Previous ಗೋಣಿ ಮಾರಯ್ಯ ಪ್ರಸಾದಿ ಲೆಂಕಬಂಕಣ್ಣ Next

ಅಂಗಸೋಂಕಿನ ಲಿಂಗತಂದೆ ವಚನಗಳು

1
ಅಂಗಕ್ಕೊಂದು ಸುಗುಣ ದುರ್ಗುಣ ಸೋಂಕುವಲ್ಲಿ
ಸೋಂಕಿದ ಕಲೆ ಅಂಗಕ್ಕೋ ಆತ್ಮಂಗೋ ?
ಅಂಗಕ್ಕೆಂದಡೆ ಚೇತನವಿಲ್ಲದೆ ಒಂದನೂ ಮುಟ್ಟದಾಗಿ,
ಆತ್ಮಂಗೆಂದಡೆ ಒಂದು ಲಕ್ಷ್ಯದ ಮರೆಯಲಲ್ಲದೆ ಲಕ್ಷಿಸಿಕೊಳದು.
ಇಂತೀ ಕಾಯವೂ ಆತ್ಮನೂ ಒಡಗೂಡಿ ಅರಿವಲ್ಲಿ
ಆ ಅರಿವು ಲಿಂಗವನೊಡಗೂಡಿಯಲ್ಲದೆ ಬೇರೆ ಒಡಲುವಿಡಿಯದು.
ಇಂತೀ ಅಂಗ ಆತ್ಮ ಲಿಂಗಮೂರ್ತಿ ತ್ರಿವಿಧ ಸಂಗವಾದಲ್ಲದೆ
ಮುಂದಣ ಅರಿವಿನ ಕುರುಹು ನಿರಿಗೆಯಾಗದು.
ಆ ನಿರಿಗೆಯ ಅಂಗ ಸುಸಂಗವಾದಲ್ಲಿ
ಭೋಗಬಂಕೇಶ್ವರಲಿಂಗವು ಅಂಗಸೋಂಕಿನಲ್ಲಿ ಅಡಗಿದ ತೆರ.

2
ಅಪ್ಪುವಿನ ಸಂಯೋಗದಿಂದ ಮೃತ್ತಿಕೆ ಮಡಕೆಯಾಗಿ,
ಮತ್ತೆ ಅಪ್ಪುವಿನೊಡಗೂಡಿ ತುಂಬಲಿಕ್ಕಾಗಿ,
ಮತ್ತಾ ಅಪ್ಪುವಿನ ದ್ರವಕ್ಕೆ ಮೃತ್ತಿಕೆ ಕರಗಿದುದಿಲ್ಲ.
ಅದೇತಕ್ಕೆ ? ಅನಲ ಮುಟ್ಟಿದ ದೆಸೆಯಿಂದ.
ಅದು ಕಾರಣ, ಇಂತೀ ವಸ್ತುವಿನ ದೆಸೆಯಿಂದ
ಸತ್ಕ್ರಿಯಾಮಾರ್ಗಂಗಳು ಭವದ ತೊಟ್ಟುಬಿಟ್ಟವು.
ಇಂತೀ ದೃಷ್ಟವನರಿದು ಸರ್ವಕ್ರೀಗಳೆಲ್ಲವೂ ವಸ್ತುವ ಮುಟ್ಟಲಿಕ್ಕಾಗಿ
ಪೂರ್ವಗುಣ ತನ್ನಷ್ಟವಾಯಿತ್ತು, ಭೋಗಬಂಕೇಶ್ವರಲಿಂಗವನರಿದ ಕಾರಣ.

3
ಆವಂಗದ ಮರೆಯಲ್ಲಿದ್ದು ಕಾದುವ ಭಟನು: ಆ(ವಂಗ)ದ ಮರೆಯ ಸತ್ವವೋ ?
ತನ್ನ ಹೃದಯದ ಸತ್ವವೋ ?
ಒಂದನಹುದು ಒಂದನಲ್ಲಾ, ಎಂದಡೆ ಕ್ರೀ ನಿಃಕ್ರೀಯೆಂಬ ಉಭಯವಿಲ್ಲ.
ಎರಡನೊಡಗೂಡಿ ಒಂದನರಿದಿಹೆನೆಂದಡೆ
ಸಾಕಾರವೊಂದು ನಿರಾಕಾರವೊಂದು.
ಸಾಕಾರವನು ನಿರಾಕಾರವನು ಏಕೀಕರಿಸಿ ಕಂಡೆಹೆನೆಂದಡೆ
ಅದು ಒಂದು ದೃಷ್ಟ, ಒಂದು ತನ್ನಷ್ಟ.
ಆ ಉಭಯದಂಗ ಒಂದಂಗವಾಗಿ
ಕರ್ಪುರದ ಗಿರಿಯಲ್ಲಿ ಉರಿಯುದಿಸಿದ ತೆರನಂತೆ
ಉಭಯ ಏಕವಾಗಿಯಲ್ಲದೆ ಭೋಗಬಂಕೇಶ್ವರಲಿಂಗವನರಿಯಬಾರದು.

4
ಎನ್ನ ಕಾಯದ ಕದಳಿಯೆ ಸಂಗನಬಸವಣ್ಣನು,
ಎನ್ನ ಜೀವದ ಸುಮನವೆ ಚೆನ್ನಬಸವಣ್ಣನು.
ಎನ್ನ ಭಾವದ ಬಲುಹೆ ಪ್ರಭುದೇವರು,
ಎನ್ನ ತನುವಿನ ಮೂರ್ತಿಯೆ ಚಂದಯ್ಯನು,
ಎನ್ನ ಮನದ ನಿಶ್ಚಯವೆ ಮಡಿವಾಳಯ್ಯನು,
ಎನ್ನ ಪ್ರಾಣದ ಪರಿಣಾಮವೆ ಹಡಪದಪ್ಪಣ್ಣನು,
ಎನ್ನ ಅರುಹಿನ ನೈಷ್ಠೆಯೆ ಸೊಡ್ಡಳ ಬಾಚರಸನು,
ಎನ್ನಾಚಾರದ ದೃಢವೇ ಮೋಳಿಗೆಯ ಮಾರಯ್ಯನು,
ಎನ್ನ ನೋಟದ ನಿಬ್ಬೆರಗೆ ಅನುಮಿಷದೇವರು,
ಎನ್ನ ಶ್ರೋತ್ರದ ಕೇಳಿಕೆಯೆ ಮರುಳಶಂಕರದೇವರು,
ಎನ್ನ ಹೃದಯದ ಜ್ಯೋತಿಯೆ ಘಟ್ಟಿವಾಳಯ್ಯನು,
ಎನ್ನಂತರಂಗದ ಬೆಳಗೆ ಅಜಗಣ್ಣಯ್ಯನು,
ಎನ್ನ ಬಹಿರಂಗದ ನಿರಾಳವೆ ನಿಜಗುಣದೇವರು,
ಎನ್ನ ಸರ್ವಾಂಗದ ಕಳೆಯೆ ಸಿದ್ಧರಾಮಯ್ಯನು,
ಎನ್ನ ಗತಿಮತಿಚೈತನ್ಯವೇ ಏಳ್ನೂರೆಪ್ಪತ್ತಮರಗಣಂಗಳು.
ಭೋಗಬಂಕೇಶ್ವರಾ, ನಿಮ್ಮ ಶರಣರ ಶ್ರೀಪಾದಕ್ಕೆ ನಮೋ ನಮೋ ಎನುತಿರ್ದೆನು.

5
ಪೂರ್ವ ಆದಿಯಂತ ಸಿದ್ಧಾಂತವಾದ ತೆರ:
ಆವ ಬೀಜವೂ ಅಪ್ಪುಸಾರವಿಲ್ಲದೆ ಪ್ರತ್ಯಕ್ಷ ದೃಷ್ಟವುಂಟೆ ?
ಸರ್ವಕ್ರೀಗಳೆಲ್ಲವೂ ಜ್ಞಾನವಿಲ್ಲದಿರೆ ಕ್ರೀದೃಷ್ಟಸತ್ಯವಪ್ಪವೆ ?
ಇಂತೀ ಜ್ಞಾನಸರ್ವಗುಣನಾಗಿ ಸತ್ಕ್ರೀಮಾರ್ಗಗಳಿಂದ
ಒಪ್ಪಲ್ಪಟ್ಟುದು ಲಿಂಗದ ಅಂಗದ ಸೋಂಕಿನ ಸಂಗ,
ಈ ಗುಣ ಭೋಗಬಂಕೇಶ್ವರಲಿಂಗದೊಲವು.

6
ಭರಿತಾರ್ಪಣವೆಂದು ಅಪೇಕ್ಷಿಸುವಲ್ಲಿ
ಸೂಚನೆಯರತು ಒಂದನೊಂದು ಇರಿಸೆಂದು ಸಂದಣಿಗೊಳುತ್ತ,
ಬಂದ ದ್ರವ್ಯವೆಯ್ದದೆಂದು ತಂದು ಸುರಿಯೆನುತ್ತ,
ಸಂದ ದ್ರವ್ಯವ ಮತ್ತೆ ಉಲ್ಲಂಘಿಸಿ ಇರುತ್ತ, ಮತ್ತೆ
ಮಿಶ್ರದಿಂದ ದ್ರವ್ಯಂಗಳು ಬಿಸುರಿಬಂದು ಸೋಂಕಲಿಕೆ ಮತ್ತಿರಿಸಬಹುದೆ ?
ಕಟ್ಟಳೆಯ ಮೀರಿ ಸೋಂಕಿದುದ ಮತ್ತೆ ಅರ್ಪಿಸಬಹುದೆ?
ಇದು ಕಾರಣದಲ್ಲಿ ಕೆರಹಿನಳತಕ್ಕೆ ಕಾಲ ಕಡಿಸಿಕೊಳ್ಳದೆ,
ಬಸುರಿಂಗಾಗಿ ಬಣಬೆಯ ಸುಡದೆ,
ಕಿಂಚಿತ್ತು ವಿಷಯಲಂಪಟಕ್ಕಾಗಿ
ಸಹಪಂಕ್ತಿಗಳಲ್ಲಿ ವಿಶೇಷವನೆಂದೂ ಮುಟ್ಟದೆ,
ಅವರು ತಮ್ಮಾಳಿಯನರಿದು ಮಾಡಿದಂತೆ,
ತಾ ತನ್ನ ವೇಳೆಯನರಿದು ಅರ್ಪಿತವ ಮಾಡಿಕೊಂಡು
ಮಹಾನದಿಗಳಲ್ಲಿ ಸ್ಥೂಲ ಸೂಕ್ಷ್ಮ ಅತಿಸೂಕ್ಷ್ಮ ಕುಂಭಗಳನದ್ದಿ ತೆಗೆದಲ್ಲಿ
ಕುಂಭಕ್ಕೆ ತಕ್ಕ ಅಂಬು, ಅಂಗಕ್ಕೆ ತಕ್ಕ ದ್ರವ್ಯಪದಾರ್ಥಂಗಳ
ಅಂಗೀಕರಿಸುವುದು ಭರಿತಾರ್ಪಣದ ಸಂಗ.
ಇದು ಲಿಂಗಸೋಂಕಿನ ಅಂಗದ ವಿವರ.
ಹೀಂಗಲ್ಲದೆ ತಂದು ಸುರಿಯಿಸಿಕೊಂಡು, ಕೊಂಡಷ್ಟ ಕೊಂಡು,
ಇಂತೀ ಭರಿತಾರ್ಪಣಲಿಂಗಪ್ರಸಾದವ ಕಂಡವರು ಕೊಂಡುಹೋಗಿ ಎಂದು ಕೊಡುವ
ಭಂಡನ ಭರಿತಾರ್ಪಣ ಲಿಂಗಕ್ಕೆ ಸಲ್ಲದಾಗಿ.
ಇದು ಕಾರಣದಲ್ಲಿ ತುಂಬಿದ ಸಕಟಕ್ಕೆ ಅಂಗುಲದಷ್ಟು ತೃಣಭಾರವಾದಂತೆ.
ಇದು ಶಿವಲಿಂಗಾಂಗಿಗಳು ಒಪ್ಪದ ತೆರ.
ಇಂತೀ ಗುಣ ಭರಿತಾರ್ಪಣಂಗಳಲ್ಲಿ
ನಿಂದುದ ಸಂದುದ ಬಂಧಂಗಳಲ್ಲಿ ಆತ್ಮವಿಚ್ಛಂದವಿಲ್ಲದೆ
ಆ ಲಿಂಗಘಟಕ್ಕೆ ಸಲುವ ಪ್ರಮಾಣಂಗಳನರಿದು
ಅರ್ಪಿತವ ಮಾಡುವುದು ಭರಿತಾರ್ಪಣ.
ಈ ಗುಣ ಭೋಗಬಂಕೇಶ್ವರಲಿಂಗಕ್ಕೆ ಸಮರ್ಪಣ.

7
ಭರಿತಾರ್ಪಣವೆಂದು ಲಿಂಗಕ್ಕೆ ಸಮರ್ಪಿಸಿದ ಮತ್ತೆ
ಪ್ರತಿಪ್ರಸಾದವೆಂದು ಕೊಂಬಲ್ಲಿ ಭರಿತಾರ್ಪಣವೆಂತುಟಾಯಿತ್ತು ?
ತನ್ನಯ ಘಟದ ಹೆಚ್ಚುಗೆಯೊ ?
ಅಲ್ಲಾ, ಭರಿತಾರ್ಪಣದ ವ್ರತದ ನಿಶ್ಚಯವೊ ?
ಕಟ್ಟಿನ ವ್ರತಕ್ಕೆ ಪುನರಪಿ ಕ್ರೀಯುಂಟೆ ?
ಸತ್ಯ ಜಾರಿದ ಮತ್ತೆ ಮುಕ್ತಿಯ ಪಥ ಅವಂಗುಂಟೆ ?
ಇಂತೀ ಕಂಡವರ ಕಂಡು, ಕೈಕೊಂಡು, ಅವರೊಂದಾಗಿ ಆಡಿ,
ಅವರ ಸಂಸರ್ಗದಿಂದವ ಕಲಿತು,
ಅವರು ಹಿಂಗಿದ ಮತ್ತೆ
ತಾನೆಂದಿನಂತಹ ಕ್ರಿಯಾಭಂಡನ ಭರಿತಾರ್ಪಣಲಂಡನ
ಮತ್ತಾವ ಕ್ರೀಯಲ್ಲಿಯೂ ತಪ್ಪಿ,
ಆ ತಪ್ಪಿಗೆ ವ್ರತವ ಹೆಚ್ಚಿಸಿಕೊಂಡಹೆನೆಂಬ
ದುರ್ಮತ್ತ ಸುರಾಪಾ[ನಿಯಿಂ]ದತ್ತ ಕಾಣದಿರ್ದಡೆ
ಭಕ್ತಿಗೆ ಸಲ್ಲ, ಮುಕ್ತಿಯವಂಗಿಲ್ಲ,
ಸದ್ಭಕ್ತರೊಳಗಲ್ಲ, ಮಿಕ್ಕಾದ ಕೃತ್ಯ ಅವಂಗಿಲ್ಲ, ಇದು ಸತ್ಯ,
ಭೋಗಬಂಕೇಶ್ವರಲಿಂಗ ಸಾಕ್ಷಿಯಾಗಿ.

8
ಮನದ ಕೈಯಿಂದರಿದು, ಬುದ್ಧಿಯ ಕೈಯಿಂದ ವಿಚಾರಿಸಿ,
ಚಿತ್ತದ ಕೈಯಿಂದ ಅರ್ಪಿಸಿಕೊಂಬುದು
ಜ್ಞಾತೃವೋ ಜ್ಞಾನವೋ ಜ್ಞೇಯವೋ ?
ಇಂತೀ ತ್ರಿವಿಧದ ಕೈಯಲ್ಲಿ ತ್ರಿವಿಧಮುಖಂಗಳಿಂದ ಅರ್ಪಿಸಿಕೊಂಬುದು
ಅಂಗದ ಮೇಲಿದ್ದ ಲಿಂಗಸೋಂಕೊರಿ ಆ ಲಿಂಗದ ಒಳಗಣ ಕಳಾಸ್ವರೂಪೊ ?
ಅಲ್ಲಾ, ತನ್ನ ಅರಿದ ಅರುಹಿಸಿಕೊಂಬ ನಿರುಗೆಯ ಕುರುಹೊ ?
ಇಂತೀ ಅಂಗದಲ್ಲಿ, ಭಾವದಲ್ಲಿ, ಅರಿದ ಅರಿಕೆಯಲ್ಲಿ
ತ್ರಿವಿಧ ಕುರುಹಳಿದು ಒಡಗೂಡಿದಲ್ಲಿ ಅಂಗಸೋಂಕು,
ಅಲ್ಲಿಯೇ ನಿರಾಳ ಭೋಗಬಂಕೇಶ್ವರಲಿಂಗವಲ್ಲಿಯೆ.

9
ಮರದೊಳಗಣ ಬೆಂಕಿ ತನ್ನ ತಾನೇ ಉರಿಯಬಲ್ಲುದೆ ?
ಶಿಲೆಯೊಳಗಣ ದೀಪ್ತಿ ಆ ಬೆಳಗ ತನ್ನ ತಾನೆ ಬೆಳಗಬಲ್ಲುದೆ ?
ಆ ತೆರನಂತೆ ಕುಟಿಲನ ಭಕ್ತಿ, ಕಿಸಕುಳನ ವಿರಕ್ತಿ
ಮಥನಿಸಿಯಲ್ಲದೆ ದಿಟಹುಸಿಯ ಕಾಣಬಾರದು.
ಸತ್ಯವನು ಅಸತ್ಯವನು ಪ್ರತ್ಯಕ್ಷ ಪ್ರಮಾಣಿಸಿದಲ್ಲದೆ
ನಿಶ್ಚಯವನರಿಯಬಾರದು,
ಗುರುವಾದಡೂ ಲಿಂಗವಾದಡೂ ಜಂಗಮವಾದಡೂ
ಪರೀಕ್ಷಿಸಿ ಹಿಡಿಯದವನ ಭಕ್ತಿ, ವಿರಕ್ತಿ,
ತೂತಕುಂಭದಲ್ಲಿಯ ನೀರು, ಸೂತ್ರ ತಪ್ಪಿದ ಬೊಂಬೆ, ನಿಜನೇತ್ರ ತಪ್ಪಿದ ದೃಷ್ಟಿ;
ಬೇರು ಮೇಲಾದ ಸಸಿಗೆ ನೀರಿನಾರೈಕೆಯುಂಟೆ ?
ಇಂತು ಆವ ಕ್ರೀಯಲ್ಲಿಯೂ ಭಾವಶುದ್ಧಾತ್ಮನಾಗಿ ಆರೈಕೆ ಬೇಕು,
ಭೋಗಬಂಕೇಶ್ವರಲಿಂಗದ ಸಂಗದ ಶರಣನ ಸುಖ.

10
ಲಿಂಗಪ್ರಸಾದವ ಕೊಂಬುತಿದ್ದು ಮತ್ತೆ,
ಪದಾರ್ಥದ್ರವ್ಯಂಗಳು ಇದಿರೆಡೆಯಾಗಿ ಬರಲಿಕಾಗಿ
ಆ ಕರದಲ್ಲಿಯೆ ದ್ರವ್ಯವ ಸಮರ್ಪಿಸಬಹುದೆ ?
ಅಹುದೆಂದಡೆ ಕ್ರೀ ಸೂತಕ, ಅಲ್ಲಾ ಎಂದಡೆ ಪ್ರಥಮಪ್ರಸಾದ ಅವರಿಗಿಲ್ಲ.
ಇಂತೀ ಉಭಯವನರಿದು ಅರ್ಪಿಸಬಲ್ಲಡೆ ಲಿಂಗಾಂಗ ಸಹಭೋಜನವೆಂಬೆ.
ಅಲ್ಲದಿರ್ದಡೆ ಪಡುವಿಂಗೆ ನೆರೆದ ತುಡುಗುಣಿಗಳಂತೆ
ಬಾಯೊಳಗಣ ಕಚ್ಚು ದೇಹದೊಳಗಣ ಮುರುಗು
ಅವಂಗಾವ ನಿತ್ಯನೇಮವೂ ಇಲ್ಲ, ಇದು ಸತ್ಯ ಭೋಗಬಂಕೇಶ್ವರಲಿಂಗ ಸಾಕ್ಷಿಯಾಗಿ.

11
ಸಕಲಪದಾರ್ಥದ್ರವ್ಯಂಗಳೆಲ್ಲವ ಲಿಂಗಕ್ಕೆ ಮುಟ್ಟಿಸಿ
ಪ್ರಸಾದ ಮುಂತಾಗಿ ತಾ ಮುಟ್ಟಿಹೆನೆಂಬಲ್ಲಿ ತನ್ನ ಸಂಕಲ್ಪದ ಗುಣವೊ?
ಘನಲಿಂಗಕ್ಕೆ ತೃಪ್ತಿಮಾಡಿ ಒಕ್ಕುದ ಕೊಂಡಿಹೆನೆಂಬ ಕಟ್ಟಳೆಯ ಗುಣವೊ ?
ಇಂತೀ ಸತ್ಕ್ರೀಮಾರ್ಗಂಗಳನರಿದು ಅರ್ಪಿಸುವಲ್ಲಿ
ಲಿಂಗಮುಂತಾಗಿ ತಾ ಕೊಂಬನಾಗಿ ಲಿಂಗಕ್ಕೆ ಮರೆದು ತಾ ಕೊಂಡಿಹೆನೆಂಬಲ್ಲಿ
ಲಿಂಗಕ್ಕೆ ತಾನೊಳಗೊ ಹೊರಗೊ - ಎಂಬುದ ತಿಳಿದು, ಸಂದುದ ಕೈಕೊಂಡು,
ಸಲ್ಲದೆ ಮರವೆಯಿಂದ ಬಂದುದ
ಚರಲಿಂಗದ ಮುಖದಿಂದ ಸಂದುದ ಕೈಕೊಂಬುದು
ಅಂಗಸೋಂಕು, ಆತ್ಮಸೋಂಕು, ಅರಿವುಸೋಂಕು,
ಈ ತ್ರಿವಿಧ ಸೋಂಕು ಪರಿಪೂರ್ಣವಾದುದು ಅರ್ಪಿತ, ಅವಧಾನಿಯ ಕಟ್ಟು.
ಹೀಂಗಲ್ಲದೆ ಮಿಕ್ಕಾದುದೆಲ್ಲವೂ ವಾಚಾಲಕರ ಕಟ್ಟುಕದ ಮಾತು.
ಆ ಮಾತಿನ ಮಾಲೆಯೆಲ್ಲವೂ ಭ್ರಷ್ಟ, ಭೋಗಬಂಕೇಶ್ವರಲಿಂಗದಲ್ಲಿ ನಿಹಿತಾಚಾರಿಗಳ ಕಟ್ಟು.

ಗ್ರಂಥಋಣ: ೧೫ ಸಮಗ್ರ ವಚನ ಸಂಪುಟಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು. 2001

ಪರಿವಿಡಿ (index)
*
Previous ಗೋಣಿ ಮಾರಯ್ಯ ಪ್ರಸಾದಿ ಲೆಂಕಬಂಕಣ್ಣ Next