ರಕ್ಕಸಬೊಮ್ಮಿತಂದೆ - ರಕ್ಕಸ ಬ್ರಹ್ಮಯ್ಯನ ವಚನಗಳು
|
|
1
ಆರೇನೆಂದಡೂ ಎನ್ನಲಿ, ಕೊಟ್ಟುದ ಕೊಡೆ, ಸಿಕ್ಕುಸುವುದ ಬಿಡೆ.
ಅನಂಗದ ನಡೆ, ಅತಿರೇಕದ ನುಡಿ, ಗತಿಗೆಟ್ಟವರ ಸಂಗ,
ಹೊಸಬರ ಕೂಟದ ಭಕ್ತಿಯನೊಲ್ಲದವರ ಒಡನಾಟ
ಅಸತ್ಯರು ಹೋದ ಹಾದಿ ಎನಗದೆ ಬಟ್ಟೆ,
ರಕ್ಕಸನೊಡೆಯ ಕೊಟ್ಟುದ ಬೇಡ.
2
ನಡೆವರೆಲ್ಲರೂ ಹೆಂಗಸಿನ ಗಂಡಂದಿರು.
ಮಾಡುವರೆಲ್ಲರೂ
ಮಹಾಲಕ್ಷ್ಮಿಯ ತೊಂಡಂದಿರು.
ಉಂಬವರೆಲ್ಲರೂ ಅವರೆಂಜಲ ಕೂಳು.
ಇದನೆಂದೆ ನಾನು.
ಎನಗಿದಿರಾದಡೆ ಅವರ ಬಾಯ ಕೊಂಬವರ ಗಂಡರ ಗಂಡ,
ರಕ್ಕಸನೊಡೆಯ ಕೊಟ್ಟುದ ಬೇಡ.
3
ನಾನು ನಾನಾದ ಕಾರಣ ಎನಗೆ ಗುರುವಿಲ್ಲ.
ನಾನೆಂಬುದರಿಯೆನಾಗಿ ಎನಗಾ ಲಿಂಗವಿಲ್ಲ.
ನಾ ಮಾಡದವನಾಗಿ ಎನಗಾ ಜಂಗಮವಿಲ್ಲ.
ಇದನಿನ್ನಾರ ಕೇಳುವೆ, ರಕ್ಕಸನೊಡೆಯ ಕೊಟ್ಟುದ ಬೇಡ.
4
ಭಕ್ತನಾದಡೆ ಆರೂ ಅರಿಯದಂತೆ ಊರೆಲ್ಲರರಿಕೆಯಾಗಿ,
ಗುರುವಿಂಗೆ ತನು, ಲಿಂಗಕ್ಕೆ ಮನ, ಜಂಗಮಕ್ಕೆ ಧನ,
ಮಾಟವನರಿತು ಮಾಡುವ ಸತಿಯರ ಗಂಡ ನಾನು.
ರಕ್ಕಸನೊಡೆಯ ಕೊಟ್ಟುದ ಬೇಡ
5
ಭಕ್ತರ ಸತಿಯಾಗಿದವರೆ ಎನ್ನ ಹೆಂಡಿರು.
ಭಕ್ತರ ತಲೆಯೆ ಎನ್ನ ಕಾಲು, ಭಕ್ತರ ಚಿತ್ತವೆ ಎನ್ನ ಕುಚಿತ್ತ.
ಭಕ್ತರ ದ್ರವ್ಯ ಎನ್ನ ದೇಹ.
ಭಕ್ತರ ಮುಕ್ತಿ ಎನ್ನ ಕುದುರೆಯ ಲಾಯ.
ಅವರು ಸತ್ತಡೆ ಪಾಪ, ಎನಗದು ನರಕ,
ರಕ್ಕಸನೊಡೆಯ ಕೊಟ್ಟುದ ಬೇಡ.
6
ಭಕ್ತರೆಂಬ ಅಂಗವ ತಾಳಿರ್ದ ಬಸವ ಮೊದಲಾಗಿರ್ದವರ ಎಲ್ಲರ ಗಂಡ.
ಅವರ ಹೆಂಡತಿಯರ ಕಂಡಡೆ ಬಿಡೆ, ಕಾಣದಡೆ ಅಂಜಿದೆನಯ್ಯಾ.
ಎನ್ನ ಕೊಂಡಾಡುವರಿಲ್ಲ, ರಕ್ಕಸನೊಡೆಯ ಕೊಟ್ಟುದ ಬೇಡ.
7
ಭಕ್ತರೆಲ್ಲರೂ ಅಸತ್ಯವ ಮಾಡುವಾಗ ನಾನೆ ಭಕ್ತನಾಗಿದ್ದೆ.
ಇವರೆಲ್ಲರು ಗುರುಲಿಂಗಜಂಗಮಕ್ಕೆ ಮಾಡುವಾಗ,
ನಾನೆನ್ನ ಸತಿ ಸುತ ಬಂಧುಗಳಿಗೆ ಮಾಡಿ ಮಾಡಿ ದಣಿದು ನಿರಂಗನಾದೆ.
ಇಂತಿವರ ನಡುವೆ ನಾ ಕಡುಗಲಿ.
ರಕ್ಕಸನೊಡೆಯ ಕೊಟ್ಟುದ ಬೇಡ.
8
ಹಸು ಕರದು ಹಾಲಿಲ್ಲ, ಹಾವಿದು ವಿಷವಿಲ್ಲ.
ಬಾಯಿದು ಹಸಿವಿಲ್ಲ. ಲಿಂಗವಿದು ಅಸುವಿಲ್ಲ.
ಇಂತಿವರೆಲ್ಲರ ಸತಿಯರ ಗಂಡ ನಾನು,
ರಕ್ಕಸನೊಡೆಯ ಕೊಟ್ಟುದ ಬೇಡ.
ಗ್ರಂಥಋಣ: ಸಮಗ್ರ ವಚನ ಸಂಪುಟಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು
*