ಉಗ್ಘಡಿಸುವ ಗಬ್ಬಿದೇವಯ್ಯ ವಚನಗಳು
|
|
1196
ಎರಡನರಿವಲ್ಲಿ ಭಂಡಾರಿ ಬಸವಣ್ಣ,
ಮೂರನರಿವಲ್ಲಿ ಚೆನ್ನಬಸವಣ್ಣ,
ಒಂದನರಿವಲ್ಲಿ ಪ್ರಭುದೇವರು.
ಇಂತೀ ಉಭಯದ ಸಂಗಂಗಳ ಮರೆದಲ್ಲಿ ನಿಜಗುಣ ನಿಜಸಂಗ.
ಇಂತೀ ಬಂಧಮೋಕ್ಷಕರ್ಮಂಗಳು
ಒಂದೂ ಇಲ್ಲದ ಮತ್ತೆ
ಬಾಗಿಲಿಂಗೆ ತಡಹಿಲ್ಲ.
ಎನ್ನ ಮಣಿಹ ಕೆಟ್ಟಿತ್ತು, ಕೂಡಲಸಂಗಮದೇವರಲ್ಲಿ ಬಸವಣ್ಣ
ಎನಗಾ ಮಣಿಹ ಬೇಡಾಯೆಂದ ಕಾರಣ.
1197
ಒಂದು ಬಾಗಿಲಲ್ಲಿ ಇಬ್ಬರ ತಡೆವೆ,
ಎರಡು ಬಾಗಿಲಲ್ಲಿ ಮೂವರ ತಡೆವೆ,
ಆರು ಬಾಗಿಲಲ್ಲಿ ಒಬ್ಬನ ತಡೆವೆ.
ಒಂಬತ್ತು ಬಾಗಿಲಲ್ಲಿ ನಿಂದು ನೋಡಲಾಗಿ
ಕೂಡಲಸಂಗಮದೇವರಲ್ಲಿ ಬಸವಣ್ಣ ಸಾಕ್ಷಿಯಾಗಿ ಎತ್ತಹೋದರೆಂದರಿಯೆ.
1198
ಓಂಕಾರದಲ್ಲಿ ಉಗ್ಘಡಿಸುತ್ತಿರಲಾಗಿ,
ಕೆಲಬಲದವರು ಓಡರಿನ್ನೆಂತೊ ?
ಅದು ಎನ್ನಾಜ್ಞೆಯಲ್ಲ; ಎನ್ನೊಡೆಯನ ಹಂದೆತನ.
ಸುಮ್ಮನಿರ್ದಡೆ ಎನ್ನ ಕೇಡು, ಹೇಳಿದಡೆ ಒಡೆಯಂಗೆ ಹಾನಿ.
ಕೂಡಲಸಂಗಮದೇವರಲ್ಲಿ ಬಸವಣ್ಣಾ ಹಿಂಗದಿರು ನಿನ್ನ ಭೃತ್ಯನೆಂದು.
1199
ಕಾಲವರ ಕೈಯಲ್ಲಿ ತಡೆವೆ,
ಮೇಲವರ ಕೋಲಿನಲ್ಲಿ ನಡೆವೆ,
ಬಳಿಯವರ ಬಾಯ ಹೊಯ್ದು ನಿಲಿಸುವೆ.
ಕೂಡಲಸಂಗಮದೇವರಲ್ಲಿ ಬಸವಣ್ಣನ ಬಲ್ಲವರೊಳಗೆ ಕೂಡಿ,
ಅರಿಯದವರ ಬಾರಕೋಲಿನಲ್ಲಿ ಚರ್ಮವನೆತ್ತಿ
ಊರಿಂದವೆ ಹೊರಡಿಸುವೆನು.
1200
ಜೀವನ ಬಾಗಿಲಲ್ಲಿ ಭ್ರಮೆಯ ತಡೆದು,
ಆತ್ಮನ ಬಾಗಿಲಲ್ಲಿ ಪ್ರಕೃತಿಯ ತಡೆದು,
ಪರಮನ ಬಾಗಿಲಲ್ಲಿ ಚಿತ್ತವ ತಡೆದು,
ಮಿಕ್ಕಾದ ವಾಯುಗಳ ದಿಸೆಯಿಂದ ಇಂದ್ರಿಯಂಗಳ ತಿಳಿದು,
ಇಂತೀ ಜೀವಾತ್ಮ ಪರಮ ತ್ರಿವಿಧಗುಣಂಗಳು ತಲೆದೋರದೆ
ಕರ್ಮೆಂದ್ರಿಯ ಭಾವೇಂದ್ರಿಯ ಜ್ಞಾನೇಂದ್ರಿಯ
ಇಂತೀ ತ್ರಿವಿಧಸ್ವಾನುಭಾವದಲ್ಲಿ ಅಡಗಿ,
ಓಂಕಾರದ ಉಲುಹು ನಷ್ಟವಾಗಿ
ಷಡಕ್ಷರ ಪಂಚಾಕ್ಷರ ಮೂಲದ ಉಭಯದ ಮೂಳೆ ಮುರಿದು
ಐವತ್ತೊಂದು ಭೇದದ ಸೂತಕದ ಸುಳುಹಡಗಿ
ಹಿಂದುಮುಂದಣ ಎಚ್ಚರಿಕೆ ಸುಮ್ಮಖ ತಿರುಗಲಾಗೆನುತ್ತಿದ್ದೆನು.
ಕೂಡಲಸಂಗಮದೇವರಲ್ಲಿ ಬಸವಣ್ಣನ ಮುಂದಣ ಎಚ್ಚರಿಕೆ
ಕುಂದದಂತೆ ಉಗ್ಗಡಿಸುತ್ತಿದ್ದೆನು.
1201
ಜ್ಞಾನ ಬಾ, ಮಾಯೆ ಹೋಗೆಂದು ಕಳುಹುತ್ತಿದ್ದೇನೆ.
ಅರಿವು ಬಾ, ಅಜ್ಞಾನ ಹೋಗೆಂದು ಕಳುಹುತ್ತಿದ್ದೇನೆ.
ನಿಃಕಲ ಬಾ, ಸಕಲ ಹೋಗೆಂದು ಕಳುಹುತ್ತಿದ್ದೇನೆ.
ನಿಃಪ್ರಪಂಚ ಬಾ, ಪ್ರಪಂಚ ಹೋಗೆಂದು ಕಳುಹುತ್ತಿದ್ದೇನೆ.
ಕೂಡಲಸಂಗಮದೇವರಲ್ಲಿ ಬಸವಣ್ಣನ ಬಲ್ಲವರನೊಳಗೆ ಕೂಡಿ
ಅರಿಯದವರ ಹೊರಗೆ ತಡೆವುತ್ತಿದ್ದೇನೆ.
1202
ಬಹುಜನಂಗಳೆಲ್ಲಾ ಓಲಗವಿಲ್ಲ ಹೋಗಿ,
ಸಲಿಗೆವಂತರಲ್ಲಿಲ್ಲ ನಿಲ್ಲಿ.
ಕಾಂತ ಸಂಬಂಧರು ಹೋಗಿ,
ಲೋಕಾಂತ ಭಂಡರು ನಿಲ್ಲಿ.
ಇಂತೀ ಅವರವರ ಸ್ವಸ್ಥಾನಂಗಳ ಸಲುಗೆಯನರಿದುಬಿಡುತ್ತಿದ್ದೇನೆ,
ಕೂಡಲಸಂಗಮದೇವರಲ್ಲಿ ಬಸವಣ್ಣನ ಕಾಲವೇಳೆಯನರಿದು.
1203
ಭಕ್ತಿಸ್ಥಲಕ್ಕೆ ಒಬ್ಬ, ಮಾಹೇಶ್ವರಸ್ಥಲಕ್ಕೆ ಇಬ್ಬರು,
ಪ್ರಸಾದಿಸ್ಥಲಕ್ಕೆ ಆತನಳಿಯನಲ್ಲದಿಲ್ಲ,
ಪ್ರಾಣಲಿಂಗಿಸ್ಥಲಕ್ಕೆ ಮೂವರು,
ಶರಣಸ್ಥಲಕ್ಕೆ ನಾಲ್ವರು,
ಐಕ್ಯಸ್ಥಲಕ್ಕೆ ಅಕ್ಕನ ತಮ್ಮನಲ್ಲದಿಲ್ಲ.
ಇಂತೀ ಕುರುಹಿನ ಬೆಂಬಳಿಯನರಿದು,
ಬಿಡುವರ ಬಿಟ್ಟು, ತಡೆವರ ತಡೆವುತ್ತಿದ್ದೇನೆ
ಕೂಡಲಸಂಗಮದೇವರಲ್ಲಿ ಬಸವಣ್ಣನರಿಕೆಯಾಗಿ.
1204
ಭಾವಭ್ರಮೆವಂತರು ಬಾರದಿರಿ,
ಜ್ಞಾನಹೀನರು ಬೇಗ ಹೋಗಿ,
ತ್ರಿವಿಧ ಮಲಕ್ಕೆ ಕಚ್ಚಿಮುಟ್ಟಿ ಹೊಡೆದಾಡುವರತ್ತಲಿ.
ನಿರುತ ಸ್ವಯಾನುಭಾವರು ಬನ್ನಿ,
ಪರಬ್ರಹ್ಮಸ್ವರೂಪರು ಬನ್ನಿ,
ಏಕಲಿಂಗನಿಷ್ಠಾಪರರು ದೃಢವಂತರು ಬನ್ನಿ,
ಸನ್ಮಾರ್ಗ ಸತ್ಕ್ರಿಯಾವಂತರು ಬನ್ನಿ,
ಎಂದು ಎನಗೆ ಕೊಟ್ಟ ಕಾಯಕ ಕೂಡಲಸಂಗಮದೇವರಲ್ಲಿ ಬಸವಣ್ಣ.
1205
ಮುಂದೆ ತ್ರಿವಿಧ ಮಲವಿದೆ,
ಆಶಯ ಕುಳಿ ಆಳವಿದೆ,
ಎಡಬಲದಲ್ಲಿ ರೋಷತಾಮಸವೆಂಬ ಹೊಯಿಲು ಹೊಯಿವುತ್ತಿದೆ,
ಹಂಕಾರವೆಂಬ ಮೇಲಣ ಕೊಂಬು
ತಲೆವಳಸಿ ಹೊಯಿವುತ್ತಿದೆ.
ನಿಂದಡಿಗೆ ಪಾದ ಬಲುಹು ನಿಜ ಎಚ್ಚರಿಕೆ,
ತಿವಿಧದ ಕತ್ತಲೆಯ ಸೋದಿಸಿಕೊಳ್ಳಿ.
ಕಾಲವರು ಮೇಲವರು ಒಳ್ಳೆಯವರು.
ಇಂತೀ ಬಾಳೇ ಕ್ಷಣ.
ಶರಣರಡಿವಿಡಿದು ಭೇದಿಸಿ ನಡೆ ಎಂದು ಸಾರುತ್ತಿದ್ದೇನೆ,
ಕೂಡಲಸಂಗಮದೇವಪ್ರಿಯ ಬಸವಣ್ಣ ಸಾಕ್ಷಿಯಾಗಿ.
ಗ್ರಂಥಋಣ: ಸಮಗ್ರ ವಚನ ಸಂಪುಟಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು
*