ಇತರ ಶರಣರ ವಚನಗಳು
ಅಖಂಡ ಮಂಡಲೇಶ್ವರ ##
1215
ಕೊಲಲಾರದೆಯೆ
ಹಿಂದೆ ಬಂದುದನರಿದುದಿಲ್ಲಾಗಿ,
ಮುಂದೆ ಬಾಹದಕೆ ನೀ ಚಿಂತಿಸಲೇಕೆ ?
ಇಂದಿಗೆಂಬುದು ಲಿಂಗದೊಲವು.
ಶಿವಶರಣಂಗೆ ನಾಳೆ ಇಂದು ಎಂಬ ಅಭಾವವಿಲ್ಲ.
ಕಡುಗಲಿಯಾದ ಶರಣ ರಕ್ಷೆಯ ಕಾಯವೇನಯ್ಯಾ,
ಅಖಂಡ ಮಂಡಲೇಶ್ವರಾ.
ಅನುಗಲೇಶ್ವರ ##
1216
ಕಾಡೊಡೊಯರು ಊರಿಗೆ ಬಂದು ಬೇಡಾಡಿದಡೆ,
ಊರೊಳಗಣವರೆಲ್ಲ ಎದ್ದು ಕಾಡಿಗಟ್ಟಿ,
ಕಮ್ಮರಿಗಿಡು ಮಾಡಲು,
ನಾ ಸುಮ್ಮನೆ ಮೌನಿಯಾಗಿದೆನಯ್ಯಾ,
ಅನುಗಲೇಶ್ವರಾ.
ಅಪ್ಪಿದೇವಯ್ಯ
313
ಹೊನ್ನು ಹೆಣ್ಣು ಮಣ್ಣು ಬಿಡಿಸದ ಗುರುವಿನ ಉಪದೇಶವನೊಲ್ಲೆ,
ರೋಷ ಹರುಷವ ಕೆಡಿಸದ ಲಿಂಗವ ಪೂಜಿಸೆ,
ತಾಮಸಭ್ರಮೆಯನಳಿಯದ ಜಂಗಮಕ್ಕೆ ದಾಸೋಹವ ಮಾಡೆ,
ಪರಮಾನಂದವಲ್ಲದ ಪಾದೋದಕವ ಕೊಳ್ಳೆ,
ಪರಿಣಾಮವಲ್ಲದ ಪ್ರಸಾದವನುಣ್ಣೆ,
ಆನೆಂಬುದನಳಿಯದ ಈಶ್ವರೀಯ ವರದ ಮಹಾಲಿಂಗನನೇನೆಂದೆಂಬೆ!
ಅಪ್ರಮಾಣ ಗುಹೇಶ್ವರ ##
1217
ಎಡಕಲ ಕಡಿದು, ಮಡಕೆಗಿಂಬಾಗಿ,
ಸೊಣಗದಡಗ ತಿಂಬ ಈ ಸರದಿಗರಿಗೇಕೆ,
ಜಗದಯ್ಯನ ಬಿಂಕದಂಕ,
ಅಪ್ರಮಾಣ ಗುಹೇಶ್ವರಾ ?
ಅಶ್ವಥರಾಮ
##
1218
ಅಂಗವೇ ಆಧಾರ, ಲಿಂಗವೆ ಜೀವ.
ಈ ಅಂಗಲಿಂಗದಿಂದವೆ ಸ್ವರ.
ಲಿಂಗವು ಮಹಾಬೇಳಗಾಗಲಿಕ್ಕಾಗಿ,
ಅಶ್ವಥರಾಮ ಹಗಲು ಬಯಲು.
ಆನಂದಯ್ಯ
1162
ಪಾಷಾಣವ ಹಿಡಿದು ಮಾರಿಯ ಸಂಗವ ಮಾಡುವಿರಿ,
ಘಾಸಿಯಾಗಿ ಜನ್ಮಜನ್ಮಕ್ಕೆ [ಬ]ಹಿರಿ.
ಈಶನ ಕಂಡೆನೆಂಬುದು ಅಳಿಯಾಸೆ.
ಈ ದೋಷಿಗಳಿಗೆ ಆನಂದಸಿಂಧು ರಾಮೇಶ್ವರ ಹೇಸುವ.
1163
ರೇತ ರಕ್ತವು ಕೂಡಿದ ಒಡಲು
ಭೂತವಿಕಾರದಿಂದ ಚಲಿಸುತ್ತಿಹುದು,
ಕೀಳುದೊತ್ತಿನ ಕೈಯಲಳಿವುದು.
ಇದರ ತೂಳವ ಬಿಟ್ಟಡೆ
ಆನಂದಸಿಂಧು ರಾಮೇಶ್ವರಲಿಂಗದ ನಿಜಪದವಪ್ಪುದು ಕಾಣಿರೇ.
ಈಶ್ವರೀಯ ವರದ ಚೆನ್ನರಾಮ ##
1221
ರಾಶಿಹೊನ್ನು ಸಾಸಿರಕನ್ಯೆಯೇಸಿಕೆ ರಾಜ್ಯವಾದಡೂ
ಈ ಶರೀರವಳಿವುದೆ ದಿಟ !
ಇದರಾಸೆಯ ನೀಗಾಡಿ,
ಈಶ್ವರೀಯ ವರದ ಚೆನ್ನರಾಮನೆಂಬ ಲಿಂಗವನಾಸೆಗೆಯ್ದಡೆ,
ಮುಂದೆ ಲೇಸಪ್ಪುದು ಕಾಣಿರಣ್ಣಾ.
ಎಡೆಮಠದ ನಾಗಿದೇವಯ್ಯಗಳ ಪುಣ್ಯಸ್ತ್ರೀ ಮಸಣಮ್ಮ
742
ಕಾಗೆಯ ನಾಯ ತಿಂದವರಿಲ್ಲದ
ವ್ರತಭ್ರಷ್ಟನ ಕೂಡಿದವರಿಲ್ಲ.
ನಾಯಿಗೆ ನಾರಂಗವಕ್ಕುವುದೆ ?
ಲೋಕದ ನರಂಗೆ ವ್ರತವಕ್ಕುವುದೆ ಶಿವಬೀಜಕಲ್ಲದೆ ?
ನೀವೇ ಸಾಕ್ಷಿ ನಿಜಗುಣೇಶ್ವರಲಿಂಗದಲ್ಲಿ.
ಎಲೆಗಾರ ಕಾಮಣ್ಣ
1651
ಎಲೆ ಮಿಗಲು ಆರು ತಿಂಗಳಿರುವುದು.
ವ್ರತ ಹೋಗಲು ಆ ಕ್ಷಣ, ಭ್ರಷ್ಟನೆಂದು ಕೂಡರು.
ಎಲೆ ಹಳದಾದಡೆ ಶಿವಂಗರ್ಪಿತ.
ವ್ರತನಷ್ಟವಾಗಲಾಕ್ಷಣ ಮರಣವಯ್ಯಾ
ಆತುರೇಶ್ವರಲಿಂಗವೆ.
ಏಕಾಂತ ವೀರಸೊಡ್ಡಳ ##
1222
ಲೋಕಾಂತವಳಿದು ಏಕಾಂತ ಉಳಿದಲ್ಲಿ
ಏಕೈಕಮೂರ್ತಿಯ ಸಂಗ ಸಮನಿಸಿತ್ತೆನಗೆ.
ಎನ್ನ ನುಡಿ ಆತನ ಕಿವಿಗೆ ಇನಿದಾಯಿತ್ತು.
ಆತನ ನುಡಿ ಎನ್ನ ಕಿವಿಗೆ ಇನಿದಾಯಿತ್ತು.
ಇಬ್ಬರ ನುಡಿಯೂ ಒಂದೇಯಾಗಿ ನಿಶ್ಯಬ್ದ ವೇಧಿಸಿತ್ತು.
ಈ ಸುಖದ ಸೋಂಕಿನ ಪುಣ್ಯದ ಫಲದಿಂದ
ಅನುಪಮಚರಿತ್ರ ಪ್ರಭುದೇವರ ನಿಲವ ಕಂಡು,
ನಾನು ಧನ್ಯನಾದೆನು ಕಾಣಾ, ಏಕಾಂತ ವೀರಸೊಡ್ಡಳಾ.
1223
ಬಂದ ಬಟ್ಟೆಯ ಹೊದ್ದದಾತ ಲಿಂಗೈಕ್ಯನು.
ಹಿಂದು ಮುಂದರತು, ಸಂದೇಹವಿಲ್ಲದಾತ ಲಿಂಗೈಕ್ಯನು.
ಶ್ರೀಗುರು ಏಕಾಂತ ವೀರಸೊಡ್ಡಳನ್ನಲ್ಲಿ
ತನ್ನ ತಾ ಮರೆದಾತ ಲಿಂಗೈಕ್ಯನು.
ಏಕೋರಾಮೇಶ್ವರ ಲಿಂಗ ##
1224
ತಾನು ಸುಖಿಯಾದಡೆ ತನ್ನ ಲಿಂಗಮೆಚ್ಚ ನಡೆವುದು.
ತಾನು ಸುಖಿಯಾದಡೆ ತನ್ನ ಲಿಂಗಮೆಚ್ಚ ನುಡಿವುದು.
ನಿಂದೆ ಬೇಡ, ಪರನಿಂದೆ ಬೇಡ.
ಅವರಾದಡೇನು ? ಹೋದಡೇನು ?
ತಾನು ಸುಖಿಯಾದಡೆ ಸಾಕು.
ಏಕೋರಾಮೇಶ್ವರಲಿಂಗದ ನಿಜವನರಿದಡೆ,
ಬೀಗಿ ಬೆಳೆದ ರಾಜಾನ್ನದ ತೆನೆಯಂತಿರಬೇಕು, ಶರಣ.
ಕದಿರಕಾಯಕದ ಕಾಳವ್ವೆ
743
ಕದಿರು ಮುರಿಯೆ ಏನೂ ಇಲ್ಲ.
ವ್ರತಹೀನನ ನೆರೆಯಲಿಲ್ಲ, ಗುಮ್ಮೇಶ್ವರಾ.
ಕನ್ನಡಿಕಾಯಕದ ರೇಮಮ್ಮ
748
ಕೈಯಲ್ಲಿ ಕನ್ನಡಿಯಿರಲು ತನ್ನ ತಾ ನೋಡಬಾರದೆ ?
ಲಿಂಗಜಂಗಮದ ಪ್ರಸಾದಕ್ಕೆ ತಪ್ಪಿದಲ್ಲಿ ಕೊಲ್ಲಬಾರದೆ ?
ಕೊಂದಡೆ ಮುಕ್ತಿಯಿಲ್ಲವೆಂಬವರ ಬಾಯಲ್ಲಿ
ಪಡಿಹಾರನ ಪಾದರಕ್ಷೆಯನಿಕ್ಕುವೆ.
ಮುಂಡಿಗೆಯನೆತ್ತಿರೊ ಭ್ರಷ್ಟ ಭವಿಗಳಿರಾ ?
ಎತ್ತಲಾರದಡೆ ಸತ್ತ ಕುನ್ನಿನಾಯ ಬಾಲವ
ನಾಲಗೆ ಮುರುಟಿರೋ ಸದ್ಗುರುಸಂಗ ನಿರಂಗಲಿಂಗದಲ್ಲಿ.
ಕಲ್ಲಯ್ಯದೇವರು ##
1225
ಹೇಳಿಹೆ ಕೇಳಾ ಬಸವಣ್ಣಾ,
ನಿನಗೊಂದು ಮಾತಿನ ಹೊಲ್ಲೆಹ ಹೊದ್ದಿಹಿತೆಂದು.
ಶಿವರಸವೆಂಬ ಮಡುವಿನಲ್ಲಿ ಒಗೆದೆ ನಾನು.
ಈರೇಳು ಭುವನವರಿಯಲು ಒಂದು ಲಚ್ಚಣವನಿಕ್ಕಿದೆ, ನಾನು.
ಕಲ್ಲಯ್ಯದೇವರು ಸಾಕ್ಷಿಯಾಗಿ
ಆಚಾರವನೆ ಗಳಿಸಿದೆ, ಅನಾಚಾರವನೆ ಘಟ್ಟಿಸಿದೆ ಕಾಣಾ,
ಸಂಗನಬಸವಣ್ಣಾ.
ಕಾಟಕೂಟಯ್ಯಗಳ ಪುಣ್ಯಸ್ತ್ರೀ ರೇಚವ್ವೆ
749
ಬಂಜೆಯಾವಿಂಗೆ ಕ್ಷೀರವುಂಟೆ ?
ವ್ರತಹೀನನ ಬೆರೆಯಲುಂಟೆ ?
ನೀ ಬೆರೆದಡೂ ಬೆರೆ; ನಾನೊಲ್ಲೆ ನಿಜಶಾಂತೇಶ್ವರಾ.
ಬಂಜೆಯಾವಿಂಗೆ ಕ್ಷೀರವುಂಟೆ ?
ವ್ರತಹೀನನ ಬೆರೆಯಲುಂಟೆ ?
ನೀ ಬೆರೆದಡೂ ಬೆರೆದ ನಾನೊಲ್ಲೆ ನಿಜಶಾಂತೇಶ್ವರಾ.
ಕಾಲಕಣ್ಣಿಯ ಕಾಮಮ್ಮ
750
ಎನ್ನ ಕರಣಂಗಳ ಲಿಂಗದಲ್ಲಿ ಕಟ್ಟುವೆ
ಗುರುಲಿಂಗಜಂಗಮದ ಕಾಲ ಕಟ್ಟುವೆ
ವ್ರತಭ್ರಷ್ಟರ ನಿಟ್ಟೊರಸುವೆ, ಸುಟ್ಟು ತುರುತುರನೆ ತೂರುವೆ,
ನಿರ್ಭಿತ ನಿಜಲಿಂಗದಲ್ಲಿ ?
ಕುರಂಗಲಿಂಗ ##
1226
[ಕ]ಟ್ಟಕಡೆಯ ಕಟ್ಟಲು ಬಲಿವುದೆ ?
ವ್ರತ ಹೋದಲ್ಲಿ ವ್ರತ ಒಪ್ಪುವದೆ?
ಕೆಟ್ಟ ಕಣ್ಣಿಂಗೆ ದೃಷ್ಟಿಯುಂಟೆ,
ಭವಹರ ಕುರಂಗೇಶ್ವರಲಿಂಗಾ ?
1227
ಪ್ರಸಾದವೆಂದು ಭಾವಿಸಿ, ಕಳಂಕದೋರಿದಡೆ
ಪಂಚಮಹಾಪಾತಕ.
ಪದಾರ್ಥವೆಂದು ಪ್ರಮಾಣಿಸಿ, ಹಿಮ್ಮೆಟ್ಟಿದಡೆ
ಭಕ್ತದ್ರೊಹ.
ಈ ಎರಡರ ಸಂದಿನಲ್ಲಿ
ಸಂದೇಹಕ್ಕೊಳಗಾದವರನೆನಗೆ ತೋರದಿರಯ್ಯಾ,
ಕುಂತಳಿಯ ವರಕುರಂಗಲಿಂಗವೆ.
ಕುರಂಗೇಶ್ವರಲಿಂಗ ##
1350
ಕಟ್ಟಕಡೆಯ ಕಟ್ಟಲು ಬಲಿವುದೆ ?
ವ್ರತ ಹೋದಲ್ಲಿ ವ್ರತ ಒಪ್ಪುವುದೆ ?
ಕೆಟ್ಟಕಣ್ಣಿಂಗೆ ದೃಷ್ಟಿಯುಂಟೆ ? ಭವಹರ ಕುರಂಗೇಶ್ವರಲಿಂಗಾ ?
ಕೊಂಡೆಮಂಚಣ್ಣಗಳ ಪುಣ್ಯಸ್ತ್ರೀ ಲಕ್ಷ್ಮಮ್ಮ
751
ಆಯುಷ್ಯತೀರಲು ಮರಣ
ವ್ರತ ತಪ್ಪಲು ಶರೀರ ಕಡೆ.
ಮೇಲುವ್ರತವೆಂಬ ತೂತರ ಮೆಚ್ಚ
ನಮ್ಮ ಅಗಜೇಶ್ವರಲಿಂಗವು.
ಕೊಟ್ಟಣದ ಸೋಮಮ್ಮ
752
ಹದತಪ್ಪಿ ಕುಟ್ಟಲು ನುಚ್ಚಲ್ಲದೆ ಅಕ್ಕಿಯಿಲ್ಲ.
ವ್ರತಹೀನನ ನೆರೆಯೆ ನರಕವಲ್ಲದೆ ಮುಕ್ತಿಯಿಲ್ಲ.
ಅರಿಯದುದು ಹೋಗಲಿ, ಅರಿದು ಬೆರೆದೆನಾದಡೆ,
ಕಾದ ಕತ್ತಿಯಲ್ಲಿ ಕಿವಿಯ ಕೊಯ್ವರಯ್ಯಾ.
ಒಲ್ಲೆ ಬಲ್ಲೆನಾಗಿ, ನಿಮ್ಮಾಣೆ ನಿರ್ಲಜ್ಜೇಶ್ವರಾ.
ಗಾರ್ಗೇಶ್ವರಲಿಂಗ ##
1228
ಮಂಡೆಯ ಬೋಳಿಸಿಕೊಂಡು,
ತೀರ್ಥಕ್ಷೇತ್ರ ಇಕ್ಕಿಯೆರವವರ ಕಾರುಣ್ಯವಾಗಿ
ಕಡು ಶಾಸ್ತ್ರಿಗನಾಗದೆ,
ಹಾರುವನಂತೆ ಲಂಡಕೊಂಡೆಯರ ಕಂಡು,
ಹೊಯಿಹೊಡದಂತಿಪ್ಪ ಶಿವಶರಣರು
ಒರಗಿದಡೆ ಒಲ್ಲರು, ಕಂಡಡರಿಯರು,
ಮಡಿಕೆಯಾಗಿ ಹೊದೆಯರು, ಉಡಿಗೆಯನುಡರು,
ತೊಡಿಗೆಯ ತೊಡರು, ಇಡಿಗೆಯನಿಡರು.
ಕಪ್ಪಕಂಬಳಿಯ ಹೊದ್ದು, ಕುಪ್ಪಸ ನಿಃಪತಿಯಾದ ಶರಣ,
ಗಾರ್ಗೆಶ್ವರಲಿಂಗವು ತಾನೇ ಪರಮ ವಿರತನಾದಿರವು.
ಗುಂಡಯ್ಯಗಳ ಪುಣ್ಯಸ್ತ್ರೀ ಕೇತಲದೇವಿ
772
ಹದ ಮಣ್ಣಲ್ಲದೆ ಮಡಕೆಯಾಗಲಾರದು.
ವ್ರತಹೀನನ ಬೆರೆಯಲಾಗದು.
ಬೆರೆದಡೆ ನರಕ ತಪ್ಪದು
ನಾನೊಲ್ಲೆ ಬಲ್ಲೆನಾಗಿ, ಕುಂಭೇಶ್ವರಾ.
773
ಲಿಂಗವಂತರ ಲಿಂಗಾಚಾರಿಗಳ ಅಂಗಳಕ್ಕೆ ಹೋಗಿ
ಲಿಂಗಾರ್ಪಿತವ ಮಾಡುವಲ್ಲಿ ಸಂದೇಹವಿಲ್ಲದಿರಬೇಕು.
ಅದೆಂತೆಂದಡೆ: 'ಬಿಕ್ಷಲಿಂಗಾರ್ಪಿತಂ ಗತ್ವಾ | ಭಕ್ತಸ್ಯ ಮಂದಿರಂ ತಥಾ |
ಜಾತಿ ಜನ್ಮ ರಜೋಚ್ಫಿಷ್ಟಂ | ಪ್ರೇತಸ್ಯ ವಿವರ್ಜಿತಃ || '
ಇಂತೆಂದುದಾಗಿ, ಕಾಣದುದನೆ ಚರಿಸದೆ, ಕಂಡುದನು ನುಡಿಯದೆ.
ಕಾಣದುದನು ಕಂಡುದನು ಒಂದೆಸಮವೆಂದು ಅರಿಯಬಲ್ಲರೆ
ಕುಂಭೇಶ್ವರಲಿಂಗವೆಂಬೆನು.
ಗುರುಭಕ್ತಯ್ಯ
390
ಅರ್ಪಿತವೆಂದಡೆ ಕಲ್ಪಿತವಾಯಿತ್ತು,
ಕಲ್ಪಿತವೆಂದಡೆ ಅರ್ಪಿತವಾಯಿತ್ತು.
ಅರ್ಪಿತವನು ಕಲ್ಪಿತವನು ಅದೆಂತರ್ಪಿತವೆಂಬೆ?
``ಶಿವಾತ್ಮಕ ಸುಖಂ ಜೀವೋ ಜೀವಾತ್ಮ ಚ ಸುಖಂ ಶಿವಃ|
ಶಿವಸ್ಯ ಜೀವಸ್ಯ ತುಷ್ಟಂ ಪ್ರಾಣಲಿಂಗಿಸ್ಥಲಂ ಭವೇತ್'
ಇಂತೆಂದುದಾಗಿ,
ಅರಿವರ್ಪಿತ ಮರಹು ಅನಾರ್ಪಿತ,
ಎನ್ನ ಸ್ವಾಮಿ ಘಂಟೇಶ್ವರಲಿಂಗಕ್ಕೆ.
ಗುರುವರದ ವಿರೂಪಾಕ್ಷ ##
1229
ಸಿರಿಯೆಂದಡೆಲ್ಲರೂ ಬರ್ಪರೈಸೆ.
ಉರಿಯೆಂದಡಾರೂ ನಿಲಲಾರರಯ್ಯಾ.
ಉರಿವುತಿದೆ ಲೋಕ ಗರಳದುರಿಯಿಂದ.
ತೆರಳುತಿದೆ ದೆಸೆದೆಸೆಗೆ ಸುರಾಸುರಾಳಿ.
ಹರಿವಿರಂಚಿಗಳು ಸಿರಿ ಸರಸ್ವತಿಯ ಕೈವಿಡಿದು
ಮರುಳುಗೊಂಡರು, ನಿಮ್ಮ ನಿಜವನರಿಯದೆ.
ಸಿರಿಯ ಭಕ್ತರಿಗಿತ್ತು, ಉರಿಯ ನೀ ಧರಿಸಿದೆ.
ಸರಿಯಾರು ನಿನಗೆ ಗುರುವರದ ವಿರೂಪಾಕ್ಷಾ !
ಚೆನ್ನರಾಮೇಶ್ವರಲಿಂಗ ##
1237
ವಚನಾರ್ಥವನರಿದು ನುಡಿದಿಹೆನೆಂದಡೆ,
ರಚನೆಯ ರಂಜನೆಗೆ ಒಳಗಾಯಿತ್ತು.
ತತ್ವವನಟ್ಟೈಸಿಹೆನೆಂದಡೆ
ಆತ್ಮಘಾತಕ ಭೂತಸಿದ್ಧಿಗೊಳಗಾಯಿತ್ತು.
ಸರ್ವವೂ ತಾನೆಂದರಿದವಗೆ ಸಂದೇಹಸೂತಕವಿಲ್ಲ.
ಅರಿವು ಆತ್ಮನಲ್ಲಿ ವೇದ್ಯವಾದವಗೆ
ಆ ಸರ್ವವೂ ಅಹುದಲ್ಲಾಯೆಂದು ನಿಂದ ಮತ್ತೆ
ಮಾಪರ್ೊಳಲನೇರಿದ ಧೀರನಂತಿರಬೇಡವೆ ಪರಮವಿರಕ್ತಿ.
ಲೋಲಿಯ......ದಂತೆ, ಜೋಲಿಯ ಕೀಲಿನಂತೆ
ಗ್ರಂಥಿಯ ಗಸಣದಂತಿಪ್ಪವರ ಕಂಡೆನಗೆ ಹೇಸಿಕೆಯಾಯಿತ್ತು.
ಪರತತ್ವಪ್ರಕಾಶ ಚೆನ್ನ ರಾಮೇಶ್ವರಲಿಂಗವನರಿವುದಕ್ಕೆ
ಅಹುದೋ, ಅಲ್ಲವೋ ಎನುತಿರ್ದೆನು.
ಜ್ಯೋತಿ ಸಿದ್ಧೇಶ್ವರ ##
1255
ಬತ್ತಿಗಟ್ಟಿದಡೆ ಜಡೆಯೆಂದೆಂಬರಯ್ಯಾ.
ಜಡೆಗಟ್ಟಿರದ ಬಿಳಲು ಕೊಡ...ವರಯ್ಯಾ.
ಬೋಳಾಗಿರಳೆ [ಗಂಡು]ವೇಶಿ.
ಕೋಣನ ಕೊಂಬಿಗೆ ಸುಣ್ಣವ ತೊಡೆದ ತೆರನಂತೆ
ಪರಾಪರ ವೇಷವನಳವಡಿಸಿದಡೇನು,
ಶಬರಜಾತಿ...ನೊದ್ದವಂಗಲ್ಲದೆ
ಸತ್ತ ಕೂದಲ ಹೊತ್ತುಕೊಂಡು,
ಊರ ಮುಂದೆ ಮುಂಡೆದೆಗೆದು,
ಸಂದಿಯಲ್ಲಿ ಕೆಡಹಿದೆಯಲ್ಲಾ , ಜ್ಯೋತಿಸಿದ್ಧೇಶ್ವರಾ.
ತುಂಬೆಯಾಚಲೆಯ ಮನಃಪ್ರಿಯ ಚೆನ್ನಬಂಕೇಶ್ವರ ##
1256
ದೇವ ಗೆದ್ದನು ದೇವ ಗೆದ್ದನು.
ಸಿರಿಯಾಳಂಗೆ ಸೋಲವಾಗದು, ಸೋಲವಾಗದು.
ಸರಿಯಾಯಿತ್ತು , ಸರಿಯಾಯಿತ್ತು .
ತುಂಬೆಯಾಚಲೆಯ ಮನಃಪ್ರಿಯ ಚೆನ್ನಬಂಕೇಶ್ವರನಲ್ಲಿ
ಚೀಲಾಳನವರ[ನು] ಕೊಂಡಾಡಿ, ಕೈಲಾಸವನಿವರು ಕೊಂಡಾಡರು.
ಸರಿಯಾಯಿತ್ತು , ಸರಿಯಾಯಿತ್ತು .
ತ್ರಿಲೋಚನ ಶಂಕರ ##
1264
ದಶಕರ ಶೂನ್ಯ ಪಂಚಕರ ಭಿಕ್ಷವ ಬೇಡಿ,
ಆನಂದದಲಾಡಿ, ಪಾಪಾಂಧಕ್ಷಯಮಂ ಮಾಡಿ,
ಅನುಶ್ರುತವೇರಿ, ಷಡುರುತಂ ಪೆರ್ಚಿ,
ಮಲಕುವಿಡಿದು, ವೀಥಿವೀಥಿಗೊಂಡು
ಪೋಗಿ ತೋರುವವರ ವಂಕಮಂ ಪೊಕ್ಕು,
ಆ ಉಭಯವತಿಯೆಂಬ ಶಂಕರಾನಂದರಸ ಉಕ್ಕುತ್ತಿದ್ದು ,
ಎಸಗೆ ಸಮನಿಸುಗೆ ನಯಸರವ ಕಿವಿಯಲಾಂತು,
ನಂದಿನಂದಿಯೆಂದಾನಂದದಿಂದುಂಡು, ಕೈಯ ಮಂಡೆಗೆ ಹತ್ತಿಸಿ,
ಮುಳ್ಳಕಲ್ಲು ಮುಂಜಾರಿನಲ್ಲಿರಿಸಿ, ಕರ ಹೇಸಿ,
ಏಳೂರವರು ಲಾಲಿಸಿ, ಕೇಳಲಮ್ಮದೆ ಬೆಚ್ಚುತ್ತ ಬೆದರುತ್ತ ಬಿದ್ದರು.
ಮುಚ್ಚುಮರೆಯ ಅಚ್ಚುಗವಿಕ್ಕು ಪ್ರ......
......ಯಲಳಿದ ಗುರು ಗೌರವಂ ತಂದಾರಾಧಿಸಿ,
ವಿರಾಜಿಸಿದ ಶಂಕರಾ
ಜಂಗಮ ಶಂಕರಾನಂದರಸನಯ್ಯಾ, ತ್ರಿಲೋಚನಶಂಕರಾ.
ನಾಚೇಶ್ವರ ##
1293
ಅರ್ಥಾಸನ ವ್ಯರ್ಥಾಸನ ಆಯಕಿಯಾಸನ
ನಷ್ಟಾಂಗಾಸನ ಭೂಮ್ಯಾಸನ ಕರಣನಾಶಾಸನ
ಇವು ಶರಣಂಗೆ ಸಲ್ಲದಿರಲು.
ಚೂರ್ಣದ ಕಹಿಯ ಬಿಡಿಸಿ,
ಈ ಮೂರಂಗಕ್ಕೆನ್ನ ಮುಪ್ಪುರಿಗೊಳಿಸಾ,
ನಾಚೇಶ್ವರಾ.
ನಿಃಕಳಂಕ ಚೆನ್ನಮಲ್ಲಿಕಾರ್ಜುನ ಪ್ರಭುವೆ ##
1294
ಮಾಯೆ ಮಹಾಸಂಚಲವೆಂಬ ಸುಳಿಗಾಳಿಯೊಳು ಸಿಕ್ಕಿದ ತರಗೆಲೆಯಂತೆ,
ತಳಹಳಗೊಳ್ಳುತ್ತಿದಿತೀ ಜಗವೆಲ್ಲವು ಎನಗಿನ್ನೆಂತೊ, ಎನಗಿನ್ನೆಂತಯ್ಯಾ.
ಬಲ್ಲೆನೆಂಬವರ ಬಾಯ ಟೊಣೆಯಿತ್ತು ಮಾಯೆ.
ಆಗಮಿಕರ ಮೂಗ ಕೊಯ್ಯಿತ್ತು ಮಾಯೆ.
ಅನುಭಾವಿಗಳೆಲ್ಲರೂ ಮನವಿಕಾರಕ್ಕೆ ಒಳಗಾದರು.
ಅರಿದೆನೆಂಬವರೆಲ್ಲರೂ ಮರಹಿಂಗೆ ಬೀಜವಾದರು.
ಬ್ರಹ್ಮಿಗಳೆಲ್ಲರೂ ಹಮ್ಮಿಂದ ಹಗರಣದ ಮರುಳಂಗಳಾದರು
ವಿರಕ್ತರೆಲ್ಲರೂ ಯುಕ್ತಿಗೆಟ್ಟು ಭವಮಾಲೆಗೊಳಗಾದರು.
ನಿರ್ವಾಣಿಗಳೆಲ್ಲರೂ ಸೆರೆಸಂಕಲೆಗೊಳಗಾದರು.
ಯೋಗಿಗಳೆಲ್ಲರೂ ವಿಕಳವೆಂಬ ರೋಗಕ್ಕೆ ಒಳಗಾದರು.
ತಪಸಿಗಳೆಲ್ಲರೂ ಕಪಟ ಕಳವಳಕ್ಕೊಳಗಾದರು.
ಧ್ಯಾನ ಮೌನ ವ್ರತ ನಿತ್ಯ ನೇಮ ಕರ್ಮ ಕ್ರಿಯೆಗಳು
ವಸ್ತುವ ಮರೆದು, ಮಾಯಾಧೂಳಿನೊಳಗೆ ಸಿಕ್ಕಿ ವಿಕಳತೆಗೊಂಡು,
ನೆನೆವ ಮನ, ವಾಸಿಸುವ ಘ್ರಾಣ, ನೋಡುವ ನೇತ್ರ,
ನುಡಿವ ನಾಲಗೆ, ನಡೆವ ಪಾದದ್ವಯಗಳೆಲ್ಲ ಭ್ರಮೆಗೊಳಗಾಯಿತ್ತಯ್ಯ.
ಶಿವಶಿವಾ ಮಹಾದೇವಾ, ಇದೆಲ್ಲಿಯ ಮಾರಿ ಬಂದಿತ್ತಯ್ಯ.
ಈ ಜಗವನೆತ್ತಿ ಕೊಂದು ಕೂಗುವ ಮಾರಿಯ ಗೆಲುವವರನಾರೊಬ್ಬರನೂ ಕಾಣೆ.
ಎನಗಿನ್ನೆಂತಯ್ಯ, ಎನಗಿನ್ನೆಂತಯ್ಯಾ ! ಭಕ್ತಿಜ್ಞಾನವೈರಾಗ್ಯವನಿತ್ತು ಸಲಹಯ್ಯಾ.
ಎನ್ನ ಕರಣಂಗಳಿಗೆ ಸಮಸ್ತ ಪ್ರಸಾದವನಿತ್ತು ಸಲಹಯ್ಯಾ,
ನಿಃಕಳಂಕ ಚೆನ್ನಮಲ್ಲಿಕಾರ್ಜುನಪ್ರಭುವೆ.
ನಿಃಕಳಂಕ ಚೆನ್ನಸೋಮೇಶ್ವರ ##
1295
ಬಟ್ಟಬಯಲೆಲ್ಲ ಗಟ್ಟಿಯಾದಡೆ
ಸ್ವರ್ಗಮರ್ತ್ಯಪಾತಾಳಕ್ಕೆ ಠಾವಿನ್ನೆಲ್ಲಿಯದೊ ?
ಕಷ್ಟವ ಮಾಡಲಾರದ ನರರುಗಳೆಲ್ಲ
ಸಂಸಾರವ ಬಿಟ್ಟಿವೆಂದು, ಮಂಡೆಗೆಲಸವ ಗೆಯಿಸಿದಡೆ
ಸುಜ್ಞಾನಿ ವಿರಕ್ತನಾಗಬಲ್ಲನೆ ? ಇದು ಕಾರಣ,
ಅಜ್ಞಾನವ ಮರೆದು, ಸುಜ್ಞಾನವ ತೋರುವುದೆ
ನಿಃಕಳಂಕ ಚೆನ್ನಸೋಮೇಶ್ವರ ತಾನೆ.
ನಿಜಮುಕ್ತಿ ರಾಮೇಶ್ವರ ##
1340
ತನುವಿಕಾರದಿಂದ ಸವೆದು ಸವೆದು,
ಮನವಿಕಾರದಿಂದ ನೊಂದು ಬೆಂದವರೆಲ್ಲ ಬೋಳಾಗಿ,
ದಿನ ಜವ್ವನಂಗಳು ಸವೆದು ಸವೆದು,
ಜಂತ್ರ ಮುರಿದು ಗತಿಗೆಟ್ಟವರೆಲ್ಲ ಬೋಳಾಗಿ,
ಮಂಡೆಯ ಬೋಳಿಸಿಕೊಂಡು ಬೋಳಾದ ಬಳಿಕ,
ಹೊನ್ನು ಹೆಣ್ಣು ಮಣ್ಣಿಗೆರಗದುದೆ ಬಾಳು.
ಸಕಲವಿಷಯದ ದಾಳಿಗೆ ಸಿಲುಕದುದೆ ಬಾಳು.
ಇದಲ್ಲದೆ ಗತಿಗೆಟ್ಟು, ಧಾತುಗೆಟ್ಟು, ವೃಥಾ ಬೋಳಾದ ಬಾಳು
ಲೋಕದ ಗೋಳಲ್ಲವೆ ಹೇಳು,
ನಿಜಮುಕ್ತಿ ರಾಮೇಶ್ವರಾ.
ನಿರಾಲಯ ನಿಜಗುರುಶಾಂತೇಶ್ವರ ##
1342
ಪರಿಪೂರ್ಣನಲ್ಲ, ಪ್ರದೇಶಿಕನಲ್ಲ.
ನಿರತಿಶಯದೊಳತಿಶಯ ತಾ ಮುನ್ನಲ್ಲ.
ಶರಣನಲ್ಲ, ಐಕ್ಯನಲ್ಲ.
ಪರಮನಲ್ಲ, ಜೀವನಲ್ಲ.
ನಿರವಯನಲ್ಲ, ಸಾವಯನಲ್ಲ.
ಪರ ಇಹವೆಂಬುಭಯದೊಳಿಲ್ಲದವನು.
ನಿರಾಲಯ ನಿಜಗುರುಶಾಂತೇಶ್ವರನ ಶರಣನ ನಿಲವು,
ಉಪಮೆಗೆ ತಾನನುಪಮ.
ನಿರಾಳಪ್ರಿಯ ಸೊಡ್ಡಳಯ್ಯ ##
1343
ಸರ್ವಸಂಗ ಪರಿತ್ಯಾಗವ ಮಾಡಿ,
ಅರಣ್ಯದಲ್ಲಿದ್ದರೆ ಮೃಗವೆಂಬರು.
ಊರಿಗೆ ಬಂದರೆ ಸಂಸಾರಿ ಎಂಬರು.
ಭೋಗಿಸಿದರೆ ಕಾಮಿ ಎಂಬರು.
ಹೆಣ್ಣ ಬಿಟ್ಟರೆ ಹೊನ್ನಿಲ್ ಎಂಬರು.
ಹೊನ್ನ ಬಿಟ್ಟರೆ ಮಣ್ಣಿಲ್ಲ ಎಂಬರು.
ಪುಣ್ಯವ ಬಿಟ್ಟರೆ ಪೂರ್ವದ ಕರ್ಮಿ ಎಂಬರು.
ಮಾತನಾಡದಿದ್ದರೆ ಮೂಗನೆಂಬರು.
ಸಹಜವ ನುಡಿದರೆ ಅಂಜುವನೆಂಬರು.
ಇದು ಕಾರಣ ನಿರಾಳಪ್ರಿಯ ಸೊಡ್ಡಳಯ್ಯ
ನಿಮ್ಮ ನನ್ನ ಮಚ್ಚು ಜಗಕ್ಕೊಂದಚ್ಚು.
ನಿರ್ಧನಪ್ರಿಯ ರಾಮೇಶ್ವರ ##
1341
ನಡಸು ದೇವಾ ಭಿಕ್ಷಾಯೆಂಬ ಶಬ್ದಕ್ಕೆ.
ಅಲ್ಲಿ ಹೋಗಿ ಭಿಕ್ಷಾ ಭಿಕ್ಷಾಯೆಂದಡೆ
ಆರೂ ನೀಡದಂತೆ ಮಾಡು.
ತಥಾಪಿಸಿ ನೀಡಿದಡೆ,
ಆ ನೀಡುವ ಹಂಚು ಎಡಹಿ ಒಡೆವಂತೆ ಮಾಡು,
ನಿರ್ಧನಪ್ರಿಯ ರಾಮೇಶ್ವರಾ.
ಪಂಡಿತಾರಾಧ್ಯ
1
ಇಲ್ಲದ ಕುತ್ತವ ಕೊಂಡು ಬಲ್ಲವರ ಬಾಯ ಹೊಗಹೋದಡೆ
ಆ ಬಲ್ಲ ಬಲ್ಲವರೆಲ್ಲ ಆ ಬಲ್ಲೆಯಲ್ಲಿ ಅಲ್ಲತ್ತಗೊಳುತ್ತಿದ್ದರು.
ಇದೆಲ್ಲಿಯ ಕುತ್ತವೆಂದು ತಿಳಿದು ವಿಚಾರಿಸಲು
ಅದಲ್ಲೇ ಬಯಲಾಯಿತ್ತು, ಗುರುಸಿದ್ಧಮಲ್ಲಾ
ಬತ್ತಲೇಶ್ವರನ ಪುಣ್ಯಸ್ತ್ರೀ ಗುಡ್ಡವ್ವೆ
1089
ತನು ಬತ್ತಲೆಯಾದಡೇನು, ಮನ ಬತ್ತಲೆಯಾಗದನ್ನಕ್ಕ ?
ವ್ರತವಿದ್ದಡೇನು, ವ್ರತಹಿನರಾದ ಬಳಿಕ ?
ನೆರೆದಡೆ ನರಕವಯ್ಯಾ ನಿಂಬೇಶ್ವರಾ.
ಬಸವಣ್ಣಪ್ರಿಯ ಧರ್ಮೇಶ್ವರ
##
1344
ಎನ್ನ ಕಾಯವ ಶುದ್ಧವ ಮಾಡಿದಾತ ಸಂಗನಬಸವಣ್ಣನು.
ಎನ್ನ ಜೀವನ ಶುದ್ಧವ ಮಾಡಿದಾತ ಚೆನ್ನಬಸವಣ್ಣನು.
ಎನ್ನ ಪ್ರಾಣವ ಶುದ್ಧವ ಮಾಡಿದಾತ ಮಡಿವಾಳಯ್ಯನು.
ಎನ್ನ ತನುವ ಶುದ್ಧವ ಮಾಡಿದಾತ ಮೋಳಿಗಯ್ಯನು.
ಎನ್ನ ಮನವ ಶುದ್ಧವ ಮಾಡಿದಾತ ಸಿದ್ಧರಾಮಯ್ಯನು.
ಎನ್ನ ಭಾವವ ಶುದ್ಧವ ಮಾಡಿದಾತ ಬಿಬ್ಬಿ ಬಾಚಯ್ಯನು.
ಎನ್ನ ಅಂತರಂಗವ ಶುದ್ಧವ ಮಾಡಿದಾತ ಚಂದಯ್ಯನು.
ಎನ್ನ ಬಹಿರಂಗವ ಶುದ್ಧವ ಮಾಡಿದಾತ ಕಿನ್ನರಿ ಬ್ರಹ್ಮಯ್ಯನು.
ಎನ್ನ ಸರ್ವಾಂಗವ ಶುದ್ಧವ ಮಾಡಿದಾತ ಪ್ರಭುದೇವರು.
ಬಸವಣ್ಣಪ್ರಿಯ ಧರ್ಮೇಶ್ವರಾ,
ನಿಮ್ಮ ಶರಣರೆನ್ನ ಪಾವನವ ಮಾಡಿದ ಪರಿಣಾಮವನು
ಅಂತಿಂತೆನಲ್ಲಮ್ಮದೆ ನಮೋ ನಮೋ ಎನುತಿರ್ನೆನಯ್ಯಾ.
ಬಾಚಿಕಾಯಕದ ಬಸವಯ್ಯಗಳ ಪುಣ್ಯಸ್ತ್ರೀ ಕಾಳವ್ವೆ
1090
ಕಾಯಕ ತಪ್ಪಿದಡೆ ಸೈರಿಸಬಾರದು
ವ್ರತ ತಪ್ಪಲೆಂತೂ ಸೈರಿಸಬಾರದು ಕರ್ಮಹರ ಕಾಳೇಶ್ವರಾ.
1091
ಕೈ ತಪ್ಪಿ ಕೆತ್ತಲು ಕಾಲಿಗೆ ಮೂಲ,
ಮಾತು ತಪ್ಪಿ ನುಡಿಯಲು ಬಾಯಿಗೆ ಮೂಲ,
ವ್ರತಹೀನನ ನೆರೆಯಲು ನರಕಕ್ಕೆ ಮೂಲ, ಕರ್ಮಹರ ಕಾಳೇಶ್ವರಾ.
ಬೊಮ್ಮಗೊಂಡೇಶ್ವರ
921
ಶ್ರೀಗುರು ವೀರಸಂಗಮನ ಬಣ್ಣಿಸುವುದೆಂತು ಸಾಧ್ಯವೋ ?
ಸೂಳೆಯ ಮನೆಯಲ್ಲುಂಡು ಅವಳ ದೀಕ್ಷೆಯಗೈದು
ಶಿವಶರಣೆಯನ್ನಾಗಿ ಮಾಡಿದ ;
ಕಾಟುಗನ ಮನೆಯಲ್ಲುಂಡು
ಅವನ ಜಂಗಮದಾಸೋಹಿಯಾಗಿ ಮಾಡಿದ ;
ವೈರಿ ಭಾಸ್ಕರಂಗೆ ಲಿಂಗದೀಕ್ಷೆಯ ತೆತ್ತು
ಮೈದುನನನ್ನಾಗಿ ಮಾಡಿಕೊಂಡ ;
ಮೃತಪಟ್ಟವಂಗೆ ಮರಳಿ ಪ್ರಾಣವ ತೆತ್ತ
ಪರುಷದ ಪುತ್ಥಳಿ ಪತಿತ ಪಾವನಮೂರ್ತಿ
ಶ್ರೀಗುರು ವೀರಸಂಗಯ್ಯನ ಶ್ರೀಪಾದಕ್ಕೆ
ನಮೋ ನಮೋ ಎಂದು ಬದುಕಿದೆನು ಬಸವಣ್ಣ.
ಭಿಕಾರಿಭೀಮಯ್ಯ
414
ಕಾಳಗವೆಂಬ ಕಟ್ಟಿದಿರಾದಡೆ,
ಸೋಂಕಿದಡೆ ಬಿಡೆ, ಕರೆದರೆಂದು ಬಿಡೆ.
ವ್ರತ ಹೋದವರು ಸುಳಿಯದಿರಿ.
ಕಂಡಡೆ ಕೊಲುವ ಬಿರಿದು, ಭಿಕಾರಿ ಭೀಮೇಶ್ವರಲಿಂಗವೆ.
415
ಭಿಕಾರಿ ಭಿಕಾರಕ್ಕೆಳಸ.
ಉಣ್ಣಲು ಉಡಲು ಕಾಣದಾತ ಭಿಕಾರಿ.
ತನು ಮೀಸಲು, ಮನ ಮೀಸಲು,
ಬಾಯಿ ಬೋರು ಬೋರು.
ಮರಣವಳಿದುಳಿದಾತ ಬಿಕಾರಿ.
ಸಂಚಲದ ಪಂಚಕರಣಗಳ ತೆಗೆದುಂಡು,
ರುಂಡಮಾಲೆಯ ರಣಮಾಲೆಯ
ಹೆಣಮಾಲೆಯ ಚಾರುಚ್ಚಿದಲ್ಲದೆ
ಭಿಕಾರಿ ಭೀಮೇಶ್ವರಲಿಂಗಕ್ಕೆ ದೂರ ಕಾಣಾ,
ಕರುತಿರುವ ಗೊರವಾ
ಮರುಳಸಿದ್ಧೇಶ್ವರ
1126
ಆಲಿ ಆಲಯದಲ್ಲಿ ಕರಿಗೊಳಲು,
ಆಲಿಸುವ ಶ್ರವಣವು ಮೇಲಿಪ್ಪ ಆಕಾಶವನಡರಲು,
ಉಲುಹು ನಿರ್ಭೂತಚಿತ್ತ ಸಮಾಧಾನವನೆಯ್ದಲು,
ಕಾಲಕರ್ಮಭವಂಗಳ ಗೆಲುವುದಿದೇನು ಸೋಜಿಗವು ಹೇಳಾ, ರೇವಣ್ಣಪ್ರಭುವೆ.
ಮರ್ಕಟೇಶ್ವರ ##
1346
ಹೇಮ ಕಾಮಿನಿ ಭೂಮಿ ಜೀವರಾಧಾರ,
ಜೀವರ ಪ್ರಾಣ, ಜೀವರ ಸಿಕ್ಕು ತೊಡಲು.
ಇಹಪರದೊಳಗೆ ಜಂಘೆಯ ಬಿಟ್ಟು,
ಲಂಘಿಸಿ ನಿಂದಾತನೆ ವಿರತಿ ಸಮಗ್ರ ಕಾಣಾ,
ಮರ್ಕಟೇಶ್ವರಾ.
ಮಳುಬಾವಿಯ ಸೋಮಣ್ಣ
1154
ಆಗಿಲ್ಲದ ಸಿರಿ, ಆಯುಷ್ಯವಿಲ್ಲದ ಬದುಕು.
ಸುಖವಿಲ್ಲದ ಸಂಸಾರ.
ಎಳತಟೆಗೊಂಬ ಕಾಯದ ಸಂಗ.
ಬಳಲಿಸುವ ಜೀವಭಾವ.
ಇವರ ಕಳವಳವಳಿದಲ್ಲದೆ
ಮಳುಬಾವಿಯ ಸೋಮನ ತಿಳಿಯಬಾರದು.
ಮಸಣಯ್ಯಪ್ರಿಯ ಮಾರೇಶ್ವರಲಿಂಗ ##
1351
ಅಯ್ಯಾ, ಅಸ್ಥಿ ಚರ್ಮ ಮಾಂಸ ಶುಕ್ಲ ಶೋಣಿತದ ಗುಡಿಯ ಕಟ್ಟಿ,
ಹಂದಿಯ ದೇವರ ಮಾಡಿ ಕುಳ್ಳಿರಿಸಿ,
ಪಾದರಕ್ಷೆಯ ಪೂಜೆಯ ಮಾಡಿ
ನೈವೇದ್ಯವ ಹಿಡಿದು, ಮೂತ್ರದ ನೀರ ಕುಡಿಸಿ,
ಶ್ವಾನ ಕುಕ್ಕುಟನಂತೆ ಕೂಗಿ ಬೊಗುಳಿ,
ದಡದಡ ನೆಲಕ್ಕೆ ಬಿದ್ದು ಕಾಡಿ ಕೊಂಡು
ಆ ದೇವರ ಒಡೆಯ ಮಾರೇಶ್ವರ
ಕಂಡ ಹೆಂಡ ಕೊಡುವನಲ್ಲದೆ ಅನ್ನ ನೀರು ಕೊಡುವನೆ ?
ಆ ದೇವರಿಗೆ ಹೊಲೆಯರು ಮಚ್ಚುವರಲ್ಲದೆ,
ಉತ್ತಮರು ಮಚ್ಚರು ನೋಡಯ್ಯ, ಮಸಣಯ್ಯಪ್ರಿಯ ಮಾರೇಶ್ವರಲಿಂಗವೆ.
ಮಹಾಘನ ಪ್ರಸಿದ್ಧ ಪ್ರಸನ್ನ ಸಂಗಮೇಶ್ವರಲಿಂಗ
##
1347
ಅರಿವು ಆತ್ಮ ಪರಿಪೂರ್ಣದಿರವನವರಿವರಲ್ಲಿ
ಅರೈಕೆಗೊಳಲಿಯೇಕೆ?
ಮತಕ್ಕೆ ಕರಣ, ಮಥನಕ್ಕೆ ಕರಣ,
ಮಥನಕ್ಕೆ ಅನುಭವ ಮಥನ,
ಅನುಭವ ಮಥನಕ್ಕೆ ಆತ್ಮ ಮಥನವುಂಟೆ?
ಇಂತೀ ತ್ರಿವಿಧದರಿವಂ ತಿರಿದುದಕ್ಕೆ ಹೇಳಿಹೆನೆಂಬ
ಹೆಚ್ಚಿಗೆ ಕೇಳಿಹೆನೆಂಬ ನಿಶ್ಚಯ.
ಈ ಉಭಯಭಾವದಲ್ಲಿ ನಿಂದ ಪರಮವಿರಕ್ತರು ನೀವು ಕೇಳಿರಣ್ಣಾ.
ಅನು ಕೃತ್ಯವೆಂದನುಕರಿಸಿ ಪರತತ್ವವ ನುಡಿಯಲಿಲ್ಲ.
ಅನು ಭತ್ಯನೆಂದು ಅನುಸರಿಸಿ ಪರತತ್ವವ ಬೆಸಗೊಳಲಿಲ್ಲ.
ಈ ಉಭಯಸಂದೇಹ ಚಕ್ರದಂಡದಲ್ಲಿ ಸಿಲುಕಿದ
ಮರ್ಕಟನಂತಾಯಿತ್ತು.
ಮಹಾಘನ ಪ್ರಸಿದ್ಧ ಪ್ರಸನ್ನ ಸಂಗಮೇಶ್ವರಲಿಂಗದಲ್ಲಿ
ಚಕ್ರಪ್ರಸನ್ನ ಚೆನ್ನಬಸವಣ್ಣ.
ಮಹಾದೇವೀರಯ್ಯ
1153
ಜಾತಿ ಶೈವರು ಅಜಾತಿ ಶೈವರೆಂದು
ಎರಡು ಪ್ರಕಾರವಾಗಿಹರಯ್ಯಾ.
ಜಾತಿ ಶೈವರೆಂಬವರು ಶಿವಂಗೆ ಭೋಗಸ್ತ್ರೀಯರಯ್ಯಾ.
ಅಜಾತಿ ಶೈವರೆಂಬವರು ಶಿವಂಗೆ ಕುಲಸ್ತ್ರೀಯರಯ್ಯಾ.
ಜಾತಿ ಶೈವರೆಂಬವರು ಸರ್ವಭೋಗಂಗಳ ಬಯಸಿ ಮಾಡುವರಾಗಿ,
ದ್ವಾರೇ ಯಸ್ಸ ಚ ಮಾತಂಗೋ ವಾಯುವೇಗ ತುರಂಗಮಃ |
ಪೂರ್ಣೆಂದು ವದನಾ ನಾರೀ ಶಿವಪೂಜಾ ವಿಧೇಃ ಫಲಂಃ ||
ಎಂದುದಾಗಿ, ಇವು ಜಾತಿಶೈವರಿಗೆ ಕೊಟ್ಟ ಭೋಗಂಗಳಯ್ಯಾ.
ಅಜಾತಿಶೈವರು ಗುರುಲಿಂಗಜಂಗಮಕ್ಕೆ ತನುಮನಧನವ ನಿವೇದಿಸಿ,
ಸರ್ವಸೂತಕರಹಿತರಾಗಿಹರಯ್ಯಾ.
ಅಹಂ ಮಾಹೇಶ್ವರ ಪ್ರಾಣೇ ಮಾಹೇಶ್ವರೋ ಮಮ ಪ್ರಾಣಃ |
ತಥೈಕಂ ನಿಷ್ಕ್ರೀಯಂ ಭೂಯಾದನ್ಯಲ್ಲಿಂಗೈಕ್ಯಮೇವ ಚ ||
ಇದು ಕಾರಣ, ಸರ್ವೆಶ್ವರ ಚೆನ್ನಮಲ್ಲಿಕಾರ್ಜುನಯ್ಯನು
ಭಕ್ತಿಕಾಯನೆಂಬೈಕ್ಯಪದವನು ಅಜಾತಿಶೈವರಿಗೆ ಕೊಡುವನಯ್ಯಾ.
ಮಹಾಲಿಂಗ ವೀರರಾಮೇಶ್ವರ ##
1348
ಬಯಲೊಳೆರಗಿದ ಸಿಡಿಲಿನಂತಾಯಿತ್ತೆನ್ನ ಗುರುವಿನುಪದೇಶ.
ಮಿಂಚಿನ ಪ್ರಭೆಯ ಸಂಚದಂತಾಯಿತ್ತೆನ್ನ ಗುರುವಿನುಪದೇಶ.
ಸ್ಫಟಿಕದ ಘಟದೊಳಗಣ ಜ್ಯೋತಿಯಂತಾಯಿತ್ತೆನ್ನ ಗುರುವಿನುಪದೇಶ
ಮಹಾಲಿಂಗ ವೀರರಾಮೇಶ್ವರನಂತಾಯಿತ್ತೆನ್ನ
ಗುರುವಿನುಪದೇಶವೆನಗಯ್ಯಾ.
ಮಾರುಡಿಗೆಯ ನಾಚಯ್ಯ
1271
ತನು ಉಡುಗಿ ಮನ ಉಡುಗಿ ಧ[ನ ಉಡುಗಿ]
ನಾಚಿ ಮಾಡಬಲ್ಲಡೆ, ನಾಚನೆಂದೆಂಬೆ.
ನಾಚದೆ ಮಾಡುವ ನೀಚರು ನೀವು ಕೋಚಿಯಾಗದೆ,
ಯಾಚಕತನವ ಬಿಟ್ಟು ಆಚರಿಸಿ, ಅಗೋಚರನ ಗೋಚರಿಸಿ,
ನಿಷ್ಠಾನಿಷ್ಠೆಯಿಂ ವ್ಯವಹರಿಸಬೇಡ.
ಊಟವೊಂದಿಲ್ಲದೆ ಮಾರೂಟ ಕೋರೂಟವನುಣ್ಣೆ.
ಉಡಿಗೆವೊಂದಲ್ಲದೆ ಮಾರುಡಿಗೆ ಮೀರುಡೆಗೆಯನು[ಡೆ]
ಉಂಡುಟ್ಟೆನಾದಡೆ ಎನ್ನ ಹೊದ್ದಿದಾರುಸ್ಥಲದ ಧೂಳಣ್ಣಗಳು
ನಗುವರು ಕಾಣಾ, ಮಾರುಡಿಗೆಯ ನಾಚೇಶ್ವರಾ.
ರಾಯಸದ ಮಂಚಣ್ಣಗಳ ಪುಣ್ಯಸ್ತ್ರೀ ರಾಯಮ್ಮ
1204
ಗರುಡಿಯಲ್ಲಿ ಕೋಲಲ್ಲದೆ ಕಾಳಗದಲ್ಲಿ ಕೋಲುಂಟೆ ?
ಭವಿಗೆ ಮೇಲುವ್ರತ ಪುನರ್ದಿಕ್ಷೆಯಲ್ಲದೆ ಭಕ್ತಂಗುಂಟೆ ?
ವ್ರತ ತಪ್ಪಲು ಶರೀರವಿಡಿವ ನರಕಿಗೆ ಮುಕ್ತಿಯಿಲ್ಲ
ಅಮುಗೇಶ್ವರಲಿಂಗದಲ್ಲಿ.
ರೇಚದ ಬಂಕಣ್ಣ
19
ಶರಣ ತನ್ನ ಪ್ರಾರಬ್ಧಕರ್ಮ ತೀರಿದ ವಿಸ್ತಾರವನರಿದು,
ಪ್ರಕಾಶಿಸುತ್ತಿದ ಕಾರಣ,
ಶ್ವಾನ ಜಂಗಮರೂಪೆನಬೇಕಾಯಿತ್ತು.
ಗಜ ಮಲೆಯಿಂದ ಪುರದಲ್ಲಿಗೆ ಬಂದು, ಆ ಪುರದಲ್ಲಿ ಎಷ್ಟು ಸುಖವಾಗಿದ್ದರೂ
ಮಿಗೆಮಿಗೆ ತನ್ನ ಮತಿಯನೆ ನೆನೆವುತಿಪ್ಪುದು.
ಆ ಜಂಗಮ ಮೊದಲು ಪರಬ್ರಹ್ಮದಿಂದ ದೇಹವಿಡಿದನಾಗಿ,
ಆ ದೇಹದಲ್ಲಿ ಎಷ್ಟು ಸುಖವಾಗಿದ್ದರೆಯೂ
ಮಿಗೆಮಿಗೆ ಆ ಪರಬ್ರಹ್ಮವನೆ ನೆನೆವುತಿಹನು,
ಇದು ಕಾರಣ, ಶ್ವಾನ ಗಜ ಇವೆರಡೂ ಶರಣಂಗೆ
ಜಂಗಮಸ್ವರೂಪೆನಬೇಕಾಯಿತ್ತು.
ಮನವೆ ಮರ್ಕಟ, ಅರಿವೆ ಪಿಪೀಲಿಕ,
ಮಹಾಜ್ಞಾನವೆ ವಿಹಂಗ, ನಿತ್ಯ ಎಚ್ಚರವೆ ಕುಕ್ಕುಟ,
ತನ್ನ ತಾನರಿವುದೆ ಶ್ವಾನ, ತನ್ನ ಬುದ್ಧಿಯೆ ಗಜ.
ಇಂತೀ ಷಡ್ವಿಧವ ಬಲ್ಲಾತನೆ ಬ್ರಹ್ಮಜ್ಞಾನಿ.
ನಿಮ್ಮಾಣೆ, ನಿಮ್ಮ ಪ್ರಮಥರಾಣೆ,
ಗೊಹೇಶ್ವರಪ್ರಿಯ ಬಂಕಣ್ಣ ನಿಟ್ಟ ಮುಂಡಿಗೆಯನೆತ್ತುವರಿಲ್ಲ,
ಬಸವಪ್ರಿಯ ಮಹಾಪ್ರಭುವೆ.
ರೇವಣಸಿದ್ಧಯ್ಯಗಳ ಪುಣ್ಯಸ್ತ್ರೀ ರೇಕಮ್ಮ
1205
ಲಿಂಗಬಾಹ್ಯನ, ಆಚಾರಭ್ರಷ್ಟನ, ವ್ರತತಪ್ಪುಕನ,
ಗುರುಲಿಂಗಜಂಗಮವ ಕೊಂದವನ,
ಪಾದೋದಕ ಪ್ರಸಾದ ದೂಷಕನ,
ವಿಭೂತಿ ರುದ್ರಾಕ್ಷಿ ನಿಂದಕನ ಕಂಡಡೆ,
ಶಕ್ತಿಯುಳ್ಳಡೆ ಸಂಹಾರವ ಮಾಡುವುದು.
ಶಕ್ತಿಯಿಲ್ಲದಿದ್ದಡೆ ಕಣ್ಣು ಕರ್ಣವ ಮುಚ್ಚಿಕೊಂಡು
ಶಿವಮಂತ್ರ ಜಪಿಸುವುದು.
ಅಷ್ಟೂ ಆಗದಿದ್ದಡೆ, ಆ ಸ್ಥಳವ ಬಿಡುವುದು.
ಅದಲ್ಲದಿದ್ದಡೆ, ಕುಂಬಿಪಾತಕ ನಾಯಕನರಕದಲ್ಲಿಕ್ಕುವ
ಶ್ರೀಗುರುಸಿದ್ಧೇಶ್ವರನು.
ಲದ್ದೆಯ ಸೋಮಯ್ಯ
20
ಆವ ಕಾಯಕವಾದಡೂ ಸ್ವಕಾಯಕವ ಮಾಡಿ
ಗುರು ಲಿಂಗ ಜಂಗಮದ ಮುಂದಿಟ್ಟು,
ಒಕ್ಕುದ ಹಾರೈಸಿ, ಮಿಕ್ಕುದ ಕೈಕೊಂಡು
ವ್ಯಾಧಿ ಬಂದಡೆ ನರಳು, ಬೇನೆ ಬಂದಡೆ ಒರಲು,
ಜೀವ ಹೋದಡೆ ಸಾಯಿ, ಇದಕ್ಕಾ ದೇವರ ಹಂಗೇಕೆ, ಭಾಪು ಲದ್ದೆಯ ಸೋಮಾ ?
ವರದ ಸಂಕಣ್ಣ
85
ಓಡ ಹಿಡಿದವನ ಕೈ ಮಸಿಯೆಂಬುದ ನಾಡೆಲ್ಲ ಬಲ್ಲರು.
ಅವನ ಕೂಡೆ ಆಡಲಾಗದು ಅಯ್ಯಾ, ತನಗಾ ಮಸಿ ಹತ್ತೂದಾಗಿ.
ಲಿಂಗವಿರೋಧಿಯ ಕೈವಿಡಿದಾಡುವವ ಮುನ್ನವೆ ವ್ರತಗೇಡಿ.
ಅಂಥವನ ಸಂಗ ಬೇಡಯ್ಯಾ, ತನಗಾ ಭಂಗ ಬಂದುದಾಗಿ.
ಅದೆಂತೆಂದಡೆ : ಜಗದ ಕರ್ತ ಶಿವನ ವಿರೋಧವ ಮಾಡಿ ದಕ್ಷನೊಬ್ಬ ಯಾಗವನಿಕ್ಕಲು,
ತೆತ್ತೀಸಕೋಟಿದೇವರ್ಕಳೆಲ್ಲಾ ತೊತ್ತಳದುಳಿಸಿಕೊಂಡು,
ನುಚ್ಚುನುರಿಯಾಗಿ ಹೋದರು ನೋಡಾ, ಅವನಂಗ ಸಂಗದಲ್ಲಿದ ಕಾರಣ.
ಗೆಲ್ಲ ಸೋಲಕೆ ಇಕ್ಕು ಮುಂಡಿಗೆ, ಏರು ಮುಂಡಿಗೆಯೆಂಬ
ಮಚ್ಚರಕ್ಕೆ ಮುಂದುವಿಡಿದು ಮುಡುಹಿಕ್ಕಿ ಕೆಲದಾಡುವರೆಲ್ಲಾ.
ತಮ್ಮ ಮನದಲ್ಲಿ ತಾವರಿದು ಒಯ್ಯನೆ ತೊಲಗುವರು.
ಮೇಲೆ ಲಿಂಗ ನಿರೂಪದಿಂದ ಬಂದ ಕಾರ್ಯಕ್ಕೆ ಅಂಜರು, ಏಕಾಂಗವೀರರು.
ವಾಯದ ಹರೆಮಾತಿನ ಮಾಲೆಗೆ ಬೆದರಿ ಬೆಚ್ಚಿ ಓಡುವನಲ್ಲ,
ಏಕೋಭಾವ ನಿಷ್ಠೆ ನಿಬ್ಬೆರಗು ಗಟ್ಟಿಗೊಂಡ ದೃಢಚಿತ್ತವುಳ್ಳ ಸದ್ಭಕ್ತ.
ಇಂತಪ್ಪ ಉಲುಹಡಗಿದ ಶರಣರ ಸಂಗದಲ್ಲಿರಿಸಿ
ಬದುಕುವಂತಿರಿಸಯ್ಯಾ, ವರದ ಶಂಕರೇಶ್ವರಾ.
ವರದ ಸೋಮನಾಥ ##
1358
ಬಸವ ಜಗದಾದಿ ಬೀಜ, ಬಸವ ಆನತ ಸುರಭೂಜ.
ಬಸವ ಬಸವಾ ಎಂಬ ನಾಮಸಾಲದೆ?
ಬಸವ ಭವರೋಗ ವೈದ್ಯ, ಬಸವ ವೇದಾಂತ ವೇದ್ಯ.
ಬಸವ ಬಸವಾ ಎಂಬ ಲೀಲೆ ಸಾಲದೆ?
ಬಸವ ಕರುಣಾಮೃತ ಸಿಂಧು, ಬಸವ ಪರಮಬಂಧು,
ಬಸವ ವರದ ಸೋಮನಾಥ ನೀನೆ,
ಬಸವ ಬಸವಾ ಬಸವಾ ಶರಣೆಂದರೆ ಸಾಲದೆ?
ವೈದ್ಯನಾಥೇಶ್ವರ
##
1361
ಕಳ್ಳಿಯ ಹಾಲನೊಳ್ಳೆ ಹಾಲಿಗೆ ಸರಿಮಾಡಲರಿಯೆ?
ನಯನುಂಪನುಡುವವಳು....ಮಂತ್ರಾಂತ್ರಸರ
ಮಂತ್ರಾಂತ್ರಿಗೆ ಸರಿಯೆ?
ಮೂರೂಟವ ಕೊಂಡುಟ್ಟುಟ್ಟವರು ಹಾಳಾಗಿ
ಹೊದ್ದುಂಡವರಿಗೆ ಸರಿಯೆ?
ಬಿಟ್ಟಿ....ದೆನಾದಡೆ ನೀನೆನ್ನ ಗರಗರನೆ ಚಾಚಯ್ಯಾ,
ನಿರುವಿಗೆ ನಿಲುವೆಯ ವೈದ್ಯನಾಥೇಶ್ವರಾ.
ವೈನಿಪುರದ ಸಂಗಮೇಶ್ವರ
##
1360
ಮೆೃನವಾಗಿ ಜುಮದಟ್ಟಿ ಬಿಟ್ಟು,
ವಿವರವಾಗಿ ಪರಪರರ ಕಲಂಕವ ಕರಗಿಸಿ,
ಜ್ಞಾನಿಯಾಗಿ ಆರವೆಯನಾರೈಯದೆ ಆರೈಕೆಯಾಗಿ,
ಕೂಲಿಗೆ ಕೊಳಬಿಟ್ಟು, ಕೂಳಿಗೆ ಲೋಲ ಸೆರೆವಿಡಿದು,
ನಾಳೆಯ....ಗಂಟಲಗಾಣ ನಾನು ಕಾಣಾ,
ವೈನಿಪುರದ ಸಂಗಮೇಶ್ವರಾ.
ಶಂಭು ಮಾರೇಶ್ವರಾ
##
1362
ಎಲೆ ದೇವಾ ಏತಕ್ಕೆ ನುಡಿಯೆ? ಎನ್ನೊಳು ಮುನಿಸೆ?
ಎನ್ನೊಳು ನಿನ್ನಯ ಚಿತ್ತವನಿರಿಸಿ ನೀಕರಿಸಿ ನುಡಿಯದಿರ್ದಡೆ
ಎನ್ನಯ ನೋವನಿನ್ನಾರಿಗೆ ಹೇಳುವೆ, ನಿನಗಲ್ಲದೆ?
ನೀ ಮಾಡುವ ಮಾಟ ಅನೇಕ ಕುಟಿಲ.
ಯೋಗಿಗಳ ಸುತ್ತಿ ಮುತ್ತಿದ ಹರಿತದ ಪಾಶ ನಿಮ್ಮಲ್ಲಿ.
ಅನೇಕರ ಕೊಲುವ ಪಾಶ ಕೈಯಲ್ಲಿ, ಭವವೇಷವಂಗದಲ್ಲಿ.
ಭಕ್ತರ ಕೊಲುವ ದೋಷಕ್ಕೆ ಅಂಜಿದೆಯಾಗಿ, ನಿನಗದು ನೀತಿಯೆ?
ರುದ್ರನ ವೇಷಕ್ಕದು ಸಹಜ, ಅವ ಬಿಡು ಬಿಡು ನೀಕರಿಸು.
ಉಮಾಪತಿ ವೇಷವ ಬಿಟ್ಟು ಸ್ವಯಂಭುವಾಗು.
ಎಲೆ ಅಯ್ಯಾ, ಎನ್ನಲ್ಲಿ ಸದ್ಭಕ್ತಿಯ ನೆಲೆಗೊಳಿಸಿ,
ಎನ್ನ ಪ್ರಕೃತಿಯ ಪರಿಹರಿಸಯ್ಯಾ.
ಎನ್ನ ತಂದೆ, ಮುಕುರ ಪ್ರತಿಬಿಂಬದಂತೆ
ಎನಗೆ ನಿನಗೆಂಬುದ ನೀನರಿಯಾ?
ಎಲೆ ದೇವಾ, ಅರಿದರಿದೇಕೆನಗೆ ಕೃಪೆಯಾಗಲೊಲ್ಲೆ.
ಎಲೆ ಸ್ವಾಮಿ, ಆನು ಮಾಡಿದುದೇನು ನಿನಗೆ?
ಮಾರನ ಕೊಂದ ಮಲತ್ರಯದೂರನೆ,
ಅನಾಗತಸಂಸಿದ್ಧ ಭೋಗಮಯನೆ,
ನಯನ ಚರಣಾರವಿಂದ ವಿರಾಜಿತನೆ, ಸರ್ವವ್ಯಾಪಕ ನಾಶನೆ,
ಸರ್ವಾಂತರ್ಗತ ವಿಮಲಾಂತರಂಗನೆ, ಕರುಣಾಬ್ಧಿಚಂದ್ರ ವಿಲಾಸಿತನೆ,
ಭಕ್ತ ಚಿತ್ತದ ಸಾಕಾರದ ಪುಂಜನೆ,
ಭಕ್ತವತ್ಸಲನೆ, ಭಕ್ತದೇಹಿಕದೇವನೆ,
ಎನಗೆ ನಿಮ್ಮ ಭಕ್ತಿವಿಲಾಸವ ಕರುಣಿಸಯ್ಯಾ.
ಶಂಭು ಮಾರೇಶ್ವರಾ.
ಶ್ರೀ ಮುಕ್ತಿರಾಮೇಶ್ವರ
##
1457
ಆಯಿವತ್ತೆರಡಕ್ಷರದ ವಾಕ್ಯ, ವೇದಶಾಸ್ತ್ರ ಪುರಾಣಾಗಮ ಶ್ರುತಿ ಸ್ಮೃತಿ
ದೇವವಾಕ್ಯವೆಂ[ಬಾ]ದ್ಯಕ್ಷರ ಬೇರುಂಟಾದರೆ
ನೋಯಬಹುದೆಂದ ಶ್ರೀಮುಕ್ತಿರಾಮೇಶ್ವರ.
ಶ್ರೀಗುರು ಪ್ರಭುನ್ಮುನೀಶ್ವರ ##
1453
ಭಸಿತ ರುದ್ರಾಕ್ಷಿಯನು, ಎಸೆವ ಪಂಚಾಕ್ಷರಿಯನು,
ಅಸಮ ಶ್ರೀಗುರುಲಿಂಗಜಂಗಮದತಿಶಯದ
ಪಾದೋದಕ ಪ್ರಸಾದವನು ಅರುಹಿ,
ಎನ್ನ ಸರ್ವಾಂಗದಲ್ಲಿ ಸಂಬಂಧಿಸಿ ಸಲಹಿದಾತನು
ಶ್ರೀಗುರು ಪ್ರಭುನ್ಮುನೀಶ್ವರ.
1454
ವಂದಿಸುವವರ ಕಂಡಡೆ ಉಪಚಾರವ ಮಾಡಿ,
ನಿಂದಿಸುವವರ ಕಂಡಡೆ ಕಸವ ಮಾಡಿ,
ತನಗೆ ಭಕ್ತಿಯ ಮಾಡಿದವರೆ ಭಕ್ತರೆಂದು,
ತನಗೆ ಮಾಡದವರೆ ಅಜ್ಞಾನಿಗಳೆಂಬುವರು.
ತಾವು ಜ್ಞಾನವರತು, ಉಪಾಯದಲ್ಲಿ ವೇಷವ ಹೊತ್ತು,
ದೋಷವ ಮಾಡಿ, ನಾನೀಶನೆಂಬ ಘಾತಕರ ಕಂಡು,
ಬಾಚಿಯ ಕಾಯಕವ ಮಾಡೆ,
ಶ್ರೀಗುರು ಪ್ರಭುನ್ಮುನೀಶ್ವರಾ.
ಶ್ರೀಬಸವಲಿಂಗ
##
1455
ಈ ಹೃದಯಾಂತರಸ್ಥಿತವಾದ ಬಿಂದ್ವಾಕಾಶವು ಅವುದಾನೊಂದುಂಟು,
ಅಲ್ಲಿ ಸರ್ವಕ್ಕೆಯು ಆಧಾರಸ್ವರೂಪವಾದ,
ಸಮಸ್ತಕ್ಕೆಯು ಪ್ರೇರಕನಾದ, ಸಮಸ್ತಕ್ಕೆಯೂ ಕರ್ತೃವಾದ
ಶಿವನು ಪ್ರಕಾಶಿಸುತ್ತಿಹನಯ್ಯಾ, ಶ್ರೀಬಸವಲಿಂಗ.
1456
ಕರಿಕಾಲಚೋಳನಲ್ಲಿ ರೂಪಾರ್ಪಿತವು ಹಸನಾಗಿಹುದು.
ಮಾದಾರ ಚೆನ್ನಯ್ಯನಲ್ಲಿ ರುಚಿಯಾರ್ಪಣವು ಚೆನ್ನಾಗಿಹುದು.
ಸುರಗಿಯ ಚೌಡಯ್ಯನಲ್ಲಿ ತುತ್ತುತುತ್ತಿಗೆ ಅರ್ಪಿಸುವ ಬಗೆ ಲೇಸಾಗಿಹುದು.
ವೀರಚೋಳವ್ವೆಯಲ್ಲಿ ಸಹಭಾಜನಾರ್ಪಣ ಸತ್ಕ್ರೀ ಪ್ರೀತಿಕರವಾಗಿಹುದು.
ಆ ಕರಿಕಾಲಚೋಳನ ವ್ರತ, ಆ ಮಾದಾರ ಚೆನ್ನಯ್ಯನ ಜಿಹ್ವೆ,
ಆ ಸುರಗಿಚೌಡಯ್ಯನ ಹಸ್ತ, ಆ ಚೋಳಿಯಕ್ಕನ ಬುದ್ಧಿ
ಇಷ್ಟೂ ಕೂಡಿ ಒಂದು ರೂಪಾದ ಭಕ್ತಗಲ್ಲದೆ
ರುಚಿಯಾರ್ಪಿತವಸಗುವದೆ ಶ್ರೀ ಬಸವಲಿಂಗಾ.
ಸತ್ಯ ಕರಂಡಮೂರ್ತಿ ಸದಾಶಿವಲಿಂಗ ##
1458
ಘೃತ ಘೃತವ ಬೆರಸಿದಂತೆ
ನಿಮ್ಮ ಶ್ರೀಪಾದವ ಬೆರಸಿದನಯ್ಯಾ ಬಸವಣ್ಣ.
ಕ್ಷೀರ ಕ್ಷೀರವ ಬೆರಸಿದಂತೆ
ನಿಮ್ಮ ಶ್ರೀಪಾದವ ಬೆರಸಿದನಯ್ಯಾ ಚೆನ್ನಬಸವಣ್ಣ.
ಜ್ಯೋತಿ ಜ್ಯೋತಿಯ ಬೆರಸಿದಂತೆ
ನಿಮ್ಮ ಶ್ರೀಪಾದವ ಬೆರಸಿದನಯ್ಯಾ ಪ್ರಭು[ದೇವ].
ಬಯಲು ಬಯಲ ಬೆರಸಿದಂತೆ
ನಿಮ್ಮ ಶ್ರೀಪಾದವ ಬೆರಸಿದನಯ್ಯಾ ಮಡಿವಾಳಯ್ಯ.
ಬೆಳಗು ಬೆಳಗ ಬೆರಸಿದಂತೆ
ನಿಮ್ಮ ಶ್ರೀಪಾದವ ಬೆರಸಿದನಯ್ಯಾ ಸಿದ್ಧರಾಮಯ್ಯ.
ಇವರು ಮುಖ್ಯವಾದ ಏಳ್ನೂರೆಪ್ಪತ್ತಮರಗಣಂಗಳ
ಶ್ರೀಪಾದದಲ್ಲಿ ಉರಿ ಕರ್ಪುರ ಬೆರಸಿದಂತೆ ಬೆರಸಿದೆನಯ್ಯಾ,
ಭಕ್ತಿಪ್ರಿಯ ಸತ್ಯಕರಂಡಮೂರ್ತಿ ಸದಾಶಿವಲಿಂಗವೆ.
ಸದ್ಗುರು ಚೆನ್ನಮಲ್ಲಿಕಾರ್ಜುನ ##
1459
ಸಪ್ತಕೋಟಿ ಮಹಾಮಂತ್ರ ಉಪಮಂತ್ರಂಗಳಿಗೆ ಲೆಕ್ಕವಿಲ್ಲ.
ಚಿತ್ತವ್ಯಾಕುಲನಾಗಿ ಭ್ರಮಿಸದಿರಾ, ಎಲೆ ಮನವೆ.
ಶಿವಶಿವಾ ಶಿವಶಿವಾ ಶಿವಶಿವಾ ಶಿವಶಿವಾ ಶಿವಶಿವಾ ನಮೋ ನಮೋ,
ಶಿವಶಿವಾ ಶಿವಶಿವಾ ಶಿವಶಿವಾ ಶಿವಶಿವಾ ಶಿವಶಿವಾ ಶರಣೆಂದಡೆ ಸಾಲದೆ ?
ಅದೆಂತೆಂದಡೆ : ಶಿವೇತಿ ಮಂಗಲಂ ನಾಮ ಯಸ್ಯ ವಾಚಿ ಪ್ರವರ್ತತೇ |
ಭಸ್ಮೀ ಭವಂತಿ ತಸ್ಯಾಸು ಮಹಾಪಾತಕೋಟಯಃ ||
ಇಂತೆಂದುದಾಗಿ, ಎನಗಿದೆ ಮಂತ್ರ, ಎನಗಿದೆ ತಂತ್ರ,
ಎನಗಿದೆ ಗತಿ ಮತಿ ಚೈತನ್ಯವಯ್ಯಾ.
ಸದ್ಗುರು ಚೆನ್ನಮಲ್ಲಿಕಾರ್ಜುನಯ್ಯನ ತೋರಿದ
ಎನಗಿದೇ ಸಹಜಮಂತ್ರ.
1460
ತನುವಿಡಿದು ದಾಸೋಹವ ಮಾಡಿ,
ಗುರುಪ್ರಸಾದಿಯಾದ ಬಸವಣ್ಣ.
ಮನವಿಡಿದು ದಾಸೋಹವ ಮಾಡಿ,
ಲಿಂಗಪ್ರಸಾದಿಯಾದ ಬಸವಣ್ಣ.
ಧನವಿಡಿದು ದಾಸೋಹವ ಮಾಡಿ,
ಜಂಗಮಪ್ರಸಾದಿಯಾದ ಬಸವಣ್ಣ.
ಇಂತೀ ತ್ರಿವಿಧವಿಡಿದು ದಾಸೋಹವ ಮಾಡಿ,
ಸದ್ಗುರು ಚೆನ್ನಮಲ್ಲಿಕಾರ್ಜುನಯ್ಯಾ,
ನಿಮ್ಮ ಶರಣ ಬಸವಣ್ಣ ಸ್ವಯಂಪ್ರಸಾದಿಯಾದನಯ್ಯಾ.
ಸದ್ಗುರು ಶಂಭು ಸೋಮೇಶ್ವರ ##
1461
ಶಿವನೆ ಅಧಿಕನು, ಶಿವಭಕ್ತನೆ ಕುಲಜನು,
ಶಿವಪ್ರಸಾದದಿಂಧಿಕವಾವುದೂ ಇಲ್ಲವೆಂದುದು ಶ್ರುತಿ.
ಇದನರಿದು, ಸದ್ಗುರು ಶಂಭುಸೋಮೇಶ್ವರನ ಭಜಿಸಿ,
ಪ್ರಸಾದಸೇವನೆಯ ಮಾಡದಿರಲು, ಅಘೋರನರಕ ತಪ್ಪದು.
ಸದ್ಗುರುಪ್ರಿಯ ಶಿವಸಿದ್ಧರಾಮೇಶ್ವರ
##
1462
ಪೃಥ್ವಿ ಸಕಲವ ಧರಿಸಿಕೊಂಡಿಪ್ಪಂತೆ
ಶಿವಯೋಗಿ ಸಮಾಧಾನಿಯಾಗಿರಬೇಕು.
ಅಪ್ಪುವಿನ ನಿರ್ಮಳದಂತೆ ಶಿವಯೋಗಿ ನಿರ್ಮಳನಾಗಿರಬೇಕು.
ಪಾವಕನು ಸಕಲದ್ರವ್ಯಂಗಳ ದಹಿಸಿಯೂ
ಲೇಪವಿಲ್ಲದ ಹಾಂಗೆ ಶಿವಯೋಗಿ ನಿರ್ಲೆಪಿಯಾಗಿರಬೇಕು.
ವಾಯು ಸಕಲದ್ರವ್ಯಂಗಳಲ್ಲಿ ಸ್ಪರ್ಶನವ ಮಾಡಿಯೂ
ಆ ಸಕಲಗುಣವ ಮುಟ್ಟದ ಹಾಂಗೆ
ಶಿವಯೋಗಿ ಸಕಲಭೋಗಂಗಳ ಮುಟ್ಟಿಯೂ ಮುಟ್ಟದೆ
ನಿರ್ಲೆಪಿಯಾಗಿರಬೇಕು.
ಆಕಾಶವು ಸಕಲದಲ್ಲಿ ಪರಿಪೂರ್ಣವಾಗಿಹ ಹಾಂಗೆ
ಶಿವಯೋಗಿಯೂ ಸಕಲದಲ್ಲಿ ಪರಿಪೂರ್ಣನಾಗಿರಬೇಕು,
ಇಂದುವಿನಂತೆ ಶಿವಯೋಗಿ ಸಕಲದಲ್ಲಿ ಶಾಂತನಾಗಿರಬೇಕು.
ಜ್ಯೋತಿ ತಮವನಳಿದು ಪ್ರಕಾಶವ ಮಾಡುವ ಹಾಂಗೆ
ಶಿವಯೋಗಿಯೂ ಅವಿದ್ಯೆಯಂ ತೊಲಗಿಸಿ, ಸುವಿದ್ಯೆಯಂ ಮಾಡಬೇಕು.
ಇದು ಕಾರಣ, ಸದ್ಗುರುಪ್ರಿಯ ಶಿವಸಿದ್ಧರಾಮೇಶ್ವರನ
ಕರುಣವ ಹಡೆದ ಶಿವಯೋಗಿಗೆ ಇದೇ ಚಿಹ್ನವು.
ಸರ್ವೇಶ್ವರಲಿಂಗ
##
1463
ಉದುರಿ ಬೀಳುವನ್ನಕ್ಕ ನಿನ್ನ ಹಂಗು.
ಉದುರಿ ಬಿದ್ದಬಳಿಕ ಎನ್ನೊಡವೆ.
ನಾ ಪೂಜಿಸುವನ್ನಕ್ಕ ದೇವ.
ಎನ್ನ ಪೂಜೆಗೊಳಗಾದಲ್ಲಿ ನೀ ಭಕ್ತ, ನಾ ನಿತ್ಯ.
ಇಂತೀ ಸರ್ವ[ಮ]ಯವಸ್ತು ಬೀಜವಲಾ.
ಗರ್ವ ಮಲತ್ರಯದೂರ, ಸರ್ವಾಂಗ ಸಂತೋಷ ನಿಗರ್ವದ
ಸರ್ವೆಶ್ವರಲಿಂಗವು ತಥ್ಯಮಿಥ್ಯದವನಲ್ಲ,.
ಸಿದ್ಧಬುದ್ಧಯ್ಯಗಳ ಪುಣ್ಯಸ್ತ್ರೀ ಕಾಳವ್ವೆ
1233
ವ್ರತಭ್ರಷ್ಟನ, ಲಿಂಗಬಾಹ್ಯನ ಕಂಡಡೆ
ಸತ್ತ ನಾಯ, ಕಾಗೆಯ ಕಂಡಂತೆ.
ಅವರೊಡನೆ ನುಡಿಯಲಾಗದು ಬಿಮೇಶ್ವರಾ.
ಸಿದ್ಧಲಿಂಗಪ್ರಿಯ ಬಸವಪ್ರಭುವೆ ##
1464
ಬಸವಣ್ಣ ಚೆನ್ನಬಸವಣ್ಣ ಪ್ರಭುಸ್ವಾಮಿ
ಮಡಿವಾಳ ಮಾಚಯ್ಯ ಹಡಪದಪ್ಪಣ್ಣ
ಅಕ್ಕಮಹಾದೇವಿ ನೀಲಲೋಚನೆಯಮ್ಮ
ಗಂಗಾಂಬಿಕೆ ಅಕ್ಕನಾಗಲಿ ಮುಕ್ತಾಯಕ್ಕ
ನಿಂಬೆಕ್ಕ ಚೋಳವ್ವೆ ಅಮ್ಮವ್ವೆ ಆದವ್ವೆ
ಕೋಳೂರು ಕೊಡಗೂಸಮ್ಮ ಗೊಗ್ಗವ್ವೆ ದುಗ್ಗಳವ್ವೆ
ಸುಗ್ಗಳವ್ವೆಯರ ಪಾದರಕ್ಷೆಯೊಳಗೆ
ಐಕ್ಯಪದವೀಯಯ್ಯ ಸಿದ್ಧಲಿಂಗಪ್ರಿಯ ಬಸವಪ್ರಭುವೆ
ನಿಮ್ಮ ಧರ್ಮ ನಿಮ್ಮ ಧರ್ಮ
ಈ ದೇವರ ಸೆರಗೊಡ್ಡಿ ಬೇಡಿಕೊಂಬೆನು.
ಪಾಲಿಸಯ್ಯಾ ಸ್ವಾಮಿ ದಯದಿಂದ
ಚಿದಾದಿತ್ಯ ನಿರೀಕ್ಷಣ ವಿಚಕ್ಷಣ.
ವಸ್ತುವ ಕಂಡರೆ ಸುಮ್ಮನಿರುವುದುಚಿತವಯ್ಯಾ.
ಅಂತಲ್ಲದೆ ಹೆಮ್ಮೆಗೆ ನುಡಿದಡೆ ಉಚಿತವಲ್ಲವಯ್ಯಾ
ನೀನಾನೆಂಬುಭಯವಳಿದಾತಂಗೆ ಏನೂ ಇಲ್ಲವಯ್ಯಾ
ವಿರಕ್ತರೆಂಬವರು ಸ್ತುತಿ ನಿಂದ್ಯಾದಿಗಳಿಗೆ ಹೆದರಿರಬೇಕಯ್ಯ,
ಸಿದ್ಧಲಿಂಗಪ್ರಿಯ ಪ್ರಭುವೆ.
ಸಿದ್ಧವೀರದೇಶಿಕೇಂದ್ರ
971
ವ್ಯಾಸನುಸುರ್ದ ಸ್ಕಂದಪುರಾಣದಲ್ಲಿಯ
ಶ್ರೀಶೈಲಕಲ್ಪ ನೋಳ್ಪುದಯ್ಯಾ.
ಅಲ್ಲಿ ಸಿದ್ಧಸಾಧಕರ ಸನ್ನಿಧಿಯಿಂದರಿಯಬಹುದಯ್ಯಾ.
ಮಾಡಿದನೊಬ್ಬ ಪೂರ್ವದಲ್ಲಿ ಗೋರಕ್ಷ
ಮಾಡಿದನೊಬ್ಬ ಮತ್ಸೆ ್ಯಂದ್ರನಾಥ,
ಮಾಡಿದರೆಮ್ಮ ವಂಶದ ಶ್ರೀಗುರುಶಾಂತದೇವರು.
ಇದು ಕಾರಣ,
ಯೋಗದ ಭೇದ ಯೋಗಿಗಳಂತರಂಗದಿಂದರಿತಡೆ
ಯೋಗಸಿದ್ಧಿ ಸತ್ಯ ಸತ್ಯ,
ಶ್ರೀಗುರು ತೋಂಟದಸಿದ್ಧಲಿಂಗೇಶ್ವರ.
ಸೂಳೆಸಂಕವ್ವೆ
1234
ಒತ್ತೆಯ ಹಿಡಿದು ಮತ್ತೊತ್ತೆಯ ಹಿಡಿಯೆ.
ಹಿಡಿದಡೆ ಬತ್ತಲೆ ನಿಲಿಸಿ ಕೊಲುವರಯ್ಯಾ.
ವ್ರತಹೀನನನರಿದು ಬೆರೆದಡೆ
ಕಾದ ಕತ್ತಿಯಲ್ಲಿ ಕೈ ಕಿವಿ ಮೂಗ ಕೊಯ್ವರಯ್ಯಾ.
ಒಲ್ಲೆನೊಲ್ಲೆ ಬಲ್ಲೆನಾಗಿ, ನಿಮ್ಮಾಣೆ ನಿರ್ಲಜ್ಜೇಶ್ವರಾ.
ಸೋಮಭೀಮೇಶ್ವರಲಿಂಗ
##
1465
ಪದಾರ್ಥದೊಳಗೆ ಪ್ರಸಾದರೂಪುಂಟು.
ಪ್ರಸಾದದೊಳಗೆ ಪದಾರ್ಥರೂಪುಂಟು.
ಉಂಟು ಇಲ್ಲಾಯೆಂಬವರು ನೀವು ತಿಳಿದು ನೋಡಿರಯ್ಯಾ.
ನಾವಿದನರಿಯೆವಯ್ಯಾ.
ಸೋಮಭೀಮೇಶ್ವರಲಿಂಗವು ತಾವೇ ಬಲ್ಲರು.
ಹಾಟಕೇಶ್ವರಲಿಂಗ
##
1466
ಪ್ರಥಮಪಾದದಲ್ಲಿ ರುದ್ರತತ್ವ, ಅದು ಘಟಿಸಿದಲ್ಲಿ ಈಶ್ವರತತ್ವ.
ಆ ಉಭಯಲೀಲೆಯಡಗಿದಲ್ಲಿ ಸದಾಶಿವತತ್ವ.
ಈ ತ್ರಿವಿಧಲೀಲೆ ಏಕಾರ್ಥವಾದಲ್ಲಿ, ಪರಶಿವತತ್ವದ ಪರಮಪ್ರಕಾಶ.
ಇದರಿಂದ ಮೀರುವ ತೆರನುಂಟಾದಡೆ ನೀವು ಹೇಳಿ, ನಾ ಮಾಕೊಳ್ಳೆನು.
ನೀವು ಹೇಳಿದಂತೆ ಮಹಾಪ್ರಸಾದ ಪೂರ್ವದಲ್ಲಿ :
ಆರು ಶೈವದ ಭೇದ, ಮೂರು ಶೈವದ ಭಜನೆ, ಷಡರ್ಶನದ ತರ್ಕ.
ಇಂತಿವೆಲ್ಲವನುದ್ಧರಿಸಬಂದ ಪ್ರಭು ಬಸವಣ್ಣ ಚೆನ್ನಬಸವಣ್ಣ
ಇಂತಿವರೊಳಗಾದ ಪ್ರಮಥರು ಸ್ವತಂತ್ರ ಸಂಬಂಧಿಗಳು
ಸುಮನರು ವಿಮಲರು ಖಂಡಿತರು ಅಖಂಡಿತರು
ಪೂರ್ಣರು ಪರಿಪೂರ್ಣರು ಸೀಮರು ನಿಸ್ಸೀಮರು ದ್ವೈತರು ಅದ್ವೈತರು,
ಸಮಯಕ್ಕೆ ಬಹರು, ಸಮಯಕ್ಕೆ ಬಾರದೆ ಇಹರು,
ಕಟ್ಟಿಂಗೆ ಬಹರು, ಕಟ್ಟ ಮೀರಿ ಒಪ್ಪಿಪ್ಪರು.
ಇಂತೀ ಪ್ರಮಥರಲ್ಲದ ಏಳುನೂರೆಪ್ಪತ್ತು ಅಮರಗಣಂಗಳು,
ಬಂದ ಬಂದ ಸ್ಥಳದಲ್ಲಿ ಮುಕ್ತರು, ನಿಂದ ನಿಂದ ಸ್ಥಳದಲ್ಲಿ ನಿರುತರು.
ಮೂರುಸ್ಥಲದ ಮೂರ್ತಿಯಂ ಕಂಡು, ಆರುಸ್ಥಲವ ಕೂಡಿಕೊಂಡು,
ಮೂವತ್ತಾರರಲ್ಲಿ ಅರಿದು, ಇಪ್ಪತ್ತೈದರಲ್ಲಿ ವೇಧಿಸಿ,
ನೂರರಲ್ಲಿ ಸಂದಳಿದು, ಒಂದರಲ್ಲಿ ನಿಂದುದಕ್ಕೆ ಕುರುಹಾವುದಯ್ಯಾ ಎಂದಡೆ,
ಮಾಯಾಗುಣಮಲ ನಾಸ್ತಿಯಾಗಿರಬೇಕು,
ಹಾಟಕೇಶ್ವರಲಿಂಗವನರಿದ ಶರಣನ ಇರವು.
ಹಾದರಕಾಯಕದ ಮಾರಯ್ಯಗಳ ಪುಣ್ಯಸ್ತ್ರೀ ಗಂಗಮ್ಮ
1349
ಆವ ಕಾಯಕವ ಮಾಡಿದಡೂ ಒಂದೆ ಕಾಯಕವಯ್ಯಾ.
ಆವ ವ್ರತವಾದಡೂ ಒಂದೆ ವ್ರತವಯ್ಯಾ.
ಆಯ ತಪ್ಪಿದಡೆ ಸಾವಿಲ್ಲ, ವ್ರತತಪ್ಪಿದಡೆ ಕೂಡಲಿಲ್ಲ.
ಕಾಕಪಿಕದಂತೆ ಕೂಡಲು ನಾಯಕನರಕ ಗಂಗೇಶ್ವರಲಿಂಗದಲ್ಲಿ.
ಹಾದರಕಾಯಕದ ಮಾರಯ್ಯಗಳ ಪುಣ್ಯಸ್ತ್ರೀ ಗಂಗಮ್ಮ
1349
ಆವ ಕಾಯಕವ ಮಾಡಿದಡೂ ಒಂದೆ ಕಾಯಕವಯ್ಯಾ.
ಆವ ವ್ರತವಾದಡೂ ಒಂದೆ ವ್ರತವಯ್ಯಾ.
ಆಯ ತಪ್ಪಿದಡೆ ಸಾವಿಲ್ಲ, ವ್ರತತಪ್ಪಿದಡೆ ಕೂಡಲಿಲ್ಲ.
ಕಾಕಪಿಕದಂತೆ ಕೂಡಲು ನಾಯಕನರಕ ಗಂಗೇಶ್ವರಲಿಂಗದಲ್ಲಿ.
ಹುಂಜಿನ ಕಾಳಗದ ದಾಸಯ್ಯ
1192
ಹುಂಜ ಸೋತಡೆ ಹಿಡಿವೆ.
ವ್ರತ ಹೋದವರ ನೋಡೆನು,
ಚಂದ್ರಚೂಡೇಶ್ವರಲಿಂಗವೆ.