಧಿಕರಲ್ಲವೆಂದು ಹಾಡಿದ್ದಾರೆ. ಬಸವಣ್ಣನವರ ಸ್ವರ ವಚನಗಳು ಅಮೃತ ಸಿಂಚನದಂತೆ ಒಡಮೂಡಿ ನಿಂತಿವೆ. ಅವು ಹೃದಯಕ್ಕೆ ತಂಪನ್ನು; ಕಿವಿಗೆ ಇಂಪನ್ನೂ ಕರ್ಣಕ್ಕೆ ರಸಾನಂದವನ್ನು ಬದುಕಿಗೆ ಬೆಳಕನ್ನು ನೀಡುವಂತಿವೆ. ಇವರ ಸ್ವರವಚನ ಸಾಹಿತ್ಯವು ಭವರೋಗಕ್ಕೆ ವೈದ್ಯನಾಗಿ; ಅನುಭಾವಕ್ಕೆ ಮೆಟ್ಟಿಲಾಗಿ ರೂಪುದಳೆದಿವೆಯೆಂದರೆ ಯಥಾರ್ಥವನ್ನಲ್ಲದೆ - ಬೇರೆನನ್ನೂ ಹೇಳಿದಂತೆ ಆಗುವುದಿಲ್ಲ.

ಪರಿವಿಡಿ (index)
Previous ಬಸವ ಸ್ತೋತ್ರ ತ್ರಿವಿಧಿ ಬಸವಣ್ಣನವರ ಪರಿಚಯ (೧೧೩೪-೧೧೯೬) Next
cheap jordans|wholesale air max|wholesale jordans|wholesale jewelry|wholesale jerseys