ಕಕ್ಕೇರಿ: ಡೋಹರ ಕಕ್ಕಯ್ಯನವರ ಐಕ್ಯಸ್ಥಳ
|
|
ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ಕಕ್ಕೇರಿ ಗ್ರಾಮದ ಬಳಿ ಶರಣ ಡೋಹರ ಕಕ್ಕಯ್ಯನವರ ಐಕ್ಯಸ್ಥಳ (ಸಮಾಧಿ ಸ್ಥಳ)
12ನೇ ಶತಮಾನದಲ್ಲಿ ಶ್ರೀ ಚನ್ನಬಸವಣ್ಣನವರ ಜತೆ ನಡೆದು ಹೋಗುವ ವೇಳೆ ಡೋಹರ ಕಕ್ಕಯ್ಯನವರು ಲಿಂಗ್ಯೆಕ್ಯರಾಗಿದ್ದರಿಂದ ಈ ಗ್ರಾಮ 'ಕಕ್ಕೇರಿ' ಎಂದು ನಾಮಕರಣಗೊಂಡಿದೆ.
ಶರಣ ಕಕ್ಕಯ್ಯ ಇಷ್ಟಲಿಂಗನಿಷ್ಟ, ಆಚಾರ ಸಂಪನ್ನ, ಜೊತೆಗೆ ಆತ ಗಣಾಚಾರಿ. ಶಿವನಿಂದೆ ಕೇಳದ ನಿಷ್ಠೆ. ಲಿಂಗವನ್ನು ಕಲ್ಲೆಂದವನನ್ನು ಶಿಕ್ಷಿಸಲೂ ಆತ ಹಿಂಜರಿಯಲಿಲ್ಲ. ಕೀಳು ಕುಲದಲ್ಲಿ ಹುಟ್ಟಿದ ತನ್ನನ್ನು ದೀಕ್ಷೆಯ ಮೂಲಕ ಪಾವನ ಮಾಡಿದ್ದನ್ನು ಆತ ಕೃತಜ್ಞತೆಯಿಂದ ನೆನೆದಿದ್ದಾನೆ.
ಡೋಹರ ಕಕ್ಕಯ್ಯ ಅನುಭವ ಮಂಟಪದಲ್ಲಿ ಪಾಲ್ಗೊಂಡು ಶರಣರೊಡನಾಡಿ ಅನುಭಾವ ಸಂಪನ್ನನೆನಿಸಿದನು. ಆತನು ವಚನಗಳನ್ನು ರಚಿಸಿದ್ದಾನೆ. ಆತನ ಆರು ವಚನಗಳು ದೊರೆತಿವೆ.
ಗಣಾಚಾರಿಯಾದ ಡೋಹರ ಕಕ್ಕಯ್ಯ ಕಲ್ಯಾಣಕ್ರಾಂತಿಯಲ್ಲಿ ವೀರೋಚಿತವಾದ ಪಾತ್ರವಹಿಸಿರುವುದುತಿಳಿಯುತ್ತದೆ. ಉಳವಿಯ ಕಡೆ ಹೊರಟ ಶರಣರ ರಕ್ಷಣೆಗಾಗಿ ಆತ ಹೋರಾಟ ನಡೆಸಿದರು. ಕಾತರವಳ್ಳ ಕಾಳಗದ ನಂತರ ವೈರಿಗಳನ್ನು ಬೇರೆಡೆ ಸೆಳೆದು ಬೆಳಗಾವಿಯ ಕಕ್ಕೇರಿಯ ಕಡೆ ತಿರುಗಿಸಿದನು.
ಕಕ್ಕೇರಿಯ ಬಳಿ ಆತ ಹೋರಾಡುತ್ತ ಹುತಾತ್ಮನಾದಂತೆ ತಿಳಿಯುತ್ತದೆ. ಆತನ ಹೆಸರಿನ ಬಾವಿ ಮತ್ತು ಕೆರೆ ಅಲ್ಲಿ ಇವೆ. ಆತನ ಸಮಾಧಿಯೂ ಕೂಡ ಅಲ್ಲೇ ಇದೆ. ಶರಣ ಉಳವಿಗಾಗಿ, ವಚನ ಸಾಹಿತ್ಯ ಸಂಪದದ ರಕ್ಷಣೆಗಾಗಿ ಹೋರಾಡಿ ಆತ್ಮಾರ್ಪಣೆ ಮಾಡಿದ ಹಿರಿಯ ಶರಣ ಡೋಹರ ಕಕ್ಕಯ್ಯ. ಕಕ್ಕಯ್ಯನ ಒಂದು ವಚನ :
ನೆನೆಯಲರಿಯೆ, ನಿರ್ಧರಿಸಲರಿಯೆ ಮನವಿಲ್ಲವಾಗಿ
ಭಾವಿಸಲರಿಯೆ ಬೆರಸಲರಿಯೆ ಭಾವ ನಿರ್ಭಾವವಾಯಿತ್ತಾಗಿ
ಧ್ಯಾನ ಮೌನವನರಿಯೆ ಧ್ಯಾನಾತೀತ ತಾನಾಯಿತ್ತಾಗಿ
ಜ್ಞಾನ ಜ್ಞೇಯಂಗಳೆಲ್ಲವ ಮಿರಿ
ಅಭಿನವ ಮಲ್ಲಿಕಾರ್ಜುನನಲ್ಲಿ ಪರಮ ಸುಖಿಯಾಗಿರ್ದೆ