![]() | ವೀರ ಗೊಲ್ಲಾಳ-ಕಾಟಕೋಟ | ಮಲ್ಲಿಕಾರ್ಜುನ ಪಂಡಿತಾರಾಧ್ಯ | ![]() |
ನಿಜಗುಣಯೋಗಿ ವಚನಗಳು |
ಆಯ್ಕೆ ಮಾಡಿದ ವಚನ |
---|
ಅಗ ಲಿಂಗವೆಂಬನ್ನಕ್ಕ ಯೋಗಪೂಜೆ ಪುಂಣ್ಯಕ್ಕೆ ಬೀಜ. ಆತ್ಮನನರಿದೆಹೆನೆಂಬನ್ನಕ್ಕ ಉಭಯದೊಡಲಾಯಿತ್ತು. ಉಭಯದ ಗಿಡಬಜೆಯಲ್ಲಿ ಸಿಲುಕದೆ ನಿಂದ ನಿಜಗುಣಯೋಗಿ. || /1 |
ಅರಿಬಿರಿದಿನಾಲಯದೊಳಗೆ ದೊರೆ (ಯದೆ) ತಿರಿತಿರಿಗಿ ಬರುವ ದುರದಿಕ್ಕಿಗಳನೊಲ್ಲ. ಕರುಕರತ ತಾಳತೋರಿ ಎನ್ನನಿಂಬುಗೊಂಡೆಯಲ್ಲಾ ನಿಜಗುಣಯೋಗಿ./2 |
ಆನು ನೀನೆಂಬ ಸಂದೇಹ ಗಗನಕ್ಕೆ ಕೈಯನಿಟ್ಟಂತೆ! ಕೈ ಗಗನವ ನುಂಗಿತ್ತೊ, ಗಗನ ಕೈಯ ನುಂಗಿತ್ತೊ ಎಂಬುದ ನಿನ್ನ ನೀ ತಿಳಿದು ತಿಳಿವಿನ ಕಣ್ಣಿಂದ ನೋಡಯ್ಯಾ. ನಿಜಗುಣವೆಂಬ ಆನಂದರತ್ನವ ನುಂಗಿದ ರುಚಿಯನು ಏನೆಂದು ಉಪಮಿಸುವೆ?/3 |
ಆನುಳ್ಳನ್ನಕ್ಕ ನೀನುಂಟೆಲೆ ಮಾಯೆ ಆನಿಲ್ಲದಿರ್ದಡೆ ನೀನಿಲ್ಲ. ಆನು ನೀನೆಂಬುಭಯವಳಿಯಲು ಆನಂದ ನಿಜಗುಣಯೋಗ./4 |
ಆರರ ಅಂತ್ಯವು ಮೂರರ ಅಂತ್ಯವು ಒಂದೆ, ಭಾವ ಅವು ಆವಾವವಯ್ಯ ಎಂದಡೆ; ಕಕ್ಷೆ, ಕಂಠ, ಕರಸ್ಥಲ, ಉರಸಜ್ಜೆ, ಉತ್ತಮಾಂಗ, ಅಮಳೋಕ್ಯ ಇಂತೀ ಆರು ಸ್ಥನ ಬಾಹ್ಯವೆಂಬೆ. ನಾಸಿಕಾಗ್ರ, ಭೂಮಧ್ಯ, ಬ್ರಹ್ಮರಂಧ್ರ ಇಂತೀ ಮೂರರ ತೂಯ ಚೌಕಮಧ್ಯವೆನಿಸುವದು. ಅದರ ಕ್ರಮವೆಂತೆಂದಡೆ: ಇಂತೀ ಮೂರು ಸ್ಥಾನದ ಮೇಲಣ ಸಹಸ್ರದಳಕಮಲದೊಳಗೆ ತೋರುವ ನಾಲ್ಕು ಕೋಣೆಯ ಚೌಕಮಧ್ಯ ಅದರೊಳಗಿಪ್ಪ ಅಮೃತಮಯಲಿಂಗವ ಕಂಡು ನೋಡುತ್ತ ನೋಡುತ್ತ ನಿಬ್ಬೆರಗಾದ ನಿಜಗುಣಾ./5 |
ಕಕ್ಷೆ ಮೊದಲಾಗಿ ಅಮಳೋಕ್ಯ ಕಡೆಯಾಗಿ ಆರು ಸ್ಥಾನ ಬಾಹ್ಯವೆಂಬೆ. ನಾಸಿಕಾಗ್ರ ಭ್ರೂಮಧ್ಯ ಬ್ರಹ್ಮರಂಧ್ರ ಚೌಕಮಧ್ಯವೆಂದು ಈ ನಾಲ್ಕು ಸ್ಥಾನಗಳು ಅಭ್ಯಂತವಾಗಿಹವು. ನಾಸಿಕಾಗ್ರದ ಗುರು ಭ್ರೂಮಧ್ಯವನೆಯ್ದಿದಡೆ ಭ್ರೂಮಧ್ಯಕ್ಕೆ ಲಿಂಗವಾಯಿತ್ತು. ಭ್ರೂಮಧ್ಯದ ಲಿಂಗವನರಿತಡೆ ಬ್ರಹ್ಮರಂಧ್ರಕ್ಕೆ ಜಂಗಮವಾಯಿತ್ತು. ಇಂತೀ ತ್ರಿವಿಧದರಿವೆ ಗದ್ಗುಗೆ. ಅದಕ್ಕೆ ಶ್ರುತಿ: ``ಗುರುಲಿಂಗ ಜಂಗಮಾಖ್ಯಾತ್ಯಂ ಮಹಾಲಿಂಗ ಚತುವರ್ಿಧಂ ಯಥಾ ಚತುವರ್ಿಧಂ ಪೀಠಂ ಚಿತ್ಕಲಾ ಪರಿಪೂಜಿತಂ||' ಇಂತೆಂಬ ಚೌಕಮಧ್ಯದಲ್ಲಿ ಮಹಾಘನವ ನೋಡುತ್ತ ನಿಬ್ಬೆರಗಾದ ನಿಜಗುಣಾ./6 |
ಕಲ್ಲಿನ ಹುಳ್ಳಿಯ ನೀರಲ್ಲಿ ಹುಟ್ಟಿದ ಕಿಚ್ಚು ತ್ರಿವಿಧಕ್ಕೂ ಅಲ್ಲಲ್ಲಿಯ ಗುಣವಲ್ಲಿಯದೆ, ಬೇರೊಂದಕ್ಕೆಲ್ಲಿಯೂ ತೆರಪಿಲ್ಲ. ಕಾಯಗುಣದಿಂದ ಕಲ್ಪಿತಕ್ಕೊಳಗಾಗಿ ಜೀವಗುಣದಿಂದ ಭವಕ್ಕೆ ಬೀಜವಾಗಿ ಅರಿದಿಹೆ ಗುಣದಿಂದ ಮರವೆಗೆ ಒಳಾಗಾಗಿ. ಅರಿದಿಹೆನೆಂಬ ಅರಿವು ಕುರುಹುಗೊಳ್ಳದೆ ನಿಂದುದು ನಿಜಗುಣ ಯೋಗಿಯ ಯೋಗಕ್ಕೆ ಭಾವವಿಲ್ಲದ ಸೂತ್ರದ ಬಿಂಬ./7 |
ಜಡ ಅಜಡವೆಂಬುಭಯ ಕೂಟ ಉಳ್ಳನ್ನಕ್ಕ ನಾನೆಂಬುದದೇನು? ವಿಚಾರಕ್ಕೆ ನೀನೆಂಬುದದೇನು? ಗೆಲ್ಲ ಸೋಲಕ್ಕೆ ಹೋರಿ ಒಳ್ಳಿದನಾದನೆಂಬಲ್ಲಿಯೆ ಕಳ್ಳ ಕದ್ದ ಗಜವಲ್ಲಿ ಅಡಗಿ ಮಾರೂದು ಹೇಳಾ. ಬಲ್ಲವನಾದೆನೆಂಬಲ್ಲಿಯೆ ಉಳಿಯಿತ್ತು ನಿಜಗುಣಯೋಗಿಯ ಯೋಗಕ್ಕೆ ಸಲ್ಲದ ಗುಣ./8 |
ದೊರೆಯವನ... ವನ್ನ ಬರವ, ದೊರೆಯವೆ ಇರಲಿಕೆ ಕಾಯ ಬವರಕ್ಕೆ ಗುರಿಯಹುದು. ಕುರುಹಿಗೆ ಬಾರದೆ ಆಲಿನಿಂದ ಠಾವಿನಲ್ಲಿ ನಿಜಗುಣನಿಹನು./9 |
ನಿಜ ಹೃದಯಾಂಬುಜದಲ್ಲಿ ನಿರಾಳ ಪ್ರಣಮ ಪೀಠವಾಗಿರ್ಪನೊರ್ವ ಆಗೋಚರ ಶಿವಯೋಗಿಯು. ಆತನೆರಡು ಗುಂಡು ಹೊಸೆದಡೆ ಗೋಚರನಪ್ಪ ಕಾಣಾ, ನಿಜಗುಣಲಿಂಗ ಸಾಕ್ಷಿಯಾಗಿ, ಸಿದ್ಧರಾಮಯ್ಯ./10 |
ಗ್ರಂಥಋಣ: ೧೫ ಸಮಗ್ರ ವಚನ ಸಂಪುಟಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು. 2001
![]() | ವೀರ ಗೊಲ್ಲಾಳ-ಕಾಟಕೋಟ | ಮಲ್ಲಿಕಾರ್ಜುನ ಪಂಡಿತಾರಾಧ್ಯ | ![]() |