Back to Top
Previous ನಿವೃತ್ತಿ ಸಂಗಯ್ಯ ಕದಿರರೆಮ್ಮವ್ವೆ Next

ಬಳ್ಳೇಶ ಮಲ್ಲಯ್ಯ

*

ಬಳ್ಳೇಶ ಮಲ್ಲಯ್ಯ ವಚನಗಳು

192
ಅಪಾರ ಮಹಿಮನೆಂಬುದು ನಿಮ್ಮ ಭೇರಿ.
ಬೇಡಿತ್ತನೀವನೆಂಬುದು ನಿಮ್ಮ ತಮ್ಮಟ.
ಜಗವಂದಿತ ಲೋಕದೊಡೆಯನೆಂಬುದು ನಿಮ್ಮ ಶಂಖ.
ಪರದೈವವಿಲ್ಲವೆಂಬುದು ನಿಮ್ಮ ಡಮರುಗ.
ಶಿವ ಕಾಡನೆಂಬವರ ಬಾಯ ತ್ರಿಶೂಲದಲ್ಲಿರಿವ
ಬಳ್ಳೇಶ್ವರಲಿಂಗದ ಡಂಗುರ ಮೂಜಗದೊಳಗಯ್ಯಾ.

193
ಆರು ಬಣ್ಣದ ಹಕ್ಕಿ, ತೋರಿದ ಗುರಿಯ ನುಂಗಿ
ಮೀರಿ ನಿಂದುದು ಗಗನ ಮಂಡಲದಲ್ಲಿ.
ಸಾರುತೈದೂದೆ ಹೋಗಿ ಮೀರಿ ಬರಬೇಡಾ ಎಂದು
ಬೇರೆ ಮತ್ತೊಂದು ದಿಕ್ಕ ತೋರುತ್ತದೆ.
ಮೂರುಕೋಣೆಯೊಳಗೆ ಈರೈದು ತಲೆಯುಂಟು.
ನೋಡಿ ಬಂದಾ ಶಿಶು ಬೆಸಗೊಂಬುದು.
ಪ್ರಾಣವಿಲ್ಲದ ಸೇನೆ ಪದ್ಮಸಂಖ್ಯೆಯು ಕೋಟೆದಾಳಿವರಿದುದು
ಎಂಟುಜಾವದೊಳಗೆ.
ಜಾಲಗಾರನ ಕೈಯ ಮಾಣಿಕ್ಯ ಸಿಕ್ಕದೆ ಆಳಿಗೊಂಡಿತ್ತು.
ಜಗವ ಬೆಳುಮಾಡಿ, ಜಾಣ ಕವಿಗಳಿಗೆ ಎದೆ ದಲ್ಲಣ.
ಬಳ್ಳೇಶ್ವರನ ಕನ್ನಡವು ಹೇಳುವಡೆ ಯುಗಸಂಖ್ಯೆ ಶಿವ ಶಿವಾ

194
ಆವ ಪ್ರಾಣಿಗೆಯೂ ನೋವ ಮಾಡಬೇಡ.
ಪರನಾರಿಯರ ಸಂಗ ಬೇಡ.
ಪರಧನಕ್ಕಳುಪಬೇಡ, ಪರದೈವಕ್ಕೆರಗಬೇಡ.
ಈ ಚತುರ್ವಿಧ ತವಕವ ಮಾಡುವಾಗ
ಪರರು ಕಂಡಾರು, ಕಾಣರು ಎಂದೆನಬೇಡ.
ಬಳ್ಳೇಶ್ವರಲಿಂಗಕ್ಕಾರು ಮರೆಮಾಡಬಾರದಾಗಿ
ಅಘೋರನರಕದಲ್ಲಿಕ್ಕುವ.

195
ದೇವರಾಜ್ಯದಲ್ಲಿ, ಧಾರೆಯ ಭೋಜನ
ಅರಮನೆಯ ಓಲಗದೊಳಗೆ ಹೊಂಪುಳಿವರಿವುತ್ತ
ನಾಲ್ಕೂದಿಕ್ಕಿನಲ್ಲಿ ನಾಲ್ವರ ಫಣಿಯ ಬೆಳಗು.
ಜಾಣಭಾಷೆಯಲ್ಲಿ ಮಧ್ಯದಲೊಬ್ಬಳು, ಆಣತಿಯ ಸರವು.
ಮಹಾದೇವಿ ಗಾಂಧಾರಿಯನು ತೋರಿ, ಒದವಿಸಿದ ಮಧುಮಾಧವಿಯನು
ಭೋಜ ಗದ್ಯವನೋದಲು, ಶಿವನು ಕೇಳುತ್ತಿರೆ
ಬಾಣಸಿಗ ಹಡಪದವನೆ ಬಲ್ಲನು ಕಾಣಾ.
ಕೊಂಕಿಲ್ಲದೆ ಶಬುದ ರಸಭೇದವನು ರಾಣಿ ಬಲ್ಲಳು.
ಕುಮುದ ಪಾತ್ರವಿಧಾಂತ ಮಾವಟಿಗ ಭೇದವನು
ಮೇಲೆ ಅಂಗರಿಕನು ದೀವಟಿಗೆ ಧಾರೆವಟ್ಟದ ಜಾಣನು
ಅಲ್ಲಿ ಚಂಬಕನ ಕಹಳೆ ಭೋರೆಂದು ಬಾರಿಸಿ
ಪ್ರತಾಪದ ಕದಳಿಗೆ ಎದೆ ದಲ್ಲಣ.
ಆರುಬಣ್ಣದ ವಸ್ತುವ ಮೂರು ಬಣ್ಣಕ್ಕೆ ತಂದು, ಕೇವಣಿಸಿದನು
ಕಮಠ ಸುರಥ ಕವಾಹಾರದಾರದ ಖೂಳರ ನಾಲ್ವರ
ಬಯಕೆಯನು, ದೇವ ಬಳ್ಳೇಶ್ವರನ ಕನ್ನಡ ವಿಪರೀತ.

196
ಧರೆಯೊಳಗೆ ಚೋದ್ಯವ ನೋಡಿರೆ : ಒಂದು ಹರಿಣಿಯ ಮೃಗವು ಓದು ಬಲ್ಲುದಾ ?
ಚೆಲುವ ಗಿಳಿಯಲ್ಲಿ ವಿಪರೀತ ಕೊಂಬು ಕೊಂಬುಗಳುಂಟು.
ಇಂಬು ಕಾಲಲ್ಲಿ ಮುಖವು.
ಜಂಬುದ್ವೀಪದ ಬೆಳಗಿನುದಯದಾಹಾರವದಕೆ.
ಸಂಭ್ರಮವ ನುಡಿವ ಕವಿಗಳ ಮುಖವ ಝಳಪಿಸಿತ್ತು
ಶಂಭು ಬಳ್ಳೇಶ್ವರನ ಕೊರಳಹಾರವ ನೋಡಿ ನಗುತ.

197
ಮೇಘಮಂಡಲದರಸನು ಅನುರಸದರಸಿಯ ಮೈಯಲ್ಲಿ ತಾಗಿ
ಒದಗಿದನುಮಿಷ ರತ್ನಪ್ರಭೆಯ ನೋಡುವಡೆ
ಇಪ್ಪತ್ತೈದು ನೂರೆಂಟರ ಮಧ್ಯ [ತುಗಿ]ವ ಸಮಾಧಿ[ಕೆ]
ತಾರಾಮತ್ಸ್ಯದ ಆನೆಯ ಕುಂಬಸ್ಥಳದ [ಜ]ವನಿಕೆಯ ಮೇಲೆ
ಜಾಣ ನಿಟ್ಟಿಸಬಲ್ಲಡೆ ಹೇಳಾ.
ಕನ್ನದುಳಿಯ ಕೆಂಪನು ತನ್ನ ಕೈಯಲ್ಲಿ ಕೊಟ್ಟಡೆ
ಬಿನ್ನಣದ ಕಳವು ಹೇಳಾ.
ತನ್ನ ಮನೆಯಲ್ಲಿ ಕರ್ಣಚಕ್ರಪತ್ರವನಿರಿಸಿದಡೆ ನಿನ್ನಳವೆ ?
ಲೋಕದೊಳು ಬಲ್ಲ ಜಾಣರು.
ಆ [ಹ]ಣ್ಣಿನೊಳಗಣ ಪದ್ಮದೆಸಳೆಸಳು ಕಮ್ಮೇರಿ
ದೇವ ಬಳ್ಳೇಶ್ವರನ ಅನುಭಾವದ ಸರಿದೊಡಕು.

198
ಶಿವನೊಬ್ಬನೆ ಜಗವೆಲ್ಲಕ್ಕೊಡೆಯನೆಂದು
ಹೊಡೆವ ಭೇರಿ ನಿಸ್ಸಾಳವಯ್ಯಾ.
ಶಿವನಲ್ಲದೆ ಅತಃಪರವಿಲ್ಲೆಂದು ಒದರುವ
ವೇದ ಶಾಸ್ತ್ರ ಪುರಾಣಾಗಮಂಗಳಯ್ಯಾ.
ಶಿವನು ಅಲ್ಲವೆಂಬವನ ಬಾಯ ತ್ರಿಶೂಲದಲ್ಲಿರಿವುದು.
ಬಳ್ಳೇಶ್ವರನ ಡಂಗುರ ಜಗದೊಳಗಯ್ಯಾ.

199
ಶುದ್ಧಸಾಳಾಂಗಗತಿ ಗಮಕವಡೆದ ರಾಗದಲ್ಲಿ
ಪರಿಠಾಯಕದಳ ಕಮ್ಮಟನು ಪೂಜಿತನು
ರಸವನಾಲಿಸುತ ಗಜಗಮನೆಯರು ಆಡಿ ಹಾಡಿ
ರುದ್ರವೀಣೆಯ ಬಾರಿಸುವಲ್ಲಿ
ಬಧಿರ ಮೂಕ ಅಂಧಕರ ಮುಂದೆ ನೃತ್ಯ ತೋರಬಹುದೆ ?
ಹಜ್ಜೆಯ ಹರಿಣ ಭುಜಂಗ ಜಂಬುಕ ಹುಲ್ಲೆಯ
ತೋಳ ಹುಲಿ ಕರಡಿ ಒಬ್ಬುಳಿಯಾಗಿ ನೆರೆದಡೆ
ದೇವಸಭೆಯಾಗಬಲ್ಲುದೆ ?
ಶುದ್ಧಧವಳಿತ ಭಾನುಕೋಟಿತೇಜಪ್ರಭೆಮಂಡಲವ ರವಿ ಉದಯ ಒಬ್ಬನೆನಬಹುದೆ
ದೇವ ಬಳ್ಳೇಶ್ವರ ವೀರಭದ್ರವತಾರವಾ ?

200
ಸಹಸ್ರಮುಖದ ಕೊರಳೊಂದು
ನಾಶಿಕದಲುಂಬ ಸುಖ
ಘಾಸಿ ಮಾಡಿದಡದರ ರೂಪು ನೋಡಾ.
[ಘಾ]ಸಿಯಾದ ಭಾಷೆಯೇಕೆ ?
ವರ್ಣದ ಕೌತುಕದಿಂದ ಕಾಂತೆ ನೋಡಿದಳು ಕನ್ನ[ಡಿಯ] ಬೆ[ಳ]ಗ.
ಸೂಸಲೀಯದೆ ಉಣ್ಣಬಲ್ಲವನ ತೋರುತ್ತಿದೆ.
ಬಳ್ಳೇಶ್ವರನ ಕೊರಳ ಮತ್ಸ್ಯವ ನೋಡಿ ನಗುತ್ತಿದೆ.

ಗ್ರಂಥಋಣ: ಸಮಗ್ರ ವಚನ ಸಂಪುಟಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು

*
ಪರಿವಿಡಿ (index)
Previous ನಿವೃತ್ತಿ ಸಂಗಯ್ಯ ಕದಿರರೆಮ್ಮವ್ವೆ Next