Previous ಶಿವನಾಗಮಯ್ಯ ಸಿದ್ಧಾಂತಿ ವೀರಸಂಗಯ್ಯ Next

ಸತ್ತಿಗೆ ಕಾಯಕದ ಮಾರಯ್ಯನ ವಚನಗಳು

594
ಆವಾವಾಚರಣೆಯ ತೊಟ್ಟಲ್ಲಿ ಅನುಸರಿಯಿಲ್ಲದಿಪ್ಪುದೆ, ಗುರುಚರಲಿಂಗಪೂಜೆ.
ಖಂಡಿತ ಕಾಯಕಕ್ಕೆ ಇಂದಿಂಗೆ ನಾಳಿಂಗೆಂಬ ಸಂದೇಹವಿಲ್ಲದಲ್ಲಿಯೆ ಸರ್ವಶೀಲ.
ತಾಗು ನಿರೋಧ ಬಂದಲ್ಲಿ ,
ಕಂದದೆ ಕುಂದದೆ ಎಂದಿನಂತಿದ್ದಲ್ಲಿ ಶಿವಲಿಂಗಪೂಜೆ.
ಇದಕ್ಕೆ ಹಿಂದುಮುಂದು ವಿಚಾರಿಸಲಿಲ್ಲ,
ಇದಕ್ಕೆ ಐಘಂಟೇಶ್ವರಲಿಂಗ ಸಾಕ್ಷಿಯಾಗಿ.

595
ಉದಯಕ್ಕೆ ಉತ್ಪತ್ಯವಾಗಿ, ಮಧ್ಯಾಹ್ನಕ್ಕೆ ಸ್ಥಿತಿಯಾಗಿ,
ಅಸ್ತಮಾನಕ್ಕೆ ಲಯವಹ ದೇಹವ ಹೊತ್ತು ಮತ್ತೆ,
ನಿಶ್ಚಿಂತದಲ್ಲಿ ನಿಂದು, ಕಷ್ಟವ ಬಿಡಿಸುವ ಠಾವ ತೋರಾ.
ಹಗಲಿಂಗೆ ಹಸಿವು ತೃಷೆ, ಇರುಳಿಂಗೆ ವಿಷಯ ವ್ಯಸನ ವ್ಯಾಪಾರ,
ಇಂತೀ ಘಟವ ಹೊಕ್ಕು,
ಐದಕ್ಕೆ ಒಡಲಾದೆಯಲ್ಲಾ ಐಘಂಟೇಶ್ವರಲಿಂಗಾ.

596
ಒಂದ ಹಿಡಿವಲ್ಲಿ ಸತ್ತಿಗೆಯವ,
ಇದಿರ ಉಭಯದ ಸಂದ ಕಡಿವಲ್ಲಿ ಕೊಡಲಿಯವ.
ಹಿಂದುಮುಂದಣ ತಮವನೊಂದುಗೂಡಿ, ಕೆಡಿಸುವುದಕ್ಕೆ ಪಂಜಿನವ.
ಇದು ಅಂದು ಬಂದ ಬೆಸದ ಕಾಯಕ,
ಐಘಂಟೇಶ್ವರಲಿಂಗವಿದ್ದಲ್ಲಿಯೆ ಬೆಸನಿಲ್ಲದಿರಬೇಕು.

597
ಒಂದೆ ಕಂಬದ ನಡುವೆ ಹಲವು ಬಿದಿರುಗೂಡಿ,
ಅಗಲಕ್ಕೆ ಹೊಲಬಾಯಿತ್ತು ನೋಡಾ.
ಬಿಸಿಲ ಕಾಯದು, ಗಾಳಿಯ ತಡೆಯದು, ಮಳೆಗೆ ನೆನೆವುತ್ತಿದೆ ನೋಡಾ.
ಈ ಸತ್ತಿಗೆಯ ಹರಕು ನಿಜಸತ್ಯವಾಗಿ,
ಐಘಂಟೇಶ್ವರಲಿಂಗವನರಿದಲ್ಲದೆ
ಸತ್ತಿಗೆಯ ಕಾವಿನ ಹಂಗು ಹರಿಯದು ನೋಡಾ.

598
ಕಂಬಳಕ್ಕೆ ಹೋದಲ್ಲಿ ಅವರಂಗವ ಹೊತ್ತು ಹೋಹನ್ನಕ್ಕ,
ಸಂಬಂಧಕ್ಕೆ ಕೂಲಿಯ ಮಾಡಿ ತಂದು ಸಂದುದೇ ಕಾಯಕದೊಳಗು,
ಎನ್ನಂಗದ ಸತ್ತಿಗೆಯ ಕಾಯಕ.
ಸಂಗನಬಸವಣ್ಣಂಗೆ ನೆಳಲು ಹಿಂಗಿದಾಗವೇ ಕಾಯಕ.
ಕಾಯಕ ನಿಂದುದೆಂಬ ಭಾಷೆ,
ಎನಗೆ ಐಘಂಟೇಶ್ವರಲಿಂಗವಿಲ್ಲಾ ಎಂಬ ಶಪಥ.

599
ಕಾಯಕವೆಂದು ಕಲ್ಪಿಸಿ ಮಾಡುವಲ್ಲಿ,
ತುಡುಗುಣಿಯಂತೆ ಮಡದಿ ಮಕ್ಕಳಿಗೆಂದು
ಹೆಡಿಗೆ ಗಳಿಗೆಯಲ್ಲಿ ಹೊಯ್ದು, ಕಡ ಪರಪತಿಯೆಂದು ಕೊಟ್ಟಡೆ,
ಅದು ಗುರುಪರಚರ ಈ ಮೂರರೊಡವೆಯಲ್ಲ.
ಆತನು ಮೃಡಭಕ್ತನೆಂದು ಅವನ ಮನೆಯಲ್ಲಿ ಒಡಗೂಡಿ ಉಂಡಡೆ,
ಅಡಗ ನಾಯಿ ತಿಂದು, ಮಿಕ್ಕುದ ನರಿ ತಿಂದಂತೆ,
ಐಘಂಟೇಶ್ವರಲಿಂಗವೆ ಸಾಕ್ಷಿಯಾಗಿ.

600
ತತ್ವದ ಕಾವು, ನಿಜನಿಶ್ಚಯದ ಬಿದಿರು, ಭಕ್ತಿಜ್ಞಾನ ವೈರಾಗ್ಯ.
ಇಂತೀ ತ್ರಿವಿಧ ಮುಪ್ಪುರಿಗೂಡಿದ ನೂಲಿನಲ್ಲಿ
ಕಟ್ಟುಗಳ ಕಟ್ಟಿ, ಅಹಂಕಾರ ಗರ್ವದ ನಿರುತವ ಬಿಡಿಸಿ,
ಭಕ್ತಿ ಸತ್ಯಕ್ಕೆ ತಲೆವಾಗುವಂತೆ ಭಾಗ ಒಪ್ಪವ ಮಾಡಿ,
ಕರ್ಕಶ ಮಿಥ್ಯವೆಂಬ ಸಿಗುರೆದ್ದಡೆ ಕೆತ್ತಿಹಾಕಿ,
ಛತ್ರಕ್ಕೆ ಹೆಚ್ಚುಕುಂದಿಲ್ಲದ ವರ್ತುಳಾಕಾರಕ್ಕೆ
ಚಿತ್ತವಸ್ತುವಿನಲ್ಲಿ ತೊಲಗದಂತೆ ಶಾಶ್ವತವಾಗಿ,
ಅಷ್ಟಾವಧಾನಂಗಳೆಂಬ ಕಪ್ಪಡವ ಕವಿಸಿ,
ಚತುಷ್ಟಯಂಗಳೆಂಬ ಸೆರಗು ತಪ್ಪದೆ ಕತ್ತರಿಸಿ,
ಚಿತ್ತ ಹೆರೆಹಿಂಗದ ಲೆಕ್ಕಣಿಕೆಯಲ್ಲಿ ಚಿತ್ರವ ಬರೆದು,
ಅಧಮ ಊಧ್ರ್ವವೆಂಬುದಕ್ಕೆ ಬಲು ತೆಕ್ಕೆಯಿನಿಕ್ಕಿ,
ಸರ್ವವರ್ಮಂಗಳೆಂಬ ಬೆಣೆಗೀಲನಿಕ್ಕಿ,
ಹಿಡಿವುತ್ತಿದ್ದೆ ಛತ್ರವ ನೆಳಲಿಲ್ಲದಂತೆ,
ಐಘಂಟೇಶ್ವರಲಿಂಗಕ್ಕೆ ಬಿಸಿಲುಮಳೆಗಾಳಿಗೆ ಹೊರಗಾಗಬೇಕೆಂದು.

601
ನಿನ್ನ ಓಲೈಸಿಕೊಂಡ ಜೀವಿತಕ್ಕೆ ಲಿಂಗದ ಹಂಗು.
ಆ ಹಂಗಿನಿಂದ ಗುರುಚರದ ಹಂಗು.
ಈ ಮೂರರಿಂದ ಭಕ್ತಿಯೆಂಬ ಸಂದಣಿಯ ಹಂಗು.
ಇದರ ಸಂದೇಹವ ಎನಗೊಂದು ಬಾರಿ ತೋರಾ,
ಸಂಗನಬಸವಣ್ಣಪ್ರಿಯ ಐಘಂಟೇಶ್ವರಲಿಂಗಾ.

602
ಯಾಚಕನ ಮಾಟ, ಕೀರ್ತಿಗೆ ಇಕ್ಕುವನ ಮನೆಯಲ್ಲಿಯ ಊಟ,
ಜಗ ಮೆಚ್ಚಬೇಕೆಂದು ಮಾಟ ಕೂಟ, ಮನ ಮೆಚ್ಚಬೇಕೆಂಬುದಕ್ಕಿಲ್ಲ.
ಇಂತೀ ಮಾಟ ಕೂಟ, ಅವನ ವ್ರತದಾಟ,
ಕೂಸು ಹೇತು ಕಲಸಿ, ತಮ್ಮಪ್ಪನ ಬಾಯಲ್ಲಿ ಇಕ್ಕಿ,
ಮಿಕ್ಕುದ ತೋರಿದಂತಾಯಿತ್ತು.
ವರ್ತಕ ಚಿತ್ತಶುದ್ಧವಿಲ್ಲದವನ ತ್ರಿವಿಧದ ಗೊತ್ತಿನ ಪೂಜೆ ಮಾಡಿ,
ನಷ್ಟವಹುದಕ್ಕೆ ಇದೇ ದೃಷ್ಟ. ಇದಕ್ಕೆ ಐಘಂಟೇಶ್ವರಲಿಂಗವೇ ಸಾಕ್ಷಿ.

603
ಸೂತಕಜನ್ಮದಲ್ಲಿ ಬಂದು, ಭವಸೂತಕ ಬಿಡದು ನೋಡಾ.
ನಡೆವಲ್ಲಿ ಛತ್ರವ ಹಿಡಿದು, ಬಿಟ್ಟಲ್ಲಿ ಕೊಡಲಿಯ ಹಿಡಿದು.
ಮತ್ತೆ ತಮಕ್ಕೆ ಪಂ[ಜು] ಹಿಡಿದು,
ಈ ಮೂರು ಮಣಿಹದಾಟದಿಂದ ಆತ್ಮ ಗಾರಾಗುತ್ತಿದೆ.
ಇದಕ್ಕೆ ಸಾರಿ ಹೇಳಿದೆ, ಐಘಂಟೇಶ್ವರಲಿಂಗವೇ ಓಡಿಹೋಗುತ್ತಿದ್ದೇನೆ.

ಗ್ರಂಥಋಣ: ಸಮಗ್ರ ವಚನ ಸಂಪುಟಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು

*
Previous ಶಿವನಾಗಮಯ್ಯ ಸಿದ್ಧಾಂತಿ ವೀರಸಂಗಯ್ಯ Next