*
ನಿವೃತ್ತಿ ಸಂಗಯ್ಯ ವಚನಗಳು
1280
ಪರಧನ ಪರಾನ್ನ ಪರಸ್ತ್ರೀಯರಾಸೆ ಬಿಡದು, ಶರಣನೆಂತೆಂಬೆ ಮರುಳೆ?
``ಜಿಹ್ವೆದಗ್ಧ ಪರಾನ್ನಂಚ ಹಸ್ತದಗ್ಧ ಪ್ರತಿಗ್ರಹಂ
ಚಕ್ಷುದಗ್ಧ ಪರಸ್ತ್ರೀನಾಂ ತಸ್ಯ ಜನ್ಮ ನಿರರ್ಥಕಂ'
ಎಂದು ಶ್ರುತಿ ಸಾರಲು ಮತಿಗೆಡುವನಕಟಾ,
ನಿವೃತ್ತಿ ಸಂಗಯ್ಯನೆಂತೊಲಿವನವ್ವಾ! || 1 ||
1281
ಬ್ರಾಹ್ಮಣ ಶಿವಭಕ್ತನಾದ ಬಳಿಕ ಬ್ರಾಹ್ಮಣರ ಬೆರಸಲಾಗದು.
ಕ್ಷತ್ರಿಯ ಶಿವಭಕ್ತನಾದ ಬಳಿಕ ಕ್ಷತ್ರಿಯರ ಬೆರಸಲಾಗದು.
ವೈಶ್ಯ ಶಿವಭಕ್ತನಾದ ಬಳಿಕ ವೈಶ್ಯರ ಬೆರಸಲಾಗದು.
ಶೂದ್ರ ಶಿವಭಕ್ತನಾದ ಬಳಿಕ ಶೂದ್ರರ ಬೆರಸಲಾಗದು.
ಇವರ ಜೀವದತೀತರ ಜಾತಿಯ ಉದ್ಭವಮಂ
ಇವದಿರ ಕಾಯಕ ಕುಲದರುಶನ ಪಕ್ಷ
ಸಪ್ತಧಾತು ಸರಿಯೆಂದೆಂಬರೆ
``ಕೃತಂ ಜೀವಂ ಕೃತಂ ಫಲಂ'
ಅಗ್ರಜ ಮೊದಲು ಅಂತ್ಯಜ ಕಡೆ
``ಬ್ರಾಹ್ಮಣ ಕ್ಷತ್ರಿಯ ವೈಶ್ಯ
ಶೂದ್ರೋವಾ ಗುರುಹಸ್ತಯೋ||
ಪ್ರತಿ ಭೂಜನ ಕರ್ತವ್ಯಂ
ಕರ್ತವ್ಯಂ ಪುನರ್ವತಾಯೋ'
ನಿವೃತ್ತಿ ಸಂಗಯ್ಯದೇವ ಬಲ್ಲ.
ಜಾತಿ ವಿಚಾರದ ಭೇದವ ಬಿಟ್ಟರೆ ಬಿಡುವುದು
ಬಿಡದಿರ್ದಡೆ ತಮ್ಮ ಮುನ್ನಿನಂತಿಹುದು. || 2 ||
1282
ಸಚರಾಚರವೆಲ್ಲಕ್ಕೆ ಆಸೆಯೆ ಪ್ರಾಣ.
ಸಚರಾಚರದ ಚತುರಾಸಿ ಬಲದೂಳಗೆ
ಆಸೆಯಿಲ್ಲದೆ ಚರಿಸುವ ಲಿಂಗಾಂಗಿಯ ತೋರಾ.
``ಆಸೆಯಾ ಬದ್ಧತೇ ಲೋಕೇ
ಕರ್ಮಣಾ ಬಹು ಬಂತಯಾ
ಆಯು ಕ್ಷೀಣನ ಜಾನಾತಿ
ಮೇಣುಸೂತ್ರ ವಿಧೀಯತೇ
ಎಂದುದಾಗಿ, ಆಸೆಯನೆ ಧಿಕ್ಕರಿಸಿ
ನಿರಾಸೆಯಲಿ ನಡೆವವರ ಸರಿಯೆಂಬೆ ಕಾಣಾ,
ನಿವೃತ್ತಿ ಸಂಗಯ್ಯ. || 3 ||
ಗ್ರಂಥಋಣ: ಸಮಗ್ರ ವಚನ ಸಂಪುಟಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು
*