ಗೊಗ್ಗವ್ವೆ ವಚನಗಳು

774
ಅನಲಕೊಂಡ ಭೋಗಕ್ಕೆ ಪರಿಪ್ರಕಾರವುಂಟೆ ?
ಶರದಿಕೊಂಡ ಸಾಗರಕ್ಕೆ ಕುರುಹಿನ ತಲೆಯೆ ?
ಲಿಂಗಮುಟ್ಟಿದ ಅಂಗಕ್ಕೆ ಮತ್ತೆ ಪುಣ್ಯವುಂಟೆ ?
ಹುಸಿ, ನಾಸ್ತಿನಾಥ.

775
ಉದ್ದವನೇರುವುದಕ್ಕೆ ಗದ್ದುಗೆಯಿಲ್ಲದೆ ಎಯ್ದಬಾರದು.
ಚಿದ್ರೂಪನನರಿವುದಕ್ಕೆ ಅರ್ಚನೆ ಪೂಜನೆ
ನಿತ್ಯನೇಮವಿಲ್ಲದೆ ಕಾಣಬಾರದು.
ಅದ ಸತ್ಯದಿಂದ ಮಾಡಿ ಅಸತ್ಯವ ಮರೆದಡೆ
ಇದೇ ಸತ್ಯ ನಾಸ್ತಿನಾಥ.ಚಿದ್ರೂಪನನರಿವುದಕ್ಕೆ ಅರ್ಚನೆ ಪೂಜನೆ
ನಿತ್ಯನೇಮವಿಲ್ಲದೆ ಕಾಣಬಾರದು.
ಅದ ಸತ್ಯದಿಂದ ಮಾಡಿ ಅಸತ್ಯವ ಮರೆದಡೆ
ಇದೇ ಸತ್ಯ ನಾಸ್ತಿನಾಥ.
776
ಗಂಡು ಮೋಹಿಸಿ ಹೆಣ್ಣ ಹಿಡಿದಡೆ
ಅದು ಒಬ್ಬರ ಒಡವೆ ಎಂದು ಅರಿಯಬೇಕು.
ಹೆಣ್ಣು ಮೋಹಿಸಿ ಗಂಡ ಹಿಡಿದಡೆ
ಉತ್ತರವಾವುದೆಂದರಿಯಬೇಕು.
ಈ ಎರಡರ ಉಭಯವ ಕಳೆದು ಸುಖಿ ತಾನಾಗಬಲ್ಲಡೆ
ನಾಸ್ತಿನಾಥನು ಪರಿಪೂರ್ಣನೆಂಬೆ.
777
ಭಕ್ತರು ಜಂಗಮದಲ್ಲಿ ಕಟ್ಟಿ ಹೋರಲೇಕೆ ?
ಧೂಪದ ಹೊಗೆ ಎತ್ತ ಹೋದಡೂ ಸರಿ.
ಇದು ಸತ್ಯವೆಂದೆ ನಾಸ್ತಿನಾಥಾ.
778
ಮಾರುತನಲ್ಲಿ ಬೆರೆದ ಗಂಧದಂತೆ,
ಸುರತದಲ್ಲಿ ಬೆರೆದ ಸುಖದಂತೆ,
ಮಚ್ಚಿದಲ್ಲಿ ಕೊಡುವ ಉಚಿತದಂತೆ,
ಭಕ್ತರಿಗದೆ ಹಾದಿ ಎಂದೆ ನಾಸ್ತಿನಾಥ.
779
ಮೊಲೆ ಮುಡಿ ಬಂದಡೆ ಹೆಣ್ಣೆಂಬರು.
ಮೀಸೆಕಾಸೆ ಬಂದಡೆ ಗಂಡೆಂಬರು
ಈ ಉಭಯದ ಜ್ಞಾನ
ಹೆಣ್ಣೊ ಗಂಡೊ ನಾಸ್ತಿನಾಥಾ?

ಗ್ರಂಥಋಣ: ಸಮಗ್ರ ವಚನ ಸಂಪುಟಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು

*
Previousಗುರುಪುರದ ಮಲ್ಲಯ್ಯಡೋಹರ ಕಕ್ಕಯ್ಯNext
Guru Basava Vachana

Akkamahadevi Vachana

[1] From the book "Vachana", pub: Basava Samiti Bangalore 2012.