Previous ವೀರ ವೀರಾಗಿಣಿ ಅಕ್ಕಮಹಾದೇವಿ ಚಿನ್ಮಯಜ್ಞಾನಿ ಚೆನ್ನಬಸವಣ್ಣ Next

ಗುರು ಬಸವಣ್ಣನವರ ಬಗ್ಗೆ ಬಸವಯೋಗಿ ಸಿದ್ಧರಾಮೇಶ್ವರ ವಚನಗಳು

*

20
ಅಂದು ಬಸವಣ್ಣ ಬಂದು ಜರಿದು ಹೋದುದ
ಮರೆದೆನೆ ಆ ನೋವ!
ಜರಿದುದೆ ಎನಗೆ ದೀಕ್ಷೆಯಾಯಿತ್ತು!
ಆ ದೀಕ್ಷೆಯ ಗುಣದಿಂದ ಫಲಪದಕ್ಕೆ ದೂರವಾದೆ
ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ
ಬಸವಣ್ಣನೆನ್ನ ಪರಮಾರಾಧ್ಯ!

31
ಅರ್ಚಿಸಲು ಬೇಡವದು, ಪೂಜಿಸಲು ಬೇಡ,
ನಿತ್ಯ ಜಪತಪನೇಮ ನಿನಗೆ ಬೇಡ.
ಸಚ್ಚಿದಾನಂದ ಗುರು ಕಪಿಲಸಿದ್ಧಮಲ್ಲಿಕಾರ್ಜುನನ
ಬಸವಾಕ್ಷರತ್ರಯವ ನೆನೆ ನಿತ್ಯಪದವು

33
ಅಜನ ಕಲ್ಪಿತವಲ್ಲದ ಭಕ್ತಿ
ವಿಷ್ಣುವಿನ ಕಲ್ಪಿತವಲ್ಲದ ಭಕ್ತಿ
ರುದ್ರನ ಕಲ್ಪಿತವಲ್ಲದ ಭಕ್ತಿ
ನಿನ್ನ ಕಲ್ಪಿತವಾಯಿತ್ತಯ್ಯಾ ಬಸವಾ.
ನೋಟಕಾರರ ನೋಟಕ್ಕೆ ಸಿಕ್ಕಿದ ಭಕ್ತಿ
ಕೂಟಕ್ಕೆ ಕೂಟವಾಯಿತ್ತಯ್ಯಾ ಬಸವಾ
ಈ ಬೇಟದ ಭಕ್ತಿಯ ನಿಮ್ಮಿಂದ ಕಂಡೆನಯ್ಯಾ,
ಬಸವ ಗುರುವೆ , ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ.

91
ಅಯ್ಯಾ, ನಿಮ್ಮ ಸತ್ಕೃಪೆ!
ಎನ್ನ ಸುಕೃತಾಂಗಿಯ ಮಾಡಿ ಮರ್ತ್ಯಕ್ಕೆ ತಂದಿರಯ್ಯಾ.
ಅಯ್ಯಾ, ನಿಮ್ಮ ಕೃಪೆಯಿಂದ
ನಿಷ್ಠಾಮಾಹೇಶ್ವರನೆನಿಪ ಅಮುಗಿದೇವಯ್ಯಗಳಿಂದ
ಪ್ರಭುದೇವರೆಂಬ ಅನಾದಿ ಜಂಗಮವ ಕಂಡೆನಯ್ಯಾ.
ಅಯ್ಯಾ, ನಿಮ್ಮ ಪ್ರಭುದೇವರೆಂಬ ಅನಾದಿ ಜಂಗಮರಿಂದ
ಪರಮ ಗುರುವಪ್ಪ ಬಸವೇಶ್ವರನ ಕಂಡೆನಯ್ಯಾ.
ಬಸವಣ್ಣನಿಂದ ಅಸಂಖ್ಯಾತ ಪ್ರಮಥಗಣಂಗಳ ಕಂಡೆನಯ್ಯಾ.
ಆ ಗಣಂಗಳ ಕೃಪೆಯಿಂದ ಚೆನ್ನಬಸವಣ್ಣನ ಪಡೆದು
ನಿಮ್ಮನಂಗದ ಮೇಲೆ ಸಾಹಿತ್ಯವ ಮಾಡಿಕೊಂಡೆನಯ್ಯಾ.
ನಿಮ್ಮ ಸಾಹಿತ್ಯದ ಪ್ರಸನ್ನಮೂರ್ತಿ ಎನ್ನ ಕಣ್ಣಮುಂದೆ
ಪ್ರತ್ಯಕ್ಷವಾಗಿಪ್ಪ ಮರುಳಶಂಕರದೇವರ ಶ್ರೀಪಾದವ ಕಂಡು
ನಾನು ನಿಶ್ಚಯ ಕೃತಾರ್ಥನಾದೆನಯ್ಯಾ,
ಕಪಿಲಸಿದ್ಧಮಲ್ಲಿನಾಥ ಪ್ರಭುವೇ, ನಿಮ್ಮ ಧರ್ಮ.

96
ಅಯ್ಯಾ, ನೀನು ಅನಾಹತ ಲೋಕದಲ್ಲಿ ಪ್ರವೇಶಿಸುವಾಗ
ಅಕ್ಷರವೆರಡರ ತದ್ರೂಪವಾಗಿರ್ದೆಯಯ್ಯಾ.
ನೀನಾ ಬ್ರಹ್ಮಾಂಡವನರಿವಾಗ
ಶಕ್ತಿತ್ರಯದ ಶಾಖೆಯಾಗಿರ್ದೆಯಯ್ಯಾ.
ನೀನು ಸಕಲದಲ್ಲಿ ನಿಃಕಲದಲ್ಲಿ ಸ್ವಾನುಭಾವಸಂಬಂಧದಲ್ಲಿ
ಅಕ್ಷರವೆರಡರಲ್ಲಿ ಆಂದೋಳನವಾಗಿ ಪ್ರವೇಶಿಸುವಾಗ
ಶುದ್ಧ ನೀನಾಗಿ, ಸಿದ್ಧ ನೀನಾಗಿ, ಪ್ರಸಿದ್ಧ ನೀನಾಗಿ
ಪಂಚ ಮಹಾವಾಕ್ಯಂಗಳೆ ನಿನ್ನ ಮನೆಯಾಗಿ
ಓಂ ಎಂಬುದೆ ನಿನ್ನ ತನುವಾಗಿ,
ಆನಂದವೆಂಬುದೆ ನಿನ್ನ ಮೂರ್ತಿಯಾಗಿ
ಪರಾಪರ ರೂಪೆ ನಿನ್ನವಯವವಾಗಿ ನೀನಿಪ್ಪೆಯಯ್ಯಾ
ನಿತ್ಯಮಂಗಳರೂಪನಾಗಿ, ಸ್ವತಂತ್ರವಾಗಿ ಪರಮಸೀಮೆಯ ಮೀರಿಪ್ಪ
ಕಪಿಲಸಿದ್ಧಮಲ್ಲಿಕಾರ್ಜುನನಲ್ಲಿ ಏಕಾರ್ಥವ ಮಾಡಿದ
ಬಸವಣ್ಣ ಗುರುವೇ, ಶರಣು

111
ಅಯ್ಯಾ, ಹಿಂದೆ ಹಲವು ಯುಗಂಗಳು ತಿರುಗಿ ಬರುತ್ತಿಪ್ಪಲ್ಲಿ,
ಅವನು ನೀ ಮಾಡಿದೆಯಲ್ಲದೆ ತಮ್ಮಾಜ್ಞೆಯಿಂದ ಬಂದುಲ್ಲವಯ್ಯಾ.
ಬಸವಣ್ಣಾ, ನಿಮ್ಮಾಜ್ಞೆಯಲ್ಲಿ ಯುಗಂಗಳು ಭವಭವದಲ್ಲಿ ಕಾಡಿದವು.
ಬಸವಣ್ಣಾ ಸಂಸಾರವಾಗಿ ಎನ್ನನೆ ಕಾಡಿದವು.
ಬಸವಣ್ಣಾ, ಹೊನ್ನು ಹೆಣ್ಣು ಮಣ್ಣು ತ್ರಿವಿಧವಾಗಿ ಎನ್ನನೆ ಕಾಡಿದವು.
ಬಸವಣ್ಣಾ, ಆಶಾಪಾಶಂಗಳಾಗಿ ಎನ್ನನೆ ಕಾಡಿದವು.
ಬಸವಣ್ಣಾ, ಗುರು ಬಸವಣ್ಣಾ, ಇವೆಲ್ಲಾ ನಿಮ್ಮಾಧೀನದವು;
ನೀ ಮಾಡಿದಡಾದವು, ಬೇಡಾ ಎಂದಡೆ ಮಾದವು.
ಅವಕ್ಕೆ ಎನ್ನನೊಪ್ಪಿಸದೆ, `ನಿನ್ನವ ನಿನ್ನವ' ಎನಿಸಾ,
ಕಪಿಲಸಿದ್ಧಮಲ್ಲಿಕಾರ್ಜುನನ ತೋರಿದ ಗುರು ಬಸವಣ್ಣಾ

129
ಅಷ್ಟಮ ಬ್ರಹ್ಮಕ್ಕೆ ಪಟ್ಟಗಟ್ಟಿತು,
ಮಾತೆ ಹೆತ್ತು ಹೆಸರಿಟ್ಟಿತೈ, ಅಕ್ಷರಾಂಕ
ಆರುವನು ಐದುವನು ಮೇಲಪ್ಪ ಮೂರುವನು
ಕೂಡೆ ಹದಿನಾಲ್ಕರೊಳು ಲೋಕವಾಗೆ;
ಏಕೈಕ ರುದ್ರ ನಿನ್ನಾಕಾರ ಚತುಷ್ಟಯಕೆ
ಅನೇಕ ಪರಿಯಿಂ ಮಾತೆ ಬಸವಾಕ್ಷರ.
ಅನಾದಿ ಮುಖಶೂನ್ಯವಾಗಿಪ್ಪ ಲಿಂಗವನು
ಖ್ಯಾತಿ ಮಾಡಿದ ಬಸವ , ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ.

131
ಅರ್ಚಿಸಲು ಬೇಡವದ, ಪೂಜಿಸಲು ಬೇಡವದ
ನಿತ್ಯ ಜಪತಪವು ನಿನಗೆ ಬೇಡ.
ಸಚ್ಚಿದಾನಂದ ಗುರು ಕಪಿಲಸಿದ್ಧಮಲ್ಲಿಕಾರ್ಜುನಯ್ಯನ
ಬಸವಾಕ್ಷರತ್ರಯವ ನೆನೆ ನಿನಗೆ ನಿತ್ಯಪದವು.

169
`ಆಧಾರಾಧೇಯ ಧರ್ಮಕೂಲಂ' ನಮೋ, ಬಸವ ಬಸವಾ.
`ಸ್ವಾದುಸಜ್ಜನಸಮಯಾಚಾರಂ' ನಮೋ, ಬಸವ ಬಸವಾ.
`ಪ್ರಾಣಂಗಸಂಬಂಧಿತಂ' ನಮೋ, ಬಸವ ಬಸವಾ.
`ಕಪಿಲಸಿದ್ಧಮಲ್ಲಿನಾಥಂ' ನಮೋ, ಬಸವ ಬಸವಾ.

208
ಆರೂಢದ ಮನದಲ್ಲಿ ನೀನೆ ನಿಂದ ಕಾರಣ
ತೋರುವ ಶಿವಜ್ಞಾನದ ದೀಪ್ತಿ ಬಸವಣ್ಣನಯ್ಯಾ;
ತೋರುವ ಬೀರುವ ಐಕ್ಯದ ಭಕ್ತಿ ಬಸವಣ್ಣನದಯ್ಯಾ,
ನಿಜದಲ್ಲಿ ನಿಂದು ನಿರ್ವಯಲಾಯಿತ್ತಯ್ಯಾ
ಬಸವಣ್ಣನ ಕರುಣದಿಂದ ಕಪಿಲಸಿದ್ಧಮಲ್ಲಿನಾಥಯ್ಯಾ.

217
ಆವ ಕಳೆಯೆಂಬುದು ನೀನೆಯಾದೆ, ಬಸವಲಿಂಗವೆ.
ಮುಕ್ತಿಗೆ ಮೂಲಸ್ವರೂಪು ನೀನಾಗಿ ನಿಂದ ರೂಪು.
ನಿನ್ನ್ಲಲ್ಲಿಯೆ ತ್ಲಯವಾಯಿತ್ತು, ಬಸವಗುರುವೆ.
ನಿಯಮಾಚಾರದ ರೂಪು ನಿನ್ನಲ್ಲಿಯೆ ತಲ್ಲಿಯವಾಯಿತ್ತಯ್ಯಾ,
ಕಪಿಲಸಿದ್ಧಮಲ್ಲಿನಾಥನ ಗುರು ಬಸವಾ.

230
ಆವುದಾನೊಂದು ಭಕ್ತಿ ಬಸವಣ್ಣನದಯ್ಯಾ.
ಆವುದಾನೊಂದು ಯುಕ್ತಿ ಬಸವಣ್ಣನದಯ್ಯಾ.
ಆವುದಾನೊಂದು ಯೋಗ ಬಸವಣ್ಣನದಯ್ಯಾ
ಕಪಿಲಸಿದ್ಧಮಲ್ಲಿನಾಥಯ್ಯಾ.

242
ಇಂದೆನ್ನ ಮನದೊಡೆಯ ಬಂದ ತಾ ಕರಸ್ಥಳಕೆ,
ಹಿಂದು ಮುಂದಿಲ್ಲದ ಪದವನಿತ್ತ.
ಗಂಧವಾಸನೆ ಚಂದವೊಂದಾದ ಬಸವನ
ಬಂಧುವಾದೆನು ಗುರುವೆ, ಕಪಿಲಸಿದ್ಧಮಲ್ಲಿಕಾರ್ಜುನ.

290
ಎಂದೆಂದೂ ಎನ್ನಂಗ ಮನ ಪ್ರಾಣ ನಿನ್ನದಯ್ಯಾ ಬಸವಾ.
ಎಂದೆಂದೂ ಎನ್ನಂಗ ಮನ ಪ್ರಾಣ ನಿನ್ನದಯ್ಯಾ ಬಸವಾ.
ಕಪಿಲಸಿದ್ಧಮಲ್ಲಿನಾಥಯ್ಯನ ಗುರುಬಸವಾ.

293
ಎನಗೆನ್ನ ಬಸವಣ್ಣನ ತೊತ್ತು ನಮ್ಮ ತಾಯಿಯಾಗಬೇಕು;
ಎನಗೆನ್ನ ಬಸವಣ್ಣನ ತೊಂಡ ನಮ್ಮ ತಂದೆಯಾಗಬೇಕು.
ಎನಗೆನ್ನ ಬಸವಣ್ಣನ ತೊತ್ತು ತೊಂಡರು ನಮ್ಮ ತಾಯಿ ತಂದೆಗಳಾದರು;
ನಿಮ್ಮ ತಂದೆ ತಾಯಿಗಳಾರು ಹೇಳಾ, ಕಪಿಲಸಿದ್ಧಮಲ್ಲಿನಾಥಯ್ಯಾ.

298
ಎನ್ನ ತನುವ ಕಡಿವುದು ಬಸವಣ್ಣನ ಧರ್ಮವಯ್ಯಾ,
ಎನ್ನ ಮನವನೊರೆದು ನೋಡುವುದು ಬಸವಣ್ಣನ ಧರ್ಮವಯ್ಯಾ,
ಎನ್ನ ಧನವ ಸೂರೆಮಾಡುವುದು ಬಸವಣ್ಣನ ಧರ್ಮವಯ್ಯಾ,
ಕಪಿಲಸಿದ್ಧಮಲ್ಲಿನಾಥಯ್ಯಾ.

303
ಎನ್ನ ಭವಕ್ಕೆ ತಂರಿಸಿ ನರಕವನೂಡಿಹೆನೆಂದಡೆ ಉಂಡೆನೆ?
ನಾನುಣ್ಣೆನುಣ್ಣೆ, ನಿನ್ನ ಕರುಣವುಂಟು!
ನಿನ್ನ ಬಸವಣ್ಣನ ಕರುಣದಿಂದ ನೀನಪ್ಪೆ.
ನಿನ್ನ ಕಕ್ಕುಲತೆ ಉಳಿದುದು, ಕಪಿಲಸಿದ್ಧಮಲ್ಲಿಕಾರ್ಜುನಾ

305
ಎನ್ನ ಸಕಲಕ್ಕೆ ಗುರು ಬಸವಣ್ಣ
ಎನ್ನ ನಿಃಕಲಕ್ಕೆ ಗುರು ಬಸವಣ್ಣ ;
ಎನ್ನ ಸಕಲ ನಿಃಕಲ ಕೂಡಿದಾನಂದದಾ ಪದವೆನಿತ ಆಗೆನಿಸಿ,
ಪದವ ಮೀರಿದ ಸದಮಲಜ್ಞಾನಜ್ಯೋರ್ಮಯನೈ.
ಬಸವಣ್ಣನೇ ಶರಣು, ಬಸವಣ್ಣನೇ ಶರಣು.
ಬಸವಣ್ಣನೇ ಭಕ್ತಿಮುಕ್ತಿಗೆ ಮೂಲವು.
ಬಸವಣ್ಣನ ನೆನೆದು ಅನಿಮಿಷಾಕ್ಷರದಿಂದ ಬಸವಪದವಾಯಿತ್ತೈ,
ಕಪಿಲಸಿದ್ಧಮಲ್ಲಿಕಾರ್ಜುನ.

353
ಏನೆಂದೆನಿಸದ ವಸ್ತು, ಅಪ್ರಮಾಣಮೂರ್ತಿ
ಬಸವ ಎಂಬ ಪದಕ್ಕೆ ನಿಂದಿತ್ತಯ್ಯಾ ನಿಮ್ಮ ಪ್ರಸಾದ,
ಅರಿಯಬಾರದ ಬಸವ ನೆಂಬ ವಸ್ತುವನರುಹಿತ್ತಯ್ಯಾ ನಿಮ್ಮ ಪ್ರಸಾದ.
ಬಸವನೆಂಬ ನಿಜವ ನಿಮ್ಮಲ್ಲಿ ನಿಲಿಸಿತ್ತಯ್ಯಾ ನಿಮ್ಮ ಪ್ರಸಾದ.
ಕಪಿಲಸಿದ್ಧಮಲ್ಲಿನಾಥಯ್ಯಾ,
ನಿಮ್ಮ ಅರ್ಪಿತ ಅನರ್ಪಿತವಾಯಿತ್ತಯ್ಯಾ,
ನಿಮ್ಮ ಬಸವವಿಡಿದು.

434
ಕರುಣಿ ಬಸವಾ, ಕಾಲಹರ ಬಸವಾ, ಕರ್ಮಹರ ಬಸವಾ,
ನಿರ್ಮಳ ಬಸವಾ, ಶಿವಜ್ಞಾನಿ ಬಸವಾ,
ನಿಮ್ಮ ಧರ್ಮವಯ್ಯಾ, ಈ ಭಕ್ತಿಯ ಪದವು.
ಕರುಣಿ ಕಪಿಲಸಿದ್ಧಮಲ್ಲಿನಾಥಯ್ಯಾ,
ನಿಮಗೂ ಎನಗೂ ಬಸವಣ್ಣನ ಧರ್ಮವಯ್ಯಾ.

448
ಕಾಮಿಸಿದೆನಯ್ಯಾ ಬಸವಣ್ಣನ ಭಕ್ತಿಗೆ;
ಕಾಮಿಸಿದೆನಯ್ಯಾ ಬಸವಣ್ಣನ ಯುಕ್ತಿಗೆ;
ಕಾಮಿಸಿದ ಕಾಮವೆ ಕೈಸಾರಿತ್ತಯ್ಯಾ, ಬಸವಣ್ಣನ ಕರುಣದಿಂದ,
ಕಪಿಲಸಿದ್ಧಮಲ್ಲಿನಾಥಯ್ಯಾ

459
ಕಾಲ್ಲದವಂಗೆ ಕಾಲ ಕೊಟ್ಟೆ ಬಸವಾ;
ಕಣ್ಣಿಲ್ಲದವಂಗೆ ಕಣ್ಣ ಕೊಟ್ಟೆ ಬಸವಾ;
ಎನ್ನ ಕಣ್ಣು ಕಾಲಿಂಗೆ ನೀನೆಯಯ್ಯಾ ಬಸವಾ,
ಕಪಿಲಸಿದ್ಧಮಲ್ಲಿನಾಥಯ್ಯಾ

477
ಕೇಳು ಕೇಳಾ, ಎಲೆ ಅಯ್ಯಾ,
ಬಸವಣ್ಣನು ಅನಿಮಿಷಂಗೆ ಲಿಂಗವ ಕೊಟ್ಟ ಕಾರಣ ಮರ್ತ್ಯಕ್ಕೆ
ಬಂದೆನೆಂಬರು.
ಸಟೆ ಸಟೆ! ಆ ನುಡಿಯ ಕೇಳಲಾಗದು, ಅದೇನು ಕಾರಣವೆಂದಡೆ
ಜೈನ ಚಾರ್ವಾಕ ಕಾಳಾಮುಖ ಎನಿಸುವ ಷಡ್ದರ್ಶನಾಗಳು ಹೆಚ್ಚಿ,
ವಿಭೂತಿ ರುದ್ರಾಕ್ಷಿ ಪಂಚಾಕ್ಷರವನರಿಯದೆ
ನರಕಕ್ಕೆ ಭಾಜನವಾಗಿ ಪೋಪರೆಂದು,
ದೇವರು ನಂದಿಕೇಶ್ವರನ ಮುಖವ ನೋಡಲು,
ಆ ಪ್ರಶ್ನೆಯಿಂದ ಬಂದನಯ್ಯಾ ಬಸವಣ್ಣ ಪರಹಿತಾರ್ಥನಾಗಿ.
ದೇವರು ದೇವಿಯರಿಗೆ ಪ್ರಣವಾರ್ಥವ ಬೋಧಿಸುವಾಗ
ದೇವಿಯರ ಮುಡಿಯಲ್ಲಿ ಹೊನ್ನ ತುಂಬಿಯಾಗಿ
ಷಣ್ಮುಖ ಕೇಳಿದ ಪ್ರಶ್ನೆಯಿಂದ ಬಂದನೆಂಬರಯ್ಯಾ, ಚೆನ್ನಬಸವಣ್ಣನು.
ಸಟೆ ಸಟೆ! ಆ ನುಡಿಯ ಕೇಳಲಾಗದು. ಅದೇನು ಕಾರಣವೆಂದಡೆ: ಷಡ್ವಿಧಸ್ಥಲಕ್ಕೆ ಸ್ಥಾಪನಾಚಾರ್ಯನಾಗಿ
ಸಕಲ ಪ್ರಮರ್ಥರ್ಗೆ ವೀರಶೈವವ ಪ್ರತಿಷ್ಠೆಯ ಮಾಡಲೋಸ್ಕರ
ಬಂದನಯ್ಯಾ ಚೆನ್ನಬಸವಣ್ಣನು.
ದೇವರ ಸಭೆಯಲ್ಲಿ ನಿರಂಜನನೆಂಬ ಗಣೇಶ್ವರನು
ಮಾಯಾಕೋಳಾಹಳನೆಂದು ಹೊಗಳಿಸಿಕೊಂಡು ಬರಲಾಗಿ
ಆ ಸಮಯದಲ್ಲಿ ದೇವಿಯರು ದೇವರ
ಮಾಯಾಕೋಳಾಹಳನಾದ ಪರಿಯಾವುದೆಂದು ಬೆಸಗೊಳಲು,
ಆ ಪ್ರಶ್ನೆಯಿಂದ ಪ್ರಭುದೇವರು ಮರ್ತ್ಯಕ್ಕೆ ಬಂದರೆಂಬರಯ್ಯಾ.
ಸಟೆ ಸಟೆ! ಆ ನುಡಿಯ ಕೇಳಲಾಗದು, ಅದೇನು ಕಾರಣವೆಂದಡೆ: ಸುಜ್ಞಾನಿ ನಿರಹಂಕಾರರ ಭಕ್ತಿಗೋಸ್ಕರ ಪ್ರತ್ಯಕ್ಷವಾಗಿ
ಬಸವಾದಿ ಪ್ರಮಥರ್ಗೆ ಬೋಧಿಸಿ,
ತನ್ನ ನಿಜಪದವ ತೋರಬಂದರಯ್ಯಾ ಪ್ರಭುದೇವರು.
ದಕ್ಷಸಂಹಾರದಿಂದ ಬರುವಾಗ ಗುಪ್ತಗಣೇಶ್ವರನ ನಿರಿ ಸೋಂಕಲು,
ಆ ಪ್ರಶ್ನೆಯಿಂದ ಬಂದನೆಂಬರಯ್ಯಾ ಮಡಿವಾಳನು.
ಸಟೆ ಸಟೆ! ಆ ನುಡಿಯ ಕೇಳಲಾಗದು,
ಅದೇನು ಕಾರಣವೆಂದಡೆ: ಬಿಜ್ಜಳ ಪರವಾದಿಗಳ ಸಂಹರಿಸಲೋಸ್ಕರ
ಬಸವಣ್ಣನ ನಿಮಿತ್ತವಾಗಿ ಬಂದನಯ್ಯಾ ಮಡಿವಾಳ ಮಾಚಯ್ಯಗಳು.
ಇಂತಿವರು ಮುಖ್ಯವಾದ ಏಳುನೂರು ಎಪ್ಪತ್ತು ಅಮರಗಣಂಗಳಿಗೆ
ವಾಸನಾಧರ್ಮವೆಂದಡೆ ಅಘೋರ ನರಕ ತಪ್ಪದಯ್ಯಾ.
ಇವರು ಮುಖ್ಯವಾದ ಪ್ರಮಥ ಗಣಂಗಳಿಗೆ ಶಾಪವೆಂದು ಕಲ್ಪಸಿದಡೆ,
ನಾಯಕ ನರಕ ತಪ್ಪದು, ಎಲೆ ಶಿವನೆ
ಕಪಿಲಸಿದ್ಧಮಲ್ಲಿಕಾರ್ಜುನ, ನಿಮ್ಮಾಣೆ

503
ಗುರುವಿಂಗಾದಡೆಯು ಬಸವಣ್ಣನೆ ಬೇಕು;
ಲಿಂಗಕ್ಕಾದಡೆಯು ಬಸವಣ್ಣನೆ ಬೇಕು;
ಜಂಗಮಕ್ಕಾದಡೆಯು ಬಸವಣ್ಣನೆ ಬೇಕು.
ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ,
ನಿಮಗೂ ಎನಗೂ ನಿಮ್ಮ ಶರಣರಿಗೂ ಬಸವಣ್ಣನೆ ಬೇಕು.

507
ಗುರುವಿಡಿದು ತನುವಾಯಿತ್ತು ;
ಲಿಂಗವಿಡಿದು ಮನವಾಯಿತ್ತು ;
ಜಂಗಮವಿಡಿದು ಧನವಾಯಿತ್ತು ;
ಬಸವಣ್ಣವಿಡಿದು ಭಕ್ತಿಯಾಯಿತ್ತು ;
ಕಪಿಲಸಿದ್ಧಮಲ್ಲಿನಾಥಯ್ಯ

512
ಗುರುವೆ ಎನ್ನ ತನುವಿಂಗೆ ಲಿಂಗಕ್ಷೆಯ ಮಾಡಿ
ಎನ್ನ ಜ್ಞಾನಕ್ಕೆ ಸ್ವಾನುಭಾವಕ್ಷೆಯ ಮಾಡಿ
ಎನ್ನ ತನು ಮನ ಧನದಲ್ಲಿ ವಂಚನೆಯಿಲ್ಲದೆ
ಮಾಡಲೆಂದು ಜಂಗಮದೀಕ್ಷೆಯ ಮಾಡಿ
ಎನ್ನ ಸರ್ವಾಂಗವು ನಿನ್ನ ವಿಶ್ರಾಮಸ್ಥಾನ
ಶುದ್ಧಮಂಟಪವಾದ ಕಾರಣ,
ಲೋಕವ್ಯಾಪ್ತಿಯನರಿಯದೆ ಲೋಕ ಎನ್ನೊಳಗಾಯಿತ್ತು,
ಆ ಲೋಕಕ್ಕೆ ಹೊರಗಾದೆ.
ಅದೇನು ಕಾರಣ? ಜನನ ಮರಣ ಪ್ರಳಯಕ್ಕೆ ಹೊರಗಾದೆನಾಗಿ.
ಗುರುವೆ ಸದ್ಗುರುವೆ ಎನ್ನ ಭವದ ಬೇರ ಹರಿದೆ ಗುರುವೆ,
ಭವಪಾಶವಿಮೋಚ[ನ]ನೆ,
ಅನ್ವಯ ಮನದ ಸರ್ವಾಂಗಲೋಲುಪ್ತ,
ಭುಕ್ತಿಮುಕ್ತಿ ಫಲಪ್ರದಾಯಕ ಗುರುವೆ ಬಸವಣ್ಣ,
ಕಪಿಲಸಿದ್ಧಮಲ್ಲಿಕಾರ್ಜುನ ಚೆನ್ನಬಸವಣ್ಣನಾಗಿ
ಪ್ರಭು ಮೊದಲಾಗಿ ಅಸಂಖ್ಯಾತರನೆಲ್ಲರನು ತೋರಿದ ಗುರುವೆ.

541
ಜಯಸಮಯವನಪ್ಪಿದ ಕರ ಬಸವಾ,
ಕರುಣಗೃಹ, ವಿಮಲ ಶುದ್ಧಸಮಯ ಭಾವಭರಿತ,
ಭರಿತಪೂರ ಪುರೋಪಜೀವ, ನಮೋ ಬಸವಾ,
ನಮೋ ಪ್ರಾಣಲಿಂಗಿ ಬಸವಾ,
ಕಪಿಲಸಿದ್ಧಮಲ್ಲಿನಾಥಾ, ನಮೋ ಬಸವಾ.

579
ತನುಗುಣ ಪ್ರಪಂಚಿಕವ ಹೊದ್ದ ಬಸವಣ್ಣ ;
ಸೀಮಾ ಸಂಬಂಧಿಗಳಲ್ಲಿ ನಿಲ್ಲ ಬಸವಣ್ಣ ;
ಎರಡೆಂಟೆಂದರಿಯ ಬಸವಣ್ಣ ;
ಅಂಗಮುಖವೆಲ್ಲವು ಲಿಂಗಮುಖವಾಗಿಪ್ಪ ಬಸವಣ್ಣ ;
ಪ್ರಾಣವೆಲ್ಲವು ಲಿಂಗಪ್ರಾಣವಾಗಿಯೆ ಸಮನಿಸುವ ಬಸವಣ್ಣ ;
ಅನರ್ಪಿತವಧಾನಂಗಳ ಭೇದವನು ಕಾಯದ ಕರದಿಂದರ್ಪಿಸದೆ,
ಸ್ವಾನುಭಾವ ಸಮ್ಯಕ್ ಜ್ಞಾನ ಕರಂಗಳಿಂದರ್ಪಿಸುವ ಬಸವಣ್ಣ ;
ನಿತ್ಯ ಪ್ರಸಾದವ ಕೊಂಬ ಬಸವಣ್ಣ.
ಕಪಿಲಸಿದ್ಧಮಲ್ಲಿಕಾರ್ಜುನಯ್ಯನೆಂಬ ಪರಸಮಯವನೊಳಕೊಂಡಿಪ್ಪ
ಬಸವಣ್ಣನ ಪರಿ ಇಂತುಟು.

582
ತನುತ್ರಯದ ಗುಣದಲ್ಲಿ ತಾಮಸಿಯಲ್ಲ ಬಸವಣ್ಣ;
ಮನತ್ರಯದಲ್ಲಿ ಮತ್ತನಲ್ಲ ಬಸವಣ್ಣ;
ಮಲತ್ರಯದಲ್ಲಿ ಮಗ್ನನಲ್ಲ ಬಸವಣ್ಣ;
ಲಿಂಗತ್ರಯದಲ್ಲಿ ನಿಪುಣ ಬಸವಣ್ಣ;
ಐದಾರು ಪ್ರಸಾದದಲ್ಲಿ ಪ್ರಸನ್ನ ಬಸವಣ್ಣ;
ಈರೈದು ಪಾದೋದಕದಲ್ಲಿ ಪ್ರಭಾವ ಬಸವಣ್ಣ;
ಎರಡು ಮೂರು ಭಕ್ತಿಯಲ್ಲಿ ಸಂಪನ್ನ ಬಸವಣ್ಣ;
ಮೂವತ್ತಾರು ತತ್ತ್ವದಿಂದತ್ತತ್ತ ಕಪಿಲಸಿದ್ಧಮಲ್ಲಿಕಾರ್ಜುನಯ್ಯನ ಕೂಡಿ,
ಫಲಪದಕ್ಕೆ ದೂರವಾದನಯ್ಯಾ ನಮ್ಮ ಬಸವಣ್ಣನು.

594
ತನುವ ಗುರುವಿಂಗಿತ್ತು ಗುರುವಾದನಯ್ಯಾ ಬಸವಣ್ಣನು
ಮನವ ಲಿಂಗಕ್ಕಿತ್ತು ಲಿಂಗವಾದನಯ್ಯಾ ಬಸವಣ್ಣನು
ಧನವ ಜಂಗಮಕ್ಕಿತ್ತು ಜಂಗಮವಾದನಯ್ಯಾ ಬಸವಣ್ಣನು
ಇಂತೀ ತ್ರಿವಿಧವ ತ್ರಿವಿಧಕ್ಕಿತ್ತು ಸದ್ಗುರು
ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ
ನಿಮ್ಮ ಶರಣ ಎಲ್ಲರಿಗೆ ಗುರುವಾದನಯ್ಯಾ ಬಸವಣ್ಣನು.

630
ತ್ರಿಣಯ ವಿನಯ ಇಷ್ಟದೃಷ್ಟ ಭಕ್ತಿ ಭೀಮ ಬಸವ,
ಗಮನಸುಮನ ನಿಯತ ಸಮಯ ಭಕ್ತರೂಪ ಬಸವ,
ಪ್ರಾಣಕಾಯರೂಪ ತತ್ವಜ್ಞಾನ ವಿನಾಯಕ ಬಸವ,
ಕಪಿಲಸಿದ್ಧಮಲ್ಲಿನಾಥಯ್ಯಾ, ಪ್ರಾಣಲಿಂಗ ಏಕ ಬಸವ

706
ನಿನಗೆ ನೀನೆ ಕರ್ತನು ಬಸವಾ;
ಎನಗೆ ನೀನೆ ಕರ್ತನು ಬಸವಾ;
ನಾ ಮಾಡುವ ಭಕ್ತಿಗೆ ನೀನೆ ಕರ್ತನು ಬಸವಾ.
ಕರುಣಿ ಕಪಿಲಸಿದ್ಧಮಲ್ಲಿನಾಥ ಬಸವಾ.

729
ನೀಲಕಂಧರನೆಂಬಾತ ಬಾಲತ್ವದಲ್ಲಿ
ಭಾಮಿನಿಯ ಒಡಗೂಡಿ ಸಂದು ಸವೆದು,
ಇದು ಕ್ರೀ ಇದು ನಿಃಕ್ರೀ, ಇದು ಶುದ್ಧ ಇದು ಸಿದ್ಧ ಇದು ಪ್ರಸಿದ್ಧ,
ಇದು ಭಾವ ಇದು ನಿರ್ಭಾವವೆಂದು ಅರುಪುವಾಗ
ಪಿಂಡಾಂಡಂಗಳಿಲ್ಲ; ಅಷ್ಟಮೂರ್ತಿ ಕೂಡಿದ ರುದ್ರನಿಲ್ಲ.
ಆನಂದವೆ ಒಡಲಾಗಿಪ್ಪ ಮಹಾತ್ಮನ ನಿಜವ ಕಂಡಾತ ಬಸವಣ್ಣ.
ಬಸವಣ್ಣನೆನಗರುಪಿದ ಗುಣದಿಂದ ಶುದ್ಧನಾದೆನು.
ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ, ಬಸವಣ್ಣನೆನ್ನ ಪರಮಾರಾಧ್ಯರು.

747
ನೋಟದ ಭಕ್ತಿ ಬಸವನಿಂದಾಯಿತ್ತು;
ಕೂಟದ ಜ್ಞಾನ ಬಸವನಿಂದಾಯಿತ್ತು ಕಾಣಾ.
ಎಲ್ಲಿಯ ಶಿವಜ್ಞಾನ ಎಲ್ಲಿಯ ಮಾಟಕೂಟ ಬಸವನಲ್ಲದೆ?
ಮಹಾಜ್ಞಾನ ಮಹಾಪ್ರಕಾಶ ಬಸವಣ್ಣನ ಧರ್ಮವಯ್ಯಾ,
ಕಪಿಲಸಿದ್ಧಮಲ್ಲಿನಾಥಯ್ಯಾ.

771
ಪಾವನವಾದೆನು ಬಸವಣ್ಣಾ,
ನಿಮ್ಮ ಪಾವನಮೂರ್ತಿಯ ಕಂಡು.
ಪರತತ್ವವನೈದಿದೆ ಬಸವಣ್ಣಾ,
ನಿಮ್ಮ ಪರಮಸೀಮೆಯ ಕಂಡು.
ಪದ ನಾಲ್ಕು ಮೀರಿದೆ ಬಸವಣ್ಣಾ,
ನಿಮ್ಮ ಪರುಷಪಾದವ ಕಂಡು
ಕಪಿಲಸಿದ್ಧಮಲ್ಲಿಕಾರ್ಜುನಯ್ಯನ ಕೂಡಿದೆ;
ಬಸವಣ್ಣಾ, ಬಸವಣ್ಣಾ, ಬಸವಣ್ಣಾ, ನೀನು ಗುರುವಾದೆಯಾಗಿ.

778
ಪೂಜೆಯ ಉಪಕರಣ ನೋಡಿ ಎನ್ನ ಮನಕ್ಕೆ ಬಹಳ ಬಾಧೆಯಾಯಿತ್ತು.
ಗುರುವಿನ ಪರಮಗುರು ಸಂಗನ ಬಸವಯ್ಯ ಪೂಜಿಸಬಂದಡೆ,
ಕಪಿಲಸಿದ್ಧಮಲ್ಲಿಕಾರ್ಜುನನ ಬಾಲಕ ಅಂಗವಿರಹಿತನಾದನು,
ಶ್ರೀಗುರುಮೂರ್ತಿಯೆ.

786
ಪ್ರಭುವಿನ ದಯದಿಂದ ಬಂದೆನಿಲ್ಲಿಗೆ
ಇಷ್ಟಲಿಂಗದ ಮರ್ಮವನರಿದೆ.
ಗುರು ಬಸವನ ದಯೆ, ಚೆನ್ನಬಸವನ ಕೃಪೆ.
ಇದಕ್ಕೆ ಮಿಗಿಲಾಗಿ ಕಂಡು ಧನ್ಯನಾದೆ,
ಕಪಿಲಸಿದ್ಧಮಲ್ಲಿಕಾರ್ಜುನಾ.

807
ಬಸವಣ್ಣನ ನೆನೆದು ಮಾಡುವ ಭಕ್ತಿ ನಡೆವುದಯ್ಯಾ;
ಬಸವಣ್ಣನ ನೆನೆಯದೆ ಮಾಡುವ ಭಕ್ತಿ ಎಳತಟವಯ್ಯಾ
ಕಪಿಲಸಿದ್ಧಮಲ್ಲಿನಾಥಯ್ಯಾ.

809
ಬಸವಣ್ಣನೇ ತಾಯಿ, ಬಸವಣ್ಣನೇ ತಂದೆ,
ಬಸವಣ್ಣನೇ ಪರಮಬಂಧುವೆನಗೆ.
ವಸುಧೀಶ ಕಪಿಲಸಿದ್ಧಮಲ್ಲಿಕಾರ್ಜುನ,
ನಿಮ್ಮ ಹೆಸರಿಟ್ಟ ಗುರು ಬಸವಣ್ಣನಯ್ಯಾ.

810
ಬಸವಣ್ಣ ಬಸವಣ್ಣ ಭಕ್ತಿ ಬೀಜ ನಷ್ಟ.
ಬಸವಣ್ಣ ಬಸವಣ್ಣ ಬಸವಣ್ಣ ಮುಕ್ತಿಬೀಜ ನಷ್ಟ.
ಬಸವಣ್ಣ ಮೋಕ್ಷವೆಂಬುದು ಮುನ್ನವೆ ಅಡಗಿತ್ತು.
ಬಸವಣ್ಣ ತೋರದೆ ಬೀರದೆ ಹೋದೆಹೆನೆಂಬೆ,
ಮಹಾಜ್ಞಾನಿ ಬಸವಣ್ಣಾ, ನೀನೆಲ್ಲಿಯಡಗಿದೆಯೊ
ಕಪಿಲಸಿದ್ಧಮಲ್ಲಿನಾಥ ಬಸವಾ?

811
ಬಸವನ ಹಾಡದವರ, ಬಸವನ ಹೊಗಳದವರ
ಬಸವಾಕ್ಷರತ್ರಯದ ಜಪವಿಲ್ಲದ ದೆಸೆಗೇಡಿ ಮನುಜರ
ಎನ್ನತ್ತ ತೋರದಿರಯ್ಯಾ, ತಂದೆ
ವಿಷಮಾಕ್ಷ ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ.

812
ಬಸವನನು ಹೊಗಳುವವರ, ಬಸವನನು ನೆನೆವವರ,
ಬಸವನನು ಗುರು ಚರ ಇಷ್ಟವೆನಿಪ
ಸದಮಲಜ್ಞಾನಪ್ರಕಾಶ ಸದ್ವರ್ತನರ
ಹೊರೆಯೊಳಗೆನ್ನನಿರಿಸಯ್ಯಾ ಗುರುವೆ,
ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ.

813
ಬಸವನೇ ಮಾತೆಯಯ್ಯ, ಬಸವನೇ ತಾತನಯ್ಯ.
ಬಸವನೇ ಇಹಪರಕೆ ದಾತ, ನಾಥ.
ಬಸವಾಕ್ಷರತ್ರಯದ ಸೋಪಾನವಿಡಿದೀಗ
ತ್ರೈಲಿಂಗಕ್ಕೆ ಆನು ಮೂಲವಾದೆ.
ಬಸವ ಚೆನ್ನಬಸವ ಪ್ರಭುವಿನ ಕರುಣದಿಂದ
ದೆಸೆಯೆರಡುಗೆಟ್ಟೆನಯ್ಯಾ,
ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ.

815
ಬಸವಾ ಬಸವಾ, ನಿಮ್ಮಿಂದ ಕಂಡೆನಯ್ಯಾ ಭಕ್ತಿಯ.
ಬಸವಾ ಬಸವಾ, ನಿಮ್ಮಿಂದ ಕಂಡೆನಯ್ಯಾ ಜ್ಞಾನವ.
ಬಸವಾ ಬಸವಾ, ನಿಮ್ಮಿಂದ ಕಂಡೆನಯ್ಯಾ ವೈರಾಗ್ಯವ.
ಕರುಣಿ ಕಪಿಲಸಿದ್ಧಮಲ್ಲಿನಾಥಯ್ಯಾ,
ನಿಮಗೂ ಎನಗೂ ಬಸವಣ್ಣನೆ ಶಿವಪಥಿಕನಯ್ಯಾ.

816
ಬಸವ ಬಸವಾ, ಭವರೋಗ ವೈದ್ಯ,
ಬಸವ ಬಸವಾ, ನಿನ್ನರಿವು ನೀನೆ.
ಬಸವ ಬಸವಾ, ಕಾಲಕಲ್ಪಿತನಷ್ಟ ನೀನೆ.
ಬಸವಾ, ಕಪಿಲಸಿದ್ಧಮಲ್ಲಿನಾಥನಲ್ಲಿ
ನೀನೆಲ್ಲಿ ಅಡಗಿದೆಯೊ ಬಸವಾ.

822
ಬಾಲನಾಗಿದ್ದಂದು ಕರೆದು ಎತ್ತಿ ಮ್ದುಕ್ಕಿ
ಮೊಲೆವಾಲಕೊಟ್ಟು ಸಲಹಿದ ಬಸವಾ.
ಮೂಲ ಶಿವಜ್ಞಾನಕ್ಕೆ ದೀಪ್ತಿಯನಿಕ್ಕಿ ಸಲಹಿದ ಬಸವಾ.
ಎನಗೆ ನೀನೆ ಗತಿಯಯ್ಯಾ,
ಕಪಿಲಸಿದ್ಧಮಲ್ಲಿನಾಥಯ್ಯಾ ಬಸವಾ.

833
ಬೇಡ ಬೇಡಯ್ಯ ಕಾಡಲಾಗದು ಎನ್ನ
ರೂಢೀಶ ನೀನೆನ್ನ ತಡಿಗೆ ಚಾಚಾ.
ಗಾಡಿಗತನದಿಂದ ನೋಯಿಸಿದಡೆ
ನೋಡಿ ಮೊರೆಯಿಡುವೆನೈ ಬಸವಣ್ಣಂಗೆ.
ಆರೂಢನೆ ನಿಮ್ಮ ಗಾರುಮಾಡಿಸುವರೆಮ್ಮವರಯ್ಯಾ,
ಕಪಿಲಸಿದ್ಧಮಲ್ಲಿಕಾರ್ಜುನಾ.

840
ಭಕ್ತಿಗೆ ಭಕ್ತ ಬಸವಣ್ಣನಯ್ಯಾ.
ಮುಕ್ತಿಗೆ ಯುಕ್ತ ಬಸವಣ್ಣನಯ್ಯಾ.
ಮುಕ್ತಿಗೆ ಮುಕ್ತ ಬಸವಣ್ಣನಯ್ಯಾ,
ಕಪಿಲಸಿದ್ಧಮಲ್ಲಿನಾಥಯ್ಯಾ.

846
ಭಕ್ತಿರೂಪನು ಬಸವ , ನಿತ್ಯರೂಪನು ಬಸವ,
ಮತ್ತಾನಂದಸ್ವರೂಪ ಬಸವಣ್ಣನು.
ಸತ್ತುರೂಪನು ಬಸವ, ಚಿತ್ತುರೂಪನು ಬಸವ;
ಎತ್ತೆತ್ತ ನೋಡಿದಡೆ ಅತ್ತತ್ತ ಪರಿಪೂರ್ಣನಾಗಿಪ್ಪ
ಬಸವಣ್ಣನಿಂ ನಿತ್ಯಸುಖಿಯಾಗಿರ್ದೆನೈ
ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ.

883
ಮರುಳುತನದಲಿ ಭ್ರಮಿಸಿ ಫಲಪದಕ್ಕೊಳಗಪ್ಪವನ
ಎತ್ತಿದ ಗುರು ಬಸವಣ್ಣ.
ಆಜ್ಞಾಸಿದ್ಧನನರ್ಚಿಸುವ ಪರಿಯಾಯವಿದೆಂದು
ತೋರಿದ ಗುರು ಬಸವಣ್ಣ.
ಸರ್ವಸ್ವವನೊಪ್ಪಿಸೆ ಎನ್ನ ತನ್ನಂತೆ ಮಾಡಿದ
ಕಪಿಲಸಿದ್ಧಮಲ್ಲಿಕಾರ್ಜುನ.

885
ಮಹವನೊಡಗೂಡಿದ ತನು ನಿನ್ನಕ್ಷರತ್ರಯವು ಬಸವಣ್ಣಾ ;
ಕರುಣಾಮೃತಸಹಿತ ಇರುತಿಪ್ಪವಯ್ಯಾ ;
ಕರಣ ಕಾನನದೊಳಗೆ ಬೆಳಗುತಿಹವಯ್ಯಾ ;
ಸಮತೆ ಸಾಯುಜ್ಯದ ಅನಿಮಿಷಾಕ್ಷರದಿಂದ
ಬಸವಾಕ್ಷರತ್ರಯ ಮಧುರ,
ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ.

907
ಮುಕ್ತಿಯ ಕೂಟಕ್ಕೆ ಮೂಗ ನೀನೆ ಬಸವಾ.
ಭಕ್ತಿಯ ತನುಸಂಬಂಧಿ ನೀನೆ ಬಸವಾ.
ಎನಿತೆನಿತು ಜರಿದಡೂ `ಬಸವಾ' ಎಂಬುದ ಮಾಣುವೆನೆ ಅಯ್ಯಾ?
ಎನಿತೆನಿತು ಕಡಿದಡೂ `ಬಸವಾ' ಎಂಬುದ ಮಾಣುವೆನೆ ಅಯ್ಯಾ?
ಕಪಿಲಸಿದ್ಧಮಲ್ಲಿನಾಥಯ್ಯಾ.

908
ಮುಕ್ತಿಯ ಲಾಂಛನ ಮುಕ್ತಿಯ ರೂಪು ಕಾಣಾ ಬಸವ.
ಭಕ್ತಿಯ ಲಾಂಛನ ಭಕ್ತಿಯ ರೂಪು ಕಾಣಾ ಬಸವ.
ನಮ್ಮ ಕಪಿಲಸಿದ್ಧಮಲ್ಲಿನಾಥಯ್ಯನ ರೂಪು ಕಾಣಾ ಬಸವ.

928
ಮೂರ್ತಿಯ ಮೂಲಕ್ಕೆ ಬಸವನ ಭಕ್ತಿಯೆ ಕಾರಣ.
ಜ್ಞಾನದ ಸಂಬಂಧಕ್ಕೆ ಬಸವ ನೀ ಕಪಿಲಸಿದ್ಧಮಲ್ಲಿನಾಥಯ್ಯ.

954
ಯೋಗಭೂಷಣನೆ,
ನಿಮ್ಮ ನೆರೆಯಲು ಬೇಕು ಬೇಕೆಂಬ ಸದ್ಭಕ್ತರ
ಮನದ ಕೊನೆಯಲ್ಲಿ ತಿಳುಹುವೆ ಅಕ್ಷರವ.
ಬಸವ ಬಸವ ಬಸವ ಎಂಬ ಮಧುರಾಕ್ಷರತ್ರಯದೊಳಗೆ
ತಾನೆ ತೆಂಗ ಒಪ್ಪಿಕ್ಕು ಘನಗುರುವೆ ಬಸವಣ್ಣಾ,
ಕಪಿಲಸಿದ್ಧಮಲ್ಲಿಕಾರ್ಜುನಾ.

968
ಲಿಂಗದಲ್ಲಿ ಸಂಪನ್ನನಾಗಿ ಗುರುವಾದ ಬಸವಣ್ಣ.
ಗುರುವಿನಲ್ಲಿ ಸಂಪನ್ನನಾಗಿ ಜಂಗಮವಾದ ಬಸವಣ್ಣ.
ಜಂಗಮದಲ್ಲಿ ಸಂಪನ್ನನಾಗಿ ತ್ರೈವಿದ್ಯಕ್ಕೆ ವಿದ್ಯಾರೂಪವಾದ ಬಸವಣ್ಣ.
ಕಪಿಲಸಿದ್ಧಮಲ್ಲಿಕಾರ್ಜುನಯ್ಯನಲ್ಲಿ ಬಸವಣ್ಣ ಸಾಕ್ಷಾತ್ ಸಂಪನ್ನನಾದ.

1004
ಶರಣಾರ್ಥಿ ಶರಣಾರ್ಥಿ ಬಸವ ಬಸವಾ ಗುರುವೆ,
ಗುರುವೆ ಬಸವ ಬಸವ ಬಸವಾ
.
ಕಪಿಲಸಿದ್ಧಮಲ್ಲಿನಾಥಯ್ಯಾ,
ನನ್ನಂಗ ನಿನ್ನಂಗ ಬಸವಣ್ಣಂಗರ್ಪಿತವಯ್ಯಾ.

1007
ಶಿವನ ಕೀರ್ತಿ ಬಸವಣ್ಣನ ಧರ್ಮವಯ್ಯಾ,
ಶಿವನ ಸ್ತೋತ್ರ ಬಸವಣ್ಣನ ಧರ್ಮವಯ್ಯಾ,
ಶಿವನ ಮಂತ್ರೋಚ್ಚಾರಣೆ ಬಸವಣ್ಣನ ಧರ್ಮವಯ್ಯಾ,
ಕಪಿಲಸಿದ್ಧಮಲ್ಲಿನಾಥಯ್ಯಾ.

1019
ಶುದ್ಧ ದೀಕ್ಷೆಯೊಳಾನು ಸಿದ್ಧನಾದೆನು ಬಸವ ತಂದೆ,
ಸಿದ್ಧ ದೀಕ್ಷೆಯೊಳಾನು ಸ್ವಯವಾದೆನೈ.
ಶುದ್ಧಸಿದ್ಧವು ಕೂಡಿ ಪ್ರಸಿದ್ಧ ದೀಕ್ಷೆಯೊಳು
ಹೊದ್ದಿ ನಡೆವೆನು ಬಸವಣ್ಣ, ನಿನ್ನವರ ಹೊಲಬಿಗನಾಗಿ.
ಮತ್ತೆ ಪ್ರಸಾದವನು ಐದಾರನೇ ಗ್ರಹಿಸಿ,
ಮತ್ತೆ ಪಾದೋದಕವನೀರೈದ ಧರಿಸಿಯಾನು
ಹುಟ್ಟುಗೆಟ್ಟೆನು ಬಸವಣ್ಣಾ ನಿಮ್ಮ ಕರುಣದಿಂದ.
ಆನಂದಗುರು ಕಪಿಲಸಿದ್ಧಮಲ್ಲೇಶ್ವರನ
ಕಾರಣದ ಶರಣರಿಗೆ ಶಿಶುವಾದೆನು.

1028
ಶ್ರೀಗುರುವೆ ಬಸವಯ್ಯ, ಶ್ರೀಚರವೆ ಬಸವಯ್ಯ.
ಶ್ರೀಮಹಾ ಇಷ್ಟಲಿಂಗ ಬಸವಣ್ಣ
ನು.
ಆರೈದು ಎನ್ನುವನು ಓರಂತೆ ಸಲಹಿದಾ
ಕಾರುಣ್ಯಸುರತರುವೆ ಬಸವಲಿಂಗ
ಭಾವಿಸಿ ಎನ್ನುವನು ಅಜಾತನ ಮಾಡಿದಾತ ಬಸವಣ್ಣ,
ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ.

1130
`ಹರಬಸವಾಯ ನಮಃ' ಎಂದು ಪಾಪದೂರನಾದೆ.
`ಗುರುಬಸವಾಯ ನಮಃ' ಎಂದು ಭವದೂರನಾದೆ.
`ಲಿಂಗಬಸವಾಯ ನಮಃ' ಎಂದು ಲಿಂಗಾಂಕಿತನಾದೆ.
`ಜಂಗಮ ಬಸವಾಯ ನಮಃ' ಎಂದು
ನಿಮ್ಮ ಪಾದಕಮಲದಲ್ಲಿ ಭ್ರಮರನಾದೆ.
ಏಳಾ ಸಂಗನ ಬಸವಗುರು
ಕಪಿಲಸಿದ್ಧ ಮಲ್ಲಿಕಾರ್ಜುನಸ್ವಾಮಿಯೆ

1151
ಹಿಂದೆ ಹಲವು ಯುಗಂಗಳು ತಿರುಗಿ ಬಪ್ಪಾಗ
ಅವನ್ನು ನೀ ಮಾಡಿದೆಯಲ್ಲದೆ ತಮ್ಮಾಜ್ಞೆಯಲಿ ಬಂದುಲ್ಲ.
ಅಯ್ಯ, ನಿನ್ನಾಜ್ಞೆಯಲಿ ಬಂದ ಯುಗಂಗಳು
ಭವಭವದಲ್ಲಿ ಎನ್ನನೆ ಕಾಡಿದುವು,
ಸಂಸಾರವಾಗಿ ಎನ್ನನೆ ಕಾಡಿದುವು,
ಹೊನ್ನು ಹೆಣ್ಣು ಮಣ್ಣು ತ್ರಿವಿಧವಾಗಿ ಎನ್ನನೆ ಕಾಡಿದುವು,
ಆಶಾಪಾಶಂಗಳಾಗಿ ಗುರುವೆ ಬಸವಣ್ಣ
ಅವೆಲ್ಲಾ ನಿಮ್ಮ ಅಧೀನದವು ಮಾಡಿದಡಾದವು,
ಬೇಡಾಯೆಂದಡೆ ಮಾದವು.
ಅವಕ್ಕೆ ಎನ್ನನೊಪ್ಪಿಸದೆ, ನಿನ್ನವ ನಿನ್ನವನೆನಿಸಾ
ಕಪಿಲಸಿದ್ಧಮಲ್ಲಿಕಾರ್ಜುನನ ತೋರಿದ
ಗುರು ಬಸವಣ್ಣಾ.

1165
ಹೆಸರಿಡಬಾರದ ಘನತರ ಲಿಂಗವ ಹೆಸರಿಟ್ಟು,
ವಾಙ್ಮನಕ್ಕಗೋಚರವಪ್ಪ ಲಿಂಗವ ವಾಕ್ಯಕ್ಕೆ ತಂದು,
`ಅತ್ಯ್ಕತಿಷ್ಠದ್ದಶಾಂಗುಲಂ' ಎಂಬ ಲಿಂಗವ ಚಿತ್ತಕ್ಕೆ ತಂದು,
ಸುತ್ತಿರ್ದ ಮಾಯಾಪ್ರಪಂಚವ ಬಿಡಿಸಿದ ಬಸವಣ್ಣ;
ಚಿತ್ತಶುದ್ಧನ ಮಾಡಿದ ಬಸವಣ್ಣ.
ಮಲತ್ರಯಂಗಳ ಹರಿದು, ಶುದ್ಧ ತಾತ್ಪರ್ಯವರುಹಿ,
ಮುಕ್ತನ ಮಾಡಿದ ಗುರು ಬಸವಣ್ಣ.
ಕಪಿಲಸಿದ್ಧಮಲ್ಲಿಕಾರ್ಜುನಯ್ಯನೆನ್ನ ಕಾರಣ ಧರೆಗೆ ಬಂದ.

1308
ಅಣ್ಣನ ನೋಡಿರೆ, ಲೋಕಕ್ಕೆ ಜಗದಕಣ್ಣ ಮದವ ಕಳೆದನು.
ಮುಕ್ಕಣ್ಣನಿಪ್ಪೆಡೆಯ ತೋರಿದನು.
ಅಣ್ಣ ಬಸವಣ್ಣ ವಾಙ್ಮನಕ್ಕಗೋಚರನು.
ಮುಕ್ಕಣ್ಣನವತಾರಂಗಳನು ನಾಟಕವೆಂದರಿದು ಮೆರೆದನು.
ಸತ್ಯಶುದ್ಧ ನಿರ್ಮಳ ಕೈವಲ್ಯ ವಾಙ್ಮನಕ್ಕಗೋಚರ ಬಸವಣ್ಣನು,
ಅಣ್ಣಾ, ನಿಮ್ಮಿಂದ ಶುದ್ಧವ ಕಂಡೆ, ಸಿದ್ಧವ ಕಂಡೆ, ಪ್ರಸಿದ್ಧವ ಕಂಡನು.
ಆರರಲ್ಲಿ ಆಂದೋಳವಾದೆನು, ಆರು ವ್ರತದಲ್ಲಿ ನಿಪುಣನಾದೆನು.
ನೀನೊಂದು ಮೂರಾಗಿ, ಮೂರೊಂದಾರಾಗಿ ತೋರಿದ
ಗುಣವಿಂತುಟಯ್ಯಾ, ಬಸವಣ್ಣ.
ಇನ್ನೆನಗೆ ಆಧಿಕ್ಯವಪ್ಪುದೊಂದಿಲ್ಲ.
ನಾನಿನ್ನು ಉರವಣಿಸಿ ಹರಿವೆ; ಹರಿದು ಭವದಿಂದ ಗೆಲುವೆ;
ತತ್ತ್ವ ಮೂವತ್ತಾರರ ಮೇಲೆ ಒಪ್ಪಿಪ್ಪ ತತ್ವಮಸಿಯನೈದುವೆ.
ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ,
ಬಸವಣ್ಣನ ಪ್ರಸಾದದಿಂದ ಅರಿದಪ್ಪುದೊಂದಿಲ್ಲ.

1311
ಗುರುವಾಗಿ ಬಂದೆನೆಗೆ ದೀಕ್ಷೆಯ ಮಾಡಿರಿ;
ಲಿಂಗವಾಗಿ ಬಂದೆನ್ನ ಮನದ ಮನವ ಕಳೆದಿರಿ;
ಜಂಗಮವಾಗಿ ಬಂದೆನ್ನ ಪ್ರಪಂಚಕತನವ ಕಳೆದು
ಪರಮ ಸೀಮೆಯ ಮಾಡಿರಿ.
ಇಂತಿವೆಲ್ಲವೂ ಬಸವಣ್ಣನಾಗಿ ಎನಗೆ
ಪ್ರಸಾದವ ನೀಡಿ ಸಲಹಿದ, ಕಪಿಲಸಿದ್ಧಮಲ್ಲಿಕಾರ್ಜುನ.
ಇನ್ನೆನಗತಿಶಯವೇನೂ ಇಲ್ಲ.

1312
ಅರ್ಪಿತ ಅವಧಾನ ಮುಖಂಗಳು ಎಲ್ಲರಿಗೆ ಸುಲಭವೆ,
ಅನಾದಿ ಸಂಸಿದ್ಧವಾಗಿ ಬಂದ ಬಸವಣ್ಣಂಗಲ್ಲದೆ?
ತ್ರೈಲಿಂಗಮೂಲಕ್ಕೆ ಮಂತ್ರಾದಿರೂಪ ಬಸವಣ್ಣ.
ತೆಂಗಪ್ರಸಾದಕ್ಕೆ ಅರ್ಹ ಬಸವಣ್ಣ.
ಮೂರುಂಗ ಒಂದಾದ ಮೂರ್ತಿ ಬಸವಣ್ಣ.
ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ,
ನೀ ಸಾಕ್ಷಿಯಾಗಿ ಬಸವಣ್ಣನ ನೆನೆವವರು ನೀನಹರು.

1313
ಪ್ರಥಮನಾಮಕ್ಕೀಗ ಬಸವಾಕ್ಷರವೆ ಬೀಜ.
ಗುರುನಾಮ ಮೂಲಕ್ಕೆ ಅಕ್ಷರಾಂಕ.
ಬಸವಣ್ಣ ಬಸವಣ್ಣ ಬಸವಣ್ಣ ಎಂದೀಗ
ದೆಸೆಗೆಟ್ಟೆನೈ ಗುರುವೆ ಕಪಿಲಸಿದ್ಧಮಲ್ಲಿಕಾರ್ಜುನಾ.

1314
ಆಯಾಧಾರಕ್ಕೆ ಮೂಲ ತಾ ಬಸವಣ್ಣ.
ಹೋದನೈ ಭಕ್ತಿಯೊಳಗೆ ಹೊಲಬುದಪ್ಪಿ.
ಊರನರಿಯದ ಗ್ರಾಮ, ಹೊಲಬುದಪ್ಪಿದ ಸೀಮೆ;
ಆತನಾನತದಿಂದಾನು ನೀನಾದೆನೈ.
ಬಸವಣ್ಣ ಬಸವಣ್ಣ ಬಸವಣ್ಣ ಎಂಬ ನಾಮಾಕ್ಷರದೊಳಗೆ
ದೆಸೆಗೆಟ್ಟೆನೈ ಗುರುವೆ, ಕಪಿಲಸಿದ್ಧಮಲ್ಲಿಕಾರ್ಜುನಾ.

1325
ಅಯ್ಯಾ, ನಿಮ್ಮ ಶರಣ ಬಸವಣ್ಣನಿಂದ ಲಿಂಗವ ಕಂಡು
ಒಳಗೆ ಬೈಚಿಟ್ಟುಕೊಂಡೆನಯ್ಯಾ.
ಅಯ್ಯಾ ನಿಮ್ಮ ಶರಣ ಬಸವಣ್ಣನಿಂದ
ಲಿಂಗವ ಹಾಸಿ ಹೊದೆದುಕೊಂಡೆನಯ್ಯಾ.
ಅಯ್ಯಾ, ನಿಮ್ಮ ಶರಣ ಬಸವಣ್ಣನಿಂದ ನಿರವಯವಾದೆನು.
ಎಲೆ ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ,
ನಿಮ್ಮ ಶರಣ ಬಸವಣ್ಣಂಗೆ ನಮೋ ನಮೋ ಎನುತಿರ್ದೆನು.

1400
ಅಯ್ಯಾ, ನಿಮ್ಮ ಶರಣರಲ್ಲದವರ ಮನೆ ಕೆಮ್ಮನೆ ಕಂಡಯ್ಯಾ.
ನಿಮ್ಮ ಶರಣರ ಮನೆ ನೆರೆವನೆ ನೋಡಾ ಎನಗೆ.
ಸಿರಿಯಾಳ ಮನೆಗಟ್ಟಿ ಬೇರೂರಿಗೆ ಒಕ್ಕಲು ಹೋದ.
ದಾಸಿಮಯ್ಯ ಮನೆಗಟ್ಟಿ ವ್ಯವಹಾರನಾಗಿ ಹೋದ.
ಸಿಂಧುಬಲ್ಲಾಳ ಮನೆಗಟ್ಟಿ ಕೈಕೂಲಿಕಾರನಾಗಿ ಹೋದ.
ಗಂಗೆವಾಳುಕರು ಮನೆಗಟ್ಟಿ ಲಿಂಗದ ಹೊಲಬನರಿಯದೆ ಹೋದರು.
ಇವರೆಲ್ಲರು ಮನೆಯ ಮಾಡಿ ಮಹದ್ವಸ್ತುವನರಿಯದೆ,
ಸಾಲೋಕ್ಯ ಸಾಮೀಪ್ಯ ಸಾರೂಪ್ಯ ಸಾಯುಜ್ಯವೆಂಬ ಪದವಿಗೊಳಗಾದರು.
ನಿಮ್ಮ ಸಂಗನಬಸವಣ್ಣ ಬಂದು ಕಲ್ಯಾಣದಲ್ಲಿ ಮನೆಯ ಕಟ್ಟಿದಡೆ,
ಮರ್ತ್ಯಲೋಕವೆಲ್ಲವು ಭಕ್ತಿಸಾಮ್ರಾಜ್ಯವಾಯಿತ್ತು.
ಆ ಮನೆಗೆ ತಲೆವಾಗಿ ಹೊಕ್ಕವರೆಲ್ಲರು ನಿಜಲಿಂಗ ಫಲವ ಪಡೆದರು.
ಆ ಗೃಹವ ನೋಡಬೇಕೆಂದು ನಾನು ಹಲವು ಕಾಲ ತಪಸಿದ್ದೆನು.
ಕಪಿಲಸಿದ್ಧಮಲ್ಲಿನಾಥಾ,
ನಿಮ್ಮ ಶರಣ ಸಂಗನಬಸವಣ್ಣನ ಮಹಾಮನೆಗೆ
ನಮೋ ನಮೋ ಎಂದು ಬದುಕಿದೆನು.

1839
ನಿರಾಕಾರದ ಮೂರ್ತಿಯ ಆಕಾರಕ್ಕೆ ತಂದೆಯಲ್ಲಾ ಬಸವಾ!
ಆಕಾರದ ಮೂರ್ತಿಯ ಹೃದಯಕಂಜದಲ್ಲಿ ವಾಸಗೊಂಡು
ತೋರಿದೆಯಲ್ಲಾ ಬಸವಾ!
ಈ ಆಕಾರಕ್ಕೆ ತಂದು, ಭಕ್ತಿಯನನುಗೈದು,
ಗುರುವಶದಲ್ಲಿ ಬೆಳೆದೆಯಲ್ಲಾ ಬಸವಾ?
ಇನ್ನಾಕಾರವ ನಿರಾಕಾರದಲ್ಲಿ ಅನುಗೊಳಿಸಬೇಕೆಂದು,
ಕಪಿಲಸಿದ್ಧಮಲ್ಲಿಕಾರ್ಜುನನ ಹೃದಯದಲ್ಲಿ
ಮರೆಯಾದೆಯಲ್ಲಾ ಬಸವಾ!

ಟಿಪ್ಪಣಿ: ವಚನಗಳ ತೋರಿಸಿದ ಸಂಖ್ಯೆಯು ಸಮಗ್ರ ವಚನ ಸಾಹಿತ್ಯ ಸಂಪುಟದಲ್ಲಿಯ ವಚನ ಸಂಖ್ಯೆಯನ್ನು ಸೂಚಿಸುತ್ತದೆ. (ಸಮಗ್ರ ವಚನ ಸಾಹಿತ್ಯ ಸಂಪುಟ - ೧ ರಿಂದ ೧೫, ಪ್ರಕಾಶಕರರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರಕಾರ, ಬೆಂಗಳೂರು.)

ಪರಿವಿಡಿ (index)
*
Previous ವೀರ ವೀರಾಗಿಣಿ ಅಕ್ಕಮಹಾದೇವಿ ಚಿನ್ಮಯಜ್ಞಾನಿ ಚೆನ್ನಬಸವಣ್ಣ Next
cheap jordans|wholesale air max|wholesale jordans|wholesale jewelry|wholesale jerseys