*
ಗುರುಬಸವೇಶ್ವರ ವಚನಗಳು
387
ಅಂಗದ ಹೊಲಬನರಿದಲ್ಲದೆ
ಲಿಂಗದ ನೆಲೆಯನರಿಯಬಾರದು.
ಲಿಂಗದ ನೆಲೆಯನರಿದಲ್ಲದೆ
ನಿಜನಿರ್ಣಯವ ತಿಳಿಯಬಾರದು.
ನಿಜನಿರ್ಣಯವ ತಿಳಿದಲ್ಲದೆ ತನ್ನ ತಾನರಿಯಬಾರದು.
ಗುರುಕರುಣದಿಂದ ತನ್ನ ತಾನರಿದ ಶರಣಂಗೆ
ಅಂಗಕ್ಕೆ ಆಚಾರವಿಲ್ಲ, ಲಿಂಗಕ್ಕೆ ಕುರುಹಿಲ್ಲ.
ಗುರುಬಸವೇಶನೆಂಬುದಕ್ಕೆ ಕುರುಹು ಮುನ್ನಿಲ್ಲ.
388
ಗುರು ಪರಬ್ರಹ್ಮಮಗಣಿತಮಗೋಚರಂ.
ಗುರು ಪರಂ ಜ್ಞಾನಮಾನಂದರೂಪಂ.
ಗುರು ಪರಮತೇಜ ಬೀಜಾದಿ ಪಂಚಾಕ್ಷರಂ.
ಗುರು ಪಾದಕೋಟ್ಯಷ್ಟ ತೀರ್ಥಂಗಳಂ.
ಗುರು ವಚನರಚನ ಉಪದೇಶ ಮಂತ್ರಂ.
ಗುರು ಭಕ್ತಿ ಮುಕ್ತಿ ಮೋಕ್ಷ ಕಾರಣ ಇಹಪರಂ.
ಗುರು ಘನತರದ ಮಹಿಮೆಯನು ಗುರುಬಸವನೆ ಬಲ್ಲ
389
ಮೋನವೇನೊ ಮೂಲಮಂತ್ರ ಮುಖದಲ್ಲಿರಲು?
ಆಹ್ವಾನವೇನೂ ನಿಜ ಪರಿಪೂರ್ಣ ತನ್ನೊಳಗಿರಲು
ಧ್ಯಾನವೇನೊ ಸಹಜಧ್ಯಾನದ ಬೆಳಗೊಳಗೊಂಡವಂಗೆ?
ಜಪವೆಂದೇನೊ ತಾನು ತಾನಾದವಂಗೆ
ಬಯಲನರಸುವ ಮರುಳರಂತೆ ಗುರುಬಸವ.
ಗ್ರಂಥಋಣ: ಸಮಗ್ರ ವಚನ ಸಂಪುಟಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು
*