Previous ಬೊಕ್ಕಸದ ಚಿಕ್ಕಣ್ಣ ಉಪ್ಪರಗುಡಿಯ ಸೋಮಿದೇವಯ್ಯ Next

ದಸರಯ್ಯ ವಚನಗಳು

1054
ಉದುರಿ ಬೀಳುವನ್ನಕ್ಕ ನಿನ್ನ ಹಂಗು
ಉದುರಿ ಬಿದ್ದಲ್ಲಿ ಎನ್ನೊಡವೆ
ನಾ ಪೂಜಿಸದನ್ನಕ್ಕ ದೇವ.
ಎನ್ನ ಪೂಜೆಗೊಳಗಾದಲ್ಲಿ ನೀ ಭಕ್ತ, ನಾ ನಿತ್ಯ.
ಇಂತೀ ಸರ್ವರ ದಯವಸ್ತು ಬೀಜವಲಾ.
ಸರ್ವಮಲತ್ರಯದೂರ,
ಸರ್ವಾಂಗ ಸಂತೋಷನಿಗರ್ವಿ
ದಸರೇಶ್ವರಲಿಂಗವು ತಥ್ಯಮಿಥ್ಯದವನಲ್ಲಾ.್ಙ
1055
ಎಲ್ಲವನರಿದಲ್ಲಿ,
ಕಡೆಯಲ್ಲಿ ಕೊಲ್ಲಬೇಕೆಂಬುದೊಂದು ವೇದ ಉಂಟೆ?
ಶಾಸ್ತ್ರವನೆಲ್ಲವ ಕಲಿತಲ್ಲಿ ಗೆಲ್ಲ ಸೋಲಕ್ಕೆ
ಹೋರಬೇಕೆಂದು ಕಡೆಯಲ್ಲಿ ಒಂದು ಸೊಲ್ಲುಂಟೆ?
ಪುರಾಣವನ್ನೆಲ್ಲವನೋದಿದಲ್ಲಿ ಸರ್ವಜೀವವ
ಕೊಲ್ಲು ಕೊರೆ ಎಂಬುದೊಂದು ದಳ್ಳುರಿಯುಂಟೆ?
ಶ್ರುತಿಯ ಕೇಳುವಲ್ಲಿ ಸ್ಮೃತಿಯನಂಗೀಕರಿಸುವಲ್ಲಿ
ಸರ್ವಹತವ ಮಾಡಬೇಕೆಂಬುದೊಂದು ಗತಿಯುಂಟೆ?
ಇಂತೀ ಆತ್ಮನಲ್ಲಿ ಸರ್ವಭೂತ ಹಿತವುಳ್ಳಂಗೆ
ಆತ ಅತೀತ ಸ್ವಯವಸ್ತು ದಸರೇಶ್ವರಲಿಂಗವು.
1056
ಎಲು ನರ ಚರ್ಮ ಮಜ್ಜೆ ಮಾಂಸದೊಳಗಾದ
ಕ್ರಿಮಿ ಎನ್ನಂಗದೊಳು ಹುಟ್ಟಿ,
ಮಲ ಹುಣ್ಣು ಉಗುಳುಗಳಲ್ಲಿ ಬೀಳುವುದ ಕಂಡು
ಅವ ನಾ ರಕ್ಷಿಸಿದೆನೆ?
ಅವು ಬೀಳಬೇಕೆಂದು ನಾ ಶಿಕ್ಷಿಸಿದೆನೆ?
ಇಂತೀ ಜೀವದ ದೃಷ್ಟವ ಕಂಡು
ಎನಗಿದೆತ್ತಣ ಸರ್ವ ಜೀವದಯ
ಈ ರಕ್ತದ ಲೇಪವ ಬಿಡಿಸಾ,
ಕಲ್ಲು ಮಣ್ಣು ಮರನಂತೆ
ಚೆನ್ನ ದಸರೇಶ್ವರಲಿಂಗಾ.
1057
ಒಂದನಹುದೆನಬೇಡ, ಒಂದನಲ್ಲಾ ಎನಬೇಡ.
ಉಭಯ ಉಳ್ಳನ್ನಕ್ಕ ಬಹುದುಃಖದ ಒಡಲು.
ಅಮೃತವ ಕುಡಿಯ ಕೊಟ್ಟು ವಿಷವ ಕುಡಿದೆನೆನಬೇಡ
ವಿಷವ ಕುಡಿಯ ಕೊಟ್ಟು ಅಮೃತವ ಕುಡಿದೆನೆನಬೇಡ.
ಆ ಗುಣ ತಮ್ಮಲ್ಲಿಯೆ ದೃಷ್ಟವಾಗಿ
ಶ್ರವವನರಿದು ಹಂದೆಯ ಹೊರಬೇಡ.
ಇಂತೀ ಗುಣವ ನಿನ್ನ ನೀ ಕೇಳಿ ತಿಳಿದಡೆ
ನಿನಗದು ಅನ್ಯಭಿನ್ನವಿಲ್ಲ, ಅದು ತನ್ಮಯಮೂರ್ತಿ
ದಸರೇಶ್ವರಲಿಂಗವು.

1058
ನುಡಿವಲ್ಲಿ ಕಿಂಕಲವನರಿದು,
ಕರವ ಬೀಸುವಲ್ಲಿ ತುಷಾರ ಕೀಟವನರಿದು,
ಅಡಿಯಿಡುವಲ್ಲಿ ಪೊಡವಿಯಲ್ಲಿ
ಹೊರಹೊಮ್ಮಿದ ಜೀವನ ಚೇತನಾದಿಗಳನರಿದು
ಮತ್ತೆ, ನೀಡುವಲ್ಲಿ ಹಿಡಿವಲ್ಲಿ,
ಮತ್ತೊಂದ ಒಡಗೂಡುವಲ್ಲಿ ಒಡಗೂಡಿ ಬಿಡುವಲ್ಲಿ
ಸರ್ವದಯಕ್ಕೆ ಪಡಿಪುಚ್ಚವಿಲ್ಲದಿರಬೇಕು.
ಇಂತೀ ಸಡಗರದ ಚಿತ್ತ ದಸರೇಶ್ವರಲಿಂಗವನೊಡಗೂಡುವಭಕ್ತಿ.
1059
ಪೃಥ್ವಿಯ ಅಂಶಿಕ ಅಂಗವಾಗಿ,
ಅಪ್ಪುವಿನ ಅಂಶಿಕ ಶುಕ್ಲ ಶೋಣಿತವಾಗಿ,
ತೇಜದ ಅಂಶಿಕ ಹಸಿವಾಗಿ,
ವಾಯುವಿನಂಶಿಕ ಜೀವಾತ್ಮನಾಗಿ,
ಆಕಾಶದ ಅಂಶಿಕ ಬ್ರಹ್ಮರಂದ್ರವಾಗಿ,
ಇಂತೀ ಐದರ ಗುಣವುಳ್ಳನ್ನಕ್ಕ ಗೆಲ್ಲ ಸೋಲ ಬಿಡದು.
ಇವನಲ್ಲಿಗಲ್ಲಿಯೆ ಇಂಬಿಟ್ಟು
ಇಂತೀ ಲಲ್ಲೆಯ ಬಿಡಿಸಯ್ಯಾ.
ಎನ್ನಲ್ಲಿ ನಿಮಗೆ ಖುಲ್ಲತನ ಬೇಡ.
ಅದು ಎನ್ನ ಸೋಂಕಲ್ಲ,
ಅದು ನಿನ್ನ ಸೋಂಕು ದಸರೇಶ್ವರಲಿಂಗಾ.
1060
ಸರ್ವಜೀವಂಗಳ ಕೊಲುವಲ್ಲಿ,
ಜೀವ ಜೀವನ ಕೈಯಲ್ಲಿ ಸಾವಲ್ಲಿ
ಆ ಕೊಲೆಗೆ ಒಲವರ ಬೇಡ.
ಆ ಕೊಲೆಯ ಕೊಲುವಲ್ಲಿ ಅದು ಹೊಲೆಯೆಂದು
ಆ ಜೀವವ ಬಿಡೆಂದು ಒಲವರ ಬೇಡ.
ಅದು ಕೊಲುವ ಜೀವದ ನೋವು, ಸಾವ ಜೀವದ ದಯ.
ಆ ಉಭಯದ ಹೊಲಬ ತಿಳಿದು
ಮನದ ನೀರಿನಲ್ಲಿ ಮಜ್ಜನವ ಮಾಡಿ
ಚಿತ್ತದ ಗಿಡುವಿನ ಪುಷ್ಪವ ಹರಿದು
ಹೊತ್ತಿಗೊಂದು ಪರಿಯಾದ ಚಂದನದ ಗಂಧವನಿಟ್ಟು
ತಥ್ಯಮಿಥ್ಯವಳಿದ ಅಕ್ಷತೆಯ ಲಕ್ಷಿಸಿ,
ಸುಗುಣ ದುರ್ಗುಣವೆಂಬ ಉಭಯದ ಹಗಿನವ ತೆಗೆದು,
ನಿಜ ಸುಗಂಧದ ಧೂಪವನಿಕ್ಕಿ,
ನಿತ್ಯಾನಿತ್ಯವೆಂಬ ನಟ್ಟಾಲಿಯ ದರ್ಪವ ಕಿತ್ತು,
ಮತ್ತಮಾ ಕಂಗಳ ತೆಗೆದ ದರ್ಪಣವ ತೋರುತ್ತ,
ಪೂರ್ವ ಪಶ್ಚಿಮ ನಷ್ಟವಾದ ಸತ್ತಿಗೆಯ ಹಿಡಿದು
ದುರ್ವಾಸನೆಯೆಂಬ ಉಷ್ಣವ ಪರಿಹರಿಸುವುದಕ್ಕೆ
ಸುಮತೆಯೆಂಬ ಆಲವಟ್ಟವನೆ ತಿರುಹುತ್ತ,
ಉತ್ತರ ಪೂರ್ವಕ್ಕೆ ಉಭಯವಲ್ಲಾಡದ ಚಾಮರವ ಢಾಳಿಸುತ್ತ,
ಇಂತೀ ವರ್ತನಂಗಳಲ್ಲಿ ಸತ್ಯಸಾಕ್ಷಿಯಾಗಿ
ಭಕ್ತಿ ಜ್ಞಾನ ವೈರಾಗ್ಯವೆಂಬೀ ಇಷ್ಟವ ಮಾಡಿ
ನಿಜ ನಿಶ್ಚಯದ ಬೆಳಗಿನ ಆರತಿಯನೆತ್ತಿ ನೋಡುತ್ತಿರಬೇಕು
ದಸರೇಶ್ವರಲಿಂಗವ.
1061
ಸರ್ವಜೀವ ನಿನ್ನ ಹಾಹೆ ಎಂಬೆನೆ? ಅದು ಭಿನ್ನಭಾವ
ತ್ರಿಗುಣಾತ್ಮಕರುಂಟು, ಅದು ನಿನಗನ್ಯವೆಂಬೆನೆ?
ಆ ತ್ರಿಗುಣಾತ್ಮಕರು ನಿನ್ನ ತಿಲಾಂಶ.
ಇಂತೀ ಸರ್ವಭೂತಕ್ಕೆ ನಿನ್ನ ದಯ.
ಎನಗಿದೇಕೆ ಗೆಲ್ಲ ಸೋಲವೆಂಬ ಖುಲ್ಲತನ,
ಎಲ್ಲ ಜೀವಕ್ಕೂ ಸರಿ.
ಅರುಣೋದಯದಂತೆ ಎನ್ನ ಚಿತ್ತದಲ್ಲಿ ಸರ್ವಜೀವಕ್ಕೆ ಎಲ್ಲಕ್ಕೂ
ದಯವ ಮಾಡು,
ಚೆನ್ನ ದಸರೇಶ್ವರಲಿಂಗಾ.
1062
ಸರ್ವಮಯ ನಿನ್ನ ಬಿಂದುವಾದಲ್ಲಿ
ಆವುದನಹುದೆಂಬೆ, ಆವುದನಲ್ಲಾಯೆಂಬೆ?
ಸರ್ವಚೇತನ ನಿನ್ನ ತಂತ್ರಗಳಿಂದ ಆಡುವವಾಗಿ
ಇನ್ನಾವುದ ಕಾಯುವೆ, ಇನ್ನಾವುದ ಕೊಲುವೆ?
ತರುಲತೆ ಸ್ಥಾವರ ಜೀವಂಗಳೆಲ್ಲಾ
ನಿನ್ನ ಕಾರುಣ್ಯದಿಂದೊಗೆದವು.
ಆರ ಹರಿದು ಇನ್ನಾರಿಗೆ ಅರ್ಪಿಸುವೆ?
ತೊಟ್ಟು ಬಿಡುವನ್ನಕ್ಕ ನೀ ತೊಟ್ಟುಬಿಟ್ಟ ಮತ್ತೆ
ನೀ ಬಿಟ್ಟರೆಂದು ಎತ್ತಿ ಪೂಜಿಸುತಿರ್ದೆ
ದಸರೇಶ್ವರನೆಂದು.
1063
ಸರ್ವವನರಿದಲ್ಲಿ ಸರ್ವಜ್ಞನಾದಲ್ಲಿ
ಇದಿರೆಲ್ಲಿ ತಾನೆಲ್ಲಿ? ಅದು ತನ್ನ ಭಿನ್ನ ಭಾವ
ಅನ್ಯರಲ್ಲಿ ಎಮ್ಮುವ ತೋರಿ
ಆ ಗುಣ ತನ್ನನೆ ಅನ್ಯವೆನಿಸೂದು.
ತನ್ನ ಶಾಂತಿ ಅನ್ಯರಲ್ಲಿ ತೋರಿ, ಅಲ್ಲಿ ಭಿನ್ನಭಾವವಿಲ್ಲದಿರೆ
ಅವರನ್ಯರಲ್ಲ ಎಂಬುವುದು ತನ್ನ ಗುಣ.
ಅನ್ಯವಿಲ್ಲವೆಂಬುದನರಿತು ತನ್ನೊಪ್ಪದ ದರ್ಪಣದಲ್ಲಿ ತೋರುವಂತೆ
ಇದಕ್ಕೇ ಕರ್ಕಶವಿಲ್ಲ
ದಸರೇಶ್ವರಲಿಂಗವನರಿವುದಕ್ಕೆ.

ಗ್ರಂಥಋಣ: ೧೫ ಸಮಗ್ರ ವಚನ ಸಂಪುಟಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು. 2001

ಪರಿವಿಡಿ (index)
*
Previous ಬೊಕ್ಕಸದ ಚಿಕ್ಕಣ್ಣ ಉಪ್ಪರಗುಡಿಯ ಸೋಮಿದೇವಯ್ಯ Next