ಬಸವಣ್ಣನವರ ಪರಿಚಯ (೧೧೩೪-೧೧೯೬) | ಕಾರಣಿಕ ಪುರುಷ |
ಬಸವಣ್ಣನವರದು ಸರ್ವಾಂಗ ಪರಿಪೂರ್ಣ ವ್ಯಕ್ತಿತ್ವ |
✍ ಪೂಜ್ಯ ಶ್ರೀ ಮಹಾಜಗದ್ಗುರು ಡಾ|| ಮಾತೆ ಮಹಾದೇವಿ
*
೧. ತತ್ತ್ವದ ಹೂವುಗಳನ್ನು ಪೋಣಿಸಲು ಒಂದು ಸೂತ್ರ ಬೇಕು. ಕ್ರಮಬದ್ಧತೆ, ಸುವ್ಯವಸ್ಥೆ ಬರಬೇಕಾದರೆ ಒಂದು ಕಥೆಯ ಸೂತ್ರದ ಆಧಾರದ ಮೇಲೆ ಅನೇಕ ಸೈದ್ಧಾಂತಿಕ, ತಾತ್ವಿಕ ಕಲ್ಪನೆಗಳನ್ನು ಹೆಣೆಯಲು ಸಾಧ್ಯ. ಇಲ್ಲಿ ದಾರದ ಪಾತ್ರ ಪ್ರಮುಖವಾದರೂ, ಹೂವುಗಳ ಮರೆಯಲ್ಲದು ಎದ್ದು ಕಾಣದು. ನಾನೂ ಸಹ ಜೀವನ ಚರಿತ್ರೆಯನ್ನು ಬಳಸಿಕೊಂಡರೂ ಮುಖ್ಯವಾಗಿ ತತ್ತ್ವಜ್ಞಾನವನ್ನೇ ಪ್ರಧಾನವಾಗಿರಿಸಿಕೊಳ್ಳುವೆ.
೨. ವೈಯಕ್ತಿಕವಾಗಿ ನನಗೆ ಬಸವಣ್ಣನವರ ಬಗ್ಗೆ ಅನನ್ಯವಾದ ಭಕ್ತಿ-ಶ್ರದ್ಧೆ, ನನ್ನ ವಿಚಾರ, ದೃಷ್ಟಿಕೋನ ಮತ್ತು ವ್ಯಕ್ತಿತ್ವವನ್ನು ರೂಪಿಸುವಲ್ಲಿ ಮಂತ್ರಪುರುಷ, ಕ್ರಾಂತಿನಿಧಿ ಬಸವಣ್ಣನವರ ಪಾತ್ರ ಬಹುದೊಡ್ಡದು. ಸಾವಿರಾರು ವರ್ಷಗಳಿಗೊಮ್ಮೊಮ್ಮೆ ಅರಳುವ ಯುಗಪುರುಷರವರು. ಅವರ ವೈವಿದ್ಯಮಯ ಪ್ರತಿಭೆಯ, ಸರ್ವಾಂಗ ಸುಂದರ ವಿರಾಟ್ ರೂಪಿ ವ್ಯಕ್ತಿತ್ವವನ್ನು ಅರಿಯುತ್ತ ಹೋದಂತೆಲ್ಲ ಮನಸ್ಸು ಸಂಭ್ರಾಂತವಾಗುತ್ತದೆ. ಸೂರ್ಯನ ಎಳೆ ಬಿಸಿಲಿನಲ್ಲಿ ಹೊಂಬಣ್ಣದ ಕಿರಣಗಳಿಂದ ಮಿಂಚುವ ರಜತಾದ್ರಿಯನ್ನು ನೋಡುತ್ತ ಮೈಮರೆವ ಭಾವುಕನ ಸ್ಥಿತಿಯಂತೆ ಆಗುತ್ತದೆ.
೩. ಬಸವಣ್ಣನವರದು ಸರ್ವಾಂಗ ಪರಿಪೂರ್ಣ ವ್ಯಕ್ತಿತ್ವ ಏಸುಕ್ರಿಸ್ತನನ್ನು ಸಾಂಕೇತಿಕವಾಗಿ ಕುರಿಮರಿಗೆ, ಗೌತಮ ಬುದ್ಧನನ್ನು ಜಿಂಕೆಗೆ ಹೋಲಿಸುವಂತೆ ಬಸವಣ್ಣನವರನ್ನು ನಂದಿಗೆ, ವೃಷಭನಿಗೆ ಹೋಲಿಸುವುದನ್ನು ಕಾಣುತ್ತೇವೆ. "ಎತ್ತು'' ಕೃಷಿ ಜೀವನದ ಜೀವಾಳವಾದ ಸಾತ್ವಿಕ ಪ್ರಾಣಿ. ಮಾನವನ ಐಹಿಕ ಬದುಕಿನ ಅತ್ಯಾವಶ್ಯಕ ಪ್ರಾಣಿಯಾದರೂ ದಾಸೋಹಂ ಭಾವದಿಂದ ಕೂಡಿದುದು. ಕುರಿಯಲ್ಲಿ ಮುಗ್ಧತೆ, ಅಹಿಂಸೆ ಮುಂತಾದ ಗುಣಗಳಿದ್ದರೂ, ಜಿಂಕೆಯೂ ಸಾತ್ವಿಕವಾದ ಪ್ರಾಣಿಯಿದ್ದರೂ ಎತ್ತಿನಷ್ಟು ಉಪಯುಕ್ತ ಪ್ರಾಣಿಯಲ್ಲ. ಕಾಯಕ ತತ್ವಕ್ಕೆ ಮಹತ್ತರ ಸ್ಥಾನ ನೀಡಿ ದುಡಿಮೆಗೆ ದೇವತ್ವವನ್ನು ತಂದುಕೊಟ್ಟ ಬಸವಣ್ಣನವರನ್ನು ಎತ್ತಿಗೆ ಹೋಲಿಸಿರುವುದು ಪೌರಾಣಿಕ ಕಲ್ಪನೆಯಾದರೂ ಅರ್ಥಗರ್ಭಿತ ಎನ್ನಿಸದಿರದು. ಹೇಗೆ ಕೃಷಿ ಜೀವನದ ಜೀವನಾಡಿ ಬೆನ್ನೆಲುಬು ಎತ್ತೋ, ಅದು ಐಹಿಕ ಜೀವನವನ್ನು ಲೌಕಿಕವಾಗಿ ಹೇಗೆ ಎನ್ನುವುದೋ ಹಾಗೆ ಪಾರಮಾರ್ಥ ಜೀವನವನ್ನು ಎತ್ತುವ ಧರ್ಮವೃಷಭ ಬಸವಣ್ಣನವರು.
೪. ಇಂದಿನ ಜೀವನಕ್ಕೆ ಬಸವಣ್ಣನವರ ತತ್ತ್ವಜ್ಞಾನ ಬಹಳಷ್ಟು ಬೇಕಾಗಿದೆ. ಪ್ರಸ್ತುತ ಜಗತ್ತು ಎದುರಿಸುವ ಸಮಸ್ಯೆಗಳಿಗೆ ಬಸವಣ್ಣನವರ ವಿಚಾರ ಧಾರೆ ಸಮರ್ಪಕ ಪರಿಹಾರ ನೀಡುವುದು. ಅವರ ವಿಚಾರಧಾರೆ ಕೇವಲ ಒಂದು ಧಾರ್ಮಿಕ ಪಂಥವಲ್ಲ, ಆಚರಣೆಯಲ್ಲ ಅದು ಜೀವನದ ಸಿದ್ಧಾಂತ; ಒಂದು ನೀತಿ ಸಂಹಿತೆ; ಧಾರ್ಮಿಕ ಸಂವಿಧಾನ.
ಅ. ಮೊಟ್ಟಮೊದಲನೆಯದಾಗಿ ಅವರು ಈ ಇಳೆಯಲ್ಲಿ ಬಾಳಲಿಕ್ಕೆ ಕಲಿಸುವರು. ಮರ್ತ್ಯದ ಜೀವನವನ್ನಾಗಲೀ, ಬದುಕುವಿಕೆಯನ್ನಾಗಲೀ ಹೇಯವೆಂದು ಭಾವಿಸುವುದಿಲ್ಲ.
ಮರ್ತ್ಯಲೋಕವೆಂಬುದು ಕರ್ತಾರನ ಕಮ್ಮಟವಯ್ಯ
ಇಲ್ಲಿ ಸಲ್ಲುವವರು ಅಲ್ಲಿ ಸಲ್ಲುವರು
ಇಲ್ಲಿ ಸಲ್ಲದವರು ಅಲ್ಲಿ ಸಲ್ಲರಯ್ಯ ಕೂಡಲಸಂಗಮದೇವಾ.
ಈ ಮರ್ತ್ಯಲೋಕವು ಪರಮಾತ್ಮನ ಟಂಕಸಾಲೆ. ಇಲ್ಲಿ ಸಲ್ಲುವ ನಾಣ್ಯವಾದರೆ ಪಾರಮಾರ್ಥದಲ್ಲಿಯೂ ಸಲ್ಲುವರು. ಇಲ್ಲಿ ಸಲ್ಲದವರು ಪರಮಾರ್ಥದಲ್ಲೂ ಸಲ್ಲರು. ನಾಣ್ಯಗಳಲ್ಲಿ ಮೂರು ಪ್ರಕಾರ ಚಿನ್ನದ ನಾಣ್ಯ ಸಲ್ಲುವ ನಾಣ್ಯ, ಖೋಟಾ ನಾಣ್ಯ. ಚಿನ್ನದ ನಾಣ್ಯವು ತನ್ನ ಚಿನ್ನದಿಂದಾಗಿ ಎಲ್ಲೆಲ್ಲೂ ಸಲ್ಲುತ್ತದೆ. ದೇಶದಲ್ಲಿ ಸಲ್ಲುವ ನಾಣ್ಯ ಇನ್ನಿತರ ದೇಶಗಳಲ್ಲಿ ಸಲ್ಲದು. ಖೋಟಾ ನಾಣ್ಯವು ತನ್ನ ದೇಶದಲ್ಲಿಯೂ ಸಲ್ಲದು, ಇತರ ದೇಶಗಳಲ್ಲಿಯೂ ಸಲ್ಲದು. ಹಾಗೆಯೇ ಲೌಕಿಕ ಬಾಳಿನಲ್ಲಿ ಯಶಸ್ವಿಯಾದವ, ಪರಿಪಕ್ವವಾದವ ಪಾರಮಾರ್ಥದಲ್ಲಿಯೂ ಸಲ್ಲವನು. ಲೌಕಿಕ-ಪಾರಮಾರ್ಥಗಳೆರಡನ್ನೂ ಸಾಧಿಸದವ, ಅನೀತಿವಂತ, ಅಧರ್ಮಿಯಾದ ಕಾರಣ ಖೋಟಾ ನಾಣ್ಯದಂತೆ ಎಲ್ಲಿಯೂ ಸಲ್ಲನು.
ಈ ವಚನದ ಬೆಂಬುಳಿವಿಡಿದು ಅನೇಕ ಬಗೆಯಲ್ಲಿ ಅರ್ಥೈಸುವರುಂಟು. ಇಲ್ಲಿ ಸಲ್ಲುವವರು ಅಲ್ಲಿ ಸಲ್ಲುವರು.” ಎನ್ನುವುದನ್ನು ಈ ಲೋಕ ಆ ಲೋಕ ಎಂದು. ಮರ್ತ್ಯ ಸ್ವರ್ಗ (ಕೈಲಾಸ, ಪರಲೋಕ) ಗಳೆಂದು ಅರ್ಥೈಸುವವರುಂಟು. ಈ ವ್ಯಾಖ್ಯಾನ ಬಸವಣ್ಣನವರ ವಿಚಾರಧಾರೆಗೆ ವಿರುದ್ಧವಾಗುತ್ತದೆ. ಅವರು ಮತ್ತಾವ ಪರಲೋಕವನ್ನೂ ಒಪ್ಪುವುದಿಲ್ಲ.
ಇನ್ನು ಕೆಲವರು, 'ಲೌಕಿಕ ಬದುಕಿನಲ್ಲಿ ಸೈ ಅನ್ನಿಸಿಕೊಂಡವರು, ಪಾರಮಾರ್ಥಿಕ ಬದುಕಿನಲ್ಲಿ ಸೈ ಅನ್ನಿಸಿಕೊಳ್ಳುವರು.” ಎಂದು ಅರ್ಥಮಾಡುವರು. ಸಮಾಜದ ದೃಷ್ಟಿಯಲ್ಲಿ ಜಯಶಾಲಿಗಳಾದವರು. ದೇವರು ದೃಷ್ಟಿಯಲ್ಲಿ ಸಹ ಆಗುವರು ಎಂದೂ ಅರ್ಥೈಸುವರು. ಇವೆಲ್ಲ ತಪ್ಪೇ! ಏಕೆಂದರೆ ಅನೇಕ ಪ್ರವಾದಿಗಳು, ಸಂತರು ಜನಗಳ ಕೈಯಲ್ಲಿ ಸೈ ಅನ್ನಿಸಿಕೊಳ್ಳುವ ನಡೆ-ನುಡಿ ಹೊಂದಿದವರಲ್ಲ. “ಲೋಕವಿರೋಧಿ ಶರಣ.' ಲೋಕದಿಚ್ಚೆಯ ನುಡಿಯ, ಲೋಕದಿಚ್ಚೆಯ ನಡೆಯ'' ಎಂಬ ಬಾಳು ಅವರದು. ಕರ್ತವ್ಯಪರವಾದ, ಆತ್ಮಸಾಕ್ಷಿಯ ಬಾಳನ್ನು ಬಾಳಿ ಇಲ್ಲಿ ಸೈ ಅನ್ನಿಸಿಕೊಂಡವ ಪರಮಾತ್ಮನಿಗೂ ಪ್ರೀತಿಪಾತ್ರನಾಗುವನು ಎಂಬ ಅರ್ಥವನ್ನು ಮಾಡಬಹುದು. ಅಧ್ಯಾತ್ಮವೆಂದರೆ ಕರ್ತವ್ಯ ವಿಮುಖವಾಗಿ, ಅಥವಾ ಬದುಕಿಗೆ ಬೆನ್ನು ತೋರಿ ನಡೆಯುವುದಲ್ಲ, ಬದುಕನ್ನು ಎದುರಿಸುವದು.
ಅಂಕ ಓಡಿದರೆ ತೆತ್ತಿಗಂಗೆ ಭಂಗವಯ್ಯ
ಕಾದಿ ಗೆಲಿಸಯ್ಯಾ ಎನ್ನನು, ಕೂಡಲಸಂಮದೇವಾ
ತನು ಮನ ಧನದಲ್ಲಿ ವಂಚನೆ ಇಲ್ಲದೆ!!
ಎಂದು ಬಸವಣ್ಣನವರು ಹೇಳುವರು. ಜೀವನ ಒಂದು ಸಮರಾಂಗಣ; ಜೀವಿಯು ಇಲ್ಲಿ ಹೋರಾಡುವ ಸೈನಿಕನಿದ್ದಂತೆ, ಸೈನಿಕನ ಬದುಕು ಕಾದುವುದರಲ್ಲಿ ಸಾರ್ಥಕವಾಗುವಂತೆ, ಅವನಿಂದ ಅವನ ದೇಶದ ಕೀರ್ತಿ ನಿಲ್ಲುವಂತೆ, ಶ್ರದ್ಧಾವಂತ ಧಾರ್ಮಿಕನ ಬದುಕು ಸಾರ್ಥಕವಾಗುವುದು ಆತ್ಮಸ್ಥೆರ್ಯದಿಂದ ಬದುಕನ್ನು ಎದುರಿಸಿದಾಗ! ಆಗಲೇ ದೇವನ ಕೀರ್ತಿಯೂ ನಿಲ್ಲುವುದು. ಹೆದರಿ ಹಿಮ್ಮೆಟ್ಟುವ ಹಿಮ್ಮೆಟ್ಟುವ ಸೈನಿಕನಿಂದ ಅವನ ದೇಶಕ್ಕೆ ಅಪಮಾನವಾಗುವಂತೆ ಹೇಡಿಯಾದ ಧಾರ್ಮಿಕನಿಂದ ದೇವನ ಮಹಿಮೆಗೂ ಭಂಗ ಬರುವುದು. ಹೀಗೆ ಬಸವಣ್ಣನವರು ಇಹಲೋಕಕ್ಕೆ ಇಲ್ಲಿಯ ಬಾಳ್ವೆಗೆ ಮಹತ್ವವನ್ನು ಕೊಟ್ಟರು. ಅವರು ಜೀವನ ನಿರಾಕರಣ (Life negation), ಜಗತ್ತಿನ ನಿರಾಕರಣ (World negation) ಸಿದ್ಧಾಂತ ಬೋಧಿಸದೆ ಜೀವನ ಸ್ಥಿರೀಕರಣ (Affairmation) ಸಿದ್ಧಾಂತವನ್ನು, ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಉದಾತ್ತೀಕರಣ (Sublimation) ಸಿದ್ಧಾಂತವನ್ನು ಬೋಧಿಸಿದರು.
ಬಸವಣ್ಣನವರು ಒಬ್ಬ ಮಹಾನ್ ವಿಚಾರವಾದಿಗಳು, ಪ್ರಗತಿಪರ ಚಿಂತಕರು ಮತ್ತು ರಾಷ್ಟ್ರಗುರುವಾಗುವ ಸಾಮರ್ಥ್ಯ ಹೊಂದಿದವರು. ಅವರ ಸಮತಾವಾದ, ಕಾಯಕವೇ ಕೈಲಾಸ ಎಂಬ ದುಡಿಮೆಯ ಸೂತ್ರ. ಇವನಾರವ ಇವನಾರವ ಎಂದೆನಿಸದೆ ಇವನಮ್ಮವ ಇವನಮ್ಮವ ಎಂದೆನಿಸು ಎಂಬ ವಿಶಾಲ ಮನೋಭಾವ ಇಂದು ನಮ್ಮ ರಾಷ್ಟ್ರಕ್ಕೆ ಬೇಕಾದ ಸೂತ್ರಗಳು. ಅವರು ಕೊಟ್ಟ ಪಂಚ ಆಚಾರಗಳು ಸಾಮಾಜಿಕ ನೀತಿಯ ಸಂಹಿತೆ (Socio-ehtical codes) ಗಳು. ಏಕದೇವೋಪಾಸನೆ (Consistant monotheism)ಯನ್ನು ಬೋಧಿಸುವ ಲಿಂಗಾಚಾರ, ಕಾಯಕತತ್ವ, ಆರ್ಥಿಕ ಸ್ಥಿರತೆಯನ್ನು (Economic stability) ಬೋಧಿಸುವ ಸದಾಚಾರ, ಸಾಮಾಜಿಕ ಸಮಾನತೆ ಸಾರುವ ಶಿವಾಚಾರ (Social equality), ಅನಿಷ್ಟ ಶಕ್ತಿಗಳ ವಿರುದ್ಧ ಹೋರಾಡುವ ಗಣಾಚಾರ (Fighting Capacity), ಲೋಕದ ಸೇವೆಯಲ್ಲಿ ಲೋಕೇಶನ ಅನುಗ್ರಹ ಪಡೆಯುವ ಪ್ರವೃತ್ತಿಯಾದ ಭೃತ್ಯಾಚಾರ (Service mentality) ಸಮಾಜ ಮತ್ತು ರಾಷ್ಟ್ರೀಯ ಜೀವನಕ್ಕೆ ಬೇಕಾಗುವ ಮಹಾನ್ ಸೂತ್ರಗಳು.
ಪ್ರಯತ್ನವಾದಕ್ಕೆ ಅಸಾಮಾನ್ಯ ಸ್ಥಾನ ನೀಡಿದ ಬಸವಣ್ಣನವರು ಇಂದಿನ ಸಮಾಜಕ್ಕೆ ಒಂದು ಮಾದರಿಯಾಗಬಲ್ಲರು; ಅವರ ತತ್ವ ಇಂದಿನ ಅವಶ್ಯಕತೆ ಎಂದರೂ ಉತ್ಪ್ರೇಕ್ಷೆಯಲ್ಲ. ಅಂತೆಯೇ ಅವರನ್ನು ಕುರಿತು ಆರ್ಥರ್ ಮೈಲ್ಸ್ ಹೀಗೆ ಹೇಳುತ್ತಾರೆ;
Whatever legend may say about Basava,the fact is fully clear that he is the first Indian free thinker, he can be called the Martin Luther of India, ಭಾರತದ ಮೊಟ್ಟ ಮೊದಲ ಸ್ವತಂತ್ರ ವಿಚಾರವಾದಿ ಎನ್ನುತ್ತಾನೆ.
ಬಸವಣ್ಣನವರಿಗಿಂತಲೂ ಪೂರ್ವದಲ್ಲಿ ಬುದ್ಧನಿದ್ದ. ಬುದ್ಧನು ಕ್ರಾಂತಿಗಿಂತಲೂ, ಸಮಾಜ ಪಲ್ಲಟಕ್ಕಿಂತಲೂ ಏಕಾಂತವಾದಕ್ಕೆ, ಸನ್ಯಾಸ ಜೀವನಕ್ಕೆ ಒತ್ತುಕೊಟ್ಟನು. “ಆಶೆಯೇ ದುಃಖಕ್ಕೆ ಮೂಲ, ನಿರಾಶೆಯೇ ಆನಂದದ ಮೂಲ' ಎಂಬ ದೃಷ್ಟಿಕೋನ ಬೆಳೆಸಿ, ಜೀವನದ ಒಂದು ಮುಂತಳ್ಳುವ (Driving force) ಜೈವಿಕ ಶಕ್ತಿಯಾದ ಆಸೆಯನ್ನೇ ಬತ್ತಿಸುವ ಒಂದು ಸಿದ್ಧಾಂತವನ್ನು ಪ್ರತಿಪಾದಿಸಿದ. ಆದ್ದರಿಂದಲೇ ಬೌದ್ಧ ಧರ್ಮವು ಜನಸಾಮಾನ್ಯರನ್ನು ಅಷ್ಟೊಂದು ಆಕರ್ಷಿಸಲಿಲ್ಲ.(ಸಾಕಷ್ಟು ರೂಪಾಂತರಗೊಂಡು ಅದು ಭಾರತೀಯೇತರ ದೇಶಗಳಲ್ಲಿ ಪ್ರಚಾರಗೊಂಡಿತು) ಕಾಯಕಕ್ಕೆ ಮಹತ್ವವನಿತ್ತು, ಸತ್ಕಾಮ ಭಾವನೆಯಿಂದ ದುಡಿದು, ದುಡಿತಕ್ಕೆ ತಕ್ಕಪ್ರತಿಫಲ ಪಡೆದು, ಆತ್ಮೋದ್ಧಾರದೊಡನೆ ಸಮಾಜೋದ್ಧಾರದ ಕಡೆಗೆ ಗಮನ ಕೊಡುವುದು ತಪ್ಪೇನಲ್ಲ ಎಂಬ ಸಿದ್ದಾಂತವನ್ನು ಬಸವಣ್ಣನವರು ಪ್ರತಿಪಾದನೆ ಮಾಡಿ ಶ್ರೀಸಾಮಾನ್ಯನ ಧರ್ಮವನ್ನು ಎತ್ತಿಹಿಡಿದರು.
ಬಸವಣ್ಣನವರ ಕ್ರಾಂತಿಯು ಒಂದು ಮಹಾನ್ ಸೇತುವೆಯಂತೆ. ಅದು ಆಧ್ಯಾತ್ಮಿಕ ತತ್ತ್ವಜ್ಞಾನ ಮತ್ತು ಆಧುನಿಕ ವಿಜ್ಞಾನ ಎರಡನ್ನೂ ಬೆಸೆಯುವಂತಿದೆ. ಮನುಷ್ಯನ ಆಂತರಂಗಿಕ ವಿಕಾಸಕ್ಕೆ ಬೇಕಾದ ಆಧ್ಯಾತ್ಮಿಕ ಮೌಲ್ಯಗಳನ್ನು ಸಮವಾಗಿ ಬೆರೆಸಿಕೊಂಡಿದೆ. ಕಾರ್ಲ್ ಮಾರ್ಕ್ಸನ ಸಾಮ್ಯವಾದ, ಬುದ್ಧನ ಮಾನವತಾವಾದಗಳೆರಡನ್ನೂ ಅಳವಡಿಸಿಕೊಂಡ ಅವರ ವಿಚಾರಧಾರೆಯು ಭೌತಿಕ, ನೈತಿಕ, ಆಧ್ಯಾತ್ಮಿಕ ಮೌಲ್ಯ ಮೂರನ್ನೂ ಮನ್ನಿಸುತ್ತದೆ. ಕಾರ್ಲ್ಮಾರ್ಕ್ಸನ ದೇಹವನ್ನೊಂದನ್ನು, ಅದರ ಹಿತಾಸಕ್ತಿಯನ್ನು ಗಮನಿಸಿದರೆ, ಬುದ್ಧನ ತತ್ತ್ವಜ್ಞಾನ ದೇಹ ಆತ್ಮಗಳೆರಡನ್ನೂ ಒಪ್ಪಿ ಆತ್ಮಾನಂದಕ್ಕೂ ಮನ್ನಣೆ ನೀಡಿ, ಮಾನವತಾವಾದವನ್ನು ಎತ್ತಿಹಿಡಿಯುತ್ತದೆ. ಬಸವಣ್ಣನವರ ವಿಚಾರಧಾರೆ ದೇಹ, ಆತ್ಮ ಮತ್ತು ಪರಮಾತ್ಮ ಮೂರನ್ನೂ ಒಪ್ಪಿ ದೇಹ-ಮನ- ಆತ್ಮಗಳ ಹಿತಾಸಕ್ತಿಯೊಡನೆ ದೈವೀಕಾರುಣ್ಯಕ್ಕೂ ಸ್ಥಾನಕೊಡುವ ಸೇಶ್ವರವಾದಿ ವಿಚಾರಧಾರೆಯಾಗುತ್ತದೆ.
ಕಾರ್ಲಮಾರ್ಕ್ಸನ ಸಿದ್ಧಾಂತದಲ್ಲಿ ಒತ್ತಾಯಕ್ಕೆ ಸ್ಥಾನವಿದ್ದರೆ ಬಸವಣ್ಣನವರ ವಿಚಾರಧಾರೆಯಲ್ಲಿ ದಾಸೋಹಕ್ಕೆ ಸ್ಥಾನವಿದೆ. ಮಾರ್ಕ್ಸ್ನ ದೃಷ್ಟಿಯಲ್ಲಿ ದೇವರು ಕಲ್ಪನೆಯಾದರೆ ಬಸವಣ್ಣನ ದೃಷ್ಟಿಯಲ್ಲಿ ಅದು ಪರಮ ಸತ್ಯ. ಸಾಧನವು ಹೇಗಿದ್ದರೇನು ಸಾಧ್ಯ ಚೆನ್ನಾಗಿದ್ದರೆ ಸಾಕು ಎಂಬುದು ಮಾರ್ಕ್ಸ್ ಸಿದ್ಧಾಂತವಾದರೆ, ಸಾಧ್ಯವು ಚೆನ್ನಾಗಿ ಆಗಬೇಕಾದರೆ ಸಾಧನವು ಚೆನ್ನಾಗಿ ಇರಲೇಬೇಕು ಎಂಬುದು ಬಸವಣ್ಣನ ವಿಚಾರಧಾರೆ. ಬಲಪ್ರಯೋಗದಿಂದ ವ್ಯಕ್ತಿಯನ್ನು ಪರಿವರ್ತಿಸಬೇಕು ಎಂಬುದು ಮಾರ್ಕ್ಸ್ನ ವಿಚಾರಧಾರೆಯಾದರೆ ಹೃದಯ ಪರಿವರ್ತನೆ, ನೈತಿಕ ಜಾಗೃತಿಯ ಮೂಲಕ ಪರಿವರ್ತನೆಯನ್ನು ಮಾಡಬೇಕೆಂಬುದು ಬಸವಣ್ಣನ ವಿಚಾರಧಾರೆ. ಮಾರ್ಕ್ಸನ ವಾದದ ದೃಷ್ಟಿಯಿಂದ ಕರ್ಮ, ದುಡಿತಕ್ಕೆ ಮಾತ್ರ ಸ್ಥಾನ. ಬಸವಣ್ಣನ ದೃಷ್ಟಿಯಲ್ಲಿ ಕರ್ಮ ದುಡಿತದೊಡನೆ ನೈತಿಕ ಮತ್ತು ಅಧ್ಯಾತ್ಮಿಕ ಸಾಧನೆಗೂ ಸ್ಥಾನ. ತನು-ಮನ-ಆತ್ಮಗಳೆಂಬ ಮೂರು ಘಟಕಗಳನ್ನು ಒಪ್ಪುವ ಕಾರಣ ಕಾಯಕ-ಕಲೆ- ಉಪಾಸನೆಗಳೆಂಬ ಮೂರು ಸಾಧನೆಗಳನ್ನು, ಭೌತಿಕಾನಂದ ಬೌದ್ಧಿಕಾನಂದ ಮತ್ತು ಆತ್ಮಾನಂದ ಎಂಬ ಮೂರು ಸಿದ್ಧಿಗಳನ್ನು ಮನ್ನಿಸುವರು. ಮಾರ್ಕ್ಸನ ಪ್ರಕಾರ ಮಾನವನ ಗಳಿಕೆಯಲ್ಲಿ ಜೀವನಾವಶ್ಯಕತೆಗಳನ್ನು ಪೂರೈಸಿದ ಬಳಿಕ ಉಳಿಯುವುದು ಸರ್ಕಾರದ, ರಾಜ್ಯದ ಸೊತ್ತು. ಬಸವಣ್ಣನ ಪ್ರಕಾರ ಸರಳವಾದ ಜೀವನವನ್ನು ನಡೆಸಿ ಉಳಿಯುವ ಗಳಿಕೆಯು ಸಮಾಜದ, ದೇವರ ಸೊತ್ತು. ಅದನ್ನು ಯಾರಾದರೂ ಒತ್ತಾಯದಿಂದ ಕಿತ್ತುಕೊಡುವುದಲ್ಲ, ಸ್ವಯಂ ಇಚ್ಛೆಯಿಂದ ದಾಸೋಹಂ ಭಾವದಿಂದ ಸಮಾಜದ ಏಳೆಗಾಗಿ ತಾನೇ ಸಲ್ಲಿಸಬೇಕು. ಕಾರ್ಲ್ಮಾರ್ಕ್ಸ್ ಸಮಾಜಶಾಸ್ತ್ರದಲ್ಲಿ ವ್ಯಕ್ತಿ ಸ್ವಾತಂತ್ರಕ್ಕೆ ಅವಕಾಶವೇ ಇಲ್ಲ. ಬಸವಣ್ಣನ ಸಮಾಜಶಾಸ್ತ್ರದಲ್ಲಿ ವ್ಯಕ್ತಿ ಸ್ವಾತಂತ್ರಕ್ಕೆ ವಿಪುಲವಾದ ಅವಕಾಶವಿದೆ. ಸಾಮ್ಯವಾದಿ ಸಮಾಜ ರಚನೆಯಲ್ಲಿ ಕ್ರಾಂತಿ ಮೊದಲಿಗೆ, ವಿಚಾರ ಪರಿವರ್ತನೆ ನಂತರ. ಬಸವಣ್ಣನ ವಿಚಾರಧಾರೆಯ ಪ್ರಕಾರ ವಿಚಾರ ಪರಿವರ್ತನೆ ಮೊದಲಿಗೆ, ಕ್ರಾಂತಿ ನಂತರ, ಮನುಷ್ಯನಲ್ಲಿ ಮೊದಲು ವಿಚಾರ ಪರಿವರ್ತನೆ ಸಂಭವಿಸಿದರೆ ಸಮಾಜದಲ್ಲಿ ಕ್ರಾಂತಿ ಆಗಿಯೇ ತೀರುವುದು ಎಂಬುದು ಬಸವಣ್ಣನವರ ಸಿದ್ಧಾಂತ.
ಬಸವಣ್ಣನವರದು ಬಹುಮುಖಿಯಾದ ಸರ್ವಾ೦ಗ ಪರಿಪೂರ್ಣ ವ್ಯಕ್ತಿತ್ವ ಸಾಧನೆಯೂ ಅಷ್ಟೇ ಬಹುಮುಖಿಯಾದುದು. ಅದನ್ನೇ ಪ್ರೋಫೆಸರ್ ಆರ್.ಕೆ.ಶ್ರೀಕಂಠನ್ ಹೇಳುತ್ತಾರೆ . "It is no exaggeration to say that the message of Basava is like a reservoir into which all previous thoughts flowed in and from which all later thoughts flowed out. Kind like Buddha, simple like Mahavira, gentle like Jesus, bold like Mohammad Basava strikes us as almost as a wonder of creation. But what attracts us-most to him are those teachings of his in which he anticipated the greatest of modern thinkers Karl Marx and Mahatma Gandhi". ಬಸವಣ್ಣನವರು ಶ್ರೀ ಅರವಿಂದರಂತೆ ಯೋಗಿಗಳು, ರಾಮಕೃಷ್ಣ ಪರಮಹಂಸರಂತೆ ಅನುಭಾವಿಗಳು. ಗಾಂಧೀಜಿಯಂತೆ ಸಮಾಜ ಸುಧಾರಕರು. ಕಾರ್ಲ್ಮಾರ್ಕ್ಸನಂತೆ ಅರ್ಥಶಾಸ್ತ್ರಜ್ಞರು, ಮಜ್ಜನಿಯಂತೆ ರಾಜಕಾರಣ ಮುತ್ಸದ್ಧಿಗಳು ಮಹಾವೀರನಂತೆ ಅಹಿಂಸಾವಾದಿಗಳು, ಬುದ್ಧನಂತೆ ಮಾನವತಾವಾದಿಗಳು, ಏಸುಕ್ರಿಸ್ತನಂತೆ ದಯಾಶೀಲರು, ಶಂಕರಾಚಾರ್ಯರಂತೆ ತತ್ತ್ವಜ್ಞಾನಿಗಳು. ಸೃಷ್ಟಿಕರ್ತನ ಒಂದು ಅಪೂರ್ವ ಕೊಡುಗೆಯಾಗಿ ಬಸವಣ್ಣನವರು ಶೋಭಿಸುತ್ತಾರೆ.
ತಂದೆಯರಲ್ಲಿ ಮೂರು ಪ್ರಕಾರ: ಒಬ್ಬ ತನಗೇ ಹೊಟ್ಟೆ-ಬಟ್ಟೆಗಿಲ್ಲದೆ ದರಿದ್ರನಾಗಿ, ತನ್ನಾನಂತರದವರಿಗೂ ಏನೂ ಉಳಿಸದೆ ಹೋಗುವವನು-ಇನ್ನೊಬ್ಬ ತನ್ನ ಹೊಟ್ಟೆ-ಬಟ್ಟೆಗೆ ಕೊರತೆಯಿಲ್ಲದಂತೆ ನೆಮ್ಮದಿಯಾಗಿ ಬಾಳಿ, ನಂತರದವರಿಗೆ ಏನೂ ಉಳಿಸದೆ ಹೋಗುವವ. ಇನ್ನೊಬ್ಬ ತಾನು ಕಷ್ಟಪಟ್ಟು ಗಳಿಸಿ, ನೆಮ್ಮದಿಯಾಗಿ ಬಾಳಿ ನಂತರದವರಿಗೂ ಗಂಟನ್ನು ಉಳಿಸಿ ಹೋಗುವವನು. ಈ ಮೂರರಲ್ಲಿ ಮೂರನೆಯವನು ಉತ್ತಮ ತಂದೆ ಎಂದು ಎರಡನೆಯವನು ಮಧ್ಯಮನೆಂದು, ಮೊದಲನೆಯವನು ಕನಿಷ್ಟನೆಂದು ಹೇಳಬೇಕಾಗುತ್ತದೆ. ಅದೇ ರೀತಿ ಭವ ಜೀವಿಯು ತನ್ನ ಜೀವನದಲ್ಲಿ ಏನನ್ನೂ ಸಾಧಿಸದೆ ಕೇವಲ ತಾನು ಅಪೂರ್ಣವಾಗಿ ಮರ್ತ್ಯದ ಬಾಳ್ವೆಯನ್ನು ಪೂರೈಸುವನು. ಜ್ಞಾನಿಯು ಆತೋದ್ದಾರದ ಮೂಲಕ ತನ್ನ ಬದುಕನ್ನು ಪೂರ್ಣಗೊಳಿಸಿಕೊಂಡರೂ, ಇನ್ನಾವ ಸಂದೇಶವನ್ನೂ ಬೇರಿತರರಿಗೆ ಬಿಟ್ಟು ಹೋಗನು. ಆದರೆ ಕೆಲವು ದಾರ್ಶನಿಕರು, ಪ್ರವಾದಿಗಳು ಮಾತ್ರ ಆತ್ರೋದ್ಧಾರ ಮಾಡಿಕೊಂಡು ತಾವು ಪರಿಪೂರ್ಣರಾಗುವುದೇ ಅಲ್ಲದೆ, ಜಗತ್ತು ನಡೆದು ಬರಲಿಕ್ಕೆ ಸಂದೇಶವನ್ನು ಇತ್ತು ಹೋಗುವರು. ಅಂಥ ಸಂದೇಶಗಳು, ಬಾಳಿನ ಬಟ್ಟೆಯಲ್ಲಿ ಮೈಲಿಗಳಲ್ಲುಗಳಂತೆ ಕೆಲಸ ಮಾಡುವವು. ಬದುಕಿನ ಅಂಧಕಾರದ ಸಮಯದಲ್ಲಿ ದಾರಿ ದೀಪಗಳಂತೆ ಸಹಕಾರಿಯಾಗುವವು. ಇಂಥ ಬದುಕನ್ನು ಬದುಕಿದ ಮಹಾಪ್ರವಾದಿ ಬಸವಣ್ಣನವರು. ಅವರ ಬದುಕೊಂದು ಕ್ರಾಂತಿಯ ಮಹಾನ್ ಕಥೆ ; ಶಾಂತಿಯ ಸಂದೇಶ. ಅವರ ಕಥೆ ಕೊಂದವರ ಕಥೆಯಲ್ಲಿ ಉಳಿಸಿದವರ ಕಥೆ, ಶಾಂತಿಯ ಸಂದೇಶ. ಭಾರತದಲ್ಲಿ ಲಭ್ಯವಿರುವ ಬಹುಪಾಲು ಕಾವ್ಯ-ಪುರಾಣಗಳು, ಯುದ್ಧ-ಹೋರಾಟಗಳ ಮತ್ತು ಕೊಂದವರ ಕಥೆಗಳನ್ನು ಬಿತ್ತರಿಸಿದರೆ, ಬಸವಣ್ಣನವರ ಬದುಕು ಕೊಂದವರ ಕಥೆಯಲ್ಲಿ ಜಗತ್ತನ್ನು ಉಳಿಸಿದ ಮಹಾಪುರುಷನ ಕಥೆ. ರಾಕ್ಷಸಿಪ್ರವೃತ್ತಿಯವರನ್ನು ಪರಿವರ್ತಿಸಿದ ಪ್ರಯತ್ನ.
ಧಾರ್ಮಿಕ ರಂಗದಲ್ಲಿ ನಾವು ಹಲವರನ್ನು ಗುರುತಿಸಬಹುದು. ತತ್ತ್ವಜ್ಞಾನಿ, 'ಕೇವಲಾನುಭವಿ, ನಿಶ್ಯಬ್ದ ಬ್ರಹ್ಮಿ ಮತ್ತು ದಾರ್ಶನಿಕ ಎಂಬುದಾಗಿ, ತತ್ತ್ವಜ್ಞಾನಿಯೆಂದರೆ ಪಾರಲೌಕಿಕ ವಿಷಯಗಳ ಬಗ್ಗೆ ಸಾಕಷ್ಟು ಪರಿಜ್ಞಾನವಿದ್ದವನು; ತರ್ಕಬದ್ಧವಾಗಿ ವಿಷಯಗಳ ವಿಶ್ಲೇಷಣೆ ಮಾಡಬಲ್ಲವನು. ಆದರೆ ಅವನದು ಶಾಬ್ದಿಕ ಜ್ಞಾನವೇ ವಿನಾ ಅನುಭವ ಜ್ಞಾನವಲ್ಲ. ಇನ್ನು ಕೆಲವರು ಕೇವಲಾನುಭವಿಗಳು; ಅಂದರೆ ದಿವ್ಯವಾದ ಅನುಭೂತಿಯನ್ನು ಹೊಂದಿರುತ್ತಾರೆ. ಆದರೆ ದೇವರು-ಆತ್ಮ-ಮುಕ್ತಿ ಈ ಬಗ್ಗೆ ವಿಶೇಷವಾದ ಅಧ್ಯಯನವಾಗಲೀ ಅರಿವಾಗಲೀ ಇರದು. ಇದಕ್ಕೊಂದು ಸಾಮಾನ್ಯ ಉದಾಹರಣೆ ಕೊಡಬಹುದು. ಕೆಲವು ಪಟ್ಟಣದ ಹುಡುಗಿಯರಿಗೆ ಅಡಿಗೆ ಮಾಡುವ ಕಲೆಯೇ ಗೊತ್ತಿರದು. ಮನೆಯಲ್ಲಿ ಅವರನ್ನು ಮುದ್ದಾಗಿ, ಸ್ವಚ್ಛಂದವಾಗಿ ಬೆಳೆಸಿರುತ್ತಾರೆ. ಲಗ್ನ ಮಾಡಿಕೊಡುತ್ತಿದ್ದಂತೆಯೇ ಅವರು ಕೆಲಸ ಮಾಡಲು ಬರದೆ ದಿಗ್ರಾಂತರಾಗುತ್ತಾರೆ. ಆಗ ಪಾಕ ಶಾಸ್ತ್ರದ ವಿವರಗಳನ್ನೊಳಗೊಂಡ ಪುಸ್ತಕದ ನೆರವಿನಿಂದ ಅಡಿಗೆ ಮಾಡಲು ಆರಂಭಿಸುತ್ತಾರೆ. ಅಕಸ್ಮಾತ್ ಮುದ್ರಾರಾಕ್ಷಸನ ದೋಷದಿಂದಾಗಿ, “ಎರಡು ಚಮಚೆ ಉಪ್ಪನ್ನು ಹಾಕಿ'' ಎಂದು ಎರಡು ಬಾರಿ ಮುದ್ರಣವಾಗಿದ್ದರೆ, ಅದರಂತೆ ಎರಡು ಬಾರಿ ಉಪ್ಪನ್ನು ಹಾಕಿಯೇ ಬಿಡುತ್ತಾರೆ. ಇದು ಶಬ್ದ
ಜ್ಞಾನವೇ ವಿನಾ ಅನುಭವ ಜ್ಞಾನವಲ್ಲ.
ಇದಕ್ಕೊಂದು ನಗೆಹನಿ ಉದಾಹರಿಸಬಾರದು. ಓರ್ವ ಯುವತಿ ಪಾಕಶಾಸ್ತ್ರದ ಪುಸ್ತಕ ಇರಿಸಿಕೊಂಡು ಅಳತೆಗಳನ್ನು, ಗಡಿಯಾರವನ್ನು ಇರಿಸಿಕೊಂಡು ಅಡಿಗೆ ಮಾಡುತ್ತಿದ್ದಳು. '' ಒಲೆಯ ಮೇಲೆ ಅಷ್ಟು ನೀರಿಡಿ ಅದರಲ್ಲಿ ಇಂಥ ಪ್ರಮಾಣದಲ್ಲಿ ಇಂಥ ವಸ್ತು ಹಾಕಿ”. ಹೀಗೆ ಓದಿಕೊಳ್ಳುತ್ತ ಅಡಿಗೆ ಮಾಡಿದಳು. ಆದರೆ ಸಾರು ತಯಾರಾಗಲೇ ಇಲ್ಲ: ಕಾರಣವೆಂದರೆ ಆಕೆ ಉರಿ ಇಡುವುದನ್ನೇ ಮರೆತಿದ್ದಳು. ಪುಸ್ತಕದಲ್ಲಿ ಉರಿ ಹಾಕುವ ಬಗ್ಗೆ ಬರೆದಿರಲಿಲ್ಲ. ಕೇವಲ ಶಬ್ದ ಜ್ಞಾನದ ಹಣೆಬರಹ ಇಷ್ಟೆ!
ಇನ್ನು ಕೆಲವು ಹೆಣ್ಣುಮಕ್ಕಳಿಗೆ, ಮುಖ್ಯವಾಗಿ ಶಾಲೆ ಕಲಿಯದವರಿಗೆ ಅಡಿಗೆಯಲ್ಲಿ ವಿಶೇಷ ಪರಿಣತಿ ಇದ್ದರೂ ಸಹ, ಅದರ ಶಾಸ್ತ್ರೀಯ ಜ್ಞಾನವಿರದು. ಕೇವಲ ಕಣ್ಣಳತೆಯ ಮೇಲೆಯೇ ರುಚಿಕಟ್ಟಾದ ಅಡಿಗೆ ಮಾಡುತ್ತಾರೆ. "ನೀನು ಎಷ್ಟೆಷ್ಟು ಪ್ರಮಾಣದಲ್ಲಿ ಹಾಕಿದೆ? “ಎಂದರೆ, ಅದೆಲ್ಲ ನನಗೆ ತಿಳಿಯಲ್ಲ.'' ಎನ್ನುತ್ತಾರೆ. ಇದರಂತೆ ಕೇವಲಾನುಭವಿಗಳು. ಜಪತಪ ಸಾಧನೆ ಮಾಡಿ ದಿವ್ಯಾನುಭೂತಿ ಹೊಂದಿರುತ್ತಾರೆ. ಅವರ ಸಾಧನೆ-ಸಿದ್ಧಿಗಳ ಬಗ್ಗೆ ಪ್ರಶ್ನಿಸಿದರೆ ಉತ್ತರಿಸಲು ಅಸಮರ್ಥರಾಗುತ್ತಾರೆ.
ಇನ್ನು ಕೆಲವರಿಗೆ ಅಡಿಗೆ ಬಗ್ಗೆ ಪರಿಜ್ಞಾನವಿರುತ್ತದೆ, ಅಡಿಗೆ ಮಾಡಬಲ್ಲವರೂ ಆಗಿರುತ್ತಾರೆ. ಆದರೆ ಮಾಡಿದ ಅಡಿಗೆಯನ್ನು ಸಮರ್ಪಕವಾಗಿ ನೀಡುವ ಜಾಣ್ಮೆಯಿರದು. ಪಾಕ ಗೃಹದಲ್ಲಿ ತಾವು ತಯಾರಿಸಿಟ್ಟ ಅಡಿಗೆ ಸಾಕಷ್ಟಿದ್ದರೂ ನೀಡುವ ಕಲೆ ಇಲ್ಲದ್ದಕ್ಕೆ ಮನಸ್ ತೃಪ್ತಿಯಾಗುವಂತೆ ಊಟಕ್ಕೆ ನೀಡಲಾರರು. ಹಾಗೆಯೇ ಕೆಲವರಿಗೆ ತಾತ್ವಿಕ ಜ್ಞಾನ, ದಿವ್ಯಾನುಭೂತಿ ಎರಡೂ ಇದ್ದರೂ ಬರವಣಿಗೆ ಅಥವಾ ವಾಣಿಯ ಮೂಲಕ ತಂತಮ್ಮ ಅನುಭವವನ್ನು ಚಿತ್ರಿಸುವ, ಬಿತ್ತರಿಸುವ ಸಾಮರ್ಥ್ಯ ಇರದ ಕಾರಣ ಅವರ ಜ್ಞಾನಾನುಭವಗಳು ಇನ್ನಿತರರಿಗೆ ಅರಿವು- ಆನಂದವನ್ನೀಯಲಾರವು.
ಹೇಗೆ ಓರ್ವ ಸ್ತ್ರೀಯಲ್ಲಿ ಅಡಿಗೆಯ ಬಗ್ಗೆ ಪ್ರಮಾಣಬದ್ಧ ಅರಿವು, ಮಾಡುವ ಕಲೆ, ಬಡಿಸುವ ಕಲೆ ಇದ್ದಾಗ ಉಣ್ಣುವವರಿಗೆ ಸಂತಪ್ತಿಯೋ ಹಾಗೆ ದಾರ್ಶನಿಕನ ಜೀವನದಿಂದ ಇನ್ನಿತರರಿಗೆ ಅರಿವು- ಆನಂದಗಳ ಪ್ರಾಪ್ತಿ, ಈ ದಾರ್ಶನಿಕರಲ್ಲಿ ಶಾಸ್ತ್ರೀಯವಾದ ವಿದ್ವತ್ತು ಇರುತ್ತದೆ. ಅದನ್ನು ಸ್ವಾನುಭಾವದಿಂದ ಅಳವಡಿಸಿಕೊಂಡ ಕಾರಣ ಅನುಭೂತಿಯೂ ಇರುತ್ತದೆ. ತಮ್ಮ ಅರಿವು- ಅನುಭವಗಳನ್ನು ಸಾಹಿತ್ಯ ಹಾಗೂ ವಾಣಿಯ ರೂಪದಲ್ಲಿ ನೀಡುವ ಕಾರಣ ಇನ್ನಿತರರಿಗೆ ಉತ್ಕೃಷ್ಟ ಸಂದೇಶ ನೀಡುತ್ತಾರೆ; ಇಂಥ ವ್ಯಕ್ತಿತ್ವ ಹೊಂದಿದವರು ಬಸವಣ್ಣನವರು.
ಅವರು ದೇವರು-ಧರ್ಮ, ಆತ್ಮ ಮುಕ್ತಿ ಈ ಬಗ್ಗೆ ಶಾಸ್ತ್ರಿಯ ಚಿಂತನೆ ಮಾಡಿದವರು, ಚಿಂತನೆಯಿಂದ ಕಂಡುಂಡ ಸತ್ಯವನ್ನೂ ವಚನ ವಾಹ್ಮಯದ ಮೂಲಕ ಸಮರ್ಪಕವಾಗಿ ಎಡೆಮಾಡಿಟ್ಟು ಹೋದವರು. ಅವರು ಕನ್ನಡದಲ್ಲಿ ದ್ವೀಪ ಸಂಭವದಂತೆ ತೋರುವ ವಚನ ವಾಹ್ಮಯದ ನಿರ್ಮಾಪಕರಾದರು.
ನಮ್ಮ ದೇಶ- ಭಾಷೆಗಳಲ್ಲಿ ಆ ವರೆಗೆ ಇದ್ದ ಸಾಹಿತ್ಯ ಎರಡು ಬಗೆಯದು, ೧. ಕೈತೊಳೆದು ಮುಟ್ಟುವ ಮಡಿವಂತ ಸಾಹಿತ್ಯ. ೨. ಇನ್ನೊಂದು ಮುಟ್ಟಿ ಕೈತೊಳೆಯುವ ಅಶ್ಲೀಲ ಸಾಹಿತ್ಯ ಧರ್ಮ- ಅಧ್ಯಾತ್ಮಗಳ ನೆಲೆಯಾಗಿದ್ದರೂ ಸಹ ವಿಧಿ-ನಿಷೇಧಗಳನ್ನು ಒಳಗೊಂಡು ಅವರಿಗಿದು ನಿಷಿದ್ಧ ಅವರದನ್ನು ಮುಟ್ಟತಕ್ಕದಲ್ಲ. ಇವರಿದನ್ನು ಓದತಕ್ಕದ್ದಲ್ಲ' ಎಂದು ಕಟ್ಟುಕಟ್ಟಳೆ ಹಾಕಿದ್ದ ಮಡಿವಂತ ಸಾಹಿತ್ಯ ಒಂದು ಕಡೆ. ಶೃಂಗಾರರಸ ಪ್ರಧಾನವಾದ ಅಶ್ಲೀಲ ಸಾಹಿತ್ಯ ಇನ್ನೊಂದೆಡೆ. ವಚನಸಾಹಿತ್ಯ ಶ್ರೀಸಾಮಾನ್ಯನ ಹೃದಯವನ್ನು ಮಡಿಮಾಡುವ ದಾರ್ಶನಿಕ ದೇವಗಂಗೆ. ಇದು ಕೈತೊಳೆದು ಮುಟ್ಟುವ ಮಡಿವಂತ ಸಾಹಿತ್ಯವೂ ಆಗದೆ, ಮುಟ್ಟ ಕೈತೊಳೆಯುವ ಅಶ್ಲೀಲ ಸಾಹಿತ್ಯವೂ ಆಗದೆ ಮನದ ಮೈಲಿಗೆಯ ತೊಳೆವ ಅಪೂರ್ವ ವಾಙ್ಮಯವಾಯಿತು.
ಶ್ರೀ ಸಾಮಾನ್ಯನ ಭಾಷೆಯನ್ನು ಪ್ರವಹನ ಮಾಧ್ಯಮವಾಗಿ ಮಾಡಿಕೊಂಡು ಬಸವಣ್ಣನವರು "ತಿಳಿಯುವ ಹಾಗೆ" ಹೇಳಿದರು ವಚನಗಳ ಮೂಲಕ.
೧. ಅರ್ಥವಾಗುವಂತೆ
೨. ಮನಸ್ಸು ತಿಳಿಯುವ ಹಾಗೆ-ಶುದ್ಧಿಯಾಗುವ ಹಾಗೆ
೩. ತನ್ನನ್ನು ತಾನು ತಿಳಿಯುವ ಹಾಗೆ.
ನೆಲದ ಭಾಷೆಯನ್ನು ದೇವಭಾಷೆಯನ್ನಾಗಿ, ಆಡುವ ಮಾತನ್ನು ಮೃಡನ ಮಾತಾಗಿ, ಮಾತೃಭಾಷೆಯನ್ನು ಶಿವವಾಣಿಯನ್ನಾಗಿ ಮಾಡಿದ ಮಹಾಪುರುಷ ಬಸವಣ್ಣನವರು. ಅರವತ್ತು ಸಾವಿರ ಮಂದಿ ಸಗರರು ಶಾಪಗ್ರಸ್ತರಾಗಿ, ಭಸ್ತ್ರೀಭೂತರಾಗಿ ಇದ್ದಾಗ ಅವರ ಮೇಲೆ ದೇವಲೋಕದ ಗಂಗೆಯನ್ನು ಹರಿಸಿ ಅವರೆಲ್ಲರಿಗೆ ಪುನರ್ಜನ್ಮವನ್ನು ಭಗೀರಥ ನೀಡಿದಂತೆ, ಶತ ಶತಮಾನಗಳಿಂದ ಶೋಷಣೆಗೆ ಸಿಕ್ಕಿ ಭಸ್ಮೀ ಭೂತರಾಗಿದ್ದ ದೀನ ದಲಿತರನ್ನು, ಪಾಪಿ-ಪತಿತರನ್ನು ವಚನ ಸಾಹಿತ್ಯ ಗಂಗಾ ಪ್ರವಹನದಿಂದ ಪುನರ್ಜನ್ಮ ನೀಡಿ ಮೇಲೆತ್ತಿದ ಭಗೀರಥ ಬಸವಣ್ಣನವರು. ಪಾಂಡಿತ್ಯ ಪೂರ್ಣ ಭಾಷೆ, ಗಡುಸಾದ ಛಂದಸ್ಸು, ಅರ್ಥವಾಗದ ಉದಾಹರಣೆ ಉಪಮೆ ಕೊಡದೆ ಎಲ್ಲರಿಗೂ ಅರ್ಥವಾಗುವ ಭಾಷೆಯನ್ನು ಬಳಸಿ, ದಿನನಿತ್ಯದ ಜೀವನದಲ್ಲಿ ಎದುರಾಗುವ ಉಪಮೆಗಳನ್ನು ಉಪಯೋಗಿಸಿ ಜನ ಬದುಕುವ, ಜಗ ಬದುಕುವ ಸಾಹಿತ್ಯವನ್ನು ಕೊಟ್ಟರು. ಹೀಗೆ ಎಲ್ಲರಿಗೂ ತಿಳಿಯುವ ಸಾಹಿತ್ಯವನ್ನು ನೀಡಿದರು.
ವಚನ ಸಾಹಿತ್ಯದ ಗುರಿ ಎಲ್ಲರೂ ತಿಳಿಯಬೇಕು. ಅರ್ಥಾತ್ ಶುದ್ಧಿಕರಣ ಹೊಂದಬೇಕು; ವ್ಯಕ್ತಿ ಮತ್ತು ಸಮಾಜಗಳು ಎರಡು ಮುಖ್ಯ ಘಟಕಗಳು, ವ್ಯಕ್ತಿಯ ಜೀವನ ತಿಳಿಯಾಗದ ಹೊರತು, ಆಚಾರ-ವಿಚಾರ ಶುದ್ಧಿಯಾಗದ ಹೊರತು ಅವನ ಬದುಕು ಸಾರ್ಥಕವಾಗದು. ಸಮಾಜದಲ್ಲಿ ಆಚಾರ- ವಿಚಾರ ಅಳವಟ್ಟು ಭ್ರಷ್ಟಾಚಾರ, ಶೋಷಣೆ, ಆಚಾರ-ವಿಚಾರ ಪಾಪಮಯ ವೃತ್ತಿ ತೊಲಗದ ಹೊರತು, ಜನಾಂಗ ನಿರ್ಮಾಣವಾಗಲಾರದು. ಆದ್ದರಿಂದ ವ್ಯಕ್ತಿ ಮತ್ತು ಸಮಾಜಗಳ ತಿಳಿಯುವಿಕೆ (Filteration) ಅತ್ಯಂತ ಅವಶ್ಯಕ.
ವಚನ ಸಾಹಿತ್ಯದ ಗುರಿ 'ತನ್ನನ್ನು ತಾನು ತಿಳಿಯುವುದು' ಅಂದರೆ ಸ್ವರೂಪ ಚಿಂತನೆ ಮತ್ತು ಸ್ವರೂಪ ಸಾಕ್ಷಾತ್ಕಾರ, ಸಾಹಿತ್ಯ, ದರ್ಶನ, ಧರ್ಮ, ಶುದ್ದೀಕರಣ ಇವೆಲ್ಲ ಸಾಧನಗಳು (Means) ಮಾತ್ರ, ಇವುಗಳ ಗುರಿ ತನ್ನನ್ನು ತಾನು ತಿಳಿಯುವುದು. ಹೀಗೆ ವ್ಯಕ್ತಿಯು ಉದ್ಧಾರವಾಗಬೇಕಾದರೆ ಸಮಾಜ ಜೀವನ ಪೂರಕವಾಗಬೇಕು. ಸಮಾಜ ಜೀವನ ಉನ್ನತವಾಗಬೇಕಾದರೆ ವ್ಯಕ್ತಿಯು ಶುದ್ದೀಕರಣ ಹೊಂದಬೇಕು. ಕೇವಲಾಧ್ಯಾತ್ಮವಾದಿಗಳಂತೆ, ಸಮಾಜದ ಅಭಿವೃದ್ಧಿಯನ್ನು ಕಡೆಗಣಿಸಿ ಒಬ್ಬ ಆತ್ಮಜ್ಞಾನಿಯಾಗಬೇಕಾಗಿಲ್ಲ; ಸಾಮ್ಯವಾದಿ ಸಮಾಜ ರಚನೆಯಲ್ಲಿ ಕಾಣಬರುವಂತೆ ಸಮಾಜದ ಅಭಿವೃದ್ಧಿಗಾಗಿ ವ್ಯಕ್ತಿ ತನ್ನ ವೈಯಕ್ತಿಕ ಅನಿಸಿಕೆ. ಆಕಾಂಕ್ಷೆಗಳನ್ನು ಬಲಿಗೊಡಬೇಕಾಗಿಲ್ಲ: ಇಂಥದೊಂದು ಸಮತೂಕದ ವೈಚಾರಿಕ ದೃಷ್ಟಿಕೋನವನ್ನು ಬಸವಣ್ಣನವರು ಪ್ರತಿಪಾದನೆ ಮಾಡಿದರು.
ಬಸವಣ್ಣನವರು ಅತ್ಯುತ್ತಮ ಸಮಾಜ ಸೇವಕರು, ಮಾತ್ರವಲ್ಲ ಸಮಾಜ ಸುಧಾರಕರು, ಇಷ್ಟೇ ಅಲ್ಲ ಸಮಾಜ ನಿರ್ಮಾಪಕರು. ಉದಾಹರಣೆಯೊಂದರ ಮೂಲಕ ಇದನ್ನು ವಿವರಿಸುವೆನು. ಸರ್ಕಾರದ ಅರಣ್ಯ ಭೂಮಿಯನ್ನು ಓರ್ವ ವ್ಯಕ್ತಿ ಪಡೆದುಕೊಂಡು ಕಾಡು ಕಡಿದು, ಸುಂದರ ತೋಟವನ್ನಾಗಿ ರೂಪಿಸುವನು. ಅವನು ಆ ತೋಟದ ನಿರ್ಮಾಪಕ, ಅವನ ಮಗ ತಂದೆ ಮಾಡಿಕೊಟ್ಟ ತೋಟವನ್ನು ಸಂರಕ್ಷಿಸುತ್ತ ಆಗಾಗ ಬೇಲಿ ಕಿತ್ತಾಗ ಬೇಲಿ ಹಾಕಿಸುತ್ತ ಮೇಲುಸ್ತುವಾರಿ ಮಾಡುವನು. ಅವನು ಆ ತೋಟದ ಸುಧಾರಕ. ತೋಟವನ್ನು ಕಾಯುವ ಆಳು ತೋಟದ ರಕ್ಷಣೆ ಮಾಡುತ್ತಲಿರುವನು, ಅವನು ತೋಟವನ್ನು ವಿಸ್ತರಿಸುವುದೂ ಇಲ್ಲ. ತಾನಾಗಿ ಅದರ ಲಾಭ ಹಾನಿ ಬಗ್ಗೆ ಚಿಂತಿಸುವುದೂ ಇಲ್ಲ. ಕೇವಲ ಕಾವಲು ಕಾಯುತ್ತಲಿರುವನು. ಅವನು ತೋಟದ ಸೇವಕ ಮಾತ್ರ. ಅದೇ ರೀತಿ ಕೆಲವರು ಸಮಾಜದಲ್ಲಿರುವ ಲೋಪ- ದೋಷ, ಮೂಢನಂಬಿಕೆ- ಜಾತೀಯತೆ ಈ ಬಗ್ಗೆ ಚಿಂತಿಸಲು ಹೋಗದೆ, ತಿದ್ದುವ ಯತ್ನವನ್ನೂ ಮಾಡದೆ ಸೇವೆ ಮಾಡುತ್ತ ಹೋಗುವರು. ದೀನದಲಿತರ ಸೇವೆ, ಅಂಗವಿಕಲರ ಸೇವೆ, ಮುಪ್ಪಿನವರ, ಅನಾಥರ ಸೇವೆ ಗೈಯುತ್ತ ಹೋಗುವರು. ಇವರು ಸಮಾಜದ ಸೇವಕರು. ಬಸವಣ್ಣನವರು ಮಾನವತಾವಾದಿಗಳಾಗಿ, 'ಎಡದ ಕೈಯಲ್ಲಿ ಲಿಂಗಪೂಜೆ, ಬಲದ ಕೈಯಲ್ಲಿ ಜಂಗಮಸೇವೆ' ಹಿಡಿದುಕೊಂಡು, 'ಕನ್ನಡಿಯ (ಲಿಂಗವ) ನೋಡುವಾ ಅಣ್ಣಗಳಿರಾ ಜಂಗಮವ (ಸಮಾಜವು ನೋಡಿರೆ' ಎಂದು ಸಮಾಜದ ಸೇವೆಗೆ ಒತ್ತುಕೊಟ್ಟರು.
ಇಷ್ಟಕ್ಕೆ ಅವರ ಕಾರ್ಯ ಸೀಮಿತವಾಗದೆ ಸಮಾಜ ಸುಧಾರಕರೂ ಆದರು. ದೇವರು ನಿರ್ಮಾಣ ಮಾಡಿದ ಜನಾಂಗದಲ್ಲಿ ಇಲ್ಲದ ಅಡ್ಡಗೋಡೆಗಳನ್ನು ನಿರ್ಮಿಸಿಕೊಂಡು ವರ್ಣ, ವರ್ಗ, ಜಾತಿಗಳ ಆಧಾರದ ಮೇಲೆ ಒಡೆದು ಆಳುವ ನೀತಿಯನ್ನು ವಿರೋಧಿಸಿದರು. ಅವರು ಕೈಗೊಂಡ ಸಮಾಜ ಸುಧಾರಣೆ ಅತ್ಯಂತ ತೀವ್ರವೂ ತೀಕ್ಷವೂ ಆಗಿತ್ತು. ಈ ಹೊತ್ತಿನ ಯಾವ ಸಮಾಜ ಸುಧಾರಕರೂ ಅವರು ಅಂದು ಮಾಡಿದ ಸುಧಾರಣೆಗಿಂತಲೂ ಒಂದು ಹೆಜ್ಜೆ ಮುಂದೆ ಹೋಗಿಲ್ಲ. ಇದು ಅನೇಕ ವಿದ್ವಾಂಸರ ಅಭಿಪ್ರಾಯ. ೧೯೧೮ರಲ್ಲಿ ಬಸವ ಜಯಂತಿಯಂದು The times of India ಪತ್ರಿಕೆಯಲ್ಲಿ ಸರ್ ಜೇಮ್ಸ್ ಕ್ಯಾಂಪ್ ಬೆಲ್ಲರು ಹೀಗೆ ಬರೆದರು:
"It was the distinctive feature of his (Basava's) mission that while illustrious religious and social reformers in India before him had each laid emphasis on one or the other items of religious and social reforms either subordinating more or less other items to it or ignoring them altogether, Basava sketched and boldly tried to work out a large and comprehensive programme of social reform with the elevation and independence of womanhood as its guiding point. Neither the social conferences which are annually held in these days in several parts of India: nor the Indian social reforms can improve upon that programme as to the essentials. The present day social reformer in India is but speaking the language and seeking to en- force the mind of Basava".
“ಬಸವಣ್ಣನವರಿಗೂ ಪೂರ್ವದಲ್ಲಿ ಭಾರತದಲ್ಲಿ ಆಗಿ ಹೋದ ಅನೇಕ ಧರ್ಮ ಮತ್ತು ಸಮಾಜ ಸುಧಾರಕರು ಯಾವುದಾದರೂ ಒಂದು ಧಾರ್ಮಿಕ ಅಥವಾ ಸಾಮಾಜಿಕ ಅಂಶಕ್ಕೆ ಒತ್ತು ಕೊಟ್ಟರು: ಇನ್ನುಳಿದವರನ್ನು ಅದಕ್ಕೆ ಅಧೀನವಾಗಿ ಮಾಡಿದರು ಅಥವಾ ಗೌಣವಾಗಿ ಕಂಡರು: ಕೆಲವು ಅಂಶಗಳನ್ನು ಸಂಪೂರ್ಣವಾಗಿ ಕಡೆಗಣಿಸಿದರು. ಬಸವಣ್ಣನವರಾದರೋ ಅತ್ಯಂತ ಧೈರ್ಯವಾಗಿ ಬೃಹತ್ತಾದ ಮತ್ತು ಸಮಗ್ರವಾದ ಸಮಾಜ ಸುಧಾರಣೆಯ ಕಾರ್ಯಕ್ರಮ ಹಾಕಿಕೊಂಡರು. ಈ ಕಾರ್ಯಕ್ರಮದಲ್ಲಿ ಮುಖ್ಯವಾಗಿ ಸ್ತ್ರೀಯರ ಉತ್ಥಾನ ಮತ್ತು ಸ್ವಾತಂತ್ರ್ಯಕ್ಕೆ ಗಮನ ನೀಡಿದರು. ಇಂದು ವಾರ್ಷಿಕವಾಗಿ ಅಥವಾ ಆಗಾಗ ಭಾರತದಾದ್ಯಂತ ನಡೆಯುವ ಸಮ್ಮೇಳನಗಳಾಗಲೀ ಅಥವಾ ಇಂದಿನ ಭಾರತದ ಸಮಾಜ ಸುಧಾರಕರ ವಿಚಾರಧಾರೆಗಳಾಗಲೀ ಬಸವಣ್ಣನವರು ಹಾಕಿಕೊಂಡ ಆ ಕಾರ್ಯಕ್ರಮಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಲಾರವು. ಭಾರತದ ಇಂದಿನ ಎಲ್ಲ ಸಮಾಜ ಸುಧಾರಕರೂ ಅಂದು ಬಸವಣ್ಣನವರು ಆಡಿದ ಮಾತನ್ನೇ ಇಂದು ಆಡುತ್ತಿದ್ದಾರೆ ; ಅವರ ಮನಸ್ಸಿನ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಯತ್ನಿಸುತ್ತಿದ್ದಾರೆ .''
ಬಹುಶಃ ಇಷ್ಟು ಸಮಗ್ರವಾಗಿ ಸುಂದರವಾಗಿ ಬಸವಣ್ಣನವರ ಕಾರ್ಯಕ್ರಮದ ಭೂಮಕಲ್ಪನೆಯನ್ನು ಇನ್ನಾರೂ ಮಾಡಿಕೊಡಲಾರರು.
ಬಸವಣ್ಣನವರು ಮತ್ತು ಜಗತ್ತು-ಜೀವನದ ಬಗೆಗೆ ಅವರ ದೃಷ್ಟಿಕೋನ
ಮಾನವ ಜನ್ಮವನ್ನು, ಈ ಜಗತ್ತನ್ನು ಬಸವಣ್ಣನವರು ಬಹುವಾಗಿ ಗೌರವಿಸಿದರು. ಇದರ ಪರಿಣಾಮವಾಗಿಯೇ ಅವರು ಆಶಾವಾದಿಗಳಾದರು. ಮನುಷ್ಯ ಯಾವ ಸಿದ್ಧಾಂತ ಒಪ್ಪುವನೋ ಅದಕ್ಕೆ ತಕ್ಕಂತಹ ದೃಷ್ಟಿಕೋನ ಅವನ ಬದುಕಿನಲ್ಲಿ ಬೆಳೆಯುತ್ತದೆ. ಈ ಮನುಜ ಜನ್ಮವು ಅವರ ದೃಷ್ಟಿಯಲ್ಲಿ ವರವಾಗಿ ಕಂಡಿತು. ಸಾಧಕಾವಸ್ಥೆಯಲ್ಲಿದ್ದಾಗ ಮತ್ತು ತಮ್ಮದೇ ಆದ ಒಂದು ಸಿದ್ಧಾಂತ ಇನ್ನೂ ಗಟ್ಟಿಗೊಳ್ಳದೆ (Stabilise) ಇದ್ದಾಗ ಅನ್ಯ ವಿಚಾರಧಾರೆಗಳ ಪ್ರಭಾವದಿಂದ ಈ ಜಗತ್ತು, ಜೀವ ಅಶಾಶ್ವತವಾಗಿ, ದುಃಖಮಯವಾಗಿ ತ್ಯಾಜ್ಯವಾಗಿ ಕಂಡರೂ ಈ ವಿಚಾರಧಾರೆ ಅವರ ಬದುಕಿನಲ್ಲಿ ಹಾಯ್ದು ಹೋದ ಮೋಡದಂತೆ (Passing cloud) ಯೇ ವಿನಾ ಶಾಶ್ವತ ನಂಬಿಕೆಯಲ್ಲ.
'ಎನ್ನನೇಕೆ ಹುಟ್ಟಿಸಿದೆ, ಇಹಲೋಕ ದುಃಖಿಯ ಇಹಲೋಕ ದುಃಖಿಯ ಪರಲೋಕ ದೂರನ?', 'ಸಂಸಾರವೆಂಬುದೊಂದು ಗಾಳಿಯ ಸೊಡರು' ಇತ್ಯಾದಿ ಅನೇಕ ಮಾತುಗಳಲ್ಲಿ ಜೀವನದ ಅನಿತ್ಯತೆಯನ್ನು ಪ್ರತಿಪಾದಿಸಿದರು. ಇದು ತುಂಬಾ ತಾತ್ಕಾಲಿಕವಾದ ಒಂದು ಮನೋಭಾವ. ಒಟ್ಟಾರೆ ದೃಷ್ಟಿಯಿಂದ ನೋಡಿದರೆ 'ಜೀವನ' ಕ್ಕೆ ತುಂಬಾ ಮಹತ್ವದ ಸ್ಥಾನವನ್ನು ಬಸವಣ್ಣನವರು ಕೊಟ್ಟಿದ್ದಾರೆ. ಹಾಗೆಂದೇ ಅವರು ನಿರಾಶಾವಾದಿಗಳಾಗದೆ ಆಶಾವಾದಿಗಳಾಗಿ ಸುಧಾರಣೆಗೆ ತೊಡಗಿದರು. ನಿರಾಶಾವಾದಿಯು ಸಮಾಜದ ಪರಿವರ್ತನೆಯ ಬಗ್ಗೆ ಆಶಾಭಾವನೆ ಹೊಂದಿರುವುದಿಲ್ಲ.
ಜೀವನ ನಿರಾಕರಣ ಸಿದ್ಧಾಂತದ ಪಡಿಯಚ್ಚಿನಲ್ಲಿ ಬೆಳೆದ ಓರ್ವ ಸನ್ಯಾಸಿಗಳುಂಟು. ಅವರು ನಿರುತ್ಸಾಹಿತರಾಗಿ ಹೇಳುತ್ತಾರೆ. “ಏತಕ್ಕಾಗಿ ಸಮಾಜವನ್ನು ತಿದ್ದಲೆತ್ನಿಸಬೇಕು? ಇದು ನಾಯಿಯ ಬಾಲದಂತೆ. ಎಷ್ಟೋ ಪ್ರವಾದಿಗಳು ಸಂತರು ಆಗಿ ಹೋಗಿದ್ದಾರೆ, ಹೋಗುತ್ತಲಿದ್ದಾರೆ. ಒಟ್ಟು ಸುಧಾರಿಸಿಯೇ ಇಲ್ಲ, ಆದ್ದರಿಂದ ಪ್ರಯತ್ನಿಸುವುದೇಕೆ?'' ಆದರೆ ನಾವು ಆಶಾವಾದಿಗಳು. ಇಷ್ಟೆಲ್ಲ ನಿಯಂತ್ರಕ ಶಕ್ತಿಗಳು ಇದ್ದೇ ಸಮಾಜ ಇಂತಹ ದುಃಸ್ಥಿತಿಯಲ್ಲಿದೆ ಎಂದರೆ, ನಿರಾಶರಾಗಿ ಕೈಚೆಲ್ಲಿ ಕುಳಿತರೆ ಎನ್ನು ಯಾವ ಪರಿಸ್ಥಿತಿಗೆ ಇಳಿಯಬಹುದು? ರೋಗಗಳನ್ನು ಸಂಪೂರ್ಣವಾಗಿ ವಾಸಿ ಮಾಡಲು ಸಾಧ್ಯವೇ ಇಲ್ಲ. ಅದಕ್ಕಾಗಿ ಆಸ್ಪತ್ರೆಗಳೇ ಬೇಡ; ಶಾಲೆಗೆ ಸೇರಿದ ವಿದ್ಯಾರ್ಥಿಗಳೆಲ್ಲರೂ ತೇರ್ಗಡೆ ಹೊಂದುವುದಿಲ್ಲ. ಆದ್ದರಿಂದ ಶಾಲೆ ಏಕೆ ಬೇಕು? ಹೀಗೆ ವಿಚಾರ ಮಾಡುತ್ತಾ ಸಾಗಿದರೆ ಬದುಕೇ ದುರ್ಭರವಾದೀತು.
ಬಸವಣ್ಣನವರು ಈ ಜಗತ್ತನ್ನು ಹೇಯ, ಮಿಥ್ಯವೆಂದು ನಿರಾಕರಿಸದೆ, ತಿರಸ್ಕರಿಸದೆ ಕರ್ತನ ಮಹಾಮನೆಯೆಂದು, ಕಮ್ಮಟವೆಂದು ತಿದ್ದಲೆಳಸಿದರು. ಅಂಥ ನಿಸ್ಸಿಮ ಪ್ರಯತ್ನದ ಬಗ್ಗೆ ಶ್ರೀಮದ್ ಅಲ್ಲಮಪ್ರಭುಗಳು ಹೀಗೆ ಹೇಳುತ್ತಾರೆ.
೧. ಮರ್ತ್ಯಲೋಕದ ಮಹಾಮನೆ ಹಾಳಾಗಿ ಹೋಗಬಾರದೆಂದು
ಕರ್ತನಟ್ಟಿದನಯ್ಯಾ ಒಬ್ಬ ಶಿವಶರಣನ;
ಆ ಶರಣ ಬಂದು ಕಲ್ಯಾಣವೆಂಬ ಶಿವಪುರವ ಕೈಲಾಸವನ್ನಾಗಿ ಮಾಡಿ.......
ಮರ್ತ್ಯಲೋಕ ಶಿವಲೋಕವೆರಡಕ್ಕೆ ನಿಚ್ಚಣಿಕೆಯಾದನು. -ಅ.ಪ್ರ.ವ. ೯೫೩.
೨. ರುದ್ರಲೋಕವ ಮರ್ತ್ಯಲೋಕಕ್ಕೆ ತಂದಾತ ನಮ್ಮ ಬಸವಣ್ಣ - ಚನ್ನಬಸವಣ್ಣ ೩೪೫
ಹೀಗೆ ದೈವೀತತ್ತ್ವವನ್ನು ನೆಲೆಗೊಳಿಸಿ ಅಸುರೀಶಕ್ತಿಗಳ ತೀವ್ರತೆ ಕಡಿಮೆ ಮಾಡಲೆತಿಸಿದರು ಬಸವಣ್ಣನವರು.
ಕರಿ ಘನ ಅಂಕುಶ ಕಿರಿದೆನ್ನಬಹುದೆ ? ಬಾರದಯ್ಯ !
ಗಿರಿ ಘನ ವಜ್ರ ಕಿರಿದೆನ್ನಬಹುದೆ ? ಬಾರದಯ್ಯ!
ತಮಂಧ ಘನ ಜ್ಯೋತಿ ಕಿರಿದೆನ್ನಬಹುದೆ ? ಬಾರದಯ್ಯ !
ಮರೆವು ಘನ ನಿಮ್ಮ ನೆನೆವ ಮನ ಕಿರಿದೆನ್ನಬಹುದೆ ? ಬಾರದಯ್ಯ !
ಕೂಡಲಸಂಗಮದೇವಾ.
ಆನೆ ಹಿರಿದು ಎಂದು ಭಯಪಡಬೇಕಾಗಿಲ್ಲ. ಕಿರಿದಾದ ಅಂಕುಶದಿಂದ ಹಿರಿದಾದ ಆನೆಯನ್ನು ನಿಯಂತ್ರಿಸಲು ಸಾಧ್ಯವಿದೆ. ಬೆಟ್ಟ ತುಂಬಾ ಹಿರಿದು ಎಂದು ಕಳವಳಿಸಬೇಕಾಗಿಲ್ಲ. ಕಿರಿದಾದ ಉಳಿಯಿಂದ ಬೃಹತ್ತಾದ ಬೆಟ್ಟವನ್ನು ಕುಟ್ಟಿ ಪುಡಿ ಮಾಡಲು ಸಾಧ್ಯವಿದೆ. ಕತ್ತಲೆ ತುಂಬಿದೆ ಎಂದು ವ್ಯಥೆಪಡಬೇಕಾಗಿಲ್ಲ. ಕಿರು ಹಣತೆಯೊಂದು ಸಾಕು, ಕತ್ತಲೆಯನ್ನು ತೊಡೆದು ಹಾಕಲು. ಮರೆವು, ಅಜ್ಞಾನ ಬಹಳಷ್ಟು ಎಂದು ಚಿಂತಿಸಬೇಕಾಗಿಲ್ಲ. ಅರಿವು, ನೆನಹು ತುಂಬಿದ ಮನವಿದ್ದರೆ ಸಾಕು, ಮರೆವನ್ನು ನಿಯಂತ್ರಿಸಲು, ಈ ಜೀವನ ಮತ್ತು ಜಗತ್ತು ಮರೆವು, ಮೃತ್ಯು, ಕತ್ತಲೆ ತುಂಬಿದ ಕೂಪಗಳಾಗಿವೆ ನಿಜ; ಆದರೇನಂತೆ ದೇವನ ಅರಿವು, ಅಮೃತತ್ವ ಬೆಳಕುಗಳು ಇವೆಲ್ಲವನ್ನು ಚದುರಿಸಬಲ್ಲವು. ಇಂಥದೊಂದು ಆಶಾವಾದಿತ್ವದ ದೃಷ್ಟಿಕೋನವನ್ನು ಬಸವಣ್ಣನವರು ಹೊಂದಿದ್ದರು. ಶ್ರೀ ರವೀಂದ್ರನಾಥ ಟಾಗೋರರು ಹೇಳುವಂತೆ Every child brings still a hope that God is not yet tired of human life. ಪರಮಾತ್ಮನು ಈ ಜಗತ್ತು ಅಥವಾ ಮಾನವನ ಜೀವನದ ಬಗ್ಗೆ ಇನ್ನೂ ನಿರಾಶನಾಗಿಲ್ಲ ಎಂಬ ಭರವಸೆ ಹೊತ್ತು ಪ್ರತಿಯೊಂದು ಮಗುವು ಹುಟ್ಟಿಬರುತ್ತದೆ. ಈವರೆಗೂ ಹುಟ್ಟಿದವರಾರೂ ಯೋಗ್ಯರಾಗಿರದಿದ್ದರೂ ಇನ್ನು ಮುಂದೆ ಹುಟ್ಟುವ ಮಗುವಾದರೂ ಯೋಗ್ಯನಾದಾನಲ್ಲ ಎಂಬ ದೇವನ ಆಶಾಕಿರಣ ಪ್ರತಿಯೊಂದು ಮಗುವಿನ ಹುಟ್ಟಿನಲ್ಲೂ ತೋರುತ್ತದೆ. This life is a continuous flow and continuous flux. ಇಲ್ಲಿ ನಿರಂತರವಾದ ಬದಲಾವಣೆಗೆ ಅವಕಾಶವಿದೆ.
ಇಂಥದೊಂದು ದೃಷ್ಟಿಕೋನ ಹೊಂದಿದ್ದರೆಂದೇ ಬಸವಣ್ಣನವರು ಸಮಾಜದ ದುಃಸ್ಥಿತಿಯ ಬಗ್ಗೆ ಕೈಚೆಲ್ಲಿ ಕುಳಿತುಕೊಳ್ಳದೆ, ವಿವಿಧ ದೃಷ್ಟಿಯಿಂದ ಇಲ್ಲಿ ಪರಿವರ್ತನೆ ತರಲು ಎಳಸಿದರು. ಇಂತಹ ಬಸವಣ್ಣನವರನ್ನು ಹಲವಾರು ಜನ ಹಲವಾರು ಬಗೆಯಿಂದ ಕಂಡರು. ಅಂತೂ ಯಾರು ಯಾವ ಬಗೆಯ ವ್ಯಕ್ತಿತ್ವ ಸದ್ಗುಣವನ್ನರಿಸಿಕೊಂಡು ಹೋದರೂ ಯಾರಿಗೂ ನಿರಾಶೆಯನ್ನುಂಟು ಮಾಡದ ಅಷ್ಟೇ ಸಂತೃಪ್ತಿ- ಆಶ್ಚರ್ಯಗಳನ್ನುಂಟು ಮಾಡುವ ಭವ್ಯ ವ್ಯಕ್ತಿತ್ವ ಬಸವಣ್ಣನವರದು.
ಗ್ರಂಥ ಋಣ:
೧) ಪೂಜ್ಯ ಮಾತಾಜಿ ಬರೆದ "ವಿಶ್ವಧರ್ಮ ಪ್ರವಚನ" ಪುಸ್ತಕ (ಪ್ರ: ೧೯೮೭) ದಿಂದ ಅಯ್ದ ಭಾಗ. ಪ್ರಕಟಣೆ: ವಿಶ್ವ ಕಲ್ಯಾಣ ಮಿಷನ್, ಬಸವ ಮಂಟಪ, ಕಾರ್ಡ್ ರೋಡ್, ಎರಡನೆಯ ಬ್ಲಾಕು, ರಾಜಾಜಿನಗರ, ಬೆಂಗಳೂರು - ೫೬೦ ೦೧೦.
ಬಸವಣ್ಣನವರ ಪರಿಚಯ (೧೧೩೪-೧೧೯೬) | ಕಾರಣಿಕ ಪುರುಷ |