Previous ಬಸವಣ್ಣನವರ ಬಗ್ಗೆ ಬಹುರೂಪಿ ಚೌಡಯ್ಯನವರ ವಚನ ಆಧ್ಯಾತ್ಮ ಕ್ರಾಂತಿವೀರ ಗುರು ಬಸವೇಶ್ವರ Next

ಗುರು ಬಸವಣ್ಣನವರ ಬಗ್ಗೆ ಮಡಿವಾಳ ಮಾಚಿದೇವಯ್ಯಾ ವಚನಗಳು

*

438
ಅಂಗದ ಕ್ರೀಯೆ ಲಿಂಗದ ನಿಜ, ಲಿಂಗದ ನಿಜವೆ ಜಂಗಮ.
ಆ ಜಂಗಮದ ಕ್ರೀಯೆಲ್ಲಾ ಲಿಂಗಮಯ.
ಜಂಗಮದ ಸೇವೆಯೆ ಲಿಂಗದ ಕಳೆ.
ಲಿಂಗದ ಕಳೆಯೆ ಜಂಗಮ, ಜಂಗಮದಿಂದೊದಗಿದುದೆ ಪ್ರಸಾದ.
ಪ್ರಸಾದದೊದವೆ ಲಿಂಗೈಕ್ಯವು.
ಈ ಗುರು, ನಾನು ನಿಜವ ಸಾಧಿಸಿದೆವು.
ನಮ್ಮ ಕಲಿದೇವರದೇವನ
ಬಸವಣ್ಣನಿಂದ ಕೇಳಯ್ಯಾ, ಚಂದಯ್ಯಾ

445
ಅಂಗಾಲ ಕಣ್ಣವರಾಗಬಹುದಲ್ಲದೆ, ಮೈಯೆಲ್ಲ ಕಣ್ಣವರಾಗಬಾರದು.
ಮೈಯೆಲ್ಲ ಕಣ್ಣವರಾಗಬಹುದಲ್ಲದೆ, ನೂಸಲ ಕಣ್ಣು ಚತುರ್ಭುಜರಾಗಬಾರದು.
ನೊಸಲಕಣ್ಣು ಚತುರ್ಭುಜದವರಾಗಹುದಲ್ಲದೆ, ಪಂಚವಕ್ತ್ರ ದಶಭುಜದವರಾಗಬಾರದು.
ಪಂಚವಕ್ತ್ರ ದಶಭುಜದವರಾಗಬಹುದಲ್ಲದೆ, ಸರ್ವಾಂಗಲಿಂಗಿಗಳಾಗಬಾರದು.
ಸರ್ವಾಂಗಲಿಂಗಿಗಳಾಗಬಹುದಲ್ಲದೆ, ಕಲಿದೇವಯ್ಯಾ,
ನಿಮ್ಮ ಶರಣ ಬಸವಣ್ಣನಾಗಬಾರದೆಂದರಿದು,
ಬಸವಣ್ಣನ ಶ್ರೀಪಾದಕ್ಕೆ ನಮೋ ನಮೋ ಎನುತಿರ್ದೆನು.

457
ಅಯ್ಯಾ ಅಯ್ಯಾ ಎಂದು ನೆನೆವುತ್ತಿಹರಯ್ಯಾ
ಗಂಗೆವಾಳುಕಸಮಾರುದ್ರರು,
ಅವರಿಗೆ ಪ್ರಸಾದಲಿಂಗವ ಸಾಹಿತ್ಯವ ಮಾಡಿದ ಕಾರಣ.
ಅಯ್ಯಾ ಅಯ್ಯಾ ಎಂದು ಹೊಗಳುತ್ತಿಹರಯ್ಯಾ ಏಕಾದಶರುದ್ರರು,
ಅವರಿಗೆ ಸಕಲ ನಿಃಕಲಾತ್ಮಕ ನೀನೆಯಾಗಿ
ಪ್ರಾಣಲಿಂಗವ ಸಾಹಿತ್ಯವ ಮಾಡಿದ ಕಾರಣ.
ಶಿವಶಿವಾ ಎನುತಿರ್ಪರಯ್ಯಾ
ವಿಷ್ಣು ಮೊದಲಾದ ತ್ರೈತಿಂಶತಿಕೋಟಿ ದೇವತೆಗಳು,
ಅವರಿಗೆ ಧರ್ಮಾರ್ಥಕಾಮಮೋಕ್ಷಂಗಳನಿತ್ತೆಯಾಗಿ.
ಹರಹರಾ ಎನುತಿರ್ಪರಯ್ಯಾ
ಬ್ರಹ್ಮ ಮೊದಲಾದ ಅಷ್ಟಾಶೀತೀಸಹಸ್ರ ಋಷಿಯರು,
ಅವರಿಗೆ ಸ್ವರ್ಗ ನರಕಾದಿಗಳ ಮಾಡಿದೆಯಾಗಿ.
ಮಹಾದೇವಾ ಮಹಾದೇವಾ ಎನುತಿರ್ಪರಯ್ಯಾ ದಾನವಾದಿಗಳು
ಅವರಿಗೆ ಸುಕೃತ ದುಃಕೃತಂಗಳನೀವೆಯಾಗಿ.
ಬಸವಾ ಬಸವಾ ಎನುತಿರ್ಪರಯ್ಯಾ ಮಹಾಭಕ್ತರು,
ಅವರಿಗೆ ಗುರು ಲಿಂಗ ಜಂಗಮ ಪಾದೋದಕ ಪ್ರಸಾದವ ತೋರಿದ ಕಾರಣ.
ಉಳಿದ ಎಂಬತ್ತುನಾಲ್ಕುಲಕ್ಷ ಜೀವರಾಶಿಗಳೆಲ್ಲ
ನಿಮ್ಮುವನನಿಮಿಷವಾಗಿ ನೋಡುತಿರ್ಪರಯ್ಯಾ,
ಸಕಲ ನಿಃಕಲಾತ್ಮಕ ಚೈತನ್ಯನಾದೆಯಾಗಿ.
ಸಕಲವೂ ನಿನ್ನಾಧಾರ, ನಿಃಕಲವೂ ನಿನ್ನಾಧಾರ.
ಸಕಲ ನಿಃಕಲದೊಡೆಯ ದೇವರದೇವ ಕಲಿದೇವಾ
ನಿಮ್ಮ ಕರಸ್ಥಲದ ಹಂಗಿನೊಳಗಿರ್ದ ಕಾರಣ ಸಂಗನಬಸವಣ್ಣ.

468
ಅಯ್ಯಾ, ನಿಮ್ಮ ಧ್ಯಾನದಲ್ಲಿರಿಸಲೊಲ್ಲದೆ
ಬಸವಣ್ಣನ ಧ್ಯಾನದಲ್ಲಿರಿಸಯ್ಯಾ ಎನ್ನನು.
ಲಿಂಗವೇದ್ಯ ಬಸವಣ್ಣ, ಜಂಗಮವೇದ್ಯ ಬಸವಣ್ಣ.
ಪ್ರಸಾದವೇದ್ಯ ಬಸವಣ್ಣ, ನಿಜಪದವೇದ್ಯ ಬಸವಣ್ಣ.
ಮಹಾವೇದ್ಯ ಬಸವಣ್ಣ.
ಇಂತು ಬಸವಣ್ಣನ ಸಂಗದಲ್ಲಿರಿಸು, ಕಲಿದೇವರದೇವ.

476
ಅರಿದಲ್ಲದೆ ಗುರುವ ಕಾಣಬಾರದು.
ಅರಿದಲ್ಲದೆ ಲಿಂಗವ ಕಾಣಬಾರದು.
ಅರಿದಲ್ಲದೆ ಜಂಗಮವ ಕಾಣಬಾರದು.
ಇಂತೀ ತ್ರಿವಿಧವು, ಬಸವಣ್ಣನ ಕೃಪೆಯಿಂದ
ಎನಗೆ ಸ್ವಾಯತವಾಯಿತ್ತಾಗಿ,
ಭಿನ್ನವಿಲ್ಲ ಕಾಣಾ ಕಲಿದೇವರದೇವ.

486
ಅಸಮ ಶಿವಲಿಂಗ ಕೈವಶವಾಗಿರಲು,
ವಸುಧೆಯ ಮೇಲಣ ಪ್ರತಿಷ್ಠೆಗೆ ಶರಣೆಂದಡೆ,
ಬಸವಣ್ಣಪ್ರಿಯ ಲಿಂಗದ ಚೇತನವದಂದೆ ತೊಲಗುವದೆಂದ,
ಕಲಿದೇವಯ್ಯ.

488
ಆಕಾರ ನಿರಾಕಾರವಾಯಿತ್ತಲ್ಲಾ ಬಸವಣ್ಣ.
ಪ್ರಾಣ ನಿಃಪ್ರಾಣವಾಯಿತ್ತಲ್ಲಾ ಬಸವಣ್ಣ.
ಅಂಗಜಂಗಮದ ಮಾಟ ಸಮಾಪ್ತಿಯಾಯಿತ್ತಲ್ಲಾ ಬಸವಣ್ಣ.
ನಿಃಶಬ್ದವೇದ್ಯವಾದೆಯಲ್ಲಾ ಬಸವಣ್ಣ.
ಕಲಿದೇವರದೇವನ ಹೃದಯಕಮಲವ ಹೊಕ್ಕು,
ದೇವರಿಗೆ ದೇವನಾಗಿ ಹೋದೆಯಲ್ಲಾ ಸಂಗನಬಸವಣ್ಣ.

492
ಆಚಾರಲಿಂಗ ಗುರುಲಿಂಗ ಶಿವಲಿಂಗ ಜಂಗಮಲಿಂಗ
ಪ್ರಸಾದಲಿಂಗ ಮಹಾಲಿಂಗ ಇಷ್ಟಪ್ರಾಣಭಾವವೆಂಬ ಲಿಂಗಗಳು ತಾವೆ,
ಬಸವಣ್ಣನಿಂದಾದ ಕಾರಣ, ಕಲಿದೇವರಲ್ಲಿ ಅಹೋರಾತ್ರಿಯೊಳೆದ್ದು,
ಬಸವಣ್ಣನ ಶ್ರೀಪಾದಕ್ಕೆ ನಮೋ ನಮೋ ಎನುತಿರ್ದೆನು.

494
ಆತ್ಮ ತನುವನು ಮುಟ್ಟಿದ ಮೂಲವ ನಿಷ್ಠಾಪರದಲ್ಲಿ ಮುಟ್ಟಿರೊ.
ಆ ಪರದಲ್ಲಿ ವಿದ್ಯೆಯೊಳಗಣ ಸಹಜವರಿದಂಗಲ್ಲದೆ
ಲಿಂಗವೆನಬಾರದು, ಜಂಗಮವೆನಬಾರದು.
ಧಾರಾಮಂಟಪದ ಸಹಜವನರಿಯದೆ ನರಕಕ್ಕೆ ಗುರಿಯಾದರು ಕಾಣಾ
ಲಿಂಗಾರ್ಚಕರಾದವರು.
ಜನನ ಮರಣ ತಪ್ಪದೆಂದಿವರನತಿಗಳೆದು,
ಲಿಂಗಾರ್ಚನೆಯ ಮಾಡಿ ತೋರಿ, ತನ್ನವರ
ನಿತ್ಯದೊಳಗಿರಿಸಿದಾತ ಬಸವಣ್ಣ ಕಾಣಾ, ಕಲಿದೇವಯ್ಯ.

498
ಆದಿ ಅನಾದಿಯಿಲ್ಲದಂದು, ಸಾಧ್ಯ ಅಸಾಧ್ಯವಿಲ್ಲದಂದು,
ಸ್ಥೂಲ ಸೂಕ್ಷ್ಮವೆಂಬ ಮೂರ್ತಿಗಳಿಲ್ಲದಂದು,
ಸಾಕಾರ ನಿರಾಕಾರವೆಂಬ ವಾಕು ಹುಟ್ಟದಂದು,
ಶಂಕರ ಶಶಿಧರ ಈಶ್ವರನೆಂಬ ಗಣಾಧೀಶ್ವರರಿಲ್ಲದಂದು,
ಉಮೆಯ ಕಲ್ಯಾಣವಿಲ್ಲದಂದು,
ಶಿವರತಿ ಮಹಾರತಿ ಬಸವಣ್ಣನಿಂದಾಯಿತ್ತು.
ಸರ್ವವಿಸ್ತೀರ್ಣವ ನೀಕರಿಸಿ ಶಿವಲಿಂಗಾರ್ಚನೆಯ ತೋರಿದ.
ನಿತ್ಯಲಿಂರ್ಗಾಚನೆಯಲ್ಲಿ ಪ್ರಸಾದಧ್ಯಾನ,
ಜಂಗಮಾರ್ಚನೆಯಲ್ಲಿ ಪ್ರಸಾದಭೋಗ
ಎಂಬುದನು ಸಂಗನಬಸವಣ್ಣನಲ್ಲದೆ ಮತ್ತಾರೂ ಅರಿಯರು.
ಭಕ್ತಿಯ ಕುಳಸ್ಥಳವನೂ ಭಕ್ತಿಯ ಸಾರಾಯವನೂ
ಮುನ್ನವೆ ಅತಿರಥ ಸಮರಥರೆಲ್ಲರೂ ಅರಿಯರು.
ನಿಮ್ಮ ಬಸವಣ್ಣನಿಂತಹ ಸ್ವತಂತ್ರನಯ್ಯಾ, ಕಲಿದೇವರದೇವ.

499
ಆದಿಯಲ್ಲಿ ನಿಮ್ಮ, ಜಂಗಮವೆಂಬುದನಾರು
ಬಲ್ಲರಯ್ಯಾ, ಬಸವಣ್ಣನಲ್ಲದೆ?
ಎಲ್ಲಿ ಸ್ಥಾವರವಲ್ಲಿ ನೋಡಲಾಗದು.
ಮನದಲ್ಲಿ ನೆನೆಯಲಾಗದು.
ಲಿಂಗಕಾದಡೆಯೂ ಜಂಗಮವೆ ಬೇಕು.
ಜಂಗಮವಿಲ್ಲದೆ ಲಿಂಗವುಂಟೆ ?
ಗುರುವಿಂಗಾದಡೆಯೂ ಜಂಗಮವೆ ಬೇಕು.
ಜಂಗಮವಿಲ್ಲದೆ ಗುರುವುಂಟೆ?
ಎಲ್ಲಿ ಜಂಗಮವಿರ್ದಡಲ್ಲಿಯೇ
ಗುರು ಲಿಂಗ ಜಂಗಮ ಪಾದೋದಕ ಪ್ರಸಾದ
ಅನುಭಾವ ಸನ್ನಿಹಿತವಾಗಿಹುದು.
ಇಂತೀ ಜಂಗಮವೇ ಲಿಂಗವೆಂಬುದ ಬಸವಣ್ಣ ಬಲ್ಲ.
ಬಸವಣ್ಣನ ಶ್ರೀಪಾದಕ್ಕೆ ಅಹೋರಾತ್ರಿ
ಶರಣೆಂದು ಶುದ್ಭನಾದೆ ಕಾಣಾ, ಕಲಿದೇವರದೇವಯ್ಯ.

500
ಆದಿಯುಗದಲ್ಲೊಬ್ಬಳು ಮಾಯಾಂಗನೆ,
ಹಲವು ಬಣ್ಣದ ವಸ್ತ್ರವನುಟ್ಟುಕೊಂಡು,
ಹೆಡಿಗೆ ತುಂಬ ದೇವರ ಹೊತ್ತುಕೊಂಡು,
ಓ ದೇವರ ಕೊಳ್ಳಿರಯ್ಯಾ, ಓ ದೇವರ ಕೊಳ್ಳಿರಯ್ಯಾ ಎಂದಳು.
ಎಂದಡೆ ಆ ದೇವರನಾರೂ ಕೊಂಬವರಿಲ್ಲ.
ನಾನು ಒಂದರಿವೆಯ ಕೊಟ್ಟು, ಆ ದೇವರ ಕೊಂಡು,
ಎನ್ನ ಹೆತ್ತ ತಂದೆ ಬಸವಣ್ಣನ ಪ್ರಸಾದದಿಂದ
ಬದುಕಿದೆನು ಕಾಣಾ, ಕಲಿದೇವರದೇವಾ.

504
ಆರುಜನ್ಮದವರೆಂಬರು ಬಸವಣ್ಣನ.
ಈ ಗಾರುಮಾತ ಕೇಳಲಾಗದು.
ಆರುಸ್ಥಲ ಆರುಪಥವ ತೋರಲು,
ಪರಶಿವ ತಾ ಮೂರುಮೂರ್ತಿಯಾದ.
ಆರಾರುತತ್ವಂಗಳ ಮೇಲಣಾತ
ಬಸವಣ್ಣನೆ ಕಾಣಾ, ಕಲಿದೇವರದೇವ.

507
ಇಂದ್ರಲೋಕದವರೆಲ್ಲರೂ
ಸಹೀಂದ್ರನಾಥ ಬಸವಣ್ಣಾ ಎಂದು ಹೊಗಳುತಿರ್ಪರಯ್ಯಾ.
ಬ್ರಹ್ಮಲೋಕದವರೆಲ್ಲರೂ
ಪರಬ್ರಹ್ಮ ಬಸವಣ್ಣಾ ಎಂದು ಹೊಗಳುತಿರ್ಪರಯ್ಯಾ.
ವಿಷ್ಣುಲೋಕದವರೆಲ್ಲರೂ
ಮಹಾದಂಡನಾಥ ಬಸವಣ್ಣಾ ಎಂದು ಹೊಗಳುತಿರ್ಪರಯ್ಯಾ.
ರುದ್ರಲೋಕದವರೆಲ್ಲರೂ
ಮಹಾರುದ್ರ ಬಸವಣ್ಣಾ ಎಂದು ಹೊಗಳುತಿರ್ಪರಯ್ಯಾ.
ಶಿವಲೋಕದವರೆಲ್ಲರೂ
ಪರಶಿವ ಬಸವಣ್ಣಾ ಎಂದು ಹೊಗಳುತಿರ್ಪರಯ್ಯಾ.
ಪ್ರಮಥಮಲೋಕದವರೆಲ್ಲರೂ
ಪ್ರಮಥನಾಥ ಬಸವಣ್ಣಾ ಎಂದು ಹೊಗಳುತಿರ್ಪರಯ್ಯಾ.
ಪರಲೋಕದವರೆಲ್ಲರೂ
ಪರಾಪರ ಬಸವಣ್ಣಾ ಎಂದು ಹೊಗಳುತಿರ್ಪರಯ್ಯಾ.
ಸತ್ಯಲೋಕದವರೆಲ್ಲರೂ
ನಿತ್ಯ ಬಸವಣ್ಣಾ ಎಂದು ಹೊಗಳುತಿರ್ಪರಯ್ಯಾ.
ಮರ್ತ್ಯಲೋಕದವರೆಲ್ಲರೂ
ಕರ್ತ ಬಸವಣ್ಣಾ ಎಂದು ಹೊಗಳುತಿರ್ಪರಯ್ಯಾ.
ನಾಗಲೋಕದವರೆಲ್ಲರೂ
ನಾಗನಾಥ ಬಸವಣ್ಣಾ ಎಂದು ಹೊಗಳುತಿರ್ಪರಯ್ಯಾ.
ಪಾತಾಳಲೋಕದವರೆಲ್ಲರೂ
ಅಪ್ರಮಾಣ ಬಸವಣ್ಣಾ ಎಂದು ಹೊಗಳುತಿರ್ಪರಯ್ಯಾ.
ರಸಾತಳಲೋಕದವರೆಲ್ಲರೂ
ಮಹಾಮಹಿಮ ಬಸವಣ್ಣಾ ಎಂದು ಹೊಗಳುತಿರ್ಪರಯ್ಯಾ.
ಶೂನ್ಯಲೋಕದವರೆಲ್ಲರೂ
ಶೂನ್ಯಲಿಂಗ ಬಸವಣ್ಣಾ ಎಂದು ಹೊಗಳುತಿರ್ಪರಯ್ಯಾ.
ಸರ್ವಲೋಕದವರೆಲ್ಲರೂ
ಸರ್ವಾಧಾರ ಬಸವಣ್ಣ ಎಂದು ಹೊಗಳುತಿರ್ಪರಯ್ಯಾ.
ಇಂತು, ನಿತ್ಯರು ನಿಜೈಕ್ಯರು ಬಸವಣ್ಣನ ನೆನೆಯದವರಾರು ?
ಸತ್ಯರು ಸದ್ಯೋನ್ಮುಕ್ತರು ಬಸವಣ್ಣನ ಹೊಗಳದವರಾರು ?
ಸರ್ವಮಹಿಮನೆ, ಸರ್ವಘನಮನವೇದ್ಯನೆ, ಸರ್ವಪರಿಪೂರ್ಣನೆ
ಕಲಿದೇವಾ,ನಿಮ್ಮ ಶರಣ ಬಸವಣ್ಣನಿಂತಹ ಘನಮಹಿಮ ನೋಡಯ್ಯಾ.

508
ಇಂದ್ರಲೋಕದವರೆಲ್ಲರೂ ಸೂತಕಲಾಸಂಹಾರಿ ಬಸವ ಎಂದೆಂಬರು.
ಚಂದ್ರಲೋಕದವರೆಲ್ಲರೂ ಷೋಡಶಕಲಾ ಪರಿಪೂರ್ಣ ಬಸವಾ ಎಂದೆಂಬರು.
ಯುಗಕೋಟಿಬ್ರಹ್ಮರೆಲ್ಲರೂ ಪರಶಿವ ಬಸವಾ ಎಂದೆಂಬರು.
ಹರಿವಿರಿಂಚಿಗಳೆಲ್ಲರೂ ಗುರುಲಿಂಗ ಬಸವಾ ಎಂದೆಂಬರು.
ಅಷ್ಟದಿಕ್ಪಾಲಕರೆಲ್ಲರೂ ಪರಶಿವ ಬಸವಾ ಎಂದೆಂಬರು.
ಸುರಪಡೆಯಲ್ಲಾ ಅಮೃತಸಾಗರ ಬಸವಾ ಎಂದೆಂಬರು.
ನವನಾಥಸಿದ್ಧರೆಲ್ಲರೂ ಪರಮಘುಟಿಕೆ ಬಸವಾ ಎಂದೆಂಬರು.
ಲಂಬೋದರ ಕುಂಭೋದರ ದಾರುಕ ರೇಣುಕ ಗೌರೀಸುತ
ತಾಂಡವರೆಲ್ಲರೂ ಸಕಲಜೀವಚೈತನ್ಯ ಮಾತ್ರ ಬಸವಾ ಎಂದೆಂಬರು.
ಓತವರೆಲ್ಲರೂ ಮಾತಾಪಿತ ಬಸವಾ ಎಂದೆಂಬರು.
ಒಲಿದವರೆಲ್ಲರೂ ಪ್ರಾಣ ಪರಿಣಾಮಿ ಬಸವಾ ಎಂದೆಂಬರು.
ಆನೇನೆಂಬೆನು, ಉಪಮಿಸಬಾರದ ಮಹಾಘನ ಮಹಿಮನ.

509
ಇದು ಗುರು, ಇದು ಲಿಂಗ, ಇದು ಜಂಗಮ, ಇದು ಪ್ರಸಾದ.
ಇಂತೀ ಚತುರ್ವಿಧಸ್ಥಲವನೊಂದುಮಾಡಿ ತೋರಿ,
ಸಮತೆ ಸೈರಣೆಯೆಂಬ ಭಕ್ತಿಪ್ರಭೆಯೊಳಗಿರಿಸಿ,
ಗತಿಯತ್ತ ಹೊದ್ದಲೀಯದೆ, ಲಿಂಗದ ವ್ಯಾವರ್ಣನೆಯ ತೋರಿ,
ಜಂಗಮವ ನಿರಾಕಾರಲಿಂಗವೆಂದು ತೋರಿ,
ಆ ಜಂಗಮದ ಪ್ರಸಾದವ ತೋರಿದನು.
ನಿರವಯದ ಹಾದಿಯ, ಬಸವಣ್ಣನಿಂದ ಕಂಡೆ ಕಾಣಾ
ಕಲಿದೇವಯ್ಯ.

515
ಈರೇಳುಸ್ಥಲ, ಈರೈದುಸ್ಥಲ, ಅಷ್ಟಸ್ಥಲ,
ನವಸ್ಥಲ, ತ್ರಿವಿಧಸ್ಥಲ, ಚತುರ್ಗಾಮಸ್ಥಲ.
ಪಂಚವರ್ಣ, ದಶವರ್ಣ, ಸಪ್ತವರ್ಣ, ಪಡುವರ್ಣ,
ಏಕವರ್ಣ, ದ್ವಿವರ್ಣಸ್ಥಲಂಗಳಲ್ಲಿ ಮುಖವಿಲ್ಲ ಮುಖವಿಲ್ಲ.
ಪವಿತ್ರಾಂಕಿತಕ್ಕೆ ನೋಡಿ ಮಾಡುವ
ಆರಂಭವನೇನೂ ಐದುದಿಲ್ಲ. ಬಸವನೆ ವಿಸ್ತಾರವೆನಗೆ.
ಬಸವನೆ ನುಡಿ ಎನಗೆ, ಬಸವನೆ ನಡೆ ಎನಗೆ.
ಬಸವನೆ ಗತಿ ಎನಗೆ, ಬಸವನೆ ಮತಿ ಎನಗೆ.
ಬಸವನೆ ಇಹವೆನಗೆ, ಬಸವನೆ ಪರವೆನಗೆ.
ಬಸವನಲ್ಲದೆ ಕಾಣೆ ಕಾಣಾ, ಕಲಿದೇವರದೇವ.

518
ಉಟ್ಟ ಸೀರೆಯ ಹರಿದು ಹೋದಾತ ನೀನಲಾ ಬಸವಣ್ಣ.
ಮೆಟ್ಟಿದ ಕೆರಹ ಕಳೆದುಹೋದಾತ ನೀನಲಾ ಬಸವಣ್ಣ.
ಕಟ್ಟಿದ ಮುಡಿಯ ಬಿಟ್ಟುಹೋದಾತ ನೀನಲಾ ಬಸವಣ್ಣ.
ಸೀಮೆಸಂಬಂಧವ ತಪ್ಪಿಸಿಹೋದಾತ ನೀನಲಾ ಬಸವಣ್ಣ.
ಲಿಂಗಕ್ಕೆ ಮಾಡಿದುದ ಸೋಂಕದೆ ಹೋದೆಯಲ್ಲಾ ಬಸವಣ್ಣ.
ಜಂಗಮಕ್ಕೆ ಮಾಡಿದ ಮಾಟವ ಕೈಯಲ್ಲಿ ಹಿಡಿದುಕೊಂಡು
ಹೋದೆಯಲ್ಲಾ ಬಸವಣ್ಣ.
ಬೆಳಗನುಟ್ಟು ಬಯಲಾಗಿ ಹೋದೆಯಲ್ಲಾ ಬಸವಣ್ಣ.
ಬಸವಣ್ಣಂಗೆ ಶರಣೆಂಬ ಪಥವನೆ ತೋರು ಕಂಡಾ
ಕಲಿದೇವರದೇವ.

521
ಉದಾಸೀನಂ ಮಾಡಿದರೆಂದು ಬೆಂಬೀಳುವರೆ ಅಯ್ಯಾ ಬಸವಣ್ಣಾ.
ಎನ್ನ ಕಾಯದೊಳಗೆ ನಿನ್ನ ಕಾಯವಿಪ್ಪುದು ಬಸವಣ್ಣಾ.
ಎನ್ನ ಜೀವದೊಳಗೆ ನಿನ್ನ ಜೀವವಿಪ್ಪುದು ಬಸವಣ್ಣಾ.
ಎನ್ನ ಭಾವದೊಳಗೆ ನಿನ್ನ ಭಾವವಿಪ್ಪುದು ಬಸವಣ್ಣಾ.
ಎನ್ನ ಕರಣ, ನಿನ್ನ ಕರಣ ಬಸವಣ್ಣಾ.
ಆನು ನೀನಾದ ಕಾರಣ ರೂಪಿಂಗೆ ಕೇಡುಂಟು.
ನಿರೂಪು ಕರ್ಪುರ ಅಗ್ನಿ ಬಸವಣ್ಣಾ.
ಚಿಂತಿಸುವರೆ ದೇವರದೇವ ಕಲಿದೇವಾ.

526
ಎತ್ತೆತ್ತ ನೋಡಿದಡೆ ಅತ್ತತ್ತ ಬಸವನೆಂಬ ಬಳ್ಳಿ.
ಎತ್ತಿ ನೋಡಿದಡೆ ಲಿಂಗವೆಂಬ ಗೊಂಚಲು.
ಒತ್ತಿ ಹಿಂಡಿದಡೆ ಭಕ್ತಿಯೆಂಬ ರಸವಯ್ಯಾ.
ಆಯತ ಬಸವಣ್ಣನಿಂದ, ಸ್ವಾಯತ ಬಸವಣ್ಣನಿಂದ.
ಸನ್ನಹಿತವು ಬಸವಣ್ಣನಿಂದ,
ಗುರು ಬಸವಣ್ಣನಿಂದ, ಲಿಂಗ ಬಸವಣ್ಣನಿಂದ.
ಜಂಗಮ ಬಸವಣ್ಣನಿಂದ.
ಪಾದೋದಕ ಬಸವಣ್ಣನಿಂದ, ಪ್ರಸಾದ ಬಸವಣ್ಣನಿಂದ.
ಅತ್ತ ಬಲ್ಲಡೆ ನೀವು ಕೇಳಿರೆ, ಇತ್ತ ಬಲ್ಲಡೆ ನೀವು ಕೇಳಿರೆ.
ಬಸವಾ ಬಸವಾ ಬಸವಾ ಎಂದು ಮಜ್ಜನಕ್ಕೆರೆಯದವನ ಭಕ್ತಿ,
ಶೂನ್ಯ ಕಾಣಾ, ಕಲಿದೇವರದೇವಾ.

527
ಎನಗೆ ಶಿವ ತಾನೀತ ಬಸವಣ್ಣನು
ಮರ್ತ್ಯಲೋಕವನು ಪಾವನವ ಮಾಡುವಲ್ಲಿ.
ಎನಗೆ ಗುರು ತಾನೀತ ಬಸವಣ್ಣನು
ಎನ್ನ ಭವರೋಗವ ಛೇದಿಸಿ ಭಕ್ತನೆನಿಸುವಲ್ಲಿ.
ಎನಗೆ ಲಿಂಗ ತಾನೀತ ಬಸವಣ್ಣನು
ಘನವಿಸ್ತಾರವಪ್ಪ ನಿಜಮಹಿಮೆಯುಳ್ಳಲ್ಲಿ.
ಎನಗೆ ಜಂಗಮ ತಾನೀತ ಬಸವಣ್ಣನು
ಅನಾದಿಸಂಸಿದ್ಧ ಘನಪ್ರಸಾದರೂಪನಾದಲ್ಲಿ.
ಎನ್ನ ನಿಂದ ನಿಲುಕಡೆಯೀತ ಬಸವಣ್ಣನು
ಎನ್ನ ಸರ್ವಸ್ವಾಯತವ ಮಾಡಿ ಸಲಹುವಲ್ಲಿ.
ಇದು ಕಾರಣ, ಕಲಿದೇವರದೇವರು ಸಾಕ್ಷಿಯಾಗಿ
ಎನ್ನ ಪೂರ್ವಾಚಾರಿ ಸಂಗನಬಸವಣ್ಣನ
ಕರುಣದಿಂದಲಾನು ಬದುಕಿದೆನು.

531
ಎನ್ನ ಕಾಯ ಬಸವಣ್ಣನ ಪೂಜಿಸಲಿಕಾಯಿತ್ತು.
ಎನ್ನ ಜೀವ ಬಸವಣ್ಣನ ನೆನೆಯಲಿಕಾಯಿತ್ತು.
ಎನ್ನ ಶ್ರೋತ್ರ ಬಸವಣ್ಣನ ಚಾರಿತ್ರವ ಕೇಳಲಿಕಾಯಿತ್ತು.
ಎನ್ನ ಪ್ರಾಣ ಬಸವಣ್ಣನ ಸ್ತುತಿಸಲಿಕಾಯಿತ್ತು.
ಎನ್ನ ನೇತ್ರ ಬಸವಣ್ಣನ ಸರ್ವಾಂಗವ ನೋಡಲಿಕಾಯಿತ್ತು.
ಇಂತೆನ್ನ ಪಂಚೇಂದ್ರಿಯಂಗಳು ಕಲಿಗಳಾಗಿ
ಬಸವಣ್ಣನ ಹಿಡಿಯಲಿಕಾಯಿತ್ತು.
ಬಸವಣ್ಣನ ಅರಿವಿನೊಳಗೆ ನಾನಿದ್ದೆನು.
ಬಸವಣ್ಣನ ಮರಹಿನೊಳಗೆ ನಾನಿದ್ದೆನು ಕಾಣಾ
ಕಲಿದೇವರದೇವಾ.

533
ಎನ್ನ ಚಿನ್ನಾದಮಯದ ಗುರುವೆಂದೆನಿಸಿದ ಬಸವಣ್ಣ.
ಎನ್ನ ಚಿದ್ಬಿಂದುವಿನ ಇರವ ಲಿಂಗವೆಂದೆನಿಸಿದ ಬಸವಣ್ಣ.
ಎನ್ನ ಚಿತ್ಕಳೆಯಂಬರವ ಜಂಗಮವೆಂದೆನಿಸಿದ ಬಸವಣ್ಣ.
ಗುರುವಿನಲ್ಲಿ ಶುದ್ಧ, ಲಿಂಗದಲ್ಲಿ ಸಿದ್ಧ, ಜಂಗಮದಲ್ಲಿ ಪ್ರಸಿದ್ಧ.
ಇಂತೀ ಶುದ್ಧಸಿದ್ಧಪ್ರಸಿದ್ಧಪ್ರಸಾದದಲ್ಲಿ,
ಎನ್ನ ಉಣಲುಕಲಿಸಿದ, ಕಲಿದೇವಾ, ನಿಮ್ಮ ಶರಣ ಸಂಗನಬಸವಣ್ಣ.

534
ಎನ್ನ ತನು ಶುದ್ಧವಾಯಿತ್ತು
ಬಸವಣ್ಣನ ಶುದ್ಧಪ್ರಸಾದವ ಕೊಂಡೆನಾಗಿ.
ಎನ್ನ ಮನ ಶುದ್ಧವಾಯಿತ್ತು.
ಬಸವಣ್ಣನ ಸಿದ್ಧಪ್ರಸಾದವ ಕೊಂಡೆನಾಗಿ.
ಎನ್ನ ಭಾವ ಶುದ್ಧವಾಯಿತ್ತು
ಬಸವಣ್ಣನ ಪ್ರಸಿದ್ಧಪ್ರಸಾದವ ಕೊಂಡೆನಾಗಿ.
ಇಂತೆನ್ನ ತನುಮನಭಾವಂಗಳು
ಶುದ್ಧಸಿದ್ಧಪ್ರಸಿದ್ಧಪ್ರಸಾದದಲ್ಲಿ ಶುದ್ಧವಾದವು
ಕಲಿದೇವಾ, ನಿಮ್ಮ ಶರಣ ಬಸವನಿಂತಹ
ಘನಮಹಿಮ ನೋಡಯ್ಯಾ.

536
ಎನ್ನ ಸ್ಥೂಲತನುವಿಂಗೆ ಇಷ್ಟಲಿಂಗವಾದಾತ ಬಸವಣ್ಣ.
ಎನ್ನ ಸೂಕ್ಷ್ಮತನುವಿಂಗೆ ಪ್ರಾಣಲಿಂಗವಾದಾತ ಬಸವಣ್ಣ.
ಎನ್ನ ಕಾರಣತನುವಿಂಗೆ ಭಾವಲಿಂಗವಾದಾತ ಬಸವಣ್ಣ.
ಎನ್ನ ದೃಕ್ಕಿಂಗೆ ಇಷ್ಟಲಿಂಗವಾದಾತ ಬಸವಣ್ಣ.
ಎನ್ನ ಮನಕ್ಕೆ ಪ್ರಾಣಲಿಂಗವಾದಾತ ಬಸವಣ್ಣ.
ಎನ್ನ ಭಾವಕ್ಕೆ ತೃಪ್ತಿಲಿಂಗವಾದಾತ ಬಸವಣ್ಣ.
ಎನ್ನ ನಾಸಿಕಕ್ಕೆ ಆಚಾರಲಿಂಗವಾದಾತ ಬಸವಣ್ಣ.
ಎನ್ನ ಜಿಹ್ವೆಗೆ ಗುರುಲಿಂಗವಾದಾತ ಬಸವಣ್ಣ.
ಎನ್ನ ನೇತ್ರಕ್ಕೆ ಶಿವಲಿಂಗವಾದಾತ ಬಸವಣ್ಣ.
ಎನ್ನ ತ್ವಕ್ಕಿಂಗೆ ಜಂಗುರುಲಿಂಗವಾದಾತ ಬಸವಣ್ಣ.
ಎನ್ನ ಶ್ರೋತ್ರಕ್ಕೆ ಪ್ರಸಾದಲಿಂಗವಾದಾತ ಬಸವಣ್ಣ.
ಎನ್ನ ಹೃದಯಕ್ಕೆ ಮಹಾಲಿಂಗವಾದಾತ ಬಸವಣ್ಣ.
ಎನ್ನ ಸುಚಿತ್ತವೆಂಬ ಹಸ್ತಕ್ಕೆ ಆಚಾರಲಿಂಗವಾದಾತ ಬಸವಣ್ಣ.
ಎನ್ನ ಸುಬುದ್ಧಿಯೆಂಬ ಹಸ್ತಕ್ಕೆ ಗುರುಲಿಂಗವಾದಾತ ಬಸವಣ್ಣ.
ಎನ್ನ ನಿರಹಂಕಾರವೆಂಬ ಹಸ್ತಕ್ಕೆ ಶಿವಲಿಂಗವಾದಾತ ಬಸವಣ್ಣ.
ಎನ್ನ ಸುಮನವೆಂಬ ಹಸ್ತಕ್ಕೆ ಜಂಗಮಲಿಂಗವಾದಾತ ಬಸವಣ್ಣ.
ಎನ್ನ ಸುಜ್ಞಾನವೆಂಬ ಹಸ್ತಕ್ಕೆ ಪ್ರಸಾದಲಿಂಗವಾದಾತ ಬಸವಣ್ಣ.
ಎನ್ನ ಸದ್ಭಾವವೆಂಬ ಹಸ್ತಕ್ಕೆ ಮಹಾಲಿಂಗವಾದಾತ ಬಸವಣ್ಣ.
ಎನ್ನ ಆಧಾರಚಕ್ರದಲ್ಲಿ ಆಚಾರಲಿಂಗವಾಗಿ ಮೂರ್ತಿಗೊಂಡಾತ ಬಸವಣ್ಣ.
ಎನ್ನ ಸ್ವಾದಿಷ್ಠಾನಚಕ್ರದಲ್ಲಿ ಗುರುಲಿಂಗವಾಗಿ ಮೂರ್ತಿಗೊಂಡಾತ ಬಸವಣ್ಣ.
ಎನ್ನ ಮಣಿಪೂರಕಚಕ್ರದಲ್ಲಿ ಶಿವಲಿಂಗವಾಗಿ ಮೂರ್ತಿಗೊಂಡಾತ ಬಸವಣ್ಣ.
ಎನ್ನ ಅನಾಹತಚಕ್ರದಲ್ಲಿ ಜಂಗಮಲಿಂಗವಾಗಿ ಮೂರ್ತಿಗೊಂಡಾತ ಬಸವಣ್ಣ.
ಎನ್ನ ವಿಶುದ್ಧಿ ಚಕ್ರದಲ್ಲಿ ಪ್ರಸಾದಲಿಂಗವಾಗಿ ಮೂರ್ತಿಗೊಂಡಾತ ಬಸವಣ್ಣ.
ಎನ್ನ ಆಜ್ಞಾಚಕ್ರದಲ್ಲಿ ಮಹಾಲಿಂಗವಾಗಿ ಮೂರ್ತಿಗೊಂಡಾತ ಬಸವಣ್ಣ.
ಎನ್ನ ಬ್ರಹ್ಮರಂಧ್ರದಲ್ಲಿ ನಿಃಕಲಲಿಂಗವಾಗಿ ಮೂರ್ತಿಗೊಂಡಾತ ಬಸವಣ್ಣ.
ಎನ್ನ ಶಿಖಾಚಕ್ರದಲ್ಲಿ ಶೂನ್ಯಲಿಂಗವಾಗಿ ಮೂರ್ತಿಗೊಂಡಾತ ಬಸವಣ್ಣ.
ಎನ್ನ ಪಶ್ಚಿಮಚಕ್ರದಲ್ಲಿ ನಿರಂಜನಲಿಂಗವಾಗಿ ಮೂರ್ತಿಗೊಂಡಾತ ಬಸವಣ್ಣ.
ಎನ್ನ ವದನಕ್ಕೆ ಓಂಕಾರವಾದಾತ ಬಸವಣ್ಣ.
ಎನ್ನ ಬಲದ ಭುಜಕ್ಕೆ ನಕಾರವಾದಾತ ಬಸವಣ್ಣ.
ಎನ್ನ ಎಡದ ಭುಜಕ್ಕೆ ಮಕಾರವಾದಾತ ಬಸವಣ್ಣ.
ಎನ್ನ ಒಡಲಿಂಗೆ ಶಿಕಾರವಾದಾತ ಬಸವಣ್ಣ.
ಎನ್ನ ಬಲದ ಪಾದಕ್ಕೆ ವಕಾರವಾದಾತ ಬಸವಣ್ಣ.
ಎನ್ನ ಎಡದ ಪಾದಕ್ಕೆ ಯಕಾರವಾದಾತ ಬಸವಣ್ಣ.
ಎನ್ನಾ ಆಪಾದಮಸ್ತಕ ಪರಿಯಂತರ ಮಂತ್ರರೂಪಕಸಂಬಂಧವಾದಾತ ಬಸವಣ್ಣ.
ಎನ್ನ ನಾದಕ್ಕೆ ಆಕಾರವಾದಾತ ಬಸವಣ್ಣ.
ಎನ್ನ ಬಿಂದುವಿಂಗೆ ಉಕಾರವಾದಾತ ಬಸವಣ್ಣ.
ಎನ್ನ ಕಳೆಗೆ ಮಕಾರವಾದಾತ ಬಸವಣ್ಣ.
ಎನ್ನ ರುಧಿರಕ್ಕೆ ನಕಾರವಾದಾತ ಬಸವಣ್ಣ.
ಎನ್ನ ಮಾಂಸಕ್ಕೆ ಮಕಾರವಾದಾತ ಬಸವಣ್ಣ.
ಎನ್ನ ಮೇಧಸ್ಸಿಂಗೆ ಶಿಕಾರವಾದಾತ ಬಸವಣ್ಣ.
ಎನ್ನ ಅಸ್ಥಿಗೆ ವಕಾರವಾದಾತ ಬಸವಣ್ಣ.
ಎನ್ನ ಮಜ್ಜೆಗೆ ಯಕಾರವಾದಾತ ಬಸವಣ್ಣ.
ಎನ್ನ ಸರ್ವಾಂಗಕ್ಕೆ ಓಂಕಾರವಾದಾತ ಬಸವಣ್ಣ.
ಇಂತು ಬಸವಣ್ಣನೆ ಪರಿಪೂರ್ಣನಾಗಿ,
ಬಸವಣ್ಣನೆ ಪ್ರಾಣವಾಗಿ, ಬಸವಣ್ಣನೆ ಅಂಗವಾಗಿ,
ಬಸವಣ್ಣನೆ ಲಿಂಗವಾದ ಕಾರಣ, ನಾನು ಬಸವಣ್ಣಾ ಬಸವಣ್ಣಾ ಬಸವಣ್ಣಾ
ಎಂದು ಬಯಲಾದೆನು ಕಾಣಾ, ಕಲಿದೇವರದೇವ.

537
ಎರಡುಕೋಟಿ ವೀರಗಣಂಗಳಾಗಬಹುದಲ್ಲದೆ
ಹರಳಯ್ಯ ಮಧುವಯ್ಯಗಳಾಗಬಾರದಯ್ಯಾ.
ಗಂಗೆವಾಳುಕಸಮಾರುದ್ರರಾಗಬಹುದಲ್ಲದೆ
ಜಗದೇವ ಮೊಲ್ಲೆಬೊಮ್ಮಣ್ಣಗಳಾಗಬಾರದಯ್ಯಾ.
ಕಲಿದೇವರದೇವಾ, ನಾನು ನೀನಾಗಬಹುದಲ್ಲದೆ
ಭಕ್ತಿಗೆ ಬಸವಣ್ಣನಲ್ಲದಾಗಬಾರದೆಂದರಿದು,
ಬಸವಣ್ಣನ ಶ್ರೀಪಾದಕ್ಕೆ ನಮೋ ನಮೋ ಎನುತಿರ್ದೆನು.

539
ಎಲ್ಲಾ ಭಕ್ತಿಯ ಭೇದವನು, ಎಲ್ಲಾ ಕೂಟದ ಭೇದವನು,
ಎಲ್ಲಾ ಶೀಲದ ಭೇದವನು, ನಾನು ನಿನಗೆ ಬಿನ್ನೈಸುವೆ ಕೇಳಯ್ಯಾ.
ನೀನು ಕರ್ತನಾಗಿ, ನಾನು ಭೃತ್ಯನಾಗಿ ಅವಧರಿಸಯ್ಯಾ.
ಎಲ್ಲಾ ಭೇದಂಗಳನು ಬಸವಣ್ಣ ಮಾಡಿದನು.
ನಿಜಸ್ವಾಯತವನು ಬಸವಣ್ಣ ಮಾಡಿದನು.
ಜಂಗಮಸ್ವಾಯತವನು ಬಸವಣ್ಣ ಮಾಡಿದನು.
ಎನ್ನ ಸರ್ವಾಂಗಸ್ವಾಯತವನು ಬಸವಣ್ಣ ಮಾಡಿದನು.
ಕಾರಣ, ಆ ಬಸವಣ್ಣನ ನೆನೆನೆನೆದು ಬದುಕಿದೆನು ಕಾಣಾ
ಕಲಿದೇವಯ್ಯಾ.

540
ಎಲ್ಲಾ ವ್ಯಾವರ್ಣಂಗಳು ಸ್ಥಾಪ್ಯದೊಳಗು.
ಎಲ್ಲಾ ವಚನಂಗಳು ತಾಪದೊಳಗು.
ಎಲ್ಲಾ ಸ್ತೋತ್ರಂಗಳು ಕ್ರೋಧದೊಳಗು.
ಎಲ್ಲಾ ಅರಿವು ಮಥನದೊಳಗು.
ಎಲ್ಲಾ ಮೂರ್ತಿಗಳು ಪ್ರಳಯದೊಳಗು.
ಎಲ್ಲಾ ಗೀತಂಗಳು ಸಂವಾದದೊಳಗು.
ಲಿಂಗಾನುಭಾವಿ ಇವನೊಂದನೂ ಮನದಲ್ಲಿ ನೆನೆಯ,
ಏನೆಂದು ಅರಿಯ.
ಸ್ವತಂತ್ರ ನಿತ್ಯನಾಗಿ, ಭಕ್ತಿದಾಸೋಹವ
ನಿಮ್ಮ ಬಸವಣ್ಣನಳವಡಿಸಿಕೊಂಡನು.
ನಿಮ್ಮ ಬಸವಣ್ಣನಿಂತಹ ಸ್ವತಂತ್ರನಯ್ಯಾ
ಕಲಿದೇವರದೇವಾ.

553
ಕರಸ್ಥಲ ಕಂಠಸ್ಥಲ ಕರ್ಣಸ್ಥಲ ಮಧ್ಯಸ್ಥಲ ಮಹಾಸ್ಥಲ.
ಇಂತೀ ಐದು ಸ್ಥಲಂಗಳನು ಮಹಾಸ್ಥಲಕ್ಕೆ ತಂದು,
ಬಸವಣ್ಣ ಸಂಪೂರ್ಣವಾದ ಕಾಣಾ, ಕಲಿದೇವರದೇವಾ.

560
ಕಾಮಿಯಾಗಿ ನಿಃಕಾಮಿಯಾದಳು.
ಸೀಮೆಯಲ್ಲಿರ್ದು ನಿಸ್ಸೀಮೆಯಾದಳು.
ಭವಿಯ ಸಂಗವ ತೊರೆದು ಭವಬಾಧೆಯ ಹರಿದಳು.
ಬಸವಣ್ಣನೆ ಗತಿಯೆಂದು ಬರಲು,
ನಾನು ಮಡಿಯ ಹಾಸಿ ನಡೆಸಿದೆ.
ನಡೆವುದಕ್ಕೆ ಹಾಸಿದ ಮಡಿಯ ಸರ್ವಾಂಗಕ್ಕೆ ಹೊಯ್ದಳು.
ಆ ಮಡಿಯ ಬೆಳಗಿನೊಳಗೆ ನಿರ್ವಯಲಾದಳು.
ಕಲಿದೇವರದೇವಾ, ಮಹಾದೇವಿಯಕ್ಕಗಳ ನಿಲವ
ಬಸವಣ್ಣನಿಂದ ಕಂಡು ಬದುಕಿದೆನಯ್ಯಾ ಪ್ರಭುವೆ.

590
ಗುರುವಾಗಿ ಉಪದೇಶವ ತೋರಿದನೀತ.
ಲಿಂಗವಾಗಿ ಮನವನಿಂಬುಗೊಂಡಾತನೀತ.
ಜಂಗಮವಾಗಿ ಅರ್ಥಪ್ರಾಣ ಅಭಿಮಾನದ ದರ್ಪವ ಕೆಡಿಸಿದನೀತ.
ಪ್ರಸಾದವಾಗಿ ಎನ್ನ ಸರ್ವಾಂಗವನವಗ್ರಹಿಸಿದಾತನೀತ.
ಪಾದೋದಕವಾಗಿ ಎನ್ನ ಒಳಹೊರಗೆ ತೊಳದಾತನೀತ.
ಕಲಿದೇವರದೇವಾ, ಬಸವಣ್ಣ ತೋರಿದನಾಗಿ
ಪ್ರಭುವೆಂಬ ಮಹಿಮನ ಸಂಗದಿಂದ ಬದುಕಿದೆನು.

591
ಗುರುವಾದಡೂ ಬಸವಣ್ಣನಿಲ್ಲದೆ ಗುರುವಿಲ್ಲ.
ಲಿಂಗವಾದಡೂ ಬಸವಣ್ಣನಿಲ್ಲದೆ ಲಿಂಗವಿಲ್ಲ.
ಜಂಗಮವಾದಡೂ ಬಸವಣ್ಣನಿಲ್ಲದೆ ಜಂಗಮವಿಲ್ಲ.
ಪ್ರಸಾದವಾದಡೂ ಬಸವಣ್ಣನಿಲ್ಲದೆ ಪ್ರಸಾದವಿಲ್ಲ.
ಅನುಭಾವವಾದಡೂ ಬಸವಣ್ಣನಿಲ್ಲದೆ ನುಡಿಯಲಾಗದು.
ಇಂತು ಸಂಗಿಸುವಲ್ಲಿ, ನಿಜಸಂಗಿಸುವಲ್ಲಿ, ಸುಸಂಗಿಸುವಲ್ಲಿ,
ಮಹಾಸಂಗಿಸುವಲ್ಲಿ, ಪ್ರಸಾದ ಸಂಗಿಸುವಲ್ಲಿ,
ಕಲಿದೇವಾ ನಿಮ್ಮ ಶರಣ ಬಸವಣ್ಣನ ನಿಲುವು.

595
ಗುರು ಸ್ವಾಯುತವಾಯಿತ್ತು, ಎಂಟುಭಾವ ಸ್ವಾಯುತವಾಯಿತ್ತು.
ಹದಿನಾರುತೆರನ ಭಕ್ತಿ ಸ್ವಾಯುತವಾಯಿತ್ತು.
ಅಷ್ಟವಿಧಾರ್ಚನೆ ಸ್ವಾಯುತವಾಯಿತ್ತು.
ತ್ರಿವಿಧದ ಅರಿವು ಸ್ವಾಯುತವಾಯಿತ್ತು.
ಮಹಾಲಿಂಗದ ನಿಲವು, ಮಹಾಜಂಗಮದ ನಿಜವು ಸ್ವಾಯುತವಾಯಿತ್ತು.
ಶುದ್ಭ ಪ್ರಸಾದ ತನು ಸ್ವಾಯುತವಾಯಿತ್ತು.
ಸಿದ್ಧಪ್ರಸಾದ ಚೈತನ್ಯ ಸ್ವಾಯುತವಾಯಿತ್ತು.
ಪ್ರಸಿದ್ಧಪ್ರಸಾದ ಮನ ಸ್ವಾಯುತವಾಯಿತ್ತು.
ವಾಮಭಾಗದಲ್ಲಿ ಮಹವು ಉದಯವಾಯಿತ್ತು.
ನಿಜಸ್ಥಾನದಲ್ಲಿ ನಿಂದಿತ್ತು, ಕ್ಷೀರಸ್ಥಾನದಲ್ಲಿ ಸಾರಾಯವಾಯಿತ್ತು.
ಅನುಭಾವದಲ್ಲಿ ಘನಾಗಮವೆನಿಸಿತ್ತು.
ಸ್ವಾನುಭಾವದಲ್ಲಿ ನಿಮ್ಮ ಬಸವಣ್ಣಂಗೆ ಶರಣೆಂದಿತ್ತು.
ನೆಮ್ಮುಗೆವಿಡಿದು ಬಸವಣ್ಣನ ಪ್ರಸಾದವ ಕೊಂಡಿತ್ತು.
ನಿಮ್ಮ ಬಸವಣ್ಣನ ಪ್ರಸಾದದಿಂದ ಇಂತಹ ಘನ ಸ್ವಾಯುತವಾಯಿತ್ತು.
ನೀವು ಬಸವಣ್ಣ ನಿಂದಾದಿರಾಗಿ,
ಬಸವಣ್ಣಂಗೆ ನಮೋ ನಮೋ ಎನುತಿರ್ದೆನು ಕಾಣಾ,
ಕಲಿದೇವರದೇವಾ.

606
ಜಲದೈವವೆಂದಡೆ ಶೌಚವ ಮಾಡಲಿಲ್ಲ.
ನೆಲದೈವವೆಂದಡೆ ಕಾಲೂರಿ ನಡೆಯಲಿಲ್ಲ.
ಅಗ್ನಿದೈವವೆಂದಡೆ ತರಿದು ಮೆಲಲಿಲ್ಲ.
ಅಗ್ನಿದೈವವೆಂದಡೆ ಮನೆಗಳು, ತೃಣಾದಿಗಳು ಬೆಂದು ಕೆಟ್ಟೆವೆನಲಿಲ್ಲ.
ವಾಯುದೈವವೆಂದಡೆ ಕೆಟ್ಟಗಾಳಿ
ಮನೆಗೆ ಬಂದಿತ್ತು, ಬಾಗಿಲಿಕ್ಕಿ ಎನಲಿಲ್ಲ.
ಆಕಾಶದೈವವೆಂದಡೆ ಆಕಾಶವ ಹೊರಗುಮಾಡಿ,
ಒಳಗೆ ಮನೆಯ ಕಟ್ಟಲಿಲ್ಲ.
ಚಂದ್ರದೈವವೆಂದಡೆ ಶೀತಗೊಂಡು ಕೆಟ್ಟೆವೆನಲಿಲ್ಲ.
ಸೂರ್ಯದೈವವೆಂದಡೆ ಉಷ್ಣಗೊಂಡು ಕೆಟ್ಟೆವೆನಲಿಲ್ಲ.
ಆತ್ಮದೈವವೆಂದಡೆ ಸಾವು ಕೇಡು ಇಲ್ಲದಿರಬೇಕು.
ಇದು ಕಾರಣ, ನೆಲದೈವವಲ್ಲ, ಜಲದೈವವಲ್ಲ,
ಅಗ್ನಿದೈವವಲ್ಲ, ವಾಯುದೈವವಲ್ಲ,
ಆಕಾಶದೈವವಲ್ಲ, ಚಂದ್ರಸೂರ್ಯ ಆತ್ಮರು ದೈವವಲ್ಲ.
ಕಲಿದೇವಾ, ನಿಮ್ಮ ಶರಣ ಬಸವಣ್ಣನೊಬ್ಬನೆ ದೈವವೆಂದ,
ಮಡಿವಾಳನು.

608
ಜೀವರು ಜೀವಿಸಿ ಜೀವನ್ಮುಕ್ತವೆಂತೆಂದರಿಯರು.
ಜೀವಂಗೆ ಆತ್ಮಸ್ಥಲ ಸಲ್ಲದು.
ತಮ್ಮ ಜೀವಾತ್ಮನನು ಶಿವನೆಂದು, ತಮ್ಮ ಶರೀರವನು ಶಿವನೆಂದು
ಅನಂತ ಋಷಿಯ ಅರ್ಚಿಸಿಕೊಂಬರು.
ಆರಾರುವೆಂದಡೆ: ವಶಿಷ್ಠ ವಾಲ್ಮೀಕಿ ಭೃಗು ದಧೀಚಿ
ಕಾಶ್ಯಪ ಅಗಸ್ತ್ಯ ಮಾರ್ಕಂಡೇಯ ಮೊದಲಾದ ಮಹಾಋಷಿಯರು.
ಅವರ ಶಾಪಾನುಗ್ರಹ ಸಾಮರ್ಥಿಕೆಯ ಪೇಳುವಡೆ,
ಅನಂತ ಶ್ರುತಿಗಳೈದಾವೆ, ಅನಂತ ಶಾಸ್ತ್ರಂಗಳೈದಾವೆ.
ಶಿವನ ಕರದೋಯೆನಿಸಬಲ್ಲರು.
ಅಂತಹರು, ಅಕಟಕಟ ಭಕ್ತಿಯ ಕುಳವನರಿಯದೆ, ಭವಭಾರಕರಾದರು.
ಅಂತು ಜೀವನ ಬಲುಹಿಂದಲು ಸುರರು ಖೇಚರರು
ಗರುಡ ಗಂಧರ್ವರು ಸಿದ್ಧವಿದ್ಯಾಧರರು ಗುಹ್ಯಕರು
ಯಕ್ಷರಾಕ್ಷಸರು ಹರಿವಿರಂಚಿಗಳು ಮೊದಲಾದ
ದೈವಂಗಳೆಲ್ಲಾ ಪ್ರಳಯಚಕ್ರಕ್ಕೊಳಗಾದರು.
ಭಾವಾದ್ವೈತರು ವಾಗಾದ್ವೈತರು ಶ್ವಾನಜ್ಞಾನಿಗಳಾಗಿ ಕೆಟ್ಟರು.
ಭಕ್ತರು ಭಕ್ತಿಯ ಸ್ಥಿತಿ ಕುಳವನರಿಯದೆ,
ಧ್ಯಾನ ಮೌನ ಅನುಷ್ಠಾನ ಜಪತಪ ಸಮಾದಿ
ಸಂಜೆ ಹೋಮ ನೇಮ ನಿತ್ಯ ಅಷ್ಟವಿಧಾರ್ಚನೆ ಷೋಡಶೋಪಚಾರ
ಇಂತೀ ವ್ರತ ಭಾವ ಭಕ್ತಿಯ ಮಾಡಿದರಲ್ಲದೆ,
ಭಕ್ತಿದಾಸೋಹವನರಿಯದೆ ಕೆಟ್ಟರು.
ಅಂದು ನಮ್ಮ ಬಸವಣ್ಣ ಸ್ವತಂತ್ರನಾದ ಕಾರಣ,
ಭಕ್ತಿದಾಸೋಹವಳವಟ್ಟಿತ್ತು.
ಲಿಂಗಸ್ಥಲ ಜಂಗಮಸ್ಥಲ ಪ್ರಸಾದಸ್ಥಲವಳವಟ್ಟಿತ್ತು.
ಜಂಗಮ ಲಿಂಗವೆಂಬುದು ಸಂಗನಬಸವಣ್ಣಂಗೆ ಅಳವಟ್ಟಿತ್ತು.
ದ್ವೈತನಲ್ಲ ಅದ್ವೈತನಲ್ಲ ಬಸವಣ್ಣ, ಭಾವಿಯಲ್ಲ ನಿರ್ಭಾವಿಯಲ್ಲ ಬಸವಣ್ಣ.
ದೇಹಿಯಲ್ಲ ನಿರ್ದೆಹಿಯಲ್ಲ ಬಸವಣ್ಣ, ಖಂಡಿತನಲ್ಲ ಅಖಂಡಿತನಲ್ಲ ಬಸವಣ್ಣ.
ಇಂತಪ್ಪ ಬಸವಣ್ಣಂಗೆ ಆವ ಗುಣಂಗಳೂ ಇಲ್ಲ.
ನಿರ್ಗುಣ ನಿರಂಜನ ನಿಸ್ಸೀಮ ಶಿವನು
ಬಸವಣ್ಣನೊಡನೆ ಆಡುತ್ತಿಪ್ಪನು ಹಾಡುತ್ತಿಪ್ಪನು. ಅದು ಕಾರಣ,
ಬಸವಣ್ಣನ ಮನ ಪರುಷ, ಬಸವಣ್ಣನ ನೋಟ ಪರುಷ.
ಭಾವ ಪರುಷ, ನಡೆ ಪುರುಷ, ನುಡಿ ಪರುಷ, ಹಸ್ತ ಪರುಷ.
ತನುಮನಧನವ ನಿವೇದಿಸಿದಾತ ಬಸವಣ್ಣ.
ಲಿಂಗ ಬಸವಣ್ಣ, ಜಂಗಮ ಬಸವಣ್ಣ, ಗುರು ಬಸವಣ್ಣ.
ಆದಿ ಅನಾದಿಯಿಲ್ಲದಂದಿನ ಬಸವಣ್ಣನ ನೆನೆವುದೆ ಪರತತ್ವ.
ಬಸವಣ್ಣನ ನೆನೆವುದೆ ಪರಮಜ್ಞಾನ, ಬಸವಣ್ಣನ ನೆನೆವುದೆ ಮಹಾನುಭಾವ.
ಎಲೆ ಕಲಿದೇವ, ನಿಮ್ಮ ಶರಣ ಬಸವಣ್ಣನ
ಸಮಸ್ತ ಗಣಂಗಳೆಲ್ಲಾ ನೆನೆದು ಶುದ್ಧರಾದರು.

621
ತಾರಾಧಾರ ಬಾಹ್ಯವ ಸೋಹಂಭಾವ
ಭಾವಾಂತರ ವಾಮಶಕ್ತಿ ಮೋಹಶಕ್ತಿ
ಕನ್ಯಾಶಕ್ತಿ ಬಾಲಶಕ್ತಿ ಗಣಶಕ್ತಿ ಮಂದಿರಶಕ್ತಿ
ಶಿವದೇವ ಈಶ್ವರ ಮಹಾದೇವ ಪರಾಪರ ಶಿವ
ಇಂತಿವೆಲ್ಲವ ಬಸವಣ್ಣ ತಪ್ಪಿಸಿ,
ಈಸರಿಂದಾದ ಭಕ್ತಿಯ ಪ್ರಭಾವದೊಳಿರಿಸಿ,
ಗತಿಯತ್ತ ಹೊದ್ದಲೀಯದೆ, ಮೋಕ್ಷದತ್ತ ಹೊದ್ದಲೀಯದೆ,
ನಾಲ್ಕೂ ಪದದತ್ತ ಹೊದ್ದಲೀಯದೆ,
ಅಭಿನವ ಕೈಲಾಸದತ್ತ ಹೊದ್ದಲೀಯದೆ,
ಲಿಂಗಾರ್ಚನೆಯ ತೋರಿ, ಜಂಗಮಾರ್ಚನೆಯ ಹೇಳಿ,
ಜಂಗಮನಿರಾಕಾರವೆಂದು ತೋರಿ,
ಆ ಜಂಗಮ ಪ್ರಸಾದವ ಲಿಂಗಕ್ಕಿತ್ತು ಆರೋಗಿಸಿ,
ಬಸವಣ್ಣ ತೋರಿದ ಕಾರಣ,
ನಿರವಯದ ಹಾದಿಯ ಬಸವಣ್ಣನಿಂದ ಕಂಡೆನು ಕಾಣಾ,
ಕಲಿದೇವಯ್ಯ.

650
ನಿನ್ನ ಆಕಾರ ನಿರಾಕಾರವಾಯಿತಲ್ಲಾ ಬಸವಣ್ಣ.
ನಿನ್ನ ಪ್ರಾಣ ನಿಃಪ್ರಾಣವಾಯಿತಲ್ಲಾ ಬಸವಣ್ಣ.
ಲಿಂಗ ಜಂಗಮದ ಮಾಟ ಸಮರ್ಪಿತವಾಯಿತಲ್ಲಾ ಬಸವಣ್ಣ.
ನಿಶ್ಶಬ್ದವೇದ್ಯವಾದೆಯಲ್ಲಾ ಬಸವಣ್ಣ.
ಕಲಿದೇವರದೇವನ ಹೃದಯಕಮಲವ ಹೊಕ್ಕು,
ದೇವರಿಗೆ ದೇವನಾಗಿ ಹೋದೆಯಲ್ಲಾ, ಸಂಗನಬಸವಣ್ಣ.

655
ನೆನೆವೆನಯ್ಯಾ ಬಸವಣ್ಣ,
ನಿಮ್ಮ ಚರಣವೆನ್ನ ಮನದಲ್ಲಿ ಸಾಹಿತ್ಯವಹನ್ನಕ್ಕ.
ನೋಡುವೆನಯ್ಯಾ ಬಸವಣ್ಣ,
ನಿಮ್ಮ ಮೂರ್ತಿ ಎನ್ನನವಗವಿಸುವನ್ನಕ್ಕ.
ಪೂಜಿಸುವೆನಯ್ಯಾ ಬಸವಣ್ಣ,
ನಿಮ್ಮ ಪ್ರಸಾದವೆನ್ನ ತನುವಹನ್ನಕ್ಕ.
ನಿಮ್ಮ ಆಹ್ವಾನಿಸುವೆನಯ್ಯಾ ಬಸವಣ್ಣ,
ಅನಿಮಿಷ ನಿಮಿಷ ನಿಮಿಷಗಳಿಲ್ಲವೆಂದೆನಿಸುವನ್ನಕ್ಕ.
ನಿಮ್ಮ ಧ್ಯಾನಿಸುವೆನಯ್ಯಾ ಬಸವಣ್ಣ,
ಜ್ಞಾನಜ್ಞಾನವಿಲ್ಲವೆನಿಸುವನ್ನಕ್ಕ.
ನಿಮ್ಮ ಮೂರ್ತಿಗೊಳಿಸುವೆನಯ್ಯಾ ಬಸವಣ್ಣ,
ಅಹಂ ಸೋಹಂ ಎಂಬ ಶಬ್ದವುಳ್ಳನ್ನಕ್ಕ.
ಬಸವಣ್ಣಾ ಎಂದು ಹಾಡುವೆನಯ್ಯ,
ಎನ್ನ ತನುವಿನ ಗಮನ ನಿರ್ಗಮನವಹನ್ನಕ್ಕ.
ಬಸವಣ್ಣಾ ಬಸವಣ್ಣಾ ಬಸವಣ್ಣಾ ಎನುತಿರ್ದೆನಯ್ಯಾ,
ಕಲಿದೇವರದೇವನೆಂಬ ಶಬ್ದವುಳ್ಳನ್ನಕ್ಕ.

656
ನೆನೆವೆನಯ್ಯಾ, ಲೋಹ ಪರುಷದ ಸಂಗದಂತಾಯಿತ್ತಾಗಿ.
ಬಸವಾ ಬಸವಾ ಬಸವಾ ಎಂಬ ಶಬ್ದದೊಳಗೆ
ಎನ್ನ ಗಮನ ನಿರ್ಗಮನವಾಯಿತ್ತು.
ಬಸವಾ ಎಂದೆನಯ್ಯಾ ಕಲಿದೇವರದೇವಾ,
ಕಿಡಿಗೊಂಡ ಅರಗಿನ ಸಂಗದಂತಾಯಿತ್ತಾಗಿ.

667
ಪುರವರಾಧೀಶ್ವರರೆಲ್ಲರೂ ಪುರದೊಡೆಯ ಬಸವಣ್ಣ ಎಂದೆಂಬರು.
ಅಮರಾಧೀಶ್ವರರೆಲ್ಲರೂ ಅಮರಪತಿ ಬಸವಣ್ಣ ಎಂದೆಂಬರು.
ಕೈಲಾಸಾಧಿಪತಿಗಳೆಲ್ಲರೂ ಶಿವಲಿಂಗ ಬಸವಣ್ಣ ಎಂದೆಂಬರು.
ದೇವಸಮೂಹವೆಲ್ಲ ಮಹಾಲಿಂಗ ಬಸವಣ್ಣ ಎಂದೆಂಬರು.
ಪಂಚವಕ್ತ್ರಗಣಂಗಳೆಲ್ಲರೂ ಪಂಚಲಿಂಗ ಬಸವಣ್ಣ ಎಂದೆಂಬರು.
ಸಾಲೋಕ್ಯ ಸಾಮೀಪ್ಯ ಸಾರೂಪ್ಯ ಸಾಯುಜ್ಯಗಣಂಗಳೆಲ್ಲರೂ
ಪದವೀವ ಬಸವಣ್ಣ ಎಂದೆಂಬರು.
ನಾಗಲೋಕದವರೆಲ್ಲರೂ ಸಕಲಾಧಾರ ಬಸವಣ್ಣ ಎಂದೆಂಬರು.
ಮತ್ರ್ಯಲೋಕದವರೆಲ್ಲರೂ ಗುರುಲಿಂಗ ಬಸವಣ್ಣ ಎಂದೆಂಬರು.
ಭಕ್ತ ಬಸವಣ್ಣ ಎಂದೆಂಬರು, ಸೋಹಿ ದಾಸೋಹಿ ಬಸವಣ್ಣ ಎಂದೆಂಬರು.
ತನುಮನಧನವ ಗುರುಲಿಂಗಜಂಗಮಕ್ಕೆ ನಿವೇದಿಸುವಾತ ಬಸವಣ್ಣ ಎಂದೆಂಬರು.
ಇದು ಕಾರಣ, ನಾನು ಬಸವಣ್ಣ ಬಸವಣ್ಣ ಬಸವಣ್ಣ ಎಂದು
ಬಯಲಾದೆನು ಕಾಣಾ, ಕಲಿದೇವರದೇವ.

669
ಪೃಥ್ವಿಯ ಚಿತ್ತದ ಪಂಚಕರ್ಮೆಂದ್ರಿಯಂಗಳೈದೂ
ಲಿಂಗೈಕ್ಯವಾದವು, ಬಸವಣ್ಣ ನಿಮ್ಮಿಂದ.
ಅಪ್ಪುವಿನ ಬುದ್ಧಿಯ ಪದಾರ್ಥಂಗಳೈದೂ
ಲಿಂಗೈಕ್ಯವಾದವು, ಬಸವಣ್ಣ ನಿಮ್ಮಿಂದ.
ಅಗ್ನಿಯ ಅಹಂಕಾರ ಪಂಚೇಂದ್ರಿಯಂಗಳೈದೂ
ಲಿಂಗೈಕ್ಯವಾದವು, ಬಸವಣ್ಣ ನಿಮ್ಮಿಂದ.
ವಾಯುವಿನ ಮನದ ಪಂಚಪ್ರಾಣವಾಯುಗಳೈದೂ
ಲಿಂಗೈಕ್ಯವಾದವು, ಬಸವಣ್ಣ ನಿಮ್ಮಿಂದ.
ಆಕಾಶದ ಸುಜ್ಞಾನದ ಜ್ಞಾನಂಗಳೈದೂ
ಲಿಂಗೈಕ್ಯವಾದವು, ಬಸವಣ್ಣ ನಿಮ್ಮಿಂದ.
ಆತ್ಮನ ಪರಮಾತ್ಮನ ಹಸ್ತಂಗಳೈದೂ
ಲಿಂಗೈಕ್ಯವಾದವು, ಬಸವಣ್ಣ ನಿಮ್ಮಿಂದ.
ಇಂತಿವೆಲ್ಲವೂ ಲಿಂಗೈಕ್ಯವಾದವು ಬಸವಣ್ಣ ನಿಮ್ಮಿಂದ.
ಕಲಿದೇವಾ, ನಿಮ್ಮ ಶರಣ ಸಂಗನಬಸವಣ್ಣನ ಶ್ರೀಪಾದಕ್ಕೆ
ನಮೋ ನಮೋ ಎನುತಿರ್ದೆನು.

679
ಬಸವಣ್ಣನ ನೆನೆದೆನ್ನ ತನು ಬಯಲಾಯಿತ್ತು.
ಬಸವಣ್ಣನ ನೆನೆದೆನ್ನ ಮನ ಬಯಲಾಯಿತ್ತು.
ಬಸವಣ್ಣನ ನೆನೆದೆನ್ನ ಭಾವ ಬಯಲಾಯಿತ್ತು.
ಕಲಿದೇವಯ್ಯ ನಿಮ್ಮ ಶರಣ, ಮಹಾಮಹಿಮ
ಸಂಗನಬಸವಣ್ಣನ ನೆನೆನೆನೆದು,
ಎನ್ನ ಸರ್ವಾಂಗ ಲಿಂಗವಾಯಿತ್ತೆಂದರಿದೆನಯ್ಯಾ.

680
ಬಸವಣ್ಣನ ನೆನೆವುದೆ ಷೋಡಶೋಪಚಾರ.
ಬಸವಣ್ಣನ ನೆನೆವುದೆ ಪರಮತತ್ವ.
ಬಸವಣ್ಣನ ನೆನೆವುದೆ ಮಹಾನುಭಾವ.
ಕಲಿದೇವಾ, ನಿಮ್ಮ ಶರಣ ಬಸವಣ್ಣನ ನೆನೆದು,
ಸಮಸ್ತಗಣಂಗಳೆಲ್ಲರೂ ಅತಿಶುದ್ಧರಾದರಯ್ಯ.

681
ಬಸವಣ್ಣನ ಬಳಿಯಯ್ಯಾ ಗಂಗೆವಾಳುಕಸಮಾರುದ್ರರು.
ಬಸವಣ್ಣನ ಫಲವಯ್ಯಾ ಓಂ ನಮಃ ಶಿವಾಯ ಎಂಬವರೆಲ್ಲರು.
ಬಸವಣ್ಣನ ಆಜ್ಞೆಯಯ್ಯಾ ಎಲ್ಲ ಶಿವಾರ್ಚಕರು.
ಬಸವಣ್ಣನ ಘನವಯ್ಯಾ ತನುದಾಸೋಹಿಗಳು.
ಬಸವಣ್ಣನ ಧನವಯ್ಯಾ ಪಾದೋಕಪ್ರಸಾದಿಗಳು.
ಬಸವಣ್ಣನ ಮನವಯ್ಯಾ ತನುಪದಾರ್ಥವ ಮಾಡಿ,
ಗುರುಲಿಂಗಜಂಗಮಕ್ಕರ್ಪಿಸುವರು.
ಬಸವಣ್ಣ ಮಾಡಿದ ಅನುಗಳಯ್ಯಾ,
ಕನಸಿನಲ್ಲಿ ಮನಸಿನಲ್ಲಿ ಶಿವಶಿವಾ ಎಂಬರೆಲ್ಲರು.
ಬಸವಣ್ಣನ ಬಂಧುಗಳಯ್ಯಾ ಎಲ್ಲಾ ಶಿವಲಾಂಛನಿಗಳು.
ಬಸವಣ್ಣನ ಪ್ರಸಾದಿಗಳಯ್ಯಾ.
ಬಸವಣ್ಣನ ನಾಮಾಮೃತವ ನೆನೆವರೆಲ್ಲರು.
ಎಲೆ ಕಲಿದೇವರದೇವಾ, ಬಸವಣ್ಣನ ಆಜ್ಞೆಯಲ್ಲಿ ನೀನಿರ್ದೆಯಾಗಿ,
ಎಲ್ಲ ಶಿವಭಕ್ತರ ತನುಮನಧನಸಹಿತ ನಾನಾದೆನಯ್ಯಾ.

682
ಬಸವಣ್ಣ ಮಾಡಲಿಕೆ ಗುರುವಾಯಿತ್ತು.
ಬಸವಣ್ಣ ಮಾಡಲಿಕೆ ಲಿಂಗವಾಯಿತ್ತು.
ಬಸವಣ್ಣ ಮಾಡಲಿಕೆ ಜಂಗಮವಾಯಿತ್ತು.
ಬಸವಣ್ಣ ಮಾಡಲಿಕೆ ಪ್ರಸಾದವಾಯಿತ್ತು.
ಬಸವಣ್ಣ ಮಾಡಲಿಕೆ ಈರೇಳುಲೋಕವಾಯಿತ್ತು.
ಬಸವಣ್ಣನಿಂದಾದ ಕಲಿದೇವಯ್ಯ.

686
ಬಾಲನಹನೂಮ್ಮೆ, ಲೋಲನಹನೊಮ್ಮೆ,
ವೃದ್ಧನಹನೊಮ್ಮೆ, ಮತ್ತನಹನೊಮ್ಮೆ,
ಹೊಳೆದು ತೋರುತಲೊಮ್ಮೆ ತೋರಿ ಅಡಗುತಲೊಮ್ಮೆ.
ವಿಶ್ವವ ನೋಡಿ ಬೆರಗಾಗುತ್ತಮಿರೆ, ಇದ್ದ ಠಾವಿನಲ್ಲಿ
ಮುಂದೆ ತೋರುತ್ತವಿರಲು, ಸಂಪ್ರದಾಯದವರು
ಒಡನೊಡನೆ ಹರಿದುಬಂದು, ಹೇಳುತ್ತಿರಲು,
ಹರಿದು ಬಂದು ಹತ್ತೆಸಾರಿದ,
ಬಸವನ ಮಹಮನೆಯ ತಲೆಯೆತ್ತಿ ನೋಡಿದ.
ಮುಗಿಲ ಮೂಲೆ ತಪ್ಪದೆ ಕುಸುರಿಗೆಲಸಗಳ,
ನಂದಿಯ ಮಂಟಪಗಳ,
ಮೇಲುಪ್ಪರಿಗೆಯ ಭದ್ರಂಗಳ ನೋಡಿ ತಲೆದೂಗುತ್ತ,
ಕಲಿದೇವರದೇವ, ಬಸವನ ಮಹಾಮನೆಯ
ಪ್ರದಕ್ಷಿಣ ಬಂದು, ದ್ವಾರದ ಮುಂದೆ ನಿಂದಿರ್ದನು,

687
ಬಿಂದುವ ಹರಿದು, ನಾದವನತಿಗಳೆದು,
ಕಳೆಯ ಬೆಳಗ ಸಾಧಿಸಿ,
ಅಸಾಧ್ಯ ಸಾಧಕನಾದೆಯಲ್ಲಾ ಬಸವಣ್ಣ.
ಕಾಯವ ಹೊದ್ದದೆ, ಮಾಯವ ಸೋಂಕದೆ.
ನಿರಾಳವಾಗಿ ನಿಂದೆಯಲ್ಲಾ ಬಸವಣ್ಣ.
ನಾ ನಿನ್ನನವಗ್ರಹಿಸಿಕೊಂಡು, ಸಂದುಭೇದವಿಲ್ಲದಿದ್ದಲ್ಲಿ,
ಹೊಗಳಲಿಂಬುಂಟೆ ಬಸವಣ್ಣ.
ಕಲಿದೇವರದೇವನು ಕಾಯಗೊಂಡಿಪ್ಪುದು,
ನಿನ್ನಿಂದಲಾನು ಕಂಡೆ ನೋಡಾ, ಸಂಗನಬಸವಣ್ಣ.

688
ಬಿಂದುವ ಹರಿದೆಯಲ್ಲಾ ಬಸವಣ್ಣ.
ನಾದವ ಸಿಂಹಾಸನವ ಮಾಡಿಕೊಂಡು ಇದ್ದೆಯಲ್ಲಾ ಬಸವಣ್ಣ.
ಅಷ್ಟಗುಣಂಗಳ ನಷ್ಟವ ಮಾಡಿದೆಯಲ್ಲಾ
ನಿಜಲಿಂಗ ಬಸವಣ್ಣ.
ಶುಕ್ಲಶೋಣಿತ ಮೇಧಸ್ಸು ಇವರಿಂದಾದ
ಕಾಯವೆತ್ತ ಹೋಯಿತ್ತಯ್ಯಾ ಘನಲಿಂಗ ಬಸವಣ್ಣ.
ಭಕ್ತಿಯ ರೂಪುಗೆಟ್ಟು ಮತ್ತೊಂದು ರೂಪಾದೆಯಲ್ಲಾ
ನಿರೂಪಿ ಬಸವಣ್ಣ.
ಶೂನ್ಯಪ್ರಸಾದಿಯಲ್ಲ, ನಿಶ್ಯೂನ್ಯಪ್ರಸಾದಿಯಲ್ಲ.
ಆವ ಪ್ರಸಾದವನೂ ಸೋಂಕದ ಪ್ರಸಾದಿ.
ಯೋನಿಜನಲ್ಲದ, ಅಯೋನಿಜಲ್ಲದ, ನಿಜಮೂರ್ತಿಯೆನಿಸುವ ಬಸವಣ್ಣ.
ಭಕ್ತಿಯ ಹರಹಿಹೋದೆಯಲ್ಲಾ ಬಸವಣ್ಣ.
ಮೂರ್ತನಲ್ಲದ, ಅಮೂರ್ತನಲ್ಲದ ಲಿಂಗವ
ತೋರಿದೆಯಲ್ಲಾ ಬಸವಣ್ಣ.
ನಿರವಯವಾಗಿ ಹೋದನು ನಮ್ಮ ಬಸವರಾಜನು.
ಬೆಳಗನುಟ್ಟು ಬಯಲಾಗಿ ಹೋದನು ನಮ್ಮ ಬಸವಲಿಂಗನು.
ಬಸವಣ್ಣ ಬಸವಣ್ಣ ಬಸವಣ್ಣ ಎನಲಮ್ಮೆನು,
ಎನ್ನ ವಾಙ್ಮನಕ್ಕಗೋಚರನಾಗಿ.
ಬಸವಣ್ಣಂಗೆ ಶರಣೆಂಬ ಪಥವ ತೋರಯ್ಯಾ,
ಕಲಿದೇವರದೇವ.

711
ಮಾಡುವಾತ ಕಲಿದೇವ,
ಮಾಡಿಸಿಕೊಂಬಾತ ಕಲಿದೇವ.
ಮಾಡುವ ಮಾಡಿಸಿಕೊಂಬವೆರಡರ ಚೈತನ್ಯ, ಬಸವಣ್ಣ.
ಸ್ಥೂಲವನು ಸೂಕ್ಷ್ಮವ ಮಾಡಿ ಅನುಕರಿಸಿ,
ಕರಸ್ಥಲದಲ್ಲಿ ತೋರಿದ ಬಸವಣ್ಣ.
ಬಸವಣ್ಣನ ಸಂಗದಿಂದ ಬದುಕಿದೆ ಕಾಣಾ, ಕಲಿದೇವಯ್ಯ.

712
ಮಾರಾರಿಯ ಬೆಸನದಿಂದ ಧಾರುಣಿಗವತರಿಸಿ,
ಸಾರಾಯದ ಸದ್ಭಕ್ತಿಯ ತೋರಿದನು ಶಿವಶರಣರೆಲ್ಲರಿಗೆ.
ಭಕ್ತಿಯ ಸಂಚವ, ಮುಕ್ತಿಯ ಭೇದವ,
ಸತ್ಯಶರಣರಿಗೆಲ್ಲ ಉಪದೇಶವ ಮಾಡಿ,
ನಿತ್ಯಲಿಂಗಾರ್ಚನೆಯೊಳಗೆನ್ನನಿರಿಸಿ ರಕ್ಷಿಸಿದಾತ,
ಬಸವಣ್ಣ ಕಾಣಾ, ಕಲಿದೇವರದೇವ.

720
ಲಿಂಗದ ನಿಧಿಯೆ ಬಸವಾ.
ಜಂಗಮದ ವಾರಿಧಿಯೆ ಬಸವಾ.
ಪ್ರಸಾದದ ತವನಿಧಿಯೆ ಬಸವಾ.
ಅನುಭಾವದ ಮೇರುವೆ ಬಸವಾ.
ಮಹವನೊಡಗೂಡಿದ ತನು
ಬಸವಣ್ಣನೊ , ಕಲಿದೇವನೋ ?

761
ಸುಖವೊಂದು ಕೋಟ್ಯಾನುಕೋಟಿ ಬಂದಲ್ಲಿ ಬಸವಣ್ಣನ ನೆನೆವೆ.
ದುಃಖವೊಂದು ಕೋಟ್ಯಾನುಕೋಟಿ ಬಂದಲ್ಲಿ ಬಸವಣ್ಣನ ನೆನೆವೆ.
ಲಿಂಗಾರ್ಚನೆಯ ಮಾಡುವಲ್ಲಿ ಬಸವಣ್ಣನ ನೆನೆವೆ.
ಜಂಗಮಾರ್ಚನೆಯ ಮಾಡುವಲ್ಲಿ ಬಸವಣ್ಣನ ನೆನೆವೆ.
ಬಸವಣ್ಣನ ನೆನೆದಲ್ಲದೆ ಭಕ್ತಿಯಿಲ್ಲ. ಬಸವಣ್ಣನ ನೆನೆದಲ್ಲದೆ ಮುಕ್ತಿಯಿಲ್ಲ.
ಇದು ಕಾರಣ, ಬಸವಣ್ಣ ಬಸವಣ್ಣ
ಎನುತಿರ್ದೆನು ಕಾಣಾ, ಕಲಿದೇವಯ್ಯ.

765
ಸ್ಥಾವರಲಿಂಗ ಜಂಗಮವೆಂಬುದನಾರು ಬಲ್ಲರಯ್ಯಾ, ಬಸವಣ್ಣನಲ್ಲದೆ ?
ಎಲ್ಲಿ ಸ್ಥಾವರವಿದ್ದಲ್ಲಿ ನೋಡಲಾಗದು, ಮನದಲ್ಲಿ ನೆನೆಯಲಾಗದು.
ಲಿಂಗಕ್ಕಾದಡೆಯೂ ಜಂಗಮಬೇಕು, ಜಂಗಮವಿಲ್ಲದ ಲಿಂಗವುಂಟೆ ?
ಗುರುವಿಂಗಾದಡೆಯೂ ಜಂಗಮಬೇಕು, ಜಂಗಮವಿಲ್ಲದ ಗುರುವುಂಟೆ ?
ಎಲ್ಲಿ ಜಂಗಮವಿದ್ದಲ್ಲಿ ಗುರು ಲಿಂಗ ಜಂಗಮ ಪಾದೋದಕ
ಪ್ರಸಾದ ಅನುಭಾವ ಸನ್ನಹಿತವಾಗಿಹುದು.
ಇಂತಿವರ ಭೇದವ ಬಸವಣ್ಣ ಬಲ್ಲನು.
ಬಸವಣ್ಣನ ಶ್ರೀಪಾದಕ್ಕೆ ಅಹೋರಾತ್ರಿಯೊಳೆದ್ದು,
ನಮೋ ನಮೋ ಎಂಬೆನು ಕಾಣಾ, ಕಲಿದೇವಯ್ಯ.

ಟಿಪ್ಪಣಿ: ವಚನಗಳ ತೋರಿಸಿದ ಸಂಖ್ಯೆಯು ಸಮಗ್ರ ವಚನ ಸಾಹಿತ್ಯ ಸಂಪುಟದಲ್ಲಿಯ ವಚನ ಸಂಖ್ಯೆಯನ್ನು ಸೂಚಿಸುತ್ತದೆ. (ಸಮಗ್ರ ವಚನ ಸಾಹಿತ್ಯ ಸಂಪುಟ - ೧ ರಿಂದ ೧೫, ಪ್ರಕಾಶಕರರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರಕಾರ, ಬೆಂಗಳೂರು.)

ಪರಿವಿಡಿ (index)
*
Previous ಬಸವಣ್ಣನವರ ಬಗ್ಗೆ ಬಹುರೂಪಿ ಚೌಡಯ್ಯನವರ ವಚನ ಆಧ್ಯಾತ್ಮ ಕ್ರಾಂತಿವೀರ ಗುರು ಬಸವೇಶ್ವರ Next