Previous ನಿಜಗುಣಯೋಗಿ ಕಂಬದ ಮಾರಿತಂದೆ Next

ಮಲ್ಲಿಕಾರ್ಜುನ ಪಂಡಿತಾರಾಧ್ಯ ವಚನಗಳು

1137
ಅಜ್ಞಾನಿಗಳಪ್ಪವರ ಎನ್ನವರೆಂದಡೆ,
ಅಘಟಿತ ನಿಮ್ಮಾಣೆ, ಕೇಳಾ ತಂದೆ.
ಕತರ್ೃವೆ ಎನ್ನ ಮನದಲ್ಲಿ ಬುದ್ಧಿಗೊಡಾ
ಎಂದು ಉತ್ತರಗೊಡುವ ತಂದೆ.
ನಿನಗೆ ಶರಣೆಂದು ನಂಬಿದವರನು,
ಎನ್ನವರೆಂಬೆನು ಕೇಳಾ, ಶ್ರೀಮಲ್ಲಿಕಾರ್ಜುನ ತಂದೆ.
1138
ಆರನಾದಡೂ ಅಯ್ಯಾ ಎಂದೆನಲಾರೆ.
ಆರನಾದಡೂ ದೇವಾ ಎಂದೆನಲಾರೆ.
ನೀನು ಜಗಭರಿತನಾಗಿ
ನಾನು ನಿಮ್ಮನೇ ಅಯ್ಯಾ ಎಂಬೆ.
ಎನಗಾರೂ ಇಲ್ಲದ ಕಾರಣ ನೀವೇ ಶರಣೆಂಬೆ, ಶ್ರೀಮಲ್ಲಿಕಾರ್ಜುನಾ.

1139
ಇರುಳು ಹಗಲು ಎಮ್ಮ ನೆನೆವುತ್ತ, ಮರೆವುತ್ತ,
ಮರುಗುತ್ತ, ಕುದಿಯುತ್ತ ಇಪ್ಪೆಯೋ ಕಂದಾಯೆಂದು,
ಇತ್ತಿತ್ತ ಬಾರಾ ಮಗನೆಯೆಂದು,
ನಿಮ್ಮ ಶ್ರೀಚರಣದಿಂದಯೆಂದು ಕರೆದಿರೆನ್ನ.
ಭಕ್ತಿಯ ಕೊಡಯ್ಯಾ.
ಶ್ರೀಮಲ್ಲಿಕಾರ್ಜುನಯ್ಯಾ ಎಂದಡೆ,
ಹಿಡಿಯೋ ಮಗನೆ ಎಂದೆಂಬಿರೆನ್ನ.
1140
ಕಲ್ಪಿತೋದಕವೊಂದು, ಅರ್ಪಣೋದಕ ಮೂರು,
ಮತ್ತೆ ಅಂಗೋದಕತ್ರಯವಾಗಿಯೂ
ಮಿಕ್ಕ ಪ್ರಸಾದೋದಕ ಅವು ಮೂರು.
ಸತ್ವರಜತಮವನತಿಗಳೆದವರಿಗಲ್ಲದೆ,
ಹತ್ತುಪಾದೋದಕವನರಿಯಲರಿದು.
ತನು ಚಿತ್ತಶುದ್ಧನಾಗಿ ಗುರುಕರುಣದಿಂದವೆ
ಹತ್ತು ಪಾದೋದಕವ ಗ್ರಹಿಸುವ ಭಕ್ತರಿಗೆ ಸಂದಿಲ್ಲದಿಹೆ.
ಅವರು ನೀನು, ಮುತ್ತು ನೀರನು ಕೂಡಿದಾನಂದದ ಭೇದದೊಲು,
ತತ್ತ್ವಮಸಿಯಪ್ಪನೈ ಶ್ರೀಮಲ್ಲಿಕಾರ್ಜುನಾ.
1141
ಕಾರ್ಯಪ್ರಯೋಜನವೆಂದಡೆಯೂ
ಆರಿಗಾರಿಗೆಯೂ ಹೋಗಬಾರದು.
ಬಟ್ಟವಕ್ಕದ ಸಂಸಾರ ಹೋಗಿ ಬರಬಾರದು.
ಜವನ ಗಾರುಪಟ್ಟಿಗೊಳಗಾಗದ ಮುನ್ನ,
ಶರಣೆಂದಡೆ ಕಾವನಮ್ಮ, ಶ್ರೀಮಲ್ಲಿಕಾರ್ಜುನಯ್ಯನು.
1142
ಗುರುವೆ, ಇಹ-ಪರ ಗುರುವೆ, ಗುರುವೆ ಕರುಣಾಕರನೆ,
ಗುರುವೆ, ಶುದ್ಧಾತ್ಮನೆ ನಿರ್ಮಳಾಂಗನೆ.
ಗುರುವೆ, ನಿನ್ನಂತೆ ಎನ್ನುವನು ಮಾಡಿದ
ಪರಮ ಗುರುವೆ, ನೀನು ಶ್ರೀ ಮಲ್ಲಿಕಾರ್ಜುನಾ.
1143
ಧನ ಜವ್ವನವುಳ್ಳಲ್ಲಿ ಶಿವಶರಣೆಂಬೆ.
ಮಾನವಾ, ನೆನೆ ನೆನೆಯೋ, ನೀ ಕೆಡದ ಮುನ್ನ.
ಧನ ನಿಲ್ಲದು, ಜವ್ವನ ನಿಲ್ಲದು, ನಿನ್ನ ಪ್ರಾಣ ನಿಲ್ಲದು.
ಇದನರಿದು, ಶ್ರೀಮಲ್ಲಿಕಾರ್ಜುನನ ನೆನೆಯೋ,
ನೀ ಕೆಡದ ಮುನ್ನ.
1144
ಧೃತಿಗೆಟ್ಟು ದೈವವೆಂಬಿರಲ್ಲಯ್ಯಾ.
ಧೃತಿಗೆಟ್ಟು ದೈವವ ಪೂಜಿಸುವಿರಲ್ಲಯ್ಯಾ.
ಧೃತಿಗೆಟ್ಟು ದೈವಂಗಳ ಬೇಡುವಿರಲ್ಲಯ್ಯಾ.
ಗತಿಯಲ್ಲ, ದುರ್ಗತಿಯ ಮಾನವರಿರಾ
ದಿಟದಿಟ, ಅಲ್ಲಿ ಬೇಡದಿರಿರೆ.
ಶ್ರುತಿ ಸ್ಮೃತಿಗಳ ಕೇಳಿ,
ಅವೂ ಕೊಡಲರಿಯವೆಂಬುದ ನೆರೆನಂಬಿರೆ,
ನಮ್ಮ ಶ್ರೀಮಲ್ಲಿಕಾರ್ಜುನ ಕೊಡುವನು.

1145
ನಾದ ಬಿಂದುವಿನಲ್ಲಿ ಆದಿ ಅಕ್ಷರದ್ವಯವ
ನೈದಿಸಿದ ಗುರು ಬಸವಣ್ಣನೇ
ಆಮೋದದಲಿ ಕೂಟ.
ಆನಂದ ಸಾನಂದ ತಾನೊಂದು ರೂಪಾಗಿ
ಸ್ವಾನುಭಾವದ ದೀಕ್ಷಾಪನ್ನವಯವಾ
ಭಾನುಮಂಡಲದಲ್ಲಿ ತಾರೆ ಮಧುಕರನೊಪ್ಪೆ
ಅನ್ಯಯ (?) ನಿನ್ನ ಗುಣವರಿಯಲ್ಕೆ
ಚೆನ್ನಬಸವ ಅಯ್ಯನಾದನೆನಗೆ ಶ್ರೀಮಲ್ಲಿಕಾರ್ಜುನಾ.
1146
ನಿನ್ನೆ ಹುಟ್ಟಿದ ಮಾನವರೆಲ್ಲರೂ
ಇದು ಸಾಸಂಗಿಗೇಕೆಂಬರಯ್ಯಾ.
ಕಾಳ ಕುಳ ಭುವನಲೋಕಂಗಳು
ನಾವು ಸಂಗಿಗಳೇಕೆನ್ನರಯ್ಯಾ.
ಎಲ್ಲಾ ಸಾಸಂಗಿಗಳಾದಡೆಯೂ
ಲೋಕಂಗಳು ನಡೆಯರೆಂದು,
ತಾನೊಬ್ಬನೆ ಸಾಸಂ[ಗಿಗ]ನಾದನು,
ಶ್ರೀಮಲ್ಲಿಕಾರ್ಜುನಯ್ಯನು.
1147
ಪುಣ್ಯಪಾಪಂಗಳನರಿಯದ ಮುನ್ನ,
ಅಲ್ಲಿ ಅನೇಕ ಭವಭವಂಗಳಲ್ಲಿ ಬಂದೆ ನಾನಯ್ಯಾ.
ನಂಬಿ ಶರಣುಹೊಕ್ಕೆನಯ್ಯಾ.
ನಿಮ್ಮನೆಂದೂ ಅಗಲದಂತೆ ಎನ್ನ ನಡೆಸಯ್ಯಾ.
ನಿಮ್ಮ ಧರ್ಮವು.
ನಿಮ್ಮನೊಂದು ಬೇಡುವೆನು,
ಎನ್ನ ಕರ್ಮಬಂಧವ ಬಿಡಿಸುವಂತೆ ಮಾಡಯ್ಯಾ
ಶ್ರೀಮಲ್ಲಿಕಾರ್ಜುನಾ.
1148
ಭಾವಾಭಾವಂಗಳನೊಲ್ಲದಿರ್ದಡೆ
ಭಾವಿಯಭಾವಿಯ ಲೋಕಂಗಳ ಸುಡು.
ಸವಿಯೆಂಬೆ ಹೋ ! ಹೋ ! ಹಾ ! ಹೋ ! ಹಾ !
ಬ್ರಹ್ಮ [ ತಾ] ಬಂದು ಭವನ ಭುಜಂಗಳ ತಕ್ಕೈಸಿ ನಿಂದ
ಹೋ ! ಹಾ ! ಹೋ ! ಹಾ !
ವಿಷ್ಣು ತಾ ಬಂದು ಶ್ರೀಪದಪದ್ಮಂಗೆ ಹತ್ತಿಯೇ ನಿಂದ
ನಿಮ್ಮರೋಮದ ಸಾಮಥ್ರ್ಯಂಗಳು
ಕ್ರೀವಿಡಿದಿರ್ದಡೆ ಆ ಭವವೆಲ್ಲ
ಮುರಿದು ನಿಂದೋಡಿದವು.
ನಿಮ್ಮ ರೋಮ ಸಾಮಥ್ರ್ಯಂಗಳಂತಹವು.
ಇಂತಹವು ನಿಮ್ಮ, ಕೇಳಯ್ಯಾ ಕೇಳಯ್ಯಾ
ಶ್ರೀಮಲ್ಲಿಕಾರ್ಜುನಯ್ಯ ಶರಣಾ.
1149
ಮೃಗಕ್ಕೆಂದು ಬಿಲ್ಲ ಹಿಡಿದು ಶರವ ತೊಟ್ಟೆ ನಾನು.
ಮೃಗ ತಪ್ಪಿ ಶಿವ ದೊರಕೊಂಡನೆನಗೆ.
ಅನುಪಮ ದುರಿತವ ಕೆಡಿಸಲೆಂದು,
ಹೊಲೆಯನ ಕುಲಜನ ಮಾಡಿದ, ಶ್ರೀಮಲ್ಲಿಕಾರ್ಜುನ.
1150
ಮೇಲುಗೆಟ್ಟ ಸೀಮೆ, ತೆರಹುಗೆಟ್ಟ ಬ್ರಹ್ಮ.
ಐದಾರು ಕಣೆಯದಿಂ ಮೇಲೆ ದುರ್ಗ.
ಕಾಲಾಳು ನಾಯಕರು, ಮೇಲೆ ರಥಪಾಯಕರು,
ಆರೈದು ಓರಂತೆ ದುರ್ಗದಲ್ಲಿ.
ಧಾರುಣಿಯ ಕಳ್ಳರಿಗೆ ತಾನಂಜಿ ದುರ್ಗದೊಳು
ಓರಂತೆ ಅಡಗಿದಂತೆ, ಶ್ರೀಮಲ್ಲಿಕಾರ್ಜುನ.
1151
ಸೀಮೆ ಸಾಯುಜ್ಯವ ಮೀರಿದಾತ ಗುರು[ಮಯ್ಯಾ]
ನಾಮ ನಿರ್ನಾಮವಾದಾತ ಗುರುವಯ್ಯಾ.
ಸೋಮಪ್ರಭೆಯಿಂದತ್ತತ್ತ ಪಾವನನಾದಾತ,
ಆದಿ ಅಕ್ಷರವರಿತನಾತ ಗುರುವಯ್ಯಾ.
ನಾದ ಬಿಂದು ಕಳೆಯಾದಿಯರಿದಾತ
ಅಭೇದ್ಯ ಗುರು ಬಸವಣ್ಣ, ಶ್ರೀಮಲ್ಲಿಕಾರ್ಜುನಾ.
1152
ಹಿಡಿಯೊಳಗುದಕವ ತುಂಬಿ,
ಆಸೆ ಮಾಡುವನೆಗ್ಗ ನೋಡಾ.
ಸಂಸಾರದಿಂದ ಬೆಂದು, ಆಸೆ ಮಾಡುವನೆಗ್ಗ ನೋಡಾ.
ಆವುದೊಂದುಳಿದುದ ಕಾಣೆ,
ಶ್ರೀಮಲ್ಲಿಕಾರ್ಜುನಯ್ಯ ತಂದೆ, ಒಬ್ಬನೇ ಉಳಿದನು.

ಗ್ರಂಥಋಣ: ೧೫ ಸಮಗ್ರ ವಚನ ಸಂಪುಟಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು. 2001

ಪರಿವಿಡಿ (index)
*
Previous ನಿಜಗುಣಯೋಗಿ ಕಂಬದ ಮಾರಿತಂದೆ Next