Previous ಬಸವಣ್ಣನವರ ಮನೆತನ-ತಂದೆ ತಾಯಿ ಬಸವರಸನ ಪವಾಡಗಳು Next

ಬಸವಣ್ಣನ ಜನನ

✍ ಪೂಜ್ಯ ಶ್ರೀ ಮಹಾಜಗದ್ಗುರು ಡಾ|| ಮಾತೆ ಮಹಾದೇವಿ

*

ಚಿಪ್ಪಿನೊಳ್ ಮುತ್ತು ಕಾಸಾರದೊಳ್ ಪಂಕಜಂ
ಅಪ್ಪಿನಿಂ ತಣ್ಣು ಮಲಯಾದ್ರಿಯಿಂ ಮಲಯಜಂ
ಕೇತಕಿ ಕುಸುಮದಿಂ ರುಚಿರತರ ಪರಿಮಳಂ
ಶೀತಕರನಿಂ ಸಾಂದ್ರತರ ಕೌಮುದೋಜ್ಜಳಂ
ಪುಟ್ಟುವಂತಿರೆ ಪುಟ್ಟದಂ ಶಿವನ ಶಿಶುವಲ್ಲಿ
ಪುಟ್ಟಿದಂ ಸಂಸಾರ ಸುಖದ ಲೀಲೆಯಿನಲ್ಲಿ
ಸುಮುಹೂರ್ತವೇ ಗಂಡು ರೂಪಾದ ತೆರನಾಗೆ
ಅಮಮ ಕಾರಣಿಕ ಶಿಶು ಜನಿಯಿಸಿದನನುವಾಗೆ

ಸಮುದ್ರದೊಳಗಣ ಸಿಂಪಿನಲ್ಲಿ ಬೆಲೆಬಾಳುವ ಮುತ್ತು ಹುಟ್ಟಿದಂತೆ, ಸರೋವರದಲ್ಲಿ ಕಮಲ ಅರಳಿದಂತೆ, ನೀರಿನ ಜಲಾಶಯದಿಂದ ತಂಪು ಹೊಮ್ಮುವಂತೆ, ಮಲಯಪರ್ವತದಿಂದ ಬೀಸಿ ಬರುವ ಸೌರಭಯುಕ್ತ ಗಾಳಿಯಂತೆ, ಕೇತಕಿಯ ಹೊಡೆಯಿಂದ ಪರಿಮಳವೂ ಪೊಣ್ಮುವಂತೆ, ತಂಗಿರಣ ಚೆಲ್ಲವ ಚಂದ್ರನಿಂದ ಬೆಳದಿಂಗಳು ಹೊಮ್ಮುವಂತೆ, ಶಿವನ ಶಿಶುವು ಹುಟ್ಟಿ ಬರುತ್ತಿದ್ದಾನೆ. ಮಾದರಸ-ಮಾದಲಾಂಬಿಕೆಯ ದಾಂಪತ್ಯ ಲೀಲೆಯ ಪ್ರತಿಫಲವಾಗಿ ಈ ಗಂಡು ಮಗು ಹುಟ್ಟಿದೆ. ಕಾರಣಿಕ ಶಿಶುವಾಗಿ ಬಸವಣ್ಣ ಇಳೆಗೆ ಬರುತ್ತಿದ್ದಾನೆ.

ಬಸವಣ್ಣನವರ ಜನ್ಮದಿನ ಎಂದು?

ವಿಶ್ವಗುರು ಬಸವಣ್ಣನವರು ಆನಂದನಾಮ ಸಂವತ್ಸರದ (ಕ್ರಿ.ಶ.೧೧೩೪) [ದಿನಾಂಕ: ೩೦ ಏಪ್ರಿಲ ೧೧೩೪] ವೈಶಾಖಮಾಸದ, ರೋಹಿಣಿ ನಕ್ಷತ್ರದಲ್ಲಿ ಜನಿಸಿದರೆಂಬುದು ಪ್ರಸಿದ್ಧವಾಗಿದೆ. ಸಾಮಾನ್ಯವಾಗಿ ಅಕ್ಷಯ ತೃತೀಯದಂದು ಬಸವ ಜಯಂತಿಯು ಅಚರಿಸಲ್ಪಡುತ್ತಿದೆ. ಕರ್ನಾಟಕ ಸರ್ಕಾರ ಸಾರ್ವತ್ರಿಕ ರಜೆಯನ್ನು ಸಹ ಘೋಷಿಸಿದೆ.

ಭಾರತದಲ್ಲಿ ಮಹಾತ್ಮರು ತಮ್ಮ ದೇಹದ ಹುಟ್ಟನ್ನೇ ನಿಜವಾದ ಹುಟ್ಟು ಎಂದು ಭಾವಿಸರು. ತಮ್ಮ ಜನ್ಮ ದಿನಾಂಕ ನೆನಪಿಡರು. ಹೀಗಾಗಿ ಹರಿಹರನು ಬಸವಣ್ಣನವರ ಜನ್ಮ ನಕ್ಷತ್ರದ ಪ್ರಸ್ತಾಪವನ್ನೇ ಮಾಡಿಲ್ಲ. ಲಕ್ಕಣ್ಣ ದಂಡೇಶನು ಕಾರ್ತಿಕ ಶುದ್ಧ ಪ್ರತಿಪದೆ ಎಂದರೆ, ಭೀಮಕವಿ ಅರ್ಧೋದಯ ಎನ್ನುತ್ತಾನೆ. ಸಂಸ್ಕೃತ ಬಸವ ಪುರಾಣದ ಕವಿ ಶ್ರೀ ಶಂಕರಾರಾಧ್ಯ (೧೩೨೦) ಆನಂದ ನಾಮ ಸಂವತ್ಸರದ ವೈಶಾಖ ಮಾಸದ ರೋಹಿಣಿ ನಕ್ಷತ್ರವೆನ್ನುತ್ತಾನೆ. ಹುಬ್ಬಳ್ಳಿಯ ವಿದ್ಯಾಸಾಗರ ಪಂಚಾಂಗದ ಲಿಂll ಶ್ರೀ ವೇ.ಪಂ. ಚನ್ನವೀರ ಶಾಸ್ತ್ರಿಗಳು ಸಾಲಿಮಠ ಇದನ್ನೆ ಅಧಿಕೃತವೆಂದು ಬಸವ ಜಯಂತಿ ಆರಂಭಿಸುವವರಿಗೆ ಪ್ರೇರಣೆ ನೀಡಿದ್ದಾರೆ. ಅವರ ಅಭಿಪ್ರಾಯದಲ್ಲಿ ಬಸವಣ್ಣನವರು ಹುಟ್ಟಿದ್ದು ರೋಹಿಣಿ ನಕ್ಷತ್ರದಲ್ಲಿ, ಅಂದು ತೃತೀಯಾ ಇದ್ದುದು ನಿಜ. ಇದು ಸಾಮಾನ್ಯವಾಗಿ ಅಕ್ಷಯ ತೃತೀಯಾದಂದು ಬರುವುದಾದರೂ ಒಮೊಮ್ಮೆ ದ್ವಿತೀಯಾದಂದೆ ಬರಬಹುದು. ರೋಹಿಣಿ ನಕ್ಷತ್ರ ಬಂದ ದಿನ ಬಸವ ಜಯಂತಿ ಆಚರಿಸಬೇಕು ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ. ಬಸವಣ್ಣನವರು ಯಾವ ಮುಹೂರ್ತದಲ್ಲಿ ಹುಟ್ಟಿದರೂ ಅಷ್ಟೇ. ಅವರು ಹುಟ್ಟಿದ ಘಳಿಗೆಯಿಂದೇನು ಮಹಾಪುರುಷರಾಗದೆ ಕೊಟ್ಟ ತತ್ತ್ವಗಳಿಂದ ಮಹಾಪುರುಷರಾಗಿರುವ ಕಾರಣ ಗೌರವಾರ್ಹರು.

ಅಂತೂ ಸಂತೋಷಪಡುವ ಒಂದು ಸಂಗತಿ ಎಂದರೆ ಹರಿಹರ, ಸೋಮನಾಥ, ಭೀಮಕವಿ ಮುಂತಾದವರು ಅನೇಕ ಶತಮಾನಗಳಿಗೂ ಹಿಂದೆ ಬಾಳಿದರೂ ಇಂದಿನ ಹಲವಾರು ಮಠಾಧೀಶರು, ಪಂಡಿತರು, ಶಾಸ್ತ್ರಿಗಳಿಗಿಂತ ಪ್ರಗತಿಪರ ಧೋರಣೆಯವರು ಎಂಬ ಸಂಗತಿ ಮೆಚ್ಚುಗೆಗೆ ಪಾತ್ರವಾಗುತ್ತದೆ. ಏಕೆಂದರೆ ಅವರು ಬಸವಣ್ಣನವರನ್ನು, ಜಗದಗಲ ಮುಗಿಲಗಲ ಮಿಗೆಯಗಲ ತನ್ನಗಲ ಬೆಳೆದು ಅಸಂಖ್ಯಾತ ಜನರ ಹೃದಯದಲ್ಲಿ ಪೀಠಸ್ಥಾನಾದ ಬಸವಣ್ಣನವರನ್ನು ದಿಢೀರನೆ ಅಮರ್ತ್ಯಕರಣ ಮಾಡಿ, ಕಲ್ಲಲ್ಲಿ-ಮಣ್ಣಲಿ, ಕಿವಿಯಲ್ಲಿ-ನಭದಲ್ಲಿ ಲಿಂಗದಲ್ಲಿ- ಅಯೋ ನಿಜರನ್ನಾಗಿ ಹುಟ್ಟಿಸದೆ ವೈಜ್ಞಾನಿಕತೆ, ವಾಸ್ತವಿಕತೆ ಬಿಂಬಿಸಿದ್ದಾರೆಂಬುದು ಗಮನಾರ್ಹ.

ಕೆಲವರ ಕಣ್ಣಲ್ಲಿ ಹುಟ್ಟೇ ಅಪರಾಧವೋ? ಅದಕ್ಕಾಗಿ ಮಹಾತ್ಮರನ್ನು ಆಕಾಶದಿಂದ ಇಳಿಯುವಂತೆ ಭೂವಿಯಲ್ಲಿ ದೊರೆವಂತೆ, ಲಿಂಗದಿಂದ ಹೊರಹೊಮ್ಮುವಂತೆ ಮಾಡುತ್ತಾರೆ. ಇದರಿಂದ ಅದ್ಭುತವೊಂದನ್ನು ಬಿಂಬಿಸುತ್ತೇವೆಂದು ಅವರು ಭಾವಿಸಾದರೂ, ಮಾನವ ಹೃದಯದೊಡನೆ ಆ ಮಹಾತ್ಮರು ಏರ್ಪಡಿಸಿಕೊಳ್ಳಲೆತ್ನಿಸಿದ ಭಾವ ಸಂಬಂಧದ ತಂತುವನ್ನು ಇವರು ಕತ್ತರಿಸುತ್ತಾರೆ. ವಿಚಾರಶೀಲರ ದೃಷ್ಟಿಯಲ್ಲಿ ಅ ಪುಣ್ಯಪುರುಷರನ್ನು ಎತ್ತರಿಸುವ ಬದಲಿಗೆ ಕೆಳಗಿಳಿಸುತ್ತದೆ.
ಕೆಲವು ಮೂಢ ಭಕ್ತರು 'ಅಯ್ಯೋ, ಬಸವಣ್ಣನವರು ಎಲ್ಲರಂತೆ ಹುಟ್ಟಿದರೇ? ವಿಶೇಷವಾಗಿ ಬೇರೊಂದು ರೀತಿಯಲ್ಲಿ ಹುಟ್ಟಲಿಲ್ಲವೆ? ಎಂದು ಭಾವಿಸಬಹುದಾದರೂ ಅಂಥವರ ಸಂಖ್ಯೆ ಈ ಕಾಲದಲ್ಲಿ ಲಕ್ಷಕ್ಕೊಂದೂ ಇಲ್ಲ. ಅಸಹಜ ಜನ್ಮ ಸಾಧ್ಯವೆ? ೧.ಕೆಲವರು ಸ್ಥಾವರ ಲಿಂಗಗಳನ್ನು ಭೇದಿಸಿಕೊಂಡು ಬಂದ ಜನ್ಮಧಾರಣೆ ಪ್ರಸ್ತಾಪಿಸುತ್ತಾರೆ.
೨. ಇನ್ನು ಕೆಲವು ಧಾರ್ಮಿಕರು, ಏಸುಕ್ರಿಸ್ತನಂತೆ ಪುರುಷ ಸಂಪರ್ಕವಿಲ್ಲದೇ ಕನ್ಯ ಮೇರಿಯಿಂದ ಜನ್ಮವಾದಂತೆ ಚಿತ್ರಿಸುತ್ತಾರೆ. ಚಿನ್ನಬಸವಣ್ಣನವರ ಜನನದ ವಿಷಯದಲ್ಲಿಯೂ ಈ ಬಗ್ಗೆ ಪ್ರಸ್ತಾಪವಿದೆ.
೩. ಕರ್ಣನು ಕಿವಿಯಿಂದ ಹುಟ್ಟಿದಂತೆಯೂ, ಅಗಸ್ತನು ಕುಂಭ ಸಂಭೋದ್ಭವನಾದಂತೆಯೂ ಚಿತ್ರಿಸುತ್ತಾರೆ.
೪. ಸಿದ್ಧಲಿಂಗೇಶ್ವರರು ಅಯೋನಿಜರಾಗಿ ಆಗಸದಿಂದ ಬಂದಂತೆ ಕೆಲವರು ಚಿತ್ರಿಸುತ್ತಾರೆ. ಇಂಥ ಎಲ್ಲ ಕಲ್ಪನೆಗಳಿಂದ ಧರ್ಮವು ವಿಜ್ಞಾನದ ಒರೆಗಲ್ಲಿಗೆ ನಿಲ್ಲದೆ ನಗೆಪಾಟಲಾಗುವ ಸಂದರ್ಭವೊದಗುತ್ತದೆ. ಇಲ್ಲೆಲ್ಲ ಭಾವುಕ ಭಕ್ತರ ಅವೇಶ ಕೆಲಸ ಮಾಡುವುದೇ ವಿನಾ ಇನ್ನೇನು ಅಲ್ಲ.

ಮಹಾತ್ಮರು ಮನುಕುಲಕ್ಕೆ ಪೂಜ್ಯರು. ಹೇಗೇ ಹುಟ್ಟಿರಲಿ, ಯಾರಿಂದಲೇ ಹುಟ್ಟಿರಲಿ ಪರಮಾತ್ಮನು ನಿಯಮಬದ್ಧವಾಗಿ, ಶಿಸ್ತಿನಿಂದ ಸೃಷ್ಟಿಯ ರಚನೆ, ಪಾಲನೆ ಮಾಡುವ ಬುದ್ದಿವಂತನು. ಅವನು ತಾನು ಮಾಡಿದ ಸಂವಿಧಾನವನ್ನು, ನಿಯಮವನ್ನು ಎಂದೂ ಮುರಿಯನು.

ಸಂಗದಿಂದಲ್ಲದೆ ಅಗ್ನಿ ಹುಟ್ಟದು
ಸಂಗದಿಂದಲ್ಲದೆ ಬೀಜ ಮೊಳೆದೋರದು
ಸಂಗದಿಂದಲ್ಲದೆ ದೇಹವಾಗದು.
-ಅಕ್ಕಮಹಾದೇವಿ

ಎಂದು ಅಕ್ಕಮಹಾದೇವಿ ನುಡಿದರೆ, "ಹೊಲೆಯಲಲ್ಲದೆ ಲೋಕ ತಲೆಯಲ್ಲಿ ಹುಟ್ಟುವುದೇ ?" ಎನ್ನುತ್ತಾನೆ ಕ್ರಾಂತಿಕವಿ ಸರ್ವಜ್ಞ.

“ಹೊಲೆಗಂಡಲ್ಲದೆ ಪಿಂಡದ ನೆಲೆಗೆ ಆಶ್ರಯವಿಲ್ಲ?
ಜಲಬಿಂದುವಿನ ವ್ಯವಹಾರವೊಂದೇ !
ಅಸೆ ಅಮಿಷ ರೋಷ ಹರುಷ ವಿಷಯಾದಿಗಳೆಲ್ಲ ಒಂದೇ,
ಸಪ್ತಧಾತು ಸಮಂ ಪಿಂಡಂ ಸಮಯೋನಿ ಸಮುದ್ಭವಂ
ಅತ್ಮಜೀವ ಸಮಾಯುಕ್ತ ವರ್ಣನಂ ಕಿಂ ಪ.ಯೋಜನ?
ಕರ್ಣದಲಿ ಜನಿಸಿದವರುಂಟೆ ಜಗದೊಳಗೆ?


ಎನ್ನುತ್ತಾರೆ ಬಸವಣ್ಣನವರು ಹೀಗೆ ಮನುಜ ಕುಲವೆಲ್ಲ ಹುಟ್ಟಿರುವುದು ಒಂದೇ ಬಗೆಯಲ್ಲಿ ಎಂದು ತಿಳಿದಿರುವಾಗ ಅವಾಸ್ತವಿಕ ಕಲ್ಪನೆ ಏಕೆ ಬೇಕು?

೧. ಸ್ಥಾವರ ಲಿಂಗಗಳಿಂದ ಹುಟ್ಟಲು ಸಾಧ್ಯವೆ? ಎಂದಿಗೂ ಇಲ್ಲ. ಒಂದು ಕಾಲದಲ್ಲಿ ನಡೆದಿದ್ದರೆ ಇಂದೂ ಅದು ನಡೆಯಲೇಬೇಕು. ಜಡದಿಂದ ಚೈತನ್ಯವು ಹುಟ್ಟಲಿಕ್ಕೆ ಸಾಧ್ಯವಿಲ್ಲ ಬಸವಣ್ಣನವರನ್ನು ಸ್ಥಾವರ ಲಿಂಗ ಸೀಳಿಕೊಂಡು ಒಳಹೋಗುವಂತೆ ನಾಟಕಕಾರರು ಚಿತ್ರಿಸಿ, ಭಯಂಕರ ಭ್ರಾಂತಿಯನ್ನು ಜನರ ತಲೆಯಲ್ಲಿ ಹಾಕಿದ್ದಾರೆ. ಹಾಗಾದರೆ ಲಿಂಗೋದ್ಭವ- ಲಿಂಗೈಕ್ಯಗಳ ಮರ್ಮವೇನು? ಶರಣರದು ಧಾರ್ಮಿಕ ಪ್ರಕ್ರಿಯೆಯ ಪ್ರಸಾದಿಕ ಭಾಷೆ ಊಟವಾಯಿತೇ ಅನ್ನಕೊಡದು, ಪ್ರಸಾದವಾಯಿತೇ ಎನ್ನಬೇಕು 'ಊಟಕ್ಕೆ ಹಾಕು' ಎನ್ನದೆ, 'ಎಡೆ ಮಾಡು' ಎನ್ನಬೇಕು. ಹಾಗೆಯೇ ಸತ್ತರು ಎನ್ನದೆ ಲಿಂಗೈಕ್ಯರಾದರು ಎನ್ನಬೇಕು. ಹುಟ್ಟಿದರು ಎನ್ನದೆ ಲಿಂಗೋದ್ಭವ ಎನ್ನಬೇಕು. ಏಕೆಂದರೇ ದೇವನೇ ಮೂಲ, ದೇವನೇ ಅಂತ್ಯ! ಹೀಗಲ್ಲದೆ, ನಮ್ಮ ಗುರುಗಳು ಲಿಂಗಸೀಳಿ ಹುಟ್ಟಿದರು ಎಂಬುದಕ್ಕೆ ಸವಾಲಾಗಿ ಬಸವಣ್ಣನವರು ಲಿಂಗಸೀಳಿ ಅಡಗಿದಂತೆ ಇವರೂ ವಾದಿಸುತ್ತಾರೆ. ಇದು ಮೌಡ್ಯತೆಗಷ್ಟೇ ಕಾರಣವಾಗದೆ ಜಗಳವನ್ನು ಬಿತ್ತುತ್ತದೆ. ಫ್ರಿಮ್ ಎಂಬ ತತ್ತ್ವಜ್ಞಾನಿ ಹೇಳುತ್ತಾನೆ "The blind fanaticism of one foolish honest man may cause more evil than the united efforts of twenty rogues". ಒಬ್ಬ ಪ್ರಾಮಾಣಿಕ ಅದರೆ ಮೂರ್ಖ ಮತಾಂಧ ಮನುಷ್ಯನು ಇಪ್ಪತ್ತು ದುರ್ಜನರ ಸಾಮೂಹಿಕ ಪ್ರಯತ್ನಕ್ಕಿಂತಲೂ ಮಿಗಿಲಾದ ಕೆಡಕು ಮಾಡಲಿಕ್ಕೆ ಸಾಧ್ಯ. ಸೇಂಟಪಾಲ್ ಆಗುವ ಪೂರ್ವದಲ್ಲಿದ್ದ ಸಾಲನು ಮತಾಂಧನಾಗಿ ಕ್ರೈಸ್ತರನ್ನು ಹತ್ಯೆ ಮಾಡಿದುದನ್ನು, ಇಂದಿನ ಇಸ್ರೇಲಿಗಳು ಮತಾಂಧ ಕ್ರೈಸ್ತರನ್ನು ಬಳಸಿಕೊಂಡು ಪ್ಯಾಲೆಸ್ಟೈನ್ ನಿರಾಶ್ರಿತರ ಸಾಮೂಹಿಕ ಹತ್ಯೆ ಮಾಡಿದುದು ಇಂತಹ ಮೂರ್ಖ ಮತಾಂಧತೆಗೆ ಸಾಕ್ಷಿ. ನಮ್ಮ ದೇಶದಲ್ಲಿ ಹಲವು ಬೌದ್ಧ ಬಿಕ್ಷುಗಳನ್ನು ಕೊಂದು, ಉಳಿದವರನ್ನು ದೇಶ ಬಿಟ್ಟು ಓಡಿಸಿದ್ದೂ, ಇದೇ ಕರ್ನಾಟಕದಲ್ಲಿ ಕೆಲವು ದಶಕಗಳ ಹಿಂದೆ, ಹಲವಾರು ವಿರಕ್ತ ಜಂಗಮರು (ಅಂದರೆ ಧರ್ಮಪ್ರಸಾರಕರನ್ನು) ಸಾಮೂಹಿಕವಾಗಿ ಹತ್ಯೆ ಮಾಡಿದುದು ಮೂರ್ಖ ಮತಾಂಧತೆಯ ಕುರುಹು. ಅದೂ ಧರ್ಮದ, ಧರ್ಮರಕ್ಷಣೆಯ ಹೆಸರಿನಲ್ಲಿ ನಡೆದರಂತೂ ತೀರ ಶೋಚನೀಯ.

ಸಂತರ ಜನನವನ್ನೇ ಕುರಿತು ಪ್ರಸ್ತಾಪಿಸಿದರೆ, ಕನ್ಯ ಮೇರಿಯಿಂದ ಪುರುಷ ಸಂಯೋಗವಿಲ್ಲದೆ ಜೀಸಸ್‌ ಹುಟ್ಟಲು ಸಾಧ್ಯವೆ? ಆಕೆ ಕನ್ಯೆಯಿದ್ದಾಗ ಹುಟ್ಟಿರಬಹುದು? ಗಂಡನಿಂದಲ್ಲದಿದ್ದರೂ ಪುರುಷನಿಂದ ಹುಟ್ಟಲು ಮಾತ್ರ ಸಾಧ್ಯ.' ಎಂದು ಒಬ್ಬ ಹಿಂದೂ ವಿಚಾರವಾದಿ ಹೇಳಲಿ, ಅವನನ್ನು ಸುಮ್ಮನೆ ಉಳಿಸುವರೆ. ಇಂತಹ ಸೂಕ್ಷ್ಮ ಪ್ರಸಂಗ ಬಿಡಿ, 'ಪೃಥ್ವಿ ತಿರುಗುತ್ತದೆ. ಸೂರ್ಯ ಸ್ಥಿರವಾಗಿರುತ್ತಾನೆ.' ಎಂದು, ಬೈಬಲ್ ನಂಬಿಕೆಗೆ ವಿರುದ್ದ ಹೇಳಿದ ಗೆಲಿಲಿಯೋನನ್ನೇ ಬಿಡಲಿಲ್ಲ.

ಚೆನ್ನಬಸವಣ್ಣನವರನ್ನು ಇದೇ ರೀತಿ ಅಸಹಜವಾಗಿ ದೊಡ್ಡವನನ್ನಾಗಿ ಮಾಡಲು ಕೆಲವರು ಕಾರ್ಯಕತೃಗಳು ಅಂದು ಪ್ರಯತ್ನಿಸಿದರು. ಆದರೆ 'ಸಿಂಗಿರಾಜನಂತಹ ಪುರಾತನ ಕವಿಗಳೇ ಒಪ್ಪದೆ ಚೆನ್ನಬಸವಣ್ಣನ ತಂದೆ ಶಿವಸ್ವಾಮಿ ಎಂಬುವುದನ್ನು ಸಿದ್ಧಪಡಿಸಿದರು. ಸಿದ್ಧಲಿಂಗೇಶ್ವರರನ್ನು ಕವಿಗಳು ಅಯೋನಿಜರನ್ನು ಮಾಡಿದರು. ಅವರಾದರೋ ಬಸವಪಥದ ಪಡಿಯಚ್ಚಿನ ಕ್ರಾಂತಿಪುರುಷ ವಾಸ್ತವವಾದಿ. ಹೀಗೆ ಮಾಡುವ ಉದ್ದೇಶ ಎರಡು. ಒಂದು, ತಮ್ಮ ಭಕ್ತಿ - ಅಭಿಮಾನಗಳಿಗೆ ಪಾತ್ರರಾದ ಮಹಾತ್ಮರು ಎಲ್ಲರಂತೆ ಮನುಜಗರ್ಭದಲ್ಲಿ ಬರುವುದು ಬೇಡ ಎಂಬುದು. ಇನ್ನೊಂದು, ಜನ್ಮ ಪ್ರಸಂಗದ ಹಿಂದೆ ಏನಾದರೂ ಗುಸುಗುಸು ಇದ್ದಾಗ ಏನಾದರೂ ಒಂದು ಅದ್ಭುತವನ್ನು ಸೃಷ್ಟಿಸಿ, ಕೈತೊಳೆದುಕೊಳ್ಳುವುದು. ಉದಾಹರಣೆಗೆ ಕರ್ಣನ ಜನ್ಮ ಪ್ರಸಂಗ.

ಕರ್ಣನು ತನ್ನ ಅಸಾಮಾನ್ಯ ತ್ಯಾಗಗುಣ, ತತ್ತ್ವನಿಷ್ಠೆ, ಪವಿತ್ರ ಜೀವನಕ್ಕೆ ಹೆಸರಾದವನು. ಪಾಂಡವರ ಕಡೆಗೆ ಗೆಲುವು ಒಲಿಯುವಾಗ ಇಂದಿನ ರಾಜಕಾರಣಿಗಳಂತೆ ನೆಪಹೇಳಿಕೊಂಡು ಸುಲಭವಾಗಿ ಜಿಗಿಯಬಹುದಿತ್ತು. ಅವನು ಸೋತಿರಬಹುದು, ಸತ್ತಿರಬಹುದು, ಮಹಾಭಾರತದ ಎಲ್ಲ ಪಾತ್ರದಾರಿಗಳೂ ಸತ್ತಿರಬಹುದು, ಆದರೆ ಕರ್ಣನ ಪಾತ್ರ ಸತ್ತು ಬದುಕಿದ, ಸೋತು ಗೆಲ್ಲುವ ಪಾತ್ರ. ಅವನ ಗುಣ ಸಾಧನೆಗಳಿಂದ ಅವನು ಮಹಿಮಾನ್ವಿತ, ಹುಟ್ಟಿಗಿಂತ ಸಾಧನೆ ದೊಡ್ಡದು. ಅದಕ್ಕಾಗಿ ಕಷ್ಟಪಟ್ಟು ಅವನನ್ನು ಕಿವಿಯಲ್ಲಿ ಹುಟ್ಟಿಸುವುದೇತಕ್ಕೆ? ಸರ್ವಜ್ಞನು ಎಷ್ಟು ಚೆನ್ನಾಗಿ ಹೇಳುತ್ತಾನೆ ನೋಡಿ :

ಯಾತರದು ಹೂವಾದರೇನು ನಾತರದು ಸಾಲದೆ?
ಜಾತಿವಿಜಾತಿ ಎನಬೇಡ | ದೇವ
ನೊಲಿದಾತನೆ ಜಾತ ಸರ್ವಜ್ಞ ||


ಎಲ್ಲರಂತೆಯೇ ಮಹಾತ್ಮರು ಹುಟ್ಟುವರು, ಬೆಳೆಯುವರು ಎಂಬುದನ್ನು ಅರಿಯಬೇಕು.

ಚೆನ್ನಬಸವಣ್ಣನವರು ಚಿನ್ಮಯಜ್ಞಾನಿ. ಅವರು ತಂದೆಯಿಲ್ಲದೆ ಹುಟ್ಟಿದರು ಎಂಬ ಅಸಹಜ ಕಲ್ಪನೆ ಹಿಡಿದು, ಅವರನ್ನು ದೊಡ್ಡವರನ್ನಾಗಿ ಮಾಡಲು ಕೆಲವು ಕವಿಗಳು ಯತ್ನಿಸಿದರು. ಅಕ್ಕನಾಗಮ್ಮನ ವ್ಯಕ್ತಿತ್ವ ಎಷ್ಟು ಬೆಳೆಯಿತೋ ಅಷ್ಟು ಆಕೆಯ ಪತಿ ಶಿವಸ್ವಾಮಿಯ ನಿಲುವು ಬೆಳೆಯಲಿಲ್ಲ. ಹೀಗಾಗಿ ಅವನ ಹೆಸರು ಪ್ರಸಿದ್ಧಿಗೆ ಬರಲಿಲ್ಲ. ಶ್ರೀಮತಿ ಇಂದಿರಾ ಗಾಂಧಿಯವರ ಹೆಸರು ಬಹಳಷ್ಟು ಬೆಳೆದು ನಿಂತಿದೆಯಷ್ಟೆ. ಆದರೆ ಎಷ್ಟು ಜನಕ್ಕೆ ಅವರ ಪತಿಯ ಹೆಸರು ಗೊತ್ತಿದೆ. ಹೆಸರು ಪ್ರಸಿದ್ಧವಾಗದ ಮಾತ್ರಕ್ಕೆ ವ್ಯಕ್ತಿಯ ಅಸ್ತಿತ್ವವನ್ನೇ ಇಲ್ಲವಾಗಿ ಮಾಡಬೇಕಾಗಿಲ್ಲ.

ಎಳವಾರದ ಶ್ರೀರಾಮನಗೌಡ ಪಾಟೀಲರ ಇನ್ನೊಂದು ವಿವರಣೆ ತುಂಬಾ ಚೆನ್ನಾಗಿದೆ. ಆಧ್ಯಾತ್ಮಿಕ ಪ್ರವೃತ್ತಿಯ ಮಹಿಮಾನ್ವಿತೆ ಅಕ್ಕ ನಾಗಮ್ಮ ಸಹೋದರನ ಜೊತೆಗೆ ಇದ್ದು ಸಾಮಾಜಿಕ ಪರಿವರ್ತನೆಯ ಮಣಿಹ ಪೂರೈಸಲು ಪತಿಗೃಹ ಕೂಡಲ ಸಂಗಮ ತೊರೆದು ಕಲ್ಯಾಣಕ್ಕೆ ನಡೆದಳು. ಪತಿ ಶಿವಸ್ವಾಮಿ ಚೆನ್ನಮ್ಮನೆಂಬ ದ್ವಿತೀಯ ಪತ್ನಿಯನ್ನು ಪಡೆದು ಹಲವಾರು ಮಕ್ಕಳಿಗೆ ಜನ್ಮವಿತ್ತ. ಚೆನ್ನಬಸವಣ್ಣ ಹುಟ್ಟಿದಾಗ ತಾಯಿ ಚೆನ್ನಮ್ಮ ಜನ್ಮವಿತ್ತು, ತೀರಿಹೋದಳು. ತಾಯಿಯಿಲ್ಲದ ತಬ್ಬಲಿಯನ್ನು ಸಾಕಲು ಅಸಮರ್ಥನಾದ ಶಿವಸ್ವಾಮಿ ಪತ್ನಿ ಅಕ್ಕನಾಗಮ್ಮನ ಉತ್ತಮ ಆಶ್ರಯದಲ್ಲಿ ಮಗನನ್ನು ಬೆಳೆಸಬೇಕೆಂಬ ಉದ್ದೇಶದಿಂದ ಕಲ್ಯಾಣಕ್ಕೆ ಬಂದ. ರಾಜಕೀಯ, ಧಾರ್ಮಿಕ, ಸಾಮಾಜಿಕ ಎಲ್ಲಾ ಕ್ಷೇತ್ರಗಳಲ್ಲಿಯೂ ವಿರಾಟ್ ರೂಪಿಯಾಗಿ ಬೆಳೆದು ನಿಂತಿದ್ದ ಬಸವಣ್ಣನವರನ್ನು ನೇರವಾಗಿ ಕಾಣಲು ಶಿವಸ್ವಾಮಿಗೆ ಆತ್ಮಬಲ ಸಾಲದೆ ಹೋಯಿತು. ಅಷ್ಟು ಹೊತ್ತಿಗಾಗಲೇ ಅನುಭವ ಮಂಟಪದಲ್ಲಿ ಉತ್ತಮ ಸ್ಥಾನವೊಂದನ್ನು ಗಳಿಸಿಕೊಂಡು ಬಸವಣ್ಣನವರಿಗೆ ಆತ್ಮೀಯರಾಗಿದ್ದ ಶರಣ ಕಕ್ಕಯ್ಯನವರ ಮಧ್ಯಸ್ತಿಕೆಯ ಮೇಲೆ ಮಗುವನ್ನು ನಾಗಲಾಂಬಿಕೆಗೆ ಒಪ್ಪಿಸಿದ. ಚೆನ್ನಬಸವಣ್ಣನು ನಾಗಲಾಂಬಿಕೆಯ ಸಾಕುಮಗನಾಗಿ ಬೆಳೆದ. ಈ ವಿಚಾರಧಾರೆ ನಿಜಕ್ಕೂ ವಾಸ್ತವಿಕವೂ ಮತ್ತು ತಾರ್ಕಿಕವೂ ಆಗಿದೆ.

ಚಿಪ್ಪಿನಲ್ಲಿ ಮುತ್ತು, ಸರೋವರದಲ್ಲಿ ಕಮಲ ಅರಳುವಂತೆ ಬಸವಣ್ಣನು ಮಾದರಸ ಮಾದಲಾಂಬಿಕೆಯ ಗರ್ಭಶುಕ್ತಿಯಲ್ಲಿ ಹುಟ್ಟಿ ಬರುತ್ತಾನೆ. ಮಹಾ ಚೇತನಗಳ ಬರವನ್ನು ನಿಸರ್ಗವೂ ಹತ್ತೂರ್ವಕವಾಗಿ ಸ್ವಾಗತಿಸುವುದು ಮತ್ತು ಕೆಲವು ಅತೀಂದ್ರಿಯಾನುಭವಗಳನ್ನು ಹೊಂದುವ ಶಕ್ತಿಯಿದ್ದ ಋಷಿ ಮುನಿಗಳು ನಿಸರ್ಗದ ಈ ಬದಲಾವಣೆಯನ್ನು ಗುರುತಿಸಬಲ್ಲರು. ವಿಶೇಷದೈವೀ ಅಂಶ ಇಳೆಗೆ ಇಳಿಯುವುದನ್ನು ಕಾಣಬಲ್ಲರು.

ಮಗುವು ನೋಡಿದರೆ, ಕಣ್ಣೆರೆಯದೆ, ಬಾಯ್ದೆರೆಯದೆ, ಅಳದೆ ಮಿಡುಕದೆ ನಿಶ್ವೇಷ್ಟಿತವಾಗಿ ಮಲಗಿದೆ. ಹಲವು ಸಂಕಲ್ಪ ಹೊತ್ತು, ವ್ರತವನ್ನು ಮಾಡಿ ಹೆತ್ತ ಮಾದಲಾಂಬಿಕೆಗೆ ಇದರಿಂದ ತೀವ್ರವಾದ ನಿರಾಶೆ, ಮಗನ ಜನನದ ಸುದ್ದಿ ತಿಳಿದು ಬಾಗೇವಾಡಿಯಿಂದ ಇಂಗಳೇಶ್ವರಕ್ಕೆ ಧಾವಿಸಿದ ಮಾದರಸರಿಗೂ ತೀವ್ರ ನಿರಾಶೆ, ಅಂತಹ ಪರಿಸ್ಥಿತಿಯಲ್ಲಿ ಮನೆಗೆ ಓರ್ವ ಜ್ಞಾನಿಯ ಆಗಮನ.

ಆ ಜ್ಞಾನಿ ಯಾರು? ಅವನು ಬಂದುದು ಹೇಗೆ? ಹೋದುದು ಹೇಗೆ? ಈ ಪ್ರಶ್ನೆಗೆ ಪಾಲ್ಕುರಿಕೆ ಸೋಮನಾಥ ಮತ್ತು ಭೀಮಕವಿಯ ವಿವರಣೆ ಹೀಗಿದೆ. ಅರ್ಧೋದಯದಲ್ಲಿ ಮಗುವು ಇಳೆಗೆ ಬಂದಾಗ ಆ ಮಗುವಿನಲ್ಲಿ ಇದ್ದ ಶಿವನು ಗುರುವಿನ ಆಕಾರವನ್ನು ತಾಳಿ ಆತನ ಅಂಗದ ಮೇಲೆ ಲಿಂಗಸಂಗವ ಮಾಡಿದ (ಪದ್ಯ ೨೪); ಶಿವಾರ್ಪಿತವಲ್ಲದುದು ಏನನ್ನು ತಿನ್ನಿಸಬೇಡಿರಿ,'' ಎಂದು ಅದೃಶ್ಯನಾಗುವನು. (ಪದ್ಯ ೨೮) ಈ ವರ್ಣನೆಯ ಪ್ರಕಾರ ದೇವರೇ ಕಾಣಿಸಿಕೊಂಡು ಅನುಗ್ರಹಿಸಿ ಕಣ್ಮರೆಯಾದ. ಅವನು ಹೇಗೆ ಇದ್ದನು? 'ಜಡೆ ಮುಡಿ ಕಟ್ಟಿದ್ದಾನೆ, ಪಿತಾಂಬರದ ಉಡುಗೆ ಹೊದೆದಿದ್ದಾನೆ, ರತ್ನಗಂಬಳಿ ಹೊದ್ದಿದ್ದಾನೆ, ತಾಮ್ರಕುಂಡಲಗಳನ್ನು ಧರಿಸಿದ್ದಾನೆ. ರುದ್ರಾಕ್ಷಿಗಳ ತೊಡಿಗೆಯು ಅವನಿಗಿದೆ, ಬಿಳಿಯ ಕೊಡೆ ಹಿಡಿದಿದ್ದಾನೆ, ದಂಡವೂ ಇದೆ. ಮೈಯಲ್ಲೆಲ್ಲ ಭಸ್ಮದ ಲೇಪನ, ಹಣೆಯಲ್ಲಿ ತ್ರಿಪುಂಡ್ರದ ರೇಖೆಗಳು” ಕವಿಯ ವರ್ಣನೆಯಲ್ಲಿ ತಾನೇ ಸ್ವತಃ ಇಷ್ಟಲಿಂಗ ಧರಿಸಿದ್ದ ಪ್ರಸ್ತಾಪ ಎಲ್ಲಿಯೂ ಇಲ್ಲ. ಜಡೆಮುಡಿಯನಳವಡಿಸಿ ತೋರುವ ಮೃಡನ ಸಜ್ಜೆ' ಎಂಬುದಾಗಿ ವಾಕ್ಯರಚನೆ ಮಾಡಿದರೆ, ಆ ಮುನಿಯ ಜಡೆ ಮೃತನ ಸಜ್ಜೆಯಾಗಿತ್ತು ಎಂದು ಅರ್ಥೈಸಬಹುದು. ಜಡೆಯಲ್ಲಿ ಶಿವಲಿಂಗವನ್ನಿಟ್ಟು ಕಟ್ಟುವುದು ಶೈವ ಪಂಥವೊಂದರ ಆಚರಣೆಯೇ ವಿನಃ ಲಿಂಗಾಯತ ಧರ್ಮದ ಆಚರಣೆಯಲ್ಲ ಎಂಬುದು ಸುಸ್ಪಷ್ಟ.

(ಸ್ಥಾವರಲಿಂಗ, ಶಿವಲಿಂಗ, ಇಷ್ಟಲಿಂಗ ಎಂಬ ಮೂರು ಪದಗಳನ್ನು ಖಚಿತವಾದ ಅರ್ಥವನ್ನಿಟ್ಟುಕೊಂಡು ನಾನು ಬಳಸುತ್ತೇನೆ.

೧. ಸ್ಥಾವರ ಲಿಂಗವೆಂದರೆ ಒಂದೇ ಸ್ಥಳದಲ್ಲಿ ಅಂದರೆ ದೇವಾಲಯದಲ್ಲಿ ಸ್ಥಾಪಿಸಲ್ಪಟ್ಟುದು.
೨. ಚರಲಿಂಗವೆಂದರೆ ತಲೆಯಲ್ಲಿ ಧರಿಸಿ ಅಥವಾ ಚೀಲಗಳಲ್ಲಿ, ಬುಟ್ಟಿಗಳಲ್ಲಿ ಇಟ್ಟುಕೊಂಡು ತೆಗೆದುಕೊಂಡು ಹೋಗಬಹುದಾದ, ಮನೆಯ ಜಗುಲಿಯ ಮೇಲೂ ಇಡಬಹುದಾದ ಆದರೆ ಸ್ಥಾವರ ಲಿಂಗವನ್ನು ಹೋಲುವ ಚಿಕ್ಕ ಆಕಾರದ್ದು.
೩. ಇಷ್ಟಲಿಂಗವೆಂದರೆ ಗೋಳಾಕಾರದ ಕಪ್ಪು ಕಂಥೆಯುಳ್ಳ, ಅಂಗದ ಮೇಲೆ ಧರಿಸಲ್ಪಡುವ ಕುರುಹು, ಪುರಾಣ- ಕಾವ್ಯ ಮು೦ತಾದವುಗಳಲ್ಲಿ ಶಬ್ದಗಳು ಹೇಗೇಗೋ ಬಳಕೆಯಾಗಿರುವುದರಿಂದ, ಸ್ಪಷ್ಟತೆಗಾಗಿ ನಾನು ಶಬ್ದಗಳನ್ನು ಮೇಲಿನ ಅರ್ಥದಲ್ಲಿ ಬಳಸುತ್ತೇನೆ.)

ಬಸವಣ್ಣನವರು ರೂಪಿಸಿ, ಧಾರಣೆ ಮಾಡಿಕೊಂಡು, ಇನ್ನಿತರರಿಗೆ ಧರಿಸಿ, ಇಷ್ಟ ಲಿಂಗವು ಮಗುವಿನ ಜನನವಾದ ತಕ್ಷಣ ಕಟ್ಟಲ್ಪಡಬೇಕು ಎಂಬ ಸಂಸ್ಕಾರವನ್ನು ಬಳಕೆಗೆ ತಂದು, ಇನ್ನೂ ಮನೋವೈಜ್ಞಾನಿಕವಾಗಿ ಮುಂದೆ ಹೋಗಿ ತಾಯಿಯು ಗರ್ಭವತಿಯಿದ್ದಾಗ ಎಂಟು ತಿಂಗಳಲ್ಲೇ ಅಕೆಗೆ ಈ ಸಂಸ್ಕಾರ ನೀಡಿದರೆ, ಮಗುವು ತಾಯಿಯ ಅನ್ನ, ನೀರು, ಗಾಳಿಗಳನ್ನು ಹಂಚಿಕೊಂಡು ಜೀವ ತಾಳುವಂತೆ, ಧರ್ಮವನ್ನು ಹಂಚಿಕೊಳ್ಳುವುದು ಎಂಬ ಆಚರಣೆಯನ್ನು ಅನುಷ್ಠಾನಕ್ಕೆ ತಂದರು. ಇದು ಬಸವೋತ್ತರ ಲಿಂಗಾಯತ ಸಮಾಜದ ಆಚಾರಣೆಯೇ ವಿನಃ ಬಸವ ಪೂರ್ವದ ಶೈವ ಸಮಾಜದ ಆಚಾರಣೆಯಲ್ಲ, ಆದರೆ ಬಸವೋತ್ತರ ಸಮಾಜವನ್ನು ಕಂಡ ಭೀಮಕವಿ ಮುಂತಾದವರಿಗೆ ಈ ಘಟನೆ ಬರೆಯುವ ಆಸೆ : ಬರೆದರೆ ಐತಿಹಾಸಿಕತೆಯ ದೃಷ್ಟಿಯಿಂದ ತಪ್ಪಾಗುವುದೆಂಬ ಸಂಕೋಚ; ಹೀಗಾಗಿ ಮಗುವಿನಲ್ಲೆ ಇಂಥ ಶಿವನನ್ನು, ಕೆಲಸ ಪೂರೈಸಿ, ಅದೃಶ್ಯ ಮಾಡಿಬಿಟ್ಟು ನಿರಾಳವಾಗಿ ಉಸಿರಾಡಿದ್ದಾನೆ.

ಸಿಂಗಿರಾಜ ಕವಿಯ ವಿವರಣೆ ಹೀಗಿದೆ, “ಶುಭ ಮಾಸದ ಶುದ್ಧ ಚತುರ್ದಶಿಯ ಹಿಮಕರವಾದ ಹಿಮಕರಾರ್ದಸ್ಥ ಶಿವಯೋಗದ ಶುಭಮುಹೂರ್ತದಲ್ಲಿ ಬಸವಣ್ಣನವರ ಜನನವಾಗುವುದು. ಹುಟ್ಟಿದ ಶಿಶು ಕಣ್ ಬಾಯ್ದೆರೆಯದೆ ಅಳದೆ ಮೌನದಿಂದಿರುವುದು. ಕೃಷ್ಣವೇಣಿ ಸಂಗಮದಿಂದ ಅ ಪೂರಕ್ಕೆ ಜಾತವೇದಿಗಳೆಂಬ ತಾಪಸಾಚಾರ್ಯರು ಅಗಮಿಸಿದ್ದರು. ಆ ತಪಸ್ವಿಗಳು ಮಗುವಿಗೆ ಭಸ್ಮಧಾರಣೆ ಮಾಡಲು ಆ ಮಹಾತ್ಮಕನು ಕಣ್ಣೆರೆದು ಕರ್ಮನಿರ್ಮೂಲನ ಮಾಡಿಕೊಂಡನು.'' ಸಿಂಗಿರಾಜನ ಅಭಿಮತದಂತೆ ಜಾತವೇದಿಗಳೊಬ್ಬ ಮಹಾಯೋಗಿಗಳು; ಮಗುವನ್ನು ತೋರಲು ಓಂ ನಮಃ ಶಿವಾಯ ಎನ್ನುತ ತ್ರಿಪುಂಡ್ರ- ವನ್ನಿಡುವರು. ಜಡೆ, ರುದ್ರಾಕ್ಷಿ ಭಸಿತ, ಯೋಗವಟ್ಟೆ, ಅಕ್ಷಮಾಲೆಗಳನ್ನು ಹೇಳಿದ ಕವಿ ಆತನಿಗೆ ಇಷ್ಟಲಿಂಗವಿದ್ದುದನ್ನು ಸೂಚಿಸಿದಂತಿಲ್ಲ (ಡಾ|| ಆರ್.ಸಿ.ಹಿರೇಮಠ ಬಸವಪುರಾಣ ಪ್ರಸ್ತಾವನೆ. ಪುಟ ೬೮)

ತಮಗೇ ಇಷ್ಟಲಿಂಗವಿದ್ದಿರದ ಕಾರಣ, ಅವರೆಂತು ಇನ್ನೊಬ್ಬರಿಗೆ ಕೊಡಲು ಬರುತ್ತದೆ? ಇದನ್ನರಿತು ಸಿಂಗಿರಾಜ 'ಸಿಂಹವಿಷ್ಟರದೊಳಿಟ್ಟು ಆರ್ಚಿಸುವ ಚರಲಿಂಗ (ಶಿವಲಿಂಗ)ವನ್ನು ಅವರು ಕೊಟ್ಟುದಾಗಿ ಹೇಳಿ, ಅರ್ಘಪಾದ್ಯಾಚಮನ ಜಲಕ್ರಮವಲ್ಲದುದನು ಏನನ್ನೂ ಮುಟ್ಟಿಸದಿರು ಎನ್ನುತ್ತಾರೆ ಎಂದು ಹೇಳಿದ್ದಾರೆ. ಸಿಂಹವಿಷ್ಟರದೊಳಿಟ್ಟು ಅರ್ಚಿಸುವುದು ಚರಲಿಂಗ(ಶಿವಲಿಂಗ). ಇಷ್ಟು ಮಾತ್ರವಲ್ಲದೆ ಬಸವಣ್ಣನವರು ಅತ್ಯಂತ ಕ್ರಾಂತಿಕರವಾದ ವಿಚಾರಧಾರೆ ಪ್ರತಿಪಾದಿಸ ತೊಡಗಿದಾಗ ಸಿಟ್ಟಿಗೆದ್ದ ಅಚಾರ ನಿಷ್ಠರು ಬಸವಣ್ಣನ ಮೇಲೆ ಒಮ್ಮೆ ಎರಗಿದಾಗ, 'ಬಸವಣ್ಣನು ಮನೆಗೆಯೆಂದು ತನ್ನಯ ಲಿಂಗಮಂ ಕೊಂಡು, ತಂದೆತಾಯಳಿಗೆ ಬೆಬ್ಬಳಿಗೊಳುತುಸುರ್ದು ಹೊರಡುತ್ತಾನೆ. ಮನೆಯಲ್ಲಿಟ್ಟು ಹೊರಹೋಗಿದ್ದ, ಮನೆಗೆ ಬಂದು ತೆಗೆದುಕೊಂಡಂತಹ, ಆ ಲಿಂಗವು ಇಷ್ಟಲಿಂಗವಾಗಿರಲು ಸಾಧ್ಯವೇ ಇಲ್ಲ. ಬಸವಣ್ಣನೇನೂ ಈಗಿನ ಕೆಲ ಖಾನೇಷುಮಾರಿ ಲಿಂಗಾಯತ ತರುಣರಂತೆ ಇಷ್ಟಲಿಂಗ ಕಟ್ಟಿಕೊಳ್ಳಲು ನಾಚುವವನೇನಲ್ಲವಷ್ಟೇ, ಶೈವ ಬ್ರಾಹ್ಮಣರಲ್ಲಿ “ದೇವರಗೂಡಿ'' ನಲ್ಲಿ ಇಟ್ಟು ಶಿವ ಲಿಂಗವನ್ನು ಆರಾಧಿಸುವ ಸಂಪ್ರದಾಯವಿದ್ದಂತೆ ಅಂಥ ಚರಲಿಂಗ(ಶಿವಲಿಂಗ)ವೊಂದನ್ನು ಜಾತವೇದಿಗಳು ಕೊಟ್ಟು ಹೋದಂತೆ ಸಿಂಗಿರಾಜ ಹೇಳಿದ್ದಾನೆ.

ಭೀಮಕವಿ ಹೇಳಿದಂತೆ ಶಿವನೇ ತಟ್ಟನೆ ಬಂದು ಅನುಗ್ರಹಿಸಿ ಅದೃಶ್ಯನಾದನೆಂಬುದೇ ಆಗಲೀ, 'ಆ ಊರಿಗೆ ಒಬ್ಬರು ತಪಸ್ವಿಗಳು ಬಂದು ಇಳಿದು ಕೊಂಡಿದ್ದರು. ಅಂಥವರ ಬಳಿ ತಮ್ಮ ಸಂಕಷ್ಟ ಹೇಳಿದಾಗ ಅವರು ಭಸ್ಮ ಧರಿಸಿ, ಮಂತ್ರ ಉಸುರಿದಾಗ ಮಗುವು ಕಣ್ಣೆರೆಯಿತು,' ಎಂಬ ಸಿಂಗಿರಾಜನ ವಿವರಣೆಯೇ ಅಗಲೀ, ಎರಡೂ ಬಸವಣ್ಣನವರು ಜನಿಸಿದಾಗ ಒಬ್ಬ ಯೋಗಿಯ ಆಗಮನವಾಗಿತ್ತೆಂಬುದನ್ನು ಪ್ರತಿಪಾದಿಸುತ್ತವೆ.

ಇದೇ ಬಗೆಯ ಘಟನೆಯನ್ನು ಬುದ್ಧನ ಜೀವನದಲ್ಲಿ ಕಾಲಾಮ ಖುಷಿ ಬಂದು ಅನುಗ್ರಹಿಸಿದಾಗ ಮತ್ತು ಏಸುವಿನ ಜೀವನದಲ್ಲಿ ಪೂರ್ವದಿಂದ ಬಂದ ಯೋಗಿಗಳು ಅನುಗ್ರಹಿಸಿದಾಗ ಕಾಣುತ್ತೇವೆ. ದೈವೀ ಜಗತ್ತಿನಲ್ಲಿ ಪ್ರವಾದಿಗಳ ಬರವು ವಿಶೇಷವಾದೊಂದು ಘಟನೆ.

ಇಷ್ಟು ಮಾತ್ರವಲ್ಲ, ಆ ಯೋಗಿಗಳು ಹೇಳುತ್ತಾರೆ, “ನೀವು ನಿಮಿತ್ತ ಮಾತ್ರ ಮಾತಾಪಿತೃಗಳು; ಇವನು ದೇವರ ಕರುಣೆಯ ಕಂದ, ಕಾರಣಿಕ ಶಿಶು. ಧರ್ಮ ವೃಷಭನ ಅವತಾರಿಯಾದ ಇವನಿಗೆ ಬಸವನೆಂದು ಹೆಸರಿಡಿ.'' ಎಂದು ಸೂಚಿಸುತ್ತಾರೆ. ಆ ದಂಪತಿಗಳು ತಮ್ಮ ಮಗನಿಗೆ ಬಸವರಸ ಎಂದು ಹೆಸರಿಡುತ್ತಾರೆ.

ಮಕ್ಕಳಿಗೆ ಹೆಸರಿಡುವುದರಲ್ಲಿ ಒಂದು ಸಂಸ್ಕೃತಿಯಿದೆ, ಮನುಷ್ಯ ಆ ಮೂಲಕ ತನ್ನ ಧರ್ಮ, ಪರಂಪರೆಗಳನ್ನು ಉಳಿಸುತ್ತಾನೆ. ನೆನಪಿಸಿಕೊಳ್ಳುತ್ತಾನೆ ಮಕ್ಕಳಿಗೆ ಹೆಸರನ್ನಿಟ್ಟಾಗ ಅವರುಗಳು ಕುತೂಹಲ, ಅಭಿಮಾನಗಳಿಂದ ಆ ಹೆಸರುಗಳ ಹಿನ್ನೆಲೆ, ಪರಂಪರೆಯ ಬಗ್ಗೆ ಚಿಂತಿಸುತ್ತಾರೆ ಅದರ್ಶವಾದಿಗಳಾಗಿ ಬೆಳೆಯುತ್ತಾರೆ. ಒಂದು ಗಿಡದ ಬೇರು ಭೂಮಿಯಲ್ಲಿ ಆಳವಾಗಿ ಬೆಳೆದಂತೆಲ್ಲ, ವೃಕ್ಷವು ಸೊಂಪಾಗಿ ಬೆಳೆಯುತ್ತದೆ. ಅದೆ ರೀತಿ ಮನುಷ್ಯನ ಅಭಿಮಾನದ ಬೇರು ತನ್ನ ಸಂಸ್ಕೃತಿ ಪರಂಪರೆಗಳಲ್ಲಿ ಆಳವಾಗಿ ಇಳಿದಂತೆಲ್ಲ ಭವಿಷ್ಯವು ಸುಂದರವೂ, ಸದೃಢವೂ ಆಗುತ್ತದೆ.

ಭಾರತೀಯ ಸಂಸ್ಕೃತಿ ಎಷ್ಟು ಕೆಳಮಟ್ಟಕ್ಕೆ ಇಳಿಯುತ್ತಿದೆ ಎಂದರೆ ಆಚಾರ-ವಿಚಾರ, ಉಡುಗೆ-ತೊಡುಗೆ, ಆಹಾರ-ವಿಹಾರ ಎಲ್ಲವೂ ಯಾವುದೋ ಯಾವುದೋ ಅನ್ಯಸಂಸ್ಕೃತಿಯ ಅಂಧಾನುಕರಣೆಯಾಗಿದೆ. ವಿಜ್ಞಾನ, ತಾಂತ್ರಿಕತೆ, ಪ್ರಾಮಾಣಿಕತೆ, ಕಾವ್ಯದಕ್ಷತೆ ಮುಂತಾದ ವಿಷಯಗಳಲ್ಲಿ ಪಾಶ್ಚಿಮಾತ್ಯರನ್ನು ಅನುಕರಿಸದೆ ಅವರ ಸ್ವಚ್ಛಂದ ಪ್ರವೃತ್ತಿ, ಕೌಟುಂಬಿಕ ವ್ಯವಸ್ಥೆ ಇಂಥದರಲ್ಲಿ ಅನುಕರಣೆ ಕಾಣುತ್ತೇವೆ. ಇದು ಈ ಸಮಾಜದ ದುರ್ದೈವವಲ್ಲದೆ ಮತ್ತೇನೂ ಅಲ್ಲ. ಹೆಸರಿಡುವಾಗಲು ಮೋಹಿನಿ, ಚಂಚಲ, ವಂಚನೆ, ಡಿಂಪಲ್, ಟೋನಿ, ರತಿ, ಮದನ ಮುಂತಾದ ಹೆಸರುಗಳನ್ನಿಡುವಲ್ಲಿ ತಾಯಿತಂದೆಯರ ರಾಜಸಿಕ ಪ್ರವೃತ್ತಿ ಕಾಣಬರುತ್ತದೆ. ತಮ್ಮ ಮಕ್ಕಳು ಕೊಂಚವಾದರೂ ಅದರ್ಶ ವ್ಯಕ್ತಿಗಳಾಗಬೇಕೆಂಬ ಬಯಕೆ ಮಾತಾಪಿತೃಗಳಲ್ಲೇ ಕಾಣಬರದು. ತಮ್ಮ ಮಕ್ಕಳಿಗೆ ಹೆಸರಿಡುವುದರಲ್ಲಿಯೂ ಒಂದು ಹರಕೆ, ಹಾರೈಕೆ ಇರುತ್ತದೆ. ಉತ್ತಮ ಸಂಸ್ಕೃತಿಯನ್ನು ಪೋಷಿಸಬೇಕೆಂಬ ತಾಯಿತಂದೆಯರು ಮನೆಯಲ್ಲಿ ಉತ್ತಮ ಗ್ರಂಥ ಭಂಡಾರವನ್ನು ಸಂಗ್ರಹಿಸಿ, ಸಂತರ, ವಿಜ್ಞಾನಿಗಳ, ದಾರ್ಶನಿಕರ ಭಾವಚಿತ್ರಗಳನ್ನು ಹಾಕಬೇಕು. ಗ್ರಂಥ ಭಂಡಾರ ಮನೆಗೆ ತುಂಬಾ ಶೋಭೆ ಕೊಡುವಂತಹುದು. ಸಿಸಿರೋ ಒಂದು ಕಡೆ "A Room without books is as a body without a soul" ಪುಸ್ತಕವಿಲ್ಲದ ಕೋಣೆ ಅತ್ಯವಿಲ್ಲದ ದೇಹದಂತೆ ಎಂಬ ಅವನ ಮಾತು ಅರ್ಥಗರ್ಭಿತ ಕೋಣೆಯಲ್ಲಿ ಸುತ್ತಲೂ ಪುಸ್ತಕವಿರುವಾಗ ಆ ಪರಿಸರದಲ್ಲಿ ಬೆಳೆಯುವ ಮಗುವಿನ ಚಿಂತನ ಶಕ್ತಿಯೇ ಬೇರೆಯಾಗುತ್ತದೆ. ಅತ್ಯಂತ ಭವ್ಯವಾದ ಭವನವೊಂದನ್ನು ಕಟ್ಟಿ, ಬೆಲೆ ಬಾಳುವ ರತ್ನಗಂಬಳಿ, ಸೋಫಾಸೆಟ್ ಎಲ್ಲ ಹೊಂದಿಸಿ ಕಣ್ಣಿಗೊಡೆಯುವಂತೆ ಷೋಕೇಸ್ ಸಾಮಾನುಗಳನ್ನು ಜೋಡಿಸಿದರೂ ಆ ಮನೆಯಲ್ಲಿ ಪರಿಪೂರ್ಣತೆ ಕಾಣದು. ಆರೋಗ್ಯ, ಮೈಕಾಂತಿ ಇಲ್ಲದ ಸ್ತ್ರೀಯು ಬಣ್ಣ ಬಡಿದುಕೊಂಡು ಮೇಕಪ್ ಮಾಡಿಕೊಂಡಷ್ಟು ಕೃತಕತೆ ಆ ಮನೆಯಲ್ಲಿರುತ್ತದೆ. ಚಿಕ್ಕದಾದರೂ ಚೊಕ್ಕವಾದ ಮನೆಯಲ್ಲಿ ಒಂದು ಲೈಬ್ರರಿ ಇದ್ದರೆ ಯಾವ ಮೇಕಪ್ ಇಲ್ಲದೆ ಕಳೆತುಂಬಿ ತುಳುಕುವ, ಕೆಲಸಗಾರ್ತಿಯಾದ ಆರೋಗ್ಯಯುಕ್ತ ಸ್ತ್ರೀಯಂತೆ ಆ ಮನೆ.

ಬಹಳಷ್ಟು ನಮ್ಮ ಹೆಣ್ಣು ಮಕ್ಕಳಿಗೆ ಓದಿನಲ್ಲಿ ಅದರಲ್ಲಿಯೂ ಪ್ರೌಢವಾದ ಸಾಹಿತ್ಯದ ಓದಿನಲ್ಲಿ ಆಸಕ್ತಿ ತುಂಬಾ ಕಡಿಮೆ ಅವರಲ್ಲಿ ಬಹುಪಾಲು ಜನರ ಕಾಲಹರಣ ಅಡಿಗೆ-ಊಟ, ತೊಡಿಗೆ- ಅಲಂಕಾರ, ಹರಟೆ-ಮನರಂಜನೆ ಇದರಲ್ಲಿಯೇ ಹೋಗುತ್ತೆ, ಹೀಗಾಗಿ ಚಿಂತನ ಶಕ್ತಿಯು ನಮ್ಮ ದೇಶದಲ್ಲಿ ತೀವ್ರಗತಿಯಲ್ಲಿ ಬೆಳೆಯುತ್ತಿಲ್ಲ. ಜನಸಾಮಾನ್ಯರ ಸಮಯದ ಅರ್ಧವು ಬದುಕಿಗಾಗಿ ಹೋರಾಟದಲ್ಲಿ, ಇನ್ನರ್ಧ ಸೀಮಿತ ವಲಯದ ಅಕಾಂಕ್ಷೆಗಳ ಚಿಂತನೆಯಲ್ಲಿ ಹೋಗುತ್ತದೆ. ಹೀಗಾಗದೆ ಪ್ರೌಢ ವಿಚಾರಮಟ್ಟ ವೃದ್ಧಿಯಾಗಬೇಕಾದರೆ, ಅಧ್ಯಯನ- ಚಿಂತನೆ ಜಾಸ್ತಿಯಾಗಬೇಕೆಂದಾದರೆ ಉತ್ತಮವಾದ ಶಿಕ್ಷಣ ಕೊಡಬೇಕು.

ಪಶುಶಕ್ತಿಯ ಮಾಪನದೊಳು ಪುರುಷನಿಗಿಂ
ಸ್ತ್ರೀ ಕಡಿಮೆಯಲ್ಲದೇ,
ನೈತಿಕ ಶಕ್ತಿಯ ಮಾಪನದೊಳು ಸ್ತ್ರೀ ಮೇಲೆಂಬುದು ನಿತ್ಯ ಸತ್ಯವಯ್ಯಾ
ಇದು ಕಾರಣ ಅಬಲೆ ಎಂದುಹೀಗಳೆಯಲಾಗದು;
ತಾಳ್ಮೆಯ ದಧಿ, ಶಕ್ತಿ ವಾರಿಧಿ, ಸ್ವಾನುಭವದ ಸಿರಿ,
ಒಲವಿನಾ ತವರು ಹೆಣ್ಣಯ್ಯಾ ಸಚ್ಚಿದಾನಂದಾ
ಅವಕಾಶವಿತ್ತಾಗಲೇ ಅಭಿವೃದ್ಧಿ ಸಾಧ್ಯ! -ಪೂಜ್ಯ ಶ್ರೀ ಜಗದ್ಗುರು ಮಾತೆ ಮಹಾದೇವಿ

ಗ್ರಂಥ ಋಣ:
೧) ಪೂಜ್ಯ ಮಾತಾಜಿ ಬರೆದ "ವಿಶ್ವಧರ್ಮ ಪ್ರವಚನ" ಪುಸ್ತಕ (ಪ್ರ: ೧೯೮೭) ದಿಂದ ಅಯ್ದ ಭಾಗ. ಪ್ರಕಟಣೆ: ವಿಶ್ವ ಕಲ್ಯಾಣ ಮಿಷನ್, ಬಸವ ಮಂಟಪ, ಕಾರ್ಡ್ ರೋಡ್, ಎರಡನೆಯ ಬ್ಲಾಕು, ರಾಜಾಜಿನಗರ, ಬೆಂಗಳೂರು - ೫೬೦ ೦೧೦.

ಪರಿವಿಡಿ (index)
Previous ಬಸವಣ್ಣನವರ ಮನೆತನ-ತಂದೆ ತಾಯಿ ಬಸವರಸನ ಪವಾಡಗಳು Next
cheap jordans|wholesale air max|wholesale jordans|wholesale jewelry|wholesale jerseys