ಗುರು ಬಸವಣ್ಣನವರು ಮದುವೆಯಾದದ್ದು ಒಬ್ಬಳನ್ನೆ | ಬಸವಣ್ಣನವರೇ ಗುರು |
ಎಲ್ಲರಿಗೆ ಬೆಲ್ಲಾದ ಕಲ್ಯಾಣ ಬಸವಯ್ಯ |
- ✍ ಪೂಜ್ಯ ಶ್ರೀ ಮಹಾಜಗದ್ಗುರು ಡಾ|| ಮಾತೆ ಮಹಾದೇವಿ
(ಪೂಜ್ಯ ಮಾತಾಜಿ ಬರೆದ "ಎಲ್ಲರಿಗೆ ಬೆಲ್ಲಾದ ಕಲ್ಯಾಣ ಬಸವಯ್ಯ..." ಪುಸ್ತಕ ದಿಂದ ಅಯ್ದ ಭಾಗ.)
ಜನಪದ ಗೀತೆಗಳು ಮಣ್ಣಿನ ಮಕ್ಕಳ ಹೃದಯಾಂತರಾಳದಿಂದ ಬಂದ ಅನಿಸಿಕೆಗಳು, ಕನ್ನಡ ಸಾಹಿತ್ಯದಲ್ಲಿ ದೊರೆಯುವ ಜನ ಸಾಮಾನ್ಯರ ಹಾಡುಗಬ್ಬಗಳು, ದೈನಂದಿನ ಚಟುವಟಿಕೆಗಳಲ್ಲಿ ಹಾಡಲ್ಪಡುವ ಬೀಸುವ ಪದ, ಹಂತಿಪದ ಮುಂತಾದುವುಗಳಲ್ಲಿ ಬಸವಾದಿ ಪ್ರಮಥರನ್ನು ಕುರಿತು ವಿಪುಲ ಸಾಮಗ್ರಿ ಇರುವದು ಗಮನಾರ್ಹ. ಶ್ರೀ ಡಾ|| ಬಿ. ಎಸ್. ಗದ್ದಗೀಮಠರು "ಕನ್ನಡ ಜಾನಪದ ಗೀತೆಗಳು" (ಪ್ರಬಂಧ ಮಂಡನೆ: ೧೯೫೫, ಪುಸ್ತಕ ಪ್ರಕಟಣೆ: ೧೯೬೩) ಎಂಬ ಉದ್ದಾಮ ಗ್ರಂಥ ಒಂದನ್ನು ತಮ್ಮ ಡಾಕ್ಟರೇಟ್ ಪದವಿಗಾಗಿ ಬರೆದಿದ್ದು ಅದರಲ್ಲಿ ಕಲ್ಯಾಣ ಬಸವಯ್ಯ, ಹರಳಯ್ಯ, ಮಡಿವಾಳ ಮಾಚಯ್ಯ, ಮೇದಾರ ಕೇತಯ್ಯ, ಕಿನ್ನರಿಯ ಬೊಮ್ಮಯ್ಯ, ನೇಗಿಯ ಅಮುಗಯ್ಯ ಮುಂತಾದವರನ್ನು ಕುರಿತು ಹಂತಿಪದಗಳನ್ನು ಸಂಗ್ರಹಿಸಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯದ ಮಹತ್ವಪೂರ್ಣ ಪ್ರಕಟಣೆಯಾದ ಈ ಗ್ರಂಥ ದಿಂದ ನಾನು ತ್ರಿಪದಿಗಳನ್ನು ಆಯ್ದು ಕೊಂಡಿದ್ದೇನೆ. ಪಂಡಿತರ ಕೈವಾಡದ ಮಾಲೀನ್ಯದಿಂದ ಹೊರತಾದ ಜನಪದ ಗೀತೆಗಳಲ್ಲಿರುವ . ಸತ್ಯವನ್ನು ಅರಿತು, ಆನಂದಿಸುವಿರಾಗಿ ನಂಬಿದ್ದೇನೆ.
ವಿಶ್ವಗುರು, ಮಂತ್ರಪುರುಷ ಬಸವಣ್ಣನವರನ್ನು ಕುರಿತು ರಚಿತವಾಗಿರುವ ಸಾಹಿತ್ಯ ಬಹುಮುಖವಾಗಿದೆ. ಅವರ ಜೀವನವನ್ನು ಪ್ರತ್ಯಕ್ಷವಾಗಿ ಕಂಡು ಬಣ್ಣಿಸಿದ ಸಮಕಾಲೀನ ಶರಣರ ವಚನಗಳು; ನಂತರದಲ್ಲಿ ಬಸವಣ್ಣನವರ ಬದುಕೊಂದು ಮಾದರಿಯದಾಗಿ, ಜನತೆಯ ಹೃದಯದಲ್ಲಿ ಅಚ್ಚಳಿಯದ ಪ್ರಭಾವ ಬೀರಿದ್ದರಿಂದ ಪ್ರೇರಣೆಗೊಂಡು ರಚಿತವಾದ ಕಾವ್ಯ(ಪುರಾಣ) ಸಾಹಿತ್ಯ ಇವುಗಳಲ್ಲಿ ಪ್ರಮುಖ. ಇನ್ನೊಂದು, ಪ್ರಾಂಜಲ- ಪ್ರಾಮಾಣಿಕ ಹೃದಯದ ಕೊಡುಗೆ ಜನಪದ ಸಾಹಿತ್ಯ, ಕವಿಗಳು ತಮ್ಮ ಪಾಂಡಿತ್ಯ- ಪ್ರತಿಭೆಯನ್ನು ಪ್ರದರ್ಶಿಸಲೋಸುಗ ಕೆಲವೊಮ್ಮೆ ವರ್ಣನಾ ವೈಭವವನ್ನು ಹರವಿ ಸತ್ಯವನ್ನು ಕಳೆದು ಬಿಡುವ ಸಾಧ್ಯತೆ ಯುಂಟು. ಅವರು ದುರುದ್ದೇಶದಿಂದ ಹೀಗೆ ಮಾಡಿರದೆ, ತಮ್ಮ ಕಥಾನಾಯಕನನ್ನು ಮುಗಿಲಿಗೇರಿಸುವ ಭರದಲ್ಲಿ ಹೀಗೆ ಮಾಡ ಬಹುದು ಅಥವಾ ತಮ್ಮ ಪಾಂಡಿತ್ಯ ಪ್ರದರ್ಶನದಲ್ಲಿ ಮೈಮರೆತು ಹೀಗೆ ಮಾಡಬಹುದು.
ಸಾಮಾನ್ಯವಾಗಿ ಇನ್ನೊಂದು ಸಾಹಿತ್ಯವೂ ರಚನೆಯಾಗುತ್ತಿರುತ್ತದೆ. ಇದು (ಕು)ಪಾಂಡಿತ್ಯದವರ ರಚನೆ. ಇವರ ಸಾಹಿತ್ಯ ಪ್ರತಿಭೆ ಸತ್ಯ ನಿರೂಪಣೆಯಲ್ಲಿ ಅಭಿವ್ಯಕ್ತವಾಗುವುದಕ್ಕಿಂತಲೂ ಕೃತ್ರಿಮ ಸೃಷ್ಟಿ ಮಾಡುವುದರಲ್ಲಿ ಸತ್ಯವನ್ನು ತಿರುಚಿ ಬರೆಯುವುದರಲ್ಲಿ ಅಭಿವ್ಯಕ್ತಗೊಳ್ಳುತ್ತದೆ. ಬುದ್ಧಿ ಜೀವಿಗಳೆನ್ನಿಸಿಕೊಂಡ ಕೆಲವರು ತಮ್ಮ ಆಶ್ರಯದಾತರನ್ನು ಹೊಗಳಲು, ಅವರ ಹಿತಾಸಕ್ತಿಗಳನ್ನು ಕಾಪಾಡಲು ಸತ್ಯವನ್ನು ಮರೆಮಾಚುವ ಸಾಹಿತ್ಯ ಸೃಷ್ಟಿಯನ್ನು ಮಾಡುತ್ತಾರೆ.
ಈ ಎಲ್ಲ ಲೋಪಗಳಿಗೆ ಹೊರತಾಗಿ ನಿಲ್ಲುವ ಸಾಹಿತ್ಯ ಜನ ಪದ ಸಾಹಿತ್ಯ. ಇದು ಬುದ್ದಿಯು ಪ್ರಯತ್ನಪೂರ್ವಕವಾಗಿ ತಿಣುಕಿದಾಗ ಹೊರಬರುವ ಸಾಹಿತ್ಯವಲ್ಲ ; ಹೃದಯದ ಅಂತರಾಳದಿಂದ ನಿರರ್ಗಳವಾಗಿ ಪುಟಿಯುವ ಚಿಲುಮೆ. ಈ ದೃಷ್ಟಿಯಿಂದ, ನನ್ನ ಭಾವನೆಯಲ್ಲಿ ವೇದಾಗಮಪುರಾಣ ಮುಂತಾದ ಬುದ್ದಿ ಪೂರ್ವ ಕವಾಗಿ ಬರೆದ ಸಾಹಿತ್ಯಕ್ಕಿಂತಲೂ ಜನಪದ ಸಾಹಿತ್ಯವೇ ದೇವವಾಣಿ. ಏಕೆಂದರೆ ಅದು ಅಕೃತ್ರಿಮವಾಗಿ ಬಂದ ನೈಸರ್ಗಿಕ ಸಾಹಿತ್ಯಾಭಿವ್ಯಕ್ತಿ. ತಮ್ಮ ಅಂತರಂಗಕ್ಕೆ ಅನಿಸಿದ್ದನ್ನು ಈ ಸಮುದಾಯ ನುಡಿದು ಬಿಡುವುದೇ ವಿನಾ ಮನದಲ್ಲಿ ಏನೋ ಒಂದನ್ನಿಟ್ಟುಕೊಂಡು ಹೊರಗೆ ಇನ್ನೊಂದನ್ನು ಬರೆಯುವ ಕಪಟತನ ಉಳ್ಳದ್ದಲ್ಲ.
೧. ಎಲ್ಲ ಬಲ್ಲಿದನಯ್ಯ ಕಲ್ಯಾಣ ಬಸವಯ್ಯ
ಚೆಲ್ಲಿದನು ತಂದು ಶಿವಬೆಳಕ |
ನಾಡೊಳಗೆ ಸೊಲ್ಲೆತ್ತಿ ಜನವು ಹಾಡುವುದು ||
ಅರ್ಥ : ಕಲ್ಯಾಣದ ಬಸವಣ್ಣನವರು ಎಲ್ಲವನ್ನೂ ತಿಳಿದ ಅಸಾಮಾನ್ಯ ಜ್ಞಾನಿಗಳು. ಅವರು ಶಿವಬೆಳಕನ್ನು (ದಿವ್ಯಜ್ಞಾನದ ಪ್ರಕಾಶವನ್ನು) ತಂದು ಚೆಲ್ಲಿ ಬಿಟ್ಟರು. ಇದರಿಂದಾಗಿಯೇ ಜನ ಸಮೂಹವು ಹೃದಯ ತುಂಬಿ ಹಾಡುವುದು, ಕೊಂಡಾಡುವುದು.
ವ್ಯಾಖ್ಯಾನ : ಈ ತ್ರಿಪದಿಯ ಒಂದೊಂದು ಮಾತುಗಳೂ ಅರ್ಥ ವಂತಿಕೆಯಿಂದ ಕೂಡಿದೆ. ತಾವು ಕಂಡ, ಕೇಳಿದ ಎಲ್ಲ ಮಹಾತ್ಮರಿಗಿಂತಲೂ ಬಸವಣ್ಣನವರು ಬಲ್ಲಿದರಾಗಿ, ಜ್ಞಾನಿಗಳಾಗಿ ಜನಪದ ಕವಿಗಳಿಗೆ ಕಂಡಿದ್ದಾರೆ. ಬೆಳಕನ್ನು ಹರಿಸಿದ ಎನ್ನುವದ ಕ್ಕಿಂತಲೂ ಚೆಲ್ಲಿದ ಎಂಬ ಪ್ರಯೋಗ ಹೆಚ್ಚು ಶಕ್ತಿಶಾಲಿಯಾಗಿದೆ. ಹರಿಸುವುದು ಒಂದು ವಿಶಿಷ್ಟ ಜಾಡಿನಲ್ಲಿ ಎಂಬ ಸೀಮಿತತೆ ತೋರಿಸಿದರೆ, ಚೆಲ್ಲುವುದು ವ್ಯಾಪಕವಾಗಿ ಎನ್ನಿಸುತ್ತದೆ. ಆಶ್ರಯ ನೀಡಿ, ಹಣಕೊಟ್ಟು ಬಸವಣ್ಣನವರು ಹೊಗಳಿಸಿಕೊಳ್ಳಲಿಲ್ಲ. ಅವರು ಮಾಡಿದ ಕಾರ್ಯವನ್ನು ನೋಡಿ ಬೆರಗಾಗಿ ಜನರು ತಾವಾಗಿಯೇ ಸೊಲ್ಲೆತ್ತಿ, ಹೃದಯ ತುಂಬಿ ಹಾಡಿದ್ದಾರೆ.
೨. ಬಸವಣ್ಣ ನಿನ್ಹೆಸರು ದೆಶೆದೆಶೆಗೆ ಶಿವಮಂತ್ರ
ಹೊಸಮತಕೆ ಮಂತ್ರ ನಿತ್ಯದಲಿ | ಒಕ್ಕಲಿಗ
ಹೊಸಮಂತ್ರ ಬಸವಾ ಜಪಿಸುವನು ||
ಅರ್ಥ : ಬಸವಣ್ಣಾ, ನಿನ್ನ ಹೆಸರು ದಿಕ್ಕು ದಿಕ್ಕಿನಲ್ಲಿ ಹೆಸರಿಸಿದೆ. ಅದೂ ಬರಿಯ ಹೆಸರಾಗಿ ಅಲ್ಲ, ಮಂತ್ರವೇ ಆಗಿ, ಹೊಸಮತಕ್ಕೆ ನೀನು ಸ್ಥಾಪಿಸಿಕೊಟ್ಟ ಹೊಸ ಧರ್ಮದ ಅನುಯಾಯಿಗಳಿಗೆ ಇದು ನಿತ್ಯಮಂತ್ರ. 'ಬಸವಾ' ಎಂಬ ಹೊಸ ಮಂತ್ರವಿದನ್ನು ಕಾಯಕ ಜೀವಿಗಳಾದ ರೈತರಂತೂ ನಿತ್ಯವೂ ಜಪಿಸುವರು.
೩. ಉತ್ತಿ ಬಿತ್ತುವ ಮಂತ್ರ ಬಿತ್ತಿ ಬೆಳೆಯುವ ಮಂತ್ರ
ಸತ್ಯ ಶಿವಮಂತ್ರ ನಿನ್ಹೆಸರು | ಬಸವಯ್ಯ
ಮರ್ತ್ಯದೊಳು ಮಂತ್ರ ಜೀವನಕೆ ||
ಅರ್ಥ : ಗುರು ಬಸವಣ್ಣಾ, ನಿನ್ನ ಹೆಸರು ನಮ್ಮ ನಿತ್ಯ ಮಂತ್ರ, ಜೀವನ ನಿಜ ತಂತ್ರ, ಉತ್ತಿ ಬಿತ್ತುವಾಗ, ಬಿತ್ತಿ ಬೆಳೆಯುವಾಗ, ಸತ್ಯ ಶಿವಮಂತ್ರವೇ ಆಗಿರುವ ನಿನ್ನ ಹೆಸರನ್ನು ಸ್ಮರಿಸುತ್ತೇವೆ. ಮರ್ತ್ಯಲೋಕದಲ್ಲೇ ಇದು ಸತ್ವಶಾಲಿ ಮಂತ್ರ.
ವ್ಯಾಖ್ಯಾನ : ಪದ್ಯ 2 ಮತ್ತು 3 ರಲ್ಲಿ ಎರಡು ಮಹತ್ವದ ಮಾತುಗಳಿವೆ. ಬಸವಣ್ಣನವರ ಹೆಸರು ಮಂತ್ರವಾಯಿತು ; ಮತ್ತು ಅವರು ಹೊಸಮತವನ್ನು ಕೊಟ್ಟರು.
ಈ ಜಗತ್ತಿನಲ್ಲಿ ಯಾವುದೇ ಧರ್ಮದ ಪರಂಪರೆಯನ್ನು ನೋಡಿ ದರೆ, ಆ ಧರ್ಮದ ಸ್ಥಾಪಕರ ಹೆಸರು ಮಾತ್ರ ಮಂತ್ರವಾಗಿರುತ್ತದೆ. ಕ್ರೈಸ್ತರಿಗೆ ಏಸುಕ್ರಿಸ್ತನ ಹೆಸರು, ಬೌದ್ಧರಿಗೆ ಬುದ್ಧನ ಹೆಸರು ಮಂತ್ರವಾದಂತೆ ಲಿಂಗಾಯತ ಧರ್ಮೀಯರಿಗೆ ಬಸವಣ್ಣನವರ ಹೆಸರು ಮಂತ್ರ. ಇಂದು ದೊಡ್ಡ ದೊಡ್ಡ ವಿದ್ವಾಂಸರೆಂದು ಬಿರುದಾಂಕಿತರಾಗಿ ತನುವಿನಲ್ಲೊಂದು, ಮನದಲ್ಲೊಂದು ಭಾವ ವನ್ನು ಇಟ್ಟುಕೊಂಡು ಬರೆಯುತ್ತ ಬಸವಣ್ಣನವರು ಧರ್ಮದ ಆದ್ಯರಲ್ಲ ಎನ್ನುವ ಅತಿ ಬುದ್ಧಿವಂತರ ನೂರು ವಾದಗಳಿಗಿಂತಲೂ, ಜನಪದ ಕವಿಗಳ, ಮಣ್ಣಿನ ಮಕ್ಕಳ, ಮೇಲಿನ ಸ್ತುತಿ ನಮಗೆ ಬಹುದೊಡ್ಡ ದಾಖಲೆ,
೪. ಬಸವ ಹೂಡಿದ ಬಂಡಿ ಸಿಸುವು ಏರಿತು ನಂದಿ
ದೆಸೆಗೆಟ್ಟು ಲೋಕ ಕೈಲಾಸ | ಕಾಯಕದ
ಉಸಿರಾತು ನಾಡ ಸಿರಿಯಾಯ್ತು ||
ಅರ್ಥ : ಬಸವಣ್ಣ ಒಂದು ಬಂಡಿಯನ್ನು ಹೂಡಿದ (ಸಿಸುವು ಏರಿತು ನಂದಿ ಎಂಬುದು ಸರಿಯಾಗಿ ಅರ್ಥವಾಗಿಲ್ಲ.) ಕೈಲಾಸ ಎಂಬ ಲೋಕವೇ ದೆಸೆಗೆಟ್ಟು ಹೋಗಿ ಬಿಟ್ಟಿತು. ಏಕೆಂದರೆ ಕಾಯಕ ತತ್ವದ ಪ್ರತಿಫಲವಾಗಿ ಮರ್ತ್ಯಲೋಕವು ಸಮೃದ್ದಿಸಂತೃಪ್ತಿಯ ಬೀಡಾಗಿ ಕೈಲಾಸಕ್ಕೆ ಪ್ರತಿಸ್ಪರ್ಧಿಯಾಗಿ ನಿಂತಿತು.
ವ್ಯಾಖ್ಯಾನ : ಭಾರತೀಯ ಧಾರ್ಮಿಕ ಸಾಹಿತ್ಯದಲ್ಲಿ ಸ್ವರ್ಗನರಕ, ಕೈಲಾಸ-ವೈಕುಂಠ ಮುಂತಾದ ಲೋಕಗಳ ಕಲ್ಪನೆ ಇದೆ. ಸ್ವರ್ಗವು ಸುಖ-ಭೋಗ-ವಿಲಾಸಗಳ ಸಾಂಕೇತಿಕ ಸ್ಥಾನವಾದರೆ, ಕೈಲಾಸವು ಸಮೃದ್ಧಿ, ಸಂತೃಪ್ತಿ, ಭಕ್ತಿಗಳ ತ್ರಿವೇಣಿ ಸಂಗಮ. ಬಹಳ ಜನ ಭಕ್ತರು ಸತ್ತ ನಂತರ ಸಿಕ್ಕುವ ಇಂತಹ ಕೈಲಾಸಕ್ಕಾಗಿ ಪರಿತಪಿಸಿದರು. ಆದರೆ ಬಸವಣ್ಣ ಹೂಡಿದ ಧರ್ಮ-ಕಾಯಕ ತತ್ವಗಳ ಬಂಡಿಯಲ್ಲಿ ಕೂತವರು ಆ ಕೈಲಾಸದ ಕನಸನ್ನು ಮರ್ತ್ಯದಲ್ಲೇ ನನಸು ಮಾಡಿಕೊಂಡು ಸಂತೋಷಿಸಿದರು. ಹೀಗಾಗಿ ಕೈಲಾಸ ವನ್ನು ಯಾರೂ ಹಂಬಲಿಸುವವರು, ಲೆಕ್ಕಿಸುವವರು ಇಲ್ಲವಾಗಿ ಅದು ದೆಸೆಗೆಟ್ಟು ಹೋಯಿತು. ಕಾಯಕ ತತ್ತ್ವವು ಜನ ಜೀವ ನದ ಉಸಿರಾಯಿತು ಮತ್ತು ನಾಡಿನ ಮಹಾನ್ ಸಂಪತ್ತಾಯಿತು.
೫. ಕಾಯಕವ ಕಲಿಸುದಕೆ ನಾಯಕನು ಬಸವಯ್ಯ
ಜೀಯ ಹೊಸಮತಕೆ ಶಿವಭಕ್ತಿ | ಸಾರುದಕೆ
ರಾಯ ಜೀವನದ ಹೊಸ ನುಡಿಗೆ ||
ಅರ್ಥ : ಕಾಯಕ ತತ್ತ್ವ-ಸಿದ್ಧಾಂತಗಳನ್ನು ಕಲಿಸುವದಕ್ಕೆ ಬಸವಯ್ಯನೇ ನಾಯಕನು. ಆತನೇ ಹೊಸಮತಕ್ಕೆ ಒಡೆಯನು. ಶಿವ ಭಕ್ತಿಯನ್ನು ಸಾರುವುದರಲ್ಲಿ ನಿಸ್ಸಿಮನಾದ ಆತ ಹೊಸ ನುಡಿಯನ್ನು ಕಲಿಸುವುದಕ್ಕೆ ರಾಯನು.
ವ್ಯಾಖ್ಯಾನ : "ಕಾಯಕ ತತ್ತ್ವ ಸಿದ್ಧಾಂತಗಳ ಉಲ್ಲೇಖ ಬಸವಣ್ಣ ನವರ ಯಾವ ವಚನದಲ್ಲಿಯೂ ಇಲ್ಲ. ಬಸವಣ್ಣನವರು ಕಾಯಕ ತತ್ತ್ವವನ್ನು ವಿಶೇಷವಾಗಿ ಪ್ರತಿಪಾದಿಸಿಲ್ಲ.” ಎನ್ನುವ ಟೀಕಾಕಾರರಿಗೆ ಇಲ್ಲಿ ಉತ್ತರವಿದೆ. ಬಸವಣ್ಣನವರು, ಎರಡೆಂಭತ್ತು ಕೋಟಿ ವಚನವ ಹಾಡಿ ಹಂಬಲಿಸಿತ್ತೆನ್ನ ಮನ' ಎಂದು ನುಡಿದಿದ್ದರೂ ನಮಗಿಂದು ಸಿಕ್ಕಿರುವ ವಚನಗಳ ಸಂಖ್ಯೆ ಅಲ್ಪ. ಹೀಗಾಗಿ ಬಸವಣ್ಣನವರು ಬರೆದ ಸಾಕಷ್ಟು ವಚನಗಳು ನಾಶವಾಗಿರುವ ಸಾಧ್ಯತೆ ಇದೆ. ಎಲ್ಲ ಶರಣರು, ಜಾನಪದ ಕವಿಗಳು 'ಕಾಯಕವ ಕಲಿಸುದಕೆ ನಾಯಕನು ಬಸವಣ್ಣ' ಎಂದು ಬಸವಣ್ಣನವರನ್ನೇ ತೋರಿಸಿ ಹೇಳುವುದನ್ನು ಕಂಡಾಗ, ಈ ಕಾಯಕ ಸಿದ್ಧಾಂತವನ್ನು ಕೊಟ್ಟವರು ಅವರೇ ಎನ್ನಿಸದೇ ಇರದು. 'ಮಾಟವೇ ಕೂಟವಾಯಿತ್ತಯ್ಯ ಬಸವಣ್ಣಂಗೆ' ಎಂಬ ವಚನ ವಾಕ್ಯದಲ್ಲೂ ಇದು ಸ್ಪಷ್ಟವಾಗುತ್ತದೆ. ಪ್ರತಿ
ಹೀಗೆ 5 ಪದ್ಯಗಳಲ್ಲಿ ಬಸವಣ್ಣನವರ ವ್ಯಕ್ತಿತ್ವ ಮತ್ತು ಸಂದೇಶವನ್ನು ಕುರಿತು ಜಾನಪದ ಕವಿಯು ಹೇಳಿ ಈಗ ಬಸವಣ್ಣನವರ ಚರಿತ್ರೆಯನ್ನು ಆರಂಭಿಸುವನು.
೬. ಹಡೆದವ್ವ ಮಾದವ್ವ ಹಡೆದಪ್ಪ ಮಾದರಸು
ಪಡೆದವ್ವ ಅಕ್ಕ ನಾಗಾಯಿ | ಬಸವನಿಗೆ.
ಬಿಡದೆ ಸಲುಹಿದನು ವರಸಂಗ ||
ಅರ್ಥ : ಹೆತ್ತ ತಾಯಿ ಮಾದಲಾಂಬಿಕೆ (ಕನ್ನಡದ ರೂಪ ಮಾದವ್ವ) ತಂದೆ ಮಾದರಸ. ಆದರೆ ನಿಜವಾದ ಸಾಕುತಾಯಿ ಅಕ್ಕನಾಗಲಾಂಬಿಕೆ, ನಿಮಿತ್ತ ಮಾತ್ರವಾಗಿ ಪಾಲಕರು, ಪೋಷಕರು ಇವರುಗಳೆಲ್ಲರೂ, ಆದರೆ ಬಸವಣ್ಣನವರ ನಿಜ ರಕ್ಷಕ, ಪೋಷಕ, ಸಂಗಮನಾಥ.
ವ್ಯಾಖ್ಯಾನ : ಜಾನಪದ ಕವಿಗಳು ಅರ್ಥಮಾಡಿಕೊಂಡಿರುವ ಬಗೆ ಮತ್ತು ಅಷ್ಟೇ ಸ್ಪಷ್ಟವಾಗಿ, ನಿರ್ದಿಷ್ಟವಾಗಿ, ನಿರರ್ಗಳವಾಗಿ ಪ್ರತಿಪಾದಿಸುವ ಶೈಲಿ ನಮ್ಮನ್ನು ಅಚ್ಚರಿಗೊಳಿಸುತ್ತದೆ.
ಮಾದಲಾಂಬಿಕೆ- ಮಾದರಸರು ಜನ್ನದಾತರಾದುದು ನಿಜವಿದ್ದರೂ ಬಸವಣ್ಣನವರ ಪಾಲನೆ ಪೋಷಣೆಯಲಾಸಕ್ತಿ ವಹಿಸಿ, ಸಾಕು ತಾಯಿಯಾಗಿ ಪೋಷಿಸಿದ್ದಲ್ಲದೆ ಆತನಲ್ಲಿ ಉದಾತ್ತ ಚಿಂತನೆ ರೂಪಿಸಿದವಳು ಅಕ್ಕನಾಗಲಾಂಬಿಕೆ, ಇದೆಲ್ಲಕ್ಕಿಂತ ಮಿಗಿಲಾಗಿ ದೇವನ ಸಂಕಲ್ಪವನ್ನು ಪೂರೈಸಲು ಬಂದ, ಪ್ರೀತಿಪಾತ್ರ ಮಗ ನಾದ ಬಸವಣ್ಣನವರ ನಿಜರಕ್ಷಕ ಸಂಗಮನಾಥ,
೭. ಬಸವ ನಿನಗೊಬ್ಬಣ್ಣ, ಬಸವಗೊಬ್ಬಳೆ ಅಕ್ಕ
ಬಸವ ನಿನ್ಹೆಸರು ಅಮರಾತು | ಜಗಕೆಲ್ಲ
ಬಸವ ಕಲ್ಯಾಣ ಹೆಸರಾತು ||
ಅರ್ಥ : ಬಸವಣ್ಣನವರಿಗೆ ಒಬ್ಬ ಅಣ್ಣನಿದ್ದ, ಒಬ್ಬ ಅಕ್ಕನೂ ಇದ್ದಳು. ಆದರೆ ಮಾದರಸ-ಮಾದಲಾಂಬಿಕೆಯರ ಮಕ್ಕಳಲ್ಲಿ ಬಸವಣ್ಣನವರ ಹೆಸರು ಅಮರವಾಯಿತು. ಜಗತ್ತಿನಲ್ಲಿಯೇ ಬಸವಣ್ಣವರು ನೆಲೆಸಿದ್ದ ಕಲ್ಯಾಣ ವಿಖ್ಯಾತವಾಯಿತು.
೮. ವೇದ ವೇದದ ವಾದ ಭೇದ ಹುಟ್ಟಿಸಿ ಜಗಕೆ
ದಾದು ಯಾರಿಲ್ಲ ಹೇಳುವುದಕ್ಕೆ | ಬಸವಣ್ಣ
ಭೇದ ಅಳುಕಿಸಿದ ಕುಲಕುಲಕೆ ||
(ದಾದು = ಕಾಳಜಿ, ಕಳಕಳಿ, ಕಳವಳ, ಮೂಲ: ಹಿಂದಿ ಶಬ್ದ)
ಅರ್ಥ: ವೇದಶಾಸ್ತ್ರ ಪುರಾಣ ತರ್ಕ ಮುಂತಾದವುಗಳ ಆಧಾರದ ಮೇಲೆ ಮಾನವಮಾನವರಲ್ಲೇ ಭೇದವನ್ನು ಹುಟ್ಟಿಸಿ, ಒಡೆದು ಆಳುವ ನೀತಿಯನ್ನು ರೂಪಿಸಲಾಗಿತ್ತು. ಹೀಗಾಗಿ ಶೋಷಕರು ಶಾಸ್ತ್ರದ ಬಲದಿಂದ ಮತ್ತೆ ಕೆಲವರನ್ನು ಶೋಷಿಸುತ್ತಿದ್ದರು. ಯಾರೂ ಅವರನ್ನು ಪ್ರಶ್ನಿಸುವಂತಿಲ್ಲ. (ದಾದು ಯಾರಿಲ್ಲ) ಇದನ್ನೆಲ್ಲ ಕಂಡು, ಶೋಷಿತರ ಅಂತರಂಗದ ನೋವನ್ನು ಅರಿತು ಬಸವಣ್ಣನವರು ಜಾತಿಭೇದದ ವಿರುದ್ಧ ಸಮರ ಸಾರಿ, ಕುಲಕುಲಗಳಲ್ಲಿದ್ದ ಭೇದವನ್ನು ಅಳುಕಿಸಲು ಯತ್ನಿಸಿದರು.
೯, ದಾಸೋಹಿ ಬಸವಣ್ಣ ದಾಸೋಹ ಕಲಿಸಿದನು
ದೇಶದೇಶೆಲ್ಲ ಹೊಸಮಾತ | ಕೇಳುತಲಿ
ಮಾಸಿದವು ವೇದ ಹುಸಿಯೆಂದು ||
ಅರ್ಥ : ದಯೆ- ಮಾನವೀಯತೆ-ಸೇವೆ ಇವುಗಳಿಗೆ ಮಹತ್ವ ಕೊಟ್ಟ ಬಸವಣ್ಣನವರು ಜನರಲ್ಲಿ ಅಂಥ ಆದರ್ಶ ಮೌಲ್ಯಗಳನ್ನು ಬಿತ್ತಿದರು. ಬಸವಣ್ಣನವರ ಎಚ್ಚರಿಸುವ ದನಿಗೆ ಇಡೀ ದೇಶವೇ ಕಿವಿಗೊಟ್ಟಿತು. 'ಹೊಸಮಾತು' ಗಳನ್ನು ಜನರು ಕೇಳತೊಡಗಿದರು. ತುಳಿಯುವುದು ತಮ್ಮ ಹಕ್ಕು ಎಂದು ಭಾವಿಸಿದ್ದವರು ಎಚ್ಚರಗೊಂಡರು ; ತುಳಿಸಿಕೊಳ್ಳುವುದು ತಮ್ಮ ಹಣೆಯ ಬರಹ ಎಂದು ನಂಬಿದ್ದವರೂ ಎಚ್ಚರಗೊಂಡರು. ವೇದ-ಶಾಸ್ತ್ರಂಗಳು ಹೇಳಿದ್ದನ್ನೆಲ್ಲ ಅಥವಾ ವಿಧಿಸಿದ್ದನ್ನೆಲ್ಲದ ಮೌನವಾಗಿ ಒಪ್ಪಿಕೊಳ್ಳ ಬೇಕಾಗಿಲ್ಲ ಎಂಬ ಎಚ್ಚರ ಉಂಟಾಯಿತು. ವೇದಗಳಲ್ಲಿ ಬರುವ ಎಷ್ಟೋ ಮಾತೂ ಸಹ ಹುಸಿ ಅಥವಾ ಕೆಲವರ ಉದ್ದೇಶ ಪೂರ್ವಕ ಸೃಷ್ಟಿ ಎಂಬ ಎಚ್ಚರ ಜನರಲ್ಲಿ ಮೂಡಿತು.
೧೦. ಹೊಲೆಯ ಮಾದಿಗರೆಂಬ ಬಲೆಯಾತ ಕಿತ್ತೊಗೆದ
ಭಲರೆ ಬಸವಯ್ಯ ಬಸವರಸ | ನಿನ್ನುಸಿರು
ನೆಲೆಯಾತು ನಿತ್ಯ ಜನಪದಕೆ ||
ಅರ್ಥ : ಹೊಲೆಯ-ಮಾದಿಗ, ಸ್ಪಶ್ಯ - ಅಸ್ಪೃಶ್ಯ, ಮೇಲು-ಕೀಳು ಎಂಬ ಭ್ರಾಂತ ಕಲ್ಪನೆಯು ಬಲೆಯೋಪಾದಿಯಲ್ಲಿ ಉಭಯತರನ್ನೂ ಬಂಧಿಸಿತ್ತು. ಈ ಭ್ರಾಂತ ಕಲ್ಪನೆಯ ಬಲೆಯನ್ನು ಹರಿದೊಗೆದು ಬಸವಣ್ಣನವರು ಉಭಯತರಿಗೂ ತಿಳುವಳಿಕೆ ನೀಡಿದರು. ಹೀಗಾಗಿ ಬಸವಣ್ಣನವರ ಉಸಿರು (ಅಂದರೆ Voice, ವಾಣಿ) ಜನಪದಕ್ಕೆ ಜ್ಞಾನದ, ತಿಳುವಳಿಕೆಯ ಒಂದು ನೆಲೆಯಾಯಿತು.
೧೦. ಓದಿದನು ಬಸವಯ್ಯ ವೇದದೊಳಗಿನ ಹುಸಿಯ
ಭೇದಭೇದವನೆ ಬಿಚ್ಚಿಟ್ಟ | ಜನಪದಕೆ
ತೇದುಂಡ ಜೀವಿ ಬಸವಣ್ಣ ||
ಅರ್ಥ : ವೇದಾಗಮಗಳಲ್ಲಿದ್ದ ಹುಸಿ ಮಾತುಗಳನ್ನು, ಭೇದನ ತಂತ್ರಗಳನ್ನು ಜನರ ಮುಂದೆ ನಿರೂಪಿಸಿ, ಅಜ್ಞಾನದಲ್ಲಿದ್ದವರನ್ನು ಎಚ್ಚರಿಸಿ, ಜನಸಾಮಾನ್ಯರ ಹಿತಕ್ಕಾಗಿ ತನ್ನ ಬದುಕನ್ನೇ ಸವೆಸಿ ಕೊಂಡ ನಿಸ್ಸಿಮ ತ್ಯಾಗಪುರುಷ ಬಸವಣ್ಣ.
ವ್ಯಾಖ್ಯಾನ : ವೇದ ಶಾಸ್ತ್ರ ತರ್ಕ ಪುರಾಣಗಳಲ್ಲಿ ಬರುವ ಮಾತನ್ನು ಸತ್ಯವೆಂದು ನಂಬಿ ಜನರು ಭಯಂಕರ ತೊಂದರೆಗೆ ಒಳಗಾಗಿದ್ದರು. ಕೀಳು ಜನರು, ಅಸ್ಪೃಶ್ಯರು ಮಾತ್ರವೇ ತೊಂದರೆಗೆ ಒಳಗಾಗುವುದಿಲ್ಲ ; ಶಾಸ್ತ್ರಗಳು ವಿಧಿಸಿದ ಕಟ್ಟುಪಾಡು ಗಳಿಗೆ ಬದ್ಧರಾಗಿ ನಡೆಯಬೇಕೆಂಬ ನಂಬಿಕೆಯಿಂದ ಮೇಲ್ವರ್ಗದವರೂ ಕಷ್ಟಕ್ಕೆ ಒಳಗಾಗುತ್ತಿದ್ದರು. ಶಾಸ್ತ್ರಗಳಲ್ಲಿರುವ ಪೊಳ್ಳುತನ ವನ್ನು ಹೊರಗೆ ತೋರಿಸಿ, 'ಒಳ್ಳೆಯದನ್ನು ಶಾಸ್ತ್ರಗಳಿಂದ ಆರಿಸಿ ಕೊಳ್ಳಿರಿ. ಎಲ್ಲವನ್ನೂ ನಂಬಬೇಡಿ, ವಿಚಾರಶಕ್ತಿ ಬೆಳೆಸಿಕೊಳ್ಳಿ' ಎಂದು ಸಾರಿ ಹೇಳಿ, ಜನಸಾಮಾನ್ಯರ ಏಳಿಗೆಗಾಗಿ ಹಗಲಿರುಳು ಬಸವಣ್ಣನವರು ಶ್ರಮಿಸಿದರು. ಶ್ರೀಗಂಧದಂತೆ ತಮ್ಮನ್ನು ತಾವು ಸವೆಸಿಕೊಂಡ ತ್ಯಾಗಜೀವಿಗಳು ಅವರು.
೧೨. ಸಾಧು ಸಾಧಲೆ ಬಸವ ಓದು ಕಲಿಯಿತು ಜನವು
ಹೋದ ಹೋದಲ್ಲಿ ಹೊಸ ಮಾತು | ಕೇಳಿದವು
ಮೇದಿನಿಗೆ ಬಂತು ಹೊಸಬೆಳಕು ||
ಅರ್ಥ : ಆವರೆಗೆ ಜನ ಸಾಮಾನ್ಯರಿಗೆ ಲಭ್ಯವಾಗದಿದ್ದ ಓದು ಬಸವಣ್ಣನವರ ಪ್ರಯತ್ನ - ಪರಿಶ್ರಮಗಳಿಂದ ಜನಸಾಮಾನ್ಯರಿಗೆ ಮುಟ್ಟಿತು. ಇದರಿಂದ ಮಲೆತು ಹೋಗಿದ್ದ ನೀರಿನ ಗುಂಡಿಯೊಳಕ್ಕೆ ಹೊಸ ನೀರು ಹರಿದು ಬಂದಂತಾಯಿತು ; ಈವರೆಗೆ ಕೇಳಿರದ ಮಾತುಗಳು ಕಿವಿಯ ಮೇಲೆ ಬಿದ್ದವು. ಹೀಗಾಗಿ ಜನರು ತಾವೂ ಸ್ವತಂತ್ರವಾಗಿ ಆಲೋಚಿಸಬಲ್ಲವರೂ, ತಮಗೆ ಸರಿಕಂಡದ್ದನ್ನು ನಿರ್ಭಿತಿಯಿಂದ ಚರ್ಚಿಸಬಲ್ಲವರೂ ಆದರು. ಹೋದ ಹೋದಲ್ಲೆಲ್ಲ ಹೊಸ ಮಾತುಗಳು ಕೇಳಿಬಂದವು. ಜಗತ್ತಿಗೆ ಹೊಸ ಬೆಳಕು ಬಂದಂತಾಯಿತು.
೧೩. ಹುಟ್ಟಿ ಬಂದನು ಬಸವ ಕಟ್ಟುದಕೆ ಕಲ್ಯಾಣ
ಬಿಟ್ಟು ಬಾಗೋಡಿ ನಾಗಾಯಿ | ಯೊಡಗೂಡಿ
ಮೆಟ್ಟು ಮಾಡಿದನು ಸಂಗಮಕೆ ||
ಅರ್ಥ : ಬಸವಣ್ಣನವರು ಒಂದು ಮಹಾನ್ ಉದ್ದೇಶ ಹೊತ್ತು ಹುಟ್ಟಿದವರು. ಅದುವೆ ಕಲ್ಯಾಣ ರಾಜ್ಯವನ್ನು, ದೇವರಾಜ್ಯ ವನ್ನು ಕಟ್ಟುವ ಮಣಿಹ ಬಾಗೇವಾಡಿಯನ್ನು ಬಿಟ್ಟು, ನಾಗಲಾಂಬಿಕೆಯ ಜೊತೆಗೆ ಸಂಗಮಕ್ಕೆ ಬಂದು ಅಲ್ಲಿಯೇ ನೆಲೆಸಿದರು.
(ಜಾತಿವರ್ಣ ವರ್ಗರಹಿತ ಕಲ್ಯಾಣ (ಶರಣ ಸಮಾಜ) ರಾಜ್ಯ ನಿರ್ಮಾಣ ಮಾಡುವ ಆಲೋಚನೆ ಇದ್ದರೂ ಇನ್ನೂ ವಯಸ್ಸು ಚಿಕ್ಕದು ; ತನ್ನ ಬದುಕನ್ನು ರೂಪುಗೊಳಿಸಿಕೊಳ್ಳಬೇಕಿತ್ತು,)
೧೪. ಬಸವ ಸಾಲಿಯ ಕಲಿತ ಎಸೆವ ಸಂಗಮದೊಳಗೆ
ಹೆಸರು ಪಡಕೊಂಡ ಜಗದೊಳಗೆ | ವರಸಂಗ
ಹಸು ಮಗನ ಹರಸಿ ಸಲಹಿದನು ||
ಅರ್ಥ : ಬಸವಣ್ಣನವರು ಕೂಡಲ ಸಂಗಮದಲ್ಲಿ ವಿದ್ಯಾಭ್ಯಾಸ ಮಾಡಿದರು. ತನ್ನ ಬುದ್ದಿವಂತಿಕೆ, ಪ್ರತಿಭೆ, ಸದ್ಗುಣಗಳಿಂದ ಆಗಲೇ ಕೀರ್ತಿಶಾಲಿಯಾದ. ತನ್ನ ಗುರುಕುಲಕ್ಕೆ ಕೀರ್ತಿ ತರುವವನಾದ ಸಂಗಮನಾಥನ ಹರಕೆ, ಶ್ರೀರಕ್ಷೆ ತನ್ನ ಮುದ್ದು ಮಗನನ್ನು ಸದಾ ಕಾಪಾಡುತ್ತಿತ್ತು.
೧೫. ಹುಸಿವೇದ ಹಾರುವರು ಹಸಗೆಟ್ಟ ಲೋಕದಲಿ
ಗುಸು ಮುಸಿಯು ನಡೆಯೆ ಬಸವನಿಗೆ | ವರಸಂಗ
ಹೊಸತು ಊದಿದನು ಕಿವಿ ಮಾತ ||
ಅರ್ಥ : ಶಾಸ್ತ್ರದಾಸ್ಯ, ಮಡಿವಂತಿಕೆ, ಜಾತೀಯತೆಯಿಂದ ಲೋಕ ವೆಲ್ಲ ಹಸಗೆಟ್ಟು ಬಿಟ್ಟಿತ್ತು. ಇದನ್ನು ಕಂಡು ಮನ ಮರುಗಿ ಬಸವಣ್ಣ ಹಿತೋಪದೇಶವನ್ನು ಮಾಡಹೋದರೆ, ಪಟ್ಟ ಭದ್ರ ಹಿತಾಸಕ್ಕರು ಆತನನ್ನೇ ನಿಂದಿಸತೊಡಗಿದರು. ಆಗ ಪರಮಾತ್ಮನು ಬಸವಣ್ಣನವರಿಗೆ ಹೊಸದಾದ ಕಿವಿ ಮಾತನ್ನು ಊದಿದನು.
ವ್ಯಾಖ್ಯಾನ : “ಪುರೋಹಿತ ಶಾಹಿಯ ಶೋಷಣೆಯ ವಿರುದ್ಧ ಬಂಡೆದ್ದ ಬಸವಣ್ಣನವರಿಗೆ ಸಂಪ್ರದಾಯ ನಿಷ್ಟರು ಕಿರುಕುಳ ಕೊಡ ಲಾರಂಭಿಸಿದಾಗ ಸಂಗಮನಾಥನೇ ರಕ್ಷಿಸುತ್ತಾನೆ ; ಕಿವಿ ಮಾತನ್ನು ಊದುತ್ತಾನೆ.'' ಎಂಬ ಮಾತು ಬಲು ಮಹತ್ವಪೂರ್ಣ, ಮೂಲತಃ ಶೈವಧರ್ಮ ಪುರೋಹಿತಶಾಹಿಗೆ ಪ್ರೋತ್ಸಾಹ ನೀಡದ್ದೂ, ಸರಳವಾದುದು ಆಗಿದ್ದರೂ ಕಾಲಾನಂತರದಲ್ಲಿ ಪುರೋಹಿತ ಶಾಹಿಯ ಪ್ರಭಾವಕ್ಕೆ ಒಳಗಾಗಿದ್ದಿತು. ಸಾಮಾನ್ಯ ವಾಗಿ ಶಿವದೇವಾಲಯಗಳಲ್ಲಿ ಭಕ್ತರಿಂದ ನೇರವಾದ ಪೂಜೆ ; ನೀರು-ಪತ್ರೆಗಳಿಂದ ಸರಳಪೂಜೆ ನಡೆಯುತ್ತಿತ್ತು. (ಇಂದಿಗೂ ಜ್ಯೋತಿರ್ಲಿಂಗಗಳ ದೇವಾಲಯಗಳಲ್ಲಿ, ಪುರಾತನ ಶಿವ ದೇವಾಲಯಗಳಲ್ಲಿ ಭಕ್ತರೇ ನೇರವಾಗಿ ಪೂಜಿಸುವರು. ನದಿ- ತಟಾಕಗಳ ನೀರು ತಂದು ತಾವೇ ಎರೆಯುವರು.) ಆದರೆ ಬರುಬರುತ್ತ ಪೂಜೆಯಲ್ಲೂ ವ್ಯಾಪಾರ ಆರಂಭವಾಗಿದ್ದಿತು. ಇದರಿಂದ ಬಸವಣ್ಣನವರು ಬಡಭಕ್ತರನ್ನು ಕರೆದುಕೊಂಡು ವನಸುಮಗಳನ್ನಾಯ್ದು ತಂದು ಪೂಜಿಸಲು ತೊಡಗಿದಾಗ ಪೂಜಾರಿಗಳಿಗೆ ಬಲು ಸಿಟ್ಟು ಬರುತ್ತದೆ. ಬಸವಣ್ಣನವರ ಮೇಲೆ ಆಕ್ರೋಶ ತಾಳುತ್ತಾರೆ, ಕೋಪ ದಿಂದ ಎರಗುತ್ತಾರೆ. ಆಗ ಸಂಗಮನಾಥನ ದಿವ್ಯವಾಣಿ ಮೊಳಗುತ್ತದೆ. ಸಿಂಗಿರಾಜನ ಕಾವ್ಯದಲ್ಲಿ ಬಂದ ಮಾತಿಗೂ ಜಾನಪದ ಕವಿಗಳ ಹೇಳಿಕೆಗೂ ಸಾಮ್ಯವನ್ನು ಗುರುತಿಸಬಹುದು. (ಆರನೆಯ ಸಂಧಿ, ಪದ್ಯ 11 ರಿಂದ 21) ಸಂಗಮೇಶ್ವರ ಲಿಂಗದಿಂದ ಬ್ರಹ್ಮನಾದ ಉಂಟಾಗಿ, "ಎಲವೋ-ನೀವು ಮಾಡಿದ ಪೂಜೆ ಹುಸಿ; ಬಸವನ ಪೂಜೆಯೇ ನನಗೆ ರಮ್ಯ' ಎಂಬ ಆಕಾಶವಾಣಿ ಕೇಳಿ ಬರುತ್ತದೆ.
'ವರಸ೦ಗ | ಹೊಸತು ಊದಿದನು ಕಿವಿಮಾತ” ” ಎಂಬ ಜಾನಪದ ವಾಕ್ಯ ಮೇಲಿನ ಮಾತನ್ನು ಪುಷ್ಟಿಕರಿಸುತ್ತದೆ. ಕಿವಿ ಮಾತ ಊದಿದನು' ಎಂಬ ಮಾತು ಬಸವಣ್ಣನವರಿಗೆ ದೇವರಿಂದಲೇ ಅನುಗ್ರಹವಾಯಿತು ; ಎಂಬ ಹರಿಹರ ಕವಿಯ ಮಾತಿಗೆ ಪುಷ್ಟಿ ನೀಡುತ್ತದೆ. ಅಂತೂ ಆ ದಿನ ಸಂಗಮನಾಥನು ಹೊಸ ಮಾತನ್ನು ಊದಿದನು. ಅಂದರೆ ಹೊಸ ತತ್ಯವೊಂದನ್ನು ಘೋಷಿಸಲು ಬಸವಣ್ಣನವರಿಗೆ ಪ್ರೇರಣೆ ನೀಡಿದನು. ಬಸವಣ್ಣನವರೂ ಅಂದು ಜಗತ್ತಿಗೆ ಹೊಸ ಮಾತನ್ನು ಊದಿದರು,
೧೬. ವಾದವಾದವೆ ನಡೆದು, ವೇದ ವೇದವೆ ಸೋತು
ಭೇದ ಬೇಡೆಂದು ಬಸವಣ್ಣ | ಸಾರುದಕೆ
ಹೋದ ಹೋದಲ್ಲಿ ಹೊಸ ಮಾತು |
ಅರ್ಥ : ಸಂಪ್ರದಾಯ ನಿಷ್ಠರು ಮತ್ತು ಬಸವಣ್ಣನವರ ಮಧ್ಯೆ ಬಹು ದೊಡ್ಡ ವಾದ ನಡೆಯಿತು. ಜಾತಿಭೇದ ಮುಂತಾದುವನ್ನು ವೇದಗಳಲ್ಲಿ ಪ್ರತಿಪಾದಿಸಿರಬೇಕಾದರೆ ಅಂಥ ಆಚರಣೆಗಳಲ್ಲಿ ಸತ್ಯತೆ ಇರಲೇಬೇಕು ಎಂದು ಸಂಪ್ರದಾಯನಿಷ್ಠರ ಪ್ರತಿಪಾದನೆ. ಶಾಸ್ತ್ರ ಪ್ರಮಾಣಕ್ಕಿಂತಲೂ ಅನುಭವ ಪ್ರಮಾಣ ಲೇಸು. ಆದ್ದರಿಂದ ಶಾಸ್ತ್ರಗಳಿಗೆ ಕಟ್ಟುಬಿದ್ದು ಭೇದಮಾಡಬೇಡಿ ಎಂದು ಬಸವಣ್ಣನವರ ಪ್ರತಿಪಾದನೆ ; ಹೀಗೆ ಅವರು ಸತ್ಯವನ್ನು ಸಾರುತ್ತಿದ್ದಂತೆಯೇ ಸಮಾಜದಲ್ಲಿ, ಶೋಷಿತ ವರ್ಗದಲ್ಲಿ ವಿದ್ಯುತ್ ಸಂಚಾರವಾದಂತಾಯಿತು. ಈವರೆಗೂ ಕೇಳಿರದ ಮಾತುಗಳಿಂದ ಅವರು ಪುಳಕಿತ ರಾದರು ; ಎಚ್ಚರಗೊಂಡರು. ಹೊಸ ಮಾತುಗಳು, ಹೊಸ ಆಲೋಚನೆಗಳು ಸಮಾಜದಲ್ಲೆಲ್ಲ ಹರಿದಾಡತೊಡಗಿದವು.
೧೭. ಕುದ್ದ ಕುದಿ ಕುದಿದೆದ್ದು ಬಿದ್ದ ಜಂಗುಳಿಯೆದ್ದು
ಗುಡ್ಯಾಡಿ ಲೋಕ ಹದ ಬಂತು | ಹಾರೂರ
ಗದ್ದಲದ ಬಾಯ್ಗೆ ಮುಳ್ಳಿಟ್ಟು ||
(ವಿಚಾರವಾದಿಗಳು ಏನೋ ಒಂದು ಹೊಸ ಸಿದ್ಧಾಂತ ಎಂಬಂತೆ ಮಂಡಿಸುವ ವಿಚಾರಧಾರೆಯನ್ನು ಜಾನಪದ ಕವಿಗಳು ವರ್ಣಿಸು ವುದನ್ನು ನೋಡಿ ನಾನಂತೂ ಸಂಭ್ರಾಂತಳಾಗಿದ್ದೇನೆ.)
ಅರ್ಥ : ಶತಶತಮಾನಗಳಿಂದ ಒಳಗೇ ಕುದಿಯುತ್ತಿರುವ ವ್ಯಥೆ, ಈಗ ಸ್ಪಷ್ಟರೂಪ ತಳೆಯತೊಡಗಿತು. ಈವರೆಗೆ ಬಿದ್ದಿದ್ದ ಜಂಗುಳಿ (down trodden mass) ಈಗ ಎದ್ದಿತು. ಆ ಮೂಕ ವ್ಯಥೆಗೆ ದನಿ ಕೊಡಲು ಮಹಾಪುರುಷನ ಆಗಮನ ವಾಗಿತ್ತು. ವೈಚಾರಿಕ ಘರ್ಷಣೆ ಆರಂಭವಾಯಿತು. ಒಂದು ಕಡೆ ಸಂಪ್ರದಾಯ, ಇನ್ನೊಂದು ಕಡೆ ಸತ್ಯ ; ಒಂದು ಕಡೆ ಶಾಸ್ತ್ರ ಪ್ರಮಾಣ, ಇನ್ನೊಂದು ಕಡೆ ಅನುಭವ ಪ್ರಮಾಣ. ಈ ರೀತಿಯ ಮಥನವು ಆರಂಭವಾಗುತ್ತಲೇ ಲೋಕಕ್ಕೆ ಒಂದು ಹದ ಬರತೊಡಗಿತು. ಅಂದರೆ ಜನ ಸಮುದಾಯ ಹೊಸ ದಿಕ್ಕಿನಲ್ಲಿ ಚಿಂತಿಸಲು ಆರಂಭಿಸಿತ್ತು. ಏಕೆಂದರೆ ಈ ರೀತಿಯಲ್ಲಿ ವಿಚಾರ ಮಾಡಲು ಪ್ರೇರಣೆಯೇ ಇರಲಿಲ್ಲ. ಇದು ಮಡಿವಂತರ ವಿಚಾರ, ದೃಷ್ಟಿಕೋನಗಳನ್ನು ದುರ್ಬಲ ಮಾಡತೊಡಗಿತು.
೧೮. ಕುದ್ದಲವು ಕಡೆಗೆಟ್ಟು ಗದ್ದ ಗದ್ದಲ ಮುಣಗಿ
ಸದ್ದು ಸದ್ದಾತು ಶಿವನಾಮ | ಲೋಕೆಲ್ಲ
ಹೊದ್ದು ಬೆಳಗಾತು ಹಗುರಾತು || (ಕ. ಬ. ೧೮)
ಅರ್ಥ : ಹೊಸ ವಿಚಾರಗಳನ್ನು ಕೇಳುತ್ತಲೇ ಶೋಷಕ ಮತ್ತು ಶೋಷಿತವರ್ಗಗಳು ಎರಡೂ ಸ್ವಲ್ಪ ಆಘಾತವನ್ನು ಎದುರಿಸಿದವು. ಹೀಗಾಗಿ ಸ್ವಲ್ಪ ಗದ್ದಲವಾಯಿತು. ಆದರೆ ಬಸವಣ್ಣನವರು ನುಡಿದ ಶಿವನಾಮ ಎಲ್ಲವನ್ನೂ ಅತಿಕ್ರಮಿಸಿತು. ಆ ಶಿವನಾಮದ ಚಿದಂಬರವನ್ನು ಹೊದ್ದು ಲೋಕವೆಲ್ಲ ಬೆಳಕು ಕಂಡಿತು ; ನೊಂದ ಹೃದಯಗಳೆಲ್ಲ ಸಮಾಧಾನದ ಉಸಿರು ಬಿಟ್ಟು ಹಗುರಾದವು.
೧೯. ಬಿಜ್ಜಳನು ಕೇಳಿದನು ದರ್ಜೆ ಬಸವನ ಹೆಸರ
ಅಜ್ಜಮ್ಮನೂರು ಸಂಗಮಕೆ | ಕರೆ ತರಲು
ಮರ್ಜಿಯಲಿ ಬಂದ ಬಲದೇವ || (ಕ. ಬ. ೧೯).
ಅರ್ಥ : ಕೂಡಲ ಸಂಗಮದಲ್ಲಿ ನಡೆದ ಈ ವಾದವಿವಾದದ ಘಟನೆ ಅದೆಷ್ಟು ಚರ್ಚಿತವಾಯಿತು, ಪ್ರಭಾವ ಬೀರಿತು ಎಂದರೆ, ರಾಜ ಬಿಜ್ಜಳನ ಕಿವಿಯನ್ನು ಮುಟ್ಟಿತು. ಇಂಥ ಒಬ್ಬ ವಿಚಾರ ವಾದಿಯ ವಾದಸರಣಿಯನ್ನು ಕೇಳಿ ಅಚ್ಚಚ್ಚರಿಗೊಂಡು, ಬಸವಣ್ಣ ನವರನ್ನು ಕರೆತರಲು ಬಲದೇವ ಮಂತ್ರಿಯನ್ನು ಕಳಿಸಿದನು.
(ಸಿಂಗಿರಾಜನ ಬಸವ ಪುರಾಣದ ನಿರೂಪಣೆಯೂ ಇದೇ ರೀತಿ ಇದೆ. ಬಸವಣ್ಣನವರ ವಿಚಾರವಾದಿತ್ವ ಬಿಜ್ಜಳನನ್ನು ಆಕರ್ಷಿಸಿತು ಎಂದ ಮೇಲೆ ಆತ ಸಂಕುಚಿತವಾದಿಯಾಗಿರಲಿಲ್ಲ. ಉದಾರ ಮತ್ತು ಉದಾತ್ತ ವಿಚಾರದವನಾಗಿದ್ದ ಎನ್ನಿಸುವುದು.)
ಅಜ್ಜಮ್ಮನ ಊರಾದ ಸಂಗಮದಿಂದ ಕರೆದೊಯ್ಯಲು ಬಲದೇವ ಮಂತ್ರಿ ಬಂದ ಎನ್ನುವ ಮಾತೂ ಗಮನಾರ್ಹ. ಬಾಗೇವಾಡಿ - ಮಾದರಸನ - ಊರಾಗಿದ್ದು, ಇಂಗಳೇಶ್ವರವು ಮಾದಲಾಂಬಿಕೆಯ ತೌರೂರು ಆಗಿರಬಹುದು. ಕೂಡಲ ಸಂಗಮವು ಮಾದರಸನ ಪೂರ್ವಜರ ಊರು ಆಗಿರಬಹುದು. ಅದಕ್ಕಾಗಿಯೇ ಅಕ್ಕನಾಗಮ್ಮನನ್ನು ಪುನಃ ಸಂಗಮಕ್ಕೆ ವಿವಾಹಮಾಡಿ ಕೊಟ್ಟಿದ್ದಾರೆ. ಅಜ್ಜಿಯ ಊರಿಗೆ ಹೋಗುತ್ತ ಬರುತ್ತ ಇರುವಾಗಲೇ ಸಂಗಮವು ಬಸವಣ್ಣನವರ ಮೇಲೆ ಪ್ರಭಾವ ಬೀರಿರಬಹುದು. ಆದ್ದರಿಂದಲೇ ಮನೆ ಬಿಟ್ಟು ಬರುವಾಗ ಅಕ್ಕನೊಡನೆ ಸಂಗಮಕ್ಕೆ ಬಂದ ಎಂದು ಪ್ರತಿಪಾದಿಸಲಾಗಿದೆ. (ಪದ್ಯ ೧೩).
೨೦. ಮೆಚ್ಚಿದನು ಬಲದೇವ ಇಚ್ಛೆಯಲಿ ಮಗಳಿತ್ತ
ಕೆಚ್ಚೆದೆಯ ವೀರ ಬಸವನಿಗೆ | ಕಲ್ಯಾಣ
ನೆಚ್ಚಿ ಸಲುಹೆಂದು ಕೈ ಮುಗಿದು || (ಕ. ಬ. ೨೦)
ಅರ್ಥ : ತರುಣ ಬಸವರಸನನ್ನು ಕಂಡು ಬಲದೇವ ಬಹಳ ಮೆಚ್ಚಿ ಕೊಂಡು, ಪ್ರೀತಿಯಿಂದ ತನ್ನ ಮಗಳನ್ನು ಕೊಡಲು ಬಯಸಿದನು. ಧೈರ್ಯವಂತನಾದ ಬಸವರಸನಿಗೆ ಮಗಳನ್ನು ಕೊಡಲು ಬಯಸಿದ್ದೇ ಅಲ್ಲದೆ ಕಲ್ಯಾಣ ಪಟ್ಟಣಕ್ಕೆ ಬರಬೇಕೆಂದು ಕೈ ಮುಗಿದು ಬೇಡಿಕೊಂಡ.
೨೧. ಅರಸ ಬಿಜ್ಜಳರಾಯ ಮರೆತಂದು ಕುಲಮತವ
ಕರೆಸಿ ಬಸವನಿಗೆ ಒಪ್ಪಿಸಿದ | ಮಂತ್ರಿಪದ
ಹರುಷದಲಿ ರಾಜ ಮುದ್ರಿಕೆಯ || (ಕ. ಬ. ೨)
ಅರ್ಥ : ಅರಸ ಬಿಜ್ಜಳರಾಯನು ಬಸವಣ್ಣನವರ ಕುಲಗೋತ್ರಗಳನ್ನೇನೂ ವಿಚಾರಿಸದೆ ಆತ್ಮೀಯತೆಯಿಂದ ಬರಮಾಡಿಕೊಂಡು ಮಂತ್ರಿಪದವನ್ನು ಒಪ್ಪಿಸಿದ ಮತ್ತು ಮಂತ್ರಿಪದದ ಲಾಂಛನವಾದ ರಾಜ ಮುದ್ರಿಕೆಯನ್ನೂ ಕೊಟ್ಟನು.
೨೨. ಸಾಗಿ ಬಸವನು ಬಂದು ತೂಗಿದನು ಕಲ್ಯಾಣ
ಹಾಗಿನಲಿ ಕಟ್ಟಿ ಅನುಭಾವ | ಮಂಟಪದ
ಕೂಗು ಕೇಳುತಲಿ ಜನವೆದ್ದು || (ಕ. ಬ. ೨೨)
ಸಂಗಮದಿಂದ ಹೊರಟು ಬಂದ ಬಸವಣ್ಣನವರು ಕಲ್ಯಾಣದಲ್ಲಿ ನೆಲೆಸಿದ, 'ಕಲ್ಯಾಣ' ಎಂಬ ಪದವು ಶಿವನ ಉಯ್ಯಾಲೆಯಂತೆ ತೂಗತೊಡಗಿತು-ಜನಮನದ ಹೃದಯದಲ್ಲಿ ಅದೊಂದು ಅಪೂರ್ವ ಜ್ಞಾನಕೇಂದ್ರ-ಕಾಯಕ ಕೇಂದ್ರವಾಯಿತು. ಅನುಭವ ಮಂಟಪ ಎಂಬ ಅಪೂರ್ವ ಸಂಸ್ಥೆಯ ರಚನೆಯಾಯಿತು. ಅದರ ಕೂಗನ್ನು (voice) ಕೇಳುತ್ತ ಅಂದರೆ ಅಲ್ಲಿಂದ ಹೊರಟ ಅರಿವಿನ ಅಲೆಗಳು ಬಡಿದು, ಈವರೆಗೂ ಮಲಗಿದ್ದ ಜನ ಸಮೂದಾಯ ಏಳ ತೊಡಗಿತು.
“ಕೂಗು ಕೇಳುತಲಿ ಜನವೆದ್ದು” ಇದು ಬಲು ಶಕ್ತಿಶಾಲಿ ಯಾದ ವಾಕ್ಯ. ಇದರಲ್ಲಿ ಚರಿತ್ರೆಯಿದೆ, ತತ್ತ್ವಜ್ಞಾನವಿದೆ. ಅನುಭವ ಮಂಟಪ ಮಾಡಿದ ಕೆಲಸವೇನು ಎಂಬುದರ ಸ್ಪಷ್ಟ ಪ್ರತಿಪಾದನೆ ಇದೆ. ಶತಶತಮಾನಗಳಿಂದಲೂ ಅಜ್ಞಾನದ ನಿದ್ರೆ ಯಲ್ಲಿ ಮಲಗಿದ್ದ ಜನಜಂಗುಳಿಯನ್ನು ಅನುಭವ ಮಂಟಪ ಹೇಗೆ ಎಬ್ಬಿಸಿತು ಎಂಬುದರ ಚಿತ್ರಣವಿದೆ.
೨೩. ಕೂಡಿದರು ಹುರುಪಿನಲಿ ನಾಡ ಬಲ್ಲಿದರೆಲ್ಲ
ಸೂಡ ಕಟ್ಟಿದರು ಶಿವನುಡಿಯ | ಕಾಯಕದ
ಗೂಡಾತು ಲೋಕ ಜನ ಹಿಗ್ಗಿ || (ಕ. ಬ. ೨೩)
(ಸೂಡ = ಕಟ್ಟು, ಕಂತೆ, ಹೊರೆ ೨ ಗುಂಪು, ಸಮೂಹ )
ಅರ್ಥ : (ಈ ತ್ರಿಪದಿಯ ಸಾರವನ್ನು ಹೃದಯವು ಅರ್ಥಮಾಡಿ ಕೊಂಡು ಅನುಭವಿಸಿದಷ್ಟನ್ನು ಲೇಖನಿ ಬರೆಯಲಾರದಾಗಿದೆ.) ಅದಮ್ಯ ಉತ್ಸಾಹ ಜನ ಸಮೂಹದಲ್ಲಿ ಹರಿಯತೊಡಗಿತು. ಬದು ಕಿನಲ್ಲಿ ಹೊಂಗನಸು ಚಿಗುರಿತು. ನಾಡಿನಾದ್ಯಂತ ಇದ್ದ ಬಲ್ಲಿದರು, ವಿಚಾರಶೀಲರು ಉತ್ಸಾಹದಿಂದ ಒಂದು ಕಡೆ ಸಮಾವೇಶವಾದರು. ಬತ್ತದ ಬೆಳೆಯ ಸಿವುಡ (ಕಂತೆ,ಹೊರೆ) ಕಟ್ಟುವಂತೆ ಆ ಬಲ್ಲಿದರು ಶಿವನುಡಿಗಳ (ವಚನಗಳು) ಸಿವುಡನ್ನು ಕಟ್ಟಿದರು. ಬರೀ ವಾಕ್ ಶೂರರಾಗಿ ನಿಲ್ಲಲಿಲ್ಲ. ಕಾಯಕದ ಕಲಿಗಳಾಗಿ, ಬದುಕಿನಲ್ಲಿ ತಾವು ನಂಬಿದ ಮೌಲ್ಯಗಳನ್ನು ಆಚರಣೆಗೆ ತಂದರು. ಹೀಗಾಗಿ ಅವರ ಬದುಕು ಮತ್ತು ಸಮಾಜಗಳು ಕಾಯಕದ ಬೀಡಾದವು. ಪರಿಣಾಮವಾಗಿ ಸಮೃದ್ಧಿ - ಸಂತೃಪ್ತಿಯ ಹೊನಲು ಹರಿಯಿತು. ಲೋಕವೇ ಹಿಗ್ಗಿನ ಗೂಡಾಯಿತು. ಜನರಿಗೆ ಬದುಕು ಹಬ್ಬ ವಾಯಿತು, ಕಬ್ಬವಾಯಿತು.
೨೪. ಅರ್ಪಣೆಯು ಅನುಭಾವ ಹೆಪ್ಪುಗಟ್ಟಿತು ಲೋಕ
ಬೆಪ್ಪಾತು ನಾಕ ಕಾಯಕದ | ಹಾಲ್ಹೊಳೆಯ
ತೆಪ್ಪ ದಾಸೋಹ ತೇಲುತಲಿ || (ಕ. ಬ. ೨೪)
ಸತ್ಯ ಸದಾಚಾರದ ಕಾಯಕದಿಂದ ದ್ರವ್ಯಾರ್ಜನೆ ; ದಾಸೋಹದ ಮೂಲಕ ವಿತರಣೆ, ಸಂತೃಪ್ತಿಯ ಬದುಕಿನಿಂದ ಅರ್ಪಣೆ. ಇವು ಗಳ ಜೊತೆಗೆ ಮನಬುದ್ದಿಗಳಿಗೆ ಸಂಸ್ಕಾರ ನೀಡುವ ಅನುಭವ ಗೋಷ್ಠಿ, ಆತ್ಮಾನಂದ ನೀಡುವ ಅನುಭಾವ. ಇಂಥ ಸಮಗ್ರತೆ ನಾಕ ಅಂದರೆ ಸ್ವರ್ಗದಲ್ಲಿ ಸಹ ಇಲ್ಲ. ಅಲ್ಲಿರುವುದೆಲ್ಲ ಬರೀ ವಿಲಾಸ ವೈಭವಗಳು. ಹೀಗಾಗಿ ಸ್ವರ್ಗವು ಬೆಪ್ಪಾಯಿತು. ಗುರು ಬಸವ ಣ್ಣನವರ ಕಾಯಕ-ದಾಸೋಹಗಳ ಪ್ರತಿಫಲವಾಗಿ, ಕಾಯಕದ ಹಾಲಿನ ಹೊಳೆಯಲ್ಲಿ ದಾಸೋಹದ ತೆಪ್ಪ ತೇಲತೊಡಗಿತು. ಸತ್ತ ನಂತರ ಸಿಗುವ ಸ್ವರ್ಗಕ್ಕಾಗಿ ಯಾರೂ ಬಾಯಿ ಬಿಡುವವರೇ ಇಲ್ಲದಾಗ ತನ್ನನ್ನು ಕೇಳುವವರೇ ಇಲ್ಲ ಎಂದು ಸ್ವರ್ಗ ಬೆಪ್ಪಾದುದರಲ್ಲಿ ಆಶ್ಚರ್ಯವೇನೂ ಇಲ್ಲವಷ್ಟೆ.
೨೫. ಉಂಡು ತೇಗಿತು ಲೋಕ ಕೊಂಡಾಡಿ ಕಾಯಕವ
ಕಂಡ ಕಂಡಲ್ಲಿ ದಾಸೋಹ | ಕಾಯಕದ
ಕಂಡ ಜೀವನದ ಶಿವ ಮಾತು || (ಕ. ಬ. ೨೫).
ಸಮೃದ್ದಿ ಅಪಾರವಾದಾಗ ಜನಕ್ಕೆ ಸುಖಜೀವನ ಪ್ರಾಪ್ತವಾಯಿತು. ಕಾಯಕದ ಮಹಿಮೆಯನ್ನರಿತು, ಆ ತತ್ವವನ್ನು ಕೊಂಡಾಡಿದರು, ಅಳವಡಿಸಿಕೊಂಡರು. ಬರೀ ಗಳಿಸುವುದಷ್ಟೆ ಅಲ್ಲದೆ ಉದಾರವಾಗಿ ಇನ್ನೊಬ್ಬರಿಗೆ ನೀಡುವುದನ್ನು ಜನ ಕಲಿತರು. ಬೇಡುವವರೇ ದೊರೆಯದೆ, ನೀಡುವವರೇ ಅಧಿಕವಾದರು. ಬಸವಣ್ಣನವರ ಕಾಯಕ ತತ್ತ್ವ ಶಿವ ಜೀವನ (Divine life) ವನ್ನು ಅತ್ಯಪೂರ್ವವಾಗಿ ಸಾಧಿಸಿತು.
೨೬. ಮಿದ್ದಿದನು ಶಿವಗೋಷ್ಠಿ ಬಿದ್ದು ವೇದಗಳಂದು
ಹುದ್ದೆ ಹೊಂದಿದವು ಜಗದೊಳಗೆ | ವಚನಗಳ
ಸುದ್ದಿ ನಾಡ್ತುಂಬಿ ಜನಹಿಗ್ಗಿ || (ನೇ ಅ. ೭೩).
(ಮಿದಿ = ೧ (ಒನಕೆಯಿಂದ) ಕುಟ್ಟು, ಥಳಿಸು ೨ (ಹಿಟ್ಟಿನಂತೆ) ನಾದು, ಮಿದ್ದು ಕೂಡಿಸು, ಹೊಂದಿಸು [Process ಹದಮಾಡು] )
ಅರ್ಥ : ಅನುಭವ ಗೋಷ್ಠಿಗಳ ಮುಖಾಂತರ ಗುರುಬಸವಣ್ಣನ ವರು ಜನಮನವನ್ನು ಮಿದ್ದ [Process ಹದಮಾಡು] ತೊಡಗಿದರು. ಈವರೆಗೆ ಗದ್ದುಗೆಯ ಮೇಲೆ ಪ್ರಭುತ್ವ ಸ್ಥಾಪಿಸಿದ್ದ ವೇದಗಳು ಕೆಳಗೆ ಇಳಿಯತೊಡಗಿದವು. ಆ ಧರ್ಮಗದ್ದುಗೆಯ ಹುದ್ದೆಯನ್ನು ವಚನವಾಜ್ಞಯ ಏರಿತು. ವಚನಗಳ ಸುದ್ದಿ ನಾಡನ್ನೆಲ್ಲ ವ್ಯಾಪಿಸಿಕೊಂಡಿತು. ಜನರು ಹೊಸ ಬೆಳಕೊಂದನ್ನು ಕಂಡು ಹಿರಿಹಿರಿ ಹಿಗ್ಗತೊಡಗಿದರು.
೨೭. ಸೋಸಿ ವಚನದ ತಿರುಳ ಬೀಸಿದವು ಶಿವಗಾಳಿ
ಮೂಸಿ ಬಂದಂತೆ ಗುಂಗಿಗಳು | ಹೂಗಳಿಗೆ
ರಾಸಿ ಜನ ಬಂತು ಮಂಟಪಕೆ || (ನೇ, ಅ. ೭೪)
ಅರ್ಥ : ಶಿವಗಾಳಿಯು ವಚನದ ತಿರುಳನ್ನು ಹೊತ್ತು ಬೀಸತೊಡಗಿತು. ಅದರ ಪರಿಮಳಕ್ಕೆ ಜನರು ಮಂತ್ರಮುಗ್ಧರಾದರು. ಮಾರುಹೋಗಿ, ಹೂಗಳ ಪರಿಮಳಕ್ಕೆ ಸಮ್ಮೋಹಿತವಾಗಿ ಬರುವ ದುಂಬಿಗಳಂತೆ ಅನುಭವ ಮಂಟಪದ ನಂದನವನದಲ್ಲಿ ಅರಳುತ್ತಿದ್ದ ವಚನ ವಾಜ್ಞಯದ ಮಧುವನ್ನು ಹೀರಲು ರಾಶಿ ರಾಶಿ (ಗುಂಪು) ಯಾಗಿ ಧಾವಿಸತೊಡಗಿದರು.
೨೮, ವಚನ ಮಂಟಪ ಬಳ್ಳಿ ಸುಚಿ ಮೊಗ್ಗೆ ಹೂ ಬಿಡಲು
ರುಚಿಜೇನ ಹುಟ್ಟ ಹೊಸ ಮತವ | ಕಟ್ಟಿದರು.
ವಚನ ಶಾಸ್ತ್ರಕರು ನಾಡೊಳಗೆ || (ನೇ. ಅ. ೭೫)
ಅನುಭವ ಮಂಟಪ ಎನ್ನುವ ಬಳ್ಳಿ (ಅದನ್ನು ವಚನ ಮಂಟಪ ಎಂದು ಶಕ್ತಿಶಾಲಿಯಾದ ಪದಗಳ ಮೂಲಕ ಹೇಳಿದ್ದಾರೆ.) ವಚನಗಳು ಎನ್ನುವ ನಿರ್ಮಲ ಪುಷ್ಪಗಳನ್ನು ಅರಳಿಸಿತು. ಆಗ, ವಚನ ಕಾರರು (ವಚನ ಶಾಸ್ತ್ರಕರು ಎಂಬುದು ಗಮನಿಸಬೇಕಾದ ಪದ) ಎಂಬ ಶರಣ ದುಂಬಿಗಳು ವಚನ ವಾಜ್ಞಯ ಎಂಬ ಹುಟ್ಟ ಕಟ್ಟಿ, ಅದರಲ್ಲಿ ಹೊಸಧರ್ಮದ ಜೇನುತುಪ್ಪವನ್ನು ಸಂಗ್ರಹಿಸಿದರು.
(ಗುರು ಬಸವಣ್ಣನವರಿಗಿಂತಲೂ ಪೂರ್ವದಲ್ಲಿ ಲಿಂಗಾಯತ ಧರ್ಮವಿತ್ತು ಎಂದು ಸಾಧಿಸುವ ಅತಿಬುದ್ದಿವಂತ ವಿದ್ವಾಂಸರಿಗೆ ಜನಪದ ಕವಿಗಳು ಸೂಕ್ತವಾಗಿ ಇಲ್ಲಿ ತಿಳಿಸಿ ಹೇಳುತ್ತಾರೆ. ಜೇನು ತುಪ್ಪಕ್ಕೆ ಮುನ್ನ ಹೂವುಗಳಿರಬಹುದು. ಆದರೆ ಹೂವಿನ ಮಕರಂದ ಪಾನಮಾಡಿ ಹೊಸರುಚಿಯ, ಭಿನ್ನ ರುಚಿಯ ಜೇನು ತುಪ್ಪ ಕೊಡುವುದೇ ಜೇನ್ನೊಣದ ಅದ್ಭುತ ಸಾಧನೆ. ಅದೇ ರೀತಿ ಬಸವಣ್ಣನವರೆಂಬ ರಾಣಿ ಜೇನಿನ ನೇತೃತ್ವದಲ್ಲಿ ಶರಣ ಗಣಂಗಳೆಂಬ ಜೇನ್ನೊಣಗಳು ಹೊಸಧರ್ಮದ ಜೇನು ತುಪ್ಪ ಕೊಟ್ಟುದು ಅದ್ಭುತ ಸಾಧನೆ.)
೨೯. ಉದಿತ ಜೀವನ ರಾಟಿ ಕದರ ಕಾಯಕ ಮಾಡಿ
ನೆದರೆಂಬ ನೂಲ ಬಲುನೇತ | ಬಸವಣ್ಣ
ಸದರೆಂದು ನೇದ ಹೊಸಮತವು || (ಮೇ. ಕೇ ೧೮)
ಬಸವಣ್ಣನವರು ನೇಕಾರನ ಕಾಯಕ ಮಾಡಿದರೆ ? ಅಹುದು. ಹೊಸಧರ್ಮ ಎಂಬ ವಸ್ತ್ರವನ್ನು ನೇಯ್ದ ನೇಕಾರರವರು.
೩೦. ಬಸವ ಸಾರಿದನಂದು ಕುಶಲದಲಿ ವಚನಗಳ
ಮಸುಕಿರುಳು ಹರಿದು ನಸುಕಾತು ಜಗದೊಳಗೆ.
ಹೊಸಮತದ ಸೂರ್ಯ ನುದಿಸಿದನು || (ಮೇ. ಕೇ, ೧೯).
ಗುರು ಬಸವಣ್ಣನವರು ವಚನಗಳನ್ನು ಸಾರಿದರು. ಆವರೆಗೆ ಹಬ್ಬಿದ್ದ ಇರುಳು, ಮಸುಕು ಹರಿಯಿತು. ಬೆಳಕು ಮೂಡಿತು. ಜಗತ್ತಿಗೆ ಹೊಸಧರ್ಮ ಎಂಬ ಸೂರ್ಯನು ಉದಯಿಸಿದನು. -
೩೧, ತುಂಬಿ ತುಳುಕಿತು ಬೆಳಕು ಇಂಬನೀಯಿತು ಜಗಕೆ
ಕಂಬ ಬಸವೆಂದು ಹೊಸಮತಕೆ | ಕಲ್ಯಾಣ
ಮುಂಬದಿಯ ಭೇರಿ ಮೊಳಗಿದವು !! (ಮೇ.ಕೇ.೨೦)
ಬಸವ ಗುರುವಿತ್ತ ಹೊಸಧರ್ಮದ ಸೂರ್ಯನು ಉದಯಿಸುವುದೇ ತಡ, ದಿವ್ಯಜ್ಞಾನದ ಬೆಳಕು ತುಂಬಿ ತುಳುಕಿತು. ಅದು ಇಡೀ ಜಗತ್ತಿಗೇ ಇಂಬನ್ನು ಕೊಡುವಷ್ಟು ಭೂಮತೆಯನ್ನು ಪಡೆಯಿತು. ಈ ಹೊಸ ಮತಕ್ಕೆ ಆಧಾರ ಸ್ತಂಭ ಬಸವಣ್ಣನವರೇ ಎಂದು ಕಲ್ಯಾಣದ ಮುಂದಿದ್ದ ಭೇರಿಗಳೆಲ್ಲ ಸಾರಿ ಸಾರಿ ಮೊಳಗಿದವು.
೩೨. ಸಿಂಘಣನ * ಗುರುಭಕ್ತಿ ಲಿಂಗವಂತರು ಕೇಳಿ
ಜಂಗ ಕಟಕೊಂಡು ಹಾಡಿದರು | ಹೊಸಮತವು
ನುಂಗಿ ನಾಡನ್ನು ನೀರ್ಕುಡಿದು !! (ನೇ, ಅ. ೯೬)
*(ಸಿಂಘಣ = ನೇಗಿಯ ಅಮುಗಿದೇವಯ್ಯನ ಶಿಷ್ಯನಾದ ತರ್ದವಾಡಿಯ ದೊರೆ)
ಬಸವ ಗುರುವಿನ ಭೋಧೆಯಿಂದ, ಆತನ ಪಥವ ಹಿಡಿದ ಶರಣ ರಿಂದ, ಧರ್ಮಪ್ರಸಾರಕ ಜಂಗಮರ ಸಂಚಾರದಿಂದ ಈ ಹೊಸ ಮತವು ತ್ವರಿತವಾಗಿ ಹಬ್ಬಿತು. ಇಡೀ ನಾಡನ್ನೇ ನುಂಗಿ ನೀರ್ಕುಡಿಯಿತು. ಅಂದರೆ ಅಷ್ಟು ಪ್ರಭಾವ ಪೂರ್ಣವಾಗಿ ಹಬ್ಬಿ ಹಸರಿಸಿತು.
೩೩. ನಾನು ಬೊಮ್ಮನು ಎಂದು ತಾನ ಹಿಡಿಯಿತು ವೇದ
ಹೀನೆಂದು ಹೇಳಿ ವಚನಗಳು 1 ಸಾರಿದವು.
ಮಾನ್ಯರಿಗೆ ಎಲ್ಲ ಬೊಮ್ಮೆಂದು || (ಮೇ.ಕೇ.೨೧)
'ನಾನೇ ಬ್ರಹ್ಮ, ಬ್ರಹ್ಮನ ವಾಣಿ ' ಎಂದು ವೇದಗಳು ಗದ್ದುಗೆ ಹಿಡಿದು ಕುಳಿತಿದ್ದವು. ವಚನಗಳು, ಭೇದವನ್ನು ಸೃಷ್ಟಿಸುವ, ಎಲ್ಲರನ್ನು ಅಪ್ಪಿಕೊಳ್ಳದ ಶಾಸ್ತ್ರಗಳು ಹೀನ' ಎಂದು ಘೋಷಿಸಿ, ಮಾನ್ಯರಿಗೆ ಜ್ಞಾನಿಗಳಿಗೆ ಅನುಭಾವಿಗಳ ಮಾತೆಲ್ಲವೂ ಬೊಮ್ಮವೇ, ಬೊಮ್ಮನ ವಾಣಿಯೇ ಎಂದು ಸಾರಿದವು.
೩೪. ಮೇದಾರ ಕೇತಯ್ಯ ವಾದ ಹೂಡದೆ ಕಂಡ
ನಾದವಿಲ್ಲೆಂದು ವೇದದೊಳು | ವಚನಗಳು
ಬೋಧಿಸಲು ಮಿಗಿಲು ಜನಕೆಂದು || (ಮೇ. ಕೇ೨೨)
ಮೇದಾರ ಕೇತಯ್ಯನಂತಹ ವಿಚಾರಶೀಲನೂ ಅರಿತುಕೊಂಡ. ವೇದಗಳು ಜನ ಸಾಮಾನ್ಯರನ್ನು ತಲ್ಪಲಾರವು, ಅವರ ಬದುಕನ್ನು ಬೆಳಗಲಾರವು. ಜನರಿಗೆ ಬೋಧೆ ಮಾಡಲು ವಚನಗಳೇ ಸರಿ. ಅವು ನೇರವಾಗಿ ಜನಜೀವನದ ಒಳಹೊಕ್ಕು ಅವರ ಬಾಳನ್ನು ಬೆಳಗುವವು ಎಂದರಿತ.
೩೫. ಕೊಂಡಿಗಳು ಹಾರುವರು *ಕಂಡು ಮಂಟಪಕಂಜಿ
ಹಿಂಡುವುದು ನಮ್ಮ, ಶಿವಮತವು | ನಾಡೊಳಗೆ
ಭಂಡು ಎಬ್ಬಿಸುವುದೇ ಲೇಸೆಂದು || (ನೇ. ಅ. ೭೬)
[* ಹಾರುವರು ಎಂಬ ಪದಕ್ಕೆ ಬ್ರಾಹ್ಮಣರು ಎಂದು ಅರ್ಥ ಮಾಡದೆ, ಮತಾಂಧರು, ಸಂಪ್ರದಾಯವಾದಿಗಳು, ಜಾತಿವಾದಿ ಗಳು, ಎಂದು ಬರೆದಿರುವೆ. ಏಕೆಂದರೆ ಬ್ರಾಹ್ಮಣರಲ್ಲಿಯೂ ಅನೇಕ ಉದಾರವಾದಿಗಳು, ಜಾತ್ಯಾತೀತ ದೃಷ್ಟಿಕೋನದವರು, ಉದಾರ ಮನೋಭಾವದವರು ಇರುತ್ತಾರೆ. ಅಂದು, ಸ್ವತಃ ಮಧುವರಸನೇ ಕ್ರಾಂತಿಯ ಹೆಜ್ಜೆ ಇಟ್ಟನಲ್ಲವೆ ?]
ಅನುಭವ ಮಂಟಪದ, ವಚನ ಶಾಸ್ತ್ರದ, ಶರಣರ ಪ್ರಭಾವ ಕಂಡು ಕೊಂಡಿಯರು, ಮತಾಂಧರು, ಸಂಪ್ರದಾಯ ವಾದಿಗಳು, ಜಾತಿ ವಾದಿಗಳು ಇದು ಹೀಗೇ ಬೆಳೆದರೆ ನಮ್ಮನ್ನು ಹಿಂಡುವುದು. ಆದ್ದರಿಂದ ಏನಾದರೂ ಭಂಡುಮಾಡಿ, ಗೊಂದಲ ಎಬ್ಬಿಸುವುದೇ ಸರಿ ಎಂದು ಅಂದುಕೊಂಡು, ಸಮಯಕ್ಕಾಗಿ ನೆವಕ್ಕಾಗಿ ಕಾಯ ತೊಡಗಿದರು.
೩೬. ಹಾರೂರ ಹರಿದಾಟ ಮಾರಿಮಾರಿಗೆ ಮಸಿಯು
ಊರೂರು ಕಾರಿ ಕಿಡಿ ಮಾತ | ನಾಡೆಲ್ಲ
ಹಾರುವಗೆ ಹೊರತು ಹದನಾತು || (ಕ. ಬ. ೨೬).
ಈ ತ್ರಿಪದಿಯಲ್ಲಿ ಜನಪದ ಕವಿಗಳು ಪುರೋಹಿತಶಾಹಿಯ ವಿರುದ್ಧ ಬಂಡೆದ್ದಿರುವ ದನಿಯನ್ನು ಗುರುತಿಸಬಹುದು. ಜನ ಸಾಮಾನ್ಯರಲ್ಲಿ ಧರ್ಮಜಾಗೃತಿ ಮೂಡಿ ಶೋಷಣೆಯ ವಿರುದ್ದ ಮತ್ತು ಶೋಷಕರ ವಿರುದ್ಧ ಎಚ್ಚರ ಉಂಟಾಗುತ್ತಿದ್ದಂತೆಯೇ ಮೇಲು ವರ್ಣೀಯರಲ್ಲಿನ ಜಾತಿವಾದಿಗಳಿಗೆ ತಳಮಳವಾಯಿತು. ಹೀಗೆ ದನಿ ಎತ್ತುವುದೇ ಪಾಪ ಎಂಬ ಪ್ರಚಾರವನ್ನು ಅವರು ಆರಂಭಿಸಿದಾಗ ಜನ ಸಮುದಾಯ ಅದಕ್ಕೆ ತಲೆ ಬಾಗದೆ ಶರಣರ ಆಂದೋಲನವನ್ನೇ ಬೆಂಬಲಿಸಿತು.
೩೭. ಎರಕ ಹೊಯ್ಯತು ಲೋಕ ಸರಸ ಕಾಯಕ ನುಡಿಯ
ಹರಕ ಹಾರುವಗೆ ಕಿರಿ ಮನಸು | ಉಣ್ಣುದಕೆ
ಹರಳುಪ್ಪ ಒಗೆದ ಹಾಲ್ಗೊಳೆಗೆ || (ಕ. ಬ. ೨೭)
ಈ ತ್ರಿಪದಿಯನ್ನು ಓದಿದಾಗ ಕಾಯಕವು ಒಂದು ಉದ್ಯೋಗ ವ್ಯವಸ್ಥೆಯ ಸಿದ್ಧಾಂತವಷ್ಟೇ ಅಲ್ಲ, ಚಳುವಳಿಯ ಸೂತ್ರ ಸಹ ಎನ್ನಿಸುವುದು. ಗಾಂಧೀಜಿಯವರ ಅಹಿಂಸಾ ತತ್ವ ಸತ್ಯಾಗ್ರಹದ ಪ್ರಮುಖ ಸೂತ್ರವಾಗಿ, ಬ್ರಿಟಿಷರ ವಿರುದ್ಧ ಒಂದು ಪ್ರಬಲ ವಾದ ಅಸ್ತ್ರವಾದಂತೆ ಕಾಯಕವು ಪುರೋಹಿತ ಶಾಹಿಯ ವಿರುದ್ದ ಒಂದು ಹೋರಾಟದ ಸೂತ್ರವಾಯಿತು ಎಂದೆನಿಸುತ್ತದೆ.
ವೀರಶರಣ ಮಡಿವಾಳ ಮಾಚಿದೇವರ ಜೀವನದಲ್ಲಿ ಒಂದು ವಿಚಾರವನ್ನು ಕಾಣುತ್ತೇವೆ. ಅವರು, “ಶರಣರ ಬಟ್ಟೆ ಮಾತ್ರ ತೊಳೆಯುವೆ ; ಭವಿಗಳ ಬಟ್ಟೆ ತೊಳೆಯಲಾರೆ' ಎಂದು ಪ್ರತಿಜ್ಞೆ ಕೈಗೊಂಡಿರುತ್ತಾರಂತೆ. ಇದನ್ನು ಓದಿದಾಗ 20 ನೆಯ ಶತಮಾನ ದಲ್ಲಿರುವ ನಮಗೆ 'ಮಾಚಿದೇವರು ಎಂಥಾ ಮತಾಂಧರು ! ಶರಣರು ಇಷ್ಟು ಸಂಕುಚಿತ ದೃಷ್ಟಿಯವರು ಆಗಿದ್ದರೇ ?” ಎಂಬ ಸಂದೇಹ ಉಂಟಾಗುವುದು. ಆದರೆ, ಇದರಲ್ಲಿ ಬಹಳ ಮಾರ್ಮಿಕ ಅರ್ಥವಿದೆ ; ಸಾತ್ವಿಕ ಪ್ರತಿಭಟನೆ ಇದೆ. “ಶರಣರು ಒಂದು ಸಂವಿಧಾನಕ್ಕೆ, ಸಮತಾವಾದಕ್ಕೆ ಬದ್ಧರಾದವರು. ಕಾಯಕಗಳಲ್ಲಿ ಮೇಲು ಕೀಳು ಎಂಬ ಭಾವ ಅವರಲ್ಲಿರಲಿಲ್ಲ. ಅನುಭವ ಮಂಟಪದ ಕಣ್ಣಿನಲ್ಲಿ ಮಂತ್ರಿ ಮಧುವರಸನೂ ಅಷ್ಟೆ ; ಚಮ್ಮಾವುಗೆ ಮಾಡುವ ಹರಳಯ್ಯನು ಅಷ್ಟೆ. “ದೇವ ಸಹಿತ ಭಕ್ತ ಮನೆಗೆ ಬಂದರೆ ಕಾಯಕವಾವುದೆಂದು ಬೆಸಗೊಂಡೆನಾದಡೆ ನಿಮ್ಮಾಣೆ. ನಿಮ್ಮ ಭಕ್ತರಲ್ಲಿ ಕುಲವನರಸಿದರೆ ರಾಣಿವಾಸದಾಣೆ'' ಎಂಬ ಬಸವ ವಚನ ಸುಧೆಗನುಸಾರವಾಗಿ ದೇವನನ್ನು ಧರಿಸಿಕೊಂಡವರಲ್ಲಿ ಕುಲವನ್ನಾಗಲೀ, ಉದ್ಯೋಗವನ್ನಾಗಲೀ, ಹುಡುಕತಕ್ಕದ್ದಲ್ಲವಷ್ಟೆ. ಈ ತತ್ತ್ವವನ್ನರಿಯದವರು 'ಭವಿಗಳು' ಅಂಥವರು, 'ಮಾಚಯ್ಯ ಮಡಿವಾಳನು. ಅವನು ಬಟ್ಟೆ ತೊಳೆಯುವ ಉದ್ಯೋಗಿ, ಕೀಳು.' ಎಂದುಕೊಳ್ಳುತ್ತಿದ್ದರು. ಅದಕ್ಕಾಗಿಯೇ ಅಸಮಾನತೆ ಘೋಷಿಸುವ ಭವಿಗಳ ಬಟ್ಟೆಗಳನ್ನೂ ತೊಳೆಯದಿರಲು ಮಾಚಯ್ಯನು ನಿರ್ಧರಿಸಿದ್ದ.
ಸಮಾಜದ ಸ್ವಾಸ್ಥ್ಯಕ್ಕೆಂದು ವೃತ್ತಿ ವಿಭಜನೆ ಮಾಡದೆ ವೃತ್ತಿ ಕಾರರ ವಿಭಜನೆಯಾಗಿದ್ದ ಸಮಾಜ ವ್ಯವಸ್ಥೆಯನ್ನು ಶರಣರು ಪ್ರತಿಭಟಿಸಿದರು. ಹೀಗೆ ಕಾಯಕವು ಒಂದು ಪ್ರಬಲ ಅಸ್ತ್ರವಾಯಿತು. ಇದರಿಂದ ಕರ್ಮವಾದದ ಮೇಲೇ ಸುಖವಾಗಿ ಬದು ಕಿದ್ದ ಮೇಲುಜಾತಿಯವರಿಗೆ ಕಸಿವಿಸಿಯಾಯಿತು. “ಸಮಾನತೆ ಒಪ್ಪದ, ಆತ್ಮಗೌರವದಿಂದ ಇತರರನ್ನೂ ಕಾಣದ ಜನರ ಬಟ್ಟೆ ತೊಳೆಯುವುದಿಲ್ಲ, ಅವರ ಓಣಿಯಲ್ಲಿ ಪ್ರಾಣಿ ಸತ್ತರೆ ಎತ್ತುವುದಿಲ್ಲ ಅವರಿಗೆ ಚಪ್ಪಲಿ ಮಾಡಿಕೊಡುವದಿಲ್ಲ.” ಎಂದು ಸಾತ್ವಿಕ ಗಣಾಚಾರವನ್ನು ಶರಣರು ಆರಂಭಿಸಿದಾಗ ಮೇಲು ಜಾತಿಯವರು ಗಾಬರಿಗೊಂಡರು. ಮೆಲ್ಲನೆ ಈ ಕಿರಿ ಮನಸಿನವರು ಹಾಲಿನ ಹೊಳೆಗೆ ಉಪ್ಪಿನ ಹರಳು ಒಗೆಯುವಂತೆ, ಪರಸ್ಪರರನ್ನು ಎತ್ತಿ ಕಟ್ಟುವ, ಚಾಡಿ ಹೇಳುವ ಸನ್ನಾಹ ನಡೆಸಿದರು.
೩೮. ಬನವಾಸಿ ಕುಂತಳಕೆ ಮನೆಮಾತು ಅಲ್ಲಮನು,
ಮನವೊಪ್ಪಿ ಲೋಕ ಕೈ ಮುಗಿದು | ಕೇಳುತಲಿ
ಜನಕೆ ಊದಿದನು ಶಿವ ಮಂತ್ರ || (ಕ. ಬ. ೨೮)
ಕಲ್ಯಾಣದತ್ತ ಧಾವಿಸಿ ಬಂದ ಚೇತನಗಳು ಹಲವಾರು. ಕುಂತಳ ದೇಶದ ಬನವಾಸಿ ನಾಡಿನಲ್ಲಿ ಓರ್ವ ಮಹಾಪುರುಷ ರೂಪು ಗೊಂಡಿದ್ದ. ಮನೆಮನೆಯಲ್ಲೂ ಮಾತಿನ ಕೇಂದ್ರವಾಗಿದ್ದನಾತ. ಲೋಕವು ಹೃದಯ ತುಂಬಿ ಗೌರವಿಸತೊಡಗಿತು. ಈ ಅಲ್ಲಮ ಪ್ರಭುವು ಜನತೆಯಲ್ಲಿ ಶಿವಮಂತ್ರವನ್ನು ಊದಿದನು.
೩೯. ಲಕ್ಕುಂಡಿ ಹೊಲ ಬೆಳೆದು ಮುಕ್ಕಾಯಿ ಅಜಗಣ್ಣ
ಮಿಕ್ಕ ಶರಣರಿಗೆ ಶಿವ ಮಾತು | ಪ್ರಭುದೇವ
ಹೊಕ್ಕ ಹೊಕ್ಕಲ್ಲಿ ಹೊನ್ನುಗ್ಗಿ || (ಕ. ಬ. ೨೯).
ಲಕ್ಕುಂಡಿಯಲ್ಲಿ ಮುಕ್ತಾಯಿ ಎಂಬ ಓರ್ವ ಶರಣೆ, ಆಕೆಯ ಸೋದರ ಜ್ಞಾನಿ ಅಜಗಣ್ಣ -ಈ ಮುಂತಾದವರನ್ನು ಸಂದರ್ಶಿಸಲು ಹೊರಟರು ಪ್ರಭುದೇವರು. ದಾರಿಯುದ್ದಕ್ಕೂ ಹೊನ್ನಿನ ಹುಗ್ಗಿ ಎಂಬಂತೆ ಪ್ರಭುದೇವರ ಶ್ರೀವಾಣಿಯಿಂದ ಶಿವಮಾತುಗಳು ಚಲ್ಲವರಿದುವು.
೪೦. ಹಾದಿ ಹಾದಿಗೆ ಗುಡಿಯ ಬೀದಿ ಬೀದಿಗೆ ಕೆರೆಯ
ಸಾಧಿಸಿದ ಕಟ್ಟಿ ಸಿದ್ಧರಾಮ | ಸೊನ್ನಲಿಗೆ
ಸಾಧು ಸಿದ್ಧನಿಗೆ ಮನೆಮಾತು || (ಕ. ಬ. ೩೦)
ದಾರಿದಾರಿಗಳಲೆಲ್ಲ ಗುಡಿಗಳು ; ಬೀದಿ ಬೀದಿಗಳಲ್ಲಿ ಕೆರೆಗಳು ಮುಂತಾದುವನ್ನು ಕಟ್ಟಿಸುತ್ತ ಸಿದ್ಧರಾಮೇಶ್ವರರು ಸೊನ್ನಲಿಗೆಯಲ್ಲಿ (ಇಂದಿನ ಮಹಾರಾಷ್ಟ್ರದ ಸೋಲಾಪುರ) ನೆಲೆಸಿದ್ದರು.
೪೧. ಸಿದ್ದ ಪುರುಷನು ಎಂದು ಸಿದ್ದರಾಮಗೆ ಬಿಮ್ಮು
ಉದ್ದಂಡನಾಗಿ ಆಳಿದನು | ಪ್ರಭುದೇವ
ಹೆದ್ದಾರಿ ಬಂದ ಶಿವ ಬೆಳಕು || (ಕ. ಬ. ೩೧)
ಸಿದ್ದರಾಮೇಶ್ವರರಿಗೆ ತಾವು ಸಿದ್ಧಪುರುಷರು ಎಂಬ ಹಮ್ಮು ಸೇರಿ ಕೊಂಡಿದ್ದಿತು. ಆಗ ಶಿವಬೆಳಕನ್ನು ಹೊತ್ತು ಅಲ್ಲಮಪ್ರಭು ಸಿದ್ಧರಾಮೇಶ್ವರರ ಬಳಿಗೆ ಬಂದರು.
೪೨. ಸಿದ್ಧರಾಮನ ಬಿಮ್ಮು ಬಿದ್ದು ಹೋಯಿತು ಕರಗಿ
ಬುದ್ದ ಪ್ರಭುದೇವ ತಿಳಿ ಹೇಳಿ | ಸೊನ್ನಲಗಿ
ಸಿದ್ಧ ಶರಣಾದ ಶಿವ ಮತಕೆ || (ಕ, ಬ, ೩೨)
ಅಲ್ಲಮ ಪ್ರಭುವಿನ ಜೊತೆ ಸಂವಾದ ಮಾಡುತ್ತಾ ಹೋದಂತೆ ಸಿದ್ದರಾಮೇಶನ ಅಹಂ ಇಳಿಯುತ್ತ ಹೋಯಿತು. ಸಿದ್ದ ಮಾರ್ಗಾನುಯಾಯಿಯಾಗಿದ್ದ ಆತ ಅದನ್ನು ತೊರೆದು ನೂತನ ಧರ್ಮ ವನ್ನು ಸ್ವೀಕರಿಸಿದನು.
೪೩. ಅಲ್ಲಮನು ಸಿದ್ಧರಾಮ ಬಲ್ಲಿದೆಲ್ಲರು ಬರಲು
ಕಲ್ಯಾಣ ಮನೆಗೆ ಕಳೆಬಂತು | ಬಸವಯ್ಯ
ಎಲ್ಲಿ ಹೋದಲ್ಲಿ ಬೆಲ್ಲಾದ || (ಕ. ಬ. ೩೩).
ಈ ನಾಡಿನ ಪ್ರೌಢರು, ಅನುಭಾವಿಗಳು, ವಿಚಾರಶೀಲರು ಆದ ಅಲ್ಲಮ-ಸಿದ್ಧರಾಮ ಮುಂತಾದವರು ಬರಲು ಕಲ್ಯಾಣದ ಮನೆ ಅಪೂರ್ವ ಕಳೆಯಿಂದ ಶೋಭಿಸಿತು. ಸಚೇತನ ಶಕ್ತಿಯಾದ ಗುರು ಬಸವಣ್ಣನವರು “ಎಲ್ಲಿ ಹೋದಲ್ಲಿ ಬೆಲ್ಲಾದ"ರು. ಎಂತಹ ಮುದ್ದು ಮಾತಿನಲ್ಲಿ, ಶಕ್ತಿ ಶಾಲಿಯಾಗಿ ಕವಿಗಳು ಬಸವಣ್ಣನವರ ಜನಪ್ರಿಯತೆ ಕುರಿತು ಹೇಳಿದ್ದಾರೆ ಎಂಬುದನ್ನು “ಬಸವಯ್ಯ ಎಲ್ಲಿ ಹೋದಲ್ಲಿ ಬೆಲ್ಲಾದ.” ಎಂಬ ಪದಪುಂಜದಲ್ಲಿ ತಿಳಿಯ ಬಹುದು.
೪೪. ಹಿಪ್ಪರಗಿ ಮಾಚಯ್ಯ ಉಪ್ಪರಗಿ ಸಂಗಯ್ಯ
ಅಪ್ಪ ಹರಳಯ್ಯ ಮಂಟಪಕೆ | ಲೋಕೆಲ್ಲ
ಬೆಪ್ಪಾಗಿ ಕೂತು ಕಿವಿಗೊಟ್ಟು || (ಕ. ಬ. ೩೪)
ಹಿಪ್ಪರಗಿಯಿಂದ ಮಡಿವಾಳ ಮಾಚಯ್ಯನವರು, ಉಪ್ಪರಗಿಯಿಂದ ಸಂಗಯ್ಯನವರು ಬಂದರು. ಸಮಗಾರ ಹರಳಯ್ಯನವರು ಮಂಟಪದ ಸದಸ್ಯರಾದರು. ಇಡೀ ಜಗತ್ತೇ ಅಚ್ಚರಿಯಿಂದ ಬೆಪ್ಪಾಯಿತು. ಲೋಕವು ಮಂಟಪದ ಮಾತನ್ನು ಕಿವಿಗೊಟ್ಟು ಆಲಿಸಿತು.
೪೫. ಕಿನ್ನರಿಯ ಬೊಮ್ಮಯ್ಯ ಕಿನ್ನರಿಯ ಬಾರಿಸಲು
ಕುನ್ನಿ, ಹಸು ಮರೆತು ಕಿವಿಗೊಟ್ಟು | ಕಲ್ಯಾಣ
ಚೆನ್ನಾತು ಲೋಕ ಚೆಲುವಾತು || (ಕ. ಬ. ೩೫)
ತನ್ನ ಮತ್ತು ತನ್ನ ಕಿನ್ನರಿಯ ಮಧುರ ನಾದದಿಂದ ಎಲ್ಲರನ್ನೂ ಮಂತ್ರ ಮುಗ್ಧ ಮಾಡಬಲ್ಲ ಮತ್ತೊಬ್ಬ ಶರಣನ ಆಗಮನವಾಯಿತು. ಅವನೇ ಕಿನ್ನರಿಯ ಬೊಮ್ಮಣ್ಣ. ಅವನ ಕಿನ್ನರಿಯ ಸದ್ದಿಗೆ ಮಕ್ಕಳು, ನಾಯಿಮರಿಗಳು, ಹಸುಗಳು ಸಹ ಮಂತ್ರ ಮುಗ್ಧವಾಗುತ್ತಿದ್ದವು. ಆತನ ಬರವಿನಿಂದ ಕಲ್ಯಾಣ ಪಟ್ಟಣಕ್ಕೆ ಕಳೆ ಬಂದಿತು ; ತನ್ಮೂಲಕ ಲೋಕವೂ ಚೆಲುವಾಯಿತು.
೪೬. ಅಲ್ಲಮನೆ ಗುರುವಾದ ಕಲ್ಯಾಣ ಮಂಟಪಕೆ
ಕಲ್ಲೆದೆಯ ಬಂಟ ಮಡಿವಾಳ | ಕರುವಾಳು
ಸಲ್ಲಿಸಲು ಸೇವೆ ಮಂಟಪಕೆ || (ಕ, ಬ. ೩೬)
ವೀರವೈರಾಗ್ಯ ನಿಧಿ ಅಲ್ಲಮ ಪ್ರಭುವು ಅನುಭವ ಮಂಟಪಕ್ಕೆ ಗುರುವಾದ. ಧೀರಶರಣ ಮಡಿವಾಳ ಮಾಚಿದೇವ ಮಂಟಪದ ಸೇವೆಗೆ ತನ್ನನ್ನು ತಾನು ಸಮರ್ಪಿಸಿಕೊಂಡನು.
೪೭. ಕುಲದಲ್ಲಿ ಹೊಲೆಯನವ ಹೊಲಬಿನಲಿ ಹೊಲೆಯಿಲ್ಲ
ಹೊಲೆಯ ನೆಲೆ ಬಲ್ಲ ಘನ ಶರಣ ಹರಳಯ್ಯ
ನೆಲಸಿ ಕಲ್ಯಾಣಪುರದೊಳಗೆ || (ಹ. ಹಂ. ೪)
ಗುರು ಬಸವಣ್ಣನವರ ಚರಿತ್ರೆಯಾಗಲಿ, ಕಲ್ಯಾಣ ಕ್ರಾಂತಿಯಾಗಲೀ ಹರಳಯ್ಯನ ಕಥೆ ಹೇಳದೆ ಪೂರ್ಣಗೊಳ್ಳುವುದಿಲ್ಲ. ಹುಟ್ಟಿನಿಂದ ಹೊಲೆಯರವನಾದರೂ, ಹಿಡಿದುದು ಶಿವಮಾರ್ಗ, ಹೊಲೆತನ ವಿರುವುದು ಕುಲಜಾತಿ ವೃತ್ತಿಗಳಲ್ಲಲ್ಲ ನಡೆತೆಯಲ್ಲಿ ಎಂಬುದನ್ನು ಅರಿತ ಹರಳಯ್ಯ ನಿಜ ಶರಣನಾಗಿದ್ದ. ಕಲ್ಯಾಣ ಪುರದಲ್ಲಿ ನೆಲೆ ಸಿದ್ದ.
೪೮. ತನುಮನಧನ ಸವೆಸಿ ಮನೆಯ ಕಾಯಕ ಮಾಡಿ
ಅನುಭಾವಿಯಾದ ಹರಳಯ್ಯ | ಮಂಟಪಕೆ
ಮಣಿಮಾಲೆಯಾದ ಶಿವಮತಕೆ | (ಹ. ಹಂ. ೬)
ತನುಮನಧನಗಳನ್ನು ಗುರುಲಿಂಗಜಂಗಮಕ್ಕೆ ಸಮರ್ಪಿಸಿ, ಮನೆಯ ಉದ್ಯೋಗವಾದ ಚಮ್ಮಾವುಗೆ ಹೊಲಿಯುವ ಕಾಯಕ ಕೈಗೊಂಡು, ಶ್ರೇಷ್ಠ ಅನುಭಾವಿಯಾದ ಹರಳಯ್ಯನು, ಅನುಭವ ಮಂಟಪದ ಶರಣರೆಂಬ ಮಣಿಗಳ ಸಾಲಿಗೆ ಸೇರಿದನು.
೪೯. ಮಡದಿ ಕಲ್ಯಾಣಮ್ಮ ಹಡೆದವ್ವ ಜಂಗಮಕೆ
ಬಿಡದೆ ದಾಸೋಹ ಮಾಡಿದಳು | ಕಲ್ಯಾಣ
ಪಡೆದು ಘನ ಹೆಸರ ನಾಡೊಳಗೆ || (ಹ, ಹಂ. ೭)
ಶರಣ ಹರಳಯ್ಯನ ಮಡದಿ ಕಲ್ಯಾಣಮ್ಮ, ಜಂಗಮ ದಾಸೋಹಿ, ತಾಯಿಯಂತೆ ಜಂಗಮರನ್ನು (ಧರ್ಮ ಪ್ರಚಾರಕನ್ನು) ಬರಮಾಡಿ ಕೊಂಡು ದಾಸೋಹ ಮಾಡುತ್ತಿದ್ದಳು. ಹೀಗೆ ಸತ್ಯ ಶುದ್ಧ ಕಾಯಕ-ನಿತ್ಯ ದಾಸೋಹಗಳಿಂದ ಕಲ್ಯಾಣ ಪಟ್ಟಣವು ಕೀರ್ತಿ ಶಾಲಿಯಾಯಿತು.
೫೦. ಒಂದು ದಿವಸ, ಹರಳಯ್ಯ ತಂದೆ ಬಸವನ ನೆನಸಿ
ವಂದಿಸಲು ಹಾದಿ ಕಾಯುತ್ತ | ಕುಳಿತಿದ್ದ
ಚಂದ ಕಲ್ಯಾಣ ಬೀದಿಯೊಳು || (ಹ. ಹಂ. ೮)
ಒಂದು ದಿವಸ, ಹರಳಯ್ಯನು ಮೆಟ್ಟುಗಳನ್ನು ಮಾರಲು ಊರೊಳಕ್ಕೆ ಹೋಗಿ ಬರುವಾಗ, ಮಹಾಮಂತ್ರಿ ಗುರು ಬಸವಣ್ಣನವರು ಬರುವ ಸೂಚನೆ ಕಂಡು, ವಂದಿಸಬೇಕೆಂದು ಬಯಸಿ ರಾಜ ಮಾರ್ಗದ ಬದಿಯಲ್ಲಿ ಕುಳಿತಿದ್ದ. [ಕಲ್ಯಾಣ ಕ್ರಾಂತಿಯ ಪ್ರಥಮ ಆವೃತ್ತಿಯಲ್ಲಿ ನಾನು ಹೀಗೇ ಬರೆದಿದ್ದೆ. ಗುರು ಬಸವಣ್ಣನವರು ಲಿಂಗದೀಕ್ಷೆ ಹೊಂದಿದ ಶರಣರ ಮನೆಗಳಿಗೆ ಹೋಗಿ ಪ್ರಸಾದ ಸ್ವೀಕರಿಸುವ ಪರಿಪಾಠ ಇಟ್ಟುಕೊಂಡಿದ್ದರಿಂದ (ಉದಾ-ಶಿವನಾಗಮಯ್ಯ, ಡೋಹರ ಕಕ್ಕಯ್ಯ) ಹರಳಯ್ಯನವರ ಮನೆಗೆ ಹೋಗಿ ಬರುವಾಗ ಶರಣು ಶರಣಾರ್ಥಿಯ ಪ್ರಸಂಗ ಬರುವುದು ಔಚಿತ್ಯಪೂರ್ಣವೆಂದು ಹಾಗೆ ಬಳಸುತ್ತಿದ್ದೇನೆ.]
೫೧. ಕಲ್ಯಾಣ ಕೇರಿಯೊಳು ಬಲ್ಲಿದನು ಬಸವೇಶ.
ಸಲ್ಲಿಸುತ ಶರಣು ಶರಣರಿಗೆ | ಬರುವಾಗ
ಅಲ್ಲೇ ಶರಣೆಂದ ಹರಳಯ್ಯ || (ಹ. ಹಂ. ೯)
ಕಲ್ಯಾಣದ ರಾಜಮಾರ್ಗದಲ್ಲಿ ಬಸವಣ್ಣನವರು ಅಶ್ವಾರೂಢರಾಗಿ ಬರುತ್ತಿದ್ದರು. ಅವರು ಎಲ್ಲರಿಗೆ ಶರಣು ಸಲ್ಲಿಸುತ್ತಿದ್ದರು. ಉಳಿದವರೂ ಸಲ್ಲಿಸುತ್ತಿದ್ದರು. ಹೀಗೆ ಪರಸ್ಪರ ಶರಣುಗಳ ವಿನಿ ಮಯ ನಡೆದಿರುವಾಗ ಹರಳಯ್ಯ ಬಸವಣ್ಣನವರಿಗೆ 'ಶರಣು' ಎಂದ.
೫೨. ಶರಣು ಶರಣೈ ಹರಳ ಕರುಣಿರಲಿ ನನ್ನಲ್ಲಿ
ಮರೆಯಬೇಡೆಂದು ಸಾಗಿದನು | ಹರಳಯ್ಯ
ಮರಳಿ ಚಿಂತಿಸುತ ಮನೆ ಕಡೆಗೆ || (ಹ, ಹಂ. ೧೦).
"ಶರಣು ಶರನಾರ್ಥಿ ಹರಳಯ್ಯ. ನನ್ನಲ್ಲಿ ಕರುಣೆ ಇರಲಿ. ನನ್ನನ್ನು ಮರೆಯಬೇಡ.” ಎಂದು ಗುರು ಬಸವಣ್ಣನವರು ನುಡಿದು ಮುಂದಕ್ಕೆ ಸಾಗಿದರು. ಆದರೆ ಹರಳಯ್ಯನ ಮೇಲೆ ಚಿಂತೆಯ ಹೊರೆ ಬಿದ್ದಿತು.
ಪ್ರಧಾನಿಯಾದ ಬಸವಣ್ಣನವರ ಸಂದರ್ಶಕರು ಎಷ್ಟೋ, ಗುರು ಬಸವಣ್ಣನವರ ದರ್ಶನಾರ್ಥಿಗಳೆಷ್ಟೋ. ಅವರೆಲ್ಲರ ಮಧ್ಯದಲ್ಲೂ ಹರಳಯ್ಯನ ಹೆಸರು ನೆನಪು ಹಾರಿಲ್ಲ! ಯಾವ ಗುರುವಿನ ದರ್ಶನಕ್ಕೆ ಅಸಂಖ್ಯಾತ ಜನ ಹಂಬಲಿಸುತ್ತಿರುವರೋ ಅಂಥ ಗುರುವು, ತನ್ನ ಅನುಯಾಯಿಗೆ ಎರಡು ಶರಣುಗಳನ್ನು ಹೇಳುವುದೆ ?
೫೩. ಶರಣೆಂದು ನಾನಂದೆ ಶರಣು ಶರಣೆಂದಾತ
ಶರಣೊಂದು ಮೇಲೆ ಹೊರಿಸಿದನು | ಬಸವನಿಗೆ.
ಶರಣ ನಾ ಹೇಗೆ ತೀರಿಸಲಿ ? (ಹ, ಹೊಂ. ೧)
ನಾನು ಶರಣು ಎಂದು ಒಂದು ಬಾರಿ ಹೇಳಿದೆ. ಆದರೆ ಆತ ಎರಡು ಬಾರಿ ಹೇಳಿದನು. ಹೀಗೆ ಒಂದು ಶರಣಿನ ಸಾಲ (ಭಾರ) ಹೆಚ್ಚಾಯಿತು. ಇದನ್ನು ನಾನು ಹೇಗೆ ತೀರಿಸಲಿ ?
೫೪. ಮಡಿದಿಗಾಗರುಹಿದನು ತಡೆದ ಆ ಕಾರಣವ
ನಡೆ ಸಾಗುಮಾಡು ದಾಸೋಹ | ಪರಸಾದ
ಪಡಕೊಂಡು ಪೂಜೆ ನೀಗಿಸುವ || (ಹ, ಹ೦, ೧೪)
ಬರಲು ತಡವಾಯಿತು ಎಂಬ ಕಾರಣವನ್ನು ಹೇಳಿ, ಜಂಗಮ ದಾಸೋಹ ಪೂರ್ತಿಮಾಡು ಎಂದು, ತಾನೂ ಪೂಜೆ- ಪ್ರಸಾದ ಗಳನ್ನು ಮುಗಿಸಿದನು.
೫೫. ಮಡದಿ ಕಲ್ಯಾಣಮ್ಮ ತೊಡಕು ಬಿಡಿಸಿದಳಾಕೆ
ಗಂಡನೊಂದು ಜೋಡು ಕೆರುಮಾಡಿ | ಬಸವನಿಗೆ
ಒಡೆಯ ಮೆಚ್ಚೆಂದು ಅರ್ಪಿಸಿರಿ || (ಹ. ಹಂ. ೧೫)
(ಕೆರು,ಕೆರಹು = ಪಾದರಕ್ಷೆ)
ಕಲ್ಯಾಣಮ್ಮ ಈ ತೊಡಕನ್ನು ಬಿಡಿಸಿದಳು. ಒಂದು ಜೊತೆ ಅದೂ ರ್ವವಾದ ಕೆರಹುಗಳನ್ನು ಮಾಡಿ ಬಸವಣ್ಣನವರಿಗೆ “ಒಡೆಯಾ ಒಪ್ಪಿಕೊಂಡು ಮೆಚ್ಚು” ಎಂದು ಅರ್ಪಿಸಿ ಬನ್ನಿರಿ ಎಂದಳು.
೫೬. ಮರುದಿನವೆ ಹರಳಯ್ಯ ಕೊರೆದ ಬಲದೊಡಿ ಚರ್ಮ
ಹರನೆಂದು ಮಡದಿಯೆಡದೊಡೆಯ | ತಾ ಕೊಯ್ದು
ಭರನೆ ಹದಮಾಡಿ ಒಣಗಿಸಿದ || (ಹ. ಹಂ. ೧೬)
ತನ್ನ ಬಲದೊಡೆಯ ಮತ್ತು ತನ್ನ ಮಡದಿಯ ಎಡತೊಡೆಯ ಚರ್ಮವನ್ನು ದೇವರ ನಾಮಸ್ಮರಣೆ ಮಾಡುತ್ತ ಕೊಯ್ದು, ಅದನ್ನು ಹದಮಾಡಿ ಒಣಗಿಸಿದನು.
೫೭. ಮಿಸುಣಿಯದೆ ಜರಹಚ್ಚಿ ಹೊಸ ಮುತ್ತು ಪೋಣಿಸಿದ
ಕುಸುರ್ಹೆಣೆದ ರನ್ನ ಮಾಣಿಕದ ಜೋಡುಗಳು
ಮಸಗಿದವು ಚಂದ್ರ-ರವಿಯಂತೆ || (ಹ. ಹಂ.೧೭)
ಮಾನವಚರ್ಮದಿಂದ ಮಾಡಿದ ಜೋಡಿಗೆ ಫಳಫಳನೆ ಹೊಳೆವ ಜರವನ್ನು ಹಚ್ಚಿದರು. ಸುತ್ತಲೂ ಮುತ್ತುಗಳನ್ನು ಪೋಣಿಸಿದರು. ಸುಂದರವಾದ ಕುಸುರಿ ಕೆಲಸ ಮಾಡಿದರು. ರತ್ನ - ಮಾಣಿಕ್ಯದ ಜೊತೆಗಳಂತೆ ಕಾಣುವ ಆ ಜೋಡುಗಳು ಸೂರ್ಯ-ಚಂದ್ರ ರಂತೆ ಹೊಳೆಯತೊಡಗಿದವು.
೫೮. ತುಂಬು ಕಣ್ಣಲಿ ನೋಡಿ ಇಂಬಾತು ಮನಸಂದು
ನಂಬದಲೆ ಹೋದ ಕೈ ಗೆಲಸ | ಕಲ್ಯಾಣಿ
ಅಂದು ಮುಂದಿನ್ನು ಕೆಡಗಾಲ || (ಹ, ಹಂ. ೧೮)
ತಾವು ಮಾಡಿದ ಕೈಕೆಲಸ ನೋಡಿ ತಮಗೇ ಆಶ್ಚರ್ಯವು ಆಯಿತು. ಮನಸ್ಸಿಗೇನೋ ಒಪ್ಪಿತು. ಆದರೆ ಶರಣೆ ಕಲ್ಯಾಣಿಯ ಅಂತರ್ಮನ ಏಕೋ ಇವುಗಳಿಂದ ಕೆಡಗಾಲವಿದೆ ಎಂದು ಹೇಳಿತು.
೫೯. ಮುಂದಿನಾ ಕೆಡಗಾಲ ಇಂದು ನಮಗ್ಯಾಕೆಂದು
ಚೆಂದ ವಸ್ತ್ರದಲ್ಲಿ ಹುದುಗಿಸಿದ | ಜೋಡುಗಳ
ತಂದ ಬಸವೇಶನರಮನೆಗೆ || (ಹ, ಹಂ, ೧೯)
“ಮುಂದೆ ಆಗುವುದರ ಬಗ್ಗೆ ಇಂದೇ ಚಿಂತಿಸುವುದೇಕೆ ? ಶಿವನ ಸಂಕಲ್ಪ ಏನಿದೆಯೊ?" ಎಂದು ಸುಂದರವಾದ ವಸ್ತ್ರದಲ್ಲಿ ಹುದುಗಿಸಿಟ್ಟು, ಬಸವಣ್ಣನವರ ಮನೆಗೆ ಹರಳಯ್ಯ ಬಂದನು.
೬೦. ಕಿಕ್ಕಿರಿದು ಜನ ಬಂದು ಸಕ್ಕರಿಗೆ ಇರುವೆಗಳು
ಮುಕ್ಕಿದವೊ ವಚನ ಅಮೃತಕೆ | ಎಂಬಂತೆ
ಉಕ್ಕಿ ಅರಮನೆಯ ಹೊರಸೂಸಿ || (ಹ. ಹಂ. ೨೦)
ಸಕ್ಕರೆಯ ರಾಶಿಗೆ ಇರುವೆಗಳು ಮುತ್ತಿ, ಸುತ್ತಮುತ್ತ ಹರಿದಾಡುವವೇನೋ ಎಂಬಂತೆ ಬಸವ ಮಹಾಮನೆಯ ವಚನದ ಅಮೃತವ ಕುಡಿಯಲು ಬಂದ ಶರಣರು ಕಿಕ್ಕಿರಿದು ತುಂಬಿ, ಅಲ್ಲೆಲ್ಲಾ ಓಡಾಡುತ್ತಲಿದ್ದರು.
೬೧. ಹೋದ ಹರಳನು ತಡೆದ ಕಾದ ಬಾಗಿಲವಂದು
ದಾದಾಗಲೆಲ್ಲ ಜನರೊಳಗೆ | ಶಿವಶರಣ
ಪಾದರಕ್ಷೆಗಳ ಪೂಜಿಸಿದ || (ಹ, ಹಂ, ೨೧)
ಮುಗ್ಧ ಹರಳಯ್ಯನವರಿಗೆ ಒಳಗೆ ಹೇಗೆ ಹೋಗಬೇಕೋ ತಿಳಿಯ ಲಿಲ್ಲ. ಅಷ್ಟೊಂದು ಜನಸಂದಣಿ ತುಂಬಿತ್ತು. ಆ ಪಾದರಕ್ಷೆಗಳೊಡನೆ ಕಾಯ್ದು ಕುಳಿತ.
೬೨. ಶಿವನಾಣೆ ಬಸವನಿಗೆ ಶಿವಭಕ್ತನರಿಕ್ಯಾಗಿ
ತವಕದಲಿ ಬಂದ ಬಾಗಿಲಕೆ | ಹರಳಯ್ಯ
ಶಿವರೂಪವೆಂದು ನಮಿಸಿದನು || (ಹ, ಹಂ.೨೨)
ಜಂಗಮ ಪ್ರಾಣಿ ಬಸವಣ್ಣನವರ ಅಂತರಂಗ ಮಿಡಿಯಿತು. ಯಾರೋ ತನಗಾಗಿ ಕಾದಿರುವರೆಂದು ಅನ್ನಿಸಿ, ತವಕಗೊಂಡು ಬಾಗಿಲಿಗೆ ಬಂದರು. ಆಗ ಹರಳಯ್ಯನಿಗೆ ಅಪಾರ ಆನಂದವಾಗಿ ಬಸವಮೂರ್ತಿಯಲ್ಲಿ ಶಿವನನ್ನೇ ಕಂಡಂತಾಗಿ ವಂದಿಸಿದನು.
೬೩. ಕಾಣುತಲಿ ಹರಳನನು ಜಾಣನೊಪ್ಪಿದ ಬಸವ
ಪ್ರಾಣ ಬಂದಂತೆ ಬಿಗಿದಪಿ | ಶರಣನಿಗೆ
ಮಾನದೊಳು ಮಾತನಾಡಿಸಿದ || (ಹ. ಹಂ. ೨೩).
ಹರಳಯ್ಯನವರನ್ನು ಕಾಣುತ್ತಲೇ ಬಸವಣ್ಣನವರ ಹೃದಯ ಪುಳಕಿತವಾಯಿತು. ಪ್ರಾಣ ಬಂದಷ್ಟು ಸಂಭ್ರಮವಾಯಿತು. ಆ ಶರಣನನ್ನು ಬಿಗಿದು ಅಪ್ಪಿ, ಗೌರವದಿಂದ ಮಾತನಾಡಿಸಿದರು.
೬೪. ಮುಟ್ಟದಿರು ಬಸವೇಶ ಕೆಟ್ಟ ಹೊಲೆಯನು ನಾನು
ಬಟ್ಟ ಬಯಲಾಗಿ ಹೋಗಲೀ | ನಿಮ್ಮುಂದೆ
ಸುಟ್ಟು ಬೂದ್ಯಾಗಿ ಬೀಳುತಲಿ || ( ಹ. ಹಂ. ೨೪)
ಅಯ್ಯೋ..... ಬಸವೇಶ, ನನ್ನ ನಿಂತು ಮುಟ್ಟಬೇಡ. ನಾನು ಹೊಲೆಯನು, ನಿಮ್ಮ ಎದುರಿಗೆ ನಾನು ಸುಟ್ಟು ಬೂದಿಯಾಗುವುದು ಲೇಸು.
೬೫. ಹೊಲೆಯಲಲ್ಲದೆ ಲೋಕ ತಲೆಯಲ್ಲಿ ಹುಟ್ಟುವುದೆ.
ಹೊಲೆಯ ಎಣಿಸಿದರೆ ತಿಳಿವುಂಟೆ | ಶರಣರಿಗೆ
ಹೋಲಬಳಿದು ಬೇರೆ ಕುಲವುಂಟೆ ? (ಹ. ಹಂ.೨೫)
(ಹರಳಯ್ಯನವರ ಮಾತಿನಲ್ಲಿ ವ್ಯಕ್ತವಾದ ಕೀಳರಿಮೆಯಿಂದ ಬಸವಣ್ಣನವರು ಬಹು ನೊಂದುಕೊಂಡರು) ಹರಳಯ್ಯಾ, ಜಗತ್ತೆಲ್ಲವೂ ಹುಟ್ಟುವುದು ಹೊಲೆಯಲ್ಲೇ ವಿನಾ ತಲೆಯಲ್ಲಲ್ಲ. [ಇಲ್ಲಿ, ಪರ ಮಾತ್ಮನಿಗೆ ತಲೆ, ಭುಜ, ತೊಡೆ, ಪಾದಗಳನ್ನು ಗುರುತಿಸಿ, ಕ್ರಮ ವಾಗಿ, ಅವುಗಳಿಂದ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರರು ಹುಟ್ಟುತ್ತಾರೆ ಎಂಬ ನಂಬಿಕೆಯನ್ನು ಖಂಡಿಸಲಾಗಿದೆ.] ನಿನ್ನಂತಹವರಲ್ಲಿ ಕುಲವನ್ನು ತಿಳಿವು ಇಲ್ಲದವರಷ್ಟೆ ಹುಡುಕಬೇಕು. ಶರಣರು ಎಲ್ಲರೂ ಸತ್ಪಥಗಾಮಿಗಳು ಶರಣರಾದ ಬಳಿಕ ಅವರಲ್ಲಿ ಯಾವ ಕುಲವೂ ಉಳಿದಿರದು.
೬೬. ನೀತಿ ಮಂಟಪದೊಳಗೆ ಭೀತಿ ಶರಣರಿಗುಂಟೆ
ಮಾತಿನಲಿ ಮೊದಲು ನೂರೊಂದು | ಸ್ಥಲಗಳಿಗೆ
ಕಾತಿ ನೀಯೆಂದ ಹರಳನಿಗೆ || (ಹ, ಹಂ, ೨೬)
“ಹರಳಯ್ಯ, ಅನುಭವ ಮಂಟಪವು ನೀತಿ ಮಂಟಪ ; ಏಕೆಂದರೆ ಇಲ್ಲಿ ನೀತಿ-ಸಾಧನೆಗಳೇ ವ್ಯಕ್ತಿತ್ವವನ್ನು ಅಳೆಯುವ ಒರೆಗಲ್ಲು. ಇಂಥಲ್ಲಿ ನಿನ್ನಂತಹ ಶರಣ ಭೀತಿಪಡಬಾರದು. ನೂರೊಂದು ಸ್ಥಲಗಳ ಸಾಧಿಸಿದವನೇ ನಿಜ ಶರಣ ಅಂಥ ಸಾಧನೆಯಲ್ಲಿ ನೀನೇ ಮುಂದು ಇರುವೆಯಲ್ಲವೆ ?'' ಎಂದು ಬಸವಣ್ಣನವರು ಹರಳಯ್ಯನನ್ನು ಒಳಗೆ ಕರೆದುಕೊಂಡು ಹೋಗುವರು.
೬೭. ತಂದೆ ಬಸವನೆ ಕೇಳು ತಂದಿರುವೆನೀ ಜೋಡ
ಹೊಂದುವವು ನಿಮ್ಮ ಅಡಿಗಳಿಗೆ | ಸಲ್ಲಿಸಿದೆ
ಎಂದು ಕೊಡಹೋದ ಬಸವನಿಗೆ || (ಹ. ಹಂ.೨೭)
ಅಪ್ಪ ಬಸವೇಶಾ, ನೋಡು ಎಂಥ ಸುಂದರವಾದ ಜೋಡಗಳಿವು. ನಿಮ್ಮ ಪಾದಗಳಿಗೆ ಚೆನ್ನಾಗಿ ಹೊಂದುವವು. ತೆಗೆದುಕೊಳ್ಳಿ. ( ಬಹುಶಃ ಇವು ಮಾನವರ ಚರ್ಮದಿಂದ ಆಗಿರುವವು ಎಂದು ಉಹಿಸಿ, ಬಸವಣ್ಣನವರು ಕೇಳಿ ಆಘಾತಕ್ಕೊಳಗಾಗುವರು.)
೬೮. ಶಿವಕಳೆಯ ಈ ಜೋಡು ಜವನ ದಾಡೆಗಳಯ್ಯ
ಭವದೊಳಗೆ ಮೆಡುವ ಜನವುಂಟೆ | ಹರಳಯ್ಯ
ಶಿವಗೊಪ್ಪಿಸೆನ್ನ ಕ್ಷಮಿಸೆಂದ || (ಹ. ಹಂ. ೨೮)
ಶಿವತೇಜಸ್ಸಿನಿಂದ ಕೂಡಿರುವ ಈ ಚಮ್ಮಾವುಗೆಗಳು ಯಮನ ಕೋರೆಹಲ್ಲುಗಳಂತೆ. ನಿಮ್ಮಂತಹ ಶರಣರ ಪವಿತ್ರ ಚರ್ಮದಿಂದ ಮಾಡಿದ ಈ ಜೋಡುಗಳನ್ನು ಜಗತ್ತಿನಲ್ಲಿ ಮೆಡಬಲ್ಲ ಜನರು ಯಾರೂ ಇಲ್ಲ. ಹರಳಯ್ಯ, ಪರಮಾತ್ಮನಿಗೆ ಮಾತ್ರ ಮೀಸಲಾಗ ಬೇಕಾದವು ಇವು. ನೀನು ಕೊಟ್ಟ ವಸ್ತುಗಳನ್ನು ಸ್ವೀಕರಿಸಬಾರದೆಂಬ ಭಾವದಿಂದ ನಾನು ಹೇಳುತ್ತಿಲ್ಲ. ನೀನು ಘನಮಹಿಮ. ನಿನ್ನಂತಹವನ ಮೈ ಚರ್ಮವನ್ನು ಮೆಟ್ಟುವುದು ಉದ್ಧಟತನವಾದೀತು. ಆ ಉದ್ಧಟತನ ಮಾಡಲಾರೆ ; ನನ್ನನ್ನು ಹೃತೂರ್ವಕ ವಾಗಿ ಕ್ಷಮಿಸು.
೬೯. ಹರಳ ಕೇಳಿ ನುಡಿಯ ಮರಳಿದನು ಮನೆಕಡೆಗೆ.
ಶರಣೆಂದು ತಿರುಗಿ ಬಸವಂಗೆ | ಹಾದಿಯಲಿ
ತರುಬಿ ಕೇಳಿದನು ಮಧುವರಸ || (ಹ, ಹಂ, ೨೯)
ಹರಳಯ್ಯ ಏನೂ ಹೇಳಲಾರದಾದ, ಬಸವಣ್ಣನವರಿಗೆ ವಂದಿಸಿ, ಮನೆಗೆ ಹೊರಟನು. ಆ ಚಮ್ಮಾವುಗೆಗಳನ್ನು ಭಕ್ತಿಯಿಂದ ಹೊತ್ತು ಬರುವಾಗ ದಾರಿಯಲ್ಲಿ ಮಧುವರಸನು ತಡೆದು ನಿಲ್ಲಿಸಿದನು.
೭೦. ಏನು ಹರಳನೆ ಹೇಳು, ಏನು ಬಗಲೊಳು ಗಂಟು
ಏನು ಎಲ್ಲಿಂದ ಬರವಾಯು | ಹೇಳೆನಗೆ
ಏನು ತೋರೆನಗೆ ಬಗೆ ಏಕೆ ||
ಏನು ಹರಳಾ, ಬಗಲಲ್ಲಿ ಗಂಟನ್ನು ಇಟ್ಟುಕೊಂಡು ಎಲ್ಲಿಂದ ಬರುತ್ತಲಿರುವೆ. ಅದರಲ್ಲಿ ಇರುವುದೇನು ತೋರಿಸು ?
೭೧. ಜುಲುಮೆ ಮಾಡಲು ಬೇಡ ಮಲುವು ಜೀವಕೆ ನಿನಗೆ
ಹೊಲಬು ಹೇಳುವೆನು ಬೇಡೆಂದ | ಮಧುವರಸಾ
ಹೊಲಿದ ಜೋಡೆಂದ ಬಸವನಿಗೆ || (ಹ. ಹಂ. ೩೧)
ಮಧುವರಸರೇ, ಒತ್ತಾಯ ಮಾಡಬೇಡಿರಿ. ಅದರಿಂದ ಜೀವಕ್ಕೆ ಬಾಧೆಯುಂಟಾಗುವುದು. ನಾನು ಬರುತ್ತಿರುವುದು ಅಪ್ಪ ಬಸವಣ್ಣನವರ ಮಹಾಮನೆಯಿಂದ, ಬಸವಣ್ಣನವರಿಗಾಗಿ ಈ ಜೋಡುಗಳನ್ನು ಒಯ್ದಿದ್ದೆ. ಅವರು ಒಂದು ಕಾರಣಕ್ಕಾಗಿ ನಿರಾಕರಿಸಿದರು.
೭೨. ಬಡವ ಬಸವೇಶ್ವರನು ಕೊಡಲಾರ ಲೋಭದಲಿ
ಕೊಡುವೆ ನಾ ಬೆಲೆಯ ಬೇಡಿದುದ ತೋರಿಸೆಲೆ
ತಡಮಾಡದೆನಗೆ ಜೋಡುಗಳ || (ಹ. ಹಂ. ೩೩)
ಬಹುಶಃ ಬಸವೇಶ್ವರನಿಗೆ ಬಡತನವಿರಬಹುದು ಅಥವಾ ಆತ ಲೋಭಿಯಾಗಿರಬೇಕು. ನಿನ್ನ ವಸ್ತುಗಳಿಗೆ ಸರಿಯಾದ ಬೆಲೆ ಕೊಟ್ಟಿರಕ್ಕಿಲ್ಲ. ನೀನು ಕೇಳಿದಷ್ಟು ಬೆಲೆಯನ್ನು ನಾನು ಕೊಟ್ಟರಾಯಿತಲ್ಲೊ? ಸಮಯವನ್ನು ಹಾಳುಮಾಡಬೇಡ ತೋರಿಸು.
೭೩. ನೋಡಿ ಸೋಜಿಗವಾದ ಜೋಡ ತೋರಿಸಲಾತ
ಮೂಡಿ ಕಳೆ ಮುಖಕೆ ಮಧುವರಸ | ಒಂದ್ಹೆಜ್ಜೆ
ನೋಡಿ ಮೆಡಲಿಕ್ಕೆ ಕಾಲಿಟ್ಟ || (ಹ. ಹಂ. ೩೪)
ಹರಳಯ್ಯ ಆ ಜೋಡುಗಳನ್ನು ತೋರಿಸುತ್ತಲೇ ಮಧುವರಸನು ಆಶ್ಚರ್ಯದಿಂದ ಮೂಕನಾದ. ಮುಖವು ಆನಂದದಿಂದ ಮಿನುಗಿತು. ಅಳತೆಯು ಹೇಗಿದೆಯೋ ಎಂದು ನೋಡಲು ಕಾಲುಗಳನ್ನು ಇಟ್ಟ.
೭೪. ಹರಳ ಮಾಡಿದ ಜೋಡು ನರಪಾಪಿ ಮಧುವರಸ
ಜರಿದು ಶರಣನಿಗೆ ತಾ ಮೆಡಲು | ಮೈ ತುಂಬಾ
ಉರಿತಾಪವೆದ್ದು ಕೂಗಾಡಿ || (ಹ. ಹಂ. ೩೫)
ಶರಣ ಹರಳಯ್ಯನಂತಹ ಮಹಾತ್ಯ ಮಾಡಿದ ಆ ಪವಿತ್ರ ಚಮ್ಮಾವುಗೆಗಳನ್ನು ಬೇಡವೆಂದರೂ ಕೇಳದೆ, ಶರಣರನ್ನು ಜರಿಯುತ್ತ ಅವಹೇಳನ ಮಾಡುತ್ತ ಮೆಟ್ಟಲು, ಮೈತುಂಬ ಉರಿತಾಪ ಎದ್ದು ಕೂಗಾಡಲು ಆರಂಭಿಸಿದನು.
೭೫. ಸುಣ್ಣ ಕುದಿಗುಣಿಯೊಳಗೆ ಹಣ್ಣಾಗಿ ಬಂದಂತೆ
ಎಣ್ಣೆ ಬಲು ಕಾಸಿ ಕಣ್ಣೊಳಗೆ ಸುರಿದಂತೆ |
ಡೊಣ್ಣೆ ಮುಳ್ಳುಗಳು ನೆಟ್ಟಂತೆ || (ಹ. ಹಂ. ೩೬)
ಒಂದು ಗುಂಡಿಯೊಳಕ್ಕೆ ಹೊಸ ಸುಣ್ಣವನ್ನು ಹಾಕಿ, ನೀರು ಹಾಕಿದರೆ ಅದು ಕೊತಕೊತನೆ ಕುದಿಯಲು ಆರಂಭಿಸುತ್ತದೆ. ಅದರಲ್ಲಿ ಜಾರಿ ಬಿದ್ದು ಮನುಷ್ಯನು ಬೆಂದು ಹೋದಂತೆ, ಎಣ್ಣೆಯನ್ನು ಕಾಸಿ ಕಣ್ಣಿನಲ್ಲಿ ಸುರಿದರೆ ಯಾವ ಸಂಕಟವಾದೀತೋ ಹಾಗೆ, ಡೊಣ್ಣೆ ಮುಳ್ಳುಗಳು ದೇಹಕ್ಕೆ ಚುಚ್ಚಿದರೆ ಹೇಗೆ ನೋವಾದೀತೋ ಅಷ್ಟು ನೋವು ಮಧುವರಸನಿಗೆ ಆಗತೊಡಗಿತು.
೭೬. ಉರಿಯುತಿದೆ ಮೈತುಂಬ ಪರಿಹರಿಪರಾರುಂಟೆ?
ಹರಳ ಕೈ ಮುಗಿವೆ ಹೇಳೆನಗೆ | ಮಧುವರಸರ
ಹರಭಕ್ತ ಬಸವ ಮಂತ್ರಂದ | (ಹ, ಹಂ. ೩೬).
“ಮೈಯೆಲ್ಲ ಉರಿ-ತಾಪ, ತಾಳಲಾರೆನು, ಹರಳಾ, ಕೈ ಮುಗಿದು ಕೇಳುವೆ, ಈ ಬಾಧೆಯನ್ನು ಪರಿಹರಿಸುವವರು ಯಾರಾದರು ಉಂಟೆ ?'' ಎಂದು ಮಧುವರಸ ಕೇಳಿದನು. ಗುರು ಬಸವಣ್ಣ ನವರನ್ನು ಈ ಬಗ್ಗೆ ಕೇಳು ಎಂದು ಹರಳಯ್ಯನು ಹೇಳುವನು.
೭೭. ತೆರಳಿದನು ಮನೆ ಕಡೆಗೆ ಹರಳ ಶಿವಶಿವನೆಂದು
ನರಳುತಲಿ ಬಿದ್ದ ಮಧುವರಸ | ಮನೆಯೊಳಗೆ
ಕರಗಿತಾ ಕರುಳು ತಾಯಿಯದು || (ಹ. ಹಂ. ೩೯).
ಹರಳಯ್ಯನು ಶಿವಧ್ಯಾನವನ್ನು ಮಾಡುತ್ತ ಮನೆ ಕಡೆಗೆ ಹೊರಟ, ಮಧುವರಸನು ನರಳುತ್ತಾ ಮನೆಗೆ ಬಂದು, ಒದ್ದಾಡತೊಡಗಿದ. ಆಗ ಆತನ ತಾಯಿಯ ಕರುಳು ಮರುಗಿ, ಕರಗಿತು.
೭೮. ಹರಳನಾಡಿದ ಮಾತು ಕರುಣಿ ತಾಯಿಯು ಕೇಳಿ
ಥರಥರನೆ ಅಂಜಿ ನಡೆತಂದು ನಮಿಸಿದಳು
ಹರಭಕ್ತ ಬಸವ ದಯನೀಡು || (ಹ. ಹಂ. ೩೯)
ಮಧುವರಸನು, ಹರಳಯ್ಯನು ಹೇಳಿದ ಮಾತನ್ನು ತಾಯಿಗೆ ತಿಳಿಸಿದ. ಆಕೆ ಆಗಿರುವ ಪ್ರಮಾದವನ್ನು ಗಣಿಸಿ, ಥರಥರನೆ ಅಂಜಿ ನಡುಗಿದಳು. ಬಸವಣ್ಣನವರ ಬಳಿಗೆ ಬಂದು ನಮಿಸಿ "ಬಸವಣ್ಣಾ, ದಯೆ ತೋರು'' ಎಂದಳು.
೭೯. ಸೆರಗೊಡ್ಡಿ ಬೇಡುವೆನು ಕರುಣನಿಧಿ ಸಲುಹಯ್ಯ
ತರುಣ ಮಧುವರಸ ಸಾಯುವನು | ಬಸವೇಶ
ಹರಸೆಂದು ತಾಯಿ ಕೈಮುಗಿದು || (ಹ, ಹಂ. ೪೦)
ಕರುಣನಿಧಿ ಬಸವೇಶಾ ಸಲಹು, ತರುಣನಾದ ಮಧುವರಸನು ಸಾಯುತ್ತಾನೆ. ನೀನು ಹರಸಿ, ಆಶೀರ್ವದಿಸಿ ಆತನನ್ನು ರಕ್ಷಿಸು ಎಂದಳು.
೮೦. ನೀರ ಮಿಂದಲು ಹೇಳು ಆರು ತಿಂಗಳ ತನಕ
ಮೀರಿ ಹರನಾಮ ಭಜಿಸಿದರೆ | ಈ ಪಾಪ
ತೀರಿ ಕುಂದುವದು ಉರಿತಾಪ || (ಹ. ಹಂ. ೪೧).
ಸ್ನಾನವನ್ನು ಮಾಡಲಿ, ಆರು ತಿಂಗಳ ತನಕ ಹರನಾಮವನ್ನು ಭಜಿಸಲಿ, ಈ ಪಾಪವು ಖಂಡಿತಾ ಕರಗಿ, ಉರಿತಾಪ ಆರುವುವು. (ಇಲ್ಲಿ ಏಕೋ ನಿಜಸಂಗತಿ ಹೇಳಲು ಜನಪದ ಕವಿಗಳು ಸಂಕೋಚ ಪಟ್ಟಿದ್ದಾರೆ. “ನೀರಿನಿಂದ ಸ್ನಾನಮಾಡಲು ಹೇಳು.” ಎಂದು ಬಸವಣ್ಣನವರು ಬ್ರಾಹ್ಮಣನೊಬ್ಬನಿಗೆ ಹೇಳುವ ಅಗತ್ಯವೇ ಇರಲಿಲ್ಲ. ಏಕೆಂದರೆ ಅವರು ದಿನನಿತ್ಯವೂ ಸ್ನಾನ ಮಾಡೇ ಮಾಡು ತಾರೆ. “ಯಾವ ನೀರಿನಲ್ಲಿ ಮೀಯಬೇಕು ?'' ಎಂಬುದು ಮುಖ್ಯ ವಿಷಯ. ಇನ್ನಿತರ ದಾಖಲೆಗಳ ಪ್ರಕಾರ 'ಶರಣ ಹರಳಯ್ಯನು ಯಾವ ಕರಿಯಬಾನೆಯಲ್ಲಿ ಪವಿತ್ರ ಚಮ್ಮಾವುಗೆ ಮಾಡುವಾಗ ಅವುಗಳನ್ನು ಎದ್ದಿದ್ದನೋ ಆ ನೀರಿನಿಂದ ಸ್ನಾನಮಾಡಬೇಕು.'' ಎಂದು ಬಸವಣ್ಣನವರು ಹೇಳಿದರು. ಚರ್ಮವನ್ನು ಹದಮಾಡಲು ಒಂದು ಗುಂಡಿಯಲ್ಲಿ ನೆನೆಹಾಕುತ್ತಾರೆ. ಆ ನೀರನ್ನು ತಂದು ಸ್ನಾನಮಾಡಬೇಕು. ಎಂದು ಹೇಳಿದರು ಎಂದೂ ಪ್ರತೀತಿ ಇದೆ.
ಬಸವ ಕಲ್ಯಾಣದ ಹತ್ತಿರ (ಆಗಿನ ಕಾಲದಲ್ಲಿ ನಗರದ ಒಂದು ಭಾಗವೇ ಆಗಿದ್ದ) ಹೆದ್ದಾರಿಯ ಬದಿಗೆ ಉಮಾಪುರ ಎಂಬ ಗ್ರಾಮವಿದೆ. ಅಲ್ಲಿ ಹರಳಯ್ಯನ ಮಂಟಪವಿದೆ. ಅದು ಹರಳಯ್ಯ ನವರಿಗೆ ಸೇರಿತ್ತು ಎನ್ನಲಾದ ಜಮೀನಿನಲ್ಲಿ ಇದೆ. ಈಗ ಊರಿನ ಗೌಡರ ಒಡೆತನದಲ್ಲಿದೆ. ಅದರ ಮಗ್ಗುಲಲ್ಲಿ ಎರಡು ಒರತೆಗಳಿವೆ. ಒಂದು ಕುಡಿಯುವ ನೀರಿಗಾಗಿ, ಇನ್ನೊಂದು ಚರ್ಮ ಹದಮಾಡಲಿಕ್ಕಾಗಿ ಇದ್ದುದು ಎಂದು ಊಹಿಸಲು ಸಾಧ್ಯವಿದೆ. ಜನಪದ ತ್ರಿಪದಿ ಹೀಗೆ ಹೇಳುತ್ತದೆ.
೮೧. ಕಾರಜೋಳದ ಮುಂದೆ ಯಾರು ನೆಲೆಸಿದರಯ್ಯ?
ಮಾರಹರ ಭಕ್ತ ಹರಳಯ್ಯ | ತೋಡಿರುವ
ನೀರೊರತಿ ಸಾಕ್ಷಿ ಯುಗಯುಗಕೆ || (ಹ. ಹಂ. ೨)
(ಈಗಿನ ಉಮಾಪುರಕ್ಕೆ ಆಗ ಕಾರಜೋಳ ಎಂಬ ಹೆಸರಿದ್ದರೂ ಇದ್ದಿರಬಹುದು.) ಕಾರಜೋಳ ಎಂಬ ಊರಿನ ಮುಂದೆ ಯಾರು ವಾಸವಾಗಿದ್ದರು ? ಮಾರಹರ ಭಕ್ತ ಹರಳಯ್ಯನೇ ಅಲ್ಲಿದ್ದವನು. ಆತ ತೋಡಿರುವ ನೀರಿನ ಒರತೆಯೇ ಯುಗಯುಗಕ್ಕೂ ಸಾಕ್ಷಿಯಾಗಿ ನಿಂತಿದೆ.
೮೧. ಹರಳ ಬಳಸಿದ ನೀರು ಹರಿದು ಬಚ್ಚಲಗುಂಡಿ
ಮೆರೆಯುವುದು ಇಂದು ಕಲ್ಯಾಣ ಕೇರಿಯೊಳು
ಹರಳಯ್ಯ ಗುಂಡಿ ಶಿವತೀರ್ಥ II (ಹ. ಹಂ. ೪೬).
ಹರಳಯ್ಯನವರು ಬಳಸುತ್ತಿದ್ದ ನೀರು ಹೋಗಿ ಹರಿದು ನಿಂತಿತ್ತು, ಕಲ್ಯಾಣ ಕೇರಿಯೊಳು ಶಿವತೀರ್ಥದಂತಿತ್ತು.
೮೨. ಶರಣ ಹರಳನ ಗುಂಡಿ ಮರಣದಲಿ ಅಮೃತವು
ಅರಿತು ಮಾದೇವಿ ಶಿವನೆಂದು | ಮನದೊಳಗೆ
ಹೊರತೇನು ಲೋಕ ಶರಣರಿಗೆ || (ಹ, ಹಂ. ೪೭).
ಮಧುವರಸರ ಮನೆಯಲ್ಲಿ ಕೆಲಸಕ್ಕಿದ್ದ ಆಳು, ಮಾದೇವಿ ಶಿವಭಕ್ಕೆ ; ಶಿವಶರಣರ ಬಗ್ಗೆ ಭಕ್ತಿ ಅಭಿಮಾನ ಉಳ್ಳವಳು.
(ಈ ಜಾನಪದ ಕತೆಯಲ್ಲಿ ಆಕೆ ಆಕಸ್ಮಿಕವಾಗಿ ನೀರು ತರುವಳು. ದಿನಾಲೂ ಕೆರೆಯ ನೀರನ್ನು ತರುತ್ತಿದ್ದಳು. ಅಂದು ಓಣಿಯಲ್ಲಿ ಡಂಬರಾಟ ನಡೆದಿತ್ತು. ಕುತೂಹಲಗೊಂಡು ನೋಡುತ್ತ ನಿಂತಳು. ಕತ್ತಲಾಯಿತು. ಇನ್ನು ಕತ್ತಲಲ್ಲಿ ಕೆರೆಗೆ ಹೇಗೆ ಹೋಗುವುದು ಎಂದು ಸಮೀಪದಲ್ಲಿ ಇದ್ದ ಹರಳಯ್ಯನ ಗುಂಡಿಯಿಂದ ನೀರನ್ನು ತಂದಳು. ಪದ್ಯ 42 -44, ಈ ನಿರೂಪಣೆ ಅಷ್ಟೊಂದು ಸೂಕ್ತವೆನಿಸದು. ಸಾಮಾನ್ಯವಾಗಿ ಅಸ್ಪೃಶ್ಯರ ಕೇರಿಗಳು ಊರಹೊರಗೆ ಇರುತ್ತಿದ್ದವೇ ವಿನಾ ಕೆರೆಗೆ ಹೋಗಿ ನೀರು ತರುವ ಮಾರ್ಗದಲ್ಲಲ್ಲ. ಆದ್ದರಿಂದ ಮಧುವರಸನ ಸಂಕಟ ನೋಡಲಾರದೆ, ಅವನ ಗಮನಕ್ಕೆ ತರದೆ ಅವನ ತಾಯಿಯಾಗಲೀ, ಮಗಳಾಗಲೀ ಅಥವಾ ಅವರ ಸಲಹೆಯಂತೆ ಅವರ ಮನೆಯ ಕೆಲ ಸದಾಕೆಯಾಗಲೀ ಹೋಗಿ ನೀರನ್ನು ತಂದಿರುವ ಸಾಧ್ಯತೆಯೇ ಹೆಚ್ಚು.)
೮೩. ಸುತ್ತ ನೋಡುತ ತಿರುಗಿ ಮತ್ತೆ ಅಗ್ಗಣಿ ತುಂಬಿ
ಚಿತ್ರದಲ್ಲಿ ನಡುಗಿ ಹೆಣ್ಣೆದೆಯ | ಮಾದೇವಿ
ಹೊತ್ತೊಯ್ದು ಹರವಿ ತುಂಬಿದಳು|| (ಹ.ಹಂ.೪೮)
ಯಾರಾದರೂ ಈ ಕೇರಿಯಲ್ಲಿ ಬಂದುದನ್ನು ನೋಡಿದರೋ ಎಂದು ಹೆದರುತ್ತ, ಹೆಣ್ಣೆದೆಯ ಮಾದೇವಿ ಸುತ್ತ ಮುತ್ತ ನೋಡುತ್ತ ನೀರನ್ನು ತುಂಬಿಕೊಂಡು ಹೋಗಿ ಮನೆಯ ಹಂಡೆಯಲ್ಲಿ ತುಂಬಿಸಿದಳು.
೮೪. ಹರಳ ಬಳಸಿದ ನೀರ ನೆರೆನಿಂತ ಮಡುವಿಂದ
ಮರೆತು ತಂದೆಂದು ಎರೆವಾಗ | ಮನದೊಳಗೆ
ಹರನ ಮಾದೇವಿ ಭಜಿಸಿದಳು. || (ಹ, ಹಂ. ೪೯).
ಹರಳಯ್ಯನವರು ಬಳಸಿ ಮಡುವಾಗಿ ನಿಂತಿದ್ದ ಸ್ಥಳದಿಂದ ಈ ನೀರನ್ನು ತಂದುಬಿಟ್ಟೆನಲ್ಲ ಎಂದು ಅವಳ ಮನಸ್ಸು ಚಟಪಟಿಸುತ್ತಿತ್ತು ಏನೂ ಬೈಯದೆ ಇರಲಿ ಎಂದು ದೇವರನ್ನು ಮನದಲ್ಲೇ ಪ್ರಾರ್ಥಿಸುತ್ತಿದ್ದಳು..
೮೫. ಕಳೆ ಬಂತು ಮೈತುಂಬ ಮಳೆಯಾದ ಬೆಳೆಯಂತೆ
ಅಳಿಯಲು ಉರಿತಾಪ ಮಧುವರಸ | ಕರೆಕಳಿಸಿ
ಅಳುಕದಲೆ ಹೇಳು ಮಾದೇವಿ || (ಹ. ಹಂ. ೫೦)
ಸ್ನಾನಮಾಡುತ್ತಲೇ ಮಧುವರಸನ ಮೈಯಲ್ಲಿ ಕಾಂತಿಯುಂಟಾ ಯಿತು, ಮಳೆ ಬಂದಾಗ ಬೆಳೆಯು ಕಳೆ ಏರುವಂತೆ ಉರಿತಾಪ ಅಳಿಯಿತು, ಆಶ್ಚರ್ಯಗೊಂಡ ಮಧುವರಸ ಮಹಾದೇವಿಯನ್ನು ಕರೆದು, 'ಅಂಜದೆ ಅಳುಕದೆ ಹೇಳು; ನೀರನ್ನು ಎಲ್ಲಿಂದ ತಂದೆ ಎಂಬುದನ್ನು' ಎಂದ.
೮೬. ಇಂದು ತಂದಿರೊ ನೀರು ಮಿಂದಲಳಿಯಿತು ತಾಪ
ತಂದ ಕೆರೆಭಾವಿ ಹೇಳೆನಗೆ | ಹೇಳಿದಳು.
ತಂದೆ ಹರಳಯ್ಯ ಗುಂಡಿಯಲಿ (ಹ, ಹಂ. ೫೧).
''ಇವತ್ತು ತಂದ ನೀರಿನಿಂದ ಸ್ನಾನ ಮಾಡುತ್ತಲೇ ನನ್ನ ತಾಪ ಆರಿ ಹೋಯಿತು. ಯಾವ ಕೆರೆಭಾವಿಯಿಂದ ನೀರನ್ನು ತಂದಿರುವೆ ತಡಮಾಡದೆ ಹೇಳು.” ಎಂದಾಗ ಹರಳಯ್ಯನ ಗುಂಡಿಯಿಂದ ತಂದೆ ಎಂದು ಸೇವಕಿ ಹೇಳುತ್ತಾಳೆ.
೯೦. ಏನ ಹೇಳುವೆ ಶರಣಿ ಜ್ಞಾನ ತಪ್ಪಿತೆ ನಿನಗೆ
ಕಾಣುದಕೆ ಹರಳ ಹೊಲೆಯರವ | ಅವಮಿಂದ
ಘಾಣ ನೀರಿಂದ ಗುಣವಾಯ್ತಿ ? (ಹ. ಹಂ. ೫೨)
“ಎಂತಹ ಮಾತುಗಳನ್ನು ಆಡುತ್ತಿರುವೆ. ಆತ ಹೊಲೆಯರವನು. ಆತ ಮಿಂದು, ಹರಿದ ಕೊಳಕು ನೀರಿಂದ ಗುಣವಾಯಿತೆ ?'' (ಎಂಥ ಸೋಜಿಗದ ಸಂಗತಿ)
೯೧. ಎಂಥ ಶರಣನು ಹರನೆ ಎಂಥ ಭಕ್ತನು ಹರಳ
ಎಂಥ ಶಿವಕುಲವು ಜಗದೊಳಗೆ | ಮಾದೇವಿ
ಅಂಥ ಶಿವಕುಲಕೆ ಸೇರುವೆನು || (ಹ. ಹಂ. ೫೩)
ಪರಮಾತ್ಮಾ ಹರಳಯ್ಯನು ಎಂಥಾ ಶರಣ, ಎಂಥ ಭಕ್ತನು? ಜಗತ್ತಿನಲ್ಲಿ ಎಷ್ಟು ಮಹತ್ವಪೂರ್ಣವಾದುದು ಈ ಶಿವಕುಲ. ಮಾದೇವಿ ನಾನೂ ಸಹ ಅಂಥ ಶಿವಕುಲವನ್ನು ಸೇರಿಕೊಳ್ಳುವೆನು.
೯೨. ಶಿವಭಕ್ತಿ, ಶಿವಪೂಜೆ ಭವತಾಪ ಕಳೆಯುವದು
ಸವೆಸಲೇಬೇಕು ಈ ದೇಹ 1 ಈ ಭವಿಗೆ
ಶಿವದೀಕ್ಷೆ ಈಯೋ ಹರಳಯ್ಯ || (ಹ. ಹಂ. ೫೪).
“ಶಿವನಲ್ಲಿ ಅನನ್ಯವಾದ ಭಕ್ತಿ, ಶಿವನ ನಿರಂತರ ಪೂಜೆ ಭವತಾಪ ವನ್ನು ಕಳೆಯುತ್ತದೆ. ಅಂತಹ ಪವಿತ್ರ ಕೃತಿಗಳಲ್ಲಿ ಈ ದೇಹ ವನ್ನು ಸವೆಸಲೇಬೇಕಾಗುತ್ತದೆ. ಆದ್ದರಿಂದ ಈ ಭವಿಗೆ ಶಿವದೀಕ್ಷೆ ನೀಡಿ ಉದ್ಧರಿಸು ಹರಳಯ್ಯ'' ಎಂದು ಮಧುವರಸನು ಬೇಡಿ ಕೊಳ್ಳುತ್ತಾನೆ. ಈ ಮಾತು ಹರಳಯ್ಯನಿಗೆ ಆಶ್ಚರ್ಯವನ್ನು ಉಂಟು ಮಾಡಿರಲೂ ಸಾಕು.
೯೩. ಎನ್ನುತಲಿ ಮಧುವರಸ ಎನ್ನುತಾ ರಾಗದಲಿ
ಭಿನ್ನ ಭೇದಳಿದು ನಡೆತಂದು | ಮಗಳನ್ನು
ನಿನ್ನ ಮಗವರಗೆ ಮಗಳೀವೆ || (ಹ, ಹಂ. ೫೫).
ಹೀಗೆ ಮಧುವರಸ ಪ್ರೀತಿಯಿಂದ ನುಡಿದು, ''ಪೂರ್ವಾಶ್ರಮದ ಜಾತಿಗಳು ಏನೇ ಇರಲಿ, ಎಲ್ಲ ಭೇದಗಳನ್ನು ಮರೆತು ನಾವು ಪರಸ್ಪರ ಬೀಗತನ ಮಾಡೋಣ. ನಿನ್ನ ಮಗನಿಗೆ ನನ್ನ ಮಗಳನ್ನು ಕೊಡುವೆ.' ಎನ್ನುತ್ತಾನೆ. ಈಗ ಹರಳಯ್ಯ ನಿಜಕ್ಕೂ ದಿಗ್ಧಾಂತ ನಾಗಿರಲೂ ಸಾಕು. ಎಂತಹ ವಿಚಿತ್ರ ಬದಲಾವಣೆ ಮಧುವರಸ ರಲ್ಲಿ ?! “ಅಯ್ಯೋ, ಮಧುವರಸರೇ ಎಂತಹ ಆಲೋಚನೆ ನಿಮ್ಮದು. ಇದಕ್ಕೆ ವೇದಶಾಸ್ತ್ರಗಳ ಅನುಮತಿ ದೊರಕೀತೆ? ನೀವು ಹಾರುವರು. ನಿಮ್ಮ ಜಾತಿ ಬಾಂಧವರು ಏನು ಅಂದಾರು ?!” ಎಂದಿರಲೂ ಸಾಕು.
೯೪, ಶಿವಲಿಂಗ ನೆನಸಿದರೆ ಶಿವಪದವೆ ದೊರಕುವುದು
ಭವದೊಳಗೆ ನೋಡು ವೇದಗಳು | ಹಾರುವರು
ರವಿಕೆ ಬಿಗಿದುಟ್ಟ ಗೊಂಬಿಗಳು | (ಮೇ ಕೇ. ೨೩).
ಯಾರಾದರೇನು ಧರ್ಮ ಸಂಸ್ಕಾರ ಹೊಂದಿದ ಬಳಿಕ ಎಲ್ಲರೂ ಸಮಾನರು. ಶಿವಲಿಂಗವನ್ನೋಲಿದು ಧರಿಸಿ ಪೂಜಿಸಿದರೆ ಎಲ್ಲರಿಗೂ ಶಿವಪದ ಪ್ರಾಪ್ತಿ, ಧರ್ಮಶಾಸ್ತ್ರಗಳನ್ನು ಅತಿಯಾಗಿ ನಂಬಿ ಬಹಳ ಪರಿಶ್ರಮಕ್ಕೆ ಒಳಗಾಗಿರುವ ಹಾರುವರು ವೇದಗಳು ಎನ್ನುವ ಬಿಗಿ ರವಿಕೆಗಳನ್ನು ತೊಟ್ಟ ಗೊಂಬೆಗಳಂತೆ ಇದ್ದಾರೆ. (ಗೊಂಬೆಗಳು ಎಂಬ ಪದ ಯಾಂತ್ರಿಕವಾಗಿ ಅನುಸರಿಸುವವರು ಎಂಬುದನ್ನು ಹೇಳಿದರೆ, 'ರವಿಕೆ ಬಿಗಿದುಟ್ಟ' ಎಂಬುದು ಶಾಸ್ತ್ರಗಳ ಬಂಧನದಲ್ಲಿ ಒದ್ದಾಡುತಿದ್ದಾರೆ ಎಂಬುದನ್ನು ಸೂಚಿಸುತ್ತದೆ.
೯೫. ಅಂಗದಲ್ಲಿ ಲಿಂಗವನು ಲಿಂಗಿಗಳೆ ಧರಿಸಿದರು
ಬಂದು ಮಧುವರಸ ಹೊನ್ನನಿಗೆ | ಮಗಳಿತ್ತು
ಹಂದರದ ನಡುವೆ ಬೀಗಾದ | (ಹ. ಹಂ. ೫೬)
ತಂದೆ-ಮಗಳು ಲಿಂಗದೀಕ್ಷೆ ಹೊಂದಿ ಲಿಂಗಾಂಗಿಗಳಾದರು. ಮಧು ವರಸ ಹರಳಯ್ಯನ ಮಗ ಹೊನ್ನನಿಗೆ ಮಗಳನ್ನು ಕೊಟ್ಟು ಮದುವೆ ಮಾಡಿದ ಸುಂದರ
ಹಂದರದ ಕೆಳಗೆ ಹರಳಯ್ಯ ಮಧುವರಸರು ಬೀಗರಾದರು.
೯೬., ಹಾರುವರ ಮಧುವರಸ ಊರ ಮಾತನು ಮೀರಿ
ಧಾರೆ ಎರೆದಿತ್ತು ಮಗಳನ್ನು | ಬೀಗಾದ
ಮಾರಹರ ಭಕ್ತ ಹರಳನಿಗೆ || (ಕ, ಬ, ೩೭)
ತನ್ನ ಕುಲಜಾತಿ ಬಾಂಧವರು, ಊರಿನವರುಗಳ ಮಾತನ್ನು ಮೀರಿ ಶಿವಶರಣನಾದ ಹರಳಯ್ಯನ ಮಗನಿಗೆ ತನ್ನ ಮಗಳನ್ನು ಕೊಟ್ಟು ಮಧುವರಸನು ಮದುವೆ ಮಾಡಿಬಿಟ್ಟನು.
೯೭. ಹಾರುವರ, ಕುಲ ಹೊಲೆಯ ಬೇರನ್ನೆ ಕಿತ್ತೊಗೆದ
ಸಾರಿದನು ಬಸವ ಬೆಂಗುಡಿಗ | ಶರಣರಿಗೆ
ಧೀರ ಕಾಯಕವೇ ಕುಲವಾತು || (ಕ. ಬ. ೩೮).
ಹಾರುವ- ಅಂತ್ಯಜ, ಬ್ರಾಹ್ಮಣ- ಹೋಲೆಯ ಈ ಭ್ರಾಂತಿಯ ಬೇರನ್ನು ಕಿತ್ತೊಗೆದು ಕ್ರಾಂತಿ ಪುರುಷ ಬಸವಣ್ಣ ಶರಣರ ಕುಲವೆಲ್ಲ ಒಂದೇ ಕುಲ ಎಂದು ಘೋಷಿಸಿ ಈ ಸಮತೆಯ ಕಾರ್ಯಕ್ಕೆ “ಬಂಗುಡಿಗ" ರಾಗಿ ಬೆನ್ನೆಲುಬಾಗಿ ನಿಂತಿದ್ದರು.
(ಇಲ್ಲಿ ಒಂದು ವಿಷಯವನ್ನು ಪ್ರಸ್ತಾಪಿಸಲೇಬೇಕು. ಕೆಲವು ಆಧುನಿಕ ಸಾಹಿತಿಗಳು ಮನಸ್ಸಿಗೆ ಬಂದಂತೆ ಕಲ್ಯಾಣ ಕ್ರಾಂತಿಯ ವಿಷಯ ಚಿತ್ರಿಸುವರು. ವಿವಾಹಕ್ಕೆ ಮೊದಲು ಲಾವಣ್ಯವತಿಮಧುವರಸರ ಮಗಳು ಮತ್ತು ಶೀಲವಂತಯ್ಯ (ಹೊನ್ನ ಎಂದು ಜನಪದ ಸಾಹಿತ್ಯದಲ್ಲಿದೆ.) ಹರಳಯ್ಯನ ಮಗನಿಗೆ ಪ್ರೇಮ ಸಂಬಂಧವಿತ್ತು ಎಂದು ಚಿತ್ರಿಸುವರು. ಇದು ತಪ್ಪು. “ಉಭಯತರ ಪೂರ್ವದ ಜಾತಿಗಳೇನೇ ಇರಲಿ ದೀಕ್ಷಾ ನಂತರ ಇಬ್ಬರೂ ಸಮಾನರು. ಅವರ ಮಧ್ಯೆ ವಿವಾಹ ಸಂಬಂಧ ಏರ್ಪಡಬಹುದು.” ಎಂಬ ತತ್ವದ ಆಚರಣೆಗಾಗಿ, ಸಮಾನತಾ ಸೂತ್ರವಾಗಿ ವಿವಾಹವಾಗಿದೆಯೇ ವಿನಾ ದೈಹಿಕ ಅಥವಾ ಪ್ರೇಮದ ಆಕರ್ಷಣೆಯಿಂದಲ್ಲ ಮೊದಲೇ ಪ್ರೇಮಿಸಿ ಆದ ವಿವಾಹದಲ್ಲಿ ತತ್ಯಕ್ಕಿಂತ ಹೆಚ್ಚು ವೈಯಕ್ತಿಕ ಆಕರ್ಷಣೆ ಇರುತ್ತದೆ. ಎರಡು ಸಂಪೂರ್ಣ ಭಿನ್ನ ಜಾತಿ ಮಟ್ಟದ ತರುಣ-ತರುಣಿಯ ಮಧ್ಯೆ ಪರಿಚಯ ಬೆಳೆಯುವದೂ ಅಷ್ಟು ಸುಲಭವಲ್ಲ. ಅನುಭವ ಮಂಟಪಕ್ಕೆ ಬರುಹೋಗುತ್ತ ಇರುವಾಗ ಪರಿಚಯವಾಗಿರಬಹುದು ಎಂದರೆ ಮಧುವರಸ ಮತ್ತು ಆತನ ಮಗಳು ಆ ವರೆಗೂ ಮಂಟಪಕ್ಕೆ ಬಂದುವರೂ ಅಲ್ಲ. ಒಂದು ವೇಳೆ ಪ್ರೇಮ ಸಂಬಂಧ ಬೆಳೆದಿದ್ದು ಹಿರಿಯರ ಒಪ್ಪಿಗೆ ಸಿಗದಿದ್ದರೆ ಆ ದಂಪತಿಗಳಿಗೆ ಬಹಿಷ್ಕಾರ ಹಾಕಿ ಬಿಟ್ಟು ಹಿರಿಯರು ಕೈ ತೊಳೆದುಕೊಳ್ಳುತ್ತಿದ್ದರು.
ಒಂದು ತತ್ತ್ವದ ತಳಹದಿಯ ಮೇಲೆ ಆದ ವಿವಾಹವೆಂದೇ ಹರಳಯ್ಯ-ಮಧುವರಸರು ಕ್ರೂರ ಶಿಕ್ಷೆಗೆ ಒಳಗಾಗಬೇಕಾಯಿತು. ಬಸವಣ್ಣನವರು ಅಧಿಕಾರವನ್ನು ತೊರೆಯಬೇಕಾಯಿತು. ತಾವು ನಂಬಿದ ತತ್ರ್ಯಕ್ಕಾಗಿಯೇ ಇನ್ನಿತರ ಶರಣರು ಪ್ರಾಣಾರ್ಪಣೆಗೆ, ಬಹುದೊಡ್ಡ ತ್ಯಾಗ ಮಾಡಲಿಕ್ಕೆ ಎದೆಗೊಟ್ಟು ನಿಂತರು. ಈ ವಿಷಯದಲ್ಲಿ ಯಾರೊಬ್ಬರೂ ಭಿನ್ನ ಮತ ತಳೆಯದೆ ಒಗ್ಗಟ್ಟಾಗಿ ಸಂಪ್ರದಾಯ ನಿಷ್ಠರನ್ನು ಎದುರಿಸಿರುವುದು ಶರಣ ಧರ್ಮದ ಹೆಗ್ಗಳಿಕೆ. ಜೀವಗಳ್ಳರಾಗಿ ತತ್ತ್ವವನ್ನು ಬಿಟ್ಟುಕೊಡದಿರುವುದು ಅಭಿನಂದನಾರ್ಹ.
೯೮. ಹಿರಿ ಕುಲದ ಮಧುವರಸ ಕಿರುಕುಲಕೆ ಬೀಗಾದ
ಸರಿ ಏನು ಪಾಪ ಮಾಡಿದನು | ಕೊಂಡಿಗಳು
ಜರೆದು ಅರಸನಿಗೆ ದೂರಿದರು || (ಹ.ಹಂ.೫೭)
ಉತ್ತಮ ಕುಲದ ಮಧುವರಸ ಕೀಳು ಕುಲದ ಹರಳನಿಗೆ ಬೀಗನಾದ. ಇದೇನು ಪಾಪವೇ ? ಇಬ್ಬರೂ ಸಮಾನ ಧರ್ಮೀಯರು. ಆದರೆ ಚಾಡಿಕೋರರು ಇದನ್ನು ಬಹುದೊಡ್ಡದಾಗಿ ಮಾಡಿ ಅರಸನಿಗೆ ಚಾಡಿ ಹೇಳಿ, ತಲೆ ಕೆಡಿಸಿದರು.
೯೯. ಕೊಂಡಿಗಳು ಹಾರುವರು ಮಂಡಿಗೆಯ ಉಣ್ಣು ದಕೆ
ಕಂಡ ಕಂಡಲ್ಲಿ ಕುದಿಮಾತ | ನಾಡಿದರು
ಹೆಂಡ ಕುಡಿದಂತೆ ಜೈನರಿಗೆ || (ಕ. ಬ. ೩೯)
ಚಾಡಿಕೋರರು, ಮಡಿವಂತ ಬ್ರಾಹ್ಮಣರು ಮುಂತಾದವರಿಗೆ ಮಾತನಾಡಲಿಕ್ಕೆ ಒಂದು ಆಹಾರ ಸಿಕ್ಕಿತು. ಕಂಡಕಂಡಲ್ಲಿ ಈ ಕ್ರಾಂತಿಕಾರಿ ವಿವಾಹವನ್ನು ಜರಿದರು, ಕುದಿಮಾತನ್ನಾಡಿದರು ; ಜನರನ್ನು ಪ್ರಚೋದಿಸಲು ಯತ್ನಿಸಿದರು. - (ಜೈನ ಧರ್ಮವೂ ಎಲ್ಲರಿಗೂ ಧರ್ಮಸಂಸ್ಕಾರವನ್ನು ಕೊಡುವಂತಹುದು. ಅವರಲ್ಲೂ ಎಲ್ಲ ಜಾತಿಯವರು ಜಿನ ದೀಕ್ಷೆ ಪಡೆಯಬಲ್ಲರು. ಅಂದಾಗ ಜೈನರು ಏಕೆ ವಿರೋಧಿಸಿದರೆಂಬುದು ಅರ್ಥವಾಗುವುದಿಲ್ಲ. ಬಹುಶಃ ಜನ ಸಾಮಾನ್ಯರಿಗೆ ಅತಿ ಸಮೀಪ ಬಂದ ಸರಳವಾದ, ಕಾಯಕ ಪ್ರಧಾನ ಬಸವ ಧರ್ಮ ಅಗಾಧ ಪ್ರಭಾವವನ್ನು ಬೀರಿದ ಕಾರಣ ಜೈನಧರ್ಮ ತುಸು ದುರ್ಬಲ ವಾದ್ದರಿಂದ ಈರ್ಷೆ-ಮಾತ್ಸಲ್ಯ ಹುಟ್ಟಿರಲೂ ಸಾಕು.)
೧೦೦. ಜೊಂಡ ಜೈನರ ಮಾತ ಹುಂಡ ಬಿಜ್ಜಳ ಕೇಳಿ
ಕೊಂಡನರ ಮನೆಗೆ ಶಿವನುರಿಯ | ಬೇಡೆಂದು
ದಂಡೇಶ ಬಸವ ತಿಳಿ ಹೇಳಿ || (ಕ. ಬ. ೪೦).
ಮಡಿವಂತರು, ಮತಾಂಧರೂ ಆದ ಜನರ ಮಾತಿಗೆ ಕಿವಿಕೊಟ್ಟ ಬಿಜ್ಜಳನು ಶಿವನ ಉರಿಯನ್ನು ಬರಮಾಡಿಕೊಳ್ಳಲು ಸಿದ್ಧನಾದ. ಆಗ ಬಸವಣ್ಣನವರು ಹಿತೈಷಿಗಳಾಗಿ ಬುದ್ಧಿ ಹೇಳಿದರು.
೧೦೧. ಶಿವನಕಿಂತಲು ಹೆಚ್ಚು ಶಿವಶರಣರೀಜಗಕೆ
ಶಿವಲೋಕ ಮೆಚ್ಚಿ ಹಾಡುವುದು | ಬಿಜ್ಜಳನೆ
ದವಸ ಕಾಯಕದ ಬೆಳೆ ಬಂದು || (ಕ. ಬ. ೪೧).
“ಬಿಜ್ಜಳ ಮಹಾರಾಜಾ, ದೇವನಿಗಿಂತಲೂ ಅವನ ಶರಣರೇ ಮಿಗಿಲು. ನೋಡು ಪ್ರಾಮಾಣಿಕ ಕಾಯಕ ಜೀವಿಗಳಾಗಿ ಶರಣರು ಎಂಥ ಸಂವೃದ್ಧಿ ಸಾಧಿಸಿ, ನಾಡನ್ನು ಮುಂದೆ ತಂದಿದ್ದಾರೆ.....” ಎಂದು ಶರಣರ ಹಿರಿಮೆಯನ್ನು ಮನದಟ್ಟು ಮಾಡಿಕೊಡಲು ಬಸವಣ್ಣನವರು ಪ್ರಯತ್ನಿಸಿದರು.
೧೦೨. ಗದ್ದಲಕೆ ಕಲ್ಯಾಣ ಸದ್ದೆದ್ದು ಜಲ್ಲೆಂದು
ಎದ್ದು ಓಡಾಡಿ ಜನಬಿದ್ದು | ಹೌಹಾರಿ
ದದ್ದರಿಸಿ ಲೋಕ ಗಜಿಬಿಜಿಗೆ || (ಕ. ಬ. ೪೨)
ಗೊಂದಲವು ಸೃಷ್ಟಿಯಾಯಿತು. ಮಡಿವಂತ ಜಾತಿವಾದಿಗಳು ಜನಸಾಮಾನ್ಯರನ್ನು ಪ್ರಚೋದಿಸಿದರು. ಅತ್ತ ಬಿಜ್ಜಳನಿಗೆ ಇದ್ದದ್ದು ಇಲ್ಲದ್ದು ಹೇಳಿ, ಗಲಿಬಿಲಿಗೆ ಒಳಗು ಮಾಡಿದರು.
೧೦೩. ಹರಳ ಮಧುವರಸನಿಗೆ ಮರುಳ ಮಾಡಿದನೆಂದು
ಗರಳ ಸಿಟ್ಟಿನಲ್ಲಿ ಹಾರುವರು | ಬಿಜ್ಜಳಗೆ
ಕೆರಳಿ ಚಾಡಿಯನು ಹೇಳಿದರು || (ಹ. ಹಂ. ೫೮).
“ಹರಳನು ಬ್ರಾಹ್ಮಣ ಮಧುವರಸನಿಗೆ ಏನೋ ಮರುಳು ಮಾಡಿರಬೇಕು ; ಇಲ್ಲವಾದರೆ ಅದು ಹೇಗೆ ಹೊಲೆಯನಿಗೆ ಮಗಳನ್ನು ಕೊಡುವನು ?' ಎಂದು ವಿಷ ತುಂಬಿದ ದನಿಯಿಂದ ಬಿಜ್ಜಳನಿಗೆ ಚಾಡಿ ಹೇಳಿದರು.
೧೦೪. ಕೂಡಿಸಿದ ಮಂಟಪವ ಹಾಡಿಸಿದ ಶಿವಮತವ
ನಾಡ ಶರಣರಿಗೆ ತಿಳಿಸಿದನು | ಬಸವಯ್ಯ
ಹೂಡುವರು ಕದನ ವಾದಿಗಳು 11 (ಹ, ಹಂ.೬೦).
ಗುರು ಬಸವಣ್ಣನವರು ಒಂದು ಅವಸರದ ಸಭೆ ಕರೆದರು. ಶರಣ ಬಂಧುಗಳಿಗೆ ತಿಳಿಸಿದರು. ಕದನ ಕೂತೂಹಲಿಗಳಾದ ಮತಾಂಧರು ವಿನಾ ಕಾರಣ ಹೋರಾಟಕ್ಕೆ ನಿಲ್ಲಬಹುದು ಎಂದು ಹೇಳಿದರು.
೧೦೫. ಶಿವಯೋಗಿ ಮಗ ಬಾರೊ ಶಿವಪುತ್ರ ಚನ್ನಬಸವ
ಶಿವನಾಣೆ ಚನ್ನ ಬಸವಣ್ಣ | ಕಲ್ಯಾಣ
ಶಿವಗಳಸ ಬಾರೋ ಮಂಟಪಕೆ || (ಕ. ಬ. ೪೪).
ಶಿವಯೋಗಿಯಾಗಿರುವ, ಶಿವನ ಶಿಶು ಚನ್ನ ಬಸವಣ್ಣಾ, ಬಾ ಇಲ್ಲಿ. ನೀನೇ ಮಂಟಪಕೆ ಕಳಸದಂತಿರುವವನು.
೧೦೬. ಕರೆದು ಆಶೀರ್ವದಿಸಿ ಹರಸಿ ಒಪ್ಪಿಸಿ ಬಸವ
ವರ ಚನ್ನ ಬಸವ ಶರಣರಿಗೆ | ಕಂಟಕದ
ಹುರಿಯಾಳು ಕಾಯೊ ಹೊಸ ಮತವ|| (ಕ.ಬ.೪೫)
ಬಸವಣ್ಣನವರು ಚನ್ನ ಬಸವಣ್ಣನನ್ನು ಕರೆದು ಆಶೀರ್ವದಿಸಿದರು, ಹರಸಿದರು. ಶರಣರನ್ನು ಜೋಪಾನ ಮಾಡು ಚನ್ನಬಸವಣ್ಣ. ಹೊಸಧರ್ಮವು ಇದೀಗ ಹುಟ್ಟಿದೆ. ಇನ್ನಷ್ಟು ಬಲಗೊಂಡು ಬೆಳೆಯಬೇಕಾಗಿದೆ.
೧೦೭. ಚನ್ನಬಸವನೆ ಕಾಯೊ ಇನ್ನು ಮಂಟಪ ನೀನು
ಗುನ್ನೆ ಮಾಡುವರು ಶಿವಮತಕೆ | ಕೋಪಿಗಳು,
ಮಣ್ಣು ಗೂಡಿಸುವ ಮಾಚಯ್ಯ || (ಹ. ಹಂ. ೬೨)
ಚನ್ನಬಸವಣ್ಣಾ, ನಿನ್ನ ಜೊತೆಗೆ ಶತ್ರುಗಳನ್ನು ಮಣ್ಣು ಮಾಡುವ ಸಾಮರ್ಥ್ಯ ಉಳ್ಳ ಮಾಚಿದೇವರೂ ನೆರವಿಗೆ ಇರುವರು. ಆದ್ದರಿಂದ ಮಂಟಪದ ಸಂಪತ್ತಾದ ಸಾಹಿತ್ಯ ಸಿರಿಯನ್ನು ಕಾಪಾಡು.
೧೦೮. ಹೇಳಿ ಹೊರಟನು ಬಸವ ಕೇಳಲಾರದೆ ಮಾತು
ಗೋಳಿಟ್ಟು ಜನವು ಸರಮಾಲೆ | ಸಂಗಮಕೆ
ಆಳು ಬಸವಯ್ಯ ದಯವಿಟ್ಟು || (ಕ. ಬ. ೪೬)
(ಶರಣರಲ್ಲಿ ಎರಡು ಅಭಿಪ್ರಾಯ ಮೂಡಿದವು. ಏಕೆ ಮತಾಂಧರನ್ನು, ಅವರನ್ನು ಬೆಂಬಲಿಸುವ ಬಿಜ್ಜಳನನ್ನು ಎದುರಿಸಿ ನಿಲ್ಲಬಾರದು ? ಎಂಬ ಉಗ್ರವಾದಿಗಳು, ಸಾತ್ವಿಕ ಮಾರ್ಗವೇ ಇರಲಿ ಎಂಬ ಸೌಮ್ಯವಾದಿಗಳು, ಮೊದಲನೆಯವರು) “ಬಸವಣ್ಣಾ... ನೀವು ಹೋಗುವುದು ಬೇಡ. ಹೋರಾಟಕ್ಕೆ ನಿಲ್ಲೋಣ.” ಎಂದು ಕೆಲವರು ಹಠಮಾಡಿದರೂ, ಶಾಂತಿಪಥವನ್ನೇ ತುಳಿಯಬಯಸಿದ ಬಸವಣ್ಣನವರು ತಮ್ಮ ನಿರ್ಗಮನದಿಂದ ಅರಸನ ಮತ್ತು ಮತಾಂಧರ ಕೋಪ ತಣ್ಣಗಾಗಿ, ಶರಣರ ಮೇಲೆ ಸೇಡು ತೀರಿಸಿಕೊಳ್ಳಲಾರರೆಂದು ಭಾವಿಸಿದರು. ಆಗ ಶರಣ ಜನರ ದುಃಖ ಮೇರೆವರಿಯಿತು.
೧೦೯. ಬಸವ ಹೋಗಲು ಭೂಮಿ ಕಸವಾಗಿ ಸುಖವುಂಟೆ
ಮಸಣ ಮಸಣಾತು ಕಲ್ಯಾಣ | ಮಂತ್ರಿಗಳೆ
ಬಸವಗಧಿಕ ಮಂತ್ರಿ ಇನ್ನುಂಟೆ || (ಹ. ಹಂ. ೬೫)
ಗುರು ಬಸವಣ್ಣನವರ ನಿರ್ಗಮನದಿಂದ ಕಲ್ಯಾಣವು ಕಳಾಹೀನವಾಯಿತು. ಬಸವಣ್ಣನವರನ್ನು ಮೀರಿಸುವ ಮಂತ್ರಿ ಸಿಗಬಹುದೇ ಎಂದು ಬಿಜ್ಜಳನು ಚಿಂತಿತನಾದನು.
೧೧೦, ಬಸವ ರಾಜ್ಯದ ಸಿರಿಯು ಬಸವ ಬಡವರ ನಿಧಿಯು
ಬಸವ ಮಳೆಬೆಳೆಯು ನಾಡೊಳಗೆ | ನಿಜದೀಪ
ಬಸವನೇ ಸಗ್ಗ ಸೋಪಾನ || (ಹ. ಹಂ. ೬೬)
“ಬಸವಣ್ಣನೇ.... ಈ ರಾಜ್ಯದ ಸಿರಿಯು, ಬಸವಣ್ಣನೇ ಬಡವರ ನಿಧಿಯು, ಆತನೇ ಮಳೆಬೆಳೆ ನಿಜದೀಪ, ಆತನೇ ಸ್ವರ್ಗದ ಸೋಪಾನ.
೧೧೧. ಚಿಂತಿಸಿದ ಬಿಜ್ಜಳನು ಕುಂತಲ್ಲಿ ನಿಂತಲ್ಲಿ
ಬಂತು ಕೊನೆಯಿನ್ನು ರಾಜ್ಯಕ್ಕೆ | ಮುಂದೆನಗೆ
ಇಂಥ ಮಂತ್ರಿಗಳು ಸಿಗಬಹುದೆ? || (ಹ. ಹಂ.೬೭)
ಬಿಜ್ಜಳನು ದಿಗ್ಭ್ರಾಂತನಾಗಿ, ನಿಸ್ಸಹಾಯಕನೂ ಆಗಿದ್ದನು. ಬಸವಣ್ಣನವರ ಅಗಲುವಿಕೆಯಿಂದ ಘಾಸಿಗೊಂಡಿದ್ದನು. ಇನ್ನು ಇಂಥ ಮಂತ್ರಿಗಳು ಸಿಗಬಹುದೇ ? ಎಂದು ಕುಂತಲ್ಲಿ ನಿಂತಲ್ಲಿ ಚಿಂತಿಸಲು ತೊಡಗಿದನು.
(ಜನ ಸಾಮಾನ್ಯರ ಪ್ರೀತಿಪಾತ್ರ, ಬಡವರ ನಿಧಿಯು ಆದ ಬಸವೇಶನ ನಿರ್ಗಮನದಿಂದ ಜನಸಮುದಾಯ ಪ್ರಚೋದನೆಗೊಳ್ಳಬಹುದು ಎಂದು ಬಿಜ್ಜಳ ತಲ್ಲಣಿಸಿ, ಜನರ ಸಭೆಯನ್ನು ಸೇರಿಸಿದನು.)
೧೧೨. ಕೇಳು ಬಿಜ್ಜಳರಾಯ ಹೇಳಿಹನು ಬಸವೇಶ
ಆಳಲೀ ಧರೆಯ ಚನ್ನಬಸವ | ಬಲವಂತ
ಮೇಳೈಸು ಮಂತ್ರಿ ಪದವವಗೆ | (ಹ, ಹಂ. ೬೮)
ಬಿಜ್ಜಳರಾಜನೇ, ಬಸವಣ್ಣನವರು ಆದೇಶ ನೀಡಿ ಹೋಗಿದ್ದಾರೆ. ಚನ್ನಬಸವೇಶನೂ ಸಮರ್ಥನೆ. ಆತನಿಗೇ ಮಂತ್ರಿಪದವನ್ನು ಕೊಡು.
೧೧೩. ಎಂದು ಹೇಳಿತು ಜನವು ಅಂದು ಕರೆಸಿದ ರಾಯ
ಚೆಂದದಲಿ ಚನ್ನಬಸವನಿಗೆ ಒಪ್ಪಿಸಿದ
ಬಂದು ತಾ ಮಂತ್ರಿ ಮುದ್ರಿಕೆಯ|| (ಹ. ಹಂ.೬೯)
ಬಸವಣ್ಣನವರ ಪ್ರತಿನಿಧಿಯಾಗಿ ಚನ್ನಬಸವಣ್ಣನು ಇದ್ದರೆ ಜನ ಸಾಮಾನ್ಯರು ಸಂತೋಷಗೊಳ್ಳಬಹುದು ಎಂದು ಚನ್ನಬಸವಣ್ಣನನ್ನು ಕರೆಸಿ, ಮಂತ್ರಿಯ ಮುದ್ರಿಕೆಯನ್ನು ಬಿಜ್ಜಳನು ಕೊಟ್ಟನು. (ಇದರಿಂದ ಕೊಂಡಿ ಮಂಚಣ್ಣನಂತವರಿಗೆ ಆಶಾಭಂಗವಾಯಿತು. ಪುನ: ಶರಣರದೇ ಮೇಲುಗೈಯಾಯಿತೆಂದು ತಪ್ತರಾದರು. ಚನ್ನ ಬಸವಣ್ಣನವರೂ ಚೆನ್ನಾಗಿ ಆಳತೊಡಗಿದರು. ಅವರಲ್ಲಿ ತಪ್ಪು ತೆಗೆಯಲಾರದೆ ಬಂಡಜಗಳವನ್ನು ಆರಂಭಿಸಿದರು.)
೧೧೪, ಕೊಂಡಿಗಳು ಮುಂದಾಗಿ ಬಂಡಜಗಳವ ಹೂಡಿ
ಹೆಂಡ ಕುಡಿಸಿದರು ಚಾಡಿಯಲಿ | ಬಿಜ್ಜಳನು
ಹುಂಡ ತಿಳಿಯದಲೆ ಕಿವಿಗೊಟ್ಟ || (ಹ. ಹಂ. ೭೦).
ಕೊಂಡೆಯರು ಇಲ್ಲದ್ದು ಇದ್ದದ್ದು ಹೇಳಿ, ಬಂಡ ಜಗಳವನ್ನು ಶುರುಮಾಡಿದರು. ಚಾಡಿ ಎಂಬ ಹೆಂಡವನ್ನು ಕುಡಿಸಿ ಬಿಜ್ಜಳನನ್ನು ದಿಗ್ದಾಂತನನ್ನಾಗಿ ಮಾಡಿದರು.
೧೧೫. ಹರಳಯ್ಯ ಮಧುವರಸ ವರಬೀಗರಾದುದಕೆ
ದುರುನಡತೆಯುಂಟೆ ಬೇರಿನ್ನು | ಬಿಜ್ಜಳನೆ
ಕರೆತರಿಸಿ ದಂಡಿಸವರೆಂದು || (ಹ. ಹಂ. ೭೨)
ಚಾಡಿಕೋರರು ಹೇಳಿದರು, “ಹರಳಯ್ಯ- ಮಧುವರಸರು ಬೀಗರಾಗಲು ಸಾಧ್ಯವೇ ? ಇದಕ್ಕಿಂತಲೂ ಕೆಟ್ಟದಾದ ನಡತೆಯುಂಟೆ ? ರಾಜನೇ ನೀನು ಅವರನ್ನು ದಂಡಿಸದಿದ್ದರೆ ಬಹಳ ಉಗ್ರ ಪರಿಣಾ ಮವಾಗುವುದು.
೧೧೬. ಓಲಗದಿ ಬಿಜ್ಜಳನು ನಾಳೆ ಅನ್ನದೆ ಕರೆಸಿ
ಕೀಳಿಸಿರಿ ಕಣ್ಣ ನಿಂತಲ್ಲೆ | ಕೇಡಿಗಳು
ಬಾಳುವದು ತರವೆ ನಾಡೊಳಗೆ || (ಹ, ಹಂ, ೭೩)
ಚಾಡಿಕೋರರ ಮಾತಿನಿಂದ ತಪ್ತನಾಗಿ ಬಿಜ್ಜಳನು, “ನಾಳೆಯೇ ಅವರನ್ನು ಕರೆಸಿ, ನಿಂತಲ್ಲೇ ಕಣ್ಣ ಕೀಳಿಸಿರಿ. ಇಂಥ ಕೇಡಿಗಳು ನಾಡಿನಲ್ಲಿ ಇರುವುದೇ ತರವಲ್ಲ.” ಎಂದು ಆರ್ಭಟಿಸಿದ.
೧೧೭. ಸಾರುತಲಿ ಡಂಗುರವ ಊರಲ್ಲಿ ಮೆರೆಯಿಸಿರಿ
ಜಾರೆಯರ ಮುಂದೆ ಒದೆಯಿಸಲಿ | ಕೊನೆಗವರ
ಕ್ರೂರ ಕತ್ತಿಯಲೆ ಕೊಲ್ಲೆಂದ || (ಹ. ಹಂ. ೭೪)
ಇವರು ಮಾಡಿದ ಅಪರಾಧ ಏನೆಂಬುದನ್ನು ಡಂಗುರ ಹೊಡೆದು ಸಾರಿಸಿರಿ. ಹಾಗೆ ಸಾರುತ್ತಲೇ ಇವರನ್ನು ಎಳೆದು ತನ್ನಿರಿ. ವೇಶ್ಯೆಯರ ಕೇರಿಯಲ್ಲಿ ಹಾಯ್ದು ಬರುವಾಗ ಅವರ ಮುಂದೆ ಒದೆಯಿಸಿರಿ. ನಂತರ ಕತ್ತಿಯಿಂದ ತಿವಿದು ಕೋಲ್ಲಿಸಿರಿ.
೧೧೮. ಸಿಟ್ಟೇಕೆ ಬಿಜ್ಜಳನೆ ಇಷ್ಟು ಕೋಪವು ತರವೆ
ಕೆಟ್ಟ ಬಗೆಸಿದರೆ ಒಡೆಯನಿಗೆ | ತಿಳಿಸಿದನು
ಕಟ್ಟಳೆಯ ಚನ್ನ ದಂಡೇಶ | (ಹ, ಹಂ. ೭೫).
“ಬಿಜ್ಜಳ ಮಹಾರಾಜ, ಇಷ್ಟು ಕೋಪ ನಿನಗೇಕೆ ? ಶರಣರು ಯಾರಿಗಾದರೂ ಕೆಟ್ಟುದನ್ನು ಬಗೆದಿರುವರೆ ?”
೧೧೯. ಹಾರುವರ ಕುಲ ಹೆಚ್ಚು ಬೇರೆ ಜನ ಕುಲಹೀನ
ಹಾರುವಗೆ ಉಂಟು ಹೊಲೆಯಿನ್ನು | ಜಗದೊಳಗೆ
ಯಾರು ಹಾರುವರ ಮೊದಲಿಗರು || (ಹ.ಹಂ.೭೬)
ಬ್ರಾಹ್ಮಣರು ಕುಲದಲ್ಲಿ ಹೆಚ್ಚು, ಉಳಿದವರು ಕುಲಹೀನರು ಎಂಬ ಭ್ರಾಂತಿ ಬೇಡ. ಎಲ್ಲರೂ ಹುಟ್ಟುವುದೂ ಹೊಲೆಯಲ್ಲಿಯೆ ! ಮಾತ್ರವಲ್ಲ ಬ್ರಾಹ್ಮಣರ ಗೋತ್ರ ಪುರುಷರಾಗಿರುವ ಮೊದಲಿಗರ ಕುಲಗಳು ಗೊತ್ತಿರುವವೆ ?
೧೨೦. ಹೋಲಬರಿತ ಮನುಜನವ ಕುಲವಂತ ಜಗದೊಳಗೆ
ನೆಲೆಯುಂಟೆ ಗಂಗೆಗೆ ಬಿಜ್ಜಳನೆ | ಶಿವಮತಕೆ
ಕುಲವೆಣಿಸಲುಂಟೆ ನಡೆನುಡಿಗೆ || (ಹ. ಹಂ. ೭೭)
ನಿಜವಾದ ಪಥವನ್ನು ಅರಿತವನೆ ಶ್ರೇಷ್ಠ ಕುಲದವನು. ಗಂಗೆಗೆ ಹೇಗೆ ನೆಲೆ ಇರದೆ ಹರಿವುದೋ ಹಾಗೆ ಶ್ರೇಷ್ಠತೆ ಯಾರಲ್ಲಿಯೂ ಹರಿಯಬಹುದು. ಶಿವಮತವನ್ನು ಸೇರಿದವರಲ್ಲಿ ಕುಲವನ್ನು ಎಣಿಸಲಾಗದು.
೧೨೧. ಅರಸೊತ್ತಿಗೆಯ ನಂಬಿ ಬಿರುಸು ಮಾತುಗಳೇಕೆ
ಚಿರವೆ ಹೂ ಬಿಸಿಲು ತಿಳಿಯರಸ | ಪರಿಕಿಸಲು
ಹರಭಕ್ತಿ ಅಮರ ಶರಣರಿಗೆ || (ಹ, ಹಂ, ೭೮)
ಅರಸೊತ್ತಿಗೆಯೇ ಬಲು ಸ್ಥಿರ ಎಂದು ಬಿರುಸು ಮಾತುಗಳನ್ನು ಏಕೆ ಆಡುವೆ ? ಹೂ ಬಿಸಿಲು ಹೇಗೆ ಸ್ಥಿರವಲ್ಲವೋ, ಬಿಸಿಲು ಕಾಯ್ದಾಗ ಎಷ್ಟು ಬಾಧೆಯನ್ನೀಯುವುದೋ ಹಾಗೆ ಅಧಿಕಾರ ಸಹ. ಶರಣರು ಪ್ರಾಮಾಣಿಕ ಭಕ್ತರು.
೧೨೨. ಬೇಡ ಶರಣರ ನಿಂದೆ ಕೇಡು ಬರುವುದು ಮುಂದೆ
ನೋಡಿಕೋ ನಾಡ ಬಿಜ್ಜಳನೆ | ಒಪ್ಪಿಸುತ
ಕಾಡಬೇಡಿನ್ನು ಶರಣರಿಗೆ || (ಹ, ಹಂ. ೭೯)
“ರಾಜನೇ, ಶರಣರನ್ನು ನಿಂದಿಸಬೇಡ, ಅವರಿಗೆ ತೊಂದರೆ ಕೊಡ ಬೇಡ. ನಿನಗೆ ಕೇಡಾದೀತು. (ಇಷ್ಟು ಮಿಕ್ಕಿ ಹಠ ಮಾಡುವುದಾದರೆ ನಾವು ಕೆಟ್ಟ ಕೆಲಸಕ್ಕೆ ಒಪ್ಪಿಗೆ ಕೊಡಲಾರೆವು) ಈ ನಾಡನ್ನು ನೀನೇ ನೋಡಿಕೊ. (ನನಗೆ ಮಂತ್ರಿ ಪದವಿಯೂ ಬೇಡ) ಹೋಗುವ ಮುನ್ನ ಇನ್ನೊಮ್ಮೆ ಹೇಳುವೆ ; ಶರಣರನ್ನು ಕಾಡಬೇಡ.
೧೨೩. ಕೇಳದಲೆ ಬಿಜ್ಜಳನು ಆಳುಗಳನಟ್ಟಿದನು
ಕೀಳ ಕೆಲಸೆಂದು ಬಲು ಹೇಸಿ | ನೋಡುದಕೆ
ಹೋಳಾತು ಶರಣರೂಳಿಗಳು || (ಹ. ಹಂ. ೮೦)
ಇಷ್ಟು ಹಿತೋಪದೇಶ ಹೇಳಿದಾಗ್ಯೂ ಕೇಳದೆ ಆಳುಗಳನ್ನು ಬಿಜ್ಜಳನು ಅಟ್ಟಿದನು. ಇನ್ನು ಮುಂದಾಗುವ ಕೀಳು ಕೆಲಸಗಳನ್ನು ನೋಡಲು ಹೇಸಿ, ಅಲ್ಲಿ ಊಳಿಗದಲ್ಲಿದ್ದ ಶರಣ ಜನರೆಲ್ಲರೂ ಹೋಳಾಗಿ ಹೋದರು. (ಉದ್ಯೋಗವನ್ನು ತೊರೆದರು.)
೧೨೪, ಚರರು ನಡೆದರು ಬೇಗ ಹರನ ಶರಣರ ಬಳಿಗೆ
ಕರೆದಿರುವ ದೊರೆಯು ಮಧುವರಸ | ಹರಳಯ್ಯ
ಬರಬೇಕು ಬೇಗ ಅರಮನೆಗೆ || (ಹ. ಹಂ. ೮೧)
ಸೇವಕರು ಶರಣರ ಬಳಿಗೆ ಹೋದರು. ರಾಜನು ಕರೆದಿರುವನೆಂದು ಹೇಳಿ ಮಧುವರಸ-ಹರಳಯ್ಯನವರು ಬೇಗನೆ ಬರಬೇಕು ಎಂದರು.
೧೨೫, ಉರದ ಲಿಂಗಕೆ ನಮಿಸಿ ಹರನ ಪೂಜೆಯ ಮುಗಿಸಿ
ಗುರುವೆ ಬಸವಯ್ಯ ಸಲಹೆಂದು | ಮಧುವರಸ
ಹರಳಯ್ಯ ಬಂದರರಮನಿಗೆ || (ಹ. ಹಂ. ೮೨)
ಎದೆಯ ಮೇಲೆ ಕಟ್ಟಿಕೊಂಡ ಲಿಂಗಕ್ಕೆ ನಮಿಸಿ, ಇಷ್ಟಲಿಂಗ ಪೂಜೆಯನ್ನು ಪೂರೈಸಿ, ಗುರುವೆ ಬಸವೇಶ ಸಲಹು ಎಂದು ವಂದಿಸಿ ಮಧುವರಸ-ಹರಳಯ್ಯ ಅರಮನೆಗೆ ಬಂದರು.
೧೨೬, ಭರದಿ ಯಾತಕೆ ನಮ್ಮ ಅರಸ ಕರೆಸಿದೆ ಹೇಳು.
ನೆರವೇರಿಸುವೆವು ಆ ಕೆಲಸ | ಘುಡಘುಡಿಸಿ
ಅರಸ ಗರ್ಜಿಸಿದ ಹುಲಿಯಂತೆ || (ಹ, ಹಂ. ೮೩)
ಮಹಾರಾಜಾ, ನಮ್ಮನ್ನು ಏತಕ್ಕೆ ಕರೆಸಿದಿ? ಏನಾದರೂ ಕರ್ತವ್ಯ ವಿದ್ದರೆ ಹೇಳು, ಶಿರಸಾವಹಿಸಿ ಮಾಡುತ್ತೇವೆ ಎಂದು ಹರಳಯ್ಯ ಮಧುವರಸ ಹೇಳುತ್ತಲೇ ಆಗ ರಾಜನು ಹುಲಿಯಂತೆ ಗರ್ಜಿಸಿದ.
೧೨೭. ಒಡೆಯ ಯಾತಕೆ ನಿನಗೆ ಕಡುಕೋಪ ನಮ್ಮೆಲೆ :
ನುಡಿನಡೆಯ ಮಾಡಿದೊಲವಿಂದೆ | ಅರಸನಿಗೆ
ತಡಮಾಡದೆಂದ ಮಧುವರಸ || (ಹ, ಹಂ. ೮೪).
ನಮ್ಮ ಮೇಲೆ ಇಷ್ಟು ಕೋಪ ನಿನಗೇಕೆ ? (ನಾವು ಯಾವ ತಪ್ಪ ಮಾಡಿಲ್ಲ.) ನುಡಿಯನ್ನು ನಡೆಯನ್ನಾಗಿ ಪರಿವರ್ತಿಸಿದ್ದೇವೆ ಅಷ್ಟೆ. ನಮ್ಮ ಧರ್ಮದ ಪ್ರಕಾರ ಯಾರು ಬೇಕಾದರೂ ದೀಕ್ಷಾ ಸಂಸ್ಕಾರ ಹೊಂದಬಹುದು ಮತ್ತು ಅವರವರ ಮಧ್ಯೆ ಬೀಗತನ ಮಾಡಬಹುದು. ಹೀಗೆ ಸಿದ್ಧಾಂತಕ್ಕೆ ಅನುವಾಗಿಯೇ ನಡೆದಿದ್ದೇವೆ ಎಂದು ಮಧುವರಸನು ತಡಮಾಡದೆ ನುಡಿದನು.
೧೨೮. ಎಲವೋ ಮಧುವರಸಯ್ಯ ಕುಲದಲ್ಲಿ ಹಾರುವನು
ಹೊಲೆಯನಿಗೆ ಹೆಣ್ಣ ಕೊಡಬೇಕೆ | ಕುಲಗೇಡಿ
ಕಲಿಸುವೆನು ಪಾಠ ನಿನಗಿದಕೆ || (ಹ, ಹಂ. ೮೫)
ಎಲೋ ಮಧುವರಸಾ, ನೀನು ನೋಡಿದರೆ ಶ್ರೇಷ್ಠ ಕುಲದಲ್ಲಿ ಹುಟ್ಟಿದ ಹಾರುವನು. ಕುಲಹೀನನಾದ ಹರಳನ ಮಗನಿಗೆ ಹೆಣ್ಣು ಕೊಟ್ಟು ಕುಲಗೆಡುವುದೆ ? ನಿನಗೆ ಸರಿಯಾದ ಪಾಠ ಕಲಿಸುವೆ.
೧೨೯, ಹೊಲಸ ತಿಂಬುವ ಹೊಲೆಯ ಹೋಲಬಿಲ್ಲದವ ಹೊಲೆಯ
ನೆಲೆಸಲ್ಲುಸಿ ನುಡಿಯು ಎದೆಯೊಳಗೆ ಹೊಲೆಯರಸ
ಹೊಲೆಯರೆನ್ನುವರೆ ಶರಣರಿಗೆ || (ಹ. ಹಂ. ೮೬)
“ಯಾರು ಹೊಲಸನ್ನು ತಿನ್ನು ವರೋ, ಸನ್ಮಾರ್ಗದಲ್ಲಿ ನಡೆಯದೆ ಇರುವರೋ ಅವರು ಹೊಲೆಯರು, ಅಂತರಂಗದಲ್ಲಿ ಹುಸಿ ಯನ್ನು ಕಾಮಕ್ರೋಧಾದಿಗಳನ್ನು ಬಚ್ಚಿಟ್ಟುಕೊಂಡುದೇ ಹೊಲೆ ತನ್ನ, ಶಿವಪಥದಲ್ಲಿ ನಡೆಯುವ ಶರಣರಿಗೆ ಹೊಲೆಯರೆನ್ನ ಬಹುದೆ?'' ಎಂದು ಮಧುವರಸ ಉತ್ತರಿಸುವನು.
೧೩೦. ಖೂ ಬಿಜ್ಜಳರಾಯ ತಾಳಲಾರದೆ ಕೊಪ
ಕೀಳಿಸಿದ ಕಣ್ಣ ನಿಂತಲ್ಲೆ | ನಿಲ್ಲದಲೆ
ಗಾಳಕವರನ್ನು ಎಳಿಸೆಂದ || (ಹ, ಹಂ. ೮೭)
ಕೋಪೋದ್ರಿಕ್ತನಾದ ಬಿಜ್ಜಳನು ಆ ಶರಣರ ಕಣ್ಣುಗಳನ್ನು ಕೀಳಿಸಿದ. ಅವರನ್ನು ಗಾಳಕ್ಕೆ ಕಟ್ಟಿ ಎಳೆಸಲು ಹೇಳಿದನು.
೧೩೧. ಎಳೆಸುತಲಿ ಬೀದಿಯಲಿ ಬಳಲಿಸುತರಿಬ್ಬರನು
ಹಳಿದು ಶೂಲಕ್ಕೆ ಏರಿಸಲು | ಶಿವನೆಂದು
ನಲುಮೆಯಲಿ ಜೀವ ನೀಗಿದರು || (ಹ. ಹಂ. ೮೮)
ಬೀದಿಯಲ್ಲಿ ಅವರುಗಳನ್ನು ಎಳೆಸುತ್ತ, ಬಳಲಿಸುತ್ತ ಶೂಲಕ್ಕೆ ಏರಿಸಿದರು. ಆಗ ಅವರು ಅಳದೆ, ಗೋಳಿಡದೆ ದೇವನನ್ನು ಸ್ಮರಿಸಿಕೊಳ್ಳುತ್ತಾ ನಗುನಗುತ್ತಲೇ ಪ್ರಾಣಬಿಟ್ಟರು.
೧೩೨. ಹೂವಿನಾ ಮಳೆಯಾಗಿ ಹೂವಿನ ತೇರೇರಿ
ಹೂವಾದರವರು ಶಿವಪದಕೆ | ಶಿವಶರಣ
ಪಾವನದ ಮಾಲೆ ಸೇರಿದರು || (ಹ. ಹಂ. ೮೯).
೧೩೩. ಕಿರಿ ಕುಲದ ಹರಳಯ್ಯ ವರಶರಣ ತಾನಾದ
ಪರಮತವ ಜಯಿಸಿ ಹರಸಿದನು | ಹರಳನಿಗೆ
ಹರ ಮೆಚ್ಚಿ ಮೆರೆಸಿ ಕರೆದೊಯ್ದು !! (ಹ. ಹಂ. ೯೦)
ಹುತಾತ್ಮರಾಗಿ ಶಿವನ ಪಾದವನ್ನು ಸೇರಿದರು. ಕೀಳುಕುಲದವನು ಎಂದು ಸಂಪ್ರದಾಯ ಬದ್ಧ ಸಮಾಜ ಕರೆದಿದ್ದ ಹರಳಯ್ಯ ವರ ಶರಣ ತಾನಾದ, ಜಾತಿವಾದಿಗಳ ಕೋಪಕ್ಕೆ ತುತ್ತಾದರೂ ಶಿವನ ಪ್ರೀತಿಗೆ ಪಾತ್ರನಾದ.
ಅತ್ತ - ಕೂಡಲ ಸಂಗಮದಲ್ಲಿ
೧೩೪, ಹರಹರನೆ ವರಸಂಗ ಗುರು ಎನಗೆ ವರಸಂಗ.
ಕರುಣನಿಧಿ ಹರನೆ ಸಂಗಮನೆ | ಎಂದೆನುತ
ಕರ ಮುಗಿದ ಬಸವ ಬಯಲಾದ || (ಕ. ಬ. ೪೭)
ಗುರು ಬಸವಣ್ಣನವರು (ಶ್ರಾವಣ ಶುದ್ಧ ಪಂಚಮಿ ಮಂಗಳವಾರ ದಂದು ಪೂಜೆಗೆ ಕುಳಿತವರೇ ದೇವನನ್ನು ಧ್ಯಾನಿಸುತ್ತ) ಉರಿಯುಂಡ ಕರ್ಪೂರದಂತೆ ಬಯಲಾದರು.
ಒಂದು ಪರಿಪೂರ್ಣ ಚೇತನವಾಗಿ ಬಾಳಿ ಅಸಾಮಾನ್ಯ ಸಾಧನೆ ಗೈದು, ಇಳೆಯನ್ನಗಲಿದ ಗುರು ಬಸವಣ್ಣನವರನ್ನು ಕುರಿತು ಜನಪದವು ಹೀಗೆ ಕೊಂಡಾಡುವುದು :
೧೩೫. ಎಲ್ಲ ಬಲ್ಲಿದನಯ್ಯ ಕಲ್ಯಾಣ ಬಸವಯ್ಯ
ಚೆಲ್ಲಿದನು ತಂದು ಶಿವಬೆಳಕ | ನಾಡೊಳಗೆ
ಸೊಲ್ಲೆತ್ತಿ ಜನವು ಹಾಡುವುದು || (ಕ. ಬ. ೪೮).
ಬಸವಣ್ಣನವರು ಬಹು ಬಲ್ಲಿದರು, ಜ್ಞಾನಿಗಳು, ಶಿವಬೆಳಕನ್ನು ತಂದು ನಾಡಿನಲ್ಲೆಲ್ಲ ಚೆಲ್ಲಿದರು. ಆದ್ದರಿಂದಲೇ ಜನರು ಹೃದ ಯತುಂಬಿ ಅವರನ್ನು ಕೊಂಡಾಡುವರು.
೧೩೬. ಅರಿಯುದಕೆ ಕುರುಹೆಂದು ಕರಲಿಂಗ ನೀ ಕೊಟ್ಟಿಗೆ
ಶರಣೆಂಬು ನುಡಿಯ ಛಲ ಮಾಡಿ | ಶಿವಮತಕೆ
ಗುರು ಬಸವಲಿಂಗ ನಿಜ ಮಂತ್ರ ! (ಕ.ಬ. ೪೯).
ಈ ಪದ್ಯ ಅತ್ಯಪೂರ್ವವಾಗಿ ಬಸವಣ್ಣನವರ ಸಾಧನೆಯನ್ನು ಚಿತ್ರಿಸುತ್ತದೆ.
1) ಗುರು ಬಸವಣ್ಣನವರು ಪರಮಾತ್ಮನನ್ನು ತಿಳಿದುಕೊಳ್ಳಲೆಂದು ಇಷ್ಟಲಿಂಗವೆಂಬ ಕುರುಹನ್ನು ಕರಕ್ಕೆ ಕೊಟ್ಟರು. ಬ್ರಾಹ್ಮಣ-ಶೂದ್ರ ಎಂಬ ವರ್ಣಭೇದವಿಲ್ಲದೆ, ಸನ್ಯಾಸಿ-ಸಂಸಾರಿ ಎಂಬ ಆಶ್ರಮಭೇದವಿಲ್ಲದೆ, ಹೆಣ್ಣು - ಗಂಡು ಎಂಬ ಲಿಂಗಭೇದವಿಲ್ಲದೆ ಇಷ್ಟಲಿಂಗವೆಂಬ ಕುರುಹು ಕೊಟ್ಟರು.
2) ಶರಣ ಎಂಬ ನುಡಿಯನ್ನು ಛಲ ಮಾಡಿಸಿ ತೋರಿಸಿದರು. ಆಚಾರ, ಅರಿವು, ಅನುಭಾವಗಳಿಂದಲೇ ವ್ಯಕ್ತಿಯು ಶರಣನಾಗ ಬಲ್ಲನು- ಹುಟ್ಟಿನಿಂದಲ್ಲ ಎಂದು ಘೋಷಿಸಿ ಅದರಂತೆ ಎಲ್ಲರಿಗೂ ಸಂಸ್ಕಾರ, ಅವಕಾಶ ನೀಡಿ ಸಾಧಿಸಿ ತೋರಿಸಿದರು.
3) ಹಾಗಾಗಿಯೇ ಗುರು ಬಸವಣ್ಣನವರ ಹೆಸರು ಮಂತ್ರ ವಾಯಿತು.
೧೩೭. ಬಸವ ಭಕ್ತಿಯ ಬೀಜ ಬಸವ ಮುಕ್ತಿಯ ತೇಜ
ಬಸವ ಕಾಯಕದ ಗುರುಬೀಜ | ಶಿವಮತಕೆ
ಬಸವ ಓಂಕಾರ ಶಿವನಾಮೊ || (ಕ. ಬ. ೫೦)
ಬಸವಣ್ಣನೇ ಭಕ್ತಿಯ ಬೀಜ, ಬಸವಣ್ಣನೇ ಮುಕ್ತಿಯ ತೇಜ, ಆತನೇ ಕಾಯಕ ಸಿದ್ಧಾಂತಕ್ಕೆ ಆದಿ ಬೀಜ ! ಹೀಗಾಗಿ ಈ ಭಕ್ತಿ ಮಾರ್ಗಕ್ಕೆ ಆತನ ಹೆಸರು ಪ್ರಣವ ಸ್ವರೂಪಿ ಮಂತ್ರವಾಗಿದೆ.
೧೩೮. ಸುಗ್ಗಿಯಲಿ ಒಕ್ಕಲಿಗ ಉಗ್ಗಡಿಸಿ ಹಾಡುವನು
ಕಗ್ಗಾಯಿ ತುಂಬಿ ಹಣ್ಣಾಗಿ | ಕಣತುಂಬಿ
ಹಿಗ್ಗುವದು ಲೋಕ ರಸ ಕುಡಿದು || (ಕ. ಬ. ೫೧)
ಆ ಬಸವ ಮಂತ್ರವನ್ನು ಒಕ್ಕಲಿಗನು ಉಗ್ಗಡಿಸಿ ಹಾಡುವನು. ಅದರಿಂದ ಕಗ್ಗಾಯಿಯೂ ಹಣ್ಣಾಗುವುದು ; ಕಣವು ತುಂಬಿ ತುಂಬಿ ಹಿಗ್ಗುವುದು. ಲೋಕವು ಬಸವ ಮಂತ್ರದ ಅಮೃತರಸ ವನ್ನು ಪಾನ ಮಾಡಿ ತಣಿಯುವುದು.
ಇಲ್ಲಿಗೆ ಗುರು ಬಸವಣ್ಣನವರ ಜೀವನವು ಪೂರ್ತಿಗೊಳ್ಳು ವುದು. ಆದರೆ ಅಲ್ಲಿಂದ ನಂತರ ನಡೆದ ಕಥೆಯೂ ಅತ್ಯಂತ ಮಹತ್ವಪೂರ್ಣವಾಗಿರುವ ಕಾರಣ ಅದನ್ನೂ ಚಿತ್ರಿಸುವೆನು.
ಇದನ್ನು ಮಡಿವಾಳ ಮಾಚಯ್ಯನವರ ಹಂತಿಪದದಿಂದ ಆಯ್ದು ಕೊಳ್ಳಲಾಗಿದೆ.
೧೩೯. ಮಾದರಸು ಹರಳಯ್ಯ ಹೋದ ದಿನ ಶಿವನಡಿಗೆ
ಬೀದಿಬೀದಿಗಳು ಕಿಡಿಕಾರಿ | ಕಲ್ಯಾಣ
ಗಾದಿ ಹೌಹಾರಿ ತಳಮಳಿಸಿ || (ಮ. ಮಾ. ೮೩)
ನಿರಪರಾಧಿಗಳು, ಪವಿತ್ರಾತ್ಯರೂ ಆದ ಮಧುವರಸ-ಹರಳ ಯ್ಯನವರ ವಧೆಯಾದ ದಿನ ಬೀದಿಬೀದಿಗಳು ಕಿಡಿ ಕಾರಿದವು. ಜನ ಸಾಮಾನ್ಯರು ನೊಂದು, ರೋಷಗೊಂಡರು.
೧೪೦. ಅಂದು ಸಂಜೆಗೆ ಶಿವನೆ ಹೊಂದಿ ಮಂಟಪ ಕೂಡಿ
ಬಂದ ಬವಣೆಯನು ಕಳೆಯುದಕೆ | ದಂಡೇಶ
ಸಂದಣಿಗೆ ಉಳವಿ ಸೇರೆಂದ !! (ಮ. ಮಾ. ೮೫).
ಅನುಭವ ಮಂಟಪದಲ್ಲಿ ಸಭೆ ಸೇರಿತು. ಬಂದಿರುವ ವಿಪತ್ತನ್ನು ಎದುರಿಸುವುದು ಹೇಗೆ ಎಂಬ ಬಗ್ಗೆ ಚರ್ಚೆ ನಡೆಯಿತು. ಶರಣರಿಗೆ ಪ್ರಾಣಕ್ಕಿಂತಲೂ ಪ್ರಿಯವಾದುದು ವಚನ ಸಾಹಿತ್ಯ. ಏಕೆಂದರೆ,
೧೪೧. ವಚನ ಮಂಟಪದೊಳಗೆ ವಚನಗಳ ಮಳೆ ಸುರಿದು
ಶುಚಿ ಹೊಂದಿ ಜಗವು ಅನುಭಾವ | ಬಿತ್ತಿದರು.
ಉಚಿತ ಹೊಸಮತದ ಬೆಳೆ ಬಂತು || (ಕಿ, ಹಂ.೬೪)
ವಚನ ಮಂಟಪದಲ್ಲಿ ವಚನಗಳ ಮಳೆ ಸುರಿಯಿತು. ಆ ಜ್ಞಾನದ ಹೊಳೆ ಹರಿದಾಗ ಜಗತ್ತು ಶುಚಿಗೊಂಡಿತು. ಆಗ ಅನುಭಾವ ಎಂಬ ಆಧ್ಯಾತ್ಮ ವಿದ್ಯೆ [Spiritualism] ಯ ಬೀಜ ಬಿತ್ತಿ ದರು. ಪರಿಣಾಮವಾಗಿ ಹೊಸಧರ್ಮ ಎನ್ನುವ ಬೆಳೆಯು ಬಂದಿತು.
ಇಂತಹ ಅಮೂಲ್ಯ ಸಂಪತ್ತನ್ನು ಕಾಯ್ದುಕೊಳ್ಳಲು ಚಿಕ್ಕ ದಂಡನಾಯಕ ಚನ್ನಬಸವಣ್ಣನವರು ಒಂದು ಅಜ್ಞಾತ ಮತ್ತು ದುರ್ಗಮ ಸ್ಥಳಕ್ಕೆ (ನಂತರ ಅದಕ್ಕೆ ಉಳವಿ ಎಂಬ ಹೆಸರಾ ಯಿತು.) ಹೋಗಲು ಆದೇಶ ನೀಡಿದರು.
೧೪೨. ಬಿಚ್ಚುಗತ್ತಿಯ ಮಾಚ ಕೆಚ್ಚೆದೆಯ ಬಂಟನವ
ರೊಚ್ಚ ಬೊಮ್ಮಯ್ಯ ಜಗದೇವ | ನಿಮ್ಮಾಣೆ
ನುಚ್ಚು ಬಿಜ್ಜಳನ ಕಡಿಯುವೆವು || (ಮ.ಮಾ.೮೬)
ಕೆಲವು ಶರಣರು ಸಾಹಿತ್ಯ ಸಂಪತ್ತನ್ನು ಹೊರಗೆ ಸಾಗಿಸುವ, ರಕ್ಷಿಸುವ ಯೋಜನೆ ಹಾಕುತ್ತಿದ್ದರು. ಮಡಿವಾಳ ಮಾಚಯ್ಯನವರೇ ರಕ್ಷಕರಾಗಿ ಮುನ್ನಡೆಸಬೇಕೆಂದು ನಿರ್ಧರಿಸಲಾಯಿತು.
ಚಾಲುಕ್ಯ ರಾಜ್ಯದ ನಿಷ್ಠಾವಂತ ಸೇವಕರಾಗಿ, ಬಿಜ್ಜಳನ ಬಗ್ಗೆ ರೋಷಗೊಂಡಿದ್ದ ಮಲ್ಲಣ್ಣ, ಬೊಮ್ಮಣ್ಣ, ಜಗದೇವ ಎಂಬುವವರು ಅನುಭವ ಮಂಟಪದಲ್ಲಿ ಬಂದು ಕುಳಿತಿದ್ದರು. “ಇಷ್ಟು ದಿವಸ ಕಾಲ ಚಾಲುಕ್ಯರಿಗೆ ಮಾಡಿದ ದ್ರೋಹವನ್ನು ಸಹಿ ಸಿಕೊಂಡಿದ್ದೆವು. ಇದೀಗ ಮುಗ್ಧ ಶರಣರ ವಧೆಯಾಯಿತು. ನಮಗಿನ್ನು ಸಹಿಸಿಕೊಳ್ಳಲಾಗದು. ನಿಮ್ಮಾಣೆ, ಬಿಜ್ಜಳನ ತಲೆ ಕಡಿಯುವೆವು,'' ಎಂದು ಪ್ರತಿಜ್ಞೆ ಮಾಡಿ ಅವರು ಹೊರಟು ಹೋಗುವರು,
೧೪೩. ಊಳಿಗವು ಹೊರಡುದಕೆ ನಾಳಿನಾ ಉದಯದೊಳು
ಕಾಳಗವು ಎಸಗೆ ಕೂಮತಕೆ | ಮಾಚಯ್ಯ
ಹೇಳಿ ಸಜ್ಜಾದ ಕಾಳಗಕೆ || (ಮ. ಮಾ. ೮೭)
ಬೆಳಗಿನ ಜಾವದಲ್ಲಿಯೇ ಶರಣರು ಹೊರಡಬೇಕೆಂದು, ಅಕಸ್ಮಾತ್ ಶತ್ರುಗಳನ್ನು ಎದುರಿಸಬೇಕಾದರೂ ಕಾಳಗಕ್ಕೆ ಸಜ್ಜಾಗಿ ಇರಬೇಕೆಂದು ಮಾಚಯ್ಯನು ಗಣಾಚಾರಿಗಳೊಡನೆ ಶಸ್ತ್ರಧಾರಿಯಾಗಿ ನಿಂತನು.
೧೪೪, ಕಾಲರುದ್ರನು ಮಾಚ ಭಾಳಲೋಚನ ಭಕ್ತ
ಮೊಲ್ಲ ಬೊಮ್ಮಯ್ಯ ಜಗದೇವ | ಮನೆ ಹೊಕ್ಕು
ಸೀಳಿ ತಲೆ ಹೊಡೆದು ಬಿಜ್ಜಳನ || (ಮ.ಮಾ. ೮೮)
ಕಾಲರುದ್ರನಂತಹ ಮಾಚಿದೇವನ ರಕ್ಷಣೆಯಲ್ಲಿ ಪ್ರಮುಖ ಶರ ಣರು ಬೆಳಗಿನ ಜಾವದಲ್ಲಿಯೇ ಕಲ್ಯಾಣವನ್ನು ತೊರೆದರು. ಅಂದು ರಾತ್ರಿಯಲ್ಲಿ ಮೊಲ್ಲ, ಬೊಮ್ಮ, ಜಗದೇವರು ಅರಮನೆ ಹೊಕ್ಕು ಬಿಜ್ಜಳರಾಜನ ತಲೆಯನ್ನು ತರಿದರು.
೧೪೫, ಬಿಜ್ಜಳನ ವಧೆಯಾತು ಹೆಜ್ಜೆ ಮೀರಿತು ನಾಡು
ಕಜ್ಜ ಹದಗೆಟ್ಟು ಶಿವಶರಣ | ರೂಳಿಗವು.
ಸಜ್ಜುಗೇಡಾಗಿ ಊರ್ಬಿಟ್ಟು || (ನೇ. ಅ. ೮೧)
ಬಿಜ್ಜಳನ ವಧೆಯಾಯಿತು, ಕಾಯಿದೆ ಕಾನೂನು ಸಡಲಿದವು. ವಾತಾವರಣ ಹದಗೆಟ್ಟಿತು ; ಶಿವಶರಣರ ಸಮುದಾಯವು ವಿಕ್ರಾಂತ ಸ್ಥಿತಿಯಲ್ಲಿ, ಅವ್ಯವಸ್ಥಿತವಾಗಿ ಊರನ್ನು ಬಿಡಬೇಕಾಯಿತು.
೧೪೬. ಅಳಿಯ ಬಿಜ್ಜಳರಾಯ ಕೊಲೆಯ ಕೇಳುತಲೆದ್ದ
ತಳಮಳಿಸಿ ಬಳಗ ಕೂಡಿಸಿದ | ದಂಡೆತ್ತಿ
ಉಳುವೆ ಬಳಿಯವರ ತಡೆಗಟ್ಟಿ || (ಮ. ಮಾ.೮೯)
ಕಲ್ಯಾಣದಿಂದ ಕೊಂಚ ಹೊರಗೆ ಇದ್ದ ಬಿಜ್ಜಳನ ಅಳಿಯನು ತನ್ನ ಮಾವನ ಸಾವಿನ ಸುದ್ದಿ ಕೇಳಿ ಧಾವಿಸಿದ. (ಕೊಂಡೆಯರು ಅವ ನಿಗೆ ತಪ್ಪು ವಿವರ ಕೊಟ್ಟರು. ಜಗದೇವ-ಮಲ್ಲ - ಬೊಮ್ಮರದು ರಾಜಕೀಯ ದ್ವೇಷದ ವರ್ತನೆಯಾದರೂ, ಶರಣರೇ ಆ ಕೊಲೆಗೆ ಪ್ರೇರಕರು ಎಂಬ ತಪ್ಪು ಸುದ್ದಿ ಕೇಳಿ, ಅಳಿಯ ಬಿಜ್ಜಳನು ಕೋಪಗೊಂಡನು) ಸೈನ್ಯವನ್ನು ಕೂಡಿಸಿ ಶರಣರ ಮೇಲೆ ದಂಡೆತ್ತಿ ಹೊರಟ. ಸಹ್ಯಾದ್ರಿಯ ಘಟ್ಟದ ಕಡೆ ಹೊರಟಿದ್ದ. ಶರಣರ ಮೇಲೆ ಸೈನ್ಯವು ದಾಳಿ ಮಾಡಿತು.
೧೪೭. ಕಾದರೋಳ್ಳಿಯ ಮುಂದೆ ಕಾದಿದರು ಜಂಗಮರು
ಕಾದಿ ಹಿಮ್ಮೆಟ್ಟಿ ಜೈನರನು | ಮುರಗೋಡ
ಹಾದಿಯೊಳು ಮುರಿದ ಮಾಚಯ್ಯ|| (ಮ.ಮಾ.೯೦).
ಕಾದರೊಳ್ಳಿ ಎಂಬಲ್ಲಿ ಬಲು ತೀವ್ರವಾದ ಕಾಳಗವಾಯಿತು. ಕೆಲವು ಶರಣರು ಸೈನ್ಯವನ್ನು ತಡೆಯುತ್ತಿದ್ದಂತೆಯೇ ಇನ್ನಷ್ಟು ಜನರು ಸಾಹಿತ್ಯವನ್ನು ಮುಂದುಮುಂದಕ್ಕೆ ಸಾಗಿಸುತ್ತಿದ್ದರು. ಮುರುಗೋಡು ಎಂಬಲ್ಲಿ ಅಂತಿಮ ಕಾಳಗವಾಯಿತು. ಅಲ್ಲಿ ಶರಣರಿಗೆ ಜಯವು ಲಭ್ಯವಾಯಿತು.
೧೪೮. ತುಂಡ ಜಂಗಮದಂಡು ದಂಡನಾಯಕ ಮಾಚ
ಕಂಡಕಂಡಲ್ಲಿ ವೈರಿಗಳ | ಚಲ್ಲಿದರು
ಚಂಡು ಕಳಕೊಂಡ ಮರಿ ಅರಸ || (ಮ.ಮಾ.೯೧).
ಸಾಹಿತ್ಯ ರಕ್ಷಣೆಗಾಗಿ ಜಂಗಮರು ಖಡ್ಗ ಹಿಡಿದರು, ಮಾಚಿದೇವನು ದಂಡನಾಯಕನಾದ. ವಚನ ವಾಙ್ಞಯವನ್ನು ನಾಶಮಾಡ ಬಂದ ವೈರಿಗಳನ್ನು ಸದೆಬಡಿದರು. ಅರಸನ ಸೇನೆಯ ಮುಖ್ಯಸ್ಥ ಹತನಾದ. (ಬಿಜ್ಜಳನ ಅಳಿಯ ಸೆರೆ ಸಿಕ್ಕಾಗ ಅಕ್ಕ ನಾಗಲಾಂಬಿಕೆ ಕ್ಷಮಿಸಿ ಕಳಿಸುವಳು.)
೧೪೯. ಬೆನ್ನ ಹತ್ತಿದ ವೈರಿ ತಣ್ಣಗಾಯಿತು ಚೆದರಿ
ಮಣ್ಣುಗೂಡಿಸಿದ ಮಾಚಯ್ಯ | ಕೈಯೆತ್ತಿ
ಚಿನ್ಹವುಳಿಸಿದನು ಲಿಂಗಿಗಳ || (ಮ. ಮಾ. ೯೨)
ವೈರಿ ಸೈನ್ಯದ ಶಕ್ತಿಯುಡುಗಿತು. ಚೆದುರಿ ಹೋಯಿತು. ಮಾಚಯ್ಯ ಅವರಿಗೆ ಚೆನ್ನಾಗಿ ಹಣ್ಣುಗಾಯಿ ನೀರುಗಾಯಿ ಮಾಡಿದ. ಪುಣ್ಯಾತ್ಮ. ಶಸ್ತ್ರವನ್ನು ಹಿಡಿದು ಲಿಂಗಾಂಗಿಗಳ ಚಿನ್ನವನ್ನು | ಉಳಿಸಿದನು. (ಲಿಂಗವಂತ ಧರ್ಮವನ್ನು ಮತ್ತು ಸಾಹಿತ್ಯವನ್ನು ರಕ್ಷಿಸಿದನು.)
೧೫೦. ಹರಭಜನೆ ಗುರುಸೇವೆ ಉರುತರದಿ ಮಾಡುತಲಿ
ಶರಣಗಣ ಕೂಡಿ ಉಳಿವೆಯೊಳು ! ಮರುದಿನವೆ
ಮೆರೆಸಿದರು ತಮ್ಮ ಮಂಟಪ || (ಮ. ಮಾ. ೯೩)
ಚದುರಿದ್ದ ಶರಣರೆಲ್ಲ ಉಳಿವೆಯಲ್ಲಿ ಸೇರಿ ಪರಮಾತ್ಮನ ಭಜನೆ, ಗುರು ಸೇವೆ ಮಾಡುತ್ತ ಪುನಃ ಅಲ್ಲಿಯೂ ತಮ್ಮ ಮಂಟಪವನ್ನು ಕಟ್ಟಿದರು. ಬಸವ ಧರ್ಮದ ಪ್ರಸಾರ ಕಾರ್ಯ, ವಚನ ಸಾಹಿತ್ಯದ ಪ್ರತಿ ಮಾಡುವಿಕೆ, ದಾಸೋಹ ಎಲ್ಲ ಪ್ರಾರಂಭವಾದವು.
೧೫೧. ಚನ್ನ ಬಸವೇಶ್ವರನು ಉನ್ನತಾನುಭಾವಿಗಳು
ಚಿನ್ನಮಯವಾತು ಆ ಉಳಿವೆ | ಲಿಂಗಿಗಳ
ಕನ್ನೆ ಭಕ್ತಿಯಾ ಗೂಡಾತು || (ಮ. ಮಾ. ೯೪).
ಚಿನ್ಮಯ ಜ್ಞಾನಿ ಚನ್ನ ಬಸವವೇಶ್ವರನ ನೇತೃತ್ವದಲ್ಲಿ ಅನುಭಾವಿಗಳು ಪುನಃ ಸಮಾವೇಶವಾದರು. ಉಳಿವೆಯು ಪುನಃ ಜ್ಞಾನ ದಿಂದ ಬೆಳಗಿತು. ಶರಣಸತಿ-ಲಿಂಗಪತಿ ಭಕ್ತಿಗೆ ಅದು ಗೂಡಾಯಿತು.
೧೫೨. ದೂರದೂರವೆ ಸಾಗಿ ಸೇರಿದರು ಹಳ್ಳಿಗಳ
ಯಾರು ಯಾರೆಂಬ ಗುರುತಳಿದು | ಮರೆಯಾಗಿ
ಆರಿ ಕೆಂಡಡಗಿ ಬೂದಿಯೊಳು || (ನೇ. ಅ. ೮೨).
ಕಲ್ಯಾಣದಲ್ಲಿ ಉದ್ವಿಗ್ನ ವಾತಾವರಣ ಉಂಟಾಗುತ್ತಲೇ ಶರಣರು ದೂರದೂರಕ್ಕೆ ಚದುರಿದರು. ಹಳ್ಳಿಗಳಲ್ಲಿ ಸೇರಿದರು. ಯಾರು ಯಾರು ಎಲ್ಲಿಗೆ ಹೋದರೆಂಬುದೂ ತಿಳಿಯಲಿಲ್ಲ. ಬೂದಿಯಲ್ಲಿ ಕೆಂಡವು ಮರೆಯಾಗಿ ಇರುವಂತೆ ಶರಣ ಚೇತನಗಳು ಅಡಗಿ ಕೊಂಡವು.
(ಜನಪದ ಕವಿಗಳಿಗೆ ಯಾವುದೋ ಭರವಸೆ, ಕನಸು, ಆತ್ಮ ವಿಶ್ವಾಸ, ಹೀಗೆ ಅಡಗಿದ ಕೆಂಡ ಮಗದೊಮ್ಮೆ ಹೊತ್ತಿ ಉರಿಯುವುದೆಂಬ ಆಸೆ. ಅವರು ಹೀಗೆ ಸಮಾಧಾನ ಮಾಡಿಕೊಳ್ಳುವರು.)
೧೫೩. ಮಂಟಪದ ಹೆಜ್ಜೆನ ಗಂಟೇರು ಕೆಡಿಸಿದರೆ
ಕುಂಟಿತವೆ ಜೇನ ನೊಣಗಳಿಗೆ | ಹುಟ್ಟಿಡಲು
ಬಂಟ ಶರಣರಿಗೆ ಕಂಟಕವೆ ? || (ನೇ. ಅ. ೭೩)
ಅನುಭವ ಮಂಟಪದಲ್ಲಿ ಶರಣರೆಂಬ ಜೇನ್ನೊಣಗಳು ಸ್ವಾನುಭವದ ಸಾಹಿತ್ಯದ ಹುಟ್ಟನ್ನು ನಿರ್ಮಿಸಿ, ಅದರಲ್ಲಿ ತಮ್ಮ ಸ್ವಾನುಭವದ ಮಧುವನ್ನು ತುಂಬಿದವು ಮತಾಂಧರು, ಚಾಡಿಕೋರರು ಆ ಜೇನಿನ ಹುಟ್ಟಿಗೆ ಅಘಾತ ಮಾಡಿದರು. ಆದರೇನಂತೆ ? ಆ ಅನುಭಾವಿಗಳು ಎಂಬ ಜೇನ್ನೊಣಗಳಿಗೆ ಇನ್ನೊಂದು ಕಡೆ ವಚನ ಶಾಸ್ತ್ರದ ಹುಟ್ಟು ಕಟ್ಟಿ ಅನುಭಾವದ ಜೇನು ಸಂಗ್ರಹಿಸುವುದು ಅಸಾಧ್ಯದ ಕೆಲಸವೆ ? ಶರಣರು ಧೀರರು, ಕಂಟಕಗಳಿಗೆ ಅಂಜು ವವರಲ್ಲ.
೧೫೪, ಶಿವಶರಣ ದುಂಬಿಗಳು ಭವದೊಳಗೆ ಹಾರ್ಹಾರಿ
ಶಿವಮತದ ಹುಟ್ಟು ಕಟ್ಟಿದವು | ವಚನಗಳು
ಸವೆಯದುಳಿದಿರುವ ಹೊಸ ಜೇನು || (ನೇ. ಅ.೮೪)
ಶಿವಶರಣರು ಎಂಬ ದೇವದುಂಬಿಗಳು, ಸುತ್ತಲಿನ ಭವಜಗತ್ತು ಎಂಬ ವನದೊಳಗೆ ಹಾರಾಡಿದವು. ಶಿವಮತದ ಹುಟ್ಟನ್ನು ಪುನಃ ಕಟ್ಟಿದವು. ವಚನ ಸಾಹಿತ್ಯವು ಸವೆಯದೆ ಉಳಿದಿರುವ ನಿತ್ಯ ನೂತನವೂ, ಸಾರ್ವಕಾಲಿಕವೂ ಆಗಿರುವ ಹೊಸಜೇನು.
೧೫೫. ಮಲ್ಲಿಗೆ ಇದ್ದಾಗ ಮುಳ್ಳೇಕೆ ಮುಡಿಯುತೀ
ಕಲ್ಯಾಣದಲ್ಲಿ ಬಸವಯ್ಯ । ಇದ್ದಾಗ
ಕಲ್ಗೇಕೆ ಕಯ್ಯ ಮುಗಿಯುವೆ ||
ಅತ್ಯಂತ ಸುಮಧುರ ಸುವಾಸನೆ ಬೀರುವ ಮಲ್ಲಿಗೆ ಹೂವು ಇರುವಾಗ ಯಾರಾದರೂ ಮುಳ್ಳನ್ನು ಮುಡಿಯುವರೆ ? ಕಲ್ಯಾಣದ ಬಸವಯ್ಯನಂತಹ ಗುರು ಇರುವಾಗ (ಆತನನ್ನು ಸ್ಮರಿಸುವುದು ಬಿಟ್ಟು) ಕಲ್ಲಿಗೆ ಏಕೆ ಕೈಮುಗಿವೆ ?
೧೫೬. ಶರಣರ ನೆನೆದಾರ ಸರಗೀಯ ಇಟ್ಟಂಗಾ
ಅರಳ ಮಲ್ಲಿಗಿ ಮುಡಿದಾಂಗಾ | ಕಲ್ಯಾಣ
ಶರಣರ ನೆನೆಯೋ ನನ ಮನವೆ ||
ಒಂದು ತತ್ವಕ್ಕಾಗಿ, ಆದರ್ಶಕ್ಕಾಗಿ ಬಾಳಿದ ಕಲ್ಯಾಣದ ಶರಣರನ್ನು ನೆನೆಯುವುದು ಎಂದರೆ, ಅತ್ಯಂತ ಬೆಲೆಬಾಳುವ ಆಭರಣ ವಾದ ಸರಗಿ (ಸೊಂಟದ ಡಾಬು) ಯನ್ನು ಇಟ್ಟು ಕೊಂಡಂತೆ, ಅದೇ ಆಗ ಅರಳಿದ ಘಮಘಮಿಸುವ ಮಲ್ಲಿಗೆಯನ್ನು ಮುಡಿದಂತೆ. ಆದ್ದರಿಂದ ಎಲೇ ಮನಸ್ಸೇ ಕಲ್ಯಾಣದ ಶರಣರನ್ನು ಸದಾ ಕಾಲವೂ ನೆನೆ.
೧೫೭. ಬಸವ ಹಲೆ ಹಲೆ ಹಂತಿ ಬಸವ ಹಲೆ ಹಲೆ ರಾಶಿ
ಬಸವ ಹುಲುಹುಲುಸು ಕಣಕಣಕೆ | ಒಕ್ಕಲಿಗ
ಬಸವನ ನೆನೆಸೋ ಚಣಚಣಕೆ || (ಕ. ಬ. ೫೨).
ಹಂತಿ ಕಟ್ಟುವಾಗ, ರಾಶಿ ಮಾಡುವಾಗ ಗುರು ಬಸವಣ್ಣನವರನ್ನು ನೆನೆಸು ಒಕ್ಕಲಿಗನೆ ; ಅದರಿಂದ ಕಣದಲ್ಲಿ ಬೆಳೆಯು ಹುಲುಸಾಗಿ ವೃದ್ಧಿಯಾಗುವುದು. ನಿನ್ನ ಪ್ರತಿಯೊಂದು ಕೆಲಸದಲ್ಲೂ, ಕ್ಷಣ ಕ್ಷಣಕ್ಕೂ ಆತನನ್ನು ಸ್ಮರಿಸು.
೧೫೮, ಈಸರನ ನೆನೆಸಿದರೆ ವಿಷವೆಲ್ಲ ಅಮರೂತ
ಬಿಸಿಲೆಂಬ ದಾರಿ ನೆರಳಾಗಿ | ಎಲೆ ಮನವೆ
ಬಸವಯ್ಯ ನೆನಿಸು ಕೈಲಾಸ || ಕ (ಕ. ಬ. ೫೩)
ಪರಮಾತ್ಮನನ್ನು ಸ್ಮರಿಸುತ್ತಿದ್ದರೆ ವಿಷವೂ ಅಮೃತವಾಗುತ್ತದೆ. ದಾರಿ ನಡೆಯುವಾಗ ಬಿಸಿಲೂ ನೆರಳಾಗಿ ಬಿಡುತ್ತದೆ. ಗುರು ಬಸವಣ್ಣನವರನ್ನು ನೆನೆಸಿದರೆ ಕೈಲಾಸದ ಅಂದರೆ ಸಮೃದ್ಧಿ ಸಂತೃಪ್ತಿ - ಸುಯಿಧಾನಗಳಿಂದ ಕೂಡಿದ ಸ್ಥಿತಿ ಇಲ್ಲಿಯೇ ದೊರೆಯುತ್ತದೆ. ಆದ್ದರಿಂದ ಬಿಡದೆ ಸ್ಮರಿಸು.
೧೫೯, ಹಂತಿಯದು ಹಾಡೆಂದು ಪಂಥ ಕಟ್ಟಲಿಬೇಡ
ಕಂತಿ ಕರಗುವುದು ನಿಂತಲ್ಲಿ | ಬಸವಯ್ಯ
ಕುಂತು ಎದೆಯೊಳಗೆ ಹಾಡಿಸಿದ || (ಕ, ಬ, ೫೪)
ಏನು ಹಾಡಬಲ್ಲೆವು ಎಂದು ಪಂಥ ಕಟ್ಟಬೇಡಿರಿ. ನೀವು ಎಷ್ಟು ಕಂತೆಕಂತೆ ತೆನೆ ತಂದು ಹಾಕಿದರೂ, ಅದು ಕರಗೀತೆ ವಿನಾ ನಾವೇನು ಹಾಡುವುದರಲ್ಲಿ ಸೋಲುವುದಿಲ್ಲ. ಏಕೆ ಗೊತ್ತೆ ? ಬಸವಣ್ಣ ನಮ್ಮ ಎದೆಯೊಳಗೆ ಕುಂತು ಹಾಡಿಸುತ್ತಿದ್ದಾನೆ.
೧೬೦, ಶರಣು ಶರಣೆಂಬುವೆವು ಹರಣ ಹಾರುವ ತನಕ
ಕರುಣಿಸಿರಿ ಶರಣ ಬಸವಯ್ಯ | ನಮಗಿನ್ನು
ಹರಸಿರಿ ಹುಲುಸು ಹುಲ್ಲುಲಿಗೋ || (ಕ. ಬ. ೫೫)
ಶರಣಗಣಮಣಿ ಬಸವಯ್ಯ ನಾವು ನಿನಗೆ ಶರಣು ಎನ್ನುತ್ತಿರುವವು. ಎಲ್ಲಿಯವರೆಗೂ ? ನಮ್ಮ ದೇಹದಿಂದ ಪ್ರಾಣಹಾರುವ ವರೆಗು ! ಕರುಣಿಸು ತಂದೆ. ನಮ್ಮನ್ನು ಹರಸು, ನಿನ್ನ ಕರುಣೆ ಯಿಂದ, ಹರಕೆಯಿಂದ ನಮ್ಮ ಬಾಳಿನಲ್ಲಿ ಎಲ್ಲವೂ ಹುಲುಸಾಗಲಿ.
ಸಮಾರೋಪ :
ಯಾವ ಕವಿ ಪಂಡಿತರಿಗಿಂತಲೂ ಮೀರಿದ ಹೃದಯವಂತಿಕೆ ಯಿಂದ ಮಣ್ಣಿನ ಮಕ್ಕಳು ಹಾಡಿದ್ದಾರೆ. ಘಟನೆಗಳನ್ನು ಸಂಕೋಚ ವಿಲ್ಲದೆ ಚಿತ್ರಿಸಿದ್ದಾರೆ. ಇಷ್ಟಾದರೂ ಅಜ್ಞಾತರಾಗಿ ಉಳಿದಿದ್ದಾರೆ. ಇಂಥ ಅಜ್ಞಾತ ಹಾಡುಗಬ್ಬಕಾರರಿಗೆ ಧನ್ಯವಾದ ಸಲ್ಲಿಸೋಣ.
ಅವರು ನಮಗೆ ಕಲಿಸಿಕೊಟ್ಟಂತೆ “ನಮ್ಮ ದೇಹದಲ್ಲಿ ಪ್ರಾಣವಿರುವವರೆಗೆ ಅಪ್ಪ ಬಸವಣ್ಣರಿಗೆ ಶರಣು ಶರಣೆನ್ನೋಣ, ಮಂತ್ರಪುರುಷ ಬಸವಣ್ಣನವರ ಕರುಣೆಗಾಗಿ, ಹರಕೆಗಾಗಿ ಬೇಡೋಣ, ಬದುಕನ್ನು ಹುಲುಸಾಗಿಸಲು ಅವರಲ್ಲಿಯೇ ಕೇಳೋಣ.”
ಗುರು ಬಸವಣ್ಣನವರು ಮದುವೆಯಾದದ್ದು ಒಬ್ಬಳನ್ನೆ | ಬಸವಣ್ಣನವರೇ ಗುರು |