1193
ಅಷ್ಟಮದಕ್ಕೂ ಒಂದರ ಹೆಚ್ಚಿಗೆ.
ನಾನಾ ವಿಕಾರಕ್ಕೂ ಒಂದೇ ವಿಕಾರ.
ನಾನಾ ಬುದ್ಧಿಗೂ ಒಂದೇ ಬುದ್ಧಿ.
ಒಂದು ಘಟ್ಟದಲ್ಲಿ ತೋರುವ ತಂತುವಿನ ದನಿಭಿನ್ನದಂತೆ,
ಅದು ಬಿಗಿವ, ಸಡಿಲಿಸುವ ತಂತ್ರದ ಭೇದ.
ಅರಿವು ಮರವೆಯಿಂದಾದ ಮದವ ನೆರೆ ಹೊತ್ತುಬಂದೆ.
ಕೊಂಡಡೆ ಲೇಸು, ಕಂಡಡೆ ಲೇಸು,
ಕಾಣದಿರ್ದಡೆ ಕರಲೇಸು, ಧರ್ಮೇಶ್ವರ[ಲಿಂಗಾ].
1194
ಎಲ್ಲಾ ಅಂತರಂಗ ತೃಪ್ತಿಯಾದಲ್ಲಿ,
ಮತ್ತತನವಿಪ್ಪುದು ಜಾಗ್ರದಲ್ಲಿ, ದೃಷ್ಠಾಂತದ ಸ್ವಪ್ನದಲ್ಲಿ.
ಛಾಯೆ ಮಾಯೆ ಸುಷುಪ್ತಿಯಲ್ಲಿ, ಬಿಂಬ ಛಾಯೆ ವಾಗ್ವಿಲಾಸಂಗಳಲ್ಲಿ,
ಕೇಳಿ ಬಾವಜ್ಞಾನದಿಂದರಿದು, ಮಹಾಜ್ಞಾನದಿಂದ ಕಂಡು,
ದಿವ್ಯಜ್ಞಾನದಿಂದ ಪರಿಪೂರ್ಣವಾಗಿ, ನೋಟ ಕೂಟವಿಲ್ಲದೆ,
ಕೂಟಕ್ಕೆ ಅಂಗವಿಲ್ಲದೆ, ಅಂಗಕ್ಕೆ ಆತ್ಮನಿಲ್ಲದೆ,
ಆತ್ಮಂಗೆ ಭಾವವಿಲ್ಲದೆ, ಭಾವಕ್ಕೆ ಭಾವವಿಲ್ಲದೆ ನಿಂದುದು,
ಚಿದ್ಭಾವವಿರಹಿತ ವಸ್ತುವದು, ಧರ್ಮೇಶ್ವರಲಿಂಗದ ಗೊತ್ತು.
1195
ಕರಣ ನಲ್ಕು, ಮದವೆಂಟು, ವ್ಯಸನವೇಳು,
ಅರಿಷಡ್ವರ್ಗಂಗಳಲ್ಲಿ, ಇಂತೀ ಉರವಣೆಗೊಳಗಾಗುತ್ತ,
ಆಣವ ಮಾಯಾ ಕಾರ್ಮಿಕವೆಂಬ ಮೂರು
ಸುರೆಯಲ್ಲಿ ಮುದುಡುತ್ತ, ನಾ ತಂದೆ ಸುಧೆ, ನಿಮಗೆಲ್ಲ ಎಂದೆ.
ಅದು ಧರ್ಮೇಶ್ವರಲಿಂಗದ ಅರ್ಪಣೆ.
1196
ಘಟಕುಂಭದಲ್ಲಿ ಜೀವನೆಂಬ ಜೇಗಟೆ ಬಂದಿತ್ತು.
ದೃಷ್ಟವ ಇಷ್ಟದಲ್ಲಿ ಕುಟ್ಟಲಾಗಿ, ಮೊಳೆ ಮುರಿದು ಒಡಲೊಡೆಯಿತ್ತು.
ಅಂಗದ ಅಗ್ನಿಯಲ್ಲಿ ಬೇಯಿಸಿ, ಮೂರುಸಂಗವಡೆದ ಮಡಕೆಯ ಓಡಿನಲ್ಲಿ
ಶ್ರುತ ದೃಷ್ಟ ಅನುಮಾನವೆಂಬ ಕೋಲಿನಲ್ಲಿ ಕಡೆಯಲಾಗಿ,
ರಸ ಒಳಗಾಗಿ ಹಿಪ್ಪಿ ಹೊರಗಾಯಿತ್ತು, ಆ ಸುಧೆಯ ತುಂಬಿ ತಂದೆ.
ಒಮ್ಮೆಗೆ ಕೊಂಡಲ್ಲಿ ಬ್ರಹ್ಮಕಲ್ಪವ ಕೆಡಿಸಿತ್ತು.
ಮತ್ತೊಮ್ಮೆ ಕೊಂಡಲ್ಲಿ ವಿಷ್ಣುವಿನ ಗೊತ್ತ ಕಿತ್ತಿತ್ತು.
ಮೂರೆಂದು ಮೊದಲ ಹಾಗವ ಮೀರಿದ ರುದ್ರನ ಅಗಡವ ಕಿತ್ತಿತ್ತು.
ಅರೆದು ಕೊಂಡಲ್ಲಿ ಸುಧೆ, ಮರೆದು ಕೊಂಡಲ್ಲಿ ಸುರೆಯಾಗಿ,
ಅರುಹಿರಿಯರ ಮರವೆಯ ಮಾಡಿತ್ತು.
ನಾ ತಂದ ಬೆವಹಾರವ ಅಹವರೆಲ್ಲರೂ ಕೊಳ್ಳಿ,
ಧಮೇಶ್ವರಲಿಂಗವನರಿಯಬಲ್ಲಡೆ.
1197
ನಾ ಮಾರಬಂದ ಸುಧೆಯ ಕೊಂಬವರಾರೂ ಇಲ್ಲ.
ಹೊರಗಣ ಭಾಜನಕ್ಕೆ, ಒಳಗಣ ಇಂದ್ರಿಯಕ್ಕೆ
ಉಂಡು ದಣಿದು, ಕಂಡು ದಣಿದು, ಸಂದೇಹವ ಬಿಟ್ಟು ದಣಿದು,
ಕಂಡುದ ಕಾಣದೆ, ಸಂದೇಹದಲ್ಲಿ ಮರೆಯದೆ,
ಆನಂದವೆಂಬುದ ಅಲಿಂಗನವ ಮಾಡಿ,
ಆ ಕಂಗಳಂ ಮುಚ್ಚಿ, ಮತ್ತಮಾ ಕಂಗಳಂ ತೆರೆದು ನೋಡಲಾಗಿ,
ಧಮೇಶ್ವರಲಿಂಗವು ಕಾಣಬಂದಿತ್ತು.
1198
ನುಲಿಯೊಡೆಯರೆ ನಿಮ್ಮಾಳ್ದರ ಕೊಳ್ಳಿರೆ.
ಆಳ್ದರೆಂದವರಾರು ?
ಅವರು ನಿಮ್ಮ ಕೈಯಲ್ಲಿದ್ದಂಥವರೂ ಅವರಾಳ್ದರಲ್ಲ.
ಅವರೇನು ? ಅವರು ನಿಮ್ಮ ಇಷ್ಟರುದ್ರರಾಗರೆ ?
ಜಂಗಮವಾಗಿದ್ದಹರು ಇವರು ಬೇಡವೆ ?
ಇಹರೆ ಬೇಡೆನ್ನೆ, ಹೋಹರೆ ನಿಲಿಸ ಶಕ್ತನಲ್ಲ.
ನಾವು ಇರಲು ಬಲ್ಲಲ್ಲಿ ಇರಿ, ಕೈಯಲ್ಲಿ ಕೊಳ್ಳಿರೆ.
ಮುನ್ನವೆ ಕೊಂಡಿದ್ದೆನು, ಎನ್ನನೇಕೆ ಒಲ್ಲೆಯಯ್ಯಾ,
ನೀನು ಮುನಿದಿದ್ದೆಯಾಗಿ, ಇನ್ನು ಮುನಿವುದಿಲ್ಲ ನಾನು.
ನಿಮ್ಮ ನಂಬುವದಿಲ್ಲ. ಹೊಣೆಯ ಕೊಟ್ಟೆಹೆನು.
ಅದ ಕಂಡು, ಮಾಚಿದೇವ ಮಹಾಪ್ರಸಾದಿ ಹೊಣೆಯಾಗಯ್ಯಾ.
ನಂಬೆನು ಜೀಯಾ, ನಿಮ್ಮಾಣೆ.
ಪತ್ರವಾದರೆ ಕೊಟ್ಟೆಹೆನು, ಇರಲಿಕೆ ಠಾವೆಲ್ಲಿ ?
ಕರದಲ್ಲಿಯೆ ಅಲ್ಲ, ಉರದಲ್ಲಿಯೆ ಅಹುದು.
ನಂಬಿದೆನು, ಸುಖದಲ್ಲಿಹ ಧರ್ಮೇಶ್ವರ[ಲಿಂಗಾ].
1199
ನುಲಿಯೊಡೆಯರೆ ನಿಮ್ಮಾಳ್ದರೇನಾದರು ?
ಆಳ್ದರು ಜಂಗಮದ ಪಾದದ ಕೆಳಗೈದಾರೆ.
ಪಾದ ಲಿಂಗವಪ್ಪುದೆ ? ಪಾದಕ್ಕೆಯೂ ಲಿಂಗಕ್ಕೆಯೂ ಭೇದವುಂಟೆ ?
ನಾವರಿದುದಿಲ್ಲ, ಸುಮ್ಮನಿರಿ ನೀವು. ಇದಕ್ಕಿನ್ನೇನು ಪ್ರಾಯಶ್ಚಿತ ?
ಶಿವಶರಣರ ಚರಣೋದಕವ ಕರುಣಿಸಬೇಕು, ಕೊಡಬಾರದು.
ಅದೇನು ಕಾರಣ ? ನೀವು ಲಿಂಗವ ಕೇಳಿದಿರಾಗಿ,
ಶರಣಂಗೆ ಲಿಂಗವಿಲ್ಲ, ನಾವು ಪೂಜಕರಲ್ಲ.
ಭಕ್ತಿಯೆಂಬುದಾವುದು ? ಅರ್ಧಶರೀರ ಶಿವನಾರು ?
ದಕ್ಷಿಣಂಗೆ ಮಹೇಶ್ವರನಾರು ? ಭೃಂಗೀಶ್ವರನೊಬ್ಬನೆ ?
ಮತ್ತೆ ಕಂಡುದಿಲ್ಲ, ಧರ್ಮೇಶ್ವರ[ಲಿಂಗಾ].
1200
ಬಲ್ಲೆನೆಂಬ ಮದದಲ್ಲಿ ಅರಿದೆನೆಂಬ ಮಹಾಮದವಂ ಕೊಂಡು,
ಅಹಂಕಾರವೆಂಬ ಮದ, ಸರ್ವಾಂಗ ವೇಧಿಸಿ ತಲೆಗೇರಿದಲ್ಲಿ,
ಸತ್ತೆಂಬುದನರಿಯದೆ, ಚಿತ್ತೆಂಬುದ ತಿಳಿಯದೆ,
ಆನಂದವೆಂಬ ಆಶ್ರಯವ ಭಾವಿಸಿ ನೋಡದೆ,
ಸ್ಥೂಲಸೂಕ್ಷ್ಮಕಾರಣವೆಂಬ ತನುತ್ರಯದ ಭೇದವ ಕಾಣಲರಿಯದೆ,
ಅಂಡಪಿಂಡವೆಂಬ ಖಂಡಿತವ ತಿಳಿಯಲರಿಯದೆ,
ದಿಂಡೆಯತನದಿಂದ ಕಂಡೆನೆಂದಡೆ,
ಅದು ತಾ ಕೊಂಡ ಮೂರು ಹೆಂಡದ ಗುಣವೆಂದೆ,
ಧರ್ಮೇಶ್ವರಲಿಂಗದ ಸಂಗವಲ್ಲಾಯೆಂದೆ.
1201
ಮಣ್ಣು ಹೊನ್ನು ಹೆಣ್ಣೆಂಬ ತ್ರಿಭಂಗಿಯಲ್ಲಿ ಭಂಗಿತರಾಗಿ,
ಆಸೆಯೆಂಬ ಮಧುಪಾನದಿಂದ ಉಕ್ಕಲಿತವಿಲ್ಲದೆ,
ವಸ್ತುವ ಮುಟ್ಟುವದಕ್ಕೆ ದೃಷ್ಟವಿಲ್ಲದೆ,
ಕಷ್ಟದ ಮರವೆಯಲ್ಲಿ, ದೃಷ್ಟದ ಸರಾಪಾನವ ಕೊಂಡು ಮತ್ತರಾಗುತ್ತ,
ಇಷ್ಟದ ದೃಷ್ಟದ ಚಿತ್ತ ಮತ್ತುಂಟೆ ?
ಧರ್ಮೇಶ್ವರಲಿಂಗವ ಮುಟ್ಟದೆ ಇತ್ತಲೆ ಉಳಿಯಿತ್ತು.
1202
ಮಣ್ಣೆಂಬ ಘಟದ ಮಧ್ಯದಲ್ಲಿ ಹೊನ್ನೆಂಬ ಸುರೆ ಹುಟ್ಟಿತ್ತು.
ಹೆಣ್ಣೆಂಬ ಬಟ್ಟಲಲ್ಲಿ ಅಂತು ಈಂಟಲಾಗಿ ಲಹರಿ ತಲೆಗೇರಿತ್ತು.
ಈ ಉನ್ಮತ್ತದಲ್ಲಿ ಮಗ್ನರಾದವರೆಲ್ಲರೂ ಆರುಹಿರಿಯರೆಂತಪ್ಪರೊ ?
ಭಕ್ತಿ ವಿರಕ್ತಿಯೆಂಬುದು ಇತ್ತಲೆ ಉಳಿಯಿತ್ತು.
ಧರ್ಮೇಶ್ವರಲಿಂಗದತ್ತ ಮುಟ್ಟಿದಡಂತಿಲ್ಲ.
1203
ಮದ್ದಿನ ಸುರೆಯ ತೊಗಲ ತಿತ್ತಿಯಲ್ಲಿ ತುಂಬಿ, ಒಪ್ಪದಲ್ಲಿ ನಿಲಿಸಲಿಕೆ,
ಅದು ತನ್ನ ಉತ್ಸಾಹದಿಂದ ತಿತ್ತಿ ಹಾರಿ, ನೆಲಕ್ಕೆ ಅಪ್ಪಳಿಸಿ ಬೀಳೂದ ಕಂಡೆ.
ದೃಷ್ಟವ ಕೇಳಲೇತಕ್ಕೆ
ಕಾಯದ ತಿತ್ತಿಯಲ್ಲಿ ಜೀವ ಹೊಕ್ಕು,
ತ್ರಿವಿಧಮಲವಂ ಕಚ್ಚಿ ನಡೆವುದಕ್ಕೆ ಕಾಲಿಲ್ಲದೆ,
ನುಡಿವುದುಕ್ಕೆ ಬಾಯಿಲ್ಲದೆ, ನೋಡುವುದಕ್ಕೆ ಕಣ್ಣಾಲಿ ಮರೆಯಾಯಿತ್ತು.
ಬೊಂಬೆ ಹೋಯಿತ್ತು ದೃಷ್ಟಾಂತರ ಬೊಂಬೆ ಕೆಟ್ಟಲ್ಲಿ.
ಮಣ್ಣಿಗೆ ಕಾದಿ, ಹೊನ್ನಿಗೆ ಹೋರಿ,
ಹೆಣ್ಣಿಂಗೆ ನಾಣುಗೆಟ್ಟ ಈ ಕುನ್ನಿಮನಕ್ಕೆ ಇನ್ನೇವೆ
ಧರ್ಮೇಶ್ವರ[ಲಿಂಗಾ] ?
1204
ಶಾಸ್ತ್ರಮದ, ಸಂಪದಮದ, ಉಭಯಕೂಡಿಕೊಂಡಾತ್ಮಮದ,
ಅರಿದು ಎಲ್ಲರಿಗೆ ಹೇಳಿದೆನೆಂಬ ಗೆಲ್ಲ ಸೋಲದ ಮದ.
ಇಂತೀ ಎಲ್ಲಾ ಮದವ ಸೇವಿಸುತ್ತ,
ಅರಿಯದ ಮದವನೊಂದು ನುಡಿದಡೆ, ಬಿರುನುಡಿಯೆಂದೆಂಬರು.
ಅರಿಯದವ ಇಂತಿವ ಅರಿಯದಂತೆ ಸಂಚದಲ್ಲಿ ಸಂಚದಂತಿರಬೇಕು.
ಧರ್ಮೇಶ್ವರಲಿಂಗ ಹೀಂಗಲ್ಲದೆ ಅರಿಯಬಾರದು.
ಗ್ರಂಥಋಣ: ೧೫ ಸಮಗ್ರ ವಚನ ಸಂಪುಟಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು. 2001
*