![]() | ಗಣದಾಸಿ ವೀರಣ್ಣ | ಗುರು ಸಿದ್ಧ ದೇವರ | ![]() |
ಘನಲಿಂಗದೇವನ ವಚನಗಳು |
ಆಯ್ಕೆ ಮಾಡಿದ ವಚನ |
---|
ಅಂಗದ ಮೇಲಕ್ಕೆ ಬಂದ ಆಚಾರಲಿಂಗದ ಹೊಲಬನರಿಯದೆ ಕೈಲಾಸದ ಮೇಲಿಪ್ಪ ಬಾಲಕೋಟಿಸೂರ್ಯಪ್ರಕಾಶವನುಳ್ಳ ಶಿವನನೊಲಿಸಬೇಕೆಂದು ಒಂದು ವಸ್ತುವ ಎರಡಿಟ್ಟು ನುಡಿವ ಮಂದಮತಿಗಳು ನೀವು ಕೇಳಿರೇ. ಮಹಾಮೇರುಪರ್ವತವೇ ಶರಣ. ಆ ಶರಣನ ಸ್ಥೂಲತನುವೇ ರಜತಾದ್ರಿ. ಸೂಕ್ಷ ್ಮತನುವೇ ಹೇಮಾದ್ರಿ. ಕಾರಣತನುವೇ ಮಂದರಾದ್ರಿ. ಈ ಮೂರುಪರ್ವತಂಗಳ ಅರಮನೆಗಳಲ್ಲಿ ನೆಲಸಿಪ್ಪ ಶಿವನಾರೆಂದರೆ ನಿರಾಕಾರ ಶೂನ್ಯಬ್ರಹ್ಮವೇ. ಶರಣನ ಕುರಿತು ಪಂಚಸಾದಾಖ್ಯಂಗಳನೊಳಕೊಂಡು ಸಾಕಾರವಾಗಿ ಬಂದ ಇಷ್ಟಲಿಂಗವೇ[ಆ] ಶಿವನು. ಗ್ರಂಥ : `ಜ್ವಲತ್ ಕಾಲಾನಲಾಭಾಸಾ ತಟಿತ್ ಕೋಟಿ ಸಮಪ್ರಭಾ| ತಸ್ಯೋಧ್ರ್ವಾ ಚ ಶಿಖಾ ಸೂಕ್ಷಂ ಚಿದ್ರೂಪಾ ಪರಮಾ ಕಲಾ| ಏವಂ ವೇದ ಕಲಾ ದೇವಿ ಸದ್ಗುರೋಶ್ಯಿಷ್ಯಮಸ್ತಕೇ ಹಸ್ತಾಬ್ಜಮಥನಾದ್ ಗ್ರಾಹ್ಯಾ ತಸ್ಯ ಭಾವ ಕರೋದಿತಾ ವಪುರೇವಂ ಸಮುತ್ಪನ್ನಂ ತತ್ ಪ್ರಾಣಂ ಮಿಶ್ರಿತಂ ಭವೇತ್ ಯಥಾ ಗುರುಕರೇ ಜಾತಾ ಲಿಂಗ ಭಕ್ತಿದ್ರ್ವಿಭೇದಕಾ' ಇಂತೆಂದುದಾಗಿ ಆ ನಿರಾಕಾರಬ್ರಹ್ಮನೇ ಶಿವನು. ಆ ಶಿವನ ಧರಿಸಿಪ್ಪ ಶರಣನ ಕಾಯವೇ ಕೈಲಾಸ. ಇದಲ್ಲದೆ ಮತ್ತೊಂದು ಕೈಲಾಸ ಬೇರೊಬ್ಬ ಶಿವನುಂಟೆಂದು ಭ್ರಮೆಗೊಂಡು ಮನವನೆರಡು ಮಾಡಿಕೊಂಬುದು ಅಜ್ಞಾನ ನೋಡಾ. ಉರದ ಮಧ್ಯದಲ್ಲಿ ಒರಗಿಪ್ಪ ಗಂಡನಂ ಬಿಟ್ಟು ಇನ್ನು ನೆರೆಮನೆಯ ಗಂಡರಿಗೆ ಮನವನಿಕ್ಕುವ ಹಾದರಗಿತ್ತಿಗೆ ಪತಿಭಕ್ತಿಯೆಲ್ಲಿಯದೋ?. ಶ್ರೀಗುರು ಕರುಣಿಸಿಕೊಟ್ಟ ಕ್ರಿಯಾಲಿಂಗವನು ಅರ್ಚನೆ ಪೂಜನೆಯಿಂದ ಅರ್ಪಿತಾವಧಾನದಿಂದ ಧ್ಯಾನ ಧಾರಣದಿಂದ ಸಮತೆ ಸಮಾಧಾನದಿಂದ ಧ್ಯಾನ ಮೌನ ಉಪಾವಸ್ಥೆಯಿಂದ ಮುನಿಸು ಮೂದಲೆಯಿಂದ ಕಾಮಿಸಿ ಕಂಬನಿದುಂಬಿ ಕರಸ್ಥಲದಲಿಪ್ಪ ಪ್ರಾಣೇಶ್ವರನ ಶ್ರೀ ಚರಣಕ್ಕೆ ಲಲಾಟ ಪೂಜೆಯ ಮಾಡಿ ಒಲಿಸಿ ಒಡಗೂಡಿ ನಿಜಮುಕ್ತಿವಡೆಯದೆ ಆಕಾರವಂ ಮರೆದು ನಿರಾಕಾರವಂ ಕೂಡಿಹೆನೆಂಬ ಲೋಕದ ಕಾಕುಮಾನವರೆಲ್ಲಾ ಕಾಲ ಕಾಮರಿಗೆ ತುತ್ತಾಗಿ ಕಾಲಾಗ್ನಿರುದ್ರನ ಹೊಡೆಗಿಚ್ಚಿಗೊಳಗಾದರಯ್ಯಾ, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ./1 |
ಅಗ್ನಿ ಅಗ್ನಿಯ ಕೂಡಿ ಬೆಳಗು ಮುಂಬರಿವುದಲ್ಲದೆ ಅಗ್ನಿ ತೃಣವು ಕೂಡಿದಲ್ಲಿ ಹೊಗೆದೋರ್ಪುದಲ್ಲದೆ ಬೆಳಗು ನಿಜವಹುದೆ ಅಯ್ಯ? ಆ ಪರಮಾರ್ಥವ ತಿಳಿದ ಪರಮಜ್ಞಾನಿಯ ಕೂಡೆ ಸಮ್ಯಜ್ಞಾನಿ ಅನುಭವಿ ಬಾಯಿದೆಗೆದೊಡೆ ಉಭಯದ ತನು ಕರಣ ಮನಂಗಳು ಸ್ಫಟಿಕದ ಪುತ್ಥಳಿಯಂತೆ ನಿರ್ಮಲ ಸ್ವರೂಪವಪ್ಪವಲ್ಲದೆ ಕಾಳಿಕೆವೆರವುದೆ ಅಯ್ಯ? ಜ್ಞಾನಿಯು ಅಜ್ಞಾನಿಯ ಕೂಡೆ ಸಂಭಾಷಣೆಯ ಮಾಡಿದರೆ ಚಿಲುಪಾಲಿನೊಳಗೆ ಹುಳಿಯು ಬೆರದಂತಾಯಿತಯ್ಯಾ, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ./2 |
ಅಯ್ಯ ಪಂಚತತ್ವಂಗಳ ಪಡೆವ ತತ್ವ ಪ್ರತ್ಯಕ್ಷವಾಗದ ಮುನ್ನ, ಪದ್ಮಜಾಂಡವ ಧರಿಸಿಪ್ಪ ಕಮಠ-ದಿಕ್ಕರಿಗಳಿಲ್ಲದ ಮುನ್ನ, ನಿರ್ಮಲಾಕಾಶವೇ ಸಾಕಾರವಾಗಿ ನಿರಂಜನವೆಂಬ ಪ್ರಣವವಾಯಿತ್ತಯ್ಯ ಆ ನಿರಂಜನ ಪ್ರಣವವೆಂಬ ಮರುಜೇವಣಿಯ ಬೀಜ, ಹ್ರೂಂಕಾರ ಮಂಟಪದಲ್ಲಿ ಮೂರ್ತಿಗೊಂಡಿತಯ್ಯ. ಆ ನಿರಂಜನ ಪ್ರಣವವೆಂಬ ಮರುಜೇವಣಿಯ ಬೀಜ, ತನ್ನ ನಿರಂಜನ ಶಕ್ತಿಯ ನಸುನೆನಹಿಂದ ಹಂಕಾರ ಚಕ್ಷುವೆಂಬ ಕುಹರಿಯಲ್ಲಿ ಶುದ್ಧಪ್ರಸಾದವೆಂಬ ಮೊಳೆದೋರಿತ್ತಯ್ಯ. ಆ ಶುದ್ಧ ಪ್ರಸಾದವೆಂಬ ಮೊಳೆ ತನ್ನ ಶೂನ್ಯಶಕ್ತಿಯ ಸೆಜ್ಜೆಯಿಂದ ಕರ್ಣಿಕಾಪ್ರಕಾಶ ಪಂಚನಾದವನುಳ್ಳ ಷೋಡಶ ಕಲಾಪುಂಜರಂಜಿತವಪ್ಪ ಹನ್ನೊಂದನೂರುದಳದ ಪತ್ರದಲ್ಲಿ ಪ್ರಣವಚಿತ್ರವೊಪ್ಪಿತ್ತಿಪ್ಪ ಹ್ರೀಂಕಾರ ಸಿಂಹಾಸನದ ಮೇಲೆ ಸಿದ್ಧಪ್ರಸಾದವೆಂಬ ಎಳವೆರೆ ತಳಿರಾಯಿತ್ತಯ್ಯ. ಆ ಸಿದ್ಧಪ್ರಸಾದವೆಂಬ ಎಳವೆರೆ ತನ್ನ ಶಾಂತಶಕ್ತಿಯ ಚಲನೆಯಿಂದ ಮೂರುಬಟ್ಟೆಯ ಮೇಲಿಪ್ಪ ಎರಡುಮಂಟಪದ ಮಧ್ಯದಲ್ಲಿ ಪ್ರಸಿದ್ಧಪ್ರಸಾದವೆಂಬ ಮಹಾವೃಕ್ಷ ಬೀಗಿ ಬೆಳೆಯಿತ್ತಯ್ಯ. ಆ ಪ್ರಸಿದ್ಧಪ್ರಸಾದವೆಂಬ ಮಹಾವೃಕ್ಷ ತನ್ನ ಚಿಚ್ಛಕ್ತಿಯ ಲೀಲಾವಿನೋದದಿಂದ ಪಂಚಶಕ್ತಿಗಳೆಂಬ ನಾಲ್ಕೊಂದು ಹೂವಾಯಿತು. ಆ ಹೂಗಳ ಮಹಾಕೂಟದಿಂದ ಪಂಚಲಿಂಗಗಳೆಂಬ ಪಂಚಪ್ರಕಾರದ ಮೂರೆರಡು ಹಣ್ಣಾಯಿತು. ಆ ಹಣ್ಣುಗಳ ಆದ್ಯಂತಮಂ ಪಿಡಿದು ಸದ್ಯೋನ್ಮುಕ್ತಿಯಾಗಬೇಕೆಂದು ಸದಾಕಾಲದಲ್ಲಿ ಬಯಸುತ್ತಿಪ್ಪ ಮಹಾಶಿವಶರಣನು ತಿಳಿದು ನೋಡಿ ಕಂಡು ಆರುನೆಲೆಯ ನಿಚ್ಚಣಿಗೆಯ ಆ ತರುಲತೆಗೆ ಸೇರಿಸಿ ಜ್ಞಾನ ಕ್ರೀಗಳೆಂಬ ದೃಢದಿಂದೇರಿ ನಾಲ್ಕೆಲೆಯ ಪೀತವರ್ಣದ ಹಣ್ಣ ಸುಚಿತ್ತವೆಂಬ ಹಸ್ತದಲ್ಲಿ ಪಿಡಿದು ಆರೆಲೆಯ ನೀಲವರ್ಣದ ಹಣ್ಣ ಸುಬುದ್ಧಿಯೆಂಬ ಹಸ್ತದಲ್ಲಿ ಪಿಡಿದು ಹತ್ತೆಲೆಯ ಸ್ಫಟಿಕವರ್ಣದ ಹಣ್ಣ ನಿರಹಂಕಾರವೆಂಬ ಹಸ್ತದಲ್ಲಿ ಪಿಡಿದು ಹನ್ನೆರೆಡೆಲೆಯ ಸುವರ್ಣವರ್ಣದ ಹಣ್ಣ ಸುಮನನೆಂಬ ಹಸ್ತದಲ್ಲಿ ಪಿಡಿದು ಹದಿನಾರೆಲೆಯ ಮಿಂಚುವರ್ಣದ ಹಣ್ಣ ಸುಜ್ಞಾನವೆಂಬ ಹಸ್ತದಲ್ಲಿ ಪಿಡಿದು ಆಸನಸ್ಥಿರವಾಗಿ ಕಣ್ಮುಚ್ಚಿ ಜ್ಞಾನಚಕ್ಷುವಿನಿಂ ನಿಟ್ಟಿಸಿ ಕಟ್ಟಕ್ಕರಿಂ ನೋಡಿ ರೇಚಕ ಪೂರಕ ಕುಂಭಕಂಗೈದು ಪೆಣ್ದುಂಬಿಯ ನಾದ ವೀಣಾನಾದ ಘಂಟನಾದ ಭೇರೀನಾದ ಮೇಘನಾದ ಪ್ರಣವನಾದ ದಿವ್ಯನಾದ ಸಿಂಹನಾದಂಗಳಂ ಕೇಳಿ ಹರುಷಂಗೊಂಡು ಆ ಫಲಂಗಳಂ ಮನವೆಂಬ ಹಸ್ತದಿಂ ಮಡಿಲುದುಂಬಿ ಮಾಯಾಕೋಲಾಹಲನಾಗಿ ಪಂಚಭೂತಂಗಳ ಸಂಚವ ಕೆಡಿಸಿ ದಶವಾಯುಗಳ ಹೆಸಗೆಡಿಸಿ ಅಷ್ಟಮದಂಗಳ ಹಿಟ್ಟುಗುಟ್ಟಿ ಅಂತಃಕರಣಂಗಳ ಚಿಂತೆಗೊಳಗುಮಾಡಿ ಮೂಲಹಂಕಾರವ ಮುಂದುಗೆಡಿಸಿ ಸಪ್ತವ್ಯಸನಂಗಳ ತೊತ್ತಳದುಳಿದು ಜ್ಞಾನೇಂದ್ರಿಯಂಗಳ ನೆನಹುಗೆಡಿಸಿ ಕಮರ್ೇಂದ್ರಿಯಂಗಳ ಕಾಲಮುರಿದು ತನ್ಮಾತ್ರೆಯಂಗಳ ತೋಳಕೊಯ್ದು, ಅರಿಷಡ್ವರ್ಗಂಗಳ ಕೊರಳನರಿದು ಸ್ಫಟಿಕದ ಪುತ್ಥಳಿಯಂತೆ ನಿಜಸ್ವರೂಪಮಾಗಿ- ಎರಡೆಸಳ ಕಮಲಕರ್ಣಿಕಾಗ್ರದಲ್ಲಿಪ್ಪ ಪರಬ್ರಹ್ಮದ ಶ್ವೇತಮಾಣಿಕ್ಯವರ್ಣದ ದ್ವಿಪಾದಮಂ ಸುಜ್ಞಾನವೆಂಬ ಹಸ್ತದಲ್ಲಿ ಪಿಡಿದು ಓಂಕಾರವೆಂಬ ಮಂತ್ರದಿಂದ ಸಂತೈಸಿ ನೀರ ನೀರು ಕೂಡಿದಂತೆ ಪರಬ್ರಹ್ಮವನೊಡಗೂಡಿ ಆ ಪರಬ್ರಹ್ಮವೆ ತಾನೆಯಾಗಿ ಬ್ರಹ್ಮರಂಧ್ರವೆಂಬ ಶಾಂಭವಲೋಕದಲ್ಲಿಪ್ಪ ನಿಷ್ಕಲ ಪರಬ್ರಹ್ಮದ ನಿರಾಕಾರಪಾದಮಂ ನಿರ್ಭಾವವೆಂಬ ಹಸ್ತದಿಂ ಪಿಡಿದು ಪಂಚಪ್ರಸಾದವೆಂಬ ಮಂತ್ರದಿಂ ಸಂತೈಸಿ ಕ್ಷೀರಕ್ಷೀರವ ಕೂಡಿದಂತೆ ನಿಷ್ಕಲಬ್ರಹ್ಮವನೊಡಗೂಡಿ ಆ ನಿಷ್ಕಲಬ್ರಹ್ಮವೇ ತಾನೆಯಾಗಿ ಮೂರುಮಂಟಪದ ಮಧ್ಯದ ಕುಸುಮಪೀಠದಲ್ಲಿಪ್ಪ ಶೂನ್ಯಬ್ರಹ್ಮದ ಶೂನ್ಯಪಾದಮಂ ನಿಷ್ಕಲವೆಂಬ ಹಸ್ತದಿಂ ಪಿಡಿದು ಕ್ಷಕಾರವೆಂಬ ಮಂತ್ರದಿಂ ಸಂತೈಸಿ ಘೃತಘೃತವ ಕೂಡಿದಂತೆ ಶೂನ್ಯಬ್ರಹ್ಮವನೊಡಗೂಡಿ ಆ ಶೂನ್ಯಬ್ರಹ್ಮವೇ ತಾನೆಯಾಗಿ- `ನಿಶಬ್ದಂ ಬ್ರಹ್ಮ ಉಚ್ಯತೇ' ಎಂಬ ಒಂಬತ್ತು ನೆಲೆಯ ಮಂಟಪದೊಳಿಪ್ಪ ನಿರಂಜನಬ್ರಹ್ಮದ ನಿರಂಜನಪಾದಮಂ ಶೂನ್ಯವೆಂಬ ಹಸ್ತದಿಂ ಪಿಡಿದು ಹ್ರೂಂಕಾರವೆಂಬ ಮಂತ್ರದಿಂ ಸಂತೈಸಿ ಬಯಲ ಬಯಲು ಬೆರಸಿದಂತೆ ನಿರಂಜನಬ್ರಹ್ಮವೇ ತಾನೆಯಾಗಿ- ಮಹಾಗುರು ಸಿದ್ಧಲಿಂಗಪ್ರಭುವಿನ ಗರ್ಭಾಬ್ಧಿಯಲ್ಲಿ ಜನಿಸಿದ ಬಾಲಕಿಯಯ್ಯ ನಾನು. ಎನ್ನ ಹೃದಯಕಮಲೆಂಟು ಮಂಟಪದ ಚತುಷ್ಪಟ್ಟಿಕಾ ಮಧ್ಯದ ಪದ್ಮಪೀಠದಲ್ಲಿ ಎನ್ನ ತಂದೆ ಸುಸ್ಥಿರವಾಗಿ ಎನಗೆ ಷಟ್ಸ ್ಥಲಮಾರ್ಗ-ಪುರಾತರ ವಚನಾನುಭಾವ- ಭಕ್ತಿ ಜ್ಞಾನ ವೈರಾಗ್ಯವೆಂಬ ಜೇನುಸಕ್ಕರೆ ಪರಮಾಮೃತವ ತಣಿಯಲುಣಿಸಿದನಯ್ಯ. ಆ ಜೇನುಸಕ್ಕರೆ ಪರಮಾಮೃತವ ತಣಿಯಲುಣಿಸಲೊಡನೆ ಎನ್ನ ಬಾಲತ್ವಂ ಕೆಟ್ಟು ಯೌವನಂ ಬಳೆದು ಬೆಡಗು ಕುಡಿವರಿದು ಮೀಟು ಜವ್ವನೆಯಾದೆನಯ್ಯ ನಾನು. ಎನಗೆ ನಿಜಮೋಕ್ಷವೆಂಬ ಮನ್ಮಥವಿಕಾರವು ಎನ್ನನಂಡಲೆದು ಆಳ್ದು ನಿಂದಲ್ಲಿ ನಿಲಲೀಸದಯ್ಯ. ಅನಂತಕೋಟಿ ಸೋಮಸೂರ್ಯ ಪ್ರಕಾಶವನುಳ್ಳ ಪರಂಜ್ಯೋತಿಲಿಂಗವೆ ಎನಗೆ ಶಿವಾನಂದ ಭಕ್ತಿಯೆಂಬ ತಾಲಿಬಂದಿಯ ಕಟ್ಟು ಸುಮಂತ್ರವಲ್ಲದೆ ಕುಮಂತ್ರವ ನುಡಿಯೆನೆಂಬ ಕಂಠಮಾಲೆಯಂ ಧರಿಸು. ಅರ್ಪಿತವಲ್ಲದೆ ಅನರ್ಪಿತವ ಪರಿಮಳಿಸೆನೆಂಬ ಮೌಕ್ತಿಕದ ಕಟ್ಟಾಣಿ ಮೂಗುತಿಯನಿಕ್ಕು. ಸುಶಬ್ಧವಲ್ಲದೆ ಅಪಶಬ್ದವ ಕೇಳೆನೆಂಬ ರತ್ನದ ಕರ್ಣಾಭರಣಂಗಳಂ ತೊಡಿಸು. ಶರಣತ್ವವನಲ್ಲದೆ ಜೀವತ್ವವನೊಲ್ಲೆನೆಂಬ ತ್ರಿಪುಂಡ್ರಮಂ ಧರಿಸು. ಕ್ರೀಯಲ್ಲದೆ ನಿಷ್ಕ್ರಿಯ ಮಾಡೆನೆಂಬ ಮೌಕ್ತಿಕದ ಬಟ್ಟನಿಕ್ಕು. ನಿಮ್ಮವರಿಗಲ್ಲದೆ ಅನ್ಯರಿಗೆರಗೆನೆಂಬ ಕನಕಲತೆಯ ಬಾಸಿಂಗಮಂ ಕಟ್ಟು. ಸಮ್ಯಜ್ಞಾನವಲ್ಲದ ಅಜ್ಞಾನವ ಹೊದ್ದೆನೆಂಬ ನವ್ಯದುಕೂಲವನುಡಿಸು. ಲಿಂಗಾಣತಿಯಿಂದ ಬಂದುದನಲ್ಲದೆ ಅಂಗಗತಿಯಿಂದ ಬಂದುದಂ ಮುಟ್ಟೆನೆಂಬ ರತ್ನದ ಕಂಕಣವಂ ಕಟ್ಟು. ಶರಣಸಂಗವಲ್ಲದೆ ಪರಸಂಗಮಂ ಮಾಡೆನೆಂಬ ಪರಿಮಳವಂ ಲೇಪಿಸು. ಶಿವಪದವಲ್ಲದೆ ಚತುರ್ವಿಧಪದಂಗಳ ಬಯಸೆನೆಂಬ ಹಾಲು ತುಪ್ಪಮಂ ಕುಡಿಸು. ಪ್ರಸಾದವಲ್ಲದೆ ಭಿನ್ನರುಚಿಯಂ ನೆನೆಯೆನೆಂಬ ತಾಂಬೂಲವನಿತ್ತು ಸಿಂಗರಂಗೆಯ್ಯ. ನಿನ್ನ ಕರುಣಪ್ರಸಾದವೆಂಬ ವಸವಂತ ಚಪ್ಪರದಲ್ಲಿ ಪ್ರಮಥಗಣಂಗಳ ಮಧ್ಯದಲ್ಲಿ ಎನ್ನ ಮದುವೆಯಾಗಯ್ಯಾ, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ./3 |
ಅಯ್ಯಾ ಬಸವಾದಿ ಪ್ರಮಥರೇ ನಿಮ್ಮ ಕರುಣಪ್ರಸಾದವ ನಾನು ಆದಿ ಅನಾದಿಯಲ್ಲಿ ದಣಿಯಲುಂಡ ದೆಸೆಯಿಂದಲೆನ್ನ ತನು ಷಟ್ಸ ್ಥಲವನೊಳಕೊಂಡು ಉದಯವಾಯಿತ್ತು. ಎನ್ನ ಪಾದ ಷಟ್ಸ್ಥಲಕ್ಕೆ ಒಪ್ಪವಿಟ್ಟಲ್ಲದೆ ಅಡಿಯಿಡದು. ಎನ್ನ ಹಸ್ತ ಷಟ್ಸ್ಥಲಪತಿಯನಲ್ಲದೆ ಪೂಜೆಯ ಮಾಡದು. ಎನ್ನ ಘ್ರಾಣ ಮೊದಲು ಶ್ರೋತ್ರ ಕಡೆಯಾದ ಪಂಚೇಂದ್ರಿಯಂಗಳು ಷಟಸ್ಥಲವನಲ್ಲದೆ ಆಚರಿಸವು. ಎನ್ನ ಮನ ಷಟಸ್ಥಲದ ಷಡ್ವಿಧಲಿಂಗಂಗಳ ಮೇಲಲ್ಲದೆ ಹರುಷಗೊಂಡು ಹರಿದಾಡದು. ಎನ್ನ ಪ್ರಾಣ ಷಟ್ಸ್ಥಲಕ್ಕೆ ಸಲೆ ಸಂದ ಅಕ್ಕಮಹಾದೇವಿಯವರು ಹೋದ ಬಟ್ಟೆಯಲ್ಲಿ ನಡೆಯುವುದಲ್ಲದೆ ಕಿರುಬಟ್ಟೆಯಲ್ಲಿ ನಡೆಯದು. ಇಂತಿವೆಲ್ಲವು ಷಟ್ಸ ್ಥಲವನಪ್ಪಿ ಅವಗ್ರಹಿಸಿದ ನೀಲಾಂಬಿಕೆಯಮ್ಮನವರ ಗರ್ಭದಲ್ಲಿ ಉದಯವಾದ ಮೋಹದಕಂದನಾದ ಕಾರಣ ಎನಗೆ ಷಟ್ಸ ್ಥಲಮಾರ್ಗದ ವಿರತಿ ನೆಲೆಗೊಂಡು ನಿಂದಿತಯ್ಯಾ, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ./4 |
ಅರ್ಥದ ಮೇಲಣ ಆಶೆಯುಳ್ಳನ್ನಕ್ಕರ, ಮರ್ತ್ಯಲೋಕದ ಮಹಾಜಂಜರಿ ಬಿಡದಯ್ಯ. ನಾನು ಮರ್ತ್ಯಲೋಕದ ಹಂಬಲ ಹರಿದು, ನಿನ್ನ ನಂಬಿ ನಚ್ಚಿದೆನೆಂಬುದಕ್ಕೆ ಪ್ರತ್ಯಕ್ಷಮಂ ತೋರುತಿಪರ್ೆ ನೋಡಯ್ಯ ಲಿಂಗವೆ. ಅನಘ್ರ್ಯವಾದ ಮುತ್ತು ರತ್ನಂಗಳು ಹೊಂಗೊಡದಲ್ಲಿ ತುಂಬಿ, ನಾನಿರ್ದ ಏಕಾಂತವಾಸಕ್ಕೆ ಉರುಳಿ ಬರಲು, ಹಾವ ಕಂಡ ಮರ್ಕಟನಂತೆ, ನಾನು ಅಡ್ಡಮೊಗವನಿಕ್ಕಿದೆನೆನೆ, ನಿನಗೊಲಿದ ಶರಣನೆಂದು ಭಾವಿಸಿ, ಎನ್ನ ಮರ್ತ್ಯಲೋಕದ ಸಂಕಲೆಯಂ ತರಿದು, ನಿನ್ನ ಗಣಂಗಳ ಒಳಗುಮಾಡು. ಅದಲ್ಲದೆ, ಅದರ ಮೇಲೆ ಕಿಂಚಿತ್ತು ಆಶೆಯಂ ಮಾಡಲೊಡನೆ, ಚಂದ್ರಸೂರ್ಯಾದಿಗಳುಳ್ಳನ್ನಕ, ಎನ್ನ ಹಂದಿ ನಾಯಿ ಬಸುರಲ್ಲಿ ಹಾಕದಿದ್ದೆಯಾದರೆ, ನಿನಗೆ ಅಲ್ಲಮಪ್ರಭುವಿನಾಣೆ ಆಳಿನಪಮಾನ ಆಳ್ದಂಗೆ ತಪ್ಪದಯ್ಯಾ, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ./5 |
ಅರ್ಪಿತ ಅವಧಾನದ ಕ್ರಮವ ವಿಸ್ತರಿಸಿ ಒಪ್ಪವಿಟ್ಟು ಹೇಳಿಹೆ ಕೇಳಿರಣ್ಣ. ಭಿನ್ನಭೋಜನ ಪ್ರಸಾದಭೋಜನ ಸಹಭೋಜನವೆಂದು ಲಿಂಗಾರ್ಪಿತ ಮೂರು ಪ್ರಕಾರವಾಗಿಪ್ಪುದು. ಮುಂದಿಟ್ಟು ಸಕಲಪದಾರ್ಥವಂ ಇಷ್ಟಲಿಂಗಕ್ಕೆ ಕೊಟ್ಟು ಆ ಲಿಂಗಮಂ ಸೆಜ್ಜೆಯರಮನೆಗೆ ಬಿಜಯಂಗೈಸಿ ಅಂದಂದಿಂಗೆ ಬಂದ ಪದಾರ್ಥಮಂ ಲಿಂಗಕ್ಕೆ ಕೊಡದೆ ಕೊಂಬುದೀಗ ಭಿನ್ನಭೋಜನ. ಮುಂದಿಟ್ಟ ಸಕಲಪದಾರ್ಥಂಗಳು ಲಿಂಗಕ್ಕೆ ಒಂದು ವೇಳೆ ಕೊಡದೆ ಎತ್ತಿದ ಭೋಜ್ಯಮಂ ಲಿಂಗಕ್ಕೆ ಕೊಟ್ಟು ಆ ಭೋಜ್ಯಮಂ ಇಳುಹದೆ ಕೊಂಬುದೀಗ ಪ್ರಸಾದಭೋಜನ. ಮುಂದಿಟ್ಟು ಸಕಲಪದಾರ್ಥಂಗಳ ಲಿಂಗಕ್ಕೆ ಮೊದಲು ಕೊಟ್ಟು ಮತ್ತೆ ಎತ್ತಿದ ಭೋಜ್ಯಮಂ ಲಿಂಗಕ್ಕೆ ಕೊಟ್ಟು ಕೊಂಬುದೀಗ ಸಹಭೋಜನ. ಇಂತೀ ತ್ರಿವಿಧ ಭೋಜನದ ಅಂತರಂಗದನ್ವಯವ ನಿಮ್ಮ ಶರಣರೇ ಬಲ್ಲರಯ್ಯಾ, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ./6 |
ಆಕಾಶದಿಂದಲಾಯಿತ್ತು ನಿರಾಕಾರ. ಆ ನಿರಾಕಾರ ಚಿದಕಾಶದ ಮೇಲೆ ನಿಂದಿತ್ತು. ಆ ನಿರಾಕಾರದಿಂದಲಾಯಿತ್ತು ಭಾವ. ಆ ಭಾವ ಕರಣದ ಮೇಲೆ ನಿಂದಿತ್ತು. ಆ ಭಾವದಿಂದಲಾಯಿತ್ತು ಮನ. ಆ ಮನವು ಸೂಕ್ಷ ್ಮದ ಮೇಲೆ ನಿಂದಿತ್ತು. ಆ ಮನದಿಂದಲಾಯಿತ್ತು ತನು. ಆ ತನು ಸ್ಥೂಲದ ಮೇಲೆ ನಿಂದಿತ್ತು. ಆ ತನುವು ಮನವ ಕೂಡಿದಲ್ಲಿಯೇ ತನು ನಷ್ಟವಾಯಿತ್ತು. ಮನುವು ಭಾವವ ಕೂಡಿದಲ್ಲಿಯೇ ಮನ ನಷ್ಟವಾಯಿತ್ತು. ಭಾವವು ನಿರಾಕಾರವ ಕೂಡಿದಲ್ಲಿಯೇ ಭಾವ ನಷ್ಟವಾಯಿತ್ತು. ಇಂತೀ ತ್ರಿವಿಧ ನಷ್ಟವಾದಲ್ಲಿಯೇ ಶರಣನ ಹುಟ್ಟು ನಷ್ಟವಾಯಿತ್ತು, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ./7 |
ಆಚಾರಲಿಂಗವ ಅಂಗೈಯೊಳಗಳವಡಿಸಿ ಮಜ್ಜನಕ್ಕೆರೆದು ತ್ರಿಪುಂಡ್ರಮಂ ಧರಿಯಿಸಿ ಪುಷ್ಪಜಾತಿಗಳಿಂದಚರ್ಿಸಿ ಪೂಜೆಮಾಡುವ ಕರವು ಆ ಪೂಜೆಗೆ ಮೆಚ್ಚಿ ಪಂಚಸ್ಫರ್ಷನಂಗಳಂ ಮರೆಯಲೊಡನೆ ಆ ಕರದಲ್ಲಿ ಜಂಗಮಲಿಂಗ ನೆಲೆಗೊಂಡಿತ್ತು. ಆ ಲಿಂಗದ ಪ್ರಕಾಶಮಂ ನೋಡುವ ನೇತ್ರಂಗಳು ಆ ಪ್ರಕಾಶಕ್ಕೆ ಮೆಚ್ಚಿ ಪಂಚವರ್ಣಂಗಳಂ ಮರೆಯಲೊಡನೆ ಅ ನೇತ್ರಂಗಳಲ್ಲಿ ಶಿವಲಿಂಗವೆ ನೆಲೆಗೊಂಡಿತ್ತು. ಆ ಲಿಂಗದ ಸದ್ವಾಸನೆಯಂ ವಾಸಿಸುವ ಘ್ರಾಣ ಆ ವಾಸನೆಗೆ ಮೆಚ್ಚಿ ಪಂಚಗಂಧಂಗಳಂ ಮರೆಯಲೊಡನೆ ಆ ಘ್ರಾಣದಲ್ಲಿ ಆಚಾರಲಿಂಗ ನೆಲೆಗೊಂಡಿತ್ತು. ಆ ಲಿಂಗದ ಮಂತ್ರಸ್ವರೂಪವನೆತ್ತಿ ಕೊಂಡಾಡುವ ಜಿಹ್ವೆ ಆ ಮಂತ್ರಕ್ಕೆ ಮೆಚ್ಚಿ ಪಂಚರಸಂಗಳಂ ಮರೆಯಲೊಡನೆ ಆ ಜಿಹ್ವೆಯಲ್ಲಿ ಗುರುಲಿಂಗ ನೆಲೆಗೊಂಡಿತ್ತು. ಆ ಲಿಂಗಮಂ ಮನವೊಲಿದು ಹಾಡುವ ನಾದಮಂ ಕೇಳುವ ಶ್ರೋತ್ರ ಆ ನಾದಕ್ಕೆ ಮೆಚ್ಚಿ ಪಂಚನಾದಂಗಳಂ ಮರೆಯಲೊಡನೆ ಆ ಶ್ರೋತ್ರದಲ್ಲಿ ಪ್ರಸಾದಲಿಂಗ ನೆಲೆಗೊಂಡಿತ್ತು. ಆ ಲಿಂಗವ ನೆನೆವ ಮನ ಆ ನೆನಹಿಂಗೆ ಮೆಚ್ಚಿ ಪಂಚಪರಿಣಾಮಂಗಳಂ ಮರೆಯಲೊಡನೆ ಆ ಮನದಲ್ಲಿ ಮಹಾಲಿಂಗ ನೆಲೆಗೊಂಡಿತ್ತು. ಈ ಷಡಿಂದ್ರಿಯಂಗಳೂ ಲಿಂಗವನಪ್ಪಿ ಅಗಲದ ಕಾರಣ ಆ ಲಿಂಗವೊಲಿದು ಷಡಿಂದ್ರಿಯಂಗಳಲ್ಲಿ ಷಡ್ವಿಧಲಿಂಗವಾಗಿ ನೆಲೆಗೊಂಡಿತ್ತು. ಇಂತಪ್ಪ ಇಷ್ಟಲಿಂಗದಲ್ಲಿ ಶರಣಂ ನಿಷ್ಠೆ ನಿಬ್ಬೆರಗಾಗಿ ಧ್ಯಾನಯೋಗಮಂ ಕೈಕೊಂಡು ಷಡುವರ್ಣಮಂ ಮರೆಯಲೊಡನೆ ಆ ಲಿಂಗವೊಲಿದು ಅಂಗವೇಧಿಸಿ ಜ್ಞಾನಕ್ರೀಗಳಲ್ಲಿ ಷಡ್ವಿಧ ಪ್ರಾಣಲಿಂಗವಾಗಿ ನೆಲೆಗೊಂಡಿತ್ತು. ಆ ಪ್ರಾಣಲಿಂಗಳಂ ಶರಣ ಮಂತ್ರಮಾಲೆಯಂ ಹೃದಯದೊಳಿಂಬಿಟ್ಟು ಮನವೆಂಬರಳ್ದ ತಾವರೆಯಲ್ಲಿ ಜಾಗ್ರತ್ ಸ್ವಪ್ನದಲ್ಲಿ ಪೂಜಿಸುವ ಧಾರಣಯೋಗದೊಳಿರ್ದು ಕ್ರೀಯ ಮರೆಯಲೊಡನೆ ಆ ಲಿಂಗವೊಲಿದು ಮನವೇಧಿಸಿ ಭಾವಂಗಳಡಗಿ ತ್ರಿವಿಧ ಭಾವಲಿಂಗವಾಗಿ ನೆಲೆಗೊಂಡಿತ್ತು. ಆ ಭಾವಲಿಂಗಗಳ ಶರಣನೊಡೆವೆರೆಯಲೊಡನೆ ಕಪರ್ೂರ ಹೋಗಿ ಉರಿಯ ಹಿಡಿದಂತಾದ ಸಮಾಧಿಯೋಗದೊಳಿರ್ದು ಜ್ಞಾನವ ಮರೆಯಲೊಡನೆ ಆ ಶರಣಂಗೆ ಆ ಲಿಂಗವೊಲಿದು ಸರ್ವಾಂಗಲಿಂಗವಾಯಿತು. ಆತನೇ ಪರಬ್ರಹ್ಮ. ಇದನರಿಯದೆ ಜ್ಞಾನಕ್ರೀಗಳಿಂದಾಚರಿಸಿ ಲಿಂಗಾಂಗ ಸಂಯೋಗವಾಗದೆ ಕೆರಹಿನಟ್ಟೆಗೆ ನಾಯಿ ತಲೆದೂಗುವಂತೆ ತಮ್ಮ ಅರಿವಿಂಗೆ ತಾವೇ ತಲೆದೂಗಿ `ಅಹಂ ಬ್ರಹ್ಮ'ವೆಂಬ ಚೌರಾಶಿ ಹೊಲೆಯರ ಎನಗೆ ತೋರದಿರಯ್ಯಾ, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ./8 |
ಆದಿ ಅನಾದಿಯಿಲ್ಲದತ್ತಣ ದೂರಕ್ಕೆ ದೂರದಲ್ಲಿ ಭಾವಕ್ಕೆ ನಿರ್ಭಾವಕ್ಕೆ ಬಾರದಿರ್ದ ನಿಷ್ಕಳಂಕ ಪರಬ್ರಹ್ಮವೇ ಮುನ್ನ ನೀನು ಶಾಖೆದೋರುವಲ್ಲಿ ನಿನ್ನೊಳಂಕುರಿಸಿ ನಾನು ತಾಮಸ ಮುಸುಂಕಿ ಜನನ ಮರಣಕ್ಕೊಳಗಾಗಿ ಚೌರಾಶಿ ಎಂಬತ್ತುನಾಲ್ಕು ಲಕ್ಷ ಪ್ರಾಣಿಗಳ ಗರ್ಭದಿಂದ ಬಂದು ಬಂದು ಒಮ್ಮೆ ಮಾನವನಪ್ಪಂದಿಗೆ ನಾನುಂಡು ಮೊಲೆಹಾಲು ಸಪ್ತಸಮುದ್ರಕ್ಕೆ ಸರಿಯಿಲ್ಲವಯ್ಯ. ಇಂತಪ್ಪ ಮಾನವ ಜನ್ಮದಲ್ಲಿ ಬಂದ ಬಂದುದು ಗಣಿತಕ್ಕೆ ಬಾರದಯ್ಯ. ಈ ಜನ್ಮದಲ್ಲಿ ಪಿಂಡೋತ್ಪತ್ತಿಯಲ್ಲಿಯೇ ಶರಣಸತಿ ಲಿಂಗಪತಿಯೆಂಬ ಜ್ಞಾನ ತಲೆದೋರಿ ಶರಣವೆಣ್ಣಾಗಿ ಹುಟ್ಟಿದೆನಯ್ಯ. ಎನಗೆ ನಿನ್ನ ಬಯಕೆಯೆಂಬ ಸಿಂಗಾರದ ಸಿರಿಮುಡಿಯಾಯಿತು. ಎನಗೆ ನಿನ್ನ ನೋಡುವೆನೆಂಬ ಮುಗುಳ್ಮೊಲೆ ಮೂಡಿದವು. ಎನಗೆ ನಿನ್ನೊಳು ನುಡಿಯಬೇಕೆಂಬ ಉರವಣೆಯ ಸಂಪದದ ಜವ್ವನ ಕುಡಿವರಿಯಿತ್ತು. ಎನಗೆ ನಿನ್ನನೊಲಿಸಬೇಕೆಂಬ ಸಂಭ್ರಮದ ಕಾಂಚೀಧಾಮ ಕಟಿಸೂತ್ರ ನೇವುರ ನಿಡುಗೊಂಡೆಯವೆಂಬಾಭರಣ ಅನುಲೇಪನ ವಸ್ತ್ರಂಗಳೆನಗೆ ಅಲಂಕಾರವಾಯಿತ್ತು. ಭಕ್ತಿಯೆಂಬ ವಿರಹಾಗ್ನಿ ಎನ್ನ ಹೃದಯಕಮಲದಲ್ಲಿ ಬೆಳೆದು ಬೀದಿವರಿದು ನಿಂತಲ್ಲಿ ನಿಲಲೀಸದಯ್ಯ. ಕುಳಿತಲ್ಲಿ ಕುಳ್ಳಿರಲೀಸದಯ್ಯ. ಮನ ನಿಂದಲ್ಲಿ ಮನೋಹರವಪ್ಪುದಯ್ಯ. ಅಂಗ ಮನ ಪ್ರಾಣ ನೇತ್ರ ಚಿತ್ತಂಗಳೊಳು ಪಂಚಮುಖವೆಂಬ ಪಂಚಬಾಣಂಗಳು ನೆಟ್ಟವಯ್ಯ. ನಾನು ಧರೆಯೊಳುಳಿವುದರಿದು. ಪ್ರೇಮದಿಂ ಬಂದು ಕಣ್ದುಂಬಿ ನೋಡಿ ಮನವೊಲಿದು ಮಾತಾಡಿ ಕರುಣದಿಂ ಕೈವಿಡಿದು ಅಕ್ಕರಿಂದಾಲಂಗಿಸಿ ದಿಟ್ಟಿಸಿ ಬೊಟ್ಟಾಡಿ ಲಲ್ಲೆವಾತಿಂ ಗಲ್ಲವ ಪಿಡಿದು ಪುಷ್ಪ ಪರಿಮಳದಂತೆ ನಾನು ನೀನುಭಯವಿಲ್ಲದಂತೆ ಕೂಡೆನ್ನ ಪ್ರಾಣೇಶನೇ. ಕೂಡಿದಿರ್ದೊಡೆ ಗಲ್ಲವ ಪಿಡಿ. ಪಿಡಿಯದಿರ್ದೊಡೆ ಬೊಟ್ಟಾಡು. ಬೊಟ್ಟಾಡದಿರ್ದೊಡೆ ಆಲಂಗಿಸು. ಆಲಂಗಿಸದಿರ್ದೊಡೆ ಕೈವಿಡಿ. ಕೈವಿಡಿಯದಿರ್ದೊಡೆ ಮಾತಾಡು. ಮಾತಾಡದಿರ್ದೊಡೆ ನೋಡು. ನೋಡದಿರ್ದೊಡೆ ಬಾ. ಬಾರದಿರ್ದೊಡೆ ಪ್ರಮಥಗಣಂಗಳೊಡನೆನ್ನವಳೆಂದು ನುಡಿ. ನುಡಿಯದಿರ್ದೊಡೆ ನಿನ್ನ ಮನದಲ್ಲಿ ನನ್ನವಳೆಂದು ಭಾವಿಸು. ಭಾವಿಸದಿರ್ದೊಡೆ ಪುಣ್ಯ ಕಣ್ದೆರೆಯದು. ಕರ್ಮ ಕಾಂತಿಯಪ್ಪುದು. ಕಾಮ ಕೈದುಗೊಂಬ, ಕಾಲ ಕಲಿಯಪ್ಪ. ಭವಕ್ಕೆ ಬಲ್ಮೆ ದೊರೆವುದು. ಇಂತೀ ಐವರು ಎನಗೆ ಅವಾಂತರದೊಳಗಾದ ಹಗೆಗಳಯ್ಯ, ಇವರೆನ್ನ ತಿಂದುತೇಗಿ ಹಿಂಡಿ ಹಿಪ್ಪೆಯಮಾಡಿ ನುಂಗಿ ಉಗುಳ್ದು ಹಿಂದಣ ಬಟ್ಟೆಗೆ ನೂಂಕುತಿಪ್ಪರಯ್ಯ. ಹೊಗಲಂಜುವೆನಯ್ಯ. ಹೋದರೆ ಚಂದ್ರಸೂರ್ಯಾದಿಗಳುಳ್ಳನಕ್ಕ ನಿನ್ನ ನೆನವ ಮನಕ್ಕೆ ನಿನ್ನ ಕೊಂಡಾಡುವ ಬಾಯ್ಗೆ ನಿನ್ನ ನೋಡುವ ಕಂಗಳಿಗೆ ಸೆರೆ ಸಂಕಲೆಯಪ್ಪುದಯ್ಯ. ಇಂತಿವಂ ತಿಳಿದು ನಿನ್ನ ಮನದೊಳು ನನ್ನವಳೆಂದರೆ ದಿವಾರಾತ್ರೆಯುಳ್ಳನ್ನಬರ ಎನ್ನ ಮನ ಜಿಹ್ವೆ ನೇತ್ರಂಗಳಿಗೆ ಬಂಧನಗಳೆಂಬಿವು ಮುಂಗೆಡುವುವಯ್ಯ. ನಿನ್ನನು ನೆನೆನೆನೆದು ನನ್ನ ಮನ ಬೀಗಿ ಬೆಳೆದು ತಳಿರಾಗಿ ಹೂ ಮಿಡಿಗೊಂಬುದಯ್ಯ. ನಿನ್ನ ಹಾಡಿ ಹಾಡಿ ನನ್ನ ಜಿಹ್ವೆ ಅಮೃತಸಾಗರದೊಳೋಲಾಡುತ್ತಿಪ್ಪುದಯ್ಯ. ನಿನ್ನಂ ನೋಡಿ ನೋಡಿ ಕಂಗಳು ನಿಜಮೋಕ್ಷಮಂ ಪಡೆವುವಯ್ಯ. ನಾನು ಈರೇಳು ಲೋಕಕ್ಕೆ ಬರುವ ಹಾದಿ ಹಾಳಾಗಿಪ್ಪುದಯ್ಯ. ಶತ್ರುಗಳೆನಗೆ ಮಿತ್ರರಪ್ಪರಯ್ಯ. ಭವದ ಬಳ್ಳಿ ಅಳಿವುದು. ಕಾಲಿನ ಕಲಿತನ ಕೆಡುವುದು. ಕಾಮನ ಕೈದು ಖಂಡಿಸುವುದು. ಕರ್ಮದ ಕಾಂತಿ ಕರಗುವುದು. ಪುಣ್ಯದ ಕಣ್ಣು ಬಣ್ಣಗೆಡುವುದಯ್ಯ. ನಿನಗೊಲಿದವರ ನಿನ್ನಂತೆ ಮಾಡು ಕೃಪಾಕರನೆ. ನಿನಗೆ ಮೆಚ್ಚಿದೆನಯ್ಯ. ನಿನ್ನ ಮೆಚ್ಚಿಸಿಕೊಳ್ಳಲರಿಯದ ಮುಗ್ಧವೆಣ್ಣಿನ ಪತಿಭಕ್ತಿಯಂ ಸಾಧಿಸು. ಎನ್ನವಸ್ಥೆಯಂ ಲಾಲಿಸು, ನಿನ್ನ ಶ್ರೀಪಾದಪದ್ಮದೊಳಗೆನ್ನನೊಡಗೂಡಿಸು. ಎನ್ನ ಬಿನ್ನಪಮಂ ಲಾಲಿಸು, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ./9 |
ಆರುಬಣ್ಣದ ಹದಿನೈದು ದೇಹದ ಕೋಡಗ, ಒಂದು ರತ್ನವ ಮೆಟ್ಟಿಕೊಂಡು, ಒಂದು ರತ್ನವ ಹಿಡಿದುಕೊಂಡು, ಮತ್ತೊಂದು ರತ್ನವ ಮರೆಮಾಡಿಕೊಂಡು, ಮೇರುಪರ್ವತವ ಶಿಖರವನೇರಿತು ನೋಡ. ಅದು ತಾನಿರ್ದ ಪಂಚವರ್ಣದ ಪಟ್ಟಣವ ಹಾಳುಮಾಡಿ, ಆ ಪಟ್ಟಣದ ಪ್ರಜೆಪರಿವಾರಂಗಳ ಕೈಕಾಲುಗಳಂ ಕೊಯ್ದು, ಮಂತ್ರಿ ನಾಲ್ವರ ಕಡಿಖಂಡವಂ ಮಾಡಿ, ಪ್ರಾಣಸ್ನೇಹಿತರಪ್ಪ ಸಂಗಾತಿಗಳೈವರ ಕಣ್ಣ ಕಳೆದು, ಒಡಹುಟ್ಟಿದಿಬ್ಬರ ತಲೆಯೊಡೆಯನಿಕ್ಕಿ, ತನ್ನಿಂದ ತಾನೇ ಸತ್ತೀತು. ಭಕ್ತಿಯೆಂಬ ಬಿಲ್ಲ ಹಿಡಿದು, ನಿರಹಂಕಾರವೆಂಬ ತಿರುವನೇರಿಸಿ, ಉರಿಯ ಬಣ್ಣದಲೆಚ್ಚು ಮರ್ಕಟನ ಕೊಂದು, ಆ ರತ್ನಂಗಳಂ ಕೊಂಡು, ಸೂರೆಯ ಬಿಟ್ಟಾತನೀಗ ಲಿಂಗಕ್ಕೆ ಸಲೆ ಸಂದ ಶರಣನಯ್ಯಾ, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ./10 |
ಗ್ರಂಥಋಣ: ೧೫ ಸಮಗ್ರ ವಚನ ಸಂಪುಟಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು. 2001
![]() | ಗಣದಾಸಿ ವೀರಣ್ಣ | ಗುರು ಸಿದ್ಧ ದೇವರ | ![]() |