ಇಷ್ಟಲಿಂಗದ ಆವಿಷ್ಕಾರ | ಬಸವಣ್ಣನವರ ವಿವಾಹ |
ಕೂಡಲ ಸಂಗಮದಿಂದ ಬಸವಣ್ಣನವರ ನಿರ್ಗಮನ |
✍ ಪೂಜ್ಯ ಶ್ರೀ ಮಹಾಜಗದ್ಗುರು ಡಾ|| ಮಾತೆ ಮಹಾದೇವಿ
*
ದಿವ್ಯವಾದ ಅನುಭವ ಪಡೆದು ದೇವಕೃಪೆ ಹೊಂದಿದ ಬಸವಣ್ಣನವರು ಅಂಗದ ಮೇಲೆ ಲಿಂಗವನ್ನು ಧರಿಸಿಕೊಂಡು ಪರಮಾತ್ಮನನ್ನು ಧ್ಯಾನಿಸಿ ಹೇಳುವರು, ಸಂಸಾರ ಜೀವನವನ್ನು ಪ್ರವೇಶಿಸಿದರೂ ಸ್ವಾರ್ಥ, ಮೋಹ, ಮಮಕಾರಗಳಿಂದ ಕಲಂಕಿತನಾಗದೆ ನಿನಗಾಗಿ ಬಾಳುವಂತೆ ಮಾಡು.
ಸಂಸಾರವೆಂಬ ಶ್ವಾನನಟ್ಟಿ
ಎನ್ನ ಮೀಸಲ ಬೀಸರವ ಮಾಡದಿರಯ್ಯ.
ಎನ್ನ ಚಿತ್ತವು ನಿಮ್ಮ ಧ್ಯಾನವಯ್ಯಾ ;
ನೀವಲ್ಲದೆ ಮತ್ತೇನನೂ ಅರಿಯೆನು
ಕನ್ನೆಯಲ್ಲಿ ಕೈವಿಡಿವೆನು. ನಿಮ್ಮಲ್ಲಿ ನೆರೆವೆನು.
ಮನ್ನಿಸು ಕಂಡಾ ಮಹಾಲಿಂಗವೇ,
ಸತಿಯಾನು ಪತಿ ನೀನು ಅಯ್ಯಾ,
ಮನೆಯೊಡೆಯ ಮನೆಯ ಕಾಯ್ದಿಪ್ಪಂತೆ
ನೀವೆನ್ನ ಮನವ ಕಾಯ್ದೆಪ್ಪ ಗಂಡನು !
ನಿಮಗೋತ ಮನವನನ್ಯಕ್ಕೆ ಹರಿಸಿದರೆ
ನಿಮ್ಮಭಿಮಾನಕ್ಕೆ ಹಾನಿ, ಕೂಡಲಸಂಗಮದೇವಾ.
“ಪರಮಾತ್ಮಾ. ಎಂತಹ ಪ್ರಸಂಗದಲ್ಲಿಯೂ ಸಂಸಾರ ಎನ್ನುವ, ನಾನು ನನ್ನದು ನನಗೆ ಎಂಬಂತಹ ಭಾವವು ನನ್ನಲ್ಲಿ ಉದಿಸಿ ನನ್ನ ಮನಸ್ಸಿನ ಮೀಸಲನ್ನು ಕೆಡಿಸದೆ ಇರಲಿ. ಎನ್ನ ಚಿತ್ತವು ನಿಮ್ಮ ಧ್ಯಾನವನ್ನಲ್ಲದೆ ಇನ್ನೇನನ್ನೂ ತುಂಬಿಕೊಳ್ಳದಿರಲಿ, ಲೋಕ ದೃಷ್ಟಿಯಲ್ಲಿ ಕನ್ಯೆಯನ್ನು ಮದುವೆಯಾದರೂ ನಿನ್ನೊಡನೆ ಕೂಡುವುದೇ ನನ್ನ ಅಪೇಕ್ಷೆ. ಇದು ತಪ್ಪೋ ಒಪ್ಪೋ ನಾನರಿಯೆ. ನನ್ನ ಮನಸ್ಸು ನಿನಗೆ ಒಲಿದು ಬಿಟ್ಟಿದೆ. ಮನೆಯ ಯಜಮಾನ ತನ್ನ ಮನೆಯ ರಕ್ಷಣೆಯ ಬಗ್ಗೆ ಜಾಗ್ರತೆ ವಹಿಸುವಂತೆ ನೀನು ನಿನ್ನ ಆಸ್ತಿಯಾದ ನನ್ನ ಮನಸ್ಸಿನ ಬಗ್ಗೆ ಜಾಗ್ರತೆ ವಹಿಸಬೇಕು. ಒಂದು ವೇಳೆ ನಿನಗೆ ಒಲಿದ ಮೀಸಲಾದ ಈ ಮನಸ್ಸು ಅನ್ಯಕ್ಕೆ ಹರಿಯುವಂತಾದರೆ ನಿನ್ನ ಶಕ್ತಿಗೆ, ಪ್ರತಿಷ್ಠೆಗೆ ಕುಂದು ಬರುತ್ತದೆ ನೋಡು. ನಾನೀಗ ನಿನ್ನ ಇಚ್ಛೆಗೆ ತಲೆ ಬಾಗಿ ಹೊರಟಿದ್ದೇನೆ.'' ಆಗ
“ನಡೆಯಯ್ಯ ನಡೆಕಂದ ನಡೆ ಮಗನೆ ಬಸವಣ್ಣ
ಪೊಡವಿಗಧಿಪತಿಯಾಗಿ ಬಾಳೆನ್ನ ಬಸವಣ್ಣ"
ಎಂದು ಸಂಗಮನಾಥನು ಹರಸುವನೆಂದು ಹರಿಹರ ಕವಿ ಸೊಗಸಾಗಿ ಹೇಳುತ್ತಾನೆ.
ಬಸವಣ್ಣನು ತನ್ನ ನಿರ್ಧಾರವನ್ನು ತಿಳಿಸಲು ಗುರುಗಳ ಸನ್ನಿಧಿಗೆ ಬರುತ್ತಾನೆ. ಬಲದೇವರಸರೂ ಅಲ್ಲಿಯೇ ಕುಳಿತಿರುತ್ತಾರೆ. ತೇಜಸ್ವಿ ಮುಖಮುದ್ರೆ ಹೊತ್ತು ಬಂದ ಬಸವಣ್ಣನವರನ್ನು ಬೆರಗಾಗಿ ಉಭಯತರೂ ನೋಡುತ್ತಾರೆ, ಗುರುಗಳಿಗೆ ವಂದಿಸಿ ಹೇಳುತ್ತಾರೆ; ಗುರುಗಳೇ, ದೇವನಿಚ್ಛೆಗೆ ನಾನು ತಲೆಬಾಗುತ್ತೇನೆ. ಆದರೆ ಅಂತಿಮ ನಿರ್ಧಾರ ತಿಳಿಸುವ ಮುನ್ನ ಒಂದು ಕರಾರು...'' ಸಂಕೋಚ ಬೇಡ ಬಸವರಸಾ.. ನನಗೆ ಇರುವವಳು ಒಬ್ಬಳು ಮಗಳು. ನನ್ನ ಸಮಸ್ತ ಆಸ್ತಿಗೂ ನೀನೇ ಒಡೆಯ..” ಬಲದೇವರಸರು ಹೇಳುವರು. “ನನ್ನದು ಅಂಥ ಅಪೇಕ್ಷೆಯಲ್ಲ ಅಮಾತ್ಯರೇ. ನಾನು ಸಮಾಜ ಪರಿವರ್ತನೆಯ ಹಲವಾರು ಕನಸುಗಳನ್ನು ತಲೆಯಲ್ಲಿ ಹೊತ್ತವನು. ತಾವಾದರೋ ರಾಜನ ನಿಷ್ಠಾವಂತ ಸೇವಕರು. ತಾವು ನನ್ನ ಸ್ವತಂತ್ರ ವಿಚಾರಗಳಿಗೆ ಯಾವುದೇ ಅಡ್ಡಿಯನ್ನುಂಟು ಮಾಡಬಾರದು; ಒತ್ತಡವನ್ನು ತರಬಾರದು. ನನಗೆ ಮದುವೆಯು ಉದಾತ್ತವಾದೊಂದು ಗುರಿಗೆ ಸಾಧನವೇ ವಿನಾ ಇದೇ ಅಂತಿಮ ಸಿದ್ಧಿಯಲ್ಲ..''
'ಆಗಲಪ್ಪ... ನಿನ್ನ ಕಾರ್ಯ ವಿಸ್ತಾರ ಕಂಡು ನಾನೂ ಸಂತೋಷಿಸುವೆ''
''ವಿವಾಹಕ್ಕೆ ಮೊದಲು ನಿಮ್ಮ ಮಗಳಿಗೆ ದೀಕ್ಷಾ ಸಂಸ್ಕಾರವಾಗಬೇಕು...''
“ ಅದ್ಯಾವುದಪ್ಪ.... ನಮ್ಮಲ್ಲಿಲ್ಲವಲ್ಲ...''
“ನನ್ನ ನೂತನ ಧರ್ಮದ ಜೀವಾಳವೇ ಅದು ; ಬ್ರಾಹ್ಮಣ- ಅಂತ್ಯಜ, ಸ್ತ್ರೀ-ಪುರುಷ ಎಂಬ ಭೇದವಿಲ್ಲದೆ ಎಲ್ಲರಿಗೂ ಧರ್ಮಸಂಸ್ಕಾರ ದೊರೆಯಬೇಕು.''
“ಅದೇನು ಆಗಬೇಕೋ ನಿನ್ನಿಷ್ಟದಂತೆಯೇ ಆಗಲಿ..''
ಕೂಡಲ ಸಂಗಮದಿಂದ ಬಸವಣ್ಣನವರನ್ನೂ ಜೊತೆಗೆ ಕರೆದುಕೊಂಡು ಹೋಗಲು ಉತ್ಸಾಹದಿಂದ ಸಿದ್ಧತೆ ನಡೆಯಿತು. ಬೀಳ್ಕೊಳ್ಳಲು. ಅಂತಿಮ ದರ್ಶನಕ್ಕಾಗಿ ಬಸವಣ್ಣ ಬಂದಾಗ ಜಾತವೇದ ಮುನಿಗಳು ಗದ್ಗದಿತರಾದರು. ಗುರುಗಳೊಡನೆ ಹಲವಾರು ತಾತ್ವಿಕ ಸೈದ್ಧಾಂತಿಕ ವಿಷಯಗಳಲ್ಲಿ ಭಿನ್ನಮತ ಹೊಂದಿದ್ದರೂ ಅವನ ವಿನಯ, ವಿವೇಕ, ಸಾಧನೆಯಲ್ಲಿನ ಆಸಕ್ತಿ, ಏಕಾಗ್ರತೆ, ನಿರ್ಭೀತ ವಿಚಾರಶೀಲತೆ ಅವರನ್ನು ಅತ್ಯಂತ ಹತ್ತಿರದ ವ್ಯಕ್ತಿಯನ್ನಾಗಿಸಿದ್ದವು. ಗುರುಗಳಿಂದ ದೂರ ಹೋಗುವುದು ಅವನಿಗೆಷ್ಟು ಕಷ್ಟದ ಸಂಗತಿಯೋ ಅವರಿಗೆ ಅದಕ್ಕಿಂತಲೂ ಮಿಗಿಲಾಗಿ ಕಷ್ಟಕರವಾಗಿತ್ತು. ''ಸಂಗಮನಾಥಾ, ಹತ್ತಿಕಟ್ಟಿಗೆ ಕಟ್ಟಲು ಬಂಗಾರದ ಸೂತ್ರವನ್ನು ಬಳಸಬಾರದು. ಇಂಥಾ ಪ್ರತಿಭಾತ್ಮನನ್ನು ಸೀಮಿತ ವಲಯದಲ್ಲಿ ಉಳಿಸಿಕೊಳ್ಳಲಾರದೆ ನಿನ್ನ ಕಾರ್ಯಕ್ಕೆ ಕಳಿಸುತ್ತಿದ್ದೇನೆ.'' ಎಂದುಕೊಂಡರು. 'ಗುರುಗಳೇ, ಹಾವನ್ನಾಡಿಸುವ ಗಾರುಡಿಗನಂತೆ ನಾನು ಹೊರಟಿದ್ದೇನೆ ಸಂಸಾರವೆಂಬ ಸರ್ಪಮುಟ್ಟಿ ಸ್ವಾರ್ಥದ ವಿಷವನ್ನುಣ್ಣಿಸದಂತೆ ರಕ್ಷಿಸಿರಿ.'' ಎಂದು ಬಸವಣ್ಣನವರು ಹೇಳಿದರು.
ನಿಜ, ಸಂಸಾರವೆಂಬುದೊಂದು ಐದು ಹೆಡೆಗಳುಳ್ಳ ಸರ್ಪ. ಇದು ಪಂಚೇಂದ್ರಿಯಗಳೆಂಬ ಹೆಡೆಯಮೂಲಕ ಪಂಚ ವಿಷಯಗಳೆಂಬ ವಿಷವನ್ನು ಉಣಿಸುತ್ತದೆ, ಅದನ್ನು ತಮ್ಮೊಂದು ವಚನದಲ್ಲಿ ಹೀಗೆ ಹೇಳುತ್ತಾರೆ :
ಮನವೇ ಸರ್ಪ ತನುವೇ ಹೇಳಿಗೆ
ಹಾವಿನೊಡತಣ ಹುದುವಾಳಿಗೆ
ಇನ್ನಾವಾಗ ಕೊಂದಹುದೆಂದರಿಯೆ
ಇನ್ನಾವಾಗ ತಿಂದಹುದೆಂದರಿಯೆ
ನಿಚ್ಚನಿಚ್ಚಕ್ಕೆ ಪೂಜಿಸಬಲ್ಲಡೆ ಅದೇ ಗಾರುಡ ಕೂಡಲಸಂಗಮದೇವ
ತನು ಎಂಬ ಬುಟ್ಟಿಯಲ್ಲಿ ಮನಸ್ಸೆಂಬ ಸರ್ಪವಿದೆ. ಅದರ ಜೊತೆಗೆ ಆಟವಾಡುವುದೇ ಕಷ್ಟಕರವಾದ ಸಾಹಸ. ಹಾವಾಡಿಗನು ಹಾವನ್ನು ಹಿಡಿಯುವಾಗ, ಆಡಿಸುವಾಗ ಮದ್ದನ್ನು ಹಿಡಿದುಕೊಂಡೇ ಆಡಿಸುವಂತೆ ಮನುಷ್ಯನು ಪರಮಾತ್ಮನ ಪೂಜೆ, ಪ್ರಾರ್ಥನೆ, ಧ್ಯಾನ ಎಂಬ ಮದ್ದನ್ನು ಹಿಡಿದೇ ಸಂಸಾರ ಸರ್ಪವನ್ನು ಆಡಿಸಬೇಕು. ಅಂದರೆ ಮಾತ್ರ ಸ್ವಾರ್ಥದ ಮಮಕಾರದ ವಿಷ ತಲೆಗೆ ಏರದು.
ಅನೇಕ ಅದರ್ಶವಾದಿಗಳು ಸಂಸಾರದ ಜವಾಬ್ದಾರಿ ಹೊರುವುದೇ ತಡ ಅದರ ಹಲವಾರು ಮಾಯಾಲೀಲೆಗಳಿಗೆ ಈಡಾಗಿ ಸ್ವಾರ್ಥಿಗಳು, ಸ್ವಹಿತಾಸಕ್ತರು ಆಗುವುದುಂಟು. ತಾವಿಟ್ಟುಕೊಂಡ ಎಲ್ಲ ಧೈಯಗಳಿಗೆ ತಿಲಾಂಜಲಿ ಕೊಡುವದುಂಟು. ಬಸವಣ್ಣ ಅಷ್ಟು ದುರ್ಬಲ ಮನಸ್ಕನಲ್ಲವಾದರೂ ಭವಿಷ್ಯವು ಯಾವಾಗಲೂ ಕತ್ತಲೆಯ ಗವಿಯಂತಿರುವ ಕಾರಣ, ಆ ಗವಿಯಲ್ಲಿ ಮುತ್ತುರತ್ನಗಳ ನಿಧಿಯೇ ಸಿಗುವುದೋ ? ಆಳವಾದ ಕೊಳ್ಳವೇ ಸಿಗುವುದೋ ಎಂದು ಅತಂಕಕ್ಕೀಡಾಗುವುದು ಸ್ವಾಭಾವಿಕವಲ್ಲವೆ ?” 'ಅಸಾಮಾನ್ಯ ವಿವೇಕಿ ನೀನು ಬಸವಣ್ಣ; ಆ ಭಯ ನಿನಗೆ ಬೇಡ ಪರಮಾತ್ಮನೇ ನಿನ್ನ ಬೆಂಗಾವಲ ಶಕ್ತಿ' ಮೆಚ್ಚುಗೆಯ ದನಿಯಲ್ಲಿ ಗುರುಗಳೆಂದರು. “ಬಸವಣ್ಣಾ... ನೀನು ಸಾಮಾನ್ಯನಲ್ಲ ಎಂಬುದನ್ನು ನಾನು ಎಂದೋ ಗುರುತಿಸಿದ್ದೇನೆ. ಸಮಾಜದಲ್ಲಿ ನಮ್ಮ ಸುತ್ತಲೂ ಅದೆಷ್ಟೋ ಲೋಪ-ದೋಷಗಳು ಕಂಡು, ಬಂದರೂ ಅವನ್ನು ತಿದ್ದುವ, ಎದುರಿಸುವ ಧೈರ್ಯ ನಮಗಿರದು, ನೀನು ಬಾಲಕನಿರುವಾಗಲೇ ಪ್ರತಿಭಟಿಸಿರುವೆ. ನಿನ್ನಿಂದ ನಾವೂ ಸಹ ಪರಿವರ್ತನೆಯನ್ನು, ಸುಧಾರಣೆಯನ್ನು, ಕ್ರಾಂತಿಯನ್ನು ನಿರೀಕ್ಷಿಸುತ್ತೇವೆ. ದೇವರು ನನಗೂ ಆಯುಷ್ಯ ಕೊಟ್ಟುದಾದರೆ ಅಂಥದೊಂದು ಮಹತ್ ಸಿದ್ಧಿಯನ್ನು ನೋಡುವೆನು.'
ಗುರುಗಳು ನುಡಿದ ಆಶ್ವಾಸನೆಯ ಮಾತುಗಳು ಬಸವಣ್ಣನವರಿಗೆ ಅಸೀಮ ಆತ್ಮಬಲವನ್ನು ತುಂಬಿದವು . ಬಸವಣ್ಣನವರು ಅಂತಿಮವಾಗಿ ಕುಲಪತಿಗಳ ಅಶೀರ್ವಾದ ಪಡೆದರು, ಬಲದೇವರಸನ ಇತರ ಪರಿವಾರದವರೂ ಹೊರಟು ನಿಲ್ಲುವರು. ಇವರೆಲ್ಲರೂ ಹೊರಟು ನಿಂತು ನದಿಯ ದಂಡೆಗೆ ಸಾಗಿದಾಗ ಜಾತವೇದ ಮುನಿಗಳು ಉದ್ಧರಿಸುವರು : “ಭುವನದ ಭಾಗ್ಯ ನೀನು ಬಸವಣ್ಣ' ಎಂಬುದಾಗಿ. ಹಲವಾರು ಆದರ್ಶಗಳ ಸಾಕಾರವಾಗಿ, ಸ್ವತಂತ್ರ ವಿಚಾರದ ದಿಗ್ಗಜವಾಗಿ, ಭಕ್ತಿ-ಜ್ಞಾನ-ಕ್ರಿಯಾಶಕ್ತಿಯ ಸಂಗಮವಾಗಿ ಸಮಾಜ ಪರಿವರ್ತನೆಯ ಮಹೋನ್ನತ ಧೈಯದೊಡನೆ ಬಸವಣ್ಣನು ಹೊರ ಜಗತ್ತಿಗೆ ಹೊರಡುತ್ತಿದ್ದಾನೆ. ಹರಿಹರ ಕವಿಯು ಒಂದೆರಡು ಮಾತುಗಳಲ್ಲಿಯೇ ಅತ್ಯಂತ ಸೂಕ್ತವಾಗಿ ಹೀಗೆ ಹೇಳುತ್ತಾನೆ; “ ಸಂಗಮನ ಕರುಣೆಯೆ ತನಗೆ ಬೆಂಬಲವಾಗಿ ಸಂಗಮನ ಧ್ಯಾನವೇ ತನಗೆ ಸಂಗಡವಾಗಿ'' ಬಸವಣ್ಣ ಬಾಳನ್ನು ಎದುರಿಸಲು ತನ್ನ ಜೊತೆಗೆ ಒಯ್ದುದು ಏನನ್ನು? ಪರಮಾತ್ಮನ ಧ್ಯಾನವನ್ನು. ಬೆಂಬಲವಾಗಿ ಒಯ್ದುದು ಏನನ್ನು ? ದೇವನ ಕರುಣೆಯನ್ನು, ನಿಜ, ಒಬ್ಬಪ್ರಮಾಣಿಕ ಸಾಧಕನು ತಾನು ಯಾವ ಶಕ್ತಿಯನ್ನು ನಂಬಿಕೊಳ್ಳಬೇಕು ? ಮಂತ್ರಶಕ್ತಿಯನ್ನು ಮತ್ತು ದೇವನ ಅಖಂಡ ಕೃಪೆಯನ್ನು.
ಈ ಅಧ್ಯಾಯದಲ್ಲಿ ವಿಶೇಷವಾದ ತತ್ತ್ವಕ್ಕಿಂತಲೂ ಮಹತ್ವಪೂರ್ಣ ಘಟನೆಯೇ ಇದೆಯಾದರೂ, ಒಂದು ಮಹತ್ವಪೂರ್ಣ ವೈಚಾರಿಕ ಪರಿವರ್ತನೆಯನ್ನು ಗುರುತಿಸುವುದು ಅವಶ್ಯಕ ಎನಿಸುತ್ತದೆ. ಈವರೆಗಿನ ಆಚಾರ - ವಿಚಾರಗಳಿಗಿಂತಲೂ ಪೂರ್ತಿ ಬೇರೆಯಾದ ಒಂದು ಮಾನಸಿಕ ನಿರ್ಧಾರ, ಬೌದ್ಧಿಕ ಮಟ್ಟವನ್ನು ಬಸವಣ್ಣನು ತಲಪುತ್ತಿರುವಂತೆ ಎನ್ನಿಸುತ್ತದೆ.
ಬೇಡೆನ್ನ ಕಂದ ನಿನ್ನೊಡನೆ ಬಪ್ಪೆಂ ಬಸವ
ನೋಡು ನಿನ್ನಾಣೆ ನಿನ್ನೊಡನೆ ಬಪ್ಪೆಂ ಬಸವ
ನಿನ್ನನಗಲಿರಲಾರ್ಪೆನೇ ಬಸವ ಬಸವಣ್ಣ,
ನೀನಿಂತಳುತ್ತಿಪ್ಪಡೆನಗರಿದು ಬಸವಣ್ಣ
ಕಂದ ಬೇಡಯ್ಯ ಬೇಡಯ್ಯ ನೇಹದ ನಿಧಿಯೆ
ಹಿಂದುಗೊಂಡೇ ಬಪ್ಪೆನೆನ್ನ ಸುಕೃತದ ಸುಧೆಯೆ
ನೆನೆಯೆ ಮುಂದಿರ್ದಪೆಂ ಕರೆದೊಡೋ ಎಂದಪೆಂ
ಮನದೊಳಗೆ ಕರದೊಳಗೆ ತನುವಿನೊಳಗಿರ್ದಪೆಂ
ನಿಂದಲ್ಲಿ ನಿಂದಪೆಂ ನಡೆದಲ್ಲಿ ನಡೆದಪೆಂ
ಬಂದಲ್ಲಿ ಬಂದಪೆಂ ನುಡಿದಲ್ಲಿ ನುಡಿದಪೆಂ
ಬಿಟ್ಟುದಂ ಬಿಟ್ಟಪೆಂ ಪಿಡಿದುದು ಪಿಡಿದಪೆಂ
ನಟ್ಟುದಂ ನಟ್ಟಪೆಂ ಕೇಳ್ದುದಂ ಕೇಳ್ದಪೆಂ
ಇಲ್ಲಿ ಸಂಗಮನಾಥನು ಭರವಸೆ ಕೊಡುವ ದನಿಯಲ್ಲಿ ಈ ನಿರೂಪಣೆ ಇರುವುದು ನಿಜವಾದರೂ, ಬಹುಶಃ ಬಸವಣ್ಣನ ಮನಸ್ಸಿನಲ್ಲಿ ಒಂದು ವಿಶೇಷ ನಿರ್ಧಾರ (ತಿಳುವಳಿಕೆ ಚಿಂತನೆ ಮೊದಲೇ ಮೂಡಿರಲು ಸಾಕು) ಉಂಟಾಗಿದೆ. ಭಕ್ತನು ಹುಡುಕಿಕೊಂಡು ಹೋಗುವಂತಹ ಪೂಜಾರಿಗಳ ಕೈಯಲ್ಲಿ ಸಿಕ್ಕು, ಅನೇಕ ಬಗೆಯ ಆಡಂಬರದ ಭಕ್ತಿಗೆ ಒಳಗಾಗುವಂತಹ ದೇವರು, ಬೇಡ ; ಭಕ್ತನ ಚೇತನಮಯವಾದ ದೇಹಾಲಯವೇ ದೇವಾಲಯವಾಗುವಂತೆ ಸದಾ ದೇಹದ ಮೇಲಿರುವ, ಯಾರ ಮಧ್ಯಸ್ತಿಕೆಯೂ ಅಡ್ಡಿ ಬರದ. ಯಾವಾಗ ಬೇಕಾದರೂ .ಪೂಜೆಗೊಳ್ಳಬಹುದಾದಂತಹ ಕುರುಹನ್ನು, ಪರಮಾತ್ಮನನ್ನು ಅರಿತುದಾಯಿತು. ಭಕ್ತನನ್ನು ಹಿಂದುಗೊಂಡು ಬರುವ ನೆನೆದಾಗ ಮುಂದಿದ್ದು, ಕರೆದಾಗ ಓ ಎನ್ನುವ, ಮನದೊಳಗೆ, ಕರದೊಳಗೆ, ತನುವಿನೊಳಗಿರುವ ದೇವನ ಪ್ರತಿರೂಪವಾದ ಲಾಂಛನದ ಆವಿಷ್ಕಾರವಾದ ಬಳಿಕ ಬಸವಣ್ಣನು ಬಹದೇವತೋಪಾಸನೆಯಿಂದ ಏಕದೇವೊಪಾಸನೆಗೆ ಧೃಡವಾಗಿ ಮಾನಸಾಂತರ ಹೊಂದುತ್ತಲಿದ್ದಾನೆ. ಬಹುದೇವತೋಪಾಸನೆ (Polytheism) ಯಿಂದ ಶಿವೋಪಾಸನೆ (Henotheism)ಗೆ ಬಾಗೇವಾಡಿಯನ್ನು ತೊರೆಯುವಾಗ ಬದಲಾಗಿದ್ದರೆ ಈಗ ಶಿವೋಪಾಸನೆಯಿಂದ ಏಕದೇವೋಪಾಸನೆ (Montheism) ಗೆ ಏರುತ್ತಿದ್ದಾನೆ. ತಂದೆಯನ್ನು ಅಂದು ಕೇಳಿದ್ದೆಂದರೆ 'ಶಿವಭಕ್ತನಾಗಿಯೂ ನೀನು ಕಾಲ, ಕಾಮ, ಸೂರ್ಯ, ಯಮ, ಅಗ್ನಿ, ಇಂದ್ರ, ಚಂದ್ರ, ಅಜ, ಹರಿ, ನವಗ್ರಹ ಮುಂತಾಗಿ ಏಕೆ ಎಲ್ಲ ಪೂಜೆಗಳನ್ನು ಮಾಡುವೆ ?'' ಎಂಬುದಾಗಿ, ಇಂದು ಅವನು ತಿಳಿದುದೆಂದರೆ, ಯೋಗಿರಾಜ ಶಿವನೂ ಸಹ ಧ್ಯಾನಾಸಕ್ತನಾಗಿರುತ್ತಾನೆಂದರೆ ಅವನು ಯಾರನ್ನು ಕುರಿತು ಧ್ಯಾನಿಸುತ್ತಾನೆ ? ಈ ಎಲ್ಲ ಯೋಗಿಗಳು ತ್ರಿಮೂರ್ತಿಗಳು ಎಲ್ಲರಿಂದಲೂ ಆರಾಧಿಸಲ್ಪಡುವ ಒಂದು ಮಹಾನ್ ವಸ್ತು. ತತ್ವ ಇದೆಯಷ್ಟೇ ಅದೇ ದೇವರು, ಆ ದೇವರು ಗುಡಿ ಗುಂಡಾರಗಳಲ್ಲಿ ಸೀಮಿತನಾಗಿಲ್ಲ. ಅತನು ಸರ್ವಶಕ್ತ, ಸರ್ವವ್ಯಾಪಿ. ಸರ‍್ವಾಂತರ‍್ಯಾಮಿ, ಸರ್ವಜ್ಞ ನಿತ್ಯ ಸತ್ಯ."
ಬಸವಣ್ಣನು ತಾನು ಆವಿಷ್ಕರಿಸಿ ಕೊಟ್ಟ ಲಾಂಛನವು ಮತ್ತೆ ತಪ್ಪುವ್ಯಾಖ್ಯಾನ ವಿವರಣೆ (Interpretation) ಗೆ ಒಳಗಾಗಬಾರದೆಂದೇ ಎಷ್ಟೋ ಕಡೆ ಹೀಗೆ ಹೇಳಿದ್ದಾನೆ.
೧. ದೇವಪೂಜೆಯ ಮಾಟ ದುರಿತ ಬಂಧನದೋಟ
೨. ಸರಿಯೇ ದೇವ ಭಕ್ತಂಗಿವನು ?
೩. ದೇವಸಹಿತ ಭಕ್ತ ಮನೆಗೆ ಬಂದರೆ
ಕಾಯಕವಾಗುವುದೆಂದುಬೆಸಗೊಂಡೆನಾದರೆ ನಿಮ್ಮಾಣೆ.
ಹರನು ಮೂಲಿಗನಾಗಿ ಹೊರಟ ಒಂದು ಪರಂಪರೆ ನಿಜವಾಗಿಯೂ ಮೂಲತಃ ಸತ್ವಪೂರ್ಣ, ಸ್ಥಾವರಲಿಂಗವು ಶಿವನ ಪ್ರತೀಕವಾಗಿಯೇ ಇದ್ದರೂ ಶಿವದೇವಾಲಯಗಳು ಎಲ್ಲರಿಗೂ ನೇರವಾದ ಪೂಜೆಗೆ ಅವಕಾಶ ಕೊಡುತ್ತಿದ್ದವು. ಕ್ರೈಸ್ತಧರ್ಮವು ಜೀಸಸನನ್ನು ಕೇಂದ್ರವಾಗಿಟ್ಟುಕೊಂಡು ಅಂದರೆ ಏಕಗುರು ನಿಷ್ಠೆಯ ಮೇಲೆ ಸಮಾಜವನ್ನು ಕಟ್ಟಿದಂತೆ. ಬುದ್ಧನನ್ನೇ ಶ್ರದ್ಧಾಕೇಂದ್ರವಾಗಿ ಇಟ್ಟುಕೊಂಡು ಬೌದ್ಧ ಧರ್ಮವು ಬೆಳೆದಂತೆ ಶಿವನನ್ನು ಕೇಂದ್ರವಾಗಿಟ್ಟುಕೊಂಡು ಶೈವಧರ್ಮವು ಬೆಳೆದಿದ್ದಿತು; ಜಾತಿ ವರ್ಣಾತೀತವಾಗಿ ಶಿವ ಭಕ್ತಿ ಇದ್ದಿತು. ಭರತ ಖಂಡದಲ್ಲಿ ಮಾತ್ರವಲ್ಲ ಸಿಂಹಳ, ಬ್ರಹ್ಮದೇಶ, ಮಲೇಶಿಯಾ ಮುಂತಾಗಿ ಶಿವಧರ್ಮ ಹಬ್ಬಿತ್ತು. ಶಿವನನ್ನು ನಂಬಿದ ಶಿವಪಥಿಕರೆಲ್ಲರೂ ಸಮಾನರು ಎಂಬ ನಂಬಿಕೆಯೇ ಅಲ್ಲದೆ, ಸಾಕಷ್ಟು ಜನ ಹೆಣ್ಣು ಮಕ್ಕಳು ಉಮೆ, ಕನ್ಯಾಕುಮಾರಿ, ಮೀನಾಕ್ಷಿ ಮುಂತಾದವರು ಶಿವಯೋಗಿಣಿಯರಾಗಿದ್ದರು. ಕೇವಲ ತಣ್ಣೀರು - ಬಿಲ್ವಪತ್ರೆಗಳಿಂದ ಶಿವನು ತೃಪ್ತನಾಗುತ್ತಿದ್ದ. ಬೇಡರ ಕಣ್ಣಪ್ಪ, ಮಾದಾರ ಚನ್ನಯ್ಯನಂತಹವರು ಭಕ್ತಿಯ ಪರಾಕಾಷ್ಠೆ ತಲ್ಪಿದಾಗ ರಾಜರಿಂದ ಗೌರವಿಸಲ್ಪಡುತ್ತಿದ್ದರು. ಪ್ರತಿಯೊಂದು ಕುಗ್ರಾಮದಲ್ಲಿಯೂ ನಗರ ದೈವವಾಗಿ ವಿಜೃಂಭಿಸುತ್ತಿದ್ದ ಶಿವನು ಸಮಾನತೆಯ ಪ್ರತೀಕವಾಗಿದ್ದ, ಸತ್ಯ ಶುದ್ಧ ಸರಳ ಭಕ್ತಿಯ ಪ್ರತೀಕವಾಗಿದ್ದ.
ಆದರೆ ಈ ಮೂಲರೂಪವನ್ನು ಶಿವಧರ್ಮ ಸಂಪೂರ್ಣವಾಗಿ ಕಳೆದುಕೊಂಡಿತ್ತು. ಪುನಃ ಪೂಜಾರಿಶಾಹಿಯ ಆಡಂಬರದ ಪೂಜೆ, ಅಭಿಷೇಕಗಳ ಸರಪಳಿಯಿಂದ ಬಂಧಿತವಾಗಿತ್ತು. ಶಿವಭಕ್ತರೆಲ್ಲರ ನಡುವೆ ಸಾಮಾಜಿಕ ಸಮಾನತೆಗೆ ಅವಕಾಶವಿಲ್ಲವಾಗಿತ್ತು. ಹೀಗಾಗಿ ಬಸವಣ್ಣನವರು ಅನಿವಾರ್ಯವಾಗಿ ಹೊಸದೊಂದರ ಅನ್ವೇಷಣೆಗೆ ತೊಡಗಿದರು. ತೀರ ಹಳೆಯದಾದ ವಸ್ತ್ರವನ್ನು ರಿಪೇರಿ ಮಾಡುವುದು ಕಷ್ಟಕರ; ಒಂದು ಕಡೆ ಹೊಲಿದರೆ ಇನ್ನೊಂದು ಕಡೆ ಹಿಂಜಿ ಹೋಗುತ್ತದೆ. ತೀರ ಶಿಥಿಲವಾದುದನ್ನು ಸುಧಾರಿಸಲು ಸಮಯ ಕಳೆಯುವ ಬದಲು ಹೊಸವಸ್ತ್ರವನ್ನು ನೇಯುವುದೇ ಸುಲಭವೆನಿಸಿದಾಗ ಬಸವಣ್ಣನು ಇಷ್ಟಲಿಂಗದ ಸಂಶೋಧನೆಯಲ್ಲಿ ತೊಡಗಿದ್ದು, ಯಶಸ್ವಿಯಾದುದು. ಯೋಗಿರಾಜನು, ಸರಳಜೀವಿಯು, ಶಾಂತನು, ಅಂತರ್ಮುಖನೂ ಆದ ಯೋಗಿ ಶಿವನ ಬಗ್ಗೆ ಒಂದು ಬಗೆಯ ಅದಮ್ಯ ಪ್ರೇಮ, ಭಕ್ತಿ ಮಿಡಿಯುವುದನ್ನು ಬಸವಣ್ಣನವರ ವಚನಗಳಲ್ಲಿ ಅಲ್ಲಲ್ಲಿ ಕಾಣಬಹುದು. ಮಾತ್ರವಲ್ಲ ಅನೇಕ ಪುರಾಣಪುರುಷರು, ಸಂತರೊಡನೆ ತುಲನೆ ಮಾಡಿ ಶಿವನ ವ್ಯಕ್ತಿತ್ವವನ್ನು ಮೆಚ್ಚುತ್ತಾರೆ. ಕೊಂಡಾಡುತ್ತಾರೆ.
ಹೀಗೆ ನವಧರ್ಮದ ದ್ರಷ್ಟಾರ ಬಸವಣ್ಣ ತನ್ನ ಹೃದಯದಲ್ಲಿ ಸಮಗ್ರವಾದ ಧರ್ಮವೊಂದರ ಕಲ್ಪನೆ ಹೊತ್ತು ಹೊರಡುವುದು ಒಂದು ಮಹತ್ವ ಪೂರ್ಣವಾದ ಚಾರಿತ್ರಿಕ ಸನ್ನಿವೇಶ.
ಜಲದಲ್ಲಿ ಉದ್ಭವಿಸಿದ ಮುತ್ತು ಮತ್ತೆ ಜಲವು ತಾನಲ್ಲ;
ಜಲವೆಂದಿಪ್ಪುದೀ ಲೋಕವೆಲ್ಲಾ.
ಪರಮಗುರು ಬಸವಣ್ಣ ಜಗವ ಪಾಲಿಸ ಬರಲು
ಎನ್ನ ಪರಿಭವದ ದಂದುಗ ಹರಿಯಿತ್ತಯ್ಯಾ
ಆ ಸುದ್ದಿಯನರಿಯದ ಅನೇಕ ಜಡರುಗಳೆಲ್ಲ
ಬೇಕಾದ ಪರಿಯಲ್ಲಿ ನುಡಿವುತ್ತಿಹರು.
ಸತ್ತಪ್ರಾಣಿಯನೆತ್ತಿ ಒಪ್ಪಿಪ್ಪ ನಿಶ್ಚಯವು
ಮರ್ತ್ಯದವರಿಗುಂಟೆ ಶಿವಗಲ್ಲದೆ ?
ಶಿವಗುರು ಬಸವಣ್ಣ, ಬಸವಗುರು ಶಿವನಾಗಿ,
ದೆಸೆಗೆಟ್ಟ ದೇವತಾಪಶುಗಳಿಗೆ ಪಶುಪತಿಯಾದನು.
ಬಸವಣ್ಣನ ನೆನಹು ಸುಖಸಮುದ್ರವಯ್ಯಾ !
ಕಪಿಲಸಿದ್ಧ ಮಲ್ಲಿಕಾರ್ಜುನಯ್ಯಾ,
ಬಸವಣ್ಣನ ತೋರಿದಿರಾಗಿ ಬದುಕಿದೆನಯ್ಯಾ ಪ್ರಭುವೆ.
ಗ್ರಂಥ ಋಣ:
೧) ಪೂಜ್ಯ ಮಾತಾಜಿ ಬರೆದ "ವಿಶ್ವಧರ್ಮ ಪ್ರವಚನ" ಪುಸ್ತಕ (ಪ್ರ: ೧೯೮೭) ದಿಂದ ಅಯ್ದ ಭಾಗ. ಪ್ರಕಟಣೆ: ವಿಶ್ವ ಕಲ್ಯಾಣ ಮಿಷನ್, ಬಸವ ಮಂಟಪ, ಕಾರ್ಡ್ ರೋಡ್, ಎರಡನೆಯ ಬ್ಲಾಕು, ರಾಜಾಜಿನಗರ, ಬೆಂಗಳೂರು - ೫೬೦ ೦೧೦.
ಇಷ್ಟಲಿಂಗದ ಆವಿಷ್ಕಾರ | ಬಸವಣ್ಣನವರ ವಿವಾಹ |