*
ಅಗ್ಘವಣಿ ಹಂಪಯ್ಯ ವಚನಗಳು
290
ಭಕ್ತ್ಯಾನಂದವನದಲ್ಲಿ ಜ್ಞಾನಾಂಕುರವ ಮೆಲಿದು
ಆನಂದವೆಂಬ ಜಲವನೀಂಟಿ
ಸಮತೆಯೆಂಬ ನೆಳಲಲ್ಲಿರ್ಪುದ ನೆನೆಯಾ ಮನವೆ!
ಮಹಾಮಂತ್ರ ಶಿವಧ್ಯಾನವನೆ ಸವಿದು,
ಮೆಲುಕುತ್ತಿರ್ಪುದು.
ಧರ್ಮಾರ್ಥಕಾಮಮೋಕ್ಷವೆಂಬ ಮೊಲೆ ತೊರೆಯಲು
ಹಂಪೆಯ ವಿರುಪನ ಕರೆವ ಕಾಮಧೇನು
ಪಂಚಾಕ್ಷರಿಯೆಂಬುದು.
291
ವಿಪುಳ ವೇದವೇದಾಂತಸಾರ, ಸಕಲಲೋಕಜನಹಿತಾಧಾರ,
ಸಪ್ತಕೋಟಿ ಮಹಾಮಂತ್ರಂಗಳ ತವರುಮನೆ, ಭಕ್ತಜನಜೀವಾನಂದ,
ಅಖಿಳಾಗಮ ಸಂತಾನದ ಹರಣ, ಮುಕ್ತಿಗೆ ಕಾರಣ ಸೋಪಾನ,
ಪ್ರಣವಾಂಕುರ ಪಲ್ಲವ ಫಲರೂಪು, ತ್ರಿಣಯನೊಲಿಸುವ ಕರ್ಣಾಭರಣ,
ಹರನ ನಾಮದ ಸಾಕಾರದ ನಿಲವು, ಪರಮಪಂಚಬ್ರಹ್ಮಾನಂದ,
ಪರತತ್ತ್ವದ ನಿತ್ಯದ ನೆಲೆ,
ಹಂಪೆಯ ವಿರುಪನ ತೋರುವ ಗುರು ಪಂಚಾಕ್ಷರಿ.
292
ಹಂಸಪತಿ ಗರುಡಪತಿ ವೃಷಭಪತಿ
ಮೊದಲಾದ ಸರ್ವಜೀವಾಧಿಪತಿ
ದೇವರಾಯ ಮಹಾರಾಯನ ಅರಸುತನ ಹೊಸತು: ಓಲಗಕ್ಕೆ ಬಾರ, ಸಿಂಹಾಸನದಲ್ಲಿ ಕುಳ್ಳಿರ,
ಸ್ತ್ರೀಲಂಪಟನಾಗಿ ಅಂತಃಪುರವ ಬಿಟ್ಟು ಹೊರವಂಡ.
ಕಪ್ಪಕಾಣಿಕೆಯನೊಪ್ಪಿಸಿಕೊಂಬವರಿಲ್ಲ,
ಗುರುವೆಂಬ ತಳವಾರನ ಆಜ್ಞೆ ಕೆಟ್ಟಿತ್ತು,
ತೆರೆದ ಬಾಗಿಲ ಮುಚ್ಚುವರಿಲ್ಲ,
ಮುಚ್ಚಿದ ಬಾಗಿಲ ತೆರೆವವರಿಲ್ಲ.
ಹಂಪೆಯ ವಿರುಪಯ್ಯನ ಅರಸುತನ ಕೆಟ್ಟಿತ್ತು,
ಭಕ್ತರೆಂಬವರಿನ್ನು ಬದುಕಲೇ ಬಾರದು.
293
ಹುಸಿಯ ನುಡಿಯನು ಭಕ್ತ, ವ್ಯಸನಕ್ಕೆಳಸನು ಭಕ್ತ,
ವಿಷಯಂಗಳಾತಂಗೆ ತೃಣವು ನೋಡಾ, ಬಯಸುವವನಲ್ಲ ಭಕ್ತ.
ದಯೆಯೆಂಬುದು ತನ್ನ ಕೈಯಲ್ಲಿ, ಸ್ಮರಣೆಯೆಂಬುದು ತನಗೆ ತೊತ್ತಾಗಿಪ್ಪುದು.
ಕೋಪವೆಂಥದೆಂದರಿಯ, ತಾಪತ್ರಯಂಗಳು ಮುಟ್ಟಲಮ್ಮವು, ವ್ಯಾಪ್ತಿಗಳಡಗಿದವು.
ಲಿಂಗವನೊಳಕೊಂಡ ಪರಿಣಾಮಿ.
ಆತನ ಪಥ ಲೋಕಕ್ಕೆ ಹೊಸತು, ಲೋಕದ ಪಥವಾತನಿಗೆ ಹೊಸತು.
ತನಗೊಮ್ಮೆಯು ಲಿಂಗಧ್ಯಾನ, ಲಿಂಗಕೊಮ್ಮೆಯು ತನ್ನ ಧ್ಯಾನ.
ಘನಘನಮಹಿಮೆಯ ಹೊಗಳಲೆನ್ನಳವಲ್ಲ.
ಪನ್ನಗಧರ ಕೇಳಯ್ಯಾ, ಚೆನ್ನ ಹಂಪೆಯ ವಿರುಪಯ್ಯಾ,
ನಿಮ್ಮ ನಂಬಿದ ಸತ್ಯಶರಣ ಪರಿಣಾಮಿ.
ಗ್ರಂಥಋಣ: ಸಮಗ್ರ ವಚನ ಸಂಪುಟಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು
*