962
ವೈರಾಗ್ಯ ವೈರಾಗ್ಯವೆಂತೆಂದು ಹೆಸರಿಟ್ಟುಕೊಂಡು
ನುಡಿವ ಅಣ್ಣಗಳಿರಾ ನೀವು ಕೇಳಿರೊ.
ಆ ವೈರಾಗ್ಯದ ಭೇದವೆಂತೆಂದರೆ ಬಲ್ಲರೆ ಹೇಳಿ,
ಅರಿಯದಿರ್ದಡೆ ಕೇಳಿ.
ನಿಮ್ಮ ಅಂಗ ಕುಲ ಚಲ ಸೂತ್ರಕವೆಂಬ ಕಂಬವನ್ನು
ತನ್ನ ಕೈಯಲ್ಲಿ ಹಿಡಿದುಕೊಂಡು ಕುಲದೈವ ಮನೆದೈವವೆಂಬ
ಗುಡಿಯ ಹಳಿಯ ಹೊತ್ತು,
ಕುಲಗುರುವೆಂಬ ಲಿಂಗದ ಪೂಜೆಯನೆ ಮಾಡಿ,
ಕುಲನೀತಿಯೆಂಬ ಧರ್ಮಶಾಸ್ತ್ರವ ನೋಡಿಕೊಂಡು
ಹಲವು ಜಾತಿಗಳೆಲ್ಲ ಅರಿದೆನೆಂದು,
ತನ್ನ ದ್ವಾರವಟ್ಟಕ್ಕೆ ಬಂದು ನಿಂದರೆ,
ತನ್ನ ಮನ ಒಲ್ಮೆಯಿಂದ ಅನ್ನವನು ನೀಡಿ,
ಉಮ್ಮಾಯದಲ್ಲಿ ನಿಂದು ತನ್ನ ಮನ ವೈರಾಗ್ಯವಾದರೆ
ವಾರ ತಿಥಿ ನಕ್ಷತ್ರ ಯೋಗ ಕರಣ ಇಂತಿವೈದನು
ಪಂಚಾಂಗದಲ್ಲಿ ತಿಳಿದು ನೋಡಿ,
ಬ್ರಹ್ಮ ಕಲ್ಯಾಣಿಯೊಳು ಪತ್ರವ ಕೊಂಡು ಇದ್ದು
ನಾಳೆ ಸಂದುಹೋದೆನೆಂಬುವನು ಮುಂದಲಿತ್ತು
ತನ್ನ ಕುಲಬಾಂಧವರಿಗೆ ಹೇಳಿ ಬಲಾತ್ತಾಗಿ ಹೋಗಬಲ್ಲರೆ
ಆತನಿಗೆ `ವೈರಾಗ್ಯದದೇವರೆಂದು' ಎನ್ನಬಹುದು ಕಾಣಿರೊ.
ಇಂತೀ ವೈರಾಗ್ಯದ ಭೇದವನರಿಯದೆ
ಕಾಕುಮನುಜರು ತಮ್ಮ ಕುಲಛಲವೆಂಬುವ ಕಂಬವ ಕೈಹಿಡಿದು
ಕುಲದೈವ ಮನೆದೈವವೆಂಬ ಗುಡಿಯ ಹಳಿಯ ಕೆಡವಿಬಿಟ್ಟು
ಕುಲಗುರುವೆಂಬ ಲಿಂಗಪೂಜೆಯನು ಬಿಟ್ಟು
ಕುಲನೀತಿಯೆಂಬ ಧರ್ಮದ ಶಾಸ್ತ್ರದ ಪತ್ರವನು ಹರಿದುಬಿಟ್ಟು
ಪಾಷಂಡಿಮತದ ರಾಶಿಯೊಳಗಾದ ಮನುಜರ ಕೈಯಲ್ಲಿ
ದೀಕ್ಷೆಯನು ಮಾಡಿಕೊಂಡು, ಕಾವಿ ಅರಿವೆಯ ಹೊದ್ದುಕೊಂಡು,
ದೇವರೊಳಗೆ ದೇವರಾದೆನೆಂದು ಭಕ್ತರ ಕೂಡೆ ಶರಣಂಗೊಟ್ಟು,
ನಾನು ವೈರಾಗ್ಯದ ದೇವರೊಳಗೆ ದೇವರೆಂದು ಹೆಸರಿಟ್ಟುಕೊಂಡು,
ನುಡಿವಾಚಾರರೂಪದ ಸೂಳೆಯರು ಏನಾಯಿತ್ತು ಎಂದರೆ,
ಜ್ಞಾನಶ್ರವಣರ ವಾಹನಕ್ಕೆ ಹುಟ್ಟಿದಂಥ
ಕುನ್ನಿ ತೊತ್ತಿನ ಮಕ್ಕಳಾಗಿರ್ದ
ವೆಂದಾತ ಸಿದ್ಧಮಲ್ಲನದಾತ
ಮೇಗಣಗವಿಯ ಗುರುಸಿದ್ಧೇಶ್ವರಪ್ರಭುವೆ.
963
ಶಿವಯೋಗಿ ಶಿವಯೋಗಿ ಎಂದ್ಹೆಸರಿಟ್ಟುಕೊಂಡು ನುಡಿವ ಅಣ್ಣಗಳಿರಾ !
ನಿಮ್ಮ ಅಂಗಕುಳ ಒಳಗೊಂಡು ಕಾಮಿನಿಯರ ಬೆಳೆದ ಹೊಲನ ಹೊಕ್ಕು
ಕೂಡಿಸಿ ತಿಂಬುವ ಪಶುವಿನ ನಾಲ್ಕು ಕಾಲನು ಮುರಿದು,
ಘಟ್ಟವೆಂಬ ಗವಿಯೊಳಗೆ ಮನದ ದಿಟ್ಟವೆಂಬ ಗೂಟಕ್ಕೆ ಕಟ್ಟಿ,
ತನುವೆಂಬ ಗಿರಿಗಹ್ವರದೊಳಗೆ ಬೆಳೆದಿದ್ದ
ನಾನಾ ಪರಿಪರಿಯ ಗಿಡ, ಕಸಾದಿಗಳೆಲ್ಲವ ಭಾನುವೊಲು
ಮಂತ್ರದಿಂದ್ಹಲ್ಲ ಕಿತ್ತು ಸುಟ್ಟು ಬೂದಿಯನು ಮಾಡಿ
ಸರ್ವಕ್ಕೆಲ್ಲ ಪಣಮಾಡಿಕೊಂಡು ಇರಬಲ್ಲರೆ,
ಹಲವು ಕಡೆಗೆ ಹರಿದಾಡುವಂತೆ ಮನವನೆಲ್ಲ ನೆಲೆಗೊಳಿಸಿ
ನಿಲಿಸಿದಂತಾ ಮಹಿಮನ ಶಿವಯೋಗೀಶ್ವರನೆಂದೆನ್ನಬಹುದು ಕಾಣಿರೊ !
ನಿಮ್ಮ ಅಂಗ ಗುರುಕೊಟ್ಟ ಅರಿವಿನ ಅರಿವೆಯನು ಬಿಟ್ಟು,
ಮರವಿನ ಮನೆಯೊಳಗೆ ಮೂರ್ಛೆಗೈದರೆ,
ನಿಮ್ಮನ್ನು ಹರಕೊಂಡು ತಿಂದೆನೆಂದು ಬರುವ
ಕಾಳೋರಗನೆಂಬ ಸರ್ಪನ ಉತ್ತರದ ಬಾಯ ಮುಚ್ಚಿ
ನವದ್ವಾರಂಗಳನ್ನೆಲ್ಲ ಹೊಲಿದು, ಒಂಬತ್ತು ಬಾಗಿಲಿಗೆ ಬೀಗಮುದ್ರೆಯ ಮಾಡಿ,
ತುಂಬಿದಾ ಕುಂಭದೊಳಗಿನ ಉದಕದಂತೆ ಇರಬಲ್ಲರೆ
ಅಂತಹವನಿಗಾ ಕಾಲನ ಬಾಧೆಯ ಗೆಲಿದಂಥ
ಮಹಿಮನೆಂದೆನ್ನಬಹುದು ಕಾಣಿರೊ!
ನಿಮ್ಮಂಗ ಆಧಾರವೆಂಬ ಗದ್ದಿಗೆಯ ಮೇಲೆ
ಪದ್ಮಾಸನವೆಂಬ ಪವನಗ್ರಂಥಿಯ ಹೊಲಿದು,
ನಿರ್ಮಳ ಸುಚಿತ್ತದಲ್ಲಿ ಮೂರ್ತವನು ಮಾಡಿಕೊಂಡು,
ಪೂರ್ವದಿಕ್ಕಿನಲ್ಲಿ ಮುಖವನಿಕ್ಕಿ ಪಂಚಮಕ್ಕೆ ದೃಷ್ಟಿಯನ್ನಿಟ್ಟು ನೋಡಲಾಗಿ,
ಅಡರೇರಿ ಬರುವ ಸಿಡಿಲು ಮಿಂಚಿನ ಅವಸ್ಥೆ ಶೌರ್ಯವನು ಕಂಡು,
ಪಶ್ಚಿಮಕ್ಕೆ ಮುಖವ ತಿರುವಿ ಪೂರ್ವಕ್ಕೆ ದೃಷ್ಟಿಯನ್ನಿಟ್ಟು ನೋಡಲಾಗಿ
ಭಾನುವಿನ ಸಮೀಪದಲ್ಲಿ ಇದ್ದ ಬಯಲಿಗೆ ಬಯಲು
ಆಕಾರಗೆಟ್ಟ ಪುರುಷನ ನಿಲವು ನಿಧಾನವ ನೋಡಿಕೊಂಡು
ಸರ್ವಮುನಿಜನಂಗಳಿಗೆಲ್ಲ ಅರ್ತಿಯನು ಮಾಡಿ ಹೇಳಿ
ನಿರ್ಮಾಯವಾಗಿ ಹೋಗಬಲ್ಲರೆ ಆತನಿಗಾ ಮರಣಕ್ಕೆ ವಿಧಿಹಿತನಾದಂಥ
ಮಹಾಮಹೇಶ್ವರನೆಂದೆನ್ನಬಹುದು ಕಾಣಿರೊ !
ಇಂತು ಇದನರಿಯದೆ ಯೋಗಿ ಶ್ರವಣ ಸನ್ಯಾಸಿ
ಕಾಳಾಮುಖಿ ಪಾಶುಪತಿಗಳೆಂಬ ಹೆಸರಿಟ್ಟುಕೊಂಡು
ದೇಶವ ತಿರುಗುವ ಶಿವಯೋಗಿಗಳೆಂಬುವ
ಮೋಸ ಡಂಬಕರ ಕುಟಿಲಗಳ ಕಂಡು ನಗುತ್ತಿರ್ದಾತ
ಸಿದ್ಧಮಲ್ಲನದಾತ ಮೇಗಣಗವಿಯ ಗುರುಸಿದ್ಧೇಶ್ವರಪ್ರಭುವೆ.
964
ಶಿವಯೋಗಿ ಶಿವಯೋಗಿಯೆಂದ್ಹೆಸರಿಟ್ಟುಕೊಂಡು ನುಡಿವ ಅಣ್ಣಗಳಿರಾ !
ನಿಮ್ಮ ಧ್ಯಾನಮೂಲವೆಂಬ ಮನೆಯ ಪೂರ್ವಸ್ಥಾನ ಬಾಗಿಲೊಳಗೆ ಬರುವ
ಭಾನುವಿನ ಬಟ್ಟೆಯ ಬೆಳಕಿನಲ್ಲಿ ನಿಂದು,
ಶ್ರೀರಾಮ ರಾಮನೆಂಬುವ ಸ್ಮರಣೆಯನು ಮಾಡಬಲ್ಲರೆ
ಆತನಿಗೆ ತನ್ನ ಕಾಯಪುರವೆಂಬ ಪಟ್ಟಣದೊಳಗೆ
ಮೇಲುದುರ್ಗದೊಳಗಿರ್ದು ಅರಸಿನ ದಾಳಿಯನು ಮಾಡಿ
ಕೊಳುಕೊಂಡು ಹೋದನೆಂದು ಬರುವ ಕಾಲನ ಪರಿವಾರವ ಕಂಡು,
ಮೇಲುದುರ್ಗದೊಳಗಿರ್ದ ಅರಸಿನ ವಲಯಂ ಬಿಟ್ಟು,
ಪಟ್ಟಣವ ಹಾಳಕೆಡವಿ ಗೋಳಿಟ್ಟ ಅರಸನಂತೆ,
ಬಯಲಿಗೆ ಬಯಲು ಆಕಾರದಲ್ಲಿ ನಿಂದು,
ಬರುತ್ತಲಾ ಪರಿವಾರವನ್ನು ಕಂಡು,
ಕಾದಿ ಜಗಳವನು ಕೊಟ್ಟು ಹಿಂದಕ್ಕೆ ನೂಕಿ,
ಪರಾಲಯದೊಳಗಿರ್ದ ಅರಸನನ್ನು ಮೇಲುದುರ್ಗಕ್ಕೆ ತಂದು ಇಂಬಿಟ್ಟು
ಹಾಳ ಪಟ್ಟಣವನ್ನು ತುಂಬಿಸಿ ಮೇಳೈಸಿ
ಮನೆಯ ಬಂಧು ದಾಯಾದರೆಲ್ಲರು ಆತಂಗೆ ಕಾಲವಂಚನೆಗೆ ಗೆಲಿದಂಥ
ಶಿವಯೋಗೀಶ್ವರನೆಂದೆನ್ನಬಹುದು ಕಾಣಿರೋ.
ಇಂತು ಕಾಯದ ಕೀಲನೆ ಅರಿಯದೆ, ಕಾಲವಂಚನೆಗೆ ಒಳಗಾಗಿ,
ನಾನು ಶಿವಯೋಗಿ ಶಿವಯೋಗಿಯೆಂದು ಹೆಸರಿಟ್ಟುಕೊಂಡು
ಒಬ್ಬರಿಗೊಬ್ಬರು ಗುರೂಪದೇಶವ ಕೊಟ್ಟು,
ಉರಿಯ ಸೋಂಕಿದ ಕರ್ಪುರದ ಧೂಪದಂತೆ ಇರಬೇಕೆಂದು,
ಹೆಂಡಿರ ಬಿಟ್ಟು ಮಕ್ಕಳ ಬಿಟ್ಟು ಮಂಡೆಯನು ಬೋಳಿಸಿಕೊಂಡು
ಮನದ ನಿಲುಗಡೆಯನರಿಯದ ಗೂಬೆಗಳು
ಕಾವಿಯ ಅರಿವೆಯನು ಹೊದ್ದುಕೊಂಡು,
ದೇವರೊಳಗೆ ದೇವರೆಂದು ಪೂಜೆಗೊಂಡು,
ಮಠ ಮನೆಯಲ್ಲಿ ಬಸಲ ಪರ್ಯಾದಿಯಲ್ಲಿ ನಿಂದು,
ಬೋನದಾಸೆಗೆ ಜ್ಞಾನಬೋಧೆಯನು ಹೇಳುವ ಗುರುವಿನ
ಬ್ರಹ್ಮಕಲ್ಪನೆಯ ಮನ ತುಂಬಿ ಬಿರಿಕಿಕ್ಕಿ ಹೋಗುವಾಗ,
ಕಾಲನವರು ತಮ್ಮ ಪತ್ರವನು ನೋಡಿಕೊಂಡು ಬಂದು ಹೋಗಲಿತ್ತ
ಕಲಿತ ವಿದ್ಯೆ ಕೈಕಾಲನು ಹಿಡಿದು ಎಳಕೊಂಡು ಹೋಗುವಾಗ
ಗಟ್ಟಿನೆಲಕ್ಕೆ ಬಿದ್ದು ಕೆಟ್ಟೆ ಕೆಟ್ಟೆ ಸತ್ತೆ ಸತ್ತೆ ಎಂದು
ಹಲ್ಲು ಗಂಟಲ್ಹರಕೊಂಡು ಹೋಗುವಂಥ ಶಿವಯೋಗಿಗಳೆಂಬ ಕುಟಿಲರ ಕಂಡು
ನಗುತ್ತಿರ್ದಾತ ಸಿದ್ಧಮಲ್ಲನದಾತ ಮೇಗಣಗವಿಯ
ಗುರುಸಿದ್ಧೇಶ್ವರಪ್ರಭುವೆ.
965
ನಾನಾ ಜನ್ಮಂಗಳ ತಿರುಗಿ ಮಾನವ ಜನ್ಮಕ್ಕೆ ಬಂದು
ಲಿಂಗೈಕ್ಯನಾಗಿರುವುದೇ ಚಂದ.
ಶಾಸ್ತ್ರಂಗಳ ಓದಿ ಸಂಪಾದನೆಯ ಮಾಡಿ ಹೇಳಿ ಕೇಳುವ ಅಣ್ಣಗಳಿರಾ
ಕೃತಯುಗದಲ್ಲಿ ಹನ್ನೆರಡು ಭಾರ ಜ್ಯೋತಿರ್ಲಿಂಗವನು
ಬ್ರಹ್ಮರ್ಷಿಗಳು ತಮ್ಮ ವೇದಮಂತ್ರದಿಂದ ನಿರ್ಮಿತವ ಮಾಡಿದ ಲಿಂಗವು
ರವಿ ಶಶಿ ಆದಿಗಳು ಇರುವನಂತ ಸ್ಥಾವರಲಿಂಗವಾಗಿ
ಸ್ಥಾಪ್ಯಗೊಂಡವು ಕಾಣಿರೊ.
ತ್ರೇತಾಯುಗದಲ್ಲಿ ಲಕ್ಷ ಲಿಂಗವನು ನಮ್ಮ ರವಿಕುಲ ರಘುರಾಮರು
ತಮ್ಮ ವೇದಮಂತ್ರದಿಂದ ನಿರ್ಮಿತವ ಮಾಡಿದ ಲಿಂಗವು
ರವಿ ಶಶಿಯಾದಿಗಳು ಇರುವನಕ ಸ್ಥಾವರಲಿಂಗವಾಗಿ
ಸ್ಥಾಪ್ಯಗೊಂಡಿದ್ದವು ಕಾಣಿರೋ.
ದ್ವಾಪರಯುಗದಲ್ಲಿ ಸೋಮವಂಶಿಕರು ತಮ್ಮ ವೇದಮಂತ್ರದಿಂದ
ನಿರ್ಮಿತವ ಮಾಡಿವ ಲಿಂಗವು ಗ್ರಾಮಕ್ಕೆ ಒಂದು ಕಲ್ಕೇಶ್ವರನಾಗಿ
ರವಿ ಶಶಿಗಳಿರುವನಕ ಸ್ಥಾವರಲಿಂಗವಾಗಿ ಸ್ಥಾಪ್ಯಗೊಂಡವು ಕಾಣಿರೋ.
ಕಲಿಯುಗದಲ್ಲಿ ಹುಟ್ಟಿದ ಮನುಜರು
ಕೃತ, ತ್ರೇತಾ, ದ್ವಾಪರ ಇವು ಮೂರು ಯುಗದಲ್ಲಿ
ಬ್ರಹ್ಮ ಕ್ಷತ್ರಿಯರು ತಮ್ಮ ವೇದಮಂತ್ರದಿಂದ ನಿರ್ಮಿತವ ಮಾಡಿ,
ಇದ್ದ ಲಿಂಗವನು ಅತಿಗಳೆದು ಇಷ್ಟಲಿಂಗಯೆಂದು
ಅದಕ್ಕೆ ಪಾದ್ಯ ತೀರ್ಥ ಪ್ರಸಾದವನು ಅರ್ಪಿಸಿ,
ಹುಟ್ಟಿದ ಮನುಜರೆಲ್ಲ ತಲೆತಲೆಗೊಂದು ಲಿಂಗವನು
ಕಟ್ಟಿಕೊಂಡಿದ್ದರೇನಯ್ಯ, ಆ ಲಿಂಗಕ್ಕೆ ನಿಷ್ಕ್ರಿಯವಾಗಲಿಲ್ಲ.
ಕಾರ್ಯಕ್ಕೆ ಬಾರದೆ ಅಕಾರ್ಯವಾಗಿ ಹೋಗಿತ್ತು ಕಾಣಿರೋ.
ಅದು ಎಂತೆಂದರೆ : ಕೃತಯುಗದಲ್ಲಿ ಹುಟ್ಟಿದ ಮನುಜರು
ಸುವರ್ಣಲಿಂಗವನು ಪೂಜೆಯ ಮಾಡಿಪ್ಪರು.
ಆ ಸುವರ್ಣವು ಕಲಿಯುಗದಲ್ಲಿ ಹುಟ್ಟಿದ ಮನುಜರ
ರಾಯರ ದೇವರ ಭಂಡಾರಕ್ಕೆ ಯೋಗ್ಯವಾಯಿತ್ತು ಕಾಣಿರೋ.
ತ್ರೇತಾಯುಗದಲ್ಲಿ ಹುಟ್ಟಿದ ಮನುಜರು
ಕಾರಪತ್ರದ ಲಿಂಗದ ಪೂಜೆಯ ಮಾಡಲು,
ಆ ಕಾರಪತ್ರದ ಲಿಂಗವು ಕಲಿಯುಗದಲ್ಲಿ ಹುಟ್ಟಿದ ಮನುಜರ
ರಾಯರ ದೇವರ ಭಂಡಾರಕ್ಕೆ ಯೋಗ್ಯವಾಗಿತ್ತು ಕಾಣಿರೋ.
ದ್ವಾಪರಯುಗದಲ್ಲಿ ಹುಟ್ಟಿದ ಮನುಜರು
ನಾಗತಾಮ್ರದ ಲಿಂಗವನು ಪೂಜೆಯ ಮಾಡಲು
ಆ ನಾಗತಾಮ್ರದ ಲಿಂಗವು ಕಲಿಯುಗದಲ್ಲಿ ಹುಟ್ಟಿದ ಮನುಜರ
ರಾಯರ ದೇವರ ಭಂಡಾರಕ್ಕೆ ಯೋಗ್ಯವಾಯಿತ್ತು ಕಾಣಿರೋ.
ಕಲಿಯುಗದಲ್ಲಿ ಹುಟ್ಟಿದ ಮನುಜರು ಕಲ್ಲುಲಿಂಗವನು
ತಮ್ಮ ಕೈಲ್ಹಿಡಿದುಕೊಂಡು ಪಂಚಮುಖದ ಪರಮೇಶ್ವರದೇವರು
ಎಮ್ಮ ಕರಸ್ಥಲಕ್ಕೆ ಬಂದನೆಂದು ಬಿಂಕವನು ಹೇಳುವ ಡೊಂಕುಮನುಜರು
ಕಾಯ ಅಸುವಳಿದು ನೆಲಕ್ಕೆ ಬಿದ್ದು ಹೋಗುವಾಗ
ಕೈಯಲ್ಲಿ ಕಲ್ಲುಲಿಂಗವು ಭೂಮಿ ಆಸ್ತಿಯನು ಭೂಮಿ ಕೂಡಿ ಹೋಗುವಾಗ
ಒಂ ನಮಃಶಿವಾಯ ಎಂಬ ಮಂತ್ರವು ಮರೆತು ಹೋಯಿತು.
ಅದ ಕಂಡು ನಗುತಿರ್ದಾತ ಸಿದ್ಧಮಲ್ಲನದಾತ
ಮೇಗಣಗವಿಯ ಗುರುಸಿದ್ಧೇಶ್ವರಪ್ರಭುವೆ.
966
ಪೂರ್ವವನಳಿದು ಪುನರ್ಜಾತನಾದೆನೆಂದು
ಪೆಸರಿಟ್ಟುಕೊಂಡು ನುಡಿವ ಅಣ್ಣಗಳಿರಾ,
ನಿಮ್ಮ ಅಂಗ, ಆ ಈಶ್ವರದೇವರು ಹುಟ್ಟಿಸಿದ
ಮೂರೂವರೆ ಮೊಳದ ಸ್ಥೂಲಕಾಯವಾಗಿ ಜೀಕಿತ್ತು.
ಬ್ರಹ್ಮಕಲ್ಪನೆಯ ಮಾನವನು ಜಾಜಿಯನಾಗಿಸಿ
ಮರುವಾದೆ ಮನುಜರ ಕೈಯಲ್ಲಿ ಅನ್ನ ಉಣ್ಣದೆ,
ಅಂಗಿಯ ಕೊಳ್ಳದೆ, ಸ್ವರ್ಗ-ಮತ್ರ್ಯ-ಪಾತಾಳ
ಇವು ಮೂರು ಲೋಕವನು ಬಿಟ್ಟು, ಬೇರೊಂದು ಸ್ಥಳದಲ್ಲಿ ಇರಬಲ್ಲರೆ,
ಆತನಿಗೆ ಪೂರ್ವವನಳಿದ ಮನುಜೋತ್ತಮನೆಂದೆನ್ನಬಹುದು ಕಾಣಿರೋ.
ನಿಮ್ಮ ಅಂಗದ ಈಶ್ವರದೇವರು ಹುಟ್ಟಿಸಿದ
ಮೂರುವರೆ ಮೊಳದ ಸ್ಥೂಲಕಾಯವನು ಮುಂದಿಟ್ಟುಕೊಂಡು
ಹಲವು ಜಾತಿಗಳ ನೆಲೆಯನರಿಯದೆ,
ಮನೆ ಮನೆಯಲ್ಲಿ ಕಾಡಿ ಬೇಡಿ ಉಂಬುವ
ಪಾಷಂಡಿಗಳ ದೀಕ್ಷೆಯನು ಮಾಡಿಕೊಂಡು,
ಕಾವಿಯರಿವೆಯನ್ಹೊದ್ದುಕೊಂಡು
ನಾನು ಪೂರ್ವವನಳಿದು ಪುನರ್ಜಾತನಾದೆನೆಂದು ಪೂಜೆಗೊಂಬುವ
ಜಾತಿಶ್ರೇಷ್ಠ ಅಜ್ಞಾನಿಗಳಿಗೆ ಜಾತಿಸೂತಕ ಉಳಿಯಿತೆ ?
ಸುಜ್ಞಾನಿಗಳು ಹೋಗಿ ಅವರಿಗೆ ಶರಣಂ ಕೊಟ್ಟರೆ,
ಅವರಾ ಮನೆಯಲ್ಲಿ ಅನ್ನವನುಂಡರೆ, ಅಗ್ನಿಯ ಕಂಡರೆ,
ಮೊದಲೆ ತಾವೇ ಭೋಗಿಸಿ ಮೇಲೆ ಮಲಮೂತ್ರವ ಭುಂಜಿಸಿದಂತೆ ಆಯಿತ್ತು
ಎಂದಾತ ಸಿದ್ಧಮಲ್ಲನದಾತ ಮೇಗಣಗವಿಯ
ಗುರುಶಿವಸಿದ್ಧೇಶ್ವರಪ್ರಭುವೆ.
967
ಎದೆಯಲಿಂಗವನು ಬಿಟ್ಟು ಗುಡಿಯಲಿಂಗಕ್ಕೆ
ಶರಣೆನ್ನಲಾಗದು ಎಂದು ಹೇಳುವ ಕುದಿಗಿಳಿಗಳು ನೀವು ಕೇಳಿರೋ.
ನಿಮ್ಮ ಅಂತರಂಗದೊಳಗಿರ್ಪ ಲಿಂಗವನು ಬಿಟ್ಟು
ಅನ್ಯದೈವಕ್ಕೆ ಶರಣೆಂದರು, ಅದು ಎಂತೆಂದರೆ,
ಬೀದಿಯೊಳು ಹಿಟ್ಟು ಮಾಡುವ ಕಲ್ಲುಲಿಂಗವ ತಂದು
ಅದಕ್ಕೆ ಪಾದ್ಯ ತೀರ್ಥ ಪ್ರಸಾದವನರ್ಪಿಸಿ,
ಶಿವಲಿಂಗದೇವರೆಂದು ಶಿಖೆಯಲ್ಲಿ ಕಟ್ಟಿಕೊಂಡು
ನಾವು ಶಿವಭಕ್ತರು ಅನ್ಯದೈವಕ್ಕೆ ಶರಣೆನ್ನಲಾಗದು ಎಂದು
ಹೇಳುವ ಬರಿಯ ಮಾತಿನ ತರ್ಕಿಗಳ ಕಂಡು ನಗುತಿರ್ದಾತ
ಸಿದ್ಧಮಲ್ಲನದಾತ ಮೇಗಣಗವಿಯ ಗುರುಶಿವಸಿದ್ಧೇಶ್ವರಪ್ರಭುವೆ.
968
ಜ್ಞಾನಗುರುವಿನ ಶ್ರೀಪಾದವಿಡಿದ ಶಿವಕವಿ ಅತೀತನೆಂತೆನೆ : ``ಪರಬ್ರಹ್ಮಸ್ವರೂಪ ಉತ್ತಮಂ ಮುಕ್ತಿ ಸಂತತಃ
ದೇವದೂತಿ ಪ್ರಸನ್ನಿತೆ ಉಭಯಮಾರ್ಗ ವರಕವಿ ಮುದಿಮಮ್
ಪ್ರಳಯಕಾಲಸ್ಯ |
ಆತ್ಮತೃಪ್ತಿ ನರಕವಿ ರಾಜವಂದಿತಾ ತನ್ನಿಷ್ಟ ನರಕಪಿತಃ
ತ್ರಿವಿಧ ಶಬ್ದ ಶಾಸ್ತ್ರಯಿತಾರ್ಥ ಸಮೋದ್ದಿಷ್ಟ ವಚನಧಾರಿ ನಿಷ್ಕಳಂ ||''(?)
ಶ್ರೀ ಶ್ರೀ ಕವಿಗಳೆಂದು ಪೆಸರಿಟ್ಟುಕೊಂಡು ನುಡಿವಣ್ಣಗಳಿರಾ
ಕಾಯದ ಕೀಲನರಿತು ಕಾವ್ಯತ್ವವನು ಮಾಡಿ ಭೇದವ ಬಲ್ಲರೆ ಹೇಳಿ,
ಅರಿಯದಿರ್ದೊಡೆ ಕೇಳಿ.
ನಿಮ್ಮ ಅಂಗ ಪಾತಾಳವೆಂಬ ಪವನಸೂತ್ರವನು ಮೆಟ್ಟಿ
ಬಿಡುವಿಲ್ಲದಂತಾ ಉಯ್ಯಾಲೆಯನಾಡುತಿಹುದು.
ನಿಮ್ಮ ಅಂಗ ಭುವಿಯೆಂಬ ಭೂಚಕ್ರದ ಮೂಲ ತಿಳಿದು
ನಾಭಿಮಂಡಲವೆಂಬ ಹುತ್ತದೊಳಗಿರ್ದ
ನಾಗಕೂರ್ಮನೆಂಬ ಘಟಸರ್ಪನ ತಲೆಕೆಳಗಾಗಿ
ಬಾಲ ಮೇಲಕಾಗಿರುವುದು ಕಾಣಿರೋ.
ಯೋಗದೃಷ್ಟಿಯೆಂಬ ನಾಗೇಶ್ವರನನು ಹಿಡಿದುಕೊಂಡು ಊದಲಾಗಿ
ಆಗ ನಾಗಕೂರ್ಮನೆಂಬ ಸರ್ಪ ಸಭೆಯನು ತಿಳಿಯಲಿಕ್ಕೆ ಇಳುಹಿ
ತಲೆಯ ಮೇಲಕ್ಕೆ ಮಾಡಿ ಗಗನಾಕಾರವೆಂಬ ಮಂಡಲಕ್ಕೆ
ಹೆಡೆಯೆತ್ತಿ ಆರ್ಭಟಿಸಿ ಝೇಂಕರಿಸಿ ನಲಿದಾಡುವಂತೆ,
ನಾದವನು ತನ್ನಲ್ಲಿ ಜ್ಞಾನೋದಯದಿಂದ ಲಾಲಿಸಿ
ಕೇಳಬಲ್ಲರೆ ಆತನಿಗೆ ಝೇಂಕಾರ ಮೊದಲಾದ
ನಾಲ್ಕು ವೇದ, ಆರು ಶಾಸ್ತ್ರ, ಹದಿನೆಂಟು ಪುರಾಣ
ಇಪ್ಪತ್ತೆಂಟು ದಿವ್ಯಾಗಮ, ಮೂವತ್ತೆರಡು ಉಪಶಾಸ್ತ್ರಂಗಳಲ್ಲಿ
ಗೀತ ಗಾಯನ ಯತಿ ಪ್ರಾಸ ದೀರ್ಘ ಗುರು ಲಘು
ಬತ್ತೀಸ ರಾಗವನು ಎತ್ತಿ ಹಾಡುವಂತ ಮೂಲದ ಕೀಲ
ಬಲ್ಲನೆಂದೆನ್ನಬಹುದು ಕಾಣಿರೋ.
ನಿಮ್ಮ ಅಂಗ ಪಂಚಶತಕೋಟಿ ಭುವನದಲ್ಲಿ
ಚಲಿಸ್ಯಾಡುವಂಥ ಮನದ ಚಂಚಲವೆಂಬ ಪಕ್ಷಿಯ ಪಕ್ಕವನು ಹರಿದು,
ತನುವೆಂಬ ಪಂಜರದೊಳಗೆ ಇಂಬಿಟ್ಟುಕೊಂಡು,
ತಾಮಸ ಮದಗುಣಾದಿಗಳೆಂಬ ಹುಳುಗಳ ಜಾತಿಗಳ
ತೂಗಡಿಕೆ ಮದನಿದ್ರೆ ವಾಹಡಿಕೆ ಆಕಳಿಕೆ ಸೀನು ಬಿಕ್ಕಳಿಕೆ
ಬದಗರ ತೇಗು ಮೊದಲಾದ ತಾಮಸಗುಣಾದಿ ಗುಣಂಗಳೆಂಬ
ಹುಳುಜಾತಿಗಳನ್ನೆಲ್ಲ ತಿಂದು ನುಂಗಿ ನಿರ್ಮಲ ದೇಹಿಯಾಗಿರಬಲ್ಲರೆ
ಆತನಿಗೆ ಒಂ ನಮಃಶಿವಾಯ ಎಂಬ ಷಡಕ್ಷರದ ಭೇದವ
ಬಲ್ಲನೆಂದೆನ್ನಬಹುದು ಕಾಣಿರೋ.
ನಿಮಗೆ ಅಷ್ಟದಿಕ್ಕಿನಲ್ಲಿ ಆಡುವಂಥ ದಶರೂಪಗಳನ್ನೆಲ್ಲ
ಚಿತ್ತ ಏಕ ಮಾಡಿ, ಸುಜ್ಞಾನವೆಂಬ ಹಸ್ತದಲ್ಲಿ ಹಿಡಿದು,
ಮುಖದ ಮೇಲುಗಿರಿಮಂದರಪರ್ವತದ ಶಿಖರದ ತುದಿಯಲ್ಲಿ ನಿಲ್ಲಿಸಿ,
ಕ್ಷೀರಸಾಗರವೆಂಬ ಸಮುದ್ರದೊಳಗೆ ಹುಚ್ಚೆದ್ದು ಸೂಸಿ ಆಡುವಂಥ
ತೆರೆಗಳನ್ನೆಲ್ಲ ನಿಲ್ಲಿಸಬಲ್ಲರೆ ಆತನಿಗದು
ತ್ರಿಕಾಲ ಮರಣಾದಿಗಳನ್ನೆಲ್ಲ ಗೆಲಿಯಬಲ್ಲಂಥ
ಮಹಾಶಿವಯೋಗೀಶ್ವರನೆಂದೆನ್ನಬಹುದು ಕಾಣಿರೋ.
ಆತನಿಗೆ ಜ್ಞಾನ ಅರ್ಥ ಪದದ ಕೀಲ ವಚನಂಗಳ ಅರ್ಥ
ಅನುಭಾವಂಗಳ ಮಾಡಬಲ್ಲನೆಂದೆನ್ನಬಹುದು ಕಾಣಿರೋ !
ಇಂತು ಮಂತ್ರದ ಕೀಲನರಿಯದ ಕವಿಗಳು
ಕಂದಯ್ಯಗೆ ಮಹಾಪ್ರಭುಲಿಂಗಲೀಲೆ, ಕರಣಹಸಿಗೆ, ಮಿಶ್ರಾರ್ಪಣ,
ನವಚಕ್ರಕೋಟಿಗಳೆಂಬ ಇಂತೀ ಭುವಿಯಲ್ಲಿ ಶಿವಾಗಮವೆಂದು
ಬರಿಯ ಮಾತಿನ ಮತಿಯ ಪತ್ರವನು ಹಿಡಕೊಂಡು ಓದಿ,
ಅದರೊಳಗಿನ ಅರ್ಥವನು ಭಾವಂಗಳಲಿ ತಿಳಿತಿಳಿದು ನೋಡಿ,
ಜ್ಞಾತತ್ವದ ವಚನಂಗಳ ಮಾಡಿ ಇಡುವಂಥ ಕವಿಗಳು
ತಮ್ಮ ಆತ್ಮದ ಶುದ್ಧಿಯ ತಾವರಿಯದೆ
ಭೂತವೊಡೆದವರು ಬೊಗಳಾಡಿದಂತೆ ಆಯಿತ್ತು ಕಾಣಿರೋ.
ಅದೆಂತೆಂದರೆ :ಛಂದಸ್ಸು, ನಿಘಂಟು, ಅಮರ, ವ್ಯಾಕರಣ,
ನಾನಾರ್ಥಗಳೆಂಬ ಹಂಚಿನ ಕುಡಿಕೆಯೊಳಗೆ ತುಂಬಿದ
ಅರ್ಥ ಅನುಭಾವಂಗಳ ತಿಳಿತಿಳಿದು ನೋಡಿ,
ಪೃಥ್ವಿ ಅಪ್ಪು ತೇಜ ವಾಯು ಆಕಾಶ ರವಿಶಶಿಯಾದಿಗೂ
ಹೆಸರದೆಸೆಯ ಕೊಂಡುಕೊಂಡು, ಇಂತಿವು ಮೂರನು ಕೂಡಿಕೊಂಡು,
ಒಂದಕ್ಕೆ ಒಂದು ಕಟ್ಟಿ ಹಾಕಿ ಪ್ರಾಸ ಬಿದ್ದಿತೊ ಬೀಳದೊ ಎಂದು ತಮ್ಮನದಲ್ಲಿ
ತಾವು ಅಳದಾಡುವಂತೆ
ಒಂದು ಹೊದವಿದ ಪದ್ಯವನು ಮಾಡಿ ಇಡುವಂತಹ
ಕಲಿಕೆಯ ಕವಿಗಳು ಮುಂದೆ ಅಜ್ಞಾನದಿಂದ
ಮುಕ್ತಿಯ ದಾರಿಯ ಕಾಣಲರಿಯದೆ ಮುಂದುಗಾಣದ ತುರುಕರು
ಅಘೋರವೆಂಬ ನರಕದ ಕಿಚ್ಚಿನ ಕೊಂಡದೊಳಗೆ ಬಿದ್ದು
ಹೋರಟೆಗೊಳ್ಳುತ್ತಿದ್ದರು ಕಾಣಿರೋ.
ಅದೆಂತೆಂದರೆ ; ಛಂದಸ್ಸು ನಿಘಂಟು ಅಮರ ವ್ಯಾಕರಣ
ನಾನಾರ್ಥಂಗಳೆಂಬುವೆಲ್ಲ ಕವಿಯೆಂಬ ಕುಂಬಾರ ಮಾಡಿ
ಸವಿದುಂಡು ಬೀದಿಯೊಳಗೆ ಬಿಟ್ಟಿರ್ದ ಎಂಜಲ ಪತ್ರಾವಳಿಯೊಳಗಿನ
ಭೋಜನಕ್ಕೆ ಕವಿಗಳೆಂಬುವ ಆರುಮಂದಿ ಸೊಣಗಗಳು
ಕೂಗಿಡುತಿರ್ದವು ಕಾಣಿರೋ.
ಅದೆಂತೆಂದರೆ:ಕಾಮ ಘನವೆಂದು ಮಾಡಿದಾತ ಒಬ್ಬ ಕವಿಯೆಂಬ ಸೊಣಗ.
ಕ್ರೋಧ ಘನವೆಂದು ಮಾಡಿದಾತ ಒಬ್ಬ ಕವಿಯೆಂಬ ಸೊಣಗ.
ಮದ ಘನವೆಂದು ಮಾಡಿದಾತ ಒಬ್ಬ ಕವಿಯೆಂಬ ಸೊಣಗ.
ಮೋಹ ಘನವೆಂದು ಮಾಡಿದಾತ ಒಬ್ಬ ಕವಿಯೆಂಬ ಶ್ವಾನನು.
ಮಚ್ಚರ ಘನವೆಂದು ಮಾಡಿದಾತ ಒಬ್ಬ ಕವಿಯೆಂಬ ಶ್ವಾನನು.
ಲೋಭ ಘನವೆಂದು ಮಾಡಿದಾತ ಒಬ್ಬ ಕವಿಯೆಂಬ ಶ್ವಾನನು.
ಇಂತಿವರು ಆರು ಮಂದಿ ಕವಿಗಳೆಂಬ ಶ್ವಾನಗಳು ಕೂಡಿ
ನಾ ಹೆಚ್ಚು ತಾ ಹೆಚ್ಚು ಎಂದು ಒಂದಕ್ಕೊಂದು ಕಾದಾಡಿ ಚಿತ್ತಪಲ್ಲಟವಾಗಿ,
ಆ ಪತ್ರದೊಳಗಿನ ಬೋನದ ಸವಿಯನು ಬಿಟ್ಟು ಚಿತ್ತಪಲ್ಲಟವಾಗಿ,
ಆ ಪತ್ರದ ತುಳಿಯನು ಹರಿದುಕೊಂಡು ತಿಂದು ಹಲವು ಕಡೆಗೆ
ಹರಿದಾಡುತ್ತಿದ್ದವು ಕಾಣಿರೋ.
ಅದು ಎಂತೆಂದರೆ :ಇಂತು ಕಾಯದ ಕೀಲನರಿಯದೆ ಮಾಡಿದ ಕವಿಗಳು
ಕಾಲನ ಬಾಧೆಗಳೆಂಬ ಮರಣಕ್ಕೆ ಒಳಗಾಗಿ ಹೋದಂತೆ
ಕುರುಡ ಕವಿಗಳಂ ಕಂಡು ನಗುತ್ತಿದ್ದಾತ ಸಿದ್ಧಮಲ್ಲನದಾತ
ಮೇಗಣಗವಿಯ ಗುರುಸಿದ್ಧೇಶ್ವರಪ್ರಭುವೆ.
969
ಕವಿ ಕವಿಗಳೆಂದು ಹೆಸರಿಟ್ಟುಕೊಂಡು ನುಡಿವ ಅಣ್ಣಗಳಿರಾ !
ಕಾಯದ ಕೀಲನರಿತು ಕವಿತ್ವವನು ಮಾಡುವಂಥ ಭೇದವನು
ಬಲ್ಲರೆ ಹೇಳಿ, ಅರಿಯದಿರ್ದರೆ ಕೇಳಿ.
ನಿಮ್ಮ ಅಂಗಕಾಯವೆಂಬ ಅಕ್ಷರಕ್ಕೆ `ವಾ' ಎಂಬ ಒತ್ತು ಕೊಟ್ಟು
ಇಳಿಯ ತೆಗೆದು ಜನ್ಮದಲ್ಲಿ ನುಡಿಸಬಲ್ಲರೆ
ಆತನೀಗ ಪಂಚತತ್ವದ ಮೂಲವ ತಿಳಿದು
ಮನವೆಂಬ ಗದ್ದಿಗೆಯ ಅಜ್ಞಾನವೆಂಬ ನಾದಸ್ವರವನು ಹಿಡಿದುಕೊಂಡು
ಅದರ ಅನುವರಿತು ಊದಿ, ಪಿಂದೆ ದಾಡೆಯಿಂದ
ಪೃಥ್ವಿಯ ಎತ್ತಿದ ಸರ್ಪನ ಎಬ್ಬಿಸಿ ಬ್ರಹ್ಮಾಂಡಕ್ಕೆ ಮುಖ ಮಾಡಿ
ನಿಲ್ಲಿಸಬಲ್ಲರೆ ಆತನಿಗಾಗಿ ಗೀತ ಗಾಯನ ವಾದ್ಯ
ಪ್ರಾಸ ದೀರ್ಘ ಗುರು ಲಘುಗಳೆಂಬ ಭೇದವ ಬಲ್ಲೆನೆಂದೆನ್ನಬಹುದು.
ನಿಮ್ಮ ಅಂಗ ಕಾಯವೆಂಬ ಅಕ್ಷರಕ್ಕೆ `ವಾ' ಎಂಬ ಒತ್ತುಕೊಟ್ಟು ಕಾಣಿರೋ !
ಗುಡಿಸ ಕೊಟ್ಟು, ಗುಡಿಸಿನ ಒಳಗೆ ಸುಳಿದು ಜಿಹ್ವೆಯಲ್ಲಿ ನುಡಿಸಬಲ್ಲರೆ
ಅಂತಹವನಿಗೆ ತನ್ನ ತನುವೆಂಬ ಹುತ್ತದ
ಒಂಬತ್ತು ಹೆಜ್ಜವನು ಮುಚ್ಚಿದ ದ್ವಾರಂಗಳನ್ನೆಲ್ಲ ಬಳಿದು
ಅಂಬರಮಂಟಪದೊಳಗೆ ಸುಳಿದಾಡುವಂಥ ಶಂಭುಲಿಂಗವನು
ನೋಡಿಕೊಂಡು ಸಂತೈಸಿ, ವರುಷ ವರುಷಕ್ಕೆ
ಒಂದು ಸಂಭ್ರಮದ ಜಾತ್ರೆಯ ನೆರೆಯಬಲ್ಲರೆ
ಆತನಿಗೆ ಮಹಾಪ್ರೌಢನೆಂದೆನ್ನಬಹುದು ಕಾಣಿರೋ.
ನಿಮ್ಮ ಕಾಯವೆಂಬ ಅಕ್ಷರಕ್ಕೆ `ವಾ' ಎಂಬ ಒತ್ತುಕೊಟ್ಟು,
ಕೊಂಬಿನಿಂದಿಳಿಯ ತೆಗೆದು ಆತನಿಗೆ ಆರು ಮೂರುಗಳೆಂಬ
ನವರಸವಿದ್ಯ ನಾದವನೆಬ್ಬಿಸುವಂಥ ತಾಳಗತಿಯ
ಪದಕಾರಣವ ಬಲ್ಲನೆಂದೆನ್ನಬಹುದು ಕಾಣಿರೋ.
ನಿಮ್ಮ ಅಂಗಕಾಯವೆಂಬ ಅಕ್ಷರಕ್ಕೆ `ವಾ' ಎಂಬ ಒತ್ತುಕೊಟ್ಟು
ಮೇಲೆತ್ವವಂ ಕೊಟ್ಟು, ಕೆಳಗೈತ್ವವಂ ಕೊಟ್ಟು,
ಇವೆರಡನು ಕೂಡಿ ಒಂದಮಾಡಿ ನುಡಿಸಬಲ್ಲರೆ
ಆತನಿಗೆ ಸ್ವರ್ಗ ಮತ್ರ್ಯ ಪಾತಾಳ ಇಂತೇಳು ಭುವನ,
ಹದಿನಾಲ್ಕು ಲೋಕ, ಸಪ್ತೇಳುಸಾಗರ, ಅಷ್ಟಲಕ್ಷ ಗಿರಿಪರ್ವತಗಳನ್ನೆಲ್ಲ
ತನ್ನ ಅಂತರಂಗವೆಂಬ ಕುಕ್ಷಿಯೊಳಗೆ ಇಂಬಿಟ್ಟುಕೊಂಡು
ಪರರಿಗೆ ಕಾಣಬಾರದಂತಹ ಕುರೂಪಿಯಾಗಿ ಇರಬಲ್ಲರೆ
ಆತನಿಗೆ ಮಹಾಶಿವಜ್ಞಾನಿಯೆಂದೆನ್ನಬಹುದು ಕಾಣಿರೋ.
ನಿಮ್ಮ ಅಂಗಕಾಯವೆಂಬ ಅಕ್ಷರಕ್ಕೆ `ವಾ' ಎಂಬ ಒತ್ತುಕೊಟ್ಟು,
ಉತ್ವ ಔತ್ವ ಕೊಟ್ಟು, ಉತ್ವ ಔತ್ವವೆರಡನು ಕೂಡಿ
ಒಂದುಮಾಡಿ ನಿಲಿಸಿ ಜಮ್ಮೆದಲ್ಲಿ ನುಡಿಸಬಲ್ಲರೆ
ಆತನಿಗೆ ಆ ನರಕವಿ ವರಕವಿಗಳ ಕಣ್ಣಿಗೆ ಕಾಣಬಾರದಂತಹ
ಮುಸುಕಿನ ಮುಡಿಯಂ ಮಂದಿರ ಮನೆಯೊಳಗೆ
ಮುಹೂರ್ತವ ಮಾಡಿಕೊಂಡಿಹುದು.
ಓಂಕಾರವೆಂಬುವದೊಂದು ಅಕ್ಷರವ ನೋಡಿ
ಅನಂತ ಪರಿಪರಿಯ ವಚನಗಳ ಮಾಡಬಲ್ಲರೆ
ಆತನಿಗೆ ಮಹಾ ಉತ್ತಮ ಶಿವಕವೀಶ್ವರನೆಂದೆನ್ನಬಹುದು ಕಾಣಿರೋ.
ನಿಮ್ಮ ಅಂಗಕಾಯವೆಂಬ ಅಕ್ಷರಕ್ಕೆ `ವಾ' ಎಂಬ ಒತ್ತುಕೊಟ್ಟು
ಒಂದು ಸೊನ್ನೆಯ ಕೊಟ್ಟರೆ `ವಂ' ಎಂದು ಅಂತರಂಗದಲ್ಲಿ ತಿಳಿದು,
ಜಿಹ್ವೆಯಲ್ಲಿ ನುಡಿಯಬಲ್ಲರೆ ಆತನಿಗೆ ಕಾಯಪುರವೆಂಬ ಪಟ್ಟಣದೊಳಗೆ
ಹರಿದಾಡುವಂಥ ಆರುಮಂದಿ ತಳವಾರರ ತಲೆಯ ಕುಟ್ಟಿ,
ಮೂರುಮಂದಿ ಗರ ಬೆರೆದ ನೆಂಟರ ಮೂಗ ಕೊಯ್ದು,
ಸಾವಿರೆಸಳಿನ ಕಮಲದೊಳಗೆ ಪೊಕ್ಕು,
ತನ್ನ ಸಾವು ಮರಣ ತಪ್ಪಿಸಿಕೊಳ್ಳಬಲ್ಲರೆ ಆತನಿಗೆ
ಮಹಾಶಿವಯೋಗೀಶ್ವರನೆಂದೆನ್ನಬಹುದು ಕಾಣಿರೋ.
ನಿಮ್ಮ ಅಂಗಕಾಯವೆಂಬ ಅಕ್ಷರಕ್ಕೆ `ವಾ' ಎಂಬ ಒತ್ತುಕೊಟ್ಟು
ಎರಡು ಸೊನ್ನೆಯ ಕೊಟ್ಟರೆ `ವಃ' ಎಂದು ಅಂತರಂಗದಲ್ಲಿ ತಿಳಿದು
ಜಿಹ್ವೆಯಲ್ಲಿ ನುಡಿಯಬಲ್ಲರೆ, ಆತನಿಗೆ ತನ್ನ ಅಂತರಂಗವೆಂಬ
ಹರಿವಾಣದೊಳಗೆ ತುಂಬಿಟ್ಟಿದ್ದಂತಹ ಷಡುರಸ ಪಂಚಾಮೃತ
ಪಂಚಕಜ್ಜಾಯಗಳೆಲ್ಲ ಸವಿದುಂಡು ಚಪ್ಪರಿಸಿ ಹಿಪ್ಪೆಯ ಮಾಡಿ
ಬೀದಿಯೊಳಗೆ ಬಿಸುಟಬಲ್ಲರೆ ಆತನಿಗೆ ಕಾಯದ ಕೀಲನರಿತು
ಕವಿತ್ವವನು ಮಾಡುವಂತಹ ಪ್ರೌಢನೆಂದೆನ್ನಬಹುದು ಕಾಣಿರೋ.
ಇಂತೀ ಕಾಯದ ಕೀಲನರಿಯದ ಕವಿಗಳು
ಛಂದಸ್ಸು, ನಿಘಂಟು, ಅಮರ, ವ್ಯಾಕರಣ,
ನಾನಾರ್ಥಗಳೆಂಬ ಹೆಂಚ ಹೊಡೆದು ನೆತ್ತಿಯ ಮೇಲೆ ಹೊತ್ತುಕೊಂಡು
ತಿರುಗುವ ಕವಿಗಳೆಂಬ ಚಾತುರ್ಯದ ಮಾತ ನಿಟ್ಟಿಸಲು
ಆಡ ಸವಿವ ಜಾತಿಗಳ ಕಂಡು ನಗುತಿರ್ದಾತ
ಸಿದ್ಧಮಲ್ಲನದಾತ ಮೇಗಣಗವಿಯ ಗುರು ಶಿವಸಿದ್ಧೇಶ್ವರಪ್ರಭುವೆ.
970
ಕವಿ ಕವಿಗಳೆಂದು ಹೆಸರಿಟ್ಟುಕೊಂಡು ನುಡಿವ ಅಣ್ಣಗಳಿರಾ !
ನಿಮ್ಮ ಸಪ್ತಪಾತಾಳದಿಂದ ಅತ್ತತ್ತವಿತ್ತು,
ಮುಂದೆ ಭುವನದ ಮೂಲವ ತಿಳಿದು ಗುಪ್ತಮಂಡಲವೆಂಬ
ಹುತ್ತದೊಳಗೆ ಇರ್ದ ಘಟಸರ್ಪದ ಅಡಿಯ ಮೇಲಕ್ಕೆ ಮಾಡಿ,
ಒಡನೆ ನಿಲಿಸಬಲ್ಲರೆ ಆತನಿಗೆ ಆ ನರಕವಿ ವರಕವಿಗಳ
ಕಣ್ಣಿಗೆ ಕಾಣಬಾರದಂತಹ ಮುಸುಕಿನ ಮಂದಿರದ ಮನೆಯೊಳಗೆ ಇದ್ದುಕೊಂಬ,
ತನ್ನ ತಲೆಕೆಳಗಾಗಿ ಪಾದ ಮೇಲಾಗಿ ಉಧೋ ಎಂದು
ಅತರ್ು ಗುರ್ತವಿಟ್ಟು ಆಳಬಲ್ಲರೆ ಆತನಿಗೆ
ಮಹಾಶಿವಜ್ಞಾನಿ ಎಂದೆನ್ನಬಹುದು ಕಾಣಿರೋ.
ನಿಮ್ಮ ಅಂಗ ಸ್ವರ್ಗ ಮತ್ರ್ಯ ಪಾತಾಳ, ಈರೇಳು ಭುವನ,
ಹದಿನಾಲ್ಕುಲೋಕ, ಪಂಚಶತಕೋಟಿ ಭುವನದ ವಿಸ್ತಾರವನ್ನೆಲ್ಲ
ತನ್ನ ಅಂತರಂಗದೊಳಗೆ ನೋಡಿಕೊಂಡು,
ಹೊರಗೆ ಶಿವಶಾಸ್ತ್ರ ಆಗಮ ಪುರಾಣಂಗಳ ನಿರ್ಮಿತವ ಮಾಡಿ,
ಇರಬಲ್ಲರೆ ಆತನಿಗೆ ಉತ್ತಮ ಶಿವಕವೀಶ್ವರ ಎಂದೆನ್ನಬಹುದು ಕಾಣಿರೋ.
ನಿಮ್ಮ ಅಂಗ ಉತ್ತರ ದಕ್ಷಿಣ ಪೂರ್ವ ಪಶ್ಚಿಮ
ನಾಲ್ಕು ದಿಕ್ಕಿನ ಮೂಲವ ತಿಳಿದು ಘಟಿಕಾಸ್ಥಾನವೆಂಬ ಒಂದಾಸನವ ಬರೆದು,
ಎಂಬತ್ನಾಲ್ಕು ಆಸನದ ಭೇದದ ಗುಣಾವಗುಣಗಳೆಲ್ಲಾ
ಒಂದೇ ಆಸನದಲ್ಲಿ ತಿಳಿದು, ಸತ್ಯವ ಹಿಡಿದು,
ನಿತ್ಯನಾಗಿರಬಲ್ಲರೆ ಆತ ತನಗೆ ಬಂದಂತಹ
ಮೂನ್ನೂರರವತ್ತು ಕಂಟಕಗಳನ್ನೆಲ್ಲ ಬಡಬಾಗ್ನಿಯ ಕಿಚ್ಚಿನಲ್ಲಿ ಸುಟ್ಟು,
ಬೂದಿಯನು ಗಂಗೆಯ ಕೂಡಿಸಿ, ಲಿಂಗಾಂಗಿಯಾಗಿರಬಲ್ಲರೆ
ಆತನಿಗೆ ಸ್ನಾನ ನೇಮ ಸಂಧ್ಯಾವಂದನ ಜಪ ಗಾಯತ್ರಿ ಸಪ್ತಗಾಯತ್ರಿಗಳ
ಸ್ಥಾನಸ್ಥಾನದಲ್ಲಿ ನುಡಿದು ಪ್ರಾಣಲಿಂಗದ ದರುಶನವಾಗಿರಬಲ್ಲರೆ,
ಆತನಿಗೆ ಅನಂತಕಾಲ ಚಕ್ರವ ಗೆಲಿದಂತಹ ಅಖಂಡಪರಿಪೂರ್ಣ
ಮಹಾಮಹಾದೇವರೆಂದೆನ್ನಬಹುದು ಕಾಣಿರೋ.
ಇಂತು ತಮ್ಮ ಅಂತರಂಗದೊಳಗಿದ್ದ ಕುಲಭಕ್ತನ ಭೇದವನರಿಯದೆ,
ನರಕವಿ ವರಕವಿಗಳು ಹಲವು ಶಾಸ್ತ್ರ ಆಗಮ ಪುರಾಣಗಳ ಓದಿ,
ಬಹುಮಾತುಗಳ ಕಲಿತು, ಬಂದ ಬರವು ನಿಂದ ನಿಲವು ತಡಿಯನರಿಯದೆ,
ಒಂದೊಂದನೆ ಪದ ಪದ್ಯವನು ಮಾಡಿ,
ಆಸ್ಥಾನದ ಸಭೆಯೊಳಗೆ ಕುಳಿತುಕೊಂಡು ಹಾಡಿ ಪಾಡುವಂತಹ
ಕವಿಗಳೆಂಬ ಕತ್ತೆಗಳ ಕಂಡು ನಗುತಿರ್ದಾತ
ಸಿದ್ಧಮಲ್ಲನದಾತ ಮೇಗಣಗವಿಯ ಗುರುಶಿವಸಿದ್ಧೇಶ್ವರಪ್ರಭುವೆ.
ಗ್ರಂಥಋಣ: ೧೫ ಸಮಗ್ರ ವಚನ ಸಂಪುಟಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು. 2001
*