308
ಏಕಾಕ್ಷರ ದ್ವ್ಯಕ್ಷರ ತ್ರ್ಯಕ್ಷರ ಪಂಚಾಕ್ಷರ.
ಅಕಾರವೇ ಬೀಜ, ಆಕಾರವೇ ಮೂರ್ತಿ.
ಕಕಾ ಕಿಕೀ ಕುಕೂ ಧಾಂ ಧೀಂ ಧೋಂ ಧಾಂ
ಎಂಬ ಶಬ್ದದೊಳಗೆ ತ್ರೈಜಗವೆಲ್ಲಾ.
ಈ ನಾಮನಷ್ಟವಾದಂಗೆ ನಾಮ ಸೀಮೆಯೆಂಬುದೇನು,
ಅನಾಮಿಕ ನಾಚಯ್ಯಪ್ರಿಯ ಚೆನ್ನರಾಮೇಶ್ವರ?
309
ಒಂದೆಂದರಿದಂಗೆ ಎರಡೆಂಬುದಿಲ್ಲ,
ಎರಡೆಂದರಿದಂಗೆ ಮೂರೆಂಬುದಿಲ್ಲ,
ಮೂರೆಂದರಿದಂಗೆ ಮುಟ್ಟಿದ,
ನಾಲ್ಕೆಂದರಿದಂಗೆ ನಗುತಿರ್ದ,
ಐದೆಂದರಿದಂಗೆಯ್ದಿದ,
ಆರೆಂದರಿದಂಗೆ ಮೀರಿದ,
ಏಳೆಂದರಿದಂಗೆ ಎಚ್ಚರಿಸಿದ,
ಎಂಟೆಂದರಿದಂಗೆ ಕಂಟಕವಿಲ್ಲ,
ಒಂಬತ್ತೆಂದರಿದಂಗೆ ಸಂಭಾವಿತ,
ಹತ್ತೆಂದರಿದಂಗೆ ಒಂದೆಂಬುದಿಲ್ಲ.
ಮಾಟ ಕೂಟ ನೋಟ ಶೃಂಗಾರಬೇಟ
ಷೋಡಶೋಪಚಾರ ಕೂಟಕ್ಕೆಂದು ಮಾಡಿದ
ನಾಚಯ್ಯಪ್ರಿಯ ಚೆನ್ನರಾಮೇಶ್ವರ.
310
ಜಂಬೂದ್ವೀಪ ಕಡವರ ದ್ವೀಪ, ಮಧ್ಯಗಿರಿ, ಪಾತಾಳಕ್ಕೆ ಬೇರುವರಿದು
ಈರೆಂಟು ಲಕ್ಷಯೋಜನ ಪರಿಪ್ರಮಾಣ,
ಮೇಲೇಳಿಗೆಯಲ್ಲಿ ಎಂಬತ್ತುನಾಲ್ಕು ಲಕ್ಷ ಯೋಜನ ಪರಿಪ್ರಮಾಣ,
ನಾಚಯ್ಯಪ್ರಿಯ ಚೆನ್ನರಾಮನಾಥನ ಗಣಂಗಳ ಒಡ್ಡೋಲಗ
ಮೂವತ್ತಾರುಲಕ್ಷ ಯೋಜನ ವಿಸ್ತೀರ್ಣ.
311
ವರ್ಮವ ನುಡಿ[ವ]ರೆಂದು ಸಮನಿಸಲಾರೆ.
ತಮ್ಮಾ ನಿಮ್ಮನೆತ್ತಿಕೊಂಡು ನೊಂದೆ,
ತಮ್ಮಾ ನಿಮ್ಮನಿಳುಹಲಾರದೆ ನೊಂದೆ.
ತಮ್ಮಾ ಅಗಮ್ಯ ನಾಚಯ್ಯಪ್ರಿಯ ಚೆನ್ನರಾಮೇಶ್ವರನ ನೆಮ್ಮಿ
ತಮ್ಮನನಿಳುಹಿದೆ.
312
ಹಸಿವಿಂಗೆ ಲಯವಿಲ್ಲ, ವಿಷಯಕ್ಕೆ ಕುಲವಿಲ್ಲ;
ಮರಣಕ್ಕೆ ಮನ್ನಣೆಯಿಲ್ಲ, ಆಸೆಗೆ ಹವಣಿಲ್ಲ,
ವಂಚಕನನಾಮಿಕ ನಾಚಯ್ಯಪ್ರಿಯ ಚೆನ್ನರಾಮಯ್ಯ.
ಗ್ರಂಥಋಣ: ಸಮಗ್ರ ವಚನ ಸಂಪುಟಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು
*