22
ಊರ ಕನ್ನವನಿಕ್ಕಿ ನೀರ ಕದ್ದೆನು.
ಹೋಹಾಗ ಆರೂ ಅರಿಯರು,
ಬಾಹಾಗ ಎಲ್ಲರೂ ಅರಿವರು.
ಅರಿದರಲ್ಲಾ ಎಂದು ಸುರಿದೆ ನೀರ.
ಹಾಕಿದ ಮಡಕೆಯು ಕನ್ನಗತ್ತಿಯ ಕೈಯಲ್ಲಿಯದೆ.
ಅಂಗ ಸಿಕ್ಕಿತ್ತು ಮದನಂಗದೂರ ಮಾರೇಶ್ವರಾ.
23
ಎನ್ನ ಕನ್ನಗತ್ತಿಯ ಒಡೆಯಂಗೆ ಆಡನರಿದೆ,
ಕೋಡಗದ ಬಲಿಯನಿಕ್ಕಿದೆ,
ಎನ್ನ ಮಾತಾಪಿತರ ಮೀಸಲನಿಕ್ಕಿದೆ.
ಇಷ್ಟಕ್ಕೆ ಎನಗೆ ಕನ್ನ ಕೂರ್ತು ಬಾರದಿದ್ದಡೆ
ಮಾರನವೈರಿ ಮಾರೇಶ್ವರನಿಲ್ಲಾ ಎಂದೆ.
24
ಕತ್ತಲೆಯಲ್ಲಿ ಕನ್ನವನಿಕ್ಕಿದಡೆ
ಎನಗೆ ಕತ್ತಿಯ ಕೊಟ್ಟ ಕರ್ತುವಿಗೆ ಭಂಗ.
ಅವರು ಮರದಿರ್ದಲ್ಲಿ ಮನೆಯ ಹೊಕ್ಕಡೆ
ಎನ್ನ ಚೋರತನದ ಅರಿಕೆಗೆ ಭಂಗ.
ಮರದಿರ್ದವರ ಎಬ್ಬಿಸಿ ಅವರಿಗೆ ಅವರೊಡವೆಯ ತೋರಿ
ಎನ್ನೊಡವೆಯ ತಂದೆ ಮಾರನವೈರಿ ಮಾರೇಶ್ವರಾ.
25
ನುಡಿದ ಮಾತಿಂಗೆ ಕೊರತೆಯೆಂದು,
ಮನಮಾಡಿ ತನು ಅಂಡಿಸಲೇತಕ್ಕೆ?
ಹಾವಿನ ಹೇಳಿಗೆಯ ತೆಗೆದ ಕೋಡಗನಂತೆ ಮಾತಾಡಲೇಕೆ?
ಮತ್ತಡಗಲೇಕೆ?
ಮಕರಧ್ವಜವೈರಿ ಮಾರೇಶ್ವರಾ.
ಗ್ರಂಥಋಣ: ಸಮಗ್ರ ವಚನ ಸಂಪುಟಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು
*