Previous ಮಲ್ಲಿಕಾರ್ಜುನ ಪಂಡಿತಾರಾಧ್ಯ ಬೊಕ್ಕಸದ ಚಿಕ್ಕಣ್ಣ Next

ಕಂಬದ ಮಾರಿತಂದೆ ವಚನಗಳು

1
ಕಾಯದಿಂದ ಕರ್ಮವ ಕಂಡು,
ಭಾವದಿಂದ ಲಿಂಗವ ಕಂಡು
ಲಿಂಗದಿಂದ ಸ್ವಾನುಭಾವವಾಗಿ,
ಅಂಗದ ಸಂಗಕ್ಕೆ ಹೊರಗಾಯಿತ್ತು
ಕದಂಬಲಿಂಗವನರಿಯಲಾಗಿ
2
ಕಾಯದಿಂದ ಸತ್ಕ್ರೀಯ ಕಂಡೆ.
ಸತ್ಕ್ರೀಯಿಂದ ಸದ್ಭಾವವ ಕಂಡೆ.
ಸದ್ಭಾವದಿಂದ ನಿಮ್ಮ ನಿಜಮೂರ್ತಿ್ಲಯ ಕಂಡೆ.
ನಿಮ್ಮ ನಿಜಮೂರ್ತಿಯಿಂದ
ಸ್ವಾನುಭಾವವಳವಟ್ಟುದ ಕಂಡೆನಯ್ಯಾ.
ಸ್ವಾನುಭಾವಜ್ಞಾನದಿಂದ ಅಂಗಕರಣೇಂದ್ರಿಯ
ಸೂತಕಪಾತಕಕ್ಕೆ ಹೊರಗಾದೆನಯ್ಯಾ ಕದಂಬಲಿಂಗವೆ,
ನೀವೆನ್ನ ಕರಸ್ಥಲದಲ್ಲಿ ಮೂರ್ತಿಗೊಂಡ ಕಾರಣ,
ನಿಮ್ಮನೆನ್ನ ಸರ್ವಾಂಗದಲ್ಲಿ ಕಂಡೆನಯ್ಯಾ.
3
ಗಂಪಕ್ಕೆ ಸಿಕ್ಕೆ, ಬಲೆಗೊಳಗಾಗೆ,
ಗೂಳಿಯ ಇರಿತದ ಡಾವರಕ್ಕೆ ನಿಲ್ಲೆ,
ಸೆಳೆಗೋಲಿನ ಗಾಣದ ಕೀಟಕವನೊಲ್ಲೆ.
ನಿನ್ನಾಟ ಅದೇತರ ಮಡುವಿನಾಟ ಹೇಳಾ,
ಕದಕತನ ಬೇಡ ಕದಂಬಲಿಂಗಾ.
4
ನಾನಾ ಜನ್ಮಂಗಳಲ್ಲಿ ಬಂದಡೂ,
ನಾನಾ ಯುಕ್ತಿಯಲ್ಲಿ ನುಡಿದಡೂ,
ನಾನಾ ಲಕ್ಷಣಂಗಳಲ್ಲಿ ಶ್ರುತ ದೃಷ್ಟ ಆನುಮಾನಂಗಳ ಲಕ್ಷಿಸಿ
ನುಡಿವಲ್ಲಿ
ಏನನಹುದು ಏನನಲ್ಲಾಯೆಂಬ ಠಾವನರಿಯಬೇಕು.
ಮಾತ ಬಲ್ಲೆನೆಂದು ನುಡಿಯದೆ,
ನೀತಿವಂತನೆಂದು ಸುಮ್ಮನಿರದೆ,
ಆ ತತ್ಕಾಲದ ನೀತಿಯನರಿದು
ಸಾತ್ವಿಕ ಲಕ್ಷಣದಲ್ಲಿಪ್ಪಾತನ ಲಕ್ಷಣವೇ ನಿರೀಕ್ಷಣ
ಕದಂಬಲಿಂಗಾ.

5
ಪಶುಪಾಷಂಡಿ ಜ್ಞಾನಹೀನ ಶೂನ್ಯವಾದಿ
ಇಂತಿವರುಗಳಲ್ಲಿ ಷಡುಸ್ಥಲಭರಿತ, ತ್ರಿವಿಧಸ್ಥಲಸಂಪೂರ್ಣ,
ಸರ್ವಗುಣಸಂಪನ್ನ, ಸಂಬಂಧಸಂಯೋಗಲಿಂಗಾಂಗಿ
ಅವರಂಗಳವ ಮೆಟ್ಟಿದಡೆ ಅವರೊಂದಾಗಿ ನುಡಿದಡೆ
ಅವರು ಅಂದಿಗೂ ಇಂದಿಗೂ ಎಂದಿಗೂ ಹೊರಗು
ಕದಂಬಲಿಂಗ ಸಾಕ್ಷಿಯಾಗಿ.
6
ಮಹಾ ಘೋರಾರಣ್ಯದಲ್ಲಿ ಹೋಗುತ್ತಿರಲಾಗಿ
ಆಡುವ ನವಿಲ ಕಂಡು,
ಹಾರುವ ಹಂಸೆಯ ಕಂಡು,
ಕೂಗುವ ಕೋಳಿಯ ಕಂಡು,
ಬೆಳಗಾಯಿತ್ತೆಂದು ಹೋಗುತ್ತಿದ್ದೆ ಕದಂಬಲಿಂಗದಲ್ಲಿಗೆ.
7
ಮಹಾ ಅಂಬುಧಿಯಲ್ಲಿ ಹರಿವ ಮತ್ಸ ್ಯಕ್ಕೆ
ನಾನೊಂದು ಬಗೆಯ ಕಂಡೆ.
ಅದು ಅಡಗುವ ಮಡುವ ನೋಡಿ ತ್ರಿವಿಧದ ಸೊಕ್ಕು ತಂದು
ಆ ಮಡುವಿನುದಕದಲ್ಲಿ ಒಡಗೂಡಿ ಕದಡೆ
ಆ ಸೊಕ್ಕು ಮತ್ಸ ್ಯವ ಮುಟ್ಟಿದುದಿಲ್ಲ.
ಅದೆಂತೆಂದಡೆ: ಅದರ ನಾಸಿಕದ ಉಸುರು ಸೂಸಲಿಲ್ಲ
ಕಂಗಳ ದೃಷ್ಟಿ ಅನಿರಸಂಗೊಳಲಿಲ್ಲ.
ಆ ಮತ್ಸ ್ಯದಂಗದ ಕವಚ ದುಸ್ಸಂಗದ ನೀರ ಮುಟ್ಟದಾಗಿ
ಅದು ನಿರಂಗದ ಮತ್ಸ ್ಯ
ಸುಸಂಗದ ಹೊಳೆಯಲ್ಲಿ ನಿರತಿಶಯದಿಂದ ತಿರುಗುತ್ತದೇಕೊ?
ಕದಂಬಲಿಂಗನ ಬಲೆಯ ಹೊಲಬ ಕಂಡು.
8
ಮಾಟ ಕೂಟವೆಂಬ ತೆಪ್ಪವ ಮಾಡಿ,
ಮೂರ್ತಿ ವಿಶ್ವಾಸವೆಂಬ ಕಣೆಯ ಹಿಡಿದು,
ಒತ್ತುತ್ತಿರಲಾಗಿ
ಹಾಯಿ ಮಾರುತನೆಂಬ ಮತ್ಸ ್ಯ.
ಆ ಸರಹು ನೋಡಿ ತೆಪ್ಪವನೊತ್ತುತ್ತಿರಲಾಗಿ
ತ್ರಿವಿಧದ ಸತ್ತೆಯ, ಸರ್ವೆಂದ್ರಿಯ ಬೆಳೆದ ಪಾಸೆಯ
ಮರೆಯಲ್ಲಿ ತಪ್ಪಿಹೋಯಿತ್ತು ಮತ್ಸ ್ಯ.
ಇಂತೀ ಬರಿ ಕುಕ್ಕೆಯ ಹೊತ್ತು
ಮತ್ಸ ್ಯವ ಕಾಣದೆ ವೆಚ್ಚ ಕಡಹಿಲ್ಲ.
ಇದರಚ್ಚಿಗವ ಬಿಡಿಸಾ,
ಕದಕತನ ಬೇಡ ಕದಂಬಲಿಂಗಾ.
9
ವೇದ ಕಲ್ಲಿಯಾಗಿ, ಶಾಸ್ತ್ರ ಮಣಿಯಾಗಿ,
ಪುರಾಣ ತೊಡಕಿನ ಬಂಧದ ನೂಲಾಗಿ,
ಆಗಮದ ಪಸರದಲ್ಲಿ ಆಯತವ ಮಾಡಿ,
ಗುರುವೆಂಬ ತಡಿಯ ಮೆಟ್ಟಿ,
ನಾಭಿಮಧ್ಯವೆಂಬ ಲಿಂಗದ ಜಲವ ಹೊಕ್ಕು,
ಮಹಾಸ್ಥಳಕುಳ ವಿವರಂಗಳೆಂಬ ಮಡುವಿಗೆ ಇಡಲಾಗಿ
ಅಡಗಿದ ಮತ್ಸ ್ಯವೆದ್ದಿತ್ತು.
ಬಲೆಯ ಹೊಲಬ ಕಂಡು
ಅದು ಸ್ಥೂಲಕ್ಕೆ ಸೂಕ್ಷ್ಮವಾಗಿ, ಸೂಕ್ಷ್ಮಕ್ಕೆ ಸ್ಥೂಲವಾಗಿ
ಆ ಕಲ್ಲಿಯ ದ್ವಾರದಲ್ಲಿ ಅಲ್ಲಿಯೆ ನುಸುಳುತ್ತ
ಕಲ್ಲಿಗೆ ಹೊರಗಾಗುತ್ತ, ಮತ್ತಾ ಕಲ್ಲಿಗೆ ಒಳಗಾಗುತ್ತ
ಸ್ಥಲಂಗಳನರಿದು ಹೊರಗಾಗುತ್ತ
ಭಾವಜ್ಞನಾಗಿ ಭಾವವಿರಹಿತನಾದೆಯಲ್ಲಾ
ಮಾವನ ಮಗಳಿಗೆ ಅಣ್ಣನಾದೆಯಲ್ಲಾ
ಚನ್ನಕದಂಬಲಿಂಗಾ.
10
ಸಾಲು ಕೊಡಬೆಗೆ ಹುಗದು.
ಆರು ಕೊಡಬೆಗೆ ಬಾರದು.
ಮೂರು ಕುಳಿಗೆ ಸಿಕ್ಕದು ನೋಡಾ!
ಬಸವಣ್ಣನ ಅಂಗದಲ್ಲಿ ಹರಿದು
ಚೆನ್ನಬಸವಣ್ಣನ ಹೃದಯದಲ್ಲಿ ಮೂಡಿ
ಪ್ರಭುದೇವರ ಕರದಲ್ಲಿ ಸಿಕ್ಕಿದೆಯಲ್ಲಾ.
ಸಿಕ್ಕಿ ನಿನ್ನ ಕುಲಿಶದ ಹೊಲಸೇಕೆ ಅಡಗದು?
ಇಂತೀ ತ್ರಿವಿಧದ ಕಲಸಾಟವ ಬಿಡು,
ಕದಕತನ ಬೇಡ ಕದಂಬಲಿಂಗಾ.
11
ಹರಿವ ಹರಕುಳಿಯಲ್ಲಿ ಕೈಯನಿಕ್ಕಿ ನೋಡಿ
ಅಡಗಿದ್ದ ಆವೆಯ ಹಿಡಿದೆ.
ಒಂದು ಬಿಗಿದ ಬಿಲವ ಕಂಡು
ಏಗೆಯ್ದು ಕೈಯನಿಕ್ಕಿ ನೋಡಿ ಸಾಗಿಸಿ ಹಿಡಿದೆ,
ಉಭಯರಳಗೈಯಣ್ಣನ.
ಇಂತೀ ಸರುಹಿನ ತಪ್ಪಲಲ್ಲಿ
ನೆಪ್ಪ ನೋಡುತ್ತ ಹೋಗುತ್ತಿರಲಾಗಿ
ಮುಂದೆ ಒಂದು ಕಟ್ಟೆ ಕಟ್ಟಿದುದು ಕಂಡೆ.
ಆ ಕಟ್ಟೆಯೊಳಗೆ
ನೀರತಡಿಯಲ್ಲಿ ಕಪೋತ,
ಮಧ್ಯದಲ್ಲಿ ಪೀತ, ಕಡೆಯಲ್ಲಿ ಶ್ವೇತವಾಗಿದ್ದಿತು.
ಈ ತ್ರಿವಿಧದ ನೀರ ಹೊಳದು ನೋಡುತ್ತಿರಲಾಗಿ
ಎನ್ನ ಕಣ್ಣಿನ ಹೊಳಹುಗೂಡಿ ಹೊಳೆಯಿತ್ತೊಂದು ಮತ್ಸ ್ಯ.
ಆ ಹೊಳಹಿನ ಬೆಂಬಳಿಯಲ್ಲಿ ತಿಳಿದು ಕಂಡೆಹೆನೆಂದಡೆ
ಉದಕವನೊಡಗೂಡಿದ ವರ್ಣ,
ವರ್ಣವನೊಡಗೂಡಿದ ಮತ್ಸ ್ಯ ನೋಡಾ.
ಅದು ಎನಗೆ ಅಸಾಧ್ಯ,
ಸಿಕ್ಕಿದವೆರಡೇ ಸಾಕು.
ಆವೆಯ ಹೊಟ್ಟೆಯ ಕಳದು,
ಏಡಿಯ ಕಾಲ ಮುರಿದು,
ಇಷ್ಟೇ ಸಾಕೆಂದು ಬರುತ್ತಿರಲಾಗಿ, ಒಂದು ಉಡುವ ಕಂಡೆ.
ದಡಿಯಲ್ಲಿ ಹೊಯ್ದೆ, ಆ ದಡಿ ಉಡುವಿನೊಳಡಗಿತ್ತು.
ಆ ಉಡು ತ್ರಿವಿಧದ ತಡಿಯಲ್ಲಿ ಒಡಗೂಡಿತ್ತು.
ಇದಕ್ಕೆ ಕಡೆ ನಡು ಮೊದಲ ಹೇಳಾ,
ಕದಕತನ ಬೇಡ ಕದಂಬಲಿಂಗಾ.

ಗ್ರಂಥಋಣ: ೧೫ ಸಮಗ್ರ ವಚನ ಸಂಪುಟಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು. 2001

ಪರಿವಿಡಿ (index)
*
Previous ಮಲ್ಲಿಕಾರ್ಜುನ ಪಂಡಿತಾರಾಧ್ಯ ಬೊಕ್ಕಸದ ಚಿಕ್ಕಣ್ಣ Next