Previous ಕೊಟಾರದ ಸೋಮಣ್ಣ ಅಮರಗುಂಡದ ಮಲ್ಲಿಕಾರ್ಜುನ ತಂದೆ Next

ಆನಂದ ಸಿದ್ಧೇಶ್ವರ ##

*

ಆನಂದ ಸಿದ್ಧೇಶ್ವರ ವಚನಗಳು

1219
ಕಂಗಳ ಸುಖ ಕರ್ಮವೆಂಬುದನರಿಯರು.
ಕಿವಿಯ ಸುಖ ಕೇಡೆಂಬುದನರಿಯರು.
ನಾಸಿಕದ ಸುಖ ಹೇಸಿಕೆಯೆಂಬುದನರಿಯರು.
ಬಾಯಸುಖ ಭ್ರಮೆಯೆಂಬುದನರಿಯರು.
ಕಾಂಕ್ಷೆಯ ಸುಖ ಹುಚ್ಚೆಂಬುದನರಿಯರು.
ಇಂತಪ್ಪ ವಿಷಯಾಬ್ಧಿಗಳೊಳಗೆ
ಮುಳುಗುತ್ತಿಪ್ಪ ಅಜ್ಞಾನಿಜಡರುಗಳ
ಎನ್ನತ್ತ ತೋರದಿರಾ, ಆನಂದ ಸಿದ್ಧೇಶ್ವರಾ.

1220
ಮೃದು ಕಠಿಣ ಶೀತೋಷ್ಣಾದಿಗಳನರಿಯದನ್ನಕ್ಕ
ಅರ್ಪಿತವ ಮೀರಲಾಗದು.
ಅಂಗವುಂಟಾದಡೆ ಲಿಂಗವಲ್ಲದೆ ಅರಿಯಲರಿಯದೊ.
ಅಭಂಗ ಶರಣಂಗೆ ಅಂಬಲಿಯೂ ಸರಿ, ಅಮೃತವು ಸರಿ.
ಹಂಚೂ ಸರಿ ಕಂಚೂ ಸರಿ, ತಟ್ಟೂ ಸರಿ ತಗಡೂ ಸರಿ.
ರೆಂಬೆಯೂ ಸರಿ ಸಿಂಬೆಯೂ ಸರಿ, ಅರಸೂ ಸರಿ ಆಳೂ ಸರಿ.
ಊರೂ ಸರಿ ಕಾಡೂ ಸರಿ, ಸ್ತುತಿಯೂ ಸರಿ ನಿಂದೆಯೂ ಸರಿ.
ಇಂತಿವ ಮೀರಿದ ಮಹಾಪುರುಷನ ನಿವಲ
ಇಳೆಯೊಳಗಣವರೆತ್ತ ಬಲ್ಲರಯ್ಯಾ, ಆನಂದ ಸಿದ್ಧೇಶ್ವರಾ.

ಗ್ರಂಥಋಣ: ಸಮಗ್ರ ವಚನ ಸಂಪುಟಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು

-##: ಈ ಚಿಹ್ನೆಯು ವಚನಕಾರನ ಹೆಸರು ಅಜ್ಞಾತವೆಂಬುದನ್ನು ಸೂಚಿಸುತ್ತದೆ.

*
ಪರಿವಿಡಿ (index)
Previous ಕೊಟಾರದ ಸೋಮಣ್ಣ ಅಮರಗುಂಡದ ಮಲ್ಲಿಕಾರ್ಜುನ ತಂದೆ Next