Previous ಮಡಿವಾಳ ಮಾಚಿದೇವರ ಸಮಯಾಚಾರದ ಮಲ್ಲಿಕಾರ್ಜುನ ಮೈದುನ ರಾಮಯ್ಯ Next

ಮಾರೇಶ್ವರೊಡೆಯರು ವಚನಗಳು

1272
ಅಪ್ಪುವಿನ ಶಿಲೆಯ, ಉಳಿಯ ಮೊನೆಯಲ್ಲಿ ಚಿತ್ರಿಸಬಹುದೆ ?
ಅರಗಿನ ಪಟವ, ಉಳಿಯ ಮೊನೆಯಲ್ಲಿ ಅಕ್ಷರವ ಬರೆಯಬಹುದೆ ?
ಮೃತ್ತಿಕೆಯ ಹರುಗೋಲನೇರಿ, ನದಿಯ ತಪ್ಪಲಿಗೆ ಹೋಗಬಹುದೆ ?
ನಿಜನಿಶ್ಚಯವನರಿಯದವನ ವಾಚಾರಚನೆ ಇಷ್ಟಲ್ಲದಿಲ್ಲ.
ನಿಜತತ್ವವನರಿದವನ ವಾಚಾರಚನೆಯ ಕುರುಹೆಂತುಟೆಂದಡೆ !
ಶಿಲೆಯೊಳಗಣ ಸುರಭಿಯಂತೆ, ಪ್ರಳಯದೊಳಗಾಗದ ನಿಜನಿವಾಸದಂತೆ,
ಆಯದ ಗಾಯದಂತೆ, ಸಂಗಾಯದ ಸುಖದಂತೆ.
ಇಂತೀ ಭಾವರಹಿತವಾದ ಭಾವಜ್ಞನ ತೆರ,
ಕೂಗಿಂಗೆ ಹೊರಗು, ಮಹಾಮಹಿಮ ಮಾರೇಶ್ವರಾ.

1273
ಉಂಬವರೆಲ್ಲ ಒಂದೇ ಪರಿಯೆ,
ತಮ್ಮ ತಮ್ಮ ಬಾಯಿಚ್ಫೆಯಲ್ಲದೆ ?
ಇಕ್ಕುವರಂದಕ್ಕೆ ಉಂಡಡೆ,
ತನಗೇ ಸಿಕ್ಕೆಂದೆ ಮಾರೇಶ್ವರಾ.

1274
ಉಕ್ಕುವ ಬೆಣ್ಣೆಯ ಒಲೆಯ ಮೇಲಿರಿಸಿ,
ಅಳಲುತ್ತ ಬಳಲುತ್ತಲಿರ್ದಾರಯ್ಯ.
ಅಲ್ಲದ ಚೇಳಿನೊಳು ಚಲ್ಲವಾಡಿ,
ಎಲ್ಲರೂ ನಾಣುಗೆಟ್ಟರಲ್ಲಯ್ಯಾ.
ಎಲ್ಲರ ಅರಿವು, ಇಲ್ಲಿಯೆ ಉಳಿಯಿತ್ತು.
ಇದ ಬಲ್ಲವರಾರೊ, ಮಾರೇಶ್ವರಾ ?

1275
ಊಡಿದರುಣ್ಣದು, ಒಡನೆ ಮಾತಾಡದು.
ನೋಡದು, ನುಡಿಯದು, ಬೇಡದು, ಕಾಡದು.
ಕಾಡಬೆರಣಿಯ ಕೈಯಲ್ಲಿಕೊಟ್ಟು,
ಹೇಳದೆ ಹೋದೆಯೋ ಮಾರೇಶ್ವರಾ.

1276
ಊರೆಲ್ಲರೂ ನೆರೆದು ಕಳ್ಳನ ಬೆಳ್ಳನೆಂದಡೆ,
ಅವ ಕಳ್ಳನೋ, ಬೆಳ್ಳನೋ? ನೀವು ಹೇಳಿರೆ.
ಇವರೆಲ್ಲರೂ ಕೂಡಿ ಬಲ್ಲವನವನಲ್ಲ ಎಂದಡೆ,
ಅವನೆಲ್ಲಿರ್ದಡೇನು ಮಾರೇಶ್ವರಾ.

1277
ಓವಿದ ಬೆಣ್ಣೆಯ ಓಡಿನಲಿಕ್ಕಿ,
ಸಾವುತ ಬೇವುತಲೈದರಲ್ಲಾ.
ಇರ್ದ ತಳವಾರ ನಿದ್ರೆಯಲೊರಗಲು,
ಹೊದ್ದಿರ್ದ ನಿಧಾನ ಹೋಯಿತ್ತಲ್ಲಾ.
ಬದ್ಧಕತನದಲಿ ಬಳಲುವರೆಲ್ಲರ
ಹೊದ್ದದೆ ಹೋದನೊ ಮಾರೇಶ್ವರಾ.

1278
ಕನಸಿನ ಕಾಮಿನಿ, ಕಾಯವಿಲ್ಲದ ವಿಟನನಪ್ಪಿ
ನೋಡಿದಲ್ಲಿ, ಆರುವನೂ ಕಾಣೆ.
ಉಕ್ಕಿತ್ತು ಕಾಯದೊಳಗಿದ್ದ ಬಿಂದು.
ಜನದ ಸಲುಗೆಯಲೊಲಿಯದೆ,
ನೀನೆನ್ನ ನಿದ್ದೆಯಲೊಲಿವರೆ ಮಾರೇಶ್ವರಾ.

1279
ತನ್ನಲ್ಲಿ ಒಂದು ಗುಣ ತೋರಲಿಕೆ,
ಆ ಗುಣವ ಇದಿರ ಕಂಡು ನುಡಿದರೆಂದು ನೋಯಲೇಕೆ ?
ಆ ನುಡಿ ತನಗೆ ನಿರುತ್ತರವೆಂಬುದನರಿತು,
ಘಾಯ ಬಾವುಗಳಲ್ಲಿ, ಶೋಣಿತ ಹೊರೆಯಲ್ಲಿ ನಿಂದಿರಲಿಕ್ಕಾಗಿ,
ಪಾಳಿಸಿ ಹೊರವಡಿಸಿದಾತನೇನು ಹಗೆಯೇ?
ತನಗೆಂಬುದನರಿತು ತನ್ನಲ್ಲಿ ಉಂಟಾದ ಅವಗುಣ,
ತನಗೆ ತೋರಿದಡೆ, ದೃಷ್ಟವ ಕಂಡು ಹೇಳಿದ ಮತ್ತೆ
ಮಿಥ್ಯಗುಣವಿಲ್ಲದೆ ಆ ಕಪಟಗುಣವ ಬಿಡಬೇಕು.
ಈ ಗುಣ ಅಂಗವಿರ್ದಲ್ಲಿ, ನಿಂದೆ ದುರ್ಗುಣ ಸೋಂಕದಿಹುದೆ ?
ಅರಿಯದೆ ಸೋಂಕಿದಲ್ಲಿ, ಅರಿದ ಮತ್ತೆ ತೊರೆಯಬೇಕು.
ತೊರೆದಡೆ ಕೂಗಿನ ದನಿಗೆ ಹೊರಗು,
ಮಹಾಮಹಿಮ ಮಾರೇಶ್ವರಾ.

1280
ನುಡಿದ ಮಾತಿಂಗೆ ಕೊರತೆಯೆಂದು,
ಮನವ ಮಾಡಿ ತನು ಅಂಡಿಸಲೇತಕ್ಕೆ ?
ಹಾವಿನ ಹೇಳಿಗೆಯ ತೆಗೆದ ಕೋಡಗದಂತೆ,
ಮಾತಾಡಲೇಕೆ, ಮತ್ತುಡುಗಲೇಕೆ,
ಮಕರಧ್ವಜವೈರಿ ಮಾರೇಶ್ವರಾ ?

1281
ಬಯಲೊಳಗಣ ರೂಪು, ರೂಪಿನೊಳಗಣ ಬಯಲು,
ಉಭಯವ ವಿಚಾರಿಸಿ ನೋಡುವಲ್ಲಿ,
ಕುಂಭದೊಳಗೆ ನೀರ ತುಂಬಿ, ಸಿಂಧುವಿನೊಳಗೆ ಮುಳುಗಿಸಲಾಗಿ,
ಅದರೊಳಗೂ ನೀರು, ಹೊರಗೂ ನೀರು.
ಹೊರಗಣ ನೀರು ಒಳಗಾಯಿತ್ತು, ಒಳಗಣ ನೀರು ಹೊರಗಾಯಿತ್ತು.
ಕುಂಭದೊಳಗಣ ನೀರಂಗಕ್ಕೆ ಒಳಗೋ ಹೊರಗೋ ಎಂಬುದ ವಿಚಾರಿಸಿ ತಿಳಿದು,
ಅಂಗದ ಮೇಲಿಹ ಲಿಂಗ, ಲಿಂಗವ ಧರಿಸಿಹ ಅಂಗ,
ಆ ಅರುಹಿನ ಕುರುಹಿಂಗೆ ಒಳಗೋ ಹೊರಗೋ ಎಂಬುದ ವಿಚಾರಿಸಿ,
ಕರ್ಪುರದ ಹೊಗೆಯೊಳಗೆ ಉಭಯ ಬಯಲಾಗಿ,
ಮಡಕೆ ಉಳಿಯಿತ್ತದೇಕೆ ? ಘಟ ಉಳಿದು ಆತ್ಮ ಬಯಲಾಯಿತ್ತದೇಕೆ ?
ಉಭಯ ನಿರಂತವಾದಲ್ಲಿ, ಉರಿಯಿಂದ ಕರ್ಪುರ ನಷ್ಟ,
ಕರ್ಪುರದಿಂದ ಉರಿ ನಷ್ಟವಾದಂತೆ.
ಇಂತೀ ಉಭಯಸ್ಥಲದೊಳಗೆ ಅಂಗಲಿಂಗ, ಪ್ರಾಣಲಿಂಗ
ಉಭಯವನೊಂದು ಮಾಡಿ ತಿಳಿದು, ನಿಜದಲ್ಲಿ ನಿಂದ
ಲಿಂಗಾಂಗಿಯ ಕೂಗಿನ ಕುಲವಿಲ್ಲ, ಮಹಾಮಹಿಮ ಮಾರೇಶ್ವರಾ

1282
ಬಿಂಗಕ್ಕೆ ಹೊರೆ ಹೊರೆಯಲ್ಲದೆ,
ನಿಜ ಶಿಲೆಯ ದೀಪ್ತಿಯ ತರಂಗಕ್ಕೆ ಹೊರೆ ಹೊರೆಯುಂಟೆ ?
ಸಂಸಾರಿಗೆ ಪ್ರಕೃತಿ ರಾಗದ್ವೇಷವಲ್ಲದೆ,
ಮನವು ಮಹದಲ್ಲಿ ನಿಂದ ನಿಜಲಿಂಗಾಂಗಿಗೆ
ಈ ಉಭಯದ ಸಂದುಂಟೆ ?
ಈ ಗುಣದಂಗ ಲಿಂಗಾಂಗಿಯ ಸಂಗ,
ಮಹಾಮಹಿಮ ಮಾರೇಶ್ವರಾ.

1283
ರಂಜಕರೆಲ್ಲರೂ ರತ್ನವ ಕೆಡಿಸಿ,
[ಅಂ]ಧಕಾರದಲ್ಲಿ ಬಂದು ಅರಸುವರು.
ಅದರಂದ ತಿಳಿಯದು, ಛಂದ ಕಾಣಬಾರದು.
ಬಂದ ಬಟ್ಟೆಯಲ್ಲಿ ತೊಳಲುವರು.
ಸಂದೇಹವಿಡಿದು ಬಂದವರೆಲ್ಲಾ
ಅಂದಂದಿಗೆ ದೂರ, ಮಾರೇಶ್ವರಾ.

1284
ಹುಟ್ಟಿದ ಗಿಡವನು ಮುಟ್ಟಿದುದ ಕೊಟ್ಟಲ್ಲಿ,
ಮುಂದೆ ಫಲವೇನು ?
ಹುಟ್ಟಿದ ಹುಸಿಯನು, ಅಷ್ಟಮದಂಗಳ ಸುಟ್ಟಲ್ಲದಿಲ್ಲ,
ಮಾರೇಶ್ವರಾ.

ಗ್ರಂಥಋಣ: ಸಮಗ್ರ ವಚನ ಸಂಪುಟಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು

*
Previous ಮಡಿವಾಳ ಮಾಚಿದೇವರ ಸಮಯಾಚಾರದ ಮಲ್ಲಿಕಾರ್ಜುನ ಮೈದುನ ರಾಮಯ್ಯ Next