Previous ಆನಂದ ಸಿದ್ಧೇಶ್ವರ ಗುರು ವಿಶ್ವೇಶ್ವರಾ Next

ಅಮರಗುಂಡದ ಮಲ್ಲಿಕಾರ್ಜುನ ತಂದೆ

*

ಕೊಟಾರದ ಸೋಮಣ್ಣ ವಚನ

314
ಕಾಯವೆಂಬ ಪಟ್ಟಣಕ್ಕೆ ಸತ್ಯವೆಂಬ ಕೋಟೆಯನಿಕ್ಕಿ,
ಧರ್ಮಾರ್ಥಕಾಮಮೋಕ್ಷಂಗಳೆಂಬ
ಉಕ್ಕಡದವರೆಚ್ಚತ್ತಿರಿ! ಎಚ್ಚತ್ತಿರಿ!
ಭಯ ಘನ! ಭಯ ಘನ!
ಅಜ್ಞಾನವೆಂಬ ತೀವ್ರ ಕತ್ತಲೆ ಕರ ಘನ! ಕರ ಘನ!
ಒಂಬತ್ತು ಬಾಗಿಲ ಜತನವ ಮಾಡಿ! ಜತನವ ಮಾಡಿ!
ಜ್ಞಾನಜ್ಯೋತಿಯ ಪ್ರಬಲವ ಮಾಡಿ! ಪ್ರಬಲವ ಮಾಡಿ!
ಐವರು ಕಳ್ಳರು ಕನ್ನವ ಕೊರೆವುತೈದಾರೆ,
ಸುವಿಧಾನವಾಗಿರಿ! ಸುವಿಧಾನವಾಗಿರಿ!
ಜೀವಧನವ ಜತನವ ಮಾಡಿ! ಜತನವ ಮಾಡಿ!
ಭಳಿರೆಲಾ! ಭಳಿರೆಲಾ!
ಪಟ್ಟಣದ ಮೂಲಸ್ಥಾನದ ಶಿಖರದ ಮೇಲಣ
ಬಾಗಿಲ ತೆರೆದು, ನಡೆವುದೆ ಸುಪಥ ಸ್ವಯಂಭುನಾಥನಲ್ಲಿಗೆ.
ಇದನರಿತು ಮಹಾಮಹಿಮ ಮಾಗುಡದ ಮಲ್ಲಿಕಾರ್ಜುನದೇವರಲ್ಲಿ
ಎಚ್ಚರಿಕೆಗುಂದದಿರಿ! ಎಚ್ಚರಿಕೆಗುಂದದಿರಿ!

315
ವರ್ಣವಿಲ್ಲದ ಲಿಂಗಕ್ಕೆ
ರೂಪು ಪ್ರತಿಷ್ಠೆಯ ಮಾಡುವ ಪರಿಯಿನ್ನೆಂತೊ?
ಪ್ರಳಯವಿಲ್ಲದ ಲಿಂಗಕ್ಕೆ
ಪ್ರಾಣಪ್ರತಿಷ್ಠೆಯ ಮಾಡುವ ಪರಿಯಿನ್ನೆಂತೊ?
ನೆನೆಯಬಾರದ ಲಿಂಗಕ್ಕೆ
ಅನುಗ್ರಹವ ಮಾಡುವ ಪರಿಯಿನ್ನೆಂತೊ?
ನುಡಿಯಬಾರದ ಲಿಂಗಕ್ಕೆ
ಜಪಪೂಜೆಯದೆಂತೊ?
ಇಲ್ಲದ ಲಿಂಗವ ಧರಿಸುವ ಪರಿಯಿನ್ನೆಂತೊ?
ಮಹಾಮಹಿಮ ಮಾಗುಡದ ಮಲ್ಲಿಕಾರ್ಜುನಾ ಇದರಂತುವ ನೀವೆ ಬಲ್ಲಿರಿ.

ಗ್ರಂಥಋಣ: ಸಮಗ್ರ ವಚನ ಸಂಪುಟಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು

*
ಪರಿವಿಡಿ (index)
Previous ಆನಂದ ಸಿದ್ಧೇಶ್ವರ ಗುರು ವಿಶ್ವೇಶ್ವರಾ Next