Previous ಗೊಗ್ಗವ್ವೆ ತೆಲುಗೇಶ ಮಸಣಯ್ಯ Next

ಡೋಹರ ಕಕ್ಕಯ್ಯ ವಚನಗಳು

981
ಆಸೆಯಾಮಿಷವಳಿದು ಹುಸಿ ವಿಷಯಂಗಳೆಲ್ಲಾ ಹಿಂಗಿ,
ಸಂಶಯ ಸಂಬಂಧ ನಿಸ್ಸಂಬಂಧವಾಯಿತ್ತಯ್ಯಾ,
ಎನ್ನ ಮನದೊಳಗೆ ಘನಪರಿಣಾಮವ ಕಂಡು
ಮನ ಮಗ್ನವಾಯಿತ್ತಯ್ಯಾ,
ಅಭಿನವ ಮಲ್ಲಿಕಾರ್ಜುನಾ,
ಪ್ರಭುದೇವರ ಕರುಣದಿಂದಾನು ಬದುಕಿದೆನು.
982
ಎನಗೆ ಗುರುಸ್ಥಲವ ತೋರಿದಾತ ಸಂಗನ ಬಸವಣ್ಣನು.
ಎನಗೆ ಲಿಂಗಸ್ಥಲದ ತೋರಿದಾತ ಚನ್ನಬಸವಣ್ಣನು.
ಎನಗೆ ಜಂಗಮಸ್ಥಲವ ತೋರಿದಾತ ಸಿದ್ಧರಾಮಯ್ಯನು.
ಎನಗೆ ಪ್ರಸಾದಿಸ್ಥಲವ ತೋರಿದಾತ ಬಿಬ್ಬಬಾಚಯ್ಯನು.
ಎನಗೆ ಪ್ರಾಣಲಿಂಗಿಸ್ಥಲವ ತೋರಿದಾತ ಚಂದಯ್ಯನು.
ಎನಗೆ ಶರಣಸ್ಥಲವ ತೋರಿದಾತ ಸೊಡ್ಡಳ ಬಾಚರಸನು.
ಎನಗೆ ಐಕ್ಯಸ್ಥಲವ ತೋರಿದಾತ ಅಜಗಣ್ಣನು.
ಎನಗೆ ನಿಜಸ್ಥಲವ ತೋರಿದಾತ ಪ್ರಭುದೇವರು.
ಇಂತೀ ಸ್ಥಲಗಳ ಕಂಡು
ಏಳ್ನೂರೆಪ್ಪತ್ತು ಅಮರಗಣಂಗಳ ಶ್ರೀಪಾದಕ್ಕೆ ಶರಣೆಂದು
ಬದುಕಿದೆನು ಕಾಣಾ! ಅಭಿನವ ಮಲ್ಲಿಕಾರ್ಜುನಾ.
983
ಎನ್ನ ಕಷ್ಟಕುಲದ ಸೂತಕ
ನಿಮ್ಮ ಹಸ್ತ ಮುಟ್ಟಿದಲ್ಲಿ ಹೋಯಿತ್ತು!
ಶುಕ್ಲಶೋಣಿತದಿಂದಲಾದ ಸೂತಕ
ನಿಮ್ಮ ಮುಟ್ಟಲೊಡನೆ ಬಯಲಾಯಿತ್ತು!
ತಟ್ಟಿದ ಮುಟ್ಟಿದ ಸುಖಂಗಳನೆಲ್ಲವ
ಲಿಂಗಮುಖಕ್ಕೆ ಅರ್ಪಿಸಿದೆನಾಗಿ
ಎನ್ನ ಪಂಚೇಂದ್ರಿಯಂಗಳು ಬಯಲಾದುವು!
ಎನ್ನ ಅಂತರಂಗದಲ್ಲಿ ಜ್ಞಾನಜ್ಯೋತಿಯೆಡೆಗೊಂಡುದಾಗಿ
ಒಳಗೂ ಬಯಲಾಯಿತ್ತು!
ಸಂಸಾರ ಸಂಗದ ಅವಸ್ಥೆಯ ಮೀರಿದ ಕ್ರೀಯಲ್ಲಿ
ತರಹರವಾಯಿತ್ತಾಗಿ ಬಹಿರಂಗ ಬಯಲಾಯಿತ್ತು!
ಅಭಿನವ ಮಲ್ಲಿಕಾರ್ಜುನಾ,
ನಿಮ್ಮ ಮುಟ್ಟಿದ ಕಾರಣ ನಾನೂ ಬಯಲಾದೆ!
984
[ಎನ್ನ ಕಷ್ಟ್ವ] ಕುಲದಲ್ಲಿ ಹುಟ್ಟಿಸಿದೆಯಯ್ಯಾ, ಎಲೆ ಲಿಂಗ ತಂದೆ.
ಕೆಟ್ಟೆನಯ್ಯಾ, ನಿಮ್ಮ ಮುಟ್ಟಿ (ಯೂ ಮುಟ್ಟದಿ) ಹನೆಂದು
ಎನ್ನ ಕೈ ಮುಟ್ಟದಿರ್ದಡೆ ಮನ ಮುಟ್ಟಲಾಗದೆ?
ಅಭಿನವ ಮಲ್ಲಿಕಾರ್ಜುನಾ.
985
ನೆನೆಯಲರಿಯೆ ನಿರ್ಧರಿಸಲರಿಯೆ ಮನವಿಲ್ಲವಾಗಿ.
ಭಾವಿಸಲರಿಯೆ ಬೆರಸಲರಿಯೆ ಭಾವ ನಿರ್ಭಾವವಾಯಿತ್ತಾಗಿ.
ಧ್ಯಾನ ಮೌನವನರಿಯೆ ಧ್ಯಾನಾತೀತ ತಾನೆಯಾಯಿತ್ತಾಗಿ.
ಜ್ಞಾತೃ ಜ್ಞಾನ ಜ್ಞೇಯಂಗಳೆಲ್ಲವ ಮೀರಿ
ಅಭಿನವ ಮಲ್ಲಿಕಾರ್ಜುನನಲ್ಲಿ ಪರಮ ಸುಖಿಯಾಗಿರ್ದೆ.

986
ಎನ್ನ ಕಷ್ಟ ಕುಲದಲ್ಲಿ ಹುಟ್ಟಿದೆನೆಂಬ ಕರ್ಮವ ಕಳೆದು
ಮುಟ್ಟಿ ಪಾವನವ ಮಾಡಿ
ಕೊಟ್ಟನಯ್ಯಾ ಎನ್ನ ಕರಸ್ಥಲಕ್ಕೆ ಲಿಂಗವ!
ಆ ಲಿಂಗ ಬಂದು ಸೋಂಕಲೊಡನೆ
ಎನ್ನ ಸರ್ವಾಂಗದ ಅವಲೋಹವಳಿಯಿತ್ತಯ್ಯಾ!
ಎನ್ನ ತನುವಿನಲ್ಲಿ ಗುರುವ ನೆಲೆಗೊಳಿಸಿದ,
ಎನ್ನ ಮನದಲ್ಲಿ ಜಂಗಮವ ನೆಲೆಗೊಳಿಸಿದ,
ಎನ್ನ ಅರುಹಿನಲ್ಲಿ ಪ್ರಸಾದವ ನೆಲೆಗೊಳಿಸಿದ!
ಇಂತೀ ತ್ರಿವಿಧ ಸ್ಥಾನವ ಶುದ್ಧವ ಮಾಡಿ
ಚತುರ್ವಿಧಸಾರಾಯಸ್ಥಲವ ಸಂಬಂಧವ ಮಾಡಿದ
ಸಂಗನ ಬಸವಣ್ಣನ ಕರುಣದಿಂದ
ಪ್ರಭುದೇವರ ಶ್ರೀಪಾದವ ಕಂಡು ಬದುಕಿದೆನು ಕಾಣಾ!
ಅಭಿನವ ಮಲ್ಲಿಕಾರ್ಜುನಾ.

ಗ್ರಂಥಋಣ: ಸಮಗ್ರ ವಚನ ಸಂಪುಟಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು

*
Previous ಗೊಗ್ಗವ್ವೆ ತೆಲುಗೇಶ ಮಸಣಯ್ಯ Next