Previous ಕೀಲಾರದ ಭೀಮಣ್ಣ ಉರಿಲಿಂಗಪೆದ್ದಿಗಳ ಪುಣ್ಯಸ್ತ್ರೀ ಕಾಳವ್ವೆ Next

ಕನ್ನಡಿಕಾಯಕದ ಅಮ್ಮಿದೇವಯ್ಯ ವಚನಗಳು

12
ಅಂಗದ ರೋಮ ಮುಮ್ಮೊನೆದೋರಿ ಮೊಳೆಗಾಣದಂತೆ,
ದಶಾಂಗುಲಿಯ ನಖ ಪ್ರತಿರೂಪುದೋರದಂತೆ.
ಇದು ಶರೀರ ಚಿತ್ರಾಂಗಿಯ ಕಾಯದ ನಿರಿಗೆಯ ತೆರ.
ಹೊರಗಣ ಕ್ರೀ, ಆತ್ಮನೊಳಗಣ ಜ್ಞಾನ
ಇಂತೀ ಉಭಯವನರಿದು ಕಾಯಕವನೊಡಗೂಡಿ ಮಾಡಬೇಕು.
ಹದಿನೆಂಟು ಕಾಯಕದೊಳಗಾದ, ನಾಲ್ಕು ಕಾಯಕ ಹೊರಗಾದ
ಮೂರು ಕಾಯಕ ಮುಂತಾದ ಕಾಯಕದಂದವ ತಿಳಿದು
ಚೆನ್ನಬಸವಣ್ಣ ಸಾಕ್ಷಿಯಾಗಿ
ಕಮಳೇಶ್ವರಲಿಂಗವನೊಡಗೂಡಬೇಕು.

13
ಆವಾವ ಜಾತಿ ಗೋತ್ರದಲ್ಲಿ ಬಂದಡೂ
ತಮ್ಮ ತಮ್ಮ ಕಾಯಕಕ್ಕೆ, ಭಕ್ತಿಗೆ ಸೂತಕವಿಲ್ಲದಿರಬೇಕು.
ಆವಾವ ವ್ರತವ ಹಿಡಿದಡೂ, ಇದಿರ ದಾಕ್ಷಿಣ್ಯವ ಮರೆದು
ತನ್ನಯ ತ್ರಿಕರಣ ಶುದ್ಧವಾಗಿ ನಡೆಯಬೇಕು.
ಪರಪುರುಷಾರ್ಥಕ್ಕೆ ಅರಿಯಿಸಿಕೊಂಬಡೆ ಮೂಗ
ಅರುಹಿರಿಯರು ಹೇಳಿದರೆಂದು ಕಲಸಬಹುದೆ ಅಮಂಗಲವ.
ಇಂತೀ ಕ್ರೀಯಲ್ಲಿ ಭಾವಶುದ್ಧವಾಗಿ
ಭಾವದಲ್ಲಿ ದಿವ್ಯಜ್ಞಾನಪರಿಪೂರ್ಣವಾಗಿಪ್ಪ ಗುರುಚರಭಕ್ತಂಗೆ
ಚೆನ್ನಬಸವಣ್ಣ ಸಾಕ್ಷಿಯಾಗಿ
ಕಮಳೇಶ್ವರಲಿಂಗವು ತಾನೆಯೆಂದು ಭಾವಿಸುವನು.

14
ಎನ್ನ ಕನ್ನಡಿ ಒಳ ಹೊರಗಿಲ್ಲ.
ಎನ್ನ ಘಳಿಹ ಮುಟ್ಟನೊಳಕೊಂಡ
ಚಿರ ಹಡಪಕ್ಕೆ ಅಳವಲ್ಲ.
ಕತ್ತಿಯ ಬಸವಣ್ಣ ಕೊಟ್ಟ.
ಕತ್ತರಿಯ ಚೆನ್ನಬಸವಣ್ಣ ಕೊಟ್ಟ.
ಕಿತ್ತುಹಾಕುವ ಚಿಮ್ಮಟಿಕೆಯ ಪ್ರಭುರಾಯ ಕೂಟ್ಟ.
ಮಿಕ್ಕಾದ ಎನ್ನಯ ಮುಟ್ಟ ಸತ್ಯಶರಣರು ಕೊಟ್ಟರು.
ದೃಷ್ಟವ ತೋರಿ ಅಡಗುವ ಮುಕುರವ ಕೊಟ್ಟವರ ಹೇಳುವೆನು
ದೃಷ್ಟ ಪ್ರಸಿದ್ಧ ಆಪ್ರತಿಮ ಪ್ರಸನ್ನ
ಚೆನ್ನಬಸವಣ್ಣ ಪ್ರಿಯ ಕಮಳೇಶ್ವರಲಿಂಗವು
ಎನಗೆ ದೃಷ್ಟವ ಕೊಟ್ಟು ತಾ ಬೆಳಗಿನೊಳಗಾದ!

15
ಎಲ್ಲವ ಬಿಟ್ಟು ಹಲ್ಲ ಸುಲಿಯ ಬಂದೆ.
ಮುನ್ನಿನಲ್ಲಿಯ ಹಾವಚೆ ಹಲ್ಲ ಬಿಡದು ನೋಡಾ.
ಮೆಲ್ಲನೆ ಢಾಳಿಸಿದಡೆ ಹಾವಚೆ ಒಲ್ಲಗಾಗದು.
ಬಲ್ಲಿತ್ತಾಗಿ ಢಾಳಿಸಿದಡೆ ಒಸಡಿನಲ್ಲಿ ಜಾರಿತ್ತು.
ಇಂತೀ ಬಲ್ಲತನದಲ್ಲಿ ಸಂಸಾರದ ಬಾಯ ಹಲ್ಲ ಸುಲಿಯಬೇಕು.
ಇದ ಬಲ್ಲವರ ಬಲ್ಲ ತಾನರಿಯ,
ಚೆನ್ನಬಸವಣ್ಣಪ್ರಿಯ ಕಮಳೇಶ್ವರಲಿಂಗ ಸಾಕ್ಷಿಯಾಗಿ.

16
ತುರುಬು ಜಡೆ ಬೋಳು ಬಿಡುಗುರುಳು
ಇವೆಲ್ಲವೂ ರುದ್ರನ ಅಡಿವೆಜ್ಜೆಯ ಕುರುಹು.
ಇಂತೀ ಕುರುಹಿನ ಮುದ್ರೆಗಳಲ್ಲಿ ಬಂದು
ತಮ್ಮಡಿಯ ಇರವನರಿಯದೆ
ಬರಿಯ ಬೊಮ್ಮವನಾಡಿ ನುಡಿವರ
ಸರ್ವಾಂಗದ ತೊಡಿಗೆಯ ಬಂಡೆ ಸಿಡಿಹಿಂಗೆ
ಕತ್ತರಿ ತರುಬಿಂಗೆ ಬೆಳೆದುದಕ್ಕೆ ತೊರೆಗೂರ
ಮತ್ತೆ, ಹರಿವ ನಖಕ್ಕೆ ಕಡಿಚಣ
ಮತ್ತೆ, ಉಸುರಿನ ದೆಸೆಯ ನಾಸಿಕಕ್ಕೆ, ಕಸನ ತೆಗೆಯುವುದಕ್ಕೆ
ಅಂಗುಲ ಸಂಗಿ.
ಇಂತೀ ಕಾಯಕದ ಬೆಂಬಳಿಯಲ್ಲಿ ತಂದನೆನ್ನ ಬಸವಣ್ಣ.
ಆತನಂಗದ ದೆಸೆಯಿಂದ ಬಂದೆ ಕನ್ನಡಿವಿಡಿದು,
ಆ ಕನ್ನಡಿಯ ದೆಸೆಯಿಂದ ನಿಮ್ಮ ಕಂಗಳಲ್ಲಿ ನೋಡಿ
ನಿಮ್ಮ ಮಲವ ನೀವೇ ಪರಿಹರಿಸಿಕೊಳ್ಳಿ ಎನಗನ್ಯ ಭಿನ್ನವಿಲ್ಲ
ಕಮಳೇಶ್ವರ ಲಿಂಗವು ಕಳುಹಿದ ಮಣಿಹ.

17
ನಾ ಶಸ್ತ್ರವ ಹಿಡಿದಲ್ಲಿ
ಮುಮ್ಮುಖದಲ್ಲಿ ಒಂದನಿರಿಸಿ ಎರಡ ತೊಡೆವೆನು.
ಪೂರ್ವಪಕ್ಷದಲ್ಲಿ ಆರನಿರಿಸಿ ಮೂರ ತೊಡೆವೆನು.
ಉತ್ತರ ಪಕ್ಷದಲ್ಲಿ ಆರನಿರಿಸಿ ಮೂವತ್ತಾರ ತೊಡೆವೆನು.
ಮೇಲಣ ದಂಡೆಯನೊತ್ತುವಲ್ಲಿ ಎರಡ ನಿಲಿಸಿ
ಇಪ್ಪತ್ತೈದ ತೊಡೆವೆನು.
ಇಂತೀ ಕೆಲಸವ ಸಾಧಿಸಿದಲ್ಲಿ,
ಕಂಕುಳ ತಟ್ಟೆನು, ಮೂಗುವ ಮುಟ್ಟೆನು,
ಮಂಡೆಯ ಬೋಳಿಸುವೆ, ಚಂಡಿಕೆಯನಿರಿಸುವೆನು
ಚೆನ್ನಬಸವಣ್ಣಪ್ರಿಯ ಕಮಳೇಶ್ವರಲಿಂಗ ಸಾಕ್ಷಿಯಾಗಿ.

18
ನಿಜ ಬೋಳಿಂಗೆ ಲೋಚು ಮಾಡಲೇತಕ್ಕೆ?
ಚಿದ್ಘನ ಬೋಳಿಂಗೆ ವೈಭವದ ಮದನನ ಶೃಂಗಾರದ
ಹಾರವೇತಕ್ಕೆ?
ಸಕಲಸುಖ ಬೋಳಿಂಗೆ ಅಖಿಳ ಸುಖಗೋಷ್ಠಿ ಏತಕ್ಕೆ?
ಸರ್ವಸಂಗಪರಿತ್ಯಾಗ ನಿರ್ಮಲ ಪರಮನಿರ್ವಾಣಿಗೆ
ತ್ರಿಬಂಧದಲ್ಲಿ ಸಿಲುಕಿ ಕಂಡವರಿಗೆ ಕಾರ್ಪಣ್ಯಬಡಲೇತಕ್ಕೆ?
ಇಂತೀ ಗುಣದಲ್ಲಿ ತಾವು ತಾವು ಬಂದುದನರಿಯದೆ
ತಮಗೆ ವಂದಿಸಿ ನಿಂದಿಸುವರಂಗವನರಿಯದೆ
ಮತ್ತೆ ಲಿಂಗಾಂಗಿಗಳೆಂದು ನುಡಿವ ಜಗ ಸರ್ವಾಂಗ ಭಂಡರ
ಕಂಡು
ನುಡಿದಡೆ ಸಮಯಕ್ಕೆ ಹಾನಿ.
ಸುಮ್ಮನಿದ್ದಡೆ ಜ್ಞಾನಕ್ಕೆ ಭಂಗ.
ಉಭಯವನೂ ಪ್ರತಿಪಾದಿಸದಿದ್ದಡೆ,
ತನ್ನಯ ಭಕ್ತಿಗೆ ಇದಿರೆಡೆಗೇಡು.
ಇದು ಚುನ್ನವಲ್ಲ, ಎನ್ನಯ ಕೇಡು.
ಈ ಗುಣ ಚೆನ್ನಬಸವಣ್ಣಪ್ರಿಯ
ಕಮಳೇಶ್ವಲಿಂಗ ಸಾಕ್ಷಿಯಾಗಿ.

19
ಪಂಜ ಹಿಡಿವಂಗೆ ಸಂದೇಹವೆಲ್ಲಿದೆ
ಉರಿವ ಬೆಳಗಿಂಗೆ ಸಂದೇಹವುಂಟೆ?
ಸಂಸಾರ ಸಂದಣಿಯಲ್ಲಿ ಅನಂಗನ ಆತುರದಲ್ಲಿ
ಹೊಂದಿ ಬೇವಂಗೆ ಲಂದಣತನವಲ್ಲದೆ
ನಿಜಪ್ರಸಂಗಿಗೆ, ನಿರತಿಶಯ ಲಿಂಗಾಂಗಿಗೆ, ಪರಬ್ರಹ್ಮಪರಿಣಾಮಿಗೆ
ಜಗದ ಹರದಿಗರಲ್ಲಿ ಸಿಕ್ಕಿ ಪರಿಭ್ರಮಣಕ್ಕೊಳಗಾಹನೆ?
ಇಂತೀ ನಿಜವನರಿದಾತನೆ
ಚೆನ್ನಬಸವಣ್ಣ ಸಾಕ್ಷಿಯಾಗಿ
ಕಮಳೇಶ್ವರಲಿಂಗವು ತಾನೆಂಬೆನು.

20
ಬೆನ್ನಪಳಿಗೆ ಎನ್ನ ಕೇಳಬೇಡ.
ಅಂಗಾಲ ಹುಣ್ಣಿಗೆ ಎನ್ನ ಕೇಳಬೇಡ.
ಬಾಯೊಳಗಣ ಬಗದಳಕ್ಕೆ ಎನ್ನ ಕೇಳಬೇಡ.
ಆ ವ್ಯಾಧಿಗೆ ಬಲ್ಲವರ ಬಲ್ಲೆ.
ಬೆನ್ನಿಗೆ ಬಸವಣ್ಣ, ಕಾಲಿಗೆ ಚೆನ್ನಬಸವಣ್ಣ,
ಬಾಯಿಗೆ ಪ್ರಭುದೇವರು, ಬಸುರಿಗೆ ನಿಜಗುಣ.
ಈ ರೋಗವ ಬಲ್ಲವರಿವರು, ಮಿಕ್ಕಾದ ವ್ಯಾಧಿಗೆ ನಾನರಸು.
ಮತ್ತಾರುವ ಬಳಿವಿಡಿಯಲಿಲ್ಲ.
ಚೆನ್ನಬಸವಣ್ಣ ಮುಂತು ಕಮಳೇಶ್ವರಲಿಂಗ ಹಿಂತುಳಿದು
ಒಡಗೂಡಬೇಕು.

21
ಹಿಡಿಯಿಲ್ಲದ ಶಸ್ತ್ರ, ಕೀಲಿಲ್ಲದ ಕತ್ತರಿ,
ಉಭಯ ಒಡಗೂಡದ ಚಿಮ್ಮುಟ, ರೂಹಿಲ್ಲದ ಚಣ
ಹಲ್ಲಿಲ್ಲದ ಹಣಿಗೆ, ಮಲವಿಲ್ಲದ ಬೆಳಗಿನ ಮುಕುರವ ಹಿಡಿದು
ಶರಣರೆಲ್ಲರ ಅಡಿವಿಡಿದಾಡ ಬಂದೆ.
ಚೆನ್ನಬಸವಣ್ಣಂಗೆ ಭೃತ್ಯನಾಗಿ, ಶರಣತತಿಗೆ ಲೆಂಕನಾಗಿ
ಸತ್ಯ ಗುರುಚರದ ಕರ್ತೃಸ್ವರೂಪಕ್ಕೆ ಡಿಂಗರಿಗ
ಉಭಯ ಡಿಂಗರಿಗರ ಪ್ರತಿ ಡಿಂಗರಿಗರ ಕಂದನೆಂದು
ಪ್ರತಿಪಾಲಿಸಿಕೋ
ಚೆನ್ನಬಸವಣ್ಣಪ್ರಿಯ ಕಮಳೇಶ್ವರಲಿಂಗಾ.

ಗ್ರಂಥಋಣ: ೧೫ ಸಮಗ್ರ ವಚನ ಸಂಪುಟಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು. 2001

ಪರಿವಿಡಿ (index)
*
Previous ಕೀಲಾರದ ಭೀಮಣ್ಣ ಉರಿಲಿಂಗಪೆದ್ದಿಗಳ ಪುಣ್ಯಸ್ತ್ರೀ ಕಾಳವ್ವೆ Next