Previous ಏಕಾಂತ ರಾಮಿತಂದೆ ಕನ್ನದ ಮಾರಿತಂದೆ Next

ಕದಿರಕಾಯಕದ ಕಾಳವ್ವೆ ವಚನಗಳು

743
ಕದಿರು ಮುರಿಯೆ ಏನೂ ಇಲ್ಲ.
ವ್ರತಹೀನನ ನೆರೆಯಲಿಲ್ಲ, ಗುಮ್ಮೇಶ್ವರಾ.
ಕದಿರರೆಮ್ಮವ್ವೆ

744
ಎನ್ನ ಸ್ಥೂಲತನುವೆ ಬಸವಣ್ಣನಯ್ಯಾ.
ಎನ್ನ ಸೂಕ್ಷ್ಮತನುವೆ ಚೆನ್ನಬಸವಣ್ಣನಯ್ಯಾ.
ಎನ್ನ ಕಾರಣತನುವೆ ಪ್ರಭುದೇವರಯ್ಯಾ,
ಇಂತಿವರ ಕರುಣದಿಂದಲಾನು ಬದುಕಿದೆನಯ್ಯಾ
ಕದಿರರೆಮ್ಮಿಯೊಡೆಯ ಗುಮ್ಮೇಶ್ವರಾ.
745
ಎಲ್ಲರ ಗಂಡಂದಿರು ಪರದಳವಿಭಾಡರು
ಎನ್ನ ಗಂಡ ಮನದಳವಿಭಾಡ.
ಎಲ್ಲರ ಗಂಡಂದಿರು ಗಜವೇಂಟೆಕಾರರು
ಎನ್ನ ಗಂಡ ಮನವೇಂಟೆಕಾರ.
ಎಲ್ಲರ ಗಂಡಂದಿರು ತಂದಿಕ್ಕಿಸಿಕೊಂಬರು
ಎನ್ನ ಗಂಡ ತಾರದೆ ಇಕ್ಕಿಸಿಕೊಂಬ.
ಎಲ್ಲರ ಗಂಡಂದಿರಿಗೆ ಮೂರು,
ಎನ್ನ ಗಂಡಂಗೆ ಅದೊಂದೆ
ಅದೊಂದೂ ಸಂದೇಹ, ಕದಿರರೆಮ್ಮಿಯೊಡೆಯ ಗುಮ್ಮೇಶ್ವರಾ.
746
ಎಲ್ಲರ ಹೆಂಡಿರು ತೊಳಸಿಕ್ಕುವರು
ಎನ್ನ ಗಂಡಂಗೆ ತೊಳಸುವುದಿಲ್ಲ.
ಎಲ್ಲರ ಗಂಡಂದಿರಿಗೆ ಬಸಿವರು;
ಎನ್ನ ಗಂಡಂಗೆ ಬಸಿವುದಿಲ್ಲ.
ಎಲ್ಲರ ಗಂಡಂದಿರಿಗೆ ಬೀಜವುಂಟು
ಎನ್ನ ಗಂಡಂಗೆ ಅಂಡದ ಬೀಜವಿಲ್ಲ.
ಎಲ್ಲರ ಗಂಡಂದಿರು ಮೇಲೆ;
ಎನ್ನ ಗಂಡ ಕೆಳಗೆ, ನಾ ಮೇಲೆ.
ಕದಿರರೆಮ್ಮಿಯೊಡೆಯ ಗುಮ್ಮೇಶ್ವರಾ.
747
ನಾ ತಿರುಹುವ ರಾಟೆಯ ಕುಲಜಾತಿಯ ಕೇಳಿರಣ್ಣಾ
ಅಡಿಯ ಹಲಗೆ ಬ್ರಹ್ಮ, ತೋರಣ ವಿಷ್ಣು,
ನಿಂದ ಬೊಂಬೆ ಮಹಾರುದ್ರ;
ರುದ್ರನ ಬೆಂಬಳಿಯವೆರಡು ಸೂತ್ರಕರ್ಣ.
ಅರಿವೆಂಬ ಕದಿರು, ಭಕ್ತಿಯೆಂಬ ಕೈಯಲ್ಲಿ ತಿರುಹಲಾಗಿ,
ಸುತ್ತಿತ್ತು ನೂಲು ಕದಿರು ತುಂಬಿತ್ತು.
ರಾಟೆಯ ತಿರುಹಲಾರೆ ಎನ್ನ ಗಂಡ ಕುಟ್ಟಿಹ
ಇನ್ನೇವೆ ಕದಿರರೆಮ್ಮಿಯೊಡೆಯ ಗುಮ್ಮೇಶ್ವರಾ ?

ಗ್ರಂಥಋಣ: ಸಮಗ್ರ ವಚನ ಸಂಪುಟಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು

*
Previous ಏಕಾಂತ ರಾಮಿತಂದೆ ಕನ್ನದ ಮಾರಿತಂದೆ Next