Previous ಬಸವಯೋಗಿ ಸಿದ್ಧರಾಮೇಶ್ವರ ಬಸವಣ್ಣನವರ ಬಗ್ಗೆ ಷಣ್ಮುಖ ಸ್ವಾಮಿ ವಚನ Next

ಗುರು ಬಸವಣ್ಣನವರ ಬಗ್ಗೆ ಚಿನ್ಮಯಜ್ಞಾನಿ ಚೆನ್ನಬಸವಣ್ಣನವರ ವಚನಗಳು

*

5
ಆದಿ ಬಸವಣ್ಣ, ಅನಾದಿಲಿಂಗವೆಂದೆಂಬರು,
ಹುಸಿ ಹುಸಿ ಈ ನುಡಿಯ ಕೇಳಲಾಗದು.
ಆದಿ ಲಿಂಗ, ಅನಾದಿ ಬಸವಣ್ಣನು!
ಲಿಂಗವು ಬಸವಣ್ಣನ ಉದರದಲ್ಲಿ ಹುಟ್ಟಿತ್ತು,
ಜಂಗಮವು ಬಸವಣ್ಣನ ಉದರದಲ್ಲಿ ಹುಟ್ಟಿತ್ತು,
ಪ್ರಸಾದವು ಬಸವಣ್ಣನನುಕರಿಸಲಾಯಿತ್ತು.
ಇಂತೀ ತ್ರಿವಿಧಕ್ಕೆ ಬಸವಣ್ಣನೆ ಕಾರಣನೆಂದರಿದೆನಯ್ಯಾ
ಕೂಡಲಚೆನ್ನಸಂಗಮದೇವಾ.

8
ಲಿಂಗದ ಪೂರ್ವಾಶ್ರಯವ ಕಳೆದು,
ಇದು ಪ್ರಾಣಲಿಂಗವೆಂದು ತೋರಬಂದನಯ್ಯಾ ಬಸವಣ್ಣನು!
ಲಾಂಛನದ ಪೂರ್ವಾಶ್ರಯವ ಕಳೆದು,
ಇದು ಲಿಂಗಜಂಗಮ (ಜಂಗಮಲಿಂಗ) ವೆಂದು ತೋರಬಂದನಯ್ಯಾ ಬಸವಣ್ಣನು!
ಪ್ರಸಾದದ ಪೂರ್ವಾಶ್ರಯವ ಕಳೆದು,
ಇದು, ಪ್ರಸಾದವೆಂದು ಸಯವ ಮಾಡಿ ತೋರಬಂದನಯ್ಯಾ ಬಸವಣ್ಣನು!
ಇಂತು ಲಿಂಗ ಜಂಗಮದ ಪ್ರಸಾದದ ಪೂರ್ವಾಶ್ರಯವ ಕಳೆಯಲೆಂದು
ಮರ್ತ್ಯಕ್ಕೆ ಜನಿಸಿದನಯ್ಯಾ ಕೂಡಲಚೆನ್ನಸಂಗನಲ್ಲಿ ಬಸವಣ್ಣನು.

14
ಬಸವಣ್ಣಾ ಓಂಕಾರದಿಂದತ್ತತ್ತ ನೀನೆ;
ಬಸವಣ್ಣಾ ನಾದಬಿಂದುಕಳೆಗಳಿಂದತ್ತತ್ತ ನೀನೆ,
ಬಸವಣ್ಣಾ ಪ್ರಥಮಾಚಾರ್ಯ ನೀನೆ,
ಬಸವಣ್ಣಾ ಲಿಂಗಾಚಾರ್ಯ ನೀನೆ,
ಬಸವಣ್ಣಾ ಜಂಗಮಾಚಾರ್ಯ ನೀನೆ,
ಬಸವಣ್ಣಾ ಪ್ರಸಾದಾಚಾರ್ಯ ನೀನೆ,
ಬಸವಣ್ಣಾ ಎನಗೆ ಸರ್ವಾಚಾರ್ಯ ನೀನೆ,
ನೀನೇ ಗತಿಮತಿಯಾಗಿ ಎನ್ನನುಳುಹಿದ ಕಾರಣ
ಕೂಡಲಚೆನ್ನಸಂಗಮದೇವಾ
ಆವ ವರ್ಣವಿಲ್ಲದಂದು `ಓಂ ನಮಃ ಶಿವಾಯ' ಎನುತಿರ್ದೆನು.

16
ಬಿತ್ತಿದ ಬೀಜದ ಫಲವು ವಿಪರೀತ ನೋಡಾ!
ತನ್ನಲ್ಲಿ ತಾನೆಯಾಗಿ ಆಗಮವನರಿಯದು,
ತಾನೆ ಸ್ವಯಂಕೃತ ಸಹಜ.
ಕೂಡಲಚೆನ್ನಸಂಗಯ್ಯನಲ್ಲಿ ಬಸವಣ್ಣನು.

24
ಮಾಂಸಪಿಂಡವೆಂದೆನಿಸದೆ ಮಂತ್ರಪಿಂಡವೆಂದೆನಿಸಿದ ಬಸವಣ್ಣ.
ವಾಯುಪ್ರಾಣಿಯೆಂದೆನಿಸದೆ ಲಿಂಗಪ್ರಾಣಿಯೆಂದೆನಿಸಿದ ಬಸವಣ್ಣ,
ಜಗಭರಿತನೆಂಬ ಶಬ್ದಕ್ಕೆ ಅಂಗವಿಸದೆ, ಶರಣಭರಿತ ಲಿಂಗವೆನಿಸಿದ
ಕೂಡಲಚೆನ್ನಸಂಗಯ್ಯನಲ್ಲಿ ಬಸವಣ್ಣನು.

180
ಗುರುವಿನಲ್ಲಿ ಸದಾಚಾರಿ, ಲಿಂಗದಲ್ಲಿ ಶಿವಾಚಾರಿ, ಜಂಗಮದಲ್ಲಿ ಸಮಯಾಚಾರಿ.
ಇಂತೀ ತ್ರಿವಿಧಾಚಾರ ಸಂಬಂಧವಾದ ಬಳಿಕ
ತನ್ನ ಶೀಲಕ್ಕೆ ಸಮಶೀಲವಾಗದವರ
ಮನೆಯಲನುಸರಿಸಿ ನಡೆದಡೆ ಕೂಡಲಚೆನ್ನಸಂಗನ ಶರಣ,
ಪೂರ್ವಾಚಾರ್ಯ ಸಂಗನಬಸವಣ್ಣ ಮೆಚ್ಚ ಕಾಣಿರಣ್ಣಾ.

557
ಭಕ್ತಿ ಭಕ್ತಿಯೆಂದೇನು ತುತ್ತಿಡುವನ್ನಕ್ಕವೆ ?
ಗುರು ಗುರುವೆಂದೇನು ಪರಕೆ ಹೆಸರ ಹೇಳುವನ್ನಕ್ಕವೆ ?
ಲಿಂಗ ಲಿಂಗವೆಂದೇನು ಅಂಗ ಬೀಳುವನ್ನಕ್ಕವೆ ?
ಜಂಗಮ ಜಂಗಮವೆಂದೇನು ಮುಂದಿದ್ದ ಧನವೆಲ್ಲಾ ಸವೆವನ್ನಕ್ಕವೆ ?
ಪಾದೋದಕ ಪಾದೋದಕವೆಂದೇನು ಇವೆಲ್ಲಾ ಜಲವ ಕೂಡಿ ಹೋಹನ್ನಕ್ಕವೆ ?
ಪ್ರಸಾದ ಪ್ರಸಾದವೆಂದೇನು ಉಂಡುಂಡು
ತನು ಕಳಚಿ ಪ್ರಳಯಕ್ಕೊಳಗಹನ್ನಕ್ಕವೆ ?
ಅಲ್ಲಿ ನಿಂದಿರದಿರಾ ಮನವೆ,
ನಿಂದಿದ್ದರೆ ನೀ ಕೆಡುವೆ, ಬಂದರೆ ನಾ ಕೆಡುವೆ,
ಎನ್ನ ತಂದೆ ಕೂಡಲಚೆನ್ನಸಂಗಯ್ಯಾ,
ಈ ಅನುವ ಬಸವಣ್ಣ ತೋರಿದನಾಗಿ, ಆನು ಬದುಕಿದೆನು.

655
ಬಸವ ಬಿಲ್ಲಾಳಾಗಿ, ಹೊಸಭಕ್ತಿ ಅಂಬಾಗಿ,
ಎಸೆದನಯ್ಯಾ ಆ ಲಿಂಗವನು ಗುರಿಮಾಡಿ.
ಶಿಶುವ ಬಾಣ ಕೊಂಡು, ಬಸುರಮಧ್ಯವ ತಾಗೆ,
ಹೊಸದೆಸೆಗಳೆಲ್ಲಾ ಕಾಣಬಂದವಯ್ಯಾ !
ಭಸ್ಮದೆಣ್ಣೆಯ ಹೂಸಿ ಕೂಡಲಚೆನ್ನಸಂಗನಲ್ಲಿ
ಬಸವಪೂಯದ ಬಂದು ಆರೈದ ಲಿಂಗವನು

802
ಹನ್ನೆರಡು ಗಾವುದ ವಿಸ್ತೀರ್ಣದ ಮಹಾಪಟ್ಟಣಕ್ಕೆ
ಕಲ್ಯಾಣವೆಂಬ ಪ್ರಣತೆ, ಮಹತ್ತೆಂಬ ಎಣ್ಣೆ,
ಬಸವ ನೆಂಬ ಸ್ವಯಂಜ್ಯೋತಿ.
ಅಲ್ಲಿ ಕಾಳಯ್ಯ ಚವುಡಯ್ಯ ಕೋಲ ಸಾತಯ್ಯ,
ಮುಖವಾಡದ ಕೇಶಿರಾಜ ಖಂಡನೆಯ ಬೊಮ್ಮಣ್ಣ,
ಮಿಂಡ ಮಲ್ಲಿನಾಥ ಹಡಪದ ಅಪ್ಪಣ್ಣ ಮಡಿವಾಳ ಮಾಚಯ್ಯ,
ಅವ್ವೆ ನಾಗವ್ವೆ ಸಹಿತ ಇವರೆಲ್ಲರೂ ಸಂಗನಬಸವಣ್ಣನ ಬಯಲ ಕೂಡಿದರು.
ಇದು ಕಾರಣ, ಕೂಡಲಚೆನ್ನಸಂಗನಲ್ಲಿ
ಇವರ ಪ್ರಸಾದದ ಬಯಲೆನಗಾಯಿತ್ತು.

872
ಅಂಗ ಸಂಸಾರವಿರಹದೊಳು ಸವೆದು,
ಲಿಂಗವು ಅವಗ್ರಹಿಸಿಕೊಂಡ ಮೃತ್ತಿಕಾ ಪಂಜರದೊಳಗೆ,
ಭುಜಂಗ ತಲೆಯೆತ್ತಿ ನೋಡಲು,
ಥಳಥಳನೆ ಹೊಳೆವ ಮಾಣಕ್ಯದ ಬೆಳಗುಗಳೆಸೆಯೆ
ಸದ್ಯೋಜಾತನ ಜಟಾಮಕುಟವ ಸುತ್ತಿರ್ದ ಫಣೀಂದ್ರನಲ್ಲದೆ
ಮತ್ತಾರೂ ಅಲ್ಲವೆಂದು ಶಿಖರವ ಮೊದಲುಗೊಂಡಗುಳಿಸಲು,
ಸುತ್ತಿರ್ದ ಫಣಿಸೂತ್ರವ ಕಂಡು ಚಕ್ಕನೆ ಕದವ ತೆರೆಯಲು
ದೃಷ್ಟಿದೃಷ್ಟವಾದ ಅನಿಮಿಷನ ಕರಸ್ಥಲವ ಕಂಡು
ಧೃಷ್ಟತನದಲ್ಲಿ ಲಿಂಗವ ತೆಗೆದುಕೊಂಡಡೆ
ಸಂದು ಕಳಾಸಂಗಳು ತಪ್ಪಿ ಅಸ್ಥಿಗಳು ಬಳಬಳನುದುರಲು
ಆತನ ಬೆರಗು ನಿಮ್ಮ ಹೊಡೆದು
ಖ್ಯಾತಿಯಾಯಿತ್ತು ನೋಡಯ್ಯಾ, ಅಲ್ಲಮಪ್ರಭುವೆಂಬ ನಾಮ ನಿಮಗೆ !
ಭಕ್ತಿದಳದುಳದಿಂದ ಬಂದಿಕಾರರಾಗಿ ಬಂದು ಹೊಕ್ಕಡೆ
ಬದನೆಯ ಕಾಯಿಗಳು ಬಾಣಲಿಂಗವಾಗವೆ ನಮ್ಮ ಬಸವಣ್ಣನ ದೃಷ್ಟಿತಾಗಲು ?
ಇದು ಕಾರಣ-ಕೂಡಲಚೆನ್ನಸಂಗನಲ್ಲಿ
ಅನಿಮಿಷ, ಪ್ರಭುವಿಂಗೆ ಬಸವಣ್ಣ ಗುರುವಾದ ಕಾರಣ
ನಾನು ನಿಮಗೆ ಚಿಕ್ಕ ತಮ್ಮ ಕೇಳಾ ಪ್ರಭುವೆ.

880
ಅಂದೊಮ್ಮೆ ಧರೆಯ ಮೇಲೆ ಬೀಜವಿಲ್ಲದಂದು
ಬಸವನೆಂಬ ಗಣೇಶ್ವರನು ಭೋಂಕರಿಸಿ ಕೆಲೆದಡೆ
ಬೀಜ ಉತ್ಪತ್ತಿಯಾಯಿತ್ತು.
ಅದೆನೆ ಬಿತ್ತಿ ಅದನೆ ಬೆಳೆದು ಅಟ್ಟಟ್ಟು ಲಿಂಗಕ್ಕೆ ಬೋನವ ಮಾಡಿ-
ನಾಗಲೋಕದ ನಾಗಗಣಂಗಳಿಗೆಯೂ ಬಸವಣ್ಣನ ಪ್ರಸಾದ,
ಮರ್ತ್ಯಲೋಕದ ಮಹಾಗಣಂಗಳಿಗೆಯೂ ಬಸವಣ್ಣನ ಪ್ರಸಾದ,
ದೇವಲೋಕದ ದೇವಗಣಂಗಳಿಗೆಯೂ ಬಸವಣ್ಣನ ಪ್ರಸಾದ,
ಎಲೆ ಕೂಡಲಚೆನ್ನಸಂಗಮದೇವಾ,
ನಿಮ್ಮಾಣೆ, ನಿಮಗೂ ಎನಗೂ ಬಸವಣ್ಣನ ಪ್ರಸಾದ !

893
ಅಜ್ಞಾನವೆಂಬ ಕಾಳಿಕೆವಿಡಿದ
ಮನದ ಮೋಹವ ಪರಿಹರಿಸಿದ ಪರಿಯ ನೋಡಿರೆ !
ಒಮ್ಮೆ ಕಾಸಿ ಒಮ್ಮೆ ಕರಗಿಸಿ ಒಮ್ಮೆ ಬಣ್ಣವಿಟ್ಟು
ಎನ್ನ ಮನದ ಮೋಹವ ಕಳೆದೆನಯ್ಯಾ
ಕೂಡಲಚೆನ್ನಸಂಗಯ್ಯಾ ನಿಮ್ಮ ಶರಣ ಬಸವಣ್ಣನು.

909
ಅನಿಮಿಷಂಗೆ ಲಿಂಗವ ಕೊಟ್ಟಾತ ಬಸವಣ್ಣ.
ಆ ಲಿಂಗ ನಿನಗೆ ಸೇರಿತ್ತಾಗಿ,
ಬಸವಣ್ಣನ ಸಂಪ್ರದಾಯದ ಕಂದನು ನೋಡಾ ನೀನು.
ಭಕ್ತಿದಳದುಳದಿಂದ ಚೆನ್ನಸಂಗಮನಾಥನೆಂಬ ಲಿಂಗವನವಗ್ರಹಿಸಿಕೊಂಡೆನಾಗಿ
ಬಸವಣ್ಣನ ಸಂಪ್ರದಾಯದ ಕಂದನು ನೋಡಾ ನಾನು.
ಇಂತಿಬ್ಬರಿಗೆಯೂ ಒಂದೆ ಕುಲಸ್ಥಲವಾದ ಕಾರಣ,
ಕೂಡಲಚೆನ್ನಸಂಗಯ್ಯನಲ್ಲಿ ಮಹಾಮನೆಯ ಪ್ರಸಾದ
ಬ್ಬರಿಗೆಯೂ ಒಂದೆ ಕಾಣಾ ಪ್ರಭುವೆ.

915
'ಅಯ್ಯಾ ಅಯ್ಯಾ ಎಂದಡೆ' ಅಯ್ಯ ಓ ಎಂಬುದ ಮಾಣ್ಬನೆ ?
'ಅವ್ವಾ ಅವ್ವಾ ಎಂದಡೆ' ಅವ್ವೆ ಓ ಎಂಬುದ ಮಾಣ್ಬಳೆ ?
ಇದು ಕಾರಣ, ಕೂಡಲಚೆನ್ನಸಂಗಯ್ಯನಲ್ಲಿ
'ಬಸವಲಿಂಗಾ ಬಸವಲಿಂಗಾ ಬಸವಲಿಂಗಾ' ಎಂದಡೆ
ಎನ್ನ ಕಾಯ ಬಯಲಾಗದೆ ?

923
ಅಯ್ಯಾ, ಘನಗಂಬಿರವಪ್ಪ ಸಮುದ್ರದೊಳಗೊಂದು ರತ್ನ ಹುಟ್ಟಿದಡೆ,
ಆ ಸಮುದ್ರದೊಳಗಡಗಿರ್ಪುದಲ್ಲದೆ ಘನವಾಗಿ ತೋರಬಲ್ಲುದೆ ?
ನಿಮ್ಮ ಕರುಣಕಟಾಕ್ಷದಿಂದುದಯಿಸಿ, ಅನಂತ ಪುರಾಣವೆಲ್ಲವು
ನಿಮ್ಮ ಕೃಪೆಯಿಂದ ಸಾಧ್ಯವಾಯಿತ್ತೆನಗೆ.
ಆದಿಯನಾದಿ ಇಲ್ಲದಂದು ನೀನೊಬ್ಬನೆ ಪ್ರಸಾದಿ.
ಉಮೆಯ ಕಲ್ಯಾಣವಿಲ್ಲದಂದು ನೀನೊಬ್ಬನೆ ಪ್ರಸಾದಿ.
ಕೂಡಲಚೆನ್ನಸಂಗಮದೇವರು ಸಾಕ್ಷಿಯಾಗಿ
ಬಸವಣ್ಣಾ, ನಿಮ್ಮ ತೊತ್ತಿನ ತೊತ್ತಿನ ಮರುದೊತ್ತಿನ ಮಗ ನಾನಯ್ಯಾ.

1044
ಎನ್ನ ಕರಸ್ಥಲದಲ್ಲಿ ಲಿಂಗವ ಸಾಹಿತ್ಯವ ಮಾಡಿದ.
ಎನ್ನ ಮನಸ್ಥಲದಲ್ಲಿ ಜಂಗಮವ ಸಾಹಿತ್ಯವ ಮಾಡಿದ.
ಎನ್ನ ತನುಸ್ಥಲದಲ್ಲಿ ಆಚಾರವ ಸಾಹಿತ್ಯವ ಮಾಡಿದ.
ಇಂತೀ ತನು ಮನ ಪ್ರಾಣವನೇಕವ ಮಾಡಿ
ಕೂಡಲಚೆನ್ನಸಂಗಮದೇವಾ ನಿಮ್ಮನೆನ್ನ ವಶವ ಮಾಡಿದ
ಬಸವಣ್ಣನ ಶ್ರೀಪಾದಕ್ಕೆ ನಮೋ ನಮೋ ಎಂದು ಬದುಕಿದೆನು.

1055
ಎನ್ನ ಸರ್ವಾಂಗವೆಲ್ಲವೂ ಲಿಂಗವಾದ ಪರಿಕ್ರಮವೆಂತೆಂದಡೆ;
ಶ್ರೀಗುರು ಬಸವಣ್ಣನುಪದೇಶಿಸಿದ ಇಷ್ಟಲಿಂಗವೆನ್ನ ಸರ್ವಾಂಗದಲ್ಲಿ
ಬಿನ್ನ ನಾಮಂಗಳಿಂದ ಪ್ರಕಾಶಿಸುತ್ತಿಹುದು.
ಅದೆಂತೆಂದಡೆ ;
ಸ್ಥೂಲಾಂಗದಲ್ಲಿ ಇಷ್ಟಲಿಂಗವೆಂದು,
ಸೂಕ್ಷ್ಮಾಂಗದಲ್ಲಿ ಪ್ರಾಣಲಿಂಗವೆಂದು
ಕಾರಣಾಂಗದಲ್ಲಿ ಭಾವಲಿಂಗವೆಂದು ತ್ರಿಭೇದವಾಗಿಹುದು.
ಇಂತು ಅಂಗವ ಕುರಿತು ಮೂರು ತೆರನಾಯಿತ್ತು.
ಇನ್ನು ಇಂದ್ರಿಯಂಗಳ ಕುರಿತು ಆರು ತೆರನಾಗಿರ್ಪುದು.
ಅದು ಹೇಗೆಂದಡೆ;
ಹೃದಯದಲ್ಲಿ ಮಹಾಲಿಂಗವೆಂದು, ಶ್ರೋತ್ರದಲ್ಲಿ ಪ್ರಸಾದಲಿಂಗವೆಂದು,
ತ್ವಕ್ಕಿನಲ್ಲಿ ಜಂಗಮಲಿಂಗವೆಂದು, ನೇತ್ರದಲ್ಲಿ ಶಿವಲಿಂಗವೆಂದು,
ಜಿಹ್ವೆಯಲ್ಲಿ ಗುರುಲಿಂಗವೆಂದು, ಘ್ರಾಣದಲ್ಲಿ ಆಚಾರಲಿಂಗವೆಂದು,
ಇಂತು ಷಡಿಂದ್ರಿಯಂಗಳಲ್ಲಿ ಷಡ್ವಿಧಲಿಂಗವಾಗಿ ತೋರಿತ್ತು.
ಇಂತೀ ಮರ್ಯಾದೆಯಲ್ಲಿ ಜ್ಞಾನ-ಕರ್ಮೆಂದ್ರಿಯಂಗಳಲ್ಲಿಯೂ
ಲಿಂಗವೆ ಪ್ರಕಾಶಿಸುತ್ತಿಹುದು.
ಅದು ಹೇಗಂದಡೆ;
ಜ್ಞಾನೇಂದ್ರಿಯಂಗಳಿಗೆಯೂ ಕರ್ಮೆಂದ್ರಿಯಂಗಳಿಗೆಯೂ ಭೇದವಿಲ್ಲ.
ಅದೆಂತೆಂದಡೆ,
ಶ್ರೋತ್ರಕ್ಕೂ ವಾಕ್ಕಿಗೂ ಭೇದವಿಲ್ಲ, ಶಬ್ದಕ್ಕೂ ವಚನಕ್ಕೂ ಭೇದವಿಲ್ಲ;
ತ್ವಕ್ಕಿಗೂ ಪಾಣಿಗೂ ಭೇದವಿಲ್ಲ, ಸ್ಪರ್ಶಕ್ಕೂ ಆದಾನಕ್ಕೂ ಭೇದವಿಲ್ಲ;
ನೇತ್ರಕ್ಕೂ ಪಾದಕ್ಕೂ ಭೇದವಿಲ್ಲ, ರೂಪಿಗೂ ಗಮನಕ್ಕೂ ಭೇದವಿಲ್ಲ,
ಜಿಹ್ವೆಗೂ ಗುಹ್ಯಕ್ಕೂ ಭೇದವಿಲ್ಲ, ರಸಕ್ಕೂ ಆನಂದಕ್ಕೂ ಭೇದವಿಲ್ಲ;
ಘ್ರಾಣಕ್ಕೂ ಗುದಕ್ಕೂ ಭೇದವಿಲ್ಲ, ಗಂಧಕ್ಕೂ ವಿಸರ್ಜನಕ್ಕೂ ಭೇದವಿಲ್ಲ,
ಇನ್ನು ಶ್ರೋತ್ರವೆಂಬ ಜ್ಞಾನೇಂದ್ರಿಯಕ್ಕೂ ವಾಕ್ಕೆಂಬ ಕರ್ಮೆಂದ್ರಿಯಕ್ಕೂ
ಶಬ್ದ ವಿಷಯ, ಮೂಲಭೂತ ಆಕಾಶ, ಈಶಾನಮೂರ್ತಿ ಅದಿದೇವತೆ.
ತ್ವಕ್ಕೆಂಬ ಜ್ಞಾನೇಂದ್ರಿಯಕ್ಕೂ ಪಾಣಿಯೆಂಬ ಕರ್ಮೆಂದ್ರಿಯಕ್ಕೂ
ಸ್ಪರ್ಶನ ವಿಷಯ, ಮೂಲಭೂತ ವಾಯು, ತತ್ಪುರುಷಮೂರ್ತಿ ಅದಿದೇವತೆ.
ದೃಕ್ಕೆಂಬ ಜ್ಞಾನೇಂದ್ರಿಯಕ್ಕೂ ಪಾದವೆಂಬ ಕರ್ಮೆಂದ್ರಿಯಕ್ಕೂ
ರೂಪು ವಿಷಯ, ಮೂಲಭೂತ ಅಗ್ನಿ, ಅಘೋರಮೂರ್ತಿ ಅದಿದೇವತೆ.
ಜಿಹ್ವೆಯೆಂಬ ಜ್ಞಾನೇಂದ್ರಿಯಕ್ಕೂ ಗುಹ್ಯವೆಂಬ ಕರ್ಮೆಂದ್ರಿಯಕ್ಕೂ
ರಸ ವಿಷಯ, ಮೂಲಭೂತ ಅಪ್ಪು, ವಾಮದೇವಮೂರ್ತಿ ಅದಿದೇವತೆ,
ಘ್ರಾಣವೆಂಬ ಜ್ಞಾನೇಂದ್ರಿಯಕ್ಕೂ ಪಾಯುವೆಂಬ ಕರ್ಮೆಂದ್ರಿಯಕ್ಕೂ
ಗಂಧ ವಿಷಯ, ಮೂಲಭೂತ ಪೃಥ್ವಿ, ಸದ್ಯೋಜಾತಮೂರ್ತಿ ಅದಿದೇವತೆ.
ಇಂತೀ ಜ್ಞಾನೇಂದ್ರಿಯಂಗಳಿಗೆಯೂ ಕರ್ಮೆಂದ್ರಿಯಂಗಳಿಗೆಯೂ
ಹೃದಯವೆ ಆಶ್ರಯಸ್ಥಾನವಾದ ಕಾರಣ, ಹೃದಯ ಆಕಾಶವೆನಿಸಿತ್ತು.
ಅಲ್ಲಿ ಸ್ಥೂಲ ಸೂಕ್ಷ್ಮ ಕಾರಣ ರೂಪಿಂದೆಲ್ಲಾ ಇಂದ್ರಿಯಂಗಳಿರುತ್ತಿಹವು.
ಗುರೂಪದೇಶದಿಂದ ಎಲ್ಲಾ ಇಂದ್ರಿಯಂಗಳಲ್ಲಿಯೂ ಲಿಂಗವೆ ಪ್ರಕಾಶಿಸುತ್ತಿಹುದು.
ಅದು ಹೇಗೆಂದಡೆ;
ಘ್ರಾಣದ ಘ್ರಾಣವೆ ಆಚಾರಲಿಂಗ; ಜಿಹ್ವೆಯ ಜಿಹ್ವೆಯೆ ಗುರುಲಿಂಗ;
ನೇತ್ರದ ನೇತ್ರವೆ ಶಿವಲಿಂಗ; ತ್ವಕ್ಕಿನ ತ್ವಕ್ಕೆ ಜಂಗಮಲಿಂಗ;
ಶ್ರೋತ್ರದ ಶ್ರೋತ್ರವೆ ಪ್ರಸಾದಲಿಂಗ; ಹೃದಯದ ಹೃದಯವೆ ಮಹಾಲಿಂಗ.
ಈ ಆರು ಲಿಂಗಕ್ಕೆ ಅಂಗಸ್ಥಲ ಆರು;
ಅವಾವುವೆಂದಡೆ;
ಐಕ್ಯ ಶರಣ ಪ್ರಾಣಲಿಂಗಿ ಪ್ರಸಾದಿ ಮಹೇಶ್ವರ ಭಕ್ತ
ಎಂದೀ ಆರು ಅಂಗಸ್ಥಲಗಳು.
ಇವಕ್ಕೆ ವಿವರ;
ಆತ್ಮಾಂಗದಲ್ಲಿ ಸದ್ಭಾವ ಹಸ್ತದಿಂದ ಎಲ್ಲಾ ಇಂದ್ರಿಯಂಗಳ ಪರಿಣಾಮವನು
ಸಮರಸಭಕ್ತಿಯಿಂದ ಮಹಾಲಿಂಗಕ್ಕರ್ಪಿಸುವಾತನೆ ಐಕ್ಯ.
ವ್ಯೋಮಾಂಗದಲ್ಲಿ ಸುಜ್ಞಾನಹಸ್ತದಿಂದ ಸುಶಬ್ದದ್ರವ್ಯವನು
ಆನಂದಭಕ್ತಿಯಿಂದ ಪ್ರಸಾದಲಿಂಗಕ್ಕರ್ಪಿಸುವಾತನೆ ಶರಣ.
ಅನಿಲಾಂಗದಲ್ಲಿ ಮನೋಹಸ್ತದಿಂದ ಸುಸ್ಪರ್ಶನದ್ರವ್ಯವನು
ಅನುಭಾವಭಕ್ತಿಯಿಂದ ಶಿವಲಿಂಗಕ್ಕರ್ಪಿಸುವಾತನೆ ಪ್ರಾಣಲಿಂಗಿ.
ಅನಲಾಂಗದಲ್ಲಿ ನಿರಹಂಕಾರಹಸ್ತದಿಂದ ಸುರೂಪುದ್ರವ್ಯವನು
ಅವಧಾನಭಕ್ತಿಯಿಂದ ಶಿವಲಿಂಗಕ್ಕರ್ಪಿಸುವಾತನೆ ಪ್ರಸಾದಿ,
ಜಲಾಂಗದಲ್ಲಿ ಸುಬುದ್ಧಿ ಹಸ್ತದಿಂದ ಸುರಸದ್ರವ್ಯವನು
ನೈಷ್ಠಿಕಾಭಕ್ತಿಯಿಂದ ಗುರುಲಿಂಗಕ್ಕರ್ಪಿಸುವಾತನೆ ಮಾಹೇಶ್ವರ.
ಭೂಮ್ಯಂಗದಲ್ಲಿ ಸುಚಿತ್ತಹಸ್ತದಿಂದ ಸುಗಂಧದ್ರವ್ಯವನು
ಸದ್ಭಕ್ತಿಯಿಂದ ಆಚಾರಲಿಂಗಕ್ಕರ್ಪಿಸುವಾತನೆ ಭಕ್ತ.
ಇನ್ನು ಷಡಾಧಾರಂಗಳಲ್ಲಿ ಷಡಕ್ಷರರೂಪದಿಂದ ಷಡ್ಲಿಂಗ ಸ್ಥಾಪ್ಯವಾಗಿಹವು.
ಅದು ಹೇಗೆಂದಡೆ,
ನಕಾರವೆ ಆಚಾರಲಿಂಗ, ಮಕಾರವೆ ಗುರುಲಿಂಗ,
ಶಿಕಾರವೆ ಶಿವಲಿಂಗ, ವಾಕಾರವೆ ಜಂಗಮಲಿಂಗ,
ಯಾಕಾರವೆ ಪ್ರಸಾದಲಿಂಗ, ಓಂಕಾರವೆ ಮಹಾಲಿಂಗ,
ಎಂದು ಆರು ತೆರನಾಗಿಹವು.
ಅದೆಂತೆಂದಡೆ;
ಆಧಾರದಲ್ಲಿ ನಕಾರ, ಸ್ವಾದಿಷ್ಠಾನದಲ್ಲಿ ಮಕಾರ,
ಮಣಿಪೂರಕದಲ್ಲಿ ಶಿಕಾರ, ಅನಾಹತದಲ್ಲಿ ವಾಕಾರ,
ವಿಶುದ್ಧಿಯಲ್ಲಿ ಯಕಾರ, ಆಜ್ಞೆಯಲ್ಲಿ ಓಂಕಾರ,
ಇಂತೀ ಮರ್ಯಾದೆಯಲ್ಲಿ ಷಡ್ಧಾತುವಿನಲ್ಲಿ
ಷಡಕ್ಷರರೂಪಿಂದ ಷಡ್ಲಿಂಗ ಸ್ಥಾಪ್ಯವಾಗಿಹವು.
ಅದು ಹೇಗೆಂದಡೆ;
ತ್ವಙ್ಮಯವಾಗಿಹುದು ಓಂಕಾರ, ರುದಿರಮಯವಾಗಿಹುದು ನಕಾರ,
ಮಾಂಸಮಯವಾಗಿಹುದು ಮಕಾರ, ಮೇಧೋಮಯವಾಗಿಹುದು ಶಿಕಾರ,
ಅಸ್ಥಿಮಯವಾಗಿಹುದು ವಾಕಾರ, ಮಜ್ಜಾಮಯವಾಗಿಹುದು ಯಕಾರ.
ಇಂತೀ ಷಡ್ಧಾತುವೆ ಷಡಕ್ಷರಮಯವಾಗಿ, ಅವೆ ಲಿಂಗಂಗಳಾಗಿ,
ಒ?ಹೊರಗೆ ತೆರಹಿಲ್ಲದೆ ಸರ್ವಾಂಗವೆಲ್ಲವೂ ಲಿಂಗಮಯವಾದ ಇರವು.
ಅದು ತಾನೆ ಶಿವನಿರವು, ಅದು ತಾನೆ ಶಿವನ ಭವನ.
ಅದು ತಾನೆ ಶಿವನ ವಿಶ್ರಾಮಸ್ಥಾನ.
ಇಂತೀ ಷಟ್ಸ್ಥಲಬ್ರಹ್ಮವನರಿದಾತನೆ ಶರಣ, ಆತನೆ ಲಿಂಗೈಕ್ಯ.
ಇಂತೀ ಷಟ್ಸ್ಥಲಬ್ರಹ್ಮವೆಂಬುದು
ಅಪ್ರಮಾಣ ಅಗೋಚರ ಅನಿರ್ವಾಚ್ಯವಾದ ಕಾರಣ,
ವಚಿಸುತ್ತ ವಚಿಸುತ್ತ ವಚಿಸುತ್ತ ವಚನಗೆಟ್ಟಿತ್ತು.
ಉಪ್ಪು ನೀರೊಳು ಕೂಡಿದಂತೆ, ವಾರಿಕಲ್ಲು ಅಂಬುದಿಯೊಳು ಬಿದ್ದಂತೆ,
ಶಿಖಿಕರ್ಪೂರ ಯೋಗದಂತೆ ಆದೆನಯ್ಯಾ ಕೂಡಲಚೆನ್ನಸಂಗಯ್ಯನಲ್ಲಿ,
ಬಸವಣ್ಣನ ಭಾವಹಸ್ತ ಮುಟ್ಟಿದ ಕಾರಣ.

1057
ಎನ್ನಾಧಾರಚಕ್ರಕ್ಕೆ 'ನ' ಕಾರವಾದಾತ ಬಸವಣ್ಣ;
ಎನ್ನ ಸ್ವಾದಿಷ್ಠಾನಚಕ್ರಕ್ಕೆ 'ಮ' ಕಾರವಾದಾತ ಬಸವಣ್ಣ;
ಎನ್ನ ಮಣಿಪೂರಚಕ್ರಕ್ಕೆ 'ಶಿ' ಕಾರವಾದಾತ ಬಸವಣ್ಣ:
ಎನ್ನ ಅನಾಹತಚಕ್ರಕ್ಕೆ 'ವಾ’ ಕಾರವಾದಾತ ಬಸವಣ್ಣ;
ಎನ್ನ ವಿಶುದ್ಧಿಚಕ್ರಕ್ಕೆ 'ಯ' ಕಾರವಾದಾತ ಬಸವಣ್ಣ;
ಎನ್ನ ಆಜ್ಞಾಚಕ್ರಕ್ಕೆ 'ಓಂ' ಕಾರವಾದಾತ ಬಸವಣ್ಣ;
ಎನ್ನ ಬ್ರಹ್ಮರಂಧ್ರಕ್ಕೆ ಸಾವಿರದೈವತ್ತೆರಡಕ್ಷರವಾದಾತ ಬಸವಣ್ಣ;
ಎನ್ನ ಶಿಖಾಚಕ್ರಕ್ಕೆ 'ಕ್ಷ' ಕಾರವಾದಾತ ಬಸವಣ್ಣ;
ಎನ್ನ ಪಶ್ಚಿಮಚಕ್ರಕ್ಕೆ ಹ' ಕಾರವಾದಾತ ಬಸವಣ್ಣ;
ಇಂತೀ ಎನ್ನ ನವಚಕ್ರಂಗಳಲ್ಲಿಯೂ, ನವನಾಳಗಳಲ್ಲಿಯೂ
ನವವಿಧಲಿಂಗಸ್ವರೂಪವಾದಾತ ಬಸವಣ್ಣ.
ಇದು ಕಾರಣ ಕೂಡಲಚೆನ್ನಸಂಗಯ್ಯನಲ್ಲಿ ನಿಮ್ಮ ತೋರಿ
ಎನ್ನ ಸಲಹಿದ ವರಗುರು ಸಂಗನಬಸವಣ್ಣನ ಶ್ರೀಪಾದಕ್ಕೆ
ಶರಣೆಂದು ಬದುಕಿದೆನು ಕಾಣಾ ಪ್ರಭುವೆ.

1100
ಕಾಣಬಾರದ ಘನವ ಕರದಲ್ಲಿ ಧರಿಸಿದ,
ಹೇಳಬಾರದ ಘನವ ಮನದಲ್ಲಿ ತೋರಿದ,
ಉಪಮಿಸಬಾರದ ಘನವ ನಿಮ್ಮ ಶ್ರೀಪಾದದಲ್ಲಿ ತೋರಿದ,
ಇಂತೀ ತ್ರಿವಿಧವು ಏಕಾರ್ಥವಾಗಿಹ ಭೇದವ
ಬಸವಣ್ಣ ತೋರಿಕೊಟ್ಟನಾಗಿ
ನಾನು ಬದುಕಿದೆನು ಕಾಣಾ,
ಕೂಡಲಚೆನ್ನಸಂಗಮದೇವಾ

1209
ಚೆನ್ನಸಂಗಾ, ನಿಮ್ಮಲ್ಲಿ ಬಯಸಿ ಬೇಡುವಡೆ,
ಬಸವನಂತಪ್ಪ ನಿಧಾನ ದೊರಕಿತ್ತೆನಗೆ.
ಚೆನ್ನಸಂಗಾ, ನಿಮ್ಮಲ್ಲಿ ಬಯಸಿ ಬೇಡುವಡೆ,
ಬಸವನಂತಪ್ಪ ಪರುಷ ದೊರಕಿತ್ತೆನಗೆ.
ಚೆನ್ನಸಂಗಾ ನಿಮ್ಮಲ್ಲಿ ಬಯಸಿ ಬೇಡುವಡೆ
ಬಸವನಂತಪ್ಪ ಕಾಮಧೇನು ದೊರೆಯಿತ್ತೆನಗೆ.
ಚೆನ್ನಸಂಗಾ, ನಿಮ್ಮಲ್ಲಿ ಬಯಸಿ ಬೇಡುವಡೆ,
ಬಸವನಂತಪ್ಪ ಸುರತರು ದೊರಕಿತ್ತೆನಗೆ.
ಚೆನ್ನಸಂಗಾ, ನಿಮ್ಮಲ್ಲಿ ಬಯಸಿ ಬೇಡುವಡೆ,
ತ್ರಿವಿಧ ತ್ರಿವಿಧ[ದ] ಮೊದಲನೆ ತೋರಿದ ಬಸವಣ್ಣನೆನಗೆ.
ಚೆನ್ನಸಂಗಾ, ನಿಮ್ಮಲ್ಲಿ ಬಯಸಿ ಬೇಡುವಡೆ,
ಬಸವಣ್ಣನಿಂದ ನೀವಾದಿರಾಗಿ, ಕೂಡಲಚೆನ್ನಸಂಗಯ್ಯನಲ್ಲಿ
ಪ್ರಸಾದಿಯ ಪ್ರಸಾದಿಯಾದೆನು.

1225
ಜಂಗಮವೆ ಲಿಂಗ, ಲಿಂಗವೆ ಜಂಗಮವೆಂದು ತೋರಿ
ನಿಜಲಿಂಗೈಕ್ಯನಾದೆಯಲ್ಲಾ ನಿಜಗುರು ಬಸವಣ್ಣಾ.
ಪ್ರಸಾದವೆ ಕಾಯ, ಕಾಯವೆ ಪ್ರಸಾದವೆಂಬುದ
ಎನ್ನ ಸರ್ವಾಂಗದಲ್ಲಿ ಪ್ರತಿಷ್ಠಿಸಿ,
ಎನ್ನನಾಗುಮಾಡಿ ಮುಂದುವರಿದೆಯಲ್ಲಾ ಬಸವಣ್ಣಾ.
ನಿಜಲಿಂಗವ ಎನ್ನಂಗದಲ್ಲಿ ಸ್ಥಾಪಿಸಿ ಎನ್ನ ನಿನ್ನಂತೆ ಮಾಡಿ
ನಿಜಲಿಂಗದೊಳು ನಿರವಯವಾದೆಯಲ್ಲಾ ಬಸವಣ್ಣಾ.
ಎನ್ನ ಮನವ ಮಹದಲ್ಲಿ ಲಯಮಾಡಿ
ನಿರ್ವಯಲಾಗಿ ಹೋದೆಯಲ್ಲಾ ನಿಜಲಿಂಗೈಕ್ಯ ಬಸವಣ್ಣಾ.
ನಿಮ್ಮ ಒಕ್ಕುಮಿಕ್ಕಪ್ರಸಾದವನಿಕ್ಕಿ ನಿರಂತರದಲ್ಲಿ ಆಗುಮಾಡಿ
ನಾಗಾಯವ್ವೆಯನಿಂಬುಕೊಂಡೆಯಲ್ಲಾ, ಬಸವಣ್ಣಾ.
ಎನ್ನ ಮನ ನಿಮ್ಮ ಪಾದದಲ್ಲಿ ಕರಗಿತ್ತಯಾ, ಬಸವಣ್ಣಾ.
ಕೂಡಲಚೆನ್ನಸಂಗಯ್ಯಂಗೆ ಸುಜ್ಞಾನವಾಹನವಾಗಬೇಕೆಂದು
ನಿರವಯವಾಗಿ ಹೋದೆಯಲ್ಲಾ ಸಂಗನ ಬಸವಣ್ಣಾ

1287
ಧರೆಯಾಕಾಶವಿಲ್ಲದಂದು, ಅನಲ ಪವನ ಜಲ ಕೂರ್ಮರಿಲ್ಲದಂದು,
ಚಂದ್ರಸೂರ್ಯರೆಂಬವರು ಕಳೆದೋರದಂದು,
ಆತ್ಮಸ್ಥಲ ಅನುಭಾವಕ್ಕೆ ಬಾರದಂದು,
ನಿತ್ಯನಿಜಲಿಂಗವ ಬಲ್ಲರಾರಯ್ಯ ನೀವಲ್ಲದೆ ?
ಮಹಾಘನಕ್ಕೆ ಘನವಾಹನವಾಗಿ, ಅಗಮ್ಯಸ್ಥಾನದಲ್ಲಿ ನಿಂದು
ಭರಿತರಾಗಿರಬಲ್ಲರಾರಯ್ಯಾ ನೀವಲ್ಲದೆ ?
ನಿಮ್ಮ ಒಕ್ಕು ಮಿಕ್ಕ ಶೇಷಪ್ರಸಾದದ ಕಾರುಣ್ಯದ ಶಿಶುವಾಗಿ ಒಡಲೊಳಗೆ ಇದ್ದಲ್ಲಿ
ವಿಭೂತಿ ಪಟ್ಟವ ಕಟ್ಟಿ, ಹಸ್ತಮಸ್ತಕಸಂಯೋಗವ ಮಾಡಿ
ಎನ್ನನುಳುಹಿದರಾರಯ್ಯ ನೀವಲ್ಲದೆ ?
ಕೂಡಲಚೆನ್ನಸಂಗಮದೇವರ ಸಾಕ್ಷಿಯಾಗಿ
ನಾನು ನಿಮ್ಮ ಕರುಣದ ಕಂದನೆಂಬುದ ಮೂರುಲೋಕ ಬಲ್ಲುದು
ಕಾಣಾ ಸಂಗನಬಸವಣ್ಣ.


1290
'ನ' ಕಾರವೆ ಬಸವಣ್ಣನ ನಾಸಿಕ, 'ಮ' ಕಾರವೆ ಬಸವಣ್ಣನ ಜಿಹ್ವೆ,
'ಶಿ' ಕಾರವೆ ಬಸವಣ್ಣನ ನಯನ, 'ವ' ಕಾರವೆ ಬಸವಣ್ಣನ ತ್ವಕ್ಕು,
'ಯ' ಕಾರವೆ ಬಸವಣ್ಣನ ಶ್ರೋತ್ರ, 'ಓ' ಕಾರವೆ ಬಸವಣ್ಣನ ಪ್ರಾಣ.
'ಅ` ಕಾರವೆ ಬಸವಣ್ಣನ ನಾದ, 'ಉ' ಕಾರವೆ ಬಸವಣ್ಣನ ಬಿಂದು,
'ಮ’ ಕಾರವೆ ಬಸವಣ್ಣನ ಕಳೆ-
ಇಂತೀ ಮೂರು ಪ್ರಣವಂಗಳೆ ಪ್ರಣವದ ಶಿರಸ್ಸಾಗಿ,
ಪ್ರಣವದ ಕುಂಡಲಿ ಸೋಂಕಿ ಶಾಖೆಗಳಾಗಿಪ್ಪುವು
'ಬ' ಕಾರವೆ ಭವಹರ ಗುರು, 'ಸ' ಕಾರವೆ ಸಕಲಚೈತನ್ಯಲಿಂಗ,
'ವ' ಕಾರವೆ ವಚಿಸುವ ಜಂಗಮ-
ಇಂತೀ ಮೂರು ಪ್ರಣವಂಗಳೆ ಪ್ರಣವದ ಮೂರು ಪದಂಗಳಾಗಿ
ಪ್ರಣವಕ್ಕೆ ಮೂಲಪದಂಗಳಾಗಿಪ್ಪುವು-
ಇಂತೀ ಹನ್ನೆರಡು ಪ್ರಣವ ತಾನೆಯಾದ ಕೂಡಲಚೆನ್ನಸಂಗಯ್ಯನಲ್ಲಿ
ಸಂಗನಬಸವಣ್ಣನ ಶ್ರೀಪಾದಕ್ಕೆ ನಮೋ ನಮೋ ಎನುತಿರ್ದೆನು.

1381
`ಬಸವ ' ಎಂಬ ಮೂರಕ್ಷರ ಹೃದಯಕಮಲದಲ್ಲಿ ನೆಲೆಗೊಂಡಡೆ,
ಅಭೇದ್ಯ ಭೇದ್ಯವಾಯಿತ್ತು, ಅಸಾಧ್ಯ ಸಾಧ್ಯವಾಯಿತ್ತು.
ಇಂತು ಬಸವಣ್ಣನಿಂದ ಲೋಕಲಾಕಿಕದ ಕುಭಾಷೆಯ ಕಳೆದು,
ಲೋಕಾಚರಣೆಯನತಿಗಳೆದು ಭಕ್ತಿಭರವಪ್ಪುದು,
ಕೂಡಲಚೆನ್ನಸಂಗಯ್ಯನಲ್ಲಿ ಬಸವಣ್ಣನ ಕಾರುಣ್ಯದಿಂದ

1382
ಬಸವಣ್ಣನ ಶೃಂಗದಲ್ಲಿ ತುಂಬುರ ನಾರದರು,
ಬಸವಣ್ಣನ ಲಲಾಟದಲ್ಲಿ ವೀರಗಣಂಗಳು,
ಬಸವಣ್ಣನ ನಯನದಲ್ಲಿ ಸೂರ್ಯಚಂದ್ರರು,
ಬಸವಣ್ಣನ ಕರ್ಣದಲ್ಲಿ ಗಂಗೆವಾಳುಕಸಮರುದ್ರರು,
ಬಸವಣ್ಣನ ನಾಸಿಕದಲ್ಲಿ ವಾಯು, ಬಸವಣ್ಣನ ದಂತದಲ್ಲಿ ಭೃಂಗೀಶ್ವರದೇವರು,
ಬಸವಣ್ಣನ ಕೊರಳಲ್ಲಿ ಈರೇಳು ಭುವನಂಗಳು,
ಬಸವಣ್ಣನ ಅಂಡದಲ್ಲಿ ಅಷ್ಟಷಷ್ಟಿ ತೀರ್ಥಂಗಳು,
ಬಸವಣ್ಣನ ಬಲದೊಡೆಯಲ್ಲಿ ಅಜ, ಹರಿ, ಸರಸ್ವತಿ, ಪಂಚನದಿ, ಮಹಾಗಂಗೆ,
ಬಸವಣ್ಣನ ಮಣಿಪಾದದಲ್ಲಿ ದೇವಲೋಕದ ದೇವಗಣಂಗಳು,
ಬಸವಣ್ಣನ ಕಿರುಗೊಳಗಿನಲ್ಲಿ ಸಮಸ್ತಸಮುದ್ರಂಗಳು.
ಈ ಸಪ್ತಸಮುದ್ರಂಗಳೊಳಗಿಹ ಸಕಲಪ್ರಾಣಿಗಳಿಗೆ ಸಂಕೀರ್ಣತೆಯಾದೀತೆಂದು,
ಬಾಲದಂಡದಲೆತ್ತಿ ತಡಿಗೆ ಸೇರಿಸಿದನು ನಮ್ಮ ಬಸವಣ್ಣನು-ಇದು ಕಾರಣ,
ನಾಗಲೋಕದ ನಾಗಗಣಂಗಳು ಕೊಂಬುದು ಬಸವಣ್ಣನ ಪ್ರಸಾದ.
ಮರ್ತ್ಯಲೋಕದ ಮಹಾಗಣಂಗಳು ಕೊಂಬುದು ಬಸವಣ್ಣನ ಪ್ರಸಾದ.
ದೇವಲೋಕದ ದೇವಗಣಂಗಳ ಕೊಂಬುದು ಬಸವಣ್ಣನ ಪ್ರಸಾದ.
ರುದ್ರಲೋಕದ ರುದ್ರಗಣಂಗಳು ಕೊಂಬುದು ಬಸವಣ್ಣನ ಪ್ರಸಾದ.-
ಇಂತು ನಮ್ಮ ಬಸವಣ್ಣನ ಪ್ರಸಾದವನುಂಡುಟ್ಟು ಕೊಂಡು ಕೊಟ್ಟು
ಅನ್ಯದೈವಂಗಳ ಹೊಗಳುವ ಕುನ್ನಿಗಳನೇನೆಂಬೆ
ಕೂಡಲಚೆನ್ನಸಂಗಮದೇವಾ

1384
ಬಸವಣ್ಣ ಮರ್ತ್ಯಲೋಕಕ್ಕೆ ಬಂದು ಮಹಾಮನೆಯ ಕಟ್ಟಿ,
ಭಕ್ತಿಜ್ಞಾನವೆಂಬ ಜ್ಯೋತಿಯನೆತ್ತಿ ತೋರಲು
ಸುಜ್ಞಾನವೆಂಬ ಪ್ರಭೆ ಪಸರಿಸಿತಯ್ಯಾ ಜಗದೊಳಗೆ.
ಬೆಳಗಿನೊಳು ತಿಳಿದು ನೋಡಿ ಹರೆದಿದ್ದ ಶಿವಗಣಂಗಳೆಲ್ಲ ನೆರೆದು ಕೂಡಿತಯ್ಯಾ.
ಕೂಡಲಚೆನ್ನಸಂಗಮದೇವಾ ನಿಮ್ಮ ಶರಣ ಬಸವಣ್ಣನ ಕೃಪೆಯಿಂದ
ಪ್ರಭುದೇವರ ನಿಜವನರಿದು ನಿಶ್ಚಿಂತರಾದರಯ್ಯಾ ಶಿವಗಣಂಗಳೆಲ್ಲರು

1385
ಬಸವಣ್ಣ ಮಾಡುವ ಮಾಟವನಾರು ಬಲ್ಲರಯ್ಯಾ
ಲಿಂಗವಿಲ್ಲದೆ ಮಾಡಿದನಯ್ಯಾ ಬಸವಣ್ಣನು;
ಜಂಗಮವಿಲ್ಲದೆ ನೀಡಿದನಯ್ಯಾ ಬಸವಣ್ಣನು;
ಪ್ರಸಾದವಿಲ್ಲದೆ ರುಚಿಸಿದನಯ್ಯಾ ಬಸವಣ್ಣನು.
ಈ ಮಹಕ್ಕೆ ಬಂದು ಅನುಭಾವವ ಮಾಡಿ
ಆಡಿದನಯ್ಯಾ ಬಸವಣ್ಣನು.
ಲಕ್ಷದ ಮೇಲೆ ತೊಂಬತ್ತಾರು ಸಾವಿರ ಜಂಗಮದ ಸಂಗ
ಇಂದಿನಲಿ ಅಗಲಿತ್ತು ಕಾಣಾ
ಕೂಡಲಚೆನ್ನಸಂಗಮದೇವಾ ನಿಮ್ಮ ಶರಣ ಬಸವಣ್ಣಂಗೆ

1414
ಭಕ್ತ ಮಾಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣ ಐಕ್ಯನೆಂದು
ಬೇರು ಮಾಡಿ ನುಡಿದು ಬೇರು ಮಾಡಿ ನಡೆವ ಬಿನ್ನನಲ್ಲ.
ಬಿನ್ನವಿಲ್ಲದ ಅಂತರಂಗದಲ್ಲಿ ಅರಿವು ಪರಿಪೂರ್ಣ ಬಸವಣ್ಣ.
ಬಹಿರಂಗದಲ್ಲಿ ದಾಸೋಹ ಸಂಪನ್ನ ಬಸವಣ್ಣ.
ಮನ ವಚನ ಕಾಯದಲ್ಲಿ ಸದ್ಭಕ್ತಿಸಂಪನ್ನ ಬಸವಣ್ಣ.
ಎಡೆದೆರಹಿಲ್ಲದ ಲಿಂಗಸಂಪನ್ನ ಬಸವಣ್ಣ.
ಸರ್ವಾಂಗದಲ್ಲಿ ಸರ್ವಾಚಾರಸಂಪನ್ನ ಬಸವಣ್ಣ.
ಕೂಡಲಚೆನ್ನಸಂಗನಲ್ಲಿ ಬಸವಣ್ಣನ ಶ್ರೀಪಾದಕ್ಕೆ
ನಮೋ ನಮೋ ಎನುತಿರ್ದೆನು

1420
ಭಕ್ತಿ ಜ್ಞಾನ ವೈರಾಗ್ಯ ಕುಲಸ್ಥಲವ ಹರಹಲೆಂದು
ಮರ್ತ್ಯಲೋಕಕ್ಕೆ ಇಳಿತಂದನಯ್ಯಾ ಬಸವಣ್ಣನು.
ವ್ರತಾಚಾರದ ಶಿವಾಚಾರದ ಮುಂದಣ ಕನ್ನಡಕವ ಕಳೆದು
ಕರತಳಾಮಳಕ ಮಾಡಿದನಯ್ಯಾ ಬಸವಣ್ಣನು.
ಪರವಾದಿ ಬಿಜ್ಜಳನ ಒರೆಗಲ್ಲ ಹಿಡಿದು ಶಿವಭಕ್ತಿಸಂಪಾದನೆಯ ಮಾಡುವಲ್ಲಿ
ಮೂವತ್ತಾರು ಕೊಂಡೆಯ ಪರಿಹರಿಸಿ
ಶಿವಾಚಾರದ ಧ್ವಜವನೆತ್ತಿ ಮೆರೆದನಯ್ಯಾ ಬಸವಣ್ಣನು-
ಇದು ಕಾರಣ ಕೂಡಲಚೆನ್ನಸಂಗಯ್ಯನಲ್ಲಿ
ಬಸವಣ್ಣನ ನಿಲವ ಹೊಗಳುವುದು ಎನ್ನಳವಲ್ಲ, ನಿನ್ನವಳಲ್ಲ

1537
ಲಿಂಗಲಕ್ಷಣವಂತ ಬಸವಣ್ಣ, ಲಿಂಗಸಿರಿವಂತ ಬಸವಣ್ಣ,
ಲಿಂಗಸೌಭಾಗ್ಯವಂತ ಬಸವಣ್ಣ.
ಜಂಗಮಲಕ್ಷಣವಂತ ಬಸವಣ್ಣ, ಜಂಗಮಸಿರಿವಂತ ಬಸವಣ್ಣ,
ಜಂಗಮಸೌಭಾಗ್ಯವಂತ ಬಸವಣ್ಣ.
ಪ್ರಸಾದಲಕ್ಷಣವಂತ ಬಸವಣ್ಣ, ಪ್ರಸಾದಸಿರಿವಂತ ಬಸವಣ್ಣ
ಪ್ರಸಾದಸೌಭಾಗ್ಯವಂತ ಬಸವಣ್ಣ.
ಕೂಡಲಚೆನ್ನಸಂಗಯ್ಯನಲ್ಲಿ
ಸಂಗನಬಸವಣ್ಣನ ಶ್ರೀಪಾದಕ್ಕೆ ನಮೋ ನಮೋ ಎನುತಿದ್ದೆನು

1583
ಶರಣಸಮತೆಯ ನಿಧಿ ಬಸವನಯ್ಯಾ,
ಭಕ್ತಿಯ ಬೆಳೆಸಿರಿ ಬಸವನಯ್ಯಾ,
ಮುಕ್ತಿಯ ತವನಿಧಿ ಬಸವನಯ್ಯಾ,
ಸತ್ಯದ ನಿಧಿ ಬಸವನಯ್ಯಾ,
ಕೂಡಲಚೆನ್ನಸಂಗಯ್ಯನಲ್ಲಿ ಅನಿಮಿಷ ಬಸವನಯ್ಯಾ !

1673
ಸ್ವಸ್ತಿ ಸಮಸ್ತಪ್ರಶಸ್ತಿ ಸಹಿತಂ ಶ್ರೀಮತ್ ಕಲ್ಯಾಣಪುರದ ಮಹಾತ್ಮ್ಯ
ಎಂತೆಂದಡೆ:
ವಿಸ್ತರಿಸಿ ಪೇಳುವೆನು; ಎಲ್ಲಾ ಶಿವಗಣಂಗಳು ಕೇಳಿ ಕೃತಾರ್ಥರಾಗಿರಯ್ಯಾ.
ಹದಿನಾಲ್ಕು ಭುವನಕ್ಕೆ ಕಳಸವೆಂದೆನಿಸುವ ರುದ್ರಲೋಕವೆ ಮರ್ತ್ಯಕ್ಕಿಳಿತಂದು,
ಕಲ್ಯಾಣವೆಂಬ ಪುರವಾಗಿ ಹುಟ್ಟಿತ್ತು ನೋಡಿರಯ್ಯಾ !
ಅಲ್ಲಿ ಸತ್ಯರು ಸಾತ್ತ್ವಿಕರು ನಿತ್ಯರು ನಿಜೈಕ್ಯರು ಮಹಾಜ್ಞಾನಿಗಳು
ಪರಮಶಿವಯೋಗಿಗಳು ಶಿವಾನುಭಾವಸಂಪನ್ನರು ಶಿವಲಿಂಗಪ್ರಾಣಿಗಳು
ಶಿವಪ್ರಸಾದಪಾದೋದಕಸಂಬಂದಿಗಳು ಶಿವಾಚಾರವೇದ್ಯರು ಶಿವಾಗಮಸಾಧ್ಯರು
ಶಿವಸಮಯಪಕ್ಷರುಗಳಲ್ಲದೆ, ಮತ್ತಾರು ಅಲ್ಲಿಲ್ಲ ನೋಡಿರಯ್ಯಾ.
ಪಾಪಿಗಳು ಕೋಪಿಗಳು ಅಸತ್ಯರು ಅನಾಚಾರಗಳು ಹೊಗಬಾರದು ಕಲ್ಯಾಣವ.
ಮೀರಿ ಹೊಕ್ಕೆಹೆವೆಂಬವರಿಗೆ ಬಾಳ ಬಾಯಧಾರೆ ನೋಡಿರಯ್ಯಾ.
ಆ ಕಲ್ಯಾಣ ಅಗಮ್ಯ ಅಗೋಚರ ನೋಡಿರಯ್ಯಾ.
ಆ ಮಹಾಕಲ್ಯಾಣದ ವಿಸ್ತೀರ್ಣ ತಾನೆಂತೆಂದಡೆ:
ಹನ್ನೆರಡು ಯೋಜನ ಪರಿಪ್ರಮಾಣದ ವಿಸ್ತ್ರೀರ್ಣಪಟ್ಟಣಕ್ಕೆ
ಮುನ್ನೂರರವತ್ತು ಬಾಗಿಲವಾಡ.
ಆ ಬಾಗಿಲಿಂಗೆ ನೂರ ಐವತ್ತೈದು ವಜ್ರದ ಹಾರೆಯ ಕದಂಗಳು.
ಇನ್ನೂರ ಇಪ್ಪತ್ತೈದು ಕಲುಗೆಲಸದ ದ್ವಾರವಟ್ಟಕ್ಕೆ
ನಾನೂರ ಐವತ್ತು ಸುವರ್ಣದ ಕೆಲಸದ ಕದಂಗಳು,
ಅಲ್ಲಿ ನೂರ ಹದಿನೈದು ಚೋರಗಂಡಿ;
ಅವಕ್ಕೆ ನೂರ ಹದಿನೈದು ಮೊಳೆಯ ಕದಂಗಳು.
ಇಪ್ಪತ್ತು ಬಾಗಿಲು ಆಳ್ವರಿಯೊಳಗಿಪ್ಪವಾಗಿ ಅವಕ್ಕೆ ಕದಂಗಳಿಲ್ಲ.
ಆ ಪಟ್ಟಣಕ್ಕೆ ಬರಿಸಿಬಂದ ಕೋಂಟೆ ನಾಲ್ವತ್ತೆಂಟು ಯೋಜನ ಪರಿಪ್ರಮಾಣು.
ಬಾಹತ್ತರ [ನಿಯೋಗಿಗಳ] ಮನೆ ಲಕ್ಷ; ಮಂಡಳಿಕರ ಮನೆ ಲಕ್ಷ;
ಸಾಮಂತರ ಮನೆ ಲಕ್ಷ; ರಾಯ ರಾವುತರ ಮನೆಯೊಳಡಗಿದ ಮನೆಗಳಿಗೆ ಲೆಕ್ಕವಿಲ್ಲ.
ದ್ವಾದಶ ಯೋಜನ ವಿಸ್ತ್ರೀರ್ಣದ ಸೂರ್ಯವೀಥಿ ನೂರಿಪ್ಪತ್ತು;
ದ್ವಾದಶ ಯೋಜನದ ಸೋಮವೀಥಿ ನೂರಿಪ್ಪತ್ತೈದು.
ಅದರಿಂ ಮಿಗಿಲಾದ ಒಳಕೇರಿ ಹೊರಕೇರಿಗೆ ಗಣನೆಯಿಲ್ಲ.
ಆ ಪಟ್ಟಣದೊಳಗೆ ಲಕ್ಷದ ಮೇಲೆ ತೊಂಬತ್ತಾರು ಸಾವಿರ ಶಿವಾಲಯ.
ಆ ಶಿವಾಲಯಂಗಳಿಗೆ ಮುಖ್ಯವಾದ ತ್ರಿಪುರಾಂತಕದೇವರ ಶಿವಾಲಯ.
ಮುನ್ನೂರರವತ್ತು ಪದ್ಮಪತ್ರ ತೀವಿದ ಸರೋವರಗಳು.
ಎರಡು ಲಕ್ಷವು ಎಂಬತ್ತೈದು ಸಾವಿರದ ಏಳು ನೂರೆಪ್ಪತ್ತು
ದಾಸೋಹದ ಮಠಂಗಳು.
ಆ ದಾಸೋಹದ ಮಠಂಗಳಿಗೆ ಮುಖ್ಯವಾದ
ಬಸವರಾಜದೇವರ ಮಠದ ವಿಸ್ತ್ರೀರ್ಣವೆಂತೆಂದಡೆ:
ಯೋಜನವರಿಯ ಬಿನ್ನಾಣದ ಕಲುಗೆಲಸದ ಪಾಳಿ;
ಅತಿ ಸೂಕ್ಷ್ಮದ ಕುಸುರಿಗೆಲಸದ ದ್ವಾರವಟ್ಟವೈದು.
ಅವಕ್ಕೆ ಪಂಚಾಕ್ಷರಿಯ ಶಾಸನ.
ಮಿಸುನಿಯ ಕಂಭದ ತೋರಣಗಳಲಿ ರುದ್ರಾಕ್ಷಿಯ ಸೂಸಕ
ಆ ಬಾಗಿಲುವಾಡದಲ್ಲಿ ಒಪ್ಪುತಿರ್ಪವಯ್ಯಾ,
ನಂದಿಯ ಕಂಭದ ಧ್ವಜ ಉಪ್ಪರಗುಡಿ ಪತಾಕೆ ವ್ಯಾಸಧ್ವಜ ಒಪ್ಪುತಿರ್ಪವಯ್ಯಾ,
ಆ ಮಧ್ಯದಲ್ಲಿ ಬಸವರಾಜದೇವರ ಸಿಂಹಾಸನದ ವಿಸ್ತ್ರೀರ್ಣದ ಪ್ರಮಾಣು:
ಸಹಸ್ರಕಂಭದ ಸುವರ್ಣದುಪ್ಪರಿಗೆ; ಆ ಮನೆಗೆತ್ತಿದ ಹೊನ್ನಕಳಸ ಸಾವಿರ.
ಗುರುಲಿಂಗ ಜಂಗಮಕ್ಕೆ ಪಾದಾರ್ಚನೆಯ ಮಾಡುವ ಹೊಕ್ಕರಣೆ
ನಾಲ್ಕು ಪುರುಷಪ್ರಮಾಣದ ಘಾತ.
ಅಲ್ಲಿ ತುಂಬಿದ ಪಾದೋದಕದ ತುಂಬನುಚ್ಚಲು
ಬೆಳೆವ ರಾಜಶಾಲಿಯ ಗದ್ದೆ ಹನ್ನೆರಡು ಕಂಡುಗ,
ಆ ಯೋಜನವರಿಯ ಬಿನ್ನಾಣದ ಅರಮನೆಯ ವಿಸ್ತ್ರೀರ್ಣದೊಳಗೆ
ಲಿಂಗಾರ್ಚನೆಯ ಮಾಡುವ ಮಠದ
ಕಟ್ಟಳೆ ಲಕ್ಷದ ಮೇಲೆ ತೊಂಬತ್ತಾರು ಸಾವಿರ.
ಇನ್ನು ಬಸವರಾಜದೇವರು ಮುಖ್ಯವಾದ ಅಸಂಖ್ಯಾತರ ಮಠಂಗಳು
ಆ ಕಲ್ಯಾಣದೊಳಗೆ ಎಷ್ಟು ಎಂದಡೆ:
ಹನ್ನೆರಡು ಸಾವಿರ ಕಟ್ಟಳೆಯ ನೇಮದ ಭಕ್ತರ ಮಠಂಗಳು,
ಇಪ್ಪತ್ತೆಂಟು ಸಾವಿರ ಮಹಾಮನೆಗಳು;
ಹತ್ತು ಸಾವಿರ ನಿತ್ಯನೇಮಿಗಳ ಮಠಂಗಳು;
ಹದಿನೈದು ಸಾವಿರ ಚಿಲುಮೆಯಗ್ಗವಣಿಯ ವ್ರತಸ್ಥರ ಮಠಂಗಳು;
ಐದು ಸಾವಿರ ವೀರವ್ರತನೇಮಿಗಳ ಕಟ್ಟಳೆಯ ಮಠಂಗಳು;
ಹನ್ನೆರಡು ಸಾವಿರ ಅಚ್ಚಪ್ರಸಾದಿಗಳ ಮಠಂಗಳು,
ಒಂದು ಸಾವಿರ ಅರವತ್ತು ನಾಲ್ಕು ಶೀಲಸಂಪನ್ನರ ಮಠಂಗಳು;
ನಿತ್ಯ ಸಾವಿರ ಜಂಗಮಕ್ಕೆ ಆರೋಗಣೆಯ ಮಾಡಿಸುವ ದಾಸೋಹಿಗಳ
ಮಠಂಗಳು ಮೂವತ್ತೆರಡು ಸಾವಿರ;
ನಿತ್ಯ ಐನೂರು ಜಂಗಮಕ್ಕೆ ಒಲಿದು ದಾಸೋಹವ ಮಾಡುವ
ಸತ್ಯಸದಾಚಾರಿಗಳ ಮಠಂಗಳು ಐವತ್ತೆಂಟು ಸಾವಿರ;
ನಿತ್ಯ ಸಾವಿರದೈನೂರು ಜಂಗಮಕ್ಕೆ ಒಲಿದು ದಾಸೋಹವ ಮಾಡುವ
ದಾಸೋಹಿಗಳ ಮಠಂಗಳು ಹನ್ನೊಂದು ಸಾವಿರ;
ನಿತ್ಯ ಅವಾರಿಯಿಂದ ಮಾಡುವ
ಮಾಟಕೂಟದ ಸದ್ಭಕ್ತರ ಮಠಂಗಳು ಒಂದು ಲಕ್ಷ;
ಜಂಗಮಸಹಿತ ಸಮಯಾಚಾರದಿಂದ ಲಿಂಗಾರ್ಚನೆಯ ಮಾಡುವ
ಜಂಗಮಭಕ್ತರ ಮಠಂಗಳು ಎರಡು ಸಾವಿರದೇಳ್ನೂರೆಪ್ಪತ್ತು;
ಅಂತು ಎರಡು ಲಕ್ಷವು ಎಂಬತ್ತೈದು ಸಾವಿರದ ಏಳುನೂರೆಪ್ಪತ್ತು.
ಇಂತಪ್ಪ ಅಸಂಖ್ಯಾತರಿಗೆ ಮುಖ್ಯವಾಗಿ ರುದ್ರಲೋಕದಿಂದಿಳಿತಂದ
ಪ್ರಮಥಗಣಂಗಳ ಮಠಂಗಳು ಏಳು ನೂರೆಪ್ಪತ್ತು.
ಇಂತೀ ಮಹಾಪ್ರಮಥರಿಗೆ ಪುರಾತರಿಗೆ ಅಸಂಖ್ಯಾತ
ಮಹಾಗಣಂಗಳಿಗೆ ಪ್ರಥಮ ನಾಯಕನಾಗಿ,
ಏಕಮುಖ, ದಶಮುಖ, ಶತಮುಖ, ಸಹಸ್ರಮುಖ,
ಲಕ್ಷಮುಖ, ಕೋಟಿಮುಖ, ಅನಂತಕೋಟಿಮುಖನಾಗಿ
ಭಕ್ತರಿಗೆ ಒಡನಾಡಿಯಾಗಿಪ್ಪನು ಸಂಗನಬಸವಣ್ಣ.
ಜಗದಾರಾಧ್ಯ ಬಸವಣ್ಣ, ಪ್ರಮಥಗುರು ಬಸವಣ್ಣ,
ಶರಣಸನ್ನಹಿತ ಬಸವಣ್ಣ, ಸತ್ಯಸಾತ್ವಿಕ ಬಸವಣ್ಣ,
ನಿತ್ಯನಿಜೈಕ್ಯ ಬಸವಣ್ಣ, ಷಡುಸ್ಥಲಸಂಪನ್ನ ಬಸವಣ್ಣ,
ಸರ್ವಾಚಾರಸಂಪನ್ನ ಬಸವಣ್ಣ, ಸರ್ವಾಂಗಲಿಂಗಿ ಬಸವಣ್ಣ,
ಸುಜ್ಞಾನಭರಿತ ಬಸವಣ್ಣ, ನಿತ್ಯಪ್ರಸಾದ ಬಸವಣ್ಣ,
ಸಚ್ಚಿದಾನಂದಮೂರ್ತಿ ಬಸವಣ್ಣ, ಸದ್ಯೋನ್ಮುಕ್ಮಿರೂಪ ಬಸವಣ್ಣ,
ಅಖಂಡಪರಿಪೂರ್ಣ ಬಸವಣ್ಣ, ಅಭೇದ್ಯಭೇದಕ ಬಸವಣ್ಣ,
ಅನಾಮಯಮೂರ್ತಿ ಬಸವಣ್ಣ,
ಮಹಾಮನೆಯ ಮಾಡಿದಾತ ಬಸವಣ್ಣ,
ರುದ್ರಲೋಕವ ಮರ್ತ್ಯಲೋಕಕ್ಕೆ ತಂದಾತ ಬಸವಣ್ಣ,
ಶಿವಚಾರದ ಘನವ ಮೆರೆದಾತ ಬಸವಣ್ಣ.
ಇಂತಹ ಬಸವಣ್ಣನ ಭಕ್ತಿಯನು ಒರೆದೊರೆದು ನೋಡುವ,
ಪ್ರಜ್ವಲಿತವ ಮಾಡುವ ಅಶ್ವಪತಿ, ಗಜಪತಿ, ನರಪತಿರಾಯ,
ರಾಜಾದಿರಾಜ ಬಿಜ್ಜಳರಾಯನೂ ಆ ಬಸವಣ್ಣನೂ ಆ ಕಲ್ಯಾಣಪಟ್ಟಣದೊಳಗೆ
ಸುಖಸಂಕಥಾವಿನೋದದಿಂದ ರಾಜ್ಯಂಗೆಯುತ್ತಿರಲು,
ಆ ಕಲ್ಯಾಣದ ನಾಮವಿಡಿದು ವಿವಾಹಕ್ಕೆ ಕಲ್ಯಾಣವೆಂಬ ನಾಮವಾಯಿತ್ತು.
ಲೋಕದೊಳಗೆ ಕಲ್ಯಾಣವೆ ಕೈಲಾಸವೆನಿಸಿತ್ತು.
ಇಂತಪ್ಪ ಕಲ್ಯಾಣದ ದರುಶನವ ಮಾಡಿದಡೆ ಭವಂ ನಾಸ್ತಿ,
ಇಂತಪ್ಪ ಕಲ್ಯಾಣವ ನೆನೆದಡೆ ಪಾಪಕ್ಷಯ,
ಇಂತಪ್ಪ ಕಲ್ಯಾಣದ ಮಹಾತ್ಮೆಯಂ ಕೇಳಿದಡೆ
ಕರ್ಮಕ್ಷಯವಹುದು, ಮೋಕ್ಷ ಸಾಧ್ಯವಹುದು,
ಇದು ಕಾರಣ, ಕೂಡಲಚೆನ್ನಸಂಗಮದೇವಾ,
ನಿಮ್ಮ ಭಕ್ತ ಬಸವಣ್ಣನಿ‌ದ್ದ ಠಾವೆ ಮಹಾಕಲ್ಯಾಣವೆಂದರಿದು
ದಿವ್ಯಶಾಸನವ ಬರೆದು ಪರಿಸಿದ ಕಾರಣ,
ಎನ್ನ ಭವಂ ನಾಸ್ತಿಯಾಯಿತ್ತಯ್ಯಾ.

1676
ಹರ[ನಿತ್ತಾ]ಗ್ರಹ ನಿಗ್ರಹದ ಬೆಸನ, ಗುರುನಿರೂಪವೆಂದು ಕೈಕೊಂಡು,
ಕರುಣಿ ಬಸವಣ್ಣ ಕೈಲಾಸದಿಂದ
ಗುರುಲಿಂಗಜಂಗಮಕ್ಕೆ ಭಕ್ತಿಯ ಮಾಡಬೇಕೆಂದು
ಏಳುನೂರೆಪ್ಪತ್ತು ಅಮರಗಣಂಗಳು ಸಹಿತ ಮರ್ತ್ಯಲೋಕಕ್ಕೆ ಬಂದನಯ್ಯಾ.
ಶಿವಸಮಯಕ್ಕಾಧಾರವಾದನಯ್ಯಾ, ಬಸವಣ್ಣನು.
ಜಡರುಗಳ ಮನದ ಕತ್ತಲೆಯ ಕಳೆಯಲೆಂದು
ಕಟ್ಟಿತ್ತು ಕಲ್ಯಾಣದಲ್ಲಿ ಮಹಾಮಠವು.
ಪರಮನಟ್ಟಿದ ಓಲೆ ಬಂದಿಳಿಯಿತ್ತು, ಬಿಜ್ಜಳನ ಸಿಂಹಾಸನದ ಮುಂದೆ.
ಅದತಂದು ಓದಿದಡೆ ಸೃಷ್ಟಿಯ ಸೇನಬೋವರಿಗೆ ತಿಳಿಯದು
ಛಪ್ಪನ್ನ ದೇಶದ ಭಾಷೆಯ ಲಿಪಿ ಮುನ್ನವಲ್ಲ.
ಇದನೋದಿದವರಿಗೆ ಆನೆ ಸೇನೆ ಕುದುರೆ ಭಂಡಾರ
ಅರವತ್ತಾರು ಕರಣಿಕರಿಗೆ ಮುಖ್ಯನ ಮಾಡುವೆನೆಂದು
ಬಿಜ್ಜಳ ಭಾಷೆಯ ಕೊಡುತ್ತಿರಲು,
ಹರನಿರೂಪವ ಶಿರದ ಮೇಲಿಟ್ಟು ಶಿವಶರಣೆಂದು
ಬಸವಣ್ಣನೋದಿ ಮೆಟ್ಟಿ ತೆಗೆಸಿದನಯ್ಯಾ
ಅರವತ್ತಾರು ಕೋಟಿ ವಸ್ತುವ ಅರಮನೆಗೆ.
ರಾಜ್ಯಕ್ಕೆ ಅರಮನೆಗೆ [ಶಿರಃ ಪ್ರಧಾನ]ನಾಗಿ
ಹರಗಣಂಗಳಿಗೆ ಗತಿಮತಿ ಚೈತನ್ಯನಾಗಿ
ಕೂಡಲಚೆನ್ನಸಂಗಯ್ಯನಲ್ಲಿ
ಅಂಡಜದೊಳಗಿದ್ದು ಶಿವನ ಭಂಡಾರಿಯಾದನಯ್ಯಾ
ಎನ್ನ ತಂದೆ ಪೂರ್ವಾಚಾರಿ ಸಂಗನಬಸವಣ್ಣನು.

1701
ಹೊನ್ನಿಂಗೆ ಬಂದಾತನಲ್ಲ, ಹೆಣ್ಣಿಂಗೆ ಬಂದಾತನಲ್ಲ,
ಅಶನಕ್ಕೆ ಬಂದಾತನಲ್ಲ, ವಸನಕ್ಕೆ ಬಂದಾತನಲ್ಲ,
ಕೂಡಲಚೆನ್ನಸಂಗಯ್ಯಾ,
ಭಕ್ತಿಯ ಪಥವ ತೋರ ಬಂದನಯ್ಯಾ ಬಸವಣ್ಣನು.

ಟಿಪ್ಪಣಿ: ವಚನಗಳ ತೋರಿಸಿದ ಸಂಖ್ಯೆಯು ಸಮಗ್ರ ವಚನ ಸಾಹಿತ್ಯ ಸಂಪುಟದಲ್ಲಿಯ ವಚನ ಸಂಖ್ಯೆಯನ್ನು ಸೂಚಿಸುತ್ತದೆ. (ಸಮಗ್ರ ವಚನ ಸಾಹಿತ್ಯ ಸಂಪುಟ - ೧ ರಿಂದ ೧೫, ಪ್ರಕಾಶಕರರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರಕಾರ, ಬೆಂಗಳೂರು.)

ಪರಿವಿಡಿ (index)
*
Previous ಬಸವಯೋಗಿ ಸಿದ್ಧರಾಮೇಶ್ವರ ಬಸವಣ್ಣನವರ ಬಗ್ಗೆ ಷಣ್ಮುಖ ಸ್ವಾಮಿ ವಚನ Next
cheap jordans|wholesale air max|wholesale jordans|wholesale jewelry|wholesale jerseys