ದೇವಧ್ವಜ ಮೃತ್ಯುಂಜಯನ ಭಾವದೊಲ್ಲಭ ಮುದ್ದನೂರೇಶ ##
|
|
*
ದೇವಧ್ವಜ ಮೃತ್ಯುಂಜಯನ ಭಾವದೊಲ್ಲಭ ಮುದ್ದನೂರೇಶ ವಚನಗಳು
1265
ಒಮ್ಮೆ ಶಿವನೆಯೆಂದು ನೆನೆದರೆ,
ಕಳ್ಳಸುಳ್ಳರಿಗೆಲ್ಲ ಕೈಲಾಸವಾಯಿತೆಂದು ಹೇಳುವ ಅಣ್ಣಗಳಿರಾ,
ಕೈಲಾಸಪದವಿ ಆದದ್ದು ಸಹಜ, ಅದೆಂತೆಂದಡೆ : ಒಬ್ಬ ಕಳವು ಮಾಡಿ ಸತ್ತರೆ,
ಶಿವ ಮೆಚ್ಚಿ ಕೈಲಾಸಕ್ಕೆ ತಕ್ಕೊಂಡು ಒಯ್ಯಬೇಕೆಂದು
ಅವಗೆ ಬ್ರಹ್ಮ ಬರೆದ ಕಲ್ಪನೆಯಲ್ಲಿತ್ತು .
ಅವರಿಗೆ ಕೈಲಾಸಪದವಿ ಆಯಿತು ಕಾಣಿರೊ.
ನೀವು ಕಳ್ಳರಲ್ಲ ಸುಳ್ಳರಲ್ಲ , ಒಳ್ಳೆಯ ಜನರು.
ಶಿಲ್ಪಕಾರನ ಕೈಯಲ್ಲಿ ಹುಟ್ಟೆದ ಶಿಲೆಯ ಲಿಂಗವನು ತಂದು,
ಶಿರದಲ್ಲಿ ಕಟ್ಟಿಕೊಂಡು
ಉಂಬುವಲ್ಲಿ ಶಿವ, ಉಡುವಲ್ಲಿ ಶಿವ,
ಕೊಂಬುವಲ್ಲಿ ಶಿವ, ಕೊಡುವಲ್ಲಿ ಶಿವ,
ನಡೆವಲ್ಲಿ ಶಿವ, ನುಡಿವಲ್ಲಿ ಶಿವ.
ಸರ್ವಾಂಗವೆಲ್ಲ ಶಿವಮಯವಾದ ಮೇಲೆ
ನಿಮಗೆ ಶಿವ ಮೆಚ್ಚಿ, ಕೈಲಾಸಕ್ಕೆ ತಕ್ಕೊಂಡು ಹೋದನೆ ? ಹೋಗಲಿಲ್ಲ.
ಕಾಲಚಕ್ರದ ಪ್ರಳಯಕ್ಕೆ ಒಳಗಾಗಿ,
ಕಾಲ ಬಾಧೆಯೊಳಗೆ ಬಿದ್ದು ಬಳಲುತಿಪ್ಪಿರಿ.
ಒಂದು ಅನಂತಕೋಟಿ. ಅದು ಎಂತೆಂದರೆ : ನೆಲುವಿನ ಮೇಲೆ ಇಟ್ಟಿದ್ದ ಹಾಲು ಬೆಣ್ಣೆಯನು ತಕ್ಕೊಂಡು
ಸವಿದು ಉಣಲಾರದೆ, ಆಕಾಶವೆಂಬ ಬಯಲಿಗೆ
ಬಾಯಿ ತೆರಕೊಂಡು ಕುಳಿತರೆ ಹಾಲು ಕರೆದೀತೆ ? ಕರೆಯಲರಿಯದು.
ಅದು ಎಂತೆಂದರೆ :ನಿಮ್ಮ ಅಂತರಂಗವೆಂಬುದ ಅಡಿವಿಡಿದು ಅಳೆದರೆ,
ಒಡನೆ ಮೂರಗೇಣಿನ ಒಳಗೆ ಹೊರಗೆ ಕೈಲಾಸವಾಗಿತ್ತು.
ಆ ಕೈಲಾಸದಲ್ಲಿ ಬ್ರಹ್ಮ ವಿಷ್ಣು ರುದ್ರ ಈಶ್ವರ ಸದಾಶಿವ
ಈ ಐದುಮಂದಿ ಮಕ್ಕಳನ್ನು ಹಡೆದ ಒಂಕಾರ ಪರಬ್ರಹ್ಮ ದೇವರಿಂದೆ
ಆರುಮಂದಿ ದೇವರಾದಲ್ಲಿ ಆಕಾರಾವಂ(?) ಕೋಟಿ ರುದ್ರ
ನವಕೋಟಿ ವಿಷ್ಣುಗಳು ಇಂದ್ರಸಭೆ ದೇವಸಭೆ ಶಿವಸಭೆ
ನಂದಿನಾಥ ಭೃಂಗಿನಾಥ ಮೊದಲಾದ ಗರುಡ ಗಂಧರ್ವ ಸಿದ್ಧರು
ವಿದ್ಯಾಧರರು ಸಮಸ್ತ ಮುನಿಜನಂಗಳೆಲ್ಲ ಇದ್ದರು ಕಾಣಿರೊ.
ಇಂತೀ ತಮ್ಮ ಅಂತರಂಗದಲ್ಲಿ ತಿಳಿದು ನೋಡಬಲ್ಲಾತಗೆ
ಪಿಂಡಾಂಡವೆಂಬ ಕೈಲಾಸದಲ್ಲಿ ಇದ್ದಂತೆ,
ಬ್ರಹ್ಮಾಂಡವೆಂಬ ಕೈಲಾಸದಲ್ಲಿ ಇದ್ದಂತೆ,
ಬ್ರಹ್ಮಾಂಡವೆಂಬ ಕೈಲಾಸವಲ್ಲಿಯಿತ್ತು ,
ಪಿಂಡಾಂಡವೆಂಬ ಕೈಲಾಸವಲ್ಲಿಯಿತ್ತು ಕಾಣಿರೊ.
ಅದು ಎಂತೆಂದರೆ : ಕೃತಯುಗದಲ್ಲಿ , ಬ್ರಹ್ಮರಾಕ್ಷಸರು ಪೃಥ್ವಿಯ ಆಧಾರದಲ್ಲಿ ನಿಂದು,
ಕೈಲಾಸಕ್ಕೆ ದಾಳಿಯನಿಕ್ಕಿ ಕೋಳು ತಕ್ಕೊಂಡು ಬರುವರು.
ಅವರಿಗೆ ಕೈಲಾಸಪದವು ದೊಡ್ಡದಾಗಿತ್ತೆ ? ದೊಡ್ಡದಾಗಿ ಇದ್ದಿಲ್ಲ.
ತ್ರೇತಾಯುಗದಲ್ಲಿ, ಕ್ಷತ್ರಿಯರು [ಪೃಥ್ವಿಯ ಆಧಾರದಲ್ಲಿ ನಿಂದು],
[ಕೈಲಾಸಕ್ಕೆ ದಾಳಿಯನಿಕ್ಕಲು],
ಕೈಲಾಸದೊಡೆಯ ಮರೆಯ ಹೊಕ್ಕ,
ಕಾಮುಕ ಋಷಿಯು ಕಣ್ಣು ತೆಗೆದು, ಗರಿಯ ಅಂಬಿಗ ತಲೆಗೆ ಕಟ್ಟಿದರು.
ಈಶ್ವರನ ಜಡೆಯೊಳಗಿನ ಗಂಗೆಯನು ಸುಟ್ಟುರುಹಿದ ಮೇಲೆ
ಹಾಸಿತ ಮಾಂಸವನು ಹುಟ್ಟಿಸಿಯಿದ್ದರು.
ಅವರಿಗೆ ಕೈಲಾಸಪದವು ದೊಡ್ಡದಾಗಿ ಇತ್ತೆ ? ದೊಡ್ಡದಾಗಿ ಇದ್ದಿಲ್ಲ.
ದ್ವಾಪರಯುಗದಲ್ಲಿ , ಸೋಮಕ್ಷತ್ರಿಯರು ಪೃಥ್ವಿಯ ಆಧಾರದಲ್ಲಿ ನಿಂದು,
ಇಂದ್ರಪದದಲ್ಲಿ ಇದ್ದಂಥ ಶ್ವೇತವರ್ಣದ ಆನೆಯನು ತಂದು,
ತಾಯಿಗೆ ನೋಂಪಿಯ ನುತಿಸಿದರೆ,
ಅವರಿಗೆ ಕೈಲಾಸಪದವಿ ದೊಡ್ಡದಾಗಿ ಇತ್ತೆ ? ದೊಡ್ಡದಾಗಿ ಇದ್ದಿಲ್ಲ.
ಕಲಿಯುಗದಲ್ಲಿ ಹುಟ್ಟಿದ ಮನುಜರನು ಕೈಲಾಸಕೆ ಅಟ್ಟಿದರೇನು
ಒಮ್ಮೆ ಶಿವನೆಯೆಂದು ನೆನೆದರೆ, ಕೈಲಾಸಪದವಿ ಆದೀತೆಂದು
ಬಹಿರಂಗದಲ್ಲಿ ಹೇಳುವ ಮಾತುಗಳೇ ಬಹಳ.
ಅಂತರಂಗವಿಡಿದು ಹೋದವರು ಒಬ್ಬರು ಇಬ್ಬರು ಕಾಣಿರೊ.
ಅದು ಎಂತೆಂದರೆ : ಬ್ರಹ್ಮ ಬರೆದ ಕಲ್ಪನೆಯಿಂದ ಕೈಲಾಸಪದವಿಯಾಗಬೇಕೆಂದು ಇದ್ದರೆ,
ಎಂದೆಂದೂ ಶಿವನೆಯೆಂದು ನೆನೆಯದೆ,
ಜಟ್ಟಿಂಗ ಮೈಲಾರ ಜಿನ ಭೈರವವೆಂಬ ಕೆಟ್ಟದೇವರ ಪೂಜೆಯ ಮಾಡಿದರೇನು
ಅವನೂ ಬ್ರಹ್ಮ ಬರೆದ ಕಲ್ಪನೆಯಿದ್ದು, ಸತ್ತುಹೋಗುವಾಗ,
ಅವನ ಶಿವ ಮೆಚ್ಚಿ ಕೈಲಾಸಕ್ಕೆ ತಕ್ಕೊಂಡು ಹೋದನು.
ಬ್ರಹ್ಮ ಬರೆದ ಕಲ್ಪನೆಯಲ್ಲಿ ಅವಗೆ ಕೈಲಾಸಪದವು ಇಲ್ಲದಿದ್ದರೆ,
ಜಟ್ಟಿಂಗ ಮೈಲಾರ ಜಿನ ಭೈರವ ದೇವರುಗಳೆಂಬ
ಕೆಟ್ಟದೇವರ ಪೂಜೆಯ ಬಿಟ್ಟು, ಎಷ್ಟುದಿನ ಶಿವನೆಯೆಂದು ನೆನೆದರೇನು,
ಅವನು ಬ್ರಹ್ಮ ಬರೆದ ಕಲ್ಪನೆಯಲ್ಲಿದ್ದು, ಸತ್ತುಹೋಗುವಾಗ
ಅವನನು ಶಿವ ಮೆಚ್ಚಿ ಕೈಲಾಸಕ್ಕೆ ತಕ್ಕೊಂಡು ಹೋದನೆ ? ಹೋಗಲಿಲ್ಲ.
ಅದು ಎಂತೆಂದರೆ : ಕಾಲಚಕ್ರವೆಂಬ ಪ್ರಳಯಕ್ಕೊಳಗಾಗಿ,
ಕಾಲನ ಬಾಧೆಯಲ್ಲಿ ಬಿದ್ದು ಹೊರಳಾಡುತ್ತಿದ್ದರು ಕಾಣಿರೊ.
ಅದು ಎಂತೆಂದರೆ : ಬ್ರಹ್ಮ ಬರೆದ ಕಲ್ಪನೆ ಹೊರತಾಗಿ,
ಶಿವನನು ನೆನೆದು ಕೈಲಾಸ ಕಂಡೆವೆಂದು
ಕಲೆ ಕೆಳಗಾಗಿ ಕಾಲು ಮೇಲ್ಮಾಡಿ ತಪವ ಮಾಡಿದರೆ,
ಕೈಲಾಸ ಪದ ಆಗದೆಂದು ಇಕ್ಕುವೆನು ಮುಂಡಿಗೆಯ.
ಇದನು ಎತ್ತುವರುಂಟೆ,
ದೇವಧ್ವಜ ಮೃತ್ಯುಂಜಯನ ಭಾವದೊಲ್ಲಭ ಮುದ್ದನೂರೇಶಾ ?
1266
ಲಿಂಗದೇವರ ಪಾದದ ನೆನೆವ ನಿತ್ಯಮಾಡಿ,
ಹೇಮದ ಕೂಟದ ಹಿರಿಯರುಗಳು ಆಶೀರ್ವಾದ ಬಿನ್ನಹ.
ಅಂಗದ ಮೇಲೆ ಲಿಂಗವನು ಕಟ್ಟಿ ಶಿವಭಕ್ತರಾದ ಮೇಲೆ
ಭವಿಗಳು ಇದ್ದಲ್ಲಿ ಶಿವಶಾಸ್ತ್ರವ ಓದಿ,
ಭವಿಗಳ ಪಂಕ್ತಿಯಲ್ಲಿ ಅನ್ನವನು ಉಣಲಾಗದೆಂದು
ಬರಿಯ ಮಾತಿನ ಬಣಬೆಯ ಹಿಡಕೊಂಡು
ತಿರುಗುವ ನರಗುರಿಗಳು,
ಆಧಾರಚಕ್ರದಲ್ಲಿ ಬ್ರಹ್ಮನೆಂಬೊ ಭವಿ ಹುಟ್ಟಿ,
ಹೊರಗೆ ಪೃಥ್ವಿತತ್ವದ ಸ್ವಾಧಿಷ್ಟದಲ್ಲಿ ವಿಷ್ಣುವೆಂಬೊ ಭವಿ ಹುಟ್ಟಿ,
ಒಳಗೆ ಅಪ್ಪುತತ್ವದ ಹೊರಗೆ ಅಪ್ಪುತತ್ವದ
ಮಣಿಪೂರಕದಲ್ಲಿ ರುದ್ರನೆಂಬೊ ಭವಿ ಹುಟ್ಟಿ,
ಒಳಗೆ ತೇಜತತ್ವದ ಹೊರಗೆ ತೇಜತತ್ವದ
ಅನಾಹತದಲ್ಲಿ ಈಶ್ವರನೆಂಬೊ ಭವಿ ಹುಟ್ಟಿ,
ಒಳಗೆ ವಾಯುತತ್ವದ ಹೊರಗೆ ವಾಯುತತ್ವದ
ವಿಶುದ್ಧಿಯಲ್ಲಿ ಸದಾಶಿವನೆಂಬ ಭವಿ ಹುಟ್ಟಿ,
ಒಳಗೆ ಆಕಾಶತತ್ವದ ಹೊರಗೆ ಆಕಾಶತತ್ವದ
ಅಗ್ನಿಯಿಂದ ಪರಬ್ರಹ್ಮನೆಂಬೊ ಭವಿ ಹುಟ್ಟಿ.
ಇಂತೀ ಇವರು ಆರುಮಂದಿ ಭವಿಗಳು.
ಭಕ್ತನ ಅಂತರಂಗದೊಳು ಹುಟ್ಟಿ, ಅಂತರಂಗದೊಳು ಬೆಳೆದು,
ಬೇರೊಂದು ವಿಷ್ಣುಲಿಂಗವಾಗಿ ಬಂದು ಪೂಜೆಗೊಂಬುತಿದರು ಕಾಣಿರೊ.
ಅದು ಎಂತೆಂದರೆ : ಬ್ರಹ್ಮನೆಂಬ ಭವಿ, ವಿಷ್ಣುವೆಂಬ ಭವಿ, ರುದ್ರನೆಂಬ ಭವಿ.
ಇಂತಿವರು ಮೂರುಮಂದಿ ಭವಿಗಳು ಒಂದುಗೂಡಲಿಕೆ
ಈಶ್ವರನೆಂಬ ಲಿಂಗಾಕಾರ ಭವಿಯಾಯಿತು ಕಾಣಿರೊ.
ಆ ಲಿಂಗದ ರೂಪನು ನೋಡಿ,
ಶಿಲ್ಪಕಾರರು ತಮ್ಮ ಹೊಟ್ಟೆಕಿಚ್ಚಿಗೆ
ಕಟೆದಿಟ್ಟು ಮಾರುವ ಶಿಲೆಯ ಲಿಂಗವ ತಂದು,
ಶಿರದಲ್ಲಿ ಕಟ್ಟಿ, ಕರದಲ್ಲಿ ಪೂಜೆ ಮಾಡಿ
ಶಿವಭಕ್ತರೆಂದು ಹೆಸರಿಟ್ಟುಕೊಂಡು ನುಡಿವ ಅಣ್ಣಗಳ
ಅಂತರಂಗದೊಳು ಕಾಮವೆಂಬೊ ಭವಿ, ಕ್ರೋಧವೆಂಬೊ ಭವಿ,
ಲೋಭವೆಂಬೊ ಭವಿ, ಮೋಹವೆಂಬೊ ಭವಿ,
ಮದವೆಂಬೊ ಭವಿ, ಮತ್ಸರವೆಂಬೊ ಭವಿ.
ಇಂತೀ [ಈ]ರಾರು ಹನ್ನೆರಡುಮಂದಿ ಭವಿಗಳನು
ಹತ್ತೇಲಿಯಿಟ್ಟುಕೊಂಡು, ಕೂಡಿಯುಂಡು
ಕುಲವನರಸುವಂಥ ಕೋತಿಗಳು ಮಾಡಿದ ಭಕ್ತಿ ಏನಾಯಿತೆಂದರೆ,
ಅಜ್ಜಿಗೆ ಅರಸಿನ ಚಿಂತೆಯಾದರೆ,
ಮಗಳಿಗೆ ಮಿಂಡಗಾರನ ಚಿಂತೆಯನು ಮಾಡಿಕೊಂಡು,
ಹಲವು ಮಿಂಡಗಾರಗೆ ಸೆರಗುಹಾಸಿ ಮಾಡಿಕೊಂಡು
ಹೋದಂತಾದೀತು ಕಾಣಿರೊ.
ಅದು ಎಂತೆಂದರೆ : ಒಂಕಾರ ಪರಬ್ರಹ್ಮನೆಂಬೊ ವಿಪ್ರನ ಗರ್ಭದಲ್ಲಿ
ನಕಾರವೆಂಬೊ ಅಕ್ಷರ ಹುಟ್ಟಿ,
ಸದ್ಯೋಜಾತಮುಖದಲ್ಲಿ ಬ್ರಹ್ಮನೆಂಬೊ ಭವಿಯಾಗಿ ಬಂದು,
ಎಂಬತ್ತುನಾಲ್ಕುಲಕ್ಷ ಜೀವರಾಶಿಗಳನೆಲ್ಲ ಹುಟ್ಟಿಸಬೇಕೆಂದು
ಚಿಂತೆಯನು ತಾಳಿ,
ಪೃಥ್ವಿತತ್ವವೆಂಬೊ ಆದಿ ಆಧಾರ ಬುಡವಾಗಿಯಿದ್ದ ಕಾಣಿರೊ.
ಮಕಾರವೆಂಬೊ ಅಕ್ಷರ ಹುಟ್ಟಿ,
ವಾಮದೇವಮುಖದಲ್ಲಿ ವಿಷ್ಣುವೆಂಬೊ ಭವಿಯಾಗಿ ಬಂದು,
ಎಂಬತ್ತುನಾಲ್ಕುಲಕ್ಷ ಜೀವರಾಶಿಗಳಿಗೆಲ್ಲ ರಕ್ಷಿಸಬೇಕೆಂಬೊ
ಚಿಂತೆಯನು ತಾಳಿ,
ಅಪ್ಪುತತ್ವವೆಂಬೊ ಆದಿ ಆಧಾರದ ಬುಡವಾಗಿಯಿದ್ದ ಕಾಣಿರೊ.
ಶಿಕಾರವೆಂಬೊ ಅಕ್ಷರ ಹುಟ್ಟಿ,
ಅಘೋರಮುಖದಲ್ಲಿ ರುದ್ರನೆಂಬೊ ಭವಿಯಾಗಿ ಬಂದು,
ಎಂಬತ್ತುನಾಲ್ಕುಲಕ್ಷ ಜೀವರಾಶಿಗಳನೆಲ್ಲ ಭಕ್ಷಿಸಬೇಕೆಂಬೊ
ಚಿಂತೆಯನು ತಾಳಿ,
ತೇಜತತ್ವವೆಂಬೊ ಆದಿ ಆಧಾರದ ಬುಡವಾಗಿಯಿದ್ದ ಕಾಣಿರೊ.
ವಕಾರವೆಂಬೊ ಅಕ್ಷರ ಹುಟ್ಟಿ,
ತತ್ಪುರುಷಮುಖದಲ್ಲಿ ಈಶ್ವರನೆಂಬೊ ಭವಿಯಾಗಿ ಬಂದು,
ಎಂಬತ್ತುನಾಲ್ಕುಲಕ್ಷ ಜೀವರಾಶಿಗಳಿಗೆಲ್ಲ
ಅಂಗದೊಳಗೆ ಪ್ರಾಣಲಿಂಗವಾಗಿ ಪೂಜೆಗೊಳಬೇಕೆಂಬ
ಚಿಂತೆಯನು ತಾಳಿ,
ವಾಯುತತ್ವವೆಂಬೊ ಆದಿ ಆಧಾರದ ಬುಡವಾಗಿಯಿದ್ದ ಕಾಣಿರೊ.
ಯಕಾರವಂಬೊ ಅಕ್ಷರ ಹುಟ್ಟಿ,
ಈಶಾನ್ಯಮುಖದಲ್ಲಿ ಸದಾಶಿವನೆಂಬ ಭವಿಯಾಗಿ ಬಂದು,
ಎಂಬತ್ತುನಾಲ್ಕುಲಕ್ಷ ಜೀವರಾಶಿಗಳನೆಲ್ಲ
ತನ್ನ ಅಂತರಂಗದೊಳಗೆ ಇಂಬಿಟ್ಟು ಇರಬೇಕೆಂಬ
ಚಿಂತೆಯನು ತಾಳಿ,
ಆಕಾಶತತ್ವವೆಂಬೊ ಆದಿ ಆಧಾರದ ಬುಡವಾಗಿಯಿದ್ದ ಕಾಣಿರೊ.
ಅದು ಎಂತೆಂದಡೆ : ಇಂತೀ ಇಪ್ಪತ್ತೈದು ತತ್ವಗಳ ಆಧಾರದಲ್ಲಿ ಹುಟ್ಟಿದ
ಭಕ್ತರೆಂಬ ಕೊಂಬೆಗಳು ಮಾಡಿದ ಭಕ್ತಿಯೆನಗಾಯಿತು
ಅಂದರೆ, ಪೃಥ್ವಿತತ್ವದ ಆಧಾರದಲ್ಲಿ ಹುಟ್ಟಿದ ಕಸಕಡ್ಡಿಗಳೆಲ್ಲ
ಕುಸುಕಿಂದ ಹರಕೊಂಡು ತಿಂದು ಹರಿಹೋದಂತೆ ಕಾಣಿರೊ.
ಅದು ಎಂತೆಂದರೆ : ಭವಿಗಳ ಆಧಾರದಲ್ಲಿ ಭಕ್ತರೆಂಬ ಕೊಂಬೆಗಳು ಹುಟ್ಟಿ
ಪೃಥ್ವಿತತ್ವವೆಂಬೊ ಭವಿಯ ಹುಟ್ಟಿಸೆಂದರೆ ಹುಟ್ಟಿಸಲಿಲ್ಲ.
ಅಪ್ಪುತತ್ವವೆಂಬೊ ಭವಿಯ ರಕ್ಷಿಸಿಯೆಂದರೆ, ರಕ್ಷಿಸಿಯಿದ್ದಿಲ್ಲ.
ತೇಜತತ್ವಯೆಂಬೊ ಭವಿಯ ಭಕ್ಷಿಸಿಯೆಂದರೆ, ಭಕ್ಷಿಸಿಯಿದ್ದಿಲ್ಲ.
ವಾಯುತತ್ವವೆಂಬೊ ಭವಿಯ ಅಂಗದೊಳಗೆ
ಲಿಂಗವಾಗಿ ಪೂಜೆಗೊಂಡಿದ್ದರೆ ಪೂಜೆಗೊಂಡಿದ್ದಿಲ್ಲಾ.
ಆಕಾಶತತ್ವಯೆಂಬೊ ಭವಿಯನು ತಮ್ಮ ಅಂತರಂಗದೊಳಗೆ
ಮರೆಯೊಳಗೆ ಇಂಬಿಟ್ಟುಕೊಂಡು ಇರಲಾರದ ಅಜ್ಞಾನಿಗಳು.
ಪೃಥ್ವಿತತ್ವವೆಂಬೊ ಭವಿ ಆಧಾರದಲ್ಲಿ ಹುಟ್ಟಿ,
ಭವಿ ಆಧಾರದಲ್ಲಿ ಬೆಳೆದು,
ಆಕಾಶತತ್ವವೆಂಬೊ ಭವಿಯ ಅಂತರಂಗದ ಮರೆಯಲ್ಲಿ
ಅಡಗಿಕೊಂಡಿದ ಅಜ್ಞಾನಿಗಳು.
ಬ್ರಹ್ಮನೆಂಬೊ ಭವಿ, ವಿಷ್ಣುವೆಂಬೊ ಭವಿ, ರುದ್ರನೆಂಬೊ ಭವಿ.
ಮೂವರು ತ್ರಿಮೂರ್ತಿಗಳು ಕೂಡಿ ಏಕಮೂರ್ತಿಯಾದ
ಆಕಾರಲಿಂಗವನು ತಂದು, ತಮ್ಮ ಶಿರದಲ್ಲಿ ಕಟ್ಟಿಕೊಂಡು
ಶಿವಭಕ್ತನೆ ಹೆಚ್ಚು, ಭವಿ ಕಡಿಮೆಯೆಂದು
ಕೈಯಲ್ಲಿ ಕಂಜರದ ಬಾಕನೆ ಹಿಡಿದುಕೊಂಡು,
ಕೆಂಜಡೆಯ ಬಿಟ್ಟುಕೊಂಡು, ವೀರಗಾಸೆಯಂತೆ ಕುಣಿದಾಡಿ,
ಕೂಗಿ ಕೂಗಿ ಹೇಳುವ ಕುನ್ನಿಗಳು ಮಾಡಿದ ಭಕ್ತಿಯೇನಾಯಿತೆಂದರೆ,
ಕೈಲಾಸದ ನಾಯಿಗಳು ಕೈಮೈಯನ್ನ ಹರಕೊಂಡು,
ವೈಹಾಳಿಯ ಬಯಲಿಗೆ ಹೋಗಿ, ಒದರಿದರೆ,
ಸತ್ತಂತಾಯಿತೆಂದು ಇಕ್ಕುವೆನು ಮುಂಡಿಗೆಯ.
ಇದನೆತ್ತುವರಾರುಂಟೊ,
ದೇವಧ್ವಜ ಮೃತ್ಯುಂಜಯನ ಭಾವದೊಲ್ಲಭ ಮುದ್ದನೂರೇಶಾ ?
1267
ನಾನಾ ಜನ್ಮಂಗಳ ತಿರುಗಿ, ಮನುಷ್ಯಜನ್ಮಕ್ಕೆ ಬಂದು,
ಪಂಚೇಂದ್ರಿಯವುಳ್ಳ ಅರಿವಿನ ಪುರುಷನಾದ ಮೇಲೆ,
ತಮ್ಮ ಆತ್ಮದೊಳಗಿಪ್ಪ ಜ್ಯೋತಿರ್ಲಿಂಗವನು ಕಂಡು,
ಆರು ಲಿಂಗವನು ಕಂಡು, ಆರು ಲಿಂಗವನು ಅನುಭವಿಸಿ ನೋಡಿ,
ಮೂವತ್ತಾರು ಲಿಂಗದ ಮುದ್ರೆಯನು ಮುಟ್ಟಿ,
ಆಧ್ಯಾತ್ಮದ ನೀತಿಯನು ತಿಳಿದು, ಶುದ್ಧಾತ್ಮದೇಹಿಗಳಾದ ಮೇಲೆ
ತಮ್ಮ ಜಾತಿಧರ್ಮದ ನೀತಿಶಾಸ್ತ್ರದ ನಿರ್ಣಯವನೆ ಕೇಳಿ,
ತಮ್ಮ ಜಾತಿಧರ್ಮದ ವರ್ಣನೆ ಗುರುಹಿರಿಯರನು ಪೂಜೆಯ ಮಾಡಿ,
ಹಸಿದು ಬಳಲಿಬಂದವರಿಗೆ ಅನ್ನವನು ನೀಡಿ,
ಭಕ್ತಿಯನು ಮಾಡಿ, ಮುಕ್ತಿಯನ್ನು ಪಡೆದರೆ,
ತನ್ನಷ್ಟಕ್ಕೇ ಆಯಿತು.
ಆ ವಾರ್ತೆ ಕೀರ್ತಿಗಳು ಜಗಜಗಕ್ಕೆ ಕೀರ್ತಿ ಮೆರೆಯಿಪ್ಪುದು ಕಾಣಿರೊ.
ಅದು ಎಂತೆಂದರೆ : ತಾನು ಹತ್ತು ಎಂಟು ಸಾವಿರ ಹಣ ಕಾಸುಗಳನು ಗಳಿಸಿ,
ಹತ್ತಿರವಿಟ್ಟುಕೊಂಡು ಸತ್ತುಹೋದರೆ,
ಆ ಬದುಕು ತನ್ನ ಹೆಂಡಿರು ಮಕ್ಕಳಿಗೆ ಬಾಂಧವರಿಗೆ ಆಯಿತಲ್ಲದೆ,
ನೆರೆಮನೆಯವರಿಗೆ ಬಂದೀತೆ ? ಬರಲರಿಯದು.
ಅದು ಎಂತೆಂದರೆ : ಇಂತೀ ತಮ್ಮ ಮನೆಯ ಹಿರಿಯರ ಸುದ್ದಿಯನು ಹಿಂದಿಟ್ಟುಕೊಂಡ
ನೆರೆಮನೆಯ ಹಿರಿಯರ ಗರ್ವ, ಬಸವಣ್ಣ ದೊಡ್ಡಾತ,
ಚೆನ್ನಬಸವಣ್ಣ ದೊಡ್ಡಾತ, ದೇವರ ದಾಸಿಮಯ್ಯ ದೊಡ್ಡಾತ.
ಗಣಂಗಳು ದೊಡ್ಡವರೆಂದು ಬರಿಯ ಮಾತಿನ ಮಾಲೆಯ ಕೊಂಡು
ಶಾಸ್ತ್ರವನು ಹಿಡಕೊಂಡು ಓದಿ ಹೇಳುವ ಮನುಜರಿಗೆಲ್ಲ
ಭಕ್ತಿ ಅಳವಟ್ಟು, ಮುಕ್ತಿ ಸಾಧನವಾಯಿತೇ ? ಆಗಲರಿಯದು.
ಅದು ಎಂತೆಂದರೆ : ಬಸವಣ್ಣ ಭಕ್ತಿಯನು ಮಾಡಿ, ಮುಕ್ತಿಯನು ಪಡೆದರೆ,
ಬಸವಣ್ಣನ ಅಷ್ಟಕ್ಕೇ ಆಯಿತು.
ಚೆನ್ನಬಸವಣ್ಣ ಭಕ್ಕಿಯನು ಮಾಡಿ, ಮುಕ್ತಿಯನು ಪಡೆದರೆ,
ಚೆನ್ನಬಸವಣ್ಣನ ಅಷ್ಟಕ್ಕೇ ಆಯಿತು.
ದೇವರದಾಸಿಮಯ್ಯ ಭಕ್ತಿಯನು ಮಾಡಿ, ಮುಕ್ತಿಯನು ಪಡೆದರೆ,
ದೇವರದಾಸಿಮಯ್ಯನ ಅಷ್ಟಕ್ಕೆ ಆಯಿತು.
ಗಣಂಗಳು ಭಕ್ತಿಯನು ಮಾಡಿ, ಮುಕ್ತಿಯನು ಪಡೆದರೆ,
ಗಣಂಗಳ ಅಷ್ಟಕ್ಕೇ ಆಯಿತು.
ನಾವು ಭಕ್ತಿಯನು ಮಾಡಿ, ಮುಕ್ತಿಯನು ಪಡೆದರೆ,
ನಮ್ಮಷ್ಟಕ್ಕೇ ಆಯಿತು.
ಅದು ಎಂತೆಂದರೆ : ಬಸವಣ್ಣ ಚೆನ್ನಬಸವಣ್ಣ ದೇವರದಾಸಿಮಯ್ಯ ಗಣಂಗಳೆಲ್ಲರು
ದೊಡ್ಡವರೆಂದು ಅವರನ್ನು ಹಾಡಿ ಹರಸಿದರೆ,
ಅವರು ನಮಗೆ ಕೊಟ್ಟು ಕೊಂಡು ನಡಸ್ಯಾರೆ ? ನಡೆಸಲರಿಯರು.
ಅವರು ದೊಡ್ಡವರೆಂದರೆ, ಅವರು ತಮ್ಮಷ್ಟಕ್ಕೇ.
ಅವರು ಚಿಕ್ಕವರಾದರೂ, ಅವರು ತಮ್ಮಷ್ಟಕ್ಕೇ.
ನಾವು ದೊಡ್ಡವರಾದರೆ ಅವರಿಗೆ ನಾವು ಕೊಟ್ಟು ಕೊಂಡು
ನಡೆಸೇವೆ ? ನಡೆಸಲರಿಯೆವು.
ನಾವು ದೊಡ್ಡವರಾದರೆ ನಮ್ಮಷ್ಟಕ್ಕೇ.
ವಾನು ಚಿಕ್ಕವರಾದರೆ ನಮ್ಮಷ್ಟಕ್ಕೇ.
ಎದು ಎಂತೆಂದರೆ : ಹಿಂದೆ ಹುಟ್ಟಿದ ಹಿರಿಯ ಅಣ್ಣಗಳಾದರೇನು,
ಮುಂದೆ ಹುಟ್ಟಿದ ಕಿರಿಯ ತಮ್ಮನಾದರೇನು,
ತನ್ನ ಸುದ್ದಿಯನು ತಾನು ಅರಿತು, ಅನ್ಯರ ಹಂಗು ಹರಿದು,
ಒಂಕಾರ ಪರಬ್ರಹ್ಮದ ಧ್ಯಾನವನು ಮಾಡಿಕೊಂಡು ಇರಬಲ್ಲರೆ,
ಆತನೀಗ ತನ್ನಷ್ಟಕ್ಕೇ.
ಹಿರಿಯಾತಂಗೆ ಭಕ್ತಿ ಅಳವಟ್ಟು, ಮುಕ್ತಿ ಸಾಧನವಾಯಿತು ಕಾಣಿರೊ.
ಇಂತೀ ತನ್ನ ಸುದ್ದಿಯ ತಾನು ಅರಿಯದೆ,
ನೆರೆಮನೆಯ ಹಿರಿಯರು ಘನವೆಂದು ಕೊಡಾಡುವ
ಮರಿ ನಾಯಿಕುನ್ನಿಗಳಿಗೆಲ್ಲ ಭಕ್ತಿ ಅಳವಟ್ಟು,
ಮುಕ್ತಿ ಸಾಧನವಾಗಲರಿಯದೆಂದು ಇಕ್ಕಿದೆನು ಮುಂಡಿಗೆಯ.
ಇದನೆತ್ತುವರುಂಟೇನೊ,
ದೇವಧ್ವಜ ಮೃತ್ಯುಂಜಯನ ಭಾವದೊಲ್ಲಭ ಮುದ್ದನೂರೇಶಾ ?
1268
ಹರಿಹರ ಬ್ರಹ್ಮಾದಿಗಳು ಸರಿಯಿಲ್ಲವೆಂದು
ಹೇಳುವ ಅಣ್ಣಗಳು ನೀವು ಕೇಳಿರೊ.
ಹರಿಹರ ಬ್ರಹ್ಮಾದಿಗಳೊಳಗೆ ಸರಿಯಾಗಿ ಬಂದು,
ನಿಮ್ಮ ಅಂತರಂಗದೊಳಗೆ ನಿಂತ ಕಾರಣದಿಂದಾಗಿ,
ಪೃಥ್ವಿ ಅಪ್ಪು ತೇಜ ವಾಯು ಆಕಾಶ ಸ್ವರ್ಗ ಮರ್ತ್ಯ ಪಾತಾಳ
ಈರೇಳು ಭುವನ ಹದಿನಾಲ್ಕು ಲೋಕ, ನಾಲ್ಕು ವರ್ಣ, ಹದಿನೆಂಟು ಜಾತಿ,
ನೂರೊಂದು ಕುಲದವರಾದರು.
ಭಕ್ತರ ಆಧಾರದಲಿ ನಾವು ಆದಿವಿ, ನೀವು ಆದಿರಿ.
ಅದು ಎಂತೆಂದರೆ : ಒಂಕಾರ ಪರಬ್ರಹ್ಮನೆಂಬ ವಿಪ್ರನ ಗರ್ಭದಲ್ಲಿ ಹುಟ್ಟಿದ
ನಕಾರ ಬ್ರಹ್ಮನೆ ಪೃಥ್ವಿತತ್ವವಾದ,
ಮಕಾರ ವಷ್ಣುವೆ ಅಪ್ಪುತತ್ವವಾದ.
ಶಿಕಾರ ರುದ್ರನೆ ತೇಜತತ್ವವಾದ,
ವಕಾರ ಈಶ್ವರನೆ ವಾಯುತತ್ವವಾದ.
ಯಕಾರ ಸದಾಶಿವನೆ ಆಕಾಶ ತತ್ವವಾದ
ಅದು ಎಂತೆಂದರೆ : ನಕಾರ ಬ್ರಹ್ಮ , ಮಕಾರ ವಿಷ್ಣು , ಶಿಕಾರ ರುದ್ರ.
ಮೂವರು ತ್ರಿಮೂರ್ತಿಗಳು ಕೂಡಲಿಕೆ
ಈಶ್ವರನೆಂಬುದೊಂದು ವಿಪ್ರವರ್ಣವಾಯಿತು ಕಾಣಿರೊ.
ಆತನ ಸದ್ಯೋಜಾತಮುಖದಲ್ಲಿ ಬ್ರಾಹ್ಮಣ ಹುಟ್ಟಿದ.
ಅವರ ಅಂಗದಲ್ಲಿ ಪ್ರಸಾದಲಿಂಗವಾದ,
ಶಿಖೆಯಲ್ಲಿ ವಿಷ್ಣುಲಿಂಗವಾದ,
ಮನೆಯಲ್ಲಿ ಸ್ಫಟಿಕ ವರ್ಣದ ಪಟ್ಟಿಕೇಶ್ವರನೆಂಬ ಲಿಂಗವಾದ.
ಆತನ ಭುಜದಲ್ಲಿ ಕ್ಷತ್ರಿಯ ಹುಟ್ಟಿದ.
ಅವರ ಅಂಗದಲ್ಲಿ ಪ್ರಾಣಲಿಂಗವಾದ, ಶಿಖೆಯಲ್ಲಿ ವಿಷ್ಣುಲಿಂಗವಾದ,
ಮನೆಯಲ್ಲಿ ಶ್ವೇತವರ್ಣದ ರಾಮನಾಥಲಿಂಗವಾದ,
ಆತನ ಉದರದಲ್ಲಿ ವೈಶ್ಯ ಹುಟ್ಟಿದ
ಅವರ ಅಂಗದಲ್ಲಿ ಪ್ರಾಣಲಿಂಗವಾದ, ಶಿಖೆಯಲ್ಲಿ ವಿಷ್ಣುಲಿಂಗವಾದ,
ಮನೆಯಲ್ಲಿ ಶ್ಯಾಮವರ್ಣದ ನಗರೇಶ್ವರಲಿಂಗವಾದ.
ಆತನ ಪಾದದಲ್ಲಿ ಶೂದ್ರ ಹುಟ್ಟಿದ.
ಅವರ ಅಂಗದಲ್ಲಿ ಪ್ರಾಣಲಿಂಗವಾದ ಶಿಖೆಯಲ್ಲಿ ವಿಷ್ಣುಲಿಂಗವಾದ,
ಮನೆಯಲ್ಲಿ ನೀಲವರ್ಣದ ಕಲ್ಲಿನಾಥಲಿಂಗವಾದ.
ಇಂತೀ ನಾಲ್ಕುವರ್ಣ ಹದಿನೆಂಟುಜಾತಿ ನೂರೊಂದು ಕುಲದವರು
ಅಂತರಂಗದ ಒಳಹೊರಗೆ
ಹರಿಹರ ಬ್ರಹ್ಮಾದಿಗಳು ಪೂಜೆಗೊಂಬುವ ದೇವರು
ತಾವೆ ಆದರು, ಪೂಜೆ ಮಾಡುವ ಭಕ್ತರು ತಾವೆ ಆದರು.
ಅದು ಎಂತೆಂದರೆ : ನಿಮ್ಮ ತಾಯಿಗರ್ಭದಲ್ಲಿ ಶುಕ್ಲ ಶೋಣಿತಗಳು ಎರಡು ಕೂಡಿ
ಅಕ್ಷಮೂರ್ತಿಯಾದ.
ಆತ್ಮದೊಳಗೆ ಒಂಕಾರ ಪರಬ್ರಹ್ಮವೆಂಬ
.....(ಒಂದು ಹಾಳೆ ಕಳೆದಿದೆ)
ನರರು ಸುರರು ತೆತ್ತೀಸಕೋಟಿ ದೇವತೆಗಳಿಗೆಲ್ಲ
ಪೂಜೆ ಮಾಡುವ ಲಿಂಗ ಒಂದೆಯೆಂದು ಇಕ್ಕುವೆನು ಮುಂಡಿಗೆಯ.
ಇದನೆತ್ತುವರುಂಟೇನು,
ದೇವಧ್ವಜ ಮೃತ್ಯುಂಜಯನ ಭಾವದೊಲ್ಲಭ ಮುದ್ದನೂರೇಶಾ ?
ಗ್ರಂಥಋಣ: ಸಮಗ್ರ ವಚನ ಸಂಪುಟಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು
-##: ಈ ಚಿಹ್ನೆಯು ವಚನಕಾರನ ಹೆಸರು ಅಜ್ಞಾತವೆಂಬುದನ್ನು ಸೂಚಿಸುತ್ತದೆ.
*