1243
ಶ್ರೀಮತ್ಸಜ್ಜನ ಶುದ್ಧಶಿವಾಚಾರರಾಗಿ
ಅಷ್ಟಾವರಣವೆ ಅಂಗವಾಗಿ, ಪಂಚಾಚಾರವೆ ಪ್ರಾಣವಾಗಿ,
ಬಸವೇಶ್ವರದೇವರ ಸಾಂಪ್ರದಾಯಕರೆಂದು
ನುಡಿದು ನಡೆದರೆ ಭಕ್ತರೆಂಬೆ, ಪುರಾತನರೆಂಬೆ.
ಅಂತಪ್ಪ ಭಕ್ತಂಗೆ ಈ ಮೂಜಗವೆಲ್ಲ ಸರಿಯಲ್ಲವೆಂಬೆ.
ಆ ಭಕ್ತಂಗೆ ಶಿವನ ಗದ್ದುಗೆಯೆ ಕೈಲಾಸವಾಗಿಪ್ಪುದು ನೋಡಾ.
ಈ ಶಿವಾಚಾರದ ಪಥವನರಿಯದೆ
ಇರುಳು ಹಗಲು ಅನಂತ ಸೂತಕಪಾತಕಂಗಳೊಳಗೆ
ಮುಳುಗಾಡಿ ಮತಿಗೆಟ್ಟು ಪಂಚಾಂಗವ ಬೊಗಳುವ
ಭ್ರಷ್ಟ ಮಾದಿಗರ ಮಾತು ಅಂತಿರಲಿ.
ಪಂಚಾಂಗ ಕೇಳಿದ ದಕ್ಷಬ್ರಹ್ಮನ ತಲೆಯೇಕೆ ಹೋಯಿತು ?
ಪಂಚಾಂಗ ಕೇಳಿದ ಪಂಚಪಾಂಡವರು ದೇಶಭ್ರಷ್ಟರಾದರೇಕೆ ?
ಪಂಚಾಂಗ ಕೇಳಿದ ಶ್ರೀರಾಮನ ಹೆಂಡತಿ ರಾವಣಗೆ ಸೆರೆಯಾದಳೇಕೆ ?
ಪಂಚಾಂಗ ಕೇಳಿದ ಇಂದ್ರನ ಶರೀರವೆಲ್ಲ
ಯೋನಿಮಂಡಲವೇಕಾಯಿತು ?
ಪಂಚಾಂಗ ಕೇಳಿದ ದ್ವಾರಾವತಿ ಪಟ್ಟಣದ
ನಾರಾಯಣನ ಹೆಂಡಿರು ಹೊಲೆಮಾದಿಗರನ್ನು ಕೂಡಿದರೇಕೆ ?
ಪಂಚಾಂಗ ಕೇಳಿದ ಸರಸ್ವತಿಯ ಮೂಗು ಹೋಯಿತೇಕೆ ?
ಪಂಚಾಂಗ ಕೇಳಿದ ಕಾಮ ಸುಟ್ಟು ಭಸ್ಮವಾದನೇಕೆ ?
ಪಂಚಾಂಗ ಕೇಳಿದ ಬ್ರಹ್ಮ ವಿಷ್ಣು ಇಂದ್ರ ಮೊದಲಾದ
ಮೂವತ್ತುಮೂರುಕೋಟಿ ದೇವರ್ಕಳು
ತಾರಕಾಸುರನಿಂದ ಬಾಧೆಯಾಗಿ ಕಂಗೆಟ್ಟು
ಶಿವನ ಮೊರೆಯ ಹೊಕ್ಕರೇಕೆ ?
ಕುರುಡ ಕುಂಟ ಹಲ್ಲುಮುರುಕ ಗುರುತಲ್ಪಕನ
ಬಲವ ಕೇಳಲಾಗದು.
ಶುಭದಿನ ಶುಭಲಗ್ನ ಶುಭವೇಳೆ ಶುಭಮುಹೂರ್ತ
ವ್ಯತಿಪಾತ ದಗ್ಧವಾರವೆಂದು ಸಂಕಲ್ಪಿಸಿ
ಬೊಗಳುವರ ಮಾತ ಕೇಳಲಾಗದು.
ಗುರುವಿನಾಜ್ಞೆಯ ಮೀರಿ, ಸತ್ತರೆ ಹೊಲೆ, ಹಡೆದರೆ ಹೊಲೆ,
ಮುಟ್ಟಾದರೆ ಹೊಲೆ ಎಂದು ಸಂಕಲ್ಪಿಸಿಕೊಂಬುವಿರಿ.
ನಿಮ್ಮ ಮನೆ ಹೊಲೆಯಾದರೆ
ನಿಮ್ಮ ಗುರುಕೊಟ್ಟ ಲಿಂಗವೇನಾಯಿತು ?
ವಿಭೂತಿ ಏನಾಯಿತು ? ರುದ್ರಾಕ್ಷಿ ಏನಾಯಿತು ?
ಮಂತ್ರವೇನಾಯಿತು ? ಪಾದೋದಕ ಪ್ರಸಾದವೇನಾಯಿತು ?
ನಿಮ್ಮ ಶಿವಾಚಾರವೇನಾಯಿತು ?
ನೀವೇನಾದಿರಿ ಹೇಳಿರಣ್ಣಾ ? ಅರಿಯದಿದ್ದರೆ ಕೇಳಿರಣ್ಣಾ.
ನಿಮ್ಮ ಲಿಂಗ ಪೀತಲಿಂಗ; ನೀವು ಭೂತಪ್ರಾಣಿಗಳು.
ನಿಮ್ಮ ಮನೆಯೊಳಗಾದ ಪದಾರ್ಥವೆಲ್ಲ ಹೆಂಡಕಂಡ
ಅಶುದ್ಧ ಕಿಲ್ಬಿಷವೆನಿಸಿತ್ತು.
ಇದ ಕಂಡು ನಾಚದೆ, ಮತ್ತೆ ಮತ್ತೆ ಶುಭಲಗ್ನವ ಕೇಳಿ,
ಮದುವೆಯಾದ ಅನಂತ ಜನರ ಹೆಂಡಿರು
ಮುಂಡೆಯರಾಗಿ ಹೋದ ದೃಷ್ಟವ ಕಂಡು
ಪಂಚಾಂಗವ ಕೇಳಿದವರಿಗೆ ನಾಯಿ ಮಲವ
ಹಂದಿ ಕಿತ್ತುಕೊಂಡು ತಿಂದಂತಾಯಿತ್ತು ಕಾಣಾ
ನಿಸ್ಸಂಗ ನಿರಾಳ ನಿಜಲಿಂಗಪ್ರಭುವೆ.
1244
ಪಂಚಾಂಗ ಪಂಚಾಂಗವೆಂದು ಕಳವಳಗೊಂಡು
ಜೋಯಿಸನ ಕರೆಯಿಸಿ,
ಕೈಮುಗಿದು ಕಾಣಿಕೆಯನಿಕ್ಕಿ ಎಲೆ ಅಡಿಕೆಯಂ ಕೊಟ್ಟು,
ಜೋಯಿಸನ ವಾಕ್ಯವು ಸಕಲ ಕಾರ್ಯಕ್ಕೆ ಸಿದ್ಧಿಯೆಂದು,
ಅವನ ಬಾಯ ತೊಂಬುಲವ ತಿಂಬ ಹಂದಿಗಳಿರಾ
ಎತ್ತ ಬಲ್ಲಿರಯ್ಯಾ ಶಿವಾಚಾರದ ಪದ್ಧತಿಯನು ?
ಪಂಚಾಂಗವೆಂಬ ಶಬ್ದಕ್ಕೆ ಅರ್ಥವ ಹೇಳಲರಿಯದೆ
ಜೋಯಿಸರು ಕೆಟ್ಟರು ;
ಕೇಳಲರಿಯದೆ ಅನಂತ ಹಿರಿಯರು ನರಕಕ್ಕೆ ಇಳಿದರು.
ಪಂಚಾಂಗವೆಂದರೆ ಹೇಳಿಹೆ ಕೇಳಿರಣ್ಣಾ.
ಪಂಚ ಅಂದರೆ ಐದು ; ಅಂಗವೆಂದರೆ ದೇಹ,
ಪೃಥ್ವಿ ಅಪ್ಪು ತೇಜ ವಾಯು ಆಕಾಶ-
ಈ ಐದು ಕೂಡಿ ದೇಹವಾಯಿತ್ತು.
ಆ ದೇಹದೊಳಗೆ ಕಾಮ ಕ್ರೋಧ ಲೋಭ
ಮೋಹ ಮದ ಮತ್ಸರದಚ್ಚು ಮುರಿಯುವುದೇ ಪಂಚಾಂಗ.
ಸತ್ವ ರಜ ತಮವೆಂಬ ಅಹಂಕಾರವ ತುಳಿವುದೆ ಪಂಚಾಂಗ.
ಆಣವಮಲ ಮಾಯಾಮಲ ಕಾಮರ್ಿಕಮಲವ
ಮುಟ್ಟದಿರುವುದೇ ಪಂಚಾಂಗ.
ತನ್ನ ಸತಿಯ ಸಂಗವಲ್ಲದೆ
ಪರಸತಿಯರ ಮುಟ್ಟದಿರುವುದೇ ಪಂಚಾಂಗ.
ತನ್ನ ಇಷ್ಟಲಿಂಗವಲ್ಲದೆ ಭೂಮಿಯ ಮೇಲೆ ಇಟ್ಟು
ಪೂಜೆಯ ಮಾಡುವ ದೇವರಿಗೆ ಕೈಮುಗಿಯದಿರುವುದೆ ಪಂಚಾಂಗ.
ಜಾತಿಸೂತಕ ಜನನಸೂತಕ ಉಚ್ಫಿಷ್ಟಸೂತಕ
ಮೃತ್ಯುಸೂತಕ ರಜಸ್ಸೂತಕ - ಈ ಪಂಚಸೂತಕವ
ಶರಣರು ಕಳೆವರಾಗಿ, ನಮ್ಮ ಶಿವಭಕ್ತರಿಗೆ ಸಲ್ಲದೆಂಬುದೆ ಪಂಚಾಂಗ.
ಸೂತಕ ನಾಸ್ತಿಯಾದುದೆ ಪಂಚಾಂಗ.
ಗುರು ಲಿಂಗ ಜಂಗಮ ಪಾದೋದಕ ಪ್ರಸಾದವೆ ಪಂಚಾಂಗ.
ಲಿಂಗಾಚಾರ ಸರ್ವಾಚಾರ ಭೃತ್ಯಾಚಾರ
ಶಿವಾಚಾರ ಗಣಾಚಾರವೆ ಪಂಚಾಂಗ.
ಗುರುಪ್ರಸಾದ, ಲಿಂಗಪ್ರಸಾದ, ಜಂಗಮಪ್ರಸಾದ,
ಗಣಪ್ರಸಾದ, ಮಹಾಪ್ರಸಾದವ ಕೊಂಬುವುದೆ ಪಂಚಾಂಗ.
ಇಂತೀ ಪಂಚಾಂಗದ ನಿಲವನರಿಯದೆ
ಪಂಚಸೂತಕದೊಳಗೆ ಹೊಡೆದಾಡುವ ಪಂಚಮಹಾಪಾತಕರ
ಎನಗೊಮ್ಮೆ ತೋರದಿರಯ್ಯ
ನಿಸ್ಸಂಗ ನಿರಾಳ ನಿಜಲಿಂಗಪ್ರಭುವೆ.
1245
ಪಂಚಾಂಗವೆಂಬ ಶಬ್ದಕ್ಕೆ ಅರ್ಥ : ಪಂಚವೆಂದರೆ ಐದು ; ಅಂಗವೆಂದರೆ ದೇಹ.
ಈ ಉಭಯ ಕೂಡಿದರೆ ದೇಹವಾಯಿತ್ತು.
ಈ ದೇಹವೆ ಪಂಚಾಂಗವೆನಿಸಿತ್ತು.
ಅದು ಹೇಗೆಂದಡೆ : ನಕಾರ ಮಕಾರ ಶಿಕಾರ ವಕಾರ ಯಕಾರದ
ನಿಕ್ಷೇಪವನರಿವುದೇ ಪಂಚಾಂಗ.
ಕ್ರಿಯಾ ಜ್ಞಾನ ಇಚ್ಫಾ ಆದಿ ಪರಾ ಚಿಚ್ಫಕ್ತಿಯ
ಎಚ್ಚರನರಿವುದೆ ಪಂಚಾಂಗ.
ಇಚ್ಫೆಯೊಳಗಿರುವುದೆ ಪಂಚಾಂಗವಯ್ಯ.
ನಿಸ್ಸಂಗ ನಿರಾಳ ನಿಜಲಿಂಗಪ್ರಭುವೆ.
1246
ಪಂಚಾಂಗದ ಭೂತವಳಿದು
ಪಂಚಭೂತಗಳ ನಿವೃತ್ತಿಯಮಾಡಬಲ್ಲರೆ ಪಂಚಾಂಗ.
ಸುಚಿತ್ತ ಸುಬುದ್ಧಿ ನಿರಹಂಕಾರ ಸುಮನ ಸುಜ್ಞಾನ
ಸದ್ಭಾವ ದುರ್ಭಾವ ನಿರಾಳಹಸ್ತವನರಿವುದೆ ಪಂಚಾಂಗ.
ಆಚಾರ ಗುರು, ಶಿವ ಜಂಗಮ, ಪ್ರಸಾದ ಮಹಾಲಿಂಗದ
ನೆಲೆವನೆಯ ನೆಲೆಗೊಂಬುದೆ ಪಂಚಾಂಗ.
ಪಂಚಾಂಗದ ವಿವರವ ಗುರುಮುಖದಲ್ಲಿ ತಿಳಿವುದೆ ಪಂಚಾಂಗ.
ಪಂಚಪ್ರಸಾದವ ಸೇವಿಸಿ ಅಡಗಲರಿಯದೆ
ವಿರಂಚಿ ಸೃಷ್ಟಿಯೊಳಗಾಗಿ ಚೌರಾಸಿ ಲಕ್ಷ ಜೀವದಲ್ಲಿ
ಹುಟ್ಟಿ ಸತ್ತು ಹೋಗುವ ವ್ಯರ್ಥರಿಗೆ
ಇನ್ನೆತ್ತಣ ಪಂಚಾಂಗವಯ್ಯ
ನಿಸ್ಸಂಗ ನಿರಾಳ ನಿಜಲಿಂಗಪ್ರಭುವೆ.
1247
ಸದಾಚಾರ ಗಣಾಚಾರ ಲಿಂಗಾಚಾರ ಭೃತ್ಯಾಚಾರ
ಶಿವಾಚಾರದೊಳಗಿರಬಲ್ಲರೆ ಪಂಚಾಂಗ.
ಗುರು ಲಿಂಗ ಜಂಗಮ ಪಾದೋದಕ ಪ್ರಸಾದ
ವಿಭೂತಿ ರುದ್ರಾಕ್ಷಿ ಶಿವಮಂತ್ರವೆಂಬ
ಅಷ್ಟಾವರಣವೆ ಅಂಗವೆಂದು ನಂಬುವುದೇ ಪಂಚಾಂಗ.
ಸ್ಥೂಲ ಸೂಕ್ಷ್ಮ ಕಾರಣವೆಂಬ ಮೂರಂಗದಲ್ಲಿ
ಇಷ್ಟ ಪ್ರಾಣ ಭಾವವು ಸಂಬಂಧವಾದುದೆ ಪಂಚಾಂಗ.
ಅಂಗದ ಮೇಲೆ ಶಿವಲಿಂಗವಿಲ್ಲದ ವಿಪ್ರ ಶೂದ್ರ ಜಾತಿಯಲ್ಲಿ
ಸ್ನೇಹ ಸಮರಸ ವಿಶ್ವಾಸ ಸಂಭಾಷಣೆ
ಬಿಡುಗಡೆಯಾದುದೆ ಪಂಚಾಂಗ.
ಈ ಪಂಚಾಂಗದಲ್ಲಿ ಇರಲೊಲ್ಲದೆ
ಬೆಟ್ಟದ ಮೇಲೆ ಪಕ್ಷಿ ಕೆಡಿಸಿ ಜಾರಬಿಟ್ಟಂತೆ,
ಮಣ್ಣ ಮಟ್ಟಿ ನೀರಲ್ಲಿ ಕಲೆಸಿ, ಅದ ಭೂಜ ಘಣೆಗೆ ಜಾರಬಿಟ್ಟು,
ದ್ವಾದಶಪ್ರಮಾಣದ ಪಂಚಾಂಗ ಕೈಯಲ್ಲಿ ಹಿಡಿದು
ಸರ್ವಶುಭಮುಹೂರ್ತ ಹೇಳುವನ ಬಾಯ ತೊಂಬುಲವ ತಿಂಬ
ಹಂದಿಗಳೆತ್ತ ಬಲ್ಲರಯ್ಯ ಶಿವಪಥದ ಪಂಚಾಂಗವ
ನಿಸ್ಸಂಗ ನಿರಾಳ ನಿಜಲಿಂಗಪ್ರಭುವೆ ?
1248
ಶ್ರೀಗುರುಸ್ವಾಮಿ ಕರುಣಿಸಿ ಕೊಟ್ಟ
ಇಷ್ಟಲಿಂಗಪ್ರಸಾದವ ಚೆಲ್ಲದಿರುವುದೆ ಪಂಚಾಂಗ.
ತನ್ನ ಲಿಂಗವಲ್ಲದೆ ಭೂದೇವರ ಅಲ್ಲಗಳೆವುದೆ ಪಂಚಾಂಗ.
ಎಲ್ಲ ಕಾಲ ವೇಳೆಯಲ್ಲಿ ನಿಲ್ಲದೆ ನೆನೆವುದೆ
ಶುಭದಿನ ಶುಭಲಗ್ನ ಶುಭಮುಹೂರ್ತ
ಗುರುಬಲ ಚಂದ್ರಬಲ ಸೂರ್ಯಬಲವೆನಿಸುವುದಯ್ಯ
ನಿಸ್ಸಂಗ ನಿರಾಳ ನಿಜಲಿಂಗಪ್ರಭುವೆ.
1249
ಪಂಚಾಕ್ಷರದೊಳಗೆ ಪಂಚಾಂಗವಡಗಿತ್ತಾಗಿ,
ಪಂಚಾಕ್ಷರವ ತಿಳಿದೆನಾಗಿ
ಎನಗೆ ಪಂಚಾಂಗ ನಾಸ್ತಿಯಾಯಿತ್ತು ಕಾಣಾ
ನಿಸ್ಸಂಗ ನಿರಾಳ ನಿಜಲಿಂಗಪ್ರಭುವೆ.
1250
ಶ್ರೀಗುರುಪ್ರಸನ್ನ ಪಂಚಾಕ್ಷರಿಯ ನಾಮವ ನೆನೆದು
ಪಂಚಭೂತದ ಕಾಯವನಳಿದು,
ಪಂಚಭೂತದಲ್ಲಿ ಪಂಚಾಕ್ಷರಿಯ ತುಂಬಿ,
ಆ ಪಂಚಾಕ್ಷರಿಯ ಬೆಸನವ ನೆಲೆಗೊಂಬುವುದೆ ಪಂಚಾಂಗ.
ಪಂಚಾಂಗದಲ್ಲಿ ಸಂಚರಿಸುವ ವಂಚನೆಯ ಇಂದ್ರಿಯವ
ಲಿಂಗದ ಸಂಚಿನಲ್ಲಿ ಇರಿಸುವುದೆ ಪಂಚಾಂಗ.
ಇಂತೀ ಭೇದವ ಭೇದಿಸಿ ತಿಳಿಯಲರಿಯದೆ
ಅನಂತ ಹಿರಿಯರು ಕೆಟ್ಟರು ನೋಡಾ
ನಿಸ್ಸಂಗ ನಿರಾಳ ನಿಜಲಿಂಗಪ್ರಭುವೆ.
1251
ಶ್ರೀಗುರುಸ್ವಾಮಿ ಕರುಣಿಸಿ ಕೊಟ್ಟ ಇಷ್ಟಲಿಂಗವ
ಕರ ಮನ ಭಾವದೊಳಗಿಟ್ಟು ಪೂಜೆಮಾಡಲರಿಯದೆ
ಭ್ರಷ್ಟ ವಿಪ್ರನ ಮಾತು ಕೇಳಿ ನಷ್ಟಕ್ಕೊಳಗಾಗುವ,
ಕಂಚು ತಾಮ್ರ ಮೊದಲಾದ ಅನಂತದೇವರ ಭಜನೆಯ ಮಾಡುವ
ಮಡ್ಡ ಜಡಮಾದಿಗರ ಎನಗೊಮ್ಮೆ ತೋರದಿರಯ್ಯ
ನಿಸ್ಸಿಂಗ ನಿರಾಳ ನಿಜಲಿಂಗಪ್ರಭುವೆ.
1252
ಸಜ್ಜನ ಶುದ್ಧ ಶಿವಾಚಾರದಲ್ಲಿ ಆಚರಿಸುವುದೆ ಪಂಚಾಂಗ.
ಅಂಗದಾಸೆ ಹಿಂದುಮಾಡಿ, ಲಿಂಗನೆನಹು ಮುಂದುಗೊಂಡು,
ಸಕಲ ಪದಾರ್ಥವ ಇಷ್ಟಲಿಂಗಕ್ಕೆ ಕೊಟ್ಟು
ಆ ಲಿಂಗಪ್ರಸಾದಶೇಷವ ಸಾವಧಾನದಿಂದ
ಸರ್ವಾಂಗದಲ್ಲಿ ಸಂಬಂದಿಸುವುದೆ ಪಂಚಾಂಗ.
ಇದನರಿಯದೆ ತನ್ನ ಲಿಂಗಪ್ರಸಾದವ ಬಿಟ್ಟು,
ಭೂಪ್ರತಿಷ್ಠೆಗುಳ್ಳ ಭವಿಶೈವದ ಪ್ರಸಾದವ
ವಿಪ್ರರ ಕೈಯಲ್ಲಿ ಇಸಗೊಂಡವರಿಗೆ
ಪುಳುಗೊಂಡದೊಳಗೆ ಮುಳುಗಿಸಿ ಬಿಡುವನು ನೋಡಾ
ನಿಸ್ಸಂಗ ನಿರಾಳ ನಿಜಲಿಂಗಪ್ರಭುವೆ.
1253
ಲಿಂಗವೆ ಹಸಾದ ಶುಚಿಯೆಂದ ಬಳಿಕ
ಸೂತಕ ಪಾತಕ ಸಂಕಲ್ಪಿಸಿಕೊಂಡು ಹೊಲೆಮನೆಯೆನ್ನಿರಿ.
ಆ ಹೊಲೆಯರ ಮನೆಯಲ್ಲಿ ಸತ್ತ ದನದ ಮಾಂಸ
ಕಂಡ ಹೆಂಡವಲ್ಲದೆ ಅಲ್ಲೇನು ಪ್ರಯೋಜನವಿಲ್ಲ.
ನೀನು ಅವನ ಮನೆಯ ಪೆಸಗರ್ೊಂಬೆ,
ನೀನೇನು ಹೊಲೆಯನೆ ?
ನೀನು ಹೊಲೆಯನಾದರೆ ನಿನ್ನ ಮನೆಯೊಳಗಿರುವ
ಗುರು ಲಿಂಗ ಜಂಗಮ ಪಾದೋದಕ ಪ್ರಸಾದ
ವಿಭೂತಿ ರುದ್ರಾಕ್ಷಿ ಶಿವಮಂತ್ರ ಹೊಲೆ.
ಮಾನವನೆ ಕೇಳು, ಉಪ್ಪುಗೂಡಿ ಒಂಬತ್ತು ಪದಾರ್ಥವ
ಗಡಗಿ ಗುಡಾಣಿಗಳ ಮನೆಯೊಳಗಿಟ್ಟುಕೊಂಡು,
ನವೀನ ವನದ ಹೊದರ ಪೆಟ್ಟಿಗೆಯೊಳಗಿಟ್ಟು
ಸೀರಿ ಕೌದಿ ತೊಳೆದುಹಾಕಿ, ಗೋಡೆ ತೊಳೆದು,
ಹೊಲೆ ಹೋಯಿತೆಂದು ಮನೆಯಲ್ಲಿ ಇದ್ದ
ಮುನ್ನಿನ ಗಡಿಗೆಯಲ್ಲಿಅಡಿಗೆಯ ಮಾಡಿ,
ಗುರುಲಿಂಗಜಂಗಮಕ್ಕೆ ಭಕ್ತಜನಂಗಳಿಗೆ
ಸಲಿಸ ನೀಡಿದೆನೆಂಬ ಶುನಕಮಾನವ ಕೇಳು.
ಅದೆಂತೆಂದಡೆ : ಶ್ಲೋಕ-
'ತದ್ದಿನಂ ದಿನದೋಷೇಣ ಶ್ರೋಣಿತಂ ಸುರಮಾಂಸಯೇ |
ಸಂಕಲ್ಪ ವಿಕಲ್ಪನಾ ನರಕೇ ಕಾಲಮಕ್ಷಯಂ ||'
ಎಂದುದಾಗಿ, ಇಂತಪ್ಪ ಸೂತಕ ಪಾತಕದಲ್ಲಿ
ಹೊರಳಾಡುವ ಪಾತಕದ ವಿಪ್ರರ ಮಾತುಕೇಳಿ ಮಾಡುವ
ಶಿವಭಕ್ತರಿಗೆ ಅಘೋರನರಕ ತಪ್ಪದು ಕಾಣಾ
ನಿಸ್ಸಂಗ ನಿರಾಳ ನಿಜಲಿಂಗಪ್ರಭುವೆ.
1254
ಮಗನ ಮದುವೆಯ ತೊಡಗಿದಾಗ
ಎಡಬಲದ ಗುರುಹಿರಿಯರನು ಉದಾಸೀನವ ಮಾಡಿ,
ಪೊಡವಿಗೆ ಕಿರಿದಾಗಿ ಇರುವ ಎಡಗ ವಿಪ್ರನ
ಜೋಯಿಸನ ಕರೆಸಿ ಕರವಂ ಮುಗಿದು,
ಎಲೆ ಅಡಿಕೆ ಕಾಂಚಾಣವ ಕೊಟ್ಟು
ಎಡರು ಬಾರದ ಕಂಟಕವ ಕಳದು
ಶಡಗರ ಸಾಮ್ರಾಜ್ಯ ಉಚ್ಚಹ ಮದುವೆ
ಮಾಂಗಲ್ಯದ ಶುಭಮುಹೂರ್ತ
ಶುಭದಿನ, ಶುಭತಾರೆ, ಶುಭಲಗ್ನ, ಶುಭವೇಳೆ ಬೆಸಗೊಂಡು
ಮದುವೆಯ ಮಾಡುವ ಶಿವಭಕ್ತರಿಗೆ
ಭವಭವಾಂತರದಲ್ಲಿ ಮೀನ ಮೊಸಳಿ ಏಡಿ ಕಪಿಯ
ಬಸುರಲ್ಲಿ ಹುಟ್ಟಿ ಸತ್ತು ಕಣ್ಣ ಕಾಣದೆ
ಕತ್ತಿ ಸೂಕರ ಶ್ವಾನನ ಜನ್ಮವೆ ಪ್ರಾಪ್ತಿ
ನಿಸ್ಸಂಗ ನಿರಾಳ ನಿಜಲಿಂಗಪ್ರಭುವೆ.
1255
ಮಗನ ಮದುವೆಯ ತೊಡಗಿದಾಗ
ಬಡಬಡನೆ ಹೋಗಿ ಹಾರುವನ ಕರೆವಿರಿ.
ಅವನೇನು ನಿಮ್ಮ ಗುರುವೆ ? ನಿಮ್ಮ ಮನೆದೇವರೆ ?
ನಿಮ್ಮ ಅಣ್ಣ ತಮ್ಮನೆ ? ನಿಮ್ಮ ಕುಲಬಾಂಧವನೆ ?
ನಿಮ್ಮ ಹೊಂದಿ ಹೊರದವನೆ ? ಶಿವ ಸಹೋದರನೆ ? ನಿಮ್ಮ ಅಜ್ಜ ಮುತ್ತೈನೆ?
ಛೀ ಛೀ ಎಲೊ ಶಿವದ್ರೋಹಿ ಕೇಳೊ.
ಬಣ್ಣಗಾರ ಬಾಯಿಬಡಕ ಭ್ರಷ್ಟಮಾದಿಗ ವಿಪ್ರಜೋಯಿಸನ ಮಾತ ಕೇಳಿ
ಮದುವೆಯಾದ ಪಂಚಪಾಂಡವರು ಕೆಟ್ಟರು.
ಹರಿವಿರಂಚಿ ಹರಿಶ್ಚಂದ್ರ ದೇವೇಂದ್ರ ನಾಗಾಜರ್ುನ
ಕಂಸರಾಜ ನಳಚಕ್ರವರ್ತಿ ಚಂದ್ರ ಸೂರ್ಯ ಮಂಗಳ ಬುಧ
ಶುಕ್ರ ಸುರಸ್ತೋಮ ಮುನಿಸ್ತೋಮ ಕೆಟ್ಟಿತು.
ಪಂಚಾಂಗ ಕೇಳಿದ ದಕ್ಷನ ಪಡೆಯೆಲ್ಲ ಕೆಟ್ಟು
ನಷ್ಟವಾಗಿಹೋದ ದೃಷ್ಟವ ಕಂಡು ಕೇಳಿ,
ಶಿವನ ಹಳಿವ ಹೊಲೆಮನದ ವಿಪ್ರಜೋಯಿಸನ ಕರೆಸಿ,
ಕೈಮುಗಿದು ಕಾಣಿಕೆಯ ಕೊಟ್ಟು ಪಂಚಾಂಗವ ಕೇಳಿದ
ಶಿವಭಕ್ತರಿಗೆ ತಾ ಗುರುದ್ರೋಹ, ಲಿಂಗದ್ರೋಹ, ಜಂಗಮದ್ರೋಹವು ಒದಗಿ,
ತಾವು ಹಿಂದೆ ಮಾಡಿದ ದಾನಧರ್ಮ ಪರೋಪಕಾರವು ಕೆಟ್ಟು
ನರಕಸಮುದ್ರದೊಳಗೆ ಮುಳುಗಾಡುತ್ತೇಳುತ್ತ
ತಾವೇ ಸೇರಲರಿಯದೆ ಕೆಟ್ಟರು ನೋಡಾ ಹಲಕೆಲಬರು
ನಿಸ್ಸಂಗ ನಿರಾಳ ನಿಜಲಿಂಗಪ್ರಭುವೆ.
1256
ಶಿವನು ಜಗದ್ಭರಿತನೆಂದೆಂಬರ ಬಾಯಲ್ಲಿ
ಇಕ್ಕಿರೊ ಹನ್ನೆರಡು ವರ್ಷದ ಹಳೆಯ ಪಾದರಕ್ಷೆಯನು.
ಅದೇನು ಕಾರಣವೆಂದಡೆ : ಶಿವನು ಜಗದ್ಭರಿತನೆ ? ಅಲ್ಲ.
ಶಿವನು ಜಗದ್ಭರಿತನಾದೊಡೆ ಜೀವಕ್ಕೆ ಜೀವ ಭಕ್ಷಿಸಲೇತಕೊ ?
ಶಿವನು ಜಗದ್ಭರಿತನಾದೊಡೆ
ಪ್ರಾಣಕ್ಕೆ ಪ್ರಾಣ ವಿರೋಧಿಸಲೇತಕೊ ?
ಶಿವನು ಜಗದ್ಭರಿತನೆಂದರಿಯದೊಡೆ
ತಾನೆ ಗುರು ತಾನೆ ಲಿಂಗ ತಾನೆ ಜಂಗಮ ತಾನೆ ಪಾದೋದಕ
ತಾನೆ ಪ್ರಸಾದ ಕಾಣಾ ನಿಸ್ಸಂಗ ನಿರಾಳಪ್ರಭುವೆ.
ಗ್ರಂಥಋಣ: ೧೫ ಸಮಗ್ರ ವಚನ ಸಂಪುಟಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು. 2001
*