Previous ಸತ್ಯಕ್ಕ ಭರಿತಾರ್ಪಣದ ಚೆನ್ನಬಸವಣ್ಣ Next

ಜಂಗಮಲಿಂಗಪ್ರಭುವೆ ## ವಚನಗಳು

1238
ಅಖಂಡ[ಗೋಳಕಾ]ಕಾರವಾದ ಸ[ಹಜ] ನಿ[ರಂಜನ] ವಸ್ತು
ಲಿಂಗವೆನಿಸುವದಯ್ಯಾ.
ನಿಂದಲ್ಲಿ ಒಂದಾಯಿತ್ತು , ಒಂದಾದಲ್ಲಿ ಉಭಯವಾಗಿತ್ತು.
ಪೂಜಿಸಿದಲ್ಲಿ ಮೂರಾಯಿತ್ತು, ಆಚರಿಸಿದಲ್ಲಿ ಆರಾಯಿತ್ತು.
ಆನಂದಿಸಿದಲ್ಲಿ ಮೂವತ್ತಾರು ಆಯಿತ್ತು.
ಗುಣಿತ ಮಾಡಿದಲ್ಲಿ ಇನ್ನೂರ ಹದಿನಾರಾಯಿತ್ತು.
ಅಖಂಡಲಿಂಗದಿಂದ ಚಿದ್ರೂಪವಾದ ಪರಿಯನು
ಶಿಷ್ಯಂಗೆ ಗುರುವು ನಿರೂಪಿಸಿದ ಕಾಣಾ, ಜಂಗಮಲಿಂಗಪ್ರಭುವೆ.

1239
ಅಟ್ಟಂಬಾರಣ್ಯದೊಳಗೊಂದು
ಕಟ್ಟಲಿಲ್ಲದ ದೇಗುಲವುಳಿದಿಪ್ಪುದು ನೋಡಿರಯ್ಯಾ !
ಆ ದೇಗುಲದೊಳಗೊಂದು
ಸರ್ವಜೀವನೆಂಬ ರತ್ನ ಬಿದ್ದಿಪ್ಪುದು ನೋಡಿರಯ್ಯಾ !
ಆ ರತ್ನ ಮೂರುಲೋಕಕ್ಕೆ ಮೈದೋರದಿಪ್ಪುದು ನೋಡಿರಯ್ಯಾ !
ನೆಟ್ಟಕಲ್ಲಿನೊಳಗೊಬ್ಬ ಹುಟ್ಟುಗುರುಡನುದ್ಭವಿಸಿ ಬಂದು,
ಆ ಸರ್ವಜೀವನೆಂಬ ರತ್ನವ ಮುಟ್ಟಿ ನೋಡಿದರೆ,
ಆ ಹುಟ್ಟಗುರುಡ ತಾನೆ ರತ್ನವಾದ
ಆದ ಕಂಡು ನಾ ಬೆರಗಾದೆನಯ್ಯಾ, ಜಂಗಮಲಿಂಗಪ್ರಭುವೆ.

1240
ಆದಿ ಅನಾದಿಯ ಕೂಡಿದ ಮಹಿಮಂಗೆ
ಆಧಾರವೆ ಆಚಾರಸ್ಥಲ, ಸ್ಪರ್ಶನವೆ ಗುರುಸ್ಥಲ.
ಮಣಿಪೂರಕವೆ ಲಿಂಗಸ್ಥಲ, ಅನಾಹತವೆ ಜಂಗಮಸ್ಥಲ.
ವಿಶುದ್ಧಿಯೆ ಪ್ರಸಾದಿಸ್ಥಲ, ಆಜ್ಞೇಯವೆ ಆನಂದಸ್ಥಲ.
ಇಂತೀ ಆರು ಸ್ಥಲಂಗಳ ಮೇಳವಾಯಿತ್ತು.
ಮೇಲಣ ಮೂರುಸ್ಥಲಂಗಳ ಮೀರಲರಿಯದೆ
ಸಂಪರ್ಕವ ಮಾಡುವ ಅಣ್ಣಗಳಿಗೆ
ನಾಲ್ಕು ವೇದ, ಹದಿನೆಂಟು ಪುರಾಣ, ಇಪ್ಪತ್ತೆಂಟು ದಿವ್ಯಾಗಮ,
ಮೂವತ್ತೆರಡು ಉಪನಿಷತ್ತು, ಆರು ಶಾಸ್ತ್ರ,
ಮೂವತ್ತೆರಡು ರಾಗ, ಅರುವತ್ತಾರು ಮಿಶ್ರಾರ್ಪಣ.
ಇಂತೀ ಹನ್ನೆರಡು ಸಾವಿರ ಗೀತಪ್ರಬಂಧಕ್ಕೆ
ಮುಖ್ಯವಾದ ಬೀಜ ಒಂದೇ ಒಂಕಾರ ಕಾಣಿಭೋ !
ಆ ಒಂಕಾರಕ್ಕೆ ಸೋಕರ ಸೋಹಂ ಎಂಬ ಮಹಾವೃಕ್ಷ.
ಅದು ಮಹಾಸಾಜದಿಂದ ವೃಕ್ಷವಾಯಿತ್ತು.
ಆ ಸಾಜವೇನು ವೃಕ್ಷವೆ ? ಅಲ್ಲ. ಬೀಜವೇ ಅಹಂ.
ಈ ಉಭಯವಿಲ್ಲದೆ ನಿರೂಪಿಸುತ್ತಿರ್ದ ಎಂದುದಾಗಿ
ಭವಿಯೊಳಗೆ ಅಡಗಿರ್ದ ಭಕ್ತ,
ಆ ಭಕ್ತನೊಳಗೆ ಅಡಗಿರ್ದ ಮಾಹೇಶ್ವರ,
ಆ ಮಾಹೇಶ್ವರನೊಳಗೆ ಅಡಗಿರ್ದ ಪ್ರಸಾದಿ,
ಆ ಪ್ರಸಾದಿಯೊಳಗೆ ಅಡಗಿರ್ದ ಪ್ರಾಣಲಿಂಗಿ,
ಆ ಪ್ರಾಣಲಿಂಗಿಯೊಳಗೆ ಅಡಗಿರ್ದ ಶರಣ
ಆ ಶರಣನೊಳಗೆ ಅಡಗಿರ್ದ ಗುರು,
ಆ ಗುರುವಿನೊಳಗೆ ಅಡಗಿರ್ದ ಲಿಂಗ,
ಆ ಲಿಂಗದೊಳಗೆ ಅಡಗಿರ್ದ ಜಂಗಮ,
ಆ ಜಂಗಮದೊಳಗೆ ಅಡಗಿರ್ದ ನಿತ್ಯಮುಕ್ತಿ,,
ಆ ನಿತ್ಯಮುಕ್ತಿಯೊಳಗೆ ಅಡಗಿರ್ದ ನಿರಾಳವೆಂಬ ಮಹಾಪ್ರಕಾಶ.
ಇವು ಅಡಗಿರ್ದವು ನಿರ್ವಯಲೆಂಬ ದೇಗುಲದೊಳು.
ಆ ದೇಗುಲವ ಹೊಕ್ಕು, ಭಾಗಿಲವಂ ತಟ್ಟಿ,
ಮೇಗಳ ಶಿಖರವ ಹತ್ತಿ ನೋಡಲಾಗಿ,
ಬೆಳಗು ನಿಬ್ಬೆಳಗು ನಿರ್ಲೆಪ ನಿಃಕಾಯವಾದ
ಲಿಂಗೈಕ್ಯನ ಕರಣಪ್ರಸಾದಕ್ಕೆ
ಆನು ಅಂಗೈಸಿ ಬಂದೆನಯ್ಯಾ, ಜಂಗಮಲಿಂಗಪ್ರಭುವೆ.

1241
ಉಲುಹಿಲ್ಲದ ಬ್ರಹ್ಮಾರಣ್ಯದೊಳಗೊಂದು
ಮಹಾಲಿಂಗ ಉದಯವಾಯಿತ್ತು ನೋಡಾ !
ಆ ಲಿಂಗವ ನೋಡ ಹೋದರೆ,
ನೋಡುವ ಕಂಗಳು ತಾವೆ ಲಿಂಗವಾದವಯ್ಯಾ !
ಆ ಲಿಂಗವ ಹಸ್ತದಲ್ಲಿ ಮುಟ್ಟಿ ಪೂಜೆಯ ಮಾಡುವೆನೆಂದರೆ,
ಆ ಹಸ್ತಗಳು ತಾವೆ ಲಿಂಗವಾದವಯ್ಯಾ !
ಆ ಲಿಂಗವ ಭಾವದಲ್ಲಿ ಭಾವಿಸಿಹೆನೆಂದರೆ,
ಆ ಭಾವವು ತಾ ಲಿಂಗವಾಯಿತ್ತು ನೋಡಾ !
ಇಂತಪ್ಪ ಮಹಾಲಿಂಗವನಪ್ಪಿ ತಾ ಮಹಾಲಿಂಗವಾದ ಬಳಿಕ
ಇಂತು ಅದಕೆ ಆವ ಚಿಂತೆ ಹೇಳಾ, ಜಂಗಮಲಿಂಗಪ್ರಭುವೆ.

1242
ಒಂದನೆ ದೆಸೆಯಲ್ಲಿ ಒಂದು ಮುಖದ ಭೈರವನು.
ಎರಡನೆಯ ದೆಸೆಯಲ್ಲಿ ಎರಡು ಮುಖದ ಭೈರವನು.
ಮೂರನೆಯ ದೆಸೆಯಲ್ಲಿ ಮೂರು ಮುಖದ ಭೈರವನು.
ನಾಲ್ಕನೆಯ ದೆಸೆಯಲ್ಲಿ ನಾಲ್ಕು ಮುಖದ ಭೈರವನು.
ಐದನೆಯ ದೆಸೆಯಲ್ಲಿ ಐದು ಮುಖದ ಭೈರವನು.
ಆರನೆಯ ದೆಸೆಯಲ್ಲಿ ಆರು ಮುಖದ ಭೈರವನು.
ಏಳನೆಯ ದೆಸೆಯಲ್ಲಿ ಏಳು ಮುಖದ ಭೈರವನು.
ಎಂಟನೆಯ ದೆಸೆಯಲ್ಲಿ ಎಂಟು ಮುಖದ ಭೈರವನು.
ಇಂತಿರುವ ಅಷ್ಟಭೈರವರು ಹೊರಸುತ್ತಿನಲ್ಲಿ ಪಹರಿಕರು.
ತುತ್ತರಸಿನವೆಂಬ ಚಕ್ರವು ಸುರಗಿಯಂದದಿ ಸುತ್ತಿ,
ತೆರಹು ಇಲ್ಲವೆ ತಿರುಗುತ್ತಿಹುದು.
ಅದು ಕಾಣಬಾರದಂತಿಹುದು ನೋಡಾ, ಜಂಗಮಲಿಂಗಪ್ರಭುವೆ.

1243
ಓಂ ನಮಃ ಶಿವಾಯ ಎಂಬ ಮೂಲಮಂತ್ರದಿಂದ
ಗಿರಿಜೆ ಬಂದು ಪಾದಾಮೃತವ ಪಡೆದಳು.
ಆ ಪಾದಾಮೃತದಿಂದ ಕ್ಷೀರಸಮುದ್ರ, ಶಿಲಾನದಿ, ಅಮೃತನದಿ
ಇಂತೀ ಮೂರು ನದಿ ಹುಟ್ಟಿದವು ನೋಡಾ, ಜಂಗಮಲಿಂಗಪ್ರಭುವೆ.

1244
ಓಂ ನಮಃ ಶಿವಾಯವೆಂಬ ಮೂಲಮಂತ್ರದಿಂದ
ಗಿರಿಜೆ ಪಾದೋದಕವ ಮಾಡಿಕೊಂಡು ಬಂದು ನಿಂದು
ಗೊಡ್ಡಿನ ಮೇಲೆ ತಳಿದಳು.
ತಳಿಯಲು ಗೊಡ್ಡುಗಳು ಕಾಮಧೇನುಗಳಾಗಿ ಕರೆಯಲು,
ಆ ಕಾಮಧೇನುಗಳು ಕರೆದ ಕಾರಣದಿಂದ
ಅಲ್ಲಿ ಕ್ಷೀರಸಮುದ್ರ ಹುಟ್ಟಿತು ನೋಡಾ, ಜಂಗಮಲಿಂಗಪ್ರಭುವೆ.

1245
ನಮ್ಮ ಶಿವನ ಮಸ್ತಕದಲ್ಲಿ ಓಂಕಾರ ಗುಹೇಶ್ವರಲಿಂಗವಿತ್ತು.
ನಮ್ಮ ಶಿವನ ಶ್ರೋತ್ರದಲ್ಲಿ ಪ್ರಸಾದಲಿಂಗವಿತ್ತು.
ನಮ್ಮ ಶಿವನ ನೇತ್ರದಲ್ಲಿ ಶಿವಲಿಂಗವಿತ್ತು.
ನಮ್ಮ ಶಿವನ ನಾಸಿಕದಲ್ಲಿ ಆಚಾರಲಿಂಗವಿತ್ತು.
ನಮ್ಮ ಶಿವನ ಜಿಹ್ವೆಯಲ್ಲಿ ಗುರುಲಿಂಗವಿತ್ತು.
ನಮ್ಮ ಶಿವನ ತ್ವಕ್ಕಿನಲ್ಲಿ ಜಂಗಮಲಿಂಗವಿತ್ತು.
ನಮ್ಮ ಶಿವನ ಹೃದಯದಲ್ಲಿ ಮಹಾಲಿಂಗವಿತ್ತು.
ನಮ್ಮ ಶಿವನ ಪಾದದಲ್ಲಿ ಗುಲ್ಫದಲ್ಲಿ ಭೂಪ್ರದಕ್ಷಿಣಲಿಂಗವಿತ್ತು.
ನಮ್ಮ ಶಿವನ ಪಾದದಂಗುಷ್ಟದಲ್ಲಿ ಸರ್ವದಯಾಳು ಲಿಂಗವಿತ್ತು.
ಇಂತೀ ಸರ್ವಾಲಿಂಗಾಂಗಿ ನಮ್ಮ ಶಿವನು ಬಂದು,
ಈ ಭೂಮಿಯ ಮೇಲೆ ತನ್ನ ಪಾದವನಿಕ್ಕಿ ನಿಲ್ಲಲು,
ಅಂದೇ ಈ ಭೂಮಿಗೆ ಲಿಂಗಧಾರಣವಾಯಿತ್ತು ನೋಡಾ,
ಜಂಗಮಲಿಂಗಪ್ರಭುವೆ.

1246
ವಿಘ್ನೇಶ್ವರ ಹರನ ಮಗನೆಂಬ
ಪಂಚಮಹಾಪಾತಕರ ನುಡಿಯ ಕೇಳಲಾಗದು.
ಪಾರ್ವತಿ ಹರನ ಸತಿಯೆಂಬ
ಲಿಂಗದ್ರೋಹಿಗಳ ನೆನೆಯಲಾಗದು.
ಬಹುರೂಪಿ ಹರನ ಸರಿಯೆಂಬ
ಗುರುದ್ರೋಹಿಗಳ ನೆನೆಯಲಾಗದು.
ಅಂದೆಂತೆಂದಡೆ:`ಯತ್ರ ಜೀವಾತ್ಮ ತತ್ರ ಶಿವ'
ಎಂದೆನಿಸಿಕೊಂಬಾತನೊಬ್ಬ ಗಣೇಶ್ವರನು.
ಭೂಮಿಪೀಠಾಕಾಶವಾಗಿರ್ದಾತನೊಬ್ಬ ಗಣೇಶ್ವರನು.
ಸಿರಿಯಾಳನ ಮಗನ ಬಾಣಸವ ಮಾಡಿಸಿದಾತನೊಬ್ಬ ಗಣೇಶ್ವರನು.
ಅರ್ಜುನನ ಕೂಡ ಯುದ್ಧವ ಮಾಡಿ,
ತನ್ನ ಸತಿಯಳಿಗೆ ತೋರಿಸಿದಾತನೊಬ್ಬ ಗಣೇಶ್ವರನು.
ಅಂಗಜನ ಸಂಹಾರವ ಮಾಡಿದಾತನೊಬ್ಬ ಆದಿರುದ್ರನೆಂಬ ಗಣೇಶ್ವರನು.
ದಕ್ಷನ ಸಂಹಾರವ ಮಾಡಿದಾತನೊಬ್ಬ ವೀರಭದ್ರನೆಂಬ ಗಣೇಶ್ವರನು.
ಹತ್ತು ಅವತಾರ ವಿಷ್ಣುವಿಂಗೆ, ಅನಂತ ಅವತಾರ ಬ್ರಹ್ಮಂಗೆ.
ಇಂತಿವರೆಲ್ಲರಿಗೂ ಕಾಲಚಕ್ರ ಕರ್ಮಚಕ್ರ ನಾದಚಕ್ರ ಬಿಂದುಚಕ್ರ.
ಈ ನಾಲ್ಕೂ ಪ್ರಳಯಚಕ್ರವೆಂದೆನಿಸಿಹವು.
ಇಂತಿವರೊಳಗಾದವರೆಲ್ಲರು ಇನ್ನುಳಿದವರು
ನರದೇಹಿಗಳಿಗೆ ಪ್ರಳಯವು.
ಉಪಮಿಸಲಾಗದು, ಅಜಾತ ಪವಿತ್ರ ನಿರ್ಲೆಪ
[ಜಂಗಮಲಿಂಗ ಪ್ರಭುವೆ].

1247
ಒಂದು ಲಿಂಗದಿಂದ ಉದ್ಭವಿಸಿತ್ತು, ನಾದ ಬಿಂದು ಕಳೆ.
ಆ ನಾದ ಬಿಂದು ಕಳೆಗೆ ಉದ್ಭವಿಸಿತ್ತು,
ಬ್ರಹ್ಮ ವಿಷ್ಣು ರುದ್ರ ಈಶ್ವರ ಸದಾಶಿವನು.
ಈ ಪಂಚಬ್ರಹ್ಮದ ಬೆಳೆಯ [ಉತ್ಪತ್ಯವ] ಪೇಳುತಿದನು ಕಾಣಾ,
ಜಂಗಮಲಿಂಗಪ್ರಭುವೆ.

1248
ಹರಹರಯೆಂದು ನೆನೆದಡೆ ಜನನ ಮರಣ ಹಿಂಗುವದೆ ?
ಹಾಂಗೆ ಲೋಕದ ಮಾತ ಕೇಳಲಾಗದು.
ಅದು ಹೇಂಗೆಯೆಂದಡೆ : ಜ್ಯೋತಿಯ ನೆನೆದಡೆ ತಿಮಿರ ಹೋಹುದೇನಯ್ಯಾ ?
ಪಂಚಾಮೃತವ ನೆನೆದಡೆ ಹಸಿವು ತೃಷೆ ಅಡಗುವುದೇನಯ್ಯಾ ?
ಆಗಮಶಾಸ್ತ್ರವ ನೋಡಿದಡೆ, ಕಿವಿಗೊಟ್ಟು ಕೇಳಿ ಹಾಡಿ ಪಾಡಿದಡೆ,
ಅಯ್ಯಾ ನಿಮ್ಮ ಕಂಡಂತಾಯಿತ್ತಯ್ಯಾ ಎಂದುದಾಗಿ,
ಆದಡಾಗಲಿ ಕಂಡು ಆಡುವುದಲ್ಲದೆ,
ಕಾಣದೆ ಆಡುವುದೆಲ್ಲ ಸಂತೆಯಾಗಿ ಹೋಯಿತ್ತಯ್ಯ ಕಾಣಾ,
ಜಂಗಮಲಿಂಗಪ್ರಭುವೆ.

1249
ಇಳೆಯ ಮೇಲಿರ್ದ ಶಿಲೆಯೆಲ್ಲ ಲಿಂಗವಾದಡೆ ಗುರುವಿನ ಹಾಂಗೆ ಕೈ,
ಜಲ ನದಿಯಲ್ಲಿ ತೀರ್ಥವಾದಡೆ, ಲಿಂಗದ ಹಾಂಗೆ ಕೈ,
ಬೆಳೆದ ಬೆಳೆಯಲ್ಲ ಪ್ರಸಿದ್ಧವಾದಡೆ, ಜಂಗಮದ ಹಾಂಗೆ ಕೈ,
ಎಂದುದಾಗಿ ತ್ರಿವಿಧದ ಹಂಗು ಹಿಂಗಿತ್ತು ಕಾಣಾ, ಜಂಗಮಲಿಂಗಪ್ರಭುವೆ.

1250
ಚತುರ್ವೆದನುಭಾವ ಜಂಗಮವೆಲ್ಲ ಬ್ರಹ್ಮನ ಸಂತತಿ.
ಹದಿನೆಂಟು ಪುರಾಣದ ಅನುಭಾವ ಮಾಡುವ ಜಂಗಮವೆಲ್ಲ ವಿಷ್ಣುವಿನ ಸಂತತಿ.
ಮೂವತ್ತೆರಡು ದಿವ್ಯ ಆಗಮ[ದ ಅನುಭಾವ] ಮಾಡುವ
ಜಂಗಮವೆಲ್ಲ ಈಶ್ವರನ ಸಂತತಿ.
ಆರು ಶಾಸ್ತ್ರದನುಭಾವ ಮಾಡುವ ಜಂಗಮವೆಲ್ಲ ಸದಾಶಿವನ ಸಂತತಿ.
ಇಂತೀ ಎಲ್ಲ ಶಬ್ದವನು ಮುಟ್ಟಿ ಲಿಂಗದನುಭಾವ ಮಾಡುವ ಜಂಗಮವೆಲ್ಲ
ಘನನಿತ್ಯ ಕಾಣಾ, ಜಂಗಮಲಿಂಗಪ್ರಭುವೆ.

1251
ಬ್ರಹ್ಮನ ಸಂತತಿ ಭಕ್ತಿಸ್ಥಲಕ್ಕೆ ಸಂದಿತ್ತು.
ವಿಷ್ಣುವಿನ ಸಂತತಿ ಮಾಹೇಶ್ವರಸ್ಥಲಕ್ಕೆ ಸಂದಿತ್ತು.
ರುದ್ರನ ಸಂತತಿ ಪ್ರಸಾದಿಸ್ಥಲಕ್ಕೆ ಸಂದಿತ್ತು.
[ಈಶ್ವರನ ಸಂತತಿ ಪ್ರಾಣಲಿಂಗಿಸ್ಥಲಕ್ಕೆ ಸಂದಿತ್ತು].
ಸದಾಶಿವನ ಸಂತತಿ ಶರಣಸ್ಥಲಕ್ಕೆ ಸಂದಿತ್ತು.
ಪರಶಿವನ ಸಂತತಿ ಐಕ್ಯಸ್ಥಲಕ್ಕೆ ಸಂದಿತ್ತು.
ಅಷ್ಟು ಎಲ್ಲ ಕೂಡಿ ಇಷ್ಟಲಿಂಗವಾಗಿ ನಿಂದಡೆ.
ಅದು ನೀನು ನಾನು ಉಭವಿಲ್ಲದಂತೆ ಆಯಿತ್ತು ಕಾಣಾ,
ಜಂಗಮಲಿಂಗಪ್ರಭುವೆ.

1252
ಹಾಡಿ ಹೊಗಳುವ ಜಂಗಮವೆಲ್ಲ ಬ್ರಹ್ಮನ ಸಂತತಿ.
ಕಾಡಿ ಬೇಡುವ ಜಂಗಮವೆಲ್ಲ ವಿಷ್ಣುವಿನ ಸಂತತಿ.
ಹಾಗವರಿಯದೆ ಹೊಕ್ಕು ಉಂಬುವ ಜಂಗಮವೆಲ್ಲ [ರುದ್ರನ ಸಂತತಿ].
ವ್ಯಾಪಾರವ ಮಾಡುವ ಜಂಗಮವೆಲ್ಲ ಈಶ್ವರನ ಸಂತತಿ.
ಇಂತೀ ಅನುಭಾವ ಮಾಡುವ ಜಂಗಮವೆಲ್ಲ ಪರಶಿವನ ಸಂತತಿ.
ಮುಕ್ತಿ ಕುಸ್ತಿಯ ಮಾಡುವ ಜಂಗಮವೆಲ್ಲ ಮಹಾಲಿಂಗವೆನಿಸುವದು.
ಹಾಡದೆ ಹೊಗಳದೆ ಕಾಡದೆ ಬೇಡದೆ,
ಹಾಗವನರಿಯದೆ ಹೊಗದೆ ವ್ಯಾಪಾರ ಮಾಡದೆ,
ಭಕ್ತಿಗೆ ತೊಲಗಿ ವ್ಯರ್ಥದಿ ಮುಕ್ತಿ ಕುಸ್ತಿಯನಾಡದೆ,
ಭಿಕ್ಷವೆಂಬ ಶಬ್ದದಲ್ಲಿ ಇದಿರಿಟ್ಟು,
ಪದಾರ್ಥವ ಲಿಂಗಕರ್ಪಿತವ ಮಾಡುವುದೆ ನಿಜಮುಕ್ತಿ.
ಮಹದಾಕಾಶ ಮಹಿಮಾಪತಿಯೆಂಬ ಘನಲಿಂಗಕ್ಕೆ
ಅರ್ಪಿತ ಮಾಡುವ ಗುರು.
ಅದಾವುದೆಂದಡೆ : ಅದು ಅನಾದಿ ಸಂಜ್ಞೆಯೆಂಬ ಜಂಗಮವು.
ಅಂಥ ಜಂಗಮದ ಶ್ರೀಚರಣ ನೆರೆನಂಬಿ,
ನೆಟ್ಟನಳಿವಸ್ಥಿರಕಾಯರ ಎನಗೊಮ್ಮೆ ತೋರಿಸಯ್ಯಾ,
ಜಂಗಮಲಿಂಗಪ್ರಭುವೆ.

1254
ಶರಣನೊಳಗಡಗಿರ್ದ ಐಕ್ಯ, ಐಕ್ಯನೊಳಗಡಗಿರ್ದ ಗುರು.
ಗುರುವಿನೊಳಗಡಗಿರ್ದ ಲಿಂಗ, ಲಿಂಗದೊಳಗಡಗಿರ್ದ ಜಂಗಮ.
ಜಂಗಮದೊಳಗಡಗಿರ್ದ ಗುರು.
ನಿತ್ಯಲಿಂಗಾರ್ಚನೆ, ಅನಿತ್ಯಲಿಂಗಾರ್ಚನೆಯೊಳಗಡಗಿರ್ದ
ನಿತ್ಯನಿರಾಲಂಬ ಮಹಾ ಆಕಾಶ.
ಇಂತೀ ಎಲ್ಲವೂ ಅಡಿಗಿರ್ದವು, ಆ ನಿರಾಲವೆಂಬ ದೇಗುಲದೊಳಗೆ.
ಆ ದೇಗುಲವ ಹೊಕ್ಕು, ಬಾಗಿಲವ ದಾಂಟಿ,
ಮೇಗಳ ಶಿಖರವ ಹತ್ತಿ ನೋಡಲಾಗಿ, ಬೆಳಗು ನಿಬ್ಬೆಳಗು.
ನಿಃಕಲ ನಿರ್ಲೆಪವಾದ ಲಿಂಗೈಕ್ಯನ ಪ್ರಸಾದಕ್ಕೆ ಆನು ಹಾರೈಸಿ ಬಂದಿರ್ದೆ ಕಾಣಾ,
ಜಂಗಮಲಿಂಗಪ್ರಭುವೆ.

535
ಗುರುವಿನ ಮೂರ್ತಿ ನಿರಾಕಾರವು ನೋಡಾ.
ಲಿಂಗದ ಮೂರ್ತಿ ಆಕಾರವು ನೋಡಾ.
ಆ ನಿರಾಕಾರ ಸ್ವರೂಪವಪ್ಪ ಗುರುವಿನ ಪ್ರಸಾದವ
ಆಕಾರ ಸ್ವರೂಪವಪ್ಪ ಲಿಂಗಕ್ಕೆ ಕೊಡಬೇಕೆಂಬುವುದೇ
ಶಿವಾಚಾರಪಥ ನೋಡಾ.
ಆ ಗುರುಪ್ರಸಾದವ ಅಂಗಕ್ಕೆ ಕೊಡಬಹುದು
ಲಿಂಗಕ್ಕೆ ಕೊಡಬಾರದೆಂಬ
ಅನಾಚಾರಿಯ ಮುಖವ ನೋಡಲಾಗದು ಕಾಣಾ.
ಗುರುವಿನಿಂದ ಲಿಂಗವ ಪಡೆಯಬಹುದಂತೆ.
ಗುರು ಮುಖದಿಂದ ಬಂದ ಪ್ರಸಾದವ ಲಿಂಗಕ್ಕೆ ಕೊಡಬಾರದೆಂಬ
ಮರುಳು ಮಾನವರ ಮಾಯಾ ಭ್ರಾಂತಿಯ ನೋಡಿ
ನಾನು ಹೇಸಿದೆನು ಕಾಣಾ.
ಅದೆಂತೆಂದೊಡೆ: `ಅಶರೀರಂ ಗುರೋರ್ಭಾವಂ ಆಕಾರಂ ಲಿಂಗ ಮೂರ್ತಿಷು|
ಅನಂಗ ಸಂಗ ಸಂಯುಕ್ತಂ ಗುರೋರ್ಲಿಂಗ ಸಮಾಶ್ರಿತಂ||'
ಇತ್ತೆಂದುದಾಗಿ
ಗುರುಪ್ರಸಾದವ ಲಿಂಗಕ್ಕೆ ಕೊಡಬೇಕು ಕಾಣಾ.
ಆ ಗುರುಪ್ರಸಾದದಿಂದ ಲಿಂಗಕ್ಕೆ ಪರಮ ಪರಿಣಾಮವಪ್ಪುದು
ತಪ್ಪದು ನೋಡಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.

ಗ್ರಂಥಋಣ: ೧೫ ಸಮಗ್ರ ವಚನ ಸಂಪುಟಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು. 2001

ಪರಿವಿಡಿ (index)
*
Previous ಸತ್ಯಕ್ಕ ಭರಿತಾರ್ಪಣದ ಚೆನ್ನಬಸವಣ್ಣ Next