298
ಭಂಗದ ಬೆಂಬಳಿಯಲು ಭಂಗವೆಂದರಿಯರು.
ಭಂಗದ ಬೆಂಬಳಿಯಲಾದ ಪ್ರಸಾದಿಯು ಅರ್ಪಿತವನರಿಯ.
ಪ್ರಸಾದದಲ್ಲಿ ಪರಿಣಾಮಿಯಾಗಿ,
ಮಹಾಘನ ಸೋಮೇಶ್ವರನು ಮುಂತಾಗಿ,
ಅರಿವೇ ಅನುಭಾವವಾದ ಪ್ರಸಾದಿ.
299
ಅಂಗದಾಶ್ರಯವ ಕಳೆದು, ಲಿಂಗದಾಶ್ರಯವ ಮಾಡಿದ
ಗುರುವೆ ಶರಣು, ಶ್ರೀಗುರುಲಿಂಗವೆ ಶರಣು,
ಪರಮಸುಖವ ತೋರಿದೆಯಾಗಿ.
ಮಹಾಘನ ಸೋಮೇಶ್ವರನ ಸಾಹಿತ್ಯವ ಮಾಡಿ
ನಿಜ ನಿವಾಸದಲ್ಲಿರಿಸಿದೆಯಾಗಿ ಗುರುವೆ ಶರಣು.
300
ಅಷ್ಟತನುಮೂರ್ತಿ ಶಿವನೆಂಬ ಕಷ್ಟಜೀವಿಗಳನೇನೆಂಬೆನಯ್ಯಾ?
ಯುಗಜುಗಂಗಳು ಪ್ರಳಯವಹಲ್ಲಿ ಧರೆ ಜಲದಲ್ಲಿ ಅಡಗಿತ್ತು,
ಜಲ ಅಗ್ನಿಯಲ್ಲಿ ಅಡಗಿತ್ತು, ಅಗ್ನಿ ವಾಯುವಿನಲ್ಲಿ ಅಡಗಿತ್ತು,
ವಾಯು ಆಕಾಶದಲ್ಲಿ ಅಡಗಿತ್ತು, ಆಕಾಶ ಅತೀತನಲ್ಲಿ ಅಡಗಿತ್ತು,
ಅತೀತ ಆದಿಯೊಳಗಡಗಿತ್ತು, ಆದಿ ಅನಾದಿಯೊಳಡಗಿತ್ತು,
ಅನಾದಿ ನಿಜದೊಳಡಗಿತ್ತು.
ಇಂತೀ ಅಷ್ಟತನು ಒಂದರೊಳಗೊಂದಳಿವಲ್ಲಿ, ಒಂದರೊಳಗೊಂದು ಹುಟ್ಟುವಲ್ಲಿ,
ಎಂದಳಿದನೆಂದು, ಹುಟ್ಟಿದನೆಂದು ಬಲ್ಲವರುಂಟೆ?
ಹುಟ್ಟಿದನಳಿದವನೆಂಬ ಶಬ್ದವ ನುಡಿಯಲಾಗದು.
ಇದು ಕಾರಣ,
ನಮ್ಮ ಮಹಾಘನ ಸೋಮೇಶ್ವರನು ಮಾಡಿದಡಾದವು,
ಬೇಡಾ ಎಂದಡೆ ಮಾದವು.
301
ಅಂತರಂಗದಲ್ಲಿ ಆಯತವನರಿದವಂಗೆ, ಬಹಿರಂಗದಲ್ಲಿ ಹಮ್ಮೆಲ್ಲಿಯದಯ್ಯ.
ಅಂತರಂಗದಲ್ಲಿ ಅನುಮಿಷನಾಗಿ ನಿರಂತರ ಲಿಂಗಸುಖಿ ನೋಡಯ್ಯಾ.
ಸರ್ವೇಂದ್ರಿಯ ಸಮ್ಮತವಾಯಿತ್ತು
ಮಹಾಘನ ಸೋಮೇಶ್ವರ ಮುಂತಾಗಿ.
302
ಆಯುಃ ಕರ್ಮ ಚ ವಿತ್ತಂ ಚ ವಿದ್ಯಾ ನಿಧನಮೇವ ಚ- ಎಂದು,
ಇದಕ್ಕಂಜಿ ಉಮ್ಮಳಿಸುವ ಮಾಯಾಪ್ರಸೂತ ಮನವ ನೋಡ!
ಆಯುಷ್ಯವೇ ಲಿಂಗ, ಶ್ರೀಯೇ ಜಂಗಮ! ನಿಧನವೆ ಸುಜ್ಞಾನ,
ವಿದ್ಯವೆ ಶಿವಮಂತ್ರ, ದೇಹವೆ ದಾಸೋಹಮ್ಮೆಂದು ಶ್ರೀಗುರು ಬರದನಾಗಿ!
ಹೊಟ್ಟೆಯ ಶಿಶುವಿಂಗೆ ಬೇರೆ ಬಟ್ಟಲ ಬಯಸುವರೊಳರೆ?
ಮಹಾಘನ ಸೋಮೇಶ್ವರನಲ್ಲಿ ಅಯೋನಿಸಂಭವನಾದ ಶರಣಂಗೆ.
303
ಇನನ ಕಂಡ ತಮದಂತಾಯಿತ್ತೆನ್ನ ಗುರುವಿನುಪದೇಶ,
ವಾಯುವಿನ ಕೈಯ ಸೊಡರಿನಂತಾಯಿತ್ತೆನ್ನ ಗುರುವಿನುಪದೇಶ,
ಉರಿಯ ಮುಖದೊಳಗಿಪ್ಪ ಕರ್ಪುರದಂತಾಯಿತ್ತೆನ್ನ ಗುರುವಿನುಪದೇಶ.
ಮಹಾಘನ ಸೌರಾಷ್ಟ್ರ ಸೋಮೇಶ್ವರನ
ಸದ್ಗುರುವೆನ್ನ ಕರಸ್ಥಲಕ್ಕೆ ಕೃಪೆಮಾಡಿದ ಕಾರಣ
ಸಕಲಪ್ರಪಂಚು ಬಿಟ್ಟೋಡಿತ್ತು.
304
ಗುರುಲಿಂಗದ ಕೃಪೆಯಿಂದ ಸಜ್ಜನ ಶರಣರ ಸಂಗಸುಖವ ಕಂಡೆ.
ಏನೆಂದುಪಮಿಸುವೆನಯ್ಯಾ, ಗುರುಲಿಂಗದ ಮಹಿಮೆಯನು?
ಮಹಾಘನ ಸೋಮೇಶ್ವರನೆಂಬ ಗುರುಲಿಂಗವ ತೋರಿದನಾಗಿ.
305
ಗುರುಶಿಷ್ಯರಿಬ್ಬರೂ ಸಹಪಂಕ್ತಿಯಲ್ಲಿ ಲಿಂಗಾರ್ಚನೆ ಮಾಡಿಹೆವೆಂಬರಯ್ಯಾ!
ಹೋ! ಹೋ! ಬಾಲಭಾಷೆಯ ಕೇಳಲಾಗದು.
ಅಲ್ಲಲ್ಲ, ಮಾಡಬಹುದು. ಅದೇನು ಕಾರಣ?
ಗುರುವಿನ ಅರಿವಿನ ಹರಿವನರಿಯಬಲ್ಲಡೆ ಮಾಡಬಹುದು, ಮಾಡಬಹುದು.
ಶಿಷ್ಯ ಪ್ರಸಾದವೆಂಬುಭಯಸಂದೇಹ ಹಿಂದುಳಿಯಬಲ್ಲಡೆ,
ಮಾಡಬಹುದು, ಮಾಡಬಹುದು.
ಇದಲ್ಲದೆ ಲಿಂಗಪ್ರಸಾದದ ಮೇಲೆ ಗುರುಪ್ರಸಾದವನಿಕ್ಕಿಹೆನೆಂಬ
ಶಿವದ್ರೋಹಿಗಳನೇನೆಂಬೆ! ಕೊಂಡೆಹೆನೆಂಬ ಗುರುದ್ರೋಹಿಗಳನೇನೆಂಬೆ!
ಇದು ಕಾರಣ, ಮಹಾಘನಸೋಮೇಶ್ವರಾ,
ನಿಮ್ಮಲ್ಲಿ, ಇವರಿಬ್ಬರ ಗುರು ಶಿಷ್ಯರೆಂದೆನಾದಡೆ,
ಎನ್ನನದ್ದಿ ನೀನೆದ್ದು ಹೋಗಯ್ಯಾ?
306
ವ್ಯಾಪ್ತಾವ್ಯಾಪ್ತಿಯೆಂಬುದು ಲಿಂಗಭಾವ, ತನ್ನಲ್ಲಿ ತಾ ನಿಂದುದು,
ದೃಷ್ಟವಾಗಿ, ಮೋಹವಾಗಿ, ತನ್ನಲ್ಲಿ, ತಾ ನಿಂದುದು,
ಅರಸುವ ಬೆರಸುವ ಭೇದವು ತಾನಾಗಿ ನಿಂದುದು,
ಮಹಾಘನಸೋಮೇಶ್ವರನೆಂಬ ಶಬ್ದವನೊಳಕೊಂಡಿತ್ತು.
307
ಸಜ್ಜನವೆ ಮಜ್ಜನ, ಸದಾಚಾರವೆ ಧೂಪಾರತಿ,
ಆಗಮವೆ ಪೂಜೆಯಾಗಿ ಅಂಗವಿರಹಿತವಾದಲ್ಲಿ
ಉದಯಾಸ್ತಮಾನವಿಲ್ಲದ ಲಿಂಗಾರ್ಚನೆ,
ಮಹಾಘನಸೋಮೇಶ್ವರಾ, ನಿಮ್ಮ ಶರಣಂಗೆ.
ಗ್ರಂಥಋಣ: ಸಮಗ್ರ ವಚನ ಸಂಪುಟಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು
*