ಕೂಡಲ ಸಂಗಮದಿಂದ ಬಸವಣ್ಣನವರ ನಿರ್ಗಮನ | ಬಸವಣ್ಣನವರಿಂದ ಕಾಯಕ ಸ್ವೀಕಾರ |
ಬಸವಣ್ಣನವರ ವಿವಾಹ |
✍ ಪೂಜ್ಯ ಶ್ರೀ ಮಹಾಜಗದ್ಗುರು ಡಾ|| ಮಾತೆ ಮಹಾದೇವಿ
*
ಬಸವಣ್ಣನವರ ವಿವಾಹ ಮತ್ತು ಕಲ್ಯಾಣಕ್ಕೆ ಆಗಮನ ಕುರಿತು ಸ್ವಲ್ಪ ವ್ಯತ್ಯಾಸವುಳ್ಳ ಕಥಾ ನಿರೂಪಣೆಗಳಿವೆ. ಹರಿಹರನ ಪ್ರಕಾರ, ಬಸವಣ್ಣನವರು ದೇವನಿಂದ ಆದೇಶ ಹೊಂದುತ್ತಲೇ ಅವನ ಕರುಣೆಯನ್ನು ಬೆನ್ನಿಗೆ ಇಟ್ಟುಕೊಂಡು ಮಂಗಳವೇಡೆಗೆ ಹೋಗುತ್ತಾರೆ. ಕಾಯಕವನ್ನು ಹುಡುಕುತ್ತಾ ಕರಣಸಾಲೆಗೆ ಬಂದಾಗ ಅತ್ಯಂತ ಆಕಸ್ಮಿಕವಾಗಿ ಅವರ ಪ್ರತಿಭೆ ವ್ಯಕ್ತಪಡಿಸುವ ಅವಕಾಶ ಒದಗಿ ಬರುತ್ತದೆ. ಕರಣಸಾಲೆಯ ಗಣಕರಾಗುತ್ತಾರೆ. ಇನ್ನೂ ದೊಡ್ಡ ಪದವಿಗೆ ಏರುತ್ತಾರೆ. ಆಗ ಸಿದ್ಧರಸರ ಕಣ್ಣು ಬಿದ್ದು ತಮ್ಮ ಮಗಳನ್ನು ಕೊಟ್ಟು ವಿವಾಹ ಮಾಡುತ್ತಾರೆ.
ಭೀಮಕವಿಯ ಪ್ರಕಾರ, ಬಸವಣ್ಣನವರು ಉಪನಯನವನ್ನು ತಿರಸ್ಕರಿಸಿ, ಕಪ್ಪಡಿ ಸಂಗಮಕ್ಕೆ ಹೋಗದೆ `ಬಾಗೇವಾಡಿಯಲ್ಲಿ ಇರುವ ಮಹಾಮನೆಗೆ ಹೋಗುತ್ತಾರೆ. ಅಲ್ಲಿ ನೀಲಗಂಗಳನ್ನು ವಿವಾಹವಾಗಿ ಅಕ್ಕನಾಗಲೆಯೊಡನೆ ಕಪ್ಪಡಿ ಸಂಗಮಕ್ಕೆ ತೆರಳುತ್ತಾರೆ. ಬಲದೇವ ಮಂತ್ರಿ ಉಪನಯನಕ್ಕೆಂದು ಬಾಗೇವಾಡಿಗೆ ಬಂದವನು, ತನ್ನ ಮಗಳನ್ನು ಕೊಟ್ಟು ಮದುವೆ ಮಾಡಿ ಹೊರಟು ಹೋಗುವನು. ಮುಂದೆ ಅವನು ಕಲ್ಯಾಣಕ್ಕೆ ಹೋದನಂತರ ತೀರಿಹೋಗುವನು. ಬಲದೇವರಸರ ಸ್ಥಾನಕ್ಕೆ ಯಾರನ್ನು ನೇಮಿಸಬೇಕು ಎಂದು ಬಿಜ್ಜಳ ಆಲೋಚಿಸುವನಲ್ಲದೆ, ಬಲದೇವರಸರ ಸಂಬಂಧಿಗಳು ಯಾರಾದರೂ ಉಂಟೇ ; ಎಂದಾಗ ಆಗ ಕೆಲವು ಮಂತ್ರಿಗಳು ಬಲದೇವರಸರ ಅಳಿಯನಾದ ಬಸವರಸನ ಹೆಸರು ಸೂಚಿಸುವರು. ಅವರು ಬಂದು ಬಸವಣ್ಣನನ್ನು ಆಹ್ವಾನಿಸಿ ಕರೆದೊಯ್ಯುವರು. ಈ ವಿಷಯದಲ್ಲಿ ಸಿಂಗಿರಾಜನು ಚೆನ್ನಾಗಿ ಕಥಾ ಹಂದರವನ್ನು ಬೆಳೆಸಿದ್ದಾನೆ. ಬಸವಣ್ಣನು ಅನುಭಾವಿಯಾಗಿ, ವಿಚಾರವಾದಿಯಾಗಿ, ನಿಜ ಭಕ್ತನಾಗಿ ಕೂಡಲ ಸಂಗಮದಲ್ಲಿರುವಾಗ ಅವನ ವ್ಯಕ್ತಿತ್ವದ ಕೀರ್ತಿ ಹಬ್ಬುತ್ತದೆ. ಕಲ್ಯಾಣದ ಬಲದೇವ ದಂಡಾಧೀಶರವರಿಗೆ ಈ ಕೀರ್ತಿ ತಲ್ಲುತ್ತದೆ. ತಾಯಿಯ ಕಡೆಯಿಂದ ಸಂಬಂಧಿಯಾದ ಈತನಿಗೆ ನನ್ನ ಮಗಳನ್ನು ಕೊಡುವೆ ಎಂದಾಸೆಪಟ್ಟು ಹೇಳಿ ಕಳಿಸುವನು. ಬಸವಣ್ಣನವರು ಒಪ್ಪಿ ಕಲ್ಯಾಣಕ್ಕೆ ಬರುವರು. ಕರೆಯಲಿಕ್ಕೆ ಹೋದ ಸೊಡ್ಡಳ 'ಬಾಚರಸರು ಬಸವಣ್ಣನು ಬಂದಾಗ ತಮ್ಮ ಮನೆಯಲ್ಲೇ ಉಳಿಯಲು ಏರ್ಪಾಡುಮಾಡುತ್ತಾರೆ. ನಂತರ ವಿವಾಹ ನೆರವೇರುತ್ತದೆ.
ಈ ಕವಿಗಳು ತಮಗೆ ಲಭ್ಯವಾದ ಮಾಹಿತಿಯ ಆಧಾರದ ಮೇಲೆ ಕಾವ್ಯರಚನೆ ಮಾಡಿರುವ ಕಾರಣ, ಐತಿಹಾಸಿಕ ದಾಖಲೆಗಳನ್ನು ಖಚಿತಪಡಿಸುವಲ್ಲಿ ತಲೆ ಕೆಡಿಸಿಕೊಂಡಿಲ್ಲ. ಹೀಗಾಗಿ ನಾವು ವಿವಿಧ ಕಾವ್ಯಗಳಿಂದ, ವಚನಗಳಿಂದ ಸಂಗ್ರಹಿಸಿದ ಅಂಶಗಳೆಂಬ ಎಳೆಗಳನ್ನು ತೆಗೆದುಕೊಂಡು ಕಥಾವಸ್ತ್ರವನ್ನು ಹೆಣೆಯಬೇಕಾಗಿದೆ.
ಕೂಡಲಸಂಗಮದಿಂದ ಹೊರಟು ಬಂದ ಬಸವಣ್ಣನವರು ಮತ್ತು ಅವರ ಸಹೋದರಿ ನಾಗಲಾಂಬಿಕೆ ಅವರನ್ನು ಬಲದೇವರಸರು ಬರಮಾಡಿಕೊಂಡು ತಮ್ಮ ಸಹೋದ್ಯೋಗಿಗಳಲ್ಲಿ ಒಬ್ಬರಾದ ಬಾಚರಸರಲ್ಲಿ ಬಿಡಾರ ಮಾಡಿಸುತ್ತಾರೆ. ಕನ್ನೆ ಇರುವ ಮನೆಗೆ ವರನನ್ನು ಬರಮಾಡಿಕೊಳ್ಳುವುದು ಸೂಕ್ತವಲ್ಲದ್ದರಿಂದ ಹೀಗೆ ಮಾಡಿರಬಹುದು.
ವಿವಾಹದ ಸಿದ್ಧತೆಗಳು ಏನೇನಾಗಬೇಕು ಎಂದು ಸಮಾಲೋಚಿಸಲು ಬಲದೇವರಸರು ಬಂದಿರುವಾಗ ಬಸವಣ್ಣನು ಮಹತ್ವದ ವಿಷಯವೊಂದನ್ನು ಪ್ರಸ್ತಾಪಿಸುತ್ತಾರೆ.
''ಮಾವನವರೇ ತಮ್ಮ ಮಗಳಿಗೆ ದೀಕ್ಷೆಯಾಗಬೇಕಲ್ಲ ?.....''
ಅದ್ಯಾವುದು ನಮ್ಮಲ್ಲಿಲ್ಲ...'
“ತಮಗೆ ತಿಳಿದಿದೆ. ಸಮಾಜದ ಅರ್ಧಭಾಗವಾದ ಸ್ತ್ರೀಯರಿಗೆ ಧರ್ಮಸಂಸ್ಕಾರ ಕೊಡಬೇಕು ಎಂದೇ ಹೋರಾಡಿ ನಾನು ಮನೆ ಬಿಟ್ಟು ಬಂದುದು. ಈಗ ನನ್ನ ತಲೆಯಲ್ಲಿ ಸ್ವತಂತ್ರ ಧರ್ಮದ ರೂಪುರೇಷೆ ಮೈತಳೆದಿದ್ದು, ಅದರ ಕುರುಹೇ ಇಷ್ಟಲಿಂಗ ಈ ಲಾಂಛನವು ಎಲ್ಲರಿಗೂ ಕೊಡಲ್ಪಡುವುದು....''
ಅದೇನೋ ಸರಿ, ನೋಡು ಬಸವರಸ, ಮಹಿಳೆಯು ರಜಸ್ವಲೆಯಾಗುವ ಕಾರಣದಿಂದಲೇ ಆಕೆಗೆ ಧರ್ಮಸಂಸ್ಕಾರ ನಿಷೇಧಿಸಲ್ಪಟ್ಟಿದೆ. ಹೀಗಿದ್ದೂ ಈ ಆಲೋಚಿಸಬಹುದೆ ?'' 'ರಜಸ್ವಲೆಯಾಗುವುದು ನಿಸರ್ಗದ ಒಂದು ಕ್ರಿಯೆ. ಅದೇನೂ ಅಪವಿತ್ರತೆಯಲ್ಲ, ಒಂದು ವೇಳೆ ಆ ಕ್ರಿಯೆ ಪಾಪವೆಂದಾದರೆ, ಅಶುದ್ಧವೆಂದಾದರೆ ಅದರಿಂದಲೇ ಹುಟ್ಟಿದ ಪುರುಷನು ಹೇಗೆ ಶುದ್ಧನಾಗಬಲ್ಲ? ಪುರುಷನಿಗೆ ಹಸಿವು ತೃಷೆಗಳಿರುವಂತೆ ಮಹಿಳೆಗೂ ಇದೆ. ಪುರುಷನಲ್ಲಿ ಆತ್ಮದ ಹಸಿವೆಯಾದ ಮೋಕ್ಷಾಪೇಕ್ಷೆ ಇದ್ದಂತೆ ಸ್ತ್ರೀಯಲ್ಲೂ ಇರದೆ ?....”
“ವಿವೇಕವನ್ನು ಚಿಂತಿಸಲು ಬಿಟ್ಟರೆ ನಿನ್ನ ಮಾತು ಸಮಂಜಸ ಎನಿಸುವುವು....”
'ದೇಹಕ್ಕೆ ಎರಡು ಕಣ್ಣುಗಳಿವೆ; ಅವು ನೋಡುವ ನೋಟ ಒಂದೆ. ಅವೆರಡೂ ಸುಸ್ಥಿತಿಯಲ್ಲಿ ಇರಬೇಕಾದುದು ಅವಶ್ಯವಲ್ಲವೆ? ಅದೇ ರೀತಿ ಸಮಾಜದ, ನಿಸರ್ಗದ ಎರಡು ಕಣ್ಣುಗಳಾದ ಸ್ತ್ರೀ-ಪುರುಷರು ಸಮಾನವಾಗಿ ಅಭಿವೃದ್ಧಿ ಹೊಂದಬೇಕು. ಬತ್ತ ಅಕ್ಕಿ ಎರಡನ್ನೂ ಕೂಡಿಸಿ ಅನ್ನವನ್ನು ಮಾಡಿದರೆ ಹೇಗೋ ಹಾಗೇ ಪತ್ನಿಯು ಧರ್ಮ ಸಂಸ್ಕಾರ ವಿಹೀನಳಾಗಿದ್ದು, ಪತಿಯು ಮಾತ್ರ ಸಂಸ್ಕಾರ ಸಹಿತನಾದರೆ...''
“ನಿನ್ನ ಮಾತಿನಲ್ಲಿ ಪರಮ ಸತ್ಯವೊಂದು ಗೋಚರವಾಗುತ್ತಿದೆ ಬಸವರಸ...'
“ವೈದಿಕ ಸಂಪ್ರದಾಯದಲ್ಲಿ ಮಹಿಳೆಗೆ ಸಂಸ್ಕಾರದ ಸಾಧ್ಯತೆಯಿಲ್ಲ. ಇನ್ನು ಸಪ್ತ ಶೈವಗಳಲ್ಲಿ ಒಂದಾದ ವೀರಶೈವ ಮತದಲ್ಲಿ ಮಹಿಳೆಗೆ ಅವಕಾಶವಿದ್ದರೂ ಅದು ಸ್ವಯಂ ಪ್ರೇರಣೆಯ ಅಧ್ಯಾತ್ಮಿಕ ಸಂಸ್ಕಾರ. ಅಂದರೆ ತನಗೆ ಪೂಜೆ-ಜಪ-ತಪಗಳ ಪ್ರೇರಣೆಯಾದಾಗ ಗುರುವಿನಿಂದ ಮಂತ್ರವನ್ನು ಪಡೆಯಬಲ್ಲಳು. ತನ್ನ ಗಂಡನ ಧರ್ಮ, ಆಚರಣೆ ಬೇರೆ ಇದ್ದರೂ ತಾನು ಶಿವಭಕ್ಕೆಯಾಗಬಹುದು. ನನ್ನ ಉದ್ದೇಶ ಹೇಗೆಂದರೆ ಪತಿಯ ಧರ್ಮವು ಹೆಂಡತಿಗೆ ಕೊಡಲ್ಪಡಬೇಕು. ಅವರು ಬಯಸುವವರೆಗೆ ಕಾಯುವುದಲ್ಲ, ಸಮಾಜದ ಒಂದು ವಿಧಿಯಾಗಿ ಕೊಡಲ್ಪಡಬೇಕು. ಆಗ ಅವರ ಆಸಕ್ತಿ, ಪ್ರತಿಭೆ ಅರಳಲು ಸೂಕ್ತದಾರಿ ನಿರ್ಮಾಣವಾಗುತ್ತದೆ."#
“ಸಂತೋಷದಿಂದ ಒಪ್ಪಿಗೆ ನೀಡುವೆ ಬಸವರಸ. ಆಕೆಗೆ ದೀಕ್ಷಾನುಗ್ರಹ ಯಾರಿಂದ ಮಾಡಿಸಬಹುದು?''
''ಈಗಾಗಲೇ ಅಕ್ಕನಿಗೆ ನನ್ನಿಂದ ದೀಕ್ಷಾನುಗ್ರಹವಾಗಿದೆ. ಆಕೆಯೇ ಕೊಡಲಿ...''
ವಿಧಿವತ್ತಾಗಿ ಅಕ್ಕನಾಗಲಾಂಬಿಕೆ ಬಸವಣ್ಣನವರ ಕೈಹಿಡಿಯಲಿರುವ ಕನ್ಯೆ ಗಂಗಾಂಬಿಕೆಗೆ ದೀಕ್ಷಾನುಗ್ರಹವನ್ನು ಮಾಡಿದಳು.
ಅತ್ತ ಮದುವೆಯ ಮಂಟಪಕ್ಕೆ ವರನನ್ನು ಬರಮಾಡಿಕೊಳ್ಳಲು ಸಿದ್ಧತೆ ನಡೆಯುತ್ತಿದೆ. ಬಸವರಸನಾದರೋ ಉಳಿದೆಲ್ಲ ತರುಣರಂತೆ ಹಾಸ್ಯ, ವಿನೋದ, ಚಪಲತನ ಮಾತುಗಳಲ್ಲಿ ನಿರತನಾಗದೆ ಆಗಾಗ ಪೂಜಾಸಕ ಧ್ಯಾನಾಸಕ್ತನಾಗುತ್ತಿದ್ದಾನೆ.
ಮಂಡೆಯ ಬೋಳಿಸಿಕೊಂಡು ಗಂಡುದೊತ್ತು ಹೊಕ್ಕೆನಯ್ಯಾ
ಕೆಲದ ಸಂಸಾರಿಗಳು ನಗುತಿರ್ದಡಿರಲಿ
ಲಜ್ಜೆಗೆಟ್ಟಾದರೂ ಲಿಂಗವನೊಲಿಸುವೆ
ನಾಣುಗೆಟ್ಟಾದರೂ ಲಿಂಗವನೊಲಿಸುವೆ
ಶರಣುಗತಿ ಹೊಕ್ಕೆನಯ್ಯಾ ಕೂಡಲಸಂಗಮದೇವಾ
ಸಾಮಾನ್ಯವಾಗಿ ತರುಣ-ತರುಣಿಯರಿಗೆ ಕೂದಲ ಮೇಲೆ ಅಪಾರ ಮೋಹ. ಅವನ್ನು ತಿದ್ದಲು ತೀಡಲು ಮಾಟವಾಗಿ ಅಲಂಕರಿಸಿಕೊಳ್ಳಲು ದಿನದ ಬಹುಭಾಗವನ್ನು ಕಳೆಯುತ್ತಿರುತ್ತಾರೆ.
ಆದರೆ ಬಸವಣ್ಣನೋ ಗುರುಕುಲದ ವಟುವಾಗಿದ್ದಾಗ ಅಲ್ಲಿಯ ನಿಯಮದಂತೆ ಹೇಗೆ ಕೂದಲು ತೆಗೆಸುತ್ತಿದ್ದನೋ ಈಗಲೂ ಹಾಗೆಯೇ ಇದ್ದಾನೆ. ಬಹುಶಃ ವರನಾಗಿರುವ ತರುಣನ ಈ ಬಗೆ ಕಂಡು ಅಕ್ಕ-ಪಕ್ಕದ ಸಂಸಾರಿಗಳು ನಕ್ಕಿರಬೇಕು. ಪ್ರಧಾನ ಮಂತ್ರಿಗಳ ಅಳಿಯ ಎಂದು ಭಯ ಪಟ್ಟು ಒಳಗೇ ಮುಸಿ ಮುಸಿ ನಕ್ಕಿರಬೇಕು ''ನಗುವವರು ನಗಲಿ. ನಾನಂತೂ ದೇವನ ಒಲಿಮೆಗಾಗಿ ಬದುಕುವವನು. ಪರಮಾತ್ಮಾ ನಿನ್ನಲ್ಲಿ ಶರಣಾಗಿದ್ದೇನೆ. ದಯವಿಟ್ಟು ನನ್ನನ್ನು ಆದರ್ಶಗಳಿಂದ ದೂರ ಸರಿಯುವಂತೆ ಮಾಡಬೇಡ...'' ಎಂದು ಪ್ರಾರ್ಥಿಸುತ್ತಾರೆ. ತಮ್ಮ ಭವಿಷ್ಯ ಜೀವನದ ಬಗ್ಗೆ ದುಗುಡವೇ ತುಂಬಿದೆ. ಏಕೆಂದರೆ ಅವನ ಪರಿಸರ, ವಾತಾವರಣ, ಒಡನಾಡಿಗಳು ಆದರ್ಶವಾದಿಗಳಲ್ಲದಿದ್ದರೆ ಒಂದೊಂದು ಹೆಜ್ಜೆಯನ್ನಿಡುವುದೂ ಕಷ್ಟವಾದೀತಲ್ಲವೆ ?
ಒಂದು ಕಡೆ ಹೆಚ್.ಎಲ್.ಮೆಂಕನ್ ಎಂಬ ಓರ್ವ ಲೇಖಕ ಹೇಳುತ್ತಾನೆ.
"The fundamental trouble with marriage is that it shakes a man's confidence in himself and so greatly diminishes his general competence and effectiveness. His habit of mind becomes that of a commander who has lost a decisive and calamitous battle. He never quite trusts himself thereafter."
ಮದುವೆಯಲ್ಲಿ ಇರುವ ಇರುವ ದೊಡ್ಡ ದೊಡ್ಡ ಸಮಸ್ಯೆಯೆಂದರೆ ಅದು ವ್ಯಕ್ತಿಯು ತನ್ನಲ್ಲಿಟ್ಟುಕೊಂಡಿರುವ ಆತ್ಮವಿಶ್ವಾಸವನ್ನೇ ಅಲ್ಲಾಡಿಸಿಬಿಡುತ್ತದೆ. ಸ್ಪರ್ಧಾತ್ಮಕ ಮನೋಭಾವ, ಪರಿಣಾಮಕಾರಿ ವ್ಯಕ್ತಿತ್ವವನ್ನು ನಾಶ ಮಾಡುತ್ತದೆ. ವಿವಾಹಾನಂತರ ವ್ಯಕ್ತಿಯ ಸ್ವಭಾವವು, ಮಹತ್ವಪೂರ್ಣವಾದ ಯುದ್ಧವೊಂದರಲ್ಲಿ ಸೋತು ಬಂದ ದಂಡನಾಯಕನಂತೆ ಆಗುತ್ತದೆ. ಅವನು ತನ್ನನ್ನು ತಾನು ನಂಬದಂತಹ ಸ್ಥಿತಿಯು ಒದಗುತ್ತದೆ.
ಈಗಾಗಲೂ ಕಾರಣವಿಷ್ಟೆ. ವ್ಯಕ್ತಿಯ ಆದರ್ಶ- ಆಶೋತ್ತರ ಅರಿಯಲಾರದ ಪತ್ನಿಯು ಮಾನಸಿಕ ಹತಾಶೆಗೆ ಕಾರಣಳಾಗಬಹುದು. ಹೀಗಾಗಿಯೇ ಬಸವಣ್ಣನವರು ಅನನ್ಯ ನಂಬಿಗೆಯಿಂದ ದೇವನನ್ನು ಪ್ರಾರ್ಥಿಸುತ್ತಿದ್ದಾರೆ. ನೀಲಗಂಗಾಂಬಿಕೆಯನ್ನು ವಿವಾಹವಾಗಿ ದಾಂಪತ್ಯ ಜೀವನವನ್ನು ಪ್ರವೇಶಿಸುತ್ತಾರೆ.
ಮಾನವನ ಜೀವನದಲ್ಲಿ ಮದುವೆ ಎನ್ನುವುದು ಮಹತ್ತರ ಘಟನೆ. ಭಾರತೀಯರ ಜೀವನ ಪದ್ಧತಿಯಲ್ಲಿ ಇದೊಂದು ಮುಖ್ಯವಾದ ಸಂಸ್ಕಾರ, ಸ್ತ್ರೀ-ಪುರುಷರೆಂಬ ಇಬ್ಬರು ವ್ಯಕ್ತಿಗಳನ್ನು ಸಾಮಾಜಿಕ-ಧಾರ್ಮಿಕ ವಿಧಿ ವಿಧಾನಗಳಿಂದ ಒಟ್ಟುಗೂಡಿಸುವ ಸಂಸ್ಕಾರವೇ ವಿವಾಹ. ಇದರ ಬಗ್ಗೆ ಪರ ಮತ್ತು ವಿರೋಧವಾದ ಎರಡೂ ಅಭಿಪ್ರಾಯಗಳಿವೆ. ಅಂಥ ಕೆಲವು ಅಭಿಪ್ರಾಯಗಳನ್ನು ನೋಡೋಣವೀಗ ಸೋಕ್ರಟೀಸ : ಸುಪ್ರಸಿದ್ದ ಗ್ರೀಕ್ ತತ್ವ ಜ್ಞಾನಿ ಸೋಕ್ರಟೀಸ ಹೇಳುತ್ತಾನೆ. “ಅವಶ್ಯವಾಗಿ ಮದುವೆಯಾಗಿ, ಒಳ್ಳೆಯ ಹೆಂಡತಿ ಸಿಕ್ಕರೆ ಸುಖಿಯಾಗುವೆ. ಇಲ್ಲವಾದರೆ ತತ್ತ್ವಜ್ಞಾನಿಯಾಗುವೆ.'' ಸೋಕ್ರಟೀಸ ನಂತಹ ತತ್ತ್ವಜ್ಞಾನಿ, ಹಾಸ್ಯಪ್ರವೃತ್ತಿಯ ಶಾಂತಮೂರ್ತಿಗೆ ಹೆಂಡತಿ ಜಾಂತಿಪೆ ಗಯ್ಯಾಳಿಯೂ, ಬಾಯಿ ಬಡುಕಿಯೂ, ಕೋಪಿಷ್ಟರೂ ಆಗಿದ್ದಳು. ಆಕೆಯನ್ನು 'ಅಮೆಜಾನ್' ಎಂದು ಜನರು ಕರೆಯುತ್ತಿದ್ದರು. ಏಕೆಂದರೆ ಅಮೇಜಾನ್ ನದಿ ಜಗತ್ತಿನಲ್ಲಿಯೇ ದೊಡ್ಡದಾದ, ರಭಸದಿಂದ ಹರಿಯುವ ಗಂಡುಬೀರಿ ನದಿ
ಜಾಂತಿಪೆ-ಸೋಕ್ರಟೀಸರ ಸಂಬಂಧ ಕುರಿತಾದ ಒಂದು ಪ್ರಸಿದ್ಧ ಕಥೆಯಿದೆ. ತತ್ತ್ವಜ್ಞಾನಿ ಸೋಕ್ರಟೀಸನ ಸಂದರ್ಶನಕ್ಕೆಂದು ಜನರು ದೂರದೂರದಿಂದೆಲ್ಲ ಬರುತ್ತಿದ್ದರು. ಒಮ್ಮೆ ಬಂದ ಅತಿಥಿಯೊಡನೆ ಚರ್ಚೆಯಲ್ಲಿ ತಲ್ಲೀನನಾಗಿ ಸೋಕ್ರಟೀಸನಿದ್ದ. ಜಾಂತಿಪೆ ಬಂದು, ಗಿರಣಿಗೆ ಹೋಗಿ ಕಾಳನ್ನು ಹಿಟ್ಟು ಮಾಡಿಸಿಕೊಂಡು ಬರಲು ಹೇಳಿದಳು. ಸೋಕ್ರಟೀಸ ಹಾಗೇ ಮಾತಾಡುತ್ತಿದ್ದ. ಸ್ವಲ್ಪ ಹೊತ್ತಿನ ನಂತರ ಬಂದು ಜವಾಬ್ದಾರಿ ಇಲ್ಲದವನು, ಮಾತಿನ ಮಲ್ಲನೆಂದು ಕೂಗಾಡಿದಳು. ಕೊಂಚ ವೇಳೆಯ ನಂತರ ಕೊಡದಲ್ಲಿ ನೀರು ತಂದು ಸೋಕ್ರಟೀಸನ ತಲೆಯ ಮೇಲೆ ಸುರಿದಳು. ಆಗಂತುಕ ಗಾಬರಿಗೊಂಡು ಎದ್ದು ನಿಂತ. ಸೋಕ್ರಟೀಸ ನಕ್ಕು ಶಾಂತನಾಗಿ ನುಡಿದ. ಮಿತ್ರಾ, ಆಶ್ಚರ್ಯವೇಕೆ ? ಈವರೆಗೆ ಗುಡುಗಿತು ಈಗ ಮಳೆ ಬಂದಿತು. ಗುಡುಗಿನ ನಂತರ ಮಳೆ ಬರುವುದು ಸ್ವಾಭಾವಿಕವಷ್ಟೆ ?
"ಮದುವೆಯಾದ ಓರ್ವ ಯುವಕ ಹಾಳಾದ ಮನುಷ್ಯನಿದ್ದಂತೆ."
ಮದುವೆಯ ಬಂಧನವೆಂದರೇನು ಅದು ನರಕವೇ ಸರಿ. ಅದು ಸತತವಾದ ಒತ್ತಡವನ್ನು ಉಂಟು ಮಾಡುತ್ತದೆ. ಅದೇ ಅದಕ್ಕೆ ವಿರುದ್ಧವಾದ ಮದುವೆಯಿಲ್ಲದ ಜೀವನ ಶಾಂತಿ-ಆನಂದಗಳನ್ನು ತಂದುಕೊಡುವಂತಹುದು. - ಷೇಕ್ಸ್ಪಿಯರ್
ಜಗಳಗಳು ವಿವಾಹಿತ ಜನರು ಪರಸ್ಪರ ಪಡೆದುಕೊಳ್ಳುವ ಉಡುಗೊರೆಗಳು - ಓವಿಡ್
ಮನುಷ್ಯರು ಹಂಬಲಿಸುವ ಕೆಟ್ಟದಾದ ಆಸೆಯೆಂದರೆ ಮದುವೆ. - ಗ್ರೀಕ್ ಗಾದೆ
ವಿವಾಹಕ್ಕೆ ಮೊದಲು ಗಂಡಸಿನ ಸ್ಥಿತಿ ನವಿಲಿನಂತೆ, ವಿವಾಹ ನಿಶ್ಚಯವಾದವನು ಸಿಂಹದಂತೆ, ವಿವಾಹದ ನಂತರ ಕತ್ತೆಯಂತೆ -ಜರ್ಮನ್ ಗಾದೆ
ಸಂಸಾರದ ಜವಾಬ್ದಾರಿ ಹೊರುವ ಪೂರ್ವದಲ್ಲಿ ತರುಣರು ನವಿಲಿನಂತೆ ಉತ್ಸಾಹದಿಂದ ಓಡಾಡುತ್ತ, ವಿವಾಹ ನಿಶ್ಚಯವಾದಾಗ ಸಿಂಹದಂತೆ ಮಾವನ ಮನೆಯ ವನರಾಜನಂತೆ ಅಧಿಕಾರ ತೋರಿಸುವ ಗೃಹರಾಜನಾಗಿ, ಆಮೇಲೆ ಸಂಸಾರದ ಜವಾಬ್ದಾರಿ ಹೊತ್ತು ಕತ್ತೆಯಂತೆ ನಿಭಾಯಿಸುತ್ತಾರೆ ಎಂದು ಜರ್ಮನ್ ಗಾದೆ ಹೇಳುತ್ತದೆ.
ಅಬ್ಬಾ ! ವಿವಾಹವು ಮನುಷ್ಯನನ್ನು ಎಷ್ಟು ಹಾಳು ಮಾಡುತ್ತದೆ ! ಸಿಗರೇಟು ವ್ಯಕ್ತಿಯನ್ನು ಅನೀತಿವಂತನನ್ನಾಗಿ ಮಾಡಿದಂತೆಯೇ ಇದೂ ಮಾಡುತ್ತದೆ. ಆದರೆ ಇದು ತುಂಬಾ ದುಬಾರಿಯಾದುದು. - ಆಸ್ಕರ ವೈಲ್ಡ್
ಮದುವೆಯು ವ್ಯಕ್ತಿಯ ಸ್ವಾತಂತ್ರ್ಯವನ್ನು ಹರಣ ಮಾಡುತ್ತದೆ.
ಎಲ್ಲ ವಿವಾಹಿತ ವ್ಯಕ್ತಿಗಳಿಗೂ ತಮ್ಮದೇ ಆದ ಆಲೋಚನಾ ವಿಧಾನಗಳಿರುತ್ತವೆ. ಕಷ್ಟದ ವಿಷಯವೇನೆಂದರೆ ಅವುಗಳನ್ನು ಅವನು ಆಚರಣೆಗೆ ತರಲು ಮಾತ್ರ ಅವಕಾಶವಿರುವುದಿಲ್ಲ. - ಆರ್ಟಿಮಸ್ವಾರ್ಡ್
ಮದುವೆಯಾದಾಗ ಅದೃಷ್ಟ ಚೆನ್ನಾಗಿದ್ದರೆ ಬಾಳ್ವೆ ಸುಗಮವಾಗುವುದು. ಒಂದು ವೇಳೆ ದುರದೃಷ್ಟವಶಾತ್ ಸರಿಯಾಗದಿದ್ದರೆ (ಇಜ್ಜೋಡಾದರೆ) ಆಗ ವಿವಾಹವಾದವರು, ಮನೆಯಲ್ಲೇ ನರಕವನ್ನು ಸೃಷ್ಟಿಸಿಕೊಂಡಂತೆ.
ಮದುವೆಯಾಗುವ ಮುನ್ನ ಕಣ್ಣುಗಳನ್ನು ಪೂರ್ತಿಯಾಗಿ ತೆರೆದಿಟ್ಟುಕೊಳ್ಳಬೇಕು. ಮದುವೆಯ ನಂತರ ಅರ್ಧ ಮುಚ್ಚಿರಬೇಕು. - ಬೆಂಜಮಿನ್ ಫ್ರಾನ್
ಮದುವೆಯು ಒಂದು ಪಂಜರವಿದ್ದಂತೆ. ಹೊರಗಿರುವ ಪಕ್ಷಿಗಳು ಒಳಗೆ ಪ್ರವೇಶಿಸಬೇಕೆಂದರೆ, ಒಳಗಿರುವ ಹಕ್ಕಿಗಳು ಹೊರಕ್ಕೆ ಹಾರಬೇಕೆನ್ನುತ್ತವೆ. -ಮಾಂಟೇನ್
ಹೆಂಡತಿಯನ್ನು ಸಂಸ್ಕರಿಸುತ್ತೇನೆ ಎಂಬ ವಿಶ್ವಾಸದಿಂದ ವಿವಾಹವಾಗುವ ಗಂಡಸು, ಗಂಡಸನ್ನು ಸುಧಾರಿಸುತ್ತೇನೆ ಎಂಬ ವಿಶ್ವಾಸದಿಂದ ವಿವಾಹವಾಗುವ ಸ್ತ್ರೀಯು ತಪ್ಪನ್ನೇ ಮಾಡುತ್ತಾರೆ . - ಎಲ್ಬರ್ಟ್ ಹಬ್ಬರ್ಡ್
ಕೆಲವು ಅನುಭವಗಳ ಆಧಾರದ ಮೇಲೆ ಮದುವೆ ಕುರಿತು ಒಳ್ಳೆಯ ಮತ್ತು ಕೆಟ್ಟ ಅಭಿಪ್ರಾಯಗಳನ್ನು ಕೊಡಲಾಗುತ್ತದಷ್ಟೆ. ಉದಾಹರಣೆಗೆ, ಮದುವೆ ವ್ಯಕ್ತಿಯ ಸ್ವಾತಂತ್ರ್ಯಹರಣ ಮಾಡುತ್ತದೆ ಎಂಬುದು. ಗಂಡನು ತನ್ನ ಸ್ವಂತಿಕೆಯನ್ನು ಕಳೆದುಕೊಂಡು ಹೆಂಡತಿಯ ಅಡಿಯಾಳಾಗುತ್ತಾನೆ ಎಂದು ಕೆಲವರ ಅನಿಸಿಕೆ. ಪರಸ್ಪರರಲ್ಲಿ ವಿಶ್ವಾಸ, ತಿಳುವಳಿಕೆ ಗಾಢವಾಗಿ ಇದ್ದಾಗ ಗಂಡನು ಹೆಂಡತಿಯ ಮಾತನ್ನು ಸಲಹೆ ಎಂದು ತಿಳಿಯುತ್ತಾನೆ. ಇಲ್ಲವಾದರೆ ದರ್ಪ ಎಂದು ಭಾವಿಸುತ್ತಾನೆ. ಅದೇ ರೀತಿಯಲ್ಲಿ ಹೆಂಡತಿಯು ಒಳ್ಳೆಯ ಸಲಹೆ ಕೊಡುವಾಗ ಅಧಿಕಾರ ವಾಣಿ ಪ್ರದರ್ಶಿಸದೆ ಆತ್ಮೀಯತೆಯಿಂದ ಹೇಳಿದಾಗ ಗಂಡನು ಅದನ್ನು ಸಂತೋಷದಿಂದಲೇ ಸ್ವೀಕರಿಸುವನು. ಒರಟಾಗಿ ಹೇಳಿದಾಗ ತನ್ನ ಸ್ವಾತಂತ್ರ್ಯಹರಣವಾಯಿತೆಂದು ದುಃಖಿಸುವನು, ಇಲ್ಲವೇ ಪ್ರತಿಭಟಿಸುವನು.
ಮದುವೆಯಾದುದೇ ಸುಖದ ಜೀವನ ಎಂದು ಕೆಲವರ ಅಭಿಪ್ರಾಯ ; ಮದುವೆ ಇಲ್ಲದುದೇ ಸುಖದ ಜೀವನ ಎಂದು ಮತ್ತೆ ಕೆಲವರದು. ಇವೆರಡೂ ಅರ್ಧಸತ್ಯಗಳೇ, ವ್ಯಕ್ತಿಯ ಆಸೆ-ಆಕಾಂಕ್ಷೆ- ಆದರ್ಶ-ಸಾಮರ್ಥ್ಯಗಳ ಮೇಲೆ ಮದುವೆ ಒಂದು ಅವಶ್ಯಕತೆಯೋ ಅಲ್ಲವೋ ಎಂಬುದು ತಿಳಿದುಬರುವುದು, ತನ್ನನ್ನು ತಾನು ಸಂಪೂರ್ಣವಾಗಿ ಯಾವುದಾದರೊಂದು ಉದಾತ್ತ ಧ್ಯೇಯಕ್ಕೆ ಸಮರ್ಪಿಸಿಕೊಂಡು, ಅದು ಧರ್ಮ, ದೇಶ, ಸಮಾಜಸೇವೆ ಯಾವುದೇ ಇರಲಿ ದುಡಿಯುವವನಿಗೆ ವಿವಾಹವು ಒಂದು ಆತಂಕವೇ ಆಗಬಹುದು. ತ್ಯಾಗದ ಬದುಕಿನಲ್ಲಿ ಸ್ವಾರ್ಥದ ಲವಲೇಶವೂ ಇಲ್ಲದಿದ್ದಾಗ ಅದು ವ್ಯಕ್ತಿಗೆ ಅಸೀಮ ಆತ್ಮಬಲವನ್ನು ತಂದುಕೊಡುತ್ತದೆ.
ತನ್ನ ಸಾಮರ್ಥ್ಯವನ್ನು ಗುರುತಿಸಿಕೊಂಡು ವ್ಯಕ್ತಿಯು ಮಾರ್ಗವನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ತಾನಿಟ್ಟುಕೊಂಡ ಧ್ಯೇಯಕ್ಕಾಗಿ ಪೂರ್ಣಾವಧಿಯ ಕಾರ್ಯಕರ್ತನಾಗಿ ದುಡಿಯಲು, ಮುನ್ನಡೆಯಲು ತ್ಯಾಗಜೀವನವು ಪೋತ್ಸಾಹಿಸುವ ಕಾರಣ ಅದು ಅಸೀಮವೆಂದು, ಆದರ್ಶವೆಂದೂ ಗುರುತಿಸಲ್ಪಟ್ಟಿರುವುದನ್ನು ಕಾಣುತ್ತೇವೆ.
ಬಸವಣ್ಣನವರು, ಗಾಂಧೀಜಿಯವರು ಗೃಹಸ್ಥರಿರಬಹುದು. ಆದರೆ ಎಂತಹ ವಿರಕ್ತರನ್ನೂ ಮೀರಿಸುವ ಅಂಥವರ ತ್ಯಾಗ ಇತಿಹಾಸದಲ್ಲಿ ದೊರೆಯುವುದು ಅಪರೂಪ. ಬಸವಣ್ಣನವರು ಗೃಹಸ್ಥರು, ತಾವೂ ಗೃಹಸ್ಥರಾಗಿದ್ದುಕೊಂಡು ಸಾಧಿಸುತ್ತೇವೆ.' ಎಂದು ಕೆಲವರು ದಾರ್ಷ್ಟ್ಯದ ಮಾತುಗಳನ್ನಾಡುವುದುಂಟು. ಅವರು ಸಾಧಿಸಲು ಪ್ರಯತ್ನಿಸಲಿ ಬೇಡವೆನ್ನುವವರಾರು. ಆದರೆ ತಮ್ಮನ್ನು ಬಸವಣ್ಣನವರಂತಹರೊಡನೆ ಹೋಲಿಸಲು ಹೋಗಬಾರದು. 'ನಾನು' ಎನ್ನುವ ಅಹಂಕಾರವನ್ನು ಸುಟ್ಟು, ನನ್ನದು ಎಂಬ ಮಮಕಾರವನ್ನೇ ಹರಿದೊಗೆದು ನನ್ನವರು ಎನ್ನುವ ವಲಯವನ್ನೇ ಬೃಹತ್ತಾಗಿ ವಿಸ್ತರಿಸಿಕೊಂಡು ವಿಶ್ವಕುಟುಂಬಿಗಳಾದ ಅವರ ಬದುಕೆಲ್ಲಿ ! ಉದಾತ್ತ ಮಾತುಗಳಿಂದ ಹಣವನ್ನು ಸಂಗ್ರಹಿಸಿ
ಆಸ್ತಿ ಮಾಡಿ, ತನ್ನ ಹೆಂಡತಿ-ಮಕ್ಕಳಿಗೆ ಮಾಡಿಟ್ಟು ಹೋಗುವವರದೆಲ್ಲಿ ?
ಮಾನವನಲ್ಲಿರುವ ಸಹಜ ಪ್ರವೃತ್ತಿಗಳಲ್ಲಿ ಒಂದಾದ ಕಾಮ (Sex instinct) ದ ತೃಪ್ತಿಗೋಸ್ಕರ ಮದುವೆ ಎಂಬ ಸಾಮಾಜಿಕ ವಿಧಿ (Custom) ನಾಗರಿಕ ಮಾನವನ ಸಮಾಜದಲ್ಲಿ ಬಳಕೆಗೆ ಬಂದಿದೆ. ಆದಿ ಮಾನವನು ಯಾವುದೇ ಕಟ್ಟುನಿಟ್ಟುಗಳಿಲ್ಲದ, ಸಾಮಾಜಿಕ ನಿಯಮ ಅಥವಾ ಜವಾಬ್ದಾರಿಗಳಿಲ್ಲದ ಸ್ವಚ್ಛಂದ ಕಾಮಜೀವಿಯಾಗಿದ್ದನು. ಆದರೆ ಕಾಲಾನಂತರದಲ್ಲಿ ಅವನಿಗೆ ಕೆಲವು ನೀತಿ-ನಿಯಮಗಳ ಚೌಕಟ್ಟು ಬೇಕೆನಿಸಿರಲೂ ಸಾಕು. ಗರ್ಭಿಣಿಯಾದ ಮತ್ತು ಹೆರಿಗೆಯ ನಂತರ ಸ್ತ್ರೀಯು ನಿಸ್ಸಹಾಯಕಳಾಗಿರುತ್ತಾಳೆ ; ಹುಟ್ಟಿದ ಕೂಸು ನಿಸ್ಸಹಾಯಕವಾಗಿರುತ್ತದೆ. ಅಂದಾಗ ಇಂತಹ ಮಹಿಳೆಯ ಮತ್ತು ಕೂಸಿನ ಜವಾಬ್ದಾರಿ ಹೊರುವವರು ಬೇಕಲ್ಲವೆ ? ಮನುಷ್ಯ, ಚಿಂತಿಸಿದ್ದಾನೆ. ಪ್ರಾಣಿಗಳೋಪಾದಿಯಲ್ಲಿ ತಾತ್ಕಾಲಿಕವಾದ ದೈಹಿಕ ಸುಖ ಪಡೆದು ನಂತರ ಯಾವುದೇ ಮಮಕಾರವಿಲ್ಲದೆ ಹೋದರೆ ವೃದ್ಧಾಪ್ಯದಲ್ಲಿ ಇವನ ರಕ್ಷಣೆ ಮಾಡುವವರು ಯಾರು ? ಮತ್ತು ತನ್ನ ಕಷ್ಟನಷ್ಟ, ಅನುವು- ಆಪತ್ತು, ಕಾಯಿಲೆ ಕಸಾಯಿಲೆ ಇವುಗಳ ಸಂದರ್ಭದಲ್ಲಿ ಸಲಹುವವರು ಯಾರು? ಜೀವನವಿಡೀ ಅರಿತು ನಡೆಯುವ ಸಂಗಾತಿಯ ಅವಶ್ಯಕತೆಯನ್ನು ಅರಿತು, ಮನುಷ್ಯನು ಜೀವನದ ಜೊತೆಗಾತಿಯನ್ನು ವಿವಾಹದ ಮೂಲಕ ಪಡೆಯುವ ವಿಧಾನವನ್ನು ಕಂಡುಹಿಡಿದಿರಬಹುದು.
ಪಾಶ್ಚಿಮಾತ್ಯ ತತ್ತ್ವ ಜ್ಞಾನಿ ಬರ್ಟ್ರಾಂಡ್ ರಸೆಲ್ಲರು, ಲಗ್ನದ ವಿಷಯವಾಗಿ ಹೀಗೆ ಹೇಳುತ್ತಾರೆ: “ಮಾನವನ ಮೂಲ ದೈಹಿಕ ಬೇಡಿಕೆಯಾದ ಕಾಮತೃಪ್ತಿ ಮಾಡುವುದು, ಪ್ರಪಂಚಕ್ಕೆ ಮಕ್ಕಳನ್ನು ಕೊಡುವುದು. ಹಾಗೂ ಅವುಗಳ ಪಾಲನೆ ಪೋಷಣೆ ಮಾಡುವುದು ವಿವಾಹ ಸಂಸ್ಥೆಯ ಕಾರ್ಯವೆಂದು ಹೇಳಬಹುದು. ಪ್ರಾಣಿಶಾಸ್ತ್ರ ದೃಷ್ಟಿಯಿಂದ ನೋಡಲಾಗಿ ಕಾಮತೃಪ್ತಿಗಿಂತ ಮಕ್ಕಳ ಪಾಲನೆ-ಪೋಷಣೆಯೇ ವಿವಾಹ ಸಂಸ್ಥೆಯ ಗುರಿಯಾಗಿದೆ.''
ದೈಹಿಕ ಬೇಡಿಕೆಯಾದ ಕಾಮತೃಪ್ತಿ, ಮಾನಸಿಕ ಬೇಡಿಕೆಯಾದ ವಾತ್ಸಲ್ಯ ತೃಪ್ತಿ, ಸಾಮಾಜಿಕ ಅವಶ್ಯಕತೆಯಾದ ಪ್ರಜೋತ್ಪತ್ತಿ ಇವೇ ವಿವಾಹ ಸಂಸ್ಥೆಯ ಗುರಿ ಎಂದು ರಸೆಲ್ಲರ ಅಭಿಪ್ರಾಯ.
ಭಾರತೀಯ ಧಾರ್ಮಿಕ-ಸಾಂಸ್ಕೃತಿಕ ಪರಂಪರೆಯಲ್ಲಿ ಮದುವೆಗೆ ಬಹುಗಣ ಸ್ಥಾನವಿದೆ. ಗಾಂಧೀಜಿಯವರು ಮದುವೆಯನ್ನು ಕುರಿತು ಮಾರ್ಮಿಕವಾಗಿ ಹೇಳುತ್ತಾರೆ ;
“ವಿವಾಹವು ಧರ್ಮಕ್ಕೆ ಒಂದು ರಕ್ಷಾಕವಚ. ಆ ಆವರಣವು ನಾಶವಾದರೆ ಧರ್ಮವು ಚೂರುಚೂರಾದೀತು. ಸಂಯಮವು ಧರ್ಮದ ತಳಹದಿ, ವಿವಾಹವು ಸಂಯಮವಲ್ಲದೆ ಬೇರೆಯಲ್ಲ. ಸಂಯಮವನರಿಯದ ವ್ಯಕ್ತಿ ಆತ್ಮ ಸಾಕ್ಷಾತ್ಕಾರವನ್ನು ಹೊಂದಲಾರ. ವಿವಾಹದ ಕಟ್ಟು ಸಡಿಲವಾದಾಗ, ಸಂಯಮದ ಆಚರಣೆಯಿಲ್ಲದೆ ಸ್ತ್ರೀ ವೈಮನಸ್ಯದ ಮೂಲವಾದಾಳು. ಮಾನವರು ಪಶುಗಳಂತೆ ನಿಗ್ರಹವಿಲ್ಲದೆ ಹೋದಾಗ ಅವರು ವಿನಾಶದ ನೇರ ಪಥ ಹಿಡಿದಂತೆ.'' (Young India 3-6-1926). 'ವಿವಾಹವು ಧರ್ಮದ ರಕ್ಷಾಕವಚ ; ಅದು ಸಂಯಮದ ಇನ್ನೊಂದು ಮುಖ' ಎಂಬ ಗಾಂಧೀಜಿಯ ಮಾತು ಅನುಭವ ಪೂರ್ಣವಾಗಿವೆ.
ಹೊಲಕ್ಕೆ ದನವೊಂದನ್ನು ಮೇಯಿಸಲು ಒಯ್ದಾಗ, ತಾನು ಇನ್ನಿತರ ಕೆಲಸಗಳಲ್ಲಿ ಮಗ್ನನಾಗುವುದಿದ್ದಾಗ ವ್ಯಕ್ತಿಯು ಅದನ್ನು ಉದ್ದವಾದ ಹಗ್ಗದಿಂದ ಗಿಡವೊಂದಕ್ಕೆ ಕಟ್ಟುತ್ತಾನೆ. ಆ ದನವು ಎಷ್ಟೇ ದೂರ ಹೋದರೂ ತನ್ನ ಹೊಲದ ಗಡಿ ದಾಟದಂತೆ ಎಚ್ಚರವಹಿಸುತ್ತಾನೆ. ಏಕೆಂದರೆ ವಿವೇಕ ಜ್ಞಾನವಿಲ್ಲದ ಪಶುವು ಗಡಿದಾಟಿ ಹೋದರೆ ಪೆಟ್ಟು ತಿನ್ನುವುದಷ್ಟೆ. ಅದೇ ರೀತಿ ಸಂಸಾರ ಅನ್ನುವ ವೃಕ್ಷಕ್ಕೆ ವಿವಾಹ ಅನ್ನುವ ಹಗ್ಗದಿಂದ ವ್ಯಕ್ತಿಯನ್ನು ಬಂಧಿಸಿದರೆ ಅವನಿಗೆ ತನ್ನದೇ ಆದ ಒಂದು ಕ್ಷೇತ್ರವನ್ನು ಗುರುತಿಸಿ ಕೊಟ್ಟಂತೆ ಆಗುತ್ತದೆ ; ಸ್ವಚ್ಛಾಚಾರವನ್ನೂ ತಡೆಗಟ್ಟಿದಂತೆ ಆಗುತ್ತದೆ. ಮನಸ್ಸನ್ನು ಸಿಕ್ಕತ್ತ ಹರಿಯಬಿಡದೆ ವ್ಯಕ್ತಿಯು ಒಂದು ನಿಯಮದ ಚೌಕಟ್ಟಿಗೆ ಒಳಗಾಗುತ್ತಾನೆ. ಇಂದ್ರಿಯ ಸುಖಾಪೇಕ್ಷೆ ಎನ್ನುವುದು ಹರಿತವಾದ ಖಡ್ಗದಂತೆ. ಅದು ವಿವಾಹ ಎ೦ಬ ಒರೆಯಲ್ಲಿದ್ದರೆ ಸುರಕ್ಷಿತ.
ಮಹಾತ್ಮಾ ಗಾ೦ಧೀಜಿಯವರ ಇನ್ನೊಂದು ಅಭಿಪ್ರಾಯವನ್ನು ನೋಡುವಾ
“ವಿವಾಹವು ಒಂದು ಪವಿತ್ರ ಸಂಸ್ಕಾರವಾದಾಗ, ಸತಿಪತಿಗಳ ಸಂಯೋಗ ದೈಹಿಕ ಸಂಯೋಗವಲ್ಲ, ಪ್ರಥಕ್ಕರಿಸಲಸಾಧ್ಯವಾದ ಇಬ್ಬರಲ್ಲಿ ಯಾರೊಬ್ಬರು ಮರಣದಿಂದಲೂ ಬೇರ್ಪಡಿಸಲಾರದ ಆತ್ಮ ಸಂಯೋಗ'
ಭಾರತೀಯ ಮೌಲ್ಯಗಳ ಪ್ರತಿಪಾದಕರು, ಪ್ರತಿನಿಧಿಗಳೂ ಆದ ಗಾಂಧೀಜಿ ಹೇಳುವ ಪ್ರಕಾರ ಸಂತಾನದ ಅಪೇಕ್ಷೆ ಇಲ್ಲದವನು ಮದುವೆಯನ್ನೇ ಆಗಬೇಕಾಗಿಲ್ಲ.
''ಸಂತಾನದ ಅಪೇಕ್ಷೆಯಿದ್ದರೆ, ನಿಷ್ಠಾಯುತ ಧಾರ್ಮಿಕ ಮನಸ್ಸಿನಿಂದ ವಿವಾಹ ಮಾಡಿಕೊಳ್ಳಬೇಕಾದುದು ಅವಶ್ಯಕ. ಸಂತಾನ ಅಪೇಕ್ಷೆಯೇ ಇಲ್ಲದವನು ವಿವಾಹವನ್ನೇ ಮಾಡಿಕೊಳ್ಳಬೇಕಾಗಿಲ್ಲ. ಲೈಂಗಿಕ ತೃಪ್ತಿಗಾಗಿಯೇ ಮಾಡಿಕೊಂಡ ವಿವಾಹವು ವಿವಾಹವೆನಿಸದು. ಆದರೆ ಇದಕ್ಕೆ ತದ್ವಿರುದ್ಧವಾಗಿ ಇಂದು ಭಾರತೀಯ ದಂಪತಿಗಳು ಸಹ ಸಂತಾನ ಬೇಡ, ಸುಖ ಬೇಕು ಎಂಬ ಭಾವವನ್ನು ಬಲಿಸಿಕೊಳ್ಳುತ್ತಿರುವರು. ಕೃತಕತೆ ಜೀವನದಲ್ಲಿ ಎಷ್ಟಾಗುತ್ತಿದೆ ಎಂದರೆ ಮಗುವನ್ನು ಹೆತ್ತರೆ, ಮಗುವಿಗೆ ಹಾಲೂಡಿಸಿದರೆ ದೇಹದ ಸೌಂದರ್ಯ ಕೆಡುತ್ತದೆ ಎಂಬ ಭಾವನೆಯಿಂದ ಹೆತ್ತ ಮಕ್ಕಳಿಗೆ ಹಾಲನ್ನೂ ಕುಡಿಸದಿರುವ ಬಣ್ಣದ ಗೊಂಬೆಗಳಂತಹ ಲಲನೆಯರುಂಟು.
“ಭೋಗಾಪೇಕ್ಷೆಯಿಲ್ಲದೆ ಚನ್ನಾಗಿಯೂ ನಿಜವಾಗಿಯೂ ನಡೆಸುವ ವೈವಾಹಿಕ ಜೀವನವು ಅನೇಕ ವಿಧಗಳಲ್ಲಿ ಅವಿವಾಹಿತ ಜೀವನಕ್ಕಿಂತ ಹೆಚ್ಚು ಕಷ್ಟವಾದುದು.'' (Harijan 15-3-42)
ಇಂಥ ಜೀವನದಲ್ಲಿ ಸುಖದ ದಾಹಕ್ಕಿಂತಲೂ, ಸ್ವಾರ್ಥಕ್ಕಿಂತಲೂ ಹೊಣೆಗಾರಿಕೆಯೇ ಜಾಸ್ತಿಯಾಗುತ್ತದೆ. ಕರ್ತವ್ಯ ಪ್ರಜ್ಞೆಯೇ ಅಧಿಕವಾಗಿರುತ್ತದೆ. ''ದೈಹಿಕದಿಂದ ಅಧ್ಯಾತ್ಮಿಕ ಸಂಗವನ್ನು ಪಡೆಯುವುದೇ ಮಾದರಿಯ ಮದುವೆಯ ಮೂಲಗುರಿ. ಮಾನವ ಪ್ರೇಮವು ದೈವೀಪ್ರೀತಿಗೆ- ವಿಶ್ವ-ಪ್ರೀತಿಗೆ ಅಡಿಗಲ್ಲಾಗಿ ಪ್ರಾದರ್ಭವಿಸುತ್ತದೆ. (Women and Social Injustice) ಈ ಹೇಳಿಕೆಯು ತುಂಬಾ ಪರಿಣಾಮಕಾರಿಯಾಗಿ, ಅರ್ಥಗರ್ಭಿತವಾಗಿ ತೋರುತ್ತದೆ. ಆದರೆ ವಾಸ್ತವವಾಗಿ ಚಿಂತನ ಮಂಥನ ಮಾಡಿದರೆ ಅಸಂಭವನೀಯ, ಕಷ್ಟ ಸಾಧ್ಯ ಎನಿಸುತ್ತದೆ. ಪತಿ-ಪತ್ನಿಯ ಸಂಬಂಧ ಪ್ರಾರಂಭದಲ್ಲಿ ಕಾಮಾಪೇಕ್ಷೆಯಿಂದ ಕೂಡಿದ್ದರೂ ಬರುಬರುತ್ತ ಕಾಮದ ಕಾವು ಆರಿ, ಪ್ರೇಮವಾಗಿ, ಮುಂದೆ ಮಕ್ಕಳಾದ ಮೇಲೆ ವಾತ್ಸಲ್ಯವಾಗಿ ರೂಪುಗೊಳ್ಳುತ್ತ ಹೋಗುತ್ತದೆ. (ಇದು ಸಾತ್ವಿಕ ದಂಪತಿಗಳ ವಿಷಯ. ಇನ್ನು ಕೆಲವರ ಸುಖಾಪೇಕ್ಷೆಗಳಲ್ಲಿ ಕಡೆಯತನಕವೂ ಕಾಮವೇ ಅಧಿಕವಾಗಿ ಉಳಿದುಬಿಡುತ್ತದೆ.) ಈ ಪ್ರೇಮ-ವಾತ್ಸಲ್ಯಗಳ ವರ್ತುಲಗಳು ಮಮಕಾರದ ಬಂಧನವನ್ನು ಗಟ್ಟಿಗೊಳಿಸುತ್ತ ಹೋಗಿ ಮನುಷ್ಯನು ಕೇವಲ ತಾನು, ತನ್ನದು ಇದನ್ನು ಬಲವಾಗಿ ಪ್ರೀತಿಸುತ್ತ ಹೋಗುವನೇ ವಿನಾ, ಅವನಿಗೆ ಸಿಕ್ಕುವ ಕೌಟುಂಬಿಕ ಪ್ರೇಮದ ಪಾಠವು ವಿಶ್ವಪ್ರೇಮವನ್ನೇನೂ ಕಲಿಸದು, ತನ್ನ ಹೆಂಡತಿಯನ್ನು ಪ್ರೀತಿಸುವುದನ್ನು ಕಲಿತ ಮಾತ್ರಕ್ಕೆ ವಿಶ್ವವನ್ನೇ ಪ್ರೀತಿಸುವುದನ್ನು ಕಲಿಯುತ್ತಾನೆಂದು ಭಾವಿಸುವುದು ಅಸಂಭವನೀಯ.
ಬಹಳ ದೊಡ್ಡದನ್ನು ನಾವು ನಿರೀಕ್ಷಿಸದಿದ್ದರೂ ವಿವಾಹ ಎಂಬ ಕಟ್ಟುಪಾಡಿಗೆ ಒಳಗಾದ ಮನುಷ್ಯನಲ್ಲಿ ಕೆಲವು ಬದಲಾವಣೆ ನಿರೀಕ್ಷಿಸಬಹುದು. ಸ್ವಚ್ಛಾ ಜೀವನಕ್ಕೆ ಅವಕಾಶವಿಲ್ಲದಿರುವಿಕೆ, ಹೆಂಡತಿ ಮಕ್ಕಳನ್ನು ಕುರಿತು ಪ್ರೀತಿಯನ್ನು ಬೆಳೆಸಿಕೊಳ್ಳುವುದು, ಬದುಕಿನ ಹೊಣೆಗಾರಿಕೆ-ಇವುಗಳಿಂದಾಗಿ ಜೀವನವು ಒಂದು ಬಗೆಯ ಪರಿಷ್ಕರಣಕ್ಕೆ (Processing) ಒಳಗಾಗುತ್ತದೆ ಎನ್ನಬಹುದು. ಹೀಗಾಗಿಯೇ ಭಾರತೀಯ ಸಂಸ್ಕೃತಿಯಲ್ಲಿ ಮದುವೆಗೆ ಗಣ್ಯಸ್ಥಾನವಿದೆ. ಪತಿ-ಪತ್ನಿಯರ ಸಂಬಂಧ ಉದಾತ್ತವೂ, ಉತ್ಕಟವೂ ಸುಲಭವಾಗಿ ಕಳಚಲಿಕ್ಕೆ ಬರದ ಭಾವನಾತ್ಮಕ ಸಂಬಂಧ ಎಂಬ ಭಾವವಿದೆ. ಶರಣ ಧರ್ಮದಲ್ಲಿ ಕೂಡ ವಿವಾಹ ಜೀವನಕ್ಕೆ ಗಣ್ಯಸ್ಥಾನವಿದೆ. ಸಾಮಾಜಿಕ ನೀತಿಯು ನೆಲೆಗೊಳ್ಳಲು ಗೃಹಸ್ಥ ಜೀವನವು ಪ್ರಮುಖ ಸಾಧನವಾದ ಕಾರಣ, ಗೃಹಸ್ಥನಿಗೂ ಸಾಧನಾಮಾರ್ಗದ ಹೆಬ್ಬಾಗಿಲು ತೆರೆಯಲ್ಪಟ್ಟುದು ಬಸವ ಧರ್ಮದ ವೈಶಿಷ್ಟ್ಯ.
ಬಸವಣ್ಣನವರು ಆದರ್ಶ ದಾಂಪತ್ಯವನ್ನು ಕುರಿತು ಹೀಗೆ ಹೇಳುತ್ತಾರೆ.
ಸತಿ ಪುರುಷರಿಬ್ಬರೂ ಪ್ರತಿ ದೃಷ್ಟಿಯಾಗಿ ಮಾಡಬಲ್ಲಡೆ
ಅದೇ ಮಾಟ, ಕೂಡಲಸಂಗಮದೇವರ ಕೂಡುವ ಕೂಟ
ಗಂಡ-ಹೆಂಡತಿ ಎಂದರೆ ಎರಡು ಕಣ್ಣುಗಳಿದ್ದಂತೆ, ಎರಡೂ ಕಣ್ಣುಗಳು ಒಂದುಗೂಡಿ ಒಂದೇ ವಸ್ತುವನ್ನು ನೋಡುವಂತೆ, ಒಂದೇ ಗುರಿಯತ್ತ ಸಾಗಿದರೆ ಅವರ ಐಹಿಕ ಸಾಮರಸ್ಯ ಪಾರಮಾರ್ಥಿಕ ಸಾಧನೆಗೆ ಅನುಕೂಲವಾಗುತ್ತದೆ.
ಅಭಿರುಚಿ, ಆಕಾಂಕ್ಷೆ ಧ್ಯೇಯ, ಸನ್ನಡತೆ ಒಂದೇ ರೀತಿಯಲ್ಲಿ ಇದ್ದಾಗ ಬದುಕು ರಸರಂಗವಾಗುತ್ತದೆ ; ಆನಂದಮಯವಾಗುತ್ತದೆ. ಹಾಗಲ್ಲದೆ
ಗಂಡ ಶಿವಲಿಂಗದೇವರ ಭಕ್ತ
ಹೆಂಡತಿ ಮಾರಿ ಮಸಣಿಯ ಭಕ್ತೆ
ಗಂಡ ಕೊಂಬುದು ಪಾದೋದಕ ಪ್ರಸಾದ
ಹೆಂಡತಿ ಕೊಂಬುದು ಸುರೆ ಮಾಂಸ
ಭಾಂಡ ಭಾಜನ ಶುದ್ಧವಿಲ್ಲದವರ ಭಕ್ತಿ
ಹೆಂಡದ ಮಡಿಕೆಯ ಹೊರಗೆ ತೊಳೆದಂತೆ
ಈ ವಚನದಲ್ಲಿ ಇಜ್ಜೋಡಾದ ಸಂಸಾರದ ವರ್ಣನೆ ಇರುವುದಲ್ಲದೆ ಇನ್ನೊಂದು ಮಾರ್ಮಿಕ ಮಾತಿದೆ. ನಾವು ಹೆಂಡದ ಮಡಿಕೆಯನ್ನು ಒಳಗೆ ತೊಳೆಯದೆ ಹೊರಗಷ್ಟೇ ತೊಳೆದರೆ ಆಗುವುದೆ? ಅದೇ ರೀತಿ ಮನೆಯೆಂಬ ಮಡಿಕೆಯ ಒಳಭಾಗ ಸ್ತ್ರೀ, ಹೊರಭಾಗ ಪುರುಷ ಪುರುಷನು ಶಿಕ್ಷಣ, ಇತರರ ಒಡನಾಟ ಮುಂತಾದವುಗಳಿಂದ ಸುಧಾರಿಸುತ್ತ ಹೋಗಿ ಸ್ತ್ರೀಯು ಮಾತ್ರ ಯಾವ ರೀತಿಯಲ್ಲೂ ಸುಧಾರಿಸದಿದ್ದರೆ ಏನು ಪ್ರಯೋಜನ ? ಗೃಹದ ಆಧಾರ ಸ್ತಂಭವಾದ ಗೃಹಿಣಿ ಸುಧಾರಣೆಗೊಳ್ಳಬೇಕಾದುದು ಅಷ್ಟೇ ಮುಖ್ಯವಲ್ಲವೆ ?
ಬಸವಣ್ಣನವರು ಇನ್ನೊಂದು ಮಾತನ್ನು ಒತ್ತಿ ಒತ್ತಿ ಹೇಳುತ್ತಾರೆ. ಒಬ್ಬ ವ್ಯಕ್ತಿ ಲೌಕಿಕ ಜೀವನವನ್ನು ಪ್ರವೇಶಿಸಲಿ, ಗೃಹಸ್ಥನಾಗಲಿ. ಆದರೆ ದೇವರನ್ನು, ಧರ್ಮವನ್ನು, ಭಾಕ್ತಿಕ ಜೀವನವನ್ನು ಮರೆಯಬಾರದು.
ಮಂಡೆಯ ಬೋಳಿಸಿಕೊಂಡು ಗಂಡುದೊತ್ತು ಹೊಕ್ಕೆನಯ್ಯಾ
ಲಜ್ಜೆಗೆಟ್ಟಾದರೂ ಲಿಂಗವನೊಲಿಸುವೆ
ನಾಣುಗೆಟ್ಟಾದರೂ ಲಿಂಗವನೊಲಿಸುವೆ
ಕೆಲದ ಸಂಸಾರಿಗಳು ನಗುತಿರ್ದಡಿರಲಿ
ಕೂಡಲಸಂಗಮದೇವಾ, ಶರಣುಗತಿ ಹೊಕ್ಕೆನಯ್ಯಾ
ಅಕ್ಕ-ಪಕ್ಕದಲ್ಲಿರುವ ಸಂಸಾರಿಗಳು ತರುಣ ವಯಸ್ಸಿನಲ್ಲಿರುವ ಬಸವಣ್ಣನು ಪೂಜೆ, ಧ್ಯಾನ, ಯೋಗಾಭ್ಯಾಸದಲ್ಲಿ ನಿರತನಾಗುವುದನ್ನು ಕಂಡು ಮುಸಿಮುಸಿ ನಕ್ಕಿರಬಹುದೇನೋ. ಅದನ್ನು ಗಣನೆಗೆ ತಂದುಕೊಳ್ಳದೆಯೇ ಅವರು ಧಾರ್ಮಿಕ ಜೀವನವನ್ನು ನಡೆಸುತ್ತಾರೆ.
ಇಂದ್ರಿಯ ನಿಗ್ರಹವನ್ನು ಕುರಿತಾದ ಕೆಲವು ಮಾತುಗಳು ಬಸವಣ್ಣನವರ ವಚನದಲ್ಲಿ ಹೀಗೆ ಬರುತ್ತವೆ.
ಇಂದ್ರಿಯ ನಿಗ್ರಹವ ಮಾಡಿದಡೆ ಹೊಂದುವವು ದೋಷಂಗಳು
ಮುಂದೆ ಬಂದು ಕಾಡುವವು ಪಂಚೇಂದ್ರಿಯಂಗಳು !
ಸತಿಪತಿರತಿಸುಖವ ಬಿಟ್ಟರೆ ಸಿರಿಯಾಳ ಚಂಗಳೆಯರು ?
ಸತಿಪತಿರತಿ ಭೋಗೋಪಭೋಗ ವಿಳಾಸವ ಬಿಟ್ಟನೆ ಸಿಂಧು ಬಲ್ಲಾಳನು ?
ನಿಮ್ಮ ಮುಟ್ಟಿ ಪರಧನ ಪರಸತಿಯರಿಗೆಳಸಿದಡೆ
ನಿಮ್ಮ ಚರಣಕ್ಕೆ ದೂರ ಕೂಡಲಸಂಗಮದೇವಾ
ಗೃಹಸ್ಥನಾದವನಿಗೆ ಪ್ರವೃತ್ತಿ ಮಾರ್ಗವನ್ನು, ವಿರಕ್ತನಿಗೆ ನಿವೃತ್ತಿ ಮಾರ್ಗವನ್ನು ಬೋಧಿಸಿದ ಶರಣರು ಉಭಯತರಿಗೂ ಕೆಲವು ನೀತಿ ಸಂಹಿತೆಗಳನ್ನು ಹೇಳುವರು. ಅನುಭವ ಮಂಟಪದಲ್ಲಿದ್ದ ಅಲ್ಲಮಪ್ರಭು, ಅಕ್ಕಮಹಾದೇವಿ, ಸಿದ್ಧರಾಮೇಶ್ವರ, ಚನ್ನಬಸವಣ್ಣನವರು ವಿರಕ್ತಮಾರ್ಗಿಗಳಾಗಿದ್ದರೆ, ಮೋಳಿಗೆಯ ಮಾರಯ್ಯ-ಮಹಾದೇವಿಯಮ್ಮ, ಹಡಪದ ಅಪ್ಪಣ್ಣ-ಲಿಂಗಮ್ಮ, ಶಿವಸ್ವಾಮಿ-ಅಕ್ಕನಾಗಮ್ಮ, ಆಯ್ದಕ್ಕಿ ಮಾರಯ್ಯ-ಲಕ್ಕಮ್ಮ ಮುಂತಾದವರು ಪ್ರವೃತ್ತಿ ಮಾರ್ಗದವರು, ಸನ್ಯಾಸದಿಂದಲೇ ಮುಕ್ತಿ ಎಂದು ಪ್ರತಿಪಾದಿಸಿದ ವೈದಿಕ ಧರ್ಮ, ಆ ಸನ್ಯಾಸದ ಅವಕಾಶವನ್ನೂ ಎಲ್ಲ ವರ್ಣದವರಿಗೂ ಕೊಡಲಿಲ್ಲ. ಇದಕ್ಕೆ ಪ್ರತಿಯಾಗಿ ಬಸವ ಧರ್ಮವು ಪವಿತ್ರ ಬದುಕನ್ನು ಬದುಕುವ ಗೃಹಸ್ಥನಿಗೂ ಮುಕ್ತಿ ಸಾಧ್ಯವೆಂದು ಪ್ರತಿಪಾದಿಸಿತು. ಹೀಗಾಗಿ ಬಹಳಷ್ಟು ಜನರು ಆರಿಸಿಕೊಳ್ಳುವ ಗೃಹಸ್ಥಮಾರ್ಗದವರಿಗೂ ಮೋಕ್ಷದ ಅವಕಾಶ, ಸಾಧನೆಯ ಸೌಲಭ್ಯ ಕರಗತವಾಯಿತು.
ಇಂದ್ರಿಯಗಳನ್ನು ದಮನ ಮಾಡತಕ್ಕದ್ದಲ್ಲ. ಅದರಿಂದ ಉಂಟಾಗುವ ಮನೋವಿಕಾರಗಳು ಬಹಳ, ಬಲವಂತವಾಗಿ ಹತ್ತಿಕ್ಕಿದಂತೆಲ್ಲ ಇಂದ್ರಿಯಗಳು ಇನ್ನಷ್ಟು ಮತ್ತಷ್ಟು ತೊಂದರೆ ಕೊಡುತ್ತವೆ. ಸಿರಿಯಾಳ- ಚಂಗಳೆಯರು, ಸಿಂಧು- ಬಲ್ಲಾಳನು ಇಂದ್ರಿಯ ಸುಖವನ್ನು ತೊರೆದರೆ ? ಅವರಿಗೆ ದೇವನ ಕೃಪೆ ದೊರೆಯಲಿಲ್ಲವೆ ? ದೊರೆಯಿತು. ಪರಮಾತ್ಮನನ್ನು ನಂಬಿದವನು, ಪೂಜಿಸುವವನು, ಒಲಿಸಿಕೊಳ್ಳಬೇಕೆನ್ನುವವನು ಪರಧನ, ಪರಸತಿಯರಿಗೆ ಎಳಸಬಾರದು. ಹಾಗೆ ಎಳಸಿದರೆ ದೇವನ ಕೃಪೆಗೆ ಹೊರತಾಗುವನು.
ಈ ವಚನವನ್ನು ಓದಿದಾಗ ಗಾಂಧೀಜಿಯವರು ಹೇಳುವ ಮಾತು ವಿವಾಹ ಜೀವನವು ಸಂಯಮದ ಮತ್ತೊಂದು ಮುಖ ಎನ್ನುವುದು, ವಚನಕ್ಕೆ ವ್ಯಾಖ್ಯಾನದಂತಿದೆ ಎನ್ನಿಸುವುದು. ಸ್ವಸ್ತ್ರೀಯಲ್ಲಿ ನಿಷ್ಠನಾಗಿ, ತನ್ನ ಪತಿಯಲ್ಲಿ ಏಕನಿಷ್ಠೆ ಹೊಂದಿ ಗೃಹಸ್ಥರು, ಬಾಳುವುದೂ ಶ್ರೇಯಸ್ಕರವೆ!
ಒಬ್ಬನು ಒಂದು ವೇಳೆ ವೈರಾಗ್ಯದ ಬದುಕಿಗೆ ಆತುರದಿಂದ ಪ್ರವೇಶಿಸಿರುವನೆಂದು ಕೊಳ್ಳೋಣ. ಅದರ ಆಗು-ಹೋಗು, ಹೊಣೆಗಾರಿಕೆ ಅರಿಯುವ ಮೊದಲೇ ವೈರಾಗ್ಯದ ಬದುಕಿಗೆ ಬಂದು, ನಂತರ ಅಲ್ಲಿ ನೀಗಲಾರದೆ ಸೋತಾಗ ಏನು ಮಾಡಬೇಕು? ಇಂದ್ರಿಯ ದಮನ ಮಾಡಿದರೆ ದೋಷಗಳು ಪ್ರಾಪ್ತವಾಗಿ ಮನೋವಿಕಾರ ಉಂಟಾಗುವುದು. ಅಂಥ ಸನ್ನಿವೇಶದಲ್ಲಿ ಕೆಟ್ಟ ವರ್ತನೆಗಳನ್ನು ಮಾಡುವುದಾಗಲೀ ಪರಸ್ತ್ರೀಯರೊಡನೆ ಸರಸ ವಾಡುವುದಾಗಲೀ ಮಾಡಬಾರದು.
ಒಡೆಯರು ತಮ್ಮ ಮನೆಗೆ ಒಡಗೊಂಡು ಹೋದರೆ
ತುಡುಗುಣಿತನದಲ್ಲಿ ಪರವಧುವ ನೋಡುವ ಸರಸಬೇಡ ಕಾಣಿರಣ್ಣಾ !
ಒಡೆಯನರಸಿಯ ಸರಸಬೇಡ !
ಕೂಳಸೊಕ್ಕು ತಲೆಗೇರಿ ರಾಣಿವಾಸದೊಡನೆ ಸರಸಬೇಡ ;
ಕೂಡಲಸಂಗಮದೇವ ಕರಸಿತಗನಯ್ಯ !
ಜಂಗಮನು ಧರ್ಮಬೋಧಕನು ಬಂದಿರುವನೆಂದು ಅವನ ಆರೋಗಣೆಗೆಂದು ಯಾರಾದರೂ ಗೃಹಸ್ಥರು ಮನೆಗೆ ಕರೆದೊಯ್ದರು ಎಂದುಕೊಳ್ಳಿರಿ. ಆಗ ಕಳ್ಳತನದಲ್ಲಿ ನೋಡುವುದು, ಏನೇನೋ ನೆಪಮಾಡಿಕೊಂಡು ಸ್ಪರ್ಶಿಸುವುದು, ಸರಸವಾಡುವುದು ಬೇಡ. "ಊಟದ ಕಾವು ತಲೆಗೇರಿ ಪರಪುರುಷರ ಹೆಂಡತಿಯರೊಡನೆ ಸರಸಬೇಡ. ಪರಮಾತ್ಮನು ಬಲು ಕೋಪಿಷ್ಠ ! ಎನ್ನುತ್ತಾರೆ ಬಸವಣ್ಣನವರು.
ತನ್ನ ಮನಸ್ಸನ್ನು ಇಂದ್ರಿಯಗಳನ್ನು ಉದಾತ್ತೀಕರಿಸಿಕೊಂಡು ವ್ಯಕ್ತಿಯು ಸಾಧ್ಯವಾದಷ್ಟೂ ಉನ್ನತ ಮಟ್ಟಕ್ಕೆ ಏರಬೇಕು. ಒಂದು ವೇಳೆ ಆಗದೆ ಇದ್ದರೆ ಆಗ ಮಾಡಬೇಕಾದುದೇನು ? ಸಿದ್ಧರಾಮೇಶ್ವರರು ಹೇಳುತ್ತಾರೆ :
ಭಕ್ತನ ಮನ ಹೆಣ್ಣಿನೊಳಗಾದಡೆ
ವಿವಾಹವಾಗಿ ಕೂಡುವುದು
ಭಕ್ತನ ಮನ ಮಣ್ಣಿನೊಳಗಾದಡೆ
ಕೊಂಡು ಆಲಯವ ಮಾಡುವುದು
ಭಕ್ತನ ಮನ ಹೊನ್ನಿನೊಳಗಾದಡೆ
ಬಳಲಿ ದೊರಕಿಸುವುದು ನೋಡಾ ಕಪಿಲಸಿದ್ಧ ಮಲ್ಲಿಕಾರ್ಜುನಾ.
(ಅಕ್ರಮವಾಗಿ ವಶಪಡಿಸಿಕೊಳ್ಳದೆ ವಿವಾಹವಾಗಿ ಹೆಣ್ಣನ್ನು ಪಡೆಯುವುದು, ಖರೀದಿಸಿ ಮನೆ ಕಟ್ಟುವುದು ; ಕಾಯಕ ಮಾಡಿ ಹಣ ಸಂಪಾದಿಸುವುದು)
ಇಷ್ಟೊಂದು ಅವಕಾಶವನ್ನು, ಪವಿತ್ರ ಸ್ಥಾನವನ್ನೂ ಬಸವಣ್ಣನವರು ಗೃಹಸ್ಥ ಜೀವನಕ್ಕೆ ಕಲ್ಪಿಸಿಕೊಟ್ಟಿದ್ದಾರೆ ನಿಜ. ಆದರೆ ಅಂತಿಮವಾಗಿ ವೈರಾಗ್ಯದ ಬದುಕಿಗೇ ಸ್ಥಾನವನ್ನು ಕೊಟ್ಟಿದ್ದಾರೆ.
ಕಾಮವೇಕೋ ಲಿಂಗಪ್ರೇಮಿ ಎನಿಸುವಂಗೆ ?
ಕ್ರೋಧವೇಕೋ ಶರಣ ವೇದ್ಯನೆನಿಸುವಂಗೆ ?
ಎಂದಿದ್ದಾರೆ. ಶರಣಸ್ಥಲಕ್ಕೆ ಹೋದ ನಂತರವಂತೂ ಸತಿ-ಪತಿಯರ ಸಂಬಂಧದಲ್ಲಿ ಬದಲಾವಣೆ ಬರಲೇಬೇಕು ಎಂದಿದ್ದಾರೆ. ಏಕೆಂದರೆ, ತಾನು ದೇವನಿಗೆ ಶರಣಸತಿಯಾದ ಮೇಲೆ ಇನ್ನು ತನಗೊಬ್ಬ ಸತಿ ಹೇಗಿರಲು ಸಾಧ್ಯ ? ಹೆಂಡತಿಯು ಲಿಂಗಪತಿ-ಶರಣಸತಿ ಭಾವವನ್ನು ಹೊಂದಿದನಂತರ ಇನ್ನೊಬ್ಬ ಪತಿಯನ್ನು ಹೊಂದಲು ಹೇಗೆ ಸಾಧ್ಯ ?
ಶರಣನ ಮಾನಸಿಕ ಸ್ಥಿತಿ ಒಂದು ವಿಲಕ್ಷಣ ಮಟ್ಟಕ್ಕೆ ಏರುವುದರಿಂದ ಇಂದ್ರಿಯ ಸುಖಗಳಲ್ಲಿ ಅವನಿಗೆ ಆಸಕ್ತಿಯೇ ಉಳಿಯದು. ಅದನ್ನು ಅಕ್ಕಮಹಾದೇವಿ ಹೀಗೆ ಹೇಳುತ್ತಾಳೆ :
ಭವಿಸಂಗವಳಿದು ಶಿವಭಕ್ತನಾದ ಬಳಿಕ
ಭಕ್ತಂಗೆ ಭವಿಸಂಗ ಅತಿಘೋರ ನರಕ
ಶರಣಸತಿ ಲಿಂಗಪತಿಯಾದ ಬಳಿಕ
ಶರಣಂಗೆ ಸತಿಸಂಗವತಿಘೋರ ನರಕ
ಇನ್ನೊಂದು ವಚನದಲ್ಲಿ ಬಸವಣ್ಣನವರು ಶರಣನು ಬ್ರಹ್ಮಚಾರಿಯಾಗಿರಬೇಕು ಎನ್ನುತ್ತಾರೆ. ಅವನು ಶರಣನು ತಾನೆ ? ಶರಣನ ಲಕ್ಷಣ ಕುರಿತು ಹೇಳಿದ ಅವರು ತಾವು ಅದರಂತೆ ಇರದೇ ಇರುವರೆ ?
ಶ್ರೋತ್ರದಲ್ಲಿ ಬ್ರಹ್ಮಚಾರಿಯಾಗಿರಬೇಕು ಶರಣನು
ತ್ವಕ್ಕಿನಲ್ಲಿ ಬ್ರಹ್ಮಚಾರಿಯಾಗಿರಬೇಕು ಶರಣನು
ನೇತ್ರದಲ್ಲಿ ಬ್ರಹ್ಮಚಾರಿಯಾಗಿರಬೇಕು ಶರಣನು
ಜಿಹ್ವೆಯಲ್ಲಿ ಬ್ರಹ್ಮಚಾರಿಯಾಗಿರಬೇಕು ಶರಣನು
ನಾಸಿಕದಲ್ಲಿ ಬ್ರಹ್ಮಚಾರಿಯಾಗಿರಬೇಕು ಶರಣನು
ಇಂತೀ ಪಂಚೇಂದ್ರಿಯಗಳಲ್ಲಿ ಬ್ರಹ್ಮಚಾರಿಯಾಗಿ
ಕೂಡಲಸಂಗಮದೇವರಲ್ಲಿ ಎನ್ನನಾಗು ಮಾಡಲಿಕೆ
ಬ್ರಹ್ಮಚಾರಿಯಾದರು ಪ್ರಭುದೇವರು.
ಆದ್ದರಿಂದ ಅವರ ಬದುಕನ್ನು ನೇರವಾಗಿ ಕಂಡ ಪ್ರಭುದೇವರು ಹೀಗೆ ಹೇಳುವುದು:
ಸತಿಯ ಕಂಡು ವ್ರತಿಯಾದ ಬಸವಣ್ಣ
ವ್ರತಿಯಾಗಿ ಬ್ರಹ್ಮಚಾರಿಯಾದ ಬಸವಣ್ಣ
ಬ್ರಹ್ಮಚಾರಿಯಾಗಿ ಭವಗೆಟ್ಟನಯ್ಯಾ ಬಸವಣ್ಣ
ಗುಹೇಶ್ವರ ನಿಮ್ಮಲ್ಲಿ ಬ್ರಹ್ಮಚಾರಿಯಾದ ಬಸವಣ್ಣನೊಬ್ಬನೇ !
ವೈವಾಹಿಕ ಜೀವನ ಸ್ವೀಕರಿಸಿಯೂ ಬ್ರಹ್ಮಚರ್ಯ ಪಾಲಿಸಿದ ಬಸವಣ್ಣನವರದು ಬಲು ವಿಶೇಷವೆಂದೇ ಪ್ರಭುದೇವರು ಕೊಂಡಾಡುತ್ತಾರೆ .
ಲಿಂಗವಂತ ಸಮಾಜದ ಕೆಲವು ಜನರು, ವಚನ ಸಾಹಿತ್ಯಾಭ್ಯಾಸಿಗಳಾದ ಕೆಲವು ಲಿಂಗಾಯತೇತರು ಬಸವ ಧರ್ಮದ ಪ್ರಕಾರ ಸನ್ಯಾಸ-ವೈರಾಗ್ಯ ಜೀವನಕ್ಕೆ ಅವಕಾಶವಿಲ್ಲ. ಅದರ ಪ್ರಕಾರ ಗೃಹಸ್ಥ ಜೀವನವೊಂದೇ ಮಾನ್ಯ ಎಂದು ವಾದಿಸುತ್ತಿರುತ್ತಾರೆ. ಇದಕ್ಕೆ ಉದಾಹರಣೆಯಾಗಿ ಇಂದ್ರಿಯ ನಿಗ್ರಹವ ಮಾಡಿದರೆ ಹೊಂದುವವು ದೋಷಂಗಳು, ಎಂಬುದನ್ನು ಕೊಡುತ್ತಾರೆ. ಈ ವಚನದ ಆಧಾರದ ಮೇಲೆ ಅವರು ಆ ರೀತಿಯಾಗಿ ನಿರ್ಧಾರಕ್ಕೆ ಬರುವುದಾದರೆ, ಇದು ಆನೆಯ ಬಾಲ, ಕಾಲು, ಕಿವಿ ಮುಟ್ಟಿ ಆನೆಯು ಹಗ್ಗದಂತಿದೆ. ಕಂಭದಂತಿದೆ, ಮೊರದಂತಿದೆ ಎಂದು ಕುರುಡರು ಹೇಳಿದಂತಾಗುತ್ತದೆ.
ಶರಣರದು ಸಮುದಾಯದ ಬದುಕು. ಎಲ್ಲರೂ ಸಾಮೂಹಿಕವಾಗಿ ಚರ್ಚಿಸಿ ನಿರ್ಧರಿಸಿ ಅದರಂತೆ ನಡೆಯುತ್ತಿದ್ದರು. ಸಿದ್ಧರಾಮೇಶ್ವರರು ಬಂದಾಗ ಹದಿನೆಂಟು ದಿವಸಗಳ ಕಾಲ ಇಷ್ಟಲಿಂಗದ ಅವಶ್ಯಕತೆ ಕುರಿತು ಚರ್ಚೆಯಾಯಿತೆಂದು ಕೇಳುತ್ತೇವೆ. ಒಂದು ವೇಳೆ ವೈರಾಗ್ಯ ಜೀವನಕ್ಕೆ ಮಾನ್ಯತೆ ಇದ್ದಿರಲಿಲ್ಲವಾದರೆ ಪ್ರಭುದೇವರು, ಅಕ್ಕಮಹಾದೇವಿ, ಸಿದ್ದರಾಮೇಶ್ವರ ಮುಂತಾದವರಿಗೆ ಮನವೊಲಿಸಿ ಲಗ್ನವನ್ನೇಕೆ ಮಾಡಲಿಲ್ಲ ? ಅದು ಬಿಡಿ; ಸ್ವತಂತ್ರ ವ್ಯಕ್ತಿತ್ವದ ಆ ವಿರಕ್ತರು ತಮ್ಮ ಬಾಳ ಬಟ್ಟೆಯನ್ನು ಬಿಟ್ಟು ಕೊಡಲು ಒಪ್ಪಲಿಕ್ಕಿರಲಿಲ್ಲ ಎಂದು ಊಹಿಸೋಣ. ಬಸವಣ್ಣನವರ ಕರಕಮಲ ಸಂಜಾತನು, ಸೋದರಳಿಯನು, ಅವರ ಮಾತನ್ನು ಮೀರದ ಶಿಷ್ಯನು ಆದ ಚನ್ನಬಸವಣ್ಣನಿಗೇಕೆ ಮದುವೆ ಮಾಡಲಿಲ್ಲ ?
ಕಾವಿಧಾರಿಗಳ ಮೇಲೆ ಕಿಡಿ ಕಾರುವ, ಮಠಾಧಿಕಾರಿಗಳನ್ನು ದ್ವೇಷಿಸುವ ಸೋಜಿಗದ ವಿಷಯವೆಂದರೆ ಸ್ವಾಮಿಗಳ ಕೃಪಾಶೀರ್ವಾದಗಳ ಬಲದಲ್ಲಿ ನಡೆಯುವ ವೇದಿಕೆಗಳ ಮೇಲೆಯೇ ಈ ಮಾತುಗಳ ಘೋಷಣೆಯಾಗುವುದೊಂದು ಗಮನಿಸತಕ್ಕಂತಹ ವಿಷಯ ಮತ್ತು ಅಂತಹ ಸ್ವಾಮಿಗಳ ಸಹನೆಯೂ ಮೆಚ್ಚತಕ್ಕದ್ದೇ ಅಲ್ಲವೆ ? ಬಸವ ಭಕ್ತರೆಂಬ ಒಂದು ಗುಂಪಿನವರು ತಮ್ಮ ವಿಚಾರವನ್ನು ಸಮರ್ಥಿಸಿಕೊಳ್ಳಲಿಕ್ಕಾಗಿ ಬಸವ ತತ್ತ್ವದಲ್ಲಿ ವೈರಾಗ್ಯ-ಸನ್ಯಾಸ ಎಂಬುದಿಲ್ಲ ಎನ್ನುತ್ತಾರೆ .
ನಾವು ಆಳವಾಗಿ ಸೂಕ್ಷ್ಮವಾಗಿ, ಪರಿಶೀಲಿಸಿದರೆ ಇನ್ನೊಂದು ವಿಷಯ ಗಮನಾರ್ಹ, ಬಸವ ತತ್ತ್ವದಲ್ಲಿ ವೈರಾಗ್ಯ-ಸನ್ಯಾಸಕ್ಕೆ ಅವಕಾಶವಿಲ್ಲ ಎಂಬುದಕ್ಕೆ ತದ್ವಿರುದ್ಧವಾಗಿ ಎಲ್ಲರೂ ಕಡ್ಡಾಯವಾಗಿ, ಗೃಹಸ್ಥರೂ ಕೂಡ ಜೀವನದ ಒಂದು ಹಂತದಲ್ಲಾದರೂ ವೈರಾಗ್ಯವೃತ್ತಿ ಸ್ವೀಕರಿಸಲೇಬೇಕು. ಶರಣಸ್ಥಲಕ್ಕೆ ಬಂದನಂತರ ಇದು ಅನಿವಾರ್ಯ ಮತ್ತು ಸಹಜ ಎಂಬುದು ಬಸವಾದಿ ಪ್ರಮಥರ ವಿಚಾರ. ಅಂತ ತಿಳಿದೇ ಬಸವಣ್ಣನವರ-ನೀಲಾಂಬಿಕೆಯ ದಾಂಪತ್ಯದ ಬದುಕು ಹೀಗೆ ಇದ್ದಿತು :
ಮಡದಿ ಎನಲಾಗದು ಎನ್ನನು ಬಸವಣ್ಣನಿಗೆ
ಪುರುಷನೆನ್ನಲಾಗದು ಬಸವನ ಎನಗೆ
ಉಭಯ ಕುಳವ ಹರಿದು ಬಸವಂಗೆ ಶಿಶುವಾನಾದೆನು
ಬಸವನೆನ್ನ ಶಿಶುವಾದನು
ಪ್ರಮಥರು ಪುರಾತರು ಸಾಕ್ಷಿಯಾಗಿ
ಸಂಗಯ್ಯನಿಕ್ಕಿದ ದಿಬ್ಬವ ಮೀರಿದೆ, ಬಸವನೊಳಗಾನಡಗಿದೆ
ವಚನ ವಾಜ್ಞಯದ ನೈಸರ್ಗಿಕ ಅಡವಿಯಲ್ಲಿ ಸಾಗುವಾಗ ಅಲ್ಲಿ ದೊರೆಯುವ ತತ್ತ್ವಗಳೆಂಬ ಹೂವು ಹಣ್ಣುಗಳನ್ನು ಆರಿಸಿಕೊಳ್ಳದೆ ಕೆಲವರು ತಮಗೆ ಬೇಕಾದಂತೆ ವ್ಯಾಖ್ಯಾನಗಳನ್ನು ಮಾಡಲು ತೊಡಗುತ್ತಾರೆ.
ಹೀಗೆ ಭಾರತೀಯ ಸಂಸ್ಕೃತಿಯಲ್ಲಿ ವಿವಾಹವು ಒಂದು ಗಂಡು ಒಂದು ಹೆಣ್ಣು ಕೇವಲ ಸುಖಾಪೇಕ್ಷೆ ಹೊಂದುವ ಸಾಧನವಾಗದೆ, ಎರಡು ಹೃದಯಗಳು ಸಮಾನ ಅಭಿರುಚಿ ಆದರ್ಶ ಬೆಳೆಸಿಕೊಂಡು ಉತ್ತಮ ಪ್ರಜೆಗಳನ್ನು ಸಮಾಜಕ್ಕೆ ನೀಡಿ, ಅಂತಿಮವಾಗಿ ದೇವನಲ್ಲಿ ಒಂದಾಗಬೇಕಾದ ಸದವಕಾಶವನ್ನು ಕಲ್ಪಿಸಿಕೊಡುವ ಪವಿತ್ರ ಸಾಧನ, ಈ ಪರಸ್ಪರರ ಸಂಬಂಧವು ಸುಲಭವಾಗಿ ಕಳಚಿಕೊಳ್ಳಲ್ಪಡುವಂತಹುದಲ್ಲವಾದ್ದರಿಂದ, ಭಿನ್ನಾಭಿಪ್ರಾಯ ಬಂದಾಗ ಪರಿಹರಿಸಿಕೊಂಡು, ಬದುಕಿನ ಎಡರು-ತೊಡರು ಸುಖ-ದುಃಖಗಳಲ್ಲಿ ಜೊತೆಗೂಡಿ ಹೆಗಲುಕೊಟ್ಟು ಸಾಗಬೇಕಾಗುತ್ತದೆ. ಹೀಗಾಗಿ ದಾಂಪತ್ಯದ ಬದುಕಿನಲ್ಲಿ ತಾಳ್ಮೆ ಅಪಾರವಾಗಿ ಬೇಕು ಇಲ್ಲದಿದ್ದರೆ ಬದುಕು ರಸರಂಗವಾಗದೆ, ರಣರಂಗವಾಗುತ್ತದೆ . ಕನ್ನಡದ ಸುಪ್ರಸಿದ್ಧ ಕವಿ ಸರ್ವಜ್ಞನು ಹೇಳುತ್ತಾನೆ.
ಕುದಿಹದ ಕೂಳಿಂದ ಹೆದುಳದಂಬಲಿ ಲೇಸು
ಹೃದಯ ಶೂನ್ಯರುಗಳೊಲವಿಂದ | ಬಲ್ಲವರ
ಕದನವೇ ಲೇಸು ಸರ್ವಜ್ಞ ||
ಪರಸ್ಪರ ಪ್ರೀತಿಯಿಲ್ಲದ ಹೃಯದ ಶೂನ್ಯರುಗಳ ಒಲವು ಎಂದರೆ ಅರೆಬರೆ ಬೆಂದ ಆಹಾರದಂತೆ ಎಂದವನ ಅಭಿಪ್ರಾಯ.
ಗೃಹಸ್ಥ ಜೀವನದ ಮೇಟಿಗೂಟದಂತಿರುವ ಹೆಣ್ಣುಮಗಳ ಗುಣ, ನಡತೆ, ತಾಳ್ಮೆ, ಜಾಣ್ಮಗಳ ಮೇಲೆಯೇ ಗಂಡ-ಮಕ್ಕಳ ಸುಖ ಮಾತ್ರವಲ್ಲ ಮನೆತನದ ಕೀರ್ತಿಯು ಏರುತ್ತದೆ.
ಉಲಿವಳು ಕೆಲೆವಳು ಮಲೆವಳು ಮನೆಯಲ್ಲಿ
ಕೊಲುವಳು ತನ್ನ ಪುರುಷನ | ಆ ಹೆಣ್ಣ
ಒಲೆಯಲ್ಲಿ ಹಾಕು ಸರ್ವಜ್ಞ||
ಜೋರಾಗಿ ಮಾತನಾಡುವವಳು, ಜಗಳಕ್ಕೆ ನೆಲ್ಲುವವಳಾದ, ಅರ್ಭಟದಿಂದ ಹೂಂಕರಿಸುವ ಹೆಂಡತಿಯಿದ್ದರೆ ಅಂಥ ವ್ಯಕ್ತಿ ಗಂಡನನ್ನು ಜೀವಂತವಾಗಿ ಕೊಲ್ಲುವವಳೇ ಆಗುತ್ತಾಳೆ. ಕೆಲವು ಹೆಣ್ಣುಮಕ್ಕಳು ಗಂಡನ ಕಷ್ಟಸುಖಗಳನ್ನೇ ಅರಿಯುವುದಿಲ್ಲ.
ಕಡುವನಿ ಗಂಡನ ಬಡತನವ ಬಲ್ಲಳೆ
ಕಡನ ತಂದಿಕ್ಕಿ ಬಸಿದನ್ನದಲ್ಲಿಕ್ಕುಪ್ಪ
ಪಿಡಿದು ನುಂಗುವಳು ಸರ್ವಜ||
ನಿರ್ದಾಕ್ಷಿಣ್ಯವಾಗಿ ತನಗೆ ಬೇಕಾದುದನ್ನು ತಂದು ಹಾಕಲು ಹಿಂಸೆ ಮಾಡುವರು. ಅವಶ್ಯಕವಿದ್ದುದಕ್ಕಿಂತ ಹೆಚ್ಚಾಗಿ ಸಾಮಗ್ರಿಗಳನ್ನು, ಸಾಲ ಮಾಡಿಯಾದರೂ ತಂದು ಹಾಕು ಎನ್ನುವರು. ಇವರು ಗಂಡಂದಿರನ್ನು ಜೀವಂತವಾಗಿಯೇ ಕೊಲ್ಲುವಂತಹವರು.
ಗಂಡಗಂಬಲಿಯಿಕ್ಕಿ ಗಂಡುಗರಣೆಯ ನುಂಗಿ
ಗಂಡ ಬಂದಾಗ ನರಳುವ ಕಳ್ಳಿಗೆ
ಗುಂಡುಕಲ್ಲ ಮದ್ದು ಸರ್ವಜ್ಞ||
ಇನ್ನು ಕೆಲವು ಹೆಣ್ಣುಮಕ್ಕಳು ಗಂಡನಿಗೆ ಏನೋ ಬೇಯಿಸಿ ಹಾಕಿ, ಮನೆಯಿಂದ ಕಳಿಸಿ, ಆಮೇಲೆ ತಾವು ರುಚಿರುಚಿಯಾದ ಪದಾರ್ಥಗಳನ್ನು ಮಾಡಿಕೊಂಡು ತಿನ್ನುತ್ತ, ಗಂಡ ಬರುತ್ತಿದ್ದಂತೆಯೇ ಸೌಖ್ಯವಿಲ್ಲವೆಂದು ನರಳುತ್ತಾರೆ.
ಕರಿಯವೆರಡೆತ್ತಾಗಿ ಹೋರುವ ಮಗನಾಗಿ
ನೀರುಗಣ್ಣಾಕೆ ಸೊಸೆಯಾಗೆ ಆ ಮನೆಗೆ
ತೂರಿದ ಬೂದಿ ಸರ್ವಜ್ಞ ||
ಕಪ್ಪು ಬಣ್ಣದ ಎರಡು ಎತ್ತುಗಳು, ಮಾತೆತ್ತಿದರೆ ಜಗಳವಾಡುವ ಮಗ, ಸದಾ ಬುಳುಬುಳು ಕಣ್ಣೀರು ಹರಿಸುವ ಸೊಸೆ ಇದ್ದರೆ ಆ ಮನೆ ಬಲು ಬೇಗನೆ ನಾಶವಾಗುವುದು. ನಸುನಗುತ್ತ ಮನೆಯನ್ನು ಸಂತೋಷದಲ್ಲಿ ಇಡುವ ಗೃಹಿಣಿಯಿದ್ದರೆ ಮನೆಯು ಸಂತೋಷ ಸಂಭ್ರಮಗಳ ಬೀಡಾಗುವುದು.
ತಾಳೆ ಓಲೆಯನಿಟ್ಟು ಬೇಳೆ ಮಣಿಯನ್ನು ಕಟ್ಟಿ
ವ್ಯಾಳ್ಯವನರಿತು ನಡೆವಳು | ದೊರೆವುದು
ದೇವರ ಕರುಣೆ ಸರ್ವಜ್ಞ ||
ಗಂಡನ ಆದಾಯ ಮಟ್ಟವನ್ನರಿತು ಅನವಶ್ಯಕವಾಗಿ ಖರ್ಚು ಮಾಡುವ, ಬಂಗಾರದ ಬೆಂಡೋಲೆ ಇಲ್ಲದಿದ್ದರೇನಂತೆ ತಾಳೆಗರಿಯ ಓಲೆ ಸಾಕು ಎಂದು ಇಟ್ಟು ಕೊಂಡು, ಬಂಗಾರದ ತಾಳಿ ಇಲ್ಲದಿದ್ದರೇನು ಬೇಳೆಯ ಮಣಿ ಸಾಕು ಎಂದು ತೃಪ್ತಳಾಗಿ ಸಮಯ-ಸಂದರ್ಭ ನೋಡಿ ಮಾತನಾಡುತ್ತ, ಬೇಕಾದುದನ್ನು ಸೂಕ್ಷ್ಮವಾಗಿ ಪ್ರಸ್ತಾಪಿಸುತ್ತ ಪತಿಯ ಕಷ್ಟಸುಖದಲ್ಲಿ ಸಹಭಾಗಿಯಾಗುವ ಹೆಂಡತಿ ದೊರೆಯುವುದು ಪರಮಾತ್ಮನ ಅನುಗ್ರಹದಿಂದಲೇ ಸರಿ.
ಬೆಚ್ಚನೆಯ ಮನೆಯಾಗಿ ವೆಚ್ಚಕ್ಕೆ ಹೊನ್ನಾಗಿ
ಇಚ್ಛೆಯಲಿ ನಡೆವ ಸತಿ ಇರೆ | ಸ್ವರ್ಗಕ್ಕೆ
ಕಿಚ್ಚು ಹಚ್ಚೆಂದ ಸರ್ವಜ್ಞ ||
ಇರಲಿಕ್ಕೆ ಒಂದು ಉತ್ತಮ ಮನೆಯಿದ್ದು, ಖರ್ಚುಮಾಡಲಿಕ್ಕೆ ಹಣವಿದ್ದು, ಕಷ್ಟಸುಖವನ್ನರಿತು ನಡೆಯುವ ಹೆಂಡತಿಯಿದ್ದರೆ ಆಗ ಗೃಹಸ್ಥನಿಗೆ ಸ್ವರ್ಗದ ನೆನಪೂ ಬರದು ಸ್ವರ್ಗದ ಕಲ್ಪನೆಗೇ ಅವನು ಕಿಚ್ಚನಿಕ್ಕಿದರೂ ನಡೆದೀತು.
ಇಂತಹ ಸುಂದರ ಸಮರಸದ ದಾಂಪತ್ಯವನ್ನು ಕಂಡು ದೇವನು ಸಹ ಸಂಪ್ರೀತನಾಗುವನಂತೆ.
ಸತಿಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ
ಸತಿಪತಿಗಳೊಂದಾಗದ ಭಕ್ತಿ ಅಮೃತದೊಳು
ವಿಷವ ಬೆರಸಿದಂತೆ ಕಾಣಾ ರಾಮನಾಥ.
ಎಂದು ಜೇಡರ ದಾಸಿಮಯ್ಯನವರು ಹೇಳುವರು.
ಭಕ್ತಿರತಿ ಎಂಬ ಮದುವೆಗೆ
ಕಣಿಗಿಲೆಲೆಯ ಉಂಗುರವನಿಕ್ಕಿ
ಮೊಲ್ಲೆ ಮಲ್ಲಿಗೆಯ ತೆರೆಯ ಕಟ್ಟಿ
ಸೇವಂತಿಗೆಯ ಚಪ್ಪರವನಿಕ್ಕಿ
ಪುಷ್ಪ ಜಾತಿಗಳೆಲ್ಲ ನಿಬ್ಬಣವ ಬನ್ನಿರೆ
ನಮಗೆಯೂ ನಮ್ಮ ಕೂಡಲ ಸಂಗಮದೇವಂಗೆಯೂ ಮದುವೆ.
ವಿವಾಹ ಮಂಟಪದಲ್ಲಿ ಸಂಭ್ರಮದ ಸಿದ್ಧತೆ ಸಾಗುತ್ತಿದ್ದರೆ ತರುಣ ಬಸವಣ್ಣನು ಒಳಮನೆಯಲ್ಲಿ ಪೂಜೆಗೆ ಕುಳಿತಿದ್ದಾನೆ. ಅಂತರಂಗದಲ್ಲಿ ಒಂದು ಬಗೆಯ ದುಗುಡತೆ ತುಂಬಿಕೊಂಡಿದೆ. ಇದಕ್ಕೆ ಕಾರಣ ಮಾವನ ವರದಕ್ಷಿಣೆ ! ಹಣವಲ್ಲ ಹೆಂಡತಿಯಾಗಲಿರುವವಳ ಕುಂದುಕೊರತೆಗಳಲ್ಲ. 'ವಿವಾಹ ಬಂಧನ' ನಿಕಟವಾದುದು, ಬಿಡಿಸಲಾರದುದು. ಒಂದು ವೇಳೆ ತನಗನುಕೂಲವಾದ ವಾತಾವರಣ ನಿರ್ಮಾಣವಾಗದೆ ಪ್ರವಾಹದ ವಿರುದ್ಧ ಸೆಣಸುವಂತಾದರೆ ? ಆ ಸುಳಿಯಲ್ಲಿ ಸಿಕ್ಕಿಬೀಳುವಂತಾದರೆ, ಮರುಕ್ಷಣವೇ ಮಾನಸಿಕ ಸಮಾಧಾನವನ್ನು ಬಸವಣ್ಣನವರು ತಂದುಕೊಳ್ಳುತ್ತಾರೆ. "ಉರುಳಾಗಬಂದರೆ ಹರಿದುಕೊಳ್ಳುವುದು, ಹೂಮಾಲೆಯಾದರೆ ಇರಿಸಿಕೊಳ್ಳುವುದು'' ಎಂದು ಮನಸ್ಸಿನಲ್ಲಿ ಅಂದುಕೊಂಡು, ತಮ್ಮನ್ನು ತಾವು ಸಂತೈಸಿಕೊಳ್ಳುತ್ತಾರೆ. ಆ ಮದುವೆಗೆ ಮೊದಲು ಈ ಮದುವೆಯೇ ನಡೆದು ಬಿಟ್ಟಿದೆ ಕೂಡಲ ಸಂಗಮ ದೇವನೊಡನೆ ಅರ್ಥಾತ್ ಇಷ್ಟಲಿಂಗದೊಡನೆ ಮಾನಸಿಕವಾಗಿ ಭಕ್ತಿರತಿಯ ವಿವಾಹ ನಡೆದಿದೆ.
ಬಸವಣ್ಣನವರ ಮನಸ್ಸಿನಲ್ಲಿ ಚಿಂತನ ನಡೆದಿದೆ. ಎಂಥಾ ಪ್ರಸಂಗದಲ್ಲೂ ಯಾರ ಒತ್ತಾಯಕ್ಕೆ ಬಲಿಯಾಗಿಯೂ ತನ್ನ ಆದರ್ಶವನ್ನು ಗಾಳಿಗೆ ತೂರಬಾರದು ಎಂದುಕೊಳ್ಳುತ್ತಾರೆ.
ಮನವೇ ಸರ್ಪ, ತನುವೇ ಹೇಳಿಗೆ
ಹಾವಿನೊಡತನ ಹುದುವಾಳಿಗೆ
ಇನ್ನಾವಾಗ ಕೊಂದಹುದೆಂದರಿಯೆ,
ಇನ್ನಾವಾಗ ತಿಂದುಹುದೆಂದರಿಯ
ನಿಚ್ಚನಿಚ್ಚಕ್ಕೆ ಪೂಜಿಸಬಲ್ಲಡೆ
ಅದೇ ಗಾರುಡ ಕೂಡಲಸಂಗಮದೇವಾ
ಎಂದು ಅಂದುಕೊಳ್ಳುತ್ತಾರೆ. ನಿತ್ಯ ನೇಮ, ಪರಮಾತ್ಮನ ಪೂಜೆ ಜಪ ಧ್ಯಾನಗಳನ್ನು ತಪ್ಪದೆ ಮಾಡಬೇಕು. ಅವು ಗಾರುಡ ವಿದ್ಯೆಯಂತೆ, ಸನಿಹದಲ್ಲಿದ್ದರೆ ಸಂಸಾರದ ಹಾವು ಕಚ್ಚದು. ಕಚ್ಚಿದರೂ ವಿಷವನ್ನು ಇಳಿಸುವ ಸಾಮರ್ಥ್ಯ ಪೂಜೆ-ಧ್ಯಾನಗಳಿಗೆ ಇದೆ.
ದೇವಾ, ನಿನಗೆ ಸಂಪೂರ್ಣವಾಗಿ ನಾನು ಶರಣಾಗತನಾಗಿದ್ದೇನೆ ಎಂದ ಬಳಿಕ, ಆದರ್ಶಗಳಿಂದ ಯಾವುದೇ ರೀತಿ ದೂರಸರಿಯದಂತೆ ಕಾಪಾಡಬೇಕಾದುದು ನಿನ್ನ ಕರ್ತವ್ಯವಲ್ಲವೆ ?
ಸಂಸಾರವೆಂಬ ಶ್ವಾನನಟ್ಟಿ, ಮೀಸಲ ಬೀಸರವ ಮಾಡದಿರಯ್ಯ
ಎಮ್ಮ ಚಿತ್ತವು ನಿಮ್ಮ ಧ್ಯಾನವಯ್ಯಾ ;
ನೀವಲ್ಲದೆ ಮತ್ತೇನನೂ ಅರಿಯೆನು .
ಕನ್ನೆಯಲ್ಲಿ ಕೈವಿಡಿದೆನು, ನಿಮ್ಮಲ್ಲಿ ನೆರೆವೆನು
ಮನ್ನಿಸು ಕಂಡಾ ; ಮಹಾಲಿಂಗವೆ.
ಸತಿಯಾನು, ಪತಿ ನೀನು ಅಯ್ಯಾ.
ಮನೆಯೊಡೆಯ ಮನೆಯ ಕಾಯ್ದಿಪ್ಪಂತೆ
ನೀನೆನ್ನ ಮನವ ಕಾಯ್ದಿಪ್ಪ ಗಂಡನು
ನಿಮಗೋತ ಮನವ ಅನ್ಯಕ್ಕೆ ಹರಿಸಿದರೆ
ನಿಮ್ಮಭಿಮಾನಕ್ಕೆ ಹಾನಿ, ಕೂಡಲಸಂಗಮದೇವಾ.
ಹೀಗೆ ಸ್ವಯಂ ಇಚ್ಛೆಯಿಂದ, ಅಂತಃಸಾಕ್ಷಿಯಾಗಿ ಪ್ರತಿಜ್ಞೆ ಕೈಗೊಳ್ಳುವರು. ತಮ್ಮ ಆದರ್ಶವನ್ನು ದೃಢ (Confirmation) ಪಡಿಸಿಕೊಳ್ಳುವರು.
ಬಸವಣ್ಣನವರ ಮದುವೆಗೆ ಬಹಳ ಗಣ್ಯರು ಬಂದಿದ್ದಾರೆ. ಅವರಲ್ಲಿ ಪ್ರಮುಖನು ಮಹಾಮಂಡಳೇಶ್ವರ ಕಲಚೂರ ವಂಶದ ಬಿಜ್ಜಳ ಮಹಾರಾಜ. ಆತ ಚಾಲುಕ್ಯ ಸಂತತಿಯವನೇ ಆದರೂ ಮಗಳ ಮಗ. ಬಲದೇವ ಮಂತ್ರಿಗಳ ಆಯ್ಕೆ ಕಂಡು ಬಿಜ್ಜಳನೂ ಮೆಚ್ಚಿರಲೂ ಸಾಕು, ಬಸವಣ್ಣನವರು ಬಹಳ ಸುಂದರರೂ, ಸ್ಪುರದ್ರೂಪಿಗಳು ಆಗಿದ್ದರೆಂದು ಪಾಲ್ಕುರಿಕೆ ಸೋಮನಾಥ ಬಣ್ಣಿಸುತ್ತಾನೆ. ಶ್ರೀ ವಿವೇಕಾನಂದರು ಹೇಳುವಂತೆ, ಸುಭದ್ರ ಶರೀರದಲ್ಲಿ ಸದೃಢ ಮನಸ್ಸು ಇರಲು ಸಾಧ್ಯ. ಬಿಜ್ಜಳ ಮಹಾರಾಜ ಮತ್ತು ಅವನ ಪತ್ನಿ ಶಾಂತಿಮತಿ ಉಭಯತರೂ ಪ್ರಧಾನಿ ಬಲದೇವ ಮಂತ್ರಿಗಳ ಮಗಳು ಅಳಿಯನಿಗೆ ಶುಭವನ್ನು ಹಾರೈಸಿ ಉಡುಗೊರೆ ಕೊಡಹೋದರು. ವಧುವಿಗೆ ಬೆಲೆ ಬಾಳುವ ಪೀತಾಂಬರ, ರತ್ನಹಾರವನ್ನು ಕೊಟ್ಟರು. ವರನಿಗೆ ಬೆಲೆಬಾಳುವ ವಜ್ರಹಾರವನ್ನು ರಾಜಮರ್ಯಾದೆಗೆ ತಕ್ಕಂತೆ ಕೊಡಹೋದನು. ##
ಬಸವಣ್ಣನವರು ಶರಣು ಎಂದು ಕೈ ಮುಗಿದು, ''ಕ್ಷಮಿಸಿ ಮಹಾರಾಜಾ, ನಾನಿದನ್ನು ಸ್ವೀಕರಿಸುವುದಿಲ್ಲ. ಅನ್ಯಥಾ ಭಾವಿಸಬೇಡಿ....''
'ಛೇ ಛೇ ಎಂಥಾ ಪ್ರಮಾದ ! ಬಸವರಸಾ, ಮಹಾಪ್ರಭುಗಳು ಕೊಟ್ಟ ಉಡುಗೊರೆ ನಿರಾಕರಿಸಬಾರದು....'' ಸಿದ್ಧರಸ ಮಂತ್ರಿ ಮಧ್ಯೆ ಪ್ರವೇಶಿಸಿ ಹೇಳಿದನು.
“ಬಹುಷಃ ತಾವು ತಪ್ಪು ತಿಳಿಯಲಿಕ್ಕಿಲ್ಲ. ನಿಮ್ಮ ಚಿಂತನೆ ಉದಾತ್ತವಾಗಿರುತ್ತದೆ ಎಂದು ಭಾವಿಸುವೆ.'' ಕ್ಷಣಕಾಲ ಆಘಾತಕ್ಕೊಳಗಾದರೂ ಕುತೂಹಲಿತನಾಗಿ ಕೇಳಿದ. "ಕಾರಣ ಕೇಳಬಹುದಲ್ಲವೆ ?”
ನಾನು ಇದನ್ನು ಧರಿಸಬೇಕು ಎಂಬ ಅಪೇಕ್ಷೆಯಿಂದ ತಾನೆ ತಾವು ಕೊಡುವುದು ? ಪಡೆದುಕೊಂಡು ಧರಿಸದಿದ್ದರೆ ನಿಮಗೆ ಆಗಲೂ ಅಗೌರವ ತೋರಿಸಿದಂತಲ್ಲವೇ ಮಹಾರಾಜ ??
"ಅಹುದು. ಆ ಅಪೇಕ್ಷೆ ನಮಗೆ ಸ್ವಾಭಾವಿಕ...''
"ಇಂಥ ಬೆಲೆಬಾಳುವ ವಜ್ರದ, ಚಿನ್ನದ ಹಾರವನ್ನು ನಾನು ಧರಿಸದಿರುವ ಸರಳ ವ್ರತ ಕೈಗೊಂಡಿರುವೆ ಮಹಾರಾಜ.''
“ಭಲೆ ಭಲೆ...ಆದರ್ಶವಾದಿ ತರುಣರು ಬಸವರಸ. ನಿಮ್ಮ ಆದರ್ಶ ನಿಜಕ್ಕೂ ನನಗೆ ಮೆಚ್ಚುಗೆಯಾಗಿದೆ.......''
ಬಿಜ್ಜಳನ ಅಂತರಂಗದಲ್ಲಿ ಬಸವಣ್ಣನ ನಿಲುವು ತನ್ನದೇ ಆದ ಸ್ಥಾನವನ್ನು ಅಂದೇ ಪಡೆದುಕೊಂಡಿರಲೂ ಸಾಕು. ಬಿಜ್ಜಳ ಮಹಾರಾಜ ಬಸವಣ್ಣನವರ ನಿರಾಕರಣೆಯನ್ನು ತನಗಾದ ಅಪಮಾನವೆಂದು ಭಾವಿಸಿ ವ್ಯಗ್ರಗೊಳ್ಳದೆ, ಆ ಕೃತಿಯಲ್ಲಿ ಬಸವಣ್ಣನವರ ವಿಚಾರದ ಔನ್ಯತ್ಯ ಕಂಡು ಹರ್ಷಿತನಾದನು. ಹೀಗೆ ಬಸವಣ್ಣನವರು ವಿವಾಹ ಜೀವನವನ್ನು ಸ್ವೀಕರಿಸಿದರು.
ಕ್ರಾಂತಿಕಾರಿ ವಿಚಾರಶೀಲರೂ, ಸ್ತ್ರೀ ವಿಮೋಚನಾವಾದಿಯೂ, ಸ್ತ್ರೀ ಸಮತಾವಾದಿಯೂ ಆದ ಬಸವಣ್ಣನವರು ಇಬ್ಬರು ಹೆಂಡತಿಯರನ್ನು ಹೊಂದಿದ್ದರೆ? ಮೊದಲ ಹೆಂಡತಿಗೆ ಮಕ್ಕಳಾಗಲಿಲ್ಲವೆಂದೆ ? ಅಥವಾ ನೀಲಾಂಬಿಕೆ ತನ್ನ ಚೆಲುವು-ನಡೆನುಡಿಗಳಿಂದ ಮನಸೆಳೆದಳೆ ? ಅಥವಾ ಬಿಜ್ಜಳ ಮಹಾರಾಜನು ತನ್ನ ವಚನ ರಕ್ಷಣೆಗಾಗಿ ಬಸವಣ್ಣನವರನ್ನು ತಮ್ಮ ತತ್ತ್ವದಿಂದ ದೂರಸರಿಯುವಂತೆ ಮಾಡಿದನೆ ? ಹೀಗೆಲ್ಲ ಸಂಶಯಗಳು ಉಳಿದವರಂತೆ ನಮಗೂ ಕಾಡುತ್ತಿದ್ದವು.
ಬಸವಣ್ಣನವರು ತಮ್ಮ ಸೋದರಮಾವ ಬಲದೇವ ಮಂತ್ರಿಯ ಮಗಳು ಗಂಗಾಂಬಿಕೆಯನ್ನು ಮದುವೆಯಾದರು. ಒಂದು ಬಳ್ಳಿಯ ಎರಡು ಹೂಗಳಂತೆ ಬಲದೇವ ಮಂತ್ರಿಯ ಮಗಳಾದ ಗಂಗಾಂಬಿಕೆ, ಸಿದ್ಧರಸ ಮಂತ್ರಿಯ ಮಗಳಾದ ನೀಲಾಂಬಿಕೆ ಮೊದಲಿನಿಂದ ಬೆಳೆದಿದ್ದು ಗಂಗಾಂಬಿಕೆಯ ವಿವಾಹದಿಂದ ಆಕೆಯು ವ್ಯಾಕುಲಿತಳಾದಳು. ತನ್ನ ಪ್ರೀತಿಯ ಗೆಳತಿಯಿಂದ ದೂರವಾದುದಲ್ಲದೆ ತರುಣ ಬಸವಣ್ಣನನ್ನು ಅಂತರಂಗದಲ್ಲೇ ಆರಾಧಿಸುತ್ತಿದ್ದಳು. ಆಕೆಯ ಬೇಡಿಕೆ ಪೂರೈಸಲು ಯಾರೂ ಇರಲಿಲ್ಲ. ತಾಯಿ ಬಾಲ್ಯದಲ್ಲೇ ತೀರಿಹೋಗಿದ್ದಳು. ತಂದೆಯೂ ಕೆಲವೇ ದಿನಗಳ ಹಿಂದೆ ತೀರಿಹೋಗಿದ್ದ. ಸಾಯುವ ಮೊದಲು ಆಕೆಯನ್ನು ಬಿಜ್ಜಳನ ಆಶ್ರಯಕ್ಕೆ ಬಿಟ್ಟು, ನೀಲಾಂಬಿಕೆಯನ್ನು ಸಾಕುವ ಹೊಣೆಗಾರಿಕೆ ನಿಮ್ಮದು. ನಿಮ್ಮ ಸಹೋದರಿ ಎಂದು ಭಾವಿಸಿ, ಆಕೆ ಬಯಸಿದ ವರನಿಗೆ ಕೊಟ್ಟು ಮದುವೆ ಮಾಡಿರಿ.'' ಎಂದು ಮಾತು ತೆಗೆದುಕೊಂಡಿದ್ದ ಸಿದ್ಧರಸಮಂತ್ರಿ. ಹೀಗಾಗಿ ನೀಲಾಂಬಿಕೆ ಮಾನಸಿಕವಾಗಿ ಕೊರಗಿ ಕರಗುವುದನ್ನು ಕಂಡು ಬಿಜ್ಜಳನು ಬಸವಣ್ಣನವರನ್ನು ಒಪ್ಪಿಸಲೆತ್ನಿಸುವನು. ಬಸವಣ್ಣನವರು ನಿರಾಕರಿಸಿದಾಗ, ಗಂಗಾಂಬಿಕೆ ಮಧ್ಯೆ ಪ್ರವೇಶಿಸಿ ನೀಲಾಂಬಿಕೆಯ ಪ್ರಾಣವನ್ನುಳಿಸಿರಿ' ಎಂದು ಅಂಗಲಾಚಿ, ಒಪ್ಪಿಸುವಳು.
ಹೀಗೆ ನಾವು ವಿವರಣೆ ನೀಡುತ್ತಿದ್ದೆವು. ಕ್ರಾಂತಿಯೋಗಿ ಬಸವಣ್ಣ ಚಲನ ಚಿತ್ರದಲ್ಲಿ ಹೀಗೇ ಚಿತ್ರಿಸಿರುವೆವಲ್ಲದೆ ತೀರಾ ಇತ್ತೀಚಿನವರೆಗೆ ಹಾಗೆಯೇ ತಿಳಿದಿದ್ದೆವು ಮತ್ತು ಇನ್ನಿತರ ಪುಸ್ತಕಗಳಲ್ಲೂ ಹಾಗೆಯೇ ಬರೆದಿದ್ದೆವು. ದಿವಂಗತ ಹೆಚ್.ದೇವೀರಪ್ಪನವರ ಒಂದು ಲೇಖನ “ಬಸವರಾಜನರಸಿಯರು" (ಧರ್ಮದುಂದುಭಿ-ಕಲ್ಯಾಣ ಕಿರಣ ವಿಶೇಷಾಂಕ ೧೯೮೭ ಸೆಪ್ಟೆಂಬರ-ಅಕ್ಟೋಬರ್) ಓದಿದಾಗ ನಮ್ಮ ಚಿಂತನೆಗೆ ಹೊಸ ದಿಕ್ಕು ದೊರಕಿತು. (ಶ್ರೀ ದೇವೀರಪ್ಪನವರ ಹೆಸರನ್ನು ಈ ವಿಷಯವಾಗಿ ಖಂಡಿತವಾಗಿಯೂ ಹೇಳುವೆವು. ಕೆಲವು ದೊಡ್ಡ ದೊಡ್ಡ ಸಾಹಿತಿಗಳು ನಮ್ಮ ಅನೇಕ ಹೊಸ ಸಂಶೋಧನಾತ್ಮಕ ವಿಚಾರಗಳನ್ನು ಫಕ್ಕನೆ ಎತ್ತಿಕೊಂಡು ತಮ್ಮ ಪುಸ್ತಕದಲ್ಲಿ ಬರೆದು, ಆ ಬಗ್ಗೆ ನಮ್ಮ ಗ್ರಂಥಗಳನ್ನು ಮಾತ್ರ ಉಲ್ಲೇಖಿಸದೆ, ಇನ್ನಿತರರ ಬೇರೆ ಬೇರೆ ಗ್ರಂಥಗಳನ್ನು ಉಲ್ಲೇಖಿಸುವರು. ಈ ಅಪ್ರಾಮಾಣಿಕತನವನ್ನು ಸಾಕಷ್ಟು ಗುರುತಿಸಿದ್ದೇವೆ. ೧೯೮೯ರಲ್ಲಿ ಪ್ರಕಟವಾದ ಗ್ರಂಥವೊಂದರ ಒಬ್ಬ ಸಂಶೋಧಕರು ಸುಮಾರು ೩-೪ ಗಂಟೆಕಾಲ ನಮ್ಮೊಡನೆ ಚರ್ಚಿಸಿ, ಇವತ್ತು ಎಷ್ಟೋ ದಿವಸಗಳಿಂದ ಕಾಡುತ್ತಿದ್ದ ಸಂದೇಹಗಳು ಪರಿಹಾರವಾದವು ಎಂದು ಉದ್ಗಾರ ತೆಗೆದು ಹೋದರು. ಅವರು ಬರೆದ ಗ್ರಂಥದಲ್ಲಿ ಇಷ್ಟಲಿಂಗ ಜನಕ ಬಸವಣ್ಣ, ಬಸವಣ್ಣನವರೇ ಲಿಂಗವಂತ ಧರ್ಮದ ಸಂಸ್ಥಾಪಕರು. ಇಷ್ಟಲಿಂಗ ಜಾತಿ ಲಾಂಛನವಲ್ಲ ಈ ಧರ್ಮಕ್ಕೆ ಲಿಂಗಾಯತ, ಲಿಂಗವಂತ ಹೆಸರೇ ಸೂಕ್ತ ಮುಂತಾದ ವಿಷಯವು ನಮ್ಮ ಚರ್ಚೆಯ ಪರಿಣಾಮವಾಗಿ ಬರೆಯಲ್ಪಟ್ಟವು ಎಂದು ಮನದಟ್ಟಾಯಿತು. ಆದರೆ, ಯಾವ ಸ್ವಾಮಿಗಳು ಈ ಬಗ್ಗೆ ಈ ವಿಷಯಗಳಲ್ಲಿ ಖಚಿತ ಅಭಿಪ್ರಾಯ ತಳೆದಿಲ್ಲವೊ, ಯಾರು ಸೈದ್ಧಾಂತಿಕ ವಿಷಯಗಳನ್ನು ತಾರ್ಕಿಕವಾಗಿ ಚರ್ಚಿಸಲು ಅಸಮರ್ಥರೋ ಅಂಥವರ ಹೆಸರನ್ನೂ ಮುನ್ನುಡಿಯಲ್ಲಿ ಕಾಣಿಸಿದ್ದಾರೆ. ನಮ್ಮ ಹೆಸರು ಕೈಬಿಟ್ಟಿದ್ದಾರೆ. ಓದಿ ನನಗೆ ಸೋಜಿಗವಾಯಿತು. ಅವರಿಗಿಂತ ಮೊದಲು ನಾವು ಆಲೋಚಿಸಿದೆವು ಎಂಬುದನ್ನು ಹೊರಜಗತ್ತಿಗೆ ತೋರ್ಪಡಿಸಲು ಅವರಿಗೆ ಕುಂದು, ತಾವೇ ಇದರ ಸಂಶೋಧಕರು ಎಂದು ಹೇಳಿಕೊಳ್ಳುವ ಚಪಲ ! 'ಧನದಲ್ಲಿ ಶುಚಿ ಪ್ರಾಣದಲ್ಲಿ ನಿರ್ಭಯ ಇದಾವಂಗೆ ಅಳವಡುವುದಯ್ಯ'' ಎಂಬ ಬಸವಣ್ಣನವರ ವಚನಕ್ಕೆ 'ಸಾಹಿತ್ಯದಲ್ಲಿ ಪ್ರಾಮಾಣಿಕತೆ ' ಎಂಬ ಪದಪುಂಜವನ್ನು ಸೇರಿಸಿದರೆ ಚೆನ್ನಾಗಿ ಇರುವುದೇನೊ !
ಈಗ ನಮಗೆ, ಬಸವಣ್ಣನವರಿಗಿದ್ದುದು ಒಬ್ಬಳೇ ಧರ್ಮಪತ್ನಿ ಎಂಬ ಬಗ್ಗೆ ದೃಢವಾದ ನಿರ್ಧಾರ ಮೂಡಿದೆ.
೧. ಗಂಗಾಂಬಿಕೆ ಬಸವಣ್ಣನವರ ಸೋದರ ಮಾವ ಬಲದೇವ ಮಂತ್ರಿಯ ಪುತ್ರಿ; ವಿವಾಹ ಪೂರ್ವದ ಹೆಸರು ಗಂಗಮ್ಮ, ಗಂಗಾಂಬಿಕೆ.
೨. ವಿವಾಹಾನಂತರ ಸಾಮಾನ್ಯವಾಗಿ ಕನ್ಯಗೆ ಹೆಸರು ಬದಲಿಸುವರು. ಆಕೆಗೆ ಸುಂದರವಾದ ನೀಲಿಯ ಕಣ್ಣುಗಳು ಇದ್ದಕಾರಣ 'ನೀಲಲೋಚನೆ' ಎಂದು ಬಸವಣ್ಣನವರು ಕರೆದಿರಲೂ ಸಾಕು. ಗೌರವ ಸೂಚಕವಾಗಿ ಇನ್ನಿತರ ಕೆಲವರು ನೀಲಾಂಬಿಕಾದೇವಿ, ನೀಲಲೋಚನೆಯಮ್ಮ ಎಂದು ಕರೆದರೆ ಆತ್ಮೀಯರು ನೀಲಮ್ಮ ಎಂದಿದ್ದಾರೆ.
ಒಂದು ಹೊಸ ಹೆಸರು ಇಟ್ಟ ಬಳಿಕವೂ ಕೆಲವರು ಮೊದಲ ಹೆಸರನ್ನು ಕರೆಯುತ್ತಿರುವರು. ಹೀಗಾಗಿ ಗಂಗಮ್ಮ, ಗಂಗಾ, ಗಂಗಾಂಬಿಕೆ ಎಂದು ಪೂರ್ವ ಪರಿಚಯದವರು, ನೀಲಮ್ಮ, ನೀಲಾಂಬಿಕೆ, ನೀಲಲೋಚನೆಯಮ್ಮ, ನೀಲಗಂಗಾ ಎಂದು ಮತ್ತೆ ಕೆಲವರು ಕರೆದುದು. ನಂತರದ ಕವಿಗಳು ಇಬ್ಬರು ಹೆಂಡತಿಯರನ್ನು ಕಲ್ಪಿಸಲು ಕಾರಣವಾಗಿದೆ.
ಈ ನಿರ್ಧಾರ ಕೇವಲ ಊಹಾತ್ಮಕವಾಗಿರದೆ ಸಾಧಾರದಿಂದ ಕೂಡಿದೆ ಎನ್ನಲು ಕೆಲವು ಉದಾಹರಣೆ ಕೊಡುವೆ.
೧. ಬಸವಣ್ಣನವರು ತಮ್ಮ ವಚನಗಳಲ್ಲಿ ನೀಲಾಂಬಿಕೆಯ ಹೆಸರು ಮಾತ್ರ ಬಳಸಿರುವರು. ಒಂದು ವೇಳೆ ಮೊದಲ ಹೆಂಡತಿ ಇದ್ದರೆ ಆಕೆಯನ್ನು ಅಷ್ಟು ಕಡೆಗಣಿಸಿ ಮಾತನಾಡುತ್ತಿದ್ದರೆ.?
ಬೃಕುಟಿಯ ಹಿಡಿದು ನಿಟಿಲ ನಯನನ ಬೆರೆದಳು ಅಕ್ಕಮಹಾದೇವಿ
ಶಿಖಾಚಕ್ರವಿಡಿದು ಶಿವನ ಬೆರೆದಳು ಅಕ್ಕನಾಗಾಯಿ
ಪಶ್ಚಿಮ ಚಕ್ರವಿಡಿದು ಪರಮನಾದಳು
ಕೂಡಲಸಂಗಮದೇವನ ಮರುಳು ಮಗಳು ನೀಲಲೋಚನೆ, ಚನ್ನಬಸವಣ್ಣ !
ಈ ವಚನದಲ್ಲಿ ನೀಲಲೋಚನೆ, ಎಂತಹ ಉನ್ನತ ಸ್ಥಿತಿಯನ್ನು (ತಮ್ಮ ನೆರವಿನಿಂದ) ತಲ್ಪಿದ್ದಾಳೆ ಎಂಬ ಅಭಿಮಾನದ ವರ್ಣನೆಯಿದೆ. ಅದನ್ನು ಚನ್ನಬಸವಣ್ಣನ ಮುಂದೆ ಆಡಿ ತೋರಿಸುತ್ತಿದ್ದಾರೆ. ಆದರೆ ತಮ್ಮ ಹೆಂಡತಿಯನ್ನು ತಾವೇ ಕೊಂಡಾಡುತ್ತಾರೆಂದು ತಿಳಿದುಬಿಟ್ಟಾನು ಎಂಬ ಸಂಕೋಚವೂ ಇದೆ. ಆ ಅಭಿಮಾನ ಮತ್ತು ಸಂಕೋಚಗಳು ಮರುಳು ಮಗಳು ನೀಲಲೋಚನೆ ಎಂಬಲ್ಲಿ ವ್ಯಕ್ತವಾಗಿದೆ.
(ನೋಡು ಚನ್ನಬಸವಣ್ಣ ಕೂಡಲಸಂಗಮದೇವನ ಹುಚ್ಚು ಮಗಳು ಎಂಥಾ ಸ್ಥಿತಿ ಸಾಧಿಸಿ ಬಿಟ್ಟಳು ! ಎಂದು ಉದ್ಗಾರ ತೆಗೆದಿದ್ದಾರೆ. ಚನ್ನಬಸವಣ್ಣನನ್ನು ಇಲ್ಲಿ ಸಾಕ್ಷಿಯಾಗಿರಿಸಿ ಕೊಂಡಿದ್ದಾರೆ. ಏಕೆಂದರೆ ಚನ್ನಬಸವಣ್ಣನು | ನೀಲಾಂಬಿಕೆ ಹಂತ ಹಂತವಾಗಿ ಮೇಲೇರಿರುವುದನ್ನು ಗಮನಿಸಿದ ವ್ಯಕ್ತಿ.)
ಅಕ್ಕಮಹಾದೇವಿಯನ್ನು ಕುರಿತು ಘಟ್ಟಿವಾಳಯ್ಯನವರು ನುಡಿದ ವಚನದಲ್ಲಿ
ಅಪ್ಪ ಬಸವಣ್ಣನ ಮೋಹದ ಮಗಳೆ
ಅವ್ವ ನೀಲವ್ವನ ಸುಚಿತ್ತದ ಪುತ್ಥಳಿಯೆ.
ಎಂದು ಬರುತ್ತದೆ. ನೀಲಮ್ಮನನ್ನು ಕುರಿತು ಉರುಟಣೆಯ ಪದ, ಹಾಡುಗಳು ಮತ್ತು ಸಾಕಷ್ಟು ಸ್ತೋತ್ರಗಳು ರಚಿಸಲ್ಪಟ್ಟಿವೆ.
ಕಾಲಜ್ಞಾನದ ವಚನಗಳು ಶರಣ ಧರ್ಮದ ಉಗಮ, ಪ್ರಗತಿ, ಸಂಕಷ್ಟ ಕುರಿತು ಐತಿಹಾಸಿಕ ದಾಖಲೆ ನೀಡುವುವು. ಅಲ್ಲಿ ಎರಡು ಕಡೆ ಹೀಗೆ ಪ್ರಸ್ತಾಪವಾಗಿದೆ:
೧. ಶ್ರೀ ಬಸವಣ್ಣನವರು ನೀಲಲೋಚನೆ ಅಮ್ಮನವರನ್ನು ಮದುವೆಯಾಗಿ ಪ್ರಧಾನಿ ಪಟ್ಟವನ್ನು ಮಾಡಿಕೊಂಡು ಇರುವಾಗ್ಗೆ - (ಪುಟ ೨೬೩)
೨. ಕಲ್ಯಾಣ ಪಟ್ಟಣಕ್ಕೆ ಒಡೆಯರಾಗಿ ಬಂದು ನಿಂತು ಎಲ್ಲ ತರದ ಅನೇಕ ಲಿಪಿಗಳನ್ನು ಓದಿ, ಪವಾಡಂಗಳನ್ನು ಗೆಲಿದು ಆಮೇಲೆ ಸಿದ್ಧರಸನೆಂಬ ಮಂತ್ರಿಗಳ ಮಗಳಾದ ನೀಲಾಂಬಿಕೆಯವರನ್ನು ಮದುವೆಯಾಗಿ ಪ್ರಧಾನಿಪಟ್ಟವನ್ನು ಸಂಪಾದಿಸಿಕೊಂಡು ಇರುತ್ತಿದ್ದರು. - ಚನ್ನಣ್ಣನವರ ಕಾಲಜ್ಞಾನ ಪುಟ ೩೦೦
ಆ ಕಾಲಕ್ಕೆ ಇಬ್ಬರು ಹೆಂಡತಿಯರನ್ನು ವಿವಾಹವಾಗುವುದು ಅಪರಾಧವಾಗಿರಲಿಲ್ಲ; ಹೆಂಡಿರು ಜಾಸ್ತಿ ಇದ್ದಷ್ಟು ಗೌರವ ಸೂಚಕ ಎಂದು ತಿಳಿಯುವ ಕಾಲವಾಗಿರುವಾಗ ಕಾಲಜ್ಞಾನ ವಚನ ಹೇಳಿದವರು ಗಂಗಾಂಬಿಕೆ ಮತ್ತು ನೀಲಾಂಬಿಕೆ ಅಮ್ಮನವರುಗಳನ್ನು ವಿವಾಹವಾಗಿ'' ಎನ್ನಬಹುದಿತ್ತು. ಹೀಗೆ ಕಾಲಜ್ಞಾನದಲ್ಲಿ ನೀಲಲೋಚನೆ, ನೀಲಾಂಬಿಕೆ ಎಂಬ ಹೆಸರು ಮಾತ್ರವಿದೆ.
ಬಸವಣ್ಣನವರ ಸ್ವಭಾವ ಗಮನಿಸಿದರೆ ಅವರು ಒಬ್ಬ ಸಾಮಾನ್ಯ ವ್ಯಕ್ತಿಗೂ ನೋವು ಉಂಟು ಮಾಡುವ ಸ್ವಭಾವದವರಲ್ಲ. ಇಬ್ಬರು ಹೆಂಡತಿಯರಿದ್ದಿದ್ದರೆ ಇಬ್ಬರಿಗೂ ಕೂಡಲ ಸಂಗಮಕ್ಕೆ ಬರಲು ಹೇಳುತ್ತಿದ್ದರು.
ಸರ್ವಜ್ಞನ ವಚನಗಳಲ್ಲಿ ನೀಲಾಂಬಿಕೆಯ ಹೆಸರು ಹೀಗೆ ಪ್ರಸ್ತಾಪವಾಗಿದೆ.
* ಪರಮಾರ್ಥನೆಂಬಾತ ಗುರು ಚನ್ನಬಸವಣ್ಣ
...
ಶರಣು ನೀಲವ್ವ ಸರ್ವಜ್ಞ (ಸ.ವೀ.ವ. ೬೧)
ಶ್ರೀ ಘನಲಿಂಗದೇವರ ವಚನಗಳಲ್ಲಿ ಹೀಗೆ ಇದೆ.
ಎನ್ನ ಪ್ರಾಣ ಷಟ್ ಸ್ಥಲಕ್ಕೆ ಸಲೆಸಂದ
ಅಕ್ಕಮಹಾದೇವಿಯವರು ಹೋದ ಬಟ್ಟೆಯಲ್ಲಿ ನಡೆಯುವುದಲ್ಲದೆ
ಕಿರುಬಟ್ಟೆಯಲ್ಲಿ ನಡೆಯದು.
ಇಂತಿವೆಲ್ಲವು ಷಟ್ಷ್ಥಲವನಪ್ಪಿ ಅನುಗ್ರಹಿಸಿದ
ನೀಲಾಂಬಿಕೆಯಮ್ಮನವರ ಗರ್ಭದಲ್ಲಿ ಉದಯವಾದ
ಮೋಹದ ಕಂದನಾದ ಕಾರಣ.
ಎನಗೆ ಷಟ್ಷ್ಥಲ ಮಾರ್ಗದ ವಿರತಿ ನೆಲೆಗೊಂಡು ನಿಂದಿತಯ್ಯ
ಘನಲಿಂಗಿಯ ಮೋಹದ ಚನ್ನಮಲ್ಲಿಕಾರ್ಜುನ, (ಘ.ಲಿಂ.ವ.೫)
ಶ್ರೀ ತೋಂಟದ ಸಿದ್ಧಲಿಂಗೇಶ್ವರರ ವಚನದಲ್ಲಿ ಹೀಗೆ ಬರುತ್ತದೆ.
ಬಸವಣ್ಣನ ಪ್ರಸಾದದಿಂದ
ಭಕ್ತಿಜ್ಞಾನ ವೈರಾಗ್ಯ ಸಂಪನ್ನನಾದೆನಯ್ಯ
ನೀಲಲೋಚನೆಯಮ್ಮನ ಪ್ರಸಾದದಿಂದ
ನಿಜಲಿಂಗೈಕ್ಯನಾದೆನಯ್ಯ, (ಷ.ಜ್ಞಾ.೫೩೭)
ಹೀಗೆ ನೀಲಾಂಬಿಕೆಯ ಹೆಸರೇ ಸಮಕಾಲೀನರು ಮತ್ತು ನಂತರದ ಶರಣರು ಉಭಯತರಲ್ಲೂ ಆಗುತ್ತ ಬಂದಿದೆ. ಕಾವ್ಯಗಳನ್ನು ತೆಗೆದುಕೊಂಡರೆ, ಅತ್ಯಂತ ಅಧಿಕೃತವೂ ಬಸವಣ್ಣನವರ ನಂತರ, ಇನ್ನೂ ಅವರನ್ನು ಕುರಿತ ಕಥೆಗಳು ಜನರ ಬಾಯಲ್ಲಿ ಜೀವಂತವಾಗಿ ಇರುವಾಗಲೇ ಸ್ವಲ್ಪ ಕಾಲದಲ್ಲಿ ರಚನೆಯಾದ ಪಾಲ್ಕುರಿಕೆ ಸೋಮನಾಥನ ಬಸವ ಪುರಾಣದಲ್ಲಿ ಬಸವಣ್ಣನವರ ಹೆಂಡತಿ ಒಬ್ಬಳೇ. ಈತನೇ ಬರೆದ 'ಪಂಡಿತಾರಾಧ್ಯ ಚರಿತ್ರೆ'ಯಲ್ಲೂ ಗಂಗಾಂಬಿಕೆಯೊಬ್ಬಳ ಹೆಸರೇ ಇರುವುದು. ಬಸವ ಧರ್ಮ ಪ್ರಚಾರಕ ಜಂಗಮರು ಶ್ರೀಶೈಲ ಕ್ಷೇತ್ರದಲ್ಲಿ ಧರ್ಮಪ್ರಚಾರ ಮಾಡುತ್ತ ಸಂಚರಿಸುವಾಗ ಅವರಿಂದ ವಿವರಗಳನ್ನು ಪಡೆದ ಕಾರಣ ಸೋಮನಾಥಾರಾಧನ ಕಾವ್ಯ ಹೆಚ್ಚು ನಿಖರವಾಗಿ, ಸತ್ಯ ಸಂಗತಿಯನ್ನು ಒಳಗೊಂಡಿದೆ.
ಕೂಡಲ ಸಂಗಮದಲ್ಲಿ ಹರಿಯುವ ಕೃಷ್ಣಾ ನದಿಯ ಆಚೆಯ ದಂಡೆಗೆ ನೀಲಮ್ಮನ ಗುಡಿ, ಗದ್ದುಗೆ ಇವೆ. ಆ ಗುಡಿಗೆ ನೀಲಮ್ಮನ ಗುಡಿ, ನೀಲಮ್ಮನ ಗದ್ದುಗೆ ಎನ್ನುವರು ಮತ್ತು ನೀಲಗಂಗಮ್ಮನ ಗುಡಿ, ನೀಲಗಂಗಮ್ಮನ ಗದ್ದುಗೆ ಎಂದೂ ಅನ್ನುವರು. ವಿವಾಹದ ಪೂರ್ವದ ಹೆಸರು ಗಂಗಾ, ನಂತರದ್ದು ನೀಲಾ ಎರಡು ಸೇರಿ ನೀಲಗಂಗಾ ಎಂದು ಆಗಿರಲೂ ಸಾಕು. ನೀಲಿಯ ಕಣ್ಣಳು ಉಳ್ಳವಳು, 'ನೀಲಗಂಗಾ' ಎಂಬುದು ನೀಲಲೋಚನೆಯ ಗ್ರಾಮೀಣ ಭಾಷೆಯ ರೂಪಾಂತರವಾಗಿರಬಹುದು.
ಇನ್ನೆರಡು ಸಂದೇಹಗಳು ಇಲ್ಲಿ ಉಳಿಯುತ್ತವೆ.
೧. ಗಂಗಾಪ್ರಿಯ ಕೂಡಲ ಸಂಗಮದೇವ ಗಂಗಾಂಬಿಕೆ ವಚನ ಮುದ್ರಿಕೆ, ಸಂಗಯ್ಯ ನೀಲಾಂಬಿಕೆಯ ವಚನ ಮುದ್ರಿಕೆ ಎಂಬ ಕಲ್ಪನೆ ಸಾಹಿತಿಗಳಲ್ಲಿದೆ. ವಿಶ್ವವಿದ್ಯಾಲಯದವರು ಪ್ರಕಟಿಸಿರುವ ೨೭ ಶಿವಶರಣೆಯರ ವಚನಗಳು ಎಂಬ ಪುಸ್ತಕದಲ್ಲಿ ಉಭಯ ವಚನ ಮುದ್ರಿಕೆಗಳಲ್ಲಿ ವಚನಗಳು ಪ್ರಕಟವಾಗಿವೆ.
ಈ ಸಂದೇಹಕ್ಕೆ ನಾನು ಕಂಡುಕೊಂಡ ಉತ್ತರವೆಂದರೆ 'ಗಂಗಾಪ್ರಿಯ ಕೂಡಲಸಂಗಮದೇವ' ಎಂದು ಮೊದಲು ನೀಲಲೋಚನೆ ವಚನಗಳನ್ನು ಬರೆಯಲು ಆರಂಭಿಸಿರಬಹುದು. ಪೂರ್ವಾಶ್ರಮದ ಹೆಸರು ಬೇಡವೆಂದು ಮತ್ತು ತನ್ನ ಹೆಸರನ್ನು ವಚನದಲ್ಲಿ ಕಾಣಿಸಿಕೊಳ್ಳುವುದು ಬೇಡವೆಂದು ಬಸವಣ್ಣನವರು ಆಕ್ಷೇಪಿಸಿರಬಹುದು. ಆದ್ದರಿಂದ ಮುಂದೆ 'ಸಂಗಯ್ಯ' ಎಂದು ಮುದ್ರಿಕೆಯನ್ನು ಬದಲಿಸಿರಬಹುದು. ಇವೆರಡನ್ನೂ ಬರೆದವಳು ಒಬ್ಬಳೇ, “ಗಂಗಾಪ್ರಿಯ' ಎಂದು ಬರೆದ ವಚನಗಳಲ್ಲಿ ಪೂರ್ವಾಶ್ರಮದ ಮೋಹ, ಮಮಕಾರ ಅಳಲು ವ್ಯಕ್ತವಾಗಿದೆ.
“ಸಾಂದ್ರವಾಗಿ ಹರಗಣ ಭಕ್ತಿಯ ಮಾಳ್ಪನೆಂತವ್ವಾ ಮಾದಲಾಂಬಿಕಾನಂದನನು, ಸಾಂದ್ರವಾಗಿ ಬಿಜ್ಜಳನ ಅರಮನೆಯ ನ್ಯಾಯವನೊಳ್ಪನೆಂತವ್ವಾ ಮಾದರಸಸುತನು.'' ಎಂದು ಒಂದು ವಚನದಲ್ಲಿ ಹೇಳುತ್ತಾಳೆ.
ಇನ್ನೊಂದು ವಚನದಲ್ಲಿ
“ ಅವಳ ಕಂದ ಬಾಲಸಂಗ, ನಿನ್ನ ಕಂದ ಚನ್ನಲಿಂಗ ಎಂದರಮ್ಮ ಒಡೆಯರು'' ಎಂಬ ಮಾತಿದೆ. ಇದರ ನೆರವಿನಿಂದ ಇಬ್ಬರು ಹೆಂಡತಿಯರಿಗೆ ಒಂದೊಂದು ಮಕ್ಕಳಿದ್ದವು ಎಂದು ನಾವು ಕಲ್ಪಿಸಿದ್ದೆವು. ಈಗ ಅನ್ನಿಸುತ್ತಿದೆ. “ನಿಮ್ಮಲ್ಲಿ ಉದಾತ್ತ ಚಿಂತನೆ, ವಿಶಾಲ ಹೃದಯ ಬರಬೇಕಾದರೆ ನಾಗಲಾಂಬಿಕೆಯ ಮಗು ಚನ್ನಬಸವಣ್ಣನನ್ನು ನೀನು ಸಾಕು, ನಿನ್ನ ಮಗುವನ್ನು ಅಕ್ಕನು ಸಾಕಲಿ,'' ಎಂದು ಬಸವಣ್ಣನವರು ಸೂಚಿಸಿರಬಹುದು.
ಸಿದ್ಧರಾಮೇಶ್ವರರ ವಚನ ೧೦೭ನ್ನು ಉಲ್ಲೇಖಿಸಿ ಒಬ್ಬರು ಕಲ್ಯಾಣ ಕಿರಣದ ಓದುಗರು ಪತ್ರ ಬರೆದಿದ್ದರು. ಈ ಮೊದಲೊಮ್ಮೆ ಬಸವಣ್ಣನವರಿಗೆ ಒಬ್ಬಳೇ ಹೆಂಡತಿ ಎಂದು ನಾನು ಬರೆದುದಕ್ಕೆ ಪ್ರತಿಕ್ರಿಯೆ ರೂಪದಲ್ಲಿ ಆ ವಚನವನ್ನು ಉಲ್ಲೇಖಿಸಿದರು.
ಅಲ್ಲಯ್ಯಗಳ ವಚನ ಎರಡೆಂಬತ್ತು ಕೋಟಿ
ಅಪ್ಪಯ್ಯಗಳ ವಚನ ನಾಲ್ಕು ಲಕ್ಷದ ಮೂವತ್ತಾರು ಸಾವಿರ
ಎಮ್ಮಯ್ಯಗಳ ವಚನ ವಚನಕ್ಕೊಂದು.
ನೀಲಮ್ಮನ ವಚನ ಎಂದು ಲಕ್ಷದ ಹನ್ನೊಂದು ಸಾವಿರ
ಗಂಗಾಂಬಿಕೆಯ ವಚನ ಎರಡು ಲಕ್ಷದ ಎಂಟು ಸಾವಿರ
ಎಮ್ಮಕ್ಕ ನಾಗಾಯಿಯ ವಚನ ಮೂರು ಲಕ್ಷದ ತೊಂಬತ್ತಾರು ಸಾವಿರ
ಮಡಿವಾಳಣ್ಣನ ವಚನ ಮೂರುಕೋಟಿ ಮುನ್ನೂರು
ಹಡಪದಯ್ಯಗಳ ವಚನ ಹನ್ನೊಂದು ಸಾಸಿರ.
ಮರುಳುಸಿದ್ಧನ ವಚನ ಅರವತ್ತೆಂಟು ಸಾಸಿರ.
ಇಂತಪ್ಪ ವಚನ ರಚನೆಯ ಬಿಟ್ಟು,
ಕುತ್ಸಿತ ಕಾವ್ಯಾಲಂಕಾರ ನೋಡುವರ ನೋಡಿ
ಹುಡಿ ಮಣ್ಣ ಹೊಯ್ಯದೆ ಮಾಬನೆ
ಮಹಾದೇವ ಕಪಿಲಸಿದ್ಧ ಮಲ್ಲಿಕಾರ್ಜುನ.
ಇದನ್ನು ಉದ್ಧರಿಸಿರುವ ಚನ್ನಬಸವಣ್ಣನವರ ವಚನಗ್ರಂಥದ ಪೀಠಿಕೆಯಲ್ಲಿ (ಪುಟ xix) ೪ ಮತ್ತು ೫ನೆಯ ವಾಕ್ಯಗಳಲ್ಲಿರುವ ಕೈಬಿಡುವಿಕೆಯ ಸೂಚನೆ ಇಲ್ಲ. ಅದೇ ಸಿದ್ಧರಾಮೇಶ್ವರರ ಮೂಲಗ್ರಂಥದಲ್ಲಿ ಈ ಸೂಚನೆ ಇದೆ. ಆಗ ''ನೀಲಮ್ಮನ ವಚನ ಲಕ್ಷದ ಎಂಟು ಸಾಸಿರ'' ಎಂದು ಓದಬೇಕಾಗುತ್ತದೆ. 'ಲಕ್ಷದ ಹನ್ನೊಂದು ಸಾಸಿರ ಗಂಗಾಂಬಿಕೆಯ ವಚನ.' ಎಂಬುದನ್ನು ತೆಗೆದುಹಾಕಬೇಕಾಗುತ್ತದೆ.
ವಚನಗಳ ಮಧ್ಯೆ ಒಂದೊಂದು ವಾಕ್ಯವನ್ನು ಸೇರಿಸಲು ಯಾವುದೇ ಕಷ್ಟವಿರದ್ದರಿಂದ ವಚನಗಳ ಪ್ರತಿ ಮಾಡುವವನು ಯಾರೋ, ಗಂಗಾಂಬಿಕೆಯನ್ನು ಕಡೆಗಣಿಸಿರಬೇಕೆಂದು ಘನಔದಾರ್ಯದಿಂದ ಈ ವಾಕ್ಯ ಸೇರಿಸಿರಲು ಸಾಧ್ಯವಿದೆ.
ನಾವು ಶರಣರ ಮೂರ್ತಿಗಳನ್ನು ಮಾಡಿ ಮಂಟಪದಲ್ಲಿ ಕೂರಿಸಿದ್ದೇವಷ್ಟೆ. ಶರಣ ಮೇಳದ ಸಮಯಕ್ಕೆ ಬಂದಿದ್ದ ಶ್ರೀ ದಯಾನಂದ ಸ್ವಾಮಿ ಒಂದು ಪ್ರಶ್ನೆ ಕೇಳಿದರು. ಇಲ್ಲಿ ನೀಲಾಂಬಿಕೆ, ನಾಗಲಾಂಬಿಕೆ, ಕಲ್ಯಾಣಮ್ಮ ಎಲ್ಲರ ಮೂರ್ತಿಗಳಿವೆ. ಗಂಗಾಂಬಿಕೆಯದು ಇಲ್ಲ. ಏಕೆ ?'' ''ನಾವು ಬಹಳ ಕಾಲ ಇಬ್ಬರು ಹೆಂಡತಿಯರಿರಬೇಕೆಂದು ನಂಬಿದ್ದೆವು. ಇತ್ತೀಚೆಗೆ ಶ್ರೀ ದೇವಿರಪ್ಪನವರ ಲೇಖನ ಓದಿ ಆ ದಿಶೆಯಲ್ಲಿ ಚಿಂತಿಸಿ, ಬಸವಣ್ಣನವರಿಗೆ ಒಬ್ಬಳೇ ಹೆಂಡತಿ'' ಎಂದು ಖಚಿತಪಡಿಸಿಕೊಂಡಿದ್ದೇವೆ. ಅದಕ್ಕೆ ಮೂರ್ತಿ ಮಾಡಿಸಿಲ್ಲ.''
“ಇಷ್ಟು ದಿವಸಗಳವರೆಗೆ ಗಂಗಾಂಬಿಕೆಯ ಅಸ್ತಿತ್ವ ಮನ್ನಿಸಿ, ಗೌರವಿಸಿಕೊಂಡು ಬಂದಿದ್ದೇವೆ. ಈಗ ಇಲ್ಲವೆನ್ನಲು ತುಂಬಾ ವೇದನೆಯಾಗುತ್ತದೆ. ಭಾವನಾತ್ಮಕ ಸಂಬಂಧ ಗಾಢವಾದುದು'' ಎಂದರು. ನನಗೆ ಬಹಳ ನಗು ಬಂದಿತು. ನಿಮ್ಮಲ್ಲೆಲ್ಲ ಶರಣರ ಬಗ್ಗೆ ಭಕ್ತಿ ಹುಟ್ಟಿಸಿದವರೇ ನಾವು. ಬಹಳಷ್ಟು ಚಿಂತನೆ ಮಾಡಿದ ಬಳಿಕ ಸತ್ಯ ಸಂಗತಿ ಗೋಚರಿಸಿದ ಮೇಲೆ ಒಪ್ಪಲು ತೊಂದರೆ ಏನು ? ನಮ್ಮ ಬುದ್ಧಿ ಕೇವಲ ಭಾವುಕತೆಯ ಮೇಲೆ ಕೆಲಸ ಮಾಡದೆ ವೈಚಾರಿಕತೆಯ ಅಡಿಪಾಯದ ಮೇಲೆ ನಿಲ್ಲಬೇಕು. ಅಂಥ ಭಾವಾತಿರೇಕಕ್ಕೆ ಒಳಗಾಗಿ ಇಲ್ಲದ ವ್ಯಕ್ತಿಯನ್ನು, ಇದ್ದವರೆಂದು ಭಾವಿಸಿ, ಆ ಮೇಲೆ ಆ ನಂಬಿಕೆ ತೊರೆಯಲಾರದಷ್ಟು ಅಸಹಾಯಕರಾಗುವುದು ತಪ್ಪು. ಪಂಚಾಚಾರ್ಯವಾದಿಗಳು ರೇಣುಕಾಚಾರ್ಯರನ್ನು ಕಲ್ಪನೆಯ ಕೂಸನ್ನಾಗಿ ಹುಟ್ಟುಹಾಕಿ, ಅನೇಕ ಮೂಢಭಕ್ತರ ತಲೆಯಲ್ಲಿ ತೂರಿಸಿದರು. ಇಂದು ಮೂಢಭಕ್ತರು ಆ ಕಾಲ್ಪನಿಕ ನಂಬಿಕೆಯಿಂದ ಹೊರ ಬರಲಾರದಂತಾಗಿದ್ದಾರೆ. ನೀವೂ ಹಾಗೆ ಆದರೆ ಹೇಗೆ ?
ಮತ್ತು ಒಬ್ಬಳೇ ಹೆಂಡತಿಯೆಂಬುದನ್ನು ಖಚಿತಪಡಿಸಿ ಕಾಲ್ಪನಿಕ ವ್ಯಕ್ತಿಯನ್ನು ಕೈಬಿಡುವುದರಿಂದ ಗುರು ಬಸವಣ್ಣನವರ ಉಜ್ವಲ ವ್ಯಕ್ತಿತ್ವ ಇನ್ನಷ್ಟು ಬೆಳಗುವುದು. ಈ ಉದ್ದೇಶದಿಂದಲೇ ನಾವು ಒಬ್ಬಳೇ ಹೆಂಡತಿ ಎಂಬುದನ್ನು ಕಾಲ್ಪನಿಕವಾಗಿ ಸೃಷ್ಟಿಸಿಲ್ಲ. ಈಗ ನಮ್ಮ ಮನಸ್ಸಿಗೆ ನೂರಕ್ಕೆ ನೂರು ಸತ್ಯವೆನಿಸಿದೆ'' ಎಂದು ಶ್ರೀ ದಯಾನಂದ ಸ್ವಾಮಿಗೆ ಹೇಳಿದೆನು.
ಹೀಗೆ ಸಿದ್ದರಾಮೇಶ್ವರರ ವಚನ ೧೦೭ ರಲ್ಲಿ ಇರುವ ಕೆಲವು ಪದಪ್ರಕ್ಷಿಪ್ತ ಎನ್ನಲು ಅಡ್ಡಿಯಿಲ್ಲ.
ಗಂಗಾಂಬಿಕಾ ಸಮಾಧಿ
ಪೂಜ್ಯ ಬಸವಣ್ಣನವರ ನಂತರ ಶರಣ ಧರ್ಮದ ಇತಿಹಾಸ ಕೊಂಡಿ ಕಳಚಿದ ಸರಪಳಿಯ ತುಂಡುಗಳಾಗಿದ್ದರಿಂದ ಅನಿವಾರ್ಯವಾಗಿ ಬಹಳ ಜನರು ತಾವಿರುವ ಸ್ಥಳಗಳಲ್ಲಿ ಸುತ್ತಮುತ್ತ ಅಂಥ ಕೊಂಡಿಗಳೇನಾದರು ಸಿಗುತ್ತವೋ ಎಂದು ಹುಡುಕುಲೆತ್ನಿಸಿದ್ದಾರೆ. ಬಸವಣ್ಣನವರಿಗೆ ಇಬ್ಬರು ಹೆಂಡತಿಯರಿದ್ದು ನೀಲಾಂಬಿಕೆಯೊಬ್ಬಳೇ ಸಂಗಮದ ಕಡೆಗೆ ಬಂದುದರಿಂದ, ಇನ್ನೊಬ್ಬಾಕೆ ಉಳವಿಯತ್ತ ನಡೆದ ಶರಣ ಸೈನ್ಯದಲ್ಲಿ ಇದ್ದಿರಬೇಕು ಎಂದು ಊಹಿಸಲಾಯಿತು. ಸುಮಾರು ವರ್ಷಗಳ ಹಿಂದೆ ಮುಗಟಖಾನ ಹುಬ್ಬಳ್ಳಿಗೆ ಹೋದಾಗ ಹೊಳೆಯಲ್ಲಿದ್ದ ಒಂದು ಗುಡಿ ಕುರಿತು ಕೇಳಿದಾಗ ಅಲ್ಲಿಯ ಜನ ಇದು ಹೊಳೆಗಂಗವ್ವನ ಗುಡಿ ಎಂದು ಹೇಳಿದ್ದರು. ಅವರುಗಳಿಗೆ ಇತಿಹಾಸದ ಬಗ್ಗೆ ಅಷ್ಟೊಂದು ಗಮನ ಇರದ್ದರಿಂದ ಹೀಗೆ ಹೇಳುತ್ತಿರಬಹುದು. ಅದು ಗಂಗಾಂಬಿಕೆಯದೇ ಎಂದು ನಾವು ಅಂದುಕೊಂಡೆವು. ಅದೇ ರೀತಿ ಅನೇಕರು ದಾಖಲೆ ಮಾಡಿ ಇತ್ತೀಚೆಗೆ ಗ್ರಂಥಗಳಲ್ಲಿ ಬರೆದಿದ್ದಾರೆ. ಹರಳಯ್ಯನವರ ಧರ್ಮಪತ್ನಿ ಕಲ್ಯಾಣಮ್ಮನ ಸಮಾಧಿ ಬೈಲಹೊಂಗಲ ತಾಲ್ಲೂಕಿನ ತಿಗಡಿ ಗ್ರಾಮದಲ್ಲಿದೆ. ಅಕ್ಕನಾಗಮ್ಮ ಬೀಡುಬಿಟ್ಟ ನಾಗಲಾಪುರ ರಕ್ಷಿಸಲ್ಪಟ್ಟಿದೆ. ಚನ್ನಬಸವಣ್ಣನ ತಂಗಿ ಅನುಷ್ಠಾನ ಮಾಡಿದ ತಾಣಗಳು ಅಲ್ಲಲ್ಲೇ ಗುರುತಿಸಲ್ಪಟ್ಟಿವೆ ಎಂದಾಗ ಗಂಗಾಂಬಿಕೆಯ ಗದ್ದುಗೆ ರಕ್ಷಿಸಲ್ಪಡುತ್ತಿರಲಿಲ್ಲವೆ ? ಹೀಗೆ ಹಲವಾರು ದಿಕ್ಕಿನಿಂದ ಆಲೋಚಿಸಿದಾಗಲೂ ಬಸವಣ್ಣನವರು ವಿವಾಹವಾದುದು ಒಬ್ಬಳನ್ನೇ ಆಕೆಗೆ ವಿವಾಹಪೂರ್ವದ ಒಂದು ಹೆಸರು. ವಿವಾಹೋತ್ತರದ ಇನ್ನೊಂದು ಹೆಸರು ಗಂಗಾಂಬಿಕೆ, ನೀಲಲೋಚನೆ ಎಂದು ಇದ್ದುದರಿಂದ ನಂತರದ ಕವಿಗಳು ಇಬ್ಬರನ್ನು ಬೇರೆ ಬೇರೆ ಮಾಡಿ ಕಲ್ಪಿಸಿಕೊಂಡಿದ್ದಾರೆ ಎಂದು ಖಚಿತವಾಗುವುದು.
#: ಅಧ್ಯಾತ್ಮಿಕ ಸಂಸ್ಕಾರ (Spiritual Conversion) ಮತ್ತು ಸಾಮಾಜಿಕ ಧಾರ್ಮಿಕ ಸಂಸ್ಕಾರ (Socio-religious custom)ಗಳಲ್ಲಿ ವ್ಯತ್ಯಾಸವಿದೆ. ಉತ್ಕಟ ಅಧ್ಯಾತ್ಮಿಕ ಆಸಕ್ತಿ ಮೊಳೆತಾಗ, ಗುರುವನ್ನು ಅರಸಿಕೊಂಡು ಹೋಗಿ ಅಥವಾ ದರ್ಶನ ಪಡೆದಾಗ ದೀಕ್ಷೆ ಹೊಂದುವುದು ಬೇರೆ. ಸಮಾಜದಲ್ಲಿ ಹುಟ್ಟಿದ ಪ್ರತಿಯೊಂದು ವ್ಯಕ್ತಿಗೂ ಕಡ್ಡಾಯವಿಧಿಯಾಗಿ ದೀಕ್ಷೆಯ ಹಕ್ಕನ್ನು ಕೊಡುವುದು ಬೇರೆ. ವೀರಶೈವ ಮತ ಮತ್ತು ಲಿಂಗಾಯತ ಧರ್ಮಗಳ ಮಧ್ಯದಲ್ಲಿನ ವ್ಯತ್ಯಾಸ ಇದುವೇ ಆಗಿದೆ ಎಂಬುದನ್ನು ಗಮನಿಸಬೇಕು ಮತ್ತು ಭಾರತದ ಇತಿಹಾಸದಲ್ಲಿ ಯಾವುದೇ ಜಾತಿಗಳಲ್ಲಿ ಹುಟ್ಟಿದವರೂ ಆಧ್ಯಾತ್ಮಿಕ ಪ್ರೇರಣೆ ಬಂದಾಗ ಜ್ಞಾನಿಗಳಾದ ಗುರುಗಳಲ್ಲಿ ಹೋಗಿ ಅನುಗ್ರಹ ಪಡೆದಿರುವದುಂಟು. ಆದರೆ ಎಲ್ಲ ಜಾತಿಗಳವರಿಗೆ ಕಡ್ಡಾಯವಾದ ಧಾರ್ಮಿಕ ಸಂಸ್ಕಾರ ಇನ್ನೂ ಕೊಡಲಾಗುತ್ತಿಲ್ಲ ಎಂಬುದು ಗಮನಿಸಬೇಕಾದುದು.
##: ಬಸವಣ್ಣನವರ ವ್ಯಕ್ತಿತ್ವವನ್ನು ಅರಿತು, ಅದರ ಆಧಾರದ ಮೇಲೆ ಕಲ್ಪಿಸಿಕೊಂಡು ಬರೆದ ಪ್ರಸಂಗವಿದು. ಬಸವಣ್ಣನವರ ವಿವಾಹ.
ಗ್ರಂಥ ಋಣ:
೧) ಪೂಜ್ಯ ಮಾತಾಜಿ ಬರೆದ "ವಿಶ್ವಧರ್ಮ ಪ್ರವಚನ" ಪುಸ್ತಕ (ಪ್ರ: ೧೯೮೭) ದಿಂದ ಅಯ್ದ ಭಾಗ. ಪ್ರಕಟಣೆ: ವಿಶ್ವ ಕಲ್ಯಾಣ ಮಿಷನ್, ಬಸವ ಮಂಟಪ, ಕಾರ್ಡ್ ರೋಡ್, ಎರಡನೆಯ ಬ್ಲಾಕು, ರಾಜಾಜಿನಗರ, ಬೆಂಗಳೂರು - ೫೬೦ ೦೧೦.
ಕೂಡಲ ಸಂಗಮದಿಂದ ಬಸವಣ್ಣನವರ ನಿರ್ಗಮನ | ಬಸವಣ್ಣನವರಿಂದ ಕಾಯಕ ಸ್ವೀಕಾರ |