Previous ಒಕ್ಕಲಿಗ ಮುದ್ದಣ್ಣ ಗೋಣಿ ಮಾರಯ್ಯ Next

ಕೂಗಿನ ಮಾರಯ್ಯ ವಚನಗಳು

77
ಅಪ್ಪುವಿನ ಶಿಲೆಯ ಉಳಿಯ ಮೊನೆಯಲ್ಲಿ ಚಿತ್ರಿಸಬಹುದೇ?
ಅರಗಿನ ಘಟವ ಉರಿಯ ಮೊನೆಯಲ್ಲಿ ಅಕ್ಷರವ ಬರೆಯಬಹುದೆ?
ಮೃತ್ತಿಕೆಯ ಹರುಗೋಲನೇರಿ ನದಿಯ ತಪ್ಪಲಿಗೆ ಹೋಗಬಹುದೆ?
ನಿಜನಿಶ್ಚಯವನರಿಯದವನ ವಾಚಾರಚನೆ ಇಷ್ಟಲ್ಲದಿಲ್ಲ.
ನಿಜತತ್ತ್ವವನರಿದವನ ವಾಚಾರಚನೆಯ ಕುರುಹೆಂತುಟೆಂದಡೆ: ಶಿಲೆಯೊಳಗಣ ಸುರಭಿಯಂತೆ
ಪ್ರಳಯದೊಳಗಾದ ನಿಜನಿವಾಸದಂತೆ
ಆಯದ ಘಾಯದಂತೆ, ಸುಘಾಯದ ಸುಖದಂತೆ
ಇಂತೀ ಭಾವರಹಿತವಾದ ಭಾವಜ್ಞನ ತೇರ ಕೂಗಿಂಗೆ ಹೊರಗು
ಮಹಾಮಹಿಮ ಮಾರೇಶ್ವರಾ

78
ಖ್ಯಾತಿಲಾಭಕ್ಕೆ ಮಾಡೂದು ಎಂಬುದನರಿದು
ಭೂತಹಿತ ದಯದಾಕ್ಷಿಣ್ಯಕ್ಕೆ ಇಕ್ಕುವಾತನೆಂಬುದನರಿದು
ಮಹಿಮಾಸ್ಪದರಿಂದ ವೀರವೈರಾಗ್ಯಂಗಳಿಂದ
ಇಕ್ಕುವಾತನೆಂಬುದನರಿದು
ಮಾಡಿಕೊಂಡ ಕೃತ್ಯಕ್ಕೆ ಬಿಟ್ಟಡೆ ನುಡಿದಹರೆಂದು
ಗುತ್ತಗೆಯಲ್ಲಿ ಇಕ್ಕುವಾತನೆಂಬುದನರಿದು
ಅರ್ತಿ ತಪ್ಪದೆ ಬಾಹ್ಯದ ಭಕ್ತಿ ತಪ್ಪದೆ
ಅರ್ಚನೆ ಪೂಜನೆಗಳಲ್ಲಿ ನಿತ್ಯನೇಮ ತಪ್ಪದೆ
ಸುಚಿತ್ತ ಧರ್ಮದಲ್ಲಿ ಮಾಡುವವನರಿದು
ಇಂತೀ ವರ್ಮಧರ್ಮಂಗಳಲ್ಲಿ ಅರಿದು
ಸುಮ್ಮಾನದ ಸುಖತರದಲ್ಲಿ ಮಾಡುವ ವರ್ಮಿಗನನರಿದು
ಆರಾರ ಭಾವದ ಕಲೆಯನರಿದು,
ಗುಣವೆಂದು ಸಂಪಾದಿಸದೆ
ಅವಗುಣವೆಂದು ಭಾವದಲ್ಲಿ ಕಲೆಗೆ ನೋವ ತಾರದೆ
ಇಂತೀ ಸರ್ವಗುಣ ಸಂಪನ್ನನಾಗಿ
ಪೂಜಿಸಿಕೊಂಬ ಗುರುವಿಂಗೆ ಚರಿಸುವ ಜಂಗಮಕ್ಕೆ
ಉಪಾಧಿ ನಷ್ಟವಾದ ವಿರಕ್ತಂಗೆ
ಕೂಗಿಂದಿತ್ತ ನಮೋ ಎಂದು ಬದುಕಿದೆ
ಮಹಾಮಹಿಮ ಮಾರೇಶ್ವರಾ.

79
ಚಲನೆಯ ಅಪ್ಪುವಿನ ಮೇಲೆ
ಷಡುವರ್ಣದ ಲೆಕ್ಕಣಿಕೆಯ ಕಡ್ಡಿಯಲ್ಲಿ
ಪುತ್ಥಳಿಯ ಬರೆಯಲಿಕ್ಕಾಗಿ
ಅವಯವಂಗಳ ಅಂಗಸ್ಥಾನದಲ್ಲಿ ಲಕ್ಷಿಸಿಹೆನೆನಬಹುದೆ?
ಸಂಸಾರಿಗೆ ಸಂಕಲ್ಪಿಗೆ ವಿಷಯಲಂಪಟಂಗೆ
ಜೂಜುಪೇಂಟೆ ಕದನಕರ್ಕಶಂಗೆ
ರಾಗದ್ವೇಷಿಗೆ, ತಧ್ಯಮಿಥ್ಯವ ಹೊತ್ತಾಡುವಂಗೆ, ದುರ್ಮತ್ತಂಗೆ
ಇಂತಿವರೊಳಗಾದ ಅರ್ತಿಕಾರತನದಲ್ಲಿ
ದುರ್ಮದಾಂಧಂಗೆ ಭಕ್ತಿ ಸ್ಥಲವಿಲ್ಲ.
ಕರ್ತೃಸ್ಥಲವಾದಡೂ ಗುರುತ್ವ ಅವನಿಗಿಲ್ಲ.
ವಿರಕ್ತನಾದಡೂ ನಿಜತತ್ವದ ನೆಲೆ ಅವನಿಗಿಲ್ಲ.
ಇಂತಿವನೆಲ್ಲವನುತ್ತರಿಸಿ ನಿಂದಾತಂಗಲ್ಲದೆ
ಕೂಗಿನ ಕುಲಕ್ಕೆ ಹೊರಗಲ್ಲ
ಮಹಾಮಹಿಮ ಮಾರೇಶ್ವರಾ.

80
ತನ್ನಲೊಂದು ಗುಣ ತೋರಲಿಕ್ಕಾಗಿ
ಆ ಗುಣವ ಇದಿರು ಕಂಡು ನುಡಿದರೆಂದು ನೋಯಲೇತಕ್ಕೆ?
ಆ ನುಡಿ ತನಗೆ ನಿರುತ್ತರವೆಂಬುದನರಿದು
ಘಾಯ ಬಾಹುಗಳಲ್ಲಿ ಶ್ರೋಣಿತ ಹೊರೆಯಲ್ಲಿ ನಿಂದಿರಲಿಕ್ಕಾಗಿ
ಘಾಳಿಸಿ ಹೊರವಡಿಸಿದಾತ ಹಗೆತನನೆಂಬುದರಿತು
ತನ್ನಲುಂಟಾದವಗುಣ ತನಗೆ ತೋರದಿರೆ
ದೃಷ್ಟವ ಕಂಡು ಹೇಳಿದ ಮತ್ತೆ ಮಿಥ್ಯಗುಣವಿಲ್ಲದೆ
ಆ ಕಷ್ಟಗುಣವ ಬಿಡಬೇಕು.
ಈ ಗುಣ ಅಂಗವಿದ್ದಲ್ಲಿ ನಿಂದೆಯ ದುರ್ಗುಣ ಸೋಂಕದಿಹವೆ?
ಅರಿಯದೆ ಸೋಂಕಿದಲ್ಲಿ ಅರಿದ ಮತ್ತೆ ತೊರೆಯಬೇಕು.
ತೋರಿದಡೆ ಕೂಗಿನ ದನಿಗೆ ಹೊರಗು
ಮಹಾಮಹಿಮ ಮಾರೇಶ್ವರಾ.

81
ನಾರಿಯೂ ಮರನೂ ಕೂಡಿ ಬಾಗಲಿಕ್ಕಾಗಿ
ಶರ ಚರಿಸುವುದಕ್ಕೆಡೆಯಾಯಿತ್ತು.
ಭಕ್ತಿಯೂ ವಿರಕ್ತಿಯೂ ಕೂಡಲಿಕ್ಕಾಗಿ
ವಸ್ತುವನರಿವುದಕ್ಕೆ ಒಡಲಾಯಿತ್ತು.
ಆ ವಸ್ತು ತ್ರಿಕರಣವ ವೇದಿಸಿದ ಮತ್ತೆ ತ್ರಿಗುಣ ನಷ್ಟ.
ಆ ನಷ್ಟದಲ್ಲಿ ಪಂಚೇಂದ್ರಿಯ ನಾಶನ,
ಸಪ್ತಧಾತು ವಿಸರ್ಜನ, ಅಷ್ಟಮದ ಹುಟ್ಟುಗೆಟ್ಟಿತ್ತು,
ಹದಿನಾರು ತೊಟ್ಟುಬಿಟ್ಟಿತ್ತು, ಇಪ್ಪತ್ತೈದರ ಬಟ್ಟೆ ಕೆಟ್ಟಿತ್ತು,
ಸದ್ಭಾವದ ನಿಷ್ಠೆ ನಷ್ಟವಾಯಿತ್ತು.
ಇಂತಿವರೊಳಗಾದ ಕುಲವಾಸನೆ ಹೊಲಬುಗೆಟ್ಟಿತ್ತು.
ನಾನಾರೆಂಬುದ ತಿಳಿದಲ್ಲಿ
ಕೂಗಿನ ಕುಲಕ್ಕೆ ಹೊರಗಾಯಿತ್ತು
ಮಹಾಮಹಿಮ ಮಾರೇಶ್ವರನನರಿಯಲಾಗಿ.

82
ಬಯಲೊಳಗಣ ರೂಪು, ರೂಪಿನೊಳಗಣ ಬಯಲು
ಉಭಯವ ವಿಚಾರಿಸಿ ನೋಡುವಲ್ಲಿ
ಕುಂಭದೊಳಗೆ ನೀರ ತುಂಬಿ, ಸಿಂದುವಿನೊಳಗೆ ಮುಳುಗಿಸಲಾಗಿ
ಅದರೊಳಗೂ ನೀರು, ಹೊರಗೂ ನೀರು.
ಹೊರಗಣ ನೀರು ಒಳಗಾಯಿತ್ತು, ಒಳಗಣ ನೀರು
ಹೊರಗಾಯಿತ್ತು.
ಕುಂಭದೊಳಗಣ ನೀರು ಅಂಗಕ್ಕೊ ಒಳಗೊ ಹೊರಗೊ
ಎಂಬುದು ತಿಳಿಯದು.
ಅಂಗದ ಮೇಲಿಹ ಲಿಂಗ, ಲಿಂಗವ ಧರಿಸಿದ ಅಂಗ
ಅರಿವಿನ ಕುರುಹಿಂಗೆ ಒಳಗೊ ಹೊರಗೊ ಎಂಬುದ ವಿಚಾರಿಸಿ
ಕರ್ಪೂರದ ಹಾಗೊಲೆಯಲಿ ಮೃತ್ತಿಕೆಯ ಕುಂಭವನಿರಿಸಿ
ಕಿಚ್ಚಹಾಕಿ ಓಗರವನಡಲಿಕ್ಕಾಗಿ
ಒಲೆ ಉರಿಯದ ಮುನ್ನವೆ ಓಗರ ಬೆಂದು
ಕರ್ಪೂರದ ಹಾಗೆ ಒಲೆಯೊಳಗೆ ಉಭಯ ಬಯಲಾಗಿ
ಮಡಕೆ ಉಳಿಯಿತ್ತದೇತಕ್ಕೆ?
ಘಟ ಉಳಿದು ಆತ್ಮ ಬಯಲಾಯಿತದೇತಕ್ಕೆ?
ಉಭಯ ನಿರತವಾದಲ್ಲಿ
ಉರಿಯಿಂದ ಕರ್ಪೂರ ನಷ್ಪವಾದ,
ಕರ್ಪೂರದಿಂದ ಉರಿ ನಷ್ಟವಾದಂತೆ
ಇಂತೀ ಉಭಯಸ್ಥಲದೊಳಗು
ಅಂಗಲಿಂಗ ಪ್ರಾಣಲಿಂಗ ಉಭಯವನೊಂದು ಮಾಡಿ ತಿಳಿದು
ನಿಜದಲ್ಲಿ ನಿಂದ ಲಿಂಗಾಂಗಿಗೆ ಕೂಗಿನ ಕುಲವಿಲ್ಲ
ಮಹಾಮಹಿಮ ಮಾರೇಶ್ವರಾ.

83
ಲಿಂಗಕ್ಕೆ ಹೊರೆಯಲ್ಲದೆ
ನಿಜಶಿಲೆಯ ದೀಪ್ತಿಯ ತರಂಗಕ್ಕೆ ಹೊರೆ ಹೊರೆಯುಂಟೆ?
ಸಂಸಾರಿಗೆ ಪ್ರಕೃತಿ ರಾಗದ್ವೇಷಂಗಳಲ್ಲದೆ
ಮನವು ಮಹದಲ್ಲಿ ನಿಂದ ನಿಜಲಿಂಗಾಂಗಿಗೆ
ಈ ಉಭಯದ ಸಂದುಂಟೆ?
ಈ ಗುಣದಂಗಲಿಂಗಾಂಗಿಯ ಸಂಗ
ಮಹಾಮಹಿಮ ಮಾರೇಶ್ವರಾ.

84
ಭಕ್ತಂಗೆ ಮಹಿಮೆ ಮಾಹೇಶ್ವರಂಗೆ ದೃಷ್ಟ
ಪ್ರಸಾದಿಗೆ ನಿಷ್ಠೆ ಪ್ರಾಣಲಿಂಗಿಗೆ ಅವಧಾನ
ಶರಣಂಗೆ ಸರ್ವಗುಣ ಸಂತೋಷ
ಐಕ್ಯಂಗೆ ಪರಿಪೂರ್ಣತ್ವ
ಇಂತೀ ಷಡುಸ್ಥಲವನಾಧರಿಸಿ ನಡೆವಲ್ಲಿ
ಹುಸಿ ಕೊಲೆ ಕುಹಕ ಕ್ಷುದ್ರ ಅಟಮಟ ಠಕ್ಕುಠವಾಳ
ಪಿಸುಣತ್ವ ಅಸತ್ಯ ವಿಶ್ವಾಸಘಾತಕ ಪರವಧು ಪರಾಪೇಕ್ಷೆ
ಪರನಿಂದೆ
ಇಂತಿವರೊಳಗಾದ ನಾನಾ ಬಂಧವ ಬಿಟ್ಟು
ನಿಂದ ಸ್ಥಲಕ್ಕೆ ಸಂದುಸಂಶಯವಿಲ್ಲದೆ
ಅರ್ತಿಕಾರಿಕೆಯಲ್ಲಿ ಮತ್ತೊಂದುವ ಹಿಡಿಯದೆ
ಲೆತ್ತ ಚದುರಂಗ ಪಗಡೆ ಪಗುಡಿ ಪರಿಹಾಸಕರಲ್ಲಿ
ಚಚ್ಚಗೋಷ್ಠಿಯಲ್ಲಿ ನಿಲ್ಲದೆ
ನಿತ್ಯನೇಮಂಗಳ, ಸತ್ತು ಚಿತ್ತು ಆನಂದಗಳೆಂಬ ತ್ರಿವಿಧಮಂ ತಿಳಿದು
ನಿಂದ ನಿಶ್ಚಿಂತರಲ್ಲಿ ಸರ್ವಸಂಗ ಪರಿತ್ಯಾಗವ ಮಾಡಿ
ನಿಂದ ನಿರಂಗಿಗಳಲ್ಲಿ ಲಿಂಗಾರ್ಚನೆ ಪೂಜೆ
ತಪ್ಪದೆ ಮಾಡುವ ನಿಶ್ಚಿಂತರಲ್ಲಿ
ಜಪತಪನೇಮ ನಿತ್ಯ ತತ್ಕಾಲವನರಿವ ಸಾವಧಾನಿಗಳಲ್ಲಿ
ಎರಡಿಲ್ಲದೆ ಕೂಡೂದು ಸದ್ಭವವಂತನ ಸಂಬಂಧ.
ಆತ ಕೂಗಿಂಗೆ ಹೊರಗು
ಮಹಾಮಹಿಮ ಮಾರೇಶ್ವರಾ.

85
ಮಹಿಮೆ ರುದ್ರನ ಹಂಗು,
ಧ್ಯಾನ ಈಶ್ವರನ ಹಂಗು,
ಜ್ಞಾನ ಸದಾಶಿವನ ಹಂಗು.
ಇಂತೀ ಒಂದರ ಹಂಗಿನಲ್ಲಿ ಒಂದನರಿದು
ಒಂದ ಕಾಣಿಸಿಕೊಂಡು, ಒಂದ ನಿಧಾನಿಸಿಕೊಂಡು
ಒಂದರಲ್ಲಿ ಹೆರೆಹಿಂಗದೆ ನಿಂದುದು ತ್ರಿವಿಧ ಸಂಗದ ಸಗುಣ
ಇಂತೀ ತ್ರಿವಿಧವನೊಂದುಗೂಡಿ
ಕರ್ಪೂರದ ಸುವಾಸನೆ ಕಿಚ್ಚಿನ ತಪ್ಪಲಲ್ಲಿಯೇ ನಷ್ಟವಾದಂತೆ.
ಇಂತೀ ತಾ ದೃಷ್ಟದಲ್ಲಿ ಲಕ್ಷಿಸಿ
ಅಲಕ್ಷಯವಾದುದು ಕೂಗಿನ ಹೊರಗು
ಮಹಾಮಹಿಮ ಮಾರೇಶ್ವರಾ.

86
ಮುಗ್ಧ ಮೂಢ ಕುಬ್ಜ ಕುಷ್ಟ ಅಂಧಕ ಪಂಗುಳ ನಪುಂಸಕ
ಇಂತೀ ಮುಕ್ತಿಹೀನರ ದೈವವೆಂದು
ಇಕ್ಕಿ ಎರೆದು ಕೊಟ್ಟು ಕೊಂಡು ಮಾಡುವಾತ ಭಕ್ತನಲ್ಲ.
ಅದು ಧಾತೃವರ್ಧನ ಸಂಬಂಧ.
ಭಕ್ತಿಯಿಂದ ಮಾಡುವಲ್ಲಿ
ತ್ರಿವಿಧ ಮಲವ ಹರಿದವನ,
ತ್ರಿಗುಣ ಗುಣವರತವನ,
ತ್ರಿಗುಣಾತ್ಮಕ ಭೇದಕನ;
ಸರ್ವಸಂಗ ಪರಿತ್ಯಾಗವ ಮಾಡಿದ ಪರಮ ವಿರಕ್ತನ
ತಥ್ಯ ಮಿಥ್ಯ ರಾಗದ್ವೇಷಂಗಳ
ಸ್ವಪ್ನದೊಳಗೂ ಅರಿಯದವನ
ಆತ ಗುರುವೆಂದು, ಆತ ಚರವೆಂದು ನಲಿದು
ಮನ ಮುಕ್ತವಾಗಿ ಮಾಡುತ್ತಿರಬೇಕು.
ಇದು ಸದ್ಭಕ್ತರ ಅರಿವಿನ ಕುರುಹಿನ ಮಾಟ.
ಆತ ವ್ಯಾಪಾರದ ಕೂಗಿನ ದನಿಗೆ ಹೊರಗು
ಮಹಾಮಹಿಮ ಮಾರೇಶ್ವರಾ.

87
ವಂದಿಸಿ ನಿಂದಿಸಿ ಮತ್ತೆ ಅದಾರಿಂಗೆ ಕೇಡೆಂಬುದನರಿತು
ತಾ ನೋಯಲೇತಕೆ?
ಕಟ್ಟಿದ ತಟಾಕವನೊಡೆಯ ಕುಕ್ಕಿದ ಮತ್ತೆ
ಆರನುಭವದ ನಷ್ಟ ಅದಾರಿಗೆ ಹೇಳಾ?
ಭೂಮಿಯ ಬಡತನಕ್ಕೆ ಬೀಜವಿಲ್ಲ
ಪತ್ರಭಾಜನ ಹಸಿಯಿತ್ತೆಂದು ಓಗರವಿಲ್ಲ.
ಮಾಟಕೂಟದಲ್ಲಿ ಇಕ್ಕಿ ಎರೆದು ಕೊಟ್ಟು ಕೊಂಡು
ಚಿತ್ತ ಶುದ್ಧವಿಲ್ಲಾಯೆಂದು ನುಡಿಯಲೇತಕ್ಕೆ?
ಬೆಳೆದ ಬೆಳಸ ಕಳದಲ್ಲಿ ಕಡೆಗಾಣಿಸಿದ ಮತ್ತೆ
ಹೋದ ಹೊಲಬ ಬಳಸಲೇತಕ್ಕೆ ತನ್ನ ತಾನರಿದು?
ಜಗ ತನಗನ್ಯವಿಲ್ಲೆಂದು ಅರಿದ ಮತ್ತೆ
ಪ್ರತಿಮೂದಲೆಗೊಡಲಿಲ್ಲ.
ಆತ ಉಭಯ ಶುದ್ಧಾತ್ಮನು.
ತ್ರಿಗುಣರಹಿತನು, ತ್ರಿಗುಣಾತ್ಮಭರಿತನು.
ಆತ ಕೂಗಿನ ದನಿಗೆ ಹೊರಗು
ಮಹಾಮಹಿಮ ಮಾರೇಶ್ವರಾ.

ಗ್ರಂಥಋಣ: ೧೫ ಸಮಗ್ರ ವಚನ ಸಂಪುಟಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು. 2001

ಪರಿವಿಡಿ (index)
*
Previous ಒಕ್ಕಲಿಗ ಮುದ್ದಣ್ಣ ಗೋಣಿ ಮಾರಯ್ಯ Next