Back to Top
Previous ಗೋರಕ್ಷ - ಗೋರಖನಾಥ ಹೆಂಡದ ಮಾರಯ್ಯ Next

ಮಾದಾರ ಚೆನ್ನಯ್ಯ ವಚನಗಳು

1155
ಕಾಯದ ಸುಳುಹುಳ್ಳನ್ನಕ್ಕ ಕರ್ಮಪೂಜೆ ಬೇಕೆಂಬರು.
ಜೀವನ ಸಂಚಾರವುಳ್ಳನಕ್ಕ ಜ್ಞಾನವನರಿಯಬೇಕೆಂಬರು.
ಜ್ಞಾನ ಧ್ಯಾನಿಸಿ ಕಾಬಲ್ಲಿ, ಕಾಯದ ಕರ್ಮದಿಂದ ಮುಕ್ತಿಯೋ ?
ಜೀವನ ಜ್ಞಾನದಿಂದ ಮುಕ್ತಿಯೋ? ಜ್ಞಾನ ಧ್ಯಾನದಿಂದ ಮುಕ್ತಿಯೋ ?
ಧ್ಯಾನಿಸಿ ಕಾಲ ಕುರುಹ ಎನಗೊಂದುಬಾರಿ ತೋರಾ.
ಕೈಯುಳಿ ಕತ್ತಿ ಅಡಿಗೂಂಟಕ್ಕಡಿಯಾಗಬೇಡ,
ಅರಿ ನಿಜಾ[ತ್ಮಾ]ರಾಮ ರಾಮನಾ.

1156
ಚಕ್ರಿಯ ಕುಲವಾಸದ ಮೃತ್ತಿಕೆಯಂತೆ,
ಏನ ನೆನೆದಡೂ ಅಪ್ಪುವಾರುವುದಕ್ಕೆ ಮುನ್ನವೆ,
ಚಿತ್ತದಲ್ಲಿ ತೋರುವ ತೋರಿಕೆ.
ಚಿತ್ರಕುಂಭಂಗಳ ಒಪ್ಪೊಪ್ಪದಲ್ಲಿ ಅಹ ತೆರನಂತೆ,
ವಸ್ತು ತನ್ನಯ ಭಾವದಲ್ಲಿ ನಿಶ್ಚಯವಾಗಿ ನಿಂದಲ್ಲಿ,
ಕೃತ್ಯ ಅಕೃತ್ಯವೆಂಬ ಹೆಚ್ಚುಕುಂದಿಲ್ಲ.
ಕರ್ಮವಿಲ್ಲದ ಪೂಜೆ,
ನಿರ್ಮಲವೆಂಬುದು ತೋರದ ಆ ಜಡ,
ಉಮ್ಮಳ ದುಮ್ಮಳವೆಂಬ ಉಭಯವಳಿದ ಸುಮ್ಮಾನಸುಖಿಗೆ
ಕರ್ಮ ನಿರ್ಮಲವೆಂಬುದೊಂದೂ ಇಲ್ಲ.
ಕೈಯುಳಿ ಕತ್ತಿ ಅಡಿಗೂಂಟಕ್ಕಡಿಯಾಗಬೇಡ,
ಅರಿ ನಿಜಾ[ತ್ಮಾ] ರಾಮರಾಮನಾ.

1157
ನಡೆನುಡಿ ಸಿದ್ಧಾಂತವಾದಲ್ಲಿ, ಕುಲ ಹೊಲೆ ಸೂತಕವಿಲ್ಲ.
ನುಡಿ ಲೇಸು, ನಡೆಯಧಮವಾದಲ್ಲಿ,
ಅದು ಬಿಡುಗಡೆಯಿಲ್ಲದ ಹೊಲೆ.
ಕಳವು ಪಾರದ್ವಾರಂಗಳಲ್ಲಿ ಹೊಲಬನರಿಯದೆ,
ಕೆಟ್ಟು ನಡೆವುತ್ತ, ಮತ್ತೆ ಕುಲಜರೆಂಬ ಒಡಲವರುಂಟೆ ?
ಆಚಾರವೆ ಕುಲ, ಅನಾಚಾರವೆ ಹೊಲೆ.
ಇಂತೀ ಉಭಯವ ತಿಳಿದರಿಯಬೇಕು.
ಕೈಯುಳಿ ಕತ್ತಿ ಅಡಿಗೂಂಟಕ್ಕಡಿಯಾಗಬೇಡ,
ಅರಿ ನಿಜಾ[ತ್ಮಾ] ರಾಮ ರಾಮನಾ.

1158
ನರಕುಲ ಹಲವಾದಲ್ಲಿ,
ಯೋನಿಯ ಉತ್ಪತ್ಯ ಒಂದೇ ಭೇದ.
ಮಾತಿನ ರಚನೆ ಎಷ್ಟಾದಡೇನು ?
ನಿಹಿತವರಿವುದು ಒಂದು ಭೇದ.
ವಸ್ತು ಜಾತಿ ಗೋತ್ರ ವಿಶೇಷವೆಂಬಲ್ಲಿ,
ದಿನರಾತ್ರಿಯೆಂಬ ಉಭಯವನಳಿವುದಕ್ಕೆ
ತಮ ಬೆಳಗೆರಡೆಂಬವಲ್ಲದಿಲ್ಲ.
ಕುಲ ಉಭಯಶಕ್ತಿ ಪುರುಷತ್ವವಲ್ಲದಿಲ್ಲ.
ಬೇರೆ ಹಲವು ತೆರನುಂಟೆಂದಡೆ,
ಮೀರಿ ಕಾಬ ಶ್ರುತ ದೃಷ್ಟ ಇನ್ನಾವುದು ?
ಎಲ್ಲಕ್ಕೂ ನೀರು ನೆಲ ಸೂರ್ಯ ಸೋಮ
ಆರೈದು ನೋಡುವ ದೃಷ್ಟಿಯೊಂದೆ ಬೊಂಬೆ.
ಬೊಂಬೆ ಹಲವ ನೋಡಿಹೆ,
ಬೊಂಬೆ ಹಲವಂದ ಕಾಣ್ಬಂತೆ,
ಅದರಂಗವ ತಿಳಿದು ನಿಂದಲ್ಲಿ,
ಹಲವು ಕುಲದ ಹೊಲೆಯೆಂದೂ ಇಲ್ಲವೆಂದೆ.
ಕೈಯುಳಿ ಕತ್ತಿ ಅಡಿಗೂಂಟಕ್ಕಡಿಯಾಗಬೇಡ,
ಅರಿ ನಿಜಾ[ತ್ಮಾ] ರಾಮ ರಾಮನಾ

1159
ಮಹಾಜ್ಞಾನ ದಿವ್ಯಪರಿಪೂರ್ಣವಸ್ತು
ಜಗಹಿತಾರ್ಥವಾಗಿ ಸ್ವಯಂಭುವೆಂಬ ಸ್ವರೂಪವ ಬಿಟ್ಟು,
ಲೀಲಾಸಂಭವನಾಗಿ ಉಮಾಪತಿಯಾದಲ್ಲಿ,
ಪಂಚವಕ್ತ್ರದಿಂದ ಪಂಚಭೂತಿಕಂಗಳು ಕಲ್ಪಿಸುವಲ್ಲಿ,
ಕರ್ಮಶಕ್ತಿ ವಿಷ್ಣುರೂಪಾಯಿತ್ತು.
ಭಾವಶಕ್ತಿ ಬ್ರಹ್ಮರೂಪಾಯಿತ್ತು.
ಜ್ಞಾನಶಕ್ತಿ ರುದ್ರರೂಪಾಯಿತ್ತು.
ಈ ಉಭಯವ ಘಟಿಸಿ ನಿಂದಲ್ಲಿ,
ಷಡುದರ್ಶನ ಸಂಭವಿಸಿದ ಠಾವಾವುದು ?
ಒಂದು ವೃಕ್ಷದಲ್ಲಿ ಹುಟ್ಟಿದ ಫಲ, ಮೊದಲೆ ಎಳದಾಗಿ,
ತದನಂತರ ಮೀರಿ ಬಲಿದಲ್ಲದೆ ಬೀಜಾಂಕುರವಿಲ್ಲ.
ಮರದಿಂ ಮೀರಿ ತೋರುವ ಅಂಕುರವಿಲ್ಲ.
ವಸ್ತುವ ಮೀರುವ ದರ್ಶನವಿಲ್ಲ.
ಅಪ್ಪು ಒಂದರಲ್ಲಿ ಹಲವು ಫಲವನನುಭವಿಸುವಂತೆ,
ವಸ್ತು ಒಂದರಲ್ಲಿ ಸಕಲ ಕೃತ್ಯವ ಮಾಡಿ,
ತನ್ನ ಚಿತ್ತದ ಕಲೆಯ ಹರಿದುಕೊಂಬವಂಗೆ
ಅವನೊಳು ತಥ್ಯಮಿಥ್ಯ.
ಕೈಯುಳಿ ಕತ್ತಿ ಅಡಿಗೂಂಡಕ್ಕಡಿಯಾಗಬೇಡ,
ಅರಿ ನಿಜಾ[ತ್ಮಾ] ರಾಮ ರಾಮನಾ

1160
ರಜ್ಜು ರಸ ಕೂಡಿ ಅಗ್ನಿ ಮುಟ್ಟಿ ಉರಿದಲ್ಲಿ,
ಅದೇತರ ಹೊದ್ದಿಗೆಯ ಬೆಳಗು ?
ರಜ್ಜು, ರಸದಿಂದವೋ ? ಅಗ್ನಿಯ ಭಾವದಿಂದವೋ ?
ಈ ಮೂರರ ಹೊಲಬಿನ ಹೊದ್ದಿಕೆಯಲ್ಲಿ
ಬೆಳಗುವ ಪ್ರಜ್ವಲಿತ ಅನಲನ ಕೂಡುವಿನೊಳಗಾಯಿತ್ತು.
ಕಾಯದ ಕರ್ಮದ ಜ್ಞಾನದಿಂದ ಕಂಡೆಹೆನೆಂದಡೆ,
ನಾಮವಿಲ್ಲದ ರೂಪು, ಭಾವದಿಂದ ಅರಿವ ಠಾವಾವುದು ?
ಒಂದರಿಂದ ಒಂದ ಕಂಡೆಹೆನೆಂಬ ಸಂದೇಹ,
ಇನ್ನೆಂದಿಗೆ ಹರಿಗು ?
ಕೈಯುಳಿ ಕತ್ತಿ ಅಡಿಗೂಂಡಕ್ಕಡಿಯಾಗಬೇಡ,
ಅರಿ ನಿಜಾ[ತ್ಮಾ] ರಾಮ ರಾಮನಾ.

1161
ವೇದ ಶಾಸ್ತ್ರಕ್ಕೆ ಹಾರುವನಾಗಿ,
ವೀರ ವಿತರಣಕ್ಕೆ ಕ್ಷತ್ರಿಯನಾಗಿ,
ಸರ್ವವನಾರೈದು ನೋಡುವಲ್ಲಿ,
ವೈಶ್ಯನಾಗಿ ವ್ಯಾಪಾರದೊಳಗಾಗಿ,
ಕೃಷಿಯ ಮಾಡುವುದಕ್ಕೆ ಶೂದ್ರನಾಗಿ.
ಇಂತೀ ಜಾತಿಗೋತ್ರದೊಳಗಾದ ನೀಚ ಶ್ರೇಷ್ಠವೆಂಬ
ಎರಡು ಕುಲವಲ್ಲದೆ,
ಹೊಲೆ ಹದಿನೆಂಟುಜಾತಿಯೆಂಬ ಕುಲವಿಲ್ಲ.
ಬ್ರಹ್ಮವನರಿದಲ್ಲಿ ಬ್ರಾಹ್ಮಣ.
ಸರ್ವಜೀವಹತ ಕರ್ಮಕ್ಕೊಳಗಾಗಿದ್ದಲ್ಲಿ ಸಮಗಾರ.
ಈ ಉಭಯವನರಿದು ಮರೆಯಲಿಲ್ಲ.
ಕೈಯುಳಿ ಕತ್ತಿ ಅಡಿಗೂಂಟಕ್ಕಡಿಯಾಗಬೇಡ,
ಅರಿ ನಿಜಾ[ತ್ಮಾ] ರಾಮ ರಾಮನಾ.

1162
ಶುಕ್ಲ ಶೋಣಿತ ಮಜ್ಜೆ ಮಾಂಸ ಹಸಿವು ತೃಷೆ
ವ್ಯಸನ ವಿಷಯಾದಿಗಳೊಂದೆ ಭೇದ.
ಮಾಡುವ ಕೃಷಿ ವ್ಯವಸಾಯ ಹಲವಲ್ಲದೆ,
ತೋರುವ ತೋರಿಕೆ ಅರಿವಾತ್ಮನೊಂದೆ ಭೇದ.
ಆವ ಕುಲವಾದಡೂ ಅರಿದಲ್ಲಿಯೆ ಪರತತ್ವಭಾವಿ.
ಮರೆದಲ್ಲಿಯೆ ಮಲಮಾಯಾಸಂಬಂಧಿ.
ಇಂತೀ ಉಭಯವನರಿದು ಮರೆಯಲಿಲ್ಲ.
ಕೈಯುಳಿ ಕತ್ತಿ ಅಡಿಗೂಂಟಕ್ಕಡಿಯಾಗಬೇಡ,
ಅರಿ ನಿಜಾ[ತ್ಮಾ] ರಾಮ ರಾಮನಾ.

1163
ಸ್ಥೂಲ ಸೂಕ್ಷ್ಮ ಕಾರಣವೆಂಬ ಮೂರು ಕಂಬವ ನೆಟ್ಟು,
ಆಗುಚೇಗೆಯೆಂಬ ದಡಿಗೋಲಿನಲ್ಲಿ
ಅಗಡದ ಎಮ್ಮೆಯ ಚರ್ಮವ ತೆಗೆದು,
ಉಭಯನಾಮವೆಂಬ ನಾರಿನಲ್ಲಿ ತಿತ್ತಿಯನೊಪ್ಪವ ಮಾಡಿ,
ಭಾವವೆಂಬ ತಿಗುಡಿನಲ್ಲಿ
ಸರ್ವಸಾರವೆಂಬ ಖಾರದ ನೀರ ಹೊಯಿದು,
ಅಟ್ಟೆಯ ದುರ್ಗುಣ ಕೆಟ್ಟು,
ಮೆಟ್ಟಡಿಯವರಿಗೆ ಮುಟ್ಟಿಸಬಂದೆ.
ಮೆಟ್ಟಡಿಯ ತಪ್ಪಲ ಕಾಯದೆ
ಮೆಟ್ಟಡಿಯ ಬಟ್ಟೆಯ ನೋಡಿಕೊಳ್ಳಿ.
ಕೈಯುಳಿ ಕತ್ತಿ ಅಡಿಗೂಂಟಕ್ಕಡಿಯಾಗಬೇಡ,
ಅರಿ ನಿಜಾ[ತ್ಮಾ] ರಾಮ ರಾಮನಾ.

1164
ಸಾಂಖ್ಯ ಶ್ವಪಚ, ಅಗಸ್ತ್ಯ ಕಬ್ಬಿಲ,
ದೂರ್ವಾಸ ಮಚ್ಚಿಗ, ದಧೀಚಿ ಕೀಲಿಗ,
ಕಶ್ಯಪ ಕಮ್ಮಾರ, ರೋಮಜ ಕಂಚುಗಾರ,
ಕೌಂಡಿಲ್ಯ ನಾವಿದನೆಂಬುದನರಿದು,
ಮತ್ತೆ ಕುಲವುಂಟೆಂದು ಛಲಕ್ಕೆ ಹೋರಲೇತಕ್ಕೆ ?
ಇಂತೀ ಸಪ್ತಋಷಿಯರುಗಳೆಲ್ಲರೂ
ಸತ್ಯದಿಂದ ಮುಕ್ತರಾದುದನರಿಯದೆ,
ಅಸತ್ಯದಲ್ಲಿ ನಡೆದು, ವಿಪ್ರರು ನಾವು ಘನವೆಂದು
ಹೋರುವ ಹೊತ್ತುಹೋಕರ ಮಾತೇತಕ್ಕೆ ?
ಕೈಯುಳಿ ಕತ್ತಿ ಅಡಿಗೂಂಟಕ್ಕಡಿಯಾಗಬೇಡ,
ಅರಿ ನಿಜಾ[ತ್ಮಾ] ರಾಮ ರಾಮನಾ.

ಗ್ರಂಥಋಣ: ೧೫ ಸಮಗ್ರ ವಚನ ಸಂಪುಟಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು. 2001

ಪರಿವಿಡಿ (index)
*
Previous ಗೋರಕ್ಷ - ಗೋರಖನಾಥ ಹೆಂಡದ ಮಾರಯ್ಯ Next