Previous ಬಸವಣ್ಣನವರಿಂದ ಕಾಯಕ ಸ್ವೀಕಾರ ಬಸವಣ್ಣನವರಿಂದ ಅನುಭವ ಮಂಟಪ ಸ್ಥಾಪನೆ Next

ಬಸವಣ್ಣನವರು ಅರ್ಥಮಂತ್ರಿಯಾದುದು

✍ ಪೂಜ್ಯ ಶ್ರೀ ಮಹಾಜಗದ್ಗುರು ಡಾ|| ಮಾತೆ ಮಹಾದೇವಿ

*

ಭಂಡಾರಿ ಪದವಿ

ಕಲ್ಯಾಣವು ಚಾಲುಕ್ಯರ ರಾಜಧಾನಿ; ಆಗ ಅಧಿಕಾರದಲ್ಲಿದ್ದ ತೈಲಪನು ವಿಷಯಾಸಕ್ತನು, ಸ್ತ್ರೀ-ಮದ್ಯ ಪ್ರೇಮಿಯೂ ಆಗಿ ರಾಜ್ಯದ ಆಡಳಿತದಲ್ಲಿ ಪ್ರಜಾ ಕಲ್ಯಾಣದಲ್ಲಿ ಆಸಕ್ತಿಯನ್ನು ಕಳೆದುಕೊಂಡಿರುವನು. ಅನೇಕ ಬಾರಿ ಶತ್ರುಗಳಿಂದ ಆಕ್ರಮಣ ನಡೆದಾಗ, ತನ್ನ ರಾಜ್ಯದ ಮಹಾಮಂಡಲೇಶ್ವರನಾದ ಮತ್ತು ಸಂಬಂಧಿಯೂ ಆದ ಬಿಜ್ಜಳನ ನೆರವನ್ನು ಪಡೆಯುತ್ತಿರುವನು. ಬಿಜ್ಜಳನು ಮಂಗಳವೇಡೆಯನ್ನು ತನ್ನ ಕೇಂದ್ರವನ್ನಾಗಿ ಮಾಡಿಕೊಂಡು, ಚಕ್ರವರ್ತಿ ತೈಲಪನು ಆಹ್ವಾನಿಸಿದಾಗಲೆಲ್ಲ ನೆರವಿಗೆ ಬರುತ್ತಿದ್ದನು. ದೂರದಲ್ಲಿ ಇದ್ದರೆ ತಕ್ಷಣ ನೆರವಿಗೆ ಬರಲು ಆಗದು, ರಾಜಧಾನಿಗೇ ಬರುವುದು ಲೇಸು ಎಂಬ ತೈಲಪನ ಸೂಚನೆ ಬಿಜ್ಜಳನು ತನ್ನ ವಾಸಸ್ಥಳವನ್ನು ಮಂಗಳವೇಡೆಯಿಂದ ಕಲ್ಯಾಣಕ್ಕೆ ಬದಲಿಸಲು ಪ್ರೇರಣೆ ನೀಡುತ್ತದೆ. ಬಿಜ್ಜಳನ ಆಪ್ತ ಸಚಿವರು, ಹಿತೈಷಿಯೂ, ಪ್ರಧಾನಿಯೂ ಆಗಿದ್ದ ಬಲದೇವ ಮಂತ್ರಿಗಳೂ ತಮ್ಮ ಪರಿವಾರದೊಡನೆ ಕಲ್ಯಾಣಕ್ಕೆ ಬರುತ್ತಾರೆ.

ದಿನದಿನಕ್ಕೂ ರಾಜಕಾರಣದಲ್ಲಿ ಆಸಕ್ತಿ ಕಳೆದುಕೊಂಡು ತೈಲಪ ಚಕ್ರವರ್ತಿಯನ್ನು ಬೆಟ್ಟದ ಮೇಲಿನ ಕೋಟೆಯಲ್ಲಿದ್ದ ಅರಮನೆಯಲ್ಲಿ ಗೃಹ ಬಂಧನದಲ್ಲಿ ಇರಿಸಿ, ಬಿಜ್ಜಳ ಮಹಾರಾಜನು ಆಳ್ವಿಕೆಯನ್ನು ಕೈಗೆ ತೆಗೆದುಕೊಂಡ. ಹೀಗಾಗಿ ಮಂಗಳವೇಡೆಯಿಂದ ಬಲದೇವ ಮಂತ್ರಿಗಳ ಪರಿವಾರವೂ ಕಲ್ಯಾಣಕ್ಕೆ ಬರುವ ಪ್ರಸಂಗ ಒದಗುತ್ತದೆ.

ಬಸವಣ್ಣನವರು ಕಲ್ಯಾಣಕ್ಕೆ ವಿಕ್ರಮನಾಮ ಸಂವತ್ಸರದ ಶ್ರಾವಣ ಶುದ್ಧ ಪಂಚಮಿಯಂದು, ಸೋಮವಾರ ಬೆಳಗಿನ ಸಮಯದಲ್ಲಿ ಕಲ್ಯಾಣ ಪಟ್ಟಣವನ್ನು ಪ್ರವೇಶಿಸುತ್ತಾರೆ.

ದೇವಲಿಪಿ ಓದಿದ ಪವಾಡ


ಬಿಜ್ಜಳನು ಅಧಿಕಾರ ಗ್ರಹಣ ಮಾಡಿದ ಬಳಿಕ, ಮುಖ್ಯ ಸ್ಥಳಗಳಲ್ಲಿ ತನ್ನ ವಿಶ್ವಾಸಿಕರನ್ನಿರಿಸುವುದು ಅತ್ಯಂತ ಸಹಜವೆ. ಕೆಲವು ದಿವಸಗಳಲ್ಲಿಯೇ ಬೊಕ್ಕಸದ ಭಂಡಾರಿ ಸಿದ್ಧರಸರ ನಿಧನದಿಂದ ಆ ಸ್ಥಾನ ತೆರವಾಗಿರುವುದು ಅವನನ್ನು ಚಿಂತೆಗೆ ಈಡು ಮಾಡಿದೆ. ಇಂಥದೊಂದು ಸನ್ನಿವೇಶದಲ್ಲಿ ಒಂದು ಪ್ರಸಂಗ ಜರುಗುತ್ತದೆ. ಅದುವೆ ಒಂದು ವಿಶೇಷ ಲಿಪಿಯನ್ನು ಓದಿದುದು. ಅದನ್ನು ಒಂದು ಪವಾಡವನ್ನಾಗಿ ಕವಿಗಳು ಬಣ್ಣಿಸುವರು. ಬಸವ ಪುರಾಣಗಳಲ್ಲಿ ಈ ದೇವಲಿಪಿ ಓದಿದ ಪವಾಡದ ವರ್ಣನೆ ಬಂದಿರುವುದೇ ಅಲ್ಲದೆ, ವಚನಗಳಲ್ಲಿಯೂ ಉಕ್ತವಾಗಿದೆ.

ಹರನಟ್ಟಿದಾಗ್ರಹ ನಿಗ್ರಹದ ಬೆಸನ ಗುರುನಿರೂಪವೆಂದು ಕೈಕೊಂಡು
ಕರುಣಿ ಬಸವಣ್ಣ ಕೈಲಾಸದಿಂದ
ಗುರುಲಿಂಗಜಂಗಮಕ್ಕೆ ಭಕ್ತಿಯ ಮಾಡಬೇಕೆಂದು
ಏಳುನೂರೆಪ್ಪತ್ತು ಅಮರಗಣಂಗಳು ಸಹಿತ
ಮರ್ತ್ಯಲೋಕಕ್ಕೆ ತಂದನಯ್ಯಾ
ಶಿವ ಸಮಯಕ್ಕಾಧಾರವಾದನಯ್ಯಾ ಬಸವಣ್ಣನು
ಲೋಕಾಧಿಲೋಕಂಗಳಿಗೆ ಪರಮಗುರುವಾದನಯ್ಯಾ ಬಸವಣ್ಣನು
ಜಡರುಗಳ ಮನದ ಕತ್ತಲೆಯ ಕಳೆಯಲೆಂದು
ಕಟ್ಟಿತ್ತು ಕಲ್ಯಾಣ ಮಹಾಮಠವು
ಪರಮನಟ್ಟಿದ ಓಲೆ ಬಂದಿಳಿಯಿತ್ತು, ಬಿಜ್ಜಳನ ಸಿಂಹಾಸನದ ಮುಂದೆ
ಅದ ತಂದು ಓದಿದಡೆ ಸೃಷ್ಟಿಯ ಸೇನಬೋವರಿಗೆ ತಿಳಿಯದು
ಛಪ್ಪನ್ನ ದೇಶದ ಭಾಷೆಯ ಲಿಪಿ ಮುನ್ನವಲ್ಲ
ಇದನೋದಿದವರಿಗೆ ಆನೆ, ಸೇನೆ, ಕುದುರೆ ಭಂಡಾರ
ಅರವತ್ತಾರು ಕರಣಿಕರಿಗೆ ಮುಖ್ಯನಂ ಮಾಡುವೆನೆಂದು
ಬಿಜ್ಜಳ ಭಾಷೆಯ ಕೊಡುತ್ತಿರಲು
ಹರ ನಿರೂಪವ ಶಿರದ ಮೇಲಿಟ್ಟು ಶಿವಶರಣೆಂದು
ಬಸವಣ್ಣನೋದಿ ಮೆಟ್ಟಿ ತೆಗೆಸಿದನಯ್ಯ
ಅರವತ್ತಾರುಕೋಟಿ ವಸ್ತುವ ಅರಮನೆಗೆ
ರಾಜ್ಯಕ್ಕೆ ಅರಮನೆಗೆ ಒಡೆಯನಾಗಿ
ಹರಗಣಂಗಳಿಗೆ ಗತಿಮತಿ ಚೈತನ್ಯವಾಗಿ
ಕೂಡಲ ಚನ್ನ ಸಂಗಯ್ಯನಲ್ಲಿ
ಅಂಡಜದೊಳಗಿದ್ದು ಶಿವನ ಭಂಡಾರಿಯಾದನಯ್ಯಾ
ಎನ್ನ ತಂದೆ ಪೂರ್ವಾಚಾರಿ ಸಂಗನ ಬಸವಣ್ಣನು


ಚನ್ನಬಸವಣ್ಣನವರ ವಚನದಲ್ಲಿ ಬಿಜ್ಜಳನ ಸಿಂಹಾಸನದ ಮುಂದೆ ಓಲೆ ಬಂದುದು ಬೇರೆ ಯಾರಿಗೂ ಓದಲು ಆಗದಾಗ ಬಸವಣ್ಣ ಓದಿದ್ದು, ೬೬ಕೋಟಿ ವಸ್ತುಗಳ ತೆಗೆಸಿ ಕೊಟ್ಟುದು, ಅತ್ಯಂತ ಪ್ರಭಾವಶಾಲಿ ಹುದ್ದೆಯನ್ನು ಅಲಂಕರಿಸಿದ್ದು ಪ್ರಸ್ತಾಪವಾಗಿದೆ.

ಈ ಘಟನೆಯಿಂದಾಗಿ ಬಸವಣ್ಣನವರು ಎಲ್ಲರ ಗಮನಕ್ಕೆ ಬಂದರು, ಮುಖ್ಯವಾಗಿ ರಾಜನಿಗೆ ಅವರ ಪ್ರತಿಭೆ ತಿಳಿಯಿತು. ಕರಣಿಕನ ಕಾಯಕದಿಂದ ಅರ್ಥಮಂತ್ರಿಯ ಸ್ಥಾನಕ್ಕೆ ಏರಿದರು. ಈ ಅನಿರೀಕ್ಷಿತ ಆನಂದದ ಘಟನೆಯನ್ನು ಇದು ದೇವರ ಲೀಲೆ, ಅವನ ಸಂಕಲ್ಪದಂತೆ ಈ ಪ್ರಸಂಗ ನಡೆದಿದೆ'' ಎಂದು ಬಸವಣ್ಣನವರು ಉದ್ಧರಿಸಿದುದು, ಪುರಾಣಗಳನ್ನು ರಚಿಸುವವರಿಗೆ ಪ್ರೇರಣೆ ಕೊಟ್ಟು ಕೈಲಾಸದಿಂದ ಈ ಓಲೆ ಬಂದು ಬೀಳುವಂತೆ ಮಾಡಲು ಪ್ರೇರಣೆ ನೀಡಿದೆ.

ಬಿಜ್ಜಳ ಮಹಾರಾಜನು ಕೊಳವೆಯೊಂದರಲ್ಲಿ ಸುತ್ತಿಡಲ್ಪಟ್ಟ ಆ ಸ್ವರ್ಣಪಟವನ್ನು ಅಸ್ಥಾನಕ್ಕೆ ತಂದು ಪ್ರಧಾನಿ ಬಲದೇವ ಮಂತ್ರಿಗಳಿಗೆ ತೋರಿಸಿ ಇದನ್ನು ಓದುವಿರಾ ? ಎನ್ನುವನು. ಅವರು ತಮಗೆ ಆಗದೆ, ಇತರ ಸಭಾಸದರಿಗೆ ಕೊಡುವನು.

ನಾರಾಯಣ ಕ್ರಮಿತರು ನೋಡಿ ಹೇಳುವರು, 'ಇದೇನೋ ವಿಚಿತ್ರ ಲಿಪಿಯಾಗಿದೆ, ಯಾವುದೋ ಪೈಶಾಚಿಕ ಭಾಷೆ ಪ್ರಯತ್ನಿಸುವುದರಲ್ಲಿ ಅರ್ಥವೇ ಇಲ್ಲ'' ಎನ್ನುವರು. ಕೊಂಡೆಯ ಮಂಚಣ್ಣ ನೋಡಿ, 'ತಾಮ್ರದಿಂದಲೇ ಮಾಡಬಹುದಾದ್ದಕ್ಕೆ ಯಾರೋ ಬಂಗಾರವನ್ನು ಬಳಸಿ ಅನ್ಯಾಯ ಮಾಡಿದ್ದಾರೆ.'' ಎನ್ನುವನು. ಬಿಜ್ಜಳನು ತುಸು ಕೋಪಗೊಂಡು ಹೇಳುವನು. ನಾವು ಕುತೂಹಲಿತರಾಗಿರುವುದು ಪಟದೊಳಗಿರುವ ವಿಷಯದ ಬಗೆಗೆ ವಿನಾ ಮಾಡಿರುವ ಲೋಹದ ಬಗೆಗಲ್ಲ' ಎಂದು. ಆಗ ಬಲದೇವ ಮಂತ್ರಿಗಳು ತಮ್ಮ ಅಳಿಯನ ಹೆಸರನ್ನು ಪ್ರಸ್ತಾಪಿಸಿ ಆತನಿಗೆ ಬಹಳಷ್ಟು ಲಿಪಿಗಳ ಜ್ಞಾನವಿದೆ, ಏಕೆ ಪ್ರಯತ್ನಿಸಬಾರದು ? ಎಂದು ಸೂಚಿಸುವರು. ಬಿಜ್ಜಳನು ಕರಣಸಾಲೆಯಲ್ಲಿ ಕಾಯಕ ಮಗ್ನರಾಗಿದ್ದ ಬಸವಣ್ಣನವರಿಗೆ ಹೇಳಿ ಕಳಿಸುವನು. ಅವರು ಬಂದಾಗ ಸ್ವರ್ಣಪತ್ರವೊಂದರ ವಿಷಯ ತಿಳಿಸಿ, ಓದುವಿರಾ ಎನ್ನುವನು. ಗುರು ಬಸವಣ್ಣನವರು ಪರಮಾತ್ಮನನ್ನು ನೆನೆಯುವರು. ಇದು ಅವರ ಬದುಕಿನಲ್ಲಿ ಒಂದು ಅಪೂರ್ವ ಪ್ರಸಂಗ; ಅವರ ಸತ್ವಪರೀಕ್ಷೆ, ಅನನ್ಯ ಶರಣಾಗತಿಯಿಂದ ದೇವನಲ್ಲಿ ಬಿನ್ನವಿಸುವರು.

ಎನ್ನ ವಾಮಕ್ಷೇಮ ನಿಮ್ಮದಯ್ಯಾ
ಎನ್ನ ಹಾನಿವೃದ್ಧಿ ನಿಮ್ಮದಯ್ಯಾ
ಎನ್ನ ಮಾನಾಪಮಾನ ನಿಮ್ಮದಯ್ಯಾ
ಬಳ್ಳಿಗೆ ಕಾಯಿ ದಿಮ್ಮಿತ್ತೆ ಅಯ್ಯಾ ಕೂಡಲಸಂಗಮದೇವಾ ?
- ಬ.ವ

ದೇವನೇ, ಎನ್ನ ಹಿತ- ಅಹಿತಗಳು ನಿನ್ನನ್ನೇ ಕೂಡಿವೆ. ನನ್ನ ಪ್ರಗತಿ- ವಿಗತಿ, ಕೀರ್ತಿ- ಅಪಕೀರ್ತಿ ನಿನ್ನ ಕೈಲಿವೆ. ಬಳ್ಳಿಗೆ ಕಾಯಿ ಹೇಗೆ ಭಾರವಲ್ಲವೋ ಹಾಗೆ ನನ್ನ ಬದುಕು ನಿನಗೆ ಹೊರೆಯಲ್ಲ'.

ನಿಜಕ್ಕೂ ಬಸವಣ್ಣನವರು ಓದುವುದರಲ್ಲಿ ಯಶಸ್ವಿಯಾಗುವರು. ಬರೀ ಓದಿದ್ದು ಮಾತ್ರವಲ್ಲ, ತ್ರಿಭುವನಮಲ್ಲ ಪೆರ್ಮಡಿ ವಿಕ್ರಮಾದಿತ್ಯರು ತಮ್ಮ ಆಳ್ವಿಕೆ ಸುವರ್ಣಯುಗವನ್ನು ನಿರ್ಮಾಣಮಾಡಿದಾಗ ಕೂಡಿಟ್ಟಿದ್ದ ೬೬ ಕೋಟಿ ದ್ರವ್ಯವನ್ನು ಭೂಮಿಯಿಂದ ತೆಗೆಸಿಕೊಟ್ಟರು. ಬಿಜ್ಜಳನ ಸಂತೋಷವು ಹೇಳತೀರದಷ್ಟು ಏಕೆಂದರೆ ಚಾಲುಕ್ಯದೊರೆ ತೈಲಪನು ವಿಷಯಾಸಕ್ತಿ ರಾಜ್ಯಾಡಳಿತದ ನಿರಾಸಕ್ತಿಯಿಂದಾಗಿ ದೇಶದ ಆರ್ಥಿಕ ಪರಿಸ್ಥಿತಿ ಗಂಭೀರವಾಗಿತ್ತು. ಹೀಗಾಗಿ ಈ ನಿಧಿ ದೇಶದ ಅರ್ಥವ್ಯವಸ್ಥೆಗೆ ಪುನಶ್ಚತನ ನೀಡುತ್ತಿತ್ತು.

ಈ ನಿಧಿಯನ್ನು ಸದುಪಯೋಗ ಮಾಡಲು ಬಸವಣ್ಣನವರೇ ಸೂಕ್ತ ಯೋಜಕರು ಎಂದು ಬಿಜ್ಜಳನು ಅವರನ್ನು ಭಂಡಾರಿಯನ್ನಾಗಿ (ಅರ್ಥಮಂತ್ರಿ)ಯನ್ನಾಗಿ ಮಾಡುವನು. ಅಂದಿನ ಕಾಯಕಕ್ಕೆ ಕರಣಿಕರಾಗಿ ಹೋಗಿದ್ದ ಬಸವಣ್ಣನವರು, ಈ ವಿಶೇಷ ಪ್ರಸಂಗದಿಂದಾಗಿ ಅರ್ಥಮಂತ್ರಿಯಾಗಿ ಮನೆಗೆ ಬರುವಾಗ ಆನೆ, ಸೇನೆ, ಕುದುರೆ, ಭಂಡಾರದೊಡನೆ ಮನೆಗೆ ಬಂದಾಗ ಎಲ್ಲರಿಗೂ ಆನಂದಾಶ್ಚರ್ಯ. ವಿಶೇಷ ದೂತರಿಂದ ಸುದ್ದಿ ತಿಳಿದು ತಲೆಬಾಗಿಲಲ್ಲೆ ಸ್ವಾಗತಿಸಲು ಅಕ್ಕನಾಗಲಾಂಬಿಕೆ ನೀಲಾಂಬಿಕೆಯರು ನಿಂತಿದ್ದರು. ಬಸವಣ್ಣಾ, ಎಂಥಾ ಪ್ರತಿಭಾವಂತ ! ನಿರೀಕ್ಷೆಗೆ ಮೀರಿದ ಪ್ರಗತಿ ನಿನ್ನದು'' ಎಂದು ಅಕ್ಕನು ವಾತ್ಸಲ್ಯ-ಅಭಿಮಾನಗಳಿಂದಾಗಿ ನುಡಿದಾಗ ಅತ್ಯಂತ ವಿನೀತರಾಗಿ ಹೇಳುವರು; "ಅಕ್ಕ, ಇದೆಲ್ಲ ನಾನು ಪಡೆದುದೇ ದೇವನು ಕರುಣಿಸಿದ್ದು ! ಅವನು ಕರುಣಿಸಿದರೆ ಕೊರಡು ಕೊನರುವುದು, ಬರಡು ಹಯನಾಗುವುದು. ವಿಷವು ಅಮೃತವಾಗುವುದು. ಸಕಲ ಪಡಿಪದಾರ್ಥಗಳು ಬಯಸುವ ಮೊದಲೇ ಬಳಿಗೆ ಸಾರುವುವು.

ಹರನು ಕರುಣಿಸಿ ಕೊಡುವ ಕಾಲಕ್ಕೆ ಸಿರಿಯು-ಸಂಪದವು ಮಹಾಪೂರವಾಗಿ ಬರುವುದು, ರಾತ್ರಿಯೆಲ್ಲ ಮಳೆಸುರಿದು ಹಿಂದಿನ ದಿನ ಒಣಗಿನಿಂತಿದ್ದ ಕೆರೆ ಮರುದಿನ ತುಂಬಿ ತುಳುಕುವಂತೆ ಆಗುವುದು. ಪರಿವಾರ, ಪರಿಚಾರಕರು ಎಲ್ಲ ದೊರೆಯುವುದು, ಇವೆಲ್ಲ ದೊರೆತವು ಎಂಬ ಸಂಭ್ರಮದಲ್ಲಿ 'ನಾನೇ ಗಳಿಸಿದೆ' ಎಂಬ ಹಮ್ಮು ಉಂಟಾದರೆ ಆಗ ಹರವಿಯ ತುಂಬ ಹಾಲು ತುಂಬಿ ಒಂದು ಕಲ್ಲು ಎಸೆದಂತೆ ಆಗುವುದು.”

ಹೀಗೆ ದೊರೆತ ಅಧಿಕಾರವನ್ನು ದೇವನ ಪ್ರಸಾದವೆಂದೇ ಬಸವಣ್ಣನವರು ಸ್ವೀಕರಿಸಿದರು.

ಗ್ರಂಥ ಋಣ:
೧) ಪೂಜ್ಯ ಮಾತಾಜಿ ಬರೆದ "ವಿಶ್ವಧರ್ಮ ಪ್ರವಚನ" ಪುಸ್ತಕ (ಪ್ರ: ೧೯೮೭) ದಿಂದ ಅಯ್ದ ಭಾಗ. ಪ್ರಕಟಣೆ: ವಿಶ್ವ ಕಲ್ಯಾಣ ಮಿಷನ್, ಬಸವ ಮಂಟಪ, ಕಾರ್ಡ್ ರೋಡ್, ಎರಡನೆಯ ಬ್ಲಾಕು, ರಾಜಾಜಿನಗರ, ಬೆಂಗಳೂರು - ೫೬೦ ೦೧೦.

ಪರಿವಿಡಿ (index)
Previous ಬಸವಣ್ಣನವರಿಂದ ಕಾಯಕ ಸ್ವೀಕಾರ ಬಸವಣ್ಣನವರಿಂದ ಅನುಭವ ಮಂಟಪ ಸ್ಥಾಪನೆ Next
cheap jordans|wholesale air max|wholesale jordans|wholesale jewelry|wholesale jerseys