1043
ಅಖಂಡಿತವ ಕಂಡೆನೆಂಬೆ;
ಕಂಡಡೆ ಖಂಡಿಯಾಗಿ ಬ್ರಹ್ಮಾಂಡವಿರಬೇಕು.
ಓದಿದೆನೋದಿದೆನೆಂದೆಂಬೆ
ನಿನ್ನ ಓದು ವಾದಿಂಗೆ ಹೋಯಿತ್ತು.
ಅರಿದೆನರಿದೆನೆಂದೆಂಬೆ
ಅರಿದುದನೆಲ್ಲವನರಿದೆ, ಅರಿಯದುದಕ್ಕೆಂತೊ?
ನವನಾಳವನು ಕಟ್ಟಿ ವಿಕಳನಾಗಲುಬೇಡ.
ಬಳಸಿ ಬಟ್ಟೆಯ ಕಾಣದೆ ಬಾಯ ಬಾಗಿಲ ಹೊದ್ದೆ.
ಮಕ್ಕಳ ತೊಟ್ಟಿಲ ಮೇಲೆ ಕಟ್ಟಿದ ಕೆಂಪಿನ ಹಣ್ಣ
ಪಟ್ಟಿರ್ದು ನಿಲುಕಲು ಬಾರದು
ನೇಹ ನೆಲೆಗೊಳ್ಳದಾಗಿ ನಿಜಭಾವ ನಿಜರೂಪು ನಿಜಭುಜವಿಜಯನು
ಗಜೆಬಜೆಯಿಲ್ಲದ ಮನಕ್ಕೆ ಸಹಜವ ತೆಲುಗೇಶ ತೋರಿದ.
1044
ಕಾಮ ಸನ್ನಿಧನಾಗಿ ತಾ ಚೆಲುವನಾದಡೆ
ಕಾಮಿನೀಜನವೆಲ್ಲಾ ಮೆಚ್ಚಬೇಕು.
ದಾನಗುಣದವನಾಗಿ ಕರೆದೀವನಾದಡೆ
ಯಾಜಕಜನವೆಲ್ಲಾ ಮೆಚ್ಚಬೇಕು.
ವೀರನಾದಡೆ ವೈರಿಗಳು ಮೆಚ್ಚಬೇಕು.
ಖೂಳನಾದಡೆ ತನ್ನ ತಾ ಮೆಚ್ಚಿಕೊಂಬ.
ಎನ್ನ ದೇವ ತೆಲುಗೇಶ್ವರನಲ್ಲಿ ತಾನು ಭಕ್ತನಾದಡೆ
ದೇವರು ಮೆಚ್ಚಿ ಜಗವು ತಾ ಮೆಚ್ಚುವದು.
1045
ಗುರು ಕರುಣವ ಹಡೆದುದಕ್ಕೆ ಚಿಹ್ನವಾವುದೆಂದಡೆ: ಅಂಗದ ಮೇಲೆ ಲಿಂಗಸ್ವಾಯತವಾಗಿರಬೇಕು.
ಅಂಗದ ಮೇಲೆ ಲಿಂಗ ಸ್ವಾಯತವಿಲ್ಲದೆ
ಬರಿದೆ ಗುರುಕರಣವಾಯಿತ್ತೆಂದಡೆ ಅದೆಂತೊ?
ಲಿಂಗವಿಹೀನವಾಗಿ ಗುರುಕರುಣವುಂಟೆ? ಇಲ್ಲ.
ಆ ಮಾತ ಕೇಳಲಾಗದು.
ಇದು ಕಾರಣ, ಲಿಂಗಧಾರಣವುಳ್ಳುದೆ ಸವಾಚಾರ,
ಇಲ್ಲದಿರೆ, ಅನಾಚಾರವೆಂಬೆನಯ್ಯಾ ತೆಲುಗೇಶ್ವರಾ.
1046
ತಲೆಯ ಮೇಲೆ ತಲೆಯುಂಟೆ?
ಗಳದಲ್ಲಿ ವಿಷವುಂಟೆ?
ಹಣೆಯಲ್ಲಿ ಕಣ್ಣುಂಟೆ?
ದೇವರೆಂಬವರಿಗೆಂಟೊಡಲುಂಟೆ?
ತಂದೆ ಇಲ್ಲದವರುಂಟೆ?
ತಾಯಿ ಇಲ್ಲದವರುಂಟೆ?
ಎಲೊ! ನಿನ್ನ ನೊಸಲಲ್ಲಿ ನೇಸರು ಮೂಡದೆ?
ಶಂಭು ತೆಲುಗೇಶ್ವರಾ,
ನಿನಗಲ್ಲದುಳಿದ ದೈವಂಗಳಿಗುಂಟೆ ಕಾಲೊಳು ಕಣ್ಣು?
1047
ಧರೆ ಗಿರಿಯನಂಬರವ ಖರಕಿರಣನ ಪ್ರಭೆಯ,
ಸುರಿವ ಮಳೆ ಉರಿವಗ್ನಿ ಮಾರುತನನು,
ಹರಿವಿರಂಚಿಗಳ ಕುಬೇರ ಇಂದ್ರ ಚಂದ್ರಾಮರರನು,
ಹರನು ಹಡದಲ್ಲಿ ನೆರವಾದವರೊಳರೆ?
ಕರಕಷ್ಟದ ಮಾನವರು ಪರಪುಟ್ಟದ ಮರಿಯಂತೆ
ಹರನ ದಾನವನುಂಡು ಬೇರೆ ಪರದೈವವುಂಟೆಂದು ಬೆಸಕೈವರು.
ಎರಡೇಳು ಲೋಕಕ್ಕೆ ಪರಮಪ್ರಭು
ತೆಲುಗೇಶ್ವರನೊಬ್ಬನೇ ಎಂದೆನ್ನದವನ ಬಾಯಲ್ಲಿಪಾಕುಳ.
1048
ಬ್ರಹ್ಮಾಂಡಕೋಟಿಗಳುರುಳಿ ಬೀಳುವಲ್ಲಿ
ಕಾಕೆಯ ಹಣ್ಣೆಂದು ಒಬ್ಬ ಮೆಲಿದಾನಾ ಶರಣನು.
ಮುಗಿಲ ಮುಟ್ಟುವವನ ಉದ್ದವ ನೋಡಿರೆ!
ಗಗನವ ನುಂಗುವವನ ಬಾಯಗಲವ ನೋಡಿರೆ!! ಎಂಬಂತೆ
ಇಂತಪ್ಪ ಶರಣರು ತೆಲುಗೇಶ್ವರಾ ನಿಮ್ಮವರು.
1049
ಹಳದಿಯ ಸೀರೆಯನುಟ್ಟು,
ಬಳಹದೋಲೆಯ ಕಿವಿಯಲಿಕ್ಕಿ
ಮೊಳಡಂಗೆಯ ಪಿಡಿದು, ಗುಲಗಂಜಿ ದಂಡೆಯ ಕಟ್ಟಿ
ತುತ್ತುರುತುರು ಎಂಬ ಕೊಳಲ ಬಾರಿಸುತ
ಅಪಳ ಚಪಳನೆಂಬ ಉಲಿವ ಗಂಟೆಯ ಕಟ್ಟಿ
ತುತ್ತುರು ಜಂಗುಳಿ ದೈವಗಳನೆಲ್ಲವ ಹಿಂಡುಮಾಡಿ
ಕಾವ ನಮ್ಮ ಶಂಭು ತೆಲುಗೇಶ್ವರನು ಮನೆಯ ಗೋವಳನೀತ.
ಗ್ರಂಥಋಣ: ಸಮಗ್ರ ವಚನ ಸಂಪುಟಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು
*