Previous ವೈದ್ಯ ಸಂಗಣ್ಣ ಅನಾಮಿಕ ನಾಚಯ್ಯ Next

ಅಗ್ಘವಣಿ ಹೊನ್ನಯ್ಯ

*
294
ಆದಂತೆ ಆಗಲಿ, ಮಾದಂತೆ ಮಾಣಲಿ ಎನಲಾಗದು,
ನೇಮದಾತಂಗೆ ಛಲ ಬೇಕು, ಛಲ ಬೇಕು.
ಹಿಡಿದುದ ಬಿಡಲಾಗದಯ್ಯಾ.
ಹುಲಿಗೆರೆಯ ವರದ ಸೋಮನಾಥನು
ಮನಮುಟ್ಟಿದ ಧೀರಂಗಲ್ಲದೆ ಸೋಲುವನಲ್ಲ.
295
ಚರ ಚರ ವಿರಕ್ತರಾಗಿ,
ಹಿಂದೆ ಶ್ರೀಗುರುದೇವನ ಬಿಟ್ಟು, ಮುಂದೆ ಲಿಂಗವ ಹೋಗಲಾಡಿ,
ಲಿಂಗದೊಳಗೆ ಲೀಯವಹ ಭೇದವನರಿಯದೆ,
ಮರಳಿ ಗುರುವಿದ್ದೆಡೆಗೆ ಹೋಗಿ ಲಿಂಗವ ಸಾಹಿತ್ಯವ ಮಾಡಿಸಿಕೊಂಬ
ಉಭಯಃಭ್ರಷ್ಟರ ಹುಲಿಗೆರೆಯ ವರದ ಸೋಮೇಶನೊಪ್ಪನು.
296
ವಿಶ್ವವೆಲ್ಲ ಪಶುವು, ಶಿವನೊಬ್ಬನೆ ಪತಿ, ಬೇರೊಬ್ಬ ಪತಿಯಿಲ್ಲ.
ಇದು ಸತ್ಯವಿದು ಸತ್ಯ.
ನಮ್ಮ ಹುಲಿಗೆರೆಯ ವರದ ಸೋಮನಾಥನಲ್ಲದೆ
ಬೇರೊಬ್ಬರುಂಟಾದರೆ ತೋರಿಕೊಡಿ ಭೋ, ನೀವು ಬಲ್ಲಿರೆ.
297
ಹೊರಗೆಂಟು ತನು, ಒಳಗೆ ನಿರಂಜನ ಜ್ಯೋತಿ,
ತೆರಹಿಲ್ಲದಿಪ್ಪವನನಾ[ರೂ] ಬಲ್ಲವರಿಲ್ಲ ಕೇಳಿರೇ.
ಶಿವನಲ್ಲದೆ ಬೇರೆ ದೈವವಿಲ್ಲ.
ಹುಲಿಗೆರೆಯ ವರದ ಸೋಮನಾಥನು
ಏಕೋರುದ್ರನದ್ವಿತೀಯನೆಂದುದು ಶ್ರುತಿ.

ಗ್ರಂಥಋಣ: ಸಮಗ್ರ ವಚನ ಸಂಪುಟಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು

*
ಪರಿವಿಡಿ (index)
Previous ವೈದ್ಯ ಸಂಗಣ್ಣ ಅನಾಮಿಕ ನಾಚಯ್ಯ Next