Previous ಆಧ್ಯಾತ್ಮ ಕ್ರಾಂತಿವೀರ ಗುರು ಬಸವೇಶ್ವರ ಗುರು ಬಸವಣ್ಣನವರು ಮದುವೆಯಾದದ್ದು ಒಬ್ಬಳನ್ನೆ Next

ಧರ್ಮಗುರು ಬಸವಣ್ಣನವರ ನಾಯಕತ್ವ

Guru Basava Leadership qualities.

*

ಬಸವಣ್ಣನವರ ಕ್ರಾಂತಿಕಾರಕ ಹೆಜ್ಜೆ

- ಶರಣ ಡಿ. ಪಿ. ಪ್ರಕಾಶ್.

ಎಲ್ಲಾ ಸ್ತರದ ವ್ಯಕ್ತಿಗಳನ್ನು ಸಂಘಟಿಸಿ ಅವರಲ್ಲಿ ಹೊರಹೊಮ್ಮಿದ ಒಮ್ಮತದ ಶಕ್ತಿಯಿಂದ ಪರ್ಯಾಯ ಸಮಾಜ ನಿರ್ಮಾಣ ಮಾಡಿದ ಬಸವಣ್ಣನವರ ಕ್ರಾಂತಿಕಾರಕ ಹೆಜ್ಜೆ ಇಂದಿಗೂ, ಈ ಆಧುನಿಕ ತಂತ್ರಜ್ಞಾನದ ಯುಗದಲ್ಲೂ ಬೆರಗುಗೊಳಿಸುವಂಥದ್ದು. ಕೇವಲ ಬಾಯಿಂದ ಬಾಯಿಗೆ ಸಂಗತಿಗಳು ಪ್ರಚಾರಗೊಳ್ಳುತ್ತಿದ್ದ ಆ ಕಾಲದಲ್ಲಿ ಕೆಲವೇ ದಶಕಗಳಲ್ಲಿ ಒಂದು ಪರ್ಯಾಯ ಸಮಾಜ ಅಸ್ತಿತ್ವಕ್ಕೆ ಬಂದಿತೆಂದರೆ ಅದು ನಿಜಕ್ಕೂ ಪವಾಡವೇ ಸರಿ.

ಜನಾಂದೋಲನಕ್ಕೆ ಹೊಸ ವ್ಯಾಖ್ಯಾನ ಬರೆದ ರೀತಿಯಲ್ಲಿ ಸಮಾಜದ ಎಲ್ಲಾ ಕೋನಗಳಿ೦ದ ಜನರನ್ನು ಸೆಳೆದ ಕಲ್ಯಾಣ ಕ್ರಾಂತಿ ಇಂದು ಜಗತ್ತು ಬಯಸುವ ಪರಿವರ್ತನೆಯ ಶಕ್ತಿಗೆ ಪರಮೋಚ್ಛ ಉದಾಹರಣೆ. ಅದು ಸಹಜವೊ ಎಂಬಂತೆ ಉತ್ತರದಾಯಿತ್ವ (accountability)ದ ನೆರಳಡಿಯಲ್ಲೇ ಅನೇಕ ಶರಣರು ಸಂದರ್ಭೋಚಿತ ನಾಯಕತ್ವದೊಂದಿಗೆ ಕೈ ಜೋಡಿಸಿದರು. ಅಸಾಧ್ಯವಾದುದನ್ನು ಸಾಧಿಸಿದರು. ಈ ಯಶೋಗಾತೆಯೇ ಕಲ್ಯಾಣ ಕ್ರಾಂತಿಯ ವ್ಯಾಕರಣವನ್ನು ಬಿಡಿಸುತ್ತದೆ.

ಕಲ್ಯಾಣ ಕ್ರಾಂತಿಯ ಉದ್ದಗಲಕ್ಕೂ ನಿಚ್ಚಳವಾಗಿ ನಿಲ್ಲುವುದೆಂದರೆ ನಾಯಕತ್ವ (leadership) ಹಾಗೂ ಉತ್ತರದಾಯಿತ್ವ (accountability). ಇದನ್ನು ಯಾರೂ ಮೇಲಿಂದ ಹೇರಿದ್ದಲ್ಲ. ನಾಯಕರಲ್ಲದ ಸಾಮಾನ್ಯರು ನಿ೦ತ ನೆಲದಿಂದಲೇ ತಮ್ಮ ಮೈಗೆ ಅವಚಿಕೊಂಡದ್ದು. ಅದಕ್ಕೇ ಪ್ರತಿ ಶರಣರ ಜೀವನವನ್ನು ಇಂದು ನಾವು ಕಣ್ಣಿಗೊತ್ತಿಕೊಂಡು ಓದುತ್ತೇವೆ.

ಇವೆಲ್ಲವನ್ನೂ ಸಾಧ್ಯಗೊಳಿಸಿದ ಬಸವಣ್ಣನವರ ಮುನ್ನಡೆಸುವ ಕಾರ್ಯಕ್ಷಮತೆ ಹೇಗಿತ್ತು ಎನ್ನುವುದೇ ನಮ್ಮ ಧರ್ಮದ ಅಂಗಳದಲ್ಲಿ ಕಾಣಸಿಗುವ ಒ೦ದು ಅದ್ಭುತ ಚಿಲುಮೆ. ಅವರು ಬೇರೆಯವರನ್ನು ಹುರಿದುಂಬಿಸುವ, ಯಾವ ಧಾರ್ಮಿಕ ಸ೦ಸ್ಕಾರವಿಲ್ಲದೇ ಇದ್ದವರನ್ನು ಮುಖ್ಯ ಆಧ್ಯಾತ್ಮಿಕ ಹಾದಿಗೆ ಕರೆತರುವ ವಿಧಾನ ಇಂದಿಗೂ ಜಾಗತಿಕ ಮಟ್ಟದಲ್ಲಿ ಸೈ ಎನಿಸಿಕೊಳ್ಳುತ್ತದೆ. ಯಾವುದೇ ಪ್ರಸಿದ್ಧ ನೇತಾರನೂ ದಂಗು ಬಡಿಯುವಂತೆ ಮಾಡುತ್ತದೆ.

ಬಸವಣ್ಣನವರ ಈ ವಚನ ನೋಡಿ

"ಭಕ್ತಿಯಿಲ್ಲದ ಬಡವ ನಾನಯ್ಯ
ಕಕ್ಕಯ್ಯನ ಮನೆಯಲ್ಲೂ ಬೇಡಿದೆ
ಚನ್ನಯ್ಯನ ಮನೆಯಲ್ಲೂ ಬೇಡಿದೆ
ದಾಸಯ್ಯನ ಮನೆಯಲ್ಲೂ ಬೇಡಿದೆ
ಎಲ್ಲಾ ಪುರಾತರು ನೆರೆದು ಭಕ್ತಿ ಬೀಜವನಿಕ್ಕಿದಡೆ
ಎನ್ನ ಪಾತ್ರೆ ತುಂಬಿತ್ತು ಕೂಡಲಸಂಗಮದೇವಾ. "

ಭಕ್ತಿ ಭಂಡಾರಿ ಬಸವಣ್ಣನವರು ಹೇಳುತ್ತಿದ್ದಾರೆ 'ಭಕ್ತಿಯಿಲ್ಲದ ಬಡವ ನಾನಯ್ಯ' ಎಂದು! ಒಬ್ಬ ನಿಜವಾದ ನಾಯಕನಿಗಿರಬೇಕಾದ ಮೂಲ ಗುಣವಿದು. ತನ್ನ ಸಾಮರ್ಥ್ಯವನ್ನು ಪ್ರದರ್ಶಿಸದೆ, ತನ್ನನ್ನು ತಾನು ಮೂಲೆಯವರಿಗಿಂತ ಮೂಲೆಯವನೆಂದು ಕರೆದುಕೊ೦ಡು, ಮೂಲೆಗುಂಪಾಗಿದ್ದವರ ಮನಸ್ಸನು ಅಣಿಗೊಳಿಸುವ ಚಾತುರ್ಯವನ್ನು ನಾವು ಈ ಸಾಲಿನಲ್ಲಿ ಗಮನಿಸಬೇಕು. "ನಾನು ಭಕ್ತಿಭಂಡಾರಿ ಬಸವಣ್ಣ" ಎಂದು ಕರೆದುಕೊಂಡು, "ಬನ್ನಿ ಎಲ್ಲರಿಗು ಭಕ್ತರಾಗುವುದು ಹೇಗೆಂಬುದನ್ನು ಕಲಿಸುತ್ತೇನೆ" ಎಂದು ಹೇಳಿದ್ದರೆ ಆ ಮೂಲೆಗುಂಪಾಗಿ ಮುದುಡಿಹೋಗಿದ್ದ ಜನರ ಮನಸ್ಸನ್ನು ಬಸವಣ್ಣನವರು ಮುಟ್ಟುತ್ತಿದ್ದರೇ? ಬದಲಿಗೆ ಅವರ ನಡುವೆ ಸಾಗರದಷ್ಟು ಅಂತರ ಬೆಳೆಯುತ್ತಿತ್ತು. ಅಲ್ಲಿಗೆ ದುರ್ಬಲರ ಮೇಲೆತ್ತುವ ಕಾರ್ಯ ತನಗೆ ತಾನೆ ಸೋತು (Self defeat) ಬಿಡುತ್ತಿತ್ತು.

ಬಸವಣ್ಣನವರ 'ಭಕ್ತಿಯಿಲ್ಲದ ಬಡವ ನಾನಯ್ಯಾ' ಸಾಲೇ ಮುಂದೆ ಜರುಗುವ ಭಾರೀ ಪರಿವರ್ತನೆಗೆ ಮುನ್ನುಡಿ. ಅವರು ಮತ್ತೇ ಹೇಳುತ್ತಾರೆ:
'ಕಕ್ಕಯ್ಯನ ಮನೆಯಲ್ಲೂ ಬೇಡಿದೆ
ದಾಸಯ್ಯನ ಮನೆಯಲ್ಲೂ ಬೇಡಿದೆ'.
ಬಸವಣ್ಣನವರು ತಮ್ಮ ಭಕ್ತಿ ಪಾತ್ರೆ ಹಿಡಿದು ಸಮಾಜದಲ್ಲಿ ನಿಕೃಷ್ಟಕ್ಕೆ ಒಳಗಾಗಿದ್ದ ಕಕ್ಕಯ್ಯನ ಮನೆಯ ಮುಂದೆ ಭಕ್ತಿಯ ಭಿಕ್ಷೆ ಬೇಡಿದರೆ ಕಕ್ಕಯ್ಯನವರಿಗೆ ಹೇಗಾಗಿರಬೇಡ? ಆಗಲೇ ಅಸಾಮಾನ್ಯವಾದವು ನಡೆಯಲು ಸಾಧ್ಯ. ಸುಪ್ತವಾಗಿ ಮಲಗಿದ್ದ ಆ ದೈತ್ಯ ಶಕ್ತಿ ಕಕ್ಕಯ್ಯನಲ್ಲಿ ಕೆಲಸ ಮಾಡಿಬಿಡುತ್ತದೆ. ತನ್ನ ಎಲ್ಲಾ ಬಡಬಡಿಕೆಯನ್ನು ಬದಿಗೊತ್ತಿ ಆಂತರಿಕ ಸಂಸ್ಕಾರಕ್ಕೆ ಮನಸು ಅಣಿಯಾಗುತ್ತದೆ. ಹಾಗೆಯೇ ದಾಸಯ್ಯನ ಮನಸ್ಸೂ ಚೇತೋಹಾರಿಯಾಗುತ್ತದೆ. ಆಗಲೇ ಇವರೀರ್ವರಲ್ಲಿ ಯುಗದ ಉತ್ಸಾಹ ಹೊಮ್ಮುವುದು.

*

ಒಂದು ಮೂರ್ಖ ಮನಸ್ಸು ಸಾಕು ವ್ಯವಸ್ಥೆಯನ್ನು ಕೆಡಿಸಲು, ಆದರೆ ಅದನ್ನು ಸರಿಪಡಿಸಲು ಒಬ್ಬ ಯುಗ ಪುರುಷನೇ ಬರಬೇಕು. ಅದಕ್ಕೇ ಹೆಸರಾಂತ ತತ್ವಜ್ಞಾನಿ ಹಾಗೂ ಆರ್ಥಿಕ ತಜ್ಞ ಪ್ರೊ ಶೂಮ್ಯಾಕರ ಹೇಳುತ್ತಾರೆ, "Any fool can make things complicated , but it requires a genius to make things simple" ಎಂದು. ಬಸವಣ್ಣನವರು ಮಾಡಿದ್ದೇ ಇದನ್ನು. ಹದಗೆಟ್ಟು ಕುಳಿತಿದ್ದ ಸಮಾಜವನ್ನು ಸರಿಪಡಿಸಲು ಸಾಧ್ಯವಾದದ್ದು ಅವರ ಈ ಅದ್ಭುತ ನಾಯಕತ್ವದ ನಡೆ!

ಮಾರ್ಟಿನ್ ಲೂಥರ್ ನಾಯಕತ್ವದ ಬಗ್ಗೆ ಹೇಳುತ್ತಾರೆ "Ultimately, a genuine leader is not a searcher for consensus but a moulder of consensus" ಬಸವಣ್ಣನವರು ಇದಕ್ಕಿಂತ ಮುಂದಕ್ಕೆ ಹೋಗಿ ಕೇವಲ ಒಮ್ಮತವಲ್ಲ, ಇರುವುದು ಇದೊಂದೇ ದಾರಿ ಎನ್ನುವ ಹಾಗೆ ಎಲ್ಲರನ್ನೂ ಬಡಿದೆಬ್ಬಿಸುತ್ತಾರೆ. ಒತ್ತಾಯದಿಂದಲ್ಲ ಅಥವಾ ಹೇರಿಕೆಯಿಂದಲ್ಲ ಆದರೆ ಮನವರಿಕೆ ಹಾಗೂ ನಂಬಿಕೆಗಳಿಂದ.

ಬಸವಣ್ಣನವರು ಮು೦ದುವರಿದು ಹೇಳುತ್ತಾರೆ:
"ಎಲ್ಲಾ ಪುರಾತರು ನೆರೆದು ಭಕ್ತಿ ಭಿಕ್ಷೆಯನಿಕ್ಕಿದಡೆ
ಎನ್ನ ಪಾತ್ರೆ ತುಂಬಿತ್ತು ಕೂಡಲಸಂಗಮದೇವಾ" ಎಂದು!

ಅಂದರೆ ಚೆನ್ನಯ್ಯ, ದಾಸಯ್ಯ, ಕಕ್ಕಯ್ಯ ಮುಂತಾದವರೆಲ್ಲರೂ ಶ್ರೇಷ್ಠ ಶರಣರಾಗಿ ಹೊರಹೊಮ್ಮಿ ಬಸವಣ್ಣನವರ ಪಾತ್ರೆಗೆ ಭಕ್ತಿಭಿಕ್ಷೆಯನಿತ್ತರು! ಬಸವಣ್ಣನವರು ಇಡೀ ಕಲ್ಯಾಣ ಕ್ರಾಂತಿಯನ್ನು ಈ ಎರಡು ಸಾಲಿನಲ್ಲಿ ಹಿಡಿದಿಟ್ಟಂತೆ ತೋರುತ್ತಿದೆ! ಇದೊಂದು ನವೀನ ನಾಯಕತ್ವದ ಶೈಲಿ. ಇದು ಯಾವುದೇ ಹೇರಿಕೆಯಿಲ್ಲದೆ ಯಾವುದೇ ಬೆದರಿಕೆಯಿಲ್ಲದೆ ಹಾಗೂ ನಾಯಕನ ವ್ಯಕ್ತಿತ್ವ ಎಲ್ಲೂ ವಿಜೃಂಭಿಸದೆ ಸಾಧ್ಯವಾದದ್ದು! ಅತ್ಯಂತ ನಿಕೃಷ್ಟಕ್ಕೆ ಗುರಿಯಾಗಿದ್ದವರೂ ಆ ಮೂಲೋತ್ಪಾಟನೆಯಲ್ಲಿ ಗಣನೀಯ ಪಾತ್ರ ವಹಿಸಿದರೆಂದರೆ ಬಸವಣ್ಣನವರ ಈ ನವೀನ ಶೈಲಿಯ ನಾಯಕತ್ವ ಎಷ್ಟರಮಟ್ಟಿಗೆ ಪರಿಣಾಮಕಾರಿಯಾಗಿತ್ತೆಂದು ಯಾರಾದರೂ ಊಹಿಸಿಕೊಳ್ಳಬಹುದು.

ಕೇವಲ ಕೆಲ ದಶಕಗಳಲ್ಲಿ ಸ್ಥಾಪನೆಗೊಂಡ ಧರ್ಮವನ್ನು ಹಾಗೂ ಪರ್ಯಾಯ ಸಮಾಜವನ್ನು ಒಂಬೈನೂರು ವರುಷಗಳಾದರೂ ಇನ್ನೂ ಸರಿಯಾಗಿ ನಾವು ಅರ್ಥ ಮಾಡಿಕೊಳ್ಳಲು ವಿಫಲರಾಗಿದ್ದೇವೆ. ಅಷ್ಟೇ ಅಲ್ಲ, ಒಂದೊಂದು ಪಂಗಡಗಳಾಗಿ ದ್ವೀಪಗಳಂತೆ ಅಲ್ಲೊಂದು ಇಲ್ಲೊಂದು ತೇಲುತ್ತಾ ಇರುವ ನಮ್ಮ ಧರ್ಮ ಹಾಗೂ ಸಮಾಜವನ್ನು ನೋಡಿದರೆ ಮಮ್ಮಲ ಮರುಗುವ೦ತಾಗುತ್ತದೆ. ನಮ್ಮ ಈ ಮನಸ್ಥಿತಿಯನ್ನು ಕಂಡು ಜಿಗುಪ್ಸೆ ಬರುತ್ತದೆ. ಮೇಲಿನ ವಚನ ನಮ್ಮ ಸಮಾಜದಲ್ಲಿನ ಗುರುಗಳಿಗೆ ಹಾಗೂ ನಾಯಕರುಗಳಿಗೆ ಬಡಿದೆಬ್ಬಿಸುವ ಮಂತ್ರದಂಡದಂತಿದೆ! ರಾಷ್ಟ್ರ ರಾಷ್ಟ್ರಗಳ ನಡುವಿನ ಗೋಡೆಗಳು ಬಿದ್ದಿವೆ. ಆದರೆ ಮನಸು ಮನಸುಗಳ ನಡುವಿನ ಗೋಡೆಗಳು ಮಾತ್ರ ಬಿದ್ದಿಲ್ಲ. ಇದರಿಂದ ಮನಸುಗಳು ಕೆಡುತ್ತಿವೆ, ಸಮಾಜ ಕೆಡುತ್ತಿದೆ, ಧರ್ಮ ಗೊತ್ತು ಗುರಿಯಿಲ್ಲದೆ ಓಡುತ್ತಿರುವವರ ನೋಡುತ್ತಾ ಕಂಗೆಟ್ಟಿದೆ. ಮುಂದೊಂದು ಕಾಲ ಬರಬಹುದೇನೋ! ವಿದೇಶಿ ರಾಷ್ಟ್ರವೊಂದು ಬಂದು ನಮಗೆ ನಮ್ಮ ಧರ್ಮದ ಮಹತ್ತು ತಿಳಿಸಿ, ಬಸವಧರ್ಮದಡಿಯಲ್ಲಿ ನಾಯಕತ್ವ ಹೇಗಿರಬೇಕೆಂದು ಮನವರಿಕೆ ಮಾಡಬಹುದೇನೋ! ಅಲ್ಲಿಯವರೆಗೆ ನಾವು ಅನುಭವ ಮಂಟಪ ಎಂದು ಹೆಮ್ಮೆಯಿಂದ ಹೇಳಿಕೊಂಡು ಅದರ ವೈರುಧ್ಯವೇ ನಾವು ಎಂಬಂತೆ ನಮ್ಮ ನಮ್ಮ ನಂಬಿಕೆಗಳ ಗೂಟದ ಸುತ್ತಾ ಗಿರಕಿ ಹೊಡೆಯುತ್ತಿರುತ್ತೇವೆ!

ಕಲ್ಯಾಣ ಕ್ರಾ೦ತಿಯ ನ೦ತರ ನಡೆದ ಶರಣರ ಹತ್ಯಾಕಾಂಡದ ಸುದ್ದಿ ತಿಳಿದ ಧರ್ಮಪಿತರು ಹೊರಹಾಕಿದ ಭಾವನೆಗಳು ಎಂಥವರ ಮನಸ್ಸನ್ನೂ ಕಲಕುತ್ತವೆ. 'ನಾನು ಬಂದ ಕಾರ್ಯಕ್ಕೆ ನೀವು ಬಂದಿರಯ್ಯಾ' ಎಂದು ಮಡಿವಾಳ ಮಾಚಿದೇವರನ್ನು ಉದ್ದೇಶಿಸಿ ಬರೆದಿರುವ ಈ ವಚನ ಬಸವಣ್ಣನವರ ನಾಯಕತ್ವಕ್ಕೆ ಹಿಡಿದ ಮತ್ತೊಂದು ಕನ್ನಡಿ. ಬಹುಶಃ ಶರಣರ ಮಾರಣಹೋಮದ ಸುದ್ದಿ ಧರ್ಮಪಿತರಿಗೆ ಮುಟ್ಟಿರಬಹುದು. ಬಸವಣ್ಣನವರಿಗೆ ಖಾತ್ರಿಯಾಗಿದೆ ಕಲ್ಯಾಣದ ಪರ್ಯಾಯ ಸಮಾಜದ ರಚನೆ ಘಾಸಿಗೊಂಡಿದೆ ಎಂದು.

ಬಸವಣ್ಣನವರು ತಮ್ಮಿಂದಾದ ಮಹಾಕಾರ್ಯಕ್ಕೆ ತಾವೊಬ್ಬರೇ ಕಾರಣರಲ್ಲವೆಂಬುದನ್ನು ಎಷ್ಟು ಸುಂದರವಾಗಿ ಈ ವಚನದಲ್ಲಿ ಹೇಳಿದ್ದಾರೆ ನೋಡಿ: A great leader is one who recognises the role of everyone and attributes the results to them. ಬಸವಣ್ಣನವರು ಅದಕ್ಕೇ ಹೇಳುತ್ತಾರೆ ನಾನು ಬಂದ ಕಾರ್ಯಕ್ಕೆ ನೀವು ಬಂದಿರಯ್ಯಾ ಎಂದು! ಮಡಿವಾಳ ಮಾಚಿದೇವರ ಜೊತೆ ಸಂಭಾಷಣೆ ನಡೆಸುವ ರೀತಿಯಲ್ಲಿ ಬರೆದಿರುವ ಈ ವಚನದಲ್ಲಿ ಧರ್ಮಪಿತರು ಕಲ್ಯಾಣ ಕ್ರಾಂತಿಯಲ್ಲಿ ಪ್ರಭುದೇವರ ಪಾತ್ರವನ್ನು ನೆನೆಯುತ್ತಾರೆ.

ಇಡೀ ಕಲ್ಯಾಣವನ್ನೇ ಒಂದು ಹಣತೆ (ದೀಪ)ಗೆ ಹೋಲಿಸಿರುವ ಧರ್ಮಪಿತರು ತಮ್ಮನ್ನು ತಾವು ತೈಲವೆಂದು ಹೇಳಿ ಮಡಿವಾಳ ಮಾಚಿದೇವರದು ಬತ್ತಿಯ ಪಾತ್ರ ಎನ್ನುತ್ತಾರೆ! ಪ್ರಭುದೇವರನ್ನು ಜ್ಯೋತಿಗೆ ಹೋಲಿಸುತ್ತಾರೆ!! ಕಲ್ಯಾಣ ಕ್ರಾ೦ತಿಯ ಮುಕುಟವೇ ಆಗಿದ್ದ ಧರ್ಮಪಿತರ ಪ್ರಕಾರ ಪ್ರಭುದೇವರೇ ಇಡೀ ಕಲ್ಯಾಣದ ಪ್ರಕಾಶ ಮತ್ತು ಬೆಳಕು!!! ನಾಯಕತ್ವಕ್ಕೆ ಇದಕ್ಕಿಂತ ಉತ್ತಮ ಉದಾಹರಣೆ ಮತ್ತೇನು ಬೇಕು? ಗೆದ್ದಲು ಹಿಡಿದಿದ್ದ ವ್ಯವಸ್ಥೆಯನ್ನು ಪಲ್ಲಟಗೊಳಿಸಿ ಪರ್ಯಾಯ ವ್ಯವಸ್ಥೆಯನ್ನು ಅಸ್ತಿತ್ವಕ್ಕೆ ತ೦ದ ಧರ್ಮಪಿತರ unassuming character is unparalleled in the human history. This is the crux of his leadership quality!

ಪ್ರಣತೆ ಒಡೆದಿತ್ತು ಎನ್ನುವ ಮೂಲಕ ಧರ್ಮಪಿತರು ಕಲ್ಯಾಣ ಕ್ರಾ೦ತಿಯ ದುರ೦ತತೆಯನ್ನು ಕಣ್ಣಿಗೆ ಕಟ್ಟುವ೦ತೆ ಪ್ರತಿಮಾರೂಪದಲ್ಲಿ ನಮ್ಮ ಮು೦ದೆ ನಿಲ್ಲಿಸುವ ಅವರ ದುಃಖತಪ್ತ ಮನಸ್ಸು ನಮ್ಮನ್ನು ಹಿಡಿದು ಅಲ್ಲಾಡಿಸಿಬಿಡುತ್ತದೆ. ಕೊನೆಯಲ್ಲಿ ಅವರು ಹೇಳುವ ಕೂಡಲ ಸ೦ಗನ ಶರಣರ ಮನ ನೊ೦ದಿತ್ತಯ್ಯ ಎನ್ನುವುದು ಅವರ ಸಮರ್ಪಣಾ ಭಾವದ ಉತ್ತು೦ಗವೇ ನಮಗೆ ದಿಗ್ದರ್ಶನವಾದ೦ತಾಗುತ್ತದೆ. ಪ೦ಡಿತ್ ಅ೦ಬಯ್ಯ ನುಲಿಯವರು ಮನೋಜ್ಞವಾಗಿ ಹಾಡಿರುವ ಈ ವಚನ ಹಲವು ದಿನಗಳವರೆಗೆ ನಮ್ಮನ್ನು ಕಾಡದೇ ಇರದು.

*
ಪರಿವಿಡಿ (index)
Previous ಆಧ್ಯಾತ್ಮ ಕ್ರಾಂತಿವೀರ ಗುರು ಬಸವೇಶ್ವರ ಗುರು ಬಸವಣ್ಣನವರು ಮದುವೆಯಾದದ್ದು ಒಬ್ಬಳನ್ನೆ Next
cheap jordans|wholesale air max|wholesale jordans|wholesale jewelry|wholesale jerseys