Previous ಅಂಚೆ ಚೀಟಿ ಮತ್ತು ನಾಣ್ಯದ ಮೇಲೆ. ಲಿಂಗಾಯತರು ಲಿಂಗವಂತ ರು Next

ಧರ್ಮಗುರು ಬಸವಣ್ಣನವರ ಬಗ್ಗೆ ಶರಣರ ವಚನಗಳು

*

ಬಸವಣ್ಣನೇ ತಾಯಿ
ಬಸವಣ್ಣನೇ ತಂದೆ
ಬಸವಣ್ಣನೇ ಪರಮ ಬಂಧುವೆನಗೆ
ವಸುಧೀಶ ಕಪಿಲಸಿದ್ಧ ಮಲ್ಲಿಕಾರ್ಜುನ
ನಿಮ್ಮ ಹೆಸರಿಟ್ಟ ಗುರು ಬಸವಣ್ಣನಯ್ಯ.

ವಿಶ್ವಗುರು ಬಸವಣ್ಣನೇ ನನ್ನ ತಾಯಿ, ತಂದೆ ಪರಮ ಬಂಧುವು, ಪರಮಾತ್ಮಾ ನಿಮಗೆ ಹೆಸರಿಟ್ಟ ಗುರು ಬಸವಣ್ಣನೆ.

ಬಸವ ಜಗದಾದಿ ಬೀಜ, ಬಸವ ಆನತ ಸುರಭೂಜ.
ಬಸವ ಬಸವಾ ಎಂಬ ನಾಮಸಾಲದೆ?
ಬಸವ ಭವರೋಗ ವೈದ್ಯ, ಬಸವ ವೇದಾಂತ ವೇದ್ಯ.
ಬಸವ ಬಸವಾ ಎಂಬ ಲೀಲೆ ಸಾಲದೆ?
ಬಸವ ಕರುಣಾಮೃತ ಸಿಂಧು, ಬಸವ ಪರಮಬಂಧು,
ಬಸವ ವರದ ಸೋಮನಾಥ ನೀನೆ,
ಬಸವ ಬಸವಾ ಬಸವಾ ಶರಣೆಂದರೆ ಸಾಲದೆ? - ವರದ ಸೋಮನಾಥ/1358

ಸಂಗನಬಸವಣ್ಣನೇ ಎನ್ನ ಗುರುವು.
ಚನ್ನಬಸವಣ್ಣನೇ ಎನ್ನ ಲಿಂಗವು.
ಅಲ್ಲಮಪ್ರಭುವೇ ಎನ್ನ ಜಂಗಮವು
ಇದು ಕಾರಣ, ಈ ಗುರುಲಿಂಗಜಂಗಮವನರಿತು ನಾನು ಬದುಕಿದೆನಯ್ಯ
ಝೇಂಕಾರ ನಿಜಲಿಂಗಪ್ರಭುವೆ. - ಜಕ್ಕಣಯ್ಯ / 1261

ಭಕ್ತಿಯ ಕುಳವನು ಬಸವಣ್ಣನೇ ಬಲ್ಲನು.
ಪ್ರಸಾದದ ನೆಲೆಯನು ಬಸವಣ್ಣನೇ ಬಲ್ಲನು.
ಬಸವಣ್ಣ ನಡೆದುದೇ ಮಾರ್ಗ, ಅಖಿಳಗಣಂಗಳಿಗೆ,
ಬಸವಣ್ಣ ನುಡಿದುದೇ ವೇದ, ಮಹಾಪುರುಷರಿಗೆ,
ಬಸವಣ್ಣನನಾದಿ, ಲಿಂಗವಾದಿ ಎಂದರಿದೆನಾಗಿ,
ಬಸವಣ್ಣನ ನೆನೆವುತಿರ್ದೆನಯ್ಯಾ.
ಬಸವಣ್ಣನ ಪಾದವಿಡಿದೆನಾಗಿ, ಲಿಂಗವೇದಿಯಾದೆನು.
ಬಸವಣ್ಣನ ಬಾಗಿಲ ಕಾಯ್ದೆನಾಗಿ, ಪ್ರಸಾದ ಸಾಧ್ಯವಾಯಿತ್ತು.
ಬಸವಣ್ಣನ ಕರುಣದಿಂದ ಪ್ರಭುದೇವರ ನಿಲವ ಕಂಡೆನು.
ಬಸವಣ್ಣನ ಬೋಧೆಯಿಂದ ಜಂಗಮವೇ ಲಿಂಗವೆಂದರಿದೆನು.
ಆ ಜಂಗಮ ಮುಖದಿಂದಲ್ಲದೆ ಲಿಂಗತೃಪ್ತಿಯಾಗದು.
ಪ್ರಸಾದಸಿದ್ಧಿಯಾದಲ್ಲದೆ ಭವಂ ನಾಸ್ತಿಯಾಗದು.
ಇದು ಕಾರಣ,
ಶುದ್ಧಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ ಶಾಂತಚೆನ್ನಮಲ್ಲಿಕಾರ್ಜುನದೇವಯ್ಯಾ,
ನಿಮ್ಮ ಶರಣ ಬಸವಣ್ಣನ ನಂಬಿ,
ನಾನು ಕೆಟ್ಟು, ಬಟ್ಟಬಯಲಾಗಿ ಹೋದೆನೆಯ್ಯಾ,
ನಿಮ್ಮ ಧರ್ಮ ನಿಮ್ಮ ಧರ್ಮ ನಿಮ್ಮ ಧರ್ಮ. - ಮರುಳಶಂಕರದೇವ/1112

ಬಸವಣ್ಣನೆ ಗುರುವೆಂದರಿಯರಲ್ಲ, ಬಸವಣ್ಣನೆ ಲಿಂಗವೆಂದರಿಯರಲ್ಲ,
ಬಸವಣ್ಣನೆ ಕಾರಣವೆಂದರಿಯರಲ್ಲ, ಬಸವಣ್ಣನೆ ಪ್ರಸಾದವೆಂದರಿಯರಲ್ಲ.
ಬಸವಣ್ಣನೆ ಗುರುವೆಂದು ಅನುಮಿಷನರಿದ.
ಬಸವಣ್ಣನೆ ಲಿಂಗವೆಂದು ಚೆನ್ನಬಸವಣ್ಣನರಿದ.
ಬಸವಣ್ಣನೆ ಜಂಗಮವೆಂದು ಪ್ರಭುದೇವರರಿದರು.
ಬಸವಣ್ಣನೆ ಪ್ರಸಾದವೆಂದು, ಮರುಳಶಂಕರದೇವರು ಅರಿದು ಆಚರಿಸಿದರು.
ಇದು ಕಾರಣ, ಬಸವಣ್ಣನೆ ಗುರು, ಬಸವಣ್ಣನೆ ಲಿಂಗ,
ಬಸವಣ್ಣನೆ ಜಂಗಮ, ಬಸವಣ್ಣನೆ ಪ್ರಸಾದವೆಂದರಿಯದ
ಅನಾಚಾರಿಗಳ ಎನಗೆ ತೋರದಿರಯ್ಯ,
ಗುಹೇಶ್ವರಲಿಂಗದಲ್ಲಿ ಪ್ರಭುವೆ ಸಾಕ್ಷಿಯಾಗಿ
ಬಸವಪ್ರಿಯ ಕೂಡಲಸಂಗಮದೇವಾ./1236

ಅಂಬಿಗ ಚೌಡಯ್ಯ
135
ಗುರುಲಿಂಗಜಂಗಮಕ್ಕೆ ಆಧಾರ ಬಸವಣ್ಣ,
ಪಾದೋದಕ ಪ್ರಸಾದಕ್ಕೆ ಆಧಾರ ಬಸವಣ್ಣ,
ಸರ್ವಾಪತ್ತಿಗಾಧಾರ ಬಸವಣ್ಣ,
ಸ್ವರ್ಗ ಮರ್ತ್ಯ ಪಾತಾಳಕ್ಕೆ ಬಸವಣ್ಣನ ಚೈತನ್ಯವಲ್ಲದಿಲ್ಲ.
ಬಸವಣ್ಣನ ಶ್ರೀಪಾದಕ್ಕೆ ನಮೋ ನಮೋ
ಎನುತಿರ್ದಾತನಂಬಿಗ ಚೌಡಯ್ಯ.

ಸೊಡ್ಡಳ ಬಾಚರಸ
783
ಪ್ರಣವದ ಪ್ರಣವವೆ ನಕಾರ, ಪ್ರಣವದ ದಂಡಕವೆ ಮಕಾರ,
ಪ್ರಣವದ ಕುಂಡಲಿಯೆ ಶಿಕಾರ, ಪ್ರಣವದ ಅರ್ಧಚಂದ್ರವೆ ವಕಾರ,
ಪ್ರಣವದ ಬಿಂದುವೆ ಯಕಾರ.
ನಕಾರದ ದಂಡಕವೆ ಮಕಾರ, ನಕಾರದ ಬಲದ ಕೋಡೆ ಶಿಕಾರ,
ನಕಾರದ ಎಡದ ಕೋಡೆ ವಕಾರ, ನಕಾರದ ಬಿಂದುವೆ ಯಕಾರ,
ನಕಾರದ ತಾರಕವೆ ಒಂಕಾರ.
ಮಕಾರದ ದಂಡಕವೆ ನಕಾರ, ಮಕಾರದ ಬಲದ ಕೋಡೆ ಶಿಕಾರ,
ಮಕಾರದ ಎಡದ ಕೋಡೆ ವಕಾರ, ಮಕಾರದ ಬಿಂದುವೆ ಯಕಾರ,
ಮಕಾರದ ತಾರಕವೆ ಒಂಕಾರ.
ಶಿಕಾರದ ದಂಡಕವೆ ನಕಾರ, ಶಿಕಾರದ ಬಲದ ಕೋಡೆ ಮಕಾರ,
ಶಿಕಾರದ ಎಡದ ಕೋಡೆ ವಕಾರ, ಶಿಕಾರದ ಬಿಂದುವೆ ಯಕಾರ,
ಶಿಕಾರದ ತಾರಕವೆ ಒಂಕಾರ.
ವಕಾರದ ದಂಡಕವೆ ನಕಾರ, ವಕಾರದ ಬಲದ ಕೋಡೆ ಮಕಾರ,
ವಕಾರದ ಎಡದ ಕೋಡೆ ಶಿಕಾರ, ವಕಾರದ ಬಿಂದುವೆ ಯಕಾರ,
ವಕಾರದ ತಾರಕವೆ ಒಂಕಾರ.
ಯಾಕಾರದ ದಂಡಕವೆ ನಕಾರ, ಯಕಾರದ ಬಲದ ಕೋಡೆ ಮಕಾರ,
ಯಕಾರದ ಎಡದ ಕೋಡೆ ಶಿಕಾರ, ಯಕಾರದ ಬಿಂದುವೆ ವಕಾರ,
ಯಕಾರದ ತಾರಕವೆ ಒಂಕಾರ.
ಇಂತಪ್ಪ ಮೂವತ್ತಾರು ಮೂಲಪ್ರಣವಂಗಳೆ,
ಪ್ರಥಮಗುರು ಬಸವಣ್ಣನಾದುದಂ,
ಸೊಡ್ಡಳ ಲಿಂಗದಲ್ಲಿ ಕಂಡು ಸುಖಿಯಾಗಿ,
ನಾನು ಬಸವಾ ಬಸವಾ ಎಂದು ಜಪಿಸುತಿರ್ದೆನಯ್ಯಾ.

828
ಹಿಡಿದು ಬಿಟ್ಟ ಬಳಿಕ ಅಂತಿರಬೇಕಲ್ಲದೆ,
ಇನ್ನು ಹಿಡಿದು ತಪ್ಪಿದ ವಸ್ತುವ ಅರಸಿ ಹಿಡಿಯಲುಂಟೆ ?
ಮುನಿದು ಹಾವಿನೊಳಿಟ್ಟು ಒಸೆದು ಆನೆಯನೇರಿಸಿಹೆನೆಂದಡೆ,
ಶಿವಶರಣರ ಮುನಿಸು ತಿಳಿಯದು ನೋಡಾ.
ಒಡೆದ ಮುತ್ತು ನಾಣ್ಯಕ್ಕೆ ಸಲ್ಲದು, ಒಡೆದ ಹಾಲು ಅಮೃತಕ್ಕೆ ಸಲ್ಲದು.
ನಾವೇತಕಯ್ಯಾ, ನಿನಗಂದು ಸೊಡ್ಡಳನ ಶರಣರು ನಿರೂಪವ ಕೊಡಲು,
ಎನ್ನ ಪರಮಾರಾಧ್ಯರು ಸಂಗನಬಸವಣ್ಣನ ತಿಳುಹುತಿರ್ದರು.

ಬಾಹೂರ ಬೊಮ್ಮಣ್ಣ
251
ಅಪರಾಧವ ಮಾಡಿದ ಭಟ ಅರಸಿಂಗೆ ಸಜ್ಜನನಪ್ಪನೆ ?
ವ್ರತಭ್ರಷ್ಟ, ನೇಮಕ್ಕೆ ಹಾನಿಯಾದವ.
ನಿತ್ಯಕೃತ್ಯವೆಂದು ಹಿಡಿದು ಬಿಟ್ಟವ.
ತ್ರಿವಿಧಮಲವನೊಲ್ಲೆನೆಂದು ತೊಟ್ಟವ.
ಇಂತೀ ಕಷ್ಟಗುಣದಲ್ಲಿ ನಡೆವ ದೃಷ್ಟಗಳ್ಳರ ನೋಡಾ.
ಇದು ಬಾಯೊಳಗಣ ಹುಣ್ಣು ಹೇವರಿಸಿದ ಮತ್ತೆ
ಇನ್ನಾವ ಠಾವಿನಲ್ಲಿ ನುಂಗುವ ?
ಈ ಹೇಯವ ಬಿಡಿಸಾ ಎನಗೆ ಸಂಗನಬಸವಣ್ಣಾ.
ಬ್ರಹ್ಮೇಶ್ವರಲಿಂಗವಿಪ್ಪ ಠಾವ ತೋರಾ.

253
ಅಹಂಕಾರಿಗೆ ಗುರುಭಕ್ತಿಯಿಲ್ಲ.
ಪರಸೇವೆಯುಳ್ಳವಂಗೆ ಲಿಂಗಪೂಜೆಯಿಲ್ಲ.
ಋಣಾನುಸಂಬಂದಿಗೆ ಮಾಟದ ಮರ್ಮವಿಲ್ಲ.
ಇಂತೀ ತ್ರಿವಿಧಭೇದದ ಕೂಟವನರಿತು
ಸಂಗನಬಸವಣ್ಣನ ಆಟದಂತೆ
ಬ್ರಹ್ಮೇಶ್ವರಲಿಂಗದಲ್ಲಿ ಕೂಟಸ್ಥನಾಗಬೇಕು.

ಅಯ್ದಕ್ಕಿ (ಆಯಿದಕ್ಕಿ) ಮಾರಯ್ಯಾ
1165
ಅಮೃತದ ಸವಿ ಸ್ವಾದಿಸುವರಿಗಲ್ಲದೆ
ಅಮೃತ ತನ್ನ ತಾ ಸ್ವಾದಿಸದ ಪರಿಯಂತೆ
ನಿತ್ಯತೃಪ್ತಂಗೆ ಅಪ್ಯಾಯನ ಉಂಟೇ ಬಸವಣ್ಣಾ ?
ಏಳ್ನೂರೆಪ್ಪತ್ತಮರಗಣಂಗಳ ಕಟ್ಟಳೆಯ
ನೇಮದ ಕಟ್ಟು ನಿನ್ನದು ಬಸವಣ್ಣಾ.
ನಿನಗೆ ಭಾವ ನಿರ್ಭಾವವೆಂಬುದುಂಟೇ ಬಸವಣ್ಣಾ ?
ಅಮರೇಶ್ವರಲಿಂಗದಲ್ಲಿ ಸಂಗನಬಸವಣ್ಣಾ,
ನಿನ್ನ ಪಾದಕ್ಕೆ ನಮೋ ನಮೋ ಎಂಬೆನು.

1184
ಭಕ್ತರ ಭಾವದಲ್ಲಿ ಸುಳಿವ ಸುಳುಹು,
ವಿರಕ್ತರ ಜ್ಞಾನದಲ್ಲಿ ಹೊಳೆವ ಕಳೆಯು, ನೀನೆಯಯ್ಯಾ !
ಸೂರ್ಯನ ಬೆಳಗಿನೊಳಗೆ ಸಚರಾಚರಪ್ರಾಣಿಗಳು ಸುಳಿವಂತೆ,
ನಮ್ಮ ಕಟ್ಟಿನ ನೇಮದ ನಿಷ್ಠೆ ನೀನೆಯಯ್ಯಾ.
ಅಮರೇಶ್ವರಲಿಂಗದ ಒಡಲು ಸಂಗನಬಸವಣ್ಣನೆಂಬುದನು
ಮಡಿವಾಳಮಾಚಿತಂದೆಗಳೆ ಬಲ್ಲರು ಕಾಣಾ ಸಂಗನಬಸವಣ್ಣ.

1186
ಮನದಲ್ಲಿ ಹುಟ್ಟಿದ ಅರಿವು ಮಾಡುವ ಮಾಟದಲ್ಲಿ ಕಾಣಬಹುದು,
ಶರಣರ ಸಂಗಕ್ಕೆಳಸಿದ ಚಿತ್ತವ ಅನುಭಾವದಲ್ಲಿ ಕಾಣಬಹುದು.
ಒಳಹೊರಗೆ ತೆರಹಿಲ್ಲದ ಕೂಟ ನಿನ್ನದು.
ಅಮರೇಶ್ವರಲಿಂಗದಲ್ಲಿ ಸಂಗನಬಸವಣ್ಣಾ
ನಿನ್ನ ಪಾದಕ್ಕೆ ನಮೋ ನಮೋ ಎಂಬೆನು.

ಆಮುಗೆ ರಾಯಮ್ಮ
600
ಅರುವತ್ತಾರುತತ್ವಂಗಳ ಮೇಲೆ ನಿನ್ನ ಅರಿವವರಿಲ್ಲ.
ಮೂವತ್ತಾರುತತ್ವಂಗಳ ಮೇಲೆ ನೀನು ರಚ್ಚೆಗೆ ಬಂದವನಲ್ಲ.
ಕೈಲಾಸಕ್ಕೆ ಬಂದು ನೀನು ಬ್ರಹ್ಮ ವಿಷ್ಣು ರುದ್ರನ ವಾದದಿಂದ
ಮರ್ತ್ಯಕ್ಕೆ ಬಂದವನಲ್ಲ.
ಅನಾದಿಯಿಂದ ಅತ್ತಲಾದ ಬಸವನಭಕ್ತಿಯ ನೋಡಲೆಂದು ಬಂದವನಲ್ಲದೆ
ಮಾಯಾವಾದದಿಂದ ಮರ್ತ್ಯಕ್ಕೆ ಬಂದನೆಂದು
ನುಡಿವವರ ನಾಲಗೆಯ ಕಿತ್ತು ಕಾಲು ಮೆಟ್ಟಿ ಸೀಳುವೆನು.
ಹೊಟ್ಟೆಯ ಸೀಳಿ, ಮುಳ್ಳಿನ ರೊಂಪೆಯ ಮಡಗುವೆನು ;
ಅದೇನು ಕಾರಣವೆಂದಡೆ
ಬಸವಣ್ಣಂಗೆ ಭಕ್ತಿಯ ತೋರಲೆಂದು,
ಚೆನ್ನಬಸವಣ್ಣಂಗೆ ಆರುಸ್ಥಲವನರುಹಲೆಂದು,
ಘಟ್ಟಿವಾಳ, ಮಹಾದೇವಿ, ನಿರವಯಸ್ಥಲದಲ್ಲಿ ನಿಂದ ಅಜಗಣ್ಣ, ಬೊಂತಲಾದೇವಿ
ಇಂತಿವರಿಗೆ ಸ್ವತಂತ್ರವ ತೋರಲೆಂದು ಬಂದೆಯಲ್ಲಾ.
ಅಮುಗೇಶ್ವರಲಿಂಗಕ್ಕೂ ಎನಗೂ ಪರತಂತ್ರವ ತೋರದೆ
ಸ್ವತಂತ್ರನ ಮಾಡಿ ನಿರವಯಸ್ಥಲದಲ್ಲಿ ನಿಲ್ಲಿಸಿದೆಯಲ್ಲಾ, ಪ್ರಭುವೆ

ಅಕ್ಕಮ್ಮ
461
ಏಳುನೂರೆಪ್ಪತ್ತು ಅಮರಗಣಂಗಳಿಗೆಲ್ಲಕ್ಕೂ ತಮ್ಮ ತಮ್ಮ ಭಾವದಶೀಲ.
ಗಂಗೆವಾಳುಕ ಸಮಾರುದ್ರರೆಲ್ಲಕ್ಕೂ ತಮ್ಮ ತಮ್ಮ ಮನಕ್ಕೆ ಸಂದ ಸಂದ ನೇಮ.
ಮರ್ತ್ಯಕ್ಕೆ ಬಂದ ಪ್ರಮಥರೆಲ್ಲರೂ ತಾವು ಬಂದುದನರಿದು
ಮುಂದಿನ ಪಯಣಕ್ಕೆ ಎಂದೆಂಬುದ ಕಂಡು,
ಬಸವಣ್ಣನ ಮಣಿಹ ಎಂದಿಂಗೆ ಸಲೆ ಸಂದು ನಿಂದಿಹ ವೇಳೆಯನರಿವನ್ನಕ್ಕ
ತಾವು ಕೊಂಡ ವ್ರತದಲ್ಲಿ ಭಯ ಭಂಗವಿಲ್ಲದೆ ನಿಂದಿರಬೇಕು,
ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದೊಳಗಹನ್ನಕ್ಕ.

ಬಾಚಿ ಕಾಯಕದ ಬಸವಣ್ಣ
205
ಆಶೆಯರತ ಬಾಚಿಯಲ್ಲಿ ಭವಪಾಶವಿಲ್ಲದ ಜಂಗಮಕೆ ತೆತ್ತ.
ರೋಷವಿಲ್ಲದ ಉಳಿಯಲ್ಲಿ ನಿಜವಾಸವ ನೋಡಿ ಹುಗಿಲುದೆಗೆವುತ್ತ
ಭಾಷೆಗೆ ಊಣಯವಿಲ್ಲದ ಸದ್ಭಕ್ತರ ಆಶ್ರಯಕ್ಕೆ ನಿಜವಾಸವ ಮಾಡುವ ಕಾಯಕ.
ಈ ಗುಣ ಬಾಚಿಯ ಬಸವಣ್ಣನ ನೇಮ.
ಇದು ಸಂಗನಬಸವಣ್ಣ ಕೊಟ್ಟ ಕಾಯಕದಂಗ,
ಬಸವಣ್ಣಪ್ರಿಯ ವಿಶ್ವಕರ್ಮಟಕ್ಕೆ
ಕಾಳಿಕಾವಿಮಲ ರಾಜೇಶ್ವರಲಿಂಗವನರಿವುದಕ್ಕೆ.

ಗಜೇಶ ಮಸಣಯ್ಯ
208
ಈ ಸಕಲದೊಳಗೆ ಒಂದು ಸಯವಿಲ್ಲದೆ
ನಾವು ಹಿರಿಯರು ನಾವು ಲಿಂಗವಂತರೆಂಬರು.
ಇದಿರ ಕೈಯಲ್ಲಿ ಎನಿಸಿಕೊಳ್ಳುತ್ತಿಹರು ಮನ ನಾಚದೆ.
ಇಂಥ ಮೂಗುನಾಚಿಗಳ ಮೆಚ್ಚುವನೆ
ಮಹಾಲಿಂಗ ಗಜೇಶ್ವರನಲ್ಲಿ
ಎನ್ನ ಹೆತ್ತ ತಂದೆ ಪೂರ್ವಾಚಾರ್ಯ ಸಂಗನಬಸವಣ್ಣ

ಘಟ್ಟಿವಾಳಯ್ಯಾ
448
ಕರವೂರ ನಿರಹಂಕಾರ-ಸುಜ್ಞಾನಿದೇವಿಯರ
ಬಸುರಲ್ಲಿ ಬಂದರೆನ್ನಬಹುದೆ ಪ್ರಭುದೇವರ?
ಮಂಡಗೆಯ ಮಾದಿರಾಜ- ಮಾದಲಾಂಬಿಕೆಯಮ್ಮನವರ
ಬಸುರಲ್ಲಿ ಬಂದರೆನ್ನಬಹುದೆ ಬಸವೇಶ್ವರನ?
ಅಕ್ಕನಾಗಲಾಂಬಿಕೆಯಮ್ಮನ ಬಸುರಲ್ಲಿ
ಬಂದರೆನ್ನಬಹುದೆ ಚೆನ್ನಬಸವೇಶ್ವರನ?
ಮೊರಡಿಯ ಮುದ್ದುಗೌಡ-ಸುಗ್ಗವ್ವೆಯರ
ಬಸುರಲ್ಲಿ ಬಂದೆರೆನ್ನಬಹುದೆ ಸಿದ್ಧರಾಮೇಶ್ವರನ?
ಇವರು ಒಬ್ಬರಿಂದಾದವರಲ್ಲ, ತಮ್ಮಿಂದ ತಾವಾದರು.
ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ನಿಲ್ಲು ಮಾಣು.

500
ಬಸವ ಮಾಡಿಹನೆಂದು ಬಾಯಲ್ಲಿ ಬಸಿವ
ಲೊಳೆಯನರಿಯದೆ ಎಸಕದಿಂದ ಮಾಡುವ
ಹುಸಿಭಕ್ತಿಯನರಿಯದ ಈ ಕಿಸಿವಾಯರಿಗೇಕೆ?
ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂದೆನು.

ಹಾವಿನ ಹಾಳ ಕಲ್ಲಯ್ಯಾ
1145
ತನುವ ಗುರುವಿಂಗಿತ್ತ, ಮನವ ಲಿಂಗಕಿತ್ತ, ಧನವ ಜಂಗಮಕಿತ್ತ,
ಎನ್ನ ಬಸವರಾಜನಯ್ಯ.
ಗುರುವಿನಲ್ಲಿ ಶುದ್ಧ, ಲಿಂಗದಲ್ಲಿ ಸಿದ್ಧ, ಜಂಗಮದಲ್ಲಿ ಪ್ರಸಿದ್ಧ ಪ್ರಸಾದಿಯಯ್ಯಾ,
ಎನ್ನ ಬಸವರಾಜನಯ್ಯ
ಲಿಂಗದಲ್ಲಿ ದೀಕ್ಷೆ ಶಿಕ್ಷೆ ಸ್ವಾನುಭಾವ ಆಯತ ಸ್ವಾಯತ ಸನ್ನಹಿತ,
ಎನ್ನ ಬಸವರಾಜನಯ್ಯ.
ಮಹಾಲಿಂಗ ಕಲ್ಲೇಶ್ವರಾ, ನಿಮ್ಮ ಶರಣ ಬಸವರಾಜನಯ್ಯ.

1157
ಬಯಲಬೊಮ್ಮವ ನುಡಿವ,
ಆ ನುಡಿಯ ಬಯಲಭ್ರಮೆಯಲ್ಲಿ ಬಿದ್ದ ಜಡರುಗಳು ಬಲ್ಲರೆ, ಶಿವನಡಿಗಳ ?
ಗುರುಲಿಂಗಜಂಗಮದ ಪಾದೋದಕ ಪ್ರಸಾದವೆಂಬ
ಪರಮಾಮೃತವ ಸವಿದು, ಪರವಶನಾದ ಪರಮಮುಗ್ಧಂಗಲ್ಲದೆ
ಪರವು ಸಾಧ್ಯವಾಗದು,
ಮಹಾಲಿಂಗ ಕಲ್ಲೇಶ್ವರನ ಶರಣ ಪೂರ್ವಾಚಾರಿ ಬಸವಣ್ಣಂಗಲ್ಲದೆ .

ಹಡಪದ ಅಪ್ಪಣ್ಣ
850
ಅಯ್ಯಾ ಎನೆಗೆ ಬಸವಪ್ರಿಯನೆಂದರೂ ನೀನೆ,
ಕೂಡಲ ಚೆನ್ನಬಸವಣ್ಣನೆಂದರೂ ನೀನೆ,
ಗುರುವೆಂದರೂ ನೀನೆ, ಲಿಂಗವೆಂದರೂ ನೀನೆ,
ಜಂಗಮವೆಂದರೂ ನೀನೆ, ಪ್ರಸಾದವೆಂದರೂ ನೀನೆ.
ಅದೇನು ಕಾರಣವೆಂದರೆ,
ನೀ ಮಾಡಲಾಗಿ ಅವೆಲ್ಲವು ನಾಮರೂಪಿಗೆ ಬಂದವು.
ಅದು ಕಾರಣ, ನಾನೆಂದರೆ ಅಂಗ, ನೀನೆಂದರೆ ಪ್ರಾಣ.
ಈ ಉಭಯವನು ನೀವೆ ಅರುಹಿದಿರಾಗಿ,
ಇನ್ನು ಭಿನ್ನವಿಟ್ಟು ನೋಡಿದೆನಾದರೆ, ಚನ್ನಮಲ್ಲೇಶ್ವರ ನೀವೆ ಬಲ್ಲಿರಿ.
ಎಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣನಲ್ಲಿ ಏಕವಾದ ಕಾರಣ,
ಎನಗೆ ಭವವಿಲ್ಲ, ಬಂಧನವಿಲ್ಲ, ಅದಕ್ಕೆ ನೀವೇ ಸಾಕ್ಷಿ.

1051
ಹಂಚುಕಂಥೆ, ಅತೀತ, ವಿರಕ್ತರು, ಸ್ಥಲದವರು ಎಂದು ನುಡಿದಾಡುವರು.
ಜಂಗಮ ಒಂದೆ, ಲಿಂಗ ಒಂದೆ, ಗುರು ಒಂದೆ.
ಎನ್ನ ಪರಮಾರಾಧ್ಯರು ಬಸವಣ್ಣ , ತನ್ನ ಲೀಲೆಯಿಂದ
ಒಂದ ಮೂರು ಮಾಡಿ ತೋರಿದ, ಮೂರನೊಂದು ಮಾಡಿ ತೋರಿದ.
ಆ ಒಂದು ನಾಮರೂಪಿಗಿಲ್ಲ .
ಇದರಂದವ ಬಲ್ಲ ಶರಣರು ತಿಳಿದು ನೋಡಿ.
ಇದನರಿಯದೆ ಸ್ಥಲನೆಲೆಯುಂಟೆಂದು ಹೊಲಬುಗಾಣದೆ ಹೋರಾಡಿ,
ಭವಭಾರಿಗಳಾಗಬೇಡಾ !
ಭವವಿರಹಿತ ನಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣಂಗೆ,
ಬಯಕೆ ಸವೆದು, ಭಾವ ಬಯಲಾಗಿ ನಮೋ ನಮೋ ಎಂದು ಬದುಕಿದೆ.
ನೀವೂ ಬದುಕಿರೊ.

1074
ಹೆಸರಿಗೆ ಬಾರದ ಘನವ ಹೆಸರಿಗೆ ತಂದು,
ನುಡಿದಾಡುವ ಕಿಸುವಾಯರ ಮಾತ ಕೇಳಲಾಗದು.
ಅದೇನು ಕಾರಣವೆಂದರೆ, ಈ ಪಶುಗಳೇನು ಬಲ್ಲರು ?
ಬಸವನೆಂತಿಪ್ಪನೆಂಬುದ ವಸುಧೆಯ ಮನುಜರೆತ್ತಬಲ್ಲರು ?
ಇದು ಹುಸಿ ಹುಸಿ, ನಿಮ್ಮಾಣೆ, ನಿಮ್ಮ ಪ್ರಮಥರಾಣೆ.
ಬಸವನ ನೆಲೆಯ ಬಸವಾದಿ ಪ್ರಮಥರೆ ಬಲ್ಲರಲ್ಲದೆ,
ಈ ಹುಸಿಮಾಯೆಗೊಳಗಾದ ಸೂತಕರೆತ್ತಬಲ್ಲರು ನಿಮ್ಮ ಶರಣರ ಸುದ್ದಿಯ,
ಬಸವಪ್ರಿಯ ಕೂಡಲಚೆನ್ನಬಸವಣ್ಣಾ ?

ಹೊಡೆಹುಲ್ಲ ಬಂಕಣ್ಣ
1211
ಭಯಭಕ್ತಿಯಿಂದ ಸಂಗನಬಸವಣ್ಣನ ಶ್ರೀಪಾದವ ಕಂಡೆನು.
ಅನುಮಿಷ ದೃಷ್ಟಿಯಿಂದ ಚೆನ್ನಬಸವಣ್ಣನ ಶ್ರೀಪಾದವ ಕಂಡೆನು.
ಸುಜ್ಞಾನದ ಬೆಳಗಿನಿಂದ ಪ್ರಭುದೇವರ ಶ್ರೀಪಾದವ ಕಂಡೆನು.
ಇಂತೀ ಮೂವರ ಶ್ರೀಪಾದಕ್ಕೆ ನಮೋ ನಮೋ ಎನುತಿರ್ದೆನು,
ಕುಂಭೇಶ್ವರಲಿಂಗದಲ್ಲಿ ಜಗನ್ನಾಥ ಸಾಕ್ಷಿಯಾಗಿ.

ಕೋಲ ಶಾಂತಯ್ಯ
190
ಎನ್ನಾಕಾರವೆ ನೀನಯ್ಯ ಬಸವಣ್ಣ.
ನಿನ್ನಾಕಾರವೆ ಕೋಲ ಶಾಂತ.
ಹಿಡಿದಿರ್ದ ಕರಸ್ಥಲ ಬಸವಣ್ಣನಿಂದ ಉದಯವಾದ ಕಾರಣ
ಬಸವಣ್ಣನ ಶ್ರೀಪಾದಕ್ಕೆ ಅಹೋರಾತ್ರಿಯಲ್ಲಿ
ನಮೋ ನಮೋಯೆಂಬೆ.
ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.

ಟಿಪ್ಪಣಿ: ವಚನಗಳ ತೋರಿಸಿದ ಸಂಖ್ಯೆಯು ಸಮಗ್ರ ವಚನ ಸಾಹಿತ್ಯ ಸಂಪುಟದಲ್ಲಿಯ ವಚನ ಸಂಖ್ಯೆಯನ್ನು ಸೂಚಿಸುತ್ತದೆ. (ಸಮಗ್ರ ವಚನ ಸಾಹಿತ್ಯ ಸಂಪುಟ - ೧ ರಿಂದ ೧೫, ಪ್ರಕಾಶಕರರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರಕಾರ, ಬೆಂಗಳೂರು.)

ಪರಿವಿಡಿ (index)
*
Previous ಅಂಚೆ ಚೀಟಿ ಮತ್ತು ನಾಣ್ಯದ ಮೇಲೆ. ಲಿಂಗಾಯತರು ಲಿಂಗವಂತ ರು Next
cheap jordans|wholesale air max|wholesale jordans|wholesale jewelry|wholesale jerseys