Previous ಕೂಗಿನ ಮಾರಯ್ಯ ಅಂಗಸೋಂಕಿನ ಲಿಂಗತಂದೆ Next

ಗೋಣಿ ಮಾರಯ್ಯ ವಚನಗಳು

807
ಕಾಯದ ಕಂಥೆಯ ಹಿಡಿದು
ಅಕಾಯಚರಿತ್ರ ಪರಮನೆಂಬ ಜಂಗಮ ಬಂದು,
ಕರ ಖರ್ಪರವನಳವಡಿಸಿಕೊಂಡು
ಭಿಕ್ಷೆಕ್ಕೆ ನಡೆಯಲು ಕೇಳಿದ.
ಇಂದ್ರಿಯಂಗಳು ನಿಲಲಮ್ಮದೆ
ಕಡೆಯ ಬಾಗಿಲಲ್ಲಿ ನಿಲಕಿ ನೋಡುತಿರ್ದಯ್ಯಾ !
ದಶೇಂದ್ರಿಯಂಗಳು ಪ್ರದಕ್ಷಿಣ ಬಂದು
ತಮಗೆ ತಾವೇ ಅಂಜಿ ಓಡಿ[ದವು]
ಕೇಟೇಶ್ವರಲಿಂಗನ ಶರಣನಿರವ ಕೇಳಿದಾಕ್ಷಣ.

808
ಕುರುಹಿನ ಸಾಕಾರವಿಡಿದಾಡುವರೆಲ್ಲರೂ
ಕಾಲಕಂಧರನ ಹಂಗಿನಲ್ಲಿಪ್ಪರು.
ಅರಿವಿನ ಆಕಾರದಲ್ಲಿ ಅರಿವೆನೆಂಬವರೆಲ್ಲರೂ
ನೀಲಮೇಘನ ಹಂಗಿನ ಕೋಲದಲ್ಲಿಪ್ಪರು.
ಇವೆಲ್ಲವನರದು ಕಂಡಿಹೆನೆಂಬವರೆಲ್ಲರೂ
ಇಲ್ಲವೆಂದು ಆಜ್ಞೆಗೊಳಗಾಗಿಪ್ಪರು.
ಕಾಲಕಂಧರನ ಕಾಲಮುರಿದು,
ನೀಲಮೇಘನೆಂಬವನ ಕೈಯ ಕೊಯ್ದು,
ಎಲ್ಲರಿಗೆ ಮಾರಾಂತೆನು ಇನ್ನು ನಿಲ್ಲಿ ಸಾಕು.
ಎನ್ನ ಗೋಣಿಯಮರೆಯಲ್ಲಿ ಇಪ್ಪರೆಲ್ಲರೂ
ಎನ್ನ ಗೋವರಾದುದ ನೀ ಮರೆದೆಯಾ
ಕೇಟೇಶ್ವರಲಿಂಗವೆ !

809
ಕ್ಷಮೆ ದಮೆ ಶಾಂತಿ ಸೈರಣೆ ಭಕ್ತಿ ಜ್ಞಾನ
ವೈರಾಗ್ಯಸಂಪನ್ನರಾದ ವೀರಮಾಹೇಶ್ವರರು,
ಜಗದ್ಧಿತಾಥಾವಾಗಿ ಮತ್ರ್ಯಲೋಕದೊಳು ಬಂದು,
ನಡೆನಡೆಗೆ ನುಡಿನುಡಿಗೆ ಅಡಿಗಡಿಗೆ ಹೆಜ್ಜೆಹೆಜ್ಜೆಗೆ
'ಓಂ ನಮಃ ಶಿವಾಯ, ಓಂ ನಮಃ ಶಿವಾಯ,
'ಓಂ ನಮಃ ಶಿವಾಯ'- ಎಂಬ ಮಂತ್ರಮೂರ್ತಿಗಳಾಗಿ,
ಲಿಂಗದ ನೆನಹಿಂದ ಲಿಂಗಾರ್ಪಿತಕ್ಕೆ ಹೋಗಿ,
ನಿಂದು 'ಲಿಂಗಾರ್ಪಿತ ಭಿಕ್ಷಾ' ಎಂದಲ್ಲಿ,
ಗುರುವಾಜ್ಞೆಯಿಂದ ಬಂದ ಭಿಕ್ಷ ಅಮೃತಾನ್ನವೆಂದು ಕೈಕೊಂಡು
ಭೋಜ್ಯ ಭೋಜ್ಯಗೆ
'ಓಂ ನಮಃ ಶಿವಾಯ, ಓಂ ನಮಃ ಶಿವಾಯ,
ಓಂ ನಮಃ ಶಿವಾಯ, ಎಂಬ ನುಡಿಯಿಂದ ಸೇವಿಸಿ,
ನಿತ್ಯತೃಪ್ತರಾಗಿ, ಸುಳುಹು ಪಾವನರಾಗಿ ಚರಿಸುವ
ಮಹಾಮಹಿಮ ಶರಣರ ನಡೆ ಪುರುಷ, ನುಡಿ ಪುರುಷ,
ಮುಟ್ಟಿದ್ದು, ನೋಡಿ ಸೋಂಕಿದ್ದೆಲ್ಲಾ ಪಾವನ,
ಹಾದ ಜಲವೆಲ್ಲ ಪುಣ್ಯತೀರ್ಥ,
ಏರಿದ ಬೆಟ್ಟವೆಲ್ಲ ಶ್ರೀಪರ್ವತಂಗಳಾದವು.
ಇಂತಪ್ಪ ನಿರಾಳ ನಿಜೈಕ್ಯ ನಿರಾಮಯ ನಿದರ್ೇಹಿಗಳಾದ ಶರಣರ
ಅರೆಪಾದ ಧೂಮ್ರ ಮಲಿನವಾಗಿರುವಂತೆ ಮಾಡಯ್ಯ.
[ಕೇಟಶ್ವರಲಿಂಗದಲ್ಲಿ] ಧನ್ಯ ನಾನಯ್ಯ.

810
ತನುಗುಣವುಳ್ಳನ್ನಕ, ಗುರುವಿನಲ್ಲಿ
ಪರತತ್ತ್ವಭೋಧವುಂಟೆಂದು ಬೆಸಗೊಳ್ಳಲಿಲ್ಲ.
ಮನವುಳ್ಳನ್ನಕ್ಕ, ಲಿಂಗದಲ್ಲಿ ಏಕನಿಷ್ಠೆ
ನಿಚ್ಚಟವೆಂಟೆಂದು ಕಂಡೆಹೆನೆಂಬ ಭ್ರಮೆಯಿಲ್ಲ.
ಆತ್ಮ ಮಥನವುಳ್ಳನ್ನಕ್ಕ, ಕರಣ ಮಠಕ್ಕೆ
ಬರುವ ಹೋಗುವ ಬೃಹದ್ ನಿಲುಗಡೆ.
ಈ ತೆರನ ಬಲ್ಲಡೆ ಮರದು ಹಿಡಿಯಲಿಲ್ಲ ;
ಅರಿದು ಕೂಡಲಿಲ್ಲ.
ಕುರುಹಿನ ಸಾಕಾರವಿಡಿದಾಡುವ ಕುತ್ತದ ಕೂಳು
ಮೂರಲೊಂದು ಕೊರೆಗೊಂಡಿತ್ತು.
ಈ ಮೂರಲೊಂದು ನಿನ್ನ ಗೋಣಿಯ ಮೂಲೆಯಲ್ಲಿ
ತೋರದಿರಾ ಕೇಟೆಶ್ವರಲಿಂಗವೆ.

811
ಭಿಕ್ಷೆ ನಿರತರು ಭಿಕ್ಷಕ್ಕೆ ಹೋಗಿ
ಅಕ್ಷ[ಯ] ಪಾತ್ರೆ ಗಿಡತರು.
ಭಿಕ್ಷ ಏಳು ವಿಧವಾಗಿಪ್ಪುದು ;
ಭಿಕ್ಷ ಒಂಬತ್ತು ವಿಧವಾಗಿಪ್ಪುದು.
[ನಿಚ್ಚ] ಭಿಕ್ಷ ಪಂಚಾಪ್ತರಲ್ಲಿ ಪಂಚ ಭಿಕ್ಷವನುಂಡು,
ಕರಪಾತ್ರ ನಿರುತನಾದಾತನಿಗೆ
ದಿನವೊಂದಕ್ಕೆ ಭಿಕ್ಷ ಲಿಂಗಾರ್ಪಿತಕ್ಕೆ,
ಭುವನದ ಎಲ್ಲರಿಗೆಯೂ ಒಡೆಯ!
ನಿಚ್ಚ ಹಿಡಿತಡೆಯಿಲ್ಲ.
ರಕ್ಷಾರಕ್ಷಕನ ಇಚ್ಛೆಯನರಿದು, ಭಿಕ್ಷಕ್ಕೆ ಹೋಗಿ,
ಗೋಣಿಯ ಮರೆಯ ಕೋಟೆಯ ಹುರಿಮಾಡಿ.........
ಕೇಟೇಶ್ವರಲಿಂಗದಲ್ಲಿ ಗೋಣಿ ಹರಿಯಿತ್ತು.

812
ಶರಣ ಸಂಜೆ ಮುಂಜಾವದ ಕತ್ತಲೆಯನಳಿದುಳಿದನಾಗಿ
ಕಾಲೋಚಿತವನರಿದು ಕೊಂಬ.
ಗೋಣಿಯ ತೆರೆಯ ಹರಿದು
ವಂಕ ಮೂರ ಹರಿದು ದಾಂಟಿ,
ಜಾತಿ-ವಿಜಾತಿಯನರಿದು,
ಕರಣೇಂದ್ರಿಯಂಗಳಲ್ಲಾಳದೆ,
ತೆರಣಿಯ ಕರಣವನರಿತು ಗೂಡನಿಕ್ಕಿರೆ,
ಧಾರೆ ಸುರಿವುದು ಕಂಡು
ವೀರಧಾರುಣಿಯ ಮೇಲೆ ಎರೆದುದ
ನಿ............ಯ ಬೆಂಬಳಿಯನರಿತು ಮುಸುಕಿಕ್ಕಿಕೊಂಡು
ಭಿಕ್ಷಕ್ಕೆ ಹೋಗಿ ಕೇಳಲು ಚಾಟಿ ಹರಿಯಿತ್ತು
ಕೇಟೇಶ್ವರಲಿಂಗದಲ್ಲಿ.

813
ಸಂಗಕ್ಕೆ ಶರಣರ ಸಂಗವೇ ಲೇಸಯ್ಯ,
ಜಂಗಮದರಿವು ಲಿಂಗದ ನಿಲವ ತೋರುವುದಾಗಿ,
ಲಿಂಗದ ನಿಲವಾವುದೆಂದಡೆ : ಮೂರ ನಿಲಿಸಿ, ಆರ ಮೀರಿ, ಹದಿನೆಂಟ ಕಳೆದು,
ಏಳನುಳಿದು, ಒಂಬತ್ತು ಮೀರಿ,
ನಿಜಜಂಗಮದ ನಿಜಲಿಂಗದ ನಿಜಶರಣರ ಅರಿವು.
ಈ ತ್ರಿವಿಧದ ನಿರುಗ ಎಂತೆಂದಡೆ : ತತ್ತ್ವಜ್ಞಾನದ ನುಡಿಯಲ್ಲಿ ಹೊಗದು,
ಅದೆಂತೆಂದಡೆ :ನಿಮ್ಮ ಭಿಕ್ಷದ ಭಿತ್ತಿಯ ಹೇಳುವೆ.
ಭಿಕ್ಷೆ ಮೂರು ವಿಧವಾಗಿಪ್ಪುದು.
ಭಿಕ್ಷೆ ಏಳುವಿಧವಾಗಿಪ್ಪುದು.
ಭಿಕ್ಷೆ ಹನ್ನರಡುವಿಧವಾಗಿಪ್ಪುದು.
ಭಿಕ್ಷದ ನಿರುಗೆಯ ಬಲ್ಲ ನಿಜವೀರದೇವಯ್ಯ.
ಆತನ ಅರಿವನುಂಟುಮಾಡಿಕೊಂಡು
ಆಚರಿಸುವ ಚರಜಂಗಮದ ಅರಿವಿನ
ತೃಪ್ತಿಯಾವುದೆಂದಡೆ : ಕ್ಷಾರವ ಕಂಡು ವಿಭ್ರಮಣನಂತಿರಬೇಕು
ಇದು ಕ್ರೀಗಾಗದೆಂದು ಕಂಗೆಡಲೇಕೆ?
ಚತುರ್ದಿವಸದಲ್ಲಿಯೂ ಶರಣನೊಬ್ಬನೇ
ಚರಿಸುವ ಕೇಟೇಶ್ವರನ ಕರುಣದಲ್ಲಿ.
ಆ ಚತುರ್ದಿವಸದಲ್ಲಿಯೂ ಆಚರಿಸುವ
ಶರಣನ ನಿಲವ ಕಂಡು ಮತ್ತೆ ಗೋಣಿಯ ಮರೆಯಿಲ್ಲ
ಇವ ಕುರಿತು ಅನುಸರಿಸದೆ ಆಚರಿಸುತಿಪ್ಪನು.

814
ಸತ್ತು ಚಿತ್ತಾನಂದ ನಿತ್ಯ ಪರಿಪೂರ್ಣ ವಸ್ತು
ತನ್ನ ವಿನೋದಕ್ಕೆ ತಾನೆ ಕರ್ತೃ ಭೃತ್ಯನಾದ
ಭೇದಮಂ ಪೇಳ್ವೆ, ಅದೆಂತೆಂದಡೆ : ಒಂದು ಎರಡಾದ ಭೇದಮಂ ತಿಳುಹುವೆ.
ಅದು ತಾನೆ ಸಂಗನಬಸವಣ್ಣನೆಂದು, ಚೆನ್ನಬಸವಣ್ಣನೆಂದು
ಎರಡು ನಾಮ ಅಂಗ-ಪ್ರಾಣದ ಹಾಂಗೆ.
ಚನ್ನಬಸವಣ್ಣನಿಂದ ಸಂಗನಬಸವಣ್ಣ ಧನ್ಯನಪ್ಪನು.
ಈ ಎರಡು ವಸ್ತುವನೊಳಕೊಂಡು ಆಚರಿಸುವ
ಜ್ಞಾನಿಜಂಗಮದ ನಿಲವೆಂತೆಂದೊಡೆ : ಆವನಾನೊಬ್ಬನು ಭಸಿತಮಂ ಪಿಡಿದು
'ಅಯ್ಯಾ ಶರಣಾರ್ಥಿ' ಎಂದು ಕರೆಯಲು,
ಒಯ್ಯನೆ ನಿರೀಕ್ಷಿಸುವುದೆ ಜ್ಞಾನಿಜಂಗಮಕ್ಕೆ ಕರ್ತೃತ್ವ.
ಇದಲ್ಲದೆ, ನಡೆಯದೆ ಜಂಗಮ ಎಲವೋ ಎಂದು ಕರೆವುತ್ತಿರಲು
ನಸುಗೆಂಪಿನ ಭಾವವೇರಿ ಹೋದರೆ ಭಸಿತಕ್ಕೆ ದೂರ.
ಸಾಕ್ಷಿ : ವರ್ಣಿ ವಕಾಪೋಸೋವಾಸಿ ಶೂದ್ರೋಪಿ ಯದಿ ಭೂತಿದಃ|
ಸಾ ಭೂತಿಃ ಸರ್ವಥಾ ಗ್ರಾಹ್ಯಾ ನೋ ಚೇದ್ಧ್ರೋಹಿ ಮಮೈವ ನಃ ||
ದುರಾಯ ಲೆಕ್ಕಕ್ಕೆ ಹರಣವ ಕೊಟ್ಟವರುಂಟು.
ವಿಶ್ವಾಸಕ್ಕೆ ಅಂಗಕ್ಕೆ ಅರಿವನರಸುವ ಪರಿಯಂತರ ಇದೇ ದೃಷ್ಟ.
ಲಿಂಗದೇವನು ಮನವ ನೋಡಬೇಕೆಂದು
ಭಕ್ತಿಯೆಂಬ ಭಿನ್ನಹಕ್ಕೆ ಅವಿಶ್ವಾಸದಿಂದ ಅಡ್ಡಬರಲು
ಇದರ ವಿಶ್ವಾಸವನರಿದು ವಿಚಾರಿಸಬೇಕು.
ಕಿಚ್ಚು ಹತ್ತಿದಲ್ಲಿ ಊರಡವಿ ಕಾಡಡವಿಯೆಂದುಂಟೆ?
ಚಿದಗ್ನಿ ಸ್ವರೂಪಮಪ್ಪ ಶ್ರೀಭಸಿತವ ಕಂಡಲ್ಲಿ ಹೋಗಲಮ್ಮೆನು,
ಆವನಾದರಾಗಲಿ ಶ್ರೀ ಮಹಾದೇವನ ನೆನವನೆ ದೇವನೆಂದುದಾಗಿ,
ಭವಿಯಾದರಾಗಲಿ ಹೋಗಲಮ್ಮೆನು.
ಇದು ಎನಗೆ ಚೆನ್ನಬಸವಣ್ಣನಿಕ್ಕಿದ ಕಟ್ಟು.
ಭವಿಯಾದರೆ ಕರೆದು ಒಡಂಬಡಿಸೂದು.
ಭಕ್ತನಾದರೆ ಬಿನ್ನಹವ ಕೈಕೊಂಬುದು.
ಆವನಾದರಾಗಲಿ ಶ್ರೀ ಮಹಾದೇವನ ನೆನವವನೆ ದೇವನೆಂದುದಾಗಿ,
ಭವಿಯಾದರೆ ಹಾಲು ಹಣ್ಣು ಕಾಯಿ ವಸ್ತ್ರವ ಕೈಕೊಂಬುದು.
ಮತ್ತಾ ಭಸಿತಕ್ಕೆ ಶರಣೆಂದು ಅವನ ಕಳುಹುವುದು.
ಭಕ್ತನಾದರೆ ಬಿನ್ನಹವ ಕೈಕೊಂಡು
ಆತನ ತ್ರಿವಿಧಕ್ಕೆ ತಾ ಕರ್ತನಾಗಿ
ಆತನ ತನ್ನೊಳಗೆ ಇಂಬಿಟ್ಟುಕೊಂಬುದು
ಜ್ಞಾನಜಂಗಮದ ಲಕ್ಷಣ.
ಇನ್ನು ಕ್ರಿಯಾಮಾಹೇಶ್ವರ ಭೇದಮಂ ಪೇಳ್ವೆ : ಶಿವಭಕ್ತರು ಬಂದು ಬಿನ್ನಹವ ಕೈಕೊಳ್ಳಿಯೆಂದು
ಉದಾಹರಣೆಯಿಂದ ಬಿನ್ನವಿಸುತ್ತಿರಲ
ಅದಕ್ಕೆ ಒಡಂಬಟ್ಟು ಕೈಕೊಂಬುದು ; ಅಲ್ಲದಿರ್ದಡೆ ಕಳುಹುವುದು.
ಇದಲ್ಲದೆ ಬಾಯಿಗೆ ಬಂದಂತೆ ನುಡಿದು
ಅಡ್ಡ ಮೋರೆಯ ಹಾಕೋದು ಜಂಗಮಕ್ಕೆ ಕರ್ತೃತ್ವವಲ್ಲ.
ಜ್ಞಾನಿಜಂಗಮ ತ್ರಿವಿಧಪದಾರ್ಥವ ಕೈಕೊಂಬುದು.
ಕ್ರಿಯಾಜಂಗಮ ಎರಡು ಪದಾರ್ಥವಂ ಬಿಟ್ಟು
ಒಂದು ಪದಾರ್ಥವ ಕೈಕೊಂಬುದು.
ಭಾವಜಂಗಮ ಇಂತೆರಡ ಮೀರಿ
ತ್ರಿವಿಧರಹಿತವಾಗಿ ತೋರ್ಪುದು.
ಗೋಣಿಯ ಮರೆಯ ಕೇಟೇಶ್ವರಲಿಂಗವು
ತ್ರಿವಿಧಜಂಗಮದ ನಿಲವಿನ ನಿರುಗೆಯ ನಿರೂಪಿಸಿದರು.

815
ಸುರಗಿಯಲ್ಲಿ ತಟ್ಟುಚ್ಚಿರಿದ ಮತ್ತೆ
ಧಾರೆ ಮೊನೆತಾಗಿತಲ್ಲಾ ಎಂಬೀ ಹೆಡ್ಡರ ಮಾತ ಕೇಳಲಾಗದು.
ಅರಿವ ಗ್ರಹಿಸಿದ ಚಿತ್ತಕ್ಕೆ ಮರವೆಗೆ ತೆರನುಂಟೆ?
ನಿಷ್ಠೆಯಲ್ಲಿ ನಿಷ್ಠೆ ಹುಟ್ಟಿದ ಮತ್ತೆ
ನಿಷ್ಠೆಯಾಚರಣೆ ಘಟ್ಟಿಸದು.
ಎಲ್ಲಕ್ಕೆ ಶರಣೆಂದು ಎಲ್ಲರಾಲಯದಲ್ಲಿ
ಭಿಕ್ಷವ ತೆಗೆದುಕೊಂಡು,
ಸಲ್ಲಲಿತ ಭಾವದಲ್ಲಿಪ್ಪ ಶರಣಂಗೆ
ಗೋಣಿಯ ಮರೆಯ ಸಿಕ್ಕುದೊಡಕಿಲ್ಲ.
ಕೇಟೇಶ್ವರಲಿಂಗವು ತಾನು ತಾನಾದ ಶರಣ.

ಗ್ರಂಥಋಣ: ೧೫ ಸಮಗ್ರ ವಚನ ಸಂಪುಟಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು. 2001

ಪರಿವಿಡಿ (index)
*
Previous ಕೂಗಿನ ಮಾರಯ್ಯ ಅಂಗಸೋಂಕಿನ ಲಿಂಗತಂದೆ Next